Wednesday, June 8, 2016

ಸೃಜನಶೀಲತೆಯ ತಲ್ಲಣಗಳು



          ಇತ್ತೀಚಿಗೆ ತಮಿಳು ಭಾಷೆಯಲ್ಲಿ ಲೇಖಕನ  ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುವ   ಪ್ರಯತ್ನಗಳು ಕಾಣಿಸಿಕೊಂಡವು ಮತ್ತು ಅವು ಯಶಸ್ವಿಯೂ ಆದವು. ನಡೆದದ್ದಿಷ್ಟು ಪೆರುಮಾಳ್ ಮುರುಗನ್ ಎನ್ನುವ ತಮಿಳು ಲೇಖಕ ಬರೆದ 'ಮಾದೊರುಬಾಗನ್' ಕಾದಂಬರಿ ತಮಿಳರ ಮನಸ್ಸನ್ನು ಘಾಸಿಗೊಳಿಸಿದೆ ಎಂದು ಒಂದು ವರ್ಗದ ಜನ ಕಾದಂಬರಿಯನ್ನು ಹಿಂದಕ್ಕೆ ಪಡೆಯುವಂತೆ ಹಾಗೂ ಲೇಖಕ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಪಟ್ಟು ಹಿಡಿದರು. ಒಂದು ಸಮುದಾಯ ಮತ್ತು ಭೌಗೋಳಿಕ ಪ್ರದೇಶದಲ್ಲಿ ಒಂದು ಕಾಲದಲ್ಲಿ ಆಚರಣೆಯಲ್ಲಿದ್ದ ಪದ್ಧತಿಯನ್ನು ಕಾದಂಬರಿಕಾರ ತನ್ನ ಕೃತಿಯ ಕಥಾವಸ್ತುವಾಗಿ ಆಯ್ಕೆ ಮಾಡಿಕೊಂಡಿದ್ದು ಅದು ಅನೇಕರಿಗೆ ತಪ್ಪಾಗಿ ಕಾಣಿಸಿತು. ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದ ಲೇಖಕ ಪೆರುಮಾಳ್ ಮುರುಗನ್ ತಮ್ಮ ಕಾದಂಬರಿಯನ್ನು ಹಿಂಪಡೆದರಲ್ಲದೆ ಇದುವರೆಗೂ ತಾವು ಬರೆದ ಎಲ್ಲ ಕೃತಿಗಳನ್ನು ಹಿಂಪಡೆಯುತ್ತಿರುವುದಾಗಿಯೂ ಮತ್ತು ಬರವಣಿಗೆಯಿಂದ ನಿವೃತ್ತರಾಗಿ ಲೇಖಕ ಮುರುಗನ್ ಸತ್ತು ಹೋದನೆಂದು ಘೋಷಿಸಿದರು. ನಿಜಕ್ಕೂ ಸಾಹಿತ್ಯಲೋಕದಲ್ಲಿ ಇದು ನಾವುಗಳೆಲ್ಲ ಆತಂಕಪಡಬೇಕಾದ ಸಂಗತಿ. ಲೇಖಕನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದಾಗ ಸಮಾಜಕ್ಕೆ ಮುಖಾಮುಖಿಯಾಗಿ ನಿಲ್ಲುವಂತಹ ಕೃತಿಗಳು ರಚನೆಯಾಗುವುದು ಅಸಾಧ್ಯದ ಮಾತು. ಈ ಸಂದರ್ಭ ನನ್ನನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದ ಸಂಗತಿ ಎಂದರೆ ಪೆರುಮಾಳ್ ಮುರುಗನ್ ಅವರ 'ಮಾದೊರುಬಾಗನ್' ಕಾದಂಬರಿ ಪ್ರಕಟವಾಗಿ ಆಗಲೇ ನಾಲ್ಕು ವರ್ಷಗಳು ಕಳೆದು ಹೋಗಿವೆ. ಆದರೆ ಕಾದಂಬರಿ ವಿರುದ್ಧದ ಪ್ರತಿಭಟನೆ ಕಾಣಿಸಿಕೊಂಡಿದ್ದು ಅದು ಇತ್ತೀಚಿಗೆ ಅಂದರೆ ಡಿಸೆಂಬರ್ ೨೦೧೪ ರಲ್ಲಿ. 'ಮಾದೊರುಬಾಗನ್' ಕಾದಂಬರಿ ಇಂಗ್ಲಿಷ್ ಭಾಷೆಗೆ ಅನುವಾದಗೊಂಡ ನಂತರ ಈಗ ಪ್ರತಿಭಟಿಸುತ್ತಿರುವ ಜನರಿಗೆ ತಮಿಳು ಭಾಷೆಯಲ್ಲಿ ಇಂಥದ್ದೊಂದು ಕೃತಿ ರಚನೆಯಾಗಿದೆ ಎಂದು ಗೊತ್ತಾಯಿತು. ಕಳೆದ ವರ್ಷ ತಮಿಳಿನ ಈ ಕಾದಂಬರಿ ಇಂಗ್ಲಿಷ್ ಗೆ ಅನುವಾದಗೊಂಡ ಮೇಲೆ ಒಂದು ವರ್ಗದ ಜನ ಒಟ್ಟಾಗಿ ಕೃತಿ ಮತ್ತು ಕೃತಿಕಾರನ ವಿರುದ್ಧ ಪ್ರತಿಭಟನೆಗಿಳಿದರು. ಉತ್ತರ ಸ್ಪಷ್ಟವಾಗಿದೆ ಅತಿ ಹೆಚ್ಚಿನ ಅದರಲ್ಲೂ ಅತಿ ವಿದ್ಯಾವಂತರಾದ ತಮಿಳರಿಗೆ ಈ ಕಾದಂಬರಿಯ ಓದು ದಕ್ಕಿದ್ದು ಅದು ಇಂಗ್ಲಿಷ್ ಭಾಷೆಯ ಮುಖಾಂತರ. ಇಂಗ್ಲಿಷ್ ಭಾಷೆಗೆ ಅನುವಾದಗೊಳ್ಳುವುದಕ್ಕಿಂತ ಪೂರ್ವದಲ್ಲಿ ಈಗ ಪ್ರತಿಭಟಿಸುತ್ತಿರುವ ತಮಿಳರಿಗೆ ತಮ್ಮ ಭಾಷೆಯಲ್ಲಿ 'ಮಾದೊರುಬಾಗನ್' ನಂಥ ಶ್ರೇಷ್ಠ ಕೃತಿ ರಚನೆಯಾಗಿರುವ ಸಂಗತಿ ಅದವರ ಗಮನಕ್ಕೆ ಬಂದಿರಲಿಲ್ಲ. ಶಾಸ್ತ್ರೀಯ ಸ್ಥಾನಮಾನ ಪಡೆದ ಬಲಿಷ್ಠ ಭಾಷೆಯೊಂದು ಹೀಗೆ ನಿರ್ಲಕ್ಷಕ್ಕೆ  ಒಳಗಾಗಿರುವುದನ್ನು ನೋಡಿದಾಗ ನನಗೆ ಪ್ರಾದೇಶಿಕ ಭಾಷೆಗಳ ಉಳಿವಿನ ಕುರಿತು ಯು. ಆರ್. ಅನಂತಮೂರ್ತಿ ಅವರು ಹೇಳಿದ ಮಾತು ನೆನಪಾಗುತ್ತದೆ 'ಪ್ರಾದೇಶಿಕ ಭಾಷೆಗಳು ಅನಕ್ಷರಸ್ಥರಿಂದ ಹಾಗೂ ಕಡಿಮೆ ವಿದ್ಯಾವಂತರಿಂದ ಮಾತ್ರ ಉಳಿದು ಬೆಳೆಯಲು ಸಾಧ್ಯವೇ ವಿನ: ಅತಿ ವಿದ್ಯಾವಂತರಿಂದ ಈ ಭಾಷೆಗಳು ಉಳಿಯಲು ಸಾಧ್ಯವಿಲ್ಲ. ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಇಂಗ್ಲಿಷ್ ಭಾಷೆ ಬಿಟ್ಟು ಯಾವ ಪ್ರಾದೇಶಿಕ ಭಾಷೆಗಳ ಜ್ಞಾನ ಅಷ್ಟಕಷ್ಟೆ. ಅದೇ ಬಸ್ಟ್ಯಾಂಡಿನಲ್ಲಿ ಕೆಲಸ ಮಾಡುತ್ತಿರುವ ಕೂಲಿಗೆ ಕನ್ನಡ, ತಮಿಳು, ತೆಲಗು, ಮಲೆಯಾಳಂ, ಹಿಂದಿ ಜೊತೆಗೆ ಅಷ್ಟಿಷ್ಟು ಅರ್ಥಮಾಡಿಕೊಳ್ಳುವಷ್ಟು ಇಂಗ್ಲಿಷ್ ಭಾಷೆಯ ಪರಿಚಯವಿರುತ್ತದೆ.' 

                ತಮಿಳು ಸಾಹಿತಿ ಪೆರುಮಾಳ್ ಮುರುಗನ್ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸಿದ ಪ್ರತಿಭಟನೆಯನ್ನು ವಿರೋಧಿಸುತ್ತಿರುವ ಸಂದರ್ಭದಲ್ಲೇ ನಾನು    ಮಟ್ಟು ಅವರು ವಿವೇಕಾನಂದರ ಕುರಿತು ಬರೆದ ಲೇಖನದಲ್ಲಿನ ಅವರ ವಿಚಾರಗಳನ್ನು ಖಂಡಿಸುತ್ತೇನೆ. ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಲೇಖಕನಾದವನು ಓದುಗರ ಮೇಲೆ ತನ್ನ ವಿಚಾರಗಳನ್ನು ಒತ್ತಾಯದಿಂದ ಹೇರುವುದು ಸರಿಯಲ್ಲ. ವಿವೇಕಾನಂದರು ದಡ್ಡ ವಿದ್ಯಾರ್ಥಿಯಾಗಿದ್ದರು, ಮಧ್ಯಪಾನ ಮತ್ತು ಧೂಮಪಾನ ಸೇವಿಸುತ್ತಿದ್ದರು, ಹಲವು ರೋಗಗಳಿಂದ ಬಳಲುತ್ತಿದ್ದರು ಎಂದು ಹೇಳುವ ಲೇಖಕರು ವಿವೇಕಾನಂದರ ವಿಚಾರಗಳು ಹೆಚ್ಚು ಪ್ರಸ್ತುತವಾಗುತ್ತಿರುವ    ಈ ದಿನಗಳಲ್ಲಿ  ಅವರನ್ನು  ನೆಗೆಟಿವ್ ಇಮೇಜಿನಲ್ಲಿ ಪ್ರತಿಬಿಂಬಿಸಲು ಹೊರಟಿರುವರು.  ದಿನೇಶ್ ಅಮೀನ ಮಟ್ಟು ಅವರ ಲೇಖನವನ್ನು ಆಧಾರವಾಗಿಟ್ಟುಕೊಂಡು ನಾವು ನಮ್ಮ ನಂತರದ ಪೀಳಿಗೆಗೆ ವಿವೇಕಾನಂದರನ್ನು ಯಾವ ರೀತಿ ಪರಿಚಯಿಸಬೇಕು ಎನ್ನುವ ಪ್ರಶ್ನೆ ಎದುರಾಗುತ್ತದೆ. ವಿವೇಕಾನಂದರಲ್ಲಿದ್ದವೆಂದು ಹೇಳಲಾಗುವ  ದುರ್ಗಣಗಳನ್ನು ವೈಭವೀಕರಿಸಿ ಲೇಖಕರು ಅವರ ಅನುಯಾಯಿಗಳ ಮನಸ್ಸನ್ನು ಘಾಸಿಗೊಳಿಸಿರುವರು. ಹೀಗೆ ಹೊಸ ಪ್ರಶ್ನೆ ಮತ್ತು ವಿಚಾರಗಳನ್ನು ಹುಟ್ಟುಹಾಕುವ ಬರಹಗಾರ ತನ್ನ ಬರವಣಿಗೆಗೆ ಎದುರಾಗುವ ಟೀಕೆಗಳನ್ನೂ ಸಮರ್ಥವಾಗಿ ಎದುರಿಸುವ  ಜೊತೆಗೆ ಓದುಗರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ ಕೊಡುವ ವಿಶಾಲ ಮನೋಭಾವದವನಾಗಿರಬೇಕು. ಆದರೆ ಮಟ್ಟು ಅವರ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ವಿರೋಧಿಸುವ ಮಾತುಗಳು ಕೇಳಿ ಬಂದಾಗ ಲೇಖಕ ತನ್ನ ಅಧಿಕಾರವನ್ನು ಉಪಯೋಗಿಸಿಕೊಂಡು ಓದುಗರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳಲು ಪ್ರಯತ್ನಿಸಿದ್ದು ಖಂಡನಾರ್ಹ. ಈಗೀಗ ಸೃಜನಶೀಲ ಸಾಹಿತಿಗಳು ಕೂಡ ರಾಜಕಾರಣಿಗಳಾಗುತ್ತಿರುವುದು ಸಾಹಿತ್ಯ ಲೋಕದ ಆತಂಕದ ಸಂಗತಿಗಳಲ್ಲೊಂದು.

                   ಸಾಹಿತ್ಯ ಕ್ಷೇತ್ರದಲ್ಲಿನ ಎಡಪಂಥಿಯ ಮತ್ತು ಬಲಪಂಥಿಯ ಎನ್ನುವ ಗುಂಪುಗಾರಿಕೆ  ಸಾಹಿತ್ಯದ ವಿಚಾರವಾಗಿ ನನ್ನನ್ನು ಆತಂಕಗೊಳಿಸುವ ಇನ್ನೊಂದು ಸಂಗತಿ. ಕೆಲವರು ಧರ್ಮ, ಸಂಸ್ಕೃತಿ, ಸಂಪ್ರದಾಯದ ಪರ ಬರೆದು ಬಲಪಂಥಿಯ ಲೇಖಕ ಎಂದು ಗುರುತಿಸಿಕೊಂಡರೆ ಶಾಸ್ತ್ರ ಸಂಪ್ರದಾಯವನ್ನು ವಿರೋಧಿಸಿದವರು ಎಡಪಂಥಿಯ ಲೇಖಕರಾದರು. ಧರ್ಮ, ಸಂಸ್ಕೃತಿಯ ಬಗ್ಗೆ ಪಟ್ಟು ಹಿಡಿದಂತೆ ಬರೆಯುವ ಎಸ್ ಎಲ್ ಭೈರಪ್ಪನವರು ಎಡಪಂಥಿಯ ಲೇಖಕ ಬಳಗದ ದೃಷ್ಟಿಯಲ್ಲಿ ಅವರೊಬ್ಬ ತಾತ್ವಿಕ ಚಿಂತನೆಯ ಲೇಖಕನೇ ಅಲ್ಲ. ಅವರೊಬ್ಬ ಅಪಾರ ಓದುಗ ಬಳಗವನ್ನು ತಮ್ಮ ಕಾದಂಬರಿಗಳ ಓದಿಗೆ ದಕ್ಕಿಸಿಕೊಂಡಿರುವ ಜನಪ್ರಿಯ ಬರಹಗಾರ ಮಾತ್ರ. ಇದೇ ಕಾರಣದಿಂದ ಅನಂತಮೂರ್ತಿ ಅವರಿಗೆ ಭೈರಪ್ಪನವರ ಯಾವ ಕಾದಂಬರಿಯೂ ಓದಿಗೆ ಒಗ್ಗುವುದಿಲ್ಲ. ಕನ್ನಡ ಸಾಹಿತ್ಯದ ಇತಿಹಾಸವನ್ನು ಅವಲೋಕಿಸುವಾಗ ಅನಂತಮೂರ್ತಿ ಅವರ ಯಾವೊಂದು ಲೇಖನದಲ್ಲೂ ಭೈರಪ್ಪನವರ ಹೆಸರು ಸುಳಿಯುವುದಿಲ್ಲ. ತತ್ವಜ್ಞಾನವನ್ನು ಓದಿಕೊಂಡ ಮಾತ್ರಕ್ಕೆ ಸಾಹಿತ್ಯ ಸೃಷ್ಟಿ ಸಾಧ್ಯವಿಲ್ಲ ಎಂದು ಅನಂತಮೂರ್ತಿ ಅವರು ಬರೆಯುವಾಗ ಅವರ ದೃಷ್ಟಿಯಲ್ಲಿ ಯಾರಿದ್ದರು ಎನ್ನುವುದನ್ನು ಕನ್ನಡ ಸಾಹಿತ್ಯದ ಓದುಗರು ಅರ್ಥ ಮಾಡಿಕೊಳ್ಳದೇ ಇರುವಷ್ಟು ದಡ್ದರೆನಲ್ಲ. ನನ್ನ ಓದಿನ ಅನುಭವಕ್ಕೆ ಬಂದಂತೆ ಭೈರಪ್ಪನವರ 'ಆವರಣ' ಕಾದಂಬರಿಯಲ್ಲಿ ಬರುವ ಪಾತ್ರವೊಂದು ಅನಂತಮೂರ್ತಿ ಅವರನ್ನು ಮನಸ್ಸಿನಲ್ಲಿಟ್ಟುಕೊಂಡೆ ಸೃಷ್ಟಿಸಿರಬಹುದು ಎಂದೆನಿಸುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿನ ಈ ಎಡ ಮತ್ತು ಬಲ ನಮ್ಮ ಬರಹಗಾರರನ್ನು ಅಸೂಕ್ಷ್ಮಜ್ಞರನ್ನಾಗಿಯೂ ಮತ್ತು ಅಸಂವೇದನಾಶೀಲರನ್ನಾಗಿಯೂ ಮಾಡುತ್ತಿದೆ. ಪಾಕಿಸ್ತಾನದಲ್ಲಿನ ಅಮಾಯಕ ಮಕ್ಕಳ ಮಾರಣಹೋಮಕ್ಕೆ ಉಗ್ರರನ್ನು ಬೆಳೆಸಿದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯಾಯಿತೆಂದು ಬರಹಗಾರ ಪ್ರತಿಕ್ರಿಯಿಸಿದರೆ ಅದು ಅವನ ಅಸೂಕ್ಷ್ಮಜ್ಞತೆ ಮತ್ತು ಅಸಂವೆದನಾಶೀಲ ಗುಣವನ್ನು ಪ್ರದರ್ಶಿಸಿದಂತಾಗುತ್ತದೆ. ಸಮಾಜದ ಸಮಸ್ಯೆಗಳಿಗೆ ಜನರ ನೋವಿಗೆ ಸ್ಪಂದಿಸುವ ಗುಣವನ್ನು ಲೇಖಕನಾದವನು ಸಾಹಿತ್ಯದಲ್ಲಿನ ಈ ಗುಂಪುಗಾರಿಕೆಯಿಂದ ಕಳೆದುಕೊಳ್ಳುತ್ತಿರುವನು ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ.  

              ೮೧ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ದಲಿತ ಸಾಹಿತಿಯನ್ನು ಆಯ್ಕೆ ಮಾಡಲಾಗುವುದೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಈ ಮೊದಲೇ ಘೋಷಿಸಿದ್ದು ಈಗ ಕಾರ್ಯ ರೂಪಕ್ಕೆ ಬಂದದ್ದು ಸಂತಸದ ವಿಷಯ.  ದೇವನೂರ ಮಹಾದೇವರ ಹೆಸರು  ಸಾಹಿತ್ಯ ಪರಿಷತ್ತಿನ ಮೊದಲ ಆದ್ಯತೆಯಾಗಿತ್ತಾದರೂ ಅವರು ಕನ್ನಡವನ್ನು ಹತ್ತನೇ ತರಗತಿಯವರೆಗೆ ಶಿಕ್ಷಣದ ಮಾಧ್ಯಮವನ್ನಾಗಿ ಮಾಡುವವರೆಗೆ ನಾನು ಯಾವ ಗೌರವವನ್ನು ಸ್ವೀಕರಿಸುವುದಿಲ್ಲ ಎಂದು ಪಟ್ಟು ಹಿಡಿದ ಪರಿಣಾಮ ಸಿದ್ದಲಿಂಗಯ್ಯನವರನ್ನು ಆಯ್ಕೆ ಮಾಡುವ ಅನಿವಾರ್ಯತೆ  ಸಾಹಿತ್ಯ ಪರಿಷತ್ತಿಗೆ ಎದುರಾಯಿತು. ಕನ್ನಡ ಸಾಹಿತ್ಯ ಸಂಪದ್ಭರಿತವಾಗಿರುವುದರ ಹಿಂದೆ  ದಲಿತ ಬರಹಗಾರರ ಕೊಡುಗೆಯೂ ಅಪಾರವಾಗಿದೆ. ದೇವನೂರ ಮಹಾದೇವ, ಬರಗೂರು ರಾಮಚಂದ್ರಪ್ಪ, ಡಿ. ಆರ್. ನಾಗರಾಜ, ಸಿದ್ದಲಿಂಗಯ್ಯ, ಶ್ರೀಕೃಷ್ಣ ಆಲನಹಳ್ಳಿ ಯಂಥ ದಲಿತ ಬರಹಗಾರರು ಕನ್ನಡ ಸಾಹಿತ್ಯಕ್ಕೆ ಅತ್ಯುತ್ತಮ  ಕೃತಿಗಳನ್ನು ನೀಡಿರುವರು. ತಮ್ಮೊಳಗಿನ ಸಂವೇದನೆ ಮತ್ತು ಸೂಕ್ಷ್ಮಜ್ಞತೆಯಿಂದ ಕಾಲಕಾಲಕ್ಕೆ ಸಮಾಜದ ಸಮಸ್ಯೆಗಳಿಗೆ ಓದುಗರನ್ನು   ಮುಖಾಮುಖಿಯಾಗಿಸುತ್ತ ಬಂದವರು. ದೇವನೂರ ಮಹಾದೇವರ ಕೃತಿಯೊಂದು ಪ್ರಕಟವಾದ ಕೆಲವೇ ದಿನಗಳಲ್ಲಿ ಅದು ಅಸಂಖ್ಯಾತ ಓದುಗರನ್ನು ತಲಪುತ್ತದೆ. ಇಂಥ ಗಟ್ಟಿ ಹಿನ್ನೆಲೆಯುಳ್ಳ ದಲಿತ ಬರಹಗಾರರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಅನೇಕ ವರ್ಷಗಳ ಕಾಲ ಕಾಯಬೇಕಾಯಿತು. ಜೊತೆಗೆ ದೇವನೂರ ಮತ್ತು ಸಿದ್ದಲಿಂಗಯ್ಯನವರು ಸಮ್ಮೇಳನದ ಅಧ್ಯಕ್ಷರಾಗಲು  ದಲಿತ ಕೋಟಾಕ್ಕಾಗಿ ಕಾಯುವ ಅಗತ್ಯವೇನಿರಲಿಲ್ಲ. ಸಿದ್ದಲಿಂಗಯ್ಯನವರನ್ನು ಕನ್ನಡದ ಬರಹಗಾರ ಎನ್ನುವ ಒಂದು ಮಾನದಂಡದಿಂದ ಅವರನ್ನು ಆಯ್ಕೆ ಮಾಡಿದಿದ್ದರೆ ಕನ್ನಡ ನಾಡು ಸಂಭ್ರಮಿಸುತ್ತಿತ್ತು. ಹೆಸರು ಮಾಡಬೇಕೆನ್ನುವ  ತೆವಲು ಮತ್ತು ವಾಂಛೆ ನಮ್ಮನ್ನು ಆವರಿಸಿದಾಗ ಹೀಗೆ ಸಾಹಿತ್ಯ ಲೋಕದ ಸೃಜನಶೀಲರನ್ನು ದಲಿತ, ಬಲಿತ ಎಂದು ವರ್ಗೀಕರಿಸಿ ನೋಡುವ ಸಣ್ಣ ಗುಣ ಮೇಲುಗೈ ಸಾಧಿಸುತ್ತದೆ.

                     ಕೊಪ್ಪಳದಲ್ಲಿ ನಡೆದ ಸಮಾರಂಭವೊಂದರಲ್ಲಿ ಕುಂವೀ ಯಾಕೆ ಹೀಗೆ ಮಾತನಾಡಿದರೆಂದು ಗೊತ್ತಿಲ್ಲ. ಮಾತನಾಡುವ ಭರಾಟೆಯಲ್ಲಿ ಆ ದಿನ ಕನ್ನಡ ಸಾಹಿತ್ಯಾಸಕ್ತರೆದುರು ನಮ್ಮೆಲ್ಲರ ಅಭಿಮಾನದ ಬರಹಗಾರ ಕುಂವೀ 'ಜ್ಞಾನಪೀಠ ನಾನ್ ಸೆನ್ಸ್' ಎಂದು ಕೋಪ ವ್ಯಕ್ತ ಪಡಿಸಿದರು. ಪ್ರಶಸ್ತಿ ಬರುವುದಾದರೆ ಬರಲಿ ಆದರೆ ಜ್ಞಾನಪೀಠ ನಾನ್ ಸೆನ್ಸ್ ಎನ್ನುವುದು ಅವರ ವಾದವಾಗಿತ್ತು. ಲೇಖಕನಾದವನು ಪ್ರಶಸ್ತಿಗಳಿಂದ ದೊಡ್ಡವನಾಗುವುದಿಲ್ಲ. ಇದು ಕುಂವೀ ಅವರಂಥ ಸೃಜನಶೀಲ ಲೇಖಕರಿಗೆ ಗೊತ್ತಿಲ್ಲದ ಮಾತೇನಲ್ಲ. ಲೇಖಕ ತನ್ನ ವಿಚಾರಗಳಿಂದ ಮತ್ತು ಸತ್ವಯುತ ಬರವಣಿಗೆಯಿಂದ ಮಾತ್ರ ಓದುಗರ ನೆನಪುಗಳಲ್ಲಿ ಸದಾಕಾಲ ನೆಲೆಯೂರಿ ನಿಲ್ಲಲ್ಲು ಸಾಧ್ಯ. ಜೊತೆಗೆ ಲೇಖಕನೊಬ್ಬನ ವಿಚಾರಗಳು ಎಲ್ಲಕಾಲಕ್ಕೂ ಪ್ರಸ್ತುತವಾಗುಳಿಯಬೇಕಾದರೆ ಆತನ ಕೃತಿಗಳು  ಕಾಲಕಾಲಕ್ಕೆ ವಿಮರ್ಶೆಯ ಅಗ್ನಿದಿವ್ಯವನ್ನು ಹಾದು ಬರಬೇಕಾಗುತ್ತದೆ. ಕುಂವೀ ಅವರ ಬರವಣಿಗೆ ವಿಮರ್ಶಯ ಅಗ್ನಿದಿವ್ಯವನ್ನು ಹಾಯ್ದು  ಬಂದುದ್ದರಿಂದಲೇ ಅದು ಎಲ್ಲಕಾಲಕ್ಕೂ ಪ್ರಸ್ತುತವಾಗುಳಿಯುವ ಸಾಧ್ಯತೆ ನಿಚ್ಚಳವಾಗಿದೆ. ಕನ್ನಡದಲ್ಲಿ ಜ್ಞಾನಪೀಠ ಪುರಸ್ಕಾರಕ್ಕೆ ಭಾಜನರಾದ ಬರಹಗಾರರ ಸಂಖ್ಯೆ ಕೇವಲ ಎಂಟು ಮಾತ್ರ. ಹಾಗೆಂದು ಕನ್ನಡ ಸಾಹಿತ್ಯದಲ್ಲಿ ಇನ್ನುಳಿದ ಬರಹಗಾರರನ್ನು ಕಡೆಗಣಿಸಲಾಗಿದೆ ಎಂದರ್ಥವಲ್ಲ. ಜಿ ಎಸ್ ಶಿವರುದ್ರಪ್ಪ, ನರಸಿಂಹ ಸ್ವಾಮಿ, ಎಸ್ ಎಲ್ ಭೈರಪ್ಪ, ದೇವನೂರ ಮಹಾದೇವ, ತೇಜಸ್ವಿ, ಲಂಕೇಶ್, ಸ್ವತಹ ಕುಂವೀ ಇವರೆಲ್ಲ ನಾಡಿನ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅನನ್ಯ.  ಜ್ಞಾನಪೀಠಕ್ಕೆ ಪಾತ್ರರಾದ ಬರಹಗಾರರು ಮಾತ್ರ ಶ್ರೇಷ್ಠರು ಇನ್ನುಳಿದವರು ನಗಣ್ಯರು ಎನ್ನುವ ನಿರ್ಧಾರಕ್ಕೆ ಬರುವುದು ತಪ್ಪು. ಕನ್ನಡ ಸಾಹಿತ್ಯದ ಓದುಗ ಬಳಗ ನಾಡಿನ ಬರಹಗಾರರನ್ನು ಯಾವತ್ತೂ ಹೀಗೆ ವರ್ಗೀಕರಿಸಿ ನೋಡಿದ ಉದಾಹರಣೆ ಇಲ್ಲ. ಪ್ರಶಸ್ತಿ ಪುರಸ್ಕಾರಗಳ ಗೊಡವೆಗೆ ಹೋಗದೆ ತೇಜಸ್ವಿ ಮತ್ತು ದೇವನೂರ ಮಹಾದೇವ ಕನ್ನಡಕ್ಕೆ ಉತ್ಕೃಷ್ಟ ಕೃತಿಗಳನ್ನು ಕೊಡುಗೆಯಾಗಿ ನೀಡಿದ ಪರಂಪರೆಯೇ ನಮ್ಮ ಮುಂದಿದೆ. ಲೇಖಕನಾದವನು ಪ್ರಶಸ್ತಿ ಪುರಸ್ಕಾರಗಳ ಬೆನ್ನುಬಿದ್ದು ತನ್ನನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡರೆ ಅವನಿಂದ ಬಹುಕಾಲ ಉಳಿಯುವಂಥ ಮತ್ತು ಸಮಾಜಕ್ಕೆ ಮುಖಾಮುಖಿಯಾಗುವಂಥ ಸಾಹಿತ್ಯ ರಚನೆಯಾಗಲಾರದು. ಕುಂವೀ ಅವರ ಕೃತಿಗಳು ಸಮಾಜ ಮುಖಿಯಾಗಿಯೂ ಮತ್ತು ಬಹುಕಾಲ ಜನಮಾನಸದಲ್ಲಿ ಉಳಿಯುವಂಥ ವೈಚಾರಿಕ ಚಿಂತನೆಗಳಿಂದ ಕೂಡಿದ್ದವುಗಳೂ ಆಗಿವೆ. ಗಾಂಧಿಕ್ಲಾಸು, ಚಾರ್ಲಿ ಚಾಪ್ಲಿನ್, ಅರಮನೆ, ಶಾಮಣ್ಣ ಹೀಗೆ ಅನೇಕ ಸತ್ವಯುತ ಕೃತಿಗಳನ್ನು ಕನ್ನಡದ ಓದುಗರಿಗೆ ಕೊಟ್ಟ ಕುಂವೀ ಅಂದು ಅದೇಕೆ 'ಜ್ಞಾನಪೀಠ ನಾನ್ ಸೆನ್ಸ್' ಎಂದರು ಗೊತ್ತಾಗುತ್ತಿಲ್ಲ. ನಮ್ಮ ಅರಿವಿನ ವ್ಯಾಪ್ತಿಯನ್ನು ತನ್ನ ಕೃತಿಗಳ ಮೂಲಕ ವಿಸ್ತರಿಸಿದ ಲೇಖಕ ಹೀಗೆ ಮಾತನಾಡಿದ್ದು ನನಗಂತೂ ಬೇಸರದ ಸಂಗತಿ.

                      ಭವಿಷ್ಯದಲ್ಲಿ ಕನ್ನಡ ಪುಸ್ತಕಗಳನ್ನು ಯಾರು ಓದಬೇಕು ಇದು ಭೈರಪ್ಪನವರು ಎತ್ತಿರುವ ಪ್ರಶ್ನೆ. ಏಕೆಂದರೆ ಕನ್ನಡ ಮಾಧ್ಯಮದ ಶಾಲೆಗಳು ಮಕ್ಕಳಿಲ್ಲದೆ ಮುಚ್ಚುತ್ತಿರುವಾಗ ಅವರು ಆತಂಕದಿಂದ ಮೇಲಿನ ಪ್ರಶ್ನೆಯನ್ನು ಕೇಳುತ್ತಾರೆ. ಖಾಸಗಿಯಾಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವಾಗ ಮತ್ತು ನಾವುಗಳೆಲ್ಲ ನಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಮೂಲಕ ಕಲಿಯಲು ಪ್ರೋತ್ಸಾಹಿಸುತ್ತಿರುವಾಗ ಮುಂದೊಂದು ದಿನ ಕನ್ನಡ ಪುಸ್ತಕಗಳ ಓದಿಗೆ ಓದುಗರ ಬಹುದೊಡ್ಡ ಕೊರತೆ ಎದುರಾಗಲಿದೆ. ಆಗ ಕನ್ನಡ ಪುಸ್ತಕಗಳ ಓದಿನ ಜೊತೆಗೆ ಕನ್ನಡ ಸಾಹಿತ್ಯದ ಉತ್ಪಾದನಾ ಪ್ರಮಾಣವೂ ಕುಸಿಯುವುದರಲ್ಲಿ ಸಂಶಯವಿಲ್ಲ. ಹೀಗೆ ಸಾಹಿತ್ಯ ಸೃಷ್ಟಿ ಕುಂಠಿತಗೊಂಡರೆ ಅದು ನಾಡಿನ ವೈಚಾರಿಕ ದಾರಿದ್ರ್ಯವನ್ನು ಪ್ರದರ್ಶಿಸಿದಂತಾಗುತ್ತದೆ. ಕನ್ನಡ ಮಾಧ್ಯಮದ ಶಿಕ್ಷಣ ಮೂಲೆಗುಂಪಾಗುತ್ತಿರುವುದಕ್ಕೂ ಮತ್ತು ಅದು ನೇರವಾಗಿ ಸಾಹಿತ್ಯ ಸೃಷ್ಟಿಯಂಥ ಸೃಜನಶೀಲತೆಯ ಮೇಲೆ ಪರಿಣಾಮ ಬೀರುವುದಕ್ಕೂ ನಿಕಟವಾದ ಸಂಬಂಧವಿದೆ. ಇಂಥದ್ದೊಂದು ಅನಾಹುತ ಭವಿಷ್ಯದಲ್ಲಿ ಎದುರಾಗಬಾರದೆಂದು ನಮ್ಮ ಸಾಹಿತ್ಯ ವಲಯ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯುವುದು ಹೆಚ್ಚು ಸಮಂಜಸವೇ ವಿನ: ಅದನ್ನು ಮಾಧ್ಯಮವಾಗಿ ಕಲಿಯುವುದರಿಂದ ನಮ್ಮ ಮಾತೃಭಾಷೆಯನ್ನೇ ಸಾಯಿಸಿದಂತಾಗುತ್ತದೆ ಎಂದು ಎಂದು ಎಚ್ಚರಿಸುತ್ತ ಬಂದಿರುವುದು. ಜೊತೆಗೆ ಈ ಇಂಗ್ಲಿಷ್ ಮಾಧ್ಯಮದ ಕಲಿಕೆಯಿಂದ ಹೊರಬರುತ್ತಿರುವ ನಮ್ಮ ಎದುರಿರುವ ಈ ಯುವ ಪೀಳಿಗೆಗೆ ಇಂಗ್ಲಿಷ್ ಸಾಹಿತ್ಯದಲ್ಲಿ ಇರುವಷ್ಟು ಆಸಕ್ತಿ ಕನ್ನಡ ಸಾಹಿತ್ಯದಲ್ಲಿಲ್ಲ. ಚೇತನ್ ಭಗತ್, ಅರುಂಧತಿ ರಾಯ್, ಅರುಣ ಶೌರಿ ಅವರ ಪುಸ್ತಕಗಳನ್ನು ಮುಗಿಬಿದ್ದು ಓದುವ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಬಂದ ನಮ್ಮ ಯುವ ಪೀಳಿಗೆಗೆ ಕನ್ನಡ ಪುಸ್ತಕಗಳ ಒದೆಂದರೆ ಅಷ್ಟಕಷ್ಟೆ. ನನ್ನನ್ನು  ಆತಂಕಗೊಳಿಸುವ ಇನ್ನೊಂದು  ಸಂಗತಿ ಎಂದರೆ ಈ ವಯೋಮಾನದ ಓದುಗರು ಇಂಗ್ಲಿಷ್ ಸಾಹಿತ್ಯವನ್ನಾದರೂ ಗಂಭೀರವಾಗಿ ಮತ್ತು ವೈಚಾರಿಕತೆಯ ನೆಲೆಯಲ್ಲಿ ಓದುತ್ತಿರುವರೆ ಎಂದು ಪ್ರಶ್ನಿಸ ಹೋದರೆ ನಿಜಕ್ಕೂ ನಾವು ನಿರೀಕ್ಷಿಸುವ ಉತ್ತರ  ದೊರೆಯಲಾರದು. ಈ ಪ್ರಕಾರದ ಓದುಗರಿಗೆ ಓದು ಅದೊಂದು ಮನೋರಂಜನೆಯೇ ವಿನ: ಚಿಂತನೆಯನ್ನು ಸಮೃದ್ಧಗೊಳಿಸುವ ಪ್ರಕ್ರಿಯೆಯಲ್ಲ. ಒಂದೆಡೆ ಇಂಗ್ಲಿಷ್ ಸಾಹಿತ್ಯವನ್ನೂ ಗಂಭೀರವಾಗಿ ಓದದ ಇನ್ನೊಂದೆಡೆ ಕನ್ನಡ ಸಾಹಿತ್ಯವನ್ನು ನಿರ್ಲಕ್ಷಿಸುತ್ತಿರುವ  ಈ ಪ್ರಕಾರದ ಓದುಗರಿಂದ ಭವಿಷ್ಯದಲ್ಲಿ ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಗಂಡಾಂತರ ಎದುರಾಗಲಿದೆ. ಜೊತೆಗೆ ಜಾಗತೀಕರಣದ ಪರಿಣಾಮ ಬಳಕೆಯ ವಸ್ತುಗಳು ಮಾತ್ರವಲ್ಲದೆ ಇಂಗ್ಲಿಷ್ ಭಾಷೆಯ ಪುಸ್ತಕಗಳೂ ನಮ್ಮ ಓದುಗರಿಗೆ ಸುಲಭವಾಗಿ ಕೈಗೆಟುಕುತ್ತಿವೆ. ಹೀಗೆ ಕಡಿಮೆ ದರದಲ್ಲಿ ಮನರಂಜನೆಯ ಸರಕಿನಂತೆ ಮಾರಾಟವಾಗುತ್ತಿರುವ ಇಂಗ್ಲಿಷ್ ಭಾಷೆಯ ಪುಸ್ತಕಗಳು ಹಾಗೂ ಶಿಕ್ಷಣ ಮಾಧ್ಯಮ ಸಂಪೂರ್ಣವಾಗಿ ಇಂಗ್ಲಿಷ್ ಭಾಷೆಯಾಗಿರುವುದರ ಪರಿಣಾಮ ಈಗಾಗಲೇ ಕನ್ನಡ ಪುಸ್ತಕಗಳಿಗೆ ಓದುಗರ ಕೊರತೆ ಎದುರಾಗಿದೆ. ಈ ಕೊರತೆ ಹೀಗೆ ಮುಂದುವರೆದಲ್ಲಿ ಇನ್ನು ಹತ್ತಿಪ್ಪತ್ತು ವರ್ಷಗಳ ನಂತರ ಕನ್ನಡ ಪುಸ್ತಕಗಳನ್ನು ಯಾರು ಓದುವರು ಎನ್ನುವ ಆತಂಕ ಭೈರಪ್ಪನವರದು. ಹೀಗೆ ಇಂದಿನ ಯುವ ಓದುಗರು ಇಂಗ್ಲಿಷ್ ಸಾಹಿತ್ಯದೆಡೆ ವಾಲುತ್ತಿರುವ ಸಂದರ್ಭದಲ್ಲೇ ನಮ್ಮ ಬಹಳಷ್ಟು ಬರಹಗಾರರು ಪಾಶ್ಚಿಮಾತ್ಯ ಸಾಹಿತ್ಯಕ್ಕೆ ಮುಖಾಮುಖಿಯಾಗಿ ನಿಂತಿದ್ದು ಮತ್ತು ತಮ್ಮೊಂದಿಗೆ ಓದುಗರನ್ನೂ ಆ ಕಡೆ ಮುಖಮಾಡಿ ನಿಲ್ಲಿಸಿದ್ದು  ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಅದೊಂದು ಪ್ರಮುಖ ಘಟ್ಟ. ಷೇಕ್ಸಪಿಯರ್, ಬೋದಿಲೇರ್, ಈಟ್ಸ್, ಟಾಲಸ್ಟಾಯ್, ಬರ್ನಾಡ್ ಷಾ ನಮ್ಮ ಅರಿವಿನ ವ್ಯಾಪ್ತಿಗೆ ಬಂದಿದ್ದು ನಮ್ಮ ಕನ್ನಡ ಲೇಖಕರ ಬರಹಗಳಿಂದಲೇ. ಹಾಗೆಂದು ಇದನ್ನು ನಾನು ತಪ್ಪೆಂದು ವಾದಿಸುತ್ತಿಲ್ಲ. ನಮ್ಮ ಅರಿವಿನ ವ್ಯಾಪ್ತಿಯನ್ನು ಈ ಮೂಲಕ ಹಿಗ್ಗಿಸಿದ ಕನ್ನಡದ ಲೇಖಕರಿಗೆ ನಾವು ಋಣಿಗಳಾಗಿರಬೇಕು. ಆದರೆ ಇದೇ ಸಂದರ್ಭ ಪಾಶ್ಚಿಮಾತ್ಯ ಚಿಂತಕರಿಗೆ ಮುಖಾಮುಖಿಯಾಗಿ ನಿಂತ ನಮ್ಮ ಬಹಳಷ್ಟು ಲೇಖಕರು ಕನ್ನಡದ ರನ್ನ, ಪಂಪ, ಅಲ್ಲಮ, ಬಸವಣ್ಣ, ಕಾಳಿದಾಸ, ಕುವೆಂಪು, ಬೇಂದ್ರೆ ಅವರನ್ನು ತಮ್ಮ ಬರಹಕ್ಕೆ ಅದೇಕೆ ಕರೆದುಕೊಂಡು ಬರಲಿಲ್ಲ?.  ಈ ನೆಲದ ತತ್ವ ಜಾನಪದಕಾರ ಶಿಶುನಾಳ ಶರೀಪರು ನಮಗೆ ದಕ್ಕಿದ್ದು ಸಿನಿಮಾ ಮತ್ತು ಹಾಡುಗಳ ಮೂಲಕ ಮಾತ್ರ ಎನ್ನುವುದನ್ನು ನಾನು ಈ ಸಂದರ್ಭ ಉಲ್ಲೇಖಿಸಲು  ಬಯಸುತ್ತೇನೆ. ಈ ನಾಡಿನ ಚಳುವಳಿಗಾರರನ್ನು ಗುರುತಿಸುವಲ್ಲಿ  ಕೂಡ ನಮ್ಮ ಲೇಖಕರು ಎಡವಿದ್ದು ಕನ್ನಡ ಸಾಹಿತ್ಯ ಲೋಕದ ಬಹುದೊಡ್ಡ ದುರಂತಗಳಲ್ಲೊಂದು. ಮಾರ್ಕ್ಸ್, ಲೆನಿನ್, ರುಸೋ ಇವರುಗಳ ಚಿಂತನೆ ಎದುರು ಗಾಂಧಿಯ ವಿಚಾರಗಳು ಸಹ ಮಂಕಾಗಿವೆ. ಗಾಂಧಿ ಮತ್ತು ಲೋಹಿಯಾ ಅಲ್ಲಲ್ಲಿ ಒಂದಿಷ್ಟು ಕನ್ನಡದ ಲೇಖಕರಿಗೆ ದಕ್ಕಿದ್ದು ಬಿಟ್ಟರೆ ಕನ್ನಡದವರೇ ಆದ ಶಾಂತವೇರಿ ಗೋಪಾಲಗೌಡರು, ಕಡಿದಾಳ ಮಂಜಪ್ಪನವರು, ಗಣಪತಿಯಪ್ಪನವರಂಥ ಚಳುವಳಿಗಾರರ ಉಲ್ಲೇಖ ಕನ್ನಡ ಸಾಹಿತ್ಯದಲ್ಲಿ ಬಹಳಷ್ಟು ಕಡಿಮೆ. ಭೂ ಮಾಲೀಕರ ವಿರುದ್ಧ ದಂಗೆ ಎದ್ದ ಸಿಂಧೂರ ಲಕ್ಷ್ಮಣನನ್ನು ಕಥೆ ಕಾದಂಬರಿಗಳಲ್ಲಿ ಕಳ್ಳನಂತೆ ಚಿತ್ರಿಸಲಾಗಿದೆ.

      ಕನ್ನಡ ಸಾಹಿತ್ಯದ ಕುರಿತಾದ  ಸಧ್ಯದ ಸನ್ನಿವೇಶಗಳು ನನ್ನನ್ನು ಆತಂಕಗೊಳಿಸುತ್ತಿರುವ ಈ ಸಮಯದಲ್ಲೇ ಕನ್ನಡ ಭಾಷೆಯ ಸಿನಿಮಾ ಮತ್ತು ರಂಗಭೂಮಿ ಕೂಡ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಸಾಹಿತ್ಯದಂತೆ ಸಿನಿಮಾ ಮತ್ತು ರಂಗಭೂಮಿ ಸಹ ಭಾಷೆಯೊಂದರ ಸೃಜನಶೀಲ ಮತ್ತು ಅಭಿವ್ಯಕ್ತಿ ಮಾಧ್ಯಮಗಳು. ನೂರು ವರ್ಷಗಳ ಇತಿಹಾಸವಿರುವ ಸಿನಿಮಾ ರಂಗ ಕನ್ನಡ ಭಾಷೆಯ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದೆ. ನಾಡಿನ ಇತಿಹಾಸ, ವೈಭವ, ಸಾಂಸ್ಕೃತಿಕ ಪರಂಪರೆಯನ್ನು ಆಧರಿಸಿ ಅನೇಕ ಸಿನಿಮಾಗಳು ನಿರ್ಮಾಣಗೊಂಡಿವೆ. ಈ ನೆಲದ ದಾರ್ಶನಿಕರು, ಚಿಂತಕರು, ಹೋರಾಟಗಾರರು, ಚಳವಳಿಗಾರರು, ಸಂತರು, ಶರಣರನ್ನು ಪರಿಚಯಿಸುವ ಆದರ್ಶದ ಕೆಲಸ ಈ ಸಿನಿಮಾಗಳಿಂದಾಗಿದೆ. ಒಟ್ಟಿನಲ್ಲಿ ಸೃಜನಶೀಲ  ಮಾಧ್ಯಮವಾಗಿ ಸಿನಿಮಾ ನಮ್ಮ ಗತ ವೈಭವವನ್ನು ನಮ್ಮ ಕಣ್ಣೆದುರು ಅನಾವರಣಗೊಳಿಸಿದಷ್ಟೇ ಅದು ಅಭಿವ್ಯಕ್ತಿ ಮಾಧ್ಯಮವಾಗಿಯೂ  ಸಮಾಜದಲ್ಲಿನ ಶೋಷಣೆಗೆ ಒಳಗಾದವರ ಧ್ವನಿಯಾಗಿ ತನ್ನನ್ನು ಸಶಕ್ತವಾಗಿ ಬಿಂಬಿಸಿಕೊಂಡಿದೆ. ಸಿನಿಮಾ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿದ್ದರಿಂದಲೇ ಕನ್ನಡ ಭಾಷೆಯಲ್ಲಿ ಬರ, ಫಣಿಯಮ್ಮ, ತಬ್ಬಲಿ ನೀನಾದೆ ಮಗನೆ, ಘಟಶ್ರಾದ್ಧ, ಚೋಮನ ದುಡಿ ಯಂಥ ಸೂಕ್ಷ್ಮ ಸಂವೇದನೆಯ ಸಿನಿಮಾಗಳು ನಿರ್ಮಾಣಗೊಳ್ಳಲು ಸಾಧ್ಯವಾಯಿತು. ಕಾದಂಬರಿ ಆಧಾರಿತ ಸಿನಿಮಾಗಳು ನಿರ್ಮಾಣ ಮಾಡುವುದರ ಮೂಲಕ ಕನ್ನಡ ಚಿತ್ರರಂಗ ಕನ್ನಡ ಸಾಹಿತ್ಯಕ್ಕೆ ಅಪಾರ ಓದುಗ ಬಳಗವನ್ನು ತಂದು ಕೊಟ್ಟಿತು ಎನ್ನುವ ಹೆಗ್ಗಳಿಕೆ ನಮ್ಮ ಕನ್ನಡ ಸಿನಿಮಾಗಳದ್ದು. ಈ ನೆಲದ ಭಾಷೆ ಮತ್ತು ಸಂಸ್ಕೃತಿಗೆ ಅಪಾಯ ಎದುರಾದಾಗಲೆಲ್ಲ ನಮ್ಮ ಸಿನಿಮಾ ಕಲಾವಿದರು ಮತ್ತು ತಂತ್ರಜ್ಞರು ಹೋರಾಟ ಮತ್ತು ಚಳವಳಿಯ ಮೂಲಕ ಬೆಂಬಲಕ್ಕೆ ನಿಂತ ಉದಾಹರಣೆಗಳೂ ನಮ್ಮೆದುರಿವೆ. ಹೀಗೆ ಅತ್ಯಂತ ಸೃಜನಶೀಲ ನೆಲೆಯಲ್ಲಿ ರೂಪುಗೊಂಡ ಕನ್ನಡ ಸಿನಿಮಾರಂಗ ಕಾಲಾನಂತರದಲ್ಲಿ ಅನೇಕ ಬದಲಾವಣೆಗಳಿಗೆ ಸಿಕ್ಕು ತನ್ನ ಮೂಲ ಉದ್ದೇಶವನ್ನೇ ಮರೆತು ವಾಣಿಜ್ಯಕರಣಗೊಳ್ಳುತ್ತ ಹೋಯಿತು.  ಹಣ ಗಳಿಕೆಯೇ  ಸಿನಿಮಾ ನಿರ್ಮಾಣದ ಉದ್ದೇಶವಾಗಿ ಈಗದು ಹಣ ಹೂಡಿಕೆಯ ಉದ್ಯಮವಾಗಿ ರೂಪಾಂತರಗೊಂಡಿದೆ. ಲಾಭ  ನಷ್ಟಗಳ ಲೆಕ್ಕಾಚಾರಗಳ ಮಧ್ಯೆ ಸಿಲುಕಿರುವ ಸಿನಿಮಾ ಮಾಧ್ಯಮ ತನ್ನ ಮೂಲ ಉದ್ದೇಶದಿಂದ ಬಹುದೂರ ಸಾಗಿ ಬಂದಿರುವುದರಿಂದ ಇಲ್ಲಿ ಮೆಂಟಲ್ ಮಂಜ, ಜಂಗ್ಲಿ, ಹುಚ್ಚ, ಜಾಕಿ, ಜಾನಿ, ಹೊಡಿಮಗಾದಂಥ ಸಿನಿಮಾಗಳು ಮತ್ತು ಅಪ್ಪಾ ಲೂಜಾ ಅಮ್ಮ ಲೂಜಾದಂಥ ಹಾಡುಗಳು ಜನಪ್ರಿಯವಾಗಲು ಸಾಧ್ಯವಾಯಿತು. ಜೊತೆಗೆ ಪರಭಾಷೆಯ ಸಿನಿಮಾಗಳ ವ್ಯಾಮೋಹಕ್ಕೆ ಬಲಿಯಾದ ನಮ್ಮ ಸಿನಿಮಾ ಜನ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ಕನ್ನಡ ಭಾಷೆಗೆ ಭಟ್ಟಿ ಇಳಿಸುತ್ತಿರುವರು. ಒಟ್ಟಿನಲ್ಲಿ ಈ ನೆಲದ ಸಂಸ್ಕೃತಿಗೆ ಸಂಬಂಧವೇ ಇಲ್ಲದ ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ ಮತ್ತು ಅಂಥ ಸಿನಿಮಾಗಳನ್ನು ಪ್ರೇಕ್ಷಕರೂ ಜನಪ್ರಿಯಗೊಳಿಸುತ್ತಿರುವರು. ಸೃಜನಶೀಲ ಮಾಧ್ಯಮವಾದ ಸಿನಿಮಾ ಈಗ ತಪ್ಪು  ದಾರಿಯಲ್ಲಿದೆ ಎನ್ನುವುದು ಸಿನಿಮಾವನ್ನು  ಉತ್ಕಟವಾಗಿ ಪ್ರೀತಿಸುವ ಪ್ರೇಕ್ಷಕರ ಆತಂಕ.

     ಸಿನಿಮಾ ಉದ್ಯಮ ಭದ್ರವಾಗಿ ನೆಲೆಯೂರಿ ನಿಲ್ಲಲ್ಲು ಕಾರಣವಾದದ್ದು ರಂಗಭೂಮಿ. ರಂಗಭೂಮಿ ಸಿನಿಮಾ ಮಾಧ್ಯಮಕ್ಕೆ ಅನೇಕ ಕಲಾವಿದರು ಮತ್ತು  ತಂತ್ರಜ್ಞರನ್ನು ಬಳುವಳಿಯಾಗಿ ನೀಡಿದೆ. ಹುಣಸೂರು ಕೃಷ್ಣಮೂರ್ತಿ, ಸುಬ್ಬಯ್ಯ ನಾಯ್ಡು, ರಾಜಕುಮಾರ, ಕೆ ವಿ ಅಯ್ಯರ, ನರಸಿಂಹರಾಜು ಇವರೆಲ್ಲ ರಂಗಭೂಮಿಯಿಂದ ಸಿನಿಮಾ ಮಾಧ್ಯಮಕ್ಕೆ ವಲಸೆ ಬಂದು ಹೆಸರು ಮಾಡಿದರು. ಗುಬ್ಬಿ ವೀರಣ್ಣನವರ ನಾಟಕ ಕಂಪನಿ ಅನೇಕ ಕಲಾವಿದರಿಗೆ ಆಶ್ರಯತಾಣವಾಗಿತ್ತು. ಸಿನಿಮಾ ಮಾಧ್ಯಮ ಇನ್ನೂ ಕಾಲೂರಿ ನಿಲ್ಲಲ್ಲು ಪ್ರಯತ್ನಿಸುತ್ತಿದ್ದ ಸಮಯದಲ್ಲಿ ರಂಗಭೂಮಿ ಅದಾಗಲೇ ಅತ್ಯುತ್ತಮ ರಂಗ ಪ್ರಯೋಗಗಳಿಂದ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಐತಿಹಾಸಿಕ ಮತ್ತು ಪೌರಾಣಿಕ  ನಾಟಕಗಳಿಂದ ರಂಗಭೂಮಿ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕ ವರ್ಗವನ್ನು ತನ್ನತ್ತ ಆಕರ್ಷಿಸುವಲ್ಲಿ ಯಶಸ್ಸನ್ನು ಕಂಡಿತ್ತು. ರಂಗಭೂಮಿಯ ಜನಪ್ರಿಯತೆ ಹೆಚ್ಚುವಲ್ಲಿ ಪ್ರೇಕ್ಷಕರ ಕೊಡುಗೆಯೂ ಗಣನೀಯವಾಗಿತ್ತು. ಜೊತೆಗೆ ರಂಗಭೂಮಿಯ ಇನ್ನೊಂದು ಮಹತ್ವದ ಸೃಜನಶೀಲ ಕೊಡುಗೆ ಎಂದರೆ ಅದು ಅಪರೋಕ್ಷವಾಗಿ ಅತ್ಯುತ್ತಮ ಸಿನಿಮಾ ಕಲಾವಿದರನ್ನು ರೂಪಿಸಿದ್ದು. ಸಿನಿಮಾಗಳಲ್ಲಿ ಅಭಿನಯಿಸುವುದಕ್ಕಿಂತ ಮೊದಲು ಪೂರ್ವಭಾವಿಯಾಗಿ ಒಂದಿಷ್ಟು ರಂಗಭೂಮಿಯ ತಾಲೀಮು ದೊರೆಯಲಿ ಎನ್ನುವುದು ಪ್ರಾಮುಖ್ಯತೆ ಪಡೆಯಿತು. ವಿಪರ್ಯಾಸದ ಸಂಗತಿ ಎಂದರೆ ಯಾವ ರಂಗಭೂಮಿ ಸಿನಿಮಾ ಮಾಧ್ಯಮವನ್ನು ಬೆಳೆಸಿತೋ ಮುಂದೊಂದು ದಿನ ಅದೇ ಮಾಧ್ಯಮಕ್ಕೆ ಬಲಿಯಾಗಿ ತನ್ನ ಜನಾಕರ್ಷಣೆಯನ್ನು ಕಳೆದುಕೊಂಡಿತು. ಪರದೆಯ ಮೇಲೆ ನೋಡುವ ಸಿನಿಮಾ ವೀಕ್ಷಣೆಯ ಎದುರು ನಾಟಕದ ನೋಡು ಸಪ್ಪೆ ಎನಿಸಲಾರಂಭಿಸಿತು. ಹೀಗೆ ಸಿನಿಮಾದ ಜನಪ್ರಿಯತೆ ಮತ್ತು ಪ್ರೇಕ್ಷಕರ ಬದಲಾದ ಅಭಿರುಚಿಯ ಪರಿಣಾಮ ರಂಗಭೂಮಿಯ ಕಲಾವಿದರುಗಳಿಗೆ ಬದುಕಿನ ಪ್ರಶ್ನೆ ಎದುರಾಯಿತು. ಬದಲಾದ ಕಾಲಘಟ್ಟದಲ್ಲಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ರಂಗಭೂಮಿ ಒಂದಿಷ್ಟು ಬದಲಾವಣೆಗೆ ತನ್ನನ್ನು  ತೆರೆದು ಕೊಂಡಿತು. ದ್ವಂದ್ವಾರ್ಥದ ಸಂಭಾಷಣೆ, ಕಾಮ ಪ್ರಚೋದನೆಯ ಕಥೆ, ಮಾದಕ ನೃತ್ಯ  ಇತ್ಯಾದಿ ಹೊಸ ಹೊಸ ಪ್ರಯೋಗಗಳಿಗೆ  ಆದ್ಯತೆ ಕೊಡುವುದು ಅನಿವಾರ್ಯವಾಯಿತು. ಈ ರೂಪಾಂತರದಿಂದ ರಂಗಭೂಮಿ ಕಳೆದು ಹೋದ ಒಂದಿಷ್ಟು ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾದರೂ ಅದು ಸದಭಿರುಚಿಯ ಪ್ರೇಕ್ಷಕ ವರ್ಗವನ್ನು ಕಳೆದುಕೊಂಡಿತು. ಮುಂದೊಂದು ದಿನ ಈ ಬದಲಾವಣೆಯೇ ರಂಗಭೂಮಿಯನ್ನು ವೃತ್ತಿಪರ ಮತ್ತು ಹವ್ಯಾಸಿ ಎನ್ನುವ ಒಡಕಿಗೂ ಕಾರಣವಾಯಿತು. ನೀನಾಸಂ ಮತ್ತು ರಂಗಾಯಣ ನಾಟಕ ಸಂಘಗಳು ರಂಗಭೂಮಿಯನ್ನು ಸೃಜನಶೀಲತೆಯ ನೆಲೆಯಲ್ಲಿ ಮತ್ತೆ ರೂಪಿಸಲು ಪ್ರಯತ್ನಿಸುತ್ತಿರುವ ಹೊತ್ತಿನಲ್ಲೇ ವೃತ್ತಿಪರ ನಾಟಕ ಸಂಘಗಳು ಪ್ರೇಕ್ಷಕರ ಅಭಿರುಚಿಯನ್ನು ಕೀಳುಮಟ್ಟಕ್ಕಿಳಿಸಿ ರಂಗಭೂಮಿಯ ಅವನತಿಗೆ ಕಾರಣವಾಗಿವೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ