Tuesday, July 6, 2021

ಡಿಜಿಟಲ್ ಯುಗದ ದ್ರೋಣ, ಏಕಲವ್ಯ ಮತ್ತು ಕರ್ಣರು

       



     ಏಕಲವ್ಯನಿಗೆ  ಬಿಲ್ವಿದ್ಯೆ ಕಲಿಯಬೇಕೆನ್ನುವ ಆಸೆ. ಆದರೆ ವಿದ್ಯೆಯನ್ನು ಕಲಿಸುವ ಗುರುಗಳ ಕೊರತೆ ಅವನಿದ್ದ ಊರಲ್ಲಿ. ಒಂದೊಮ್ಮೆ ಆಚಾರ್ಯ ದ್ರೋಣರು ಕೌರವ ಮತ್ತು ಪಾಂಡವ ರಾಜಕುವರರಿಗೆ ಬಿಲ್ವಿದ್ಯೆ ಕಲಿಸುತ್ತ ಅವನಿದ್ದ ಊರಿನ ಹತ್ತಿರ ಬಿಡಾರ ಹೂಡಿದರು. ಏಕಲವ್ಯ ಆಶ್ರಮಕ್ಕೆ ಹೋಗಿ ದ್ರೋಣರನ್ನು ಕಂಡು ತನ್ನ ಮನದಾಸೆ ಹೇಳಿಕೊಂಡ. ದ್ರೋಣರು ಗುರುಗಳಾದರೂ ರಾಜಮನೆತನಕ್ಕೆ ನಿಷ್ಟರಾಗಿದ್ದವರು. ರಾಜಾಶ್ರಯದ ನೆರಳು ಅವರ ಮೇಲಿತ್ತು. ರಾಜಕುಮಾರರಿಗೆ ಮಾತ್ರ ತಾನು ವಿದ್ಯೆ ಕಲಿಸುವುದೆಂದು ಏಕಲವ್ಯನ ಬೇಡಿಕೆಯನ್ನು ತಿರಸ್ಕರಿಸಿದರು. ಆದರೆ ವಿದ್ಯೆ ಕಲಿಯಬೇಕೆನ್ನುವ ಛಲ ಏಕಲವ್ಯನನ್ನು ಸುಮ್ಮನೆ ಇರಗೊಡಲಿಲ್ಲ. ದ್ರೋಣರ ಮಣ್ಣಿನ ಮೂರ್ತಿಯನ್ನು ಮಾಡಿ ಆ ಮೂರ್ತಿ ಎದುರು ಪ್ರತಿನಿತ್ಯ ಬಿಲ್ವಿದ್ಯೆ ಅಭ್ಯಾಸ ಮಾಡಿ ಪಾರಂಗತನಾದ. ಮುಂದೆ ನಡೆದದ್ದನ್ನೆಲ್ಲ ವಿವರಿಸಿ ಹೇಳಬೇಕಾದ ಅಗತ್ಯವಾಗಲಿ ಪ್ರಸ್ತುತತೆಯಾಗಲಿ ಇಲ್ಲ.

    ಕೊರೊನಾ ಸೋಂಕು ಸೃಷ್ಟಿಸಿದ ಈ ಆತಂಕದ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಪಾಠಗಳನ್ನು ಹೇಳುವ ವಿಧಾನ ನೋಡಿದಾಗ ನನಗೆ ಮಹಾಭಾರತದ ಈ ಏಕಲವ್ಯನ ಉಪಕಥೆ ನೆನಪಾಯಿತು. ಒಂದರ್ಥದಲ್ಲಿ ಈ ಡಿಜಿಟಲ್ ವಾತಾವರಣದಲ್ಲಿ ತಮ್ಮ ತಮ್ಮ ಮನೆಯಲ್ಲಿ ಕುಳಿತು ಶಿಕ್ಷಕರ ಪಾಠಗಳನ್ನು ಆಲಿಸುತ್ತಿರುವ ವಿದ್ಯಾರ್ಥಿಗಳು ಏಕಲವ್ಯನಂತೆ ಗೋಚರಿಸುತ್ತಿದ್ದಾರೆ. ಶಾಲೆ, ಕಾಲೇಜಿನ ಪರಿಸರದಲ್ಲಿ ಎಲ್ಲ ವಿದ್ಯಾರ್ಥಿಗಳು ಒಟ್ಟಾಗಿ ತರಗತಿಯ ಕೊಠಡಿಯಲ್ಲಿ ಕುಳಿತು ಶಿಕ್ಷಕರಿಂದ  ಪಾಠ ಕೇಳಬೇಕಾದ ಸಂದರ್ಭ ಮತ್ತೆ ಎಂದು ಬರುವುದೋ ಎನ್ನುವಂಥ ಆತಂಕದ ವಾತಾವರಣ ನಿರ್ಮಾಣವಾಗಿದೆ. ಶಿಕ್ಷಕರು ಕೂಡ ತನ್ನೆದುರಿರುವ ಕಂಪ್ಯೂಟರ್ ಯಂತ್ರವನ್ನೇ ವಿದ್ಯಾರ್ಥಿ ಎಂದು ಭಾವಿಸಿ ಪಾಠ ಮಾಡಬೇಕಾಗಿದೆ. ಒಟ್ಟಾರೆ ಆನ್‍ಲೈನ್ ಪಾಠ ಎನ್ನುವುದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹೊಸದೊಂದು ಸನ್ನಿವೇಶವನ್ನು ಎದುರಿಸುವಂಥ ಪರಿಸ್ಥಿತಿಯನ್ನು ಸೃಷ್ಟಿಸಿದೆ.

     ಈ ಪಾಠ ಮಾಡುವ ಕಾರ್ಯಯೋಜನೆಗೆ ಡಿಜಿಟಲೀಕರಣದ ಹೊಸ ಪರಿವೇಷವನ್ನು ತೋಡಿಸುವ ವಿಧಾನ ಎರಡು ರೀತಿಯಲ್ಲಿ ನಡೆಯುತ್ತಿದೆ. ಒಂದು ಶಿಕ್ಷಕರ ಉಪನ್ಯಾಸಗಳ ವಿಡಿಯೋ ತಯ್ಯಾರಿಸಿ ವೆಬ್‍ಸೈಟ್‍ಗಳಿಗೆ ಅಪ್‍ಲೋಡ್ ಮಾಡುವ ವಿಧಾನ. ಈ ವಿಧಾನದಲ್ಲಿ ವಿದ್ಯಾರ್ಥಿಗಳಿಗೆ ಯು.ಆರ್.ಎಲ್ ವಿಳಾಸ ಕೊಟ್ಟು ಅಲ್ಲಿರುವ ಲಿಂಕಿನ ಸಹಾಯದಿಂದ ಉಪನ್ಯಾಸಗಳ ವಿಡಿಯೋಗಳನ್ನು ವಿಕ್ಷಿಸಲು ಅನುಕೂಲ ಮಾಡಿಕೊಡಲಾಗುತ್ತದೆ. ಈ ವಿಧಾನ ಏಕಪಕ್ಷಿಯವಾದದ್ದು. ಇಲ್ಲಿ ಶಿಕ್ಷಕರ ಉಪನ್ಯಾಸಗಳನ್ನು ಆಲಿಸುವುದಷ್ಟೇ ವಿದ್ಯಾರ್ಥಿಗಳ ಕೆಲಸ. ಪಾಠ ಮಾಡುತ್ತಿರುವ ಶಿಕ್ಷಕರೊಂದಿಗೆ ನೇರ ಸಂವಾದ ಸಾಧ್ಯವಿಲ್ಲ. ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯು ಪದವಿ ಕಾಲೇಜುಗಳ ಶಿಕ್ಷಕರಿಂದ ಪಾಠದ ವಿಡಿಯೋಗಳನ್ನು ಪಡೆದು ತನ್ನ ಇಲಾಖೆಯ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿದೆ. ಜ್ಞಾನನಿಧಿ ಎನ್ನುವ ಹೆಸರಿನ ಈ ಯೋಜನೆ ಕುರಿತು ಅನೇಕ ಟೀಕೆಗಳು ಕೇಳಿಬಂದವು. ಕನ್ನಡದ ಹಿರಿಯ ಸಾಹಿತಿ ಕೆ.ವಿ.ತಿರುಮಲೇಶ್ ಆಗಬೇಕಾದ ಸುಧಾರಣೆಗಳ ಕುರಿತು ದಿನಪತ್ರಿಕೆಗೆ ಲೇಖನವನ್ನು ಬರೆದು ವೆಬ್‍ಸೈಟ್‍ಗೆ ಸೇರಿಸುವುದಕ್ಕಿಂತ ಮೊದಲು ವಿಷಯ ಪರಿಣಿತರಿಂದ ಪರಾಮರ್ಶೆಗೆ ಒಳಪಡಲಿ ಎಂದು ಕಿವಿಮಾತು ಹೇಳಿದರು. ಮಕ್ಕಳ ಶಿಕ್ಷಣದಂಥ ವಿಷಯದ ಕುರಿತು ಯಾವುದೇ ಯೋಜನೆಯನ್ನು ಆರಂಭಿಸುವಾಗ ಆತುರದ ನಿರ್ಣಕ್ಕೆ ಬರುವುದು ಅದು ಭವಿಷ್ಯದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. 

     ಆನ್‍ಲೈನ್ ಪಾಠದ ಇನ್ನೊಂದು ವಿಧಾನದಲ್ಲಿ ಲೈವ್ ಪಾಠಕ್ಕೆ ಕೂಡ ಅವಕಾಶವಿರುತ್ತದೆ. ನಿರ್ಧಿಷ್ಟ ತಂತ್ರಜ್ಞಾನದ ಸಹಾಯದಿಂದ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಮಧ್ಯೆ ನೇರ ಸಂಪರ್ಕ ಕಲ್ಪಿಸುವ ವಿಧಾನವಿದು. ಇಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕನ ನಡುವೆ ನೇರ ಸಂವಹನಕ್ಕೆ ಅವಕಾಶವಿರುತ್ತದೆ. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಪಾಠಕ್ಕೆ ಸಂಬಂಧಿಸಿದ ತಮ್ಮ ಸಂಶಯಗಳನ್ನು ಪರಿಹರಿಸಿಕೊಳ್ಳಬಹುದು. ಶಿಕ್ಷಕರಿಗೂ ಕೂಡ ತನ್ನೆದುರು ವಿದ್ಯಾರ್ಥಿಗಳು ಕುಳಿತು ತನ್ನ ಪಾಠವನ್ನು ಆಲಿಸುತ್ತಿರುವರು ಎನ್ನುವಂಥ ಮನಸ್ಥಿತಿ ಇರುತ್ತದೆ. ಉಪನ್ಯಾಸಗಳ ವಿಡಿಯೋ ತಯ್ಯಾರಿಸಿ ಅಪ್‍ಲೋಡ್ ಮಾಡುವ ವಿಧಾನಕ್ಕಿಂತ ಈ ವಿಧಾನ ತುಂಬ ಉಪಯುಕ್ತವಾದದ್ದು. ಈ ಮೊದಲಿನ ವಿಧಾನದಲ್ಲಿ ಗೋಡೆಯತ್ತ ಮುಖಮಾಡಿ ಪಾಠ ಮಾಡಬೇಕಾದ ಶಿಕ್ಷಕರಿಗೆ ಈ ವಿಧಾನದಲ್ಲಿ ಕನಿಷ್ಠ ಪಕ್ಷ ದೂರದಲ್ಲೆಲ್ಲೊ ತಾನು ಪಾಠ ಮಾಡುತ್ತಿರುವ ಸಮಯದಲ್ಲೇ ಆಲಿಸುತ್ತಿರುವ ವಿದ್ಯಾರ್ಥಿಗಳಿರುವರೆನ್ನುವ ಕಲ್ಪನೆಯೇ ತುಂಬ ಸ್ಪೂರ್ತಿದಾಯಕವಾದದ್ದು. ಸಮಸ್ಯೆ ಎಂದರೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಪಾಠವನ್ನು ಆಲಿಸುವ ಸಂದರ್ಭ ಕಡಿಮೆ ಮತ್ತು ಪಾಠದ ಕೊಠಡಿಯಿಂದ ಹೊರತಾದ ವಾತಾವರಣದಲ್ಲಿ ವಿದ್ಯಾರ್ಥಿಗಳಿರುವುದರಿಂದ ಅವರಿಗೆ ಅಡಚಣೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚು. ಜೊತೆಗೆ ವಿದ್ಯಾರ್ಥಿಗಳು ನೆಪ ಮಾತ್ರಕ್ಕೆ ಲಾಗಿನ್ ಆಗಿ ಪಾಠ ಆಲಿಸುವುದರಿಂದ ದೂರ ಉಳಿಯುವ ಸಾಧ್ಯತೆಯೂ ಇರುತ್ತದೆ. 

    ಕೊರೊನಾ ವೈರಾಣು ಸೃಷ್ಟಿದ ಆತಂಕದ ಪರಿಣಾಮ ಅನೇಕ ಕ್ಷೇತ್ರಗಳಲ್ಲಿ ಆದಂತೆ ಶಿಕ್ಷಣ ಕ್ಷೇತ್ರದಲ್ಲೂ ಹಲವಾರು ಬದಲಾವಣೆಗಳು ಕಾಣಿಸಿಕೊಂಡವು. ಲಾಕ್‍ಡೌನ್ ಪರಿಣಾಮ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳ ಪ್ರವೇಶವನ್ನು ನಿಷೇಧಿಸಲಾಯಿತು. ಶಿಕ್ಷಕರು ಆನ್‍ಲೈನ್ ಮೂಲಕ ಪಾಠ ಮಾಡುವಂತೆ ಯೋಜನೆಗಳನ್ನು ರೂಪಿಸಲಾಯಿತು. ತಂತ್ರಜ್ಞಾನದ ಪರಿಚಯವಿಲ್ಲದ ಅನೇಕ ಶಿಕ್ಷಕರಿಗೆ ಈ ಹೊಸ ವಿಧಾನಕ್ಕೆ ಹೊಂದಿಕೊಳ್ಳುವುದು ಸಮಸ್ಯೆಯಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳನ್ನು ಬೋಧಿಸುವ ಶಿಕ್ಷಕರಿಗೆ ಪಾಠ ಮಾಡುವ ಈ ಹೊಸ ಅವಿಷ್ಕಾರದ ನೇರ ಪರಿಚಯವಿರಬಹುದು ಆದರೆ ಇದೇ ಮಾತನ್ನು ಲಲಿತ ಕಲೆಗಳು ಮತ್ತು ಮಾನವಿಕ ವಿಜ್ಞಾನದ ವಿಷಯಗಳನ್ನು ಬೋಧಿಸುವ ಶಿಕ್ಷಕರಿಗೆ ಅನ್ವಯಿಸಿ ಹೇಳುವುದು ತಪ್ಪು ನಿರ್ಧಾರವಾಗುತ್ತದೆ. ಅದೆಷ್ಟೋ ಶಿಕ್ಷಕರು ತಮ್ಮ ತಮ್ಮ ವಿಷಯಗಳಲ್ಲಿ ಸಾಕಷ್ಟು ಪರಿಣಿತರು ಮತ್ತು ಅನುಭವಿಗಳಾಗಿದ್ದರೂ ಈ ಆನ್‍ಲೈನ್ ಪಾಠದ ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಕಷ್ಟು ಸಮಯವಕಾಶ ಬೇಕಾಯಿತು. ಇನ್ನು ಕೆಲವು ಶಿಕ್ಷಕರು ತಂತ್ರಜ್ಞಾನ ಪರಿಣಿತರ ನೆರವು ಪಡೆಯಬೇಕಾಯಿತು. ಇಷ್ಟು ವರ್ಷಗಳ ಕಾಲ ತರಗತಿಯ ಕೊಠಡಿಗಳಲ್ಲಿ ಪಾಠ ಮಾಡಿ ಅನುಭವವಿದ್ದ ಶಿಕ್ಷಕರು ಈ ಹೊಸ ವ್ಯವಸ್ಥೆಯಿಂದ ಮುಜುಗರಕ್ಕೆ ಒಳಗಾಗಬೇಕಾಯಿತು. ಅನೇಕ ಸಂದರ್ಭಗಳಲ್ಲಿ ಇಂಥ ಶಿಕ್ಷಕರ ಶೈಕ್ಷಣಿಕ ಅರ್ಹತೆಯನ್ನೇ ಪ್ರಶ್ನಿಸಿದ್ದೂ ಉಂಟು. ಇಲ್ಲಿ ಶಿಕ್ಷಕರನ್ನು ನೇರವಾಗಿ ಆರೋಪಿಸುವುದು ಸರಿಯಲ್ಲ. ಧೀಡಿರನೆ ಹೀಗೆ ಪಾಠ ಮಾಡುವ ವಿಧಾನವನ್ನು ಒಂದು ವಿಧಾನದಿಂದ ಹೊಸದೊಂದು ವಿಧಾನಕ್ಕೆ ಬದಲಾಯಿಸಿಕೊಳ್ಳುವುದು ಯಾರಿಗಾದರೂ ಸಮಸ್ಯೆಯಾಗುತ್ತದೆ. ಹಾಗೆಂದು ಹಂತಹಂತವಾಗಿ ಹೊಸ ವಿಧಾನವನ್ನು ಪರಿಚಯಿಸುವಷ್ಟು ತಾಳ್ಮೆಯಾಗಲಿ ಮತ್ತು ಸಮಯಾವಕಾಶವಾಗಲಿ ಇರಲಿಲ್ಲ. ಹೊಸ ವಿಧಾನವನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಆ ಅನಿವಾರ್ಯತೆಯನ್ನು ಸವಾಲಾಗಿ ಸ್ವೀಕರಿಸಿದ ಶಿಕ್ಷಕ ವರ್ಗ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಂಡು ಪಾಠ ಮಾಡಿದ್ದು ನಿಜಕ್ಕೂ ಶ್ಲಾಘಿಸಬೇಕು.

     ಇದೇ ಸಂದರ್ಭ ವಿದ್ಯಾರ್ಥಿಗಳನ್ನು ಕುರಿತು ಕೂಡ ಯೋಚಿಸಬೇಕು. ಅದೆಷ್ಟು ವಿದ್ಯಾರ್ಥಿಗಳಿಗೆ ಇಂಟರ್‍ನೆಟ್, ಲ್ಯಾಪ್‍ಟಾಪ್, ಕಂಪ್ಯೂಟರ್, ಸ್ಮಾರ್ಟ್ ಫೋನ್ಗಳಂಥ ಸೌಲಭ್ಯಗಳನ್ನು ಆನ್‍ಲೈನ್ ಪಾಠಕ್ಕಾಗಿ  ಹೊಂದಿಸಿಕೊಳ್ಳಲು ಸಾಧ್ಯ ಎನ್ನುವ ಪ್ರಶ್ನೆ ಎದುರಾಗುತ್ತದೆ. ಜೊತೆಗೆ ಎಲ್ಲ ವಿದ್ಯಾರ್ಥಿಗಳು ವಾಸಿಸುತ್ತಿರುವುದು ನಗರ ಪ್ರದೇಶದಲ್ಲಿ ಮಾತ್ರವಲ್ಲ. ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿರುವರು. ಉತ್ತಮ ರಸ್ತೆಯ ಸೌಲಭ್ಯವನ್ನೇ ಹೊಂದಿರದ ಅಸಂಖ್ಯಾತ ಹಳ್ಳಿಗಳು ಇವೆ. ಇಂಥ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಇಂಟರ್‍ನೆಟ್ ಸೌಲಭ್ಯಕ್ಕಾಗಿ ಪರದಾಡಬೇಕಾಗುತ್ತದೆ. ಅನೇಕ ಪಾಲಕರಿಗೆ ಆ ಎಲ್ಲ ಸೌಲಭ್ಯಗಳನ್ನು ತಮ್ಮ ಮಕ್ಕಳಿಗೆ ಒದಗಿಸಿಕೊಡುವ ಆರ್ಥಿಕ ಶಕ್ತಿ ಇರುವುದಿಲ್ಲ. ಆಗ ಈ ಗ್ರಾಮೀಣ ಮತ್ತು ಬಡ ವರ್ಗದ ಮಕ್ಕಳು ಆನ್‍ಲೈನ್ ಪಾಠಗಳಿಂದ ವಂಚಿತರಾಗುಳಿಯುವ ಸಾಧ್ಯತೆಯೇ ಹೆಚ್ಚು. 

    ಈ ದೇಶದ ಶಿಕ್ಷಣ ಪದ್ಧತಿಗೆ ಅದರದೆ ಆದ ವಿಶಿಷ್ಠ ಇತಿಹಾಸ ಮತ್ತು ಹಿನ್ನೆಲೆ ಇದೆ. ಗುರುಕುಲ ಶಿಕ್ಷಣ ಪದ್ಧತಿಯನ್ನು ಪರಿಚಯಿಸಿದ ನೆಲವಿದು. ವಿದ್ಯಾರ್ಥಿಯಾದವನು ಗುರುವಿನೊಂದಿಗೆ ವಾಸಿಸುತ್ತ ಶಿಕ್ಷಣವನ್ನು ಪಡೆದಾಗಲೇ ಅವನ ಸರ್ವಾಂಗೀಣ ಬೆಳವಣಿಗೆ ಸಾಧ್ಯ ಎನ್ನುವ ನಂಬಿಕೆ ನಮ್ಮ ಶಿಕ್ಷಣ ಪದ್ಧತಿಯಲ್ಲಿದೆ. ಅದಕ್ಕೆಂದೆ ರಾಜಮನೆತನಗಳ ಮಕ್ಕಳು ಸರ್ವ ಭೋಗಸುಖವನ್ನು ತ್ಯಾಗ ಮಾಡಿ ಕಾಡಿನಲ್ಲಿ ಗುರುವಿನೊಂದಿಗೆ ಆಶ್ರಮದಲ್ಲಿ ಸಾಮಾನ್ಯ ಮಕ್ಕಳಂತೆ ವಾಸಿಸುತ್ತ ಶಿಕ್ಷಣ ಪಡೆಯುತ್ತಿದ್ದರು. ನಮ್ಮದು ಮೆಕಾಲೆ ಶಿಕ್ಷಣ ಪದ್ಧತಿ ಎಂದರೂ ಅದು ಮಧ್ಯದಲ್ಲಿ ಸೇರ್ಪಡೆಯಾದ ವಿಧಾನವೇ ವಿನ: ಪುರಾತನ ಗುರುಕುಲ ಶಿಕ್ಷಣವನ್ನು ಮರೆಯುವಂತಿಲ್ಲ. ಇವತ್ತಿಗೂ ನಮ್ಮ ಶಿಕ್ಷಣಕ್ಕೆ ಭದ್ರಬುನಾದಿಯಾಗಿರುವುದು ನಮ್ಮ ಪ್ರಾಚೀನ ಶಿಕ್ಷಣ ಪದ್ಧತಿಯೇ. ಅದಕ್ಕೆಂದೇ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ಗುರುವಿನ ಪ್ರಾಮುಖ್ಯತೆಯನ್ನು ವಿವರಿಸಿದರು. ‘ಮುಂದೆ ಗುರಿಯಿರಲು, ಹಿಂದೆ ಗುರು ಇರಲು ನಡೆಮುಂದೆ ನುಗ್ಗಿ ನಡೆಮುಂದೆ’ ಎಂದಿರುವರು ಮಹಾನುಭಾವರೊಬ್ಬರು.

    ಈಗ ಕಾಲಬದಲಾಗಿದೆ. ಬೇರೆ ಬೇರೆ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರ ಕೂಡ ಹೊಸ ಹೊಸ ಬದಲಾವಣೆಗಳತ್ತ ಹೆಜ್ಜೆ ಹಾಕುತ್ತಿದೆ. ಬದಲಾಗುತ್ತಿರುವ ಹೊಸ ಮನ್ವಂತರಕ್ಕೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೂಡಿಯೇ ಸಿದ್ಧರಾಗಬೇಕಾಗಿದೆ. ಪರಿವರ್ತನೆ ಅದು ಜಗದ ನಿಯಮ. ಬದಲಾವಣೆ ಅದು ಬೆಳವಣಿಗೆಯ ಲಕ್ಷಣ ಕೂಡ ಹೌದು. ಆದ್ದರಿಂದ ಶಿಕ್ಷಕರು ತಂತ್ರಜ್ಞಾನದ ಹೊಸ ಹೊಸ ಅವಿಷ್ಕಾರಗಳನ್ನು ಉಪಯೋಗಿಸಿಕೊಂಡು ಪಾಠ ಮಾಡಲೇ ಬೇಕಾಗಿದೆ. ಜೊತೆಗೆ ವಿದ್ಯಾರ್ಥಿಗಳು ಕೂಡ ಹೊಸ ವಾತಾವರಣದಲ್ಲಿ ಪಾಠ ಕೇಳಲು ಸಿದ್ಧರಾಗಬೇಕು. ಹಾಗೆಂದು ಈ ಬದಲಾವಣೆಯೇನೂ ಭವಿಷದಲ್ಲಿಯೂ ಹೀಗೆ ಮುಂದುವರೆಯುತ್ತದೆ ಎಂದೆನಿಲ್ಲ. ಆನ್‍ಲೈನ್ ಪಾಠ ಎನ್ನುವುದು ಸಧ್ಯದ ಬಿಕ್ಕಟ್ಟನ್ನು ಎದುರಿಸಲು ಅದೊಂದು ಪರ್ಯಾಯವೇ ವಿನ: ಅದೇ ಶಾಶ್ವತವಲ್ಲ ಎಂದು ಅನೇಕ ಶಿಕ್ಷಣ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಿನಲ್ಲಿ ಭವಿಷ್ಯದಲ್ಲಿ ಇಂಥ ಸಮಸ್ಯೆಗಳು ಎದುರಾದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜೊತೆಯಾಗಿಯೇ ಮಾನಸಿಕವಾಗಿ ಸಿದ್ಧರಾಗಲು ಅಗತ್ಯವಾದ ಮುನ್ನೆಚ್ಚರಿಕೆಯ ಪಾಠವನ್ನು ಕೊರೊನಾ ವೈರಾಣು ಕಲಿಸಿದೆ.

      ಮಹಾಭಾರತದ ಒಂದು ಉಪಕಥೆಯೊಂದಿಗೆ ಲೇಖನವನ್ನು ಆರಂಭಿಸಿದ ನಾನು ಈಗ ಮಹಾಭಾರತದ ಇನ್ನೊಂದು ಉಪಕಥೆಯೊಂದಿಗೆ ಲೇಖನವನ್ನು ಮುಗಿಸುತ್ತೇನೆ. ಕರ್ಣ ಮಹಾಪರಾಕ್ರಮಿ. ಆದರೆ ಆತ ಕೌರವರು ಮತ್ತು ಪಾಂಡವರಂತೆ ರಾಜಕುವರನಲ್ಲ. ಅವರಿಗಿದ್ದ ವಿದ್ಯೆ ಕಲಿಯುವ ಸೌಲಭ್ಯ ಕರ್ಣನಿಗಿರಲಿಲ್ಲ. ಆತನಿಗೋ ಮಧ್ಯಮ ಪಾಂಡವ ಅರ್ಜುನನನ್ನು ಮೀರಿ ಬೆಳೆಯುವ ಹಂಬಲ. ತನ್ನ ಮೂಲವನ್ನೇ ಮರೆಮಾಚಿ ಮಹರ್ಷಿ ಪರುಶುರಾಮರಿಂದ ಬಿಲ್ವಿದ್ಯೆ ಕಲಿತು ಪರಿಣಿತನಾದ. ನಿಜ ತಿಳಿದ ಪರುಶುರಾಮರಿಂದ ಕಲಿತ ವಿದ್ಯೆ ಮರೆತು ಹೋಗಲೆಂದು ಶಾಪ. ಅದು ಕುರುಕ್ಷೇತ್ರದ ರಣಾಂಗಣದಲ್ಲಿ ನಿಜವಾಯ್ತು. ಅರ್ಜುನನ ಎದುರು ಬಿಲ್ಲು ಹಿಡಿದು ನಿಂತ ಕರ್ಣನಿಗೆ ಕಲಿತ ವಿದ್ಯೆ ನೆನಪಿಗೇ ಬರಲಿಲ್ಲ. ಆನ್‍ಲೈನ್ ಪಾಠಗಳನ್ನು ಕೇಳಿ ಸಿದ್ಧರಾಗಿ ಪರೀಕ್ಷಾ ಕೊಠಡಿಯಲ್ಲಿ ಕುಳಿತ ವಿದ್ಯಾರ್ಥಿಗಳನ್ನು ನೋಡಿದಾಗ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಬಿಲ್ವಿದ್ಯೆಯನ್ನೇ ಮರೆತು ನಿಂತ ಕರ್ಣನಂತೆ ಅವರು ಗೋಚರಿಸುತ್ತಿರುವರು ನನಗೆ.

-ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟೆ