Tuesday, December 24, 2013

ಹಚ್ಚಿದರು ಹಣತೆ

              






            ಕನ್ನಡದ ಹಿರಿಯ ಸಾಹಿತಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ನಿನ್ನೆ ಅಸ್ತಂಗತರಾದರು. ಇದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ  ನಷ್ಟ. ಜಿಎಸ್ಎಸ್ ಕನ್ನಡ ನಾಡಿನ ಸಮನ್ವಯ ಕವಿ. ತಮ್ಮ ಭಾವ ಗೀತೆಗಳ ಮೂಲಕ ಇಡೀ ನಾಡಿನ ಜನರ ಮನಸ್ಸುಗಳನ್ನು ಭಾವಲೋಕಕ್ಕೆ ಕೊಂಡೊಯ್ದ ಗಾರುಡಿಗ. ಯಾವ ನವ್ಯ, ನವೋದಯ, ಬಂಡಾಯಗಳ ಬೇಲಿಯನ್ನು ತಮ್ಮ ಸುತ್ತ ಕಟ್ಟಿಕೊಳ್ಳದೆ ತಮ್ಮೊಳಗಿನ ಸೃಜನಶೀಲತೆಯು  ಮುಕ್ಕಾಗದಂತೆ ಕಾಪಾಡಿಕೊಂಡು ಬಂದ ಕನ್ನಡದ ಅನನ್ಯ ಬರಹಗಾರ. ಅಪ್ರಮಾಣಿಕತೆ, ಭ್ರಷ್ಟಾಚಾರವೇ ನಮ್ಮ ಸುತ್ತ ಕುಣಿದು ಕೇಕೆ ಹಾಕುತ್ತಿರುವ ಹೊತ್ತು ಇದೇ ಜಿಎಸ್ಎಸ್ ಅವರ ಭಾವಗಿತೆಗಳು ನಮ್ಮ ಬದುಕನ್ನು ಸಹನೀಯವಾಗಿಸಿದವು.  ಬದುಕಿನ  ನಿಜಾರ್ಥ ನಮ್ಮೆದುರು ಅನಾವರಣಗೊಂಡಿದ್ದು ಅವರದೇ ಭಾವಗೀತೆಗಳ ಮೂಲಕ. ಒಂದರ್ಥದಲ್ಲಿ ಜಿಎಸ್ಎಸ್ ಅವರ ಭಾವಗೀತೆಗಳಿಗೆ ಬದುಕನ್ನೇ  ಬದಲಿಸುವ ಶಕ್ತಿಯಿದೆ. ಅದಕ್ಕೆಂದೇ ಅವು ಎಲ್ಲ ಕಾಲಕ್ಕೂ ಸಲ್ಲುವ ಗೀತೆಗಳು.

       ಜಿಎಸ್ಎಸ್ ಅವರದು ಜಾಗೃತಿ ಮತ್ತು ಚಿಂತನೆಗಳನ್ನು ಓದುಗರಲ್ಲಿ ಒಡಮೂಡಿಸುವ ಕಾವ್ಯ. ಅವರ ಕವಿತೆಗಳಲ್ಲಿ ಸಾಮಾಜಿಕ ಆಯಾಮ ಅನಾವರಣಗೊಂಡಿದೆ. ಕಾವ್ಯರಚನೆ ಅವರಿಗೆ ಅದೊಂದು ಸಾಮಾಜಿಕ ಬದುಕನ್ನು ಕಟ್ಟಿಕೊಡುವ ಪ್ರಕ್ರಿಯೆ. ಇಂಥ ಮನೋಭಾವವಿರುವ ಅವರ ಕವಿ ಮನಸ್ಸು 'ಕಾವ್ಯ ಬರೀ ಶಬ್ದ ಸೇರಿಸುವ ಕ್ರಿಯೆಯಲ್ಲ. ಬರೀ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೆ?' ಎಂದು ಪ್ರಶ್ನಿಸುತ್ತದೆ. ಅದಕ್ಕೆಂದೇ ಅವರು ತಮ್ಮ ಕಾವ್ಯ ರಚನೆಯನ್ನು ಹೀಗೆ ಹೇಳುತ್ತಾರೆ

          ನಾನು ಬರೆಯುತ್ತೇನೆ
          ಖುಷಿಗೆ, ನೋವಿಗೆ
          ರೊಚ್ಚಿಗೆ ಮತ್ತು ಹುಚ್ಚಿಗೆ
          ಅಥವಾ ನಂದಿಸಲಾರದ ಕಿಚ್ಚಿಗೆ

    ಸಮಾಜದ ಸಮಸ್ಯೆಗಳಿಗೆ ದನಿಯಾಗುವಲ್ಲಿ ಕವಿಯ ಸಾಫಲ್ಯವಡಗಿದೆ. ಕವಿಯಾದವನು ವೈಯಕ್ತಿಕವಾದದ್ದನ್ನು ಸಾರ್ವತ್ರಿಕರಿಸುತ್ತ ಹೋಗುತ್ತಾನೆ. ಜಿಎಸ್ಎಸ್ ಅವರ ಹೆಚ್ಚಿನ ಕವಿತೆಗಳಲ್ಲಿ ಶೋಷಿತರ ದನಿ ಅನುರಣಿಸಿದೆ.

          ಸುತ್ತ ಮುತ್ತ ಮನೆ ಮಠಗಳು
          ಹೊತ್ತಿಕೊಂಡು ಉರಿಯುವಲ್ಲಿ
          ಸೋತು ಮೂಕವಾದ ಬದುಕು
          ನಿಟ್ಟುಸಿರೊಳು ತೇಲುವಲ್ಲಿ
          ಯಾವ ಹಾಡ ಹಾಡಲಿ?

           ಉರಿವ ಕಣ್ಣ ಚಿತೆಗಳಲ್ಲಿ
           ಇರುವ ಕನಸು ಸೀಯುವಲ್ಲಿ
           ಎದೆ ಎದೆಗಳ ಜ್ವಾಲಾಮುಖಿ
           ಹೊಗೆ  ಬೆಂಕಿ ಕಾರುವಲ್ಲಿ
           ಯಾವ ಹಾಡ ಹಾಡಲಿ?

     ಹೀಗೆ ಸೋತ ಸಮಾಜಕ್ಕೆ ದನಿಯಾಗುವ ಕವಿಯಲ್ಲಿ ನಂಬಿಕೆಯೂ ಇದೆ. ಶೋಷಿತರ ಸಮಸ್ಯೆಗಳನ್ನು ತನ್ನ ಹೃದಯಕ್ಕೆ ತೆಗೆದುಕೊಂಡು ಅವುಗಳನ್ನು ಪರಿಹರಿಸುವ ಆತ್ಮವಿಶ್ವಾಸವೂ  ಅವರದಾಗಿತ್ತು. ನಂಬಿಕೆ ಮತ್ತು ಆತ್ಮವಿಶ್ವಾಸಗಳೇ ಬರಹಗಾರನ ಬಹುಮುಖ್ಯವಾದ ಆಸ್ತಿಗಳು. ಜೊತೆಗೆ ಇದರೊಂದಿಗೆ ತಾಯ್ತನದ ಅಂತ:ಕರಣವೂ  ಸೇರಿದರೆ ಬರಹಗಾರ ಎಲ್ಲ ಸಾಮಾಜಿಕ ವೈರುಧ್ಯಗಳಿಗೂ ಮುಖಾಮುಖಿಯಾಗಿ ನಿಲ್ಲಬಲ್ಲ.

        ದೀಪವಿರದ ದಾರಿಯಲ್ಲಿ
        ತಡವರಿಸುವ ನುಡಿಗಳೇ
         ಕಂಬನಿಗಳ ತಲಾತಲದಿ
         ನಂದುತಿರುವ ಕಿಡಿಗಳೇ
         ಉಸಿರನಿಡುವೆ
         ಹೆಸರ ಕೊಡುವೆ
         ಬನ್ನಿ ನನ್ನ ಹೃದಯಕೆ

       ಜಿಎಸ್ಎಸ್ ಅವರಲ್ಲಿ ತಾಯ್ತನದ ಅಂತ:ಕಾರಣದ ಜೊತೆಗೆ ಆ ತಾಯ್ತನಕ್ಕೆ ಸಂಕೇತಳಾದ ಹೆಣ್ಣನ್ನು ಗೌರವಿಸುವ ವಿಶಾಲ ಮನೋಭಾವವೂ ಇತ್ತು. ಅವರ 'ಸ್ತ್ರೀ' ಕವಿತೆ ಹೆಣ್ಣನ್ನು ಪೂಜ್ಯನೀಯ ದೃಷ್ಟಿಯಿಂದ ಕಾಣುವ ಅವರ ಮನೋಭಾವಕ್ಕೊಂದು ದೃಷ್ಟಾಂತ. ಅವರೊಳಗಿನ ಸ್ತ್ರೀ ಸಂವೇದನೆಯ ಗುಣ ಈ ರೀತಿಯಾಗಿ ಅನಾವರಣಗೊಂಡಿದೆ

          ಆಕಾಶದ ನೀಲಿಯಲ್ಲಿ
          ಚಂದ್ರ ತಾರೆ ತೊಟ್ಟಿಲಲ್ಲಿ
          ಬೆಳಕನಿಟ್ಟು ತೂಗಿದಾಕೆ
          ನಿನಗೆ ಬೇರೆ ಹೆಸರು ಬೇಕೆ
          ಸ್ತ್ರೀ ಅಂದರೆ ಅಷ್ಟೆ ಸಾಕೇ ?

           ಮನೆಮನೆಯಲಿ ದೀಪ ಮುಡಿಸಿ
           ಹೊತ್ತು ಹೊತ್ತಿಗನ್ನ ಉಣಿಸಿ
           ತಂದೆ ಮಗುವ ತಬ್ಬಿದಾಕೆ
           ನಿನಗೆ ಬೇರೆ ಹೆಸರು ಬೇಕೆ
           ಸ್ತ್ರೀ ಅಂದರೆ ಅಷ್ಟೆ ಸಾಕೇ ?

    ಜಿಎಸ್ಎಸ್ ಅವರಲ್ಲಿ ಬಹುಮುಖ್ಯವಾಗಿ ನಾವು ಕಾಣುವ ಇನ್ನೊಂದು ಗುಣ ಅದು ಅವರೊಳಗಿನ ನಿರ್ಲಿಪ್ತತೆ. ಯಾವ ಬಿರುದು, ಪ್ರಶಸ್ತಿಗಳ ಬೆನ್ನು ಹತ್ತಿ ಹೋದವರಲ್ಲ. ಅವುಗಳು ಅವರನ್ನು ಅರಸಿ ಬಂದಾಗಲೂ ಈ ಕವಿಯದು ಅದೇ ದಿವ್ಯ ನಿರ್ಲಿಪ್ತತೆ. ಕಲಾವಿದನಲ್ಲಿ ಇರಲೇ ಬೇಕಾದ ಗುಣವಿದು. ನಿರೀಕ್ಷೆ ಮತ್ತು ಅಹಂಕಾರಗಳನ್ನು ಮೀರಿ ನಿಂತಾಗಲೇ ಬರಹಗಾರನಲ್ಲಿ ಸೃಜನಶೀಲತೆ ಸೃಷ್ಟಿಯಾಗಬಲ್ಲದು. ಅಂಥದ್ದೊಂದು ಆಶಯವನ್ನು ಜಿಎಸ್ಎಸ್ ತಮ್ಮ 'ಎದೆ ತುಂಬಿ ಹಾಡಿದೆನು' ಕವಿತೆಯಲ್ಲಿ ವ್ಯಕ್ತಪಡಿಸಿರುವರು.

           ಎಲ್ಲ ಕೇಳಲಿ ಎಂದು
           ನಾನು ಹಾಡುವುದಿಲ್ಲ
           ಹಾಡುವುದು ಅನಿವಾರ್ಯ
           ಕರ್ಮ ನನಗೆ

           ಕೇಳುವವರಿಹರೆಂದು
           ನಾ ಬಲ್ಲೆ ಅದರಿಂದ
           ಹಾಡುವೇನು ಮೈದುಂಬಿ
           ಎಂದಿನಂತೆ ಯಾರು
           ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ


         ವೈಚಾರಿಕತೆ ಜಿಎಸ್ಎಸ್ ಕಾವ್ಯದ ಇನ್ನೊಂದು ಬಹುಮುಖ್ಯವಾದ ಗುಣ. ಜಿಎಸ್ಎಸ್ ವ್ಯಕ್ತಿತ್ವ ಜಾತಿ, ಧರ್ಮಗಳ ಸಂಕೋಲೆಯಿಂದ ಮುಕ್ತವಾದದ್ದು. ಅವರ ಕವಿ ಮನಸ್ಸು ಅದನ್ನೇ ಸಮಾಜದಿಂದಲೂ ನಿರೀಕ್ಷಿಸುತ್ತದೆ (ಇಲ್ಲಿ ನಿರೀಕ್ಷೆ ವೈಯಕ್ತಿಕ ನೆಲೆಯಲ್ಲಲ್ಲ. ಅದು ಸಮಾಜಮುಖಿ ನಿರೀಕ್ಷೆ). ವೈಚಾರಿಕ ಪ್ರಜ್ಞೆಯೊಂದು ನಮ್ಮಲ್ಲಿ ಒಡಮೂಡಲು ಅದಕ್ಕೆ ಧರ್ಮನಿರಪೇಕ್ಷಿತ ದೃಷ್ಟಿಕೊನವೇ ದಾರಿ. ಹಲವು ದೇವರನ್ನು ದೂರ ನೂಕಿ ಪ್ರೀತಿ, ಸ್ನೇಹವೇ ನಮ್ಮ ದೇವರಾಗಬೇಕೆನ್ನುವ ವೈಚಾರಿಕ ಪ್ರಜ್ಞೆ ಅವರದಾಗಿತ್ತು.

          ಎಲ್ಲೋ ಹುಡುಕಿದೆ ಇಲ್ಲದ ದೇವರ
          ಕಲ್ಲು ಮಣ್ಣುಗಳ ಗುಡಿಯೊಳಗೆ
          ಇಲ್ಲೇ ಇರುವ ಪ್ರೀತಿ ಸ್ನೇಹಗಳ
          ಗುರುತಿಸದಾದೆನು ನಮ್ಮೊಳಗೆ

          ಎಲ್ಲಿದೆ ನಂದನ ಎಲ್ಲಿದೆ ಬಂಧನ
          ಎಲ್ಲಾ ಇದೆ ಈ ನಮ್ಮೊಳಗೆ
          ಒಳಗಿನ ತಿಳಿಯನು ಕಲಕದೆ ಇದ್ದರೆ
          ಅಮೃತದ ಸವಿಯಿದೆ ನಾಲಿಗೆಗೆ

     
          ಹೀಗೆ ವೈಚಾರಿಕ ಪ್ರಜ್ಞೆಗೊಳಗಾದ ಕವಿ ಸಮಾಜದಲ್ಲಿ ಜನರ ದುಷ್ಟತನವನ್ನು ಕಂಡು ಸಂಕಟಪಡುತ್ತಾರೆ. ಮನುಷ್ಯರೊಳಗಿನ ಕೆಟ್ಟತನ ಅವರನ್ನು ಯಾತನೆಗೊಳಿಸುತ್ತದೆ. ದುಷ್ಟರ ದುಷ್ಟತನವನ್ನು ಪ್ರಶ್ನಿಸುತ್ತಲೇ ಸಮಾಜದೊಂದಿಗಿನ ತಮ್ಮ ಸಂಬಂಧವೇನು ಎನ್ನುವ ವಿವೇಚನೆಗೆ ಮುಂದಾಗುತ್ತಾರೆ.

          ದು:ಖ ಅವಮಾನ ಸಂಕಟಗಳಲ್ಲಿ ನಾನು
          ಒಬ್ಬಂಟಿಯಾಗುತ್ತೇನೆ. ಅದುವರೆಗು ಜತೆಗೆ
          ನಿಂತವರೊಬ್ಬರೂ ಇರದ ದ್ವೀಪವಾಗುತ್ತೇನೆ
          ಹಬ್ಬಿರುವ ಮಬ್ಬಿನ ಮಧ್ಯೆ ಒಬ್ಬನೇ ಕೂತು
          ಯೋಚಿಸುತ್ತೇನೆ ಯಾಕಿಷ್ಟು ದುಷ್ಟರಾಗುತ್ತಾರೆ
          ಜನ ಕೊಂಬೆಗಳ ಕಡಿದು ಹೂವುಗಳ
          ಹೊಸಕಿ ಹಕ್ಕಿಗಳ ಕೊರಳು ಹಿಸುಕುತ್ತಾರೆ
          ನಿಷ್ಕಾರಣ? ಈ ಹೊತ್ತಿನಲ್ಲಿ ಮತ್ತೆ ಕಾಡುವುದು
          ಪ್ರಶ್ನೆ ಈ ಇವರಿಗೂ ನನಗೂ ಏನು ಸಂಬಂಧ?


          ಒಟ್ಟಿನಲ್ಲಿ ಜಿಎಸ್ಎಸ್ ಅವರ ಕವಿತೆಗಳು ಕಾಲ ಮತ್ತು ದೇಶಾತೀತವಾದವುಗಳು. ಅವರು ತಮ್ಮ ಭಾವಗೀತೆಗಳ ಮೂಲಕ ನಮ್ಮನ್ನು ಭಾವಲೋಕಕ್ಕೆ ಕರೆದೊಯ್ದು ನಮ್ಮಗಳ ಬದುಕನ್ನು ಒಂದಿಷ್ಟು ಸಹನೀಯವಾಗಿಸಿದ್ದು ಎಷ್ಟು ಸತ್ಯವೋ  ನಮ್ಮಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ್ದು ಕೂಡ ಅಷ್ಟೆ ಸತ್ಯ. ಕುವೆಂಪು ನಂತರ ನಮಗೆ ಜಿಎಸ್ಎಸ್ ಇದ್ದರು ಈಗ ಜಿಎಸ್ಎಸ್ ನಂತರ _________ ಎನ್ನುವ ಪ್ರಶ್ನೆಯೊಂದು ನಮ್ಮ ಮನದಲ್ಲಿ ಮೂಡುವುದು ಸಹಜ. ಜಿಎಸ್ಎಸ್ ಕೂಡ ತಮ್ಮ ಗುರು ಕುವೆಂಪು ಅವರಂತೆ ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಉತ್ಕೃಷ್ಟ ಗುರು-ಶಿಷ್ಯ ಪರಂಪರೆಯನ್ನೇ ಬೆಳೆಸಿದರು. ಅದಕ್ಕೆಂದೇ ಯು. ಆರ್. ಅನಂತಮೂರ್ತಿ ಅವರು ಜಿಎಸ್ ಎಸ್ ಅವರನ್ನು 'ನಮ್ಮ ಕಾಲದ ದ್ರೋಣ' ಎಂದು ಕರೆಯುತ್ತಾರೆ. ಜಿಎಸ್ಎಸ್ ಕನ್ನಡ ಸಾಹಿತ್ಯದಲ್ಲಿ ತಮ್ಮೊಂದಿಗೆ ಒಂದು ದೊಡ್ಡ ಶಿಷ್ಯ ಸಮೂಹವನ್ನೇ ಕಟ್ಟಿ ಬೆಳೆಸಿದರು. ಜಿಎಸ್ಎಸ್ ಅವರ ಈ ಗುಣವನ್ನು ದುಂಡಿರಾಜ್ ತಮ್ಮ 'ತೆಂಗಿನ ಮರ' ಕವಿತೆಯಲ್ಲಿ ಬಹು ವಿಶಿಷ್ಟವಾಗಿ ಕಟ್ಟಿಕೊಟ್ಟಿರುವರು.


          ಮರಗಳಲ್ಲಿ
          ತೆಂಗಿನ ಮರ
          ಕವಿಗಳಲ್ಲಿ ಇವರು
          ಅದೇ ಥರ
          ಎತ್ತರ
          ಸರಳ, ನೇರ

          ನೆಲದ ಸಾರವನ್ನೆಲ್ಲ ಒಬ್ಬರೇ
          ಹೊಟ್ಟೆ ಬಾಕನಂತೆ ಹೀರಿ
          ಅಡ್ಡಾದಿಡ್ಡಿ ಬೆಳೆದು
          ಎಲ್ಲ ಕಡೆಗೂ ಗೆಲ್ಲು
          ಚಾಚಿದವರಲ್ಲ

          ಗಾಳಿ ಬೆಳಕು
          ತಾವಷ್ಟೇ ಕುಡಿದು
          ಬೇರೆ ಕುಡಿ ಚಿಗುರದಂತೆ
          ನೆರಳು ರಾಚಿದವರಲ್ಲ
       
          ಬೆಳೆಯುವಂತೆ ತೆಂಗಿನ
          ತೋಟದಲ್ಲಿ ಬಾಳೆ,
          ಕೋಕೋ, ಅಡಿಕೆ, ವೀಳ್ಯದೆಲೆ
          ಬೆಳೆಸಿದರು ನೂರಾರು
          ಸಾಹಿತಿಗಳನ್ನು ತಮ್ಮ
          ಜೊತೆ ಜೊತೆಯಲ್ಲೆ 

      ಜಿಎಸ್ಎಸ್ ಭೌತಿಕವಾಗಿ  ನಮ್ಮಿಂದ  ದೂರಾದರೂ ತಮ್ಮ ಕವಿತೆಗಳ ಮೂಲಕ ಅವರು ಎಂದಿಗೂ ನಮ್ಮೊಂದಿಗಿರುತ್ತಾರೆ. ಈ ಸಮನ್ವಯದ ಕವಿಗೆ ಒಂದು ಪುಟ್ಟ ಕವನದ ಮೂಲಕ ಭಾವಪೂರ್ಣ ನಮನಗಳು. 

                             ಹಚ್ಚಿದರು ಹಣತೆ 


                                     ಸಿಡಿದು ಬಂತೊಂದು 
                                     ಬೆಂಕಿಯ ಕಿಡಿ 
                                     ರಸಋಷಿ  (ಕುವೆಂಪು) ಯ 
                                     ಯಜ್ಞ ಕುಂಡದಿಂದ 


                                    ಗುರು ಹಚ್ಚಿದ  ಹಣತೆಯಲಿ 
                                    ಬೆಳಗಿದವರು ನೀವು 
                                    ಗುರುವಿನಂತೆ ಶಿಷ್ಯ 
                                    ಕಂಡಿತು ಈ ಜಗವು 


                                    ಸುತ್ತಲೂ ಕತ್ತಲೆಯೊಳಗೆ 
                                    ಪ್ರೀತಿಯ ಹಣತೆ ಹಚ್ಚಿ 
                                    ಉಣಬಡಿಸಿದಿರಿ ಸಾಹಿತ್ಯದೂಟ 
                                    ಅನುಭವದ ಜೋಳಿಗೆ ಬಿಚ್ಚಿ 


                                    ಭೋರ್ಗರೆಯುತ್ತಿತ್ತು  ನಿಮ್ಮಲ್ಲಿ 
                                    ಕನ್ನಡದ ಅಭಿಮಾನ 
                                    ಮುಗ್ಧ ನಗುವಿನ ಹಿಂದೆ 
                                    ಜಗವ ಮಣಿಸುವ ಸ್ವಾಭಿಮಾನ 


                                    ನವ್ಯ ನವೋದಯ 
                                    ಬಂಡಾಯದ ಹಣೆಪಟ್ಟಿ 
                                    ಹಚ್ಚಿಕೊಂಡವರಲ್ಲ 
                                    ಅದಕ್ಕೆಂದೇ ರಾಷ್ಟ್ರಕವಿಯ ಪಟ್ಟ 


                                    ಕಳಚಿಕೊಂಡವರು ನೀವು 
                                    ಹಮ್ಮು ಬಿಮ್ಮಿನ ಸಂಕೋಲೆ 
                                    ಕೊನೆ ಉಸಿರಿನಲ್ಲೂ  
                                    ಕನ್ನಡದ  ಪ್ರೇಮ ಬತ್ತದ ಸೆಲೆ 


                                     ರಾಷ್ಟ್ರಕವಿಯಾದರೂ 
                                     ಅದೇ ನಿರ್ಲಿಪ್ತ ಮನ 
                                     ಹಾಡು ಹಕ್ಕಿಗೆ ಬೇಕೇ 
                                     ಬಿರುದು ಸನ್ಮಾನ 


                                     ಗುರುವಿನಂತೆ ನೀವು 
                                     ಹಚ್ಚಿದಿರಿ ಹಣತೆ ನೂರಾರು 
                                     ಸದ್ದುಗದ್ದಲದಾಚೆ ನಿಂತು 
                                     ನಿಮ್ಮ ನೆನೆಯುವ ನಾವು ಧನ್ಯರು 

                                                       -ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Monday, December 16, 2013

ಭಿತ್ತಿ: ಭಾವಪ್ರಧಾನ ವ್ಯಕ್ತಿತ್ವದ ಕಥನ




          'ಚಿಕ್ಕ ಹುಡುಗನಾದ್ದರಿಂದ ಚಟ್ಟದ ಅಗತ್ಯವಿರಲಿಲ್ಲ. ನಾನೇ ಎತ್ತಿ ಎಡ ಹೆಗಲ ಮೇಲೆ ಹೊತ್ತುಕೊಂಡು ಬಲಗೈಲಿ ಬೆಂಕಿಯ ಮಡಕೆ ಹಿಡಿದು ಹೋಗುವುದೆಂದು ತೀರ್ಮಾನವಾಯಿತು. ಹೆಣ ಎತ್ತುವ ಮೊದಲು ಒಂದೊಂದು ಹಿಡಿಯಂತೆ ಒಟ್ಟು ಮೂರು ಹಿಡಿ ಅಕ್ಕಿ ಕಾಳು ನಾನು, ಅಜ್ಜಿ, ಲಲಿತ ಹೆಣದ ಬಾಯಮೇಲೆ ಸುರಿದ ನಂತರ ನಾನು ಮುಕ್ಕಿರಿದು ಎತ್ತಿ ಹೆಣವನ್ನು ಎಡ ಹೆಗಲ ಮೇಲೆ ಹಾಕಿಕೊಂಡು ಕೆಂಪು ಸೀರೆಯ ತುಂಡನ್ನು ಹೊದಿಸಿ ಮಡಕೆಯ ಬೆಂಕಿಯನ್ನು ಬಲಗೈಲಿ ಹಿಡಿದು ಬೀದಿಯಲ್ಲಿ ಹೊರಟೆ. ಏಳು ವರ್ಷದ ಹುಡುಗನ ಹೆಣದ ಭಾರಕ್ಕೆ ಎಡ ಹೆಗಲು ಸೇದಿ ನುಲಿಯತೊಡಗಿತು. ಅತ್ತಿತ್ತ ಹೊರಳಿಸಿ ಭಾರದ ಸ್ಥಾನವನ್ನು ಬದಲಿಸಿಕೊಳ್ಳಲು ಬಲಗೈ ಮುಕ್ತವಾಗಿರಲಿಲ್ಲ. ಅದಕ್ಕೆ ಕೂಡ ಬೆಂಕಿಯ ರಾವು ಹೊಡೆಯುತ್ತಿತ್ತು. ಸುಸ್ತಾಯಿತೆಂದು ಪದೇ ಪದೇ ಕೆಳಗಿಳಿಸಿ ಸುಧಾರಿಸಿಕೊಂಡು ಪಯಣವನ್ನು ಮುಂದುವರೆಸುವಂತೆಯೂ ಇಲ್ಲ. ಸ್ಮಶಾನಕ್ಕೆ ಹೋಗುವಷ್ಟರಲ್ಲಿ ನನ್ನ ಭುಜ ಮತ್ತು ಎದೆಗೂಡುಗಳು ಸತ್ತು ಹೋಗಿದ್ದವು. ನನ್ನ ಕಣ್ಣೆದುರಿಗೇ ಕೃಷ್ಣಮೂರ್ತಿಯ ಹೆಣ ಕಪ್ಪು ತಿರುಗಿ ಚರ್ಮ ಸುಲಿದು ಬಿಳಿಯ ನೆಣ ಬಾಯ್ದೆರೆದು ತೊಟ್ಟಿಕ್ಕಿ ಅದೇ ಇಂಧನವಾಗಿ ಹೆಣವೇ ಹೊತ್ತಿಕೊಂಡಿತು'. ಓದಿದ ಆ ಕ್ಷಣ ಬುದ್ದಿಯನ್ನೇ  ಮಂಕಾಗಿಸಿ ಮನಸ್ಸನ್ನು ಆರ್ದ್ರಗೊಳಿಸುವ ಈ ಸಾಲುಗಳು ನಾನು ಇತ್ತೀಚಿಗೆ ಓದಿದ 'ಭಿತ್ತಿ' ಪುಸ್ತಕದಿಂದ ಹೆಕ್ಕಿ ತೆಗೆದವುಗಳು. 

          'ಭಿತ್ತಿ' ಇದು ಕನ್ನಡ ಸಾಹಿತ್ಯಕ್ಕೆ ಕ್ಲಾಸಿಕ್ ಕಾದಂಬರಿಗಳನ್ನು ನೀಡಿರುವ ಶ್ರೇಷ್ಠ ಬರಹಗಾರ ಸಂತೇಶಿವರ ಲಿಂಗಣ್ಣ ಭೈರಪ್ಪನವರ ಆತ್ಮಕಥೆ. ಇಪ್ಪತ್ನಾಲ್ಕು ಕಾದಂಬರಿಗಳು, ಆತ್ಮವೃತ್ತಾಂತ, ನಾಲ್ಕು ಸಾಹಿತ್ಯ ಚಿಂತನ ಗ್ರಂಥಗಳು ಮತ್ತು ಎರಡು ಸಂಪಾದಿತ ಕೃತಿಗಳ ಲೇಖಕರಾದ ಎಸ್.ಎಲ್. ಭೈರಪ್ಪನವರು ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲೂ ಓದುಗರ ದೊಡ್ಡ ಸಮೂಹವನ್ನು ಹೊಂದಿರುವ ವಿಶಿಷ್ಠ ಬರಹಗಾರ. ಭೈರಪ್ಪನವರ ಕಾದಂಬರಿಗಳು ತೆಲುಗು, ಮರಾಠಿ, ಹಿಂದಿ ಭಾಷೆಗಳೂ ಸೇರಿ ಭಾರತದ ಎಲ್ಲ ೧೪ ಭಾಷೆಗಳಿಗೂ ಅನುವಾದಗೊಂಡಿವೆ. ಭೈರಪ್ಪನವರ ಬದುಕು ಮತ್ತು ಸಾಹಿತ್ಯ ಕುರಿತೇ  ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಬೇರೆ ಬೇರೆ ಲೇಖಕರಿಂದ ರಚನೆಗೊಂಡಿರುವುದು ಇನ್ನೊಂದು ವಿಶೇಷ. ಕಾಲಕಾಲಕ್ಕೆ ತಮ್ಮ ಬರವಣಿಗೆಯಿಂದ ಭೈರಪ್ಪನವರು ಕನ್ನಡದ ಓದುಗರನ್ನು ಚಿಂತನೆಗೆ ಹಚ್ಚುತ್ತಲೇ ಬಂದಿರುವರು. ಅವರ ಕೃತಿಗಳು ಮನೋರಂಜನೆಗಾಗಿಯೋ ಇಲ್ಲವೇ ಸಮಯ ಕಳೆಯುವುದಕ್ಕಾಗಿಯೋ ಓದುವಂಥ ಪುಸ್ತಕಗಳ ಸಾಲಿನಲ್ಲಿ ನಿಲ್ಲುವ ಕೃತಿಗಳಲ್ಲ. ಭೈರಪ್ಪನವರ ಕಾದಂಬರಿಯೊಂದನ್ನು ಓದಿದ ನಂತರ ಅದು ಓದುಗನ ಮನಸ್ಸನ್ನು ಅನೇಕ ದಿನಗಳವರೆಗೆ ಕಾಡುತ್ತ ಹೊಸ ಚಿಂತನೆಯನ್ನು ಸೃಷ್ಟಿಸಿ ಬದುಕಿನ ಪರಿವರ್ತನೆಗೆ ಕಾರಣವಾಗುತ್ತದೆ. ಧರ್ಮಶ್ರೀ, ಮತದಾನ, ದಾಟು, ಪರ್ವ, ಮಂದ್ರ ಕಾದಂಬರಿಗಳನ್ನು ಓದಿದ ನನಗೆ ಭೈರಪ್ಪನವರ ಆತ್ಮಕಥೆ ಓದಬೇಕೆನ್ನುವ ಆಸೆ ಮನಸ್ಸಿನಲ್ಲಿ ಮೊಳಕೆಯೊಡೆದು ಕಾಲಾನಂತರದಲ್ಲಿ ಅದು ಹೆಮ್ಮರವಾಗಿ ಬೆಳೆದು ಕೂತಲ್ಲಿ ನಿಂತಲ್ಲಿ ಕಾಡತೊಡಗಿದಾಗ ಪರಿಚಿತರನ್ನು ಸಂಪರ್ಕಿಸಿ 'ಭಿತ್ತಿ' ಯನ್ನು ತರಿಸಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ. ಒಂದು ಹಗಲು ಒಂದು ರಾತ್ರಿ ಕುಳಿತು ಓದಿದ್ದಾಯಿತು. ಓದಿದ ನಂತರದ ಕೆಲವು ದಿನಗಳವರೆಗೆ ಮನೆಯಲ್ಲಿ ಹಾಗೂ ಪರಿಚಿತರಲ್ಲಿ 'ಭಿತ್ತಿ'ಯದೇ ಮಾತು. ಅಷ್ಟರಮಟ್ಟಿಗೆ ಭೈರಪ್ಪನವರ ಬದುಕು ನನ್ನನ್ನು ಕಲಕಿತ್ತು. ಜೊತೆಗೆ ಓದಿದ ಉತ್ತಮ ಪುಸ್ತಕವೊಂದನ್ನು ಅನೇಕ ಮನಸ್ಸುಗಳಿಗೆ ವಿಸ್ತರಿಸುವ ಕೆಲಸ ಓದುಗನಿಂದಾಗಬೇಕು ಎನ್ನುವುದನ್ನು ಬಲವಾಗಿ ನಂಬಿಕೊಂಡಿರುವ ಓದುಗ ನಾನು. ಅದಕ್ಕೆಂದೇ ಕನ್ನಡ ಪುಸ್ತಕಗಳ ಓದುಗರಿಗಾಗಿ 'ಭಿತ್ತಿ' ಕುರಿತು ನನ್ನ ಈ ಬರಹ.

ಭಿತ್ತಿಯಲ್ಲಿ ಮೂಡಿದ ಬದುಕು 


            ಬೆನ್ನು ಹತ್ತಿದ ಬಡತನ, ಜವಾಬ್ದಾರಿಯರಿಯದ ಅಪ್ಪ, ನೆರವು ನೀಡದ ಬಂಧುಗಳು ಹಾಗೂ ಇತರರ ಕೊಂಕು ನುಡಿಗಳ ನಡುವೆ ಭೈರಪ್ಪನವರ ಬಾಲ್ಯದ ಬದುಕು ತೆರೆದುಕೊಳ್ಳುತ್ತದೆ. ಏಳು ಮಕ್ಕಳ ದೊಡ್ಡ ಕುಟುಂಬಕ್ಕೆ ಆಸರೆಯಾಗಿದ್ದು ತಾಯಿಯ ದುಡಿಮೆಯೊಂದೆ. ಗಂಡಸಿಗೆ ಸರಿಸಮವಾಗಿ ದುಡಿದು ಕುಟುಂಬವನ್ನು ಸಾಕುತ್ತಿರುವ ತಾಯಿಯನ್ನು ಕಂಡರೆ ಭೈರಪ್ಪನವರಿಗೆ ಎಲ್ಲಿಲ್ಲದ  ಗೌರವ ಮತ್ತು ಅಭಿಮಾನ. ಆ ಅಭಿಮಾನ ಮತ್ತು ಗೌರವ ಅಮ್ಮನ ಸಾವಿನ ನಂತರವೂ ಅವರಲ್ಲುಳಿದು ಅಮ್ಮನ ವ್ಯಕ್ತಿತ್ವ ಅವರನ್ನು ಸದಾ ಎಚ್ಚರಿಸುವ ಜಾಗೃತ ಪ್ರಜ್ಞೆಯಾಗುತ್ತದೆ. ಜೊತೆಗೆ ಬಾಲ್ಯದಲ್ಲೇ ಕಂಡ ಸಾಲು ಸಾಲು ಸಾವುಗಳು ಭೈರಪ್ಪನವರ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನುಂಟು ಮಾಡುತ್ತವೆ. ಅಮ್ಮ, ಅಕ್ಕಯ್ಯ, ರಾಮಣ್ಣ, ಸುಶೀಲ, ಕೃಷ್ಣಮೂರ್ತಿ ಈ ಎಲ್ಲ ಸಾವುಗಳನ್ನು ಕಂಡ ಆ ಘಳಿಗೆ ಭೈರಪ್ಪನವರಿಗಿನ್ನೂ ಹದಿನೈದು ವರ್ಷ ವಯಸ್ಸು. ಈ ಸೂತಕದ ಛಾಯೆ ಸಹಜವಾಗಿಯೇ ಅವರಲ್ಲಿ ಧರ್ಮ ಕರ್ಮ, ನ್ಯಾಯ ನೀತಿ, ಸರಿತಪ್ಪು ಇತ್ಯಾದಿ ಅಧ್ಯಾತ್ಮ ಗುಣದ ಪ್ರಶ್ನೆಗಳು ಸ್ಫುಟವಾಗಲು ಕಾರಣವಾಯಿತು. ಸಂತೇಶಿವರದಿಂದ ಬಾಗೂರಿಗೆ ಮುಂದೆ ನುಗ್ಗೆಹಳ್ಳಿಗೆ, ಗೊರೂರು, ಮೈಸೂರು, ಮುಂಬೈ, ಹಾವೇರಿ ಹೀಗೆ ಬದುಕು ಭೈರಪ್ಪನವರನ್ನು ಕೈಹಿಡಿದು ಎಲ್ಲೆಲ್ಲಿಗೋ ಕರೆದೊಯ್ಯುತ್ತದೆ. ಸ್ವಾಮಿ ಮೇಷ್ಟ್ರು, ಅತ್ತಿಗೆ, ಶ್ರೀನಿವಾಸ ಅಯ್ಯಂಗಾರರು, ರಾಮಕೃಷ್ಣಯ್ಯನವರು, ರಾಂಪುರದ ಕಲ್ಲೇಗೌಡರಿಂದ ದೊರೆತ ಸಹಾಯ ಭೈರಪ್ಪನವರ ಬಾಲ್ಯ ಜೀವನವನ್ನು ಒಂದಿಷ್ಟು ಸಹನೀಯವಾಗಿಸುತ್ತದೆ.  ಸೋದರ ಮಾವನ ಮನೆಯಲ್ಲಿ ಅನುಭವಿಸಿದ  ಹಿಂಸೆ, ಅಪಮಾನವನ್ನು ಕುರಿತು ಬರೆಯುವಾಗ ಸಹಜವಾಗಿಯೇ ಭೈರಪ್ಪನವರು ಭಾವುಕರಾಗುತ್ತಾರೆ. ಆ ಅಪಮಾನ ಹಿಂಸೆಯೇ ಅವರ ವ್ಯಕ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಅಮ್ಮನ ಸಾವಿನ ನಂತರ ಸೋದರ ಮಾವನನ್ನು ವಿರೋಧಿಸಿ ಮನೆಯಿಂದ ಹೊರ ಬರುವ ಆ ಸಂದರ್ಭ ಅಸಹಾಯಕಳಾಗಿ ಅಳುತ್ತ ನಿಲ್ಲುವ ಅಕ್ಕಮ್ಮ (ಅಜ್ಜಿ) ನ ಚಿತ್ರ ಕಣ್ಮುಂದೆ ಸುಳಿದು ಓದುಗನ ಮನಸ್ಸು ಆರ್ದ್ರವಾಗುತ್ತದೆ.

         ಅಮ್ಮನ ಅಗಲಿಕೆ, ಸಹೋದರ ಸಹೋದರಿಯರ ಸಾವುಗಳು, ಬೆನ್ನುಹತ್ತಿದ ಬಡತನ, ಅಪ್ಪನ ಬೇಜವಾಬ್ದಾರಿತನ, ಅಮ್ಮನ ತವರಿನಲ್ಲಿ ಅನುಭವಿಸಿದ ಕಷ್ಟ ಈ ಎಲ್ಲ ನೋವುಗಳ ನಡುವೆಯೂ ಭೈರಪ್ಪನವರು ಬದುಕನ್ನು ಒಂದು ಸೃಜನಶೀಲ ನೆಲೆಯಲ್ಲಿ ಕಟ್ಟಿಕೊಳ್ಳಲು ನೆರವಾಗಿದ್ದೆ ನಾಟಕಗಳು. ದಿನನಿತ್ಯ ಹತ್ತಾರು ಮೈಲಿ ನಡೆದು ಊರೂರು ಸುತ್ತಿ ರಾತ್ರಿಯೆಲ್ಲ ನಿದ್ದೆಗಟ್ಟಿ ನೋಡಿದ ನಾಟಕಗಳು ಭೈರಪ್ಪನವರ ಬದುಕಿನ ಮೇಲೆ ಗಾಢ ಪ್ರಭಾವ ಬೀರುತ್ತವೆ. ಮುಂದೆ ಸಿನಿಮಾ ಮಂದಿರದಲ್ಲಿ ಗೇಟ್ ಕೀಪರ್ ಆಗಿ ಕೆಲಸ ಮಾಡುವ ವೇಳೆ ನೋಡುವ ಸಿನಿಮಾಗಳು, ಸಂಗೀತದ ಅಭಿಮಾನಿಯಾಗಿ ಅಸಂಖ್ಯಾತ ಕಾರ್ಯಕ್ರಮಗಳಿಗೆ ಕಿವಿಯಾದದ್ದು, ಊರೂರು ಅಲೆದಾಟ ಈ ಹವ್ಯಾಸಗಳೇ ಅಂದಿಗೂ ಇಂದಿಗೂ ಭೈರಪ್ಪನವರ ಸೃಜನಶೀಲತೆ ಮಂಕಾಗದಂತೆ ಕಾಪಿಟ್ಟುಕೊಂಡು ಬಂದಿವೆ.

        ಭೈರಪ್ಪನವರಿಗೆ ಬರಹದಲ್ಲಿ ರಸವನ್ನು ಸೃಷ್ಟಿಸುವ ಸೃಜನಶೀಲತೆಯಿದೆ. ಅಂಥದ್ದೊಂದು ಸೃಜನಶೀಲ ಶಕ್ತಿ ಅವರಲ್ಲಿರುವುದರಿಂದಲೇ ಅವರ ಈ ಆತ್ಮಕಥೆಯನ್ನು ಓದುವಾಗ ಅದೊಂದು ರೋಚಕ ಕಾದಂಬರಿಯಂತೆ ಭಾಸವಾಗುತ್ತದೆ. ಕಥೆಯ ಓಘ ತನ್ನ ವೇಗವನ್ನು ಕಳೆದುಕೊಳ್ಳದಿರುವುದರಿಂದ ಇಲ್ಲಿ ಪ್ರತಿಯೊಂದು ಅಧ್ಯಾಯ ತನ್ನ ತಾಜಾತನವನ್ನು ಉಳಿಸಿಕೊಂಡಿದೆ. ಜೊತೆಗೆ ಸಾಹಿತ್ಯದ ಒಂದು ಪ್ರಕಾರಕ್ಕೆ ಮಾತ್ರ ನಿಷ್ಠರಾಗಿರಬೇಕೆನ್ನುವ ಅವರೊಳಗಿನ ಹಠ ರಸಸೃಷ್ಟಿಯ ಸೆಲೆಯನ್ನು ನಿರಂತರವಾಗಿ ಪ್ರವಹಿಸುವಂತೆ ಮಾಡಿದೆ. ಭೈರಪ್ಪನವರು ತತ್ವಶಾಸ್ತ್ರವನ್ನು ತಮ್ಮ ಅಧ್ಯಯನಕ್ಕೆ ಆಯ್ಕೆಮಾಡಿಕೊಳ್ಳಲು ಅವರು ಬದುಕಿನಲ್ಲಿ ಎದುರಿಸಿದ ಅನೇಕ ಸವಾಲುಗಳು ಮತ್ತು ಸಮಸ್ಯೆಗಳೇ ಮುಖ್ಯಕಾರಣವಾಗುತ್ತವೆ. ತತ್ವಶಾಸ್ತ್ರದ ಅಧ್ಯಯನದಿಂದ ನೌಕರಿ ಗಿಟ್ಟಿಸುವುದು ಅಸಾಧ್ಯ ಎನ್ನುವ ಸಮಸ್ಯೆಯ ನಡುವೆಯೂ ಅವರು ತತ್ವಶಾಸ್ತ್ರವನ್ನೇ ಆಯ್ಕೆಮಾಡಿಕೊಳ್ಳುತ್ತಾರೆ. 'ಇಫ್ ಫಿಲಾಸಫಿ ಡಸ್ ನಾಟ್ ಬೇಕ್ ಎನಿ ಬ್ರೆಡ್ ಐ ವಿಲ್ ಓಪನ್ ಎ ಬೇಕರಿ ಅಂಡ್ ಅರ್ನ್ ಮೈ ಬ್ರೆಡ್' ಎನ್ನುವಷ್ಟು ತತ್ವಶಾಸ್ತ್ರದ ಮೇಲೆ  ಶ್ರದ್ಧೆ ಮತ್ತು ಪ್ರೀತಿ ಅವರಿಗೆ. ವಿದ್ಯಾರ್ಥಿ ದೆಸೆಯಲ್ಲೇ ತತ್ವಶಾಸ್ತ್ರದ ಆಳ ಅಗಲಗಳ ಶೋಧನೆಗೆ ಮುಂದಾಗುತ್ತಾರೆ. ಯಮುನಾಚಾರ್ಯ ಮತ್ತು ಶಾಂತಮ್ಮನವರಂಥ ಶ್ರೇಷ್ಠ ಗುರುಗಳ ಮಾರ್ಗದರ್ಶನದಲ್ಲಿ ಭೈರಪ್ಪನವರು ತತ್ವಶಾಸ್ತ್ರವನ್ನು ತಮ್ಮೊಳಗೆ ಅಂತರ್ಗತಗೊಳಿಸಿಕೊಳ್ಳುತ್ತಾರೆ. ತತ್ವಶಾಸ್ತ್ರದ ವಿದ್ಯಾರ್ಥಿಯಾಗಿ ಅದನ್ನು ಆಳವಾಗಿ ಅಭ್ಯಸಿಸಿ ಅದೇ ವಿಷಯದ ಉಪನ್ಯಾಸಕರಾಗಿ ಮತ್ತು ಸಂಶೋಧಕರಾಗಿ ಕಾರ್ಯನಿರ್ವಹಿಸುವ ಭೈರಪ್ಪನವರು ಮುಂದೊಂದು ದಿನ ಶ್ರೇಷ್ಠ ತತ್ವಜ್ಞಾನಿಯಾಗುವ ಎಲ್ಲ ಅವಕಾಶಗಳು ಮತ್ತು ಪ್ರತಿಭೆ ಇದ್ದೂ ಅವರು ಸಾಹಿತ್ಯದತ್ತ ಹೊರಳುವುದು ಸಾಹಿತ್ಯದ ಮೇಲಿನ ಅನನ್ಯ ಪ್ರೀತಿಗೆ ಸಾಕ್ಷಿಯಾಗಿದೆ. ಬದುಕಿನ ಒಂದು ಹಂತದಲ್ಲಿ ಎದುರಾಗುವ ಎರಡು ಅವಕಾಶಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ ಎನ್ನುವ ದ್ವಂದ್ವ ಭೈರಪ್ಪನವರನ್ನು ಕಾಡುತ್ತದೆ. ತತ್ವಜ್ಞಾನಿಯಾಗಿ ಖ್ಯಾತಿಯನ್ನು ಹೊಂದಬೇಕೋ ಅಥವಾ ಸಾಹಿತ್ಯದ ಸೃಷ್ಟಿಯಲ್ಲಿ ತನ್ನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಬೇಕೋ ಎನ್ನುವ ಜಿಜ್ಞಾಸೆಗೆ ಉತ್ತರವನ್ನು ಕಂಡುಕೊಳ್ಳಲು ಅವರು ಹೆಣಗುತ್ತಾರೆ.

ಸಾಹಿತ್ಯದತ್ತ ಹೊರಳುವಿಕೆ


           ಎಸ್. ಎಲ್. ಭೈರಪ್ಪನವರು ೧೯೫೮ ರಲ್ಲಿ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ತತ್ವಶಾಸ್ತ್ರದ ಉಪನ್ಯಾಸಕರಾಗಿ ತಮ್ಮ ವೃತ್ತಿಬದುಕಿಗೆ ಕಾಲಿಡುವರು. ೧೯೬೦ ರ ವರೆಗೆ ಸುಮಾರು ಎರಡು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿ ಮುಂದೆ ಗುಜರಾತಿನ ಸರ್ದಾರ ಪಟೇಲ ವಿಶ್ವವಿದ್ಯಾಲಯದಲ್ಲಿ  ಹೊಸ ನೇಮಕಾತಿಯೊಂದಿಗೆ ಹೊಸ ಪರಿಸರದಲ್ಲಿ ಅವರ ವೃತ್ತಿ ಬದುಕಿನ ಪುಟಗಳು ತೆರೆದುಕೊಳ್ಳಲಾರಂಭಿಸುತ್ತವೆ. ಆ ಖಾಸಗಿ  ಕಾಲೇಜನ್ನು ಬಿಟ್ಟು  ಬರುವಾಗ ಅವರಿಗೆ ಅಡೆತಡೆಗಳು ಮತ್ತು ಕೆಲವು ಮಹನೀಯರ ಸಹಕಾರ ಒಟ್ಟೊಟ್ಟಿಗೆ ಎದುರಾಗುತ್ತವೆ. ಆ ಸಂದರ್ಭ ಹಿರಿಯರಾದ ನಾಡಗೌಡ, ತೋಪಖಾನೆ, ಕಲ್ಮಠ ಅವರಿಂದ ದೊರೆಯುವ ಸಹಕಾರ ಮತ್ತು ನೈತಿಕ ಪ್ರೋತ್ಸಾಹ ಯಾವುದೇ ಸಮಸ್ಯೆಗಳಿಲ್ಲದೆ ಭೈರಪ್ಪನವರು ವಿಶ್ವವಿದ್ಯಾಲಯದಂಥ ಉನ್ನತ ಶಿಕ್ಷಣ ಕೇಂದ್ರಕ್ಕೆ ಉಪನ್ಯಾಸಕರಾಗಿ ಸೇರಲು ನೆರವಾಗುತ್ತದೆ.

            ಗುಜರಾತು ಸೇರಿದ ಮುಂದಿನ ಎರಡು ವರ್ಷಗಳಲ್ಲೇ ಭೈರಪ್ಪನವರು ಡಾ.ಜಾವಡೇಕರ್ ಅವರ ಮಾರ್ಗದರ್ಶನದಲ್ಲಿ      ಪಿ. ಹೆಚ್. ಡಿ ಶಿಕ್ಷಣವನ್ನು ಪೂರ್ಣಗೊಳಿಸುವರು. ಪಿ. ಹೆಚ್. ಡಿ ಪದವಿ ನಂತರ ಜಾವಡೇಕರ್ ಡಿ. ಲಿಟ್ ಪದವಿಗಾಗಿ ತತ್ವಶಾಸ್ತ್ರದಲ್ಲಿ ಪುಸ್ತಕವೊಂದನ್ನು ಬರೆಯುವಂತೆ ಭೈರಪ್ಪನವರಿಗೆ ಸೂಚಿಸುವರು. ಅನೇಕ ಪುಸ್ತಕಗಳನ್ನು ಓದಿ ತತ್ವಶಾಸ್ತ್ರ ವಿಷಯದಲ್ಲಿ ಪ್ರಭುತ್ವವಿರುವ ಭೈರಪ್ಪನವರಿಗೆ ಇದು ಸುಲಭದ ಕೆಲಸ ಎನ್ನುವುದು ಜಾವಡೇಕರ್ ರ ಅಭಿಪ್ರಾಯವಾಗಿತ್ತು. ತಮ್ಮ ಗುರುಗಳ ಸಲಹೆಗೆ ಪ್ರಾರಂಭದಲ್ಲಿ ಸೂಕ್ತವಾಗಿಯೇ ಪ್ರತಿಕ್ರಿಯಿಸುವ ಭೈರಪ್ಪನವರು ಈ ವಿಷಯವಾಗಿ ಕಾರ್ಯೋನ್ಮುಖರಾಗುವರು. ಹೀಗೆ ಡಿ.ಲಿಟ್ ಪದವಿಗಾಗಿ ತಯ್ಯಾರಿ ಮಾಡಿಕೊಳ್ಳುತ್ತಿರುವ ಸಮಯದಲ್ಲೇ ಅವರಲ್ಲಿ 'ವಂಶ ವೃಕ್ಷ' ದ ಕಥೆ, ಪಾತ್ರಗಳು, ಸನ್ನಿವೇಶ, ಸಂದರ್ಭಗಳು ಮನಸ್ಸಿನಲ್ಲಿ ಮೊಳಕೆಯೊಡೆದು ಕಾಡಲಾರಂಭಿಸುತ್ತವೆ. ಈ ನಡುವೆ ಹುಬ್ಬಳ್ಳಿಯ ಸಾಹಿತ್ಯ ಭಂಡಾರದ ಗೋವಿಂದರಾಯರಿಂದ ಕಾದಂಬರಿಯೊಂದನ್ನು ಬರೆದು ಕಳುಹಿಸಿ ಎನ್ನುವ ಪ್ರೀತಿಯ ಒತ್ತಾಯ. ಒಂದೆಡೆ ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನ ತಂದು ಕೊಡಲಿರುವ ಡಿ.ಲಿಟ್ ಪದವಿ ಇನ್ನೊಂದೆಡೆ ಸೃಜನಾತ್ಮಕವಾದದ್ದನ್ನು ಸೃಷ್ಟಿಸಲು ನೆರವಾಗುವ ಸಾಹಿತ್ಯ. ಒಂದು ವಾಸ್ತವವಾದರೆ ಇನ್ನೊಂದು ಭಾವಪ್ರಧಾನ. ತತ್ವಶಾಸ್ತ್ರದ ಸಂಶೋಧನೆಯಲ್ಲೇ ಮುಂದುವರೆಯಲೇ? ಅಥವಾ ಸೃಜನಶೀಲ ಮಾಧ್ಯಮವಾದ ಕಾದಂಬರಿ ರಚನೆಯಲ್ಲಿ ತೊಡಗಿಸಿಕೊಳ್ಳಲೆ ಭೈರಪ್ಪನವರ ಮನಸ್ಸು ಈ ಸಂದಿಗ್ಧದಲ್ಲಿ ಅನೇಕ ತಿಂಗಳುಗಳ ಕಾಲ ಹೊಯ್ದಾಡುತ್ತದೆ. ಒಂದು ಹಂತದಲ್ಲಿ ಕನ್ನಡದಲ್ಲಿ ಬರೆಯುವ ಕಾದಂಬರಿಗೆ ಗುಜರಾತಿನಲ್ಲಿರುವ ತತ್ವಶಾಸ್ತ್ರ ವಿಭಾಗದಲ್ಲೇನು ಬೆಲೆ ಇರುತ್ತದೆ? ಎಂಬ ಲೌಕಿಕ ವಿವೇಕ ಎಚ್ಚರಿಸುತ್ತದೆ. ಇಂಥದ್ದೊಂದು ಹೊಯ್ದಾಟದ ನಡುವೆ ಕೆಲವು ದಿನಗಳ ಕಾಲ ಡಿ.ಲಿಟ್ ಪುಸ್ತಕಕ್ಕೆ ಕೈ ಹಚ್ಚುವುದು ನಂತರ ಇದು ನನ್ನ ಅಭಿವ್ಯಕ್ತಿ ಮಾಧ್ಯಮವಲ್ಲ ಎನ್ನುವ ಒಳಗಿನ ಒತ್ತಡದಿಂದಾಗಿ ಕಾದಂಬರಿ ಕಡೆ ಹೊರಳುವುದು ಈ ತೊಳಲಾಟ ಮುಂದುವರಿಯುತ್ತದೆ. ಕೊನೆಗೆ ಲೌಕಿಕ ವಿವೇಕದ ದ್ವನಿಯು ಬುದ್ದಿಯೊಳಕ್ಕೆ ಪ್ರವೇಶವನ್ನೇ ಮಾಡದ ಸ್ಥಿತಿಯು ಒಳಗಿನಿಂದ ಬೆಳೆದು ಹೆಮ್ಮರವಾದಾಗ ಭೈರಪ್ಪನವರು ಸೃಜನಾತ್ಮಕವಾಗಿ ಸೃಷ್ಟಿಸುವ ಸಾಹಿತ್ಯವನ್ನೇ ತಮ್ಮ ಬರವಣಿಗೆಯ ಮಾಧ್ಯಮವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಭೈರಪ್ಪನವರ ದೃಷ್ಟಿಯಲ್ಲಿ ಬರವಣಿಗೆ ಎನ್ನುವುದು ಅದು ಬರೀ ಬರೆದು ಹೊರಹಾಕುವುದಲ್ಲ. ಕುಸುರಿ ಕೆಲಸವಿರುವ ಪಾತ್ರಗಳ ಒಳಗನ್ನು ಪದರ ಪದರವಾಗಿ ತೋರಿಸುವ ಬರವಣಿಗೆ ಅದೊಂದು ಕಲೆ. ಇಂಥದ್ದೊಂದು ಕಲೆ ಅದು ಕಾದಂಬರಿ ರಚನೆಯಲ್ಲಿ ಮಾತ್ರ ಸಾಧ್ಯ ಎಂದವರ ನಂಬಿಕೆ. ಆದ್ದರಿಂದ ಸಂಶೋಧನಾ ಬರವಣಿಗೆಯನ್ನು ಹಿಂದೆ ಸರಿಸಿ ಕಾದಂಬರಿಯ ಬರವಣಿಗೆಗೆ ಮುಂದಾಗುತ್ತಾರೆ. ಹೀಗೆ ಸಂಶೋಧನಾ ಬರವಣಿಗೆಯಿಂದ ಸಂಪೂರ್ಣವಾಗಿ ಬಿಡಿಸಿಕೊಂಡು ಹೊರಬರುವ ಭೈರಪ್ಪನವರು ಆ ಘಳಿಗೆ ಹೀಗೆ ನುಡಿಯುತ್ತಾರೆ 'ತತ್ವಶಾಸ್ತ್ರದಲ್ಲಿ ಸೃಜನಾತ್ಮಕವಾಗಿ ಸೃಷ್ಟಿಸುವುದು ನನ್ನ ಮನೋಧರ್ಮದಲ್ಲಿಲ್ಲ. ನನ್ನದು ಭಾವಪ್ರಧಾನ ವ್ಯಕ್ತಿತ್ವ. ನಾನು ಸೃಜನಾತ್ಮಕವಾಗಬಹುದಾದದ್ದು ಸಾಹಿತ್ಯದಲ್ಲಿ ಮಾತ್ರ ಎಂಬುದನ್ನು ಒಂದು ಘಟ್ಟದಲ್ಲಿ ಅರ್ಥಮಾಡಿಕೊಂಡೆ. ಸಾಹಿತ್ಯವು ನನ್ನ ಸೃಜನಶೀಲ ಅಭಿವ್ಯಕ್ತಿಯ ಮಾಧ್ಯಮವಾಯಿತು. ಅದು ಅಪೇಕ್ಷಿಸಿದಂತೆ ನನ್ನ ಕಾಲ, ಚಿಂತನೆ, ವ್ಯವಸಾಯಗಳನ್ನೆಲ್ಲ ಬದಲಿಸಿಕೊಂಡೆ'. ಹೀಗೆ ಕಾಲ, ಚಿಂತನೆ, ವ್ಯವಸಾಯಗಳನ್ನು ಸಾಹಿತ್ಯಕ್ಕೆ ಪೂರಕವಾಗಿ ಬದಲಿಸಿಕೊಂಡ ಭೈರಪ್ಪನವರಿಂದ ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಮಾತ್ರವಲ್ಲದೆ ಭಾರತದ ಇಡೀ ಸಾಹಿತ್ಯ ಕ್ಷೇತ್ರಕ್ಕೆ ಶ್ರೇಷ್ಠ ಕಾದಂಬರಿಗಳು ಕೊಡುಗೆಯಾಗಿ ದೊರೆತವು.

ನಾನ್ ಅಕಾಡೆಮಿಕ್ ಬರಹಗಾರ


         ಭೈರಪ್ಪನವರು ಓದಿದ್ದು ತತ್ವಶಾಸ್ತ್ರ ಆದರೆ ಕೃಷಿ ಮಾಡುತ್ತಿರುವುದು ಸಾಹಿತ್ಯದಲ್ಲಿ. ಅವರ ಓದಿನ ಹಿನ್ನೆಲೆಯನ್ನೇ ಆಧಾರವಾಗಿಟ್ಟುಕೊಂಡು ಕನ್ನಡದ ಸಾಹಿತ್ಯ ವಲಯ ಕಾಲಾನುಕಾಲಕ್ಕೆ ಭೈರಪ್ಪನವರ ಬರವಣಿಗೆಯನ್ನು ಟೀಕಿಸುತ್ತಲೇ ಬಂದಿದೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಭೈರಪ್ಪನವರು ಯಾವ ಟೀಕೆ ಟಿಪ್ಪಣಿಗಳಿಗೂ ಕಿವಿಗೊಡದೆ ಅತ್ಯುತ್ತಮ ಕಾದಂಬರಿಗಳನ್ನು ಬರೆದು ತಮ್ಮ ಬರವಣಿಗೆಯ ಓದಿಗೆ ದೊಡ್ಡ ಓದುಗರ ಸಮೂಹವನ್ನೇ ಸೃಷ್ಟಿಸಿಕೊಂಡ ಲೇಖಕ. ಭೈರಪ್ಪನವರಿಗಿರುವ ಈ ಜನಪ್ರಿಯತೆ ಮತ್ತು ಅವರೊಳಗಿನ ಸೃಜನಶೀಲತೆಯನ್ನು ಸಹಿಸಿಕೊಳ್ಳದ ನಮ್ಮ ಸಾಹಿತಿಗಳು ಅನೇಕ ಸಂದರ್ಭಗಳಲ್ಲಿ ತಮ್ಮ ಸಣ್ಣತನವನ್ನು ಪ್ರದರ್ಶಿಸಿದ್ದುಂಟು. ಅಂಥ ಒಂದೆರಡು ಸಣ್ಣತನಗಳನ್ನು ಹೇಳದೆ ಇದ್ದಲ್ಲಿ ಲೋಪವಾಗಬಹುದೆನ್ನುವ ವಿನಯದಿಂದಲೇ ಭೈರಪ್ಪನವರು ತಮ್ಮ ಆತ್ಮಕಥನದಲ್ಲಿ ಒಂದೆರಡು ಉದಾಹರಣೆಗಳಿಗೆ ಜಾಗಮಾಡಿ ಕೊಟ್ಟಿರುವರು.

         ಕನ್ನಡದ ಶ್ರೇಷ್ಠ ವಿಮರ್ಶಕರೆಂದೇ ಹೆಸರಾದ ಕೀರ್ತಿನಾಥ ಕುರ್ತುಕೋಟಿ ಅವರು ಅನೇಕ ಸಂದರ್ಭಗಳಲ್ಲಿ ಭೈರಪನವರ ಬರವಣಿಗೆಯನ್ನು ಟೀಕಿಸಿದ ಪ್ರಸಂಗಗಳು ಪುಸ್ತಕದ ಅಲ್ಲಲ್ಲಿ ಬರುತ್ತವೆ. ಒಂದು ಹಂತದಲ್ಲಿ ಕುರ್ತುಕೋಟಿ ಅವರು ಭೈರಪ್ಪನವರ ವ್ಯಕ್ತಿತ್ವದ ಮೇಲೆ ಪ್ರಹಾರ ಮಾಡುತ್ತ ಹೀಗೆ ಟೀಕಿಸುತ್ತಾರೆ 'ಸದಾ ಪುಸ್ತಕ ಜೀವಿಯಾಗಿರುವ ಭೈರಪ್ಪನವರಿಗೆ ಜೀವನಾನುಭವವೇ ಇಲ್ಲ. ಇವರು ಬರೆಯುವ ಕಾದಂಬರಿಯಲ್ಲಿ ಸತ್ವ ಹೇಗಿದ್ದೀತು? ಭೈರಪ್ಪನವರು ಚಹಾ ಕುಡಿಯುವುದಿಲ್ಲ ಆದ್ದರಿಂದ ಅವರ ಪಾತ್ರಗಳಿಗೂ ಚಹಾ ಕುಡಿಯಲು ಬರುವುದಿಲ್ಲ'.

         ೧೯೬೭ ರಲ್ಲಿ ಉಡುಪಿಯಲ್ಲಿ ಏರ್ಪಟ್ಟ ವಿಚಾರಗೊಷ್ಠಿಯಲ್ಲಿ ಕುರ್ತುಕೋಟಿಯವರು 'ವಂಶ ವೃಕ್ಷ' ಕಾದಂಬರಿಯನ್ನು ನೂರು ದೋಷಗಳಿರುವ ಕಾದಂಬರಿ ಎಂದು ಟೀಕಿಸಿದರೆ 'ಪರ್ವ' ದ ಮೇಲೆ ಬೆಂಗಳೂರಿನಲ್ಲಿ ನಡೆದ ವಿಮರ್ಶಾಗೊಷ್ಠಿಯಲ್ಲಿ 'ಇದು ಪಾಶ್ಚಿಮಾತ್ಯರಿಂದ ಪಡೆದ ಕಾದಂಬರಿ ಫಾರಂನಿಂದ ನಮ್ಮ ಪುರಾಣದ ಮೇಲೆ ನಿಯೋಗ ಮಾಡಿಸಿ ಸೃಷ್ಟಿಸಿದ ಕೃತಿ' ಎಂದು ರೋಷ ವ್ಯಕ್ತಪಡಿಸುತ್ತಾರೆ. ೧೯೮೮ ರಲ್ಲಿ ಬರೋಡದಲ್ಲಿ ಏರ್ಪಡಿಸಿದ ಭೈರಪ್ಪನವರ ಸನ್ಮಾನ ಸಮಾರಂಭದಲ್ಲಿ ಕುರ್ತುಕೋಟಿ ಅವರು 'ಭೈರಪ್ಪನವರು ತುಂಬಾ ಉದಾರವಾದಿ. ಮನೆಗೆ ಬಂದ ಮಿತ್ರರಿಗೆ ಹೋಳಿಗೆ ಮಾಡಿಸಿ ಉಣ್ಣಿಸುತ್ತಾರೆ' ಎಂದು ಹೇಳಿ ಅವರ ಕಾದಂಬರಿಗಳ ವಿಷಯವಾಗಿ ಒಂದು ಮಾತನ್ನೂ ಆಡುವುದಿಲ್ಲ.

           ಭೈರಪ್ಪನವರು ತಮ್ಮ ವೃತ್ತಿ ಬದುಕಿನ ಕೊನೆಯ ಹಂತವಾಗಿ ಮೈಸೂರಿಗೆ ಬಂದು ನೆಲೆಸಿದಾಗ ಅದಾಗಲೇ ನವ್ಯರು ಕನ್ನಡ ಸಾಹಿತ್ಯ ವಲಯದಲ್ಲಿ ತಮ್ಮ ನೆಲೆಯನ್ನು ಗಟ್ಟಿಗೊಳಿಸಿಕೊಂಡಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಕರ್ನಾಟಕದ ಹೊರಗಿದ್ದೇ ಭೈರಪ್ಪನವರು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರೂ ಇಲ್ಲಿನ ನವ್ಯರೊಂದಿಗೆ ಅವರಿಗೆ ಸಂಪರ್ಕ ಏರ್ಪಡಲಿಲ್ಲ. ಪರಿಣಾಮವಾಗಿ ನವ್ಯರು ಕಾಲ ಕಾಲಕ್ಕೆ ಭೈರಪನವರ ಕೃತಿಗಳನ್ನು ಅನಂತಮೂರ್ತಿ ಅವರ ಕೃತಿಗಳೊಂದಿಗೆ ತುಲನೆ ಮಾಡುತ್ತ ಟೀಕಿಸುತ್ತಲೇ ಹೋದರು. ಅನಂತಮೂರ್ತಿ ಅವರ 'ಸಂಸ್ಕಾರ' ಪ್ರಗತಿಗಾಮಿಯಾದರೆ ಭೈರಪ್ಪನವರ 'ವಂಶ ವೃಕ್ಷ' ಪ್ರತಿಗಾಮಿ ಎನ್ನುವ ಉಪೇಕ್ಷೆಗೆ ಒಳಗಾಯಿತು. 'ಭಾರತೀಪುರ' ಕ್ರಾಂತಿಕಾರಕ ಕೃತಿಯಾದರೆ 'ದಾಟು' ಬ್ರಾಹ್ಮಣಿಕೆಯ ಹಿರಿಮೆಯನ್ನು ಎತ್ತಿ ಹಿಡಿಯುವ ಪ್ರತಿಗಾಮಿ ಕೃತಿ ಎಂದು ಪ್ರಚಾರ ಮಾಡಲಾಯಿತು. ಕೆಲವು ವಿಮರ್ಶಕರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ 'ಭೈರಪ್ಪನವರದು ರಂಜಿಸಿ ವಂಚಿಸುವ ಕಲೆ. ಇವರದು ಪೂರ್ವನಿಶ್ಚಿತ ವಿಚಾರಗಳನ್ನು ಪ್ರತಿಪಾದಿಸಲೆಂದು ಬರೆಯುವ ವಿಧಾನ. ಇವರೊಬ್ಬ ರಂಜಕ ಕಥೆಗಾರರು. ಕಥೆಗಿಂತ ಹೆಚ್ಚಿನದು ಇವರ ಕಾದಂಬರಿಗಳಲ್ಲಿಲ್ಲ. ಇವರೊಬ್ಬ ಜನಪ್ರಿಯ ಆದರೆ ಕಲಾಗುಣವಿಲ್ಲದ ಲೇಖಕ' ಎಂದು ಆರೋಪಿಸಿದರು.

           ೧೯೮೧ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಭಾರತದ ಎಲ್ಲ ಭಾಷೆಗಳಲ್ಲೂ ಒಂದೊಂದು ಆಧುನಿಕ ಕ್ಲಾಸಿಕ್ ಎಂದು ಪರಿಗಣಿಸಲ್ಪಡಬಹುದಾದ ಸಾಹಿತ್ಯ ಕೃತಿಯನ್ನು ಇಂಗ್ಲಿಷ್ ಗೆ ಅನುವಾದಿಸಲು ಯೋಜನೆ ಹಾಕಿಕೊಳ್ಳುತ್ತದೆ. ಆಗ ಕನ್ನಡ ಭಾಷೆಯಿಂದ ಆಯ್ಕೆಯಾಗುವ ಕೃತಿ ಕನ್ನಡ ಸಾಹಿತ್ಯದಲ್ಲೇ ಶ್ರೇಷ್ಠ ಎಂದೇ ಪರಿಗಣಿತವಾಗಿದ್ದ 'ಪರ್ವ' ಕಾದಂಬರಿ. ಅಕಾಡೆಮಿಯ ಸದಸ್ಯರೆಲ್ಲರೂ 'ಪರ್ವ' ಕೃತಿ ಅನುವಾದಗೊಳ್ಳಲೇ ಬೇಕಾದ ಕೃತಿ ಎಂದು ಅನುಮೋದಿಸಿದರೂ ಅನಂತಮೂರ್ತಿ ಮತ್ತು ಕುರ್ತುಕೋಟಿ ಅಪಸ್ವರ ಎತ್ತುತ್ತಾರೆ. ಕೊನೆಗೆ ಹೊಸ ಸಲಹಾ ಸಮಿತಿಯೊಂದು ಅಸ್ತಿತ್ವಕ್ಕೆ ಬಂದು 'ಪರ್ವ' ಕಾದಂಬರಿಯ ಇಂಗ್ಲಿಷ್ ಅನುವಾದಕ್ಕೆ ಒಪ್ಪಿಗೆ ದೊರೆಯುತ್ತದೆ. ಹೀಗೆ ಭೈರಪ್ಪನವರ ವ್ಯಕ್ತಿತ್ವ ಮತ್ತು ಬರವಣಿಗೆಯನ್ನು ಅವಕಾಶ ಸಿಕ್ಕಾಗಲೆಲ್ಲ ನವ್ಯರ ಗುಂಪು ತೇಜೋವಧೆಗೆ ಪ್ರಯತ್ನಿಸುತ್ತಲೇ ಬಂದಿದೆ. ಇತ್ತೀಚಿನ ಉದಾಹರಣೆಯಾಗಿ ಅವರ 'ಆವರಣ' ಕೃತಿಯನ್ನು ವಿರೋಧಿಸಿ 'ಅನಾವರಣ' ಪುಸ್ತಕವನ್ನೇ ಬರೆದರು. ಆದರೆ ಭೈರಪ್ಪನವರು ಮಾತ್ರ ಈ ಎಲ್ಲ ಬೆಳವಣಿಗೆಗಳಿಂದ ದೂರ ನಿಂತು ಕನ್ನಡಕ್ಕೆ ಕ್ಲಾಸಿಕ್ ಕೃತಿಗಳನ್ನು ಕೊಡುತ್ತಲೇ ಇರುವರು.

ಸಾಹಿತ್ಯ ಭಂಡಾರದೊಂದಿಗಿನ ನಂಟು 


            ಭೈರಪ್ಪನವರ ಎಲ್ಲ ಕೃತಿಗಳನ್ನು ಪ್ರಕಟಿಸಿದ್ದು ಸಾಹಿತ್ಯ ಭಂಡಾರ ಪ್ರಕಾಶಕರು. ಭೈರಪ್ಪನವರ ಕಾದಂಬರಿಗಳಿಗೆ ಅತಿ ಬೇಡಿಕೆಯಿದ್ದು ಅನೇಕ ಪ್ರಕಾಶಕರು ಅವರ ಕೃತಿಗಳನ್ನು ಪ್ರಕಟಿಸಲು ಮುಂದೆ ಬಂದರೂ ಭೈರಪ್ಪನವರು ಮಾತ್ರ ಸಾಹಿತ್ಯ ಭಂಡಾರದೊಂದಿಗಿನ ತಮ್ಮ ನಿಷ್ಠೆಯನ್ನು ಮುರಿಯಲಿಲ್ಲ. ಅದಕ್ಕೆಂದೇ ಭೈರಪ್ಪನವರಿಗೂ ಮತ್ತು ಸಾಹಿತ್ಯ ಭಂಡಾರದ ಗೋವಿಂದ ರಾಯರಿಗೂ ನಡುವೆ ಲೇಖಕ ಮತ್ತು ಪ್ರಕಾಶಕನ ಸಂಬಂಧವನ್ನು ಮೀರಿದ ಅನ್ಯೋನ್ಯತೆ ಮನೆ ಮಾಡಿತ್ತು. ಭೈರಪ್ಪನವರು ತಮ್ಮ ಆತ್ಮಕಥೆ 'ಭಿತ್ತಿ'ಯಲ್ಲಿ ಸಾಹಿತ್ಯ ಭಂಡಾರ ಮತ್ತು ಗೋವಿಂದ ರಾಯರಿಗೆ ವಿಶೇಷ ಸ್ಥಾನ ನೀಡಿರುವರು. ನಿಜಕ್ಕೂ ಅವರಿಬ್ಬರ ನಡುವಣ ಅನ್ಯೋನ್ಯತೆ ಮತ್ತು ವ್ಯವಹಾರ ನಿಷ್ಠೆ ಇವತ್ತಿನ ಲೇಖಕರು ಮತ್ತು ಪ್ರಕಾಶಕರಿಗೆ ಅದೊಂದು ಮಾದರಿ.

         ಭೈರಪ್ಪನವರಿಗೆ ಗೋವಿಂದರಾಯರ ಪರಿಚಯವಾಗಿದ್ದು ಅವರ 'ಧರ್ಮಶ್ರೀ' ಕಾದಂಬರಿಯ ಪ್ರಕಟಣೆಯ ಸಂದರ್ಭ. ಯಾವ ಹೆಸರೂ ಇಲ್ಲದ ಲೇಖಕನನ್ನು ಮನೆ ಹುಡುಕಿಕೊಂಡು ಹೋಗಿ ಅವರ ಕಾದಂಬರಿಯನ್ನು ಪ್ರಕಟಿಸಿದ ಔದಾರ್ಯತೆ ಸಾಹಿತ್ಯ ಭಂಡಾರದ ಗೋವಿಂದರಾಯರದು. ಅವರ ಆ ಔದಾರ್ಯತೆಯೇ ಭೈರಪ್ಪನವರು ತಮ್ಮ ಎಲ್ಲ ಕೃತಿಗಳನ್ನು ಸಾಹಿತ್ಯ ಭಂಡಾರದ ಮೂಲಕವೇ ಪ್ರಕಟವಾಗುವಂತೆ ನೋಡಿಕೊಳ್ಳಲು ಕಾರಣವಾಯಿತು. ನಂತರದ ದಿನಗಳಲ್ಲಿ ಭೈರಪ್ಪನವರ ಜನಪ್ರಿಯತೆ ಹೆಚ್ಚಿ ಅವರ ಕಾದಂಬರಿಗಳ ಬೇಡಿಕೆ ಏರಿ ಅನೇಕ ಪ್ರಕಾಶಕರು ಹೆಚ್ಚಿನ ಸಂಭಾವನೆ ಕೊಡುವ ಪ್ರಲೋಭನೆ ಒಡ್ಡಿದಾಗಲೂ ಅವರು ಗೋವಿಂದ ರಾಯರೆಡೆಗಿನ ತಮ್ಮ ನಿಷ್ಠೆಯನ್ನು ಬದಲಿಸಲಿಲ್ಲ. ಗೋವಿಂದ ರಾಯರು ತಮ್ಮ ಮೊದಲ ಕಾದಂಬರಿಯನ್ನು ಪ್ರಕಟಿಸಿದರು ಎನ್ನುವುದರ ಜೊತೆಗೆ ಪುಸ್ತಕ ಪ್ರಕಾಶಕನದ ಬಗೆಗಿನ ಅವರಲ್ಲಿದ್ದ ಕಾಳಜಿ, ಪ್ರಾಮಾಣಿಕತೆ, ಖರೀದಿಸಿ ಓದುವ ಓದುಗರಿಗೆ ಮೋಸ ಮಾಡಬಾರದೆನ್ನುವ ಮನೋಭಾವ ಈ ಗುಣಗಳೇ ಭೈರಪ್ಪನವರಿಗೆ ಗೋವಿಂದ ರಾಯರ ಬಗೆಗಿನ ನಿಷ್ಠೆಗೆ ಕಾರಣಗಳಾದವು.

           ಈ ನಡುವೆ ಭೈರಪ್ಪನವರು ಸಂಬಳವಿಲ್ಲದೆ ರಜೆ ಹಾಕಿ 'ಪರ್ವ' ಬರೆಯಲು ನಿರ್ಧರಿಸುತ್ತಾರೆ. ಸಂಬಳವಿಲ್ಲದೆ ಸಂಸಾರದ ಖರ್ಚು ವೆಚ್ಚಗಳನ್ನು ತೂಗಿಸುವುದಾದರೂ ಹೇಗೆ ಎನ್ನುವ ಸಮಸ್ಯೆ ಎದುರಾದಾಗ ಗೋವಿಂದ ರಾಯರು ಅವರ ನೆರವಿಗೆ ಬರುತ್ತಾರೆ. ಭೈರಪ್ಪನವರು ರಜೆಯಿಂದ ಕೆಲಸಕ್ಕೆ ಹಿಂದಿರುಗುವವರೆಗೂ ಅವರ ಸಂಸಾರ ನಿರ್ವಹಣೆಗೆ ಅಗತ್ಯದ ಹಣವನ್ನು ಪ್ರತಿತಿಂಗಳೂ ತಪ್ಪದೆ ತಲುಪಿಸುತ್ತಾರೆ. ಲೇಖಕನ ಸೃಜನಶೀಲತೆ ಮುಕ್ಕಾಗದಂತೆ ಕಾಯ್ದುಕೊಳ್ಳುವ ಈ ಪ್ರವೃತ್ತಿ ಇವತ್ತಿನ ಪ್ರಕಾಶಕರಲ್ಲಿ ಇಲ್ಲದಿರುವುದು ಅತ್ಯುತ್ತಮ ಪುಸ್ತಕಗಳ ಕೊರತೆಗೆ ಬಹುಮುಖ್ಯ ಕಾರಣವಾಗಿದೆ. 'ದಾಟು' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಗೋವಿಂದ ರಾಯರು ಸಂಭ್ರಮದಿಂದ ಮನೆಯಲ್ಲಿ ಹಬ್ಬ ಆಚರಿಸುವರು. ಆ ನೆನಪಿಗಾಗಿ ಸಾಹಿತ್ಯ ಪರಿಷತ್ತಿಗೆ ಹಣವನ್ನು ದೇಣಿಗೆಯಾಗಿ ನೀಡುವರು. ಭೈರಪ್ಪನವರೂ ಸಹ ಗೋವಿಂದ ರಾಯರೊಂದಿಗಿನ ವ್ಯವಹಾರಕ್ಕೆ ಯಾವುದೇ ಧಕ್ಕೆಯಾಗದಂತೆ ನಡೆದು ಕೊಳ್ಳುವರು. ಭೈರಪ್ಪನವರು ತಮ್ಮ ಆತ್ಮಕಥೆಯನ್ನು ಬರೆಯಲು ಮುಂದಾಗುವುದು ಕೂಡ ಗೋವಿಂದ ರಾಯರ ಪ್ರೀತಿಯ ಒತ್ತಾಯದಿಂದಲೇ. ಗೋವಿಂದ ರಾಯರ ಸಾವಿನ ನಂತರ   ಹಿರಿಯ ಜೀವವೊಂದನ್ನು ಕಳೆದುಕೊಂಡ ಅನಾಥ ಪ್ರಜ್ಞೆ ಕಾಡಲಾರಂಭಿಸುತ್ತದೆ. ಆ ಅನಾಥ ಪ್ರಜ್ಞೆಯನ್ನು ಭೈರಪ್ಪನವರು ಹೀಗೆ ವಿವರಿಸುತ್ತಾರೆ 'ಸಾವಿನ ಆ ಕ್ಷಣ ಗೋವಿಂದರಾಯರಿಗೆ ಎಂಬತ್ತೇಳು. ವಯಸ್ಸಿನಿಂದ ಮಾತ್ರವಲ್ಲ ಭಾವನಾತ್ಮಕವಾಗಿ ಅವರು ನನಗೆ ಹಿರಿಯರಾಗಿದ್ದರು. ಕೆಲವು ಗಟ್ಟಿ ಮೌಲ್ಯಗಳ ಜೀವಂತ ಪ್ರತ್ಯಕ್ಷವಾಗಿದ್ದರು. ನನಗೂ ಸಾವಿಗೂ ನಡುವಣ ಮರೆಯಾಗಿದ್ದರು. ಅವರು ಹೋದ ನಂತರ ಆತ್ಮೀಯ ವರ್ತುಲದಲ್ಲಿ ನನಗೆ ಹಿರಿಯರೆಂದು ನಾನು ಭಾವಿಸಬಹುದಾದ ಬೇರಾವ ವ್ಯಕ್ತಿಯೂ ಇಲ್ಲ. ಆ ನಡುವಣ ಮರೆಯು ಹೊರಟು ಹೋಗಿ ಇನ್ನು ನಾನೇ ಹಿರಿಯ ಎಂಬ ಸರದಿಯ ಭಾವನೆಯು ತುಂಬಿಕೊಂಡಿತು'.

          ಪುಸ್ತಕದ ಅಲ್ಲಲ್ಲಿ ಇನ್ನೂ ಅನೇಕ ಸಂಗತಿಗಳು ಓದಲು ಸಿಗುತ್ತವೆ. ತಂಗಿ ಲಲಿತಳ ಬದುಕನ್ನು ಒಂದು ದಡಕ್ಕೆ ಮುಟ್ಟಿಸಿದ್ದು, ಅಪ್ಪನ ಸಾವು, ಚಿಕ್ಕಪ್ಪನಿಗೆ ನೀಡಿದ ನೆರವು, ವಿದೇಶ ಪ್ರವಾಸ, ಗುಜರಾತಿನಿಂದ ದೆಹಲಿ ಮತ್ತು ದೆಹಲಿಯಿಂದ ಮೈಸೂರಿಗೆ ಬಂದು ನೆಲೆಸಿದ್ದು, ನಿವೃತ್ತಿಯ ದಿನ ಭಾವನೆಗಳನ್ನು ಹಿಡಿದಿಡಲು ಆಗದೆ ಅತ್ತಿದ್ದು ಹೀಗೆ ಅನೇಕ ಸಂಗತಿಗಳ ಸ್ವಾರಸ್ಯಪೂರ್ಣ ಓದು ಪುಸ್ತಕದುದ್ದಕ್ಕೂ ಹೇರಳವಾಗಿ ಲಭಿಸುತ್ತದೆ.

ಕೊನೆಯ ಮಾತು 


            ವ್ಯಕ್ತಿಯೊಬ್ಬನ ಕುರಿತು ಬರೆಯಲು ಹೊರಟರೆ ಅದು ಸಮಾಜದ ಚರಿತ್ರೆಯಾಗುತ್ತದೆ ಎನ್ನುವ ಮಾತಿದೆ.  ಈ ಮಾತಿಗೆ ಪುಷ್ಟಿಕೊಡುವಂತೆ ಅನೇಕ ಆತ್ಮಕಥನಗಳು ಪ್ರಕಟವಾಗಿವೆ. ಅಲ್ಲೆಲ್ಲ ಕಥಾನಾಯಕ ನೇಪಥ್ಯಕ್ಕೆ ಸರಿದು ಸಾಮಾಜಿಕ ಸಮಸ್ಯೆಗಳು ಮುಖ್ಯ ಭೂಮಿಕೆಗೆ ಬರುತ್ತವೆ. ಹಾಗೆಂದ ಮಾತ್ರಕ್ಕೆ ಅಲ್ಲಿನ ಕಥಾನಾಯಕ ಪರ್ಯಾಯ ವ್ಯವಸ್ಥೆಯನ್ನೇನೂ ತೋರಿಸಲಾರ. ಇಂಥ ಆತ್ಮಕಥೆಯನ್ನು ಬರೆಯುವ ವ್ಯಕ್ತಿಗೆ ಸಾಮಾಜಿಕ ಸಮಸ್ಯೆಗಳು ಶಾಶ್ವತವಾಗಿದ್ದರೆ ಮಾತ್ರ ಆತನ ಬರವಣಿಗೆಗೆ ಹೇರಳ ಫಸಲು ಲಭ್ಯ. ಇಂಥದ್ದೊಂದು ತಕರಾರು ಅನೇಕ ಓದುಗರದು. ಆದರೆ ಭೈರಪ್ಪನವರ 'ಭಿತ್ತಿ' ಯಾವ ಸಾಮಾಜಿಕ ಅವಲಕ್ಷಣಗಳ ಸುತ್ತ ಸುತ್ತದೆ ಅವರ ವೈಯಕ್ತಿಕ ಬದುಕನ್ನೇ ಕೇಂದ್ರವಾಗಿಟ್ಟುಕೊಂಡು ರಚನೆಯಾದ ಆತ್ಮಕಥನ. ಇಲ್ಲೂ ಕೆಲವೊಂದು ಸಣ್ಣತನಗಳ ಮೇಲೆ ಬೆಳಕು ಚೆಲ್ಲಲಾಗಿದೆಯಾದರೂ ಆ ಎಲ್ಲ ಸಮಸ್ಯೆಗಳು ಭೈರಪ್ಪನವರ ಸಂಪರ್ಕಕ್ಕೆ ಬಂದು ಅನಾವರಣಗೊಳ್ಳುತ್ತವೆ. ಈ ಆತ್ಮಕಥನವನ್ನು ಓದಿದ ನಂತರ ಭೈರಪ್ಪನವರ ಬದುಕು ಮತ್ತು ಬರಹ ಆದರ್ಶಪ್ರಾಯವಾಗಿ ನಿಲ್ಲುತ್ತವೆ. ಓದುಗರು ತಮ್ಮ ಹಿರಿಯರಿಂದ ನಿರೀಕ್ಷಿಸುವುದು ಕೂಡ ಇದನ್ನೇ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ  



     

Monday, December 2, 2013

ಮೈನಾ: ಒಂದು ಸುಂದರ ದೃಶ್ಯ ಕಾವ್ಯ



     







       



                ಮೊನ್ನೆ 'ಮೈನಾ' ಎನ್ನುವ ಕನ್ನಡ ಸಿನಿಮಾ ನೋಡಿದೆ. ಹಲವು ದಿನಗಳ ನಂತರ ನೋಡಿದ ಉತ್ತಮ ಕನ್ನಡ ಸಿನಿಮಾವಿದು.  ಇಲ್ಲಿ ನಾನು ಉತ್ತಮ ಸಿನಿಮಾ ಎಂದು  ಹೇಳಲು ಕಾರಣ ಈ ದಿನಗಳಲ್ಲಿ ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಕುಳಿತು ನೋಡುವಂಥ ಸದಭಿರುಚಿಯ ಸಿನಿಮಾಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇಂಥದ್ದೊಂದು ನಿರಾಸೆಯ ನಡುವೆಯೂ 'ಮೈನಾ' ದಂಥ ಸಿನಿಮಾಗಳ ನಿರ್ಮಾಣ ಅದೊಂದು ಆಶಾದಾಯಕ ಬೆಳವಣಿಗೆ ಎನ್ನಬಹುದು. ಜೊತೆಗೆ ಇಂಥ ಸಿನಿಮಾಗಳಿಗೆ ಪ್ರೇಕ್ಷಕರಿಂದ ದೊರೆಯಬೇಕಾದ ಉತ್ತೇಜನ ಮತ್ತು ಪ್ರೋತ್ಸಾಹ ದೊರೆಯದಿರುವುದು ವಿಪರ್ಯಾಸದ ಸಂಗತಿ. ಈ ವಿಷಯದಲ್ಲಿ ನಮ್ಮ ಕನ್ನಡದ ಸಿನಿಮಾ ಪ್ರೇಕ್ಷಕ ವರ್ಗ ನೆರೆಯ ತಮಿಳು ಮತ್ತು ಮಲೆಯಾಳಿ ಸಿನಿಮಾಗಳ ಪ್ರೇಕ್ಷಕರಿಂದ ಕಲಿಯ ಬೇಕಾದದ್ದು ಬಹಳಷ್ಟಿದೆ. ಇರಲಿ ಈಗ ನಾನು ಮತ್ತೆ 'ಮೈನಾ' ಚಿತ್ರದ ವಿಷಯಕ್ಕೆ ಬರುತ್ತೇನೆ. ಹಾಸ್ಯನಟನಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಾಗಶೇಖರ ಅವರ ನಿರ್ದೇಶನದ ಮೂರನೇ ಸಿನಿಮಾವಿದು. ಈ ಮೊದಲು 'ಅರಮನೆ' ಮತ್ತು 'ಸಂಜು ವೆಡ್ಸ್ ಗೀತಾ' ಸಿನಿಮಾಗಳನ್ನು ನಿರ್ದೇಶಿಸಿ ಗಾಂಧಿ ನಗರದ ನಿರ್ಮಾಪಕರಿಂದ ಮತ್ತು ಕನ್ನಡದ ಪ್ರೇಕ್ಷಕರಿಂದ ಸೈ  ಎನಿಸಿಕೊಂಡ ನಿರ್ದೇಶಕನೀತ. 'ಅರಮನೆ' ಮತ್ತು 'ಸಂಜು ವೆಡ್ಸ್ ಗೀತಾ' ಎರಡೂ ವಿಭಿನ್ನ ಕಥೆಯ ಸಿನಿಮಾಗಳು. ಅವರ ನಿರ್ದೇಶನದ 'ಮೈನಾ' ಕೂಡ ಮೊದಲೆರಡು ಸಿನಿಮಾಗಳಿಂದ ವಿಭಿನ್ನವಾಗಿದ್ದರೂ ಕಥೆಯ ಜೀವಾಳ ಮಾತ್ರ ಮನುಷ್ಯ ಸಂಬಂಧಗಳೇ.

         ಪೋಲೀಸ್ ಇಲಾಖೆಯ ದಾಖಲೆಗಳಲ್ಲಿ ಸರಣಿ ಹಂತಕನೆಂದೇ ಖ್ಯಾತನಾದ ಸತ್ಯನನ್ನು ಚೆನ್ನೈನ ಸಮುದ್ರ ತೀರದಲ್ಲಿ ಕರ್ನಾಟಕದ ಪೋಲಿಸರು ಬಂಧಿಸುವುದರೊಂದಿಗೆ 'ಮೈನಾ' ಸಿನಿಮಾದ ಕಥೆ ಪ್ರಾರಂಭವಾಗುತ್ತದೆ. ಈ ಅಪಾದಿತನೆ ಸಿನಿಮಾದ ನಾಯಕ ಕೂಡ ಹೌದು. ಅವನನ್ನು ಬಂಧಿಸಿರುವ ಪೋಲೀಸ್ ಅಧಿಕಾರಿಗೆ ಸತ್ಯನನ್ನು ಕಂಡರೆ ಒಂದಿಷ್ಟು ಪ್ರೀತಿ ಜೊತೆಗೆ ವಿಶ್ವಾಸ ಕೂಡ ಇದೆ. ಆ ವಿಶ್ವಾಸವೇ ಸತ್ಯನ  ಬದುಕಿನ  ಕಥೆ ಬಿಚ್ಚಿಕೊಳ್ಳಲು ಕಾರಣವಾಗುತ್ತದೆ. ಸತ್ಯ ರೀಯಾಲಿಟಿ ಷೋ ಒಂದರಲ್ಲಿ ಭಾಗವಹಿಸಲು ಬೆಳಗಾವ ಮತ್ತು ಗೋವಾ ಮಧ್ಯದಲ್ಲಿರುವ ದೂದ ಸಾಗರ ರೈಲು ನಿಲ್ದಾಣಕ್ಕೆ ಬಂದಿಳಿದಿರುವ ಹುಡುಗ. ಯಾರಿಗೂ ಕೇಡು ಬಗೆಯದ ತಾನಾಯಿತು ತನ್ನ ಬದುಕಾಯಿತು ಎನ್ನುವಂತ ಅಮಾಯಕ ಹುಡುಗನಾತ.  ರೀಯಾಲಿಟಿ ಷೋ ನಲ್ಲಿ ಗೆದ್ದು ಬರುವ ಹಣದಿಂದ ಬೆಂಗಳೂರಿನಲ್ಲಿ ಒಂದು ಸ್ವಂತದ  ಜಿಮ್ ಪ್ರಾರಂಭಿಸಬೇಕೆನ್ನುವ ಆಸೆ ಸತ್ಯನದು. ಜೊತೆಗೆ  ಅಪ್ಪ ಅಮ್ಮನ ಕನಸುಗಳು ಅವನ ಈ ಆಸೆಗೆ ನೀರೆರೆಯುತ್ತವೆ.

            ಷೋ ನ ಎರಡನೇ ದಿನವೇ ಅವನಿಗೆ ರೈಲಿನಲ್ಲಿ ನಾಯಕಿಯ ಭೇಟಿಯಾಗುತ್ತದೆ.  ಕಾಲಿಲ್ಲದ ಅಂಗವಿಕಲ ಬಿಕ್ಷುಕನಂತೆ ವೇಷಧರಿಸಿ  ಬಿಕ್ಷೆ ಬೇಡುತ್ತ ಹೋಗುತ್ತಿದ್ದವನನ್ನು ನಾಯಕಿಯ  ಸ್ನಿಗ್ಧ ಸೌಂದರ್ಯ ಒಂದು ಕ್ಷಣ ಹಿಡಿದು ನಿಲ್ಲಿಸುತ್ತದೆ. ಕಿಟಕಿಯ ಪಕ್ಕ ಕುಳಿತು ನಿಸರ್ಗದ ಚೆಲುವನ್ನು ಸವಿಯುತ್ತಿದ್ದ  ಅವಳೋ ಸೌಂದರ್ಯದೊಂದಿಗೆ ಸ್ಪರ್ಧೆಗಿಳಿದಂತೆ ಕಾಣುವ  ಚೆಲುವೆ.  ಅವಳ ಆ ನಗು ಹಾಲು ಚೆಲ್ಲಿದ ಬೆಳ್ಳನೆಯ  ಬೆಳದಿಂಗಳು. ಬಿಕ್ಷೆಗಾಗಿ ಕೈ ಮುಂದೆ ಚಾಚಿದವನ ಕೈಗೆ ನೂರರ ನೋಟನ್ನಿತ್ತು ತನ್ನ ಮಂದ ಸ್ವರದಲ್ಲಿ ನುಡಿಯುತ್ತಾಳೆ 'ಇದು ನಾನು ಕಷ್ಟ ಪಟ್ಟು ದುಡಿದ ಹಣ. ದಯವಿಟ್ಟು misuse ಮಾಡ್ಬೇಡಿ'. ರೈಲಿನಿಂದ ಕೆಳಗಿಳಿದವನಿಗೆ ಪ್ರಪಂಚವನ್ನೇ ಗೆದ್ದ  ಪುಟ್ಟ ಮಗುವಿನ  ಸಂಭ್ರಮ.

            ಆ ರೀಯಾಲಿಟಿ ಷೋ ನಲ್ಲಿ ಎರಡು ತಂಡಗಳಿವೆ. ಸಿನಿಮಾದ ನಾಯಕ ಸತ್ಯನ ತಂಡ ಆ ದಿನ ಗಳಿಸಿದ ಹಣ ಎದುರಾಳಿ ತಂಡಕ್ಕಿಂತ ಒಂದಿಷ್ಟು ಕಡಿಮೆ. ಸತ್ಯನ ಹತ್ತಿರ ನೂರು ರುಪಾಯಿಗಳಿವೆ ಎಂದು ಆ ಕಾರ್ಯಕ್ರಮದ ನಿರೂಪಕನಿಗೆ  ಗೊತ್ತು. ಆ ಹಣವನ್ನು ಸೇರಿಸಿದಲ್ಲಿ ಸತ್ಯನ ತಂಡ ಅವತ್ತಿನ ಸ್ಪರ್ಧೆಯಲ್ಲಿ ಗೆಲ್ಲುವುದು ಗ್ಯಾರಂಟಿ. ಆ ಗುಂಪಿಗೂ ಗೆಲುವು ಬೇಕಿದೆ. ಯಾರು ಎಷ್ಟೇ ಒತ್ತಾಯ ಮಾಡಿದರೂ ಸತ್ಯ ತನ್ನಲ್ಲಿರುವ ಆ ಸ್ನಿಗ್ಧ ಸೌಂದರ್ಯದ ಚೆಲುವೆ ಕೊಟ್ಟಿರುವ  ಹಣ ಬಳಸಿಕೊಳ್ಳಲು ಸಿದ್ಧನಿಲ್ಲ. ಅದು ಅವನಿಗೆ ಹಣಮಾತ್ರವಲ್ಲ. ಅದವಳ ನೆನಪು ತನ್ನ ಪ್ರಿಯತಮೆಯ ಒಲವಿನ ಉಡುಗೊರೆ. ಆ  ಮಧುರ ನೆನಪನ್ನು ಕಳೆದುಕೊಳ್ಳಲು ಅವನ ಮನಸ್ಸು ಒಪ್ಪುತ್ತಿಲ್ಲ. ತನ್ನ ಪ್ರೀತಿಗಾಗಿ ಕೊನೆಗೂ ಸತ್ಯ ರೀಯಾಲಿಟಿ ಷೋನಿಂದ ಹೊರಬರುತ್ತಾನೆ. ಹೀಗೆ ಹೊರಬಂದವನಿಗೆ ತನ್ನ ಪ್ರಿಯತಮೆಯನ್ನು ಕಾಣುವ ಅವಳಲ್ಲಿ ತನ್ನ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳುವ ತವಕ. ಅವನಿಗೆ ಗೊತ್ತಿದೆ ಅವಳು ಪ್ರತಿದಿನ ತಾನು ಬಿಕ್ಷೆ ಬೇಡಿದ ರೈಲಿನಲ್ಲೇ ದಿನಕ್ಕೆ ಎರಡು ಬಾರಿ ಸಂಚರಿಸುತ್ತಾಳೆಂದು.

           ಮರುದಿನ ಸತ್ಯ ಮತ್ತದೇ ರೈಲಿನ ಅವಳಿದ್ದ ಭೋಗಿಯಲ್ಲಿ ಆಕೆಯನ್ನು ಕಾಣಲು ಬರುತ್ತಾನೆ.  ದಿನಪತ್ರಿಕೆ ಮಾರುವವನಾಗಿ ತೆವಳುತ್ತ  ಅವಳಿದ್ದಲ್ಲಿಗೆ ಬಂದವನನ್ನು   ಕರೆದು ಪತ್ರಿಕೆ ಕೊಳ್ಳುತ್ತಾಳೆ. ಅವಳ ಕಣ್ಣ ಮೆಚ್ಚುಗೆಗಾಗಿ ಕಾದವನಿಗೆ ಅವಳು ನಿರಾಸೆ ಮಾಡಲಾರಳು. ಇಬ್ಬರದೂ  ಪ್ರೀತಿಗಾಗಿ  ಹಂಬಲಿಸುವ ಹೃದಯ. ಸತ್ಯನ ಒಡನಾಟದಿಂದ  ಅವಳಿಗೆ ಬದುಕು  ಅದು  ಬಣ್ಣಗಳ ಚಿತ್ತಾರ ಎಂದೆನಿಸುತ್ತದೆ. ಹಸಿರುಹೊದ್ದು ಮಲಗಿರುವ ಬೆಟ್ಟಗಳ ನಡುವೆ ಭೋರ್ಗರೆದು ಹರಿಯುತ್ತ ನದಿ ವಸುಂಧರೆಯ ಒಡಲು ಸೇರುತ್ತಿರುವ ಆ ನಿರ್ಜನ ತಾಣದಲ್ಲಿ ತನ್ನ ಪ್ರಿಯತಮೆಯ ವರ್ಣನೆಯನ್ನು ಆಲಿಸಲು ಸತ್ಯನಿಗೂ ಒಬ್ಬ ಜೊತೆಗಾರ ಬೇಕು. ಮನುಷ್ಯ ತನ್ನ ದುಃಖಕ್ಕೆ ಕಿವಿಯಾಗುವವರಿಗಿಂತ ತನ್ನ ಸಂತಸಕ್ಕೆ ಕಿವಿಯಾಗುವವರಿಗಾಗಿ ಹಂಬಲಿಸುತ್ತಾನೆ. ಇದು ಮನುಷ್ಯ ಸಹಜ ಸ್ವಭಾವ. ಸತ್ಯನ ಸಂತಸವನ್ನು ಹಂಚಿಕೊಳ್ಳಲು ಅಲ್ಲೊಂದು ಪಾತ್ರವನ್ನು ಸೃಷ್ಟಿಸಲಾಗಿದೆ. ಆತ ಸತ್ಯನ ಪ್ರೀತಿಗೆ ಸಾಕ್ಷಿಯಾಗುತ್ತಾನೆ. ಅವನ ಸಂತೋಷದಲ್ಲಿ ಭಾಗಿಯಾಗುತ್ತಾನೆ ಸಂಕಟದಲ್ಲಿ ನೆರವಾಗುತ್ತಾನೆ. ಹಿರಿಯಣ್ಣನಂತೆ ಬುದ್ದಿ ಹೇಳುತ್ತಾನೆ. ಪ್ರೀತಿಯ ಏಕತಾನತೆ ಪ್ರೇಕ್ಷಕನಿಗೆ ಕಾಡದಿರಲೆಂದು ನಕ್ಕು ನಗಿಸಲು ಅಲ್ಲೊಂದು ಕುರುಡು ಬಿಕ್ಷುಕನ  ಪಾತ್ರವಿದೆ. ನಿಜವಾದ ಸಂಗತಿಯೆಂದರೆ ಆತನದೂ  ಚಿತ್ರದ ನಾಯಕ ಸತ್ಯನಂತೆ ನಟನೆಯ ಕುರುಡುತನ. ಒಬ್ಬನ ನಟನೆ ಪ್ರೀತಿಗಾಗಿ ಇನ್ನೊಬ್ಬನದು ಎರಡ್ಹೊತ್ತಿನ ಹಿಡಿ ಅನ್ನಕ್ಕಾಗಿ. ಆ ಎರಡೂ ನಟನೆಗಳನ್ನು ಪ್ರೇಕ್ಷಕರು ಸಮೀಕರಿಸಿ ನೋಡಲೆಂದೇ ನಿರ್ದೇಶಕರು ಅತಿ ಜಾಣ್ಮೆಯಿಂದ ಸೃಷ್ಟಿಸಿರುವ ಪಾತ್ರವಿದು.

          ಈ ನಡುವೆ ನಾಯಕ ನಾಯಕಿಯರ ನಡುವೆ ಪ್ರೀತಿಯ ವಿನಿಮಯವಾಗುತ್ತದೆ. ಎಲ್ಲ ಪ್ರೇಮಿಗಳಂತೆ ಅವರು ಪ್ರೀತಿಯನ್ನು ಐ ಲವ್ ಯು ಎನ್ನುವ ಅರ್ಥ ಕಳೆದುಕೊಂಡ ಶಬ್ದಗಳಲ್ಲಿ ಹೇಳಲಾರರು. ಅದಕ್ಕವರಿಟ್ಟ ಹೆಸರು ಕಲರ್ ಫುಲ್ ಎಂದು. ಇಬ್ಬರೂ ಒಬ್ಬರನ್ನೊಬ್ಬರು ನೋಡಿ ಕಲರ್ ಫುಲ್ ಎಂದು ಹೇಳಿದ ಸಂದರ್ಭಗಳೆಷ್ಟೋ. ನಾಯಕನ ಕನಸುಗಳಲ್ಲಿ ನಾಯಕಿ ಮತ್ತು ನಾಯಕಿಯ ಮಧುರ ನೆನಪುಗಳಲ್ಲಿ ನಾಯಕ ಇಬ್ಬರೂ ಕೈ ಕೈ ಹಿಡಿದು ಹಾಡುತ್ತಾರೆ ಕುಣಿಯುತ್ತಾರೆ. ಈ ಪ್ರೇಮದ ಪರವಶತೆಯಲ್ಲೇ ಅವಳ ಕೋಗಿಲೆಯ ಕಂಠ  ತನ್ಹೇಸರು 'ಮೈನಾ' ಎಂದು ಉಲಿಯುತ್ತದೆ. ಮುಂದೇನಾಗುತ್ತದೆ ಎಂದು ಉಸಿರು ಬಿಗಿ ಹಿಡಿದು ನೋಡುವ ಸರದಿ ಪ್ರೇಕ್ಷಕನದು. ಏಕೆಂದರೆ ಆ ಪ್ರೀತಿಯ ಹುಡುಗಿ ಮೈನಾಗೆ ಗೊತ್ತಿಲ್ಲ ತಾನು ಪ್ರೀತಿಸುತ್ತಿರುವ ಹುಡುಗ ಕಾಲಿಲ್ಲದ ನಾಟಕ ಆಡುತ್ತಿರುವ ಸುಳ್ಳುಗಾರನೆಂದು. ಸುಳ್ಳನ್ನು ಸತ್ಯವೆಂದು ಆ ಕ್ಷಣಕ್ಕೆ ನಂಬಿಸಬಹುದಾದರೂ ಅದನ್ನು ಕೊನೆಯವರೆಗೂ ನಂಬಿಸುವುದು ಸತ್ಯನಂಥ ಪ್ರೀತಿಯ ಹುಡುಗನಿಗೂ ಸಾಧ್ಯವಿಲ್ಲ. ಕೊನೆಗೂ ಆ ಸುಳ್ಳಿಗೊಂದು ತೆರೆ ಬೀಳುವ ಸಂದರ್ಭ ಎದುರಾಗುತ್ತದೆ.

          ಪ್ರತಿದಿನದಂತೆ ಆ ದಿನವೂ ಸತ್ಯ ಅವಳೆದುರು ಕುಳಿತು ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಾನೆ. ಆಕೆ ತನ್ನ ಪ್ರಿಯತಮನ ಮಾತುಗಳಿಗಾಗಿ ಕಾತರಿಸುತ್ತ  ಅವನ ಕಣ್ಣುಗಳಲ್ಲಿನ  ತನ್ನ ಪ್ರತಿಬಿಂಬವನ್ನು ಹುಡುಕುತ್ತಿದ್ದಾಳೆ. ಇಬ್ಬರೂ  ಒಬ್ಬರನ್ನೊಬ್ಬರು ನೋಡುತ್ತ ಪ್ರಪಂಚವನ್ನೇ ಮರೆತ ಕ್ಷಣವದು. ಇದೇ ಸಮಯವೆಂದು ಹೊಂಚು ಹಾಕಿದ ಕಳ್ಳ ಅವಳ ಬ್ಯಾಗಿನೊಂದಿಗೆ ಓಟ ಕೀಳುತ್ತಾನೆ. ಇಬ್ಬರೂ ವಾಸ್ತವಕ್ಕೆ ಮರಳಿದಾಗ ನಡೆದ ಅನಾಹುತದ ಅರಿವಾಗುತ್ತದೆ. ಸತ್ಯ ರೈಲಿನಿಂದ ಹೊರ ಜಿಗಿದು ಕಳ್ಳನನ್ನು ಬೆನ್ನಟ್ಟಿ ಬ್ಯಾಗನ್ನು ಮರಳಿ ತರುತ್ತಾನೆ. ಅದುವರೆಗೂ ತಾನು ನಂಬಿದ್ದು ಸುಳ್ಳೆಂದು ನಾಯಕಿಗೆ ಅರಿವಾಗುತ್ತದೆ. ನಾಯಕನ ಪ್ರೀತಿಯನ್ನು ತಿರಸ್ಕರಿಸಿ  ಆಕೆ ತೆವಳುತ್ತ ಸಾಗುವ ದೃಶ್ಯ ಆ ಕ್ಷಣಕ್ಕೆ ಇಡೀ ಪ್ರೇಕ್ಷಕ ಸಮೂಹವನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಚಿತ್ರದ ನಾಯಕಿ ಮೈನಾ ಅಂಗವಿಕಲೆ. ಪೋಲಿಯೋ ದಿಂದ ತನ್ನೆರಡೂ ಕಾಲುಗಳನ್ನು ಕಳೆದುಕೊಂಡಿರುವ ಅವಳಿಗೆ ನಡೆಯಲು ಬಾರದು ಎನ್ನುವ ಸತ್ಯವನ್ನು ಒಪ್ಪಿಕೊಳ್ಳಲು ಕೆಲವು ಕ್ಷಣಗಳೇ ಬೇಕಾಗುತ್ತವೆ. ಸುಳ್ಳು ಹೇಳಿ ತನ್ನ ಪ್ರೀತಿ ಗಿಟ್ಟಿಸಿದ ನಾಯಕನ ಪ್ರೀತಿಯನ್ನು ಮೈನಾ ತಿರಸ್ಕರಿಸುತ್ತಾಳೆ. ನಿನ್ನನ್ನು ಪ್ರೀತಿಸುತ್ತೇನೆ ಎಂದ ಸತ್ಯನ ಮಾತಿಗೆ ಮೈನಾ ಅನುಕಂಪದ ಪ್ರೀತಿ ನನಗೆ ಬೇಕಿಲ್ಲ ಎಂದುತ್ತರಿಸುತ್ತಾಳೆ. ನಿನಗೆ ಕಾಲಿಲ್ಲದ ವಿಷಯ ನನಗೆ ಮೊದಲೇ ಗೊತ್ತಿತ್ತು ಎಂದು ಆತ ನುಡಿದಾಗ ಮತ್ತೊಮ್ಮೆ ಅಚ್ಚರಿ ಪಡುವ ಸರದಿ ಪ್ರೇಕ್ಷಕರದು. ತನ್ನ ಪ್ರೀತಿಯ ಪ್ರಾರಂಭದಲ್ಲಿ ಅದೊಂದು ದಿನ ಅವಳನ್ನು ಹಿಂಬಾಲಿಸಿ ಹೋದ ಸತ್ಯನಿಗೆ ಆಕೆ ಅಂಗವಿಕಲೆ ಎಂದು ಗೊತ್ತಾಗುತ್ತದೆ. ಆದರೆ ಆತ ಪ್ರೀತಿಸುವುದು ಅವಳ ದೈಹಿಕ ಸೌಂದರ್ಯವನ್ನಲ್ಲ. ಬದುಕಿನುದ್ದಕ್ಕೂ ನಾನು ನಿನ್ನ ಜೊತೆಗಿರುವೆ ಎಂದು ಅಭಯ ನೀಡಿದ ಆ ಘಳಿಗೆ ಮೈನಾ ಸತ್ಯನ ಪ್ರೀತಿ ಎದುರು ಸೋಲುತ್ತಾಳೆ. ನಿಜಸ್ಥಿತಿಯನ್ನು ನಂತರ ತಿಳಿದು ನಾಯಕ ನಾಯಕಿಯನ್ನು ಪ್ರೀತಿಸಲು ಮುಂದಾಗಿದ್ದರೆ ಅದು ಅನುಕಂಪದ ಪ್ರೀತಿಯಾಗುತ್ತಿತ್ತು. ಆದ್ದರಿಂದ ಇಂಥದ್ದೊಂದು ಸಮಸ್ಯೆಯಿಂದ ಪಾರಾಗುವಲ್ಲಿ ನಿರ್ದೇಶಕರು ಜಾಣ್ಮೆ ಮೆರೆದಿದ್ದಾರೆ. ಸತ್ಯನಿಗೆ ಮೈನಾಳ ಪರಿಸ್ಥಿತಿಯನ್ನು ಮೊದಲೇ ಪರಿಚಯಿಸಿ ಇಲ್ಲಿ ಪ್ರೀತಿಯನ್ನು ಗೆಲ್ಲಿಸಿದ್ದಾರೆ. ಸತ್ಯ ಮತ್ತು ಮೈನಾ ಒಂದಾಗುವುದನ್ನು ಕುರುಡನಂತೆ ನಟಿಸುವ ಬಿಕ್ಷುಕ ದೂರದಲ್ಲಿ ನಿಂತು ನೋಡುವ ದೃಶ್ಯ ಆ ಸನ್ನಿವೇಶಕ್ಕೆ ಸಂದರ್ಭೋಚಿತವಾಗಿದೆ.

      ಸಿನಿಮಾದಲ್ಲಿ  ಸತ್ಯ ಮತ್ತು ಮೈನಾಳ ಪ್ರೀತಿಗೆ ಅಡ್ಡಿಯುಂಟು ಮಾಡುವ ವಿಲನ್ ಗಳಿಲ್ಲ. ಮದುವೆಯಾಗಿ ಆ ಯುವಜೋಡಿ ದೂರದ ಬೆಂಗಳೂರಿನಲ್ಲಿ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಸತ್ಯನಿಗಿರುವುದು ಒಂದೇ ಆಸೆ ತನ್ನ ಪ್ರೀತಿಯ ಹುಡುಗಿ ಎಲ್ಲರಂತೆ ನಡೆಯುವಂತಾಗಬೇಕು. ಆದರೆ ಅವಳಿಗೋ ನಾನೆಲ್ಲಿ ತನ್ನ ಪ್ರೀತಿಯ ಹುಡುಗನ ತೋಳ ತೆಕ್ಕೆಯಿಂದ ದೂರಾಗುವೇನೋ  ಎನ್ನುವ ಆತಂಕ. ಈ ಕೈ ಹಿಡಿದು ನಡೆಸುವ, ಮಗುವಿನಂತೆ ತೋಳುಗಳಲ್ಲಿ ಎತ್ತಿಕೊಳ್ಳುವ ಮಧುರ ಅನುಭವ ಇವೆಲ್ಲ ನಾಳೆಯಿಂದ ಬರೀ ನೆನಪುಗಳಾಗಿ ಉಳಿಯುವ ಬೇಸರ ಅವಳದು. ಆದರೆ ಸತ್ಯನ ಪ್ರೀತಿಯೇದುರು ಅವಳ ಹಠ ಮತ್ತೊಮ್ಮೆ ಸೋಲುತ್ತದೆ. ಅವಳನ್ನು ಪರೀಕ್ಷಿಸಿದ ಡಾ. ಅನಿರುದ್ಧ ದೇಸಾಯಿ ಮೈನಾ ಚಿಕಿತ್ಸೆಯ ನಂತರ ಸಹಜವಾಗಿ ನಡೆಯುವಳು ಎನ್ನುವ  ಭರವಸೆ ನೀಡುವನು. ಆದರೆ ಚಿತ್ರದ ಕಥೆ ತಿರುವು ಪಡೆಯುವುದೇ ಇಲ್ಲಿಂದ. ಮೈನಾಳ ಸೌಂದರ್ಯಕ್ಕೆ ಮನಸೋತ ಅನಿರುದ್ಧ ದೇಸಾಯಿಗೆ ಅವಳ ಮೇಲೆ ದೈಹಿಕ ವಾಂಛೆ ಬೆಳೆಯುತ್ತದೆ. ಮೈನಾಳನ್ನು ಸೇರಬೇಕೆನ್ನುವ ಅವನ ಆಸೆ ಅವಳ ನಗ್ನ ದೇಹವನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿಯುವಂತೆ ಪ್ರಚೋದಿಸುತ್ತದೆ. ಅದನ್ನೇ ಮುಂದಿಟ್ಟುಕೊಂಡು ಆತ ಮೈನಾಳನ್ನು ಬ್ಲಾಕ್ ಮೇಲ್ ಮಾಡಲಾರಂಭಿಸುವನು. ಒಂದೆಡೆ ಜೀವಕ್ಕೆ ಜೀವವಾಗಿ ಪ್ರೀತಿಸುವ ಪತಿ. ಇನ್ನೊಂದೆಡೆ ದೈಹಿಕ ತೃಷೆಯಿಂದ ಉನ್ಮತ್ತಗೊಂಡ  ಮೃಗ. ಹೇಳಲೂ ಆಗದ ಅನುಭವಿಸಲೂ ಆಗದ ಸ್ಥಿತಿಯಲ್ಲಿ ಮೈನಾಳ ಮಾನಸಿಕ ತೊಳಲಾಟ ಆ ಕ್ಷಣ ಪ್ರೇಕ್ಷಕರ  ಮನಸ್ಸನ್ನು ಆರ್ದ್ರವಾಗಿಸುತ್ತದೆ.  ವಿಷಯ ತಿಳಿದ ಸತ್ಯ ಡಾ.ಅನಿರುದ್ಧ ದೇಸಾಯಿಯ ಕೊಲೆ ಮಾಡುತ್ತಾನೆ. ಆದರೆ ಇಡೀ ಸತ್ಯವನ್ನು  ಮೈನಾಳಿಂದ ಮುಚ್ಚಿಡುತ್ತಾನೆ. ಆ ಪರಿಸರದಲ್ಲಿ ಬದುಕುವುದು ಅಸಹನೀಯ ಎಂದೆನಿಸಿದಾಗ  ಹೊಸ ಪರಿಸರದಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳಲು ಇಬ್ಬರೂ ಚೆನ್ನೈಗೆ ಪಯಣಿಸುತ್ತಾರೆ.

             ಇತ್ತ ಬೆಂಗಳೂರಿನಲ್ಲಿ ರಾಜಕಾರಣಿ ಸಂಜಯ ದೇಸಾಯಿ ತನ್ನ ತಮ್ಮನ ಕೊಲೆಗಾರನನ್ನು ಬಂಧಿಸುವಂತೆ ಪೋಲೀಸ್ ಇಲಾಖೆಯ ಮೇಲೆ ಒತ್ತಡ ತರುತ್ತಾನೆ. ಪೋಲೀಸ್ ಇಲಾಖೆ ಈ ಕೆಲಸವನ್ನು ದಕ್ಷ ಪೋಲೀಸ್ ಅಧಿಕಾರಿ ಶರತ್ ಕುಮಾರಗೆ ವಹಿಸುತ್ತದೆ. ಕೊನೆಗೂ ಪೋಲೀಸರು ಕೊಲೆಯ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗುವರು. ಮೈನಾಳ ಸ್ನೇಹಿತೆಯ ನೆರವಿನಿಂದ ಕೊಲೆಗಾರ ಸತ್ಯ ಚೆನ್ನೈನಲ್ಲಿರುವ ಸಂಗತಿ ಬಹಿರಂಗವಾಗಿ ಅವನನ್ನು ಬಂಧಿಸುತ್ತಾರೆ. ಇತ್ತ ರಾಜಕಾರಣಿ ಸಂಜಯ ದೇಸಾಯಿ ಸತ್ಯನನ್ನು ಕೊಲ್ಲಲು ಬಾಡಿಗೆ ಹಂತಕರನ್ನು ನೇಮಿಸುತ್ತಾನೆ. ಸತ್ಯನನ್ನು ಬೆಂಗಳೂರಿಗೆ ಕರೆತರುವ ಶರತ್ ಕುಮಾರ ಅವನನ್ನು ತನ್ನ ಸ್ನೇಹಿತನ ಸುಪರ್ದಿಗೆ ಒಪ್ಪಿಸಿ ಕಾನೂನಿನ ಮೂಲಕ ಸತ್ಯನನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ. ಬಂಧಿತನಾದ ಸತ್ಯನಿಗೆ ಮೈನಾಳದೆ ಚಿಂತೆ. ಅವಳನ್ನು ಕಾಣಲು ಅಲ್ಲಿಂದ ತಪ್ಪಿಸಿಕೊಳ್ಳಲು ಸಂಚು ರೂಪಿಸುತ್ತಾನೆ. ಕೊನೆಗೂ ತಪ್ಪಿಸಿಕೊಳ್ಳುವ ಸತ್ಯ ಮೈನಾಳನ್ನು ರೈಲು ನಿಲ್ದಾಣಕ್ಕೆ ಕರೆತರಲು ತನ್ನ ಸ್ನೇಹಿತನಿಗೆ ಸೂಚಿಸುವನು. ಸತ್ಯ ತಪ್ಪಿಸಿಕೊಂಡ ಸುದ್ದಿ ತಿಳಿದ ಹಂತಕರು ಅವನನ್ನು ಬೇಟೆಯಾಡಲು ಬೆನ್ನಟ್ಟುತ್ತಾರೆ. ಇನ್ನೊಂದೆಡೆ ಪೋಲೀಸ್ ಇಲಾಖೆಯೂ ಸತ್ಯನನ್ನು ಬಂಧಿಸಲು ಕಾರ್ಯತಂತ್ರ ರೂಪಿಸುತ್ತದೆ. ಸತ್ಯನ ಕೊಲೆಯ ಸಂಚಿನ ರಹಸ್ಯ ಅರಿತ ಪೋಲಿಸ್ ಅಧಿಕಾರಿ ಶರತ್ ಕುಮಾರ   ಅವನನ್ನು ಹಂತಕರಿಂದ ಉಳಿಸುತ್ತಾನೆ. ಸತ್ಯ ಮತ್ತು ಮೈನಾ ಒಂದಾಗುತ್ತಾರೆ. ಆದರೆ  ಅಷ್ಟರಲ್ಲೇ ಅನಾಹುತ ಸಂಭವಿಸುತ್ತದೆ. ರೈಲು ನಿಲ್ದಾಣವನ್ನು ಸುತ್ತುವರಿದ ಪೋಲೀಸರ ಗುಂಡಿಗೆ ಸತ್ಯ ಮತ್ತು ಮೈನಾರ  ದೇಹಗಳು ನೆಳಕ್ಕುರುಳುವುದರೊಂದಿಗೆ  ಚಿತ್ರ ಮುಗಿಯುತ್ತದೆ.

           ಸಿನಿಮಾದ ಮೊದಲರ್ಧ ಲವಲವಿಕೆಯಿಂದ ಕೂಡಿದ್ದರೆ ಉಳಿದರ್ಧದಲ್ಲಿ ಕಥೆಯ ಓಟ ಪಡೆದುಕೊಳ್ಳುವ ವೇಗ ಪ್ರೇಕ್ಷಕರನ್ನು ಒಂದಿಷ್ಟು ಗೊಂದಲಕ್ಕಿಡು ಮಾಡುತ್ತದೆ. ಎರಡುವರೆ ಗಂಟೆಗಳಿಗೆ ಮಾತ್ರ  ಸಿನಿಮಾ ಹೆಣೆಯ ಬೇಕೆಂಬ ಗಾಂಧಿನಗರದ ಸಿದ್ದ ಸೂತ್ರಕ್ಕೆ ಬದ್ದರಾದ ನಿರ್ದೇಶಕ ನಾಗಶೇಖರ ದ್ವಿತಿಯಾರ್ಧದಲ್ಲಿ ಕಥೆಯ ವೇಗಕ್ಕೆ ಒತ್ತು ನೀಡಿರುವರು. ಅದಕ್ಕೆಂದೇ ಅನಂತ ನಾಗ, ಸುಹಾಸಿನಿ, ಜೈ ಜಗದೀಶ, ರವಿವರ್ಮ  ಅವರಂಥ ಪ್ರತಿಭಾನ್ವಿತ ಕಲಾವಿದರ ಪಾತ್ರಗಳು ನೆಪಕ್ಕೆ ಮಾತ್ರ ಎನ್ನುವಂತೆ ಬಂದು ಹೋಗುತ್ತವೆ. ಇವರುಗಳ ಪ್ರತಿಭೆಯನ್ನು ನಿರ್ದೇಶಕರು ಸರಿಯಾದ ರೀತಿಯಲ್ಲಿ ದುಡಿಸಿಕೊಳ್ಳುವಲ್ಲಿ ಸೋತಿರುವರು. ಚಿತ್ರದ ನಾಯಕ ಸತ್ಯನ ಪಾತ್ರದಲ್ಲಿ  ನಟ ಚೇತನ್ ಅಭಿನಯ ಸಿನಿಮಾದ  ಮುಖ್ಯ ಜೀವಾಳ. ವಿದೇಶದಲ್ಲಿ ಓದಿರುವ ಈ ನಟ ಕಲೆಯ ಮೇಲಿನ ಆಸಕ್ತಿಯಿಂದ ಕರ್ನಾಟಕಕ್ಕೆ ಬಂದು ಅಭಿನಯ ತರಬೇತಿ ಪಡೆದವರು. ತಮ್ಮ ಮೊದಲ ಚಿತ್ರ 'ಆ ದಿನಗಳು' ಮೂಲಕ ಚಿತ್ರರಂಗದಲ್ಲಿ ಭದ್ರವಾಗಿ ತಳವೂರುವ ಭರವಸೆ ಮೂಡಿಸಿದ ನಟ. ನಾಯಕಿ ನಿತ್ಯಾ ಮೆನನ್ ಬೆಂಗಳೂರಿನ ಹುಡುಗಿ. ಆದರೆ ಹೆಸರು ಮಾಡಿದ್ದು ಮಲೆಯಾಳಂ ಮತ್ತು ತೆಲುಗು ಸಿನಿಮಾಗಳಲ್ಲಿ. ಅವರ ಸೌಂದರ್ಯ ಮತ್ತು ಅಭಿನಯ ಸಿನಿಮಾದ ಪ್ಲಸ್ ಪಾಯಿಂಟ್ ಗಳು. ತಮಿಳಿನ ಶರತ್ ಕುಮಾರ  ಖಡಕ್ ಪೋಲೀಸ್ ಅಧಿಕಾರಿಯ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿರುವರು. ಸಾಧು ಕೋಕಿಲ ಕೆಲವೇ  ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಪ್ರೇಕ್ಷಕರಿಗೆ ಹಾಸ್ಯದ ರಸದೌತಣ ನೀಡಿರುವರು. ಸತ್ಯ ಹೆಗಡೆ ಅವರ ಛಾಯಾಗ್ರಹಣ ಚಿತ್ರದ ಹೈಲೆಟ್. ಅವರ ಫೋಟೋಗ್ರಾಫಿ ಕಣ್ಣು ದೂದ ಸಾಗರನ ರಮಣೀಯ ದೃಶ್ಯವನ್ನು ಅತ್ಯಂತ ಸುಂದರವಾಗಿ ಸೆರೆ ಹಿಡಿದಿದೆ. ಸಿ. ಅಶ್ವತ್ಥ ಅವರ ಕಂಠದಲ್ಲಿ ಮೂಡಿ ಬಂದ ' ಕಾಣದ ಕಡಲಿಗೆ ಹಂಬಲಿಸಿದೆ ಮನ' ಹಾಡು ಕೇಳಲು ಇಂಪಾಗಿದೆ. ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಹಾಡಿರುವ 'ಮೊದಲ ಮಳೆಯಂತೆ' ಯುಗಳ ಗೀತೆ ಅನೇಕ ದಿನಗಳವರೆಗೆ ಕಾಡುತ್ತದೆ. ೧೯೬೫ ರಲ್ಲಿ ತೆರೆಕಂಡ 'ನಾಗ ಪೂಜಾ' ಚಿತ್ರದ ಎಲ್. ಆರ್. ಈಶ್ವರಿ ಹಾಡಿರುವ 'ಓ ಪ್ರೇಮದ ಪುಜಾರಿ' ಹಾಡನ್ನು ಈ ಚಿತ್ರದಲ್ಲಿ ಬಳಸಿಕೊಂಡಿರುವುದು ಸಿನಿಮಾದ ಇನ್ನೊಂದು ವಿಶೇಷ. ಶ್ರೇಯಾ ಘೋಷಾಲ ಅವರ ಕಂಠಸಿರಿಯಲ್ಲಿ ಹಾಡು ಸೊಗಸಾಗಿ ಮೂಡಿ ಬಂದಿದೆ.

            'ಮೈನಾ' ಚಿತ್ರದಲ್ಲಿ ಒಂದೆರಡು ನ್ಯೂನ್ಯತೆಗಳು ಕಂಡು ಬಂದರು ಒಟ್ಟಾರೆ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ದ್ವಂದ್ವಾರ್ಥ ಸಂಭಾಷಣೆಯಾಗಲಿ ಅಶ್ಲೀಲ ದೃಶ್ಯಗಳಾಗಲಿ ಇಲ್ಲದ ಸಿನಿಮಾವಿದು. ಕಥೆ ಮತ್ತು ತಾಂತ್ರಿಕವಾಗಿಯೂ ಸಿನಿಮಾ ಗೆದ್ದಿದೆ. ಒಂದು ಕಾಲದಲ್ಲಿ ನಿರ್ದೇಶಕನ ಮಾಧ್ಯಮವಾಗಿದ್ದ ಸಿನಿಮಾ ಕಾಲಾನಂತರದಲ್ಲಿ ಅನೇಕ ರೂಪಾಂತರಗಳನ್ನು ಹೊಂದಿ  ಅದು ನಾಯಕ ಪ್ರಧಾನ ಸಿನಿಮಾ ಎನ್ನುವ ಹಣೆಪಟ್ಟಿ ಅಂಟಿಸಿಕೊಂಡಿತು. ನಾಯಕನನ್ನು ಹೊರತು ಪಡಿಸಿ ಪೋಷಕ  ಪಾತ್ರಗಳೆಲ್ಲ ನೇಪಥ್ಯಕ್ಕೆ ಸರಿದದ್ದು ಈಗ ಇತಿಹಾಸ. ಹೀಗೆ ನಾಯಕ ನಟನನ್ನೇ ಕೇಂದ್ರವಾಗಿಟ್ಟುಕೊಂಡು ಸಿನಿಮಾ ರೀಲು ಸುತ್ತುತ್ತಿರುವ ಕನ್ನಡ ಚಿತ್ರೋದ್ಯಮದಲ್ಲಿ  ನಾಗಶೇಖರ, ಪ್ರಕಾಶ, ಚಂದ್ರು  ಅವರಂಥ ನಿರ್ದೇಶಕರು ಪುಟ್ಟಣ್ಣ ಕಣಗಾಲ ಅವರ ವಾರಸುದಾರರಂತೆ ಕಾಣಿಸುತ್ತಾರೆ.  ಇಂಥವರ ಸಂಖ್ಯೆ ಇನ್ನಷ್ಟು ಹೆಚ್ಚಲಿ ಎನ್ನುವುದೇ ಪ್ರಜ್ಞಾವಂತ ಪ್ರೇಕ್ಷಕರ ಹಾರೈಕೆ.

-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ