Saturday, November 21, 2020

ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ

                 



(ಅಕ್ಟೊಬರ್ ೨೦೨೦ ರ ಮಯೂರ ಪತ್ರಿಕೆಯಲ್ಲಿ ಪ್ರಕಟವಾಗಿದೆ)

            ‘ಕ್ರಾಂತಿ ಆಗ್ಬೇಕರಯ್ಯ ಕ್ರಾಂತಿ. ಈ ದೇಶದಲ್ಲಿ ಯಾವುದೂ ಸುಲಭವಾಗಿ ಬದಲಾಗೊಲ್ಲ. ಒಂದು ವೈಚಾರಿಕ ಕ್ರಾಂತಿಯಾಗಿ ಜನರಲ್ಲಿ ತಿಳಿವಳಿಕೆ ಮೂಡ್ಬೇಕು. ಶಾಲೆ ಪಕ್ಕದಲ್ಲಿ ಬೆಳೆದು ನಿಂತ ಗಿಡಕ್ಕೆ ಈ ಜನ ಎಂಥ ದುರ್ಗತಿ ತಂದಿದ್ದಾರೆ ನೋಡಿದ್ರೇನ್ರೋ. ಕಟ್ಟೆ ಕಟ್ಟಿ, ಅದಕ್ಕೆ ಬಟ್ಟೆ ಸುತ್ತಿ, ಸುತ್ತೆಲ್ಲ ಎಣ್ಣೆ ದೀಪ ಹಚ್ಚಿ, ಭಯಪಡೊವಷ್ಟು ಕುಂಕುಮ ಅರಿಷಿಣ ಚೆಲ್ಲಿ ಇನ್ನೂ ಯಾವ ಸ್ಥಿತಿಗೆ ತಂದಿಡ್ತಾರೊ. ಮರ ಬೆಳೆದ ಆ ಜಾಗ ಪವಿತ್ರ, ಪುಣ್ಯ ಅಂತ ಹೇಳಿ ಜನರನ್ನ ಭಯ ಬೀಳಿಸ್ತಾರೆ. ಯಾವುದೋ ಹಕ್ಕಿ ತನ್ನ ಉದರ ಭಾದೆ ತಾಳದೆ ಹೇತು ಅದರೊಳಗಿದ್ದ ಬೀಜದಿಂದ ಬೆಳೆದ ಗಿಡ ಅದು. ಇಂಥ ಮೂಢ ಆಚರಣೆಗಳನ್ನೆಲ್ಲ ಬಿಟ್ಟು ಮರದ ನೆರಳ ಕೆಳಗೆ ನಾಲ್ಕಾರು ಪುಸ್ತಕಗಳನ್ನಿಟ್ಟಿದ್ದರೆ ಅವುಗಳನ್ನು ಓದಿ ಅದರಿಂದ ತಿಳಿವಳಿಕೆ ಮೂಡಿ ಒಂದು ವೈಚಾರಿಕ ಕ್ರಾಂತಿ ಆದರೂ ಆಗ್ತಿತ್ತು’ ದೊಕಾಚಿ ಮೇಷ್ಟ್ರು ಕಾರ್ಲ್‍ಮಾರ್ಕ್ಸ್‍ನನ್ನೋ ಲೆನಿನ್‍ನನ್ನೋ ಮೈಮೇಲೆ ಆವಾಹಿಸಿಕೊಂಡವರಂತೆ ತಮ್ಮ ವಿಚಾರಗಳನ್ನು ಓತಪೆÇ್ರೀತವಾಗಿ ಹರಿಬಿಡುತ್ತಿದ್ದರೆ ಅವರೆದುರು ಕುಳಿತ ಮಕ್ಕಳು ಅರ್ಥವಾಗದೆ ಮೇಷ್ಟ್ರನ್ನೇ ಪಿಳಿಪಿಳಿ ಕಣ್ಣುಬಿಟ್ಟು ನೋಡುತ್ತಿದ್ದವು. ದೊಕಾಚಿ ಮೇಷ್ಟ್ರು ಇವತ್ತೇಕೋ ಒಂದಿಷ್ಟು ರಾಂಗ್ ಆಗಿದ್ದಾರೆ ಅನಿಸಿದ್ದೆ ತಮ್ಮ ಕ್ರಾಂತಿಯ ಮಾತುಗಳಿಂದ ಅವರು ಸಧ್ಯಕ್ಕೆ ಹೊರಬರಲಾರರು ಎನ್ನುವುದು ಮಕ್ಕಳಿಗೆ ಲಾಗಾಯ್ತಿನಿಂದಲೂ ರೂಢಿಯಾಗಿದ್ದರಿಂದ ಗುಜುಗುಜು ಮಾತನಾಡುತ್ತ ಆ ಸದ್ದು ಕ್ರಮೇಣ ದೊಡ್ಡದಾಗುತ್ತ ಮೇಷ್ಟ್ರ ಚಿಂತನೆಗೆ ಭಗ್ನಬಂದಿದ್ದೆ ಉರಿಗಣ್ಣು ಬಿಟ್ಟು ನೇರವಾಗಿ ಲಂಬರೇಖೆಯಲ್ಲಿ ತಮಗೆದುರಾಗಿ ಕುಳಿತಿದ್ದ ನಿನ್ನೆಯಷ್ಟೆ ಶಾಲೆಗೆ ದಾಖಲಾಗಿದ್ದ ಹುಡುಗನನ್ನೇ ದಿಟ್ಟಿಸಿ ನೋಡುತ್ತ ‘ಏನೋ ನಿನ್ನ ಹೆಸರು’ ಎಂದು ಕೇಳಿದರು. ಮೇಷ್ಟ್ರ ಉಗ್ರರೂಪಕ್ಕೆ ಹೆದರಿ ಚಡ್ಡಿಯಲ್ಲೇ ಉಚ್ಚೆ ಹೊಯ್ದುಕೊಂಡ ಹುಡುಗ ತಡವರಿಸುತ್ತ ಉತ್ತರಿಸಿದ ‘ಕಮೂ ಸರ್’. ಆ ಹುಡುಗ ಹೇಳಿದ ಹೆಸರು ಕೇಳಿದ್ದೆ ದೊಕಾಚಿ ಮೇಷ್ಟ್ರ ಸಿಟ್ಟೆಲ್ಲ ಜರ್ರನೆ ಇಳಿದು ಮುಖದ ಮೇಲೆ ಪ್ರಸನ್ನತೆ ಮೂಡಿತು. ಮೇಷ್ಟ್ರು ಅನುಮಾನ ಪರಿಹರಿಸಿಕೊಳ್ಳಲೆಂಬಂತೆ ಮತ್ತೊಮ್ಮೆ ಕೇಳಿದಾಗ ಹುಡುಗ ಅಂಜುತ್ತಲೇ ‘ಕಮೂ ಸರ್’ ಅಂದವನೆ ಚಡ್ಡಿಯೊಳಗಿಂದ ತೊಟ್ಟಿಕ್ಕುತ್ತಿದ್ದ ಉಚ್ಚೆಯ ಹನಿ ಇಡೀ ಕ್ಲಾಸಿಗೆ ಪ್ರದರ್ಶಿತವಾದ ಅವಮಾನದಿಂದ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ. ದೊಕಾಚಿ ಮೇಷ್ಟ್ರಿಗೆ ಮರಳುಗಾಡಿನಲ್ಲಿ ನೀರು ಸಿಕ್ಕಷ್ಟೇ ಖುಷಿಯಾಗಿತ್ತು ಹುಡುಗನ ಹೆಸರು ಕೇಳಿ. ಅಕ್ಷರದ ಗಂಧಗಾಳಿ ಗೊತ್ತಿಲ್ಲದ ಈ ಕುಗ್ರಾಮದ ಗೊಡ್ಡು ಜನರ ನಡುವೆ ತನ್ನೊಳಗಿನ ವೈಚಾರಿಕ ಚಿಂತನೆ ವ್ಯರ್ಥವಾಗುತ್ತಿದೆ ಎಂದು ನಿರಾಶರಾದವರು ಎದುರು ನಿಂತ ಕಮೂನನ್ನು ಆ ಮೇರು ಬರಹಗಾರ ಆಲ್ಬರ್ಟ್ ಕಮೂನೇನೋ ಎನ್ನುವಂತೆ ಅವನನ್ನು ವಿವಿಧ ಕೋನಗಳಿಂದ ದಿಟ್ಟಿಸಿ ನೋಡಲಾರಂಭಿಸಿದರು. ದೊಕಾಚಿ ಮೇಷ್ಟ್ರೇಕೆ ತನ್ನನ್ನು ಅಷ್ಟೊಂದು ಸುದೀರ್ಘವಾಗಿ ದಿಟ್ಟಿಸಿ ನೋಡುತ್ತಿರುವರೆನ್ನುವುದು ತರಗತಿಯಲ್ಲಿನ ಇತರ ಮಕ್ಕಳಿಗಿರಲಿ ಸ್ವತ: ಕಮೂಗೂ ಅರ್ಥವಾಗದೆ ಅವರೆಲ್ಲ ಒಂದರ ಮುಖ ಇನ್ನೊಂದು ನೋಡಿ ತಮ್ಮ ತಮ್ಮ ಮುಖದಲ್ಲಿ ಪ್ರಶ್ನಾರ್ಥಕ ಚಿನ್ಹೆ ಮೂಡಿಸಿಕೊಂಡವು. ನಿಂತು ಕಾಲು ನೋಯ್ಯಲಾರಂಭಿಸಿದಾಗ ಕಮೂ ಒಮ್ಮೆ ಬಲಗಾಲಿನ ಮೇಲೂ ಇನ್ನೊಮ್ಮೆ ಎಡಗಾಲಿನ ಮೇಲೂ ತನ್ನ ದೇಹದ ಭಾರವನ್ನು ವರ್ಗಾಯಿಸುತ್ತ ನಿಂತ ಭಂಗಿಯನ್ನು ಘಳಿಗೆಗೊಮ್ಮೆ ಬದಲಿಸುತ್ತಿರುವಾಗ ಮೇಷ್ಟ್ರ ಇನ್ನೊಂದು ಪ್ರಶ್ನೆ ತೂರಿಬಂತು ‘ನಿನ್ನ ಅಪ್ಪನ ಹೆಸರೇನೋ’. ‘ಬೋದಿಲೇರ ಸರ್’ ಕಮೂ ಬಾಯಿ ತೆರೆಯುವ ಮೊದಲೆ ಅವನ ಹಿಂದೆ ಕುಳಿತಿದ್ದ ಹುಡುಗ ಜೋರಾಗಿ ಉತ್ತರಿಸಿದ. ಬೋದಿಲೇರನ ಹೆಸರು ಕೇಳಿದ್ದೆ ದೊಕಾಚಿ ಮೇಷ್ಟ್ರಿಗೆ ಎದ್ದು ಕುಣಿಯುವಷ್ಟು ಖುಷಿಯಾಗಿತ್ತು. ಆ ಕ್ಷಣಕ್ಕೆ ಅವರಿಗೆ ಇಡೀ ಊರು ಆಕ್ಸಫರ್ಡ್‍ನಂತೆಯೂ, ಆ ಕನ್ನಡ ಶಾಲೆ ಒಂದು ವಿಶ್ವವಿದ್ಯಾಲಯವಾಗಿಯೂ ತಮ್ಮೆದುರು ಕುಳಿತಿದ್ದ ಮಕ್ಕಳೆಲ್ಲ ಶೇಕ್ಸ್‍ಪಿಯರ್‍ನ ವಾರಸುದಾರರಂತೆಯೂ ಗೋಚರಿಸಲಾರಂಭಿಸಿತು. ‘ಲೋ ಕಮೂ ನಾಳೆ ನಿನ್ನಪ್ಪ ಬೋದಿಲೇರನನ್ನು ಬಂದು ನನ್ನನ್ನು ಕಾಣೊದಕ್ಕೆ ಹೇಳು’ ಎಂದು ನುಡಿದ ಮೇಷ್ಟ್ರು ತರಗತಿಯಿಂದ ಹೊರಹೋಗುತ್ತಿರುವಾಗ ಅವರ ನಡಿಗೆಯಲ್ಲಿ ಒಂದುರೀತಿಯ ಎಂದೂ ಇಲ್ಲದ ಲವಲವಿಕೆ ಇತ್ತು. ಮಕ್ಕಳಿಗೂ ಇಂದು ಮೇಷ್ಟ್ರು ಎಂದಿಗಿಂತ ಹೆಚ್ಚು ಖುಷಿಯಾಗಿದ್ದಾರೆ ಅನಿಸಿತು.

* * *

ದೊಡ್ಡವೀರಯ್ಯ ಕಾಡಬಸಯ್ಯ ಚಿಕ್ಕೋಡಿಮಠ್ ಹೆಸರು ಉದ್ದವೂ ಮತ್ತು ಹಳೆಯದೆಂದು ಕಾಲೇಜಿನಲ್ಲಿರುವಾಗಲೇ ದೊಡ್ಡವೀರಯ್ಯ ತನ್ನ ಹೆಸರನ್ನು ‘ದೊಕಾಚಿ’ ಎಂದು ಮೂರಕ್ಷರಕ್ಕಿಳಿಸಿ ಮೊಟಕುಗೊಳಿಸಿಕೊಂಡು ಜನ್ಮಕ್ಕೆ ಕಾರಣನಾದ ಅಪ್ಪನಿಗೆ ಏಕಕಾಲಕ್ಕೆ ಸಮಸ್ಯೆಯಾಗಿಯೂ ಮತ್ತು ಒಗಟಾಗಿಯೂ ಕಂಡಿದ್ದ. ಒಮ್ಮೊಮ್ಮೆ ಈ ಹೆಸರು ಮನುಷ್ಯನದೋ ಪ್ರಾಣಿಯದೋ ಎಂದು ಗಲಿಬಿಲಿಗೊಳ್ಳುತ್ತಿದ್ದ ಕಾಡಬಸಯ್ಯ ಅಷ್ಟೊಂದು ಓದಿರುವ ತನ್ನ ಮಗ ಯಾರದೋ ಹೋರಾಟಗಾರರದೋ ಇಲ್ಲ ಸಮಾಜ ಸುಧಾರಕರದೋ ಹೆಸರಿಟ್ಟುಕೊಂಡಿರಬಹುದೆಂದು ಸಮಾಧಾನಪಟ್ಟುಕೊಳ್ಳುತ್ತಿದ್ದ. ಕಾಡಬಸಯ್ಯನ ಆರು ಗಂಡುಮಕ್ಕಳು ಮತ್ತು ನಾಲ್ಕು ಹೆಣ್ಣು ಸಂತಾನಗಳಲ್ಲಿ ದೊಡ್ಡವೀರಯ್ಯನೇ ಕೊನೆಯವನು. ಕಾಡಬಸಯ್ಯನ ಮಕ್ಕಳಲ್ಲಿ ಮಾತ್ರವಲ್ಲದೆ ಆ ಚಿಕ್ಕೋಡಿಮಠ್ ಮನೆತನದಲ್ಲಿ ಕಾಲೇಜು ಮೆಟ್ಟಿಲು ಹತ್ತಿದ್ದು ದೊಡ್ಡವೀರಯ್ಯ ಒಬ್ಬನೇ ಎನ್ನುವುದು ಆ ಇಡೀ ಮನೆತನಕ್ಕೆ ಗೌರವದ ಮತ್ತು ಅಭಿಮಾನದ ವಿಷಯವಾಗಿತ್ತು. ಕಲಬುರಗಿಯ ಎಸ್.ಬಿ ಕಾಲೇಜಿನಲ್ಲಿ ಡಿಗ್ರಿ ಪೂರೈಸಿ ಜ್ಞಾನಗಂಗಾದಲ್ಲಿ ಕನ್ನಡ ಎಂ.ಎ ಗೆ ಸೇರಿ ಭಾರತೀಯ ಸಾಹಿತ್ಯದೊಂದಿಗೆ ಪಾಶ್ಚಿಮಾತ್ಯ ಸಾಹಿತ್ಯವನ್ನೂ ಓದಿಕೊಂಡು ಈ ನಡುವೆ ಕ್ರಾಂತಿಯ ಸೆಳೆತದಿಂದ ಪಿ.ಹೆಚ್.ಡಿ ಅರ್ಧಕ್ಕೆ ಬಿಟ್ಟು ಊರಿಗೆ ಬಂದು ಕೂತಿದ್ದ ದೊಕಾಚಿ ಅಪ್ಪ ಕಾಡಬಸಯ್ಯನಿಗೆ ದೊಡ್ಡ ತಲೆ ನೋವಾಗಿದ್ದ. ಕ್ರಾಂತಿಯ ಮಾತುಗಳನ್ನಾಡುತ್ತ ತಲೆತಲಾಂತರದಿಂದ ಊರಿನಲ್ಲಿ ರೂಢಿಗತವಾಗಿದ್ದ ಸಂಪ್ರದಾಯಗಳ ವಿರುದ್ಧ ಭಾಷಣ ಬಿಗಿಯುತ್ತ ಅಪ್ಪ ಕಾಡಬಸಯ್ಯನಿಗೊಂದು ಗಂಭೀರ ಸಮಸ್ಯೆಯಾಗಿ ಕಾಡತೊಡಗಿದ. ಈ ಸಂದರ್ಭದಲ್ಲೇ ಅವನ ಸಮಸ್ಯೆಯನ್ನು ಪರಿಹರಿಸಲೆಂಬಂತೆ ಮಠದ ಅನುದಾನಿತ ಪ್ರೈಮರಿ ಶಾಲೆಯಲ್ಲಿ ಖಾಲಿಯಿದ್ದ ಶಿಕ್ಷಕ ಹುದ್ದೆ ತುಂಬಲು ಪತ್ರಿಕೆಯಲ್ಲಿ ಜಾಹೀರಾತು ಪ್ರಕಟವಾಗಿದ್ದೆ ತಡ ಕಾಡಬಸಯ್ಯ ಮಠದ ಅಪಗೊಳ ಕಾಲಿಗೆ ಬಿದ್ದು ಆ ಕೆಲಸ ಮಗನಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದ. ಮಠಕ್ಕೆ ಕಾಡಬಸಯ್ಯ ಕಾಲಕಾಲಕ್ಕೆ ನೀಡುತ್ತ ಬಂದ ದೇಣಿಗೆ ಮತ್ತು ಮಠದ ಮೇಲೆ ಅವನಿಗಿರುವ ಭಕ್ತಿ ಶ್ರದ್ಧೆಯಿಂದ ಅಪಗೊಳು ಸಹಜವಾಗಿಯೇ ಅವನ ಬೇಡಿಕೆಗೆ ತಥಾಸ್ತು ಎಂದಿದ್ದರು. ಅಂತೂ ತಾನು ಓದಿದ ಮಠದ ಶಾಲೆಯಲ್ಲೇ ತನಗೆ ಪಾಠ ಮಾಡುವ ಕೆಲಸ ಸಿಕ್ಕಿರುವುದು ಅದೊಂದು ಯೋಗಾಯೋಗವೆಂದೇ ಬಗೆದ ದೊಕಾಚಿ ಮೇಷ್ಟ್ರಿಗೆ ಇಡೀ ಊರಿನಲ್ಲಿ ಒಂದು ದೊಡ್ಡ ವೈಚಾರಿಕ ಕ್ರಾಂತಿಗೆ ತಾನು ಕಾರಣನಾಗಬೇಕೆಂಬ ಭಾವನೆ ಮನಸ್ಸಿನ ಒಂದು ಮೂಲೆಯಲ್ಲಿ ಮೊಳಕೆಯೊಡೆಯತೊಡಗಿತು.

* * *

‘ಮೇಷ್ಟ್ರೆ ಬಂದು ಕಾಣಿ ಅಂತ ಹೇಳಿದ್ರಂತೆ’ ದೊಕಾಚಿ ಮೇಷ್ಟ್ರು ತರಗತಿಯಲ್ಲಿ ಮಕ್ಕಳಿಗೆ ಬೇಂದ್ರೆ ಅವರ ಹಕ್ಕಿ ಹಾರುತಿದೆ ಕವಿತೆಯ ಸಾಲುಗಳನ್ನು ವಿವರಿಸಿ ಹೇಳುತ್ತ ತನ್ಮಯರಾಗಿರುವ ಹೊತ್ತಿಗೆ ಅಪಶ್ರುತಿಯೊಂದು ಮಿಡಿದಂತಾಗಿ ಧ್ವನಿ ಬಂದ ದಿಕ್ಕಿನತ್ತ ದೃಷ್ಟಿ ಹರಿಸಿದವರಿಗೆ ಬಾಗಿಲಲ್ಲಿ ತನ್ನ ಭೀಮಕಾಯವನ್ನು ಸಂಕೋಚದಿಂದ ಹಿಡಿಯಾಗಿಸಿಕೊಂಡು ನಿಂತಿದ್ದ ಮನುಷ್ಯಾಕೃತಿಯೊಂದು ಕಣ್ಣಿಗೆ ಬಿತ್ತು. ಹುಬ್ಬುಗಳನ್ನು ಮೇಲೇರಿಸಿ ಮುಖದಲ್ಲಿ ಪ್ರಶ್ನಾರ್ಥಕ ಚಿನ್ಹೆ ಮೂಡಿಸಿಕೊಂಡ ಮೇಷ್ಟ್ರನ್ನು ನೋಡಿದ್ದೆ ‘ಅಪ್ಪ ಸರ್’ ಎಂದು ಕಮೂನ ಧ್ವನಿ ಕಿವಿಗೆ ಬಿದ್ದಿದ್ದೆ ಲಂಕೇಶರು ಅನುವಾದಿಸಿದ ಬೋದಿಲೇರನ ಪಾಪದಹೂಗಳು ಕವಿತೆಯ ಸಾಲುಗಳು ದೊಕಾಚಿ ಮೇಷ್ಟ್ರ ಮೆದುಳಿನೊಳಗೆ ಗಿರಗಿಟ್ಲೆಯಾಡಲಾರಂಭಿಸಿದವು. ‘ನಾನು ಬಲ್ಲೆ ನಿನ್ನ ಹೃದಯ ಬೇರುಕಿತ್ತು ಬಿದ್ದು ಹಳೆಯ ಪ್ರೇಮಗಳಿಂದ ತುಂಬಿ ಒಡೆಯುತ್ತಿದೆ. ನಿನ್ನೆದೆ ಕಮ್ಮಾರನ ಕುಲುಮೆಯಂತೆ ಧಗಧಗಿಸುತ್ತಿದೆ. ಅಲ್ಲಿ ಪತಿತಳ ಧಿಮಾಕು ಇಟ್ಟುಕೊಂಡಿದ್ದೀ’ ಮೇಷ್ಟ್ರು ಕ್ಷಣಮಾತ್ರದಲ್ಲಿ ಹಕ್ಕಿ ಹಾರುತಿದೆಯಿಂದ ಬೋದಿಲೇರನ ದು:ಖದ ಪದಕ್ಕೆ ಹನುಮ ಜಿಗಿತ ಜಿಗಿದಿದ್ದರು. ಮೇಷ್ಟ್ರ ಮಾತು ಅರ್ಥವಾಗದೆ ಬೋದಿಲೇರನಿಗೆ ಎಲ್ಲವೂ ಅಯೋಮಯ ಅಗೋಚರ ಅನಿಸಲಾರಂಭಿಸಿತು. ‘ಅಲ್ಲಯ್ಯ ನೀನೋ ಬೋದಿಲೇರ. ನಿನ್ನ ಮಗ ಆಲ್ಬರ್ಟ್ ಕಮೂ. ಇಷ್ಟು ದಿನ ನೀನು ಎಲ್ಲಿದ್ದೆ ಮಾರಾಯ. ನಿಮ್ಮಂಥವರೆ ನನ್ನ ವೈಚಾರಿಕ ಕ್ರಾಂತಿ ಎಂಬ ಯಜ್ಞಕುಂಡದಿಂದ ಸಿಡಿದು ಬರುವ ಕಿಡಿಗಳು’ ಮೇಷ್ಟ್ರು ಹತ್ತಿರ ಹೋಗಿ ಪ್ರೀತಿಯಿಂದ ಅವನ ಮೈಯನ್ನೊಮ್ಮೆ ದಡವಿದರು. ನನ್ನಲ್ಲಿ ಅದ್ಯಾವ ವಿಶೇಷ ಈ ಮೇಷ್ಟ್ರಿಗೆ ಕಾಣಿಸಿದೆ ಎಲ್ಲೋ ತಲೆ ಕೆಟ್ಟಿರಬಹುದೆಂದು ಭಾವಿಸಿದ ಬೋದಿಲೇರ ನಾಲ್ಕು ಹೆಜ್ಜೆ ಹಿಂದೆ ಸರಿದ. ‘ನೀನು ಬೋದಿಲೇರನಾಗಿ ನಿನ್ನ ಮಗನಿಗೆ ಆಲ್ಬರ್ಟ್ ಕಮೂ ಎಂದು ಕರೆದಿರಬೇಕಾದರೆ ಎಷ್ಟೊಂದು ಸಾಹಿತ್ಯ ಓದಿಕೊಂಡಿರಬೇಕು. ಹೇಳು ಯಾರನ್ನೆಲ್ಲ ಓದಿಕೊಂಡಿದ್ದಿ’ ಮೇಷ್ಟ್ರು ಕೇಳಿದ ಪ್ರಶ್ನೆಯಿಂದ ಬೋದಿಲೇರನಿಗೆ ಈಗ ನಿಚ್ಚಳವಾಗಿ ಎಲ್ಲ ಅರಿವಾಗತೊಡಗಿ ಅವನಿಗೆ ನಗು ತಡೆಯಲಾಗಲಿಲ್ಲ. ‘ಅಯ್ಯೋ ಮೇಷ್ಟ್ರೆ ಶಾಲೆಕಡಿ ತಲೆಹಾಕಿ ಮಲಿಗದವನಲ್ಲ ನಾ. ಅಂಥದ್ದರಲ್ಲಿ ನಾನೇನು ಓದ್ಲಿ ಹೇಳಿ. ಮಂಗಳೂರು ಕಡೆ ಕೂಲಿ ಕೆಲಸಕ್ಕಂತ ಹೋಗಿದ್ದಾಗ ದೊಡ್ಡ ಸಾಹೇಬರೊಬ್ಬರು ನನಗೆ ಮತ್ತು ಮಗನಿಗೆ ಇಟ್ಟ ಹೆಸರುಗಳಿವು. ಯಾಕೋ ಛಲೋ ಅನಿಸ್ತು ಅವೇ ಖಾಯಂ ಉಳಿಕೊಂಡಿವೆ ನೋಡಿ’ ಬೋದಿಲೇರನ ವಿವರಣೆಯಿಂದ ದೊಕಾಚಿ ಮೇಷ್ಟ್ರಿಗೆ ಭ್ರಮನಿರಸನವಾದರೂ ಆ ಕ್ಷಣಕ್ಕೆ ಅವರ ತಲೆಯಲ್ಲಿ ಇಂಥ ಹೆಸರುಗಳ ಮೂಲಕವೇ ವೈಚಾರಿಕ ಕ್ರಾಂತಿಯನ್ನು ಇಲ್ಲಿ ಪಸರಿಸಬೇಕೆಂಬ ಆಲೋಚನೆಯೊಂದು ಹೊಳೆದು ಅದನ್ನು ಮುಂದಿನ ಕೆಲವೇ ದಿನಗಳಲ್ಲಿ ಕಾರ್ಯಗತಗೊಳಿಸಿಯೂ ಬಿಟ್ಟರು. ಊರಿನಲ್ಲಿರುವ ಚಿತ್ರ ವಿಚಿತ್ರ ಹೆಸರಿನ ಮಕ್ಕಳಿಗೆಲ್ಲ ಹೊಸ ಹೆಸರುಗಳನ್ನಿಟ್ಟು ಆ ಹೆಸರುಗಳನ್ನು ಕಾನೂನಿನ ಕಕ್ಷೆಗೊಳಪಡಿಸಿ ಕಪ್ಪೆರಾಯನನ್ನು ಕಾಫ್ಕಾ, ಸಿಂಕ್ರಿಯನ್ನು ಸಿಲ್ವಿಯಾ, ಬೀರನನ್ನು ಬ್ರೆಕ್ಟ್ ಆಗಿಸಿದರು. ದೊಕಾಚಿ ಮೇಷ್ಟ್ರ ಈ ಖ್ಯಾತಿ ಸುತ್ತಮುತ್ತಲಿನ ಊರುಗಳಿಗೆಲ್ಲ ಹರಡಿ ಯಾರದೇ ಮನೆಯಲ್ಲಿ ಮಗು ಜನಿಸಿದರೂ ‘ಮೇಷ್ಟ್ರೆ ಒಂದು ಛಲೋ ಹೆಸರು ಇಡಿ ಕೂಸಿಗೆ’ ಎಂದು ಹುಡುಕಿಕೊಂಡು ಬರುವುದು ಅದೊಂದು ರೂಢಿಯಂತಾಯಿತು. ದೊಕಾಚಿ ಮೇಷ್ಟ್ರ ಈ ವೈಚಾರಿಕ ಕ್ರಾಂತಿಯ ಫಲವಾಗಿ ಊರು ಮತ್ತು ಸುತ್ತಲಿನ ಫಾಸಲೆಯಲ್ಲಿ ಕಾಫ್ಕಾ, ನೆರೂಡ್, ನೆಪೆÇಲಿಯನ್, ಗಾರ್ಕಿ, ಮಾರ್ಕ್ವೇಜ್ ಹೆಸರುಗಳು ಜನರ ನಾಲಿಗೆಯ ಮೇಲೆ ಲೀಲಾಜಾಲವಾಗಿ ಹರಿದಾಡತೊಡಗಿದವು. 

* * *

ಹೆಸರು ಬದಲಾವಣೆಗಷ್ಟೇ ದೊಕಾಚಿ ಮೇಷ್ಟ್ರ ವೈಚಾರಿಕ ಕ್ರಾಂತಿ ಸೀಮಿತಗೊಂಡಿದ್ದರೆ ಮಠದ ಅಪಗೊಳಾಗಲಿ, ಆಡಳಿತ ಮಂಡಳಿಯಾಗಲಿ ಅಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹೆಸರು ಬದಲಾವಣೆಯಿಂದ ಆರಂಭಗೊಂಡ ವೈಚಾರಿಕ ಕ್ರಾಂತಿ ಸಮಾಜದಲ್ಲಿ ಮನೆಮಾಡಿದ್ದ ಕೆಲವು ಪದ್ಧತಿಗಳ ಬದಲಾವಣೆಗೆ ವಿಸ್ತರಿಸಿದ್ದು ಮಠದ ಆಡಳಿತ ಮಂಡಳಿಗೆ ನುಂಗಲಾರದ ತುತ್ತಾಯಿತು. ನಡೆದದ್ದಿಷ್ಟು ಶಾಲೆಯ ಪರಿಸರದಲ್ಲಿನ ಸ್ವಚ್ಛತೆಯನ್ನು ಪರಿಶೀಲಿಸಲೆಂದು ವಿಭಾಗೀಯ ಶಿಕ್ಷಣಾಧಿಕಾರಿಗಳು ಮಠದ ಶಾಲೆಗೆ ಭೇಟಿ ನೀಡಲಿರುವರೆನ್ನುವ ಸುಳಿವು ದೊರೆತದ್ದೆ ಹೆಡ್ ಮಾಸ್ಟರ್ ರೇವಣ್ಣ ಪಾಟೀಲ ಇಡೀ ಕಾರ್ಯಕ್ರಮದ ಜವಾಬ್ದಾರಿಯನ್ನು ದೊಕಾಚಿ ಮೇಷ್ಟ್ರ ಹೆಗಲಿಗೇರಿಸಿ ನಿರಾಳರಾದರು. ಹೀಗೆ ದೊಕಾಚಿ ಮೇಷ್ಟ್ರನ್ನು ಹೊಸ ಜವಾಬ್ದಾರಿಗೆ ಒಳಗಾಗಿಸುವ ಈ ಯೋಜನೆಯು ಅವರ ವೈಚಾರಿಕ ಕ್ರಾಂತಿಗೆ ಒಂದಷ್ಟು ಹಿನ್ನೆಡೆ ಒದಗಿಸಬೇಕೆನ್ನುವ ಮಠದ ಆಡಳಿತ ಮಂಡಳಿಯ ಪಿತೂರಿಯ ಭಾಗವಾಗಿದೆ ಎನ್ನುವ ಗುಮಾನಿ ಕೆಲವರಲ್ಲಿ ಬರದೇ ಇರಲಿಲ್ಲ. ವಿಭಾಗೀಯ ಶಿಕ್ಷಣಾಧಿಕಾರಿಗಳ ಭೇಟಿಗೆ ಇನ್ನು ಹದಿನೈದು ದಿನಗಳಿರುವಾಗಲೇ ದೊಕಾಚಿ ಮೇಷ್ಟ್ರ ನೇತೃತ್ವದಲ್ಲಿ ಇಡೀ ಶಾಲೆಯ ಮಕ್ಕಳೆಲ್ಲ ಒಂದಾಗಿ ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು, ಕಸಕಡ್ಡಿ ಗುಡಿಸಿ, ತಳೀರು ತೋರಣಗಳಿಂದ ಶಾಲೆಯನ್ನು ನವವಧುವಿನಂತೆ ಸಿಂಗರಿಸಿದರು. ಶಾಲೆಯ ಸ್ವಚ್ಛತಾ ಕಾರ್ಯಕ್ರಮದ ಸಿದ್ಧತೆಯಲ್ಲಿರುವಾಗಲೇ ಅಸ್ತವ್ಯಸ್ತವಾಗಿ ತಲೆಗೂದಲು ಬೆಳೆದು ನಿಂತ ಕೇರಿಯ ಮಕ್ಕಳು ಮೇಷ್ಟ್ರ ಎದುರಿಗೆ ಬರುವುದಕ್ಕೂ ಮೇಷ್ಟ್ರ ಗಮನ ಅವುಗಳ ತಲೆಯ ಕಡೆ ಹರಿಯುವುದಕ್ಕೂ ಸರಿಹೋಯಿತು. ತಮ್ಮ ಕೆಲಸದ ವಿರಾಮದ ನಡುವೆ ಅವರನ್ನೆಲ್ಲ ಹತ್ತಿರ ಕರೆದು ಮೇಷ್ಟ್ರು ‘ಯಾಕ್ರೋ ಕೂದಲು ಈ ಪರಿ ಬೆಳೆಸಿದ್ದಿರಿ. ಹೇನಾದರೆ ನಿಮಗೇ ಕಷ್ಟ ನೋಡಿ’ ಎಂದು ವಿಚಾರಿಸಿಕೊಂಡರು. ‘ಏನ್ಮಾಡೊದು ಸರ್ ಪ್ಯಾಟಿಕಡೆ ಹೋಗ್ದೆ ಆರು ತಿಂಗಳಾಯ್ತು’ ಮಕ್ಕಳು ತಮ್ಮ ಅಸಹಾಯಕತೆ ತೋಡಿಕೊಂಡವು. ಈ ವಿಷಯವಾಗಿ ಕ್ಷೌರಿಕರ ಅಪಣ್ಣನನ್ನು ಕರೆದು ವಿಚಾರಿಸಿದಾಗ ಲಾಗಾಯ್ತಿನಿಂದಲೂ ಕೇರಿಯವರಿಗೆ ಕ್ಷೌರ ಮಾಡುವ ಪದ್ಧತಿ ಊರಲಿಲ್ಲವೆಂದೂ ತಾನೆನಾದರೂ ಸಂಪ್ರದಾಯ ಮುರಿದಲ್ಲಿ ಊರಿನವರು ತನ್ನನ್ನು ಬಹಿಷ್ಕರಿಸುವರೆಂದು’ ಅಳಲು ತೋಡಿಕೊಂಡ. ಅಪ್ಪಣ್ಣನ ಮನಪರಿವರ್ತಿಸುವಲ್ಲಿ ದೊಕಾಚಿ ಮೇಷ್ಟ್ರು ಮಾಡಿದ ಪ್ರಯತ್ನ ಫಲಕಾಣಲಿಲ್ಲ. ‘ಮೇಷ್ಟ್ರೇ ನಿಮಗೇನೋ ಸರ್ಕಾರದವರು ಪಗಾರ ಕೊಡ್ತಾರ. ನಾನು ಊರನ್ನೇ ನಂಬಿದ್ದೀನಿ. ದಯವಿಟ್ಟು ಬಡವನ ಹೊಟ್ಟಿ ಮ್ಯಾಗ ಹೊಡಿಬ್ಯಾಡರಿ’ ಅಪ್ಪಣ್ಣ ಕೈಮುಗಿದು ಬೇಡಿಕೊಂಡ. ಇಲ್ಲಿ ಯಾವುದೂ ಸುಲಭವಾಗಿ ಬದಲಾಗೊಲ್ಲ ಅದಕ್ಕೆ ಕ್ರಾಂತಿಯೇ ಮದ್ದು ಎಂದು ಭಾವಿಸಿದ ದೊಕಾಚಿ ಮೇಷ್ಟ್ರಿಗೆ ಸಮಸ್ಯೆ ಜಟಿಲವಾಗಿದೆ ಅನಿಸಿ ಈ ಸಮಸ್ಯೆಯನ್ನು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲೇ ಅನಾವರಣಗೊಳಿಸಬೇಕೆಂದು ನಿಶ್ಚಯಿಸಿ ಅದಕ್ಕೆ ಅಗತ್ಯವಾದ ಯೋಜನೆಯನ್ನು ರೂಪಿಸಿದರು. ಹೆಡ್‍ಮಾಸ್ಟರ್ ರೇವಣ್ಣ ಪಾಟೀಲ ನಗರದಿಂದ ಬಿ.ಇ.ಒ ಸಾಹೇಬರ ಜೊತೆ ಬರುವುದೆಂದು ಮತ್ತು ಇಲ್ಲಿನ ಕಾರ್ಯಕ್ರಮದ ಸಿದ್ಧತೆಯನ್ನು ದೊಕಾಚಿ ಮೇಷ್ಟ್ರು ಖುದ್ದು ಎದುರು ನಿಂತು ನೋಡಿಕೊಳ್ಳುವುದೆಂದು ಮೊದಲೆ ನಿರ್ಧಾರವಾಗಿದ್ದರಿಂದ ಮಠದ ಆಡಳಿತ ಮಂಡಳಿಗಾಗಲಿ, ಶಾಲೆಯ ಇತರ ಶಿಕ್ಷಕರಿಗಾಗಲಿ ಕೇರಿಯ ಮಕ್ಕಳ ಕ್ಷೌರದ ಸಮಸ್ಯೆ ಕುರಿತು ದೊಕಾಚಿ ಮೇಷ್ಟ್ರು ರೂಪಿಸಿದ ಯೋಜನೆಯ ಸಂಚು ಯಾರ ಗಮನಕ್ಕೂ ಬರಲಿಲ್ಲ. 

ಕಾರ್ಯಕ್ರಮದ ದಿನ ಶಾಲೆಯ ಆವರಣವನ್ನು ಕಂಪೌಂಡ್ ಗೇಟ್ ಮೂಲಕ ಬಿ.ಇ.ಒ ಸಾಹೇಬರು ಮೊದಲು ಪ್ರವೇಶಿಸುವರೆಂದು ಅವರ ಹಿಂದೆ ಮಠದ ಅಪಗೊಳು, ಆಡಳಿತ ಮಂಡಳಿ ಸದಸ್ಯರು, ಹೆಡ್ ಮಾಸ್ಟರ್ ರೇವಣ್ಣ ಹಾಗೂ ಉಳಿದ ಶಿಕ್ಷಕರು ಬರುವುದೆಂದು ಪೂರ್ವನಿರ್ಧಾರಿತವಾಗಿತ್ತು. ಬಿ.ಇ.ಒ ಸಾಹೇಬರು ಮೊದಲು ಮಠಕ್ಕೆ ಭೇಟಿ ನೀಡಿ ಹಿಂದಿನ ಅಪಗೊಳ ಗದ್ದುಗೆಗೆ ನಮಸ್ಕರಿಸಿ ಈಗಿನ ಅಪಗೊಳ ಪಾದಗಳಿಗೆ ಅಡ್ಡಬಿದ್ದು ಮಠದ ವತಿಯಿಂದ ಸನ್ಮಾನ ಸ್ವೀಕರಿಸಿ ಪಕ್ಕದಲ್ಲಿದ್ದ ಶಾಲೆಯ ಆವರಣದೊಳಗೆ ಅಡಿಯಿಟ್ಟರು. ಅಪಗೊಳನ್ನೊಳಗೊಂಡಂತೆ ಬಿ.ಇ.ಒ ಸಾಹೇಬರನ್ನು ಹಿಂಬಾಲಿಸಿ ಒಳಬಂದ ಎಲ್ಲರೂ ಎದುರು ಕಂಡ ದೃಶ್ಯ ನೋಡಿ ಒಂದು ಕ್ಷಣ ದಂಗುಬಡಿದವರಂತೆ ನಿಂತರು. ಶಾಲೆಯ ಆವರಣದ ಒಂದು ಮಗ್ಗುಲಲ್ಲಿ ಕೇರಿಯ ಮಕ್ಕಳನ್ನು ಸಾಲಾಗಿ ಕೂಡಿಸಿ ಕೈಯಲ್ಲಿ ಕತ್ತರಿ ಹಿಡಿದಿದ್ದ ದೊಕಾಚಿ ಮೇಷ್ಟ್ರು ಅವರ ತಲೆಗೂದಲನ್ನು ಬೋಳಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಅಪಗೊಳ ಮುಖ ನಖಶಿಖಾಂತ ಉರಿಯುತ್ತಿತ್ತು. ಹೆಡ್ ಮಾಸ್ಟರ್ ರೇವಣ್ಣ ಪಾಟೀಲರಿಗೆ ದೊಕಾಚಿ ಮೇಷ್ಟ್ರ ಈ ಕಾರ್ಯತಂತ್ರದ ಅರಿವಿಲ್ಲದೆ ಬೆಚ್ಚಿ ಬಿದ್ದಿದ್ದರು. ಆಡಳಿತ ಮಂಡಳಿಗೆ ಅದು ಮಠದ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಈ ಎಲ್ಲದರ ನಡುವೆ ಬಿ.ಇ.ಒ ಸಾಹೇಬರು ಮಾತ್ರ ತುಂಬ ಶಾಂತರಾಗಿದ್ದು ಆ ಸಂದರ್ಭದ ಸನ್ನಿವೇಶವನ್ನು ಖುಷಿಯಿಂದ ಆಸ್ವಾದಿಸುತ್ತಿರುವಂತೆ ಕಾಣಿಸುತ್ತಿತ್ತು. ಕೇರಿಯ ಸಂಕಷ್ಟದ ಬದುಕನ್ನು ಸ್ವತ: ಅನುಭವಿಸಿ ಗೊತ್ತಿದ್ದ ಅವರಿಗೆ ದೊಕಾಚಿ ಮೇಷ್ಟ್ರು ರೂಪಿಸಿದ ಈ ಕಾರ್ಯಯೋಜನೆ ಮನಸ್ಸಿಗೆ ಹಿಡಿಸಿತಲ್ಲದೆ ಅವರೊಳಗೊಬ್ಬ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್‍ರನ್ನು ಕಂಡಷ್ಟೆ ಖುಷಿಯಾಯಿತು ಮತ್ತು ಅದನ್ನು ಎಲ್ಲರೆದುರು ಹೇಳಿ ಬಾಯಿತುಂಬ ಹೊಗಳಿದರು ಕೂಡ. ಆ ಕೂಡಲೇ ಅಪ್ಪಣ್ಣನನ್ನು ಕರೆಕಳುಹಿಸಿ ಇನ್ನು ಮುಂದೆ ಕೇರಿಯವರಿಗೂ ಅವನು ಕ್ಷೌರ ಮಾಡಬೇಕೆಂದು ಈ ವಿಷಯವಾಗಿ ತಹಸೀಲ್ದಾರರಿಗೂ, ಜಿಲ್ಲಾಧಿಕಾರಿಗಳಿಗೂ ಪತ್ರ ಬರೆಯುವುದಾಗಿ ಹೇಳಿ ತಪ್ಪಿದಲ್ಲಿ ಕೋರ್ಟಿನಲ್ಲಿ ಕೇಸು ದಾಖಲಿಸುವುದಾಗಿ ಫರ್ಮಾನು ಹೊರಡಿಸಿದರು. ಶಾಲೆಯ ಸಣ್ಣ ಕಾರ್ಯಕ್ರಮವೊಂದು ಊರಿನ ಸಮಸ್ಯೆಯನ್ನು ಬಗೆಹರಿಸುವ ವೇದಿಕೆಯಾಗುತ್ತದೆಂದು ಯಾರೂ ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಬಿ.ಇ.ಒ ಸಾಹೇಬರು ಕಾರ್ಯಕ್ರಮ ಮುಗಿಸಿ ಹೋಗುವಾಗ ದೊಕಾಚಿ ಮೇಷ್ಟ್ರ ಕಿವಿಯಲ್ಲಿ ಯಾರಿಗೂ ಕೇಳಿಸದಂತೆ ಮೆಲ್ಲನೆ ಉಸಿರಿದ್ದರು ‘ಮೇಷ್ಟ್ರೆ ಒಂದು ಛಂದದ ಹೆಸರು ಹುಡುಕಿ ಕೊಡಿ ನಂಗೂ ಬದಲಿಸಿಕೊಳ್ಳಬೇಕಿದೆ’ ಎಂದು.

ಊರಿಗೆ ಕಂಟಕಪ್ರಾಯವಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಾಂತವೀರಪ್ಪಗೌಡರ ಮನೆಯಲ್ಲಿ ಅಪಗೊಳ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ದೊಕಾಚಿ ಮೇಷ್ಟ್ರು ಸಭೆಗೆ ಬಂದವರೆ ಅಪಗೊಳಿಗೆ ನಿಂತೇ ನಮಸ್ಕರಿಸಿ ಎದುರು ಸಾಲಿನಲ್ಲಿದ್ದ ಖುರ್ಚಿಯಲ್ಲಿ ಆಸೀನರಾದರು. ಊರಿನಲ್ಲಿ ಈ ಮೊದಲಿನ ಯಥಾಸ್ಥಿತಿಯನ್ನೆ ಕಾಯ್ದುಕೊಂಡು ಹೋಗುವುದೆಂದು ಬಿ.ಇ.ಒ ಸಾಹೇಬರ ಮನವೊಲಿಸಿ ದೂರನ್ನು ಹಿಂಪಡೆಯುವಂತೆ ಮಾಡುವ ಜವಾಬ್ದಾರಿ ದೊಕಾಚಿ ಮೇಷ್ಟ್ರಿಗೆ ಸೇರಿದ್ದೆಂದು ಇನ್ನು ಮುಂದೆ ಇಂಥ ಅನುಚಿತ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಒಂದು ವೇಳೆ ಮಠದ ಪ್ರತಿಷ್ಠೆಗೆ ಕುಂದಾಗುವಂತೆ ವರ್ತಿಸಿದಲ್ಲಿ ನೌಕರಿಯಿಂದ ವಜಾಗೊಳಿಸಲಾಗುವುದೆಂದು ಸಭೆಯಲ್ಲಿ ಠರಾವು ಹೊರಡಿಸಲಾಯಿತು. ಸಭೆಯಲ್ಲಿನ ಎಲ್ಲ ಸದಸ್ಯರೂ ಅಪಗೊಳ ಈ ನಿರ್ಧಾರವನ್ನು ಒಕ್ಕೊರಳಿನಿಂದ ಅನುಮೋದಿಸಿದರು. ಈ ನಿರ್ಧಾರದ ಕುರಿತು ಸಭೆ ದೊಕಾಚಿ ಮೇಷ್ಟ್ರ ಅಭಿಪ್ರಾಯ ಕೇಳಿದಾಗ ತಿಳಿವಳಿಕೆಯೇ ಇಲ್ಲದ ಈ ತಿರಕ್ಲಾಂಡಿಗಳೆದುರು ವಾದಿಸುವುದು ವ್ಯರ್ಥ ಕಾಲಹರಣವೆಂದು ಬಗೆದ ಮೇಷ್ಟ್ರು ಯಾವ ಪ್ರತ್ಯುತ್ತರವನ್ನು ನೀಡದೆ ಗಂಭೀರವಾಗಿ ಕುಳಿತೆ ಇದ್ದರು. ಅವರ ಈ ಮೌನವನ್ನೆ ಒಪ್ಪಿಗೆಯೆಂದು ಭಾವಿಸಿದ ಸಭೆಯು ಉಪ್ಪಿಟ್ಟು ಚಹಾದ ಸಮಾರಾಧನೆಯ ನಂತರ ಬರಕಾಸ್ತುಗೊಂಡಿತು. ಈ ನಡುವೆ ಬಿ.ಇ.ಒ ಸಾಹೇಬರು ಬೇರೆ ತಾಲೂಕಿಗೆ ವರ್ಗಾವಣೆಗೊಂಡು ತಮ್ಮ ಕಾರ್ಯಭಾರದ ಗಡಿಬಿಡಿಯಲ್ಲಿ ದೊಕಾಚಿ ಮೇಷ್ಟ್ರ ಕ್ರಾಂತಿಯ ಯೋಜನೆಯನ್ನು ಸಂಪೂರ್ಣವಾಗಿ ಮರೆತು ಬಿಟ್ಟರು. ಪರಿಣಾಮವಾಗಿ ಕೇರಿಯವರ ತಲೆಕ್ಷೌರದ ಸಮಸ್ಯೆ ಯಾವ ಬದಲಾವಣೆಯನ್ನೂ ಕಾಣದೆ ಯಥಾಸ್ಥಿತಿ ಮುಂದುವರೆಯಿತು.

* * *

ಶಾಂತವೀರಪ್ಪಗೌಡರ ಮನೆಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ದೊಕಾಚಿ ಮೇಷ್ಟ್ರ ಘನಗಾಂಭೀರ್ಯ ಮೌನ ಅಲ್ಲಿದ್ದ ಯಾರ ಮೇಲೂ ಅಷ್ಟೊಂದು ವಿಶೇಷ ಪರಿಣಾಮ ಬೀರದೆ ಹೋದರೂ ಗೌಡರ ಮಗಳು ಶಾಂತಿಲಕ್ಷ್ಮಿಯ ಎದೆಯಲ್ಲಿ ಮಾತ್ರ ಅಚ್ಚಳಿಯದ ಮುದ್ರೆಯಾಗಿ ಠಳಾಯಿಸಿಬಿಟ್ಟಿತು. ಈ ಶಾಂತಿಲಕ್ಷ್ಮಿ ಶಾಂತವೀರಪ್ಪಗೌಡರ ನಾಲ್ಕು ಗಂಡು ಮಕ್ಕಳ ನಂತರ ಹುಟ್ಟಿದ ಏಕಮಾತ್ರ ಹೆಣ್ಣುಸಂತಾನ. ಊರಿನ ಮಠದ ಶಾಲೆಯಲ್ಲಿ ಮ್ಯಾಟ್ರಿಕ್‍ವರೆಗೆ ಓದಿದ ಶಾಂತಿಲಕ್ಷ್ಮಿ ಮುಂದೆ ಕಾಲೇಜು ಸೇರಲು ಪಟ್ಟಣಕ್ಕೆ ಹೋಗುತ್ತೆನೆಂದು ಹಟ ಹಿಡಿದಾಗ ಶಾಂತವೀರಪ್ಪಗೌಡರು ಹೌಹಾರಿದ್ದರು. ದಿನದಿನಕ್ಕೂ ವಯಸ್ಸನ್ನು ಮೀರಿ ಬೆಳೆಯುತ್ತಿರುವ ಮಗಳ ದೇಹ ಗೌಡರ ಆತಂಕಕ್ಕೆ ಕಾರಣವಾಗಿತ್ತು. ಶಾಂತಿಲಕ್ಷ್ಮಿ ಒಳ್ಳೆ ಸ್ಪುರದ್ರೂಪಿ ಹೆಣ್ಣು. ಬೆಳದಿಂಗಳ ಬಣ್ಣದ ದೇಹ ಕಾಂತಿ, ಒತ್ತಾದ ಕಪ್ಪು ತಲೆಗೂದಲು, ತಿದ್ದಿ ತೀಡಿದ ಹುಬ್ಬು, ವಿಶಾಲ ನೇತ್ರಗಳು, ನೀಳ ಮೂಗು, ತುಂಬಿದೆದೆ, ಸಣ್ಣ ನಡು, ಬಾಳೆದಿಂಡಿನಂತಹ ಕಾಲುಗಳು ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನ್ನುವಷ್ಟು ರೂಪವತಿ. ದಾರಿಯಲ್ಲಿ ಅವಳು ನಡೆದು ಹೋಗುತ್ತಿದ್ದರೆ ಅವಳೆದೆಯ ಕುಲುಕಾಟಕ್ಕೆ ಯುವಕರಿರಲಿ ವಯಸ್ಸಾದವರ ಎದೆ ಕೂಡ ಝಲ್ ಎನ್ನುತ್ತಿತ್ತು. ಊರಿನ ಅದೆಷ್ಟೋ ಪಡ್ಡೆ ಹುಡುಗರು ಶಾಂತಿಲಕ್ಷ್ಮಿಯ ನೆನಪಲ್ಲಿ ರಾತ್ರಿಯೆಲ್ಲ ತಮ್ಮ ಮೈ ಬಿಸಿಯಾಗಿಸಿಕೊಂಡು ರೋಮಾಂಚನಗೊಳ್ಳುತ್ತಿದ್ದರು. ರೂಪವತಿಯಾದ ಮಗಳನ್ನು ದೂರದ ಊರಿನಲ್ಲಿಟ್ಟು ಕಾಲೇಜಿಗೆ ಸೇರಿಸುವುದು ಗೌಡರಿಗೆ ಸುತಾರಾಂ ಇಷ್ಟವಿರಲಿಲ್ಲ. ಶಾಂತಿಲಕ್ಷ್ಮಿ ಕೆಲವು ದಿನ ಅನ್ನ ನೀರು ಬಿಟ್ಟು ಮುಷ್ಕರ ಹೂಡಿದಳಾದರೂ ಕೊನೆಗೆ ಮನೆಯವರೆಲ್ಲರ ಪ್ರತಿರೋಧಕ್ಕೆ ಮಣಿದು ಕ್ರಮೇಣ ಬದಲಾದ ಈ ಜೀವನಗತಿಗೆ ಹೊಂದಿಕೊಂಡಳು. ದಿನದ ಬಹುಪಾಲು ವೇಳೆಯನ್ನು ಟೀವಿ ನೋಡುವುದು ಇಲ್ಲವೆ ಕಥೆ ಕಾದಂಬರಿಗಳ ಓದಿನಲ್ಲಿ ಕಳೆಯುತ್ತಿದ್ದ ಶಾಂತಿಲಕ್ಷ್ಮಿಗೆ ವಯೋಸಹಜವಾಗಿ ಪ್ರೀತಿ ಪ್ರಣಯದ ಸಿನಿಮಾ, ಕಥೆ, ಕಾದಂಬರಿಗಳು ಇಷ್ಟವಾಗತೊಡಗಿದವು. ಸಿನಿಮಾ ಮತ್ತು ಕಾದಂಬರಿಗಳ ನಾಯಕರಲ್ಲಿ ತನ್ನ ಕನಸಿನ ರಾಜಕುಮಾರನನ್ನು ಹುಡುಕುತ್ತಿದ್ದ ಶಾಂತಿಲಕ್ಷ್ಮಿಗೆ ಮನೆಯಲ್ಲಿ ಸಭೆ ಸೇರಿದ ದಿನದಿಂದ ದೊಕಾಚಿ ಮೇಷ್ಟ್ರ ಚಿತ್ರ ಕಣ್ಣೊಳಗೆ ಕುಳಿತು ಅವಳೆದೆಯಲ್ಲಿ ಪ್ರೇಮಗೀತೆ ಪಲ್ಲವಿಸತೊಡಗಿತು. ಡಾಂಬರು ಬಣ್ಣದ ಬೋಳು ಬೋಳಾದ ತಲೆಯ ಕಡ್ಡಿಪೈಲ್ವಾನನಂತಿರುವ ಈ ಮೇಷ್ಟ್ರು ಅನಾಮತ್ತು ನಲವತ್ತಾರು ಕಿಲೋ ತೂಕದ ದೇಹದೊಂದಿಗೆ ಅವಳ ಹೃದಯದಲ್ಲಿ ಪ್ರತಿಷ್ಠಾಪನೆಗೊಂಡಿದ್ದು ಸ್ವತ: ಶಾಂತಿಲಕ್ಷ್ಮಿಗೂ ಸೋಜಿಗದ ವಿಷಯವಾಗಿತ್ತು.

ಮಠದ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಆಗಾಗ ಪಾಲ್ಗೊಳ್ಳುತ್ತಿದ್ದ ಶಾಂತಿಲಕ್ಷ್ಮಿಗೆ ದೊಕಾಚಿ ಮೇಷ್ಟ್ರನ್ನು ಸುಲಭವಾಗಿ ಸಂಧಿಸಲು ಯಾವ ಅಡೆತಡೆಯೂ ಇರಲಿಲ್ಲ. ಬೇರೆ ವಿಚಾರಗಳಲ್ಲಿ ಮೇಷ್ಟ್ರು ಎಡವಟ್ಟು ಎಂದೆನಿಸಿದರೂ ಹೆಣ್ಣಿನ ವಿಷಯದಲ್ಲಿ ತುಂಬ ಸ್ಟ್ರಿಕ್ಟ್ ಎಂಬ ನಂಬಿಕೆ ಗೌಡರಿಗಿದ್ದುದ್ದರಿಂದಲೇ ಶಾಂತಿಲಕ್ಷ್ಮಿ ಮತ್ತು ಮೇಷ್ಟ್ರ ಭೇಟಿ ವಿಷಯದಲ್ಲಿ ಅವರು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಅದುವರೆಗೂ ಬಡ ಮತ್ತು ಕೆಳವರ್ಗದ ಜನರಷ್ಟೇ ತಮ್ಮ ವೈಚಾರಿಕ ಕ್ರಾಂತಿಯ ವಾರಸುದಾರರು ಎಂದು ಭಾವಿಸಿದ್ದ ದೊಕಾಚಿ ಮೇಷ್ಟ್ರು  ಶಾಂತಿಲಕ್ಷ್ಮಿಯ ಜೊತೆಗಿನ ಒಡನಾಟದಿಂದ ತಮ್ಮ ವೈಚಾರಿಕ ಕ್ರಾಂತಿಗೆ ಹೊಸ ನೆಲೆ ದೊರೆತ ಖುಷಿಯಿಂದ ಪುಳಕಿತರಾಗಿ ಅವಳಿಗೆ ತೇಜಸ್ವಿ, ಅನಂತಮೂರ್ತಿ, ದೇವನೂರರ ಪುಸ್ತಕಗಳನ್ನೆಲ್ಲ ಓದುವಂತೆ ಶಿಫಾರಸ್ಸು ಮಾಡಿದ್ದಲ್ಲದೆ ತಮ್ಮಲ್ಲಿದ್ದ ಒಂದೆರಡು ಪುಸ್ತಕಗಳನ್ನು ಓದಲು ಕೊಟ್ಟು ರೋಮಾಂಚನಗೊಂಡರು. ಆರಂಭದಲ್ಲಿ ಉತ್ಸಾಹ ತೋರಿದ ಶಾಂತಿಲಕ್ಷ್ಮಿ ಬರಬರುತ್ತ ಮೇಷ್ಟ್ರ ವೈಚಾರಿಕ ಕ್ರಾಂತಿಯ ವಿಚಾರಗಳಿಗೆ ರೋಸಿ ಅವರ ದಡ್ಡ ತಲೆಗೆ ನಿಜವಾದ ಅರ್ಥ ಹೊಳೆಯುತ್ತಿಲ್ಲವೆಂದು ಗೊತ್ತಾದದ್ದೆ ಆಪರೇಷನ್ ಲವ್ ಕಾರ್ಯಾಚರಣೆಗೆಂದು ಖುದ್ದು ಅಖಾಡಕ್ಕಿಳಿದಳು. ಚಿಕ್ಕಪ್ಪನ ಮಗ ಗುರುಲಿಂಗನ ಮೂಲಕ ಪುಸ್ತಕದಲ್ಲಿ ಪ್ರೇಮ ಪತ್ರವನ್ನು ಬಚ್ಚಿಟ್ಟು ಮೇಷ್ಟ್ರಿಗೆ ರವಾನಿಸಿದವಳು ಪ್ರತ್ಯುತ್ತರಕ್ಕಾಗಿ ಕ್ಷಣವನ್ನು ಯುಗವಾಗಿಸಿ ಕಾಯ್ದಳು. ಕೊನೆಗೂ ಬಂದಿದ್ದು ಪ್ರತ್ಯುತ್ತರವಲ್ಲ ಅವಳದೇ ಪತ್ರ ಅಲ್ಲಲ್ಲಿ ದೀರ್ಘ, ಒತ್ತಕ್ಷರ, ಅಲ್ಪಪ್ರಾಣ, ಮಹಾಪ್ರಾಣಗಳ ತಿದ್ದುಪಡಿಯೊಂದಿಗೆ ಮರಳಿ ಬಂದಿತ್ತು. ಪತ್ರ ಕೈಗಿತ್ತ ಗುರುಲಿಂಗ ಹೇಳಿದ ‘ಅಕ್ಕಾ ಮೇಷ್ಟ್ರು ಹೇಳಿದರು ನೀನು ಗ್ರಾಮರ್‍ನಲ್ಲಿ ಭಾಳ ವೀಕ್ ಅಂತೆ’ ಅಸಹಾಯಕತೆಯಿಂದ ಶಾಂತಿಲಕ್ಷ್ಮಿ ತಲೆ ಚಚ್ಚಿಕೊಂಡಳು. ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟವಳಿಗೆ ಇನ್ನೊಂದು ಹೆಜ್ಜೆ ಮುಂದಿಡುವುದು ಅಷ್ಟೇನು ದೊಡ್ಡ ಕಷ್ಟದ ಕೆಲಸವಾಗಿರಲಿಲ್ಲ. ಆ ದಿನ ಮನೆಯ ಮೇಲಿನ ಮಹಡಿಯಲ್ಲಿ ದೊಕಾಚಿ ಮೇಷ್ಟ್ರೊಂದಿಗೆ ಸಾಹಿತ್ಯದ ಚರ್ಚೆಯಲ್ಲಿ ತೊಡಗಿದ್ದಾಗ ಶಾಂತಿಲಕ್ಷ್ಮಿ ಇದ್ದಕ್ಕಿದ್ದಂತೆ ಮೈಮೇಲಿನ ಬಟ್ಟೆ ಕಿತ್ತೊಗೆದು ಹುಟ್ಟುಡುಗೆಯಲ್ಲಿ ನಿಂತು ‘ನೋಡಿ ಮೇಷ್ಟ್ರೆ ಏನನಿಸುತ್ತೆ’ ಎಂದು ಕೇಳಿದಳು. ದೊಕಾಚಿ ಮೇಷ್ಟ್ರು ಏಕಕಾಲಕ್ಕೆ ಒಂದು ತೆರನಾದ ನಿರ್ಲಿಪ್ತತೆ ಮತ್ತು ಭಕ್ತಿಯ ಭಾವದಿಂದ ‘ಅಕ್ಕ ಮಹಾದೇವಿಯ ದರುಶನವಾದ ಅನುಭವವಾಯಿತು’ ಎಂದವರೆ ಎದ್ದು ಶಾಂತಿಲಕ್ಷ್ಮಿಯ ಕಾಲಿಗೆರಗಿ ತನುಕರಗದವರಲ್ಲಿ ವಚನ ವಾಚಿಸತೊಡಗಿದರು. ಶಾಂತಲಕ್ಷ್ಮಿಯ ಹೃದಯದಲ್ಲಿ ಈಗ ಪ್ರೇಮದ ಜಾಗದಲ್ಲಿ ಕ್ರೋಧ ಹೆಡೆಯಾಡತೊಡಗಿತು. ಪ್ರೀತಿಯ ಜಾಗವನ್ನು ಸೇಡು ಆಕ್ರಮಿಸಿಕೊಂಡಿತು. ಮೈಗೆ ಅರೆಬರೆ ಬಟ್ಟೆ ಸುತ್ತಿಕೊಂಡವಳೆ ಮೇಷ್ಟ್ರನ್ನು ಬಿಗಿದಪ್ಪಿ ಕಿಟಾರನೆ ಕಿರುಚಿಕೊಂಡಳು. ಆ ಸಂಜೆಯೇ ಸಭೆ ಸೇರಿದ ಮಠದ ಆಡಳಿತ ಮಂಡಳಿ ಅನುಚಿತ ವರ್ತನೆಯ ಕಾರಣ ನೀಡಿ ದೊಕಾಚಿ ಮೇಷ್ಟ್ರನ್ನು ನೌಕರಿಯಿಂದ ವಜಾಗೊಳಿಸಿದ್ದಾಗಿ ಆದೇಶ ಹೊರಡಿಸಿತು. ಮೇಷ್ಟ್ರ ವೈಚಾರಿಕ ಕ್ರಾಂತಿಯನ್ನು ದಮನಗೊಳಿಸಲು ಮಠದ ಆಡಳಿತ ಮಂಡಳಿ ಶಾಂತಿಲಕ್ಷ್ಮಿಯನ್ನು ಬಳಸಿಕೊಂಡಿತು ಎನ್ನುವ ಅನುಮಾನದ ಮಾತುಗಳು ಅಲ್ಲಲ್ಲಿ ಕೇಳಿಬಂದವು.

* * *

ಇದೆಲ್ಲ ನಡೆದು ಹಲವು ವರ್ಷಗಳೇ ಗತಿಸಿ ಹೋಗಿವೆ. ಶಾಂತಿಲಕ್ಷ್ಮಿಗೆ ಸೋದರ ಮಾವನ ಮಗನೊಂದಿಗೆ ಮದುವೆಯಾಗಿ ಎರಡು ಮಕ್ಕಳಾಗಿವೆ. ಮಠ ಈಗ ಮೊದಲಿಗಿಂತ ದೊಡ್ಡದಾಗಿ ಬೆಳೆದು ಸುತ್ತಲೂ ಕಾಲೇಜು, ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿವೆ. ಕೇರಿಯವರ ತಲೆಗಳನ್ನು ಅಪ್ಪಣ್ಣ ಮತ್ತು ಅವನ ಮಕ್ಕಳ ಕ್ಷೌರಿಕ ವೃತ್ತಿಯ ವ್ಯಾಪ್ತಿಯಿಂದ ಹೊರಗೇ ಇರಿಸಲಾಗಿದೆ. ಕಾಫ್ಕಾ, ನೆರೂಡ, ಕಮೂ, ಬ್ರೆಕ್ಟ್, ಮಾರ್ಕ್ವೇಜ್ ಇವರೆಲ್ಲ ಗೌಡರ ಹೊಲದಲ್ಲಿ ಕೂಲಿ ಆಳುಗಳಾಗಿ ದುಡಿಯುತ್ತ ಬದುಕಿನ ಬಂಡಿ ಎಳೆಯುತ್ತಿರುವರು. ಮೊದಲಿಗಿಂತ ವಯಸ್ಸಾದಂತೆ ಕಾಣುತ್ತಿರುವ ದೊಕಾಚಿ ಮೇಷ್ಟ್ರು ‘ಕ್ರಾಂತಿ ಆಗ್ಬೇಕರಯ್ಯ ಕ್ರಾಂತಿ. ಒಂದು ವೈಚಾರಿಕ ಕ್ರಾಂತಿಯಾಗಿ ಜನರಲ್ಲಿ ತಿಳಿವಳಿಕೆ ಮೂಡಿದಾಗಲೇ ಬದಲಾವಣೆ ಸಾಧ್ಯ ನೋಡಿ’ ಎಂದು ಎದುರು ಸಿಕ್ಕಿದವರಿಗೆಲ್ಲ ಹೇಳುತ್ತ ಊರ ತುಂಬ ಈಗಲೂ ತಿರುಗಾಡುತ್ತಿರುತ್ತಾರೆ.                 

---000---


-ರಾಜಕುಮಾರ ಕುಲಕರ್ಣಿ