Thursday, September 10, 2020

ದೇವರ ಅಸ್ತಿತ್ವ ಮತ್ತು ನೈತಿಕ ಶ್ರದ್ಧೆ



(ದಿನಾಂಕ  ೨೫.೦೭.೨೦೨೦ ರ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)

        ಕೊರೊನಾ ಸೋಂಕು ಸೃಷ್ಟಿಸಿದ ಸಮಸ್ಯೆಯ ಬಿಸಿ ಮನುಷ್ಯರಿಗೆ ಮಾತ್ರವಲ್ಲ ಅದು ದೇವರಿಗೂ ತಟ್ಟಿದೆ. ಲಾಕ್‍ಡೌನ್ ಅವಧಿಯಲ್ಲಿ ಕರ್ನಾಟಕವನ್ನೊಳಗೊಂಡಂತೆ ದೇಶದ ಎಲ್ಲ ರಾಜ್ಯಗಳಲ್ಲಿನ ದೇವಾಲಯಗಳಿಗೆ ಬೀಗ ಹಾಕಲಾಗಿತ್ತು. ಗಂಟೆ, ಜಾಗಟೆ, ಕರ್ಪೂರ, ದೀಪ, ಧೂಪ, ಭಕ್ತರ ಗೈರು ಹಾಜರಿಯಿಂದ ದೇವಾಲಯಗಳ ಪ್ರಾಂಗಣಗಳು ಬಿಕೋ ಎನ್ನುತ್ತಿದ್ದವು. ಅರ್ಚಕರ ಮುಖ ಕಳೆಗುಂದಿದ್ದವು. ಒಟ್ಟಾರೆ ಗರ್ಭಗುಡಿಯೊಳಗೆ ಕುಳಿತಿದ್ದ ದೇವರು ತನಗೆ ಬಂದೊದಗಿದ ಪರಿಸ್ಥಿತಿಯಿಂದ ಆತಂಕಕ್ಕೊಳಗಾಗಿದ್ದನೋ ಅಥವಾ ಭಕ್ತಗಣದ ಭಾವಾವೇಷದ ಒತ್ತಡವಿಲ್ಲದೆ ನಿರಾತಂಕನಾಗಿದ್ದನೋ ಆತನೇ ಬಲ್ಲ.

ಲಾಕ್‍ಡೌನ್ ತೆರವುಗೊಳಿಸಿದ ನಂತರ ಸರ್ಕಾರ ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಿದೆ. ಅನ್ಯರಾಜ್ಯಗಳಲ್ಲಿ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಕನ್ನಡ ನಾಡಿನ ದೇವಾಲಯಗಳಲ್ಲಿನ ದೇವರುಗಳಿಗೆ ದರುಶನ ಕರುಣಿಸುವ ಭಾಗ್ಯ ಇನ್ನೂ ದೊರೆತಿಲ್ಲ. ಸೃಷ್ಟಿಕರ್ತನಾದ ದೇವರು ತನ್ನ ಬಿಡುಗಡೆಗಾಗಿ ಹುಲುಮಾನವರ ಅಪ್ಪಣೆಗಾಗಿ ಕಾಯ್ದು ಕುಳಿತುಕೊಳ್ಳಬೇಕಾಗಿದೆ. ಇನ್ನು ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.

ಈ ಅವಧಿಯಲ್ಲಿ ಬೇರೆ ಕ್ಷೇತ್ರಗಳಿಗೆ ಎದುರಾದಂತೆ ದೇವಸ್ಥಾನಗಳಿಗೂ ಆರ್ಥಿಕ ಸಮಸ್ಯೆ ಎದುರಾಯಿತು. ವಿವಿಧ ಪ್ರಕಾರದ ಪೂಜೆಗಳಿಂದ ಮತ್ತು ಹುಂಡಿಗೆ ಭಕ್ತಗಣದಿಂದ ಕಾಣಿಕೆ ರೂಪದಲ್ಲಿ ಸಂದಾಯವಾಗುತ್ತಿದ್ದ ಹಣವನ್ನೇ ದೈನಂದಿನ ಖರ್ಚುವೆಚ್ಚಗಳಿಗೆ ವಿನಿಯೋಗಿಸುತ್ತಿದ್ದ ದೇವಾಲಯಗಳು ಬೀಗಮುದ್ರೆ ಬಿದ್ದದ್ದೆ ತಡ ಸಂಕಷ್ಟಕ್ಕೆ ಒಳಗಾದವು. ಕೆಲವು ದೇವಾಲಯಗಳ ಆಡಳಿತ ಮಂಡಳಿಯವರು ದೇವಾಲಯಗಳ ಒಡೆತನದಲ್ಲಿರುವ ಸ್ಥಿರಾಸ್ತಿಯನ್ನು ಮಾರಾಟಮಾಡಿ ಖರ್ಚುಗಳನ್ನು ನಿಭಾಯಿಸುವ ಹೇಳಿಕೆ ನೀಡಿದರು. ಆಯಾ ರಾಜ್ಯಗಳಲ್ಲಿನ ಸರ್ಕಾರಗಳು ಹಣಕಾಸಿನ ನೆರವು ನೀಡಲು ಮುಂದೆಬಂದವು. ಈ ಸಂದರ್ಭ ದೇವಸ್ಥಾನಗಳ ಸುತ್ತಲಿನ ಸಣ್ಣವ್ಯಾಪಾರಿಗಳನ್ನು ಕುರಿತು ಯಾರೂ ಚಿಂತಿಸಲಿಲ್ಲ ಎನ್ನುವುದು ಬೇರೆ ಮಾತು.

ಮನುಷ್ಯ ಸಾಮಾನ್ಯವಾಗಿ ದೈವಶ್ರದ್ಧೆ ಉಳ್ಳವನು. ನಾವು ಮಾಡುವ ಪ್ರತಿಕೆಲಸಕ್ಕೂ ದೇವರನ್ನು ನಂಬುತ್ತೇವೆ. ದೇವರ ಅಸ್ತಿತ್ವವನ್ನು ಅಲ್ಲಗಳೆದು ಬದುಕುವುದು ಸಾಧ್ಯವೇ ಇಲ್ಲ. ಅದಕ್ಕೆಂದೇ ಇಲ್ಲಿ ಹೆಜ್ಜೆಗೊಂದು ಮಂದಿರ, ಮಸೀದಿ, ಚರ್ಚ್‍ಗಳು ಕಾಣಸಿಗುತ್ತವೆ. ನಮ್ಮ ಬದುಕಿನಲ್ಲಿ ಸಂಭವಿಸುವ ಒಳ್ಳೆಯದು, ಕೆಟ್ಟದು ಎರಡಕ್ಕೂ ದೇವರನ್ನೇ ಹೊಣೆಯಾಗಿಸುತ್ತೇವೆ. ಚಿನ್ನದ ಕಳಶ, ವಜ್ರದ ಕಿರೀಟ, ಬೆಳ್ಳಿಯ ಪಾದರಕ್ಷೆ, ಲಕ್ಷಾಂತರ ರೂಪಾಯಿಗಳ ಕಾಣಿಕೆ ಸಮರ್ಪಿಸಿ ಪುನೀತರಾಗುತ್ತೇವೆ. ತುಪ್ಪ, ಶ್ರೀಗಂಧದ ಚಕ್ಕೆ, ರೇಷ್ಮೆವಸ್ತ್ರವನ್ನು ಅಗ್ನಿಗೆ ಸಮರ್ಪಿಸಿ ಧನ್ಯರಾಗುತ್ತೇವೆ. ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ, ಅನಾಥ ವೃದ್ಧರ ಬದುಕಿಗೆ ಒಂದಿಷ್ಟು ಆಸರೆಯಾಗಲು ನೂರೆಂಟು ಬಾರಿ ಯೋಚಿಸುವ ನಾವು ಅದೇ ದೇವಾಲಯಗಳಿಗೆಂದರೆ ಧಾರಾಳಿಗಳಾಗುತ್ತೇವೆ. ಇಲ್ಲಿ ಕುರಿ, ಕೋಳಿ, ಕೋಣಗಳನ್ನು ಬಲಿಕೇಳುವ ಹಿಂಸಾಪ್ರವೃತ್ತಿಯ ದೇವರುಗಳಿದ್ದಂತೆ, ಒಂದುಲೋಟ ನೀರಿಗೂ ಮತ್ತು ತಲೆಗೂದಲಿನ ಸಮರ್ಪಣೆಗೂ ಸಂತೃಪ್ತರಾಗುವ ಅಲ್ಪತೃಪ ದೇವರೂ ಇರುವರು. ಒಟ್ಟಿನಲ್ಲಿ ಮನುಷ್ಯ ತನಗೆ ಅನುಕೂಲವಾಗುವಂತೆ ದೇವರುಗಳನ್ನು ಸೃಷ್ಟಿಸಿಕೊಂಡಿರುವನು. ದೇವರನ್ನು ಸೃಷ್ಟಿ-ಸ್ಥಿತಿ-ಲಯ ಎಂದು ವರ್ಣಿಸುತ್ತೇವೆ. ಆದರೆ ಆ ದೇವರು ಸೃಷ್ಟಿಕರ್ತನೋ ಅಥವಾ ದೇವರನ್ನೇ ಸೃಷ್ಟಿಸುವ ಮನುಷ್ಯ ಸೃಷ್ಟಿಕರ್ತನೋ ಎನ್ನುವ ಗೊಂದಲ ನನ್ನಂಥವರಿಗೆ.

ಇಷ್ಟೆಲ್ಲ ದೈವಶ್ರದ್ಧೆಯಿರುವ ಮನುಷ್ಯ ಈಗ ದೇವಾಲಯಗಳನ್ನು ಪ್ರವೇಶಿಸಲು ಹಿಂಜರಿಯುತ್ತಿದ್ದಾನೆ. ಪ್ರಾಣಭಯ ಎನ್ನುವುದು ಭಕ್ತಿಯನ್ನು ಹಿಂದಿಕ್ಕಿ ಮುನ್ನೆಲೆಗೆ ಬಂದಿದೆ. ಪ್ರಾಣಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎನ್ನುವ ಮನಸ್ಥಿತಿಗೆ ಮನುಷ್ಯ ಬಂದು ತಲುಪಿದ್ದಾನೆ. ಹಾಗಾದರೆ ಮನುಷ್ಯನಲ್ಲಿರುವ ದೈವಶ್ರದ್ಧೆ ಏನಾಯಿತು? ಎನ್ನುವ ಪ್ರಶ್ನೆ ಈ ಸಂದರ್ಭ ಎದುರಾಗುತ್ತದೆ. ಜೊತೆಗೆ ದೈವಶ್ರದ್ಧೆ ಇಲ್ಲದೆಯೂ ಮನುಷ್ಯ ಬದುಕಬಹುದೆನ್ನುವ ವಾಸ್ತವ ಸತ್ಯವೊಂದು ಅನಾವರಣಗೊಂಡಿದೆ. ದೈವಶ್ರದ್ಧೆಗಿಂತಲೂ ಮಿಗಿಲಾದದ್ದು ನೈತಿಕಶ್ರದ್ಧೆ ಎನ್ನುವುದನ್ನು ಮನುಷ್ಯ ಅರ್ಥಮಾಡಿಕೊಳ್ಳಬೇಕಾಗಿದೆ. ನೈತಿಕಶ್ರದ್ಧೆ ಇರುವ ಮನುಷ್ಯ ಎಷ್ಟು ದೇವರುಗಳನ್ನಾದರೂ ನಂಬಲಿ ಯಾವುದೇ ಅಪಾಯವಿಲ್ಲ. ಆದರೆ ದೈವಶ್ರದ್ಧೆಯಿರುವ ಮನುಷ್ಯ ನೀತಿವಂತನಾಗಿರದಿದ್ದರೆ ಅದು ಅತ್ಯಂತ ಅಪಾಯಕಾರಿ.

ದೇವರ ಅಸ್ತಿತ್ವವನ್ನು ಕುರಿತು ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೀನ್ ತನ್ನ ‘ಐನ್‍ಸ್ಟೀನ್-ದಿ ಹ್ಯೂಮನ್ ಸೈಡ್’ ಪುಸ್ತಕದಲ್ಲಿ ಹೀಗೆ ವಿವರಿಸುತ್ತಾರೆ ‘ನಾನು ದೇವರು ಎಂಬ ವ್ಯಕ್ತಿಯೊಬ್ಬನಿದ್ದಾನೆ ಎಂದು ನಂಬುವುದಿಲ್ಲ. ದೇವರು ಎಂಬ ವ್ಯಕ್ತಿಯನ್ನು ಕಲ್ಪಿಸಿಕೊಳ್ಳುವುದೂ ನನಗೆ ಸಾಧ್ಯವಿಲ್ಲ. ಮನುಷ್ಯನ ಪ್ರಯತ್ನಗಳಲ್ಲಿ ಅತ್ಯಂತ ಮುಖ್ಯವಾದದ್ದೆಂದರೆ ನಮ್ಮ ಕರ್ಮವೆಲ್ಲ ನೀತಿಯುತವಾಗಿರಬೇಕೆಂದು ಮಾಡುವ ಪ್ರಯತ್ನ. ನಮ್ಮ ಉಳಿವು, ಅಸ್ತಿತ್ವ ಕೂಡ ಅದನ್ನು ಅವಲಂಬಿಸಿದೆ. ನಾವು ಮಾಡುವ ಕೆಲಸ ನೀತಿಯುತವಾಗಿದ್ದರೆ ಮಾತ್ರ ಬದುಕಿಗೊಂದು ಸೌಂದರ್ಯ, ಗಾಂಭೀರ್ಯ ಇರುತ್ತದೆ’. 

ಅಂಧಶ್ರದ್ಧೆ ಎನ್ನುವುದು ಅದು ನಮ್ಮ ಮನೆಯ ವಾತಾವರಣದಿಂದಲೇ ಶುರುವಾಗುತ್ತದೆ. ಮಗುವನ್ನು ದೇವರ ಪಟದ ಎದುರು ನಿಲ್ಲಿಸಿ ತಪ್ಪು ಮಾಡಿದರೆ ದೇವರು ಶಿಕ್ಷಿಸುತ್ತಾನೆಂದು ಹೆದರಿಸುತ್ತೇವೆ. ನೀತಿವಂತನಾಗಿರಬೇಕು ಎನ್ನುವುದಕ್ಕಿಂತ ದೇವರು ಶಿಕ್ಷಿಸುತ್ತಾನೆಂಬ ಹೆದರಿಕೆಯಿಂದ ತಪ್ಪು ಮಾಡಬಾರದೆನ್ನುವ ಭಾವನೆ ಮಗುವಿನಲ್ಲಿ ಬಲವಾಗುತ್ತದೆ. ಹೀಗೆ ನೈತಿಕಶ್ರದ್ಧೆಯನ್ನು ದೈವಶ್ರದ್ಧೆ ಹಿಂದಕ್ಕೆ ತಳ್ಳುತ್ತದೆ. ದೈವಶ್ರದ್ಧೆಯನ್ನು ಮೈಗೂಡಿಸಿಕೊಳ್ಳುವ ಮನುಷ್ಯ ತಾನು ಮಾಡಿದ ತಪ್ಪುಗಳಿಗಾಗಿ ದೇವರ ಶಿಕ್ಷೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಅದಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಾನೆ. ಪರಿಣಾಮವಾಗಿ ಕಂಚಿನ ಕಳಶ, ವಜ್ರದ ಕಿರೀಟ, ಬೆಳ್ಳಿ ಗದೆ, ಚಿನ್ನದ ಓಲೆಗಳು ಪರ್ಯಾಯ ಮಾರ್ಗಗಳಾಗಿ ಅನುಷ್ಠಾನಕ್ಕೆ ಬರುತ್ತವೆ. ಭಕ್ತರ ಮನೋದೌರ್ಬಲ್ಯಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ದೇವಾಲಯಗಳ ಆಡಳಿತ ಮಂಡಳಿಯವರು ಪೂಜೆ, ಪುನಸ್ಕಾರಗಳ ಹೆಸರಿನಲ್ಲಿ ಹಗಲು ದರೋಡೆಗಿಳಿಯುತ್ತಾರೆ.

ಕೊರೊನಾ ಸೋಂಕು ಸೃಷ್ಟಿಸಿದ ಆತಂಕದ ದಿನಗಳಲ್ಲಿ ನಾವುಗಳೆಲ್ಲ ದೇವಾಲಯಗಳ ಕಡೆ ಮುಖ ಹಾಕಲಿಲ್ಲ. ದೇವಸ್ಥಾನಗಳಲ್ಲಿ ಯಾವ ಪೂಜಾ ಕೈಂಕರ್ಯಗಳನ್ನೂ ಕೈಗೊಳ್ಳಲಿಲ್ಲ. ಕಿರೀಟ, ಗದೆ, ಡಾಬು, ಓಲೆಗಳನ್ನು ಕಾಣಿಕೆಯಾಗಿ ಸಲ್ಲಿಸಲಿಲ್ಲ. ಹಾಗೆಂದು ಪಾಪ ಆ ದೇವರು ಮನುಷ್ಯರ ಮೇಲೆ ಮುನಿಸಿಕೊಳ್ಳಲಿಲ್ಲ ಮತ್ತು ಯಾವ ಶಾಪವನ್ನೂ ಕೊಡಲಿಲ್ಲ. ಎಷ್ಟೆಂದರೂ ಅಂಧಶ್ರದ್ಧೆಗೆ ಒಗ್ಗಿಕೊಂಡ ಮನುಷ್ಯ ಪ್ರಕೃತಿದತ್ತವಾದ ಸಮಸ್ಯೆಗಳನ್ನೆಲ್ಲ ದೇವರ ಶಾಪವೆಂದೇ ಭಾವಿಸುತ್ತಾನೆ. ಪ್ರವಾಹ, ಭೂಕಂಪ, ಬರ ಇವೆಲ್ಲ ಪ್ರಕೃತಿದತ್ತವಾದ ಸಮಸ್ಯೆಗಳು. ಈ ಸಮಸ್ಯೆಗಳಲ್ಲಿ ಮನುಷ್ಯನ ಪಾತ್ರ ಕೂಡ ಇದೆ. ಆದರೆ ಮನುಷ್ಯ ತನ್ನ ವರ್ತನೆಯಿಂದ ಎದುರಾಗುವ ಪ್ರಕೃತಿಯ ವಿಕೋಪಗಳಿಗೆ ದೇವರ ಕಡೆ ಕೈತೋರಿಸಿ ನಿರುಮ್ಮಳನಾಗುತ್ತಾನೆ. ಮನುಷ್ಯನ ಪ್ರಕಾರ ಕೊರೊನಾ ಮಾನವ ನಿರ್ಮಿತ ಸಮಸ್ಯೆಯಲ್ಲ ಇದು ಸಹ ದೇವರ ಶಾಪ.

ತಮ್ಮ ಬದುಕಿನುದ್ದಕ್ಕೂ ದೇವಸ್ಥಾನಗಳಿಂದ ದೂರವೇ ಉಳಿದ ಕುವೆಂಪು ಕರುನಾಡಿನ ಶಿಲ್ಪಕಲಾ ವೈಭವವನ್ನು ವರ್ಣಿಸುತ್ತ ಹೀಗೆ ಹೇಳುತ್ತಾರೆ ‘ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪೂರದಾರತಿಯ ಜ್ಯೋತಿಯಿಲ್ಲ’. ದೇವಾಲಯದ ಪರಿಕಲ್ಪನೆಯನ್ನೇ ಕುವೆಂಪು ತಿರಸ್ಕರಿಸುವ ಬಗೆಯಿದು. ಎ.ಎನ್.ಮೂರ್ತಿರಾವ್ ತಮ್ಮ ‘ದೇವರು’ ಕೃತಿಯಲ್ಲಿ ದೇವರ ಅಸ್ತಿತ್ವವನ್ನೇ ಪ್ರಶ್ನಿಸುತ್ತಾರೆ. ಅಂತಿಮವಾಗಿ ಅವರು ಹೇಳುವುದು ಹೀಗೆ ‘ದೇವರಿದ್ದರೆ ಅವನಿಗೆ ನಮ್ಮ ಸೇವೆಯಿಂದ ಆಗಬೇಕಾದ ಪ್ರಯೋಜನವೇನೂ ಇಲ್ಲ. ನಮ್ಮ ಕೈಂಕರ್ಯಕ್ಕೆ, ಸೇವೆಗೆ ಪಾತ್ರವಾಗಬೇಕಾದದ್ದು, ಅದರಿಂದ ಪ್ರಯೋಜನ ಪಡೆಯಬಹುದಾದದ್ದು-ಮಾನವಕುಲ’. ದೇವರು ಮಂದಿರ, ಮಸೀದಿ, ಚರ್ಚ್‍ಗಳಲ್ಲಿಲ್ಲ. ದೇವರಿಗೆ ಮಾಡುವ ಸೇವೆ ಅದು ನ್ಯಾಯುತವಾಗಿ ಸಲ್ಲಬೇಕಾದದ್ದು ಅನಾಥರಿಗೆ, ಬಡವರಿಗೆ ಮತ್ತು ದು:ಖಿಗಳಿಗೆ. ಆದ್ದರಿಂದ ದೀನ, ದುರ್ಬಲರಲ್ಲಿ ದೇವರನ್ನು ಕಾಣುವ ಮನಸ್ಥಿತಿಯನ್ನು ಮನುಷ್ಯ ರೂಢಿಸಿಕೊಳ್ಳಬೇಕು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

---000---