Monday, April 4, 2016

ಸಿನಿಮಾಗಳಲ್ಲಿ ಮಹಿಳೆ




           







       



             ಕನ್ನಡ ಸಿನಿಮಾಗಳಲ್ಲಿ ನಾಯಕಿ ಪ್ರಧಾನ ಚಿತ್ರಗಳು ತೆರೆಕಂಡಿದ್ದು ತೀರ ಕಡಿಮೆ. ಈ ಸಿನಿಮಾ ಎನ್ನುವ ಮಾಧ್ಯಮ ಯಾವತ್ತೂ ಪುರುಷ ಪ್ರಧಾನ ನೆಲೆಯಲ್ಲೇ ವ್ಯವಹರಿಸುತ್ತ ಬಂದಿರುವುದಕ್ಕೆ ನಾಯಕ ಪ್ರಧಾನ ಸಿನಿಮಾಗಳ ಸಂಖ್ಯೆಯೇ  ಸಾಕ್ಷಿ. ಕನ್ನಡ ಭಾಷೆಯಲ್ಲಿ ಸಿನಿಮಾಗಳ ನಿರ್ಮಾಣ ಪ್ರಾರಂಭವಾದ ಘಳಿಗೆಯಿಂದ ತೀರ ಇತ್ತೀಚಿನವರೆಗೆ ಸಿನಿಮಾ ಮಾಧ್ಯಮದಲ್ಲಿ ಮಹಿಳೆಗೆ ಪ್ರಾಧಾನ್ಯತೆ ಕೊಟ್ಟಿದ್ದು ಅಷ್ಟಕಷ್ಟೆ. ಸಿನಿಮಾ ಸಮಾಜದ ಅತ್ಯಂತ ಸಶಕ್ತ ಮಾಧ್ಯಮ ಎನ್ನುವ ಜನಪ್ರಿಯತೆಗೆ ಒಳಗಾದ ಮೇಲೂ ಇಲ್ಲಿ ಮಹಿಳಾ ಸಮಸ್ಯೆಗಳನ್ನು ಮತ್ತವಳ ಸಾಧನೆಗಳನ್ನು ಅಭಿವ್ಯಕ್ತಗೊಳಿಸುವ ಕೆಲಸ ನಿರೀಕ್ಷಿಸಿದಷ್ಟು ಆಗಿಲ್ಲ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಎಲ್ಲೋ ಒಂದು ಕಡೆ ಸಿನಿಮಾ ಒಂದು ಭ್ರಮೆಗಳಿಂದ ಕೂಡಿದ ಮತ್ತು ವಾಸ್ತವಕ್ಕೆ ದೂರವಾದ ಮಾಧ್ಯಮ ಎನ್ನುವ ಅಪವಾದವಿದ್ದಾಗೂ ಪುರುಷ ಸಮಾಜದ ಹಲವು ಸಮಸ್ಯೆಗಳು ಮತ್ತು ಸಾಧನೆಗಳು ಬೆಳ್ಳಿ ಪರದೆಯ ಮೇಲೆ ಸಿನಿಮಾಗಳಾಗಿ ಪ್ರದರ್ಶನಗೊಂಡದ್ದು ಸುಳ್ಳಲ್ಲ. ಜೊತೆಗೆ ನಾಯಕ ಪ್ರಧಾನ ಸಿನಿಮಾಗಳೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ನಿರ್ಮಾಣಗೊಂಡಿವೆ ಮತ್ತು ಈಗಲೂ ನಿರ್ಮಾಣಗೊಳ್ಳುತ್ತಿವೆ. ಪರಿಸ್ಥಿತಿ ಹೀಗಿರುವಾಗ ನಮ್ಮ ಚಿತ್ರೋದ್ಯಮದ ಜನ ಮಹಿಳೆಯ  ಬದುಕನ್ನು ಆಧಾರವಾಗಿಟ್ಟುಕೊಂಡು ಅದೇಕೆ ಸಿನಿಮಾಗಳನ್ನು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ನಿರ್ಮಿಸುತ್ತಿಲ್ಲ ಎನ್ನುವ ಪ್ರಶ್ನೆ ಎದುರಾಗುತ್ತದೆ. ಹೀಗೆ ನಾನು ಪ್ರಶ್ನಿಸುತ್ತಿರುವ ಹೊತ್ತಿನಲ್ಲೇ ತೆಲಗು ಭಾಷೆಯ ಅರುಂಧತಿಯಂಥ ಭಕ್ತಿ ಕಥಾ ಆಧಾರಿತ ಮಹಿಳಾ ಪ್ರಧಾನ ಸಿನಿಮಾಗಳು ಕನ್ನಡ ಸಿನಿಮಾ ಮಾಧ್ಯಮವನ್ನು ಪ್ರಭಾವಿಸುತ್ತಿವೆ. ಇಂಥ ಸಿನಿಮಾಗಳಿಂದ ಪ್ರೇರಿತರಾದ ನಮ್ಮ ಚಿತ್ರೋದ್ಯಮದ ಜನ ಭಿಮಾಂಬಿಕಾ, ದುರ್ಗಾಶಕ್ತಿ, ಚಿತ್ರಲೇಖಾದಂಥ ಮಹಿಳಾ ಪ್ರಧಾನ ಸಿನಿಮಾಗಳನ್ನು ನಿರ್ಮಿಸುತ್ತಿರುವರು.  ಆದರೆ  ಈ ರೀತಿಯ ಸಿನಿಮಾಗಳು ಹೆಣ್ಣನ್ನು ಭಕ್ತಿಯ ಪರಾಕಾಷ್ಟೆಯಲ್ಲಿ  ತೋರಿಸುವುದಕ್ಕಷ್ಟೆ ಸೀಮಿತಗೊಳ್ಳುತ್ತಿವೆ. ಹೆಣ್ಣು  ಮತ್ತವಳ ಬದುಕಿನ ಒಳನೋಟಗಳು ಸಶಕ್ತವಾಗಿ ಸಿನಿಮಾದ ಪರದೆಯ ಮೇಲೆ ಮೂಡಿ ಬರುತ್ತಿಲ್ಲ.

ನಾಯಕಿಯಾಗಿ ಮಹಿಳೆ 


            ಸಿನಿಮಾ ಮಾಧ್ಯಮಕ್ಕೆ ಮಹಿಳೆ ಪ್ರವೇಶ ಮಾಡಿದ್ದು ರಂಗಭೂಮಿಯಿಂದ. ರಂಗಭೂಮಿಯ ಮಹಿಳಾ ಕಲಾವಿದರು ಸಿನಿಮಾಗಳಲ್ಲಿಯೂ ಅಭಿನಯಿಸುವುದನ್ನು ಪ್ರಾರಂಭಿಸಿದ ನಂತರ ಒಂದಿಷ್ಟು ಬದಲಾವಣೆಯಾಗಿ ಅಭಿನಯದಲ್ಲಿ ಆಸಕ್ತಿ ಇರುವ ಮಹಿಳೆಯರು ಸಿನಿಮಾ ರಂಗವನ್ನು ಪ್ರವೇಶಿಸ ತೊಡಗಿದರು. ಆದರೆ ಪ್ರಾರಂಭದ ದಿನಗಳಲ್ಲಿ ಮಹಿಳಾ ನಟಿಯರ ನಟನೆ ಹಾಡು ಮತ್ತು ಕುಣಿತಕ್ಕಷ್ಟೇ ಸೀಮಿತವಾಗಿರುತ್ತಿತ್ತು. ಯಾವಾಗ ಸಿನಿಮಾದ ಕಥೆಗೆ ನಾಯಕಿಯ ಅಗತ್ಯ ಎದುರಾಯಿತೋ ಆಗ ಮಹಿಳಾ ಕಲಾವಿದರು ಒಂದಿಷ್ಟು ಮುಖ್ಯ ಭೂಮಿಕೆಗೆ ಬರಲಾರಂಭಿಸಿದರು. ಹಾಗೆಂದು ಹೇಳಿಕೊಳ್ಳುವಂಥ ಬದಲಾವಣೆಯೇನೂ ಆಗಲಿಲ್ಲ. ನಾಯಕ ನಟನ ಜೊತೆ ಹಾಡಿ ಕುಣಿಯುವ ಶೃಂಗಾರದ ದೃಶ್ಯಗಳಲ್ಲಿ ಅಭಿನಯಿಸುವ ಹಂತಕ್ಕೆ ಮಹಿಳಾ ನಟಿಮಣಿಯರು ಬಡ್ತಿ ಪಡೆದರು. ನಾಯಕಿಯ ಪಾತ್ರಕ್ಕಿಂತ  ಮಹಿಳಾ ಕಲಾವಿದೆಯರಿಗೆ  ಆರಂಭದ ದಿನಗಳಲ್ಲಿ ಪೋಷಕ ಪಾತ್ರಗಳಲ್ಲೇ ಹೆಚ್ಚು ಅಭಿನಯಕ್ಕೆ ಅವಕಾಶ ದೊರೆಯಿತು. ತಾಯಿ, ಅತ್ತಿಗೆ, ಸಹೋದರಿಯ ಪಾತ್ರಗಳಲ್ಲಿ ಅಭಿನಯಿಸುವುದರ ಮೂಲಕ ಸಿನಿಮಾಗಳಲ್ಲಿ ಸ್ತ್ರೀ ಕಲಾವಿದರ ಆಗಮನವಾಯಿತು. ಯಾವಾಗ ರಂಗಭೂಮಿಯಲ್ಲಿ ಮಹಿಳಾ ಪ್ರಧಾನ ನಾಟಕಗಳನ್ನು ಪ್ರದರ್ಶಿಸಲಾರಂಭಿಸಿದರೋ ಅದು ನೇರವಾಗಿ ಸಿನಿಮಾಗಳ ಮೇಲೂ ಪರಿಣಾಮ ಬೀರತೊಡಗಿತು. ಪರಿಣಾಮವಾಗಿ ಸಿನಿಮಾ ನಟಿಯರಿಗೆ ನಾಯಕಿಯಾಗಿ ಅಭಿನಯಕ್ಕೆ ಹೆಚ್ಚಿನ ಅವಕಾಶ ದೊರೆಯಲಾರಂಭಿಸಿತು. ಇದುವರೆಗೂ ಹಾಡು ಕುಣಿತಕ್ಕಷ್ಟೇ ಸೀಮಿತವಾಗಿದ್ದ ನಾಯಕಿಯ ಅಭಿನಯ ಹೆಣ್ಣಿನ ಸಂವೇದನೆ ಮತ್ತು ಸಂಕಟವನ್ನು ಒಂದಿಷ್ಟಾದರೂ ವ್ಯಕ್ತಪಡಿಸುವ ಮಟ್ಟಕ್ಕೆ ವಿಸ್ತರಿತು. ಬಿ ಆರ್ ಪಂತಲು, ಹುಣಸೂರು ಕೃಷ್ಣಮೂರ್ತಿ ಅವರಂಥ ನಿರ್ದೇಶಕರು ನಾಯಕನ ಪ್ರಧಾನ ಭೂಮಿಕೆಯ ನಡುವೆಯೂ ನಾಯಕಿ ಪಾತ್ರಧಾರಿಯ ಅಭಿನಯಕ್ಕೆ ಒಂದಿಷ್ಟು ಅವಕಾಶ ನೀಡಲಾರಂಭಿಸಿದ್ದು ಅದೊಂದು ಆಶಾದಾಯಕ ಬೆಳವಣಿಗೆಯಾಗಿ ಕಂಡಿತು. ಪಂಢರಿ ಬಾಯಿ, ಲೀಲಾವತಿ, ಆದವಾನಿ ಲಕ್ಷ್ಮಿದೇವಿ ಇತ್ಯಾದಿ ನಟಿಯರು ಕ್ರಮೇಣ ನಾಯಕಿ ಪಾತ್ರಗಳಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿ ಸಿನಿಮಾ ಮಾಧ್ಯಮದ ಮುನ್ನೆಲೆಗೆ ಬರಲಾರಂಭಿಸಿದರು. ಇದೆ ಸಂದರ್ಭದ ಇನ್ನೊಂದು ಆಶಾದಾಯಕ ಬೆಳವಣಿಗೆ ಎಂದರೆ ಕೆಲವು ಸಿನಿಮಾಗಳಲ್ಲಿ ನಾಯಕಿ ನಟಿಯರಿಗೆ ನಾಯಕನಿಗೆ ಸರಿಸಮನಾದ ಪಾತ್ರಗಳು ಪ್ರಾಪ್ತವಾಗತೊಡಗಿದವು. ಕರುಣೆಯೇ ಕುಟುಂಬದ ಕಣ್ಣು, ಕುಲವಧು, ಗಾಂಧಿ ನಗರ ಸಿನಿಮಾಗಳನ್ನು ಆ ಒಂದು ಬೆಳವಣಿಗೆಗೆ ಉದಾಹರಣೆಯಾಗಿ ಹೇಳಬಹುದು.   ಹೆಣ್ಣು ಪೂರ್ಣಪ್ರಮಾಣದಲ್ಲಿ ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಪಡೆದದ್ದು ಅದು ಪೌರಾಣಿಕ ಸಿನಿಮಾಗಳ ಮೂಲಕ. ಸತಿ ಸಾವಿತ್ರಿ, ಮಹಾಸತಿ ಮಂಡೊಧರಿ, ಸತಿ ಸುಕನ್ಯ, ಬಾಲ ನಾಗಮ್ಮ ಸಿನಿಮಾಗಳಲ್ಲಿ ಮಹಿಳಾ ಕಲಾವಿದರಿಗೆ ಪ್ರಧಾನ ಭೂಮಿಕೆಯಲ್ಲಿ ಅಭಿನಯಿಸುವ ಅವಕಾಶ ದೊರೆಯಿತು.  ಈ ಪೌರಾಣಿಕ ಸಿನಿಮಾಗಳಲ್ಲಿ ನಾಯಕಿ ಪಾತ್ರಗಳು ಪ್ರಧಾನವಾಗಿದ್ದರೂ ಆ ಪಾತ್ರಗಳು ಪುರುಷ ಪ್ರಧಾನ ಸಮಾಜದ ನೆಲೆಯಲ್ಲಿ ಚಿತ್ರಿತವಾಗಿರುವುದು ದುರಂತದ ಸಂಗತಿ. ಇಲ್ಲಿ ಮಹಿಳೆಯನ್ನು ಒಂದು ನಿರ್ಧಿಷ್ಟ ಚೌಕಟ್ಟಿನಲ್ಲಿ ತೋರಿಸಲು ಪ್ರಯತ್ನಿಸಲಾಯಿತೆ ವಿನ: ಅವಳನ್ನು ಸಂಪ್ರದಾಯದ ಬೇಲಿಯಿಂದ ಹೊರತರುವ ಪ್ರಯತ್ನಗಳಾಗಲಿಲ್ಲ. ಇದಕ್ಕೆ ಅಪವಾದವಾಗಿ 'ಬೆಳ್ಳಿ ಮೋಡ' ಸಿನಿಮಾ ಮೂಡಿಬಂದರೂ ನಂತರದ ದಿನಗಳಲ್ಲಿ ಈ ಪ್ರಕಾರದ ಸಿನಿಮಾಗಳು ಕನ್ನಡ ಭಾಷೆಯಲ್ಲಿ ನಿರ್ಮಾಣಗೊಳ್ಳಲಿಲ್ಲ.   ಆದರೆ ಇದೆ ಹೊತ್ತಿಗೆ ಒಂದಿಷ್ಟು ಬದಲಾವಣೆಗಳಿಗೆ ತನ್ನನ್ನು ತೆರೆದುಕೊಂಡ ಸಿನಿಮಾರಂಗ ಹೆಣ್ಣನ್ನು ಸಮಾಜ ಸುಧಾರಿಕೆಯಾಗಿಯೋ ಇಲ್ಲವೇ ಹೋರಾಟಗಾರ್ತಿಯಾಗಿ ತೋರಿಸಲು ಪ್ರಯತ್ನಿಸಿ ಯಶ ಕಂಡಿತು. ಮಲ್ಲಮ್ಮನ ಪವಾಡ, ಕಿತ್ತೂರ ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಸಿನಿಮಾಗಳಲ್ಲಿ  ನಾಯಕಿಯನ್ನು ಹೊಸ ಪರಿವೇಷದಲ್ಲಿ ನೋಡುವ ಅವಕಾಶ ಪ್ರೇಕ್ಷಕರದಾಯಿತು. ಇದುವರೆಗೂ ಗಂಡಿನ ನೆರಳಾಗಿಯೋ ಇಲ್ಲವೇ ಅಡಿಯಾಳಾಗಿಯೋ ಚಿತ್ರಿತವಾಗುತ್ತಿದ್ದ ಹೆಣ್ಣು ಪುರುಷ ಸಮಾಜವನ್ನು ಪ್ರಶ್ನಿಸುವ ಮತ್ತು ದಬ್ಬಾಳಿಕೆಯನ್ನು ವಿರೋಧಿಸಿ  ನಿಲ್ಲುವ ಪಾತ್ರಗಳಲ್ಲಿ ಅಭಿನಯಿಸುವ ಮಟ್ಟಕ್ಕೆ ಬೆಳೆದು ನಿಂತಳು. ಈ ಸಂದರ್ಭ ಕನ್ನಡ ಸಿನಿಮಾ ರಂಗ ಮಹತ್ವದ ತಿರುವು ಪಡೆದುಕೊಂಡು ಲೀಲಾವತಿ, ಸರೋಜಾ ದೇವಿ, ಹರಿಣಿ, ಭಾರತಿ, ಆರತಿ ಇತ್ಯಾದಿ ನಟಿಮಣಿಯರು ನಾಯಕಿಯ ಇಮೇಜ್ ಗಳಿಸಲು ಸಾಧ್ಯವಾಯಿತು.

                    ೮೦ ರ ದಶಕದ ಕನ್ನಡ ಸಿನಿಮಾ ರಂಗವನ್ನು ಅವಲೋಕಿಸಿದಾಗ ಹಿಂದೆಂದಿಗಿಂತಲೂ ನಾಯಕಿಯರಿಗೆ ಒಂದಿಷ್ಟು ಹೆಚ್ಚಿನ ಪ್ರಾಮುಖ್ಯತೆ ದೊರೆಯಲಾರಂಭಿಸಿತು. ಸೇಡು ತಿರಿಸಿಕೊಳ್ಳುವ, ಖಳನಾಯಕರಿಗೆ ಎದುರಾಗಿ ಫೈಟ್ ಮಾಡುವ ದೃಶ್ಯಗಳಲ್ಲಿ ನಾಯಕಿಯರು ಹೆಚ್ಚು ಹೆಚ್ಚು ಚಿತ್ರಿತಗೊಳ್ಳತೊಡಗಿದರು. ಮಂಜುಳಾ, ಜಯಮಾಲಾ, ಲಕ್ಷ್ಮಿ ಇತ್ಯಾದಿ ನಟಿಯರು ಗಂಡುಬೀರಿ ಪಾತ್ರಗಳಲ್ಲಿ ಅಭಿನಯಿಸುವುದರ ಮೂಲಕ ನಾಯಕಿಯ ಪಾತ್ರಕ್ಕೊಂದು ಹೊಸ ಇಮೇಜ್ ತಂದುಕೊಟ್ಟರು. ಸೀತಾ ರಾಮು, ಚಂಡಿ ಚಾಮುಂಡಿ, ರುದ್ರಿ  ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳ ವಿಷಯದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದವು. ವಿಷ್ಣುವರ್ಧನ್, ಶ್ರೀನಾಥ, ಶಂಕರ ನಾಗ್, ಅನಂತನಾಗ್ ರಂಥ ಪ್ರಮುಖ ನಾಯಕ ನಟರು ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸಬೇಕಾದ ಅನಿವಾರ್ಯತೆ ಎದುರಾಯಿತು. ವಸಂತ ಲಕ್ಷ್ಮಿ, ಪಾಯಿಂಟ್ ಪರಿಮಳ, ಸೀತಾ ರಾಮು, ಚಂದನದ ಗೊಂಬೆ ಇತ್ಯಾದಿ ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರೆನಿಸಿಕೊಂಡ ನಾಯಕ ನಟರು ಅಭಿನಯಿಸಿದರು. ಇದೆ ಸಂದರ್ಭ ಅನುರಾಧ, ಜಯಮಾಲಿನಿ, ಹಲಂ, ಸಿಲ್ಕ್ ಸ್ಮಿತಾ ರಂಥ ಕ್ಯಾಬರೆ ನರ್ತಕಿಯರು ತಮ್ಮ ಮಾದಕ ಮೈ ಮಾಟದಿಂದ ಕನ್ನಡ ಸಿನಿಮಾಗಳಲ್ಲಿ ಎಂಟ್ರಿ ಪಡೆದು ಪ್ರೇಕ್ಷಕರನ್ನು ಒಂದಿಷ್ಟು ಉನ್ಮತ್ತರನ್ನಾಗಿಸಿದರು. ಕನ್ನಡ  ಚಿತ್ರರಂಗದಲ್ಲಿ  ನಾಯಕಿ ನಟಿಯರು ಪ್ರವರ್ಧಮಾನಕ್ಕೆ ಬರುತ್ತಿರುವ ಘಳಿಗೆಯಲ್ಲೇ ಈ ನಟಿಯರು ಕ್ಯಾಬರೆ ನರ್ತನವನ್ನು ಸಿನಿಮಾಕ್ಕೆ ಕರೆತಂದದ್ದು ಬಹುದೊಡ್ಡ ದುರಂತವಾಗಿ ಪರಿಣಮಿಸಿತು. ಪರಿಣಾಮವಾಗಿ ಸಿನಿಮಾದ ಕಥೆಗೆ ಅಗತ್ಯವಿಲ್ಲದಿದ್ದರೂ ಪ್ರೇಕ್ಷಕರು ಕ್ಯಾಬರೆ ನರ್ತನವನ್ನು  ಸಿನಿಮಾದಲ್ಲಿ ಅಪೇಕ್ಷಿಸತೊಡಗಿದರು. ಕ್ಯಾಬರೆ ನೃತ್ಯದ ಜನಪ್ರಿಯತೆ  ಹಾಗೂ ಪ್ರೇಕ್ಷಕರ ಮನದಿಂಗಿತವನ್ನು ಅರಿತ ನಾಯಕಿ ನಟಿಯರು ನಂತರದ ದಿನಗಳಲ್ಲಿ ಆ ಪಾತ್ರವನ್ನು ಸಹ ತಾವೇ ನಿರ್ವಹಿಸಲು ಮುಂದಾದದ್ದು ಕನ್ನಡ ಸಿನಿಮಾ ರಂಗದ ದುರಂತಗಳಲ್ಲೊಂದು.

                   ಕನ್ನಡ ಸಿನಿಮಾರಂಗದ ಮೂರನೆ ತಲೆಮಾರಿನ ನಾಯಕಿ ನಟಿಯರ ವಿಷಯಕ್ಕೆ ಬಂದರೆ ಇಲ್ಲಿ ಮಾಲಾಶ್ರೀ, ಶೃತಿ, ಸುಧಾರಾಣಿ ಮಹಿಳಾ ಪ್ರಧಾನ ಸಿನಿಮಾಗಳ ವಿಷಯದಲ್ಲಿ ಒಂದಿಷ್ಟು ಭರವಸೆ ಮೂಡಿಸಿದರಾದರೂ ಅಷ್ಟೇನು ಆಶಾದಾಯಕ ಬೆಳವಣಿಗೆಯಾಗಲಿಲ್ಲ. ಮಾಲಾಶ್ರೀ ನಾಯಕ ಪ್ರಧಾನ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರೂ ನಂತರದ ದಿನಗಳಲ್ಲಿ ಅವರು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸಿದ್ದೆ ಹೆಚ್ಚು. ಅದರಲ್ಲೂ ಹೊಡೆದಾಟದ ದೃಶ್ಯಗಳಲ್ಲಿನ ವಿಪರೀತ ಅಭಿನಯದಿಂದಾಗಿ ಈ ನಟಿ ಹೆಣ್ಣಿನ ಭಾವನೆಗಳನ್ನು ಸಶಕ್ತವಾಗಿ ಅನಾವರಣಗೊಳಿಸುವಲ್ಲಿ ವಿಫಲರಾದರು. ವಿಪರ್ಯಾಸವೆಂದರೆ ಪುರುಷ ಸಮಾಜದ ದಬ್ಬಾಳಿಕೆಯನ್ನು ವಿರೋಧಿಸುವ ಪಾತ್ರದ ಮೂಲಕ ನಾಯಕಿ ನಟಿಯಾದ ಶೃತಿ ನಂತರದ ದಿನಗಳಲ್ಲಿ ಅಳುಮಂಜಿ ಪಾತ್ರಕ್ಕೆ ತಮ್ಮ ಅಭಿನಯವನ್ನು ಸೀಮಿತಗೊಳಿಸಿಕೊಂಡರು. ಸುಧಾರಾಣಿ ಪ್ರಾರಂಭದಲ್ಲಿ ಒಂದೆರಡು ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸಿದರೂ ನಂತರದ ಅವರ ಪಾತ್ರಗಳು ಮರ ಸುತ್ತುವ ಮತ್ತು ಹಾಡಿ ಕುಣಿಯುವ ಸನ್ನಿವೇಶಗಳಿಗೆ ಸೀಮಿತವಾಗಿ ಕ್ರಮೇಣ ಪೋಷಕ ಪಾತ್ರಗಳಿಗೆ ಬಡ್ತಿ ಹೊಂದಿದರು. ಈಗ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ನಾಯಕಿ ನಟಿಯರು ಬೆರಳೆಣಿಕೆಯ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವುದೇ ಬಹುದೊಡ್ಡ ಸಾಧನೆಯಾಗಿ ಪರಿಣಮಿಸಿದೆ. ಜೊತೆಗೆ ಬೇರೆ ಭಾಷೆಗಳಿಂದ ಆಮದಾಗುತ್ತಿರುವ ನಟಿಯರು ಅಂಗಾಂಗ ಪ್ರದರ್ಶನ ಮೂಲಕ ಪ್ರಬಲ ಪೈಪೋಟಿ ನೀಡುತ್ತಿರುವುದರಿಂದ ಇಲ್ಲಿ ಅಭಿನಯಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವಾಗಿದೆ. ನಾಯಕಿಯ ಅಭಿನಯ  ಹಾಡುವುದು, ಕುಣಿಯುವುದು ಮತ್ತು ದೇಹ ಪ್ರದರ್ಶಿಸುವುದಕ್ಕೆ ಮಾತ್ರ ಸೀಮಿತ  ಎನ್ನುವುದನ್ನು ಪ್ರೇಕ್ಷಕರೂ ಒಪ್ಪಿಕೊಂಡಿರುವರು.

                   ಸಿನಿಮಾ ರಂಗದಲ್ಲಿ ನಾಯಕ ನಟರು ಗಳಿಸಿದಷ್ಟು ಜನಪ್ರಿಯತೆ ಮತ್ತು ಪಡೆದ ಯಶಸ್ಸನ್ನು ನಾಯಕಿ ನಟಿಯರಿಗೆ ದೊರೆಯದಿರುವುದು ಸಿನಿಮಾ ಮಾಧ್ಯಮದ ವಿಪರ್ಯಾಸಗಳಲ್ಲೊಂದು. ಸಾಮಾನ್ಯವಾಗಿ ಎಲ್ಲ ನಾಯಕಿ ನಟಿಯರು ಒಂದಿಷ್ಟು ಸಿನಿಮಾಗಳ ನಂತರ ಪೋಷಕ ಪಾತ್ರಗಳಿಗೆ  ಅನಿವಾರ್ಯವಾಗಿ ವಲಸೆ ಹೋಗಬೇಕಾಯಿತು. ರಾಜಕುಮಾರ ಅವರ ಅನೇಕ ಸಿನಿಮಾಗಳಲ್ಲಿ ಅವರಿಗೆ ನಾಯಕಿಯಾಗಿ ಅಭಿನಯಿಸಿದ ಪಂಢರಿಬಾಯಿ ನಂತರ ಹಲವು ಸಿನಿಮಾಗಳಲ್ಲಿ ಅದೇ ರಾಜಕುಮಾರ ಅವರಿಗೆ ತಾಯಿಯಾಗಿ ನಟಿಸಿದ್ದು ನಾಯಕಿ ನಟಿಯರ ವೃತ್ತಿ ಬದುಕಿನ ಅನಿಶ್ಚಿತತೆಗೊಂದು ಉದಾಹರಣೆ. ಈ ಮಾತು ಒಂದು ಕಾಲದಲ್ಲಿ ನಾಯಕಿ ನಟಿಯರಾಗಿ ತಮ್ಮ ಅಭಿನಯದ ಛಾಪು ಮೂಡಿಸಿದ್ದ ಜಯಂತಿ, ಲೀಲಾವತಿ, ಭಾರತಿ, ಸರೋಜಾದೇವಿ, ಲಕ್ಷ್ಮಿ ಅವರಿಗೂ ಅನ್ವಯಿಸುತ್ತದೆ. ಇನ್ನೊಂದು ಸಂಗತಿ ಎಂದರೆ ಒಂದು ಹಂತದಲ್ಲಿ ಕನ್ನಡ ಸಿನಿಮಾರಂಗ ನಾಯಕಿ ನಟಿಯರ ಅಭಿನಯಕ್ಕೆ  ಬದಲು ಸೌಂದರ್ಯ ಮತ್ತು ಅಂಗಸೌಷ್ಟಕ್ಕೆ ಮಹತ್ವ ನೀಡುವ ತಿರುವು ಪಡೆದುಕೊಂಡಿತು. ಆರತಿ, ಪದ್ಮಪ್ರಿಯ, ಸರಿತಾ, ಬಾನುಪ್ರಿಯ ರಂಥ ಕೃಷ್ಣ ಸುಂದರಿಯರು ನಾಯಕಿ ನಟಿಯರಾಗಿ ಮೆರೆದ ಇದೆ ಕನ್ನಡ ಚಿತ್ರರಂಗದಲ್ಲಿ ನಂತರದ ದಿನಗಳಲ್ಲಿ ಮಾದಕ ನಟಿಯರಿಗೆ ಅವಕಾಶಗಳು ಹೇರಳವಾಗಿ ಸಿಗಲಾರಂಭಿಸಿದವು. ನಟಿಮಣಿಯರ ಗ್ಲಾಮರ್ ಮತ್ತು ಅಂಗ ಪ್ರದರ್ಶನಕ್ಕೆ ಒತ್ತು ನೀಡಲಾರಂಭಿಸಿದ ಕನ್ನಡ ಚಿತ್ರರಂಗದಲ್ಲಿ ಅಭಿನಯವನ್ನೇ ಬಂಡವಾಳವಾಗಿಟ್ಟು ಕೊಂಡ ನಟಿಯರು ಕ್ರಮೇಣ ನೇಪಥ್ಯಕ್ಕೆ ಸರಿದರು. ನಟಿಯೋರ್ವಳು ಬಹುಕಾಲ ಚಲಾವಣೆಯಲ್ಲಿರಲು  ದೇಹ ಪ್ರದರ್ಶನ ಅನಿವಾರ್ಯವಾಗಿ ಕೊನೆಗೆ ನಾಯಕಿಯಿಂದಲೇ  ಕ್ಯಾಬರೆ ನೃತ್ಯ ಮಾಡಿಸುವ  ಸ್ಥಿತಿಗೆ ಕನ್ನಡ ಸಿನಿಮಾ ಮಾಧ್ಯಮ ಬಂದು ನಿಂತಿತು. ಇದಕ್ಕೆ ಪೂರಕವಾಗಿ ಅದೆಷ್ಟೋ ನಟಿಮಣಿಯರು ಬದಲಾದ ಪರಿಸ್ಥಿತಿಗೆ ಹೊಂದಿಕೊಂಡಿದ್ದು ಕನ್ನಡದಲ್ಲಿ ನಾಯಕಿ ಪ್ರಧಾನ ಸಿನಿಮಾಗಳ ನಿರ್ಮಾಣ ಕಡಿಮೆಯಾಗಲು ಪ್ರಬಲ ಕಾರಣವಾಯಿತು.

ಪೋಷಕ ಪಾತ್ರಗಳಲ್ಲಿ ಮಹಿಳೆ 

 
                   ತಾಯಿ ಮತ್ತು ಸಹೋದರಿಯಾಗಿ ಮಹಿಳಾ ಕಲಾವಿದೆಯರು ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿರುವರು. ತಾಯಿ ಮಗನ, ಅಣ್ಣ ತಂಗಿಯ ಅನುಬಂಧವನ್ನು ಸಾರುವ ಅನೇಕ ಸಿನಿಮಾಗಳು ಕನ್ನಡ ಭಾಷೆಯಲ್ಲಿ ನಿರ್ಮಾಣಗೊಂಡಿವೆ. ಪೋಷಕ ಪಾತ್ರಗಳಲ್ಲೇ ಅಭಿನಯಿಸುತ್ತ ಅನೇಕ ನಟಿಯರು ನಾಯಕ ನಟರಿಗೆ ಪ್ರಬಲವಾಗಿ ಸ್ಪರ್ಧೆಯೊಡ್ಡಿದುಂಟು. ಮಹಿಳಾ ಕಲಾವಿದೆಯರ ಪೋಷಕ ಪಾತ್ರಗಳ ಮಹತ್ವವನ್ನು ಸಾರುವಂಥ ಸೋದರಿ, ಅಣ್ಣ ತಂಗಿ, ತಾಯಿಗೆ ತಕ್ಕ ಮಗ, ನನ್ನ ತಂಗಿ, ತಾಯಿ, ತವರಿಗೆ ಬಾ ತಂಗಿ ಇಂಥ ಶೀರ್ಷಿಕೆಗಳನ್ನು ಕನ್ನಡ ಸಿನಿಮಾಗಳಲ್ಲಿ ಬಳಸಿಕೊಂಡಿದ್ದು ವಿಶೇಷ ಸಂಗತಿಗಳಲ್ಲೊಂದು. ಪುಟ್ನಂಜದಲ್ಲಿ ಉಮಾಶ್ರೀ, ವಂಶಿಯಲ್ಲಿ ಲಕ್ಷ್ಮಿ ನಾಯಕ ನಟರಿಗೆ ಸಮನಾದ ಪಾತ್ರಗಳಲ್ಲಿ ಅಭಿನಯಿಸಿದ್ದು ಮಹಿಳಾ ಕಲಾವಿದೆಯರ ಅಭಿನಯ ಸಾಮರ್ಥ್ಯಕ್ಕೆ ಉತ್ತಮ ಉದಾಹರಣೆಗಳಿವು. ಆದರೆ ಆರಂಭದ ದಿನಗಳಲ್ಲಿ ಇದೇ ಉಮಾಶ್ರೀಯ ಅಭಿನಯ ದ್ವಂದ್ವಾರ್ಥ ಸಂಭಾಷಣೆಗಳಿಗೆ ಸೀಮಿತವಾಗಿದ್ದು ವಿಪರ್ಯಾಸ. ಒಡಲಾಳ ನಾಟಕದಲ್ಲಿ ಸಾಕವ್ವನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ ಈ ಕಲಾವಿದೆಯಲ್ಲಿನ ಅಭಿನಯ ಸಾಮರ್ಥ್ಯವನ್ನು ನಮ್ಮ ಚಿತ್ರರಂಗ ಬಹಳ ತಡವಾಗಿ ಗುರುತಿಸಿತು.

               ಮಹಿಳಾ ಪೋಷಕ ಪಾತ್ರಗಳ ಇನ್ನೊಂದು ದುರಂತವೆಂದರೆ ದೌರ್ಜನ್ಯಕ್ಕೊಳಗಾಗುವ ಮತ್ತು ದೌರ್ಜನ್ಯಕ್ಕೊಳಪಡಿಸುವ ಎರಡೂ ಪಾತ್ರಗಳನ್ನು ನಟಿಯರೇ ನಿರ್ವಹಿಸಿದ್ದು. ಲಕ್ಷ್ಮೀದೇವಿ, ರಮಾದೇವಿ, ಸತ್ಯಭಾಮಾ, ಉಮಾಶಿವಕುಮಾರ ಕೆಟ್ಟ ಅತ್ತೆ, ಮಲತಾಯಿ ಪಾತ್ರಗಳ ಮೂಲಕ ಅನೇಕ ನಟಿಮಣಿಯರನ್ನು ಸಿನಿಮಾಗಳಲ್ಲಿ ಗೋಳುಹೊಯ್ದುಕೊಂಡಿದ್ದುಂಟು. ಇದಕ್ಕೆ ಪೂರಕವಾಗಿ ಮಗಳು, ಸೊಸೆ ಪಾತ್ರಗಳಲ್ಲಿ ಹಲವಾರು ಪೋಷಕ ನಟಿಯರು ಅತ್ತೆ ಮಲತಾಯಿಯ ದೌರ್ಜನ್ಯಕ್ಕೆ ನಲುಗಿ ಪ್ರೇಕ್ಷಕರ ಕಂಗಳಲ್ಲಿ ಕಣ್ಣೀರ ಕೊಡಿಯನ್ನೇ ಹರಿಸಿರುವರು. ಯೋಚಿಸಬೇಕಾದ ಸಂಗತಿ ಎಂದರೆ ಇಂಥ ಅತ್ತೆ, ನಾದಿನಿ, ಮಲತಾಯಿಗೆ ಪಾಠ ಕಲಿಸಿ ಸರಿದಾರಿಗೆ ತರಲು ನಾಯಕ ನಟರ ಪಾತ್ರಗಳೇ ಪ್ರಧಾನ ಭೂಮಿಕೆ ಬರಬೇಕಾಯಿತು. ಅಸಾಧ್ಯ ಅಳಿಯ, ಗಡಿಬಿಡಿ ಅಳಿಯ ಸಿನಿಮಾಗಳು ಇದಕ್ಕೆ ಉತ್ತಮ ಉದಾಹರಣೆಗಳು. ಜೊತೆಗೆ ಇನ್ನೊಂದು ದುರಂತದ ಸಂಗತಿ ಎಂದರೆ ಸಿನಿಮಾದ ಕಥೆಗೆ ಅಗತ್ಯವೇನೋ ಎನ್ನುವಂತೆ ನಮ್ಮ ಸಿನಿಮಾಗಳಲ್ಲಿ ಮಹಿಳಾ ಪೋಷಕ ಕಲಾವಿದೆಯರು ಅತ್ಯಾಚಾರಕ್ಕೆ ಒಳಗಾಗಿರುವರು. ವಿಶೇಷವೆಂದರೆ ಅಕ್ಕ ಅಥವಾ ತಂಗಿಯ ಪಾತ್ರಗಳು ಸಿನಿಮಾಗಳಲ್ಲಿ ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಇಲ್ಲವೇ ಕೊಲೆಯಾಗುವ ದೃಶ್ಯಗಳಲ್ಲಿ ಕೊನೆಗೊಂಡಿದ್ದೆ ಹೆಚ್ಚು. ಇಲ್ಲಿಯೂ ಕೂಡ ತನ್ನ ಸಹೋದರಿಗಾದ ಅನ್ಯಾಯಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ನಾಯಕ ನಟನೇ ಎಂಟ್ರಿ ಕೊಡಬೇಕಾಯಿತು.

           ಒಟ್ಟಾರೆ ದೌರ್ಜನ್ಯಕ್ಕೊಳಗಾಗುವುದು ಹೆಣ್ಣಿನ ಹಣೆಬರಹ ಎನ್ನುವಂತೆ ನಮ್ಮ ಕನ್ನಡ ಸಿನಿಮಾಗಳಲ್ಲಿ ಪೋಷಕ ನಟಿಯರ ಪಾತ್ರಗಳು ಚಿತ್ರಿತಗೊಂಡಿವೆ. ಅಮ್ಮ, ಅತ್ತೆ, ಅತ್ತಿಗೆ, ಸಹೋದರಿ, ಪತ್ನಿಯಾಗಿ ಆಕೆ ಸಿನಿಮಾದಿಂದ ಸಿನಿಮಾಕ್ಕೆ ದೌರ್ಜನಕ್ಕೊಳಗಾಗುತ್ತಲೇ ಇರುವಳು. ಮೂಕಿಯಿಂದ ಟಾಕಿ, ಕಪ್ಪು ಬಿಳುಪಿನಿಂದ ಬಣ್ಣ ಹೀಗೆ ಸಿನಿಮಾ ಮಾಧ್ಯಮದಲ್ಲಿ ಸಾಕಷ್ಟು ಬೆಳವಣಿಗೆಗಳಾದರೂ ಮಹಿಳಾ ಪಾತ್ರಗಳು ಸಿನಿಮಾ ನಿರ್ಮಾಣ ಪ್ರಾರಂಭವಾಗಿ ನೂರು ವರ್ಷಗಳಾದರೂ ಇನ್ನೂ ಪುರುಷ ಪ್ರಧಾನ ನೆಲೆಯಿಂದ ಹೊರಬರಲು ಸಾಧ್ಯವಾಗಿಲ್ಲ. ಎಲ್ಲೋ ಒಂದು ಕಡೆ ಉಮಾಶ್ರೀ, ಶೃತಿಯಂಥ ಕಲಾವಿದೆಯರು ಪುರುಷ ಪ್ರಧಾನ ಸಮಾಜವನ್ನು ಮೆಟ್ಟಿ ನಿಂತು ಮಹಿಳಾ ಕಲಾವಿದೆಯರ ಅಭಿನಯಕ್ಕೆ ಹೊಸ ಖದರು ತಂದು ಕೊಡಲು ಪ್ರಯತ್ನಿಸಿದರಾದರೂ ಅಂಥ ಸಿನಿಮಾಗಳ ಸಂಖ್ಯೆ ತೀರ ಕಡಿಮೆ.

ನಿರ್ದೇಶಕಿಯಾಗಿ ಮಹಿಳೆ 


              ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲೇ ಮಹಿಳಾ ನಿರ್ದೇಶಕಿಯರ ಸಂಖ್ಯೆ ಅದು ಬೆರಳೆಣಿಕೆಯಷ್ಟು ಮಾತ್ರ. ಇನ್ನು ಕನ್ನಡ ಸಿನಿಮಾಗಳ ವಿಷಯಕ್ಕೆ ಬಂದರೆ ಇಲ್ಲಿ ಸುಮನಾ ಕಿತ್ತೂರ, ವಿಜಯಲಕ್ಷ್ಮಿ ಸಿಂಗ್, ಕವಿತಾ ಲಂಕೇಶ್ ಹೆಸರುಗಳು ಮಾತ್ರ ಸಿನಿಮಾ ನಿರ್ದೇಶಕಿಯರಾಗಿ ಚಾಲ್ತಿಯಲ್ಲಿವೆ. ಇರುವ ಈ ಮೂರು ಹೆಸರುಗಳಲ್ಲಿ ಹೆಣ್ಣಿನ ಒಳಬದುಕಿನ ಸೂಕ್ಷ್ಮ ಒಳತೋಟಿಗಳನ್ನು ಅತ್ಯಂತ ಸಶಕ್ತವಾಗಿ ತೆರೆದಿಡಲು ಪ್ರಯತ್ನಿಸಿದ್ದು ಕವಿತಾ ಲಂಕೇಶ್ ಮಾತ್ರ. ದ್ವೀಪ, ಪುಟ್ಟಕ್ಕನ ಹೈವೆ, ಗೆಜ್ಜೆ ಪೂಜೆ, ಹೂವು ಹಣ್ಣು ಸಿನಿಮಾಗಳು ಮಹಿಳಾ ಬದುಕಿನ ಒಳಪದರುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬೆಳ್ಳಿ ಪರದೆಯ ಮೇಲೆ ಅನಾವರಣಗೊಳಿಸಿದರೂ ಈ ಎಲ್ಲ ಸಿನಿಮಾಗಳನ್ನು ನಿರ್ದೇಶಿಸಿದ್ದು ಪುರುಷ ನಿರ್ದೇಶಕರು ಎನ್ನುವುದು ಅಚ್ಚರಿಯ ಸಂಗತಿಗಳಲ್ಲೊಂದು. ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಕನ್ನಡ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಅಥವಾ ನಾಯಕಿ ಪ್ರಧಾನ ಸಿನಿಮಾಗಳನ್ನು ನಿರ್ದೇಶಿಸಿದ್ದು ಕೂಡ ಪುರುಷ ನಿರ್ದೇಶಕರೆ. ಗಾಳಿಮಾತು, ಬೆಳ್ಳಿ ಮೋಡ, ಶರಪಂಜರ, ಉಪಾಸನೆ, ಅರುಣ ರಾಗ, ಬಯಲು ದಾರಿ ಈ ಸಿನಿಮಾಗಳನ್ನು ನಾಯಕಿ ಪ್ರಧಾನ ಸಿನಿಮಾಗಳಿಗೆ ಉದಾಹರಣೆಯಾಗಿ ಹೇಳಬಹುದು. ಕೆ ವಿ ಜಯರಾಂ, ಪುಟ್ಟಣ್ಣ ಕಣಗಾಲ್, ದೊರೈ ಭಗವಾನ್ ಇತ್ಯಾದಿ ನಿರ್ದೇಶಕರು ನಾಯಕ ಪ್ರಧಾನ ಸಿನಿಮಾಗಳಿಗಿಂತ ನಾಯಕಿ ಪ್ರಧಾನ ಸಿನಿಮಾಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನಿರ್ದೇಶಿಸಿದರು. ಪುಟ್ಟಣ್ಣ ಕಣಗಾಲ ನಿರ್ದೇಶನದಲ್ಲಿ ತ್ರಿವೇಣಿ ಕಾದಂಬರಿಗಳಾಧಾರಿತ ಹೆಣ್ಣಿನ ಬದುಕಿನ ಸಂಕಷ್ಟವನ್ನು ಸಾರುವ ಸಾಲು ಸಾಲು ಸಿನಿಮಾಗಳು ನಿರ್ಮಾಣಗೊಂಡವು. ಪುರುಷ ನಿರ್ದೇಶಕರು ಮಹಿಳಾ ಪ್ರಧಾನ ಸಿನಿಮಾಗಳನ್ನು ನಿರ್ದೇಶಿಸಿ ಒಂದು ಭೂಮಿಕೆಯನ್ನು ಸಿದ್ಧಪಡಿಸಿದ ನಂತರವೂ ಹೆಣ್ಣಿನ ಬದುಕನ್ನು ಅತ್ಯಂತ ಸಮರ್ಥವಾಗಿ ಹಿಡಿದಿಡಲು ಸಿನಿಮಾಗಳನ್ನು ನಿರ್ದೇಶಿಸಲು ಮಹಿಳೆಯರು ಮುಂದೆ ಬರುತ್ತಿಲ್ಲದಿರುವುದು ದುರಂತದ ಸಂಗತಿ. ಇವತ್ತಿಗೂ ಮಹಿಳಾ ಪ್ರಧಾನ ಸಿನಿಮಾಗಳಿಗೆ ಉದಾಹರಣೆಯಾಗಿ ನಾವು ಸತ್ಯಜೀತ್ ರೇ ಅವರ ಪಥೇರ್ ಪಾಂಚಾಲಿ, ಗುಲ್ಜಾರರ ಮಾಚಿಸ್, ಪುಟ್ಟಣ್ಣನವರ ಶರಪಂಜರ, ಕಾಸರವಳ್ಳಿಯವರ ದ್ವೀಪ ಸಿನಿಮಾಗಳ ಹೆಸರು ಹೇಳುವಾಗ ಒಬ್ಬ ಮಹಿಳಾ ನಿರ್ದೇಶಕಿಯ ಹೆಸರೂ ಮನಪಟಲದ ಮೇಲೆ ಮೂಡುವುದಿಲ್ಲ.

                     ಇಲ್ಲಿ ಉಲ್ಲೇಖಿಸಲೇ ಬೇಕಾದ ಇನ್ನೊಂದು ಮಾತೆಂದರೆ ಸಿನಿಮಾದ ಕಥೆಗೆ ಅನಿವಾರ್ಯ ಇಲ್ಲದಿದ್ದಾಗೂ ಕೂಡ ಹೆಣ್ಣನ್ನು ಹಾಡು, ನೃತ್ಯ, ಸ್ನಾನದ ದೃಶ್ಯಗಳಲ್ಲಿ ಚಿತ್ರಿಸಿರುವುದನ್ನು ನಾವು ಸಿನಿಮಾಗಳಲ್ಲಿ ಕಾಣುತ್ತೇವೆ. ಏಕೆ ಹೀಗೆ ಎಂದು ಒಂದಿಷ್ಟು ವಿಶ್ಲೇಷಿಸಿ ನೋಡಿದಾಗ ಅದು ಸಿನಿಮಾದ ಮಾರಾಟಕ್ಕೆ ಹೆಚ್ಚು ಸಹಾಯಕವಾಗುತ್ತಿದೆ ಎನ್ನುವ ಮಾತು ಸಿನಿಮಾ ವಲಯದಲ್ಲಿ ಚಾಲ್ತಿಯಲ್ಲಿದೆ. ಈ ಮಾತನ್ನು ಒಪ್ಪುವುದಾದರೆ ನಮ್ಮ ಸಿನಿಮಾ ಉದ್ಯಮ ಹೆಣ್ಣನ್ನು ಒಂದು ಮಾರಾಟದ ಸರಕಾಗಿ ನೋಡುತ್ತಿದೆ ಎನ್ನುವ ಸಂಗತಿ ಸ್ಪಷ್ಟವಾಗುತ್ತದೆ. ಹೀಗೆ ಹೆಣ್ಣನ್ನು ಆಕರ್ಷಣೆ, ಶೃಂಗಾರ ಮತ್ತು ಕಾಮದ ಕಣ್ಣಿನಲ್ಲಿ ಚಿತ್ರಿಕರಿಸುತ್ತಿರುವ ಸಿನಿಮಾ ರಂಗ ಆಕೆಯ ಭಾವನೆಗಳನ್ನು ಸಮರ್ಥವಾಗಿ ಹಿಡಿದಿಡುವಲ್ಲಿ ಸಂಪೂರ್ಣವಾಗಿ ಸೋತಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ