Thursday, October 6, 2022

ಪ್ರಜಾವಾಣಿ ಕನ್ನಡ ಧ್ವನಿಯಲ್ಲಿ 'ಮಕ್ಕಳ ಪಾಲನೆ: ಸಾಂಸ್ಕೃತಿಕ ಲೋಕದ ಹೊಣೆ' ಲೇಖನವನ್ನು ಕೇಳಿ

 

ದಿನಾಂಕ ೦೪.೧೦.೨೦೨೨ ರಂದು ಪ್ರಜಾವಾಣಿ ಪತ್ರಿಕೆಯ 'ಸಂಗತ' ಅಂಕಣದಲ್ಲಿ ನನ್ನ  'ಮಕ್ಕಳ ಪಾಲನೆ: ಸಾಂಸ್ಕೃತಿಕ ಲೋಕದ ಹೊಣೆ' ಲೇಖನ ಪ್ರಕಟವಾಯಿತು. ಈ ಲೇಖನ ದಿನಾಂಕ ೦೫.೧೦.೨೦೨೨ ರಂದು ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ಬಿತ್ತರವಾಯಿತು. ಕೇಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ವೆಬ್ ವಿಳಾಸವಾಗಿ ಉಪಯೋಗಿಸಿ. 

https://open.spotify.com/episode/71ARhGKWQGREEYBOv51feV





-ರಾಜಕುಮಾರ ಕುಲಕರ್ಣಿ 

Monday, October 3, 2022

ಗಾಳಕ್ಕೆ ಸಿಲುಕುವುದು ಬೇಡ

 



(ಪ್ರಜಾವಾಣಿ 04.08.2022 ರಲ್ಲಿ ಪ್ರಕಟ)

      ಲೇಖಕ ಎಂಥೋನಿ ಸ್ಟೊರ್ ಮನುಷ್ಯನ ಕ್ರೂರತ್ವವನ್ನು ಕುರಿತು ಹೇಳಿದ್ದು ಹೀಗೆ-‘ರೋಡೆಂಟ್ ಜಾತಿಯ ಕೆಲವು ಪ್ರಾಣಿಗಳನ್ನು ಬಿಟ್ಟರೆ ಕಶೇರುಕ ವರ್ಗದ ಯಾವ ಪ್ರಾಣಿಯೂ ತನ್ನದೇ ವರ್ಗದ ಇನ್ನೊಂದು ಪ್ರಾಣಿಯನ್ನು ಅಭ್ಯಾಸ ಬಲದಿಂದ ಕೊಲ್ಲುವ ಉದಾಹರಣೆಯಿಲ್ಲ. ಕೊಲ್ಲುವ ಸುಖಕ್ಕಾಗಿಯೇ ಕೊಲ್ಲುವ ಪ್ರಾಣಿ ಮನುಷ್ಯನನ್ನು ಬಿಟ್ಟು ಇನ್ನೊಂದಿಲ್ಲ. ನಮ್ಮ ವಿಷಾದಕ್ಕೆ ಕಾರಣವಾಗುವ ಸಂಗತಿಯೆಂದರೆ ಪೃಥ್ವಿಯ ಮೇಲಿನ ಪ್ರಾಣಿವರ್ಗಗಳಲ್ಲೇ ಅತ್ಯಂತ ಕ್ರೂರ ಹಾಗೂ ನಿಷ್ಠುರವಾದದ್ದೆಂದರೆ ಮನುಷ್ಯ ಜಾತಿಯೇ’.

ಮನುಷ್ಯ ಮನುಷ್ಯನನ್ನೇ ಬೇಟೆಯಾಡುವ, ಕೊಲ್ಲುವ, ಹಿಂಸಿಸುವ, ಶೋಷಿಸುವ ಪ್ರವೃತ್ತಿ ಇಂದು ನಿನ್ನೆಯದಲ್ಲ. ಅನಾದಿಕಾಲದಿಂದಲೂ ಮನುಷ್ಯನಲ್ಲಿ ಈ ಗುಣಗಳು ಅವ್ಯಾಹತವಾಗಿ ಮುಂದುವರೆದುಕೊಂಡು ಬಂದಿವೆ. ಪ್ರೀತಿ, ಕರುಣೆ, ಅಂತ:ಕರಣಗಳಿರಬೇಕಾದ ಜಾಗದಲ್ಲಿ ದ್ವೇಷ, ಸೇಡು, ಹಿಂಸೆಗಳು ವಿಜೃಂಭಿಸುತ್ತಿವೆ. ಮನುಷ್ಯ ನಾಗರಿಕನಾದಂತೆಲ್ಲ ಅವನ ಬುದ್ಧಿ, ಭಾವಗಳು ಸಂಕುಚಿತಗೊಳ್ಳುತ್ತಿವೆ. ಮನುಷ್ಯ ಮನುಷ್ಯರ ನಡುವಣ ಸಂಬಂಧಗಳನ್ನು ಲಾಭ, ನಷ್ಟಗಳ ಲೆಕ್ಕಾಚಾರದಿಂದ ನೋಡಲಾಗುತ್ತಿದೆ. ಬದುಕಿನಲ್ಲಿ ವ್ಯಾಪಾರ ಮನೋಧರ್ಮ ಮುನ್ನೆಲೆಗೆ ಬಂದು ತ್ಯಾಗ, ಪ್ರೀತಿ, ಸಹಿಷ್ಣುತೆಯ ಗುಣಗಳು ಹಿನ್ನೆಲೆಗೆ ಸರಿದಿವೆ.

ಮನಸ್ಸಿಗೆ ನೋವು ನೀಡುವ ಪ್ರವೃತ್ತಿ ನಾಗರಿಕ ಸಮಾಜದಲ್ಲೇ ಹೆಚ್ಚುತ್ತಿದೆ. ದೈಹಿಕ ನೋವಿಗಿಂತ ಮಾನಸಿಕ ನೋವು ಅತ್ಯಂತ ಅಪಾಯಕಾರಿ. ಮನುಷ್ಯ ತನ್ನ ದೇಹದ ಮೇಲಿನ ಗಾಯಗಳನ್ನು ಮರೆಯಬಹುದು ಆದರೆ ಮನಸ್ಸಿಗಾಗುವ ಗಾಯ ಬೇಗನೆ ಮಾಯುವಂತಹದ್ದಲ್ಲ. ಅಸಂವೇದಿಯಾಗುತ್ತಿರುವ ಮನುಷ್ಯ ನಗುವಿನ ಮುಖವಾಡದ ಹಿಂದೆ ಹಲ್ಲುಮಸೆತದ ಕ್ರೌರ್ಯವನ್ನು ಪ್ರದರ್ಶಿಸುತ್ತಿರುವನು. 

ಮನಶಾಸ್ತ್ರಜ್ಞ ಎರಿಕ್ ಬರ್ನ್ ಪರಿಚಯಿಸಿದ ‘ಟ್ರಾನ್ಸಾಕ್ಷನಲ್ ಆ್ಯನಾಲಿಸಿಸ್’ ಎನ್ನುವ ಪರಿಕಲ್ಪನೆ ಮನುಷ್ಯನೇ ಸೃಷ್ಟಿಸಿಕೊಂಡಿರುವ ಈ ಕ್ರೂರ ವ್ಯವಸ್ಥೆಯಲ್ಲಿ ಮನುಷ್ಯ ಮನುಷ್ಯನಂತೆ ಬದುಕುವುದನ್ನು ಹೇಳಿಕೊಡುತ್ತದೆ. ಈ ಪರಿಕಲ್ಪನೆಯನ್ವಯ ಮನುಷ್ಯ ಬೇರೆಯವರೊಂದಿಗೆ ಮಾತನಾಡುವ ಪೂರ್ವದಲ್ಲಿ ವರ್ತನೆ, ಆಲೋಚನೆ, ತನ್ನೊಳಗಿನ ಸಂಘರ್ಷ ಇವುಗಳ ಬಗ್ಗೆ ವಿಶೇಷ ಎಚ್ಚರ ವಹಿಸಬೇಕು ಎನ್ನುತ್ತಾರೆ ಮನೋವಿಜ್ಞಾನಿಗಳು. ಸಂಭಾಷಣೆಯ ಸಂದರ್ಭ ತನ್ನ ಮಾತು ಮತ್ತು ವರ್ತನೆ ಎದುರಿಗಿರುವ ವ್ಯಕ್ತಿಗೆ ನೋವನ್ನುಂಟು ಮಾಡದಂತೆ ಪೂರ್ವಸಿದ್ಧತೆಯೊಂದಿಗೆ ಮಾತಿಗಿಳಿಯುವುದೆ ‘ಟ್ರಾನ್ಸಾಕ್ಷನಲ್ ಆ್ಯನಾಲಿಸಿಸ್’ನ ಪ್ರಮುಖ ಲಕ್ಷಣ. ನಾಗರಿಕತೆಯ ವೇಷ ತೊಟ್ಟು ಅನಾಗರಿಕರಂತೆ ಮನುಷ್ಯರು ವರ್ತಿಸುತ್ತಿರುವ ಇವತ್ತಿನ ದಿನಗಳಲ್ಲಿ ಎರಿಕ್ ಬರ್ನ್ ಪರಿಚಯಿಸಿದ ಈ ಪರಿಕಲ್ಪನೆಯನ್ನು ಅರಿಯುವುದು ತುಂಬ ಅಗತ್ಯವಾಗಿದೆ.

ನನ್ನ ಪರಿಚಯದ ಹಿರಿಯರೊಬ್ಬರು ಆಗಾಗ ಹೇಳುವ ಮಾತಿದು-‘ನನ್ನ ಮನಸ್ಸಿಗೆ ನೋವಾದಾಗ ಅಥವಾ ಮಾಡಬೇಕೆಂದಿರುವ ಕೆಲಸದಲ್ಲಿ ಸೋಲು ಎದುರಾದಾಗ ನಾನು ಕಾರಂತರ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಪುಸ್ತಕವನ್ನು ಓದುತ್ತೇನೆ. ಆಗ ನೋವು ಮತ್ತು ಸೋಲನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಈ ಪುಸ್ತಕದ ಓದು ನನಗೆ ತಂದು ಕೊಡುತ್ತದೆ. ನನಗೇ ಗೊತ್ತಿಲ್ಲ ಈ ಪುಸ್ತಕವನ್ನು ನಾನು ಅದೆಷ್ಟು ಬಾರಿ ಓದಿರುವೆನೆಂದು’. ಈ ಮಾತು ಸಾಹಿತ್ಯಕ್ಕಿರುವ ಶಕ್ತಿಗೊಂದು ದೃಷ್ಟಾಂತ. ಅನುದಿನದ ಅಂತರಗಂಗೆಯಂತೆ ಸಾಹಿತ್ಯ ಜನಮಾನಸದಲ್ಲಿ ಹಾಸುಹೊಕ್ಕಾಗಿ ಪ್ರವಹಿಸುತ್ತಲೇ ಇದೆ. ಅದಕ್ಕಾಗಿಯೇ ಓದು ಬಹುಮುಖ್ಯ. ಅದನ್ನು ಎಲ್ಲರೂ ರೂಢಿಸಿಕೊಳ್ಳಬೇಕು.

ಸಾರ್ವಜನಿಕ ಜೀವನದಲ್ಲಿ ಟೀಕೆ-ಟಿಪ್ಪಣೆಗಳ ಗುಣಮಟ್ಟ ಕುಸಿದಿರುವುದಕ್ಕೆ ಓದಿನ ಕೊರತೆಯೂ ಒಂದು ಪ್ರಮುಖ ಕಾರಣ. ಶಾಸನಸಭೆ ಕಲಾಪದ ಗುಣಮಟ್ಟ ಕೆಟ್ಟಿರುವುದಕ್ಕೆ ಕೂಡ ಇದೇ ಕಾರಣ. ಭಾಷೆಗೆ ಇರುವ ಸೊಬಗು ಮತ್ತು ಘನತೆಯನ್ನು ಅರಿಯದವರು ಅದನ್ನು ಹೇಗೆ ಬೇಕಾದರೂ ಬಳಸಬಲ್ಲರು. ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎನ್ನುವ ಬಸವಣ್ಣನವರ ವಚನವು ನಮ್ಮ ನುಡಿ ಹೇಗಿರಬೇಕು ಮತ್ತು ಮನುಷ್ಯ ಹೇಗೆ ಬಾಳಬೇಕು ಎನ್ನುವುದನ್ನು ಸೂಚಿಸುತ್ತದೆ. ದಿನಕರ ದೇಸಾಯಿ ಅವರ  ‘ಹಚ್ಚುವುದಾದರೆ ದೀಪ ಹಚ್ಚು, ಬೆಂಕಿ ಹಚ್ಚಬೇಡ. ಆರಿಸುವುದಾದರೆ ಬೆಂಕಿ ಆರಿಸು, ದೀಪ ಆರಿಸಬೇಡ’ ಎಂಬ ಈ ಸಾಲು ಬದುಕಿನ ಸಾರ್ಥಕ್ಯದ ಬಗೆಗೆ, ಬದುಕನ್ನು ಗ್ರಹಿಸುವ ದೃಷ್ಟಿಕೋನ ಹೇಗಿರಬೇಕು ಎಂಬುದರ ಕುರಿತ ಹೇಳುತ್ತದೆ.

ಕಾಮನ್‍ವೆಲ್ತ್ ಕ್ರೀಡಾಕೂಟ ನಡೆಯುತ್ತಿದೆ. ಅಲ್ಲಿನ ಆಟೋಟಗಳಿಂದ ಸ್ಫೂರ್ತಿ ಪಡೆಯೋಣ. ಮಕ್ಕಳನ್ನು ಆ ದಾರಿಯಲ್ಲಿ ನಡೆಯುವಂತೆ ಹುರಿದುಂಬಿಸೋಣ. ಕನ್ನಡದ ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಸುದ್ಧಿಯಾಗುತ್ತಿವೆ. ಒಳ್ಳೆಯ ಸಿನಿಮಾ ನೋಡಿ ಖುಷಿಪಡೋಣ. ರಾಜಕಾರಣವನ್ನು ಸಹನೀಯಗೊಳಿಸಿದ ಮಹನೀಯರನ್ನು ನೆನೆದು ಅಂತಹವರಿಗಾಗಿ ಹುಡುಕೋಣ. ಇದು ಈ ಕ್ಷಣದ ಅಗತ್ಯ.

‘ಮೊಳಕೆಯೊಡೆಯಬೇಕು, ಸಸಿಯಾಗಿ-ಗಿಡವಾಗಿ-ಹೂವಾಗಿ ಕಣ್ತೆರೆಯಬೇಕು. ಮೇಲಿನ ಸೂರ್ಯನ ಬೆಳಕು ಕಾಣುತ್ತ ತಾನೇ ಬೆಳಕಾಗಬೇಕು ಎನ್ನುವ ಬೀಜದ ಬಯಕೆಯ ಸುಳಿವು ಬೀಜ ಬಿದ್ದ ಮಣ್ಣಿಗಿರುವುದು ಸಾಧ್ಯವೆ?’ ಸಾಹಿತ್ಯದ ಇಂಥ ಸಾಲುಗಳೇ ಬದುಕಬೇಕು, ಸಾಧಿಸಬೇಕೆಂಬ ನಮ್ಮೊಳಗಿನ ಜೀವಸೆಲೆ ಬತ್ತದಂತೆ ನಿರಂತರ ನೀರಹನಿ ಹೊಯ್ದು ಪೋಷಿಸುತ್ತಿವೆ.

‘ನಾವು ಎಷ್ಟೇ ಸಮರ್ಥಿಸಿಕೊಂಡರೂ ನಮ್ಮ ಬೈಗುಳಕ್ಕೆ-ದ್ವೇಷಕ್ಕೆ ಪಾತ್ರವಾದ ವ್ಯಕ್ತಿಯಾಗಲಿ, ವಸ್ತುವಾಗಲಿ ಜಗತ್ತಿನಲ್ಲಿ ಇಲ್ಲ. ದ್ವೇಷಕ್ಕೆ ಅಧಿಕಾರಿ ಇದ್ದಾನೆ, ವಸ್ತು ಇಲ್ಲ. ಇಲ್ಲಿ ಎಲ್ಲವೂ ಪ್ರೀತಿಗೆ ಯೋಗ್ಯವಾದದ್ದೇ ಪ್ರೀತಿಸುವ ತಾಕತ್ತು ನಮಗೆ ಇದ್ದಲಿ’ ಎಂದಿರುವರು ಯಶವಂತ ಚಿತ್ತಾಲರು.

ರಾಜಕೀಯ ಲಾಭಕ್ಕಾಗಿ ಕೆಲವರು ಒಡಕಿನ ಬೀಜಗಳನ್ನು ಬಿತ್ತುತ್ತಾರೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಇಂತಹ ರಾಜಕೀಯದಾಟಗಳು ಮತ್ತೂ ಹೆಚ್ಚಬಹುದು. ಮತಗಳಿಕೆಯ ಗಾಳಕ್ಕೆ ನಾವು ಸಿಲುಕುವುದು ಬೇಡ. ಮನದ ನೋವಿಗೆ ಮುಲಾಮು ಹಚ್ಚುವ ಕೆಲಸ ಮಾಡೋಣ.

-ರಾಜಕುಮಾರ ಕುಲಕರ್ಣಿ