Saturday, October 3, 2020

ಈ ಹೊತ್ತಿನ ತುರ್ತು ಇ-ಹೊತ್ತಿಗೆ

         


(ದಿನಾಂಕ ೧೨.೦೮.೨೦೨೦ ರ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)

       ಕೊರೊನಾ ವೈರಾಣು ಸೃಷ್ಟಿಸಿರುವ ಈ ಆತಂಕದ ಸನ್ನಿವೇಶದಲ್ಲಿ ಹಲವು ಉದ್ಯಮಗಳಂತೆ ಪುಸ್ತಕೋದ್ಯಮ ಕೂಡ ತನ್ನ ಮಗ್ಗಲು ಬದಲಿಸಿದೆ. ಈ ಮೊದಲು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗಷ್ಟೇ ಸೀಮಿತವಾಗಿದ್ದ ಇ-ಪುಸ್ತಕ ಎನ್ನುವ ಪರಿಕಲ್ಪನೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಕಾಲಿಟ್ಟಿದೆ. ಲಾಕ್‍ಡೌನ್ ಅವಧಿಯಲ್ಲಿ ಪುಸ್ತಕ ಪ್ರಕಟಣೆಯ ಕೆಲಸ ಸ್ಥಗಿತಗೊಂಡಿದ್ದರ ಕಾರಣ ಕೆಲವು ಪ್ರಕಾಶಕರು ಇ-ಪುಸ್ತಕದ ಮೊರೆ ಹೋದರು. ‘ಛಂದ’ದ ವಸುಧೇಂದ್ರ ತಮ್ಮ ಪ್ರಕಾಶನದ ಎಲ್ಲ ಪುಸ್ತಕಗಳನ್ನು 50 ಪ್ರತಿಶತ ರಿಯಾಯಿತಿ ದರದಲ್ಲಿ ಇ-ಪುಸ್ತಕ ರೂಪದಲ್ಲಿ ಓದುಗರಿಗೆ ಒದಗಿಸುವ ವ್ಯವಸ್ಥೆ ಮಾಡಿದರು. ವಸುಧೇಂದ್ರರ ಈ ಯೋಜನೆ ಅನೇಕ ಪ್ರಕಾಶಕರಿಗೆ ಸ್ಪೂರ್ತಿ ನೀಡಿ ಅವರು ಕೂಡ ಭವಿಷ್ಯದಲ್ಲಿ ಇ-ಪುಸ್ತಕ ಪ್ರಕಟಣೆಯನ್ನು ಕಾರ್ಯರೂಪಕ್ಕೆ ತರುವ ಮಾತುಗಳನ್ನಾಡಿದರು. ಮನೋಹರ ಗ್ರಂಥಮಾಲೆಯವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಪ್ರಕಾಶನ ಸಂಸ್ಥೆಯಲ್ಲಿ ಈ ಮೊದಲು ಪ್ರಕಟವಾದ ಪುಸ್ತಕಗಳ ಡಿಜಿಟಲೀಕರಣದ ಕೆಲಸ ಆರಂಭಗೊಂಡಿದೆ ಎಂದು ಹೇಳಿದರು.

    ಕನ್ನಡದ ಬಹುತೇಕ ಪ್ರಕಾಶಕರು ಇ-ಪುಸ್ತಕದ ಕುರಿತು ಆಸ್ಥೆ ತಳೆಯಲು ಕಾರಣಗಳಿಲ್ಲದಿಲ್ಲ. ಪುಸ್ತಕ ಪ್ರಕಟಣೆಗಾಗಿ ಬಳಸುವ ಕಚ್ಚಾ ಸಾಮಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಪ್ರಕಾಶಕರಿಗೆ ಪುಸ್ತಕ ಪ್ರಕಟಣೆ ಎನ್ನುವುದು ಆರ್ಥಿಕವಾಗಿ ಹೊರೆಯಾಗುತ್ತಿದೆ. ಕಾಗದ, ಮುದ್ರಣದ ಖರ್ಚು, ಲೇಖಕರಿಗೆ ಗೌರವಧನ, ಪುಸ್ತಕಗಳ ಸಾಗಾಣಿಕೆಯ ವೆಚ್ಚ ಇದನ್ನೆಲ್ಲ ಪ್ರಕಾಶಕರು ಭರಿಸಬೇಕಾಗಿದೆ. ಈ ನಡುವೆ ಪ್ರಕಟವಾದ ಪುಸ್ತಕಗಳನ್ನು ವರ್ಣರಂಜಿತ ಸಮಾರಂಭದ ಅದ್ದೂರಿ ವೇದಿಕೆಯ ಮೇಲೆ ಬಿಡುಗಡೆ ಮಾಡಬೇಕಾದ ಅನಿವಾರ್ಯತೆ. ಪುಸ್ತಕ ಬಿಡುಗಡೆಯ ಆಹ್ವಾನ ಪತ್ರಿಕೆ, ಸಮುದಾಯ ಭವನದ ಬಾಡಿಗೆ, ಗಣ್ಯರ ಅಧ್ಯಕ್ಷತೆ, ಆಹ್ವಾನಿತರಿಗೆ ಭೋಜನ/ಉಪಹಾರದ ವ್ಯವಸ್ಥೆ, ಪತ್ರಿಕಾ ಮಾಧ್ಯಮದವರಿಗೆ ಗೌರವ ಪ್ರತಿ ಹೀಗೆ ಅನೇಕ ಗಿಮಿಕ್‍ಗಳನ್ನು ಪುಸ್ತಕ ಬಿಡುಗಡೆಗಾಗಿ ಅನುಸರಿಸಬೇಕು. ಪುಸ್ತಕಗಳ ಬಿಡುಗಡೆಯ ನಂತರವೂ ಚರ್ಚೆ, ಸಂವಾದಗಳ ಮೂಲಕÀ ವ್ಯಾಪಕ ಪ್ರಚಾರ ಒದಗಿಸಬೇಕು. ಈ ಎಲ್ಲ ತಂತ್ರಗಳನ್ನು ಅನುಸರಿಸಿದಾಗ ಮಾತ್ರ ಪ್ರಕಾಶಕ ಪುಸ್ತಕೋದ್ಯಮದಲ್ಲಿ ತಳವೂರಿ ನಿಲ್ಲಲು ಸಾಧ್ಯ ಎನ್ನುವಂಥ ವಾತಾವರಣ ನಿರ್ಮಾಣವಾಗಿದೆ.

    ಕನ್ನಡ ಪುಸ್ತಕೋದ್ಯಮದಲ್ಲಿ ಪ್ರಕಾಶಕರು ಎದುರಿಸುತ್ತಿರುವ ಇನ್ನೊಂದು ಮುಖ್ಯ ಸಮಸ್ಯೆ ಎಂದರೆ ಅದು ಓದುಗರು ಪುಸ್ತಕಗಳ ಖರೀದಿಯಲ್ಲಿ ಅಪೇಕ್ಷಿಸುತ್ತಿರುವ ಅಧಿಕ ಪ್ರಮಾಣದ ರಿಯಾಯಿತಿ. ಇಂಗ್ಲಿಷ್ ಭಾಷೆಯಲ್ಲಿನ ಪುಸ್ತಕಗಳ ಮಾರಾಟಕ್ಕಾಗಿ ರಿಯಾಯಿತಿಯಲ್ಲಿ ತೋರಿಸುತ್ತಿರುವ ಧಾರಾಳತನ ಕನ್ನಡ ಭಾಷೆಯ ಪುಸ್ತಕಗಳ ಮಾರಾಟಕ್ಕೆ ತೊಡಕಾಗಿ ಪರಿಣಮಿಸಿದೆ. ಇಂಗ್ಲಿಷ್ ಪುಸ್ತಕಗಳ ಮಾರಾಟಕ್ಕೆ ವಿಸ್ತೃತ ಮಾರುಕಟ್ಟೆ ಇರುವುದರಿಂದ ಅದೇ ಧಾರಾಳತನವನ್ನು ಸೀಮಿತ ಮಾರುಕಟ್ಟೆ ಹೊಂದಿರುವ ಕನ್ನಡ ಪುಸ್ತಕಗಳ ಖರೀದಿಯಲ್ಲಿ ಅಪೇಕ್ಷಿಸುವುದು ತಪ್ಪು. ಇಂಥ ತಪ್ಪುಗಳು ಓದುಗರಿಗೆ ಮನವರಿಕೆಯಾಗಬೇಕು.

ಮಧ್ಯವರ್ತಿಗಳು ಅಂದರೆ ಮಾರಾಟಗಾರರು ವಸ್ತುಗಳ ಖರೀದಿಯಲ್ಲಿ ಉತ್ಪಾದಕರಿಗೆ ಮುಂಗಡ ಹಣ ಪಾವತಿಸಿದ ಉದಾಹರಣೆಯೇ ಇಲ್ಲ. ವಸ್ತುಗಳ ಮಾರಾಟದ ನಂತರ ಉತ್ಪಾದಕರಿಗೆ ಹಣ ಪಾವತಿಸುವ ರೂಢಿಯನ್ನು ಅನುಚಾನವಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ಈ ರೂಢಿ ಪುಸ್ತಕಗಳ ಮಾರಾಟಕ್ಕೂ ಅನ್ವಯವಾಗುತ್ತಿದೆ. ಸಾಮಾನ್ಯವಾಗಿ ಪುಸ್ತಕ ಮಾರಾಟಗಾರರು ಪ್ರಕಾಶಕರಿಗೆ ಹಣವನ್ನು ವಿಳಂಬವಾಗಿ ಪಾವತಿಸುವರು. ಪ್ರಕಾಶಕರು ತಮ್ಮ ಪುಸ್ತಕಗಳ ಮಾರಾಟಕ್ಕಾಗಿ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಪುಸ್ತಕ ವ್ಯಾಪಾರಿಗಳನ್ನು ಅವಲಂಬಿಸಿರುವರು. ಶಿಕ್ಷಣ ಸಂಸ್ಥೆಗಳಾಗಲಿ ಮತ್ತು ಪುಸ್ತಕ ವ್ಯಾಪಾರಿಗಳಾಗಲಿ ಮುಂಗಡ ಹಣ ಪಾವತಿಸಿ ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸುವುದಿಲ್ಲ. ಮಾರಟವಾದ ಪುಸ್ತಕಗಳ ಹಣ ಪಡೆಯುವುದಕ್ಕಾಗಿ ಪ್ರಕಾಶಕರು ಹಲವು ತಿಂಗಳುಗಳ ಕಾಲ ಕಾಯಬೇಕಾಗುತ್ತದೆ. ಹಣ ಪಡೆಯುವುದಕ್ಕಾಗಿ ಪ್ರಕಾಶಕರು ನ್ಯಾಯಾಲಯದ ಮೊರೆ ಹೋಗಬೇಕಾದ ಸಂದರ್ಭಗಳೂ ಉಂಟು. ಕೆಲವೊಮ್ಮೆ ಖರೀದಿಯಾದ ಪುಸ್ತಕಗಳು ತಿರಸ್ಕೃತಗೊಂಡು ಮತ್ತೆ ಮರಳಿ ಪ್ರಕಾಶಕರ ಕೈಸೇರುವುದುಂಟು.

    ಪ್ರಕಾಶಕರಿಗೆ ಆರ್ಥಿಕವಾಗಿ ಅನುಕೂಲವಾಗಲೆಂದು ಸಾರ್ವಜನಿಕ ಗ್ರಂಥಾಲಯಗಳಿಗೆ ಇಂತಿಷ್ಟು ಸಂಖ್ಯೆಯಲ್ಲಿ ಪುಸ್ತಕಗಳನ್ನು ಮಾರಾಟ ಮಾಡುವ ಯೋಜನೆ ಚಾಲ್ತಿಯಲ್ಲಿದೆ. ಆದರೂ ಈ ಯೋಜನೆಯಲ್ಲಿಯೂ ಅನೇಕ ಸಮಸ್ಯೆಗಳು ಮತ್ತು ಲೋಪದೋಷಗಳಿವೆ. ಸಾರ್ವಜನಿಕ ಗ್ರಂಥಾಲಯಕ್ಕೆ ಪುಸ್ತಕ ಖರೀದಿಸುವಾಗ ಪುಸ್ತಕದ ಮುಖಬೆಲೆಯ ಬದಲಾಗಿ ಪ್ರತಿಪುಟಕ್ಕೆ ಇಂತಿಷ್ಟು ಪೈಸೆಗಳೆಂದು ಸರ್ಕಾರ ನಿಗದಿಪಡಿಸಿದೆ. ಜೊತೆಗೆ ಖರೀದಿಸುವ ಪುಸ್ತಕದ ಪ್ರತಿಗಳ ಸಂಖ್ಯೆಯನ್ನು ಕೂಡ ನಿಗದಿಪಡಿಸಲಾಗಿದೆ. ಈ ಎಲ್ಲ ನಿರ್ಬಂಧನೆಗಳಿಗೆ ಒಳಗಾಗಿಯೂ ಪ್ರಕಾಶಕರು ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಮಾರಾಟ ಮಾಡುವುದೇ ಅದೊಂದು ದೊಡ್ಡ ಸಾಹಸವಾಗಿ ಪರಿಣಮಿಸಿದೆ. ಲಾಬಿ, ಶಿಫಾರಸ್ಸು, ಅಧಿಕಾರಿಗಳ ಓಲೈಕೆಯಂಥ ತಂತ್ರಗಳ ಮೊರೆ ಹೋಗಬೇಕಾಗುವುದು. ಜೊತೆಗೆ ಸಾರ್ವಜನಿಕ ಗ್ರಂಥಾಲಯಗಳಿಗೆಂದೇ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರ ಪೈಪೋಟಿಯನ್ನು ಎದುರಿಸಬೇಕು. ಇಂಥ ಸನ್ನಿವೇಶದಲ್ಲಿ ಪುಸ್ತಕ ಪ್ರಕಟಣೆಯಲ್ಲಿ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಪ್ರಕಾಶನ ಸಂಸ್ಥೆಗಳು ಉಳಿದು ಬೆಳೆಯುವುದು ಕಷ್ಟಸಾಧ್ಯವಾದ ಸಂಗತಿ.

     ಕನ್ನಡ ಪುಸ್ತಕೋದ್ಯಮ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಇ-ಪುಸ್ತಕ ಪ್ರಕಟಣೆಯು ಪ್ರಕಾಶಕರಿಗೆ ಅದೊಂದು ಪರಿಹಾರ ಮಾರ್ಗವಾಗಿ ಕಾಣಿಸುತ್ತಿದೆ. ಪ್ರಕಟಣೆಗೆ ಅಗತ್ಯವಾದ ಕಚ್ಚಾ ಸಾಮಗ್ರಿಗಳ ಖರೀದಿ, ಪ್ರಕಟಿತ ಪುಸ್ತಕಗಳ ಬಿಡುಗಡೆ ಸಮಾರಂಭ, ಗಣ್ಯರಿಗೆ ಗೌರವ ಪ್ರತಿ, ಪುಸ್ತಕಗಳ ಸಾಗಾಣಿಕೆ ಈ ಎಲ್ಲ ಖರ್ಚುಗಳನ್ನು ಉಳಿಸುವ ‘ಇ-ಪುಸ್ತಕ’ದ ಪರಿಕಲ್ಪನೆಯೇ ಪ್ರಕಾಶಕರಿಗೆ ಈ ಯೋಜನೆಯತ್ತ ಹೊರಳುವಂತೆ ಉತ್ತೇಜಿಸುತ್ತಿದೆ. ಪರಿಣಾಮವಾಗಿ ಅನೇಕ ಪ್ರಕಾಶಕರು ಇ-ಪುಸ್ತಕ ಯೋಜನೆಯನ್ನು ಆದಷ್ಟು ಬೇಗನೆ ಅನುಷ್ಠಾನಗೊಳಿಸುವ ಉತ್ಸಾಹದಲ್ಲಿರುವರು.

ಪ್ರಕಾಶಕರು ಇ-ಪುಸ್ತಕದ ಮೊರೆ ಹೋಗುತ್ತಿರುವ ಸಂದರ್ಭ ಈ ಯೋಜನೆಯ ಅಂತಿಮ ಫಲಾನುಭವಿಗಳ ಅಂದರೆ ಓದುಗರ ಕುರಿತು ವಿವೇಚಿಸುವುದು ಒಳಿತು. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‍ಗಳನ್ನು ಬಳಸಿ ಆನ್‍ಲೈನ್ ಮೂಲಕ ಪುಸ್ತಕಗಳನ್ನು ಖರೀದಿಸುವ ಓದುಗರ ಸಂಖ್ಯೆಯೇ ವಿರಳವಾಗಿರುವಾಗ ಇನ್ನು ಇ-ಪುಸ್ತಕಗಳಿಗೆ ಓದುಗರನ್ನು ಲಭ್ಯವಾಗಿಸುವುದೊಂದು ದೊಡ್ಡ ಸಾಹಸವೇ ಸರಿ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇ-ಪುಸ್ತಕವನ್ನು ಅಸಂಖ್ಯಾತ ಓದುಗರಿಗೆ ಸುಲಭವಾಗಿ ತಲುಪಿಸಬಹುದು. ಆದರೆ ಇದೇ ಮಾತನ್ನು ಕನ್ನಡ ಸಾಹಿತ್ಯ ಕೃತಿಗಳನ್ನು ಓದುವ ಓದುಗರಿಗೆ ಅನ್ವಯಿಸಿ ಹೇಳುವುದು ತಪ್ಪು ನಿರ್ಧಾರವಾಗುತ್ತದೆ. ವೃತ್ತಿಯ ಕಾರಣದಿಂದ ಪ್ರತಿನಿತ್ಯ ಬಹುಪಾಲು ಸಮಯವನ್ನು ಇ-ಪುಸ್ತಕಗಳು, ಇ-ನಿಯತಕಾಲಿಕೆಗಳ ನಡುವೆಯೇ ಕಳೆಯುವ ನನಗೆ ಕನ್ನಡ ಸಾಹಿತ್ಯ ಕೃತಿಗಳನ್ನು ಪ್ರಕಟಿತ ಪುಸ್ತಕ ರೂಪದಲ್ಲಿ ಓದುವುದೇ ಚೆಂದದ ಸಂಗತಿ. ಅಲ್ಲಲ್ಲಿ ಸಾಲುಗಳ ಕೆಳಗೆ ಗೆರೆ ಎಳೆದು, ಪ್ರಶ್ನಾರ್ಥಕ ಚಿನ್ಹೆ ಮೂಡಿಸಿ, ಪಕ್ಕದ ಖಾಲಿಯಿರುವ ಮಾರ್ಜಿನ್‍ನಲ್ಲಿ ಟಿಪ್ಪಣಿ ಬರೆದು ಪುಸ್ತಕವನ್ನು ಓದಿದಾಗಲೇ ಅದರಲ್ಲಿನ ವಿಚಾರಗಳು ಅಂತರಾಳಕ್ಕಿಳಿಯಲು ಸಾಧ್ಯ ಎನ್ನುವ ಮನೋಭಾವದ ಓದುಗರ ಸಂಖ್ಯೆ ಬಹಳಷ್ಟಿದೆ. ಜೊತೆಗೆ ಕನ್ನಡ ಪುಸ್ತಕಗಳನ್ನೊದುವ ಓದುಗರ ವಯೋಮಾನವನ್ನು ಪರಿಗಣನೆಗೆ ತೆಗೆದುಕೊಂಡಾಗ ಅವರಲ್ಲಿ ವೃದ್ಧರ ಮತ್ತು ಮಧ್ಯವಯಸ್ಕರ ಸಂಖ್ಯೆಯೇ ಹೆಚ್ಚು. ಈ ವಯೋಮಾನದ ಓದುಗರನ್ನು ಇ-ಪುಸ್ತಕದ ಓದಿಗೆ ಹೊಂದಿಕೊಳ್ಳುವಂತೆ ಮಾಡುವುದು ಅದೊಂದು ಸವಾಲಿನ ಕೆಲಸ. ಪುಸ್ತಕವನ್ನು ಕೈಯಲ್ಲಿ ಹಿಡಿದು ಅದರ ಹಾಳೆಗಳನ್ನು ಮುಗುಚುತ್ತ ಓದುವಾಗ ದೊರೆಯುವ ಅನುಭೂತಿ ಅದೇ ಪುಸ್ತಕವನ್ನು ಕಂಪ್ಯೂಟರ್ ಪರದೆಯ ಮೇಲೆ ಓದುವಾಗ ಪ್ರಾಪ್ತವಾಗಲಾರದು. ಪ್ರಕಾಶಕರು ಇ-ಪುಸ್ತಕ ಯೋಜನೆಯನ್ನು ಕಾರ್ಯರೂಪಕ್ಕೆ ತಂದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರ ಅಸಂಖ್ಯಾತ ಓದುಗರನ್ನು ಕಳೆದುಕೊಳ್ಳಬಹುದೆನ್ನುವ ಆತಂಕ ಸೃಷ್ಟಿಯಾಗಿದೆ. ಈ ಆತಂಕದ ನಡುವೆಯೂ ಕೆಲವು ಪ್ರಕಾಶಕರು ಪುಸ್ತಕ ತನ್ನ ಮೊದಲಿನ ರೂಪದಲ್ಲೇ ಓದುಗರಿಗೆ ಲಭ್ಯವಾಗಲಿದೆ ಎನ್ನುವ ಭರವಸೆಯ ಮಾತುಗಳನ್ನಾಡಿರುವರು. ಅವರ ಪ್ರಕಾರ ಇ-ಪುಸ್ತಕವು ಸಧ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಅದೊಂದು ಪರ್ಯಾಯವೇ ವಿನ: ಅದೇ ಪರಿಹಾರವಲ್ಲ.

-ರಾಜಕುಮಾರ ಕುಲಕರ್ಣಿ