Saturday, August 23, 2014

ಡಾ. ಯು. ಆರ್. ಅನಂತಮೂರ್ತಿ: ನಾಡು ಕಂಡ ಶ್ರೇಷ್ಠ ಚಿಂತಕ ಹಾಗೂ ಬರಹಗಾರ

       



  (೨೧. ೧೨. ೧೯೩೨- ೨೨. ೦೮. ೨೦೧೪)


          ಕನ್ನಡದ ಶ್ರೇಷ್ಠ ಬರಹಗಾರ ಮತ್ತು ಚಿಂತಕ ಡಾ. ಯು. ಆರ್. ಅನಂತಮೂರ್ತಿ ಇನ್ನಿಲ್ಲ. ಕನ್ನಡ ಸಾರಸ್ವತಲೋಕದ ಪ್ರಭೆಯೊಂದು ನಂದಿಹೋಯಿತು ಎನ್ನುವ ಸಂಗತಿ ಜೀರ್ಣಿಸಿಕೊಳ್ಳುವುದು ಬಲು ಕಷ್ಟದ ವಿಷಯ. ತಮ್ಮ ಸಮಗ್ರ ಸಾಹಿತ್ಯದ ಮೂಲಕ ಕನ್ನಡಕ್ಕೆ ಆರನೇ ಜ್ಞಾನಪೀಠ ತಂದು  ಕೊಟ್ಟು ಕನ್ನಡ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದ ಡಾ.ಯು. ಆರ್. ಅನಂತಮೂರ್ತಿ ಅವರು ಸಂಸ್ಕಾರ, ಭವ, ಘಟಶ್ರಾದ್ಧ, ಬರ ಸಂಖ್ಯಾತ್ಮಕ ದೃಷ್ಟಿಯಿಂದ ಬೆರಳೆಣಿಕೆಯ ಕಾದಂಬರಿಗಳನ್ನು ಮತ್ತು ಕೆಲವು ಕಥಾಸಂಕಲನಗಳನ್ನು ಬರೆದು ಬರೆದದ್ದು ಕಡಿಮೆ ಎಂದೆನಿಸಿದರೂ ಅವರು  ಬರೆದದ್ದೆಲ್ಲ ತುಂಬ ಮೌಲಿಕವಾದದ್ದು. ೧೯೬೦ ರ ದಶಕದಲ್ಲಿ 'ಸಂಸ್ಕಾರ' ದಂಥ ಸಂಪ್ರದಾಯ ವಿರೋಧಿ ಕಾದಂಬರಿಯನ್ನು ಅದು ಕುರುಡು ನಂಬಿಕೆಗಳು ಅತ್ಯಂತ ಪ್ರಸ್ತುತವಾಗಿದ್ದ ದಿನಗಳಲ್ಲಿ ಬರೆಯಲು ಸಾಧ್ಯವಾಗಿದ್ದು ಮೂರ್ತಿಗಳಲ್ಲಿದ್ದ ಸಮಾಜದ ಕುರಿತಾದ ಕಳಕಳಿಗೆ ನಿಜವಾದ ದೃಷ್ಟಾಂತ. ಸಂಪ್ರದಾಯವನ್ನು ವಿರೋಧಿಸಿ ಬರೆಯಲು ತಮಗೆ ಹೇಗೆ  ಸಾಧ್ಯವಾಯಿತು ಎನ್ನುವುದನ್ನು ತಮ್ಮ  ಆತ್ಮಕಥನ 'ಸುರಗಿ' ಯಲ್ಲಿ ಹೀಗೆ ಹೇಳಿಕೊಂಡಿರುವರು  'ಅಪ್ಪ ಅಸ್ಪೃಶ್ಯ ಸಮುದಾಯಕ್ಕೆ ಸೇರಿದ್ದ ಹೊಲದ ಕೆಲಸದ ಆಳನ್ನು ತಮ್ಮ ಸಮಕ್ಕೆ ಕೂಡಿಸಿಕೊಂಡು ಊಟ ಹಾಕುತ್ತಿದ ಅಂದಿನ ಮನೆಯ ವಾತಾವರಣವೇ ನಾನು  ಬದುಕುತ್ತಿದ್ದ ವ್ಯವಸ್ಥೆಯನ್ನು ವಿರೋಧಿಸಿ ಬರೆಯಲು ಸ್ಪೂರ್ತಿ ನೀಡಿತು'. ಸಂಪ್ರದಾಯಗಳು ಜಡ್ಡುಗಟ್ಟಿದ್ದ ಆ ದಿನಗಳಲ್ಲೇ ಅನಂತಮೂರ್ತಿ ಅವರು ಅಂತರ್ ಧರ್ಮೀಯ ವಿವಾಹವಾಗಿದ್ದು ಅವರೊಳಗಿನ ಸಾಮಾಜಿಕ ಬದ್ಧತೆಗೆ ಸಾಕ್ಷಿಯಾಗಿದೆ. ಕೇವಲ ಹೇಳದೆ ಹೇಳಿದ್ದನ್ನು ಸ್ವತ: ಕಾರ್ಯಗತ ಮಾಡಿತೋರಿಸಿದ ಅವರೊಳಗಿನ ಈ ಧಾಡಸಿತನದ ಗುಣವೇ ಅವರನ್ನು ವಿರೋಧಿಸುವವರಂತೆ ಮೆಚ್ಚುವ ಮತ್ತು ಅನುಕರಿಸುವ ಅಭಿಮಾನಿಗಳ ಪಡೆಯನ್ನೇ ಸೃಷ್ಟಿಸಿತು. ಡಾ. ಯು. ಆರ್. ಅನಂತಮೂರ್ತಿ ವೈಚಾರಿಕವಾಗಿ ಅತ್ಯಂತ ಪ್ರಬುದ್ಧರಾಗಲು ಮತ್ತು ತಾನು ಬದುಕುತಿದ್ದ ವ್ಯವಸ್ಥೆಯ ಅಪಸವ್ಯಗಳನ್ನು ವಿರೋಧಿಸುವಂತಾಗಲು ಅವರು ಪಡೆದ ಇಂಗ್ಲಿಷ್ ಶಿಕ್ಷಣವೂ ಕಾರಣವಾಯಿತು. ಬರ್ಮಿಂಗ್ ಹ್ಯಾಮ್ ಯುನಿವರ್ಸಿಟಿಯಲ್ಲಿನ ಇಂಗ್ಲಿಷ್ ಶಿಕ್ಷಣ ಅವರನ್ನು ಬರಹಗಾರನ ಜೊತೆಗೆ ಒಬ್ಬ ಚಿಂತಕನನ್ನಾಗಿಯೂ ರೂಪಿಸಿತು. ಅದಕ್ಕೆಂದೇ ಅವರು ತಮ್ಮ ಬರಹ ಹಾಗೂ ವೈಚಾರಿಕ ಮಾತುಗಳಿಂದ ತಾವು ಬದುಕುತ್ತಿದ್ದ ಸಮಾಜವನ್ನು ಕಾಲಕಾಲಕ್ಕೆ ಜಾಗೃತಗೊಳಿಸುತ್ತಲೇ ಬಂದರು. ಬರಹಗಾರನೊಬ್ಬ ಸಮಾಜದ ಸಮಸ್ಯೆಗಳು ಮತ್ತು ವೈರುಧ್ಯಗಳಿಗೆ ಸದಾಕಾಲ ಮುಖಾಮುಖಿಯಾಗಿರಬೇಕು ಎನ್ನುವ ನಿಲುವು ಅವರದಾಗಿತ್ತು. ಉತ್ತಮವಾದದ್ದನ್ನು ಉತ್ತೇಜಿಸಿ ಮಾತನಾಡುತ್ತಿದುದ್ದಕ್ಕಿಂತ ತಮಗೆ ಸರಿಕಾಣದ್ದನ್ನು ಅವರು ಖಂಡಿಸಿ ಮಾತನಾಡಿದ್ದೇ ಹೆಚ್ಚು.  ಲೇಖಕ ಸತ್ಯನಾರಾಯಣ ಅವರು ಹೇಳುವಂತೆ ಲೇಖಕನಾದವನ ಕೆಲಸ  ಸದಾಕಾಲ ಓದುಗರಿಗೆ ಪ್ರಿಯವಾದದ್ದನ್ನೇ ಹೇಳುವುದಲ್ಲ  ಎನ್ನುವ ಮಾತು ಅನಂತಮೂರ್ತಿಯವರಿಗೆ ಹೆಚ್ಚು ಅನ್ವಯವಾಗುತ್ತದೆ. ಈ ಕಾರಣದಿಂದಲೇ ಅವರು ಸದಾಕಾಲ ಹೇಳುತ್ತಿದ್ದ ಮಾತು ಬರಹಗಾರ ಏನನ್ನೂ ಸುಲಭವಾಗಿ  ಒಪ್ಪಿಕೊಳ್ಳದೆ ಎಲ್ಲವನ್ನೂ ಅನುಮಾನದಿಂದ ನೋಡಬೇಕೆಂದು.

             ಮೂರ್ತಿಗಳು ಶ್ರೇಷ್ಠ ಬರಗಾರನಾದಂತೆ ಅವರೊಬ್ಬ ಶ್ರೇಷ್ಠ ವಾಗ್ಮಿಯೂ ಆಗಿದ್ದರು. ಅವರಲ್ಲಿದ್ದ ವಾಕಪಟುತ್ವವೇ ಅವರು ಅನೇಕರಿಗೆ ಹತ್ತಿರವಾಗಲು ಅದರೊಂದಿಗೆ ಕೆಲವರ ಶತ್ರುತ್ವವನ್ನು ಕಟ್ಟಿಕೊಳ್ಳಲು ಕಾರಣವಾಯಿತು. ತಮಗೆ ಅನಿಸಿದ್ದನ್ನು ಕೇಳುಗರು ಒಪ್ಪಿಕೊಳ್ಳುವಂತೆ ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸುವ ಕಲೆ ಅವರಿಗೆ ಕರಗತವಾಗಿತ್ತು. ಒಂದೊಂದು ಸಲ ಅವರ ಚಿಂತನೆಗಳು ಅವರೊಬ್ಬ ಗಾಂಧಿಯ ಕಡು ವ್ಯಾಮೋಹಿ ಎನ್ನುವಂತೆ ಬಿಂಬಿತವಾಗುತ್ತಿದ್ದವು. ಈ ಮಾತಿಗೆ ಪುಷ್ಟಿ ಕೊಡುವಂತೆ ಅವರು ಗಾಂಧೀಜಿಯ ಸರ್ವೋದಯದ ಕಲ್ಪನೆಯನ್ನು ಬೆಂಬಲಿಸಿ ಮಾತನಾಡುತ್ತಿದ್ದರು.  ಈಗಿನ ರಾಜಕಾರಣಿಗಳು ಮಾಡುತ್ತಿರುವ ಕೈಗಾರೀಕರಣ ಹಾಗೂ ಸಿಟಿ, ಬಿಟಿಗಳ ಅಭಿವೃದ್ಧಿ ಅವರ ದೃಷ್ಟಿಯಲ್ಲಿ ಅಭಿವೃದ್ಧಿಯೇ ಅಲ್ಲವಾಗಿತ್ತು. ಒಂದು ಆರ್ಥಿಕ ಬೆಳವಣಿಗೆ ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಬದುಕುವ ಚೈತನ್ಯ ನೀಡಬೇಕು ಅದು ಮಾತ್ರ ಆರ್ಥಿಕ ಅಭಿವೃದ್ಧಿ ಎನ್ನುವುದು ಅವರ ನಿಲುವಾಗಿತ್ತು. ಇದು ಸಾಧ್ಯವಾಗುವುದು ಅದು ಗಾಂಧೀಜಿಯ ಸರ್ವೋದಯದ ಕಲ್ಪನೆಯಿಂದ ಮಾತ್ರ ಸಾಧ್ಯ ಎನ್ನುವ ಸಿದ್ಧಾಂತಕ್ಕೆ ಮೂರ್ತಿಗಳು ಕೊನೆಯವರೆಗೂ ಅಂಟಿಕೊಂಡಿದ್ದರು. ನಗರೀಕರಣ ಮತ್ತು ಮಾಲ್ ಸಂಸ್ಕೃತಿಯನ್ನು ವಿರೋಧಿಸುತ್ತಲೇ ನರೇಂದ್ರ ಮೋದಿಯಂಥ ಕೆಳ  ಸಮುದಾಯದ ಹಾಗೂ ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ ದೇಶದ ಪ್ರಧಾನಿಯಾಗಲು ಸಾಧ್ಯವಾಗುವುದು ಅದು ಗಾಂಧಿ ಕಟ್ಟಿದ ಭಾರತದಲ್ಲಿ ಮಾತ್ರ ಸಾಧ್ಯ ಎನ್ನುವ ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದರು.

               ಅನಂತಮೂರ್ತಿ ಅವರು ಯಾವತ್ತೂ ತಾನು ಬಂದ ಸಮುದಾಯದ ಜಡ ಸಿದ್ಧಾಂತಗಳಿಗೆ ಮತ್ತು ಸಂಪ್ರದಾಯಗಳಿಗೆ ಕುರುಡು ನಂಬಿಕೆಗಳಿಂದ ಕಟ್ಟಿಬಿದ್ದವರಲ್ಲ. ಬೇರುಗಳಿಗೆ ಅಂಟಿಕೊಳ್ಳದೆ rootless (ಬೇರುರಹಿತ) ಆಗಿ ಬದುಕುವ ಕಲೆ ಮತ್ತು ಮನೊಧಾರ್ಢ್ಯ ಪ್ರತಿಯೊಬ್ಬರಲ್ಲಿ ಬಲವಾದಾಗಲೇ ವಿಶ್ವಮಾನವ ಕಲ್ಪನೆ ಸಾಧ್ಯ ಎಂದೆನ್ನುತ್ತಿದ್ದರು. ಒಂದರ್ಥದಲ್ಲಿ ಇದು  ಸ್ಥಾವರಕ್ಕಳಿವುಂಟು  ಜಂಗಮಕ್ಕಳಿವಿಲ್ಲ ಎನ್ನುವ ಬಸವಣ್ಣನ ಸಂದೇಶವನ್ನು ಅವರು ಸ್ವತ: ಪಾಲಿಸಿಕೊಂಡು ಬಂದರು. ಜೊತೆಗೆ ಸ್ಥಾವರವಾಗದೆ ಜಂಗಮರಾಗಿರಿ  ಎನ್ನುವ ಸಂದೇಶವನ್ನು ಸಮಾಜಕ್ಕೆ ನೀಡಿದರು. ಅನಂತಮೂರ್ತಿ ಅವರನ್ನು ಬಸವಶ್ರೀ ಪ್ರಶಸ್ತಿಗೆ ಆಯ್ಕೆಮಾಡಿದ್ದರ ಹಿಂದಿನ ಮಾನದಂಡ ಅವರೊಳಗಿನ ಜಂಗಮ ಕಲ್ಪನೆಯೇ ಆಗಿರಬಹುದು. ಇದನ್ನು ಅರ್ಥಮಾಡಿಕೊಳ್ಳದೆ ಕೆಲವರು ವಚನಗಳನ್ನು ಬರೆಯದೇ ಇರುವ ಅನಂತಮೂರ್ತಿ ಅದು ಹೇಗೆ ಬಸವಶ್ರೀ ಪ್ರಶಸ್ತಿಗೆ ಆಯ್ಕೆಯಾದರು ಎಂದು  ವಿವಾದವನ್ನು ಸೃಷ್ಟಿಸಿ ಅವರ ವ್ಯಕ್ತಿತ್ವದ ತೇಜೋವಧೆಗೆ ಪ್ರಯತ್ನಿಸಿದ್ದುಂಟು.

              ಅನಂತಮೂರ್ತಿ ಅವರು ಸಿದ್ಧಾಂತದ ನೆಲೆಗಟ್ಟಿನಲ್ಲಿ ವಿರೋಧಿಸುತಿದ್ದರೆ ವಿನ: ಯಾವತ್ತೂ ವೈಯಕ್ತಿಕವಾಗಿ ಯಾರನ್ನೂ ವಿರೋಧಿಸಿದವರಲ್ಲ. ಬರಹಗಾರರು, ಚಿಂತಕರು, ಮಠಾಧಿಶರು, ರಾಜಕಾರಣಿಗಳು, ಧಾರ್ಮಿಕ ಮುಖಂಡರು, ವಿಮರ್ಶಕರು ಹೀಗೆ ಮೂರ್ತಿಗಳ ನಿಲುವನ್ನು ಪ್ರತಿಭಟಿಸುವ ದೊಡ್ಡ ಪಡೆಯೇ ಇತ್ತು. ಹೀಗಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಅಪಾರ ಪ್ರಮಾಣದ ಪ್ರತಿಭಟನೆಯನ್ನು ಎದುರಿಸಿದ ಬರಹಗಾರ ಮೂರ್ತಿ ಅವರನ್ನು ಬಿಟ್ಟರೆ  ಬೇರೊಬ್ಬರಿಲ್ಲ. ಅವರು ತಮಗೆ ಎದುರಾಗುವ ಪ್ರತಿಭಟನೆಯನ್ನು ಸಮರ್ಥವಾಗಿಯೇ ನಿಭಾಯಿಸುತ್ತಿದ್ದರು. ತಮ್ಮೊಳಗಿದ್ದ ವಿಶ್ಲೇಷಣಾತ್ಮಕ ಮತ್ತು ವಿಮರ್ಶಾತ್ಮಕ ಗುಣಗಳಿಂದಾಗಿಯೇ ಅವರು ಯಾವುದನ್ನೂ ಸುಲಭವಾಗಿ ಒಪ್ಪಿಕೊಳ್ಳದೆ ಎಲ್ಲವನ್ನೂ ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದರು ಮತ್ತು ಅದನ್ನು ಸೈದ್ಧಾಂತಿಕ ನೆಲೆಯಲ್ಲಿ  ಪ್ರಶ್ನಿಸುತ್ತಿದ್ದರು. ಅವರ ಈ ಗುಣ ಅನೇಕರಿಗೆ ವಿತಂಡವಾದಿಯಂತೆ ಗೋಚರಿಸುತ್ತಿತ್ತು. ಈ ಕಾರಣದಿಂದಲೇ ಮೂರ್ತಿ ಅವರ ಪ್ರತಿ ಹೇಳಿಕೆ ಮತ್ತು ಬರವಣಿಗೆಯನ್ನು ಅದು ಅಗತ್ಯವಿರಲಿ ಇಲ್ಲದಿರಲಿ ಒಂದು ಗುಂಪಿನ ಜನ ಸದಾಕಾಲ ಪ್ರತಿಭಟಿಸುತ್ತಿದ್ದರು. ಅಂಥ ಪ್ರತಿರೋಧಗಳನ್ನು ಸಮರ್ಥವಾಗಿಯೇ ನಿಭಾಯಿಸುತ್ತಿದ್ದ ಅನಂತಮೂರ್ತಿ ಅವರಿಗೆ ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಎರಡು ಪ್ರತಿರೋಧಗಳನ್ನು ಮಾತ್ರ ನಿಭಾಯಿಸಲು ಸಾಧ್ಯವಾಗದೇ ಹೋಯಿತು. ಕುಂವೀ ಕನ್ನಡಕ್ಕೆ ಬಂದ ಎಂಟು ಜ್ಞಾನಪೀಠಗಳಲ್ಲಿ ಎರಡನ್ನು ಕುರಿತು ಅಪಸ್ವರದ ಮಾತನಾಡಿದಾಗ (ಆ ಎರಡರಲ್ಲಿ ಮೂರ್ತಿ ಅವರದೂ ಒಂದು) ಅನಂತಮೂರ್ತಿ ಆ ಒಂದು ಪ್ರತಿರೋಧವನ್ನು ನಿಭಾಯಿಸದೇ 'ಕುಂವೀ ದೈಹಿಕವಾಗಿ ಬಲಾಢ್ಯರು ಅವರೊಡನೆ ಕುಸ್ತಿ ಮಾಡುವುದು ಅಸಾಧ್ಯದ ಸಂಗತಿ' ಎಂದು ಹೇಳಿಕೆ ನೀಡಿ ಸುಮ್ಮನಾದರು. ಇನ್ನೊಂದು ಸಂದರ್ಭ ಮೋದಿ ಆಳುವ ಭಾರತದಲ್ಲಿ ನಾನಿರಲಾರೆ ಎಂದು ಹೇಳಿಕೆ ನೀಡಿದಾಗಲೂ ಅವರ ಈ ಮಾತಿಗೆ ಸಾಕಷ್ಟು ಪ್ರತಿರೋಧ ವ್ಯಕ್ತವಾಯಿತು. ಆಗಲೂ ಮೂರ್ತಿಗಳು ಏನನ್ನೂ ಪ್ರತಿಕ್ರಿಯಿಸಲಿಲ್ಲ. ಇಲ್ಲಿ ಎರಡು ಅಂಶಗಳು ವ್ಯಕ್ತವಾಗುತ್ತವೆ ಒಂದು ಆ ಎರಡು ಘಟನೆಗಳ ಸಂದರ್ಭ ಮೂರ್ತಿ ಅವರಿಗೆ ವಯಸ್ಸಾಗಿದ್ದು ಸಾಕಷ್ಟು ದೈಹಿಕ ತೊಂದರೆಗಳು ಕಾಣಿಸಿಕೊಂಡಿದ್ದವು ಜೊತೆಗೆ ವ್ಯವಸ್ಥೆಯನ್ನು ವಿರೋಧಿಸುವ ಗುಣ ಅವರಲ್ಲಿದ್ದುದ್ದರಿಂದ ತೀರ ವ್ಯಕ್ತಿಗತ  ಪ್ರತಿಭಟನೆಯಾಗಬಹುದೆಂದು ಅವರು ಪ್ರತಿಕ್ರಿಯಿಸದೆ ಹೋಗಿರಬಹುದು. ಅನಂತಮೂರ್ತಿ ಅವರು ಮೋದಿ ಅವರನ್ನು ಆರ್ ಎಸ್ ಎಸ್ ಸಂಘಟನೆಯ ಹಿನ್ನೆಲೆಯಿಂದ ಬಂದವರೆಂಬ ಕಾರಣದಿಂದ ವಿರೋಧಿಸುವುದಕ್ಕಿಂತ ಅವರು ಮೋದಿ ಅವರ ಅಭಿವೃದ್ಧಿಯನ್ನು ವಿರೋಧಿಸುತ್ತಿದ್ದದ್ದೇ ಹೆಚ್ಚು. ಬಹು ರಾಷ್ಟ್ರೀಯ ಕಂಪನಿಗಳಿಗೆ ಕೆಂಪುಗಂಬಳಿ ಹಾಸಿ ಅವರಿಗೆ ಸಕಲ ಸವಲತ್ತುಗಳನ್ನು ಕೊಟ್ಟು ಭಾರತಕ್ಕೆ ಆಹ್ವಾನಿಸುವ ಈ ಗುಣ ಮೂರ್ತಿಗಳಿಗೆ ಅದೊಂದು ಅಪಾಯದಂತೆ ಗೋಚರಿಸುತ್ತಿತ್ತು. ಹೀಗೆ ವ್ಯಾಪಾರದ ನೆಪದಲ್ಲಿ ಭಾರತಕ್ಕೆ ಬಂದ ಈಸ್ಟ್ ಇಂಡಿಯಾ ಕಂಪನಿ ಭಾರತವನ್ನು ಎರಡು ನೂರು ವರ್ಷಗಳ ಕಾಲ ಆಳಿದ ಉದಾಹರಣೆ ನಮ್ಮೆದುರಿರುವಾಗ  ಈ ಬಹುರಾಷ್ಟ್ರೀಯ ಕಂಪನಿಗಳು ಭಾರತವನ್ನು ಮತ್ತೆಲ್ಲಿ ದಾಸ್ಯಕ್ಕೆ ದೂಡುತ್ತವೆಯೋ ಎನ್ನುವ ಭಯ ಮತ್ತು ಅನುಮಾನ ಅವರಲ್ಲಿತ್ತೆಂದು ಕಾಣುತ್ತದೆ. ಈ ಕಾರಣದಿಂದಲೇ ಅವರು ಗಾಂಧೀಜಿ ಅವರ ಸರ್ವೋದಯದ ಕಲ್ಪನೆಯನ್ನು ಬೆಂಬಲಿಸುತ್ತ ಮೋದಿ ಅವರ ಅಭಿವೃದ್ಧಿಯನ್ನು ವಿರೋಧಿಸುತ್ತಿದ್ದರು. ಆದರೆ ಅವರ ತಾತ್ವಿಕ ನಿಲುವನ್ನು ಅರ್ಥಮಾಡಿಕೊಳ್ಳದ ಕೆಲವು ಸಂಘಟನೆಗಳು ನಿನ್ನೆ ಅವರ ನಿಧನದ ಸುದ್ಧಿ ಕೇಳಿ ಪಟಾಕಿ ಸಿಡಿಸಿ ಸಂಭ್ರಮಿಸಿದವು. ಸೂತಕದ  ಮನೆಯಲ್ಲಿ ಸಂಭ್ರಮಿಸುವ ಗುಣ ಇದೊಂದು  ಅನಾಗರಿಕ ವರ್ತನೆ  ಮತ್ತು ನಮ್ಮ ನೆಲದ ಸಂಸ್ಕೃತಿಗೆ ವಿರೋಧವಾದದ್ದು.

       ಜಿ. ಎಸ್. ಎಸ್ ಕುರಿತು ಅನಂತಮೂರ್ತಿ ಹೀಗೆ ಬರೆಯುತ್ತಾರೆ 'ಜಿ. ಎಸ್. ಶಿವರುದ್ರಪ್ಪನವರ ಸಾಹಿತ್ಯವನ್ನು ಓದಿಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಕನ್ನಡದಲ್ಲಿ ಅಸಂಖ್ಯ. ಅವರ ಬದುಕು ಮತ್ತು ಬರಹವನ್ನು ಗಮನಿಸುತ್ತಲೇ ಬರಹಗಾರರಾದವರಿದ್ದಾರೆ. ಅದಕ್ಕೆಂದೇ ಜಿ. ಎಸ್. ಎಸ್ ಅವರನ್ನು ನಮ್ಮ ಕಾಲದ 'ದ್ರೋಣ'ರೆಂದು ಕರೆಯುವುದು ಹೆಚ್ಚು ಸಮಂಜಸವೆನಿಸುತ್ತದೆ'. ಅನಂತಮೂರ್ತಿ ಅವರು ಶಿವರುದ್ರಪ್ಪನವರ ಬಗ್ಗೆ ಹೇಳಿದ ಈ ಮಾತು ಸ್ವತ: ಅವರಿಗೂ ಅನ್ವಯಿಸುತ್ತದೆ. ಮೂರ್ತಿ ಅವರ ಕಥೆ, ಕಾದಂಬರಿಗಳನ್ನೂ ಓದಿ ತಮ್ಮ ಬರವಣಿಗೆಯನ್ನು ಹದಗೊಳಿಸಿಕೊಂಡ ಅನೇಕ ಲೇಖಕರು ಕನ್ನಡದಲ್ಲಿರುವರು. ಜೊತೆಗೆ ಅನಂತಮೂರ್ತಿ ಅವರ ಪ್ರಭಾವದ ಪರಿಣಾಮ ಸಮಾಜದ ಸಮಸ್ಯೆಗಳಿಗೆ ಪ್ರತಿಕ್ರಿಯಿಸಿ ಬರೆಯುವ ಮತ್ತು ಸಮಾಜಮುಖಿಯಾಗಿ ನಿಲ್ಲುವ ಬರಹಗಾರರು ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹುಟ್ಟಿಕೊಂಡರು. ಲೇಖಕರೋರ್ವರು ಹೇಳುವಂತೆ ಅನಂತಮೂರ್ತಿ ಒಂದು ತಲೆಮಾರಿನ ಲೇಖಕರಿಗೆ ಪ್ರಶ್ನಿಸುವುದನ್ನು ಕಲಿಸಿದರು ಮತ್ತು ಪ್ರತಿಭಟಿಸುವುದನ್ನು ಹಕ್ಕೆಂದು ತೋರಿಸಿಕೊಟ್ಟರು. ಸಂವಾದ, ವಾಗ್ವಾದ, ಪ್ರಶ್ನಿಸುವಿಕೆಯ ಮೂಲಕ ಲೇಖಕನಾದವು ತನ್ನ ಪ್ರತಿಭಟನೆಯ ಕಾವನ್ನು ನಿರಂತರವಾಗಿ ಕಾಯ್ದುಕೊಳ್ಳಬೇಕೆನ್ನುವುದನ್ನು ತಮ್ಮ ನಂತರದ ಪೀಳಿಗೆಯ ಲೇಖಕರಿಗೆ ಕಲಿಸಿಕೊಟ್ಟ ಮೇಷ್ಟ್ರು ಅವರು.

       ಡಾ. ಯು. ಆರ್. ಅನಂತಮೂರ್ತಿ ನಮ್ಮ ಮುಂದಿನ ಪೀಳಿಗೆಗೆ ಯಾವ ರೀತಿ ಪರಿಚಿತರಾಗಬೇಕು ಎನ್ನುವ ಪ್ರಶ್ನೆ ಎದುರಾದಾಗ ಲೇಖಕ  ಜೋಗಿ 'ಅನಂತಮೂರ್ತಿ ಅವರು ಬರಹಗಾರನಾಗಿ ಅಲ್ಲದಿದ್ದರೂ ಹೋರಾಟಗಾರನಾಗಿ ಮತ್ತು ಚಿಂತಕನಾಗಿ ನಮ್ಮ ನಂತರದ ಪೀಳಿಗೆಗೆ ಪರಿಚಿತರಾಗಿ ಉಳಿಯುವುದು ಖಂಡಿತ ಸಾಧ್ಯ' ಎನ್ನುವ ಭರವಸೆಯ ಮಾತುಗಳನ್ನಾಡುತ್ತಾರೆ. ಆದ್ದರಿಂದ ಅನಂತಮೂರ್ತಿ ಅವರ ಬರಹ ಮತ್ತು ಚಿಂತನೆಯನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುವ ಕೆಲಸವಾಗಬೇಕು. ಅವರ ಅನುಮಾನದ ಮತ್ತು ಸಂದೇಹದ ನೋಟದಲ್ಲೇ ನಾವು ಬದುಕುತ್ತಿರುವ ಸಮಾಜವನ್ನು ನೋಡುವ ಹಾಗೂ ಪ್ರತಿಭಟಿಸುವ ಜೊತೆಗೆ ಎಲ್ಲವನ್ನೂ ಪ್ರಶ್ನಿಸುವ ಮನೋಭಾವ ಮೂಡುವಂತಾಗಲು ಮೂರ್ತಿ ಅವರ ಬರಹ ಮತ್ತು ಚಿಂತನೆಯನ್ನು ಸಂರಕ್ಷಿಸಿಟ್ಟು ಅದನ್ನು  ದಾಟಿಸುವ ಕೆಲಸವಾಗಬೇಕಿದೆ.  ನಮ್ಮ ಮುಂದಿನ ಪೀಳಿಗೆಯ ಬದುಕನ್ನು ಒಂದಿಷ್ಟು ಸಹನೀಯವಾಗಿಸಲು ಇದು ಇವತ್ತಿನ ತುರ್ತು ಅಗತ್ಯವಾಗಿದೆ ಎನ್ನುವ ಭಾವನೆ ನನ್ನದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


         

       

No comments:

Post a Comment