Monday, January 14, 2019

ಸಂತೆಯಲ್ಲೊಂದು ಮನೆಯ ಮಾಡಿ (ಕಥೆ)

     


         ‘ಶುಡ್ ಐ ಗಿವ್ ಕ್ಲ್ಯಾರಿಫಿಕೇಷನ್ ಟು ದೀಜ್ ಪೀಪಲ್ ಮಿ.ರವಿ. ನಿಮಗೆ ಅನಿಸುತ್ತಾ’ ಪ್ರೊಫೆಸರ್ ರಾಘವ ಧ್ವನಿಯಲ್ಲಿ ಸಿಟ್ಟು, ಆಕ್ರೋಶ ನೋಡಿ ಒಂದು ಕ್ಷಣ ಅವರ ಪಾಡಿಗೆ ಅವರನ್ನು ಬಿಡುವುದು ಒಳಿತೆಂದು ಅನ್ನಿಸಿ ಏನೂ ಮಾತನಾಡದೆ ಸುಮ್ಮನೆ ಕುಳಿತೆ. ‘ಮಿ.ರವಿ ಇವರನ್ನೆಲ್ಲ ನೋಡ್ತಿದ್ರೆ ನನಗೆ ಎಂದೋ ಓದಿದ ಕಥೆಯೊಂದು ನೆನಪಿಗೆ ಬರ್ತಿದೆ. ಮೂರು ಜನ ಸ್ನೇಹಿತರು ಸಾಯಂಕಾಲ ತಿರುಗಾಡಲು ಊರ ಹೊರಗಿನ ಬೆಟ್ಟಕ್ಕೆ ಹೋಗ್ತಾರೆ. ಅಲ್ಲೊಬ್ಬ ಸುಮ್ನೆ ನಿಂತಿದ್ದಾನೆ. ಅವನನ್ನು ನೋಡಿ ಈ ಸ್ನೇಹಿತರು ಆತ ನಿಂತಿರುವುದೇಕೆಂದು ತಮ್ಮ ತಮ್ಮ ನಿರ್ಧಾರಕ್ಕೆ ಬರ್ತಾರೆ. ಒಬ್ಬ ಆ ಮನುಷ್ಯ ಕಳೆದುಹೋದ ತನ್ನ ಹಸು ಹುಡ್ಕೊದಕ್ಕೆ ಬಂದಿದ್ದಾನೆ ಅಂದರೆ ಇನ್ನೊಬ್ಬ ಇಲ್ಲ ಆತ ತನ್ನ ಪ್ರೇಯಸಿಗಾಗಿ ದಾರಿ ಕಾಯ್ತಿದ್ದಾನೆ ಅಂತಾನೆ. ಮೂರನೆಯವನು ಪ್ರಕೃತಿಯ ಸೌಂದರ್ಯ ನೋಡ್ತಿದ್ದಾನೆ ಎಂದು ಹೇಳ್ತಾನೆ. ಕೊನೆಗೆ ಮೂರೂ ಜನ ಅವನ ಹತ್ತಿರ ಹೋಗಿ ಆತನ ಬಗ್ಗೆ ತಾವು ತಾವು ನಿರ್ಧರಿಸಿದ್ದನ್ನ ಹೇಳ್ತಾರೆ. ಆಗ ಆ ಮನುಷ್ಯ ನಾನು ಇಲ್ಲಿ ಸುಮ್ನೆ ನಿಂತಿದ್ದೀನಿ ಅಂತಾನೆ. ನೋಡಿ ನಾವುಗಳೆಲ್ಲ ನಮ್ಮ ನಮ್ಮ ವಿವೇಚನೆಯಲ್ಲೇ ಯೋಚಿಸಿ ನಿರ್ಧಾರಕ್ಕೆ ಬರ್ತೀವಿ. ವಿಶ್ಲೇಷಣೆಯ ಶಕ್ತಿನೇ ಇಲ್ಲ.’ ಪ್ರೊಫೆಸರ್  ಧ್ವನಿಯಲ್ಲಿ ವ್ಯಗ್ರತೆಯಿತ್ತು. ರಾಘವ ಅವರಲ್ಲಿ ಕೋಪ ಎರುತ್ತಿದ್ದಂತೆ ಎದುರುಗಡೆ ಟೇಬಲ್ ಮೇಲಿಟ್ಟ ಕಪ್‍ನಲ್ಲಿದ್ದ ಚಹಾ ತಣ್ಣಗಾಗುತ್ತಿತ್ತು. ಮಾತನಾಡುವ ಲಹರಿಯಲ್ಲಿದ್ದ ಅವರು ಇನ್ನೂ ಚಹಾ ಕಪ್‍ನ್ನು ಕೈಗೆತ್ತಿಕೊಂಡಿಲ್ಲವಾದ್ದರಿಂದ ಅವರನ್ನು ಮಾತಿಗೆ ಬಿಟ್ಟು ನಾನು ಚಹಾ ಕುಡಿಯುವುದು ಸೌಜನ್ಯವಲ್ಲವೆಂದು ಕೈಕಟ್ಟಿ ಕುಳಿತು ರಾಘವ ಅವರ ಮಾತುಗಳನ್ನು ಆಲಿಸುತ್ತಿದ್ದೆ.

    ಇವತ್ತಿನ ರಾಘವ ಅವರ ಇಷ್ಟೆಲ್ಲ ವಿಶ್ಲೇಷಣೆಗೆ ಕಾರಣವಾದದ್ದು ನಾನು ಸ್ಟಾಪ್ ರೂಮಿನಲ್ಲಿ ಯಾರೂ ಇಲ್ಲದ ವೇಳೆ ಕೇಳಿದ ಒಂದೇ ಒಂದು ಪ್ರಶ್ನೆ. ಬಹಳ ದಿನಗಳಿಂದ ಮನಸ್ಸಿನಲ್ಲಿ ಕೊರೆಯುತ್ತಿದ್ದ ವಿಷಯವೊಂದು ತಡೆಹಿಡಿದಷ್ಟೂ ನನ್ನನ್ನು ವ್ಯಾಕುಲಗೊಳಿಸುತ್ತಿದ್ದುದ್ದರಿಂದ ಈ ದಿನ ಪ್ರೊಫೆಸರ್   ಬೇಕಾದರೆ ನನ್ನನ್ನು ಬೈಯಲಿ ಯಾವುದಕ್ಕೂ ಕೇಳಿಯೇ ಬಿಡಬೇಕೆಂದು ನಿರ್ಧರಿಸಿಕೊಂಡೇ ಮನೆ ಬಿಟ್ಟಿದ್ದೆ. ಬೆಳಗ್ಗೆ ಡಿಪಾರ್ಟಮೆಂಟ್‍ನಲ್ಲಿ ಇತರ ಸಹೊದ್ಯೋಗಿಗಳು ಕ್ಲಾಸಿಗೆ ಹೋಗಿದ್ದರಿಂದ ಪ್ರೊಫೆಸರ್   ರಾಘವ ಒಬ್ಬರೇ ತಮ್ಮ ಸೀಟಿನಲ್ಲಿ ಇಂಟರ್‍ನ್ಯಾಷನಲ್ ಜರ್ನಲ್‍ಗೆ ಕಳುಹಿಸಿಬೇಕಾದ ಲೇಖನದ ಮುದ್ರಿತ ಪ್ರತಿಯನ್ನು ತಿದ್ದುತ್ತ ಕುಳಿತಿದ್ದರು. ಅಷ್ಟರಲ್ಲಿ ಡಿಪಾರ್ಟಮೆಂಟ್ ಪ್ಯೂನ್ ರಂಗಪ್ಪ ಎರಡು ಕಪ್‍ಗಳಲ್ಲಿ ಚಹಾ ತಂದು ರಾಘವ ಅವರ ಟೇಬಲ್ ಮೇಲಿಟ್ಟು ಹೋದ. ಬೆಳಗ್ಗೆ ಕಾಲೇಜಿಗೆ ಬಂದ ತಕ್ಷಣ ಚಹಾ ಕುಡಿಯುವುದು ರಾಘವ ಅವರ ನಿತ್ಯದ ದಿನಚರಿಯಾಗಿತ್ತು. ಆ ಸಂದರ್ಭ ಬೇರೆ ಯಾರಾದರೂ ಸ್ಟಾಪ್ ರೂಮಿನಲ್ಲಿದ್ದರೆ ರಾಘವ ಅವರೊಂದಿಗೆ ಅಲ್ಲಿದ್ದವರಿಗೂ ಚಹಾ ಕುಡಿಯಲು ಆಹ್ವಾನವಿರುತ್ತಿತ್ತು. ಇವತ್ತು ನನಗೂ ಬೆಳಗ್ಗೆ ಕ್ಲಾಸ್ ಇಲ್ಲದಿದ್ದದ್ದು ಮತ್ತು ರಾಘವ ಅವರೊಂದಿಗೆ ಮಾತಿಗೆ ಇಳಿಯಬೇಕೆಂದು ನಿರ್ಧರಿಸುತ್ತಿರುವ ಹೊತ್ತಲ್ಲೇ ರಂಗಪ್ಪ ಚಹಾದ ಕಪ್‍ಗಳನ್ನು ತಂದು ಟೇಬಲ್ ಮೇಲಿಟ್ಟು ಹೋಗಿದ್ದು ಮಾತಿಗೊಂದು ಸೂಕ್ತ ಸನ್ನಿವೇಶವನ್ನು ಒದಗಿಸಿತ್ತು. ರಾಘವ ಅವರ ಟೇಬಲ್ ಎದುರಿನ ಖುರ್ಚಿಯಲ್ಲಿ ಕುಳಿತು ಅವರು ತಿದ್ದುತ್ತಿರುವ ಲೇಖನದಿಂದ ತಲೆ ಎತ್ತಿ ನೋಡುವುದನ್ನೇ ಕಾಯುತ್ತ ಮನಸ್ಸಿನಲ್ಲೇ ಕೇಳಬೇಕಾದ ಪ್ರಶ್ನೆಯನ್ನು ಉರು ಹೊಡೆಯುತ್ತಿದ್ದೆ. ರಾಘವ ಕೈಯಲ್ಲಿದ್ದ ಲೇಖನದ ಪ್ರತಿಯನ್ನು ಟೇಬಲ್ ಮೇಲಿಟ್ಟು ಲೋಟದಲ್ಲಿದ್ದ ನೀರನ್ನು ಕುಡಿದು ‘ಮಿ.ರವಿ ಚಹಾ ತೆಗೆದುಕೊಳ್ಳಿ ತಣ್ಣಗಾಗುತ್ತೆ’ ಎಂದು ಉಪಚರಿಸಿದರು. ‘ಸರ್ ಒಂದು ಮಾತು ಬಹಳ ದಿನಗಳಿಂದ ನಿಮಗೆ ಕೇಳಬೇಕು ಅಂತ. ಆದರೆ ಹೇಗೆ ಕೇಳೋದು ಗೊತ್ತಾಗ್ತಿಲ್ಲ’ ಕೇಳಬೇಕಾದ ವಿಷಯ ಸಂಕೋಚದಿಂದ ಹೊರಬರದೆ ಶಬ್ದಗಳಿಗಾಗಿ ತಡಕಾಡಿದೆ. ರಾಘವ ನನ್ನೊಮ್ಮೆ ಪ್ರಶ್ನಾರ್ಥಕವಾಗಿ ನೋಡಿ ಕೈಗೆತ್ತಿಕೊಂಡಿದ್ದ ಚಹಾದ ಕಪ್ಪನ್ನು ಮತ್ತೆ ಟೇಬಲ್ ಮೇಲಿಟ್ಟು ತಮ್ಮ ಎಂದಿನ ಗಂಭೀರ ಮುಖಮುದ್ರೆಯಿಂದ ‘ರವಿ ಕೇಳಲೇ ಬೇಕು ಅಂತ ನಿರ್ಧಾರ ಮಾಡಿದ್ದರೆ ಏನು ಅಂತ ಕೇಳಿ. ಸುಮ್ನೆ ಮನಸ್ಸಿನಲ್ಲಿಟ್ಟುಕೊಂಡು ಅದೇ ವಿಷಯ ಕುರಿತು ಚಿಂತಿಸ್ತಿದ್ದರೆ ಬೇರೆ ಯಾವ ಕೆಲಸದಲ್ಲೂ ತನ್ಮಯತೆ ಸಿಗೊಲ್ಲ’ ನನ್ನನ್ನು ಕ್ಷಣಕಾಲ ಯೋಚಿಸಲು ಬಿಟ್ಟು ಪ್ರೊಫೆಸರ್   ಕಣ್ಮುಚ್ಚಿ ಕುಳಿತರು. ‘ಅದೇ ಸರ್ ಕಾಲೇಜಿನಲ್ಲಿ ಎಲ್ಲರೂ ನಿಮ್ಮ ಮತ್ತು ಮನಸ್ವಿನಿ ಮೇಡಮ್ ಬಗ್ಗೆ ಏನೇನೋ ಮಾತಾಡ್ತಿದ್ದಾರೆ’ ಅಪ್ರಯತ್ನಪೂರ್ವಕವಾಗಿ ಮಾತು ನನ್ನಿಂದ ಹೊರಬಂತು. ಪ್ರೊಫೆಸರ್  ರಾಘವ ಅವರ ಮುಖ ಸಿಟ್ಟಿನಿಂದ ಕೆಂಪಾಗಿ ಉಸಿರಾಟದ ತೀವ್ರತೆಯಿಂದ ಮೂಗಿನ ಹೊಳ್ಳೆಗಳು ಅಗಲವಾಗಿ ತೆರೆದುಕೊಂಡು ಆ ಕ್ಷಣಕ್ಕೆ ಅವರ ತೀಕ್ಷ್ಣ ನೋಟವನ್ನು ಎದುರಿಸಲಾರದೆ ನಾನು ತಲೆತಗ್ಗಿಸಿದೆ. ‘ಓ.ಕೆ ರವಿ ನಮ್ಮಗಳ ಹಿಂದೆ ಮಾತಾಡ್ತಿರೊ ಸಂಗತಿಗಳು ನನ್ನ ಕಿವಿಗೂ ಮುಟ್ಟಿವೆ. ನಿಮ್ಮ ಪ್ರಶ್ನೆ ಸಹಜ ಕೂಡ ಹೌದು. ಶುಡ್ ಐ ಗಿವ್ ಕ್ಲ್ಯಾರಿಫಿಕೇಷನ್ ಟು ದೀಜ್ ಪೀಪಲ್ ಮಿ.ರವಿ. ನಿಮಗೆ ಅನಿಸುತ್ತಾ’ ರಾಘವ ಅವರ ಧ್ವನಿ ಸಹಜವಾಗಿತ್ತಾದರೂ ಅಲ್ಲಿ ಸಿಟ್ಟು ಆಕ್ರೋಶವಿತ್ತು. ರಾಘವ ತಮ್ಮ ಮಾತಿನ ಕೊನೆಯಲ್ಲಿ ‘ನಾಳೆ ಮನಸ್ವಿನಿ ಅವರ ಪುಸ್ತಕ ಬಿಡುಗಡೆ ಇದೆ. ತಮ್ಮ ತೋಟದ ಮನೆನಲ್ಲಿ ಕಾರ್ಯಕ್ರಮ ಇಟ್ಕೊಂಡು ನನ್ನನ್ನ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ. ಜೊತೆಗೆ ನೀವೂ ಬನ್ನಿ. ದಾರಿಯಲ್ಲಿ ಮಾತಾಡ್ಕೊಂಡು ಹೋಗೋಣ. ಬೇಕಿದ್ರೆ ನನ್ನ ಮತ್ತು ಮನಸ್ವಿನಿ ವಿಷಯ ಕೂಡ ನಮ್ಮ ಪಯಣದಲ್ಲಿ ಚರ್ಚೆಗೆ ಗ್ರಾಸವಾಗಬಹುದು’ ಎಂದು ನುಡಿದು ತಮಗೆ ಬಿ.ಎ ಫೈನಲ್ ಇಯರ್ ಕ್ಲಾಸಿದೆಯೆಂದು ಸ್ಟಾಪ್ ರೂಮಿನಿಂದ ಹೊರನಡೆದರು. ರಾಘವ ಅವರ ಮುಖದಲ್ಲಿ ತುಂಬಿನಿಂತಿದ್ದ ಅಶಾಂತಿಯನ್ನು ನೋಡಿ ಪ್ರಶ್ನೆ ಕೇಳಿ ತಪ್ಪು ಮಾಡಿದೆನೇನೋ ಎಂದೆನಿಸಿತು. ಟೇಬಲ್ ಮೇಲೆ ಕಪ್ಪುಗಳಲ್ಲಿದ್ದ ಚಹಾ ಆರಿ ತಣ್ಣಗಾಗಿ ಕೆನೆಗಟ್ಟಿತ್ತು. 

       ಭಾನುವಾರ ಸ್ವಲ್ಪ ತಡವಾಗಿ ಎದ್ದರಾಯ್ತೆಂದು ಇನ್ನು ಮುಸುಕು ಹಾಕಿ ಮಲಗಿದ್ದ ನನಗೆ ರಾಘವ ಅವರ ಫೋನ್   ಕರೆಯಿಂದ ಎಚ್ಚರವಾಯಿತು. ಅದಾಗಲೇ ದೇವರ ಮನೆಯಲ್ಲಿ ಹೆಂಡತಿಯ ವಾತಾಪಿ ಗಣಪತಿ ಶ್ಲೋಕ ಕೇಳಿಸಿ ಗಡಿಯಾರ ನೋಡಿದಾಗ ಗಂಟೆ ಏಳು ತೋರಿಸುತ್ತಿತ್ತು. ಕರೆ ಸ್ವೀಕರಿಸಿದವನಿಗೆ ಆ ಕಡೆಯಿಂದ ‘ಏನು ಮಹಾನುಭಾವರು ನಿದ್ದೆ ಮಾಡುತ್ತ ರಜಾದಿನವನ್ನು ಸದುಪಯೋಗಪಡಿಸಿಕೊಳ್ತಿರುವಂತಿದೆ. ನಿನ್ನೆ ನಾನು ಹೇಳಿದ ವಿಷಯ ನೆನಪಿದೆಯೋ ಹೇಗೆ. ಇನ್ನು ಒಂದು ಗಂಟೆಯಲ್ಲಿ ನನ್ನ ಕಾರು ನಿಮ್ಮ ಮನೆ ಮುಂದಿರುತ್ತೆ. ಗೆಟ್ ಅಪ್ ಬೇಗ ರೆಡಿಯಾಗಿ’ ರಾಘವ ಅವರ ಧ್ವನಿ ಕೇಳಿ ಬಾತ್ ರೂಮಿಗೆ ಓಡಿದೆ. ಸ್ನಾನ ಮಾಡಿ ಬಾತ್ ರೂಮಿನಿಂದ ಹೊರಬರುವಷ್ಟರಲ್ಲಿ ಹೊರಗೆ ಕಾರಿನ ಹಾರ್ನ್ ಕೇಳಿಸಿ ಹೆಂಡತಿಗೆ ಅವರನ್ನು ಸ್ವಾಗತಿಸಲು ಹೇಳಿ ಅವಸರವಸರವಾಗಿ ಬಟ್ಟೆ ಧರಿಸಿ ಹೊರಬಂದಾಗ ರಾಘವ ಹಾಲ್‍ನಲ್ಲಿ ಕುಳಿತು ಕಾಫಿ ಕುಡಿಯುತ್ತಿದ್ದರು. ‘ಏನಯ್ಯಾ ಸ್ವಲ್ಪಾನೂ ಸಿರಿಯಸ್ನೆಸ್ ಇಲ್ಲ ನೋಡು. ನಿನ್ನೆ ಹೇಳಿದ ವಿಷಯ ಬೆಳಗಾಗುವಷ್ಟರಲ್ಲಿ ಮರೆತು ಬಿಟ್ರೆ ಇನ್ನು ಪಾಠ ಹೇಗೆ ಮಾಡ್ತೀರಿ’ ರಾಘವ ಆಗಾಗ ಇಂಥ ಮಾತುಗಳಿಂದ ನನ್ನನ್ನು ಛೇಡಿಸುತ್ತಿದ್ದುದ್ದರಿಂದ ನಾನಾಗಲಿ ನನ್ನ ಹೆಂಡತಿಯಾಗಲಿ ಅವರ ಮಾತನ್ನು ಸಿರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ. ‘ನೋಡಮ್ಮ ನಿನ್ನ ಗಂಡನ್ನ ಇವತ್ತೊಂದಿನ ನಿನ್ನಿಂದ ಕಸಿದುಕೊಳ್ತಿದ್ದೀನಿ. ಯಾವುದೇ ಪ್ರಾಬ್ಲಮ್ ಇಲ್ಲಾ ತಾನೆ’ ನನ್ನ ಹೆಂಡತಿಗೆ ಹೇಳಿ ಹೊರನಡೆದ ರಾಘವ ಅವರನ್ನು ನಾನು ಹಿಂಬಾಲಿಸಿದೆ. 

      ಮನಸ್ವಿನಿ ಅವರ ತೋಟದ ಮನೆ ಇರುವುದು ನಗರದಿಂದ ಸುಮಾರು ಇಪ್ಪತ್ತು ಕಿಲೋ ಮೀಟರ್ ದೂರದ ಹೊರವಲಯದಲ್ಲಿ. ಸಮಾಜಶಾಸ್ತ್ರದ ಪ್ರಾಧ್ಯಾಪಕಿಯಾದರೂ ಸಾಹಿತ್ಯದಲ್ಲಿ ಅಭಿರುಚಿ ಅವರಿಗೆ. ನಾಡಿನ ಹಲವಾರು ಪತ್ರಿಕೆಗಳಲ್ಲಿ ಅವರ ಲೇಖನ, ಕಥೆಗಳು ಪ್ರಕಟವಾಗಿವೆ. ರಾಘವ ಅವರಿಗೂ ಸಾಹಿತ್ಯದಲ್ಲಿ ಆಸಕ್ತಿ ಇರುವುದರಿಂದ ಅವರನ್ನೇ ಇವತ್ತಿನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಸನ್ಮಾನಿಸುವ ಆಸೆ. ರಾಘವ ಕಾರು ಓಡಿಸುತ್ತ ಎಫ್.ಎಮ್ ನಲ್ಲಿ ಬಿತ್ತರವಾಗುತ್ತಿದ್ದ ಹಳೆಯ ಕನ್ನಡ ಹಾಡಿಗೆ ತಮ್ಮ ಧ್ವನಿಗೂಡಿಸುತ್ತಿದ್ದರು. ಡಿಸೆಂಬರ್ ತಿಂಗಳ ಚಳಿಗಾಲದ ಆಹ್ಲಾದಕರ ವಾತಾವರಣದಲ್ಲಿ ರಸ್ತೆಯ ಪಕ್ಕದ ಹೊಲಗಳಲ್ಲಿ ದೃಷ್ಟಿ ಹಾಯುವವರೆಗೆ ತುಂಬಿ ನಿಂತ ಹಸಿರು ಪೈರಿನಿಂದ ವಸುಂಧರೆ ಕಂಗೊಳಿಸುತ್ತಿದ್ದಳು. ‘ನೋಡಿ ರವಿ ಎಲ್ಲವೂ ನಮ್ಮ ನಮ್ಮ ನೋಡುವ ದೃಷ್ಟಿಕೋನವನ್ನು ಅವಲಂಬಿಸಿರುತ್ತೆ. ಅಲ್ಲಿ ನೋಡಿ ದೂರದಲ್ಲಿ ಬೆಟ್ಟ ಕಾಣ್ತಿದೆಯಲ್ಲ ಅದನ್ನು ನಾವು ಯಾವ ಭಾವದಿಂದ ನೋಡ್ತೀವಿ ಆ ಅರ್ಥದಲ್ಲಿ ಅದು ನಮಗೆ ಭಾಸವಾಗುತ್ತೆ. ಅದೇ ರೀತಿ ಗಂಡು ಹೆಣ್ಣಿನ ಸಂಬಂಧ ಕೂಡ. ಎಲ್ಲವನ್ನೂ ತಪ್ಪು ಎನ್ನುವ ಗ್ರಹಿಕೆಯಿಂದ ನೋಡಿದರೆ ಎಲ್ಲ ಸಂಬಂಧಗಳೂ ನಮಗೆ ತಪ್ಪಾಗಿಯೇ ಕಾಣಿಸ್ತವೆ’ ತಮ್ಮ ಮತ್ತು ಮನಸ್ವಿನಿ ಅವರ ಸಂಬಂಧದ ಕುರಿತು ಮಾತನಾಡಲು ಪೀಠಿಕೆ ಹಾಕುವಂತೆ ರಾಘವ ನುಡಿದರು. ‘ಸರ್ ಹಾಗೆಂದು ಎಲ್ಲವೂ ಪರಿಶುದ್ಧ ಮತ್ತು ಪಾವಿತ್ರ್ಯವೇ ಎಂದು ನಂಬಿದರೆ ಮುಂದೊಂದು ದಿನ ನಮ್ಮ ನಂಬಿಕೆಗಳೇ ಸಡಿಲಾಗುವ ಸಾಧ್ಯತೆಯೂ ಇರಬಹುದಲ್ಲ’ ನನ್ನ ಪ್ರಶ್ನೆಯಿಂದ ಸ್ವಲ್ಪ ವಿಚಲಿತರಾದಂತೆ ಕಂಡ ರಾಘವ ಪ್ರತಿಕ್ರಿಯಿಸದೆ ಮೌನವಾದರು. ನಾವು ಕುಳಿತಿದ್ದ ಕಾರು ರಸ್ತೆಯನ್ನು ಸೀಳಿಕೊಂಡು ಓಡುತ್ತಿತ್ತು. ‘ಸರ್ ನಾನು ಕೇಳಿದ್ದರಲ್ಲಿ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ’ ರಾಘವ ಅವರ ಚಿಂತೆ ತುಂಬಿದ ಮುಖ ನೋಡಿ ಹೊರಬಂದ ನನ್ನ ಧ್ವನಿಯಲ್ಲಿ ಪಶ್ಚಾತ್ತಾಪವಿತ್ತು. ‘ನೋ ರವಿ ಹಾಗಲ್ಲ. ಪ್ರತಿಯೊಂದು ಸಂಬಂಧಕ್ಕೆ ಸಮಾಜದ ನಂಬಿಕೆ ಎನ್ನುವ ಮುದ್ರೆ ಬೇಕೆ ಎನ್ನುವುದಾದರೆ ಮನುಷ್ಯ ಸಂಬಂಧಗಳು ಎಷ್ಟೊಂದು ಕೃತಕವಾಗಿರುತ್ತವೆ ನೀವೇ ಯೋಚಿಸಿ’ ರಾಘವ ಅವರ ಮಾತು ನನ್ನ ಪ್ರಶ್ನೆಗೆ ಪ್ರತ್ಯುತ್ತರ ಎನ್ನುವುದಕ್ಕಿಂತ ಆಳವಾದ ಅನುಭವದಿಂದ ಅವರು ತಳೆದ ನಿಲುವಾಗಿತ್ತದು. ‘ತಾಯಿ-ಮಗುವಿನ ಪ್ರೀತಿ, ಗಂಡ-ಹೆಂಡತಿಯ ಪ್ರೇಮ, ಭಾತೃತ್ವ, ಗೆಳೆತನ ಇವೆಲ್ಲ ವ್ಯಕ್ತಿಗತವಾಗಿ ರೂಪುಗೊಳ್ಳುವ ಸಂಬಂಧಗಳು. ಪ್ರತಿ ಸಂಬಂಧವನ್ನು ನಾವು ನಮ್ಮದೆ ತರ್ಕ, ಸಿದ್ಧಾಂತದ ನೆಲೆಯಲ್ಲಿ ವಿಶ್ಲೇಷಿಸಲು ಹೊರಟರೆ ಅಲ್ಲಿ ನಾವು ಅಪೇಕ್ಷಿಸುವುದು ನಮಗೆ ಅನುಕೂಲವಾಗುವ ಫಲಿತಾಂಶವನ್ನೆ. ನನ್ನ ಮತ್ತು ಮನಸ್ವಿನಿ ಅವರ ಕುರಿತು ನೀವೆಲ್ಲ ಯೋಚಿಸಿದ್ದು ಕೂಡ ಇದು ಇಂಥದ್ದೆ ಸಂಬಂಧ ಎನ್ನುವ ಪೂರ್ವ ಗ್ರಹಿಕೆಯಲ್ಲೆ’ ರಾಘವ ಕಾಲೇಜಿನ ಸಹೊದ್ಯೋಗಿಗಳನ್ನು ಆರೋಪಿಸುವ ಭರದಲ್ಲಿ ನೀವೆಲ್ಲ ಎಂದು ನನ್ನನ್ನೂ ಸೇರಿಸಿದ್ದು ಮನಸ್ಸಿಗೆ ಕೊಂಚ ನೋವಾಯಿತು. ಅರ್ಥವಾದವರಂತೆ ‘ಸಾರಿ ಮಿ.ರವಿ’ ರಾಘವ ನನ್ನ ಬಲಗೈಯನ್ನೊಮ್ಮೆ ಅದುಮಿದರು.

       ಮನಸ್ವಿನಿ ಅವರ ತೋಟದ ಮನೆ ತಲುಪಿದಾಗ ಅದಾಗಲೇ ಅತಿಥಿಗಳೆಲ್ಲ ಬಂದಾಗಿತ್ತು. ಮನೆಯ ಎದುರಿನ ರಸ್ತೆಯಲ್ಲಿ ಮನಸ್ವಿನಿ ನಮಗಾಗಿ ಕಾಯುತ್ತಿದ್ದರು. ಸಮಾರಂಭದಲ್ಲಿ ರಾಘವ ಅವರ ಉಪಸ್ಥಿತಿಯಿಂದ ಮನಸ್ವಿನಿಗೆ ಖುಷಿಯಾಗಿದೆಯೆಂದು ಅವರ ಮುಖದ ಭಾವವೇ ಹೇಳುತ್ತಿತ್ತು. ಪತಿ ಮತ್ತು ಮಕ್ಕಳನ್ನು ಪರಿಚಯಿಸಿ ನಮ್ಮನ್ನು ವೇದಿಕೆಯ ಮುಂಭಾಗದಲ್ಲಿ ಕರೆದೊಯ್ದು ಕುಳ್ಳಿರಿಸಿದರು. ಇಡೀ ಸಮಾರಂಭದ ಮೇಲುಸ್ತುವಾರಿ ಮನಸ್ವಿನಿ ಅವರ ಪತಿ ಪ್ರದೀಪ ಅವರದಾಗಿತ್ತು. ತುಂಬ ಅಚ್ಚುಕಟ್ಟಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರ ಹೆಣ್ಣು ಮಕ್ಕಳಿಬ್ಬರೂ ಅತಿಥಿಗಳನ್ನು ಉಪಚರಿಸುತ್ತ ಸಂಭ್ರಮದಿಂದ ಓಡಾಡುತ್ತಿದ್ದರು. ಅತಿಥಿಗಳೇನೂ ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ. ಮನಸ್ವಿನಿ ತಮ್ಮ ಆಪ್ತರನ್ನಷ್ಟೇ ಆಹ್ವಾನಿಸಿದ್ದರು. ನಮ್ಮ ಕಾಲೇಜಿನಿಂದ ಆಹ್ವಾನಿತರಾದವರಲ್ಲಿ ರಾಘವ ಅವರೊಬ್ಬರೆ. ಅನಿರೀಕ್ಷಿತ ಅತಿಥಿಯಾಗಿದ್ದ ನನ್ನನ್ನು ಮನಸ್ವಿನಿ ತುಂಬ ಆದರದಿಂದಲೇ ಸ್ವಾಗತಿಸಿದ್ದರು. ರಾಘವ ಅವರ ಆತ್ಮೀಯ ಎನ್ನುವ ಕಾರಣವೂ ಇರಬಹುದು. ಮನಸ್ವಿನಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ರಾಘವ ‘ಸಾಂಗತ್ಯ’ ಕಥಾಸಂಕಲನವನ್ನು ಬಿಡುಗಡೆ ಮಾಡಿ ಅತಿಥಿಗಳಿಗೆ ಒಂದೊಂದು ಪ್ರತಿ ನೀಡಿದರು. ಸಾಹಿತ್ಯದ ಕುರಿತು ಮಾತನಾಡುವಂತೆ ಮನಸ್ವಿನಿಯೇ ರಾಘವ ಅವರನ್ನು ಒತ್ತಾಯಿಸಿದರು. ರಾಘವ ತಮ್ಮ ಎಂದಿನ ಗಂಭೀರ ಮುಖಮುದ್ರೆಯಿಂದ ಅಲ್ಲಿ ಕುಳಿತಿದ್ದವರನ್ನೊಮ್ಮೆ ದೃಷ್ಟಿಸಿ ಮಾತು ಶುರು ಮಾಡಿದರು. ‘ನಾನೇನೂ ಸಾಹಿತ್ಯದ ವಿದ್ಯಾರ್ಥಿಯಲ್ಲ. ಸಾಹಿತ್ಯವನ್ನು ಶಿಸ್ತಿನಿಂದ ಅಭ್ಯಸಿಸಿದವನೂ ಅಲ್ಲ. ಆದರೆ ಸಾಹಿತ್ಯದ ಕುರಿತು ನನಗೆ ಒಂದಿಷ್ಟು ಅಭಿರುಚಿ ಇದೆ. ಮನಸ್ವಿನಿ ಅವರ ‘ಸಾಂಗತ್ಯ’ ಕಥಾಸಂಕಲನವನ್ನು ಅದು ಹಸ್ತಪ್ರತಿ ರೂಪದಲ್ಲಿರುವಾಗಲೇ ಓದಿದ್ದೀನಿ. ಸಾಹಿತ್ಯದ ಮೂಲಕವೇ ಮನುಷ್ಯ ಸಂಬಂಧಗಳಿಗೊಂದು ಹೊಸ ವ್ಯಾಖ್ಯಾನ ಕೊಡಲು ಹೊರಟಿರುವ ಮನಸ್ವಿನಿ ಅವರ ಪ್ರಯತ್ನವನ್ನು ನಾನು ಮೆಚ್ಚುತ್ತೇನೆ. ಇಲ್ಲಿನ ಕಥೆಗಳ ಮೂಲಕ ಕಥೆಗಾರ್ತಿ ಪ್ರಶ್ನಿಸಲು ಹೊರಟಿರುವುದು ಸಂಬಂಧಗಳನ್ನು ಸೀಮಿತ ಚೌಕಟ್ಟಿನಲ್ಲೇ ನಾವು ನೋಡಬೇಕೆ ಎಂದು. ಸಂಬಂಧಗಳಿಗೆ ಸಮಾಜದ ಒಪ್ಪಿಗೆ ಅಥವಾ ನಂಬಿಕೆ ಎನ್ನುವ ಮುದ್ರೆಯ ಅಗತ್ಯವಿದೆಯೇ ಎನ್ನುವ ಪ್ರಶ್ನೆ ಸಹ ಈ ಕಥೆಗಳಲ್ಲಿ ಅಡಗಿದೆ. ಸ್ಥಾಪಿತ ನಂಬಿಕೆಗಳನ್ನು ಮುರಿದು ಹೊಸ ನಂಬಿಕೆಯನ್ನು ಕಟ್ಟಲು ಹೊರಟಿರುವ ಲೇಖಕಿಯ ಪ್ರಯತ್ನಕ್ಕೆ ಓದುಗರ ವಲಯದಿಂದ ಬೆಂಬಲ ಸಿಗಬೇಕು. ಅಂದರೆ ಮಾತ್ರ ಇಂಥ ಗಟ್ಟಿಧೈರ್ಯದ ಬರಹಗಾರ್ತಿಯಿಂದ ಇನ್ನಷ್ಟು ಕೃತಿಗಳು ಹೊರಬರಬಹುದೆನ್ನುವ ನಿರೀಕ್ಷೆಯಿದೆ’ ರಾಘವ ಅವರ ಮಾತುಗಳಿಗೆ ಅಲ್ಲಿ ನೆರೆದಿದ್ದ ಆಮಂತ್ರಿತರು ಚಪ್ಪಾಳೆಯ ಮೂಲಕ ಮೆಚ್ಚುಗೆ ಸೂಚಿಸಿದರು. ರಾಘವ ಪೂರ್ಣವಾಗಿ ತೆರೆದುಕೊಳ್ಳಬಹುದೆಂದು ನಿರೀಕ್ಷಿಸಿದ್ದ ನನಗೆ ಅವರು ಮಾತನ್ನು ಬೇಗನೆ ಮುಗಿಸಿದ್ದು ನಿರಾಸೆ ಮೂಡಿಸಿತು. 

     ಸಮಾರಂಭದ ಕೊನೆಯಲ್ಲಿ ಅತಿಥಿಗಳಿಗೆ ರುಚಿಕಟ್ಟಾದ ಊಟದ ವ್ಯವಸ್ಥೆಯಿತ್ತು. ಪ್ರದೀಪ ಸ್ವತ: ಮುಂದೆ ನಿಂತು ಎಲ್ಲರಿಗೂ ಉಪಚರಿಸುತ್ತಿದ್ದರು. ಪ್ರದೀಪ ಮಾತುಗಳಿಂದಲೇ ತಿಳಿಯುತ್ತಿತ್ತು ಅವರಿಗೆ ಸಾಹಿತ್ಯದ ಬಗ್ಗೆ ಆಸಕ್ತಿಯಾಗಲಿ ಅಭಿರುಚಿಯಾಗಲಿ ಇಲ್ಲವೆಂದು. ಆದರೆ ಹೆಂಡತಿಯನ್ನು ಪ್ರೀತಿಸುವ ಅವರು ಆಕೆಯ ಸಾಹಿತ್ಯಾಸಕ್ತಿಗೂ ಆಸರೆಯಾಗಿ ನಿಂತಿದ್ದು ಅಭಿಮಾನವೆನಿಸಿತು. ಮರಳಿ ಬರುವಾಗ ಕಾರಿನವರೆಗೂ ಬಂದು ಬಿಳ್ಕೊಟ್ಟ ಮನಸ್ವಿನಿ ‘ಸರ್ ನಿಮ್ಮ ಅಭಿಮಾನದ ಮಾತುಗಳಿಗೆ ತುಂಬಾ ಥ್ಯಾಂಕ್ಸ್. ನನ್ನ ಬರವಣಿಗೆಗೆ ಮತ್ತು ಇವತ್ತಿನ ಈ ಕಥಾಸಂಕಲನಕ್ಕೆ ನೀವೆ ಸ್ಪೂರ್ತಿ ಸರ್’ ಕೊರಳುಬ್ಬಿ ಕಣ್ಣಂಚಿನಲ್ಲಿ ನೀರೊಡೆದು ಮಾತಿಗಾಗಿ ತಡವರಿಸಿದರು. ರಾಘವ ಅವರ ಮನಸ್ಥಿತಿ ಕೂಡ ಭಿನ್ನವಾಗಿರಲಿಲ್ಲ. ಪ್ರದೀಪ ಹತ್ತಿರ ಬಂದು ಕೈಕುಲುಕಿ ಧನ್ಯವಾದ ಹೇಳುವಾಗ ಅವರ ಮುಖದಲ್ಲಿ ಧನ್ಯತೆಯ ಭಾವವಿತ್ತು. ಮಕ್ಕಳಿಬ್ಬರೂ ರಾಘವ ಅವರ ಕಾಲಿಗೆರಗಿ ಆಶಿರ್ವಾದ ಪಡೆದರು. ಇಡೀ ವಾತವರಣದಲ್ಲಿ ಆ ಕ್ಷಣ ಭಾವ ಲಯವೊಂದು ಪ್ರವಹಿಸುತ್ತಿರುವ ಅನುಭವವಾಗಿ ಮೈ ಜುಮ್ಮೆಂದಿತು. 

     ರಾಘವ ಮೌನದ ಚಿಪ್ಪಿನೊಳಗೆ ಹುದುಗಿಹೋಗಿದ್ದರು. ಅವರನ್ನು ಮಾತನಾಡಿಸುವ ಧೈರ್ಯ ನನಗಿರಲಿಲ್ಲ. ಕಾರಿನ ಸದ್ದು ಮತ್ತು ಎಫ್.ಎಮ್ ನಲ್ಲಿ ಬರುತ್ತಿದ್ದ ಲತಾಮಂಗೇಶ್ಕರ್ ಹಾಡೊಂದು ಬಿಟ್ಟರೆ ನಮ್ಮಿಬ್ಬರ ನಡುವೆ ಮೌನ ಮನೆಮಾಡಿತ್ತು. ಸ್ವಲ್ಪ ದೂರ ಕ್ರಮಿಸಿದ ನಂತರ ರಾಘವ ಮೌನ ಮುರಿದು ಮಾತಿಗಿಳಿದರು ‘ಮಿ.ರವಿ ನೀವೆ ನೋಡಿದ್ದೀರಿ. ಈಗ ಹೇಳಿ ನನ್ನ ಮತ್ತು ಮನಸ್ವಿನಿಯ ಸಂಬಂಧವನ್ನು ನೀವು ಯಾವ ಹೆಸರಿನಿಂದ ಕರಿತೀರಿ?’. ನನ್ನಲ್ಲಿ ಉತ್ತರವಿರಲಿಲ್ಲ. ನಾಚಿಕೆಯಿಂದ ತಲೆತಗ್ಗಿಸಿದೆ. ‘ನಿಮ್ಮನ್ನ ನೋಯಿಸಬೇಕು ಅಂತಲ್ಲ ರವಿ. ಸತ್ಯಾಸತ್ಯತೆಗಳನ್ನು ನೋಡದೆ ನಾವು ಒಂದು ನಿರ್ಧಾರಕ್ಕೆ ಬರ್ತೀವಿ ನೋಡಿ ಅದೇ ನಾವು ಮಾಡೋ ತಪ್ಪು. ನಾಗರಿಕರಾಗ್ತಾ ಆಗ್ತಾ ನಾವು ವಿವೇಚನೆಯನ್ನೇ ಕಳೆದುಕೊಳ್ತಿದ್ದೀವಿ ಅಂತ ನನಗೆ ಭಯವಾಗುತ್ತೆ’ ರಾಘವ ಮಾತನಾಡುವ ಲಹರಿಯಲ್ಲಿದ್ದರು. ಅವರ ಮಾತನ್ನು ಆಲಿಸುವುದಷ್ಟೇ ಆ ಕ್ಷಣಕ್ಕೆ ನನ್ನ ಪ್ರತಿಕ್ರಿಯೆಯಾಗಿತ್ತು. ‘ಈ ದೇಶದಲ್ಲಿ ನೇಣುಗಂಬಕ್ಕೆ ಏರಿಸುವ ಅಪರಾಧಿಯನ್ನು ಕೂಡ ಅವನ ಕೊನೆಯ ಆಸೆ ಏನು ಅಂತ ಕೇಳ್ತಾರೆ. ತಪ್ಪು ಮಾಡಿದವನಿಗೂ ಸಹ ಕೋರ್ಟಿನಲ್ಲಿ ವಾದಿಸೋಕೆ ಅವಕಾಶವಿದೆ. ಇಂಥ ಸಹನೆಯ ಸಂಸ್ಕೃತಿಯ ನಡುವೆಯೂ ನಾವು ಮಾತ್ರ ಬೇರೆಯವರ ವ್ಯಕ್ತಿತ್ವವನ್ನು ನಮ್ಮದೇ ಆದ ದೃಷ್ಟಿಕೋನದಲ್ಲಿ ನಿರ್ಧರಿಸಿ ಬಿಡ್ತಿವಿ. ಇಲ್ಲಿ ಒಂದು ಗಂಡು ಮತ್ತು ಹೆಣ್ಣು ತಮ್ಮಲ್ಲಿನ ಸಮಾನ ಅಭಿರುಚಿಯಿಂದ ಹತ್ತಿರವಾಗಿ ಗೆಳೆತನ ಬೆಳೆಸೋದೆ ತಪ್ಪು ಅಂತ ನಿರ್ಧರಿಸಿ ಬಿಡ್ತಿವಲ್ಲ ರವಿ ಇದೆಂಥ ಸಮಾಜ. ಒಮ್ಮೊಮ್ಮೆ ಎಂಥವರ ನಡುವೆ ಬದುಕುತ್ತಿದ್ದೀನಿ ಅಂತ ಹೇಸಿಗೆಯಾಗುತ್ತೆ’ ರಾಘವ ಅವರ ಧ್ವನಿಯಲ್ಲಿ ಸಿಟ್ಟಿಗಿಂತ ವೇದನೆಯಿತ್ತು. ‘ಮದುವೆಯಾದ ನಂತರ ಒಂದು ಗಂಡು ಮತ್ತು ಹೆಣ್ಣು ಸ್ನೇಹಕ್ಕೆ ಚಾಚಿಕೊಳ್ಳಬಾರದು ಅಂತ ಇಲ್ಲೇನಾದರೂ ನಿಯಮ ಇದೇನಾ. ಗಂಡು ಹೆಣ್ಣಿನ ನಡುವಣ  ಸ್ನೇಹ ಎಂದರೆ ಅದು ಕೇವಲ ಕಾಮಕ್ಕೆ ಮಾತ್ರ ಸೀಮಿತಗೊಳಿಸ್ತೀವಿ. ರವಿ ನನಗೂ ಮದುವೆಯಾಗಿ ಹೆಂಡತಿ ಮತ್ತು ಮಕ್ಕಳಿದ್ದಾರೆ ಮನಸ್ವಿನಿದೂ ನನ್ನದೆ ಸ್ಥಿತಿ. ಇಲ್ಲಿ ಯಾಕೆ ನಮ್ಮಿಬ್ಬರ ನಡುವೆ ಸ್ನೇಹ ಬೆಳೀತು ಎನ್ನುವುದನ್ನು ನೀವು ಎಂದಾದರೂ ನಮ್ಮ ಜಾಗದಲ್ಲಿ ನಿಂತು ಯೋಚಿಸಿದ್ದರೆ ಹೀಗೆ ತಪ್ಪು ಕಲ್ಪನೆ ಆಗ್ತಿರಲಿಲ್ಲ. ಮನಸ್ವಿನಿಗೆ ಸಾಹಿತ್ಯದ ಅಭಿರುಚಿ ಇದೆ. ತಾನು ಓದಿದ ಪುಸ್ತಕಗಳ ಕುರಿತು ಹಂಚಿಕೊಳ್ಳೊಕೆ ಅವರಿಗೊಂದು ಜೊತೆಯ ಅಗತ್ಯವಿದೆ. ಪ್ರದೀಪ ಬಿಜಿನೆಸ್ ಮ್ಯಾನ್. ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ ಇಲ್ಲ. ಸಮಾನ ಆಸಕ್ತಿ ಇರುವವರ ಗೆಳೆತನಕ್ಕಾಗಿ ಹುಡುಕ್ತಿದ್ದಾಗ ಅವರಿಗೆ ನಾನು ಸಿಕ್ಕೆ. ನನಗೂ ಸಾಹಿತ್ಯದ ಒಲುವಿದೆ ಎಂದು ಗೊತ್ತಾದದ್ದೆ ಮನಸ್ವಿನಿ ನನ್ನೊಡನೆ ಗಂಟೆಗಟ್ಟಲೆ ಚರ್ಚೆ ಮಾಡೋರು. ನಿಜ ಹೇಳ್ತಿದ್ದೀನಿ ರವಿ ನಾವು ಎಂದೂ ನಮ್ಮ ಸಂಸಾರದ್ದಾಗಲಿ ಬೇರೆಯವರ ಬಗ್ಗೆಯಾಗಲಿ ಮಾತಾಡಿಲ್ಲ. ನಮ್ಮ ಮಾತುಕತೆ, ಗೆಳೆತನ ಅದು ಸಾಹಿತ್ಯದ ವಿಷಯಕ್ಕಷ್ಟೆ ಸೀಮಿತ. ಕಾಲೇಜಿನ ಕ್ಯಾಂಟಿನಿನಲ್ಲೊ ಡಿಪಾರ್ಟ್‍ಮೆಂಟ್‍ನಲ್ಲೊ ಜೊತೆಯಾಗಿ ಕುಳಿತು ಮಾತಾಡಿದ್ದನ್ನೇ ದೊಡ್ಡ ವಿಷಯವಾಗಿಸಿ ಅದಕ್ಕೆ ನಿಮ್ಮ ನಿಮ್ಮ ಕಲ್ಪನೆಯ ರೆಕ್ಕೆ ಪುಕ್ಕ ಕಟ್ಟಿ ಕಥೆಯಾಗಿಸ್ತಿರಲ್ಲ ಇದರಿಂದ ಇನ್ನೊಬ್ಬರಿಗೆ ಹರ್ಟ್ ಆಗುತ್ತೆ ಅನ್ನೊ ಕಿಂಚಿತ್ ಪ್ರಜ್ಞೆಯೂ ಬೇಡ ಅಂದರೆ ನಾವು ಎಲ್ಲಿ ಇದ್ದೀವಿ ರವಿ’ ರಾಘವ ಅವರ ಮುಖದಲ್ಲಿ ನೋವು ತುಂಬಿತ್ತು. ರಾಘವ ಅವರ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕೆನ್ನುವುದಾಗಲಿ ಅವರನ್ನು ಸಮಾಧಾನ ಪಡಿಸುವುದಾಗಲಿ ತೋಚದೆ ನಾನು ಸುಮ್ಮನೆ ಕುಳಿತೆ. 

    ಮನೆ ಸಮೀಪಿಸುವವರೆಗೂ ಇಬ್ಬರೂ ಮಾತನಾಡಲಿಲ್ಲ. ಮನೆ ಎದುರು ಕಾರು ನಿಂತಾಗ ‘ಸರ್ ಬನ್ನಿ ಕಾಫಿ ಕುಡಿಯುವಿರಂತೆ’ ಆಹ್ವಾನಿಸಿದೆ. ನನ್ನ ಆಹ್ವಾನವನ್ನು ನಯವಾಗಿ ನಿರಾಕರಿಸಿದ ರಾಘವ ‘ರವಿ ಇನ್ನೊಮ್ಮೆ ಸಮಯ ಮಾಡಿಕೊಂಡು ಬರ್ತೀನಿ. ಮನಸ್ಸಿನ ಭಾರವನ್ನು ಯಾರೊಂದಿಗಾದರೂ ಹಂಚಿಕೊಳ್ಳಬೇಕಿತ್ತು. ಅದಕ್ಕೆ ಇವತ್ತು ನಿಮ್ಮೊಂದಿಗೆ ಸ್ವಲ್ಪ ಒರಟಾಗಿ ಮಾತಾಡ್ದೆ ಅಂತ ಅನಿಸುತ್ತೆ. ದಯವಿಟ್ಟು ಕ್ಷಮಿಸಿ. ಬೇರೆಯವರ ಬಗ್ಗೆ ಕಥೆ ಕಟ್ಟೋರು ಅವರೆಲ್ಲ ಮುಖವಾಡ ಧರಿಸಿ ತಾವು ಮಾತ್ರ ಪರಮ ಸಾಚಾಗಳು ಅನ್ನೋ ಥರ ಬದುಕೊದನ್ನ ನೋಡಿದ್ದೀನಿ. ಮುಖವಾಡದ ಹಿಂದೆ ಅದೆಂಥ ಕ್ರೂರ ಮನಸ್ಸಿದೆ ಅಂದರೆ ಅಂಥವರ ನಡುವಿದ್ದೂ ನಮ್ಮಂಥವರು ಇನ್ನೂ ಸೆನ್ಸಿಟಿವ್ ಆಗಿ ಉಳಿದಿದ್ದಿವಲ್ಲ ಅಂತ ಆಶ್ಚರ್ಯ ಆಗುತ್ತೆ’ ರಾಘವ ಮಾತು ನಿಲ್ಲಿಸಿ ಕಾರನ್ನು ಮುಂದೊಡಿಸಿದರು. ಕಾರು ಕಣ್ಮರೆಯಾಗುವವರೆಗೂ ನೋಡುತ್ತ ನಿಂತವನನ್ನು ಹೆಂಡತಿಯ ಧ್ವನಿ ಎಚ್ಚರಿಸಿ ವಾಸ್ತವಕ್ಕೆ ಮರಳಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Tuesday, January 1, 2019

ಮಂಟೋ ಕಥೆಗಳಲ್ಲಿ ದೇಶವಿಭಜನೆಯ ನೋವಿನ ವ್ಯಥೆ








           ಸಾದತ್ ಹಸನ್ ಮಟೋ ಉರ್ದು ಸಾಹಿತ್ಯದಲ್ಲಿ ಮಹತ್ವದ ಹೆಸರು. ಮಂಟೋ ನಿಧನ ಹೊಂದಿ ಆರು ದಶಕಗಳೇ ಸರಿದು ಹೋಗಿವೆ. ನಂದಿತಾ ದಾಸ್ ಹಿಂದಿ ಭಾಷೆಯಲ್ಲಿ ನಿರ್ದೇಶಿಸುತ್ತಿರುವ ಮಂಟೋ ಜೀವನ ಆಧಾರಿತ ಸಿನಿಮಾದಿಂದಾಗಿ ಮಂಟೋ ಈಗ ಮತ್ತೆ ನೆನಪಾಗುತ್ತಿದ್ದಾರೆ. ಸಾಮಾನ್ಯವಾಗಿ ಈ ಸಿನಿಮಾ ಮಾಧ್ಯಮದಲ್ಲಿ ಬರಹಗಾರರ ಕುರಿತು ಸಿನಿಮಾಗಳು ನಿರ್ಮಾಣಗೊಂಡಿದ್ದು ನನಗೆ ನೆನಪಿದ್ದಂತೆ ಇಲ್ಲವೇ ಇಲ್ಲ. ಸದಾ ಜನಪ್ರಿಯತೆಯ ಬೆನ್ನು ಹತ್ತುವ ಈ ಸಿನಿಮಾ ಮಾಧ್ಯಮಕ್ಕೆ ಬರಹಗಾರರ ಬದುಕನ್ನು ತನ್ನ ಚೌಕಟ್ಟಿಗೆ ಹೊಂದಿಸಿಕೊಳ್ಳಲು ಕಷ್ಟಸಾಧ್ಯವೇನೋ. ಜೊತೆಗೆ ಬರಹಗಾರನ ಬದುಕು ಪ್ರೇಕ್ಷಕರನ್ನು ಆಕರ್ಷಿಸುವ ಸರಕಲ್ಲ ಎನ್ನುವ ಸಿನಿಮಾದವರ ವ್ಯಾಪಾರೀ ಮನೋಭಾವವೂ ಇದಕ್ಕೆ ಕಾರಣವಾಗಿರಬಹುದು. ಹೀಗಾಗಿ ಕ್ರೀಡಾಪಟುಗಳ, ರಾಜಕಾರಣಿಗಳ ವರ್ಣರಂಜಿತ ಬದುಕನ್ನು ಸೆಲ್ಯೂಲಾಯ್ಡ್  ಪರದೆಯ ಮೇಲೆ ತೋರಿಸಲು ಆಸಕ್ತಿ ತೋರುವ ಈ ಸಿನಿಮಾ ಜನ ಬರಹಗಾರರ ಬದುಕನ್ನು ಸದಾಕಾಲ ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ಇಂಥದ್ದೊಂದು ನಿರ್ಲಕ್ಷಿತ ವಾತಾವರಣದಲ್ಲೂ ನಂದಿತಾದಾಸ್ ಆರುದಶಕಗಳ ಹಿಂದೆ ಬದುಕಿದ್ದ ಸಾದತ್ ಹಸನ್ ಮಂಟೋ ಎನ್ನುವ ಬರಹಗಾರನ ಬದುಕಿನ ಕಥೆಯನ್ನು ಸಿನಿಮಾಕ್ಕಾಗಿ ಆಯ್ದುಕೊಂಡಿದ್ದು ಸ್ವಾಗತಾರ್ಹ. ಸಿನಿಮಾ ಪ್ರಿಯರು ಕೂಡ ಇಂಥ ಸಿನಿಮಾಗಳನ್ನು ನೋಡಿ ಉತ್ತೇಜಿಸಬೇಕು. ಮಂಟೋ ಜೀವನಗಾಥೆಯ ಸಿನಿಮಾ ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಬರಹಗಾರರ ಬದುಕು ಸಿನಿಮಾ ಪರದೆಯ ಮೇಲೆ ಕಥೆಯಾಗಿ ಮೂಡಿಬರಬಹುದೆನ್ನುವ ನಿರೀಕ್ಷೆ ಇದೆ.

         ಪಂಜಾಬಿನ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿದ ಸಾದತ್ ಹಸನ್ ಮಂಟೋ ಅವರಿಗೆ ಭಾರತ ವಿಭಜನೆಯ ಸಂದರ್ಭ ಮೂವತ್ತೈದು ವರ್ಷ ವಯಸ್ಸು. ತುಂಬ ಯೌವನದ  ದಿನಗಳವು. ಅಮೃತಸರದಲ್ಲಿ ವಿದ್ಯಾಭ್ಯಾಸ, ಮುಂಬಯಿಯಲ್ಲಿ ವೃತ್ತಿ. ಬಾಲ್ಯದಿಂದಲೇ ಇದ್ದ ಓದಿನ ಗೀಳು ಮುಂದೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿತು. ಮಂಟೋ ಬರೆದದ್ದೆಲ್ಲ ಬದುಕಿನ ಜೀವನಾನುಭವವೆ. ಒಂದು ಕಾದಂಬರಿ, ಏಳು ನಾಟಕಗಳು, ಮೂರು ಪ್ರಬಂಧ ಸಂಕಲನಗಳು, ಇಪ್ಪತ್ತೆರಡು ಕಥಾ ಸಂಕಲನಗಳು ಇದು ಮಂಟೋ ಅವರ ಒಟ್ಟು ಸಾಹಿತ್ಯ ಕೃಷಿಯ ಅಂಕಿಸಂಖ್ಯೆ. ಅವರ ಕಥೆಗಳು ಪ್ರಂಚದ ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು ಆ ಕಥೆಗಳ ಶ್ರೇಷ್ಠತೆಗೊಂದು ದೃಷ್ಟಾಂತ. ಮಂಟೋ ಅವರ ಕಥೆಗಳು ಕನ್ನಡಕ್ಕೂ ಅನುವಾದಗೊಂಡು ಇಲ್ಲಿನ ಓದುಗರ ಮನ್ನಣೆಗೆ ಪಾತ್ರವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಮಂಟೋ ಜೀವನ ಕಥೆಯ ಇಂಗ್ಲಿಷ ಅವತರಣಿಕೆಯನ್ನು ಕೆ.ಹೆಚ್.ಶ್ರೀನಿವಾಸ ಕನ್ನಡಕ್ಕೆ ಅನುವಾದಿಸಿರುವರು. ಕನ್ನಡದ ಮಹತ್ವದ ಕಥೆಗಾರ ಫಕೀರ ಮಹಮ್ಮದ್ ಕಟ್ಪಾಡಿ ಅವರು ಅನುವಾದಿಸಿರುವ ಮಂಟೋ ಅವರ ಹಲವು ಕಥೆಗಳನ್ನು ಸಂಕಲನ ರೂಪದಲ್ಲಿ ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿರುವರು. ಈ ಇಬ್ಬರು ಲೇಖಕರ ಪ್ರಯತ್ನದಿಂದಾಗಿ ಸಾದತ್ ಹಸನ್ ಮಂಟೋ ಅವರಂಥ ಮಹತ್ವದ ಬರಹಗಾರ ಕನ್ನಡದ ಓದುಗರ ಅರಿವಿನ ವ್ಯಾಪ್ತಿಗೆ ದಕ್ಕುವಂತಾಯಿತು.

        ಸಾದತ್ ಹಸನ್ ಮಂಟೋ ಬದುಕಿದ್ದದ್ದು ಕೇವಲ 43 ವರ್ಷಗಳು. ಮುಂಬಯಿಯಲ್ಲಿ ಚಿತ್ರಕಥೆ ಮತ್ತು ಸಂಭಾಷಣೆಕಾರರಾಗಿ ಹಿಂದಿ ಸಿನಿಮಾರಂಗದಲ್ಲಿ ಉತ್ತುಂಗದಲ್ಲಿದ್ದ ಸಂದರ್ಭದಲ್ಲೇ ದೇಶ ವಿಭಜನೆಯ ಬಿಸಿ ತಟ್ಟಿತು. ಪರಿಣಾಮವಾಗಿ ಮಂಟೋ ಮುಂಬಯಿ ತೊರೆದು ಪಾಕಿಸ್ತಾನಕ್ಕೆ ವಲಸೆ ಹೋಗಿ ಲಾಹೋರಿನಲ್ಲಿ ನೆಲೆಸಬೇಕಾಯಿತು. ತೀರ ಧಾರ್ಮಿಕ ನೆಲೆಯ ಪಾಕಿಸ್ತಾನದಲ್ಲಿ ಮಂಟೋ ಅವರ ಕಥೆಗಳು ಧರ್ಮಾಂಧರ ಟೀಕೆಗಳಿಗೆ ಗುರಿಯಾದವು. ಒಬ್ಬ ಮಹತ್ವದ ಬರಹಗಾರನಿಗೆ ತನ್ನ ಜೀವಿತಾವಧಿಯಲ್ಲಿ ದೊರೆಯಬೇಕಿದ್ದ ಗೌರವ-ಮನ್ನಣೆ ದೊರೆಯಲಿಲ್ಲ. ವೈಯಕ್ತಿಕ ಬದುಕಿನಲ್ಲೂ ಹಲವು ಸಮಸ್ಯೆಗಳು ಮಂಟೋ ಅವರನ್ನು ಹಣ್ಣು ಮಾಡಿದವು. ಒಂದೆಡೆ ಸಾಹಿತ್ಯ ಲೋಕ ಮಂಟೋ ಅವರ ಬರವಣಿಗೆಯನ್ನು ಕ್ರೂರವಾಗಿ ವಿಮರ್ಶಿಸುತ್ತ ಗೇಲಿ ಮಾಡಿದರೆ ಇನ್ನೊಂದೆಡೆ ವೈಯಕ್ತಿಕ ಬದುಕಿನ ನೋವುಗಳು ಅವರನ್ನು ಜರ್ಜರಿತಗೊಳಿಸಿದವು. ಬದುಕಿನ ಕೊನೆಯ ದಿನಗಳಲ್ಲಿ ಆರೋಗ್ಯ ತೀರ ಹದಗೆಟ್ಟು 1955 ರಲ್ಲಿ ಮಂಟೋ ನಿಧನರಾದಾಗ ಅವರಿಗೆ ಆಗ ಕೇವಲ 43 ವರ್ಷ ವಯಸ್ಸು. ಪಾಕಿಸ್ತಾನದ ನೆಲದಲ್ಲಿ ಅವರು ಬದುಕಿದ್ದದ್ದು ಕೇವಲ ಏಳು ವರ್ಷಗಳು ಮಾತ್ರ. ತಮ್ಮ ಬದುಕಿನ ಮೊದಲ ಮೂವತ್ತೈದು ವರ್ಷಗಳನ್ನು ಮಂಟೋ ಕಳೆದದ್ದು ಪಂಜಾಬ್ ಮತ್ತು ಮುಂಬಯಿಯಲ್ಲಿ. ವೃತ್ತಿಬದುಕನ್ನು ಕಟ್ಟಿಕೊಟ್ಟ ಮುಂಬಯಿ ಅವರ ಸಾಹಿತ್ಯ ಕೃಷಿಗೂ ನೀರೆರೆಯಿತು. ಈ ಕಾರಣಕ್ಕಾಗಿಯೇ  ಮಂಟೋ ಪಾಕಿಸ್ತಾನದಲ್ಲಿ ನೆಲೆನಿಂತರೂ ‘ನಾನು ಮೂಲತ: ಮುಂಬಯಿಯವನೇ ಆಗಿದ್ದೇನೆ’ ಎನ್ನುತ್ತಿದ್ದರು.

        1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದರ ಜೊತೆಗೆ ದೇಶವಿಭಜನೆ ಕೂಡ ನಡೆದು ಹೋಯಿತು. ಒಂದೇ ನೆಲದಲ್ಲಿ ವಾಸಿಸುತ್ತಿದ್ದ ಜನರು ಹಿಂದುಸ್ತಾನ ಮತ್ತು ಪಾಕಿಸ್ತಾನ ಎನ್ನುವ ಎರಡು ದೇಶಗಳ ನಡುವೆ ಹಂಚಿ ಹೋದರು. ಇತಿಹಾಸಕಾರರು ಈ ಘಟನೆಯನ್ನು ನೆಲದೊಂದಿಗೆ ಜನರನ್ನೂ ಹಂಚಿಕೊಂಡ ಇತಿಹಾಸ ಕಂಡು ಕೇಳರಿಯದ ವೈಚಿತ್ರಗಳಲ್ಲೊಂದು ಎಂದು ಉಲ್ಲೇಖಿಸಿರುವರು. ದೇಶ ವಿಭಜನೆ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತು. ವೃದ್ಧರು, ಹಸುಳೆಗಳು, ಮಹಿಳೆಯರೆನ್ನದೆ ಎಲ್ಲ ವಯೋಮಾನದವರು ಧರ್ಮಾಂಧರ ಕಾಕದೃಷ್ಟಿಗೆ ಬಿದ್ದು ಜೀವಕಳೆದುಕೊಂಡರು. ಸಾದತ್ ಹಸನ್ ಮಂಟೋ ಅವರ ಕಥೆಗಳು ಆ ದಿನಗಳ ವಾಸ್ತವ ಚಿತ್ರಣವನ್ನು ತುಂಬ ಮನೋಜ್ಞವಾಗಿ ಕಟ್ಟಿಕೊಡುತ್ತವೆ. ಇತಿಹಾಸದ ಘಟನೆಗೆ ಸಾಕ್ಷಿಯಾದ ಮಂಟೋ ದೇಶ ವಿಭಜನೆಯ ಕರಾಳ ಕಥೆಯನ್ನೇ ಬರವಣಿಗೆಯಾಗಿಸುತ್ತಾರೆ. ದೇಶ ವಿಭಜನೆಯ ಕರಾಳ ಘಟನೆಗಳನ್ನಾಧರಿಸಿ ಕಥೆಗಳನ್ನು ಬರೆಯುವಾಗ ಮಂಟೋ ಅವರಲ್ಲಿ ಒಂದು ಪ್ರಾಮಾಣಿಕತೆಯ ನೋಟವಿತ್ತು. ಈ ಕಾರಣದಿಂದ ಅವರ ಕಥೆಗಳು ಒಂದು ಧರ್ಮದ ಪರ ನಿಲ್ಲುವುದಿಲ್ಲ. ಅವರ ಕಥೆಗಳಲ್ಲಿ ಎರಡೂ ಧರ್ಮದವರು ಕ್ರೂರವಾಗಿ ಚಿತ್ರಿತವಾದಂತೆ ದಯೆ, ಅನುಕಂಪ, ಕಾರುಣ್ಯವುಳ್ಳ ವ್ಯಕ್ತಿಗಳಾಗಿಯೂ ಕಾಣಸಿಗುತ್ತಾರೆ. ‘ದೇಶವಿಭಜನೆಯ ಚಿತ್ರಣವನ್ನು ನೀಡುವಾಗ ನನಗೆ ಜನ ಏನು ಮಾಡುತ್ತಾರೆ ಎನ್ನುವುದು ಮುಖ್ಯವೇ ಹೊರತು ಯಾವ ಧರ್ಮಕ್ಕೆ, ಸಂಪ್ರದಾಯಕ್ಕೆ ಸೇರಿದವರೆನ್ನುವುದು ಮುಖ್ಯವಲ್ಲ’ ಎನ್ನುತ್ತಾರೆ ಮಂಟೋ. ಬರಹಗಾರನ ಈ ಮನೋಭಾವದಿಂದಲೇ ಮಂಟೋ ಅವರ ಕಥೆಗಳು ಭಾಷೆ, ಪ್ರದೇಶ ಮತ್ತು ಕಾಲವನ್ನು ಮೀರಿ ಬೆಳೆದು ನಮ್ಮೆಲ್ಲರ ಕಥೆಗಳಾಗುತ್ತವೆ. 

         ತೋಬಾ ತೇಕ್ ಸಿಂಗ್ ಎನ್ನುವ ಕಥೆ ಸಾದತ್ ಹಸನ್ ಮಂಟೋ ಅವರ ದೇಶ ವಿಭಜನೆಯ ಕಥೆಗಳಲ್ಲೆ ತುಂಬ ಮಹತ್ವದ ಕಥೆಯಿದು. ವಿಭಜನೆಯ ಎರಡು ವರ್ಷಗಳ ನಂತರ ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ತಮ್ಮ ತಮ್ಮ ದೇಶದ ಹುಚ್ಚಾಸ್ಪತ್ರೆಗಳಲ್ಲಿದ್ದ ಹುಚ್ಚರನ್ನು ವಿನಿಮಯ ಮಾಡಿಕೊಳ್ಳಲು ಯೋಜನೆ ರೂಪಿಸುತ್ತವೆ. ಅಂದರೆ ಭಾರತದ ಹುಚ್ಚಾಸ್ಪತ್ರೆಗಳಲ್ಲಿದ್ದ ಮುಸ್ಲಿಂ ಹುಚ್ಚರನ್ನು ಪಾಕಿಸ್ತಾನಕ್ಕೂ ಮತ್ತು ಪಾಕಿಸ್ತಾನದ ಹುಚ್ಚಾಸ್ಪತ್ರೆಗಳಲ್ಲಿದ್ದ ಹಿಂದು-ಸಿಖ್ ಹುಚ್ಚರನ್ನು ಭಾರತಕ್ಕೂ ವರ್ಗಾಯಿಸುವ ಯೋಜನೆ ಅದು. ಪಾಕಿಸ್ತಾನದ ಹುಚ್ಚಾಸ್ಪತ್ರೆಯಲ್ಲಿ ಬಿಷನ್ ಸಿಂಗ್ ಎನ್ನುವ ಹುಚ್ಚನಿದ್ದು ಅವನು ತೋಬಾ ತೇಕ್ ಸಿಂಗ್ ಎನ್ನುವ ಹಳ್ಳಿಯವನು. ಬಿಷನ್ ಸಿಂಗನಿಗೆ ಪಾಕಿಸ್ತಾನ, ಹಿಂದುಸ್ತಾನಗಳು ಮುಖ್ಯವಲ್ಲ. ಅವನಿಗೆ ತನ್ನ ಊರು ತೋಬಾ ತೇಕ್ ಸಿಂಗ್‍ಗೆ ಹೋಗಬೇಕಿದೆ. ಆಸ್ಪತ್ರೆಗೆ ಬಂದವರಿಗೆಲ್ಲ ಅವನು ಕೇಳುವುದು ಒಂದೇ ಪ್ರಶ್ನೆ ‘ತೋಬಾ ತೇಕ್ ಸಿಂಗ್ ಯಾವ ದೇಶದಲ್ಲಿದೆ’ ಎಂದು. ಹಿಂದು-ಸಿಖ್ ಹುಚ್ಚರನ್ನು ಭಾರತಕ್ಕೆ ಸ್ಥಳಾಂತರಿಸಲು ಗಡಿರೇಖೆಯ ಬಳಿ ಕರೆತಂದಾಗ ಅಲ್ಲಿದ್ದ ಅಧಿಕಾರಿಯನ್ನು ತೋಬಾ ತೇಕ್ ಸಿಂಗ್ ಎಲ್ಲಿದೆ ಎಂದು ಬಿಷನ್ ಸಿಂಗ್ ಕೇಳುತ್ತಾನೆ. ಪಾಕಿಸ್ತಾನದಲ್ಲಿದೆ ಎಂದು ಅಧಿಕಾರಿ ನುಡಿಯುತ್ತಿದ್ದಂತೆ ನನ್ನೂರಿಗೆ ಕಳುಹಿಸಿ ಎಂದು ಹಟ ಹಿಡಿಯುವ ಬಿಷನ್ ಸಿಂಗ್ ಅವರಿಂದ ತಪ್ಪಿಸಿಕೊಂಡು ಎರಡೂ ದೇಶಗಳ ನಡುವಣ ಗಡಿರೇಖೆಯ ಮೇಲೆ ಬಿದ್ದು ಪ್ರಾಣ ಬಿಡುತ್ತಾನೆ. ದೇಶದ ಕಲ್ಪನೆಯೇ  ಇಲ್ಲಿ ತೀರ ಅವಾಸ್ತವಿಕ ಎನಿಸಿ ಬಿಡುತ್ತದೆ.

        ದೇಶ ವಿಭಜನೆಯಾಗಿ ಒಂದು ನೆಲದಿಂದ ಇನ್ನೊಂದು ನೆಲಕ್ಕೆ ವಲಸೆ ಬಂದರೂ ಕ್ರೂರ ಬದುಕು ತನ್ನ ಕರಾಳ ಹಸ್ತವನ್ನು ಚಾಚಿ ನಸೀಮ್ ಅಖ್ತರಳನ್ನು ಅಸಹಾಯಕಳನ್ನಾಗಿಸುವ ಕಥೆ ‘ದೆಹಲಿ ಹುಡುಗಿ’. ದೆಹಲಿಯ ಕೆಂಪು ದೀಪದ ಓಣಿಯಲ್ಲಿ ನೃತ್ಯಗಾತಿಯಾಗಿ ಬದುಕುತ್ತಿರುವ ನಸೀಮ್ ಅಖ್ತರಳಿಗೂ ದೇಶ ವಿಭಜನೆಯ ಬಿಸಿ ತಟ್ಟಿದೆ. ಹಲವು ಅಮಾಯಕರ ಕೊಲೆಗಳನ್ನು ನೋಡಿದವಳಿಗೆ ಇನ್ನು ಈ ನೆಲದಲ್ಲಿ ತನ ಬದುಕು ಕಷ್ಟ ಸಾಧ್ಯವೆನಿಸಿ ತಾಯಿಗೂ ಹೇಳದೆ ಪಾಕಿಸ್ತಾನಕ್ಕೆ ವಲಸೆ ಬಂದು ಲಾಹೋರಿನಲ್ಲಿ ನೆಲೆಸುತ್ತಾಳೆ. ಹೀಗೆ ವಲಸೆ ಬಂದವಳಿಗೆ ಹಿಂದಿನ ಬದುಕಿಗೆ ಮರಳುವ ಆಸೆಯಿಲ್ಲ. ಹೊಸ ನೆಲದಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳಬೇಕೆನ್ನುವ ಹಂಬಲ ಅವಳದು. ನೆಲ ಬೇರೆಯಾದರೇನಂತೆ ಮನುಷ್ಯ ಸ್ವಭಾವ ಒಂದೇ. ಲಾಹೋರಿನಲ್ಲಿ ಜನ್ನತಿ ಎನ್ನುವ ಮುದುಕಿಯ ಮೋಸಕ್ಕೆ ಬಲಿಯಾಗುವ ನಸೀಮ್ ಅಖ್ತರ್ ವೈಶ್ಯಾಗೃಹವನ್ನು ಸೇರುತ್ತಾಳೆ. ಹೊಸ ಬದುಕನ್ನು ಅರಸಿ ಬಂದವಳಿಗೆ ಕ್ರೂರ ವಿಧಿ ಮತ್ತದೇ ನರಕಕ್ಕೆ ದೂಡುತ್ತದೆ.

        ‘ವಿಷದ ಬೆಳೆ’ಯಲ್ಲಿ ಹಲವು ವರ್ಷಗಳಿಂದ ಸೌಹಾರ್ದತೆಯಿಂದ ಬದುಕುತ್ತಿದ್ದ ಎರಡು ಕುಟುಂಬಗಳು ಪರಸ್ಪರ ದ್ವೇಷದಿಂದ ನಾಶವಾಗುವ ಕಥೆಯಿದೆ. ಕಾಸಿಮನ ತೊಡೆಗೆ ಗುಂಡಿನ ಗಾಯವಾಗಿದೆ. ಹೆಂಡತಿಯ ಶವ ಮನೆಯ ಅಂಗಳದಲ್ಲಿದ್ದರೆ ಕೋಣೆಯಲ್ಲಿ ಮುದ್ದಿನ ಮಗಳು ಷರೀಫನ್ ದುರುಳರ ದ್ವೇಷಕ್ಕೆ ಬಲಿಯಾಗಿ ಸತ್ತು ನಗ್ನವಾಗಿ ಮಲಗಿದ್ದಳು. ಹೆಂಡತಿ ಮತ್ತು ಮಗಳ ಸಾವು ಕಾಸಿಮನಲ್ಲಿ ದ್ವೇಷದ ಅಟ್ಟಹಾಸಕ್ಕೆ ಕಾರಣವಾಗಿದೆ. ಪ್ರತಿಕಾರಕ್ಕಾಗಿ ಅವನು ತಹತಹಿಸುತ್ತಿದ್ದಾನೆ. ಕೊಡಲಿ ಹಿಡು ಹೊರಗೆ ಹೋದವನ ಆಕ್ರೋಶಕ್ಕೆ ನಾಲ್ಕಾರು ತಲೆಗಳು ಉರುಳುತ್ತವೆ. ಮುಚ್ಚಿದ ಮನೆಯ ಬಾಗಿಲನ್ನು ಮುರಿದು ಒಳಗೆ ಹೋದವನ ದೃಷ್ಟಿಗೆ ಹದಿನೈದರ ಹರೆಯದ ಬಾಲೆ ಕಾಣಿಸುತ್ತಾಳೆ. ಹಿಂಸ್ರಪಶುವಿನಂತೆ ಅವಳ ಮೇಲೆ ಹಾರಿ ನೆಲಕ್ಕೆ ಕೆಡವಿ ಬಟ್ಟೆಯನ್ನು ಹರಿಯತೊಡಗುತ್ತಾನೆ. ಮುಗ್ಧ ಹುಡುಗಿ ಪ್ರಜ್ಞಾಹೀನಳಾಗುತ್ತಾಳೆ. ಒಂದು ಕ್ಷಣ ತನ್ನ ಮುದ್ದಿನ ಮಗಳು ಶವವಾಗಿ ತನ್ನ ಮುಂದೆ ಮಲಗಿದಂತೆ ಭಾಸವಾಗಿ ‘ಷರೀಫನ್’ ಎಂದು ನಡಗುವ ಸ್ವರದಿಂದ ಕಾಸಿಮ್ ಚೀರುತ್ತಾನೆ.

      ಮಂಟೋ ಅವರ ಕೆಲವು ಕಥೆಗಳಂತೂ ಕೇವಲ ಒಂದೆರಡು ವಾಕ್ಯಗಳಲ್ಲೇ ಕೊನೆಗೊಳ್ಳುತ್ತವೆ. ಹೀಗಾಗಿ ಈ ಅತಿ ಸಣ್ಣ ಕಥೆಗಳಲ್ಲಿ ಪಾತ್ರಗಳ ಹೆಸರು, ಧರ್ಮ, ಜಾತಿ, ಸಂಪ್ರದಾಯಗಳೆಲ್ಲ ಅಪ್ರಸ್ತುತವಾಗಿ ಸಂದರ್ಭ, ಸನ್ನಿವೇಶಗಳು ಮಾತ್ರ ಪ್ರಸ್ತುತವಾಗುತ್ತವೆ.

ಮಂಟೋ ಅವರ ಕೆಲವು ಸಣ್ಣ ಕಥೆಗಳು ಹೀಗಿವೆ,

1. ಮಿಷ್ಟೀಕು:

ಹೊಟ್ಟೆಗೆ ಇರಿದ ಚೂರಿ ನೇರವಾಗಿ ಕೆಳಗಡೆ ಎಳೆದಾಗ ಪೈಜಾಮದ ಲಾಡಿಯನ್ನು ಕತ್ತರಿಸಿ ಪೈಜಾಮ ಮತ್ತು ಒಳಚಡ್ಡಿ ಕಳಚಿ ಕೆಳಗೆ ಬಿದ್ದವು.
ಇರಿಯುತ್ತಿದ್ದವನು ಅದನ್ನು ಕಂಡು ಚೀರಿದ ‘ಛೇ ಎಂಥ ಮಿಷ್ಟೀಕಾಯ್ತು’.

2. ವಿಶ್ರಾಂತಿ:

‘ಅವನಿನ್ನೂ ಸತ್ತಿಲ್ಲ. ಇನ್ನೂ ಜೀವ ಇದ್ದ ಹಾಗಿದೆ.
‘ಸ್ವಲ್ಪ ಸುಮ್ನಿರಯ್ಯ. ನನಗೆ ಸುಸ್ತಾಗಿ ಬಿಟ್ತು. ನನಗಿನ್ನು ಸಾಧ್ಯವಿಲ್ಲ. ಸ್ವಲ್ಪ ವಿಶ್ರಾಂತಿ ಬೇಕು’.

3. ಅನ್ಯಾಯ:

‘ನೋಡಯ್ಯ ಇದು ನ್ಯಾಯವಲ್ಲ. ನೀನು ನನಗೆ ಕಲಬೆರಕೆ ಮಾಡಿದ ಪೆಟ್ರೋಲನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದೆ. ಈ ಕೆಟ್ಟ ಪೆಟ್ರೋಲಿನಿಂದ ಒಂದು ಅಂಗಡಿಯನ್ನೂ ಸುಡಲಾಗಲಿಲ್ಲ’.

          ಒಟ್ಟಾರೆ ಸಾದತ್ ಹಸನ್ ಮಂಟೋ ದೇಶ ವಿಭಜನೆಯ ಸಂದರ್ಭದ  ಘೋರ ಕೃತ್ಯಗಳನ್ನು ತಮ್ಮ ಕಥೆಗಳ ಮೂಲಕ ಓದುಗರಿಗೆ ಮುಟ್ಟಿಸುತ್ತಾರೆ. ಯಾವುದೇ ಧರ್ಮ ಅಥವಾ ಸಂಪ್ರದಾಯವನ್ನು ಗೇಲಿ ಮಾಡುವುದು, ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಮಂಟೋ ಅವರ ಕಥೆಗಳ ಉದ್ದೇಶವಲ್ಲ. ಅವರು ಇಡೀ ದೇಶವಿಭಜನೆಯ ಸಂದರ್ಭದಲ್ಲಿನ ಘಟನೆಗಳನ್ನು ನೋಡುವುದು ಮಾನವೀಯ ಪ್ರಜ್ಞೆಯ ಹಿನ್ನೆಲೆಯಲ್ಲಿ. ಅದಕ್ಕೆಂದೇ ‘ಧರ್ಮ, ಸಂಪ್ರದಾಯ ನನ್ನ ಕಥೆಗಳಲ್ಲಿ ಗೌಣವಾಗಿ ಕಾಣುತ್ತವೆ. ಆ ಹೀನ ಕೃತ್ಯಗಳಲ್ಲಿ ಭಾಗಿಗಳಾಗಿದ್ದ ಜನರಷ್ಟೇ ನನಗೆ ಮುಖ್ಯ’ ಎನ್ನುತ್ತಾರೆ ಮಂಟೋ. 
   
            ‘ಕೋಮುವಾದಿಗಳಿಗೆ, ಮೂಲಭೂತವಾದಿಗಳಿಗೆ, ಉಗ್ರಗಾಮಿಗಳಿಗೆ ಹಿಂಸೆಯೇ  ಗುರಿ. ಅದೇ ಅವರ ಮಾರ್ಗ ಕೂಡ. ಮನುಷ್ಯ ತನ್ನ ವಿವೇಕವನ್ನು ಕಳೆದುಕೊಂಡಾಗ ನರಕ ಇಲ್ಲೇ ಸೃಷ್ಟಿಯಾಗುತ್ತದೆ. ಎಷ್ಟೋ ವರ್ಷಗಳ ಹಿಂದೆ ಮಂಟೋ ಬರೆದ ಕಥೆಗಳು ಸಮಕಾಲೀನ ಸಂದರ್ಭಕ್ಕೆ ಹಿಡಿದ ಕನ್ನಡಿಗಳೂ ಆಗಿವೆ’ ಸಾದತ್ ಹಸನ್ ಮಂಟೋ ಅವರ ಕಥೆಗಳನ್ನು ಕುರಿತು ವಿಮರ್ಶಕ ಟಿ.ಪಿ.ಅಶೋಕ ಅವರು ಹೇಳುವ ಮಾತಿದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ