Saturday, July 21, 2012

ಭಾರತದ ಮೊದಲ ಸುಪರ್ ಸ್ಟಾರ್ ನನ್ನು ನೆನೆಯುತ್ತ

          ನನ್ನೂರು ಗುಲಬರ್ಗಾ ಹೈದರಾಬಾದಿಗೆ ಅತೀ ಹತ್ತಿರದಲ್ಲಿರುವುದರಿಂದ ಹಾಗೂ  ಮುಸಲ್ಮಾನರು  ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವುದರ ಪರಿಣಾಮ ಉರ್ದು ಭಾಷೆಯ ಪ್ರಭಾವ ದಟ್ಟವಾಗಿರುವುದರಿಂದ ಅಲ್ಲಿ ಹಿಂದಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಒಂದರ್ಥದಲ್ಲಿ ಹಿಂದಿ ಅಲ್ಲಿನ ವಾಣಿಜ್ಯ ಭಾಷೆಯಾಗಿ ಬಳಕೆಯಾಗುತ್ತಿದೆ. ಪರಿಣಾಮವಾಗಿ ಅಲ್ಲಿ ಕನ್ನಡ ಸಿನಿಮಾಗಳಿಗೆ ಹಿಂದಿ ಚಿತ್ರಗಳ ಪೈಪೋಟಿ ಸದಾ ಕಾಲ ಇದ್ದದ್ದೆ. ಅನೇಕ ಹಿಂದಿ ಸಿನಿಮಾಗಳು ಆ ನಗರದಲ್ಲಿ ಶತದಿನಗಳ ಪ್ರದರ್ಶನ ಕಂಡಿದ್ದುಂಟು. ಹೀಗಿದ್ದೂ ನನಗೆ ಹಿಂದಿ ಸಿನಿಮಾಗಳ ಕುರಿತು ಅಂಥ ಹೆಚ್ಚಿನ ಆಕರ್ಷಣೆಯೇನೂ ಇರಲಿಲ್ಲ. ಆಗೆಲ್ಲ ಕನ್ನಡ ಚಿತ್ರರಂಗದಲ್ಲಿ ರಾಜಕುಮಾರ ಸಿನಿಮಾಗಳ ಪ್ರಭಾವ ಮತ್ತು ಆಕರ್ಷಣೆ ದಟ್ಟವಾಗಿದ್ದರಿಂದ ಅನ್ಯಭಾಷಾ ಚಿತ್ರಗಳೆಡೆ ಮನಸ್ಸು ವಾಲುತ್ತಿರಲಿಲ್ಲ. ಜೊತೆಗೆ ಆ ದಿನಗಳಲ್ಲಿ ಜನರು ಹಿಂದಿ ಸಿನಿಮಾಗಳ ಬಗ್ಗೆ ಮಾತನಾಡುವಾಗ ಅವರ ಚರ್ಚೆ ಸೀಮಿತವಾಗುತ್ತಿದ್ದದ್ದು 'ಶೋಲೆ' ಎನ್ನುವ ಮಲ್ಟಿ ಸ್ಟಾರ್ ಚಿತ್ರಕ್ಕೆ ಮಾತ್ರ. ಹೀಗಾಗಿ ಹಿಂದಿ ಸಿನಿಮಾ ಎಂದರೆ ಅದು ಶೋಲೆ ಮತ್ತು ಅಮಿತಾಬ ಬಚ್ಚನ್ ಮಾತ್ರ ಎನ್ನುವ ನಿರಾಸಕ್ತಿ ನನ್ನಲ್ಲಿ ಮನೆ ಮಾಡಿತ್ತು (ಧರ್ಮೇಂದ್ರ ಶೋಲೆ ಚಿತ್ರದ ನಾಯಕನಾದರೂ ನಂತರದ ದಿನಗಳಲ್ಲಿ ಯಶಸ್ಸಿನ ಉತ್ತುಂಗಕ್ಕೆರಿದ್ದು ಅಮಿತಾಬ ಬಚ್ಚನ್). ಅಂಥದ್ದೊಂದು ನಿರಾಸಕ್ತಿ ಮತ್ತು ಅನಾಕರ್ಷಣೆ ಮಧ್ಯೆಯೂ ನಾನು ನೋಡಿದ ಮೊದಲ ಹಿಂದಿ ಸಿನಿಮಾ 'ಆಖಿರ್  ಕ್ಯೊಂ'.
           1990ರ ದಶಕದಲ್ಲಿ ನಾನು ನೋಡಿದ ಈ    'ಆಖಿರ್  ಕ್ಯೊಂ' ಸಿನಿಮಾದಲ್ಲಿ ಸ್ಮೀತಾ ಪಾಟೀಲ್, ರಾಜ ಬಬ್ಬರ್, ರಾಜೇಶ ಖನ್ನಾ ರಂಥ ಪ್ರತಿಭಾನ್ವಿತ ಕಲಾವಿದರ ಅಭಿನಯವಿತ್ತು. ಆ ಕಡೆ ಕಲಾತ್ಮಕ ಚಿತ್ರದ ನಿಧಾನಗತಿಯೂ ಇಲ್ಲದ ಈ ಕಡೆ ಕಮರ್ಷಿಯಲ್ ಸಿನಿಮಾದ ಅಬ್ಬರವೂ ಇಲ್ಲದ ಈ ಸಿನಿಮಾ ಒಂದರ್ಥದಲ್ಲಿ ಅವೆರಡರ ನಡುವಿನ ಬ್ರಿಡ್ಜ್ ಸಿನಿಮಾ ಆಗಿತ್ತು. ಮಹಿಳಾ ಪ್ರಧಾನದ ಈ ಚಿತ್ರದಲ್ಲಿ ಸ್ಮೀತಾ ಪಾಟೀಲರ ಸಹಜ ಅಭಿನಯ ಹಾಗೂ ಕ್ರೌರ್ಯವೇ ತಾನಾಗಿ ಪರಕಾಯ ಪ್ರವೇಶ ಮಾಡಿದ ರಾಜ ಬಬ್ಬರ ಅಭಿನಯದ ನಡುವೆಯೂ ಗಮನ ಸೆಳೆದದ್ದು ಪಾದರಸದಂತೆ ಚುರುಕಾಗಿ ಅಭಿನಯಿಸಿದ ರಾಜೇಶ ಖನ್ನಾ ಪಾತ್ರ. ಮಹಿಳಾ ಶೋಷಣೆಯ ವಿರುದ್ಧ ಚಿತ್ರದುದ್ದಕ್ಕೂ ಅತ್ಯಂತ ಮನೋಜ್ಞವಾಗಿ ಅಭಿನಯಿಸಿದ ರಾಜೇಶ ಖನ್ನಾ ಅಭಿನಯ ಅಚ್ಚಳಿಯದೆ ನೆನಪಾಗಿ ಉಳಿದುಕೊಂಡಿತು. ಆ ಹೊತ್ತಿಗಾಗಲೇ ರಾಜೇಶ ಖನ್ನಾ ತನ್ನ ಸುಪರ್ ಸ್ಟಾರ್ ಪಟ್ಟವನ್ನು ಬೇರೊಬ್ಬ ನಟನಿಗೆ ಬಿಟ್ಟು ಕೊಟ್ಟಾಗಿತ್ತು. ಆ ನಂತರ ನೋಡಿದ್ದು ಇದೇ ರಾಜೇಶ ಖನ್ನಾ ಅಭಿನಯದ 'ಆನಂದ' ಚಿತ್ರವನ್ನು ( ಇದು  'ಆಖಿರ್  ಕ್ಯೊಂ' ಕ್ಕಿಂತ ಮೊದಲು ನಿರ್ಮಾಣಗೊಂಡ ಸಿನಿಮಾ). ಕ್ಯಾನ್ಸರ್ ರೋಗದಿಂದ ಬದುಕು ಇನ್ನೇನು ಆರು ತಿಂಗಳಲ್ಲಿ ಕೊನೆಗೊಳ್ಳಲಿದೆ ಎನ್ನುವ ಸತ್ಯದ ಅರಿವಿನ ನಡುವೆಯೂ ಜೀವನ ಪ್ರೀತಿಯನ್ನು ಪ್ರತಿಪಾದಿಸುವ ಪಾತ್ರದಲ್ಲಿ ರಾಜೇಶ ಖನ್ನಾರದು ಚಿರಕಾಲ ನೆನಪಿನಲ್ಲುಳಿಯುವ ಅಭಿನಯ. ಅರಳು ಹುರಿದಂತೆ ಪಟಪಟನೆ ಮಾತನಾಡುತ್ತ ತನ್ನ ಸುತ್ತಲಿನವರ ಬದುಕಿನಲ್ಲಿ ಸಂತಸವನ್ನು ಅರಳಿಸುವ ಪಾತ್ರದಲ್ಲಿ ರಾಜೇಶ ಖನ್ನಾ ಇಡೀ ಚಿತ್ರವನ್ನು ಆವರಿಸಿಕೊಂಡ ರೀತಿ ಅನನ್ಯ. ನಿಜಕ್ಕೂ ಹಿಂದಿ ಸಿನಿಮಾಗಳೆಡೆ ನನ್ನ ಆಸಕ್ತಿಯನ್ನು ಸೆಳೆದದ್ದು ಈ 'ಆನಂದ' ಸಿನಿಮಾ.
            'ಆನಂದ' ಸಿನಿಮಾದ ರಾಜೇಶ ಖನ್ನಾ ಅವರ ಅದ್ಭುತ ಅಭಿನಯ ವೀಕ್ಷಿಸಿದ  ಪರಿಣಾಮ ನಂತರದ ದಿನಗಳಲ್ಲಿ  ಅನೇಕ ಹಳೆಯ ಹಿಂದಿ ಸಿನಿಮಾಗಳನ್ನು ನೋಡಲು ಪ್ರೇರಣೆಯಾಯಿತು. ರಾಜ್ ಕಪೂರ, ದಿಲೀಪ ಕುಮಾರ, ಮನೋಜ ಕುಮಾರ, ದೇವಾನಂದ, ಆಶಾ ಪರೇಖ, ನರ್ಗೀಸ್, ಶರ್ಮಿಳಾ ಟ್ಯಾಗೋರ್ ಅವರಂಥ ಅಪ್ರತಿಮ ಕಲಾವಿದರ ಅದ್ಭುತ ಪ್ರತಿಭೆಯ ದರ್ಶನವಾಯಿತು. 'ಮೇರಾ ನಾಮ ಜೋಕರ್', 'ಮದರ್ ಇಂಡಿಯಾ', 'ಗೈಡ್', 'ಆರಾಧನಾ' ದಂಥ ಸರ್ವಕಾಲಿಕ ಶ್ರೇಷ್ಠ ಚಿತ್ರಗಳನ್ನು ನೋಡಲು ಸಾಧ್ಯವಾಯಿತು. ಇದೇ ಆಸಕ್ತಿ ಮುಂದಿನ ದಿನಗಳಲ್ಲಿ ನಾಸಿರುದ್ದೀನ್ ಷಾ, ಓಂ ಪೂರಿ, ಶಬನಾ ಅಜ್ಮಿ ಅವರಂಥ ಅಭಿಜಾತ ಕಲಾವಿದರ ಕಲಾತ್ಮಕ ಚಿತ್ರಗಳನ್ನು ನೋಡುವ ಉಮೇದಿ ಮೂಡಿಸಿತು. ಒಂದರ್ಥದಲ್ಲಿ ರಾಜೇಶ ಖನ್ನಾ ಅಭಿನಯದ 'ಆಖಿರ್  ಕ್ಯೊಂ' ಸಿನಿಮಾ ನನಗೆ ಇಡೀ ಹಿಂದಿ ಸಿನಿಮಾ ರಂಗವನ್ನೇ ಪರಿಚಯಿಸಿತು. ಆಗಲೇ ಹಿಂದಿ ಸಿನಿಮಾ ಎಂದರೆ ಅದು ಕೇವಲ ಶೋಲೆ ಮತ್ತು ಅಮಿತಾಬ ಬಚ್ಚನ್ ಮಾತ್ರವಲ್ಲ ಅದನ್ನೂ ಮೀರಿ ಅಲ್ಲಿ ಅನೇಕ ಪ್ರತಿಭೆಗಳ ಸಂಗಮವಿದೆ ಎಂದು ಗೊತ್ತಾಗಿದ್ದು.
           ನನ್ನ ಸಮಕಾಲಿನ ಹಿಂದಿಯೇತರ ಪ್ರೇಕ್ಷಕರಲ್ಲಿ ಹಿಂದಿ ಸಿನಿಮಾರಂಗದ ಒಂದು ಶ್ರೇಷ್ಠತೆಯನ್ನು ಪರಿಚಯಿಸಿದ್ದೆ ಈ ರಾಜೇಶ ಖನ್ನಾ ಅಭಿನಯದ ಸಿನಿಮಾಗಳು. ರಾಜೇಶ ಖನ್ನಾ ಹಳೆ ಬೇರು ಮತ್ತು ಹೊಸ ಚಿಗುರಿನ ಮಧ್ಯದ ಕೊಂಡಿ. ಹಿಂದಿ ಸಿನಿಮಾಕ್ಕೊಂದು ಮಾಂತ್ರಿಕ ಸ್ಪರ್ಶ ನೀಡಿದ ರಾಜಕಪೂರ, ಶಮ್ಮಿ ಕಪೂರ, ಗುರುದತ್ತ ಅವರ ಕಲಾ ಬದುಕಿನ ಕೊನೆಯ ದಿನಗಳು ಹಾಗೂ ಯಂಗ್ರಿ ಯಂಗ್ ಮ್ಯಾನ್ ಇಮೇಜಿನಿಂದ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಲು ಪ್ರಯತ್ನಿಸುತ್ತಿದ್ದ ಧರ್ಮೇಂದ್ರ, ಅಮಿತಾಬರಂಥ ನಟರು ಪ್ರವರ್ಧಮಾನಕ್ಕೆ ಬರುತ್ತಿದ್ದ ಆ ಸಮಯ ತಮ್ಮ ವಿಶಿಷ್ಠ ಅಭಿನಯದಿಂದ ತಮ್ಮದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡವರು ಈ ರಾಜೇಶ ಖನ್ನಾ. 1980ರ ದಶಕದ ನಂತರದ  ಹಿಂದಿ ಚಿತ್ರರಂಗಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದ ನನ್ನ ವಯೋಮಾನದ ಪ್ರೇಕ್ಷಕರನ್ನು ಹಳೆಯ ಹಿಂದಿ ಸಿನಿಮಾಗಳನ್ನು ನೋಡುವಂಥ ಆಕರ್ಷಣೆಗೆ ಒಳಪಡಿಸಿದ್ದು ಇದೇ ರಾಜೇಶ ಖನ್ನಾರ 'ಆರಾಧನಾ', 'ಬಾವರ್ಚಿ'ಯಂಥ ವಿಶಿಷ್ಟ ಸಿನಿಮಾಗಳು. 
          1980ರ ದಶಕದ ನಂತರ ಮಲ್ಟಿ ಸ್ಟಾರ್ ಸಿನಿಮಾಗಳ ಅಬ್ಬರದ ನಡುವೆ ರಾಜೇಶ ಖನ್ನಾ ಜನಪ್ರಿಯತೆ ಕಡಿಮೆಯಾಗುತ್ತ ಬಂದಿದ್ದು ನಿಜ. ಆದರೆ ಕಲೆಯನ್ನು ಕಲೆಯಾಗಿಯೇ ಉಳಿಸಿ ಹೋದವನು ಈ ನಟ ಎಂದರೆ ಉತ್ಪ್ರೇಕ್ಷೆಯಾಗಲಾರದು. ಏಕೆಂದರೆ  ಆತನ ನಂತರದ ಅನೇಕ ಕಲಾವಿದರು ತಮ್ಮಲ್ಲಿನ ಕಲೆಯನ್ನು  ಅಭಿನಯದ ಆಚೆಯೂ ಜಾಹಿರಾತು ಪ್ರಪಂಚಕ್ಕೆ ಕೊಂಡೊಯ್ದು ಕಲಾವಂತಿಕೆಯನ್ನು ಮಾರುಕಟ್ಟೆಯ ಸರಕಾಗಿಸಿ ಬಿಕರಿಗಿಟ್ಟಿದ್ದುಂಟು. ಕಲೆಯನ್ನು ಹಣಕ್ಕಾಗಿ ಮಾರಿಕೊಳ್ಳುತ್ತಿರುವ ಕಲಾವಿದರ ನಡುವೆಯೂ ರಾಜೇಶ ಖನ್ನಾ ಅಭಿನಯಿಸುವುದನ್ನು ಬಿಟ್ಟ ಅನೇಕ ವರ್ಷಗಳ ನಂತರವೂ ಮತ್ತೆ ಮತ್ತೆ ನೆನಪಾಗುತ್ತಾರೆ. ಅವರ ಅಭಿನಯದ ಚಿತ್ರಗಳು ಸರ್ವಕಾಲಿಕ ಶ್ರೇಷ್ಠ ಚಿತ್ರಗಳ ಸಾಲಿನಲ್ಲಿ ಸದಾಕಾಲ ಇದ್ದು ಭಾರತೀಯ ಪ್ರೇಕ್ಷಕರನ್ನು ಕಾಡುತ್ತಲೇ ಇರುತ್ತವೆ.


-ರಾಜಕುಮಾರ ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Wednesday, July 11, 2012

ಕನ್ನಡ ಶಾಲೆಗಳಲ್ಲಿ ಮಕ್ಕಳ ಕೊರತೆ

      ಮೊನ್ನೆ ಸಂಭದಿಕರ ಮದುವೆಗೆಂದು ಗುಲಬರ್ಗಾ ಕ್ಕೆ ಹೋಗಿದ್ದಾಗ ನನ್ನೂರಿನ ಆ ಹಳ್ಳಿಗೂ ಹೋಗಿದ್ದೆ. ಸಾಯಂಕಾಲದ ಆ ಇಳಿ ಹೊತ್ತಿನಲ್ಲೂ ಊರಿನ ಬೀದಿಗಳು ಬಿಕೋ ಎನ್ನುತ್ತಿದ್ದವು. ಮಕ್ಕಳು ಮತ್ತು ಯುವಕರು ಕಾಣಿಸಿದ್ದು ಬೆರಳೆಣಿಕೆಯಷ್ಟು ಮಾತ್ರ. ಇಡೀ ಊರಿನ ಚಿತ್ರಣವೇ .ಬದಲಾಗಿತ್ತು. ಬೇರೆ ಊರಿಗೆ ಬಂದಿರಬಹುದೆನ್ನುವ ಆತಂಕದಿಂದ ಹೆಜ್ಜೆ ಹಾಕುತ್ತಿರುವಾಗ ದೂರದಲ್ಲಿ ನಡೆದು ಬರುತ್ತಿದ್ದ ಕಾಳಜ್ಜ ಕಾಣಿಸಿದ. ಮನಸ್ಸಿಗೆ ಒಂದಿಷ್ಟು ಸಮಾಧಾನವಾಯಿತು. ಹತ್ತಿರ ಬಂದ ಕಾಳಜ್ಜನ ಜೊತೆ ಒಂದಿಷ್ಟು ಉಭಯಕುಶಲೋಪರಿಯ ನಂತರ ಆತನ ಮೊಮ್ಮಕ್ಕಳ ಕುರಿತು ವಿಚಾರಿಸಿದೆ. ತನ್ನ ಮಕ್ಕಳನ್ನು ಶಾಲೆಯ ಮೆಟ್ಟಿಲೂ ಹತ್ತಲು ಬಿಟ್ಟಿರದ ಕಾಳಜ್ಜ ತನ್ನ ಮೊಮ್ಮಕ್ಕಳ  ವಿಷಯದಲ್ಲಾದರೂ ಬದಲಾಗಿರಬಹುದೆನ್ನುವ ಅನುಮಾನ ನನ್ನದಾಗಿತ್ತು. ನನ್ನ ಅನುಮಾನ ಪರಿಹರಿಸುವಂತೆ ಕಾಳಜ್ಜ ಹೇಳುತ್ತಾ ಹೋದ 'ಅಯ್ಯೋ ಮಾರಾಯಾ ಅದೆಲ್ಲ ನನ್ನ ಮಕ್ಕಳ ಕಾಲಕ್ಕೆ ಮುಗಿದು ಹೋಯ್ತು. ಮೊಮ್ಮಕ್ಕಳಾದ್ರೂ ನಾಲ್ಕಕ್ಷರ ಕಲ್ತು ಸಾಹೇಬ್ರಾಗಲಿ ಅಂತ ಪ್ಯಾಟಿ ಸಾಲಿಗಿ ಹಚ್ಚಿನಿ. ಇಲ್ಲಿನ ಸರ್ಕಾರಿ ಸಾಲ್ಯಾಗ ಕಲಿಸೋದು ಅಷ್ಟರಲ್ಲೇ ಅದಾ.. ಅದಕ್ಕಂತ ಹೆಚ್ಚು ರೊಕ್ಕ ಕೊಟ್ಟು ಇಂಗ್ಲಿಷ್ ಸಾಲಿಗಿ ಹಾಕೀನಿ. ಊಟಕ್ಕ ತೊಂದರಿ ಆಗಬಾರದಂತ ಮಗ ಸೋಸಿಗೂ ಪ್ಯಾಟ್ಯಾಗೆ ಮನಿ ಮಾಡಿ ಕೊಟ್ಟಿನಿ' ಇದು ನನ್ನೂರಿನ ಒಬ್ಬ ಕಾಳಜ್ಜನಲ್ಲಾದ ಬದಲಾವಣೆ ಅಲ್ಲ.   ಇಂಥ  ಕಾಳಜ್ಜರು ಅನೇಕ ಊರುಗಳಲ್ಲಿ ಕಾಣಸಿಗುತ್ತಾರೆ. ಶಿಕ್ಷಣವನ್ನು ಅವರು ಯಾವತ್ತೋ ತಮ್ಮ ಮೂಲಭೂತ ಹಕ್ಕುಗಳಲ್ಲಿ ಒಂದನ್ನಾಗಿಸಿಕೊಂಡಿದ್ದಾರೆ. ಇಲ್ಲಿ ಕಾಳಜ್ಜನ ಜೊತೆ ಮಾತನಾಡಿದ ನಂತರ ನನ್ನನ್ನು ಬೆನ್ನು ಹತ್ತಿದ ಬೇತಾಳದಂತೆ ಕಾಡಿದ ಪ್ರಶ್ನೆ ಎಂದರೆ ಊರಿನಲ್ಲೇ ಹೈಸ್ಕೂಲು ವರೆಗೆ ಶಾಲೆ ಇರುವಾಗ ಕಾಳಜ್ಜ ದುಬಾರಿ ಫಿಜು ಕೊಟ್ಟು ತನ್ನ ಮೊಮ್ಮಕ್ಕಳನ್ನು ಪಟ್ಟಣದ ಶಾಲೆಗೆ ಕಳುಹಿಸುವ ಅಗತ್ಯವಾದರೂ ಏನಿತ್ತು?. ಅವನೇ ಹೇಳುವಂತೆ ಸರ್ಕಾರಿ ಶಾಲೆಗಳಲ್ಲಿ ಕಲಿಸುವುದು ಅಷ್ಟರಲ್ಲೇ ಇದೆ. ಓದಲು ಒಂದಕ್ಷರವೂ ಬಾರದ, ತನ್ನ ಮಕ್ಕಳನ್ನು ಶಾಲೆಗೇ ಕಳುಹಿಸದ, ಹಳ್ಳಿಯಲ್ಲಿದ್ದುಕೊಂಡು ವ್ಯವಸಾಯ ಮಾಡುತ್ತಿರುವ ಕಾಳಜ್ಜ ಸರ್ಕಾರಿ ಶಾಲೆಗಳ ಹಣೆಬರಹ ಹೀಗೇ ಎಂದು ನಿರ್ಧರಿಸಿದ್ದ. ಆತ ಮಾತನಾಡಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ. ವಿಪರ್ಯಾಸ ನೋಡಿ ಕಾಳಜ್ಜನಂಥ ಅನಕ್ಷರಸ್ಥರು ಸರ್ಕಾರದ ಶಿಕ್ಷಣ ವ್ಯವಸ್ಥೆಯನ್ನು ಅನುಮಾನದಿಂದ ನೋಡುತ್ತಿರುವ ಈ ಹೊತ್ತಿನಲ್ಲೇ ನಮ್ಮ ಘನ ಸರ್ಕಾರ 'ಶಿಕ್ಷಣ ಹಕ್ಕು ಕಾಯ್ದೆ'ಗೆ ಅಧಿಕೃತವಾಗಿ ಚಾಲನೆ ನೀಡುತ್ತದೆ.
        ನಾನು ನನ್ನೂರಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಆ ದಿನಗಳಲ್ಲಿ ಸಮವಸ್ತ್ರವಾಗಲಿ, ಪುಸ್ತಕಗಳನ್ನಾಗಲಿ  ಉಚಿತವಾಗಿ ಕೊಡುತ್ತಿರಲಿಲ್ಲ. ಮಧ್ಯಾಹ್ನದ ಊಟ ನಾವು ಕಟ್ಟಿಕೊಂಡು ಬಂದ ಬುತ್ತಿಯೇ ಆಗಿರುತ್ತಿತ್ತು. ಸರ್ಕಾರ ಸೈಕಲ್ ಕೊಡುವುದಿರಲಿ ಶಾಲೆಗೆ ಸರಿಯಾದ ರಸ್ತೆಯನ್ನೂ ನಿರ್ಮಿಸಿರಲಿಲ್ಲ. ಅಂಥ ಸ್ಥಿತಿಯಲ್ಲಿಯೂ ಆ ಶಾಲೆ ಮಕ್ಕಳಿಂದ ಗಿಜಿಗುಡುತಿತ್ತು. ಕಳೆದ ಮೂರು ದಶಕಗಳ ಹಿಂದಿನ ಶಾಲೆಗೂ ಮತ್ತು ಇವತ್ತಿನ ಶಾಲೆಗೂ ಹೋಲಿಸಿ ನೋಡಿದಾಗ ಸಾಕಷ್ಟು ಬದಲಾವಣೆಯಾಗಿದೆ. ಶಾಲಾ ಕಟ್ಟಡ ವಿಸ್ತರಿಸಿದೆ. ಶಾಲೆಗೆ ಉತ್ತಮ ರಸ್ತೆ ನಿರ್ಮಿಸಲಾಗಿದೆ. ಶಾಲೆಯಲ್ಲಿ ಶೌಚಾಲಯದ ಸೌಲಭ್ಯವಿದೆ. ಮಕ್ಕಳಿಗೆ ಸಮವಸ್ತ್ರ ಮತ್ತು ಪುಸ್ತಕಗಳನ್ನು ಉಚಿತವಾಗಿ ಕೊಡುತ್ತಿರುವರು. ಮಕ್ಕಳ ಮಧ್ಯಾಹ್ನದ ಊಟ ಸರ್ಕಾರದ ಖರ್ಚಿನಲ್ಲಿ ಶಾಲೆಯಲ್ಲೇ ನಡೆಯುತ್ತಿದೆ. ಮಕ್ಕಳಿಗೆ ಸರ್ಕಾರ ಉಚಿತವಾಗಿ ಬೈಸಿಕಲ್ ಕೊಟ್ಟು ಉಪಕರಿಸಿದೆ. ಇಷ್ಟೆಲ್ಲಾ ಸೌಲಭ್ಯಗಳ ನಂತರವೂ ಆ ಶಾಲೆಯನ್ನು ಕಾಡುತ್ತಿರುವ ಬಹು ಮುಖ್ಯ ಸಮಸ್ಯೆ ಎಂದರೆ ಅದು ವಿದ್ಯಾರ್ಥಿಗಳ ಕೊರತೆ. ವರ್ಷದಿಂದ ವರ್ಷಕ್ಕೆ  ಆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷಿಣಿಸುತ್ತಿದೆ. ಸರ್ಕಾರವೇ ಮುಂದಾಗಿ ಉಚಿತ ಶಿಕ್ಷಣ ಕೊಡಲು ನಿಂತಿರುವಾಗ ಕಾಳಜ್ಜನಂಥ ಆನಕ್ಷರಸ್ಥರು ಕೂಡಾ ಪಟ್ಟಣಗಳ ದುಬಾರಿ ಶಾಲೆಗಳೆದುರು ಪ್ರವೇಶಕ್ಕಾಗಿ ಅರ್ಜಿ ಹಿಡಿದು ನಿಲ್ಲುತ್ತಾರೆ. ಇಲ್ಲಿ ನಾನು ಕಾಳಜ್ಜ ಮಾಡುತ್ತಿರುವುದು ತಪ್ಪು ಎನ್ನುತ್ತಿಲ್ಲ. ಏಕೆಂದರೆ ಅವನಿಗೆ ಬೇಕಿರುವುದು ಗುಣಮಟ್ಟದ ಶಿಕ್ಷಣವೇ ಹೊರತು ಸರ್ಕಾರದ ಸೌಲಭ್ಯಗಳಲ್ಲ. ಕೆಲವೊಂದು ಸೌಲಭ್ಯಗಳನ್ನು ಒದಗಿಸಿ ಒಂದಿಷ್ಟು ಭೌತಿಕ ಬದಲಾವಣೆ ಮಾಡಿದ ಮಾತ್ರಕ್ಕೆ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ದೊರೆಯುತ್ತಿದೆ ಎನ್ನುವ ನಿರ್ಧಾರಕ್ಕೆ ಬರುವುದು ಆತುರದ ನಿರ್ಣಯವಾಗುತ್ತದೆ.
       ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಕೊರತೆಯಿಂದಾಗಿ ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಪುಸ್ತಕಗಳು ಮತ್ತು ಬೈಸಿಕಲ್ ಇತ್ಯಾದಿ ಸೌಲಭ್ಯಗಳ ಆಮಿಷವೊಡ್ಡಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ಪ್ರಯತ್ನ ಅವ್ಯಾಹತವಾಗಿ ಮುಂದುವರೆದಿದೆ. ಏನೆಲ್ಲಾ ಆಮಿಷಗಳನ್ನೊಡ್ಡಿದರೂ ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಕ್ಷಿಣಿಸುತ್ತಿದೆ. ಗುಣಾತ್ಮಕ ಶಿಕ್ಷಣವನ್ನು ಅರಸುತ್ತ ಹಳ್ಳಿಗರೆಲ್ಲ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿರುವಾಗ ಸರ್ಕಾರದ ಆಮಿಷಗಳಿಗೆ ಬಲಿಯಾಗುವವರಾದರು ಯಾರು. ಒಂದೆರಡು ವರ್ಷಗಳ ಹಿಂದೆ ಮಲೆನಾಡಿನ ಕೆಲವು ಹಳ್ಳಿಗಳ ಸರ್ಕಾರಿ ಶಾಲೆಗಳಲ್ಲಿ ಅಗತ್ಯದಷ್ಟು ಮಕ್ಕಳ ಸಂಖ್ಯೆ ಇಲ್ಲ ಎನ್ನುವ ಕಾರಣದಿಂದ ಸರ್ಕಾರವೇ ಅಲ್ಲಿನ ಶಾಲೆಗಳನ್ನು ಮುಚ್ಚಲು ಮುಂದಾಗಿತ್ತು. ಓದುತ್ತಿರುವ ಅಲ್ಲಿನ ಕೆಲವು ಮಕ್ಕಳಾದರೂ ಆ ಸೌಲಭ್ಯದಿಂದ ವಂಚಿತರಾಗಬಾರದೆಂದು ಜನ ಪ್ರತಿಭಟನೆಯ ಮೂಲಕ ಶಾಲೆಗಳನ್ನು ಉಳಿಸಿಕೊಂಡರು. ಈ ಸಂದರ್ಭ ಸರ್ಕಾರ ಒಂದಿಷ್ಟು ಆತ್ಮವಿಮರ್ಶೆ ಮಾಡಿಕೊಳ್ಳುವುದೊಳಿತು. ಸರ್ಕಾರಿ ಶಾಲೆಗಳಲ್ಲಿ ಸುಸಜ್ಜಿತ ಪ್ರಯೋಗಾಲಯ ಮತ್ತು ಗ್ರಂಥಾಲಯಗಳಿವೆಯೇ , ಅಲ್ಲಿ ಗಣಿತ ಮತ್ತು ವಿಜ್ಞಾನ ದಂಥ ಜಟಿಲ ವಿಷಯಗಳನ್ನು ಪಾಠ ಮಾಡಲು  ಅರ್ಹ ಶಿಕ್ಷಕರಿರುವರೆ, ಆ ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆಯೇ ಹೀಗೆ ಅನೇಕ ವಿಷಯಗಳ ಕುರಿತು ಸರ್ಕಾರದ ಶಿಕ್ಷಣ ಇಲಾಖೆ ಪರಾಮರ್ಶೆ ಮಾಡಿಕೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿಯೂ ನಮ್ಮ ಮಕ್ಕಳು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಬಹುದೆಂಬ ಭರವಸೆ  ಪಾಲಕರಲ್ಲಿ ಮೂಡಬೇಕು. ಮದ್ದೂರಿನ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಯೊಬ್ಬ ಪ್ರತಿಷ್ಟಿತ ಏಮ್ಸ್ ಸಂಸ್ಥೆಯಲ್ಲಿ ಪ್ರವೇಶ ಗಿಟ್ಟಿಸಿದ ಮಾತ್ರಕ್ಕೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಂದ ಅದನ್ನೇ ನಿರೀಕ್ಷಿಸುವುದು ಶುದ್ಧ ಮೂರ್ಖತನವಾಗುತ್ತದೆ.
       ಇವತ್ತು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಹಿಂದೆ ಇಂಗ್ಲಿಷ್ ಮಾಧ್ಯಮದ ಶಾಲೆಗಳ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿರುವುದೇ ಬಹುಮುಖ್ಯ ಕಾರಣವಾಗಿದೆ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳು ಮಾತ್ರವಲ್ಲದೆ ಹೋಬಳಿ ಪ್ರದೇಶಗಳಲ್ಲಿಯೂ ಇವತ್ತು ಇಂಗ್ಲಿಷ್ ಮಾಧ್ಯಮದ ಶಾಲೆಗಳು ಸ್ಥಾಪನೆಯಾಗುವುದರ ಮೂಲಕ ಬೃಹತ್ ಶೈಕ್ಷಣಿಕ ಉದ್ದಿಮೆಯೊಂದು ರಾಜ್ಯಕ್ಕೆ ಕಾಲಿಟ್ಟಿದೆ. ಕೆಲವರು ವಸತಿ ಶಾಲೆಗಳನ್ನು ಸ್ಥಾಪಿಸುವುದರ ಮೂಲಕ ಮಕ್ಕಳು  ದಿನದ 12 ರಿಂದ 14 ಗಂಟೆಗಳ ಕಾಲ ಶೈಕ್ಷಣಿಕ ಚಟುವಟಿಕೆಗಳಲ್ಲಿ  ತೊಡಗಿಸಿಕೊಳ್ಳುವಂಥ ವಾತಾವರಣವನ್ನು ಸೃಷ್ಟಿಸುತ್ತಿರುವರು. ಇಂಥ ಶಾಲೆಗಳಲ್ಲಿ ಕಲಿತು ಬಂದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಲೀಲಾಜಾಲವಾಗಿ ಉತ್ತಿರ್ಣರಾಗುತ್ತಿರುವರು. ರಾಜ್ಯದಲ್ಲಿನ ಬಹುಪಾಲು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೀಟುಗಳು ಇಂಥ ಶಾಲೆಗಳಲ್ಲಿ ಕಲಿತ ಮಕ್ಕಳ ಪಾಲಾಗುತ್ತಿವೆ. ಜೊತೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಬಂದ ಮಕ್ಕಳು ಉನ್ನತ ಮತ್ತು ವೃತ್ತಿಪರ ಶಿಕ್ಷಣದ ಪರಿಸರಕ್ಕೆ ಬಹುಬೇಗ ಹೊಂದಿಕೊಳ್ಳುತ್ತಿರುವರು. ಪರಿಸ್ಥಿತಿ ಹೀಗಿರುವಾಗ ಕಾಳಜ್ಜನಿಗೆ ನಿನ್ನ ಮೊಮ್ಮಕ್ಕಳನ್ನು ಊರಿನಲ್ಲಿರುವ ಸರ್ಕಾರಿ ಶಾಲೆಗೇ ಸೇರಿಸು ಎಂದು ಹೇಳುವ ನೈತಿಕ ಧೈರ್ಯವಾದರೂ ನನಗೆ ಹೇಗೆ ಬಂದಿತು.
       2010 ರಲ್ಲಿ ಸರ್ಕಾರವೇ ಮುಂದಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕೆಲವು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯಲು ಯೋಜನೆ ರೂಪಿಸಿತ್ತು. ಈ ಕುರಿತು ಪತ್ರಿಕೆಗಳಲ್ಲಿ ಸುದ್ಧಿಯೂ ಪ್ರಕಟವಾಗಿತ್ತು. ದುಬಾರಿ ಫೀಜು  ಕಟ್ಟಲು ಸಾಧ್ಯವಾಗದ ಪಾಲಕರು ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಕನಸು ಕಾಣುವಂತಾಯಿತು. ಹಣವಂತರಿಗೆ ಮಾತ್ರ ಮೀಸಲಾಗಿದ್ದ ಇಂಗ್ಲಿಷ್ ಶಿಕ್ಷಣ ಇನ್ನು ಮುಂದೆ ಬಡವರಿಗೂ ಕೈಗೆಟಕುವಂತಾಯಿತು ಎಂದು ಅನೇಕರು ಸಂಭ್ರಮಿಸಿದರು. ಆದರೆ ಈಗ ಸರ್ಕಾರದ ಆ ಯೋಜನೆಯನ್ನು ವಿರೋಧಿಸುವವರ ಸಂಖ್ಯೆ ಹೆಚ್ಚುತ್ತಿದೆ. ಒಟ್ಟಿನಲ್ಲಿ ಬಡವರ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಮರೀಚಿಕೆಯಾಗಿಯೇ ಉಳಿಯಲಿ ಎನ್ನುವ ಹುನ್ನಾರ ಅನೇಕರದಾಗಿದೆ.
        ಸರ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವುದರಿಂದ ಮಾತೃ ಭಾಷೆಗೆ ದ್ರೋಹ ಬಗೆದಂತಾಗುತ್ತದೆ ಎನ್ನುವುದು ಕೆಲವರ ವಾದ. ವಿಪರ್ಯಾಸವೆಂದರೆ ಹೀಗೆ ವಾದಿಸುವವರ ಮಕ್ಕಳು, ಮೊಮ್ಮಕ್ಕಳು ಓದುತ್ತಿರುವುದು ಪ್ರತಿಷ್ಟಿತ ಇಂಗ್ಲಿಷ್ ಶಾಲೆಗಳಲ್ಲಿ. ಇಂಗ್ಲಿಷ್ ಶಾಲೆಗಳನ್ನು ಸ್ಥಾಪಿಸಲೇ ಬೇಕೆನ್ನುವುದು ನನ್ನ ವಿತಂಡವಾದವಲ್ಲ. ಇಂಗ್ಲಿಷ್ ಕಲಿಯುವ ಭಾಷೆಯಾಗಬೇಕೆ ವಿನಹ ಶಿಕ್ಷಣದ ಮಾಧ್ಯಮವಾಗಬಾರದು ಎನ್ನುವುದು ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಮಾತು. ಅವರ ಮಾತಿನಲ್ಲೂ ಹುರುಳಿದೆ. ಜೊತೆಗೆ ಇಲ್ಲೊಂದು ಪ್ರಶ್ನೆ ಉದ್ಭವಿಸುತ್ತದೆ. ಹತ್ತನೇ ತರಗತಿಯವರೆಗೆ ವಿಜ್ಞಾನವನ್ನು ಕನ್ನಡದಲ್ಲಿ ಕಲಿತ ವಿದ್ಯಾರ್ಥಿ ಪಿ.ಯು.ಸಿ ನಲ್ಲಿ ವಿಜ್ಞಾನವನ್ನು ಯಾವ ಭಾಷೆಯಲ್ಲಿ ಕಲಿಯಬೇಕು?. ಅಲ್ಲಿ ಮಾಧ್ಯಮದ ಆಯ್ಕೆಗೆ ಅವನಿಗೆ ಅವಕಾಶವಿದೆಯೇ?. ಹತ್ತನೇ ವರೆಗೆ ಕನ್ನಡದಲ್ಲಿ ಕಲಿತು ಬಂದ ವಿದ್ಯಾರ್ಥಿಗೆ ಪಿ.ಯು.ಸಿ ನಲ್ಲಿ ಇಂಗ್ಲಿಷ್ ಅನಿವಾರ್ಯವಾಗುವುದರಿಂದ ಸಹಜವಾಗಿಯೇ ಅವನ ಕಲಿಕಾ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಪ್ರಾರಂಭದಿಂದಲೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಬಂದ ಸಾಧಾರಣ ಬುದ್ಧಿ ಮಟ್ಟದ ವಿದ್ಯಾರ್ಥಿ ಸಹಜವಾಗಿಯೇ ಕನ್ನಡದಲ್ಲಿ ಕಲಿತು ಬಂದ ವಿದ್ಯಾರ್ಥಿಗಿಂತ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ನ್ನು ಭಾಷೆಯಾಗಿ ಕಲಿಯುವುದಕ್ಕಿಂತ ಅದನ್ನು ಮಾಧ್ಯಮವಾಗಿ ಕಲಿಯುವ ಅನಿವಾರ್ಯತೆ ಹೆಚ್ಚುತ್ತಿದೆ.
        ಮಾತೃ ಭಾಷೆಯನ್ನು ಉಳಿಸಿಕೊಳ್ಳಲೇ ಬೇಕೆನ್ನುವುದಾದರೆ ಒಂದೇ ಮಾಧ್ಯಮದ ಶಾಲೆಗಳನ್ನು ಎಲ್ಲ ಕಡೆ ಸ್ಥಾಪಿಸಲಿ. ಪ್ರತಿಯೊಂದು ಮಗು ಪ್ರಾಥಮಿಕ ಶಿಕ್ಷಣವನ್ನು ಆ ರಾಜ್ಯದ ಭಾಷೆಯಲ್ಲೇ ಕಲಿಯುವಂಥ ನಿಯಮ ರಚನೆಯಾಗಲಿ. ಅದು ಖಾಸಗಿ ಶಾಲೆಯಾಗಿರಲಿ, ಸರ್ಕಾರಿ ಶಾಲೆಯಾಗಿರಲಿ ಏಕರೂಪ pathya ಕ್ರಮದ ಕನ್ನಡ ಮಾಧ್ಯಮದ ಶಿಕ್ಷಣ ಪದ್ಧತಿ ಜಾರಿಗೆ ಬರಲಿ. ಈ ಮಾತು ವಸತಿ ಶಾಲೆಗಳಿಗೂ ಅನ್ವಯಿಸಲಿ. ಆದರೆ ಹೀಗೆ ಮಾಡುವುದು ಸರ್ಕಾರದ ಸಾಮರ್ಥ್ಯವನ್ನು ಮೀರಿದ ಸಂಗತಿ. ಸರ್ಕಾರದ ಉದಾರೀಕರಣ ನೀತಿ ಮತ್ತು ಸರ್ಕಾರದ ತಾರತಮ್ಯ ನೀತಿಯಿಂದಾಗಿ ಪಾಲಕರಿಗೆ ಶಿಕ್ಷಣ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ದೊರೆಯುತ್ತಿದೆ. ಆಯ್ಕೆಯ ಪ್ರಶ್ನೆ ಎದುರಾದಾಗ ಸಹಜವಾಗಿಯೇ ಅವರ ಆಯ್ಕೆ ಇಂಗ್ಲಿಷ್ ಮಾಧ್ಯಮವಾಗುತ್ತಿದೆ. ಆ ಇಂಗ್ಲಿಷ್ ಶಿಕ್ಷಣಕ್ಕಾಗಿ  ಅವರು ಖಾಸಗಿ ಶಾಲೆಗಳನ್ನು ಹುಡುಕಿಕೊಂಡು ಹೋಗುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಸರ್ಕಾರಿ ಶಾಲೆಗಳೆಲ್ಲ ಮಕ್ಕಳಿಲ್ಲದೆ ಬಿಕೋ ಎನ್ನುತ್ತಿವೆ. ಈ ನಡುವೆ ಶಿಕ್ಷಣ ಹಕ್ಕು ಕಾಯ್ದೆಯೊಂದು ಜಾರಿಗೆ ಬರುತ್ತದೆ. ಅದರಿಂದಾಗುವ ಪ್ರಯೋಜನವಾದರೂ ಏನು?. ನಾನು ಈ ಮೊದಲೇ ಹೇಳಿದಂತೆ ಜನರು ಶಿಕ್ಷಣವನ್ನು ತಮ್ಮ ಮೂಲಭೂತ ಹಕ್ಕನ್ನಾಗಿಸಿಕೊಂಡು ಅನೇಕ ವರ್ಷಗಳಾಗಿವೆ. ಆದ್ದರಿಂದ ಶಿಕ್ಷಣವನ್ನು ಹಕ್ಕಾಗಿಸುವ ಕಾಯ್ದೆಯೇ ಅರ್ಥವಿಲ್ಲದ್ದು ಎಂದೆನಿಸುತ್ತದೆ. ಅತ್ಯುತ್ತಮ ಶೈಕ್ಷಣಿಕ ವ್ಯವಸ್ಥೆಯನ್ನು ಹುಟ್ಟು ಹಾಕಿದಾಗ ಮಾತ್ರ ಜನರಲ್ಲಿ ಹಕ್ಕಿನ ಪ್ರಜ್ಞೆಯನ್ನು ಒಡಮೂಡಿಸುವ ಪ್ರಯತ್ನಕ್ಕೊಂದು ನೈತಿಕ ಬೆಂಬಲ ದೊರೆಯಬಹುದು.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

Wednesday, July 4, 2012

ಡಾ.ಬಿ.ಸಿ.ರಾಯ್: ವೃತ್ತಿಘನತೆ ಹೆಚ್ಚಿಸಿದ ವೈದ್ಯಬ್ರಹ್ಮ


'ಡಾ.ಬಿ.ಸಿ.ರಾಯ್' ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಅಜರಾಮರ. ಡಾ.ಬಿಧಾನಚಂದ್ರ ರಾಯ್ ಜನಿಸಿದ್ದು    ಜುಲೈ 1, 1882ರಂದು ಬಿಹಾರದ ಪಾಟ್ನಾದಲ್ಲಿ. ಹದಿನಾಲ್ಕನೇ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಬಿಧಾನನ ಬದುಕಿನಲ್ಲಿ ಅವರ ತಂದೆಯೇ ತಂದೆ, ತಾಯಿ, ಗುರು ಎಲ್ಲವೂ ಆಗಿದ್ದರು. ಐದು ಮಕ್ಕಳಲ್ಲಿ ಕೊನೆಯವರಾದ ಬಿಧಾನ್ ತಾಯಿಯ ಮರಣಾನಂತರ ಅನುಭವಿಸಿದ ಕಷ್ಟ ಅವರ ಬದುಕಿನ ಮೇಲೆ ಗಾಢ ಪ್ರಭಾವ ಬಿರಿತು. ಬಾಲ್ಯ ಜೀವನದ ಜೀವನಾನುಭವ ಮುಂದೆ ತಮ್ಮ ವೃತ್ತಿ ಬದುಕಿನಲ್ಲಿ ಬಡವರು ಮತ್ತು ಅಸಾಹಯಕರ ಸೇವೆಗೆ ಪ್ರೇರಣೆ ನೀಡಿತು. ಗಣಿತ ಶಾಸ್ತ್ರದಲ್ಲಿ ಪದವಿ ಪಡೆದ ಬಿಧಾನಚಂದ್ರ ರಾಯ್ 1901 ರಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ಕಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದರು. ವೈದ್ಯಕೀಯ ಪದವಿ ಪಡೆದ ನಂತರ ಕೆಲವು ವರ್ಷ ಕಲ್ಕತ್ತದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆಸಲ್ಲಿಸಿದರು. ಮಧ್ಯೆ ವಿರಾಮ ಸಮಯದಲ್ಲಿ ಖಾಸಗಿಯಾಗಿ ಕೇವಲ 2 ರುಪಾಯಿಗಳಿಗೆ ರೋಗಿಗಳನ್ನು ಪರೀಕ್ಷಿಸುವ ಮೂಲಕ ಅತ್ಯಂತ ಜನಾನುರಾಗಿ ವೈದ್ಯರೆಂದು ಖ್ಯಾತಿ ಪಡೆದರು. ನಂತರ ಉನ್ನತ ಶಿಕ್ಷಣಕ್ಕಾಗಿ 1909ರಲ್ಲಿ  ಇಂಗ್ಲೆಂಡಿಗೆ ತೆರಳಿದ ಡಾ.ಬಿ.ಸಿ.ರಾಯ್  ಅಲ್ಲಿ ಎಂ.ಆರ್.ಸಿ.ಪಿ ಮತ್ತು ಎಪ್.ಆರ್.ಸಿ.ಎಸ್ ಪದವಿ ಪಡೆದು 1911 ರಲ್ಲಿ ತಾಯ್ನಾಡಿಗೆ ಮರಳಿದರು.

       ವಿದ್ಯಾರ್ಥಿ ದೆಸೆಯಲ್ಲಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಡಾ.ಬಿ.ಸಿ.ರಾಯ್ ಭಾರತೀಯರು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಂತರಾದರೆ ಮಾತ್ರ ಸ್ವರಾಜ್ಯ ಭಾರತದ ಕಲ್ಪನೆ ಸಾಧ್ಯವೆಂದು ನಂಬಿದ್ದರು. ಕಾರಣಕ್ಕಾಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಲು  ಪ್ರಯತ್ನಿಸಿದರು. ಜಾಧವಪುರ ಕ್ಷಯರೋಗ ಆಸ್ಪತ್ರೆ, ಚಿತ್ತರಂಜನ ಸೇವಾಸದನ, ಆರ್.ಜಿ.ಖಾರ್ ವೈದ್ಯಕೀಯ ಕಾಲೇಜು, ಕಮಲಾ ನೆಹರು ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಚಿತ್ತರಂಜನ ಕ್ಯಾನ್ಸರ್ ಆಸ್ಪತ್ರೆ ಹೀಗೆ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದರು. ಮಹಿಳೆಯರು ಮತ್ತು ಮಕ್ಕಳಿಗಾಗಿ 1926 ರಲ್ಲಿ ಪ್ರತ್ಯೇಕ ಆಸ್ಪತ್ರೆಯನ್ನೇ ತೆರೆದರು.
      ಡಾ.ಬಿ.ಸಿ.ರಾಯ್ 1928 ರಲ್ಲಿ 'ಭಾರತೀಯ ವೈದ್ಯಕೀಯ ಮಂಡಳಿ'ಯನ್ನು ಸ್ಥಾಪಿಸುವುದರ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆ ನೀಡಿದರು. ದೇಶದ ಅತಿ ದೊಡ್ಡ ವೃತ್ತಿಪರ ಸಂಘಟನೆಯಾದ ಮಂಡಳಿಯಲ್ಲಿ ಅನೇಕ ಹುದ್ಧೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಎರಡು ಅವಧಿಗೆ 'ಭಾರತೀಯ ವೈದ್ಯಕೀಯ ಮಂಡಳಿ' ಅಧ್ಯಕ್ಷರಾದ ಹೆಗ್ಗಳಿಕೆ ಅವರದು. ಮಂಡಳಿಯ ಮೂಲಕ ಭಾರತದ ವೈದ್ಯಕೀಯ ಶಿಕ್ಷಣದಲ್ಲಿ ಗಮನಾರ್ಹವಾದ ಬದಲಾವಣೆಗಳಿಗೆ ಕಾರಣರಾದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ವೈದ್ಯರನ್ನು ಗುರುತಿಸುವಂತಾಗಲು ಅಗತ್ಯವಾದ ಶೈಕ್ಷಣಿಕ ತಳಹದಿಯನ್ನು ಭದ್ರಗೊಳಿಸಿದ ಕೀರ್ತಿ ಡಾ.ಬಿ.ಸಿ.ರಾಯ್ ಅವರಿಗೆ ಸಲ್ಲುತ್ತದೆ. ಒಂದು ಘನ ಉದ್ದೇಶದೊಂದಿಗೆ ಸ್ಥಾಪನೆಯಾದ 'ಭಾರತೀಯ ವೈದ್ಯಕೀಯ ಮಂಡಳಿ' ನಂತರದ ದಿನಗಳಲ್ಲಿ ಭೃಷ್ಟರ ಮತ್ತು ಸಮಾಜ ಘಾತುಕರ ಕೈಗೆ ಸಿಲುಕಿ ವಿಸರ್ಜನೆಗೊಂಡಿದ್ದು ಭಾರತದ ವೈದ್ಯಕೀಯ ಕ್ಷೇತ್ರದ ಅತಿ ದೊಡ್ಡ ದುರಂತ.
       ಗಾಂಧೀಜಿ ಅವರ ನಿಕಟವರ್ತಿಯಾಗಿದ್ದ ಡಾ.ಬಿ.ಸಿ.ರಾಯ್ ಬಾಪುಜಿಯವರ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಉಪವಾಸ ಸತ್ಯಾಗ್ರಹಗಳಲ್ಲಿ ಅವರೊಂದಿಗೆ ತಾವೂ ಭಾಗವಹಿಸುತ್ತಿದ್ದರು. ಗಾಂಧೀಜಿ ಅವರೊಂದಿಗಿನ ಸಂಪರ್ಕವೇ  ಅವರನ್ನು ರಾಜಕೀಯಕ್ಕೆ  ಕರೆತಂದಿತು. ಭಾರತದ ಸ್ವಾತಂತ್ರ್ಯಾ ನಂತರ ಗಾಂಧೀಜಿ ಅವರ ಸಲಹೆ ಮೇರೆಗೆ ಡಾ.ಬಿ.ಸಿ.ರಾಯ್ 1948 ಜನೆವರಿ 23 ರಂದು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದರು. ಡಾ.ಬಿ.ಸಿ.ರಾಯ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಮಯ ಕೋಮು ದಳ್ಳುರಿ, ಆಹಾರದ ಕೊರತೆ, ನಿರುದ್ಯೋಗ, ಪೂರ್ವ ಪಾಕಿಸ್ತಾನದಿಂದ ವಲಸೆ ಬರುವ ನಿರಾಶ್ರಿತರು ಹೀಗೆ ಅನೇಕ ಸಮಸ್ಯೆಗಳು ಪಶ್ಚಿಮ ಬಂಗಾಳ ರಾಜ್ಯವನ್ನು ಕಾಡುತ್ತಿದ್ದವು. ಕೇವಲ ಮೂರು ವರ್ಷಗಳ ಅವಧಿಯಲ್ಲಿ ಎಲ್ಲ ಸಮಸ್ಯೆಗಳನ್ನು ಹತ್ತಿಕ್ಕಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದರು. ಅನೇಕ ಯಶಸ್ವಿ ಕಾರ್ಯಯೋಜನೆಗಳ ಮೂಲಕ ಜನಪ್ರಿಯ ಮುಖ್ಯಮಂತ್ರಿ ಎಂದು ಖ್ಯಾತರಾದರು. ಕಾರಣದಿಂದಲೇ ಡಾ.ಬಿ.ಸಿ.ರಾಯ್ ಅವರು 1948 ರಿಂದ ತಮ್ಮ ಬದುಕಿನ ಕೊನೆಯ ದಿನಗಳವರೆಗೆ ಸುಮಾರು 14 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು. ವೈದ್ಯಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ 1961 ರಲ್ಲಿ ಅವರನ್ನು 'ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
       ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿ, ವೈದ್ಯರಾಗಿ, ವೈದ್ಯಕೀಯ ಶಿಕ್ಷಕರಾಗಿ, ಕಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ, ಅನೇಕ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳ ಸ್ಥಾಪಕರಾಗಿ, ಮುಖ್ಯಮಂತ್ರಿಯಾಗಿ ಹತ್ತು ಹಲವು ಜನಪ್ರಿಯ ಪಾತ್ರಗಳನ್ನು ನಿರ್ವಹಿಸಿದ ಡಾ.ಬಿ.ಸಿ.ರಾಯ್ 1962 ಜುಲೈ 1 ರಂದು ನಿಧನರಾದರು. ಸಾವಿನ ನಂತರ ತಾವು ವಾಸವಿದ್ದ ಮನೆಯನ್ನು ಆಸ್ಪತ್ರೆಯಾಗಿ ಉಪಯೋಗಿಸಬೇಕೆಂದು ಬದುಕಿರುವಾಗಲೇ ಮನೆಯನ್ನು ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದ್ದರು. ಅವರ ಸ್ಮರಣಾರ್ಥ ಭಾರತ ಸರ್ಕಾರ 1977 ರಿಂದ ವೈದ್ಯಕೀಯ, ಸಾಮಾಜಿಕ, ಕಲೆ, ಸಾಹಿತ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ 'ಡಾ.ಬಿ.ಸಿ.ರಾಯ್ ರಾಷ್ಟ್ರೀಯ ಪ್ರಶಸ್ತಿ'ಯನ್ನು ಪ್ರತಿ ವರ್ಷ ನೀಡುತ್ತಿದೆ. ಡಾ.ರಾಯ್ ಅವರ ಜನ್ಮದಿನವಾದ ಜುಲೈ 1 ರಂದು ಭಾರತದಾದ್ಯಂತ 'ವೈದ್ಯರ ದಿನ' ಆಚರಿಸುವುದರ ಮೂಲಕ ವೈದ್ಯ ಬೃಹ್ಮನಿಗೆ ಗೌರವ ಸೂಚಿಸಲಾಗುತ್ತದೆ.


-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ