Friday, March 21, 2014

ಖುಷ್ವಂತಜ್ಜನ ನೆನಪುಗಳಲ್ಲಿ






             ಪತ್ರಕರ್ತ, ಅಂಕಣಕಾರ, ಸಾಹಿತಿ ಖುಷ್ವಂತ ಸಿಂಗ್ ತಮ್ಮ ೯೯ನೇ ವಯಸ್ಸಿನಲ್ಲಿ ನಿಧನರಾದರು. ಬೆಚ್ಚನೆಯ ಜೀವನ ಪ್ರೀತಿಯನ್ನು ತನ್ನೊಳಗೆ ಬದುಕಿನ ಕೊನೆಯ ದಿನದವರೆಗೂ ಕಾಪಿಟ್ಟುಕೊಂಡು ಬಂದ ಈ ಅಜ್ಜ ಇತರರಲ್ಲೂ ಅದೇ ಜೀವನ ಪ್ರೀತಿಯನ್ನು ತನ್ನ ಬರವಣಿಗೆಯ ಮೂಲಕ ಕಟ್ಟಿಕೊಟ್ಟ. ಖುಷ್ವಂತ ಸಿಂಗರ ಬದುಕು ಮತ್ತು ಬರವಣಿಗೆ ಅಂದಿಗೂ ಮತ್ತು ಇಂದಿಗೂ ಅದೊಂದು ಅಚ್ಚರಿ ಮತ್ತು ಬೆರಗುಗಳ ಸಮ್ಮಿಶ್ರಣ. ಸಾಯುವುದಕ್ಕೆ ಇನ್ನೇನು ಕೆಲವು ತಿಂಗಳುಗಳಿವೆ ಎನ್ನುವವರೆಗೂ ರಾಷ್ಟ್ರದ ಪ್ರಮುಖ ಇಂಗ್ಲಿಷ್ ದೈನಿಕಗಳಲ್ಲಿ ಅವರ ಅಂಕಣ ಬರಹಗಳು  ನಿಯಮಿತವಾಗಿ ಪ್ರಕಟವಾಗುತ್ತಿದ್ದವು.  ಪ್ರತಿ ಶನಿವಾರದಂದು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ 'Sweet and sour' ಅಂಕಣದ ಓದಿಗಾಗಿ ಓದುಗರು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದರು. ಪ್ರತಿವಾರ ಒಂದೊಂದು ಹೊಸವಿಷಯ ಲೇಖನದ ಕೊನೆಗೆ ಸಣ್ಣದೊಂದು ಜೋಕು ಅವರ ಆ ಅಂಕಣ ಓದುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತಿತ್ತು. ಸಾಮಾನ್ಯ ಸಂಗತಿಯನ್ನೂ ನಾವುಗಳೆಲ್ಲ ಅತ್ಯಂತ ಕುತೂಹಲ ಮತ್ತು ಬೆರಗಿನಿಂದ ಓದುವಂತೆ ಬರೆಯುತ್ತಿದ್ದ ಖುಷ್ವಂತ ಸಿಂಗಗೆ ಬರವಣಿಗೆ ಒಲಿಯುವುದರ ಜೊತೆಗೆ ಓದುಗರ ನಾಡಿಮಿಡಿತ ಅರ್ಥವಾಗಿತ್ತು. ಸಣ್ಣ  ಸಣ್ಣ ಸಂಗತಿಗಳಿಗೂ ಹಾಸ್ಯದ ಲೇಪ ಹಚ್ಚಿ  ಅತ್ಯಂತ ಲವಲವಿಕೆಯಿಂದ ಬರೆಯುತ್ತಿದ್ದ ಖುಷ್ವಂತ್ ಸಿಂಗರಿಗೆ ತಮ್ಮ ಸುತ್ತಮುತ್ತಲಿನ ಜನರು, ಮನೆಯ ಸೇವಕ, ಕಸಗುಡಿಸುವವ ಇಂಥ ವ್ಯಕ್ತಿಗಳೇ ಬರವಣಿಗೆಗೆ ಆಹಾರವಾಗುತ್ತಿದ್ದರು.  ಅಚ್ಚರಿಯ ಸಂಗತಿ ಎಂದರೆ ಖುಷ್ವಂತ್ ಸಿಂಗ್ ಬರವಣಿಗೆಯ ಬದುಕನ್ನು ಆಯ್ಕೆಮಾಡಿಕೊಂಡಿದ್ದು ಅದೊಂದು ಆಕಸ್ಮಿಕ ಸನ್ನಿವೇಶದಲ್ಲಿ. ವಕೀಲರಾಗಬೇಕೆಂದು ವೃತ್ತಿಯನ್ನಾರಂಭಿಸಿದ ಆ ದಿನಗಳಲ್ಲಿ ಕೈಯಲ್ಲಿ ಕೆಲಸವಿಲ್ಲದೆ ಖಾಲಿ ಕುಳಿತಾಗ ಖುಷ್ವಂತ್ ಸಿಂಗಗೆ ಓದುವ ಗೀಳು ಅಂಟಿಕೊಂಡಿತು. ಇಂಗ್ಲಿಷ್ ಸಾಹಿತ್ಯವನ್ನು ಓದುತ್ತ ಹೋದಂತೆಲ್ಲ ಅವರೊಳಗೊಬ್ಬ ಬರಹಗಾರ ಹುಟ್ಟಿಕೊಂಡ. ಮುಂದೆ ಬರವಣಿಗೆಯನ್ನೇ ವೃತ್ತಿಯಾಗಿಸಿಕೊಂಡು ಈ ಅಜ್ಜ ಅದ್ಭುತವಾದದ್ದನ್ನು ಸಾಧಿಸಿದ. ಪತ್ರಿಕೆಯ ಸಂಪಾದಕನಾಗಿ, ೮೦ ಕ್ಕೂ ಹೆಚ್ಚು ಪುಸ್ತಕಗಳ ಲೇಖಕನಾಗಿ, ಅಂಕಣಕಾರನಾಗಿ ಅವರು ಭಾರತೀಯ ಇಂಗ್ಲಿಷ್ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯ.

                     ಖುಷ್ವಂತ್ ಸಿಂಗರ ಬದುಕು ಅದೊಂದು ಅತ್ಯಂತ ವರ್ಣರಂಜಿತ ಬದುಕದು. ನೇರ, ನಿರ್ಭೀತ, ದಿಟ್ಟ ವ್ಯಕ್ತಿತ್ವದ ಜೊತೆಗೆ  ಯಾರ  ಮುಲಾಜು ಹಾಗೂ ಬಿಡೆಗೆ ಸಿಲುಕದ ಬದುಕು ಅವರದಾಗಿತ್ತು. ತಮ್ಮೊಳಗಿನ ದೌರ್ಬಲ್ಯಗಳನ್ನು ಅತ್ಯಂತ ನಿರ್ಭಿಡೆ ಮತ್ತು ನಿಸ್ಸಂಕೋಚವಾಗಿ ಹೇಳಿಕೊಂಡ ಲೇಖಕನೆಂದರೆ ಅದು ಖುಷ್ವಂತ್ ಸಿಂಗ್ ಮಾತ್ರ. ಬರವಣಿಗೆಯ ಬದುಕು ಮತ್ತು ಖಾಸಗಿ ಬದುಕನ್ನು ಪ್ರತ್ಯೇಕವಾಗಿಸಿಕೊಂಡು ಬದುಕುತ್ತಿರುವ ಊಸರವಳ್ಳಿಗಳ ನಡುವೆ ಈ ಖುಷ್ವಂತ್ ಸಿಂಗ್ ತಮ್ಮ ನೇರಾನೇರ ಗುಣಗಳಿಂದ ಇಷ್ಟವಾಗುತ್ತಾರೆ. ಒಂದೊಮ್ಮೆ ಆಹ್ವಾನಿತ ಪ್ರಧಾನಿಯ ಆಗಮನಕ್ಕೂ ಕಾಯದೆ ವೇಳೆಯಾಯಿತೆಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡ ಹುಂಬನೀತ. ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿ ಹೇರಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು ಕೂಡ ಇದೆ ಅಜ್ಜ. ಒಟ್ಟಿನಲ್ಲಿ ಖುಷ್ವಂತ್ ಸಿಂಗರದು ಸುಲಭವಾಗಿ ಅರ್ಥವಾಗುವ ಮತ್ತು ಕೈಗೆ ಸಿಗುವ ವ್ಯಕ್ತಿತ್ವವಲ್ಲ. ಆಧುನಿಕತೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮತ್ತು ಹೊಸ ಬದಲಾವಣೆಗಳಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿದ್ದ ಖುಷ್ವಂತ್ ಸಿಂಗ್ ಕೊನೆಯ ಉಸಿರಿನವರೆಗೂ ಸಿಖ್ ಸಂಪ್ರದಾಯದ ವೇಷ ಭೂಷಣಗಳನ್ನು ಕಳಚಿ ಹೊರಬರದಿರುವುದು ಅತ್ಯಂತ ಅಚ್ಚರಿಯ ಸಂಗತಿಗಳಲ್ಲೊಂದು. ಮಗ ರಾಹುಲ್ ಗಡ್ಡ ಬೋಳಿಸಿಕೊಂಡಾಗ ಆತನೊಂದಿಗೆ ಮಾತನಾಡುವುದನ್ನೇ ಬಿಟ್ಟ ಖುಷ್ವಂತ್ ವ್ಯಕ್ತಿತ್ವ ಸಂಪ್ರದಾಯ ಮತ್ತು ಆಧುನಿಕತೆಯ ಸಮ್ಮಿಶ್ರಣದಂತೆ ಕಾಣುತ್ತದೆ.

        ಖುಷವಂತ್ ಸಿಂಗ್ ಬಗ್ಗೆ ಬರೆಯುತ್ತ ಪಿ.ಲಂಕೇಶ್ 'ಭಾರತದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಿಗಬೇಕಿದ್ದರೆ ಅದು ಖುಷ್ವಂತ್ ಗೆ' ಎಂದು ಹೇಳುತ್ತಾರೆ. ಏಕೆಂದರೆ ಖುಷ್ವಂತ್ ಸಿಂಗ್ ಭಾರತದಲ್ಲಿನ ಎಲ್ಲ ಜಾತಿ ಮತ್ತು ಧರ್ಮದವರನ್ನು ಪ್ರೀತಿಸಿದವರು. ಅವರ 'ಟ್ರೇನ್ ಟು ಪಾಕಿಸ್ತಾನ್' ಕೃತಿಯಲ್ಲಿ ನಾವು ಅವರೊಳಗಿನ ಧರ್ಮಾತೀತ ಮನೋಭಾವವನ್ನು ಕಾಣಬಹುದು. ಏಕಕಾಲಕ್ಕೆ ಮುಸ್ಲಿಂ ಮತ್ತು ಸಿಖ್ ಎರಡೂ ಧರ್ಮಗಳಲ್ಲಿನ ಉತ್ತಮ ಗುಣಗಳನ್ನು ತಮ್ಮ ಈ ಕೃತಿಯಲ್ಲಿ ಪಟ್ಟಿ ಮಾಡುತ್ತಾರೆ. 'ಆತನಂತೆ ಬರೆಯುವವರು, ಛೇಡಿಸುವವರು, ಕುಡಿಯುವವರು, ಕಲ್ಪಿಸಿಕೊಳ್ಳುವವರು ಬರಬಹುದು. ಆದರೆ ಈ ಸರ್ದಾರ್ಜಿಯಂತೆ ಲವಲವಿಕೆ, ದೇಶ ಪ್ರೇಮ, ತುಂಟತನ, ಒಳ್ಳೆಯತನ ಇರುವವರು ಬರುವುದು ಕಷ್ಟ' ಎಂದ ಲಂಕೇಶರ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.

                          ಖುಷ್ವಂತ್ ಸಿಂಗ್ ಎಂದಾಕ್ಷಣ ಆ ಕ್ಷಣಕ್ಕೆ ನಮಗೆ ನೆನಪಾಗುವುದು ಅವರು ಹೇಳಿದ ಮತ್ತು ಬರೆದ ಜೋಕುಗಳು. ಟ್ರೇನ್ ಟು ಪಾಕಿಸ್ತಾನ್, ಹಿಸ್ಟರಿ ಆಫ್ ಇಂಡಿಯಾ, ಕಂಪನಿ ವಿಥ್ ವುಮೆನ್ ದಂಥ ಮಹತ್ವದ ಕೃತಿಗಳನ್ನು ಬರೆದ ಖುಷ್ವಂತ್ ಸಿಂಗ್ ಅಷ್ಟೇ ಸಮರ್ಥವಾಗಿ ಸಾವಿರಾರು ಜೋಕುಗಳನ್ನು ಬರೆದಿರುವರು. ಅವರ ಜೋಕುಗಳ ಪುಸ್ತಕಗಳು ಸರಣಿಯೋಪಾದಿಯಲ್ಲಿ ಪ್ರಕಟವಾಗಿವೆ. ಇವತ್ತಿಗೂ ಅನೇಕ ಭಾರತೀಯರ ಮನೆಯ ಪುಸ್ತಕಗಳ ಸಂಗ್ರಹಾಲಯದಲ್ಲಿ ನಾವು ಖುಷ್ವಂತರ ಜೋಕುಗಳ ಪುಸ್ತಕಗಳನ್ನು ಕಾಣಬಹುದು. ತಮ್ಮ ಈ ನಗೆಹನಿಗಳ ಮೂಲಕ ಕೋಟ್ಯಾಂತರ ಭಾರತೀಯರ ಬದುಕಿಗೆ ನವನಾವಿನ್ಯತೆಯ ಲೇಪವನ್ನು ಬಳಿದ ಕಲಾಕಾರನೀತ. ಒಂದಿಷ್ಟು ನಗೆಯುಕ್ಕಿಸಿ ಮನಸ್ಸನ್ನು ಆಹ್ಲಾದಕರವಾಗಿಸಿ ಬದುಕುವ ಚೈತನ್ಯ ನೀಡಿ ಆ ಮೂಲಕ ನಮ್ಮಗಳ ಬದುಕನ್ನು ಸಹನೀಯವಾಗಿಸಿದ ಅವರ ನಗೆಹನಿಗಳು ಅಂದು ಇಂದು ಎಲ್ಲ ಕಾಲಕ್ಕೂ ಪ್ರಸ್ತುತವೆನಿಸುತ್ತವೆ. ತಮ್ಮ ನಗೆಹನಿಗಳ ಪುಸ್ತಕವೊಂದರ ಮುನ್ನುಡಿಯಲ್ಲಿ ಖುಷ್ವಂತ್ ಸಿಂಗ್ ಹೀಗೆ ಹೇಳುತ್ತಾರೆ 'ಈ ಪುಸ್ತಕ ಬರೆಯುತ್ತಿರುವ ಸಂದರ್ಭ ಒಂದು ರಾತ್ರಿ ನಾನೊಂದು ಕನಸು ಕಂಡೆ. ಆಗ ನನಗೆ ವಯಸ್ಸು ೯೨. ನನ್ನ ಹತ್ತಿರ ಬಂದ ದೇವರು ಇನ್ನು ನಿನ್ನ ಭೂಮಿಯ ಋಣ ತೀರಿತು ಬಾ ನನ್ನೊಡನೆ ಎಂದು ಕರೆದ. ನಾನು ಹೇಳಿದೆ ನನ್ನ ಕೆಲವೊಂದು ಹಸ್ತಪ್ರತಿಗಳು ಪ್ರಕಟಣೆಯ ಹಂತದಲ್ಲಿವೆ ಏಕಾಏಕಿ ಅದೆಲ್ಲವನ್ನು ಅರ್ಧಕ್ಕೆ ಬಿಟ್ಟು ಬಂದರೆ ಪ್ರಕಾಶಕರಿಗೆ ತೊಂದರೆಯಾಗುತ್ತದೆ. ದಯವಿಟ್ಟು ನನಗೆ ಇನ್ನೊಂದಿಷ್ಟು ಸಮಯ ಕೊಡು. ದೇವರು ನನ್ನ ಮನವಿಯಿಂದ ಪ್ರಸನ್ನನಾಗಲಿಲ್ಲ. ಜೊತೆಗೆ ಬರುವಂತೆ ಖಡಾಖಂಡಿತವಾಗಿ ಹೇಳಿದ. ಕೊನೆಗೆ ಬೇರೆ ಉಪಾಯವಿಲ್ಲದೆ ಹೇಳಿದೆ ನಾನು ಇನ್ನು ಕೆಲವು ಜೋಕುಗಳ ಪುಸ್ತಕ ಬರೆಯಬೇಕಾಗಿದೆ. ದೇವರಿಗೆ ನನ್ನ ಮಾತುಗಳು ಅರ್ಥವಾಗಲಿಲ್ಲ. ಹಾಗೆಂದರೇನು? ಕೇಳಿದ. ಜೋಕುಗಳನ್ನು ಓದುವುದರಿಂದ ಜನರು ನಗುತ್ತಾರೆ ಇದರಿಂದ ಅವರ ಮನಸ್ಸು ಆಹ್ಲಾದಗೊಳ್ಳುತ್ತದೆ. ದೇವರಿಗೆ ನನ್ನ ಮಾತು ಒಪ್ಪಿಗೆಯಾಯಿತು. ಹೌದು ನಾನು ಸಹ ಜನರು ಆನಂದದಿಂದ ಇರಲೆಂದು ಬಯಸುತ್ತೆನೆ. ಜನರನ್ನು ಸಂತೋಷಗೊಳಿಸುವ ಕೆಲಸ ನೀನು ಮಾಡುವುದಾದರೆ   ಇನ್ನು ಹಲವು ವರ್ಷ ಭೂಮಿಯ ಮೇಲೆ ಇರು ಹೀಗೆ ಹೇಳಿದವನೇ ಅದೃಶ್ಯನಾದ'. ನಿಜಕ್ಕೂ ಖುಷ್ವಂತ್ ಸಿಂಗರ ಈ ಮಾತು ಕಲ್ಪಿತವಾದರೂ  ಅವರ ಜೋಕುಗಳು ಅಸಂಖ್ಯಾತ ಜನರನ್ನು ತಲುಪಿವೆ. ಅಕ್ಷರಸ್ಥರಿಂದ ಅನಕ್ಷರಸ್ಥರವರೆಗೂ, ಮಕ್ಕಳಿಂದ ವೃದ್ಧರವರೆಗೂ, ಪುರುಷ ಮಹಿಳೆ ಎನ್ನುವ ತಾರತಮ್ಯವಿಲ್ಲದೆ ಹಲವು ದಶಕಗಳ ಕಾಲ ಎಲ್ಲರನ್ನೂ ನಕ್ಕು ನಲಿಸಿದ ಈ ಮೋಡಿಗಾರನ ಪೆನ್ನಿನಿಂದ ಹೊರಬಂದ ಜೋಕುಗಳ ಸಂಖ್ಯೆ ಅಗಣಿತ.

     ಅಂಥದ್ದೇ ಅವರ ಕೆಲವೊಂದು ಜೋಕುಗಳು ಇಂಗ್ಲಿಷಿನಿಂದ ಕನ್ನಡಕ್ಕೆ ಖುಷ್ವಂತಜ್ಜನ ನೆನಪುಗಳೊಂದಿಗೆ..........

                ಒಂದು ದಿನ ಸಂತಾ ಪುಣೆಯಿಂದ ಚಂಡೀಘರ್ ಗೆ ವಿಮಾನದಲ್ಲಿ ಪಯಣಿಸುತ್ತಿದ್ದ. ತನಗೆ ಕಾಯ್ದಿರಿಸಲಾಗಿದ್ದ ಮಧ್ಯದ ಸೀಟನ್ನು ಬಿಟ್ಟು ಕಿಟಕಿ  ಹತ್ತಿರದ ಸೀಟಿನಲ್ಲಿ ಹೋಗಿ ಕುಳಿತ. ಸ್ವಲ್ಪ ಸಮಯದ ನಂತರ ಅಲ್ಲಿಗೆ ಬಂದ ವಯಸ್ಸಾದ ಮಹಿಳೆ ಸಂತಾ ಕುಳಿತ ಸೀಟು ತಾನು ಕಾಯ್ದಿರಿಸಿದ್ದೆಂದು ಅಲ್ಲಿಂದ ಏಳುವಂತೆ ಸೂಚಿಸಿದಳು. 'ಕಿಟಕಿ ಹತ್ತಿರ ಕುಳಿತು ಹೊರಗಿನ ದೃಶ್ಯವನ್ನು ವೀಕ್ಷಿಸುತ್ತಿದ್ದೇನೆ' ಎಂದು ಕಾರಣ ನೀಡಿದ ಸಂತಾ ಅಲ್ಲಿಂದ ಏಳಲು ಒಪ್ಪಲಿಲ್ಲ. ಬೇರೆ ದಾರಿಕಾಣದೆ ಮಹಿಳೆ ಅಲ್ಲಿಯೇ ಇದ್ದ ವಿಮಾನ ಪರಿಚಾರಕಿಗೆ  ಈ ವಿಷಯ ತಿಳಿಸಿ ಸಂತಾನನ್ನು ಅಲ್ಲಿಂದ ಎಬ್ಬಿಸುವಂತೆ ಹೇಳಿದಳು. ವಿಮಾನ ಪರಿಚಾರಕಿ  ಎಷ್ಟೇ ಮನವಿ ಮಾಡಿಕೊಂಡರು ಸಂತಾ ಅ ಜಾಗದಿಂದ ಕದಲಲಿಲ್ಲ. ಪರಿಚಾರಕಿ  ಸಹ ಪೈಲೆಟ್ ಗೆ ಈ ವಿಷಯ ತಿಳಿಸಿ ಸಂತಾನನ್ನು ಅಲ್ಲಿಂದ ಎಬ್ಬಿಸಿ ವಯಸ್ಸಾದ ಮಹಿಳೆಗೆ ಆ ಸೀಟನ್ನು ಒದಗಿಸುವಂತೆ ಸೂಚಿಸಿದಳು. ಸಹ ಪೈಲೆಟ್ ಮಾತಿಗೂ ಸಂತಾ ಅಲ್ಲಿಂದ ಸರಿದು ತನಗಾಗಿ ಕಾಯ್ದಿರಿಸಿದ್ದ ಸೀಟಿನಲ್ಲಿ ಕೂಡಲು ನಿರಾಕರಿಸಿದ. ಕೊನೆಗೆ ವಿಮಾನದ ಕ್ಯಾಪ್ಟನ್ ಗೆ  ದೂರು ಕೊಡಲಾಯಿತು. ಸಂತಾ ಕುಳಿತ ಜಾಗಕ್ಕೆ ಬಂದ ಕ್ಯಾಪ್ಟನ್ ಯಾರಿಗೂ ಕೇಳಿಸದಂತೆ ಸಂತಾನ ಕಿವಿಯಲ್ಲಿ ಏನನ್ನೋ ಹೇಳಿದ. ತಕ್ಷಣವೇ ಸಂತಾ ಕಿಟಕಿ ಹತ್ತಿರದ ಸೀಟನ್ನು ಆ ವಯಸ್ಸಾದ ಮಹಿಳೆಗೆ ಬಿಟ್ಟು ತನ್ನ ಮಧ್ಯದ ಸೀಟಿನಲ್ಲಿ ಬಂದು ಕುಳಿತ. ವಿಮಾನ ಪರಿಚಾರಕಿ ಮತ್ತು ಸಹ ಪೈಲೆಟ್ ಗೆ ಆಶ್ಚರ್ಯವಾಯಿತು. ತಾವು ಪರಿಪರಿಯಾಗಿ ಬೇಡಿಕೊಂಡರೂ ಅಲ್ಲಿಂದ ಕದಲದ ಸಂತಾ ನೀವು  ಕಿವಿಯಲ್ಲಿ ಏನನ್ನೋ ಉಸುರಿದ ಮಾತ್ರಕ್ಕೆ ಹೇಗೆ ಸೀಟು ಬಿಟ್ಟುಕೊಟ್ಟ ಎಂದು ಕ್ಯಾಪ್ಟನ್ ನನ್ನು ಪ್ರಶ್ನಿಸಿದರು. ಕ್ಯಾಪ್ಟನ್ ಪ್ರತಿಕ್ರಿಯಿಸಿದ 'ನಾನು ಸಂತಾಗೆ ಹೇಳಿದ್ದು ಇಷ್ಟೇ ವಿಮಾನದಲ್ಲಿನ ಮಧ್ಯದ ಸೀಟುಗಳು ಮಾತ್ರ ಚಂಡೀಘರ್ ಗೆ ಹೋಗುತ್ತವೆ ಉಳಿದ ಸೀಟುಗಳು ಹೋಗುತ್ತಿರುವುದು ಜಲಂಧರ್ ಗೆ'
---೦೦೦---

                      ಭಾರತದಿಂದ ಸಂತಾ, ಅಮೇರಿಕಾದಿಂದ ಮಾರ್ಕ್ ಮತ್ತು ಬ್ರಿಟನ್ ದಿಂದ ಟಾಮ್ ಗೂಢಚಾರ ಸಂಸ್ಥೆಯಲ್ಲಿ ಖಾಲಿಯಿದ್ದ ಪತ್ತೇದಾರ ಕೆಲಸಕ್ಕೆ ಅರ್ಜಿ ಹಾಕಿದ್ದರು. ನಿಗದಿತ ದಿನದಂದು ಈ ಮೂವರನ್ನು ಸಂದರ್ಶನಕ್ಕೆ ಕರೆಯಲಾಯಿತು. ಮೊದಲು ಮಾರ್ಕ್ ನನ್ನು ಸಂದರ್ಶನ ಕೊಠಡಿಗೆ ಕರೆಯಲಾಯಿತು. ಅಲ್ಲಿದ್ದ ಗೂಢಚಾರ ಸಂಸ್ಥೆಯ ಮುಖ್ಯಸ್ಥ 'ಏಸು ಕ್ರಿಸ್ತನನ್ನು ಕೊಲೆ ಮಾಡಿದವರು ಯಾರು?' ಎಂದು ಪ್ರಶ್ನಿಸಿದ. ಮಾರ್ಕ್ ಯಾವ ಅನುಮಾನ ಇಲ್ಲದಂತೆ ತಟ್ಟನೆ ಉತ್ತರಿಸಿದ 'ಏಸುವನ್ನು ಕೊಂದವರು ಬ್ರಿಟಿಷರು'. ಮಾರ್ಕ್ ನಂತರ ಟಾಮ್ ನನ್ನು ಕರೆದು ಅದೇ ಪ್ರಶ್ನೆಯನ್ನು ಕೇಳಲಾಯಿತು. ಟಾಮ್ ಏಸುವನ್ನು ಕೊಂದವರು ಅಮೇರಿಕನ್ನರು ಎಂದು ಉತ್ತರಿಸಿದ. ಕೊನೆಗೆ ಸಂತಾನ ಸರದಿ ಬಂದಿತು. ಮುಖ್ಯಸ್ಥ ಮತ್ತದೇ ಪ್ರಶ್ನೆಯನ್ನು ಪುನರಾವರ್ತಿಸಿದ. ಪ್ರಶ್ನೆ ಕೇಳಿದ ಸಂತಾ ಅರೆಘಳಿಗೆ ಯೋಚನಾಮಗ್ನನಾದ. ಈ ಪ್ರಶ್ನೆಗೆ ಉತ್ತರಿಸಲು ಒಂದಿಷ್ಟು ಕಾಲಾವಕಾಶ ಬೇಡಿದ. ಸಂತಾನ ಮನವಿಗೆ ಸಮ್ಮತಿಸಿದ ಸಂಸ್ಥೆಯ ಮುಖ್ಯಸ್ಥ ನಾಳೆ ಬಂದು ಉತ್ತರ ಕೊಡಲು ಸೂಚಿಸಿದ. ಸಂದರ್ಶನದಿಂದ ಮನೆಗೆ ಮರಳಿದ ಸಂತಾನನ್ನು ಆತನ ಹೆಂಡತಿ ಕೆಲಸದ ವಿಷಯವಾಗಿ ಕೇಳಿದಳು. ಸಂತಾ ಆ ಕೆಲಸ ತನಗೇ ಸಿಕ್ಕಿದೆ ಎಂದು  ನುಡಿದ. ಸಂತಾನ ಮಾತುಗಳಿಂದ ಅಚ್ಚರಿಗೊಂಡ ಪತ್ನಿ ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದಳು. 'ಈಗಾಗಲೇ ನನ್ನನ್ನು ಏಸು ಕ್ರಿಸ್ತನ ಕೊಲೆಗಾರನನ್ನು ಪತ್ತೆ ಹಚ್ಚಲು ನಿಯೋಜಿಸಲಾಗಿದೆ. ಅಂದ ಮೇಲೆ ಕೆಲಸ ನನಗೇ ಸಿಕ್ಕಂತಲ್ಲವೇ' ಸಂತಾ ಉತ್ತರಿಸಿದ.
---೦೦೦---

         ಬಂತಾ ಸಿಂಗ್ ಕಂಪ್ಯೂಟರ್ ಖರೀದಿಸಿದ. ಮನೆಗೆ ತಂದು ಕಂಪ್ಯೂಟರ್ ಎದುರು ಕುಳಿತವನಿಗೆ ಅನೇಕ ಪ್ರಶ್ನೆಗಳು ಕಾಡಲಾರಂಭಿಸಿದವು. ತನ್ನೆಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ನೇರವಾಗಿ ಬಿಲ್ ಗೇಟ್ ಗೆ ಪತ್ರ ಬರೆಯಲು ನಿರ್ಧಿರಿಸಿದ.

ಡಿಯರ್ ಬಿಲ್ ಗೇಟ್,

ನಿನ್ನೆ ನಾನೊಂದು ಕಂಪ್ಯೂಟರ್ ಖರೀದಿಸಿದೆ. ಕಂಪ್ಯೂಟರ್ ಎದುರು ಕುಳಿತಾಗ ಅನೇಕ ಸಮಸ್ಯೆಗಳು ಎದುರಾದವು. ಆ ಎಲ್ಲ ಸಮಸ್ಯೆಗಳನ್ನು ನಾನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ ಮತ್ತು ಅವುಗಳಿಗೆ ನಿಮ್ಮಿಂದ ಪರಿಹಾರಗಳನ್ನು ನಿರೀಕ್ಷಿಸುತ್ತೇನೆ.

೧. ಕಂಪ್ಯೂಟರ್ ನಲ್ಲಿ shut down ಎಂದಿದ್ದು ಅದಕ್ಕೆ ಮುಚ್ಚಲು ನೀವು ಬಾಗಿಲುಗಳನ್ನೇ ಮಾಡಿಲ್ಲ.

೨. ಇಲ್ಲಿ START ಎಂದು ಮಾತ್ರವಿದೆ ಆದರೆ STOP ಎಂದಿಲ್ಲ. ದಯವಿಟ್ಟು ಈ ಕುರಿತು ಯೋಚಿಸಿ.

೩. ಮೇನುವಿನಲ್ಲಿ RUN ಎಂದಿದೆ. ನನ್ನೊಬ್ಬ ಗೆಳೆಯ ಕಂಪ್ಯೂಟರ್ ನಲ್ಲಿ ಈ RUN ಶಬ್ದವನ್ನು ನೋಡಿ ಅಮೃತಸರದವರೆಗೂ ಓಡಿದ. ದಯವಿಟ್ಟು RUN ಬದಲು SIT ಎಂದು ಇರಲಿ.

೪. ನಿಮ್ಮ ಈ ಕಂಪ್ಯೂಟರ್ ನಲ್ಲಿ 'Re-cycle' ಎಂದಿದೆ ಅದರ ಬದಲು 'Re-scooter' ಎಂದಿದ್ದರೆ ಚೆನ್ನಾಗಿರುತ್ತಿತ್ತು. ಏಕೆಂದರೆ ನನ್ನ ಮನೆಯಲ್ಲಿ scooter ಇದೆ.

೫. ಕಂಪ್ಯೂಟರ್ ನಲ್ಲಿ 'Find' ಎನ್ನುವ ಪದವಿದೆ ಆದರೆ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮೊನ್ನೆ ನನ್ನ ಹೆಂಡತಿ ಮನೆಯ ಬೀಗದ ಕೈ ಕಳೆದುಕೊಂಡಾಗ ನಾವು ಈ Find ನಿಂದ ಎಷ್ಟು ಹುಡುಕಿದರೂ ಸಿಗಲಿಲ್ಲ. ದಯವಿಟ್ಟು ಇದನ್ನು ತುರ್ತಾಗಿ ಪರಿಶೀಲಿಸಿ.

೬. ಈ ಕಂಪ್ಯೂಟರ್ ಜೊತೆಗಿರುವ mouse ನ್ನು ಬೆಕ್ಕಿನಿಂದ ಕಾಯಲು ನಾನು ರಾತ್ರಿಯೆಲ್ಲ ನಿದ್ದೆ ಇಲ್ಲದೆ ಕಳೆಯಬೇಕಾಗಿದೆ. ಆದ್ದರಿಂದ ಬೆಕ್ಕನ್ನು ಹೊಡೆದೊಡಿಸಲು ಕಂಪ್ಯೂಟರ್ ಜೊತೆಗೆ ನೀವು ನಾಯಿಯೊಂದನ್ನು ಕೊಟ್ಟರೆ ಒಳ್ಳೆಯದು.

೭. ನನ್ನ ಮಗ Microsoft word ಕಲಿತಿರುವನು ಈಗ ಅವನು Microsoft sentence ಕಲಿಯಲು ಬಯಸುತ್ತಿರುವನು. Microsoft sentence ನ್ನು ನೀವು ಯಾವಾಗ ಕೊಡುತ್ತಿರಿ.

ಧನ್ಯವಾದಗಳು

ಬಂತಾ ಸಿಂಗ್

---೦೦೦---

        ಸಂತಾ ಸತ್ತು ಸ್ವರ್ಗದತ್ತ ಪ್ರಯಾಣ ಬೆಳೆಸಿದ. ಸ್ವರ್ಗದ ಬಾಗಿಲಲ್ಲೇ ಅವನನ್ನು ಒಳಗೆ ಪ್ರವೇಶಿಸದಂತೆ ತಡೆಯಲಾಯಿತು. ಬಾಗಿಲ ಬಳಿಯಲ್ಲೇ ಕುಳಿತಿದ್ದ ಚಿತ್ರಗುಪ್ತ ಹೇಳಿದ 'ಈಗ ಸ್ವರ್ಗ ಪ್ರವೇಶಕ್ಕೆ ಕೆಲವೊಂದು ನಿಯಮಗಳನ್ನು ಮಾಡಲಾಗಿದೆ. ನಾನು ನಿನಗೆ ಎರಡು ಪ್ರಶ್ನೆಗಳನ್ನು ಕೇಳುತ್ತೇನೆ ಅವುಗಳಿಗೆ ಸರಿಯಾದ ಉತ್ತರ ನೀಡಿ ನೀನು ಸ್ವರ್ಗವನ್ನು ಪ್ರವೇಶಿಸಬಹುದು'. 

ಪ್ರಶ್ನೆ ಒಂದು:- 'ವಾರದಲ್ಲಿ T ಅಕ್ಷರದಿಂದ ಆರಂಭವಾಗುವ ದಿನಗಳಾವವು?'

ಪ್ರಶ್ನೆ ಎರಡು:- 'ಒಂದು ವರ್ಷದಲ್ಲಿ ಎಷ್ಟು ಸೆಕೆಂಡ್ ಗಳು ಇರುತ್ತವೆ?'

          ಸಂತಾ ಒಂದು ಕ್ಷಣ ಯೋಚಿಸಿ ಉತ್ತರಿಸಿದ 'ವಾರದಲ್ಲಿ T ಅಕ್ಷರದಿಂದ ಆರಂಭವಾಗುವ ದಿನಗಳು ಎರಡು ಅವು Today ಮತ್ತು Tomorrow. ಇನ್ನು ಎರಡನೇ ಪ್ರಶ್ನೆಗೆ ಉತ್ತರ ವರ್ಷದಲ್ಲಿ ೧೨ ಸೆಕೆಂಡ್ ಗಳಿರುತ್ತವೆ' 

ಚಿತ್ರಗುಪ್ತ: 'ಮೊದಲನೇ ಪ್ರಶ್ನೆಗೆ  ಉತ್ತರ ನಾನು ನಿರೀಕ್ಷೆ ಮಾಡಿದ್ದು ಅಲ್ಲವಾದರೂ ಎರಡು ಎಂದಿದ್ದರಿಂದ ಒಪ್ಪಿಕೊಳ್ಳುತ್ತೇನೆ ಆದರೆ ವರ್ಷದಲ್ಲಿ ೧೨ ಸೆಕೆಂಡ್ ಗಳು ಎನ್ನುವ ಉತ್ತರ ಅದು ಹೇಗೆ ಸರಿ?'

ಸಂತಾ: 'ಜನೆವರಿ ಸೆಕೆಂಡ್, ಫೆಬ್ರುವರಿ ಸೆಕೆಂಡ್, ಮಾರ್ಚ್ ಸೆಕೆಂಡ್, ಎಪ್ರಿಲ್ ಸೆಕೆಂಡ್ .......... '

ಚಿತ್ರಗುಪ್ತ  ಮಧ್ಯದಲ್ಲೆ ತಡೆದು ಸಂತಾ ಸ್ವರ್ಗ ಪ್ರವೇಶಿಸಲು ದಾರಿಮಾಡಿ ಕೊಟ್ಟ. 

---೦೦೦---

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 



Monday, March 3, 2014

ಶಿಕ್ಷಣದ ಸಮಸ್ಯೆಗಳೊಂದಿಗೆ ಒಂದು ಅನುಸಂಧಾನ

     


         ಶಿಕ್ಷಣ ಕ್ಷೇತ್ರ ವ್ಯಾಪಕವಾಗಿ ಚರ್ಚೆಗೆ ಮತ್ತು ಪ್ರಯೋಗಕ್ಕೆ  ಒಳಪಡುವ ಕ್ಷೇತ್ರ. ಪತ್ರಿಕೆ, ಪುಸ್ತಕ, ಅಲ್ಲಲ್ಲಿ ನಡೆಸುವ ಸೆಮಿನಾರ್ ಮತ್ತು ಸಮ್ಮೇಳನಗಳ ಮೂಲಕ ಶಿಕ್ಷಣ ಚರ್ಚೆಗೆ ಗ್ರಾಸವಾಗುತ್ತಿದೆ. ಜೊತೆಗೆ ಕಲಿಯುವ ಮಕ್ಕಳಿಗೆ ಶಿಕ್ಷಣ ಹೊರೆಯಾಗದಿರಲಿ ಎನ್ನುವ ಪ್ರಯೋಗಗಳು ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ  ನಡೆದುಕೊಂಡು ಬರುತ್ತಿವೆ. ಪ್ರತಿಯೊಂದು ಚರ್ಚೆ, ಸಂವಾದ ಮತ್ತು ಪ್ರಯೋಗಗಳ  ಗುರಿಯೊಂದೆ ಅದು ಎಲ್ಲರಿಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕೆನ್ನುವುದಾಗಿದೆ. ಭಾರತದ ಸ್ವಾತಂತ್ರ್ಯಾ ನಂತರದ ದಿನಗಳಿಂದಲೂ ಗುಣಾತ್ಮಕ ಶಿಕ್ಷಣಕ್ಕಾಗಿ ಮತ್ತು ಸಮಾಜದ ಯಾವ ಮಗುವೂ ಶಿಕ್ಷಣದಿಂದ ವಂಚಿತನಾಗಬಾರದೆನ್ನುವ ಕಾರಣಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡಲಾಗಿದೆ. ಅದು ಕಡ್ಡಾಯ ಶಿಕ್ಷಣವಾಗಿರಬಹುದು ಇಲ್ಲವೇ ಶಿಕ್ಷಣದ ಹಕ್ಕು ಕಾಯ್ದೆಯಾಗಿರಬಹುದು. ಹೀಗೆ ಶಿಕ್ಷಣವನ್ನು ಗುಣಾತ್ಮಕವಾಗಿಸುವ ಪ್ರಯತ್ನವನ್ನು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಕಾಲಕಾಲಕ್ಕೆ ಬಂದ ಸರ್ಕಾರಗಳು ಮಾಡಿರುವುದಕ್ಕೆ ಅನೇಕ ಉದಾಹರಣೆಗಳಿವೆ. ಹೀಗಿದ್ದೂ ಶಿಕ್ಷಣ ಕ್ಷೇತ್ರ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಅಂಥ ಕೆಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವೇ ಈ ಲೇಖನದ ಉದ್ದೇಶ.

ಒತ್ತಡದ ಪರಿಸರದಲ್ಲಿ ಶಿಕ್ಷಕರು 


           ಸಾಮಾನ್ಯವಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಈ ಮಾತು ಅನ್ವಯವಾಗುತ್ತದೆ.
ನಮಗೆಲ್ಲ ನೆನಪಿರುವಂತೆ ಕೆಲವು ದಿನಗಳ ಹಿಂದೆ ಬಿಹಾರ ರಾಜ್ಯದ ಗ್ರಾಮವೊಂದರ ಶಾಲೆಯಲ್ಲಿ ಮದ್ಯಾಹ್ನದ ಬಿಸಿಯೂಟವನ್ನು ಸೇವಿಸಿದ ಮಕ್ಕಳಲ್ಲಿ ಕೆಲವು ಮಕ್ಕಳು ಅಸುನೀಗಿದವು. ನಿಜಕ್ಕೂ ಅದೊಂದು ಬಹುದೊಡ್ಡ ದುರಂತ. ಅಂಥದ್ದೊಂದು ದುರಂತ ಸಂಭವಿಸಿದಾಗ ಅಲ್ಲಿ ಜನರಾಗಲಿ ಇಲ್ಲವೇ ಮಾಧ್ಯಮದವರಾಗಲಿ ಆರೋಪಿಗಳೆಂದು ಗುರುತಿಸಿದ್ದು ಆ ಶಾಲೆಯಲ್ಲಿ ಕೆಲಸ ಮಾಡುತ್ತಿರುವ  ಶಿಕ್ಷಕರನ್ನು. ಇನ್ನೊಂದು ಘಟನೆ ಹೀಗಿದೆ ಪತ್ರಿಕೆಯೊಂದು ಮಕ್ಕಳು ಶಾಲೆಯಲ್ಲಿ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿದ್ದ ಚಿತ್ರವನ್ನು ಪ್ರಕಟಿಸಿ ಆ ಕೃತ್ಯಕ್ಕೆ  ಶಿಕ್ಷಕರನ್ನೇ ಹೊಣೆಗಾರರೆಂಬಂತೆ ವರದಿ ಮಾಡಿತ್ತು. ಈಗ ಕೆಲವು ದಿನಗಳಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹಾಲು ಕೊಡುವ ಮತ್ತು ಪೌಷ್ಥಿಕ ಮಾತ್ರೆಗಳನ್ನು ವಿತರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಕಾರ್ಯಗಳ ಜವಾಬ್ದಾರಿಯನ್ನೂ ಆಯಾ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರ ಹೆಗಲಿಗೇರಿಸಲಾಗಿದೆ.  ಹಾಗಾದರೆ ಶಾಲೆಯಲ್ಲಿ ಶಿಕ್ಷಕರು ಏನು ಕೆಲಸ ಮಾಡಬೇಕು? ಎನ್ನುವ ಪ್ರಶ್ನೆ ಎದುರಾಗುತ್ತದೆ. ಮಕ್ಕಳ ಮದ್ಯಾಹ್ನದ ಬಿಸಿಯೂಟದ ತಯ್ಯಾರಿ, ಹಾಲು ಕಾಯಿಸುವುದು, ಶೌಚಾಲಯ ಸ್ವಚ್ಛಗೊಳಿಸುವುದು, ಪೌಷ್ಥಿಕ ಮಾತ್ರೆಗಳನ್ನು ನುಂಗಿಸುವುದು ಈ ಕೆಲಸಗಳಲ್ಲಿ ಶಿಕ್ಷಕರು ತಮ್ಮನ್ನು ತೊಡಗಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಈ ಕೆಲಸಗಳೊಂದಿಗೆ ಜನಗಣತಿ, ಪಶು ಪಕ್ಷಿಗಳ ಗಣತಿ, ಚುನಾವಣಾ ಕೆಲಸ ಈ ಎಲ್ಲ ಕೆಲಸ ಕಾರ್ಯಗಳಿಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರೇ ಬೇಕು. ಈ ನಡುವೆ ಮಧ್ಯದಲ್ಲೇ ಶಾಲೆ ಬಿಟ್ಟ ಮಕ್ಕಳ ಅಂಕಿ ಸಂಖ್ಯೆಯನ್ನು ಒದಗಿಸುವಂತೆ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ಮೇಲೆ ಒತ್ತಡ ತಂದಿದೆ.  ಜೊತೆಗೆ ಪ್ರತಿಯೊಂದು ಸರ್ಕಾರಿ ಪ್ರಾಥಮಿಕ ಶಾಲೆಯ ಆಡಳಿತಕ್ಕೆ ಸಂಬಂಧಿಸಿದಂತೆ ಶಾಲಾ ಸುಧಾರಣಾ ಸಮಿತಿ ಎನ್ನುವ ಅವೈಜ್ಞಾನಿಕ ಸಮಿತಿಯನ್ನು ಸರ್ಕಾರ ರಚಿಸಿದೆ. ಆ ಸಮಿತಿಯವರು ಶಿಕ್ಷಕರಿಗೆ ನೀಡುತ್ತಿರುವ ಕಿರುಕುಳದ ಕುರಿತು ಅನೇಕ ಸಂದರ್ಭಗಳಲ್ಲಿ ಪತ್ರಿಕೆಗಳು ವರದಿ ಪ್ರಕಟಿಸಿವೆ. ಇಂಥ ಒತ್ತಡದ ವಾತಾವರಣದಲ್ಲಿ ಶಿಕ್ಷಕರು ಬೋಧನಾ ಕೆಲಸದಲ್ಲಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದಾದರೂ ಹೇಗೆ ಸಾಧ್ಯ. ಇದರ ನೇರ ಪರಿಣಾಮ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಕಲಿಕೆಯ ಮೇಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿನ ಗುಣಾತ್ಮಕ ಶಿಕ್ಷಣದ ಕೊರತೆಗೆ ಇದು ನೇರವಾಗಿ ಕಾರಣವಾಗುತ್ತಿದೆ.

ಉನ್ನತ ಶಿಕ್ಷಣದಲ್ಲಿ ಸಂಶೋಧನೆ 


          ಅಧ್ಯಯನವೇ ಅಧ್ಯಾಪನದ ಜೀವಾಳ. ನಿರಂತರ ಅಧ್ಯಯನದಲ್ಲಿ ತನ್ನನ್ನು ತೊಡಗಿಸಿಕೊಂಡ ಅಧ್ಯಾಪಕ ಮಾತ್ರ ಒಬ್ಬ ಶ್ರೇಷ್ಠ ಅಧ್ಯಾಪಕನಾಗಲು ಸಾಧ್ಯ. ಇಲ್ಲಿ ನಾನು ಹೇಳುತ್ತಿರುವುದು ಉನ್ನತ ಶಿಕ್ಷಣದಲ್ಲಿ ಪಾಠ ಮಾಡುತ್ತಿರುವ ಅಧ್ಯಾಪಕರ ಕುರಿತಾಗಿರುವುದರಿಂದ ಅವರಿಗೆ ಬಿಸಿಯೂಟ, ಬಿಸಿ ಹಾಲು ತಯ್ಯಾರಿಸುವ ಇಲ್ಲವೇ ಶೌಚಾಲಯ ಸ್ವಚ್ಛಗೊಳಿಸುವ ಸಮಸ್ಯೆ ಇಲ್ಲ ಎನ್ನುವ ನಂಬಿಕೆ ನನ್ನದು. ವಿಷಯಾಂತರಕ್ಕೆ ಕ್ಷಮಿಸಿ. ಉನ್ನತ ಶಿಕ್ಷಣದಲ್ಲಿ ಪಾಠ ಮಾಡುತ್ತಿರುವ ಶಿಕ್ಷಕನ ಅಧ್ಯಯನದ ವ್ಯಾಪ್ತಿ ಕೇವಲ ತಾನು ಬೋಧಿಸುತ್ತಿರುವ  ವಿಷಯಕ್ಕೆ ಮಾತ್ರ ಸೀಮಿತವಾಗಿರದೆ ಪಠ್ಯಕ್ರಮದಾಚೆಯೂ ಅದು ವಿಸ್ತರಿಸಬೇಕು. ಹೀಗಾದಾಗ ಮಾತ್ರ ವಿದ್ಯಾರ್ಥಿಗಣವನ್ನು ಸಮಾಜದ ಸಮಸ್ಯೆಗಳಿಗೆ ಮುಖಾಮುಖಿಯಾಗಿ ನಿಲ್ಲಿಸಲು ಸಾಧ್ಯವಾಗುವುದು. ಇಲ್ಲೊಂದು ಕ್ಲಾಸಿಕ್ ಉದಾಹರಣೆ ಕೊಡಬಯುಸುತ್ತೇನೆ ನಾನು ಈ ಲೇಖನ ಬರೆಯುವ ಪೂರ್ವದಲ್ಲಿ ಭೈರಪ್ಪನವರ ಆತ್ಮಕಥೆ  ' ಭಿತ್ತಿ'   ಯನ್ನು ಓದಿದೆ. ಅವರ ವೃತ್ತಿ ಬದುಕಿನಲ್ಲಿ ಸನ್ನಿವೇಶವೊಂದು ಎದುರಾಗುತ್ತದೆ ಅದು ಭೈರಪ್ಪನವರ  ಬಡ್ತಿಗೆ ಸಂಬಂಧಿಸಿದ ಸಂಗತಿ. ರೀಡರ್ ಹುದ್ದೆಯಲ್ಲಿದ್ದ ಭೈರಪ್ಪನವರಿಗೆ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಹೊಂದುವ ಅವಕಾಶ ಹುಡುಕಿಕೊಂಡು ಬರುತ್ತದೆ. ಆದರೆ ಅವರು ಆ ಅವಕಾಶವನ್ನು ನಿರಾಕರಿಸುತ್ತಾರೆ. ಹೀಗೆ ನಿರಾಕರಿಸಲು ಅವರು ಕೊಡುವ ಕಾರಣ ಪ್ರಾಧ್ಯಾಪಕ ಹುದ್ದೆಯನ್ನು ಒಪ್ಪಿಕೊಂಡಲ್ಲಿ ವಿಭಾಗದ ಮುಖ್ಯಸ್ಥ ನಾಗಬೇಕಾಗುತ್ತದೆ. ಅದು ಆಡಳಿತಾತ್ಮಕ ಹುದ್ದೆಯಾಗುವುದರಿಂದ ತಮ್ಮ ಅಧ್ಯಯನ ಮತ್ತು ಬರವಣಿಗೆಗೆ ಆಗುವ ತೊಂದರೆಯೇ ಹೆಚ್ಚೆಂದು ಅವರು ಬಡ್ತಿಯನ್ನೇ ನಿರಾಕರಿಸುತ್ತಾರೆ. ಇದು ಅಧ್ಯಯನ ಮತ್ತು ಬರವಣಿಗೆಯ ಬಗ್ಗೆ ಅವರಿಗಿದ್ದ ನಿಷ್ಥೆ ಮತ್ತು ಕಾಳಜಿಯನ್ನು ತೋರಿಸುತ್ತದೆ. ಇಂಥದ್ದೊಂದು ಮನೋಭಾವ ಇವತ್ತಿನ ಅಧ್ಯಾಪಕರಲ್ಲಿ ಇರಲು ಸಾಧ್ಯವೇ?

       ಇವತ್ತು  ವಿಶ್ವವಿದ್ಯಾಲಯಗಳಲ್ಲಿನ ಮತ್ತು ಕಾಲೇಜುಗಳಲ್ಲಿನ ಅದೆಷ್ಟೋ  ಅದ್ಯಾಪಕರುಗಳು ಶಿಫಾರಸುಗಳ ಮೂಲಕಆಡಳಿತಾತ್ಮಕ  ಹುದ್ದೆಗಳನ್ನು ಪಡೆಯಲು ಪ್ರಯತ್ನಿಸುತ್ತಿರುವರು. ಇವತ್ತಿಗೂ ಎಷ್ಟೋ ವರ್ಷಗಳ ಹಿಂದೆ ಮಾಡಿಟ್ಟ ಟಿಪ್ಪಣಿಯನ್ನೇ ಹಿಡಿದುಕೊಂಡು ಪಾಠ ಮಾಡುವ ಅಧ್ಯಾಪಕರನ್ನು ನಾವು ವಿಶ್ವವಿದ್ಯಾಲಯಗಳಲ್ಲಿ   ಕಾಣುತ್ತಿದ್ದೇವೆ. ಸಿಂಡಿಕೇಟ್ ಸೆನೆಟ್ ಗಳ ಚುನಾವಣೆ ಅಕಾಡೆಮಿಗಳ ಅಧಿಕಾರ ಈ ಚಟುವಟಿಕೆಗಳಲ್ಲೇ ಅಧ್ಯಾಪಕರ ಹೆಚ್ಚಿನ ಸಮಯ ವಿನಿಯೋಗವಾಗುತ್ತಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಕಠಿಣ ನಿಯಮಗಳನ್ನು    ಜಾರಿಗೆ  ತಂದಿರುವುದರಿಂದ ಬಡ್ತಿಗಾಗಿ ಅಧ್ಯಾಪಕರು ಸಂಶೋಧನಾ ಲೇಖನಗಳನ್ನು ಬರೆಯುತ್ತಿರುವರು. ನಿಗದಿಪಡಿಸಿದ ಸಂಖ್ಯೆಯಲ್ಲಿ ಲೇಖನಗಳನ್ನು ಬರೆದು ಬಡ್ತಿ ಹೊಂದಿದ ನಂತರ ಹೆಚ್ಚಿನ ಅಧ್ಯಾಪಕರ ಸಂಶೋಧನಾ  ಕೆಲಸ ಸ್ಥಗಿತಗೊಳ್ಳುತ್ತಿದೆ. ಅಧ್ಯಯನ, ಅಧ್ಯಾಪನ, ಬರವಣಿಗೆ, ಸಂಶೋಧನೆ ಇವುಗಳ ಮೂಲಕ ಗುರುತಿಸಿಕೊಳ್ಳುವುದಕ್ಕಿಂತ ಬೇರೆ ಅಧ್ಯಯನೇತರ ಚಟುವಟಿಕೆಗಳಿಂದ ಗುರುತಿಸಿಕೊಳ್ಳಲು ಅಧ್ಯಾಪಕರು ಬಯಸುತ್ತಿರುವುದು ಸಧ್ಯದ ಮಟ್ಟಿಗೆ ಉನ್ನತ ಶಿಕ್ಷಣದ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

            ಜೊತೆಗೆ ಅಧ್ಯಾಪಕರು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮತ್ತು ಶೋಧಿಸುವ ಮನೋಭಾವವನ್ನೇ ಬೆಳೆಸುತ್ತಿಲ್ಲ. ಪ್ರಶ್ನಿಸುವಿಕೆ ಮತ್ತು ಸಂಘರ್ಷದಿಂದ ಮಾತ್ರ ಹೊಸದನ್ನು ಸೃಷ್ಟಿಸಲು ಸಾಧ್ಯ. ಸಂಘರ್ಷವೆಂದರೆ ಅದು ವೈಚಾರಿಕ ಘರ್ಷಣೆ. ಗುರು  ಶಿಷ್ಯರ ನಡುವೆ ಒಂದು     ವೈಚಾರಿಕ ಸಂಘರ್ಷಕ್ಕೆ ಅವಕಾಶ ಇಲ್ಲದೆ ಹೋದಲ್ಲಿ ವಿದ್ಯಾರ್ಥಿ ಗಣ ನಿಂತ ನೀರಾಗಿ ಕೊಳೆಯುವ ಅಪಾಯ ಎದುರಾಗಬಹುದು. ದಯವಿಟ್ಟು ಕೊಳೆಯುವಿಕೆಯನ್ನು ಮಾಗುವಿಕೆ ಎಂದು ತಪ್ಪಾಗಿ ಅರ್ಥೈಸುವುದು ಬೇಡ. ನಿಂತ ನೀರಿನ ಮನಸ್ಥಿತಿಗೆ ಒಂದು ಉದಾಹರಣೆ ಹೀಗಿದೆ ಸಮ್ಮೇಳನವೊಂದರಲ್ಲಿ ಭೇಟಿಯಾದ ಕನ್ನಡದಲ್ಲಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಯನ್ನು ದೇವನೂರರ ಇತ್ತೀಚಿನ ಯಾವ ಪುಸ್ತಕವನ್ನು ಓದಿರುವಿರಿ ಎಂದು ಕೇಳಿದಾಗ ಅವನಿಗೆ 'ಎದೆಗೆ ಬಿದ್ದ ಅಕ್ಷರ' ಕುರಿತು ಗೊತ್ತೇ ಇರಲಿಲ್ಲ. ಇದು ಇವತ್ತು ಉನ್ನತ ಶಿಕ್ಷಣದಲ್ಲಿನ ಸಂಶೋಧನೆಯಲ್ಲಿ ನಾವು ಕಾಣುತ್ತಿರುವ ಬಹುದೊಡ್ಡ ಕೊರತೆ. ನಿಜಕ್ಕೂ ಚಿಂತಿಸುವ ಸಂಗತಿ ಇದು. ಏಕೆ ಹೀಗಾಗಿದೆ ಎಂದರೆ ಇದು ಆತನಲ್ಲಿರುವ ಪ್ರಶ್ನಿಸುವಿಕೆ ಮತ್ತು ಶೋಧಿಸುವಿಕೆಯ ಕೊರತೆಯನ್ನು ತೋರಿಸುತ್ತದೆ. ಪರಿಣಾಮವಾಗಿ ತಾನೂ ಬೆಳೆದು ವಿದ್ಯಾರ್ಥಿಗಳನ್ನೂ ಬೆಳೆಸುವ ದ್ವಿಮುಖ ಬೆಳವಣಿಗೆಯನ್ನು ಇವತ್ತು ಉನ್ನತ ಶಿಕ್ಷಣದಲ್ಲಿ ನಾವು ಕಾಣಲು ಸಾಧ್ಯವಾಗುತ್ತಿಲ್ಲ.

ಮಕ್ಕಳ ಶಿಕ್ಷಣದಲ್ಲಿ ತಾರತಮ್ಯ 


          ಮಕ್ಕಳ ಶಿಕ್ಷಣದಲ್ಲಿ ತಾರತಮ್ಯವಾಗುತ್ತಿದೆ ಎಂದಾಗ ನನಗೆ ಥಟ್ಟನೆ ನೆನಪಾಗುವುದು ನನ್ನೂರಿನ ನನ್ನ ಬಾಲ್ಯದ ಗೆಳೆಯ ಹೇಳಿದ ಒಂದು ಸಂಗತಿ. ಕೆಲವು ದಿನಗಳ ಹಿಂದೆ ಆತ ಹೀಗೆ ಆಕಸ್ಮಿಕವಾಗಿ ಭೇಟಿಯಾಗಿದ್ದ. ಬಹಳ ದಿನಗಳ ನಂತರದ ಭೇಟಿಯಾಗಿದ್ದರಿಂದ ಒಂದಿಷ್ಟು ಸಮಯ ಮಾಡಿಕೊಂಡು ಹರಟಿದೆವು. ಮಾತಿನ ನಡುವೆ ಅವನೊಂದು ವಿಷಯ ಹೇಳಿದ. ಅವನು ಹೇಳಿದ ಸಂಗತಿ ಆ ಕ್ಷಣಕ್ಕೆ ಮತ್ತು ಅನಂತರದ ಅನೇಕ ದಿನಗಳವರೆಗೆ ನನ್ನನ್ನು ಕಾಡಿದ್ದು ನಿಜ. ನನ್ನೂರಿಗೆ ಒಂದೆರಡು ಮೈಲಿ ದೂರದಲ್ಲಿ ಇಂಗ್ಲಿಶ್ ಮಾಧ್ಯಮದ ಶಾಲೆಯೊಂದು ತಲೆ ಎತ್ತಿದೆಯಂತೆ. ಅವನು ಹೇಳಿದಂತೆ ಆ ಶಾಲೆಯಲ್ಲಿ ಪ್ರತಿಷ್ಟಿತರ ಮಕ್ಕಳಿಗಾಗಿ ಒಂದು ವಿಭಾಗ ಮತ್ತು ಸಾಮಾನ್ಯ ಕುಟುಂಬಗಳಲ್ಲಿನ ಮಕ್ಕಳಿಗಾಗಿ ಮತ್ತೊಂದು ವಿಭಾಗ ಹೀಗೆ ಪ್ರತ್ಯೇಕ ವಿಭಾಗಗಳಿವೆ. ಶಿಕ್ಷಕರೂ ಸಹ ಪ್ರತಿಷ್ಟಿತರ ಮಕ್ಕಳಿರುವ ತರಗತಿಗಳಲ್ಲಿ ಪರಿಣಾಮಕಾರಿಯಾಗಿ ಪಾಠ ಮಾಡುತ್ತಿದ್ದರೆ  ಸಾಮಾನ್ಯರ ಮಕ್ಕಳಿರುವ ತರಗತಿಗಳಲ್ಲಿ ಅವರ ಬೋಧನಾ ಗುಣಮಟ್ಟ ನಿರೀಕ್ಷಿತ ಮಟ್ಟದಲ್ಲಿಲ್ಲವಂತೆ. ಹಾಗೆಂದು ಶಾಲಾ ಶುಲ್ಕದಲ್ಲಿ ಯಾವುದೇ ರಿಯಾಯಿತಿ ಅಲ್ಲಿಲ್ಲ. ಎಲ್ಲ ಮಕ್ಕಳಿಗೂ ಒಂದೇ ಶುಲ್ಕ ಇದ್ದಾಗೂ ಕೂಡ ಹೀಗೆ ಪ್ರತ್ಯೇಕಿಸಲ್ಪಟ್ಟಿರುವುದು ಸಹಜವಾಗಿಯೇ ಸಾಮಾನ್ಯ ಕುಟುಂಬಗಳಲ್ಲಿನ ಮಕ್ಕಳ ಕಲಿಕೆಯ ಗುಣಮಟ್ಟದ ಕುಸಿತಕ್ಕೆ ಕಾರಣವಾಗುತ್ತಿದೆ. ಪೂರ್ಣ ಶುಲ್ಕವನ್ನು ಭರಿಸಿಯೂ ಸಾಮಾನ್ಯ ಕುಟುಂಬಗಳಲ್ಲಿನ ಮಕ್ಕಳು ಇಂಥದ್ದೊಂದು ತಾರತಮ್ಯಕ್ಕೆ ಒಳಗಾಗುತ್ತಿರಬೇಕಾದರೆ ಶಿಕ್ಷಣ ಹಕ್ಕು ಕಾಯ್ದೆಯಡಿ ವಿನಾಯಿತಿ ಶುಲ್ಕವನ್ನು ಭರಿಸಿ ಪ್ರವೇಶ ಪಡೆದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿನ ಮಕ್ಕಳು ಇನ್ನು ಅದೆಂಥ ಸಮಸ್ಯೆಗಳನ್ನು ಎದುರಿಸುತ್ತಿರಬಹುದು?.

             ಇದು ತಾರತಮ್ಯದ ಒಂದು ಮುಖವಾದರೆ ಇನ್ನೊಂದು ಅದು ಮಕ್ಕಳ ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದ್ದು. ಇವತ್ತು ಸಹಜವಾಗಿಯೇ ಹೆಚ್ಚಿನ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಇಂಗ್ಲಿಷ್ ಶಾಲೆಗಳತ್ತ ವಲಸೆ ಹೋಗುತ್ತಿರುವರು. ಇಂಗ್ಲಿಷ್ ಬದುಕಿನ ಭಾಷೆಯಾಗಿ ಮಹತ್ವ ಪಡೆಯುತ್ತಿರುವುದರಿಂದ ಅವರ ವಲಸೆಯನ್ನು ನಾವು ತಪ್ಪು ಎಂದು ಹೇಳುವಂತಿಲ್ಲ ಜೊತೆಗೆ ಶಿಕ್ಷಣ ಅದು ಎಲ್ಲರ ಹಕ್ಕಾಗಿರುವುದರಿಂದ ಮಾಧ್ಯಮದ ಆಯ್ಕೆ ಪಾಲಕರ ಮತ್ತು ವಿದ್ಯಾರ್ಥಿಗಳ ಇಷ್ಟಕ್ಕೆ ಬಿಟ್ಟ ವಿಷಯ. ಆದರೆ ಇಲ್ಲಿರುವ ಮುಖ್ಯ ಸಮಸ್ಯೆಎಂದರೆ ಅದು ಇಂಗ್ಲಿಷ್ ಶಾಲೆಗಳ ಅಂಕಿ ಸಂಖ್ಯೆಗೆ ಸಂಬಂಧಿಸಿದ್ದು. ನಗರ ಪ್ರದೇಶಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಕನ್ನಡ ಶಾಲೆಗಳಿಗಿಂತ ಅಧಿಕವಾಗಿವೆ ಮತ್ತು ಅಲ್ಲಿ ಗುಣಾತ್ಮಕ ಶಿಕ್ಷಣ ನಮ್ಮ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ದೊರೆಯುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಅದು ವ್ಯವಸಾಯವನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳಲ್ಲಿನ ಮಕ್ಕಳಿಗೆ ಇಂಗ್ಲಿಷ್ ಶಾಲೆಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತಿದೆಯೇ? ಏಕೆಂದರೆ  ಹಳ್ಳಿಗಳಲ್ಲಿ ಕೇವಲ ಸರ್ಕಾರದ ಕನ್ನಡ ಶಾಲೆಗಳು ಮಾತ್ರ ಇರುವುದರಿಂದ ಹಾಗೂ ಆ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯಾಗಿ ಮಾತ್ರ ಕಳಿಸುತ್ತಿರುವುದರಿಂದ (ಅದು ಐದನೇ ತರಗತಿಯಿಂದ) ನಮ್ಮ ಹಳ್ಳಿಯ ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿ ಪ್ರಭುತ್ವವನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಇಂಥದ್ದೊಂದು ಪರಿಸರದಲ್ಲಿ ಕಲಿತು ಬರುತ್ತಿರುವ ಮಕ್ಕಳು ನಗರ ಪ್ರದೇಶಗಳಲ್ಲಿನ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಮಕ್ಕಳು ಒಡ್ಡುತ್ತಿರುವ ಪ್ರಬಲ ಸ್ಪರ್ಧೆಯಲ್ಲಿ ಸಹಜವಾಗಿಯೇ ಹಿಂದೆ ಉಳಿಯುತ್ತಿರುವರು. ಪರಿಣಾಮವಾಗಿ ಶಿಕ್ಷಣ ಬದುಕನ್ನು ರೂಪಿಸುತ್ತಿಲ್ಲ ಎನ್ನುವ ಭಾವನೆ ಗ್ರಾಮೀಣ ಪ್ರದೇಶಗಳ ಜನರಲ್ಲಿ ಬಲವಾಗುತ್ತಿದೆ. ಈ ಒಂದು ಸಮಸ್ಯೆಯ ನಡುವೆಯೂ ಸರ್ಕಾರವೇ ಮುಂದಾಗಿ ಇಂಗ್ಲಿಷ್ ಶಾಲೆಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಿದಾಗ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೂ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಲಭ್ಯವಾಗಿ ಮುಂದೊಂದು ದಿನ ಈ ಯೋಜನೆ ಹಳ್ಳಿಗಳಿಗೂ ವಿಸ್ತರಿಸಿ ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳ ಬದುಕನ್ನು ಶಿಕ್ಷಣ ಕಟ್ಟಿಕೊಡಬಹುದೆನ್ನುವ ಆಶಯ ಎಲ್ಲರದಾಗಿತ್ತು. ಆದರೆ ಈ ಯೋಜನೆ ಅನೇಕ ವರ್ಷಗಳು ಕಳೆದರೂ ಕಾರ್ಯ ರೂಪಕ್ಕೆ ಬರದಿರುವುದು ಸರ್ಕಾರದ ಅಸಹಾಯಕತೆಗೆ ಹಿಡಿದ ಕೈಗನ್ನಡಿಯಾಗಿದೆ. ಆದ್ದರಿಂದ ನನ್ನೂರಿನ ತಿಮ್ಮ,  ರುಕ್ಮ್ಯಾ ನಂಥ ಮಕ್ಕಳು ಇಂಗ್ಲಿಷ್ ಶಾಲೆಗಳಿಲ್ಲದ ಪರಿಣಾಮ  ಅವರು  ಮನೆಯ ಹಿರಿಕರೊಂದಿಗೆ ಹೊಲಗಳಲ್ಲಿಯೋ ಇಲ್ಲವೇ ಸರ್ಕಾರದ ಕಾಳಿಗಾಗಿ ಕೂಲಿ ಯೋಜನೆಯಡಿಯಲ್ಲೋ  ದುಡಿಯುತ್ತಿರುವರು.

ಕೊನೆಯ ಮಾತು 


           ಶಿಕ್ಷಣ ಬದುಕನ್ನು ರೂಪಿಸುವ ಮಹತ್ವದ ಕಲಿಕೆಯಾಗಬೇಕು. ಸಧ್ಯದ ಪರಿಸ್ಥಿತಿಯಲ್ಲಿ ನಮ್ಮ ಮಕ್ಕಳು ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿರುವುದರಿಂದ ಅವರನ್ನು ಸ್ಪರ್ಧೆಗೆ ಅಣಿಗೊಳಿಸುವ ಶಿಕ್ಷಣದ ಅಗತ್ಯವಿದೆ. ಜೊತೆಗೆ ಇಂದಿನ ಶಿಕ್ಷಕರು   ನಿರಂತರ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದು ಗುಣಾತ್ಮಕ ಶಿಕ್ಷಣದ ಅಗತ್ಯಗಳಲ್ಲೊಂದಾಗಿದೆ. ಈ ಸಂದರ್ಭ ನಾವೆಲ್ಲಾ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯೊಂದಿದೆ ಅದು ಶಿಕ್ಷಣದ ಮಾಧ್ಯಮಕ್ಕೆ ಸಂಬಂಧಿಸಿದ್ದು. ಕನ್ನಡವನ್ನು ಹೃದಯದ ಭಾಷೆಯಾಗಿಸಿಕೊಂಡು ಕನ್ನಡ ಪ್ರೇಮವನ್ನು ಮೆರೆಯೋಣ ಆದರೆ ಜಾಗತೀಕರಣಕ್ಕೆ ನಮ್ಮ  ಮಕ್ಕಳನ್ನು ಮುಖಾಮುಖಿಯಾಗಿ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿರುವುದರಿಂದ ಇಂಗ್ಲಿಷ್ ಮಾಧ್ಯಮದ ಶಿಕ್ಷಣದ ಆಯ್ಕೆ ಅನಿವಾರ್ಯವಾಗುತ್ತಿದೆ ಮತ್ತು ಅದು ಈ ಸಂದರ್ಭದ ತುರ್ತು ಅಗತ್ಯವೂ  ಹೌದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ