Tuesday, September 25, 2012

ಆಂದೋಲನಗಳೂ ಮತ್ತು ಅವುಗಳ ಹಿಂದಿನ ಮಹತ್ವಾಕಾಂಕ್ಷೆಯೂ

       ಜನರಿಗೆ ಈ ಆಂದೋಲನಗಳ ಕುರಿತು ಬಹುದೊಡ್ಡ ಭ್ರಮನಿರಸನ ಉಂಟಾಗಿದೆ. ಅದಕ್ಕೆ ಕಾರಣಗಳಿಲ್ಲದಿಲ್ಲ. ಅಣ್ಣಾ ಹಜಾರೆ ಅವರ ನೇತೃತ್ವದ 'ಭ್ರಷ್ಟಾಚಾರ ವಿರೋಧಿ ಆಂದೋಲನ'ವನ್ನೇ ತೆಗೆದುಕೊಳ್ಳಿ. ಈ ಆಂದೋಲನ ಶುರುವಾದ ಪ್ರಾರಂಭದ ದಿನಗಳಲ್ಲಿ ಇಡೀ ದೇಶದ ಜನತೆ ಬಹುದೊಡ್ಡ ಬದಲಾವಣೆಯೊಂದು ಇನ್ನೇನು ಕೆಲವೇ ದಿನಗಳಲ್ಲಿ ಸಂಭವಿಸಲಿದೆ ಎಂದೆನ್ನುವ ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಪರಿಣಾಮವಾಗಿ ಅವರೆಲ್ಲ ಅಣ್ಣಾ ಹಜಾರೆ ಅವರಲ್ಲಿ ಮತ್ತೊಬ್ಬ ಗಾಂಧೀಜಿಯನ್ನು ಕಂಡು ಕೊಂಡರು. ಆಂದೋಲನ ಶುರುವಾಗಿದ್ದೆ ತಡ ನಾಗರೀಕರೆಲ್ಲ ಅಣ್ಣಾ ಹೆಸರಿನ ಗಾಂಧಿ ಟೊಪ್ಪಿಗೆ ಧರಿಸಿ ಬೀದಿಗಿಳಿದರು. ಲಕ್ಷಾಂತರ ಜನ ಪ್ರವಾಹದೋಪಾದಿಯಲ್ಲಿ ಅಣ್ಣಾ ಹಜಾರೆ ಅವರನ್ನು ಕೂಡಿ ಕೊಂಡರು.  ಭ್ರಷ್ಟಾಚಾರ ವಿರೋಧಿ ಆಂದೋಲನದ ತಂಡ ದೂರದ ದೆಹಲಿಯಲ್ಲಿ ಆಂದೋಲನದ ಕಿಡಿ ಹೊತ್ತಿಸಿದರೆ ಅದು ದೇಶದಾದ್ಯಂತ ವ್ಯಾಪಿಸಿತು. ಪ್ರತಿ ನಗರ ಹಳ್ಳಿಗಳಲ್ಲಿ ಜನ ಸ್ವ ಇಚ್ಚೆಯಿಂದ ಆಂದೋಲನಕ್ಕೆ ಧುಮುಕಿದರು. ಉತ್ತರದಿಂದ ಬೀಸಿ ಬರಲಿರುವ ಗಾಳಿ ಬಹುದೊಡ್ಡ ಬದಲಾವಣೆಯನ್ನು ಹೊತ್ತು ತರಲಿದೆ ಎಂದು ಎಲ್ಲರೂ ಕಾದದ್ದೇ ಬಂತು. ಬದಲಾವಣೆ ಮಾತ್ರ ಸಂಭವಿಸಲೇ ಇಲ್ಲ.
      ಈ ನಡುವೆ ಭ್ರಷ್ಟಾಚಾರ  ವಿರೋಧಿ ಆಂದೋಲನದ ತಂಡ ರಾಜಕೀಯ ಪಕ್ಷವೊಂದನ್ನು ಕಟ್ಟುವ ತನ್ನ ನಿರ್ಧಾರ ಪ್ರಕಟಿಸಿತು.  2014ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಆ ತಂಡದ ಸದಸ್ಯರು ಪಾರ್ಲಿಮೆಂಟಿನಲ್ಲಿ ಭ್ರಷ್ಟಾಚಾರ ಮುಕ್ತ ಸದಸ್ಯರನ್ನು ಪ್ರತಿಷ್ಠಾಪಿಸುವ ಪ್ರಬಲ ನಿರೀಕ್ಷೆಯೊಂದನ್ನು ಜನರಲ್ಲಿ ಮೂಡಿಸತೊಡಗಿದರು. ಏತನ್ಮಧ್ಯೆ ಆ ತಂಡದಲ್ಲೇ ಭಿನ್ನಾಭಿಪ್ರಾಯಗಳು ಮೂಡಿ  ಅದೊಂದು ಒಡೆದ ಮನೆಯಾಯಿತು. ಒಂದು ತಂಡ ಜನಾಭಿಪ್ರಾಯಕ್ಕೆ ಹೆದರಿ ರಾಜಕಾರಣದಿಂದ ನಿರ್ಧಿಷ್ಟ ಅಂತರವನ್ನು ಕಾಯ್ದುಕೊಳ್ಳಲು ಬಯಸಿದರೆ ಇನ್ನೊಂದು ತಂಡ ರಾಜಕೀಯ ಪ್ರವೇಶದ ತನ್ನ ಮಹತ್ವಾಕಾಂಕ್ಷೆಗೆ ಅಂಟಿ ಕೊಂಡಿತು. ಹೀಗೆ ಅವರವರ ಭಿನ್ನಾಭಿಪ್ರಾಯಗಳ ನಡುವೆ   ಭ್ರಷ್ಟಾಚಾರ ವಿರೋಧಿ ಆಂದೋಲನವು ತನ್ನ ಮಹತ್ವ ಕಳೆದು ಕೊಂಡು ಮೂಲೆಗುಂಪಾಯಿತು.
           ಭ್ರಷ್ಟಾಚಾರ  ವಿರೋಧಿ ಆಂದೋಲನ ಆರಂಭಗೊಂಡ ಮೊದಲ ದಿನಗಳಲ್ಲೇ ಮುಂದೊಂದು ದಿನ ಇಂಥದ್ದೇ ಪರಿಸ್ಥಿತಿ ಎದುರಾಗಬಹುದೆಂದು ಅನೇಕರು ಆತಂಕ ವ್ಯಕ್ತಪಡಿಸಿದ್ದರು. ಏಕೆಂದರೆ ಪ್ರತಿಯೊಂದು ಹೋರಾಟ ಮತ್ತು ಚಳುವಳಿಗಳು ರಾಜಕೀಯ ಪಕ್ಷಗಳಾಗಿ ರೂಪಾಂತರಗೊಳ್ಳುತ್ತಿವೆ. ಇದು ಬಹು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. 1977ರಲ್ಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಆಗ ಹುಟ್ಟಿಕೊಂಡ ಚಳುವಳಿ ಭಾರತದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾಯಿತು. ಈ ಚಳುವಳಿಯ ಪರಿಣಾಮ ಕೇಂದ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಸರ್ಕಾರ ಅಧಿಕಾರಕ್ಕೆ ಬಂದಿತು. ಈ ಚಳುವಳಿ ಸಮಾಜವಾದಿ ಸಿದ್ಧಾಂತದ ಹಿನ್ನೆಲೆಯುಳ್ಳ ಅನೇಕ ಯುವ ರಾಜಕಾರಣಿಗಳನ್ನು ಪರಿಚಯಿಸಿತು. ಕಾಲಾನಂತರದಲ್ಲಿ ಜೆಪಿ ಚಳುವಳಿಯಿಂದ ಸಿಡಿದು ಬಂದ ಯುವಕರೆಲ್ಲ ಫುಲ್ ಟೈಂ ರಾಜಕಾರಣಕ್ಕಿಳಿದು ಜನರು ಅವರುಗಳ ಮೇಲಿಟ್ಟಿದ್ದ ಭರವಸೆಗಳನ್ನೆಲ್ಲ ಹುಸಿಗೊಳಿಸಿದರು. ಒಂದು ಕಾಲದಲ್ಲಿ ಅನ್ಯಾಯ, ಅಕ್ರಮಗಳನ್ನು ಕಂಡು ಸಿಡಿದೆಳುತ್ತಲಿದ್ದ ಅದೇ ಯುವಕರು ಮುಂದೊಂದು ದಿನ ಅನೇಕ  ಭ್ರಷ್ಟಾಚಾರಗಳಿಗೆ ಕಾರಣರಾಗಬೇಕಾಗಿ ಬಂದದ್ದು ಜೆಪಿ ಚಳುವಳಿಯ ಬಹುದೊಡ್ಡ ದುರಂತಗಳಲ್ಲೊಂದು.
      ಕರ್ನಾಟಕದಲ್ಲೂ ಒಂದು ಕಾಲದಲ್ಲಿ ಸಮಾಜವಾದಿ ಚಳುವಳಿ ಪ್ರಖರವಾಗಿತ್ತು. ಶಾಂತವೇರಿ ಗೋಪಾಲಗೌಡರ ಗರಡಿಯಲ್ಲಿ ಪಳಗಿದ ಅನೇಕ ಯುವನಾಯಕರು ಸಮಾಜವಾದಿ ಸಿದ್ಧಾಂತವನ್ನು ರಾಜ್ಯದ ಮೂಲೆ ಮೂಲೆಗೂ ಪ್ರಚುರ ಪಡಿಸಿದರು. ಅನ್ಯಾಯ, ಅಕ್ರಮಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟವನ್ನೇ ಮಾಡಿದರು. ವಿಪರ್ಯಾಸವೆಂದರೆ ಅದೇ ಯುವ ನಾಯಕರು ಮುಂದೊಂದು ದಿನ ರಾಜಕೀಯ ಪಕ್ಷಗಳನ್ನು ಸೇರಿ ಸಮಾಜವಾದಿ ಸಿದ್ಧಾಂತವನ್ನೇ ಮೂಲೆಗುಂಪಾಗಿಸಿದರು. ಸಮಾಜವಾದದ ಹಿನ್ನೆಲೆಯನ್ನೇ ಬಂಡವಾಳವಾಗಿಸಿಕೊಂಡು ರಾಜಕೀಯದಲ್ಲಿ ಮೇಲೆರಿದ ಇವರುಗಳು ಅಧಿಕಾರದ ರುಚಿ ಹತ್ತಿಸಿಕೊಂಡು ಇತಿಹಾಸ ಕಂಡು  ಕೇಳರಿಯದ ಅನೇಕ   ಭ್ರಷ್ಟಾಚಾರಗಳಿಗೆ ಕಾರಣರಾದರು.
           ಗೋಕಾಕ ಚಳುವಳಿಯ ನಂತರ ಕರ್ನಾಟಕದಲ್ಲಿ ಭಾಷೆಯ ರಕ್ಷಣೆಗಾಗಿ ಅನೇಕ ಸಂಘ ಸಂಸ್ಥೆಗಳು ಹುಟ್ಟಿ ಕೊಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾಜಕುಮಾರ ಅವರ ನೇತೃತ್ವದಲ್ಲಿ ಗೋಕಾಕ ಚಳುವಳಿಯಿಂದ ದೊರಕಿಸಿಕೊಂಡ ಅಭೂತಪೂರ್ವ ಯಶಸ್ಸು ನಂತರದ ದಿನಗಳಲ್ಲಿ ಕನ್ನಡ ಪರ ಚಳುವಳಿಯನ್ನು ಅನೇಕರ ಮುಖ್ಯ ಉದ್ಯೋಗವಾಗಿಸಿತು. ಕನ್ನಡದ ರಕ್ಷಣೆಗಾಗಿ ಅಸ್ತಿತ್ವಕ್ಕೆ ಬಂದ ಸಂಘ ಸಂಸ್ಥೆಗಳೆಲ್ಲ ಕಾಲಾನಂತರದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಲಾರಂಭಿಸಿದವು. ಅನೇಕ ಹೋರಾಟಗಾರರು ಚುನಾವಣೆಗೂ ಸ್ಪರ್ಧಿಸಿ ಸೋತಿದ್ದು ಬೇರೆ ವಿಷಯ. ಒಟ್ಟಿನಲ್ಲಿ ಕನ್ನಡ ಪರ ಹೋರಾಟದ ಹಿಂದೆ ರಾಜಕೀಯ ಪ್ರವೇಶಿಸಬೇಕೆನ್ನುವ ಚಳುವಳಿಗಾರರ ಪ್ರಬಲ ಮಹತ್ವಾಕಾಂಕ್ಷೆಯನ್ನು ಕನ್ನಡಿಗರು ಗುರುತಿಸದೇ ಇರಲಿಲ್ಲ. ಕನ್ನಡ ಭಾಷೆಗಿಂತಲೂ ಘೋರವಾದ ಇನ್ನೊಂದು ಸಂಗತಿ ಎಂದರೆ ಅದು ಅನ್ನ ನೀಡುವ  ರೈತನ ಹೆಸರಿನಲ್ಲಿ ಸಂಘ ಸಂಸ್ಥೆಗಳನ್ನು ಕಟ್ಟಿ ಹಸಿರು ಶಾಲು ಹೊದೆದು ಕೆಲವರು ಹೋರಾಟಕ್ಕಿಳಿದಿದ್ದು. ಈ ಹೋರಾಟದ ಹಿಂದೆ ರೈತನ ಬದುಕನ್ನು ಹಸನಾಗಿಸಬೇಕೆನ್ನುವುದಕ್ಕಿಂತ ಅವರವರ ವೈಯಕ್ತಿಕ ಹಿತಾಸಕ್ತಿಯೇ ಪ್ರಧಾನವಾಗಿತ್ತು. ರೈತ ಸಂಘದ ನೇತಾರರಲ್ಲೂ ರಾಜಕೀಯ ವಾಂಛೆ ಮನೆ ಮಾಡಿತ್ತು. ರೈತರ ಹೆಸರಿನಲ್ಲಿ ಕೆಲವರು ತಾವು ಪಡೆದ ಜನಪ್ರಿಯತೆಯನ್ನೇ ಬಂಡವಾಳವಾಗಿಟ್ಟುಕೊಂಡು ಚುನಾವಣೆಗೆ ನಿಂತು ಗೆಲುವಿನ ರುಚಿಯನ್ನು ಕಂಡರು. ಹೀಗೆ ರೈತರ ಹೆಗಲ ಮೇಲೆ ಕಾಲಿಟ್ಟು ಮೇಲೆರಿದವರೆಲ್ಲ ಮುಂದಿನ ದಿನಗಳಲ್ಲಿ ತಮ್ಮ  ತಮ್ಮ ಬದುಕನ್ನು ಹಸನಾಗಿಸಿ ಕೊಂಡರೆ ಹೊರತು ರೈತರ ಬದುಕಿನ ಬವಣೆಯನ್ನು ಸ್ವಲ್ಪವೂ ನೀಗಿಸಲಿಲ್ಲ. ಹಾಗೇನಾದರೂ ಅವರುಗಳು ಪ್ರಯತ್ನಿಸಿದ್ದರೆ ಕಾವೇರಿ ಪ್ರತಿವರ್ಷ ನೆರೆಯ ರಾಜ್ಯಕ್ಕೆ ಹರಿದು ಹೋಗುತ್ತಿರಲಿಲ್ಲ
        ಒಟ್ಟಿನಲ್ಲಿ ಅದು ರೈತಪರ ಚಳುವಳಿಯಾಗಲಿ ,   ಭ್ರಷ್ಟಾಚಾರ  ವಿರೋಧಿ ಆಂದೋಲನವಾಗಲಿ, ಕನ್ನಡಪರ ಹೋರಾಟವಾಗಲಿ ಈ ಎಲ್ಲ ಚಳುವಳಿಗಳಲ್ಲಿನ ಹೋರಾಟಗಾರರ ಮನಸ್ಥಿತಿ ಒಂದೆ. ಪ್ರತಿ ಹೋರಾಟದ ಹಿಂದೆ ರಾಜಕೀಯದ ಮಹತ್ವಾಕಾಂಕ್ಷೆ ಪ್ರಬಲವಾಗಿದೆ. ಪ್ರತಿಯೊಂದು ಆಂದೋಲನ ರಾಜಕೀಯದಲ್ಲಿ ಪರ್ಯಾವಸಾನ  ಗೊಳ್ಳುತ್ತಿರುವುದು ಸತ್ಯಕ್ಕೆ ಹತ್ತಿರವಾದ ಸಂಗತಿ. ಈ ನಡುವೆ ಇಂಗ್ಲಿಷ್ ದೈನಿಕವೊಂದರಲ್ಲಿ ಹೀಗೊಂದು ವರದಿ ಪ್ರಕಟವಾಗಿತ್ತು. ಮುಂಬೈ ಮೂಲದ ನಿವಾಸಿ ನಾರಾಯಣ ಪಾಟೀಲ ಎನ್ನುವ ವ್ಯಕ್ತಿ ಕಳೆದ ನಾಲ್ಕು ವರ್ಷಗಳಿಂದ ಕಸಬ್ ನನ್ನು ಗಲ್ಲಿಗೆರಿಸುವಂತೆ ಪ್ರತಿ ನಿತ್ಯ ದೇಶದ ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದು ಒತ್ತಾಯಿಸುತ್ತಿರುವರು. ಕಸಬ್ ನನ್ನು ಗಲ್ಲಿಗೇರಿಸುವ ತನಕ ಯಾವ ಹಬ್ಬ ಹರಿದಿನಗಳಲ್ಲೂ ಪಾಲ್ಗೊಳ್ಳದಿರಲು ಅವರು ನಿರ್ಧರಿಸಿರುವರಂತೆ. ರಾಜಕೀಯ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು  ಸದ್ದು ಮಾಡುವ ಈ ಹೋರಾಟಗಾರರಿಗಿಂತ ಸದ್ದಿಲ್ಲದೇ ಒಂದು ಹೋರಾಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ನಾರಾಯಣ ಪಾಟೀಲ ನಿಜಕ್ಕೂ ರಾಷ್ಟ್ರ ಕಂಡ ಅಪರೂಪದ ದೇಶಪ್ರೇಮಿಗಳಲ್ಲೊಬ್ಬರು.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Saturday, September 15, 2012

ಸರ್.ಎಂವಿ ಎನ್ನುವ ಅಪ್ರತಿಮ ಪ್ರತಿಭೆ

       ಈ ದಿನ ಅಂದರೆ ಸೆಪ್ಟೆಂಬರ್ 15 ದೇಶ ಕಂಡ ಅಪ್ರತಿಮ ಪ್ರತಿಭೆ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನ. ನೂರು ವರ್ಷಗಳ ಸಾರ್ಥಕ ಬದುಕು ಬಾಳಿದ ಸರ್.ಎಂ.ವಿಶ್ವೇಶ್ವರಯ್ಯನವರು ರಾಷ್ಟ್ರಕ್ಕೆ ನೀಡಿದ ಕೊಡುಗೆ ಅನನ್ಯ. ದಕ್ಷ ಆಡಳಿತಗಾರರಾಗಿ, ಇಂಜಿನಿಯರ್ ರಾಗಿ, ಹಲವು ರಾಜ್ಯಗಳ ಸಲಹೆಗಾರರಾಗಿ, ಎಂವಿ ಅವರು ನಿರ್ವಹಿಸಿದ ಪಾತ್ರಗಳು ಅನೇಕ. ಮೂಸಿ ಜಲಾಶಯ, ಕೃಷ್ಣರಾಜ ಸಾಗರ, ಮೈಸೂರು ವಿಶ್ವವಿದ್ಯಾಲಯ, ಭದ್ರಾವತಿಯ ಉಕ್ಕಿನ ಕಾರ್ಖಾನೆ, ಶ್ರೀ ಜಯಚಾಮ ರಾಜೇಂದ್ರ ಔದ್ಯೋಗಿಕ ವಿದ್ಯಾಸಂಸ್ಥೆ, ಸುಕ್ಕೂರು ಬ್ಯಾರೆಜು, ಗ್ರಾಮೀಣ ಕೈಗಾರೀಕರಣ ಯೋಜನೆ, ದಿ ಹಿಂದುಸ್ತಾನ್ ವಿಮಾನ ಕಾರ್ಖಾನೆ ಇತ್ಯಾದಿ ಯೋಜನೆಗಳು ವಿಶ್ವೇಶ್ವರಯ್ಯ ನವರ ಪ್ರತಿಭೆ ಮತ್ತು ಪರಿಶ್ರಮಕ್ಕೆ ಕೆಲವು ಉದಾಹರಣೆಗಳು. ಕೃಷಿ, ಕೈಗಾರಿಕೆ ಮತ್ತು ಶೈಕ್ಷಣಿಕ ಅಭಿವೃದ್ಧಿಯಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎನ್ನುವ ಸೈದ್ದಾಂತಿಕ ನಿಲುವು ಅವರದಾಗಿತ್ತು. ಅವರ ದೂರದರ್ಶಿತ್ವ ಮತ್ತು ಕೃರ್ತತ್ವ ಶಕ್ತಿಯ ಪರಿಣಾಮ ವಿಶೇಷವಾಗಿ ಕರ್ನಾಟಕ ರಾಜ್ಯ ಕೃಷಿ ಮತ್ತು ಕೈಗಾರಿಕೆಯಲ್ಲಿ ಸಾಕಷ್ಟು ಅಭಿವೃದ್ದಿ ಹೊಂದಿದೆ. ಸರಳತೆ, ಸನ್ನಡತೆ ಮತ್ತು ಪ್ರಾಮಾಣಿಕತೆಯನ್ನು ತಮ್ಮ ವೈಯಕ್ತಿಕ ಬದುಕು ಮತ್ತು ವೃತ್ತಿ ಬದುಕುಗಳೆರಡರಲ್ಲೂ ಒಂದು ವ್ರತದಂತೆ ಪಾಲಿಸಿಕೊಂಡು ಬಂದರು. ಅವರ ಬದುಕಿನ ಪ್ರಾಮಾಣಿಕತೆಗೊಂದು ನಿದರ್ಶನ ಹೀಗಿದೆ, ಒಮ್ಮೆ ಮೈಸೂರಿನ ಮಾಹಾರಾಜರು ವಿಶ್ವೇಶ್ವರಯ್ಯನವರನ್ನು ಕರೆದು 'ನಿಮ್ಮನ್ನು ಮೈಸೂರಿನ ದಿವಾನರನ್ನಾಗಿ ಮಾಡ ಬೇಕೆಂದಿದ್ದೇನೆ ಒಪ್ಪಿಕೊಳ್ಳಬೇಕು' ಎಂದರು. ವಿಶ್ವೇಶ್ವರಯ್ಯನವರ ಜಾಗದಲ್ಲಿ ಬೇರೆ ಯಾರೇ ಇದ್ದರೂ ತಕ್ಷಣವೇ ಒಪ್ಪಿಕೊಂಡು ಬಿಡುತ್ತಿದ್ದರು. ಆದರೆ ವಿಶ್ವೇಶ್ವರಯ್ಯನವರು  'ನನಗೆ ಯೋಚಿಸಲು ಸ್ವಲ್ಪ ಸಮಯ ಬೇಕು. ನಾನು  ನನ್ನ ತಾಯಿಯ ಜೊತೆ ಈ ವಿಷಯ ಚರ್ಚಿಸಬೇಕು ಅನಂತರ ನಾನು ನನ್ನ ನಿರ್ಧಾರವನ್ನು ಕುರಿತು ತಿಳಿಸುವೇನು' ಎಂದರು. ಅವರ  ಮಾತಿಗೆ ಮಾಹಾರಾಜರು ಸಮ್ಮತಿಸಿದರು. ವಿಶ್ವೇಶ್ವರಯ್ಯನವರು ಮನೆಗೆ ಬಂದು ಮಾಹಾರಾಜರೊಂದಿಗೆ ನಡೆದ ಮಾತುಕತೆಯನ್ನು ತಾಯಿಗೆ ವಿವರಿಸಿದರು. ಅದಕ್ಕೆ ಅವರ ತಾಯಿ 'ನನ್ನ ಒಪ್ಪಿಗೆ ಪಡೆದು ನಿನ್ನ ಅಭಿಪ್ರಾಯ ತಿಳಿಸುತ್ತೇನೆಂದು ಏಕೆ ಹೇಳಿದೆ' ಎಂದು ಕೇಳಿದರು. ಆಗ ವಿಶ್ವೇಶ್ವರಯ್ಯನವರು ಮಾರ್ಮಿಕವಾಗಿ ನುಡಿದರು 'ನಾನು ದಿವಾನನಾದ ಅವಧಿಯಲ್ಲಿ ರಾಜ್ಯದ ಕೆಲಸವನ್ನು ಮಾತ್ರ ಮಾಡುತ್ತೇನೆ ಹೊರತು ಬೇರೆಯವರ ವೈಯಕ್ತಿಕ ಕೆಲಸಗಳನ್ನು ಮಾಡಲಾರೆನು. ಬೇರೆಯವರಾದರೆ ನಾನು ನೇರವಾಗಿ ಹೇಳಬಲ್ಲೆ. ಆದರೆ ಹಾಗೆ ಖಡಾಖಡಿಯಾಗಿ ನಿನಗೆ ಹೇಳಲು ಆಗುವುದಿಲ್ಲ. ಆದ್ದರಿಂದ ನೀನು ನನಗೆ ಮಾತು ಕೊಡಬೇಕು. ನಿನ್ನ ಬಂಧುಗಳ, ಪರಿಚಿತರ, ಊರಿನವರ ಕೆಲಸ ತರಬಾರದು. ನಿನಗೆ ಬೇಕಾದವರಿಗೆ, ಹತ್ತಿರದವರಿಗೆ, ಬಂಧುಗಳಿಗೆ, ಕುಲಬಾಂಧವರಿಗೆ ನೌಕರಿ, ಬಡ್ತಿ ಮತ್ತಿತರ ಸಹಾಯ ಮಾಡೆಂದು ನೀನು ನನಗೆ ಒತ್ತಾಯಿಸಬಾರದು. ನೀನು ನನ್ನ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲವೆಂದು ಭಾಷೆ ಕೊಟ್ಟರೆ ನಾನು ದಿವಾನನಾಗಲು ಸಮ್ಮತಿಸುತ್ತೇನೆ'. ರಾಜ್ಯದ, ರಾಷ್ಟ್ರದ ಹಿತಾಸಕ್ತಿ ಮರೆತು ವೈಯಕ್ತಿಕ ಹಿತಾಸಕ್ತಿಗೆ ಮಹತ್ವ ನೀಡುವ ನಮ್ಮ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಸರ್.ಎಂ.ವಿಶ್ವೇಶ್ವರಯ್ಯನವರಿಂದ ಕಲಿಯುವುದು ಬಹಳಷ್ಟಿದೆ.
            ಹೀಗೆ ವಿಶ್ವೇಶ್ವರಯ್ಯನವರ ಕುರಿತು ಯೋಚಿಸಲು ಈ ದಿನ ಅವರ ಜನ್ಮದಿನ ಕಾರಣ ಎನ್ನುವುದರ ಜೊತೆಗೆ ನಿನ್ನೆ ನಾನು ಪುಸ್ತಕವೊಂದನ್ನು ಖರೀದಿಸಿದೆ. ಆ ಪುಸ್ತಕದ ಹೆಸರು 'ನನ್ನ ವೃತ್ತಿ ಜೀವನದ ನೆನಪುಗಳು' ಎಂದು. ಇದು ಸರ್.ಎಂ.ವಿಶ್ವೇಶ್ವರಯ್ಯನವರು ಬರೆದಿರುವ 'Memoirs of My Working Life' (Memories) ಎನ್ನುವ ಮೂಲ ಕೃತಿಯ ಅನುವಾದಿತ ಪುಸ್ತಕ. ಡಾ.ಗಜಾನನ ಶರ್ಮ ಅವರು ಅನುವಾದಿಸಿರುವ ಈ ಪುಸ್ತಕವನ್ನು ಅಂಕಿತ ಪ್ರಕಾಶನದವರು ಪ್ರಕಟಿಸಿರುವರು. ಪುಸ್ತಕದಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರು ತಮ್ಮ ವೃತ್ತಿ ಬದುಕಿನಲ್ಲಿನ ಅವಿಸ್ಮರಣೀಯ ಅನುಭವಗಳನ್ನು ಕುರಿತು ಮಾತನಾಡಿರುವರು. ವಿಶೇಷವಾಗಿ ಅಲ್ಲಿ ಉತ್ಪ್ರೇಕ್ಷೆಗಳಿಲ್ಲ. ಅತ್ಯಂತ ಸರಳವಾಗಿ ಅವರು ತಮ್ಮ ಅನುಭವಗಳನ್ನು ದಾಖಲಿಸಿರುವರು. ಡಾ.ಗಜಾನನ ಶರ್ಮಾ ಅವರು ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸುವುದರ ಮೂಲಕ ಒಂದು ಒಳ್ಳೆಯ ಕೆಲಸ ಮಾಡಿರುವರು.
        ಪುಸ್ತಕ ಓದಿದ ನಂತರ ನನ್ನನ್ನು ವಿಶೇಷವಾಗಿ ಆಕರ್ಷಿಸಿದ್ದು ರಾಷ್ಟ್ರ ನಿರ್ಮಾಣದ ಕುರಿತು ಸರ್.ಎಂ.ವಿಶ್ವೇಶ್ವರಯ್ಯನವರು ಆಡಿದ ಮಾತುಗಳು ಮತ್ತು ಅವರ ವಿಚಾರ ಧಾರೆ. ಆ ವಿಚಾರಧಾರೆಗಳನ್ನು ಅವರ ಮಾತುಗಳಲ್ಲೇ ಕೇಳಿ  'ಪ್ರಬಲ ರಾಷ್ಟ್ರವೊಂದನ್ನು ಕಟ್ಟಲು ಪ್ರಬುದ್ಧ ವ್ಯಕ್ತಿತ್ವವುಳ್ಳ ಪ್ರಜಾವರ್ಗವನ್ನು ರೂಪಿಸಬೇಕು. ಯಶಸ್ವೀ ರಾಷ್ಟ್ರವೊಂದರ ಬಹುತೇಕ ಪ್ರಜೆಗಳು ದಕ್ಷರೂ, ಗುಣಸಂಪನ್ನರೂ, ಕರ್ತವ್ಯ ನಿಷ್ಟರೂ ಆಗಿರುತ್ತಾರೆ. ಯಾವ ವ್ಯಕ್ತಿಯು ಇತರರ ನಂಬಿಕೆಗೆ ಪಾತ್ರನಾಗಲು ಬಯಸುತ್ತಾನೋ ಆತ ಸ್ವಯಂ ಸನ್ನಡತೆಯನ್ನು ರೂಡಿಸಿಕೊಳ್ಳಬೇಕು. ನಾವು ತಿಳಿದಿರುವಂತೆ ವ್ಯವಹಾರದ ಅಡಿಪಾಯವೇ ದೃಢ ವಿಶ್ವಾಸ. ವಿಶ್ವಾಸಕ್ಕೆ ಭರವಸೆಯ ಭದ್ರತೆ ಬೇಕು. ಭರವಸೆ ಹುಟ್ಟುವುದು ವ್ಯಕ್ತಿತ್ವದಲ್ಲಿ ಒಡಮೂಡಿರುವ ಸದ್ಗುಣಗಳಿಂದ. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತದ ಬಹುಪಾಲು ಜನಸಮುದಾಯ ಅನಕ್ಷರಸ್ತರು ಮತ್ತು ಅಶಿಸ್ತಿನಿಂದ ಕೂಡಿದವರು. ಬಹುತೇಕ ಪ್ರಜೆಗಳು ಮೂಢ ನಂಬಿಕೆ ಮತ್ತು ಅಜ್ಞಾನದಿಂದ ಬಳಲುತ್ತಿದ್ದು ಆಲಸಿಗಳು ಮತ್ತು ಉದಾಸೀನರಾಗಿದ್ದಾರೆ. ಭಾರತವು ದಕ್ಷ ರಾಷ್ಟ್ರವಾಗಿ ಪ್ರಬಲವಾಗಿ ಪ್ರವರ್ಧಮಾನಕ್ಕೆ ಬರುವ ಮಾರ್ಗವನ್ನು ಕುರಿತು ವಿದೇಶಗಳು ಉಪದೇಶ ನೀಡುತ್ತವೆ ಎಂದು ನಾವು ನಿರೀಕ್ಷಿಸಬಾರದು. ಈ ಜವಾಬ್ದಾರಿಯನ್ನು ನಮ್ಮ ಜನನಾಯಕರು ಮತ್ತು ಸರ್ಕಾರವೇ ಹೊತ್ತು ಕೊಳ್ಳಬೇಕು. ಸರ್ಕಾರ ಮತ್ತು ಸಾರ್ವಜನಿಕ ಕ್ಷೇತ್ರದ ಮುಖಂಡರು ದೇಶದ ಜನತೆಯಲ್ಲಿ ರಾಷ್ಟ್ರೀಯತೆ, ಪ್ರಗತಿಶೀಲ ಮನೋಭಾವ ಮತ್ತು ದಕ್ಷ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯವಾದ ಗುಣ ನಡತೆಗಳನ್ನು ಹುಟ್ಟುಹಾಕುವ ಹೊಣೆಗಾರಿಕೆಯನ್ನು ಹೊರಬೇಕು'.
         ಅವರು ಮುಂದುವರಿದು ಹೀಗೆ ಹೇಳುತ್ತಾರೆ 'ಭಾರತೀಯ ಪ್ರಜೆಗಳಿಗೆ ಸಚ್ಚಾರಿತ್ರ್ಯವನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳಲು ಕೆಲವೊಂದು ನಿಯಮಗಳನ್ನು ಸಂಕ್ಷಿಪ್ತವಾಗಿ ನಿಡಬಯಸುತ್ತೇನೆ.
1. ಪರಿಶ್ರಮ ಪೂರ್ಣ ಕೆಲಸ: ಸಾಧಾರಣವಾಗಿ ಭಾರತೀಯರು ಯಾವುದೇ ವಿಷಯವನ್ನು ಹಗುರವಾಗಿ ತೆಗೆದುಕೊಳ್ಳುವ ಸ್ವಭಾವದವರು. ಅವರು ಯಾವುದೇ ಕೆಲಸಕ್ಕೆ ಹೂಡುವ ಶ್ರಮ, ಪ್ರಮಾಣ ಮತ್ತು ಪ್ರಯತ್ನ ಅತ್ಯಲ್ಪ. ಇದರ ಪರಿಣಾಮವಾಗಿ ಇಡೀ ದೇಶದ ದಕ್ಷತೆ ಮತ್ತು ಆರ್ಥಿಕ ಸಮೃದ್ಧಿ ಅತ್ಯಂತ ಕೆಳಮಟ್ಟದಲ್ಲಿವೆ.
2. ಯೋಜಿತ ಶಿಸ್ತುಬದ್ಧ ಕೆಲಸ: ಪ್ರತಿದಿನವೂ ನಿಗದಿಗೊಳಿಸಲ್ಪಟ್ಟ ಅವಧಿಯಲ್ಲಿ ನಿಯಮಿತವಾಗಿ, ಶಿಸ್ತುಬದ್ಧವಾಗಿ ಕೆಲಸವನ್ನು ಮಾಡುತ್ತಾ ಹೋದರೆ ಪ್ರಯತ್ನಕ್ಕೆ ಹೆಚ್ಚು ಮೌಲ್ಯ ದೊರೆಯುವುದು. ಶಿಸ್ತುಬದ್ಧವಾಗಿ ಶ್ರಮವಹಿಸಿ ಕೆಲಸ ಮಾಡುವುದರಿಂದ ಶ್ರಮಿಕನ ಆರೋಗ್ಯ ಮತ್ತು ಆಯುಷ್ಯ ಎರಡೂ ವೃದ್ಧಿಯಾಗುವುದು.
3. ದಕ್ಷತೆ: ಉನ್ನತ ಮಟ್ಟದ ಕಾರ್ಯತತ್ಪರತೆ, ಕಾಲನಿಷ್ಟ ಕಾರ್ಯವೈಖರಿ, ಶಿಸ್ತುಬದ್ಧತೆ, ಉನ್ನತ ಧ್ಯೇಯೋದ್ದೇಶ, ಉನ್ನತ ಗುಣಮಟ್ಟದಲ್ಲಿ ಕಾರ್ಯನಿರ್ವಹಿಸುವ ತವಕ ಮುಂತಾದ ಗುಣಗಳನ್ನು ಪಡೆದಿರುವುದು ದಕ್ಷತೆಯ ಲಕ್ಷಣ. ಸಾಧಾರಣವಾಗಿ ಕೆಲಸದ ಗುಣಮಟ್ಟ ಅಧಿಕವಾಗಿದ್ದರೆ ಅದರ ಫಲಿತಾಂಶವೂ ಅಧಿಕವಾಗಿರುತ್ತದೆ.
4. ಸೇವೆ ಮತ್ತು ಸೌಜನ್ಯ: ಪ್ರತಿ ಪ್ರಜೆಯು ತನ್ನ ಸಹೋದ್ಯೋಗಿಯೊಡನೆ, ತನ್ನ ನೆರೆಹೊರೆಯವರೊಂದಿಗೆ ನಡೆಸುವ ವರ್ತನೆ ಸೌಹಾರ್ದತೆ ಮತ್ತು ಸೌಜನ್ಯದೊಂದಿಗೆ ಕೂಡಿರಬೇಕು.
      ಯಶಸ್ವಿಯಾಗಲು ಇಚ್ಚಿಸುವ ಪ್ರತಿಯೊಬ್ಬ ಪ್ರಜೆಯೂ ಮೇಲ್ಕಂಡ ನಾಲ್ಕು ನಿಯಮಗಳನ್ನು ಪಟ್ಟು ಹಿಡಿದು ಕೃತಿಗಿಳಿಸಬೇಕು'.
        ಇನ್ನೊಂದೆಡೆ ನೈತಿಕ ಬದುಕನ್ನು ಕುರಿತು ಅವರು ಹೀಗೆ ವ್ಯಾಖ್ಯಾನಿಸುತ್ತಾರೆ 'ಯಾವುದೇ ವೃತ್ತಿ-ವ್ಯವಹಾರಗಳಲ್ಲಿ ಯಶಸ್ಸು ವ್ಯಕ್ತಿಯ ಸಾಮರ್ಥ್ಯ, ವ್ಯಕ್ತಿತ್ವ, ಪ್ರಾಮಾಣಿಕತೆ ಮತ್ತು ಮುಂದಾಲೋಚನೆ ಮುಂತಾದವುಗಳನ್ನು ಆಧರಿಸಿ ಲಭಿಸುತ್ತದೆ. ಮನುಷ್ಯರ ಬದುಕಿನ ಯಶಸ್ಸಿಗೆ ಅವರ ಪರಿಶ್ರಮವೇ ಆಧಾರ. ಬಹಳಷ್ಟು ಬದುಕೆಂಬ ಹಡಗುಗಳು ಅಪಘಾತಕ್ಕಿಡಾಗುವುದು ಆಕಸ್ಮಿಕಗಳಿಂದಲ್ಲ. ಅವು ನಾಶವಾಗುವುದು ಜನ ಸಂಕಷ್ಟಗಳನ್ನು ಎದುರಿಸಲಿಚ್ಚಿಸದೆ ಕೇವಲ ಸಂತೋಷದ ಬೆನ್ನು ಹತ್ತುವುದರಿಂದ ಮಾತ್ರ. ಯಾವ ಮನುಷ್ಯನ ಬದುಕಿನ ಸಿದ್ಧಾಂತವು ನೋವನ್ನು ತಪ್ಪಿಸಿಕೊಂಡು ಕೇವಲ ಸಂತೋಷವನ್ನು ಅನುಭವಿಸುವುದಾಗಿದೆಯೋ ಆತ ಅಪಯಶಸ್ಸು ಗಳಿಸುವುದು ಶತಸ್ಸಿದ್ದ. ಸುಖ ದು:ಖಗಳೆರಡನ್ನು ಸಮನಾಗಿ ಸ್ವೀಕರಿಸುವುದು ಬದುಕಿನ ನಿತ್ಯ ನಿರಂತರ ಯಶಸ್ಸಿನ ಸಿದ್ದ ಸೂತ್ರ. ನೀತಿಯುತ ವರ್ತನೆಯೇ ಘನತೆವೆತ್ತ ಬದುಕಿನ ಹೆಗ್ಗುರುತು. ನೈತಿಕ ಸಾಧನೆಯೇ ಶ್ರೇಷ್ಠ ವ್ಯಕ್ತಿಯ ಬದುಕಿನ ಔನ್ನತ್ಯ'.
      ಇಂಥ ಉನ್ನತ ವಿಚಾರಗಳನ್ನು ಕೇವಲ ಉಪದೇಶಿಸದೆ ಅದರಂತೆ ಬದುಕಿ ತೋರಿಸಿದ ಹಿರಿದಾದ ವ್ಯಕ್ತಿತ್ವ ಸರ್.ಎಂ.ವಿಶ್ವೇಶ್ವರಯ್ಯನವರದು. ಅದಕ್ಕೆಂದೇ ಅವರು ಇಂದಿಗೂ ಪ್ರಾತ:ಸ್ಮರಣಿಯರು. ಅವರ ಜನ್ಮದಿನವಾದ ಈ ದಿನವಾದರೂ ಅವರನ್ನು ಸ್ಮರಿಸುತ್ತ ಅವರು ನಡೆದ ದಾರಿಯಲ್ಲಿ ಒಂದೆರಡು ಹೆಜ್ಜೆಗಳನ್ನಾದರೂ ನಡೆಯಲು ಪ್ರಯತ್ನಿಸೋಣ. ಇದೇ ನಾವುಗಳು ಆ ಅಪ್ರತಿಮ ಪ್ರತಿಭೆಯ ಕಾಯಕ ಯೋಗಿಗೆ ಸಲ್ಲಿಸುವ ನಮನಗಳು.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 


Thursday, September 13, 2012

ರಾಜ್ ಮತ್ತು ವಿಷ್ಣು ಹೋಲಿಕೆ ಕನ್ನಡ ಚಿತ್ರರಂಗದ ದುರಾದೃಷ್ಟ

        1990ರ ದಶಕದ ಮಾತಿದು ಬೆಂಗಳೂರಿನ ಕೆ.ಪಿ.ಎಸ್.ಸಿ ಕಚೇರಿಯಿಂದ ಸಂದರ್ಶನಕ್ಕೆ ಕರೆ ಬಂದಿತ್ತು. ಬೆಂಗಳೂರು ಅಪರಿಚಿತ ಊರಾಗಿದ್ದರಿಂದ ಜೊತೆಯಲ್ಲಿ ನನ್ನ ಅಣ್ಣಂದಿರೂ  ಬಂದಿದ್ದರು. ಸಿನಿಮಾವನ್ನು ತುಂಬ ಪ್ರೀತಿಸುವ ನನ್ನ ಅಣ್ಣಂದಿರು ಇದೆ ಸಂದರ್ಭ ತಮ್ಮ ಇಷ್ಟದ ಕಲಾವಿದರಾದ ರಾಜಕುಮಾರ ಮತ್ತು ವಿಷ್ಣುವರ್ಧನ ಅವರನ್ನು ಭೇಟಿಮಾಡಲು ನಿರ್ಧರಿಸಿದರು. ನನ್ನನ್ನು ಸಂದರ್ಶನ ಕೇಂದ್ರಕ್ಕೆ ಬಿಟ್ಟು ಖರೀದಿಸಿದ ಹೊಸ ಕ್ಯಾಮೆರಾದೊಂದಿಗೆ ಜಯನಗರದತ್ತ ಹೆಜ್ಜೆ ಹಾಕಿದ ಅವರು ನಾನು ಸಂದರ್ಶನ ಮುಗಿಸಿ ಹೊರ ಬರುವ ಹೊತ್ತಿಗೆ ಕೈಯಲ್ಲಿ ಫೋಟೋ ಅಲ್ಬಮ್ ಹಿಡಿದು ಕಾಯುತ್ತ ನಿಂತಿದ್ದರು. ನಾನು  ಸಂದರ್ಶನ ಹೇಗೆ ಮಾಡಿದೆ ಎನ್ನುವುದಕ್ಕಿಂತ ತಾವು ವಿಷ್ಣುವರ್ಧನ್ ಜೊತೆ ತೆಗೆಸಿಕೊಂಡ ಫೋಟೋಗಳನ್ನು ನನಗೆ ತೋರಿಸುವ ತವಕ ಅವರಲ್ಲಿತ್ತು. ವಿಷ್ಣುವರ್ಧನ್ ಗಾಗಿ ಇಡೀ ರೀಲನ್ನು ಖರ್ಚು ಮಾಡಿದ್ದರು. ತಮ್ಮ ಇಷ್ಟದ ನಟನನ್ನು ಭೇಟಿ ಮಾಡಿದ್ದರೂ ಎಲ್ಲೋ ಒಂದು ಕಡೆ ಅವರಲ್ಲಿ ಬೇಸರ ಕಾಣಿಸುತ್ತಿತ್ತು. ವಿಚಾರಿಸಿದಾಗ ತಿಳಿಯಿತು ರಾಜಕುಮಾರ ಗಾಜನೂರಿಗೆ ಹೋಗಿದ್ದರಿಂದ ಅವರ ಭೇಟಿ ಸಾಧ್ಯವಾಗಿರಲಿಲ್ಲ. ನನಗೆ ಆಶ್ಚರ್ಯವಾಯಿತು ಏಕಕಾಲಕ್ಕೆ ರಾಜ್ ಮತ್ತು ವಿಷ್ಣು ಅವರನ್ನು ಅಭಿಮಾನಿಸುವುದು ಅದು ಹೇಗೆ ಸಾಧ್ಯ ಎಂದು. ಏಕೆಂದರೆ 90ರ ದಶಕ ರಾಜ್ ಮತ್ತು ವಿಷ್ಣು ಅಭಿಮಾನಿಗಳ ನಡುವಣ ಕಾದಾಟ ಮತ್ತು ಪೈಪೋಟಿಗಳ ಪರ್ವಕಾಲ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುತ್ತಿರಲಿಲ್ಲ. ಅಂಥ  ವಾತಾವರಣ ಕನ್ನಡ ನಾಡಿನಲ್ಲಿ ಮನೆಮಾಡಿಕೊಂಡಿದ್ದ ಹೊತ್ತು ನನ್ನ ಅಣ್ಣಂದಿರ ಅಭಿಮಾನ ನನ್ನಲ್ಲಿ ಅಚ್ಚರಿ ಮೂಡಿಸಿದ್ದು ಸಹಜವಾಗಿತ್ತು. ಅದಕ್ಕೆ ಅವರು ಕೊಟ್ಟ ಕಾರಣ ಹೀಗಿತ್ತು "ರಾಜ್ ಮತ್ತು ವಿಷ್ಣು ಇಬ್ಬರೂ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದರು. ಆದರೆ ರಾಜ್ ಮಾಡಿದ ಕೆಲವು ಪಾತ್ರಗಳನ್ನು  ವಿಷ್ಣುವರ್ಧನ್ ಗೆ ಮಾಡಲು ಸಾಧ್ಯವಾಗಿಲ್ಲ. ಅದೇ ರೀತಿ ವಿಷ್ಣು ಮಾಡಿದ ಒಂದಿಷ್ಟು ಪಾತ್ರಗಳನ್ನು  ರಾಜಕುಮಾರಗೆ ಮಾಡಲು ಸಾಧ್ಯವಾಗಿಲ್ಲ. ನಮ್ಮ ಅಭಿಮಾನ ಒಬ್ಬ ನಟನಿಗೆ ಮಾತ್ರ ಸೀಮಿತವಾಗಿ ಉಳಿದರೆ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನೋಡುವ ಅವಕಾಶದಿಂದ ನಾವು ವಂಚಿತರಾಗಬೇಕಾಗುತ್ತದೆ". ಈ ಮಾತು ಕನ್ನಡ ಪ್ರೇಕ್ಷಕನ ಮನಸ್ಸು ಹೇಗೆ ಆರೋಗ್ಯಕರವಾಗಿ ಇರಬೇಕಾಗಿತ್ತು ಎನ್ನುವುದಕ್ಕೆ ನಿದರ್ಶನವಾಗಿತ್ತು. ಆದರೆ ಇಡೀ ಕನ್ನಡ ಚಿತ್ರರಂಗ ಮತ್ತು ಕನ್ನಡ ಪ್ರೇಕ್ಷಕ ವರ್ಗದಲ್ಲಿನ ಇಂಥದ್ದೊಂದು ಮನೋಭಾವದ ಕೊರತೆಯಿಂದಾಗಿ ರಾಜ್ ಮತ್ತು ವಿಷ್ಣು ನಡುವಣ ಪೈಪೋಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಯಿತು. 
      1972ರಲ್ಲಿ ವಿಷ್ಣುವರ್ಧನ್ ಚಿತ್ರರಂಗಕ್ಕೆ ಕಾಲಿಟ್ಟ ಆ ಘಳಿಗೆಗಾಗಲೇ ರಾಜಕುಮಾರ ಹತ್ತಿರ ಹತ್ತಿರ ನೂರೈವತ್ತು ಸಿನಿಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದರು. ನ ಭೂತೋ ನ ಭವಿಷ್ಯತಿ ಎನ್ನುವಂತೆ ಯಶಸ್ಸು ಮತ್ತು ಜನಪ್ರಿಯತೆ ಅವರನ್ನು ಅರಸಿಕೊಂಡು ಬಂದಿದ್ದವು. ತಮ್ಮ ಸಹಜ ಅಭಿನಯದಿಂದ ರಾಜಕುಮಾರ ಇಡೀ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದರು. ಹೀಗಿರುವಾಗ ರಾಜ್ ಮತ್ತು ವಿಷ್ಣು ನಡುವೆ ಪೈಪೋಟಿ ಸಾಧ್ಯವೇ ಇರಲಿಲ್ಲ. ಅವರಿಬ್ಬರ ನಡುವಣ ವ್ಯತ್ಯಾಸ ಅಜಗಜಾಂತರವಾಗಿದ್ದು ಹೋಲಿಕೆಯೇ ಹಾಸ್ಯಾಸ್ಪದವಾಗಿತ್ತು. ಆದರೆ ರಾಜ್ ಸುತ್ತ ಮುತ್ತ ಇರುವವರಿಗೆ ಎರಡು ದಶಕಗಳ ಕಾಲ ಇಲ್ಲದೆ ಇದ್ದ ಪೈಪೋಟಿ ವಿಷ್ಣುವರ್ಧನ್ ರೂಪದಲ್ಲಿ ಗೋಚರಿಸತೊಡಗಿತು. ಅದರಲ್ಲೂ 'ನಾಗರ ಹಾವು'ನಂಥ ಹಿಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದೆ ವಿಷ್ಣುವರ್ಧನ್ ಗೆ ಮುಳುವಾಯಿತು (ಅವರ ಮೊದಲ ಚಿತ್ರ ವಂಶ ವೃಕ್ಷ ವಾದರೂ ಗುರುತಿಸುವುದು ನಾಗರ ಹಾವು ಚಿತ್ರದ ಮೂಲಕವೇ). ಇಂಥದ್ದೊಂದು ಭರ್ಜರಿ ಆರಂಭದ ಅಬ್ಬರಕ್ಕೆ ಅತ್ಯಂತ ಗಟ್ಟಿಯಾಗಿ ನೆಲೆಯೂರಿದ್ದ ರಾಜ್ ಅವರಂಥ ಮೇರು ನಟ ಅಲುಗಾಡಬಹುದೆಂದು ಅವರ ಹಿತೈಷಿಗಳು ಚಿಂತಿಸಿದ್ದು ಕನ್ನಡದ ಚಿತ್ರರಂಗದ ದುರ್ದೈವ.
     ತಪ್ಪು ಎಲ್ಲಿಂದ ಮತ್ತು ಯಾರಿಂದ ಪ್ರಾರಂಭವಾಯಿತು ಎನ್ನುವುದು ಅಪ್ರಸ್ತುತ. ಆದರೆ ಒಂದಂತೂ ನಿಜ ವಿಷ್ಣು ಆಗಮನಕ್ಕಿಂತ ಮೊದಲು ಏಕಮೇವ ನಟರಾಗಿ ಬೆಳೆಯುತ್ತಿದ್ದ ರಾಜಕುಮಾರ ಕಾಲ್ ಶೀಟ್  ಎಲ್ಲ ನಿರ್ಮಾಪಕರಿಗೂ ದೊರೆಯುವುದು ದುರ್ಲಭವಾಗಿತ್ತು. ಇಂಥ ಸನ್ನಿವೇಶದಲ್ಲಿ ರಾಜ್ ಸಿನಿಮಾಗಳ ನಿರ್ಮಾಣದಿಂದ ವಂಚಿತರಾದ ನಿರ್ಮಾಪಕರಿಗೆ ವಿಷ್ಣು ಆಗಮನ ವರದಾನವಾಯಿತು. ಇದನ್ನೇ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡ ಅವರು ಕ್ರಮೇಣ ವಿಷ್ಣುವರ್ಧನ್ ಆಸ್ಥಾನದ ಹೋಗಳು  ಭಟ್ಟರಾಗಿ, ಬಹುಪರಾಕ್ ಭಟ್ಟಂಗಿಗಳಾಗಿ ಆ ನಟನ ಸುತ್ತ ಒಂದು ಭದ್ರ ಕೊಟೆಯನ್ನೇ ನಿರ್ಮಿಸಿದರು. ಅವರಿಗೆ ವಿಷ್ಣು ಒಬ್ಬ ಪ್ರತಿಭಾನ್ವಿತ ನಟನಾಗಿ ಬೆಳೆಯುವುದು ಬೇಕಿರಲಿಲ್ಲ. ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಇಡಿಯಾಗಿ ಆಕ್ರಮಿಸಿಕೊಂಡಿದ್ದ ರಾಜಕುಮಾರ ಎದುರು ತೀವ್ರ ಪ್ರತಿಸ್ಪರ್ಧೆ ಒಡ್ಡುವ ನಟನೊಬ್ಬ ಅವರಿಗೆ ಬೇಕಿತ್ತು. ಅವರೆಲ್ಲ ವಿಷ್ಣುವನ್ನು ತಾವಂದುಕೊಂಡಂತೆ ಬೆಳೆಸಲು ಪ್ರಯತ್ನಿಸಿ ಯಶಸ್ವಿಯೂ ಆದರು. ರಾಜ್ ಕುಟುಂಬ ಇಂಥದ್ದೊಂದು ಬೆಳವಣಿಗೆಗೆ ಆವತ್ತೇ ತಣ್ಣಗೆ ಪ್ರತಿಕ್ರಿಯಿಸಿದ್ದರೆ ಮೂರುವರೆ ದಶಕಗಳ ನಂತರ ನಾವುಗಳೆಲ್ಲ ಇವತ್ತು ಆ ವಿಷಯವನ್ನು ಕುರಿತು ಚರ್ಚಿಸುವ ಅಗತ್ಯವೇ ಇರುತ್ತಿರಲಿಲ್ಲ. ಆ ಹೊತ್ತಿಗಾಗಲೇ ಎಲ್ಲ ಪ್ರಕಾರದ ಪಾತ್ರಗಳಲ್ಲಿ ಅಭಿನಯಿಸಿ ಮಾಗಿದ್ದ ಕಲಾವಿದ ಒಬ್ಬ ಹೊಸ ನಟನ ಬೆರಳೆಣಿಕೆಯಷ್ಟು ಸಂಖ್ಯೆಯ ಚಿತ್ರಗಳಿಂದ ಅದೇಕೆ ಅನಿಶ್ಚಿತತೆಯ ಭೀತಿ ಎದುರಿಸಬೇಕಾಯಿತು ಎನ್ನುವುದು ಇವತ್ತಿಗೂ ಆಶ್ಚರ್ಯದ ಸಂಗತಿ.
     ಇಲ್ಲೆ ರಾಜ್ ಕುಟುಂಬ ತಪ್ಪು ಮಾಡಿದ್ದು. ಯಾವಾಗ ವಿಷ್ಣುವರ್ಧನ್ ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬರತೊಡಗಿದರೋ ಆಗ ರಾಜ್ ಅಳಿವು ಉಳಿವಿನ (ಅವರು ಹಾಗೆಂದು ಭಾವಿಸಿದ್ದರು) ಸಂಪೂರ್ಣ ಜವಾಬ್ದಾರಿಯನ್ನು ಅಭಿಮಾನಿಗಳ ಹೆಗಲಿಗೆರಿಸಿದರು. ಮೊದಲೇ ರಾಜ್ ಅಭಿಮಾನದ ಹುಚ್ಚು ಹೊಳೆಯಲ್ಲಿ ಈಜುತ್ತಿದ್ದ ಅಭಿಮಾನಿಗಳು ಈ ಒಂದು ಜವಾಬ್ದಾರಿಯಿಂದ ಮತ್ತಷ್ಟು ಉನ್ಮತ್ತರಾದರು. ಆಗ ಪ್ರಾರಂಭವಾದವು ನೋಡಿ ಕಲ್ಲು ಎಸೆಯುವ, ಖಾರದಪುಡಿ ಎರಚುವ, ಪೋಸ್ಟರ್ ಗಳಿಗೆ ಸಗಣಿ ಬಳಿಯುವ ಅಹಿತಕರ ಘಟನೆಗಳು. ನಂತರದ ದಿನಗಳಲ್ಲಿ ರಾಜ್ ಅಭಿಮಾನಿಗಳ ಆಟಾಟೋಪಕ್ಕೆ ಪ್ರತ್ಯುತ್ತರ ನೀಡಲು ವಿಷ್ಣುವನ್ನು ಪೂಜಿಸುವ ಮತ್ತು ಆರಾಧಿಸುವ ಅಭಿಮಾನಿಗಳ ಪಡೆ ಹುಟ್ಟಿಕೊಂಡಿತು. ಇಬ್ಬರೂ ಕಲಾವಿದರ ಅಭಿಮಾನಿಗಳ ಮನಸ್ಥಿತಿ ಒಂದೇ ಆಗಿತ್ತು. ಬೆಂಗಳೂರಿನ ಬೀದಿಗಳಲ್ಲಿ ಕೈ ಕೈ ಮಿಲಾಯಿಸಿ ಹೊಡೆದಾಟಕ್ಕಿಳಿಯಲು ಅವರು ಹಿಂಜರಿಯುತ್ತಿರಲಿಲ್ಲ. ಆದರೆ ಒಂದಂತೂ ನಿಜ ಅಭಿಮಾನದ ಇಂಥ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ಅಪಕೀರ್ತಿ ರಾಜ್ ಮತ್ತು ವಿಷ್ಣು ಬದುಕಿನುದ್ದಕ್ಕೂ ಕಪ್ಪು ಚುಕ್ಕೆಯಾಗಿ ಉಳಿಯಿತು. ವಿಷ್ಣು ಪ್ರವರ್ಧಮಾನದಿಂದ ರಾಜ್ ತಮ್ಮ ಸ್ಥಾನ ಕಳೆದುಕೊಳ್ಳುವ ಭೀತಿಯ ಪ್ರಶ್ನೆಯೇ  ಇರಲಿಲ್ಲ. ಏಕೆಂದರೆ ಆ ಹೊತ್ತಿಗಾಗಲೇ ರಾಜ್ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಅಬಾಲವೃದ್ಧರಾದಿಯಾಗಿ ಎಲ್ಲ ವಯೋಮಾನದವರು ರಾಜ್ ಅವರನ್ನು ಇಷ್ಟ ಪಡುತ್ತಿದ್ದರು. ಯಾವಾಗ ಸಂಕುಚಿತ ಮತ್ತು ವಿಕೃತ ಮನಸ್ಸುಗಳು ರಾಜ್ ಮತ್ತು ವಿಷ್ಣು ಅಭಿನಯ ಮತ್ತು ಜನಪ್ರಿಯತೆಯ ನಡುವೆ ಹೋಲಿಕೆ ಪ್ರಾರಂಭಿಸಿದರೋ ಆಗ ಕನ್ನಡ ಚಿತ್ರರಂಗದ ಅಭಿವೃದ್ಧಿ ಕುಂಠಿತಗೊಂಡಿತು.
         ನಂತರ ರಾಜ್ ಮತ್ತು ವಿಷ್ಣು ಒಂದೇ ದಾರಿಯ ಪಯಣಿಗರಾದರು. ಒಬ್ಬರು ಸಾಹಸ ಸಿಂಹನಾದರೆ ಇನ್ನೊಬ್ಬರು ಕೆರಳಿದ ಸಿಂಹನಾದರು. ಒಬ್ಬರು ಸಂಪತ್ತಿಗೆ ಸವಾಲ್ ಎಂದರೆ ಇನ್ನೊಬ್ಬರು ಸಿರಿತನಕ್ಕೆ ಸವಾಲೆಸೆದರು. ನನ್ನನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಸಿನಿಮಾ ಡೈಲಾಗ್ ಇಬ್ಬರ ಬಾಯಿಯಿಂದಲೂ ಕೇಳಿ ಬಂದಿತು. ಒಬ್ಬರನ್ನೊಬರು ಹೋಲಿಕೆ ಮಾಡಿಕೊಳ್ಳುತ್ತಲೇ ಇಬ್ಬರೂ ಒಂದೇ ಪ್ರಕಾರದ ಪಾತ್ರಗಳಿಗೆ ಅಂಟಿಕೊಂಡರು. ಇಬ್ಬರ ಚಿತ್ರಗಳಲ್ಲೂ ಅಭಿಮಾನಿಗಳನ್ನು ಸಂತೋಷಪಡಿಸಲೆಂದೇ ಹಾಡು ಮತ್ತು ಸಂಭಾಷಣೆಗಳು ರಚನೆಯಾದವು. ಅವರವರದೇ ಸಹಕಲಾವಿದರ, ತಂತ್ರಜ್ಞರ, ನಿರ್ಮಾಪಕರ, ನಿರ್ದೇಶಕರ ಪ್ರತ್ಯೇಕ ಗುಂಪುಗಳು ಹುಟ್ಟಿಕೊಂಡವು. ಪೈಪೋಟಿಯಿಂದಲೇ ಚಿತ್ರಗಳು ಬಿಡುಗಡೆಯಾದವು. ಅವರಿಬ್ಬರ ಈ ಪ್ರಬಲ ಪೈಪೋಟಿಯಿಂದ ಕನ್ನಡ ಚಿತ್ರರಂಗ ಮತ್ತಷ್ಟು ಶ್ರೀಮಂತವಾಗುವ ಒಂದು ಉತ್ತಮ ಅವಕಾಶದಿಂದ ವಂಚಿತವಾಯಿತು. ಯಾವಾಗ ಈ ಇಬ್ಬರು ಜನಪ್ರಿಯ ನಟರ ನಡುವೆ ಸ್ಪರ್ಧೆ ಏರ್ಪಟ್ಟಿತೋ ಆಗ ಅವರಿಬ್ಬರ ಪಾತ್ರಗಳು ಏಕತಾನತೆಯಿಂದ ಸೊರಗತೊಡಗಿದವು ಎನ್ನುವುದು ಸತ್ಯಕ್ಕೆ ಹತ್ತಿರವಾದ ಮಾತು. ಪಾತ್ರಗಳ ಆಯ್ಕೆಯಲ್ಲಿ ಎಡವಿದ ಇವರಿಬ್ಬರೂ ನಿರ್ದೇಶಕರ ನಟರಾಗುವುದಕ್ಕಿಂತ ನಿರ್ದೇಶಕರನ್ನೇ ತಮ್ಮ ನಟನೆಗೆ ತಕ್ಕಂತೆ ರೂಪಿಸಿಕೊಂಡರು. ಈ ಕಾರಣದಿಂದಲೇ ಇರಬೇಕು ಕ್ಲಾಪ್ ಬಾಯ್ ಗಳೆಲ್ಲ ಇವರನು ನಿರ್ದೇಶಿಸಲು ಸಾಧ್ಯವಾಯಿತು.
       ನೆರೆಯ ತಮಿಳು ಚಿತ್ರರಂಗದಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್ ನಡುವೆ ಪೈಪೋಟಿ ಇದ್ದರೂ ಅವರಿಬ್ಬರೂ ತಮ್ಮದೇ ಪ್ರತ್ಯೇಕ ಇಮೇಜ್  ರೂಪಿಸಿಕೊಂಡಿರುವರು.ಒಬ್ಬರ ಇಮೇಜ್ ಬಗ್ಗೆ ಇನ್ನೊಬ್ಬರು ತೆಲೆ  ಕೆಡಿಸಿಕೊಂಡವರಲ್ಲ. ಇಂಥದ್ದೇ ಪ್ರಯತ್ನ ಕನ್ನಡ ಚಿತ್ರರಂಗದಲ್ಲಿ ರಾಜ್ ಮತ್ತು ವಿಷ್ಣು ನಡುವೆ ಸಾಧ್ಯವಾಗಲೇ ಇಲ್ಲ. ಇವರಿಬ್ಬರಲ್ಲಿ ಯಾರೊಬ್ಬರೂ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳಲೆ ಇಲ್ಲ. ಒಬ್ಬರ ಜನಪ್ರಿಯತೆ ಇನ್ನೊಬ್ಬರಿಗೆ ಅನಿಶ್ಚಿತತೆ ಮತ್ತು ಅಭದ್ರತೆಯ ಭಯ ಹುಟ್ಟಿಸಿತು. ಹೀಗಾಗಿ ಗಂಭೀರ ಮತ್ತು ಕಲಾತ್ಮಕ ಚಿತ್ರಗಳ ಸೃಜನಶೀಲ ನಿರ್ದೇಶಕರು ಈ ಇಬ್ಬರು ನಟರನ್ನು ನಿರ್ದೇಶಿಸಲು ಸಾಧ್ಯವಾಗದೆ ಹೋಯಿತು. ಕಲಾತ್ಮಕ ಮತ್ತು ಪ್ರಯೋಗಶೀಲ ಚಿತ್ರಗಳಲ್ಲಿ ಅಭಿನಯಿಸಿದರೆ ತಮ್ಮ ಇಮೇಜಿಗೆ ಧಕ್ಕೆ ಉಂಟಾಗಬಹುದೆನ್ನುವ ಭೀತಿ ಇವರಿಬ್ಬರನ್ನೂ ಕಾಡುತ್ತಿತ್ತು ಎನ್ನುವುದಕ್ಕೆ ಅವರು ಕೊನೆಯವರೆಗೂ ಮರ ಸುತ್ತುವ ಪಾತ್ರಗಳಿಗೆ ಅಂಟಿಕೊಂಡಿದ್ದೆ ಸ್ಪಷ್ಟ ನಿದರ್ಶನ. ಪೈಪೋಟಿ ಮತ್ತು ಸ್ಪರ್ಧೆಯಿಂದಾಗಿ ಗಂಭೀರ ಪಾತ್ರಗಳ ಆಯ್ಕೆಯಲ್ಲಿ ಎಡವಿದ ಪರಿಣಾಮ ರಾಷ್ಟ್ರ ಪ್ರಶಸ್ತಿಯಂಥ ಅತ್ಯುನ್ನತ ಪ್ರಶಸ್ತಿ ಇವರಿಬ್ಬರ ನಟನೆಗೆ ಮರೀಚಿಕೆಯಾಗಿಯೇ ಉಳಿಯಿತು.
       ಒಂದು ವೇಳೆ ರಾಜ್ ಮತ್ತು ವಿಷ್ಣು ನಡುವೆ ಯಾವುದೇ ಸ್ಪರ್ಧೆ ಮತ್ತು ಹೋಲಿಕೆಯಂಥ ಅಸಹಜತೆ ಕಾಣಿಸಿಕೊಳ್ಳದೆ ಇದ್ದಿದ್ದರೆ ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಅತ್ಯುತ್ತಮ ಚಿತ್ರಗಳು ದೊರೆಯುತ್ತಿದ್ದವು. ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ದಾಖಲಿಸಬಹುದಾದಂಥ ಪಾತ್ರಗಳು ಸೃಷ್ಟಿಯಾಗುತ್ತಿದ್ದವು. ಇಬ್ಬರೂ ಒಟ್ಟಾಗಿ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದರೆ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ನಿರ್ಮಾಣವಾಗುತ್ತಿತ್ತು. ಕನ್ನಡದ ಸಾಂಸ್ಕೃತಿಕ ಲೋಕ ಇನ್ನಷ್ಟು ಶ್ರೀಮಂತಗೊಳ್ಳುತ್ತಿತ್ತು. ಉತ್ತರಿಸಬೇಕಾದ ಅವರಿಬ್ಬರೂ ಇಂದು ನಮ್ಮೊಂದಿಗಿಲ್ಲ. ಇನ್ಯಾರೊ ಉತ್ತರಿಸಿದರೆ ಅದು ಚರ್ಚೆಯಾಗಬೇಕಾದ ಗಂಭೀರ ವಿಷಯವೊಂದನ್ನು ಮುಚ್ಚಿ ಹಾಕುವ ಪ್ರಯತ್ನವಾಗುತ್ತದೆ. ಆದರೆ ಅವರವರ ಸುತ್ತಲಿನ ಸಮಯ ಸಾಧಕರ ವೈಯಕ್ತಿಕ ಹಿತಾಸಕ್ತಿಗಳಿಂದಾಗಿ ಕನ್ನಡ ಚಿತ್ರರಂಗದ ಈ ಇಬ್ಬರು ಮೇರು ಕಲಾವಿದರ ಪ್ರತಿಭೆ ಪೂರ್ಣವಾಗಿ ಬಳಕೆಯಾಗಲೇ ಇಲ್ಲ ಎನ್ನುವ ಕೊರಗು ಒಂದು ವರ್ಗದ ಕನ್ನಡ ಪ್ರೇಕ್ಷಕರನ್ನು ಸದಾ ಕಾಲ ಕಾಡುತ್ತಲೇ ಇರುತ್ತದೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Saturday, September 1, 2012

ಶಿಕ್ಷಣದ ಹಕ್ಕು ಮತ್ತು ಬಡ ಮಕ್ಕಳು

       ಕೆಲವು ತಿಂಗಳುಗಳಿಂದ ಶಿಕ್ಷಣ ಕ್ಷೇತ್ರ ಬಹು ಚರ್ಚಿತ ವಿಷಯವಾಗಿ ರೂಪಾಂತರಗೊಂಡಿದೆ. ಅದಕ್ಕೆ ಕಾರಣಗಳಿಲ್ಲದಿಲ್ಲ. ಹೀಗೆ ಚರ್ಚೆಗೆ ಎತ್ತಿಕೊಂಡ ಬಹುಮುಖ್ಯ ವಿಷಯಗಳಲ್ಲಿ 'ಶಿಕ್ಷಣ ಹಕ್ಕು ಕಾಯ್ದೆ' ಮೊದಲನೆಯದು. ಕೇಂದ್ರ ಸರ್ಕಾರ ರೂಪಿಸಿದ ಈ ಕಾಯ್ದೆ ಕುರಿತು ನಗರ ಮತ್ತು ಹಳ್ಳಿಗಳು ಸೇರಿದಂತೆ ಎಲ್ಲ ಕಡೆ ವಿಸ್ತ್ರತ ಚರ್ಚೆ ನಡೆಯುತ್ತಿದೆ. ಸರ್ಕಾರ ಜಾರಿಗೆ ತಂದ ಈ ಕಾಯ್ದೆ ಅನ್ವಯ ಪ್ರತಿಯೊಂದು ಮಗುವಿಗೆ ತನಗೆ ಅಗತ್ಯವಾದ ಶಿಕ್ಷಣವನ್ನು ಅಂದರೆ ಒಂದರಿಂದ ಎಂಟನೇ ತರಗತಿಯವರೆಗೆ ಪಡೆಯುವ ಹಕ್ಕಿದೆ. ಕಡ್ಡಾಯ ಶಿಕ್ಷಣ ಎನ್ನುವ ಶಿಕ್ಷಣದ ನಿಯಮವೇ ಇರುವಾಗ ಈ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಹೊಸದೇನಿದೆ ಎನ್ನುವುದು ಕೆಲವರ ವಾದ. ವಿಸ್ತ್ರತವಾಗಿ ಹೇಳುವುದಾದರೆ ಪ್ರತಿಯೊಂದು ರಾಜ್ಯದಲ್ಲಿನ ಎಲ್ಲ ಪ್ರಕಾರದ ಅಂದರೆ ಸರ್ಕಾರಿ, ಅನುದಾನಿತ ಖಾಸಗಿ ಶಾಲೆಗಳು ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳು ತಮ್ಮ ವ್ಯಾಪ್ತಿ ಪ್ರದೇಶದಲ್ಲಿ ವಾಸಿಸುತ್ತಿರುವ ಬಡತನ ರೇಖೆಯ ಕೆಳಗೆ ಬದುಕುತ್ತಿರುವ ಕುಟುಂಬಗಳಲ್ಲಿನ ಮಕ್ಕಳಿಗೆ ಶೇಕಡಾ 25 ರಷ್ಟು ಪ್ರವೇಶ ದಾಖಲಾತಿಯನ್ನು ಕಾಯ್ದಿರಿಸಬೇಕು. ಈ ವಿಷಯವಾಗಿ ಸರ್ಕಾರ ಕಾಯ್ದೆಯನ್ನು ರೂಪಿಸಿರುವುದರಿಂದ ಇಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ನುಣುಚಿಕೊಳ್ಳುವ ಹಾಗಿಲ್ಲ. ಈ ಕಾಯ್ದೆಯನ್ವಯ ದಾಖಲಾತಿಯನ್ನು ಕಾಯ್ದಿರಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳವರು ಮೀನ ಮೇಷ ಮಾಡುತ್ತಿದ್ದರೂ ಮುಂದೊಂದು ದಿನ ಇದು ಕಡ್ಡಾಯವಾಗಿ ನಮ್ಮ ಬಡ ಮಕ್ಕಳೂ ಸಿ ಬಿ ಎಸ್ ಸಿ, ಆಯ್ ಸಿ ಎಸ್ ಸಿ ಶಾಲೆಗಳಲ್ಲಿ ಓದಬಹುದು. ಆದರೆ ದೇಶದ ಎಲ್ಲ ಮಕ್ಕಳಿಗೂ ಈ ಕಾಯ್ದೆಯಡಿ ಈ ಮೇಲೆ ಹೇಳಿದಂಥ ಶಾಲೆಗಳಲ್ಲಿ ಶಿಕ್ಷಣ ಕೊಡಿಸಲು ಸಾಧ್ಯವೇ? ಇರಲಿ ಇದನ್ನು ಮುಂದೆ ನೋಡೋಣ. 
        ಸರ್ಕಾರ ಶಿಕ್ಷಣದ ವಿಷಯವಾಗಿ ಇಂಥದ್ದೊಂದು ಕಾಯ್ದೆಯನ್ನು ಜಾರಿಗೆ ತಂದಿದೆ ಎಂದ ಮಾತ್ರಕ್ಕೆ ಮಕ್ಕಳ ಶಿಕ್ಷಣದ ವಿಷಯವಾಗಿ ಎಲ್ಲ ಸಮಸ್ಯೆಗಳು ಪರಿಹರಿಸಲ್ಪಟ್ಟಿವೆ  ಎಂದರ್ಥವಲ್ಲ. ಏಕೆಂದರೆ ಶಿಕ್ಷಣ ಮಾಧ್ಯಮದ ವಿಷಯವಾಗಿ ಅನೇಕ ಗೊಜಲುಗಳಿವೆ. ಈ ದಿನಗಳಲ್ಲಿ ಪಾಲಕರಲ್ಲಿ ತಮ್ಮ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕೆ ಇಲ್ಲವೇ ಇಂಗ್ಲಿಷ್ ಮಾಧ್ಯಮದ ಮೂಲಕ ಶಿಕ್ಷಣ ಕೊಡಿಸಬೇಕೆ ಎನ್ನುವ ವಿಷಯವಾಗಿ ಒಂದು ರೀತಿಯ ಅನಿಶ್ಚಿತತೆ ಮನೆಮಾಡಿಕೊಂಡಿದೆ. ಪಾಲಕರಲ್ಲಿನ ಈ ಅನಿಶ್ಚಿತತೆಗೆ ಕಾರಣ ಏನು ಎಂದು ಹುಡುಕಿಕೊಂಡು ಹೊರಟಾಗ ನಾವು ಮತ್ತೆ ಹೊಣೆಗಾರರನ್ನಾಗಿ ಮಾಡುವುದು ಸರ್ಕಾರವನ್ನೇ. ಸರ್ಕಾರ ಇಂಗ್ಲಿಷ್ ಶಾಲೆಗಳ ಸ್ಥಾಪನೆಗೆ ಅನುಮತಿ ನೀಡುತ್ತಿರುವ ಪರಿಣಾಮ ಈ ದಿನಗಳಲ್ಲಿ ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾಗುತ್ತಿವೆ. ಸರ್ಕಾರಿ ಶಾಲೆಗಳನ್ನೇ ಮೂಲೆಗುಂಪಾಗಿಸುತ್ತ ಖಾಸಗಿ ಒಡೆತನದ ಶೈಕ್ಷಣಿಕ ಉದ್ದಿಮೆ ಆಯಾ ರಾಜ್ಯದಲ್ಲಿ ತೆಲೆ ಎತ್ತಿದೆ. ಜೊತೆಗೆ ಬಹುಪಾಲು ಪಾಲಕರು ಈ ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಕಡೆ ವಲಸೆ ಹೋಗುತ್ತಿರುವರು. ಪಾಲಕರ ಈ ದೌರ್ಬಲ್ಯವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವ ಖಾಸಗಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಸಂಸ್ಥೆಗಳ ಮಾಲೀಕರು ಲಕ್ಷಾಂತರ ರುಪಾಯಿಗಳನ್ನು ಶುಲ್ಕದ ರೂಪದಲ್ಲಿ ವಸೂಲಿ ಮಾಡುತ್ತಿರುವರು. ಹಾಗಾದರೆ ಆ ಖಾಸಗಿ ಸಂಸ್ಥೆಗಳ ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ಎಲ ಪಾಲಕರಿಗೂ ಭರಿಸಲು ಸಾಧ್ಯವಾಗುತ್ತದೆಯೇ ಎನ್ನುವುದು ಇಲ್ಲಿನ ಪ್ರಮುಖ ಪ್ರಶ್ನೆಯಾಗಿದೆ. ಹಣವಿದ್ದವರು ಮಾತ್ರ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ದೊರಕಿಸಿ ಕೊಡುತ್ತಿದ್ದರೆ ಹಣವಿಲ್ಲದವರು ಅನಿವಾರ್ಯವಾಗಿ ಸರ್ಕಾರಿ ಶಾಲೆಗಳತ್ತ ಮುಖ ಮಾಡಬೇಕಾದಂಥ ಪರಿಸ್ಥಿತಿ ನಿರ್ಮಾಣಗೊಂಡಿದೆ. ಒಂದೇ ಓಣಿಯಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿರುವ ಎರಡು ಕುಟುಂಬಗಳಲ್ಲಿನ ಶಾಮ ಇಂಗ್ಲಿಷ್ ಮಾಧ್ಯಮದ ಶಾಲೆಯಲ್ಲಿ ಓದುತ್ತಿದ್ದರೆ ರಾಮ ಸರ್ಕಾರಿ ಕನ್ನಡ ಶಾಲೆಯನ್ನು ನೆಚ್ಚಿಕೊಂಡಿರುವನು. ಇಂಗ್ಲಿಷ್ ಮಾತನಾಡುವ ಶಾಮನೆದುರು ಕನ್ನಡ ಮಾತನಾಡುವ ರಾಮ ಮಂಕಾಗಿ ಕಾಣಿಸುತ್ತಿರುವ ಪರಿಣಾಮ ಅವನ (ರಾಮನ) ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳುತ್ತಿದೆ. ಸಹಜವಾಗಿಯೇ ಇದು ಆತನ ಪಾಲಕರಲ್ಲಿ ಆತಂಕವನ್ನು ಸೃಷ್ಟಿಸಿದೆ. ಅಂದರೆ ಬಡವರ ಮಕ್ಕಳ ಶಿಕ್ಷಣ ಅದು ಸರ್ಕಾರದ ಕನ್ನಡ ಶಾಲೆಗಳಿಗೆ ಮಾತ್ರ ಸೀಮಿತವಾಗಬೇಕೆ? ಇಂಥದ್ದೊಂದು ಸಮಸ್ಯೆಯನ್ನು ಸೃಷ್ಟಿಸಿರುವ ಸರ್ಕಾರ ಸಹಜವಾಗಿಯೇ ಆ ಸಮಸ್ಯೆಯ ನಿವಾರಣೆಯ ಹೊಣೆ ಹೊರಬೇಕಾಗುವುದು ಅನಿವಾರ್ಯವಾಗುತ್ತದೆ. ಈ ರೀತಿಯ ಸಮಸ್ಯೆಯೊಂದು ಎದುರಾಗಿರುವ ಸಂದರ್ಭದಲ್ಲೇ ಶಿಕ್ಷಣದ ಹಕ್ಕು ಕಾಯ್ದೆ ಜಾರಿಗೆ ಬರುತ್ತದೆ. ಆ ಕಾಯ್ದೆಯ ಮೂಲಕವಾದರೂ ಎಲ್ಲ ಬಡ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಪ್ರವೇಶ ದೊರಕಿಸಿ ಕೊಡಲು ಸಾಧ್ಯವೇ? 
        ಈಗ ನಾನು ಮತ್ತೆ ಶಿಕ್ಷಣ ಮಾಧ್ಯಮದ ವಿಷಯಕ್ಕೆ ಬರುತ್ತೇನೆ. ಸರ್ಕಾರ ಏನು ಮಾಡಬೇಕು. ಅದರೆದುರು ಎರಡು ಆಯ್ಕೆಗಳಿವೆ. ಒಂದು ಒಂದರಿಂದ ಹತ್ತನೇ ತರಗತಿಯವರೆಗೆ ಮಾತೃ ಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸುವುದು. ಹೀಗೆ ಮಾಡುವುದರ ಮೂಲಕ ಆಯಾ ರಾಜ್ಯದ ಮಕ್ಕಳು ಬಡವ, ಶ್ರೀಮಂತ ಎನ್ನುವ ಭೇದವಿಲ್ಲದೆ ಎಲ್ಲರೂ ತಮ್ಮ ಮಾತೃ ಭಾಷೆಯ ಮೂಲಕವೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿದಂತಾಗುತ್ತದೆ. ಜೊತೆಗೆ ಮಗುವಿನ ಶಿಕ್ಷಣದಲ್ಲಿ ಪ್ರಾದೇಶಿಕ ವಿಷಯ ವಸ್ತುವಿಗೂ ಪ್ರಾಮುಖ್ಯತೆ ನೀಡಿದಂತಾಗುತ್ತದೆ. ಅದರೊಂದಿಗೆ ಕಲಿಯುವ ಭಾಷೆಯಾಗಿ ಇಂಗ್ಲಿಷನ್ನು ಒಂದನೇ ತರಗತಿಯಿಂದಲೇ ಕಲಿಯುವಂಥ ವ್ಯವಸ್ಥೆಯನ್ನು ಪರಿಚಯಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಎದುರು ಹಾಕಿಕೊಂಡು ಇಂಥದ್ದೊಂದು ಕೆಲಸಕ್ಕೆ ಕೈಹಾಕುವುದು ಅದು ಸರ್ಕಾರದ ಸಾಮರ್ಥ್ಯವನ್ನು ಮೀರಿದ ಸಂಗತಿ. ಇನ್ನು ಸರ್ಕಾರಕ್ಕಿರುವ ಎರಡನೇ ಆಯ್ಕೆ ಎಂದರೆ ಪ್ರತಿ ಹಳ್ಳಿಗಳನ್ನೊಳಗೊಂಡಂತೆ ಎಲ್ಲ ಪ್ರದೇಶಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯ ಬೇಕು. ಇದು ಒಂದರ್ಥದಲ್ಲಿ ಮುಂದೊಂದು ದಿನ ಎಲ್ಲ ಕನ್ನಡ ಶಾಲೆಗಳನ್ನು ಮುಚ್ಚುವಂತಹ ಅಪಾಯವೊಂದನ್ನು ನಾವಾಗಿಯೇ ಆಹ್ವಾನಿಸಿದಂತೆ. ಅಂಥದ್ದೊಂದು ಅಪಾಯ ಎದುರಾಗಬಾರದೆಂದು ಸರ್ಕಾರ 'ಶಿಕ್ಷಣದ ಹಕ್ಕು ಕಾಯ್ದೆ'ಯನ್ನು ಜಾರಿಗೆ ತಂದಿದೆ. ಆದರೆ ಇಲ್ಲೊಂದು ಪ್ರಶ್ನೆ ಎದುರಾಗುತ್ತದೆ. ಬಡತನ ರೇಖೆಯ ಕೆಳಗೆ ಬದುಕುತ್ತಿರುವ ಕುಟುಂಬಗಳಲ್ಲಿನ ಪ್ರತಿಶತ 25 ರಷ್ಟು ಮಕ್ಕಳಿಗೆ ಮಾತ್ರ ಖಾಸಗಿ ಇಂಗ್ಲಿಷ್ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ದೊರಕಿಸಿ ಕೊಟ್ಟರೆ ಉಳಿದ ಮಕ್ಕಳು ಏನು ಮಾಡಬೇಕು?. ಹಾಗಾದರೆ ಉಳಿದ ಮಕ್ಕಳು ಕನ್ನಡ ಶಾಲೆಗಳನ್ನೇ ಅವಲಂಬಿಸಬೇಕೇ? ಅವರಲ್ಲಿನ  ಇಂಗ್ಲಿಷ್ ಮಾಧ್ಯಮದ ಮೂಲಕ ಕಲಿಯಬೇಕೆನ್ನುವ  ಆಸೆಯನ್ನು  ಚಿವುಟಿ ಹಾಕಬೇಕೆ? ಒಂದು ರೀತಿಯಲ್ಲಿ ಮಕ್ಕಳ ಶಿಕ್ಷಣ ವಿಷಯವಾಗಿ ಸರ್ಕಾರವೇ ತಾರತಮ್ಯವನ್ನು ಸೃಷ್ಟಿಸಿದಂತಾಗುತ್ತದೆ. ಹೀಗೆ ಮಾಡುವುದರ ಬದಲು ಸರ್ಕಾರ ಒಂದೇ ಮಾಧ್ಯಮದ ಶಿಕ್ಷಣವನ್ನು ಕಡ್ಡಾಯಗೊಳಿಸುವುದು ಸೂಕ್ತ. 
       ಶಿಕ್ಷಣದ ವಿಷಯವಾಗಿ ಎರಡನೇ ಬಹು ಚರ್ಚಿತ ಸಂಗತಿ ಎಂದರೆ ಅದು ಏಕರೂಪ ಪಠ್ಯಕ್ರಮ . ಕೇಂದ್ರ ಸರ್ಕಾರ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಜಾರಿಗೆ ತಂದಿದ್ದೆ ತಡ ಎಲ್ಲ ರಾಜ್ಯಗಳಲ್ಲಿ ಏಕರೂಪ ಪಠ್ಯಕ್ರಮ ಪರಿಚಯಿಸುವ ಸಿದ್ಧತೆ ಪ್ರಾರಂಭವಾಗಿದೆ. ಪರಿಣಾಮವಾಗಿ ಪಠ್ಯ  ಪುಸ್ತಕಗಳಲ್ಲಿ ಪ್ರಾದೇಶಿಕತೆ ಮಾಯವಾಗಿ ಮಕ್ಕಳ ಮೇಲೆ ರಾಷ್ಟ್ರೀಯ ಸಂಗತಿಗಳನ್ನು ಬಲವಂತವಾಗಿ ಹೇರಿದಂತಾಗುತ್ತದೆ. ತನ್ನ ಪರಿಸರದಲ್ಲಿನ ಪರಿಚಿತ ಸಂಗತಿಗಳನ್ನು ಓದುತ್ತಿದ್ದ ಮಗು  ತನ್ನದಲ್ಲದ ಅಪರಿಚಿತ ವಿಷಯಗಳನ್ನು ಅಭ್ಯಾಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಭಾಷಾ ವಿಜ್ಞಾನ ಮತ್ತು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆಯಾದರೆ ಗಣಿತ ಮತ್ತು ವಿಜ್ಞಾನದ ವಿಷಯಗಳು ಅತ್ಯಂತ ಜಟಿಲವಾಗಿವೆ. ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ಪ್ರಾದೇಶಿಕ ಅಸಮಾನತೆ ಇಲ್ಲದೆ ಎಲ್ಲ ಮಕ್ಕಳೂ ಜೊತೆಯಾಗಿ ಸ್ಪರ್ಧಿಸಲಿ ಎನ್ನುವ ಸರ್ಕಾರದ ಕ್ರಮವೇನೋ ಸ್ವಾಗತಾರ್ಹ. ಆದರೆ ಹೀಗೆ ಮಾಡುವಾಗ ಇಲ್ಲಿ ಮತ್ತೆ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳ ಪ್ರಶ್ನೆ ಎದುರಾಗುತ್ತದೆ. ಏಕರೂಪ  ಪಠ್ಯಕ್ರಮದ  ವ್ಯಾಪ್ತಿಗೆ ಕನ್ನಡ ಮಾಧ್ಯಮ ಶಿಕ್ಷಣವನ್ನು ಸೇರಿಸುವುದಾದರೂ ಹೇಗೆ? ಪಿಯುಸಿ ಹಂತದಲ್ಲಿ ಗಣಿತ ಮತ್ತು ವಿಜ್ಞಾನವನ್ನು ಕನ್ನಡ ಭಾಷೆಯಲ್ಲಿ ಕಲಿಯಲು ಅವಕಾಶ ಮತ್ತು ಅನುಕೂಲತೆಗಳಿಲ್ಲದಂತಹ ಹೊತ್ತಿನಲ್ಲಿ ಕನ್ನಡ ಮಾಧ್ಯಮದ ಶಿಕ್ಷಣವನ್ನು ರಾಷ್ಟ್ರೀಯ ಅರ್ಹತಾ ಪರೀಕ್ಷೆಗನುಗುಣವಾಗಿ ಅಣಿಗೊಳಿಸಲು ಸಾಧ್ಯವೇ? ಸಾಧ್ಯವಿಲ್ಲ ಎಂದಾದರೆ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳು ಇಂಗ್ಲಿಷ್ ಮಾಧ್ಯಮದ ಏಕರೂಪ ಪಠ್ಯಕ್ರಮವನ್ನು ಅಭ್ಯಸಿಸುತ್ತಿರುವ ಮಕ್ಕಳ ಪ್ರಬಲ ಸ್ಪರ್ಧೆಯ ನಡುವೆ ಅವರುಗಳೆಂದು ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪಡೆಯಬೇಕು. ಅಂಥದ್ದೊಂದು ಸಾಧ್ಯತೆ ಅಸಾಧ್ಯವಾಗಿರುವುದರಿಂದ ಕನ್ನಡ ಭಾಷೆಯಲ್ಲಿ ಓದುತ್ತಿರುವ ಈ ಬಡ ಮಕ್ಕಳು ಹೋಟೆಲ್ಲುಗಳಲ್ಲೊ, ಕಿರಾಣಿ ಅಂಗಡಿಗಳಲ್ಲೊ ಕೆಲಸ ಮಾಡುತ್ತ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾಗುತ್ತದೆ. 
     ಶಿಕ್ಷಣದ ವಿಷಯವಾಗಿ ಯಾವುದೇ ಕಾಯ್ದೆ ಕಾನೂನು ರೂಪಿಸುವುದಕ್ಕಿಂತ ಮೊದಲು ಸರ್ಕಾರ ಅದರ ಸಾಧಕ ಬಾಧಕಗಳನ್ನು ಕುರಿತು ವಿವೇಚಿಸುವುದೊಳಿತು. ಸ್ಥಿತಿವಂತರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಕಳುಹಿಸಿದರೆ ಬಡ ಮಕ್ಕಳಿಗಾಗಿ ಸರ್ಕಾರದ ಕನ್ನಡ ಶಾಲೆಗಳಿವೆ ಎನ್ನುವ ವಿತಂಡವಾದ ಸರಿಯಲ್ಲ. ಶಿಕ್ಷಣದ ಮಾಧ್ಯಮವನ್ನು ಸಾಮರ್ಥ್ಯದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಅದನ್ನು ಆಸಕ್ತಿಗನುಗುಣವಾಗಿ ಆಯ್ಕೆ ಮಾಡಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗಬೇಕು. ಬಡವರ ಮತ್ತು ಶ್ರೀಮಂತರ ಮಕ್ಕಳು ಕೂಡಿಯೇ ಕನ್ನಡ ಶಾಲೆಗಳಲ್ಲೂ ಮತ್ತು ಇಂಗ್ಲಿಷ್ ಶಾಲೆಗಳಲ್ಲೂ ಕಲಿಯುವಂತಹ ದಿನಗಳು ಬರಬೇಕು. 

ಇದ್ದದ್ದು ಇದ್ದಹಾಂಗ 

       ಕರ್ನಾಟಕ ಸರ್ಕಾರ ಆರನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯುವ ಯೋಜನೆ ರೂಪಿಸಿದ್ದೆ ತಡ ರಾಜ್ಯದ ಮೂಲೆ ಮೂಲೆಗಳಿಂದ ಆಕ್ರೋಶದ ಮಾತುಗಳು ಕೇಳಿ ಬಂದವು. ವಿಶೇಷವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರುಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡರು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಕುಳಿತರು. ಈ ವಿಷಯವಾಗಿ ಕನ್ನಡ ಪ್ರಭ ದಿನಪತ್ರಿಕೆ ವರದಿ ಪ್ರಕಟಿಸಿದ್ದೆ ತಡ ಅವರೆಲ್ಲರ ಬಣ್ಣ ಬಯಲಾಯಿತು. ಏಕೆಂದರೆ ಈ ಪರಿಷತ್ತಿನ ಜಿಲ್ಲಾಧ್ಯಕ್ಷರುಗಳಲ್ಲಿ ಹೆಚ್ಚಿನವರ ಮಕ್ಕಳು ಓದುತ್ತಿರುವುದು ಪ್ರತಿಷ್ಠಿತ ಇಂಗ್ಲಿಷ್ ಶಾಲೆಗಳಲ್ಲಿ. ಹೇಗಿದೆ ನೋಡಿ ಹೇಳುವುದು ಒಂದು ಮಾಡುವುದು ಇನ್ನೊಂದು.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ