Wednesday, April 1, 2015

ಪೂರ್ವಾಪರ: ಚಿಂತಕನ ಒಳನೋಟಗಳು






             ಡಾ. ಯು. ಆರ್. ಅನಂತಮೂರ್ತಿ ಈ ನಾಡಿನ ಅಪೂರ್ವ ಚಿಂತಕ ಮತ್ತು ಬರಹಗಾರರಲ್ಲೊಬ್ಬರು. ಸಾಹಿತ್ಯ, ಸಮಾಜ, ರಾಜಕೀಯ, ಭಾಷೆ, ಸಂಸ್ಕೃತಿ ಹೀಗೆ ಹಲವು ಕ್ಷೇತ್ರಗಳ ಬಗ್ಗೆ ತೀವೃ ಸಂವೇದನೆಯಿಂದ ಮಾತನಾಡಿದ ಮತ್ತು ಬರೆದ ಬರಹಗಾರ ಅವರು. ವರ್ತಮಾನದ ಸಮಸ್ಯೆಗಳಿಗೆ ಅನಂತಮೂರ್ತಿ ಅವರು ಸ್ಪಂದಿಸಿದಷ್ಟು ಬೇರೆ ಲೇಖಕರು ಸ್ಪಂದಿಸಿದ್ದು ಕಡಿಮೆ ಎಂದರೆ ಅತಿಶಯೋಕ್ತಿಯಾಗಲಾರದು. ಕುಟುಂಬದ ಸಂಪ್ರದಾಯದ ಚೌಕಟ್ಟಿನಿಂದ ಹೊರಬಂದು ಸಮಾಜವಾದಿ ಹಿನ್ನೆಲೆಯಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡ ಅನಂತಮೂರ್ತಿ ಅವರು ೧೯೭೦ ರ ದಶಕದಲ್ಲೇ 'ಸಂಸ್ಕಾರ' ಕಾದಂಬರಿ ಬರೆದು ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದವರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನದಿಂದ ಕುವೆಂಪು, ಕಾರಂತ, ಬೇಂದ್ರೆ ಅವರಷ್ಟೇ ಟಾಲ್ ಸ್ಟಾಯ್, ಡಿಕ್ಸನ್, ಸಾರ್ತ್ರ್, ಕಾಫ್ಕಾ, ಏಟ್ಸ್ ಸಹ ಅವರ ಬರವಣಿಗೆ ಮತ್ತು ಚಿಂತನೆಯನ್ನು ಪ್ರಭಾವಿಸಿದರು. ಗಾಂಧಿ ಮತ್ತು ಲೋಹಿಯಾ ಹೋರಾಟಗಾರರಾಗಿ ಅನಂತಮೂರ್ತಿ ಅವರಿಗೆ ತುಂಬ ಆಪ್ತರು. ಅನಂತಮೂರ್ತಿ ಅವರು ತಮ್ಮ ಬರಹ ಹಾಗೂ ಮಾತುಗಳಿಂದ ಒಂದು ವಯೋಮಾನದ ಓದುಗರನ್ನು ತುಂಬ ಪ್ರಭಾವಿಸಿರುವರು. ಸಂಸ್ಕಾರ, ಭವ, ದಿವ್ಯ, ಭಾರತಿಪುರ, ಪೂರ್ವಾಪರ, ವಾಲ್ಮೀಕಿಯ ನೆವದಲ್ಲಿ ಕೃತಿಗಳ ಮೂಲಕ ಓದುಗರನ್ನು ತಾವು ಬದುಕುತ್ತಿರುವ ಸಮಾಜದೊಂದಿಗೆ ನಿರಂತರವಾಗಿ ಮುಖಾಮುಖಿಯಾಗಿಸುತ್ತ ಬಂದ ಕನ್ನಡದ ಈ ಅಪೂರ್ವ ಬರಹಗಾರ ಮತ್ತು ಚಿಂತಕ ಸಾಹಿತ್ಯದೊಂದಿಗಿನ ತಮ್ಮ ಒಡನಾಟದಿಂದ ಅಭಿಮಾನಿ ಓದುಗರನ್ನೂ ಹಾಗೂ  ಅನೇಕರ ವಿರೋಧವನ್ನೂ  ಕಟ್ಟಿಕೊಂಡಿದ್ದುಂಟು. ಓದುಗರ ಒತ್ತಾಸೆಗಿಂತ ಟೀಕೆಗಳೇ ಅವರ ಮಾತುಗಳ ನ್ನಾಡುವ  ಮತ್ತು   ಬರೆಯುವ ಉತ್ಸಾಹವನ್ನು ಇಮ್ಮಡಿಗೊಳಿಸಿದವು.  ಅನಂತಮೂರ್ತಿ ಅವರ ಹೇಳಿಕೆಗಳು ಕೆಲವೊಮ್ಮೆ ವಿರೋಧಾಬಾಸಗಳಿಂದ ಕೂಡಿದ್ದರೂ ವಿರೋಧ ಮತ್ತು ಭಿನ್ನಾಭಿಪ್ರಾಯಗಳಿಗೆ ಮಣೆಹಾಕಿ ಹೊಸ ವಿಚಾರಗಳು ಮತ್ತು ಚಿಂತನೆಗಳು ಹುಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟ ಹೆಗ್ಗಳಿಕೆ ಅವರದು. ಅನಂತಮೂರ್ತಿ ಅವರೇ ಹೇಳಿಕೊಂಡಂತೆ ಯಾರೊಂದಿಗೂ ಅವರು ವ್ಯಕ್ತಿಗತ ನೆಲೆಗಟ್ಟಿನಲ್ಲಿ ವಿರೋಧವನ್ನು ಕಟ್ಟಿಕೊಂಡವರಲ್ಲ. ಅವರ ವಿರೋಧವೆನಿದ್ದರೂ ಅದು ವೈಚಾರಿಕ ನೆಲೆಯಲ್ಲಿ ಮಾತ್ರ. ಅದಕ್ಕೆಂದೇ ಲೇಖಕರೊಂದಿಗೆ ವಾಗ್ವಾದಕ್ಕಿಳಿದಾಗಲೆಲ್ಲ ತನ್ನ ಸೋಲಿನಿಂದಾದರೂ ಹೊಸ ವಿಚಾರಗಳು ಹುಟ್ಟಿಕೊಳ್ಳಲಿ ಎಂದು ಅವರು ಆಶಿಸುತ್ತಿದ್ದರು. 'ವಾಲ್ಮೀಕಿಯ ನೆವದಲ್ಲಿ' ಪುಸ್ತಕವನ್ನು ವಿಮರ್ಶಕರ ಟೀಕೆ ಟಿಪ್ಪಣಿಗಳೊಂದಿಗೆ ಪ್ರಕಟಿಸಿದ್ದು ಕನ್ನಡ ಸಾಹಿತ್ಯದಲ್ಲಿ ಅದೊಂದು ಹೊಸ ಪ್ರಯೋಗವಾಗಿದ್ದು ಇದು ಅನಂತಮೂರ್ತಿ ಅವರು ಭಿನ್ನಾಭಿಪ್ರಾಯಗಳಿಗೆ ಹಾಗೂ ಟೀಕೆಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದರು ಎನ್ನುವುದಕ್ಕೆ ಪುರಾವೆಯಾಗಿದೆ. 

               'ಪೂರ್ವಾಪರ' ಅನಂತಮೂರ್ತಿ ಅವರ ಸಾವಿನ ನಂತರ ನಾನು ಓದಿಗಾಗಿ ಕೈಗೆತ್ತಿಕೊಂಡ ಅವರ ಮಹತ್ವದ ಕೃತಿಗಳಲ್ಲೊಂದು. ೧೯೯೦ ರಲ್ಲಿ ಪ್ರಕಟವಾದ ಈ ಪುಸ್ತಕದಲ್ಲಿ ಅನಂತಮೂರ್ತಿ ಅವರು ವಿವಿಧ ಸಂದರ್ಭಗಳಲ್ಲಿ ಮಾಡಿದ ಭಾಷಣಗಳು ಮತ್ತು ಬರೆದ ಲೇಖನಗಳ ಸಂಗ್ರಹವಿದೆ. ಹೆಚ್ಚಿನ ಲೇಖನಗಳು ಅವರು ಸಂಪಾದಕರಾಗಿ 'ರುಜುವಾತು' ಪತ್ರಿಕೆಗೆ ಬರೆದವುಗಳು. 'ರುಜುವಾತು' ಪತ್ರಿಕೆ ಶುರುವಾದುದ್ದರ ಹಿಂದೆ ಒಂದು ಕಥೆಯಿದೆ. ಈ ಪುಸ್ತಕದ ಪ್ರಾರಂಭದಲ್ಲಿ ಹೇಳಿಕೊಂಡಂತೆ ೧೯೮೦ ರ ದಶಕದ ಪ್ರಾರಂಭದಲ್ಲಿ ಬರವಣಿಗೆಗೆ ಸಂಬಂಧಿಸಿದಂತೆ ಒಂದು ವಿಚಿತ್ರ ಬಗೆಯ ಸೋಮಾರಿತನ ಅನಂತಮೂರ್ತಿ ಅವರಲ್ಲಿ ಕಾಣಿಸಿಕೊಂಡಿತು. ಇಂಥ ಪರಿಸ್ಥಿತಿಯಲ್ಲಿ ಅವರನ್ನು ನೋಡಲು ಬಂದ ಕಿ ರಂ ನಾಗರಾಜ ಮತ್ತು ಸತ್ಯನಾರಾಯಣ ಒಂದು ಪತ್ರಿಕೆಯನ್ನು ಪ್ರಾರಂಭಿಸುವಂತೆ ಒತ್ತಾಯಿಸಿದರ ಪರಿಣಾಮ 'ರುಜುವಾತು' ಪತ್ರಿಕೆ ಶುರುವಾಯಿತು. ಬರವಣಿಗೆಯ ಸೋಮಾರಿತನದಿಂದ ಹೊರಬರುವ ಅನಂತಮೂರ್ತಿ ಅವರು ಒಂದು ದಶಕದ ಕಾಲ ಸಂಪಾದಕರಾಗಿ ಪತ್ರಿಕೆಯನ್ನು ಮುನ್ನಡೆಸುವುದರೊಂದಿಗೆ ಅನೇಕ ಬರಹಗಾರರು ಬೆಳೆಯಲು ವೇದಿಕೆ ರೂಪಿಸಿದರು. ಅನಂತಮೂರ್ತಿ ಅವರ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಚಿಂತನೆಗಳು 'ರುಜುವಾತು' ಪತ್ರಿಕೆಯ ಮೂಲಕ ನಾಡಿನ ಓದುಗರನ್ನು ತಲುಪಿದವು. ರುಜುವಾತು ಪತ್ರಿಕೆ ಒಂದು ದಶಕದ ಕಾಲ ಈ ನಾಡಿನ ಓದುಗರನ್ನು ಗಾಂಧಿ, ಲೋಹಿಯಾರಂಥ ಹೋರಾಟಗಾರರಿಗೆ, ಕುವೆಂಪು, ಬೇಂದ್ರೆ, ಡಿಡಿರೋ, ಟಾಲ್ ಸ್ಟಾಯ್ ಅವರಂಥ ಸೃಜನಶೀಲರಿಗೆ, ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳಿಗೆ, ಈ ನಾಡಿನ ಚಳವಳಿಗಳಿಗೆ ಮುಖಾಮುಖಿಯಾಗಿಸಿತು. 'ರುಜುವಾತು' ಪತ್ರಿಕೆಯಲ್ಲಿ ಪ್ರಕಟವಾದ ಅನಂತಮೂರ್ತಿ ಅವರ ಆ ಎಲ್ಲ ಚಿಂತನೆಗಳು ಇಡೀಯಾಗಿ ಓದುಗರಿಗೆ ತಲುಪುವಂತಾಗಲಿ ಎನ್ನುವ ಆಶಯದಿಂದ ಕೆ ವಿ ಸುಬ್ಬಣ್ಣನವರು ತಮ್ಮ ಅಕ್ಷರ ಪ್ರಕಾಶನದಿಂದ 'ಪೂರ್ವಾಪರ' ಕೃತಿಯನ್ನು ಪ್ರಕಟಿಸಿರುವರು.

ವ್ಯಕ್ತಿ ಚಿತ್ರಣ


                 ಪುಸ್ತಕದ ಅಲ್ಲಲ್ಲಿ ಲೇಖಕರು ಬೇಂದ್ರೆ, ಪುತಿನ, ಕೃಪಲಾನಿ,  ತರಾಸು, ಮಾಸ್ತಿ ಇತ್ಯಾದಿ ಮಹನೀಯರನ್ನು ಸ್ಮರಿಸಿ ಕೊಂಡಿರುವರು. ಕೆಲವರ ಕುರಿತು ಬರೆಯುವಾಗ ಅನಂತಮೂರ್ತಿ ಅವರು ತುಂಬ ಆರ್ದ್ರರಾಗುತ್ತಾರೆ ಮತ್ತು ಇನ್ನು ಕೆಲವರ ಕುರಿತು ಕಠೋರ ನಿಲುವು ತಳೆಯುತ್ತಾರೆ. ವ್ಯಕ್ತಿ ಚಿತ್ರಣದ ವೈಶಿಷ್ಟ್ಯ ವೇ ಅದು.   ತೀರ ಮುಖಸ್ತುತಿಯಾಗಲಿ ಇಲ್ಲವೇ ವೈಯಕ್ತಿಕ ದ್ವೇಷವಾಗಲಿ ಇಲ್ಲದೆ ತಮಗನಿಸಿದ್ದನ್ನು ಲೇಖಕರು ನೇರವಾಗಿ ಹೇಳಿರುವುದರಿಂದ ಬರಹ ಓದುಗನಿಗೆ ಆಪ್ತವಾಗುತ್ತದೆ. ಸಾಹಿತ್ಯದಲ್ಲಿ ರಸಪ್ರಜ್ಞೆ ಹುಟ್ಟುವುದು ಬರಹಗಾರ ಸ್ವಕೇಂದ್ರದಿಂದ ಮುಕ್ತಿ ಪಡೆದಾಗ ಮಾತ್ರ ಎಂದೆನ್ನುವ ಮೂರ್ತಿ ಅವರು ಅದಕ್ಕೆ ಉದಾಹರಣೆಯಾಗಿ ಪುತಿನ ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಪುತಿನ ತಮ್ಮ ಜೀವನಾನುಭವವನ್ನು ಗಾಢವಾಗಿತೊಡಗಿಸಿಕೊಂಡೆ ಮತ್ತೆ ಹೊಸ ಬಗೆಯಲ್ಲಿ ಸಾಧಿಸಿದ ಕವಿ ಇದಾಗದಿದ್ದಲ್ಲಿ ಅವರ ಕಾವ್ಯ ಎಡೆತಡೆಯಿಲ್ಲದ ಮಾತಿನ ಸ್ವಪ್ರದರ್ಶನರತಿಯಾಗುತ್ತಿತ್ತು ಎಂದು ವಿಮರ್ಶಿಸುತ್ತಾರೆ.  ತನ್ನ ಸ್ವಭಾವದ ಪ್ರದರ್ಶನರತಿಗೆ ತಾನೇ ಮರುಳಾದವನಿಗೆ ಕ್ರಾಂತಿ ಎಂಬುದು ಸರ್ವನಾಶದ ಸುಖ ಕೊಡಬಲ್ಲ ಒಂದು ತೀಟೆಯಾಗಿಬಿಡಬಹುದು ಎಂದು ಆತಂಕ ಪಡುವ ಲೇಖಕರು ಪುತಿನ ಅವರ ಬರಹ ಇಂಥ ಎಲ್ಲ ವಿಪರ್ಯಾಸಗಳಿಂದ ಮುಕ್ತವಾಗಿತ್ತು ಎನ್ನುತ್ತಾರೆ. ಪುತಿನ ಅವರ ಜೊತೆ ಜೊತೆಗೆ ಲಾರೆನ್ಸ್, ಕಾನ್ರಾಡ್, ಬ್ಲೇಕ್, ದಾಸ್ತೊವಸ್ಕಿ, ಬೋದಿಲೇರ್ ಕೂಡ ನಮ್ಮ ಓದಿಗೆ ದಕ್ಕುವುದೇ ಒಂದು ವಿಶಿಷ್ಠ ಅನುಭವ.

                  ಬೇಂದ್ರೆ ಕುರಿತು ಬರೆಯುವಾಗ ಅವರನ್ನು ನಮ್ಮ ಕಾಲದ ದೊಡ್ಡ ಕವಿ ಎಂದು ಹೇಳುವ ಅನಂತಮೂರ್ತಿ ಅವರು ಆತ್ಮಕಾಮಿ ಹಾಗೂ ಜೀವಕಾಮಿಯಾಗಿದ್ದ ಬೇಂದ್ರೆ ಅಲ್ಲಿಂದ ಕೆಳಗಿಳಿದು ಬರಬಲ್ಲವರಾಗಿದ್ದರಿಂದಲೇ ಅವರ ಕಾವ್ಯ ಸೃಜನಶೀಲತೆಯ ಸ್ವರೂಪ ಪಡೆಯಿತು ಎಂದು ಬೇಂದ್ರೆ ಅವರ ವ್ಯಕ್ತಿತ್ವವನ್ನು ವರ್ಣಿಸುತ್ತಾರೆ. ಬೇಂದ್ರೆ ಸಾಮಾನ್ಯರಂತೆ ಬದುಕಿ ಜೀವನಾನುಭವವನ್ನು ಗಾಢವಾಗಿ ಅನುಭವಿಸಿದರು ಎನ್ನುವುದನ್ನು ವಿವರಿಸಲು  ಅವರು ಕೊಡುವ ಉದಾಹರಣೆ ಹೀಗಿದೆ 'ನೊಬೆಲ್ ಪಾರಿತೋಷಕ ಪಡೆದ ನಂತರ ಗೌರವಾನ್ವಿತ ಋಷಿಯಂತೆ ಬದುಕಬೇಕಾಗಿ ಬಂದ ಟ್ಯಾಗೋರ್, ತಾನು ಆಗಬೇಕೆಂಬ ಆದರ್ಶವನ್ನು ಮುಖವಾಡ ಮಾಡಿಕೊಂಡು ಬದುಕಿದ ಏಟ್ಸ್ ಆದರೆ ಬೇಂದ್ರೆ ತನ್ನೆಲ್ಲ ಇಹಪರಗಳ ಪರದಾಟಗಳನ್ನು ಒಟ್ಟಾಗಿ ಬದುಕಲು ಸಾಧ್ಯವಾದದ್ದು ಅವರ ವ್ಯಕ್ತಿತ್ವದ ವಿಶಿಷ್ಠತೆಯಿಂದ'. ಛತ್ರಿ ಚೀಲಗಳನ್ನು ಹಿಡಿದುಕೊಂಡು ಕೋಪ ತಾಪದಿಂದ ಧಾರವಾಡದ ಬೀದಿಗಳಲ್ಲಿ ಓಡಾಡುತ್ತಿದ್ದ ಸಾಮಾನ್ಯನಾಗಿಯೂ ಮತ್ತು ಗಂಗಾವತರಣದ ಅಸಾಮಾನ್ಯನಾಗಿಯೂ ಬೇಂದ್ರೆ ನಮಗೆ ನಿಲುಕುವಂತೆ ಅನಂತಮೂರ್ತಿ ಇಲ್ಲಿ ಬೇಂದ್ರೆ ಅವರನ್ನು ಚಿತ್ರಿಸಿರುವರು.

               ಆಚಾರ್ಯ ಜೆ ಬಿ ಕೃಪಲಾನಿ ನಿಧನರಾದಾಗ ಗಾಂಧಿ ಯುಗದ ಕೊನೆಯ ಕಂಡಿ ಕಳಚಿದಂತಾಯಿತು ಎಂದು ನೋವಿನಿಂದ ನುಡಿಯುತ್ತಾರೆ. ಕೃಶವಾಗುತ್ತ ಹೋಗುತ್ತಿರುವ ರಾಷ್ಟ್ರದ ನೈತಿಕ ಪ್ರಜ್ಞೆಯನ್ನು ಜಾಗೃತವಾಗಿಡಲು ತನ್ನ ಕೊನೆಯ ಘಳಿಗೆಯ ತನಕ ಶ್ರಮಿಸಿದ ಕೃಪಲಾನಿ ಬದುಕಿನಲ್ಲಿ ನಿಷ್ಟುರರಾಗಿಯೂ ಪ್ರಾಮಾಣಿಕನಾಗಿಯೂ ಉಳಿದರು ಎಂದು ಹೇಳುವ ಲೇಖಕರು ಇದನ್ನು ರಾಜಕೀಯದಲ್ಲಿ ಸಾಧಿಸುವುದು ಹೆಚ್ಚು ಕಠಿಣ ಎಂದು ಓದುಗರಿಗೆ ವಾಸ್ತವವನ್ನು ನೆನಪಿಸುತ್ತಾರೆ. ವಿನೋಬಾಭಾವೆ ಕುರಿತು ಬರೆಯುವಾಗ ಅಲ್ಲಿ ಮೆಚ್ಚುಗೆಯ ಜೊತೆಗೆ ಟೀಕೆಯೂ ಇದೆ. ವಿನೋಬಾರ ಅಧಿಕಾರ ವಿಕೇಂದ್ರಿಕರಣದ ಕಲ್ಪನೆಯನ್ನು ಮೆಚ್ಚುವ ಅನಂತಮೂರ್ತಿ ತುರ್ತುಪರಿಸ್ಥಿತಿಗೆ ಬೆಂಬಲ ನೀಡಿದ ಅವರನ್ನು ಸರ್ಕಾರಿ ಸಂತ ಎಂದು ಟೀಕಿಸುತ್ತಾರೆ. ಮೋಹದ ಪ್ರಪಂಚದ ಹಂಗಿಲ್ಲದಂತೆ ಬದುಕುವಾತ ಅರಿಯಬಲ್ಲ ಸತ್ಯಗಳು ಕೇವಲ ಅಮೂರ್ತವಾಗುತ್ತವೆಯೇ? ಕಾವಿಲ್ಲದ ಸತ್ವಹೀನವಾಗುತ್ತವೆಯೇ? ಎನ್ನುವ ಪ್ರಶ್ನೆಗಳು ವಿನೋಬಾರ ಬ್ರಹ್ಮಚರ್ಯದ ಹಿನ್ನೆಲೆಯಲ್ಲಿ ಲೇಖಕರಿಗೆ ಎದುರಾಗುತ್ತವೆ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕುರಿತು ಬರೆಯುವಾಗಲೂ ಅನಂತಮೂರ್ತಿ ಒಂದಿಷ್ಟು ಕಠಿಣರಾಗುತ್ತಾರೆ. ಮಧ್ಯಮ ವರ್ಗದ ಪ್ರೇಕ್ಷಕರ ನೀರಸ ಬದುಕಿಗೆ ಕೆಲವು ಕ್ಷಣಗಳ ಉತ್ಕಟತೆಯ ಭ್ರಮೆಯನ್ನು ಉಂಟುಮಾಡುವುದಕ್ಕಾಗಿ ಮಾತ್ರ ಪುಟ್ಟಣ್ಣನವರ ಕಲೆಗಾರಿಕೆ ವ್ಯಯವಾದದ್ದು ಒಂದು ದುರಂತ ಎಂದು ಹಳಹಳಿಸುತ್ತಾರೆ. ಕಾರಂತರ ಬಗ್ಗೆ ಬರೆಯುವಾಗ ಕಾರಂತರ ಪ್ರಭಾವ ಅಜ್ಞಾತವಾಗಿ ನನ್ನ ಬರವಣಿಗೆಯ ಹಿಂದೆ ಕೆಲಸ ಮಾಡಿದೆ ಎನ್ನುವ ಲೇಖಕರು  ಕಾರಂತರ ಸಾಹಿತ್ಯದ ಪ್ರಭಾವ ನವ್ಯರ ಮೇಲಾಗಿದೆ ಎಂದು ಆತ್ಮಶೋಧನೆಗಿಳಿಯುತ್ತಾರೆ. ಕಾರಂತರ ಮರಳಿ ಮಣ್ಣಿಗೆಯ ಲಚ್ಚ ನನ್ನ ಸಂಸ್ಕಾರದ ನಾರಣಪ್ಪನನ್ನು ಪ್ರೇರೇಪಿಸಿದ ಎಂದು ಯಾವ ಮುಚ್ಚು ಮರೆಯಿಲ್ಲದೆ ನುಡಿಯುತ್ತಾರೆ. ತರಾಸು, ಮಾಸ್ತಿ, ಚದುರಂಗ, ನಿರಂಜನರ ಕುರಿತು ಬರೆಯುವ ಸಂದರ್ಭ ಲೇಖಕರು ಹೆಚ್ಚು ಆರ್ದ್ರರಾಗುತ್ತಾರೆ. ಬರವಣಿಗೆಯನ್ನು ಆಕರ್ಷಕ ಕ್ರಿಯೆಯಾಗಿ ಮಾಡಿದ ತರಾಸು ಅವರಷ್ಟೇ ಕನ್ನಡಕ್ಕಾಗಿ ಜೀವ ತೇದ ಮಾಸ್ತಿ ಕೂಡ ಅನಂತಮೂರ್ತಿ ಅವರಿಗೆ ಆಪ್ತರಾಗುತ್ತಾರೆ. ಒಂದು ಸಂದರ್ಭ ನಿರಂಜನರೊಂದಿಗೆ ವಿರೋಧ ಕಟ್ಟಿಕೊಂಡಾಗ ಅಪ್ಪಟ ನಿರಂಜನರನ್ನು ಕಾಣಲು ಶ್ರಮಿಸಬೇಕು ಹಾಗೂ ಅದನ್ನು ಮಾಡಲು ನಾನೂ ಅಪ್ಪಟನಾದ (ಯಾವ ಮುಖವಾಡವೂ ಇಲ್ಲದ)  ಅನಂತಮೂರ್ತಿಯಾಗಬೇಕು ಎನ್ನುವ ಸತ್ಯ ನುಡಿಯಲು ಹಿಂಜರಿಯುವುದಿಲ್ಲ. ನಿಜಕ್ಕೂ ಅವರ ಆತ್ಮಶೋಧನೆಯ ಈ ಗುಣ ಓದುಗರಿಗೆ ಇಷ್ಟವಾಗುತ್ತದೆ. ಒಟ್ಟಾರೆ ತಮ್ಮ ಒಡನಾಟದ ವ್ಯಾಪ್ತಿಗೆ ಬಂದ ಮಹನೀಯರ ಕುರಿತು ಬರೆಯುವಾಗ ಯಾವ ರಾಗ ದ್ವೇಷಗಳಿಗೂ ಒಳಗಾಗದ ಮತ್ತು ಮುಖ ಸ್ತುತಿಗೂ ಇಳಿಯದ ಲೇಖಕರ ಈ ಪ್ರಜ್ಞಾಪೂರ್ವಕ ನಿಲುವಿನಿಂದಾಗಿ ಬರಹ ಓದುಗನಿಗೆ ಹೆಚ್ಚು ಆಪ್ತವಾಗುತ್ತದೆ.

ಜಾತಿ ಮತ್ತು ಸಾಹಿತ್ಯ


              ಜಾತಿ ವ್ಯವಸ್ಥೆ ಕನ್ನಡ ಸಾಹಿತ್ಯವನ್ನು ಹೇಗೆ ಪ್ರಭಾವಿಸಿದೆ ಎಂದು ಅನಂತಮೂರ್ತಿ ಸಾಹಿತ್ಯದ ವಿಶ್ಲೇಷಣೆಗಿಳಿಯುತ್ತಾರೆ. ಲೇಖಕನೋರ್ವ ತನ್ನ ಜಾತಿಯ ಚೌಕಟ್ಟಿನಿಂದ ಹೊರಬಂದು ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸದೇ ಹೋದಲ್ಲಿ ಅಂಥ ಸಾಹಿತ್ಯದಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಲೇಖಕರದು. ಸಾಹಿತ್ಯವೊಂದು ತಲಸ್ಪರ್ಶಿಯಾಗಿ, ಸೂಕ್ಷ್ಮವಾಗಿ ಭಾರತದ ಮನಸ್ಸನ್ನು ಮುಟ್ಟಿ ಬದಲಿಸಬೇಕಾದ ಕಾರ್ಯ ಕನ್ನಡ ನಾಡಿನಲ್ಲಿ ಸ್ವಲ್ಪಮಟ್ಟಿಗೆ ಈ ಜಾತಿಯ ಗೊಂದಲದಿಂದಾಗಿ ಹಿಂಜರಿಯಿತು ಎಂದೆನ್ನುವ ಲೇಖಕರು ತನ್ನ ಜಾತಿಯವನ ಕೃತಿಯನ್ನು ಮೆಚ್ಚುವುದಾಗಲಿ ಬೇರೆ ಜಾತಿಯವರನ್ನು ಟೀಕಿಸುವುದಾಗಲಿ ಮುಜುಗರದ ವಿಷಯವಾಯಿತು ಎಂದೆನ್ನುತ್ತಾರೆ. ಇಂಥದ್ದೊಂದು ವ್ಯವಸ್ಥೆಯ ಪರಿಣಾಮ ಕನ್ನಡದಲ್ಲಿ ವಸ್ತುನಿಷ್ಠ  ವಿಮರ್ಶೆ ಹಿಮ್ಮೆಟ್ಟಿತು ಮತ್ತು ವ್ಯಕ್ತಿನಿಷ್ಠ ವಿಮರ್ಶೆ ಮುಖ್ಯ ವಾಹಿನಿಗೆ ಬಂತು ಎಂದು ಆತಂಕ ಪಡುವರು. ಜಾತಿಯನ್ನು ಆಧಾರವಾಗಿಟ್ಟುಕೊಂಡು  ಮನಬಂದಂತೆ ಕೃತಿಕಾರನ ಮೇಲೆ ಮಾಡುವ ಆರೋಪಗಳೇ ಕೃತಿ ವಿಮರ್ಶೆ ಎಂಬ ಭ್ರಾಂತಿಯಲ್ಲಿ ಅನೇಕ ತರುಣರು ಬರೆಯಲು ಪ್ರಾರಂಭಿಸಿದ್ದು ಕನ್ನಡ ಸಾಹಿತ್ಯದ ಬಹುದೊಡ್ಡ ದುರಂತಗಳಲ್ಲೊಂದು. ಕೆಲವು ಲೇಖಕರು ಎಷ್ಟೇ ಉದಾರ ಧೋರಣೆಯವರಾದರೂ ಬ್ರಾಹ್ಮಣರೆಂಬ ಕಾರಣಕ್ಕೆ ಪ್ರೋತ್ಸಾಹವನ್ನು ಪಡೆಯಲಾರದೆ ಹೋದರು ಮತ್ತು ಕೆಲವು ಬ್ರಾಹ್ಮಣೇತರ ಲೇಖಕರು ಹುಂಬತನದಿಂದ ತಾವು ಬರೆದುದ್ದಕ್ಕೆಲ್ಲ ಪ್ರೋತ್ಸಾಹ ಪಡೆಯುತ್ತಾ ಕಷ್ಟದ ದಾರಿ ತುಳಿದು ಪಕ್ವವಾಗಬೇಕಾದ ಪ್ರಕ್ರಿಯೆಯಿಂದ ವಂಚಿತರಾದರು. ಇದು ಕನ್ನಡ ಸಾಹಿತ್ಯಕ್ಕಾದ ನಷ್ಟ ಎನ್ನುವ ಪ್ರಜ್ಞೆಯಿಂದ ಅನಂತಮೂರ್ತಿ ಬರೆಯುತ್ತಾರೆ. ಜೊತೆಗೆ ಎದುರಾದ ಇನ್ನೊಂದು ಅಪಾಯವೆಂದರೆ ತಾನು ಜಾತಿವಾದಿಯಲ್ಲವೆಂದು ತೋರಿಸಿಕೊಳ್ಳುವುದಕ್ಕಾಗಿ ಎಷ್ಟೋ ವಿಮರ್ಶಕರು ತಮ್ಮ ಜಾತಿಯವರನ್ನು ತೆಗಳಿ ಬೇರೆಯವರನ್ನು ಹೊಗಳಿ ಬರೆಯಲಾರಂಭಿಸಿದರು. ಸಾಹಿತ್ಯ ಲೋಕದಲ್ಲಿ ಮನೆಮಾಡಿಕೊಂಡಿರುವ ಇಂಥದ್ದೊಂದು ಅನುಮಾನದಿಂದ ಹೊರಬರುವ ಪ್ರಯತ್ನವಾಗಿಯೇ ಅನಂತಮೂರ್ತಿ ಅವರು 'ಬ್ರಾಹ್ಮಣನಾಗಿ ನಾನು' ಎಂದು ಬರೆಯುತ್ತಾರೆ. ಬ್ರಾಹ್ಮಣನಾಗಿ ಹುಟ್ಟಿ ಬೆಳೆದ ಲೇಖಕರಿಗೆ (ಅನಂತಮೂರ್ತಿ) ಬ್ರಾಹ್ಮಣರ ಮನಸ್ಸನ್ನು ನೋಯಿಸುವುದು ಅನಿವಾರ್ಯವೇ ಹೊರತು ಇಷ್ಟದ ಸಂಗತಿಯಾಗಿರಲಿಲ್ಲ. ಸಂಸ್ಕಾರ, ಘಟಶ್ರಾದ್ಧ, ಭಾರತೀಪುರ ಕಥೆಗಳು ಬ್ರಾಹ್ಮಣರನ್ನು ತುಂಬ ನೋಯಿಸಿವೆ ಮತ್ತು ಕೆಲವರಿಗೆ ಕೋಪವನ್ನೂ ಉಂಟುಮಾಡಿವೆ ಎನ್ನುವ ವಾಸ್ತವದ ಅರಿವು ಅವರಿಗಿತ್ತು. ಜೊತೆಗೆ ಬ್ರಾಹ್ಮಣರನ್ನು ಟೀಕಿಸುವುದು ಇದೂ ಒಂದು ಬ್ರಾಹ್ಮಣ ತಂತ್ರ ಎಂದು ಸಂದೇಹದಿಂದ ನೋಡುವ ಬ್ರಾಹ್ಮಣೇತರ ಬುದ್ದಿ ಜೀವಿಗಳು ನಮ್ಮನ್ನು ಸುತ್ತುವರಿದ ಪ್ರಜ್ಞೆ ಹಾಗೂ ಎಚ್ಚರಿಕೆ ಅವರಲ್ಲಿದ್ದವು. ಇಂಥದ್ದೊಂದು ಸಂದೇಹ ಮತ್ತು ಅನುಮಾನಕ್ಕೆ ನಮ್ಮ ಮುಸ್ಲಿಂ ಲೇಖಕರೂ ಒಳಗಾಗುತ್ತಿರುವುದು ಚರ್ಚೆಯಾಗಬೇಕಾದ ಬಹುಮುಖ್ಯ ವಿಷಯಗಳಲ್ಲೊಂದು. ಸ್ವಜಾತಿ ಪ್ರೇಮವಾಗಲಿ ಮತ್ತು ತನ್ನದಲ್ಲದ ಜಾತಿಯನ್ನು ದ್ವೇಷಿಸುವ ಗುಣವಾಗಲಿ ಅನಂತಮೂರ್ತಿ ಅವರಲ್ಲಿ ಇಲ್ಲದೆ ಇದ್ದುದ್ದರಿಂದ ಬೇಂದ್ರೆ, ಮಾಸ್ತಿ, ಅನಕೃ ಅವರಂಥ ಬ್ರಾಹ್ಮಣ ಬರಹಗಾರರಷ್ಟೇ ಕುವೆಂಪು, ದೇವನೂರ ಮಹಾದೇವ, ಚದುರಂಗರಂಥ ಬ್ರಾಹ್ಮಣೇತರ ಲೇಖಕರೂ ಅವರಿಗೆ ಪ್ರಿಯರೂ ಮತ್ತು ಆಪ್ತರೂ ಆಗಿ ಉಳಿಯಲು ಸಾಧ್ಯವಾಯಿತು. ದಾಸರ ಕೀರ್ತನೆಗಳು ಮತ್ತು  ಬಸವಣ್ಣ ಅಲ್ಲಮರ ವಚನಗಳೂ ಅವರ ಓದಿನ ಪ್ರಧಾನ ಆದ್ಯತೆಗಳಾದವು.

ಪಾಶ್ಚಿಮಾತ್ಯ ಸಾಹಿತ್ಯದೊಂದಿಗೆ  ಮುಖಾಮುಖಿ


                  ಕನ್ನಡದ ಕೆಲವು ಬರಹಗಾರರು ಪ್ರಜ್ಞಾಪೂರ್ವಕವಾಗಿಯೇ ಜಗತ್ತಿನ ಸಾಹಿತ್ಯಕ್ಕೆ ಮುಖಾಮುಖಿಯಾಗಿದ್ದು ಕನ್ನಡ ಸಾಹಿತ್ಯದ ಓದುಗರಿಗಾದ ಬಹುದೊಡ್ಡ ಲಾಭವಿದು. ಈ ವಿಷಯದಲ್ಲಿ ಲಂಕೇಶ್, ತೇಜಸ್ವಿ ಅವರಷ್ಟೇ ಅನಂತಮೂರ್ತಿ ಅವರ ಕೊಡುಗೆಯೂ ಅಪಾರವಾಗಿದೆ. ಶಿಕ್ಷಣ ಮತ್ತು ವೃತ್ತಿಯ ನಿಮಿತ್ಯ ಭಾರತದಿಂದ ಒಂದಿಷ್ಟು ಕಾಲ ದೂರ ಉಳಿಯಬೇಕಾಗಿಬಂದ ಕಾರಣ ಇಂಗ್ಲಿಷ್ ಸಾಹಿತ್ಯ ಅನಂತಮೂರ್ತಿ ಅವರನ್ನು ಹೆಚ್ಚು ಪ್ರಭಾವಿಸಿತು. ಈ ಕಾರಣದಿಂದಲೇ ಅನಂತಮೂರ್ತಿ ಅವರ ಲೇಖನಗಳನ್ನು ಓದುವಾಗ ಪಾಶ್ಚಾತ್ಯ ಬರಹಗಾರರು ನಮ್ಮ ಓದಿನ ಅನುಭವಕ್ಕೆ ದಕ್ಕುತ್ತಾರೆ. ಟಾಲ್ ಸ್ಟಾಯ್, ಡಿಡೆರೋ, ಬೋದಿಲೇರ್, ಏಟ್ಸ್, ಬ್ಲೇಕ್, ಲಾರೆನ್ಸ್ ಇವರೆಲ್ಲ ನಮ್ಮದೇ ಭಾಷೆಯವರೆನೋ ಎನ್ನುವಷ್ಟು ನಮಗೆ ಆಪ್ತರಾಗುತ್ತಾರೆ. ಕ್ರಾಂತಿಕಾರಿಯೊಬ್ಬ ತನ್ನ ಸ್ವಭಾವದ ಪ್ರದರ್ಶನರತಿಗೆ ತಾನೇ ಮರುಳಾದಾಗ ಎದುರಾಗಬಹುದಾದ ಅಪಾಯವನ್ನು ಕಾನ್ರಾಡ್ ನ 'ದಿ ಸಿಕ್ರೆಟ್ ಏಜೆಂಟ್'   ಕೃತಿಯ ಮೂಲಕ ತೆರೆದಿಡುವರು. ಸ್ವಕೇಂದ್ರದ ವ್ಯಾಮೋಹಕ್ಕೆ ಸಿಲುಕಿದ ಕ್ರಾಂತಿಕಾರಿಯೊಬ್ಬ ತನ್ನ ಹೆಂಡತಿಯ ತಮ್ಮನನ್ನು ಕ್ರಾಂತಿಯ ಉನ್ಮಾದಕ್ಕೆ ಸಿಲುಕಿಸಿ ಅವನನ್ನು ಸಾಯಿಸುತ್ತಾನೆ. ಹೆಂಡತಿ ಇದನ್ನು ತಿಳಿದೊಡನೆ ಮಾಂಸ ಕೊಯ್ಯುವ ಕತ್ತಿಯಿಂದಲೇ ಗಂಡನನ್ನು ಇರಿದು ಸಾಯಿಸುತ್ತಾಳೆ. ಇಲ್ಲಿ ಕಾನ್ರಾಡ್ ಪೋಲೆಂಡಿನ ಅರಾಜಕತೆಯನ್ನು ದುರುಪಯೋಗಪಡಿಸಿಕೊಂಡು ವಿನಾಶವನ್ನು ಪ್ರೀತಿಸುವ ಕ್ರಾಂತಿಕಾರರು ಹೇಗೆ ಕಿಚ್ಚೆಬ್ಬಿಸುತ್ತಾರೆ ಎನ್ನುವುದನ್ನು ಅನನ್ಯವಾಗಿ ಚಿತ್ರಿಸುತ್ತಾನೆ ಎನ್ನುವಲ್ಲಿ ಅನಂತಮೂರ್ತಿ ಅವರ ಮೆಚ್ಚುಗೆ ವ್ಯಕ್ತವಾಗಿದೆ. ದಾಸ್ತೊವಸ್ಕಿ ಮತ್ತು ಬೋದಿಲೇರ್ ತಮ್ಮ ವೇದನೆ ಮತ್ತು ವ್ಯಾಧಿಯಿಂದಲೇ ಲೋಕ ಕಲ್ಯಾಣ ಸಾಧಿಸಬಲ್ಲಂಥ ಸೃಜನಶೀಲರಾದರು ಎನ್ನುವುದನ್ನು ಅನಂತಮೂರ್ತಿ ಸ್ವಪ್ರದರ್ಶನರತಿಯಿಂದ ಹೊರಬಂದ ಬರಹಗಾರರಿಗೆ ಉದಾಹರಣೆಯಾಗಿ ಈ ಇಬ್ಬರು ಲೇಖಕರನ್ನು ಸ್ಮರಿಸುವರು. ಕ್ರೂರ ರಾಜಕೀಯ ವ್ಯವಸ್ಥೆ ಕಲೆ ಸಾಹಿತ್ಯವನ್ನು ಹೊಸಕಿ ಹಾಕುತ್ತಿರುವ ಘಳಿಗೆ ಅನಂತಮೂರ್ತಿ ಓದುಗರನ್ನು ಬ್ರೆಕ್ಟ್ ಗೆ ಮುಖಾಮುಖಿಯಾಗಿಸುತ್ತಾರೆ. ಮೂವತ್ತರ ದಶಕದ ಕ್ರೂರ ರಾಜಕೀಯ ಸನ್ನಿವೇಶದಲ್ಲಿ ಬ್ರೆಕ್ಟ್ ಹೊಟ್ಟೆಯ ಹಸಿವೇ ಎಲ್ಲವನ್ನೂ ಹೇಳುತ್ತಿರುವಾಗ ಫ್ರೆಂಚ್ ಭಾಷೆ ಏಕೆ ಕಲಿಯಬೇಕು ಎಂದು ಪದ್ಯ ಬರೆಯುತ್ತಾನೆ. ಒಂದು ಹಂತದಲ್ಲಿ ಆಫ್ರಿಕದ ಮಹತ್ವದ ಕಾದಂಬರಿಕಾರ ಚಿನುವಾ ಅಚಿಬೆ ಜೊತೆ ಸಂವಾದಕ್ಕಿಳಿಯುವ ಲೇಖಕರು ಓದುಗರನ್ನು ಅಚಿಬೆಯ ವಿಚಾರಗಳ ಮೂಲಕ ಸ್ವದೇಶಿಯತೆ ಮತ್ತು ಸಾರ್ವತ್ರಿಕತೆ ಕುರಿತು ಚಿಂತಿಸುವಂತೆ ಮಾಡುವರು. ಆತ್ಮದಂಡನೆ ಮತ್ತು ಆತ್ಮತೆಗಳಿಕೆಯಿಂದ ಕೆಲವು ಭಾರತೀಯ ಬರಹಗಾರರು ಪಾಶ್ಚಾತ್ಯರಿಗೆ ಅಪ್ಯಾಯಮಾನವಾಗುತ್ತಿರುವರು (ಇಲ್ಲಿ ಮುಖ್ಯವಾಗಿ ಭಾರತಿಯ ಮೂಲದ ನೈಪಾಲ್ ಹೆಸರು ಪ್ರಸ್ತಾಪವಾಗುತ್ತದೆ) ಎಂದು ಚಿನುವಾ ಅಚಿಬೆ ನಮ್ಮನ್ನು ಎಚ್ಚರಿಸುತ್ತಾರೆ.

ಎದುರಾಗುವ ಗಾಂಧಿ 


                  ಗಾಂಧಿ ನಮ್ಮ ಬರಹಗಾರರನ್ನು ಮತ್ತು ಚಿಂತಕರನ್ನು ಹೆಚ್ಚು ಹೆಚ್ಚು ಪ್ರಭಾವಿಸಿದ ಬಹುದೊಡ್ಡ ದಾರ್ಶನಿಕ. ಕನ್ನಡ ಸಾಹಿತ್ಯದಲ್ಲಿ ಅನಂತಮೂರ್ತಿ ಅವರ ಬರಹಗಳಲ್ಲಿ ಗಾಂಧಿ ಚಿಂತನೆಗಳು ಹೆಚ್ಚು ಪ್ರಾಮುಖ್ಯತೆ ಪಡೆದಿವೆ. ಈ ವಿಷಯವಾಗಿ ನಾವು ನೆನಪಿಸಿಕೊಳ್ಳಬಹುದಾದ ಇನ್ನೋರ್ವ ಬರಹಗಾರರೆಂದರೆ ಅದು ದೇವನೂರ ಮಹಾದೇವ. ಅನಂತಮೂರ್ತಿ ಅವರ ಈ ಕೃತಿಯಲ್ಲಿ ನಮಗೆ ಅವಮಾನದಲ್ಲೂ ಸಂತಸದಿಂದಿರುವ ಗಾಂಧಿ ಎದುರಾಗುತ್ತಾರೆ. ತನ್ನನ್ನು ಜೈಲಿಗೆ ಹಾಕಿದ ಜನರಲ್ ಸ್ಮಟ್ಸಿಗೆ ಚಪ್ಪಲಿ ಹೊಲಿದು ಕೊಟ್ಟ ಗಾಂಧೀಜಿ ತಾನು ಪ್ರೀತಿಸಿದವರನ್ನೂ ಅಳಿಸಬಲ್ಲಷ್ಟು ನಿಷ್ಟುರ. ಅನಂತಮೂರ್ತಿ ಅವರು ಹೇಳುವಂತೆ ರಾಜಕೀಯವಾಗಿ ಗಾಂಧೀಜಿ ಸಾಮ್ರಾಜ್ಯಶಾಹಿಯನ್ನು ಬದುಕಿನ ಬಹುದೊಡ್ಡ ಶತ್ರುವಾಗಿ ಕಂಡರು. ಗಾಂಧೀಜಿ ಸಾಮ್ರಾಜ್ಯಶಾಹಿಯನ್ನು ಎಲ್ಲಿಯವರೆಗೆ ತಿರಸ್ಕರಿಸಬೇಕಾಯಿತೆಂದರೆ ಮಂಡಿಯ ಮೇಲೆ ಒಂದು ತುಂಡು ಪಂಚೆಯನ್ನು ಮಾತ್ರ ಉಡುವಷ್ಟು. ಅವರೊಳಗಿನ ಆ ನಿಗ್ರಹದ ಬಿಗಿಗೆ ವ್ಯವಸ್ಥೆಯ ಆಗ್ರಹದ ಹಂಗಿರಲಿಲ್ಲ, ಕಣ್ಣಿಟ್ಟು ಕಾಯುವ ಪ್ರಭು ಇರಲಿಲ್ಲ. ಸಾಮ್ರಾಜ್ಯಶಾಹಿಯಾಗುವ ಪ್ರಲೋಭನೆಯೇ ಇಲ್ಲವಾಗುವ ವ್ಯವಸ್ಥೆ ಗಾಂಧಿಯದು ಎನ್ನುತ್ತಾರೆ ಅನಂತಮೂರ್ತಿ. ಚಿನುವಾ ಅಚಿಬೆಯೊಂದಿಗಿನ ಸಂದರ್ಶನದಲ್ಲಿ ಗಾಂಧಿ ಮತ್ತೊಮ್ಮೆ ಚೆರ್ಚೆಗೆ ಗ್ರಾಸವಾಗುತ್ತಾರೆ. ಇಲ್ಲಿ ಲೇಖಕರು ಗಾಂಧಿಯ 'ಹಿಂದ್ ಸ್ವರಾಜ್ಯ' ಕೃತಿಯನ್ನು ಕಾರ್ಲ್ ಮಾರ್ಕ್ಸ್ ನ 'ದಾಸ್ ಕ್ಯಾಪಿಟಲ್' ನ ಶ್ರೇಷ್ಠತೆಗೆ ಎತ್ತರಿಸುತ್ತಾರೆ. ಜಾಗತೀಕರಣ ಈ ದೇಶದ ಗುಡಿ ಕೈಗಾರಿಕೆಗಳನ್ನು ನಾಶಗೊಳಿಸುತ್ತಿರುವ ಹೊತ್ತು ಅನಂತಮೂರ್ತಿ ಅವರಿಗೆ ಗಾಂಧೀಜಿ ಮತ್ತೆ ನೆನಪಾಗುತ್ತಾರೆ. 'ಬಹು ಉತ್ಪನ್ನವಲ್ಲ ಬಹು ಜನರಿಂದ ಉತ್ಪನ್ನ' ಎಂಬ ಗಾಂಧಿ ಸೂತ್ರ ಕಂಪ್ಯೂಟರ್ ಟೆಕ್ನಾಲಜಿ ಭ್ರಮೆಯಲ್ಲಿ ಮರೆತು ಹೋಗುವ ಚಿಹ್ನೆಗಳು ಕಾಣಿಸಿಕೊಂಡಿವೆ ಎಂದು ಆತಂಕ ವ್ಯಕ್ತಪಡಿಸುವರು. ಭಾರತದ ರಾಜಕಾರಣ ಭ್ರಷ್ಟಾಚಾರದ ರೂಪ ಪಡೆಯುತ್ತಿರುವಾಗ ನಮಗೆ ಮತ್ತೆ ಗಾಂಧಿ ಎದುರಾಗುತ್ತಾರೆ. ಗಾಂಧೀಜಿಯದು ನೈತಿಕ ಅರಿವಿನಿಂದ ಹುಟ್ಟಿದ ರಾಜಕಾರಣವಾದರೆ ಅವರ ನಂತರದ ಭಾರತದಲ್ಲಿ ರಾಜಕಾರಣವೆಂದರೆ ಆಯಾ ವರ್ಗಗಳ, ಜಾತಿಗಳ ಪ್ರತ್ಯೇಕ ಆಸಕ್ತಿಗಳನ್ನು ಗಿಟ್ಟಿಸಿಕೊಳ್ಳುವ ಪೈಪೋಟಿಯಲ್ಲಿ ಕ್ಷಣಿಕ ಹೊಂದಾಣಿಕೆಯನ್ನು ಸಾಧಿಸಿಕೊಳ್ಳುವ ತಂತ್ರಗಾರಿಕೆಯಾಗಿಬಿಟ್ಟಿದೆ ಎನ್ನುವುದು ಅವರ ಅಭಿಮತ. ಕರ್ನಾಟಕದಲ್ಲಿನ ರೈತ ಚಳವಳಿಯನ್ನು ಗಾಂಧೀಜಿ ಅವರ ಹೋರಾಟದೊಂದಿಗೆ ಹೋಲಿಸಿ ನೋಡುವ ಅನಂತಮೂರ್ತಿ ಅವರು  'ರೈತ ಸಂಘದವರು ಹಳ್ಳಿಯ ಶ್ರೀಮಂತನ ಕ್ರೌರ್ಯವನ್ನು ವಿರೋಧಿಸುವಷ್ಟು ಆಧುನಿಕರಣದ ವಾದಿಗಳಿಂದ ಉಂಟಾಗುವ ಕ್ರೌರ್ಯವನ್ನು ಅರ್ಥಮಾಡಿಕೊಂಡಿಲ್ಲ. ಈ ವಿಷಯದಲ್ಲಿ ಗಾಂಧೀಜಿ ಮಾಡಿದ ಕೆಲಸ ತುಂಬ ಅಪೂರ್ವವಾದದ್ದು. ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡುವಾಗ ಗಾಂಧೀಜಿ ಏಕಕಾಲದಲ್ಲಿ ಇಡೀ ದೇಶದ ವೈರಿಯಾದ ಬ್ರಿಟಿಷರನ್ನೂ ದೇಶದೊಳಗೇ ದಲಿತರ ಏಳಿಗೆಗೆ ಕಂಟಕಪ್ರಾಯವಾದ ಸವರ್ಣಿಯರ ಮುರ್ಖತನವನ್ನೂ ಒಟ್ಟಾಗಿ ವಿರೋಧಿಸಿದರು. ರೈತಸಂಘ ಇಂಥ ಕೆಲಸ ಮಾಡಬಹುದಿತ್ತು ಆದರೆ ಮಾಡಲಿಲ್ಲ' ಎಂದು ಬರೆಯುತ್ತಾರೆ. ಪ್ರಾಚೀನದಲ್ಲಿ ಯಾವುದು ಉಳಿಯಬೇಕು ಯಾವುದು ಬೇಡ ಎನ್ನುವ ಪ್ರಶ್ನೆ ಲೇಖಕರಿಗೆ ಎದುರಾದಾಗ ಇಲ್ಲಿ ಅವರಿಗೆ ಗಾಂಧೀಜಿ ಬದುಕಿನ ಘಟನೆಯೊಂದು ನೆನಪಾಗುತ್ತದೆ. ಜುಟ್ಟು ಮತ್ತು ಜನಿವಾರ ಎರಡನ್ನೂ ಆಯ್ದುಕೊಳ್ಳಬೇಕಾದ ಸಂದರ್ಭ ಗಾಂಧಿ ಭಾರತೀಯ ಸಂಸ್ಕೃತಿಯ ಜುಟ್ಟನ್ನು ಮಾತ್ರ ಆಯ್ದು ಜನಿವಾರವನ್ನು ತ್ಯಜಿಸುತ್ತಾರೆ. ಹೀಗೆ ಮಾಡುವುದರ ಮೂಲಕ ಗಾಂಧಿ ಸಂಸ್ಕೃತಿಯ ಸಜೀವತೆ  ಇರುವುದು ಇಂಥ ಆಯ್ಕೆಗಳ ನೈತಿಕ ಪ್ರಜ್ಞೆ ನಮ್ಮೆಲ್ಲರಲ್ಲೂ ಕೆಲಸ ಮಾಡುತ್ತಿರುವಾಗ ಎಂದು ತೋರಿಸಿ ಕೊಟ್ಟರು. ಒಟ್ಟಾರೆ ಗಾಂಧಿ ವಿಚಾರಗಳು ಮತ್ತು ಅವರ  ಬದುಕಿನ ಮೌಲ್ಯಗಳು  ನಮ್ಮನ್ನು ಕೈಹಿಡಿದು  ನಡೆಸುವ ಬೆಳಕಿನ ಕಿರಣಗಳೆಂಬ ಚಿಂತನೆ ಅನಂತಮೂರ್ತಿ  ಅವರದು.

                ದೇವನೂರರ ಒಡಲಾಳ, ಶೂದ್ರ ಪತ್ರಿಕೆ, ಗೋಕಾಕ ಚಳವಳಿ, ಅವಸ್ಥೆಯನ್ನು ಸಮರ್ಥಿಸಿಕೊಂಡಿದ್ದು, ಫ್ರಾಂಕ್ ಫರ್ಟ್ ಗೆ ಭೇಟಿ, ಅಮೆರಿಕಾದಲ್ಲಿನ ಕನ್ನಡಿಗರ ಮನಸ್ಥಿತಿ, ದಲಿತ ಸಾಹಿತ್ಯ, ಕನ್ನಡ ಮತ್ತು ವಿಕೇಂದ್ರಿಕರಣ ಇನ್ನು ಹಲವು ಲೇಖನಗಳಲ್ಲಿ ಅನಂತಮೂರ್ತಿ ಅವರ ಚಿಂತನೆಗಳು ನಮ್ಮ ಓದಿಗೆ ದಕ್ಕುತ್ತವೆ. ವಿಮರ್ಶಕ ರಾಜಶೇಖರ ತಮ್ಮ ಒಂದು ಲೇಖನದಲ್ಲಿ ಹೇಳಿದಂತೆ ಅನಂತಮೂರ್ತಿ ಅವರು ತಮ್ಮ ಲೇಖನಗಳಲ್ಲಿ ಎಲ್ಲಿಯೂ ಇದೆ ಕೊನೆಯ ಮಾತು ಎಂಬಂತೆ ಏನೂ ಹೇಳುವುದಿಲ್ಲ. ಕಪ್ಪು-ಬಿಳುಪು, ತಪ್ಪು-ಸರಿ, ಅದು-ಇದು ಎಂದು ಜಗತ್ತಿನ ಬಗ್ಗೆ ಸರಳ ತೀರ್ಮಾನಗಳಿಗೆ ಬರುವುದು, ಪಕ್ಷ ವಹಿಸಿ ಮಾತನಾಡುವುದು ಈ ಸಲೀಸು ನಮೂನೆಗಳು ಅನಂತಮೂರ್ತಿ ಅವರ ಜಾಯಮಾನದಲ್ಲೇ ಇಲ್ಲ. ಒಟ್ಟಾರೆ ಅನಂತಮೂರ್ತಿ ಅವರ ಬರಹಗಳಲ್ಲಿ ಎಲ್ಲವನ್ನೂ  ಕ್ಷಮಿಸಿ ಬಿಡುವ ತಾಯ್ತನದ ಗುಣವಿದೆ. ಇದಕ್ಕೆ ಉದಾಹರಣೆಯಾಗಿ ಅವರ ಒಂದು ಲೇಖನದಲ್ಲಿನ ಈ ಮುಂದಿನ ಸಾಲುಗಳನ್ನು ಗಮನಿಸಿ 'ನಮ್ಮ ದೇಶ ಇನ್ನೂ ಎರಡೂ ಮೂರೂ ಶತಮಾನ ಪ್ರಯತ್ನಿಸಿದರೂ ಮುಟ್ಟಲಾರದ ಸಮೃದ್ಧಿಯನ್ನು ಅನಿವಾಸಿ ಭಾರತಿಯರಾದ ನೀವು ಒಂದು ದಿನದ ಪ್ರಯಾಣದಲ್ಲಿ   ಪಡೆದಿರುವಿರಿ. ಭಾರತದ ಅಸಂಖ್ಯಾತ ಬಡವರು ಈ ಕನಸನ್ನು ಸಹ ಕಾಣಲಾರರು. ಆದರೆ ಇಂಡಿಯಾದ ಭವಿಷ್ಯವನ್ನು ರೂಪಿಸುವವರು ನೀವಲ್ಲ ಅವರು. ಯಾಕೆಂದರೆ ನಿಮ್ಮ ಹಾಗೆ ಅವರು ಶತಮಾನಗಳನ್ನು ಜಿಗಿಯಲಾರರು. ಆದ್ದರಿಂದ ಅವರು ಭಾರತಕ್ಕೆ ಬದ್ಧರು. ಅವರು ತುಳಿಯುವ ಹಾದಿ ಕ್ರಾಂತಿಯಾದರೆ, ಹಿಂಸೆಯಾದರೆ ಅದನ್ನು ಟೀಕಿಸುವ ಹಕ್ಕು ನಿಮಗಿಲ್ಲ. ಈ ಮಾತುಗಳನ್ನು ಬರೆಯುತ್ತಿದ್ದಂತೆ ನನಗೆ ಮುಜುಗರವಾಗುತ್ತಿದೆ. ಅಮೆರಿಕಾದಲ್ಲಿರುವ ಈ ಕನ್ನಡಿಗರಲ್ಲಿ ಹಲವರು ವಾರಾನ್ನದಿಂದ ಓದಿದವರು. ತಮ್ಮಂದಿರ ವಿದ್ಯಾಭ್ಯಾಸ, ತಂಗಿಯರ ಮದುವೆ ಇತ್ಯಾದಿ ಜವಾಬ್ದಾರಿಗಳ ನಿರ್ವಹಣೆಗಾಗಿ ವಲಸೆ ಬಂದವರು. ಇಲ್ಲಿ ನನಗೆ ಯಾರನ್ನೂ ಟೀಕಿಸುವ ಅಧಿಕಾರವಿಲ್ಲ'. ಅನಂತಮೂರ್ತಿ ಅವರ ಈ ಮನಸ್ಥಿತಿಯನ್ನು ಕೆಲವು ವಿಮರ್ಶಕರು ದ್ವಂದ್ವ, ಇಬ್ಬಂದಿತನ, ತೊಳಲಾಟ ಎಂದು ಕರೆಯುವುದುಂಟು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಈ ಇಬ್ಬಂದಿತನದಿಂದ ಓದುಗರನ್ನೂ ದಿಕ್ಕು ತಪ್ಪಿಸುತ್ತಾರೆ ಎಂದು ವಿಮರ್ಶಿಸುತ್ತಾರೆ.  ಆದರೆ ಅನಂತಮೂರ್ತಿ ಅವರ ಮನಸ್ಥಿತಿಯನ್ನು ನಾನು ಹೊಸ ವಿಚಾರಗಳ ಹುಟ್ಟಿಗಾಗಿ ಹಂಬಲಿಸಿದ ಚಿಂತಕನ ಒಳನೋಟಗಳು ಎಂದು ಹೇಳಲು ಇಚ್ಚಿಸುತ್ತೇನೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ