Wednesday, June 8, 2022

ಸಾಧನೆ: ಬೌದ್ಧಿಕವೋ? ಭೌತಿಕವೋ?



(೨೮.೦೪.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟ)

 ಇತ್ತೀಚೆಗೆ ಮದುವೆ ಸಮಾರಂಭವೊಂದರಲ್ಲಿ ಭೇಟಿಯಾದ ಪರಿಚಿತರೋರ್ವರು ತಮ್ಮ ಬದುಕಿನ ಸಾಧನೆಗಳನ್ನು ಕುರಿತು ಹೇಳಿಕೊಂಡರು. ನಿವೃತ್ತಿಯ ಅಂಚಿನಲ್ಲಿರುವ ಅವರು ಮಾತಿನ ನಡುವೆ ನನಗೆ ಹೇಳಿದ್ದಿಷ್ಟು-‘ಎಂಬತ್ತು x ನಲವತ್ತು ಅಳತೆಯ ದೊಡ್ಡ ಸೈಟಿನಲ್ಲಿ ಮೂರಂತಸ್ತಿನ ಮನೆ ಕಟ್ಟಿಸಿದ್ದೀನಿ, ಲಂಚಕೊಟ್ಟು ಮಗನಿಗೆ ಸರ್ಕಾರಿ ನೌಕರಿ ಕೊಡಿಸಿದ್ದೀನಿ, ಬೀಗರ ನಿರೀಕ್ಷೆಗಿಂತ ಹೆಚ್ಚು ವರದಕ್ಷಿಣೆ ಕೊಟ್ಟು ಮಗಳ ಮದುವೆ ಮಾಡಿದ್ದೀನಿ, ಹೆಂಡತಿ ಹೆಸರಲ್ಲಿ ಮೂರು ಸೈಟುಗಳಿವೆ, ಊರಿನಲ್ಲಿ ಹತ್ತೆಕರೆ ಜಮೀನು ಖರೀದಿಸಿ ತೋಟ ಮಾಡಿದ್ದೀನಿ. ಮನೆ ಎದುರು ಎರಡು ದುಬಾರಿ ಬೆಲೆಯ ಕಾರುಗಳಿವೆ ಅಂತೂ ಬದುಕು ಪರಿಪೂರ್ಣವಾಯಿತು ನೋಡಿ’ ಎಂದು ಮುಖದಲ್ಲಿ ಧನ್ಯತೆಯ ಭಾವವನ್ನು ತುಂಬಿಕೊಂಡು ನುಡಿದರು. ಅವರ ಸಾಧನೆ ಕೇಳಿ ದಂಗಾಗಿ ಹೋದೆ. ಮಾತಿನುದ್ದಕ್ಕೂ ಭೌತಿಕ ಸಂಗತಿಗಳೇ ಮುನ್ನೆಲೆಗೆ ಬಂದು ನಾನು ನಿರೀಕ್ಷಿಸುತ್ತಿದ್ದ ಅವರ ವೃತ್ತಿ ಸಂಬಂಧಿತ ಬೌದ್ಧಿಕ ಸಾಧನೆಗಳ ಕುರಿತು ಯಾವ ವಿಚಾರವಾಗಲಿ, ಹೇಳಿಕೆಯಾಗಲಿ ಮಾತಿನಲ್ಲಿ ಗೋಚರಿಸಲಿಲ್ಲ. ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಶ್ರೀಯುತರು ತಮ್ಮ ಅಕಾಡೆಮಿಕ್ ಸಾಧನೆಗಳ ಬಗ್ಗೆ ಹೇಳಿಕೊಳ್ಳಬಹುದೆಂದು ಒಂದಿಷ್ಟು ಹೊತ್ತು ಕಾದುಕುಳಿತ ನನಗೆ ಅವರಿಂದ ಅಂಥ ಯಾವ ಪ್ರತಿಕ್ರಿಯೆ ಬರದೆಯಿದ್ದಾಗ ನಿರಾಸೆಯಾಯಿತು. ಬೀಳ್ಕೊಡುವಾಗ ಸಧ್ಯದಲ್ಲೆ ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು ತಮ್ಮನ್ನು ಅಭಿನಂದಿಸಿ ಅಭಿನಂದನಾ ಗ್ರಂಥವನ್ನು ಸಮರ್ಪಿಸುತ್ತಿದ್ದು ಆ ಕಾರ್ಯಕ್ರಮಕ್ಕೆ ಬರುವಂತೆ ನನ್ನನ್ನು ಆಹ್ವಾನಿಸಿದರು. 

ಭೌತಿಕವೇ ಪ್ರಧಾನವಾಗುತ್ತಿರುವ ಬದುಕಿನಲ್ಲಿ ಸಾಧನೆ ಎನ್ನುವುದು ಕೂಡ ಮನೆ, ಸೈಟು, ಬ್ಯಾಂಕ್ ಬ್ಯಾಲೆನ್ಸ್, ಚಿನ್ನಾಭರಣಗಳ ರೂಪದಲ್ಲಿ ಢಾಳಾಗಿ ಕಣ್ಣಿಗೆ ಕಾಣಿಸುವಂತಿರಬೇಕು ಎಂದು ಮನುಷ್ಯರು ಅಪೇಕ್ಷಿಸುತ್ತಿದ್ದಾರೆ. ಅದಕ್ಕೆಂದೆ ಇಲ್ಲಿ ಆಕಾಶದೆತ್ತರಕ್ಕೆ ಮನೆಗಳು ನಿರ್ಮಾಣಗೊಳ್ಳುತ್ತವೆ, ಸೈಟುಗಳ ಬೆಲೆ ಗಗನಕ್ಕೆರುತ್ತದೆ, ಚಿನ್ನಾಭರಣಗಳ ಖರೀದಿ ಬಡವರಿಗೆ ಕನಸಿನ ಮಾತಾಗುತ್ತದೆ. ‘ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು, ಕೊನೆಯನೆಂದೂ ಮುಟ್ಟದಿರು’ ಸಾಲುಗಳ ಮೂಲಕ ಕುವೆಂಪು ಲೌಕಿಕ ಬದುಕಿನ ಆದ್ಯತೆಗಳಾಚೆ ಬದುಕು ಮತ್ತು ಸಾಧನೆ ವಿಸ್ತರಿಸಲಿ ಎಂದು ಹೇಳಿದರು. ವಿಪರ್ಯಾಸವೆಂದರೆ ಹೀಗೆ ಉಪದೇಶಿಸಿದ ಕುವೆಂಪು ಅವರನ್ನು ಶಾಲೆ, ಕಾಲೇಜುಗಳಲ್ಲಿ ಬೋಧಿಸುವ ಅದೇ ಶಿಕ್ಷಕಗಣ ಬೌದ್ಧಿಕ ಸಾಧನೆಗಿಂತ ಭೌತಿಕ ಸಾಧನೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವರು.

ದಿನದಿಂದ ದಿನಕ್ಕೆ ಮನುಷ್ಯ ಮಟೆರಿಯಲಿಸ್ಟಿಕ್ ಆಗುತ್ತಿರುವನು. ‘ನಾನು ವಸ್ತುಗಳನ್ನು ಪ್ರೀತಿಸುತ್ತೇನೆ, ಮನುಷ್ಯರನ್ನು ಉಪಯೋಗಿಸುತ್ತೇನೆ’ ಎನ್ನುವುದು ಬದುಕಿನ ಧ್ಯೇಯ ವಾಕ್ಯವಾಗಿದೆ. ಸಮಾಜ ಕೂಡ ಸಾಧಕರನ್ನು ಗುರುತಿಸಿ ಗೌರವಿಸುವಲ್ಲಿ ಎಡವುತ್ತಿದೆ. ನಿಜವಾದ ಸಾಧಕರಿಗಿಂತ ಇಲ್ಲಿ ಭೌತಿಕ ಸಾಧಕರೇ ಗೌರವಕ್ಕೆ, ಅಭಿಮಾನಕ್ಕೆ ಪಾತ್ರರಾಗುತ್ತಿರುವರು. ಜಾತಿ, ಧರ್ಮ, ಹಣ ಮತ್ತು ತೋಳ್ಬಲದೆದುರು ನಿಜವಾದ ಬೌದ್ಧಿಕ ಸಾಧಕರು ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವರು. ಒಂದರ್ಥದಲ್ಲಿ ಮನುಷ್ಯ ಮನುಷ್ಯನನ್ನು ಉಪಯೋಗಿಸುತ್ತಿರುವನು ಮತ್ತು ಶೋಷಣೆಗೆ ಒಳಪಡಿಸುತ್ತಿರುವನು.

ಬೌದ್ಧಿಕವೆಂದು ಪರಿಗಣಿತವಾಗಿರುವ ಕ್ಷೇತ್ರಗಳಲ್ಲೂ ಭೌತಿಕ ಸಾಧನೆಯ ವ್ಯಾಮೋಹ ಕಾಡುತ್ತಿದೆ. ತೊಂಬತ್ತೈದು ಪುಸ್ತಕಗಳನ್ನು ಪ್ರಕಟಿಸಿರುವ ಸಾಹಿತಿ ಮಿತ್ರರೋರ್ವರಿಗೆ ತನ್ನ ಈ ಸಾಹಿತ್ಯದ ಸಾಧನೆ ನೂರನ್ನು  ಮುಟ್ಟಲಿ ಎನ್ನುವ ಆಸೆ. ಈ ಸಂಖ್ಯಾತ್ಮಕ ಸಾಧನೆ ಎದುರು ಗುಣಾತ್ಮಕತೆಯು ಮೂಲೆಗುಂಪಾಗಿದೆ. ಅಭಿನಂದನ ಗ್ರಂಥಗಳ ಸಂಪಾದಕತ್ವವನ್ನು ಗುತ್ತಿಗೆ ಹಿಡಿದಿರುವವರು ಸಮಾಜದಲ್ಲಿ ಶ್ರೇಷ್ಠ ಸಾಹಿತಿ ಎನ್ನುವ ಗೌರವಕ್ಕೆ ಪಾತ್ರರಾಗುತ್ತಾರೆ. ಅರವತ್ತು, ಎಂಬತ್ತು ವರ್ಷಗಳ ದೈಹಿಕ ವಯೋಮಾನವನ್ನೆ ಮಾನದಂಡವಾಗಿಟ್ಟುಕೊಂಡು ಅಭಿನಂದನೆಗೆ ಒಳಗಾಗಲು ಹಪಹಪಿಸುವ ಸಾಧಕರ ಸಂಖ್ಯೆಯೇನೂ ಕಡಿಮೆ ಇಲ್ಲ. ಅನೇಕ ಪ್ರಕಾಶನ ಸಂಸ್ಥೆಗಳು ಪ್ರತಿವರ್ಷ ಸಾಮೂಹಿಕ ವಿವಾಹದ ರೀತಿ ನೂರು, ಎರಡು ನೂರು ಪುಸ್ತಕಗಳನ್ನು ಪ್ರಕಟಿಸುತ್ತಿವೆ. ಹೀಗೆ ಪ್ರಕಟವಾಗುತ್ತಿರುವ ಪುಸ್ತಕಗಳು ಸಾರ್ವಜನಿಕ ಗ್ರಂಥಾಲಯಗಳ ಅಲ್ಮೆರಾಗಳಿಗೆ ಶೋಭೆ ತರುತ್ತಿವೆಯೇ ವಿನ: ಓದುಗನ ಏಕಾಂತಕ್ಕೆ ಲಗ್ಗೆ ಇಡುತ್ತಿಲ್ಲ. ಹಾಡುಗಾರ ಕಣ್ಮುಚ್ಚಿ ತನ್ನನ್ನು ತಾನು ಮೈಮರೆತು ಹಾಡಿದರೆ ಅದು ತಾದ್ಯಾತ್ಮ ಅನಿಸಿಕೊಳ್ಳುತ್ತದೆ. ಪ್ರೇಕ್ಷಕರನ್ನು ಆಕರ್ಷಿಸಲೆಂದು ಕಣ್ಬಿಟ್ಟು ಆಂಗೀಕ ಅಭಿನಯಕ್ಕಿಳಿದರೆ ಆಗ ಸಂಗೀತ ಎನ್ನುವುದು ಭೌತಿಕ ಪ್ರದರ್ಶನವಾಗಿ ಪರಿಣಮಿಸುತ್ತದೆ.

ವಿವಿಧ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರ ಕೂಡ ಇಂದು ಈ ಭೌತಿಕ ಸಾಧನೆಯ ವ್ಯಾಮೋಹದಿಂದ ಕಲುಷಿತಗೊಂಡಿದೆ. ವಿದ್ಯಾರ್ಥಿಗಳಿಗೆ ಪಾಠ ಮಾಡುವ ಅದೆಷ್ಟೋ ಶಿಕ್ಷಕರ ಮನೆಗಳಲ್ಲಿ ಕಣ್ಣಿಗೆ ದುರ್ಬೀನು ಹಾಕಿಕೊಂಡು ಹುಡುಕಿದರೂ ಒಂದು ಪುಸ್ತಕ ಗೋಚರಿಸುವುದಿಲ್ಲ. ಶಿಕ್ಷಕರು ಬೌದ್ಧಿಕ ಸಾಧನೆಯನ್ನು ನಿರ್ಲಕ್ಷಿಸುತ್ತಿರುವ ಕಾರಣದಿಂದ ‘ಕ್ಲಾಸ್ ಲೆಕ್ಚರ್ ಈಜ್ ಎ ಪ್ರೊಸೆಸ್  ಆಫ್ ಟೀಚರ್ಸ್ ನೋಟ್ಸ್ ಬಿಕಮಿಂಗ್ ಸ್ಟುಡೆಂಟ್ಸ್ ನೋಟ್ಸ್ ವಿದೌಟ್ ಪಾಸಿಂಗ್ ಥ್ರು ದಿ ಮೈಂಡ್ ಆಫ್ ಐದರ್’ ಎನ್ನುವ ಹಾಸ್ಯೋಕ್ತಿ ಶಿಕ್ಷಣವಲಯದಲ್ಲಿ ಚಲಾವಣೆಯಲ್ಲಿದೆ. ಓದು, ಬೋಧನೆ, ಸಂಶೋಧನೆಯಂತಹ ಬೌದ್ಧಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಾದ ಶಿಕ್ಷಕರು ಹಣಕಾಸಿನ ಲೇವಾದೇವಿಯಂತಹ ವಹಿವಾಟುಗಳಲ್ಲಿ ನಿರತರಾಗಿರುವರು. ಪ್ರಾಧ್ಯಾಪಕರ ಸಂಶೋಧನಾ ಬರವಣಿಗೆ ಕೂಡ ಹುದ್ದೆ ಮತ್ತು ವೇತನ ಬಡ್ತಿಯಂತಹ ಭೌತಿಕ ಪ್ರಗತಿಗೆ ಸಿಮೀತವಾಗುತ್ತಿರುವುದು ದುರದೃಷ್ಟಕರ.  

ಎಲ್ಲವನ್ನೂ ಬಹಿರಂಗದಲ್ಲೇ ಹುಡುಕುತ್ತಿರುವ ಮನುಷ್ಯನಿಗೆ ಇಂದು ಭೌತಿಕ ಪ್ರಗತಿಯೇ ಪ್ರಧಾನವಾಗಿ ಕಾಣಿಸುತ್ತಿದೆ. ಬದುಕಿನ ಕ್ಷಣಿಕತೆಯ ಅರಿವು ಇವತ್ತಿನ ಮನುಷ್ಯನಿಗಿಲ್ಲ. ಸಾವಿನ ಪ್ರಜ್ಞೆ ಇಲ್ಲದೆ ಚಿರಂಜೀವಿತ್ವದ ಭಾವನೆಯನ್ನು ಅಂತರ್ಗತಗೊಳಿಸಿಕೊಂಡು ಬದುಕು ಶಾಶ್ವತ ಎನ್ನುವಂತೆ ವರ್ತಿಸುತ್ತಿರುವನು. ಆತ್ಮಾವಲೋಕನಕ್ಕಾಗಲಿ, ಆತ್ಮವಿಮರ್ಶೆಗಾಗಲಿ ಇಳಿಯುವಷ್ಟು ವ್ಯವಧಾನ ಇಂದಿನವರಿಗಿಲ್ಲ. ಪರಿಣಾಮವಾಗಿ ಬದುಕಿನ ಪ್ರಗತಿ-ಸಾಧನೆ ಎನ್ನುವುದು ನಗ, ನಾಣ್ಯ, ಮನೆ, ತೋಟಗಳಂತಹ ಭೌತಿಕ ವಸ್ತುಗಳ ರೂಪದಲ್ಲೇ ಗೋಚರಿಸುತ್ತಿದೆ. 

ಯಶವಂತ ಚಿತ್ತಾಲರು ಅಸ್ತಿತ್ವವಾದೀ ದಾರ್ಶನಿಕ ಮಾರ್ಟಿನ್ ಹೈಡೆಗರ್ ಸಿದ್ಧಾಂತವನ್ನು ವಿವರಿಸುತ್ತ ‘ಮನುಷ್ಯ ತನ್ನ ಅಸ್ತಿತ್ವದ ಅಸಂಖ್ಯ ಸಾಧ್ಯತೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಾಗ ತನ್ನ ಸಾವು ಕೂಡ ಈ ಎಲ್ಲ ಸಾಧ್ಯತೆಗಳಲ್ಲಿ ಒಂದು ಮಾತ್ರವಲ್ಲ, ಎಲ್ಲ ಸಾಧ್ಯತೆಗಳಲ್ಲಿ ಇದೊಂದೆ ನಿಶ್ಚಿತವಾದದ್ದು ಎಂಬುದನ್ನು ಮನಗಾಣುತ್ತಾನೆ. ತನ್ನ ಸಾವನ್ನು ತಾನೇ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಯಾವಾಗ ಬರುತ್ತದೊ ಆಗ ಮಾತ್ರ ಎಲ್ಲವನ್ನೂ ನಿಚ್ಚಳವಾಗಿ, ಸ್ವಚ್ಛವಾಗಿ ನೋಡುವ ದೃಷ್ಟಿಯುಳ್ಳವನಾಗುತ್ತಾನೆ. ಇಂಥ ದೃಷ್ಟಿಯ ಮೂಲಕವೇ ಲಕ್ಷ್ಯಕ್ಕೆ ಬರುವ ತನ್ನ ಬದುಕಿನ ಅಪರಿಪೂರ್ಣತೆಯನ್ನು, ಕುಂದುಕೊರತೆಗಳನ್ನು ಕುರಿತು ತೀವ್ರ ಅಸಮಾಧಾನಕ್ಕೆ, ಪಾಪಪ್ರಜ್ಞೆಗೆ ಒಳಗಾಗುತ್ತಾನೆ. ಮನುಷ್ಯನ ಪ್ರಜ್ಞೆಯ ಬೆಳವಣಿಗೆಯಲ್ಲಿ ಸಾವಿಗೆ ಅತ್ಯಂತ ಮಹತ್ವದ ಸ್ಥಾನವಿದ್ದುದನ್ನು ಹೈಡೆಗರ್‍ನ ದರ್ಶನ ಗುರುತಿಸುತ್ತದೆ’ ಎಂದಿರುವರು. ಹೈಡೆಗರ್ ಪ್ರಕಾರ ಬದುಕಿನ ಅಪರಿಪೂರ್ಣತೆ ಎನ್ನುವುದು ಭೌತಿಕವಲ್ಲ. ಆತ ಹೇಳುವುದು ಸಾವಿನ ಪ್ರಜ್ಞೆಯಿರುವ ಮನುಷ್ಯ ತನ್ನ ಬದುಕಿನ ಬೌದ್ಧಿಕ ಅಪರಿಪೂರ್ಣತೆ ಕುರಿತು ಚಿಂತಿಸುತ್ತಾನೆ. ದುರಾದೃಷ್ಟವೆಂದರೆ ಬಹಿರಂಗದ ಬದುಕಿಗೆ ಆದ್ಯತೆ ನೀಡುತ್ತಿರುವ ಮನುಷ್ಯ ತನ್ನ ಅಂತರಂಗದ ಪಿಸುಧ್ವನಿಯನ್ನು ಕೇಳಿಸಿಕೊಳ್ಳದಷ್ಟು ಅಸಂವೇದಿಯಾಗುತ್ತಿರುವನು.

-ರಾಜಕುಮಾರ ಕುಲಕರ್ಣಿ