Wednesday, April 24, 2013

ರಾಜಕುಮಾರ: ನಾಡಿನ ಸೃಜನಶೀಲ ಆಯಾಮ

   




   






           
     (ಇಂದು ರಾಜಕುಮಾರ ಜನ್ಮದಿನ. ಬದುಕಿದ್ದರೆ ಅವರು ಈ ದಿನ ತಮ್ಮ ೮೫ ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದರು. ರಾಜ್ ನೆನಪಿಗಾಗಿ ಈ ಲೇಖನ)

           'ಐದು ಕೋಟಿ ಕನ್ನಡಿಗರನ್ನು ಜಾಗೃತಗೊಳಿಸಲು ಇಡೀ ಕನ್ನಡ ಸಾಹಿತ್ಯವಲಯಕ್ಕೆ ಸಾಧ್ಯವಾಗದೇ ಇದ್ದಾಗ ಕಲಾವಿದನಾಗಿ ರಾಜಕುಮಾರ ಪ್ರತಿಯೊಬ್ಬ ಕನ್ನಡಿಗನ ಮನೆ ಮತ್ತು ಮನಸ್ಸನ್ನು ತಲುಪಿದರು'. ಕನ್ನಡದ ವರನಟ ಡಾ. ರಾಜಕುಮಾರ ಕುರಿತು ನಾಡಿನ ಹಿರಿಯ ಸಾಹಿತಿ ಯು. ಆರ್. ಅನಂತಮೂರ್ತಿ ಅವರು ಹೇಳಿದ ಮಾತಿದು. ಈ ಮಾತಿನಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಮತ್ತು ಇದು ಮುಖಸ್ತುತಿಯೂ ಅಲ್ಲ. ನಿಜ ಯಾರಿಗೂ ಸಾಧ್ಯವಾಗದೇ ಇರುವುದನ್ನು ರಾಜಕುಮಾರ ಒಬ್ಬ ಕಲಾವಿದನಾಗಿ ಸಾಧಿಸಿದರು. ರಾಜಕುಮಾರ ಎಂದರೆ ಕನ್ನಡ ಸಿನಿಮಾ ಎನ್ನುವಷ್ಟರ ಮಟ್ಟಿಗೆ ಅವರು ಕನ್ನಡ ಸಿನಿಮಾ ರಂಗಕ್ಕೆ ಅನಿವಾರ್ಯವಾದರು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ರಾಜಕುಮಾರ ಪೂರ್ವದಲ್ಲಿ ಮತ್ತು ರಾಜಕುಮಾರ ನಂತರ ಎನ್ನುವ ರೀತಿ ಕನ್ನಡ ಸಿನಿಮಾ ಪ್ರಪಂಚದ ಅವಿಭಾಜ್ಯ ಅಂಗವಾದರು. ಕನ್ನಡ ಚಿತ್ರರಂಗದ ಈ ಮೇರು ನಟ ನಿಧನ ಹೊಂದಿದ ಆ ಘಳಿಗೆ ಸಿನಿಮಾ ಲೋಕ ಮಾತ್ರವಲ್ಲ ಇಡೀ ಕನ್ನಡ ನಾಡು ಆಘಾತದಿಂದ ತತ್ತರಿಸಿ ಹೋಯಿತು. ಬದುಕಿದ್ದರೆ ಈ ದಿನ (ಎಪ್ರಿಲ್ ೨೪) ತಮ್ಮ ೮೫ನೇ ಹುಟ್ಟುಹಬ್ಬ ಆಚರಿಸಿ ಕೊಳ್ಳುತ್ತಿದ್ದರು. ಆದರೆ ೨೦೦೬ ರಲ್ಲಿ ಸಾವಿನ ರೂಪದಲ್ಲಿ ಬಂದ ವಿಧಿ ಅವಕಾಶವನ್ನೇ ಕೊಡಲಿಲ್ಲ.

           ರಾಜಕುಮಾರ ಮೂಲತ: ರಂಗಭೂಮಿ ಕಲಾವಿದ. ಅನೇಕ ನಾಟಕಗಳಲ್ಲಿ ನಟಿಸಿ ಪಳಗಿದ ನಟ. ರಂಗಭೂಮಿಯ ನಂಟು ಇದ್ದುದ್ದರಿಂದಲೇ ಸಂಭಾಷಣೆ ಹಾಗೂ ಭಾವನೆಗಳನ್ನು ಅಭಿವ್ಯಕ್ತ ಪಡಿಸುವುದರ ಮೇಲೆ ಅವರಿಗೆ ಹಿಡಿತವಿತ್ತು. ೧೯೫೦ ರ ದಶಕದಲ್ಲಿ 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ ಸಿನಿಮಾ ರಂಗವನ್ನು ಪ್ರವೇಶಿಸಿದಾಗ ಆಗ ಕನ್ನಡ ಭಾಷೆಯಲ್ಲಿ ತಯ್ಯಾರಾದ ಚಿತ್ರಗಳ ಸಂಖ್ಯೆ ಕೇವಲ ೪೬. ಆಗಿನ್ನೂ ಕನ್ನಡ ಸಿನಿಮಾ ಇಂಡಸ್ಟ್ರಿ ಬೆಳೆದಿರಲಿಲ್ಲ. ತೆಲಗು, ತಮಿಳು, ಹಿಂದಿ ಸಿನಿಮಾಗಳ ಪ್ರಭಾವ ಸಾಕಷ್ಟಿತ್ತು. ಕರ್ನಾಟಕದಲ್ಲಿ ಸಿನಿಮಾಗಳ ಚಿತ್ರೀಕರಣಕ್ಕೆ ಯಾವುದೇ ಅನುಕೂಲಗಳಿರಲಿಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿ ಆಗ ಸಂಪೂರ್ಣವಾಗಿ ಮದ್ರಾಸಿನಲ್ಲಿ ನೆಲೆಯೂರಿತ್ತು. ಕನ್ನಡ ಸಿನಿಮಾರಂಗ ಇನ್ನು ಬಾಲ್ಯಾವಸ್ಥೆಯಲ್ಲಿದ್ದ ದಿನಗಳಲ್ಲಿ ರಾಜಕುಮಾರ ಚಿತ್ರರಂಗವನ್ನು ಪ್ರವೇಶಿಸಿದರು. ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಾದ ಅವರು ನಂತರ ಹಿಂತಿರುಗಿ ನೋಡುವ ಸಂದರ್ಭವೇ ಬರಲಿಲ್ಲ. ಚಿತ್ರದಿಂದ ಚಿತ್ರಕ್ಕೆ ರಾಜಕುಮಾರ ತಾವು ಮಾತ್ರ ಬೆಳೆಯಲಿಲ್ಲ. ಅವರ ಜೊತೆಗೆ ಅನೇಕ ಕಲಾವಿದರು, ತಂತ್ರಜ್ಞರು ಬೆಳೆದರು. ಮದರಾಸಿನಲ್ಲಿ ನೆಲೆಯೂರಿದ್ದ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಬೆಂಗಳೂರಿಗೆ ಕರೆತರುವಲ್ಲಿ ರಾಜಕುಮಾರ ಪಾತ್ರ ಅತ್ಯಂತ ಮಹತ್ವದ್ದು. ಕನ್ನಡ ಸಿನಿಮಾ ಉದ್ಯಮ ಸಂಕಷ್ಟದಲ್ಲಿದ್ದಾಗ ಅದರ ಪುನಶ್ಚೇತನಕ್ಕಾಗಿ 'ರಣಧೀರ ಕಂಠೀರವ' ಸಿನಿಮಾ ತಯ್ಯಾರಿಸಿದ್ದು ರಾಜಕುಮಾರ ಸಿನಿಮಾವನ್ನು ಅದೆಷ್ಟು ಗಾಢವಾಗಿ ಪ್ರೀತಿಸುತ್ತಿದ್ದರು ಎನ್ನುವುದಕ್ಕೊಂದು ಉದಾಹರಣೆ. ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಆ ಸಂಸ್ಥೆಯ ಮೂಲಕ ಅನೇಕ ಕಲಾವಿದರನ್ನು, ನಿರ್ದೇಶಕರನ್ನು ಪರಿಚಯಿಸಿದರು. ಒಂದರ್ಥದಲ್ಲಿ ರಾಜಕುಮಾರ ದೊಡ್ಡ ಆಲದಮರವಿದ್ದಂತೆ ಆ ಮರದ ಕೆಳಗೆ ನೆರಳು ಪಡೆದು ಬೆಳೆದ ಕಲಾವಿದರ ಸಂಖ್ಯೆ ಅದೆಷ್ಟೋ.......

ರಾಜ್ ಜನಪ್ರಿಯತೆಗೆ ಕಾರಣಗಳು 


          ರಾಜಕುಮಾರ ಅವರ ಜನಪ್ರಿಯತೆಗೆ ನಿರ್ಧಿಷ್ಟ ಕಾರಣಗಳನ್ನು ಕೊಡಲು ಸಾಧ್ಯವಿಲ್ಲ. ಅನೇಕ ಕಾರಣಗಳಿಂದ ಅವರೊಬ್ಬ ಜನಪ್ರಿಯ ನಟರಾದರು. ಅಭಿನಯ, ಸಂಭಾಷಣೆ ಹೇಳುವ ರೀತಿ, ಕಥಾವಸ್ತು, ಗಾಯನ, ಸಾಹಿತ್ಯ ಹೀಗೆ ಹೇಳುತ್ತ ಹೋದರೆ ಅನೇಕ ಕಾರಣಗಳು ಕಾಣಸಿಗುತ್ತವೆ. ರಾಜಕುಮಾರ ಅವರ ಜನಪ್ರಿಯತೆಗೆ ಸಂಬಂಧಿಸಿದಂತೆ ಯು. ಆರ್. ಅನಂತಮೂರ್ತಿ ಅವರು 'ರಾಜಕುಮಾರ ಅಭಿನಯದ ಅನೇಕ ಚಿತ್ರಗಳು ಮಧ್ಯಮ ವರ್ಗದ ಜನರ ಆಶೋತ್ತರಗಳು ಹಾಗೂ ಸಂದರ್ಭಗಳನ್ನು ಪ್ರತಿನಿಧಿಸುತ್ತಿದ್ದವು. ಆದ್ದರಿಂದಲೇ ಅವರು ಅನೇಕ ಜನರನ್ನು ತಲುಪಲು ಸಾಧ್ಯವಾಯಿತು' ಎಂದಿರುವರು. ಹೌದು ರಾಜಕುಮಾರ ಅವರ ಚಿತ್ರಗಳಲ್ಲಿ ವಿಲಾಸಿ ಬದುಕಿನ ಕಥೆಗಳಿರುತ್ತಿರಲಿಲ್ಲ. ಮಧ್ಯಮ ವರ್ಗದ ಜನರ ಬದುಕಿನ ಹೋರಾಟವೇ ಅವರ ಹೆಚ್ಚಿನ ಚಿತ್ರಗಳ ಕಥಾವಸ್ತುವಾಗಿದೆ. ತಾಯಿ, ತಂದೆ, ಸಹೋದರ, ಪತಿ, ಪತ್ನಿ, ಮಕ್ಕಳ ನಡುವಣ ಅನೋನ್ಯ ಸಂಬಂಧ ಅವರ ಚಿತ್ರಗಳಲ್ಲಿ ಹಾಸುಹೊಕ್ಕಾಗಿರುತ್ತಿತ್ತು. ಹೀಗಾಗಿ ಪ್ರೇಕ್ಷಕ ಕೇವಲ ಸಿನಿಮಾ ಎನ್ನುವ ದೃಷ್ಟಿಯಿಂದ ರಾಜಕುಮಾರ ಅಭಿನಯದ ಸಿನಿಮಾಗಳನ್ನು ನೋಡುತ್ತಿರಲಿಲ್ಲ. ಸಿನಿಮಾ ನೋಡುತ್ತ ಹೋದಂತೆ ಅದು ತನ್ನದೇ ಬದುಕಿನ ಕಥೆ ಎನ್ನುವಂತೆ ತಲ್ಲೀನನಾಗುತ್ತಿದ್ದ. ಒಂದು ಕುಟುಂಬದ ಸದಸ್ಯರೆಲ್ಲರೂ ಯಾವುದೇ ಮುಜುಗರವಿಲ್ಲದೆ ಒಟ್ಟಾಗಿ ಕುಳಿತು ನೋಡುವಂತಹ ಚಿತ್ರಗಳಿರುತ್ತಿದ್ದವು. ರಾಜಕುಮಾರ ಸಿನಿಮಾಗಳಲ್ಲಿ ಕನ್ನಡ ನಾಡಿನ ಮಣ್ಣಿನ ವಾಸನೆ ಇದೆ. ಅಲ್ಲಿ ರೈತರ ಸಂಕಷ್ಟಗಳಿವೆ, ಸಮಸ್ಯೆಗಳಿವೆ. ರೈತರ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ತಯಾರಾದ 'ಮಣ್ಣಿನ ಮಗ', 'ಚೆಂದವಳ್ಳಿಯ ತೋಟ' ಹಾಗೂ ರೈತನ ಶ್ರಮ ಮಾತು ಶ್ರೀಮಂತಿಕೆಯನ್ನು ಬಿಂಬಿಸುವ 'ಬಂಗಾರದ ಮನುಷ್ಯ' ಈ ಎಲ್ಲ ಚಿತ್ರಗಳು ಕನ್ನಡ ಚಿತ್ರರಂಗದ ಮೈಲಿಗಲ್ಲುಗಳಾಗಿವೆ. ಈ ಕಾರಣದಿಂದಲೇ ಕನ್ನಡ ಪ್ರೇಕ್ಷಕರನ್ನು ರಾಜಕುಮಾರ ಗಾಢವಾಗಿ ಆವರಿಸಿಕೊಂಡಷ್ಟು ಬೇರೆ ಕಲಾವಿದರಿಂದ ಸಾಧ್ಯವಾಗಲೇ ಇಲ್ಲ.

             ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳೂ ಸಹ ರಾಜಕುಮಾರ ಅವರ ಜನಪ್ರಿಯತೆಗೆ ಕಾರಣಗಳಾದವು. ರಾಜಕುಮಾರ ರಂಗಭೂಮಿಯ ನಟರಾಗಿದ್ದರಿಂದ ಅವರಿಗೆ ಪರಕಾಯ ಪ್ರವೇಶ ಸುಲಭವಾಯಿತು. ಅವರ ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳು ಇವತ್ತಿಗೂ ಕನ್ನಡ ಪ್ರೇಕ್ಷಕರ ನೆನಪಿನಲ್ಲಿ ಅಚ್ಚಳಿಯದೆ ಉಳಿದಿವೆ. ರಾಜಕುಮಾರ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಕಲಾವಿದರನ್ನು ರಾಮ, ಕೃಷ್ಣ, ಅರ್ಜುನ, ಕೃಷ್ಣದೇವರಾಯ, ಭಕ್ತ ಕುಂಬಾರ, ಕಾಳಿದಾಸ ಇತ್ಯಾದಿ ಪಾತ್ರಗಳಲ್ಲಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎನ್ನುವಂತೆ ಅವರು ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳಿಗೆ ಅನಿವಾರ್ಯವಾಗಿದ್ದರು. ರಾಜಕುಮಾರ ಅವರ ಶರೀರ ಮತ್ತು ಶಾರೀರ ಈ ಪ್ರಕಾರದ ಪಾತ್ರಗಳಿಗೆ ಹೊಂದಿಕೊಳ್ಳುತ್ತಿತ್ತು ಎನ್ನುವುದು ಅವರ ಜನಪ್ರಿಯತೆಗೆ ಒಂದು ಪ್ರಬಲ ಕಾರಣವಾಗಿತ್ತು. ರಾಜಕುಮಾರ ಸಮಕಾಲಿನ ನಾಯಕ ನಟರುಗಳೆಲ್ಲ ತಮ್ಮ ದೇಹ ತೂಕವನ್ನು ಹೆಚ್ಚಿಸಿಕೊಂಡು ಪೋಷಕ ಪಾತ್ರಗಳೆಡೆ ಹೊರಳಬೇಕಾದ  ಪರಿಸ್ಥಿತಿ ತಲೆದೊರಿತು. ಯೋಗದ ಮೂಲಕ ತಮ್ಮ ಅಂಗ ಸೌಷ್ಟವವನ್ನು ಕಾಪಾಡಿಕೊಂಡು ಬಂದ ರಾಜಕುಮಾರ ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದರು. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚಿನ ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ ಹೆಗ್ಗಳಿಕೆ ಅವರದು. ಅಭಿನಯದ ಜೊತೆಗೆ ದೈಹಿಕ ಸೌಂದರ್ಯವೂ ಅವರ ಜನಪ್ರಿಯತೆಗೆ ಕಾರಣವಾಯಿತು. ಯಾವುದೇ ಒಂದು ಪಾತ್ರಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಪೌರಾಣಿಕ, ಐತಿಹಾಸಿಕ, ಭಕ್ತಿ ಪ್ರಧಾನ, ಸಾಮಾಜಿಕ ಹೀಗೆ ವಿವಿಧ ಬಗೆಯ ಪಾತ್ರಗಳಲ್ಲಿ ಅಭಿನಯಿಸಿದರು. ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ್ದರಿಂದಲೇ ರಾಜಕುಮಾರ ಎಲ್ಲ ವರ್ಗದ ಪ್ರೇಕ್ಷಕರು ಮೆಚ್ಚುವಂತ ನಟನಾಗಿ ರೂಪಗೊಂಡರು.

ರಾಜಕುಮಾರ ಮತ್ತು ಕನ್ನಡ ಪ್ರೇಮ 


               ಕರ್ನಾಟಕ ರಾಜ್ಯ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ರಾಜಕುಮಾರ ಚಿತ್ರರಂಗವನ್ನು ಪ್ರವೇಶಿಸಿದ ಐವತ್ತು ವರ್ಷಗಳ ನೆನಪಿಗಾಗಿ ಸಾರ್ಥಕ ಸುವರ್ಣವನ್ನು ಆಚರಿಸಲಾಯಿತು. ೫೦ ವರ್ಷಗಳವರೆಗೆ ರಾಜಕುಮಾರ ತಮ್ಮ ಸಿನಿಮಾಗಳ ಮೂಲಕ ಕನ್ನಡ ಭಾಷೆಯನ್ನು ಮನೆ ಮನೆಗೂ ಕೊಂಡೊಯ್ದರು. ಒಂದರ್ಥದಲ್ಲಿ ಅವರ ಚಿತ್ರಗಳು ಅನಕ್ಷರಸ್ಥರನ್ನೂ ಅಕ್ಷರಸ್ಥರನ್ನಾಗಿಸಿದವು ಎನ್ನುವ ಮಾತಿನಲ್ಲಿ ಸತ್ಯವಿದೆ. ತಮ್ಮ ಐವತ್ತು ವರ್ಷಗಳ ಚಿತ್ರ ಜೀವನದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅಪಚಾರವಾಗದಂತೆ ಅಭಿನಯಿಸಿದರು. ಅವರ ಪ್ರತಿಯೊಂದು ಚಿತ್ರದಲ್ಲಿ ಕನ್ನಡ ಭಾಷೆಯ ಪ್ರೇಮ ಹಾಡು ಇಲ್ಲವೇ ಸಂಭಾಷಣೆ ರೂಪದಲ್ಲಿ ಬೆಳ್ಳಿತೆರೆಯ ಮೇಲೆ ವಿಜೃಂಭಿಸುತ್ತಿತ್ತು. ಜೊತೆಗೆ ರಾಜಕುಮಾರ ರೀಮೇಕ್ ಸಿನಿಮಾಗಳ ಪ್ರಬಲ ವಿರೋಧಿಯಾಗಿದ್ದರು. ಕನ್ನಡ ಭಾಷೆಯಲ್ಲೇ ಅನೇಕ ಉತ್ತಮ ಕಥೆಗಾರರಿರುವಾಗ ಬೇರೆ ಭಾಷೆಯ ಸಿನಿಮಾ ಕಥೆಗಳನ್ನು ತಂದು ಚಿತ್ರ ತಯ್ಯಾರಿಸುವುದು ಅವರಿಗೆ ಇಷ್ಟವಿರಲಿಲ್ಲ. ಅನೇಕ ಕಾದಂಬರಿ ಆಧಾರಿತ ಸಿನಿಮಾಗಳಲ್ಲಿ ನಟಿಸಿ ಬೆಳ್ಳಿತೆರೆಯ ಮೂಲಕ ಕಾದಂಬರಿಗಳನ್ನು ಸಾಮಾನ್ಯ ಪ್ರೇಕ್ಷಕನಿಗೂ ಪರಿಚಯಿಸಿದ ಕೀರ್ತಿ ರಾಜಕುಮಾರ ಅವರಿಗೆ ಸಲ್ಲುತ್ತದೆ.

               ಗೋಕಾಕ ಚಳುವಳಿಯ ಯಶಸ್ಸು ರಾಜಕುಮಾರ ಅವರ ಕನ್ನಡ ಪ್ರೇಮಕ್ಕೊಂದು ಅತ್ಯುತ್ತಮ ಉದಾಹರಣೆ. ಕನ್ನಡ ಭಾಷೆಗೆ ಸಂಬಂಧಿಸಿದಂತೆ ಗೋಕಾಕ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವಂತೆ ಸರ್ಕಾರವನ್ನು ಒತ್ತಾಯಿಸಲು ಕನ್ನಡ ಸಾಹಿತಿಗಳೆಲ್ಲ ಚಳುವಳಿಗೆ ಮುಂದಾದರು. ಆದರೆ ಆ ಸಂದರ್ಭ ಅವರುಗಳ ಮುಂದಿದ್ದ ಪ್ರಶ್ನೆ ಜನರನ್ನು ಹೇಗೆ ಒಂದುಗೂಡಿಸುವುದು ಎನ್ನುವುದಾಗಿತ್ತು. ಆಗ ಕನ್ನಡ ಹೋರಾಟಗಾರರಿಗೆ ಗೋಚರಿಸಿದ್ದು ರಾಜಕುಮಾರ ಅವರ ಹೆಸರು. ಏಕೆಂದರೆ ಅವರಿಗೆ ಜನರನ್ನು ಆಕರ್ಷಿಸುವ ಶಕ್ತಿಯಿತ್ತು. ಜೊತೆಗೆ ಚಳುವಳಿಯ ಮುಂದಾಳತ್ವವಹಿಸುವ ನಾಯಕನ ಗುಣ ಅವರಲ್ಲಿತ್ತು. ಜನರ ಕರೆಗೆ ಓಗೊಟ್ಟ ರಾಜಕುಮಾರ ಚಳುವಳಿಗೆ ಧುಮುಕಿದರು. ನ ಭೂತೋ ನ ಭವಿಷ್ಯತಿ ಎನ್ನುವಂತೆ ಚಳುವಳಿ ಯಶಸ್ವಿಯಾಯಿತು. ರಾಜಕುಮಾರ ಹೋದಲ್ಲೆಲ್ಲ ಲಕ್ಷಾಂತರ ಜನ ಕೂಡಿದರು. ನಾಡಿನ ಮೂಲೆ ಮೂಲೆಗೂ ಹೋದ ಚಳುವಳಿಗಾರರು ಕನ್ನಡ ಪ್ರೇಮವನ್ನು ಜಾಗೃತಗೊಳಿಸಿದರು. ರಾಜಕುಮಾರ ಅವರ ಹಿಂದೆ ಇಡೀ ಕನ್ನಡ ಚಿತ್ರರಂಗವೇ ಬೆಂಗಾವಲಾಗಿ ನಿಂತಿತ್ತು. ಚಳುವಳಿಯ ತೀವೃತೆಗೆ ಮಣಿದ ಸರ್ಕಾರ ಗೋಕಾಕ ಸಮೀತಿಯಲ್ಲಿನ ಎಲ್ಲ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಭರವಸೆ ನೀಡಿತು. ಇದು ನಡೆದದ್ದು ೧೯೮೨ ರಲ್ಲಿ. ಆಗ ರಾಜಕುಮಾರ ಚಿತ್ರರಂಗವನ್ನು ಪ್ರವೇಶಿಸಿ ಇಪ್ಪತ್ತೈದು ವರ್ಷಗಳಾಗಿದ್ದವು. ೨೦೦೬ ರಲ್ಲಿ ಗೋಕಾಕ ಚಳುವಳಿಯ ರಜತ ಮಹೋತ್ಸವದ ಸಂಭ್ರಮದ ಸಂದರ್ಭದಲ್ಲಿ ಚಳುವಳಿಯ ಯಶಸ್ಸಿಗೆ ಕಾರಣರಾದ ರಾಜಕುಮಾರ ನಮ್ಮೊಡನೆ ಇಲ್ಲದಿದ್ದದ್ದು ವಿಷಾದದ ಸಂಗತಿ.

            ಕಾವೇರಿ ನದಿ ನೀರಿನ ವಿಷಯದಲ್ಲಿ ರೈತರಿಗೆ ಅನ್ಯಾಯವಾದಾಗ, ಪರಭಾಷಾ ಸಿನಿಮಾಗಳ ಹಾವಳಿ ತಡೆಗಟ್ಟಲು, ಸಿನಿಮಾ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಲು, ಅನ್ಯ ಭಾಷೆಯ ಚಿತ್ರಗಳನ್ನು ಪ್ರದರ್ಶಿಸುವ ಸಿನಿಮಾ ಮಂದಿರಗಳ ಮಾಲೀಕರ ವಿರುದ್ಧ ಹೀಗೆ ಅನೇಕ ಹೋರಾಟಗಳಲ್ಲಿ ರಾಜಕುಮಾರ ಮುಂದಾಳತ್ವ ವಹಿಸಿದ್ದರು. ಕನ್ನಡಕ್ಕೆ ಅನ್ಯಾಯವಾದಾಗಲೆಲ್ಲ ಕನ್ನಡ ಪರ ಧ್ವನಿ ಎತ್ತಿರುವರು.

ಅಸಾಮಾನ್ಯನಾಗಿಯೂ ಸಾಮಾನ್ಯ 


              ರಾಜಕುಮಾರ ಅವರದು ಅಸಾಮಾನ್ಯ ವ್ಯಕ್ತಿತ್ವ. ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ. ಒಂದರ್ಥದಲ್ಲಿ ಅವರದು ದೈತ್ಯ ಪ್ರತಿಭೆ. ಅನೇಕ ಪ್ರಶಸ್ತಿಗಳನ್ನು ಪಡೆದು ಹಲವು ಪುರಸ್ಕಾರಗಳಿಗೆ ಭಾಜನರಾದ ಅಭಿಜಾತ ಕಲಾವಿದ. ಆದರೆ ರಾಜಕುಮಾರ ಎಂದೂ ತಾನೊಬ್ಬ ಸೂಪರ್ ಸ್ಟಾರ್ ಎಂದು ವರ್ತಿಸಲಿಲ್ಲ. ಅಸಾಮಾನ್ಯನಾಗಿಯೂ ಒಬ್ಬ ಸಾಮಾನ್ಯನಂತೆ ಬದುಕಿದರು. ಸಿನಿಮಾ ಬದುಕಿನ ಥಳಕು ಬಳುಕಿನ ನಡುವೆ ಇದ್ದೂ ತೀರ ಸರಳವಾಗಿ ಬದುಕಿದ ಅಪರೂಪದ ಕಲಾವಿದ. ಒಂದೆರಡು ಸಿನಿಮಾಗಳಲ್ಲಿ ನಟಿಸಿದ ಮಾತ್ರಕ್ಕೆ ತಾನೊಬ್ಬ ಮಹಾನ್ ಕಲಾವಿದ ಎಂದು ವರ್ತಿಸುವವರಿಗೆ ರಾಜಕುಮಾರ ಬದುಕು ಒಂದು ನೀತಿ ಪಾಠ. ಅದೊಂದು ಆದರ್ಶ. ರಾಜಕುಮಾರ ಯಾವತ್ತೂ ವಿಲಾಸಿ ಜೀವನಕ್ಕೆ ಮಾರು ಹೋದವರಲ್ಲ. ತೀರ ಸರಳ ಜೀವನ ನಡೆಸಿದ್ದರಿಂದಲೇ ೧೦೮ ದಿನಗಳವರೆಗೆ ನರರಾಕ್ಷಸ ವೀರಪ್ಪನ್ ಸೆರೆಯಲ್ಲಿದ್ದು ನಾಡಿಗೆ ಹಿಂತಿರುಗಿ ಬರಲು ಸಾಧ್ಯವಾಯಿತು.

            ನೆರೆಯ ರಾಜ್ಯಗಳಲ್ಲಿ ಎಮ್. ಜಿ. ರಾಮಚಂದ್ರನ್, ಎನ್. ಟಿ. ರಾಮರಾವ, ಜಯಲಲಿತಾ ಇವರೆಲ್ಲ ಸಿನಿಮಾದಿಂದ ದೊರೆತ ಯಶಸ್ಸಿನಿಂದಲೇ ರಾಜಕೀಯವನ್ನು ಪ್ರವೇಶಿಸಿ ಕೊನೆಗೆ ಮುಖ್ಯ ಮಂತ್ರಿಯೂ ಆದರು. ಕರ್ನಾಟಕದಲ್ಲಿ ರಾಜಕುಮಾರ ಅವರಿಗೆ ಖಂಡಿತವಾಗಿಯೂ ಆ ಅವಕಾಶವಿತ್ತು. ಮನಸ್ಸು ಮಾಡಿದ್ದರೆ ಅವರು ರಾಜ್ಯದ ಮುಖ್ಯ ಮಂತ್ರಿಯಾಗಬಹುದಿತ್ತು. ಆದರೆ ಅವರೆಂದೂ ರಾಜಕೀಯದ ವ್ಯಾಮೋಹಕ್ಕೆ ಸಿಲುಕಲಿಲ್ಲ. ಅಭಿನಯದಲ್ಲೇ ತೃಪ್ತಿ ಕಂಡರು. ಈ ಕಾರಣದಿಂದಲೇ ರಾಜಕುಮಾರ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದರು.

         ರಾಜಕುಮಾರ ಅವರ ತಾರಾ ಮೌಲ್ಯ ಅವರು ಅಭಿನಯಿಸುವುದನ್ನು  ಬಿಟ್ಟ ನಂತರವೂ ಕಡಿಮೆಯಾಗಿರಲಿಲ್ಲ ಎನ್ನುವುದಕ್ಕೆ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಜನಸಮೂಹವೇ ಸಾಕ್ಷಿ. ಸರ್ಕಾರ ಕಂಠೀರವ ಸ್ಟುಡಿಯೋದ ಆವರಣದಲ್ಲಿ ಅಂತ್ಯಸಂಸ್ಕಾರಕ್ಕೆ ಸ್ಥಳ ಒದಗಿಸಿ ಮೇರು ನಟನಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಿತು. ಏಕೆಂದರೆ ಸ್ಟುಡಿಯೋ ಕಲಾವಿದನ ಕರ್ಮಭೂಮಿ. ಆದರೆ ಸರ್ಕಾರದ ಪ್ರಯತ್ನ ಇಷ್ಟಕ್ಕೆ ನಿಲ್ಲಬಾರದು. ರಾಜಕುಮಾರ ಹೆಸರಿನಲ್ಲಿ ಸ್ಮಾರಕ ನಿರ್ಮಾಣವಾಗಬೇಕು. ಅವರ ಚಿತ್ರ ಜೀವನವನ್ನು ಪರಿಚಯಿಸುವ ಸಿನಿಮಾ ಸಂಪುಟ ಪ್ರಕಟವಾಗಬೇಕು. ಪ್ರತಿ ವರ್ಷದ ಎಪ್ರಿಲ್ ತಿಂಗಳಲ್ಲಿ ರಾಜಕುಮಾರ ಚಿತ್ರಗಳ ಕುರಿತು ವಿಚಾರ ಸಂಕಿರಣ ಹಾಗೂ ಅವರ ಅಭಿನಯದ ಚಿತ್ರಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಬೇಕು. ಸಿನಿಮಾ ರಂಗದಲ್ಲಿ ಐವತ್ತು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಎಪ್ಪತ್ತೇಳು ವಸಂತಗಳ ಸಾರ್ಥಕ ಬದುಕು ಬದುಕಿದ ಆ ಹಿರಿಯ ಜೀವ ಚಿರಕಾಲ ನೆನಪಿನಲ್ಲುಳಿಯಬೇಕು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Sunday, April 14, 2013

ಹಿಂದುಳಿದವರನ್ನು ತುಳಿಯುತ್ತಿರುವವರು ಯಾರು?

       


    

         ೨೦೧೨-೧೩ ನೇ ಸಾಲಿನಿಂದ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸುವ ವಿಧಾನವನ್ನು ಜಾರಿಗೆ ತಂದಿದೆ. ಈ ಮೊದಲು ಮುದ್ರಿತ ಅರ್ಜಿಯನ್ನು ಸಲ್ಲಿಸುವ ಪದ್ಧತಿ ಬಳಕೆಯಲ್ಲಿದ್ದುದ್ದರಿಂದ ಹೊಸ ವಿಧಾನದ ಪರಿಣಾಮ ವಿದ್ಯಾರ್ಥಿಗಳಿಗೆ ಅರ್ಜಿಸಲ್ಲಿಸಲು ವಿಳಂಬವಾಗುವುದರ ಜೊತೆಗೆ ತೊಂದರೆ ಸಹ ಆಗುತ್ತಿದೆ. ಅದೆಷ್ಟೋ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಹೇಗೆ ಸಲ್ಲಿಸಬೇಕೆಂದು ತಿಳಿಯದೆ ನನ್ನನ್ನು ಸಹಾಯಕ್ಕಾಗಿ ಸಂಪರ್ಕಿಸಿದ್ದುಂಟು. ಸುಮಾರು ಹತ್ತಕ್ಕಿಂತ ಹೆಚ್ಚಿನ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸುವಾಗ ನನ್ನನ್ನು ಅಚ್ಚರಿಗೊಳಿಸಿದ ಸಂಗತಿ ಎಂದರೆ ಆ ಯಾವೊಬ್ಬ ವಿದ್ಯಾರ್ಥಿಯೂ ಬಡತನದ ಹಿನ್ನೆಲೆಯಿಂದ ಬಂದವರಾಗಿರಲಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಎಂಟರಿಂದ ಹತ್ತು ಲಕ್ಷ ರುಪಾಯಿಗಳನ್ನು ಮೀರುತ್ತಿತ್ತು. ಆ ಎಲ್ಲ ವಿದ್ಯಾರ್ಥಿಗಳ ಪೋಷಕರು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಸಂಗತಿ ನನ್ನನ್ನು ಇನ್ನಷ್ಟು ಅಚ್ಚರಿಗೊಳಿಸಿತು. ಇನ್ನೂ ವಿಶೇಷವೆಂದರೆ ಅವರಲ್ಲಿನ ಕೆಲ ವಿದ್ಯಾರ್ಥಿಗಳ ಪೋಷಕರು ತಮ್ಮ ಕೆಲಸಕ್ಕೆ ಒಂದೆರಡು ದಿನಗಳ ರಜೆ ಪಡೆದು ಮಕ್ಕಳ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಬಂದಿದ್ದರು. ಸರ್ಕಾರಿ ಕೆಲಸ, ಉನ್ನತ ಹುದ್ದೆ, ಕೈತುಂಬ ಸಂಬಳ ಹೀಗಿದ್ದೂ ಅವರುಗಳು ಸರ್ಕಾರದಿಂದ ವಿದ್ಯಾರ್ಥಿ ವೇತನ ಪಡೆಯಲು ಪಡುತ್ತಿದ್ದ ಪರಿಪಾಟಲು ನೋಡಿ ನಿಜಕ್ಕೂ ಹಿಂದುಳಿದ ವರ್ಗದವರನ್ನು ಕೈ ಹಿಡಿದೆತ್ತಿ ಮುಖ್ಯ ವಾಹಿನಿಗೆ ತಂದು ನಿಲ್ಲಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನ ಅದರ ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎನ್ನುವ ಪ್ರಶ್ನೆ ಆ ಕ್ಷಣ ನನ್ನಲ್ಲಿ ಮೂಡಿತು. 

            ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೆ ತಂದ ಈ ಮೀಸಲಾತಿ ಎನ್ನುವ ಯೋಜನೆ ಅದು ಹೇಗೆ ದುರ್ಬಳಕೆಯಾಗುತ್ತಿದೆ ಎನ್ನುವುದನ್ನು ಒಂದು ಉದಾಹರಣೆಯೊಂದಿಗೆ ಹೀಗೆ ವಿವರಿಸಬಹುದು. ನನ್ನೂರಿನ ಮೋಹನ ಮತ್ತು ಶ್ರೀನಿವಾಸ ಇವರಿಬ್ಬರೂ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು. ಮೋಹನನ ತಂದೆ ಮತ್ತು ತಾಯಿ ಇಬ್ಬರೂ ಸರ್ಕಾರಿ ಇಲಾಖೆಯಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದು ಸಾಕಷ್ಟು ಸ್ಥಿತಿವಂತರೂ ಹೌದು. ಶ್ರೀನಿವಾಸ ತಂದೆ ಊರಿನ ಶ್ರೀಮಂತರ ಹೊಲಗಳಲ್ಲಿ ದಿನಗೂಲಿಯಾಗಿ ದುಡಿಯುತ್ತಿದ್ದು ದಿನದ ದುಡಿಮೆಯೇ ಅವನ ಕುಟುಂಬಕ್ಕೆ ಆಧಾರ. ಪರಿಸ್ಥಿತಿ ಹೀಗಿರುವಾಗ ಮೋಹನ ಮತ್ತು ಶ್ರೀನಿವಾಸ ಇವರಿಬ್ಬರೂ ವೈದ್ಯಕೀಯ ವಿಜ್ಞಾನದ ಪ್ರವೇಶ ಪರೀಕ್ಷೆಗೆ ಕುಳಿತು ಕ್ರಮವಾಗಿ ೬೭೧೦ ಮತ್ತು ೬೭೧೨ Rank ನೊಂದಿಗೆ ತೇರ್ಗಡೆಯಾದರು. ವಿಪರ್ಯಾಸವೆಂದರೆ ಆ ವರ್ಷ ಪರಿಶಿಷ್ಟ ಜಾತಿಯ ಕೋಟಾದಡಿ ವೈದ್ಯಕೀಯ ಕೋರ್ಸಿನ ಪ್ರವೇಶ ೬೭೧೦ Rank ಗೆ ಸೀಮಿತಗೊಂಡಿತು. ಸಹಜವಾಗಿಯೇ ಮೋಹನನಿಗೆ ರಾಜ್ಯ ಸರ್ಕಾರದ ಸಿಇಟಿ ಮೂಲಕ ರಾಜ್ಯದ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ದೊರೆಯಿತು. ಕೇವಲ ಎರಡು Rank ಹಿಂದೆ ಇದ್ದ ಶ್ರೀನಿವಾಸ ಅಂಥದ್ದೊಂದು ಅವಕಾಶದಿಂದ ವಂಚಿತನಾದ. ಶ್ರೀನಿವಾಸ ಪರಿಶಿಷ್ಟ ಜಾತಿಗೆ ಸೇರಿದ್ದು, ಆರ್ಥಿಕವಾಗಿ ಹಿಂದುಳಿದವನಾಗಿದ್ದು ಮತ್ತು ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅರ್ಹತೆ ಹೊಂದಿದ್ದರೂ ಕೂಡ ಆತನಿಗೆ ವೈದ್ಯಕೀಯ ಕೋರ್ಸಿಗೆ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಮೋಹನನ ಪೋಷಕರು ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಆರ್ಥಿಕವಾಗಿ ಸ್ಥಿತಿವಂತರಾಗಿದ್ದಾಗೂ ಪರಿಶಿಷ್ಟ ಜಾತಿ ಎನ್ನುವ ಕಾರಣಕ್ಕೆ ಆತನಿಗೆ ಸುಲಭವಾಗಿ ಪ್ರವೇಶ ದೊರೆಯಿತು. ಮೋಹನ ಮತ್ತು ಶ್ರೀನಿವಾಸ ಈ ಇಬ್ಬರೂ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ಇಲ್ಲಿ ಯಾವ ವಿದ್ಯಾರ್ಥಿಗೆ ಮೀಸಲಾತಿಯಡಿ ಪ್ರವೇಶ ದೊರೆಯಬೇಕಿತ್ತು ಎನ್ನುವ ತರ್ಕ ಎದುರಾಗುತ್ತದೆ. ಆರ್ಥಿಕವಾಗಿ ಸ್ಥಿತಿವಂತನಾದ ಮೋಹನ ಹಿಂದುಳಿದ ಜಾತಿ ಎನ್ನುವ ಒಂದೇ ಕಾರಣದಿಂದ ತನ್ನದೇ ಜಾತಿಯ ಇನ್ನೊಬ್ಬ ಅರ್ಹ ವಿದ್ಯಾರ್ಥಿಯ ಅವಕಾಶವನ್ನು ಕಸಿದುಕೊಳ್ಳುವುದು ಸರಿಯಾದ ಕ್ರಮವೇ? ಮೀಸಲಾತಿಯಡಿ ಸೌಲಭ್ಯವನ್ನು ನೀಡುವಾಗ ವಿದ್ಯಾರ್ಥಿಯ ಆರ್ಥಿಕ ಸ್ಥಿತಿಯನ್ನೂ ಪರಿಗಣಿಸುವ ನಿಯಮಗಳು ಜಾರಿಗೆ ಬಂದಲ್ಲಿ ಮೀಸಲಾತಿಗೆ ಅರ್ಹರಾದವರು ಅವಕಾಶ ಪಡೆಯುವ ಸಾಧ್ಯತೆ ಹೆಚ್ಚುತ್ತದೆ. 

        ಹಿಂದುಳಿದ ವರ್ಗದವರ ಮೀಸಲಾತಿ ವಿಷಯದಲ್ಲಿ ಈ ಮೇಲೆ ಹೇಳಿದಂಥ ಅಸಂಗತ ಘಟನೆಗಳು ಪುನರಾವರ್ತನೆಯಾಗುತ್ತಲೇ ಇವೆ. ಆರ್ಥಿಕವಾಗಿ ಸ್ಥಿತಿವಂತರಾಗಿರುವ ಹಿಂದುಳಿದ ವರ್ಗದವರು ಮೀಸಲಾತಿ ವಿಷಯವಾಗಿ ತಮ್ಮ ಹಕ್ಕನ್ನು ಚಲಾಯಿಸುತ್ತಿರುವುದು ಹಾಗೂ ಸರ್ಕಾರ ಯಾವುದೇ ಪ್ರತಿರೋಧ ತೋರದೆ ತನ್ನ ಅಂಗೀಕಾರದ ಮುದ್ರೆ ಒತ್ತುತ್ತಿರುವುದು ದುರದೃಷ್ಟಕರ ಸಂಗತಿ. ಈ ಸಂದರ್ಭದಲ್ಲಿ ನಾಡಿನ ಹಿರಿಯ ಸಾಹಿತಿ ಡಾ.ಚೆನ್ನಣ್ಣ ವಾಲಿಕಾರ ಅವರು ಹೇಳಿದ ಮಾತು ಪ್ರಸ್ತುತ ವ್ಯವಸ್ಥೆಯ ದುರಂತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸಂದರ್ಶನವೊಂದರಲ್ಲಿ ಅವರು ಮಾತನಾಡುತ್ತ ಹೀಗೆ ಹೇಳಿರುವರು 'ಇವತ್ತು ಅಸ್ಪೃಶ್ಯರೆಂದು ಕರೆಯುವ ಹಿಂದುಳಿದ ವರ್ಗದವರು ಯಾವ ಮೇಲ್ವರ್ಗದವರೊಂದಿಗೂ ಹೋರಾಟ ಮಾಡಬೇಕಾಗಿಲ್ಲ. ಅವರು ನಿಜವಾಗಿಯೂ ಹೋರಾಟ ಮಾಡಬೇಕಾಗಿರುವುದು ತಮ್ಮದೇ ವರ್ಗದ ಸ್ಥಿತಿವಂತರೊಂದಿಗೆ'. 

       ಭಾರತದ ಸಂವಿಧಾನದ ೧೫ (೪) ನೇ ವಿಧಿಯಲ್ಲಿ ಮೀಸಲಾತಿ ಕುರಿತು ಹೀಗೆ ಉಲ್ಲೇಖಿಸಲಾಗಿದೆ 'The state shall promote with special care the educational and economic interests of the weaker sections of society and shall protect them from social injustice and all forms of exploitation'. ಮೀಸಲಾತಿ ಕಾಯ್ದೆಯಡಿ ನಿಜವಾಗಿಯೂ ಅವಕಾಶ ಪಡೆಯಬೇಕಾದವರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗದವರು. ಆ ಮೂಲಕ ಸಾಮಾಜಿಕ ಅಸಮಾನತೆ ಎನ್ನುವ ತಾರತಮ್ಯ ಹೋಗಲಾಡಬೇಕು. ಪ್ರಸ್ತುತ ಸಂದರ್ಭದಲ್ಲಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರೆದ ಆದರೆ ಜಾತಿಯಲ್ಲಿ ಹಿಂದುಳಿದ ವರ್ಗದವರು ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿರುವುದು ನ್ಯಾಯ ಸಮ್ಮತವಲ್ಲ. 
    
        ಅಸ್ಪೃಶ್ಯತಾ ವಿರೋಧಿ ಹೋರಾಟದಲ್ಲಿ ಸದಾ ಕಾಲ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ನಮ್ಮ ಹಿಂದುಳಿದ ವರ್ಗದ ಸಾಹಿತಿಗಳು, ಹೋರಾಟಗಾರರು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಪ್ರಭೃತಿಗಳು ಈ ಮೀಸಲಾತಿ ವಿಷಯದಲ್ಲಿ ಆಗುತ್ತಿರುವ ಅನ್ಯಾಯವನ್ನು ನೋಡಿಯೂ ಕಣ್ಮುಚ್ಚಿಕುಳಿತು ಕೊಂಡಿರುವುದು ಅಸ್ಪೃಶ್ಯತಾ ನಿರ್ಮೂಲನಾ ಹೋರಾಟದ ಬಹುದೊಡ್ಡ ಸೋಲು. ಜೊತೆಗೆ ಅವರೆಲ್ಲ ಅಂಥದ್ದೊಂದು ಯೋಜನೆಯ ಫಲಾನುಭವಿಗಳಾಗಿರುವುದರಿಂದ ವಿರೋಧಿಸುವ ನೈತಿಕ ತಾಕತ್ತು ಅವರಲ್ಲಿಲ್ಲ. ಹೊಡಿ, ಬಡಿ ಎಂದು ಬರೆದು ಹೋರಾಟದ ಕಿಚ್ಚನ್ನು ಹಚ್ಚುವ ಬಂಡಾಯ ಮನೋಭಾವದ ನಮ್ಮ ಹಿಂದುಳಿದ ವರ್ಗದ ಅತ್ಯಂತ ಸುಶಿಕ್ಷಿತ ನಾಯಕರುಗಳು ತಮ್ಮದೇ ವರ್ಗದ ಆರ್ಥಿಕ ದುರ್ಬಲರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಅವರೆಂದೂ ಧ್ವನಿ ಎತ್ತಲಾರರು. ಹೀಗೆ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಎಲ್ಲರನ್ನೂ ಸಮಾಜದ ಮುಖ್ಯ ವಾಹಿನಿಗೆ ತಂದಲ್ಲಿ ಸಾಮಾಜಿಕ ಅಸಮಾನತೆ ತೊಲಗಿ ಮೀಸಲಾತಿ ಎನ್ನುವ ಹಾಲು ಕೊಡುವ ಕಾಮಧೇನು ಮಾಯವಾಗಬಹುದೆನ್ನುವ ಆತಂಕ ಅವರುಗಳನ್ನು ಕಾಡುತ್ತಿರಲೂಬಹುದು.

           ಇನ್ನು ಈ ಮೀಸಲಾತಿ  ವಿಷಯವಾಗಿ ಚರ್ಚಿಸುವಾಗ ಈ ಯೋಜನೆಯ ಉದ್ದೇಶ ಏನು ಎನ್ನುವ ಪ್ರಶ್ನೆ ಎದುರಾಗುತ್ತದೆ. ಇಂಥದ್ದೊಂದು ವ್ಯವಸ್ಥೆಯನ್ನು ಜಾರಿಗೆ ತಂದಿರುವುದರ ಹಿಂದೆ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಬೇಕೆನ್ನುವ ಪ್ರಾಮಾಣಿಕ ಪ್ರಯತ್ನವಿದೆ. ನಿಜಕ್ಕೂ ಅಂಥದೊಂದು ಪ್ರಯತ್ನ ಸ್ವಾಗತಾರ್ಹ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಿಂದುಳಿದ ವರ್ಗದವರಿಗೆ ಸೌಲಭ್ಯವನ್ನೋದಗಿಸಿದಲ್ಲಿ ಆರ್ಥಿಕವಾಗಿ ಸಬಲರಾಗಿ ಅವರು ಸಮಾಜದ ಮುಖ್ಯವಾಹಿನಿಗೆ ಬರುವುದರಿಂದ  ಈ  ಸಾಮಾಜಿಕ ಅಸಮಾನತೆ ಎನ್ನುವ ತಾರತಮ್ಯವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ. ಇವತ್ತು ಆರ್ಥಿಕವಾಗಿ  ಸಬಲರಾದ ಹಿಂದುಳಿದ ಸಮುದಾಯದವರೊಂದಿಗೆ ವ್ಯವಹರಿಸುವಾಗ ಮೇಲುವರ್ಗಕ್ಕೆ ಸೇರಿದ ಜನ ಹಿಂದಿನಂತೆ ಅಸ್ಪೃಶ್ಯರು ಎನ್ನುವ ಭಾವನೆಯಿಂದ ಕಾಣುತ್ತಿಲ್ಲ ಎನ್ನುವುದನ್ನು ನಾವು ತಾತ್ವಿಕವಾಗಿ ಒಪ್ಪಿಕೊಳ್ಳಲೇ ಬೇಕು. ಇಂಥದ್ದೊಂದು   ಬದಲಾದ ಮನಸ್ಥಿತಿಯನ್ನು ಗ್ರಾಮ ಮತ್ತು  ನಗರ ಪ್ರದೇಶಗಳೆರಡರಲ್ಲೂ ಕಾಣಬಹುದು. ಇದಕ್ಕೆಲ್ಲ ಮುಖ್ಯ ಕಾರಣ ಬದಲಾದ ಆರ್ಥಿಕ ಸ್ಥಿತಿ. ಹೀಗೆ ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಮೀಸಲಾತಿ ಸೌಲಭ್ಯದ ಅಗತ್ಯವಿದೆ ಎನ್ನುವುದು ವಾಸ್ತವವಾದರೆ ಈ ಸೌಲಭ್ಯ ಆರ್ಥಿಕವಾಗಿ ಹಿಂದುಳಿದ ಎಲ್ಲರಿಗೂ ದೊರೆಯಬೇಕೆನ್ನುವ ಮಾತಿನಲ್ಲಿ ಹುರುಳಿದೆ ಎಂದರ್ಥ. ಆರ್ಥಿಕವಾಗಿ ಹಿಂದುಳಿದವರನ್ನು ನಾವು ಎಲ್ಲ ಜಾತಿ ಸಮುದಾಯಗಳಲ್ಲಿ ಕಾಣಬಹುದು. ಆದ್ದರಿಂದ ಈ ಮೀಸಲಾತಿ ಸೌಲಭ್ಯ ಕೇವಲ ಪರಿಶಿಷ್ಟ ಜಾತಿ ಮತ್ತು  ವರ್ಗದ ವಿದ್ಯಾರ್ಥಿಗಳಿಗೆ ಸೀಮಿತವಾಗಿರದೆ ಅದು ಆರ್ಥಿಕವಾಗಿ ಹಿಂದುಳಿದ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ದೊರೆಯಬೇಕು. 
 

ಆಗಬೇಕಾದದ್ದೇನು 


೧. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ಆರ್ಥಿಕವಾಗಿ ಹಿಂದುಳಿದವರು ಮತ್ತು ಆರ್ಥಿಕವಾಗಿ ಸಬಲರನ್ನು ಗುರುತಿಸುವ   ಕೆಲಸಕ್ಕೆ ಸರ್ಕಾರದಿಂದ ಚಾಲನೆ ದೊರೆಯಬೇಕು.

೨. ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳ ಪಾಲಕರು ಸರ್ಕಾರಿ ನೌಕರರಾಗಿದ್ದಲ್ಲಿ ಅವರ ಮಕ್ಕಳಿಗೆ ಮೀಸಲಾತಿಯಡಿ ಯಾವುದೇ ಸೌಲಭ್ಯಗಳು ದೊರೆಯಕೂಡದು. ಈ ಮಾತು ಸರ್ಕಾರಿ ನೌಕರರಾಗದೆಯೂ ಆರ್ಥಿಕವಾಗಿ ಸ್ಥಿತಿವಂತರಾಗಿರುವ ಪಾಲಕರಿಗೂ ಅನ್ವಯಿಸಬೇಕು.

೩. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಎನ್ನುವುದು ಕುಟುಂಬವೊಂದರ ಪರಂಪರಾಗತವಾದ ಆಸ್ತಿಯಾಗಕೂಡದು. ಪ್ರತಿ ಹಿಂದುಳಿದ ವರ್ಗದ ಕುಟುಂಬಕ್ಕೆ ಈ ಮೀಸಲಾತಿ ಸೌಲಭ್ಯ ಒಂದು ನಿರ್ಧಿಷ್ಟ ಕಾಲಮಿತಿಯವರೆಗೆ ಸೀಮಿತವಾಗಿರಬೇಕು.

೪. ಕೆಲವೊಮ್ಮೆ ವಿದ್ಯಾರ್ಥಿಗಳು ಈ ಮೀಸಲಾತಿ ಸೌಲಭ್ಯವನ್ನು ಹೊಂದಿಯೂ ಶೈಕ್ಷಣಿಕ ಪ್ರಗತಿಯನ್ನು ಸಾಧಿಸದೆಯೂ ಹೋಗಬಹುದು. ಅಂಥ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಕೊಡಮಾಡುತ್ತಿರುವ ಮೀಸಲಾತಿ ಸೌಲಭ್ಯಗಳನ್ನು ಸ್ಥಗಿತಗೊಳಿಸಬೇಕು.

೫. ರಾಜಕೀಯ ಕ್ಷೇತ್ರದಲ್ಲೂ ಮೀಸಲಾತಿಯನ್ನು ಜಾರಿಗೆ ತಂದದ್ದು ಈಗ ಹೇಗೆ ಬಳಕೆಯಾಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ದರಿಂದ ಮೀಸಲಾತಿಯಡಿ ಸ್ಪರ್ಧಿಸ ಬಯಸುವ ಅಭ್ಯರ್ಥಿ ಆ  ಸೌಲಭ್ಯದಡಿ ಒಂದಕ್ಕಿಂತ ಹೆಚ್ಚು ಬಾರಿ ಸ್ಪರ್ಧಿಸುವ ಅವಕಾಶ ಇರಕೂಡದು. ಜೊತೆಗೆ ಈ ಮತಕ್ಷೇತ್ರದ ಮೀಸಲಾತಿ ಎನ್ನುವುದು ಅಪ್ಪನಿಂದ ಮಕ್ಕಳಿಗೆ ವರ್ಗಾವಣೆಯಾಗಬಾರದು.

೬. ಮೀಸಲು ಮತಕ್ಷೇತ್ರಗಳನ್ನು ಶಾಶ್ವತವಾಗಿ ಮೀಸಲಾಗಿಡುವ ಸಾಂಪ್ರದಾಯಿಕ ಪದ್ಧತಿ ಕೊನೆಗೊಳ್ಳಬೇಕು. ಈ ಮಾತು ಸಾಮಾನ್ಯ ಮತಕ್ಷೇತ್ರಗಳಿಗೂ ಅನ್ವಯಿಸಬೇಕು. ಕಾಲಕಾಲಕ್ಕೆ ಸಾಮಾನ್ಯ ಮತಕ್ಷೇತ್ರಗಳು ಮೀಸಲಾಗಿಯೂ ಮತ್ತು ಮೀಸಲು ಮತಕ್ಷೇತ್ರಗಳು ಸಾಮಾನ್ಯವಾಗಿಯೂ ಬದಲಾಗಬೇಕು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗದವರನ್ನು ರಾಜಕೀಯದ ಮುಖ್ಯವಾಹಿನಿಗೆ ತರಲು ಸಾಧ್ಯವಾಗುವುದು.

೭. ಜಾತಿ ಆಧಾರಿತ ಮೀಸಲಾತಿಗಿಂತ ಆರ್ಥಿಕವಾಗಿ ಹಿಂದುಳಿದವರಿಗೆ ಈ ಮೀಸಲಾತಿ ಸೌಲಭ್ಯವನ್ನು ಒದಗಿಸುವುದು ಉತ್ತಮ ಕಾರ್ಯ. ಏಕೆಂದರೆ ಆರ್ಥಿಕವಾಗಿ ಹಿಂದುಳಿಯುವಿಕೆಯು ಯಾವುದೇ ಒಂದು ನಿರ್ಧಿಷ್ಟ ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಸಮುದಾಯ ಜಾತಿಗಳಲ್ಲಿ ನಾವು ಆರ್ಥಿಕವಾಗಿ ಹಿಂದುಳಿದವರನ್ನು ಕಾಣುತ್ತೇವೆ. ಆದ್ದರಿಂದ ಶಿಕ್ಷಣ ಮತ್ತು ಉದ್ಯೋಗದ ಈ ಮೀಸಲಾತಿ  ಸೌಲಭ್ಯವನ್ನು  ಆರ್ಥಿಕವಾಗಿ ಹಿಂದುಳಿದವರಿಗೆ ಒದಗಿಸುವುದು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದಂತೆ.

ಕೊನೆಯ ಮಾತು 


          ಇನ್ನು ನಮ್ಮ ರಾಜಕಾರಣಿಗಳದು ಈ ಸಾಮಾಜಿಕ ಅಸಮಾನತೆ ಸದಾ ಕಾಲ ಜೀವಂತವಾಗಿರಲಿ ಎನ್ನುವ ವಾಂಛೆ. ಈ ಅಸಮಾನತೆ ಹೋಗಲಾಡಿದಲ್ಲಿ 'ವೋಟ್ ಬ್ಯಾಂಕ್'ನ್ನು ಸೃಷ್ಟಿಸಿಕೊಳ್ಳುವ ಸುವರ್ಣ ಅವಕಾಶವೊಂದು ಕೈತಪ್ಪಿ ಹೋಗಬಹುದೆನ್ನುವ  ಭೀತಿ ಅವರದು. ಅದಕ್ಕೆಂದೇ ಕೇವಲ ಹತ್ತು ವರ್ಷಗಳ ಕಾಲ ಹಿಂದುಳಿದ ವರ್ಗದವರಿಗೆ ಮೀಸಲಾತಿ ಸೌಲಭ್ಯ ಒದಗಿಸಿ ಅವರನ್ನು ಮುಖ್ಯ ವಾಹಿನಿಗೆ ತಂದು ನಿಲ್ಲಿಸಿ ಎಂದು ಹೇಳಿದ್ದ ಡಾ.ಅಂಬೇಡ್ಕರ್ ಅವರ ಮಾತನ್ನು ಕಳೆದ ಆರು ದಶಕಗಳಿಂದ ಅತ್ಯಂತ ಪ್ರಜ್ಞಾಪೂರ್ವಕವಾಗಿ ಅನುಸರಿಸಿಕೊಂಡು ಬರುತ್ತಿರುವರು. ಹಾಗಾದರೆ ಆರು ದಶಕಗಳಾದರೂ ಈ  ಮೀಸಲಾತಿ ಯೋಜನೆಯಡಿ ಹಿಂದುಳಿದ ವರ್ಗದವರನ್ನು ಸಂಪೂರ್ಣವಾಗಿ ಕೈಹಿಡಿದೆತ್ತುವ ಪ್ರಯತ್ನ ಯಶ ಕಾಣದೆ ಇರಲು ಕಾರಣಗಳಾದರೂ ಏನು? ಹುಡುಕುತ್ತ  ಹೊರಟರೆ ನನ್ನೂರಿನ ಮೋಹನ ಮತ್ತು ಶ್ರೀನಿವಾಸರ ಕಥೆ ಪ್ರತಿ ಊರಿನಲ್ಲೂ ತೆರೆದುಕೊಳ್ಳುತ್ತ ಹೋಗುತ್ತದೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Saturday, April 6, 2013

ಹನಿ ಹನಿಗಳ ಸಿಂಚನ

                                                                   ಬರೆದಿದ್ದೇನೆ ನಾನೂ 
                                                                   ಒಂದೆರಡು 
                                                                   ಹನಿಗವನ 
                                                                   ಬಿಟ್ಟಿಲ್ಲ 
                                                                   ಯಾರನ್ನೂ 
                                                                   ಆ ವ್ಯಸನ 

     ಸಾಹಿತ್ಯ ಪ್ರಕಾರದಲ್ಲಿ ಹನಿಗವನಗಳ ಮಹತ್ವವನ್ನು ಕಡೆಗಣಿಸುವಂತಿಲ್ಲ. ದಿನಕರ ದೇಸಾಯಿ, ಅ.ರಾ.ಮಿತ್ರ, ಡುಂಡಿರಾಜ, ಬಿ.ಆರ್.ಲಕ್ಷ್ಮಣರಾವ ಇನ್ನೂ ಅನೇಕ ಸಾಹಿತಿಗಳು ಹನಿಗವನ ಕ್ಷೇತ್ರದಲ್ಲಿ ಅದ್ಭುತವಾದದ್ದನ್ನು ಸಾಧಿಸಿರುವರು. ಹನಿಗವನದ ವ್ಯಾಮೋಹ ರಾಷ್ಟ್ರಕವಿ ಕುವೆಂಪು ಅವರನ್ನೂ ಕಾಡದೇ ಬಿಡಲಿಲ್ಲ. ತಮ್ಮ ಬರವಣಿಗೆಯ ಪ್ರಾರಂಭದ ದಿನಗಳಲ್ಲಿ ಕುವೆಂಪು ಅವರು ಕೂಡ ಕೆಲವು ಹನಿಗವನಗಳನ್ನು ರಚಿಸಿರುವರು. ಈ ದಿನಗಳಲ್ಲಿ ಯಾವದೇ ಪತ್ರಿಕೆಯನ್ನು ತೆಗೆದುಕೊಳ್ಳಿ ಅಲ್ಲಿ ಒಂದೆರಡಾದರೂ ಹನಿಗವನಗಳು ಕಣ್ಣಿಗೆ ಬೀಳುತ್ತವೆ. ಮೈ ಮನಗಳಿಗೆ ಕಚುಗುಳಿಯಿಕ್ಕುವ ಹನಿಗವನಗಳನ್ನು ಇಷ್ಟಪಡದೇ ಇರುವವರು ವಿರಳ. ಹೇಳಬೇಕಾದದ್ದನ್ನು ಸೀಮಿತ ಪದಗಳಲ್ಲಿ ಹೇಳುವ ಈ ಹನಿಗವನಗಳನ್ನು ಓದುವ ಓದುಗರ ಪಡೆಯೇ ಇದೆ.
       ನಾನು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಒಂದಿಷ್ಟು ಛೇಡಿಸುವ, ವ್ಯಂಗ್ಯವಾಡುವ, ವಿಡಂಬನೆ ಮಾಡುವ ಹನಿಗವನಗಳು ಇಲ್ಲಿವೆ. ಈ ಹನಿಗವನಗಳಲ್ಲಿನ ಒಂದೊಂದು ಹನಿ ನಿಮ್ಮ ಮೇಲೆ ತಂಪು ಸಿಂಚನಗೈದಲ್ಲಿ ಬರೆದ ನನಗೆ ಸಾರ್ಥಕ ಭಾವ. 

                                      ವಿಪರ್ಯಾಸ                                       ಜೀವನ ಪ್ರೀತಿ 

                                      ಪ್ರೀತಿ                                                  ಸಾಕು                             
                                      ಕುರುಡು                                              ಈ ಬದುಕು 
                                      ಎಂದನೊಬ್ಬ                                         ಎಂದವನೊಬ್ಬ ದೇವರಲ್ಲಿ 
                                      ಅದು                                                   ಮೊರೆಯಿಡುತ್ತಿದ್ದ 
                                      ಕಣ್ತೆರೆಸಿತು                                            ಈ ಬದುಕು 
                                      ಎಂದ ಇನ್ನೊಬ್ಬ                                      ಸಾಯದಿರಲಿ 


                                     ಕನ್ನಡದ ಕೊಲೆ                                      ಕನ್ನಡದ ಜಾತ್ರೆ 

                                     ಪರಭಾಷೆಗಳಿಗಿದೆ                                  ಕನ್ನಡದ ಜಾತ್ರೆಗೆ 
                                     ಇಲ್ಲಿ                                                    ನೂರೆಂಟು ವಿಘ್ನಗಳು 
                                     ನೆಲೆ ಬೆಲೆ                                             ಕಾಸು ಬಿಚ್ಚಲು ಮಾಡುವರು 
                                     ನಡೆಯುತ್ತಿದೆ                                         ಕಂಜೂಸು 
                                     ಕನ್ನಡದ                                               ವಿಶ್ವಸುಂದರಿ ಸ್ಪರ್ಧೆಗೆ 
                                     ಕೊಲೆ                                                  ಖರ್ಚು ಮಾಡಲು ಧಾರಾಳು 
                                                                                               ಆಗಬಹುದಲ್ಲ ವಿಶ್ವ 
                                                                                               ಫೇಮಸ್ಸು                                              
    

                                   ರಾಜ್ಯೋತ್ಸವ ಪ್ರಶಸ್ತಿ                                 ರಾಜಕೀಯ ಸಾಹಿತಿ 

                                    ಪರಿಷ್ಕೃತವಾಗುತ್ತದೆ ಪಟ್ಟಿ                          ನಮ್ಮ ಊರಲ್ಲೊಬ್ಬ ಸಾಹಿತಿ 
                                    ಹತ್ತು ಹಲವು ಸಲ                                     ದೊರೆಯಿತು ಆತನಿಗೂ ಪ್ರಶಸ್ತಿ 
                                    ರಾಜ್ಯೋತ್ಸವ ಪ್ರಶಸ್ತಿಗಾಗಿ                          ಸಾಹಿತ್ಯ ಭೂಷಣ 
                                    ಆಯ್ಕೆ ಮಾಡಬಹುದು                                ಬರೆದಿರುವನಾತ 
                                    ದಂತಚೋರನ ಹೆಸರು                               ಪುಟಗಟ್ಟಲೇ ಮಂತ್ರಿ ಮಹೋದಯರ 
                                    ಮರಣೋತ್ತರ ಪ್ರಶಸ್ತಿಗಾಗಿ                           ಭಾಷಣ 


                                                                       ಸಾಫ್ಟ್ ವೇರ್ ಬದುಕು  
                                                    
                                                                       ದಂಪತಿಗಳಿರ್ವರೂ 
                                                                       ಇಂಜಿನಿಯರ್ 
                                                                        ತಲೆ ತುಂಬ 
                                                                       ಸಾಫ್ಟ್ ವೇರ್ 
                                                                       ಮನೆ ತುಂಬ 
                                                                       ಹಾರ್ಡ್ ವೇರ್           
                                                                       ಶಾಂತಿ ನೆಮ್ಮದಿ  
                                                                       ನೋ ಮೊರ್ 
                                  

                                   ಹಂಡ್ರೆಡ್ ಕ್ರೋರ್                                            ವ್ಯತ್ಯಾಸ 
                                 
                                   ಸಚಿನ್                                                          ಡಾನ್ ಬ್ರಾಡ್ಮನ್ 
                                   ಆಟದಲ್ಲಿಲ್ಲ                                                      ಕ್ರಿಕೆಟ್ ನ 
                                   ಮೊದಲಿನ ಖದರ್                                            ದಂತ ಕಥೆ 
                                   ಏಕೆಂದರೆ                                                       ಈಗಿನವರದು 
                                   ಹೀ ಸೋಲ್ಡೌಟ್  ಫಾರ್                                     ಹಗರಣಗಳ 
                                   ಹಂಡ್ರೆಡ್ ಕ್ರೋರ್                                            ನೂರಾರು ಕಥೆ 


                                  ಕ್ರಿಕೆಟ್ ಭಾಷೆ                                                    ಡಾಲರ್ ಶತಕ 

                                  ತಡವಾಗಿ ಬಂದವನನ್ನು                                     ಅರವತ್ತು ಓವರ್ 
                                  ಕೇಳಿದ ಅಧಿಕಾರಿ                                               ಆಡಿ ಗವಾಸ್ಕರ್ 
                                  ಯಾಕೆ ಲೇಟು?                                                 ಗಳಿಸಿದ್ದು ಮೂವತ್ತಾರು 
                                  ಉತ್ತರಿಸಿದ ಭೂಪ                                             ಕೊಡುತ್ತಿರಲಿಲ್ಲ 
                                  ಬರುವಾಗ ಪಕ್ಕದ ಮನೆಯಲ್ಲಿ                              ಆಗ ಶತಕಕ್ಕೆ 
                                  ಬಿತ್ತೊಂದು ವಿಕೇಟು                                           ಸಾವಿರಾರು ಡಾಲರ್ರು 


                                                                     ಡಾ.ಅಬ್ದುಲ್ ಕಲಾಂ 

                                                                      ವ್ಯರ್ಥವಾಯಿತು 
                                                                      ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 
                                                                      ಭಾರತೀಯರೆಲ್ಲರ ಪ್ರಯತ್ನ 
                                                                      ಆಗಬೇಕಿತ್ತು 
                                                                      ಮತ್ತೊಮ್ಮೆ ರಾಷ್ಟ್ರಪತಿ 
                                                                      ಆ ಭಾರತ ರತ್ನ 


-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ