Friday, June 14, 2013

ಎದೆಗೆ ಬಿದ್ದ ಅಕ್ಷರ: ಸಮಾನತೆಯ ಕನಸು ಮತ್ತು ಕಾಣ್ಕೆ






           'ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು' ದೇವನೂರ ಮಹಾದೇವರ 'ಎದೆಗೆ ಬಿದ್ದ ಅಕ್ಷರ' ಪುಸ್ತಕದ ಪುಟಗಳು ತೆರೆದುಕೊಳ್ಳುವುದೇ ಈ ಮೇಲಿನ ನುಡಿಯೊಂದಿಗೆ. ಪ್ರಕಟವಾದ ಕೆಲವೇ ತಿಂಗಳುಗಳಲ್ಲಿ ಅನೇಕ ಮುದ್ರಣಗಳನ್ನು ಕಂಡ ಪುಸ್ತಕವಿದು. ದೇವನೂರ ಮಹಾದೇವ ಕನ್ನಡ ಸಾಹಿತ್ಯ ಲೋಕದ ಅನನ್ಯ ಬರಹಗಾರ. ಅವರ ಅನೇಕ ಬಿಡಿ ಲೇಖನಗಳು ಮತ್ತು ಕಥೆಗಳು ಪ್ರಕಟವಾಗಿವೆಯಾದರೂ ಪುಸ್ತಕ ರೂಪದಲ್ಲಿ ಅವರ ಬರಹ ಬೆಳಕು ಕಂಡಿದ್ದು ಬಹಳಷ್ಟು ಕಡಿಮೆ ಎಂದೇ ಹೇಳಬಹುದು. ೧೯೭೩ ರಲ್ಲಿ ದ್ಯಾವನೂರು, ೧೯೮೨ ರಲ್ಲಿ ಒಡಲಾಳ, ೧೯೮೮ ರಲ್ಲಿ ಕುಸುಮ ಬಾಲೆಯ ನಂತರ ಪ್ರಕಟವಾದ ಕೃತಿ ಈ 'ಎದೆಗೆ ಬಿದ್ದ ಅಕ್ಷರ'. 

         ಕನ್ನಡದ ಪ್ರತಿಭಾವಂತ ಲೇಖಕರಲ್ಲಿ ಒಬ್ಬರಾದ ದೇವನೂರ ಮಹಾದೇವ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನವರು. ಆರಂಭದ ಕೆಲವು ವರ್ಷಗಳ ಕಾಲ ಅಧ್ಯಾಪಕರಾಗಿ ಕೆಲಸ ಮಾಡಿದ ಮಹಾದೇವ ಅದು ತಮ್ಮ ಜಾಯಮಾನಕ್ಕೆ ಒಗ್ಗದೇ ಹೋದಾಗ ಯಾವ ಮುಲಾಜಿಲ್ಲದೆ ನೌಕರಿಗೆ ರಾಜೀನಾಮೆಯಿತ್ತು ಕೃಷಿಯಲ್ಲಿ ತೊಡಗಿಸಿಕೊಂಡವರು. ಜೊತೆ ಜೊತೆಗೆ ದಲಿತ ಚಳುವಳಿ ಮತ್ತು ಬಂಡಾಯ ಸಾಹಿತ್ಯದೊಂದಿಗೆ ತಮ್ಮನ್ನು ಗುರುತಿಸಿಕೊಂಡವರು. ಹಾಗೆಂದು ದಲಿತ ಚಳುವಳಿಯ ಬಗ್ಗೆ ಅವರದು ಸಂಪೂರ್ಣ ಕುರುಡು ನಂಬಿಕೆಯಲ್ಲ. ದಲಿತ ಸಂಘರ್ಷ ಸಮಿತಿಯಲ್ಲಿನ ಒಳಜಗಳ ಹಾಗೂ ಒಡಕುಗಳ ಬಗ್ಗೆ ನಿಷ್ಠುರವಾಗಿ ಮಾತನಾಡುವ ಎದೆಗಾರಿಕೆ ಅವರದು. ಕುವೆಂಪು ಮತ್ತು ಬೇಂದ್ರೆ ಅವರ ಸಾಹಿತ್ಯದ ಜೊತೆಗೆ ಶೇಕ್ಸ್ ಪಿಯರ್ ಮತ್ತು ಟಾಲ್ ಸ್ಟಾಯ್ ಅವರನ್ನೂ ಓದಿಕೊಂಡಿರುವ ದೇವನೂರ ಮಹಾದೇವ ಅಂಬೇಡ್ಕರ್ ರಷ್ಟೇ ಗಾಂಧಿಯನ್ನೂ  ಪ್ರೀತಿಸಬಲ್ಲರು. ಅವರು ಗತದ ನೆನಪುಗಳೊಂದಿಗೆ ವರ್ತಮಾನದಲ್ಲಿ ಬದುಕುತ್ತ ನಾಳಿನ ಕನಸುಗಳನ್ನು ಕಾಣುವರು. ಅವರ ಈ ವ್ಯಕ್ತಿತ್ವಕ್ಕೊಂದು ನಿದರ್ಶನ ಕೊಡುವುದಾದರೆ 'ಗಾಂಧಿಗೆ ಅಬ್ರಾಹಿಂ ಲಿಂಕನ್ ಸಿಕ್ಕಿದ್ರೆ ಭಾಳ ದೊಡ್ಡ ಸಂಗತಿಗಳು ಆಗ್ತಿದ್ವೇನೋ' ಎನ್ನುವ ಅವರ ಹೇಳಿಕೆಯೇ ಒಂದು ದೃಷ್ಟಾಂತ. ತಳ ಸಮುದಾಯದ ಸಾಮಾಜಿಕ  ಬದುಕಿನ ತಲ್ಲಣಗಳನ್ನು ಬರವಣಿಗೆಯ ಮೂಲಕ ತೆರೆದಿಡುತ್ತಿರುವ ಮಹಾದೇವರ ಬರಹಗಳಲ್ಲಿ ಸಂವೇದನೆ ಹಾಗೂ ಸಮಾಜದ ಕುರಿತಾದ ಕಾಳಜಿ ಈ ಗುಣಗಳು ಎದ್ದು ಕಾಣುತ್ತವೆ. 'ನನಗೆ ಏನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ಎಂಬಂತೆ ಚಿಂತಿಸುವವರು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ದೊಡ್ಡ ಚಿಂತಕರು' ಸಂದರ್ಶನವೊಂದರಲ್ಲಿ ಶಂಕರ ಮೊಕಾಶಿ ಪುಣೇಕರ್ ಅವರು ಹೇಳಿದ ಈ ಮಾತು ದೇವನೂರ ಮಹಾದೇವರಿಗೆ ಹೆಚ್ಚು ಅನ್ವಯಿಸುತ್ತದೆ.

             ಇನ್ನು 'ಎದೆಗೆ ಬಿದ್ದ ಅಕ್ಷರ' ಕೃತಿಯ ಕುರಿತು ಹೇಳುವುದಾದರೆ ಓದಿದ ನಂತರ ನನ್ನನ್ನು ಒಂದಿಷ್ಟು ಹೆಚ್ಚೇ ಎನ್ನುವಂತೆ ಕಾಡಿದ ಹಾಗೂ ಚಿಂತಿಸುವಂತೆ ಮಾಡಿದ ಪುಸ್ತಕವಿದು. ಪುಸ್ತಕದಲ್ಲಿ ಒಟ್ಟು ೯೦ ಲೇಖನಗಳಿದ್ದು ಸಂಖ್ಯೆ ಅತಿಯಾಯಿತೇನೋ ಎನ್ನಿಸಿದರೂ ಪುಸ್ತಕವೇನೂ ಬೃಹತ್ ಗಾತ್ರದಲ್ಲಿಲ್ಲ. ಲೇಖನಗಳನ್ನು ಹೆಚ್ಚು ಲಂಬಿಸದೆ ಹೇಳಬೇಕಾದದ್ದನ್ನು ತಮ್ಮ ಎಂದಿನ ರೂಪಕ ಶೈಲಿಯನ್ನು ಬಳಸಿಕೊಂಡು ನೇರವಾಗಿ ಹೇಳಿರುವ ವಿಧಾನ ಮೆಚ್ಚುಗೆ ಎನಿಸುತ್ತದೆ. ದೇವನೂರ ಮಹಾದೇವರೇ ಹೇಳಿಕೊಂಡಂತೆ ಇಲ್ಲಿರುವ ಲೇಖನಗಳಿಗೆ ಹಲವು ವರ್ಷ ವಯಸ್ಸಾಗಿದೆ. ಅವರು ಅಲ್ಲಲ್ಲಿ ಬರೆದ ಲೇಖನಗಳು ಮತ್ತು ಆಗೀಗ ಮಾಡಿದ ಭಾಷಣಗಳನ್ನು ಒಟ್ಟು ಸೇರಿಸಿ ಈ ಪುಸ್ತಕ ಪ್ರಕಟಿಸಲಾಗಿದೆ. ಲೇಖನಗಳಿಗೆ ವಯಸ್ಸಾಗಿದ್ದರೂ ಅವುಗಳಲ್ಲಿನ ವಿಷಯವಸ್ತು ತನ್ನ ತಾಜಾತನವನ್ನು ಹಾಗೆಯೇ ಉಳಿಸಿಕೊಂಡಿರುವುದು ಇಲ್ಲಿನ ವಿಶೇಷ. ಅದು ಆಯ್ದುಕೊಂಡ ವಿಷಯದ ವ್ಯಾಪ್ತಿ ಮತ್ತು ದೇವನೂರರ ಬರವಣಿಗೆಯ ಜನಪ್ರಿಯತೆ ಎರಡನ್ನೂ ಸೂಚಿಸುತ್ತದೆ.


            ಪುಸ್ತಕದ ಪ್ರಥಮದಲ್ಲಿ ದೇವನೂರ ಮಹಾದೇವ ಅವರು  ನನ್ನ ದೇವರು, ಕೊಳಕು ಎಲ್ಲಿದೆ, ಯಾರಿಗೆ ಯಾವ ಚಿಕಿತ್ಸೆ, ಅಹಿಂಸೆಯ ಹುಡುಕುತ್ತ, ಬುದ್ಧನೆಡೆಗೆ ಒಂದು ನಡಿಗೆ ಇತ್ಯಾದಿ ಲೇಖನಗಳಲ್ಲಿ ತಮ್ಮನ್ನು ಕಾಡಿದ ಅನೇಕ ಸಂಗತಿಗಳನ್ನು ಅಕ್ಷರಗಳಲ್ಲಿ  ಹಿಡಿದಿಟ್ಟಿರುವರು. ಬುದ್ಧ, ಗಾಂಧಿ, ಪರಮಹಂಸ, ಅಂಬೇಡ್ಕರ್ ರಲ್ಲಿನ  ಸತ್ಯ ಹಾಗೂ ಸಮಾನತೆಯ ಸಮಷ್ಟಿಯನ್ನು ಗುರುತಿಸುವ ಪ್ರಯತ್ನ ನಡೆಯಬೇಕಿದೆ ಎಂದೆನ್ನುವ ಲೇಖಕರು ಇವರೆಲ್ಲರ ಅಸ್ತಿತ್ವ ಪುಣ್ಯದಂತೆ ಕಾಣಿಸುತ್ತದೆ ಎಂದು ಕೃತಜ್ಞತೆ ಮೆರೆವರು. ಒಂದು ಸಮುದಾಯದ ಬದುಕನ್ನು ಬಂಡೆಗಳಿಗೆ ಹೋಲಿಸುತ್ತಲೇ ಮೂರ್ಛಾವಸ್ಥೆಯಲ್ಲಿರುವ  ನಮ್ಮೊಳಗಿನ  ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ ಎಂದು ಇನ್ನೊಂದು ಸಮುದಾಯಕ್ಕೆ ಕರೆ ಕೊಡುತ್ತಾರೆ. ಕೆಲವರಲ್ಲಿನ ಕಾರುಣ್ಯ ಎಚ್ಚರಗೊಳ್ಳದೆ ಇದ್ದಲ್ಲಿ ಹಲವರ ಬದುಕು ಬಂಡೆಗಳ ಮೇಲೆಯೇ ಚಿಗುರೊಡೆಯಬೇಕಾಗಬಹುದು ಎನ್ನುವ ಆತಂಕ ಲೇಖಕರದು. ಒಟ್ಟಿನಲ್ಲಿ ಕೀಳು ಹುಚ್ಚುರೋಗದಿಂದ ಬಿಡುಗಡೆ ಪಡೆದು ಮೇಲು ಹುಚ್ಚುರೋಗದವರನ್ನು ವಿಮೋಚನೆಗೊಳಿಸಿದಾಗಲೇ ಸಮಾನತೆ ಸಾಧ್ಯ ಎನ್ನುವುದು ಇಲ್ಲಿನ ಎಲ್ಲ ಲೇಖನಗಳ ತಿರುಳಾಗಿದೆ.


            ತಳಸಮುದಾಯದ ಬದುಕಿನ ದಾರುಣತೆಯ ಜೊತೆಗೆ  ಅಸ್ಪೃಶ್ಯ ಸಮುದಾಯದೊಳಗಿನ ಭಿನ್ನಾಭಿಪ್ರಾಯಗಳು ಮತ್ತು ಅವರೊಳಗಿನ ಒಡಕುಗಳ ಕುರಿತು ಮಾತನಾಡಲು ದೇವನೂರ ಮಹಾದೇವ ಹಿಂಜರಿಯುವುದಿಲ್ಲ. ಸೌಲಭ್ಯಗಳಡಿ ಒಂದು ಬಹಿಷ್ಕೃತ ಬದುಕನ್ನು ಬಾಳುವುದಕ್ಕಿಂತ ಅದನ್ನು ಪ್ರತಿಭಟಿಸುವ ಮನೋಭಾವ ಜಾಗೃತಗೊಳ್ಳಬೇಕು ಎಂದು ಕರೆ ಕೊಡುವರು. ಇನ್ನೊಂದೆಡೆ ದಲಿತ ನಾಯಕರಲ್ಲಿನ ಹಾಗೂ ದಲಿತ ಸಂಘರ್ಷ ಸಮಿತಿಯ ರಾಜಕೀಯ ವಾಂಛೆ, ರಾಜಕಾರಣವೊಂದು ವ್ಯವಸ್ಥಿತವಾಗಿ ಚಳುವಳಿಯನ್ನು ದಮನಗೊಳಿಸುತ್ತಿರುವ ಕುರಿತು ಅವರ ಆತಂಕ ಮತ್ತು ವೇದನೆ ಇಲ್ಲಿ ವ್ಯಕ್ತಗೊಳ್ಳುತ್ತದೆ. ಎಡಗೈ, ಬಲಗೈ, ಹೆಬ್ಬೆರಳು, ಕಿರು ಬೆರಳು ಎನ್ನುವ ನೂರೆಂಟು ಭಿನ್ನತೆಗಳು ಇಡೀ ಅಸ್ಪೃಶ್ಯ ಸಮುದಾಯವನ್ನೇ ಸಾಯಿಸಬಹುದು ಎಂದು ಚಿಂತಿಸುವ ದೇವನೂರ ಈ ಭಿನ್ನತೆಗಳನ್ನು ಕಿತ್ತೆಸೆದರೆ ಮಾತ್ರ ನಮ್ಮ ಉಳಿವು ಎಂದು ಹೇಳಲು ಮರೆಯುವುದಿಲ್ಲ. ಅವಮಾನಿತರು (ದಲಿತರು) ಮತ್ತು ಅನುಮಾನಿತರು (ಮುಸ್ಲಿಮರು) ಜೊತೆಗೂಡಿ ಹೋರಾಡಿದಲ್ಲಿ ಜಾತಿರಹಿತ, ವರ್ಗರಹಿತ ಸಮಾಜ ಸ್ಥಾಪನೆ ಸಾಧ್ಯ ಎನ್ನುವ ಆಶಯವನ್ನು ಲೇಖಕರು ವ್ಯಕ್ತಪಡಿಸುವರು.


           ಪುಸ್ತಕದಲ್ಲಿ  ಹೆಚ್ಚುತ್ತಿರುವ ಕೋಮುವಾದ ಮತ್ತು ಅದು ತಂದೊಡ್ಡುತ್ತಿರುವ ಸಮಸ್ಯೆಗಳನ್ನು ಕುರಿತಾದ ಲೇಖಕರ ಕಾಳಜಿ ಕೂಡ  ವ್ಯಕ್ತವಾಗಿದೆ. ಮತಾಂಧತೆ ಹೀಗೇ ಮುಂದುವರೆದಲ್ಲಿ ಅದು ಭಾರತ ಎಂಬ ವೃಕ್ಷದ ಬೇರುಗಳನ್ನು ಕತ್ತರಿಸಿ ಹಾಕುತ್ತದೆ ಎನ್ನುವ ಕಳವಳ ಅವರದು. ಹಿಂದಿನ ಜನ್ಮದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಿದ ಕಾರಣಕ್ಕಾಗಿ ಈ ಜನ್ಮದಲ್ಲಿ ಕರ್ಮಕಳೆಯಲು ನಾನು ಅಸ್ಪೃಶ್ಯನಾಗಿ ಹುಟ್ಟಿರಬಹುದು ಎಂದು ಎಚ್ಚರಿಸುವ ಮಹಾದೇವ ಮಠಗಳು ಜಾತಿ, ಧರ್ಮದಿಂದ ದೂರಾಗಿ ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸುವರು.  ತಳ ಸಮುದಾಯಗಳ ಬದುಕಿನ ತಲ್ಲಣಗಳ ಆಚೆಯೂ ಇಲ್ಲಿ ಮಹಾದೇವ ಖಾಸಗೀಕರಣ, ಜಾಗತೀಕರಣ, ಉದಾರೀಕರಣ, ಅಪವಿತ್ರಗೊಳ್ಳುತ್ತಿರುವ ರಾಜಕಾರಣ ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಕುರಿತು ಬರೆಯುತ್ತ ಇದು ಹೀಗೇ ಮುಂದುವರೆದರೆ ಏನಾಗಬಹುದು ಎಂದು ಚಿಂತಿಸುತ್ತಾರೆ. ಜಾಗತೀಕರಣ ಮತ್ತು ಖಾಸಗೀಕರಣ ತಳ ಸಮುದಾಯಗಳ ಜೊತೆಗೆ ಇಡೀ ದೇಶವನ್ನೇ ನುಂಗಲು ಹೊಂಚು ಹಾಕುತ್ತಿರುವ ಸಾಧ್ಯತೆಯನ್ನು ವಿವರಿಸುತ್ತಾರೆ. ಇಂಗ್ಲಿಷನ್ನು ಭಾಷೆಯಾಗಿ ಒಂದನೇ ತರಗತಿಯಿಂದಲೇ ಕಲಿಸದೆ ಇದ್ದಲ್ಲಿ ಇಂಗ್ಲಿಷ್ ದಾಹ ಮಾತೃ ಭಾಷಾ ಶಿಕ್ಷಣ ಮಾಧ್ಯಮವನ್ನೇ  ತಿಂದು ಹಾಕಿಬಿಡುವ ಅಪಾಯವಿದೆ ಎನ್ನುವ ಕಿವಿಮಾತು ಇಲ್ಲಿದೆ.


            ಪುಸ್ತಕದ ಒಂದು  ಭಾಗದಲ್ಲಿ ದೇವನೂರ ಮಹಾದೇವ ಕನ್ನಡದ ಹಿರಿಯ ಬರಹಗಾರರು, ಚಿಂತಕರು, ಚಳುವಳಿಗಾರರು ಮತ್ತು ರಾಜಕೀಯ ನಾಯಕರುಗಳೊಂದಿಗಿನ ಒಡನಾಟ ಮತ್ತು ಅವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿರುವರು. ಇಲ್ಲಿ ಎಲ್.ಬಸವರಾಜು, ಪಿ.ಲಂಕೆಶ್, ಯು. ಆರ್. ಅನಂತ ಮೂರ್ತಿ, ದೇವರಾಜ ಅರಸು, ಎಂ. ಡಿ. ನಂಜುಂಡ ಸ್ವಾಮಿ ಕುರಿತು ಲೇಖನಗಳಿವೆ. ಪ್ರೊ. ಎಲ್. ಬಸವರಾಜು ಅವರನ್ನು ಕುರಿತು ಬರೆಯುವಾಗ ಮಹಾದೇವ ಹೆಚ್ಚು ಆರ್ದ್ರರಾಗುತ್ತಾರೆ. ಅವರೊಳಗಿನ ಬೆರಗು, ಪ್ರತಿಭೆ, ಜೀವನ ಪ್ರೀತಿ ಎಲ್ಲವನ್ನೂ ನೆನಪಿಸಿಕೊಳ್ಳುತ್ತಾರೆ. ಅದೇ ಲಂಕೇಶರ ಬಗ್ಗೆ ಬರೆಯುವಾಗ ಗೊತ್ತಿಲ್ಲದಂತೆಯೇ ಒಂದು ತುಂಟತನ ಅಲ್ಲಿ ಹಣಿಕಿಕ್ಕುತ್ತದೆ. ಜೊತೆಗೆ ವರ್ತಮಾನದ ತಲ್ಲಣಗಳಿಗೆ ಪ್ರತಿಕ್ರಿಯಿಸಿ ಪ್ರಭಾವಿಸಿದ ಲೇಖಕ ಕನ್ನಡದಲ್ಲಿ ಲಂಕೇಶ್ ಬಿಟ್ಟರೆ ಬೇರೊಬ್ಬರಿಲ್ಲ ಎನ್ನುವ ಮೆಚ್ಚುಗೆಯ ಮಾತುಗಳೂ ಅಲ್ಲಿವೆ. ಅನಂತಮೂರ್ತಿ ಮತ್ತು ದೇವರಾಜ ಅರಸು ಅವರೊಳಗಿನ ತಳಸಮುದಾಯಗಳ ಬಗೆಗಿನ ಪ್ರೀತಿಯನ್ನು ಪರಿಚಯಿಸುತ್ತಾರೆ. ಇನ್ನು ಎಂ. ಡಿ. ನಂಜುಂಡ ಸ್ವಾಮಿ ಅವರೊಡನೆ ದೇವನೂರರ ಸಂದರ್ಶನ ಅತ್ಯಂತ ಚೇತೋಹಾರಿಯಾಗಿದೆ. ಸಂದರ್ಶನದುದ್ದಕ್ಕೂ ಮಹಾದೇವ ನಂಜುಂಡಸ್ವಾಮಿ ಅವರನ್ನು ಕೆಣಕುತ್ತ ಮತ್ತು ಕಾಲೆಳೆಯುತ್ತಲೇ ಹೋಗುತ್ತಾರೆ. ಇದೊಂದು ಕತ್ತಿವರಸೆಯಂತೆ ಓದುಗನಿಗೆ ಭಾಸವಾಗುತ್ತದೆ. ಪಂಪ, ಚದುರಂಗ, ಖಾಸನೀಸರನ್ನೂ ಲೇಖಕರು ಇಲ್ಲಿ ಸ್ಮರಿಸಿಕೊಂಡಿರುವರು. ಲೋಹಿಯಾರ ಕುರಿತು ಮಹಾದೇವರೇ ಅನುವಾದಿಸಿದ ಲೇಖನದಲ್ಲಿ ಲೋಹಿಯಾರ ವ್ಯಕ್ತಿತ್ವ ಹಾಗೂ ಹೋರಾಟವನ್ನು ಅತ್ಯಂತ ಅರ್ಥಪೂರ್ಣವಾಗಿ ಚಿತ್ರಿಸಲಾಗಿದೆ.


        ಒಂದು ಹಂತದಲ್ಲಿ  ದೇವನೂರ ಮಹಾದೇವ ಅಸ್ಪೃಶ್ಯತಾ ಆಚರಣೆಗೆ ಕುಮ್ಮಕ್ಕು ನೀಡುತ್ತಿರುವ ವ್ಯವಸ್ಥೆಗೆ ಮುಖಾಮುಖಿಯಾಗಿ ನಿಲ್ಲುತ್ತಾರೆ. ವ್ಯವಸ್ಥೆಯೊಂದಿಗಿನ ಲೇಖಕರ ಸುದೀರ್ಘ ಹೋರಾಟವನ್ನು ನಾವು ಇಲ್ಲಿ ಕಾಣಬಹುದು. ಪ್ರತಿಯೊಂದು ಹೋರಾಟದ ಅನುಭವವನ್ನು ಅಕ್ಷರ ರೂಪಕ್ಕಿಳಿಸಿ ತಳಸಮುದಾಯದ ತಲ್ಲಣಗಳನ್ನು ಓದುಗರೆದುರು ಹಿಡಿದು ನಿಲ್ಲಿಸುವ ಪ್ರಯತ್ನ ಇಲ್ಲಿದೆ. ಜೀತ ಪದ್ಧತಿ, ದಲಿತರ ವಸತಿ ಸಮಸ್ಯೆ, ಜಾತಿ ಸಂಘರ್ಷ ಇತ್ಯಾದಿ ಸಂದರ್ಭಗಳಲ್ಲಿನ ಹೋರಾಟ ಹಾಗೂ ರಾಜಕೀಯ ಬೆಳವಣಿಗೆಗಳಿಗೆ ತಾವು ಸಾಕ್ಷಿಯಾಗಿದ್ದನ್ನು ಮಹಾದೇವ ದಾಖಲಿಸಿರುವರು.


         ಕೃತಿಯ ಕೊನೆಯ ಭಾಗದಲ್ಲಿ ಲೇಖಕರು ಸಮಾನತೆಯ ಅಗತ್ಯವನ್ನು ಮನಗಾಣಿಸುತ್ತ ಅದಕ್ಕಾಗಿ ಆಗ ಬೇಕಾದ ಬದಲಾವಣೆಗಳನ್ನು ಕುರಿತು ಹೇಳುತ್ತಾರೆ. ಸಮಾನತೆಗಾಗಿ ಬೇಕಿರುವುದು ಯಾವ ಧರ್ಮ, ಜಾತಿಯಲ್ಲ ಬೇಕಿರುವುದು ಮಾನವೀಯತೆ ಎನ್ನುವುದು ಮಹಾದೇವರ ಕಳಕಳಿಯಾಗಿದೆ. ಊರಾಚೆ ಪರಕೀಯವಾಗಿ ಬಿದ್ದು ನರಳುತ್ತಿರುವ ಅಸ್ಪೃಶ್ಯತೆಯ ಆಕ್ರಂದನ, ಕೋಪ, ತಾಪ ಅದು ಪ್ರೀತಿಗಾಗಿ ಮಾನವತೆಯ ಸ್ಪರ್ಶಕ್ಕಾಗಿ ಎನ್ನುವುದನ್ನು ಹೇಳಲು ಲೇಖಕರು ಮರೆಯುವುದಿಲ್ಲ. ಸಮಾನತೆಗಾಗಿ ಮಾನವೀಯತೆಯ ಜೊತೆಗೆ ಒಂದಿಷ್ಟು ಅಗತ್ಯಗಳನ್ನು ಮನಗಾಣಿಸಿ ಕೊಡುವರು. ಮೀಸಲಾತಿ, ಖಾಸಗಿಯಲ್ಲಿ ಮೀಸಲಾತಿ, ಒಳಮೀಸಲಾತಿ ನಿಷೇಧ, ಗಾಂಧಿ ಮತ್ತು ಅಂಬೇಡ್ಕರ್ ವಿಚಾರಗಳು ಒಂದುಗೂಡುವಿಕೆ, ವಿಕೇಂದ್ರೀಕರಣ, ಎಲ್ಲರಿಗೂ ಉದ್ಯೋಗ, ಸ್ವಾವಲಂಬನೆ ಇವುಗಳಿಂದ ಸಮಾನತೆ ತರಲು ಸಾಧ್ಯ ಎನ್ನುವ ಅಭಿಪ್ರಾಯ ಲೇಖಕರದಾಗಿದೆ.

ದೇವನೂರರ ಗಾಂಧಿ ಪ್ರೀತಿ


              ದೇವನೂರ ಮಹಾದೇವ ಅಂಬೇಡ್ಕರ್ ರನ್ನು ಪ್ರೀತಿಸುವಷ್ಟೇ ಗಾಂಧಿಯನ್ನು ಕೂಡ ಉತ್ಕಟವಾಗಿ ಪ್ರೀತಿಸಬಲ್ಲರು ಎನ್ನುವುದು ಈ ಪುಸ್ತಕದಲ್ಲಿನ ಕೆಲವು ಅಧ್ಯಾಯಗಳನ್ನು ಓದಿದಾಗ ವ್ಯಕ್ತವಾಗುತ್ತದೆ. ಹೀಗೆ ನಾನು ಹೇಳಲು ಕಾರಣ ಈಗಿನ ದಲಿತ ಯುವಕರು ಅಂಬೇಡ್ಕರ್ ರನ್ನು ಪ್ರೀತಿಸುವುದರ ಜೊತೆಗೆ ಗಾಂಧಿಯನ್ನು ದ್ವೇಷಿಸುತ್ತಿರುವರು. ಗಾಂಧೀಜಿಯ ದಲಿತೋದ್ಧಾರದ ಕನಸು ಹಾಗೂ ಅದಕ್ಕಾಗಿ ಮಾಡಿದ ಪ್ರಯತ್ನ ಇಂದಿನ ದಲಿತ ಯುವಕರಿಗೆ ಪರಿಚಯಿಸುವ ಕೆಲಸವಾಗಬೇಕಿದೆ. ಇಂಥದ್ದೊಂದು ಕೆಲಸ ದಲಿತ ಲೇಖಕರಿಂದಲೇ ನಡೆದಲ್ಲಿ ಅದು ಹೆಚ್ಚು ಪರಿಣಾಮಕಾರಿಯಾಗಬಲ್ಲದು. 'ಎದೆಗೆ ಬಿದ್ದ ಅಕ್ಷರ' ಕೃತಿಯಲ್ಲಿ ದೇವನೂರ ಮಹಾದೇವ ಗಾಂಧೀಜಿ ಬಗ್ಗೆ ಬರೆಯುತ್ತ ಅಂಥದ್ದೊಂದು ಪ್ರಕ್ರಿಯೆಗೆ ಚಾಲನೆ ನೀಡಿರುವರೆಂದೇ ನನ್ನ ಭಾವನೆ.

           'ಸಾಯಲು ಮಾನಸಿಕವಾಗಿ ದೃಢವಾಗಿ ಸಿದ್ಧನಾದವನು ಮಾತ್ರ ಗಾಂಧಿಯಾಗಬಲ್ಲ. ಅಹಿಂಸಾವಾದಿಯಾದ ಗಾಂಧಿಯ ದೇಹದ ಒಂದು ರೋಮದಲ್ಲೂ ಹೇಡಿತನದ ಸುಳಿವು ಇಲ್ಲದಿರುವುದು ನನ್ನನ್ನು ನಡುಗಿಸಿತು' ಎಂದು ದೇವನೂರ ಮಹಾದೇವ ಗಾಂಧಿ ಕುರಿತು ಬರೆಯುತ್ತಾರೆ. ಇಡೀ ದಲಿತ ಸಂಘರ್ಷ ಸಮಿತಿ 'ಗಾಂಧಿ' ಸಿನಿಮಾ ನೋಡದಂತೆ ಬಹಿಷ್ಕರಿಸಿದಾಗ ಗಾಂಧಿ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಮಹಾದೇವ ಆ ಚಿತ್ರವನ್ನು ವೀಕ್ಷಿಸುತ್ತಾರೆ. ಗಾಂಧಿ ಮತ್ತು ಅಂಬೇಡ್ಕರ್ ರ ಸಮಾನತೆಯ ಹೋರಾಟ ಮಹಾದೇವರಿಗೆ ಹೀಗೆ ಕಾಣಿಸುತ್ತದೆ 'ಹಿಂದೂ ಧರ್ಮ ಎಂಬ ಮನೆಯೊಳಗೆ ಭಿನ್ನ ಭಾವ ಜಾತಿ ತಾರತಮ್ಯದ ಕಂಬಗಳನ್ನು ಒಳಗೊಳಗೇ ಕೊಯ್ಯುವವನಂತೆ ಗಾಂಧಿ ಕಾಣಿಸುತ್ತಾರೆ. ಅದೇ ಅಂಬೇಡ್ಕರ್ ಹೊರಗಿನಿಂದ ಆ ಅಸಮಾನತೆಯ ಮನೆಗೆ ಕಲ್ಲೆಸೆಯುವವನಂತೆ ಕಾಣಿಸುತ್ತಾರೆ. ಈ ಪ್ರಕ್ರಿಯೆಯಿಂದಾಗಿ ಅಂಬೇಡ್ಕರ್ ಎಸೆದ ಕಲ್ಲು ಒಳಗಿದ್ದ ಗಾಂಧಿಗೂ ಬಿದ್ದು ರಕ್ತ ಚೆಲ್ಲಿರಬಹುದು. ಇದನ್ನು ಕಂಡು ಹೊರಲೋಕವು ಗಾಂಧಿಗೂ ಅಂಬೇಡ್ಕರ್ ಗೂ ಮಾರಾಮಾರಿ ಹೊಡೆದಾಟ ಎನ್ನಬಹುದು. ಆದರೆ ಇಬ್ಬರೂ ಮಾಡುತಿದ್ದುದು ಹೆಚ್ಚು ಕಮ್ಮಿ ಒಂದೇ ಕೆಲಸವನ್ನಲ್ಲವೇ'. ಇನ್ನೂ ಮುಂದುವರೆದು ಗಾಂಧಿಯ ವ್ಯಕ್ತಿತ್ವವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಾರೆ 'ಗಾಂಧಿ ಅಸಮಾನತೆಯ ವ್ಯವಸ್ಥೆ ಎಂಬ ಬಚ್ಚಲು ಕೊಳಕು ನೀರನ್ನು ಭಟ್ಟಿ ಇಳಿಸುತ್ತ ತಿಳಿಗೊಳಿಸುತ್ತಿದ್ದರು. ಚಿಟ್ಟೆಯಾಗಲಾರದ ಬಚ್ಚಲು ಹುಳುಗಳಿಗೆ ಉಸಿರು ಕಟ್ಟಿತ್ತು. ಗಾಂಧಿಯನ್ನು ಹೀಗಲ್ಲದೆ ಬೇರೆ ಯಾವ ರೀತಿ ಅರ್ಥಮಾಡಿಕೊಳ್ಳಲು ಸಾಧ್ಯ'.

           ಹೀಗಿದ್ದೂ ಗಾಂಧಿ ಯಾಕೆ ಅಪಾರ್ಥಕ್ಕೆ ಒಳಗಾದರು? ಎನ್ನುವ ಪ್ರಶ್ನೆ ಮಹಾದೇವರ ಮನದಲ್ಲಿ ಮೂಡಿ ಕಾಡುತ್ತದೆ. ಅದಕ್ಕೆ ಪರಿಹಾರವನ್ನೂ ಅವರೇ ಸೂಚಿಸುತ್ತಾರೆ 'ಗಾಂಧಿಯನ್ನು ದಲಿತರು ಹೇಗೆ ಸ್ವೀಕರಿಸಬೇಕು? ಒಂದು ಮಾಡಬಹುದು- ಗಾಂಧಿ ಸಾಹಿತ್ಯವನ್ನು ದಲಿತನ ಒಡಲಿಗೆ ಹಿತಾಸಕ್ತಿಗೆ ಎಷ್ಟು ಒಗ್ಗುತ್ತದೋ ಅಷ್ಟನ್ನು ಮಾತ್ರ ಸಂಪಾದಿಸಿ ಇಟ್ಟುಕೊಂಡರೆ ಅಲ್ಲಿಂದ ಗಾಂಧಿ ಮತ್ತೆ ಹುಟ್ಟುತ್ತಾನೆ. ಇಡೀ ಜಗತ್ತಿನ ಹಿತವೂ ಇದರೊಳಗೆ ಇರಬಹುದು'.

ಒಂದಿಷ್ಟು ಝಲಕ್ ಗಳು 


        ಒಂದಿಷ್ಟು ಎದೆಗೆ ಬಿದ್ದ ನುಡಿಗಳು ಓದುಗರಿಗಾಗಿ

# ಗಾಂಧಿ ಕಾಠಿಣ್ಯದ ತಂದೆಯಂತೆ, ಜೆಪಿ ಅಸಹಾಯಕ ತಾಯಿ, ವಿನೋಬಾ ಮದುವೆಯಾಗದ ವೃತನಿಷ್ಠ ಅಕ್ಕನಂತೆ, ಲೋಹಿಯಾ ಊರೂರು ಅಲೆಯುವ ಮನೆ ಸೇರದ ಅಲೆಮಾರಿ ಮಗ, ಅಂಬೇಡ್ಕರ್ ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಮನೆ ಹೊರಗೆ ಇರುವ ಮಗ. ಇದು ನಮ್ಮ ಕುಟುಂಬ. ನಾವು ಇಲ್ಲಿನ ಸಂತಾನ.

# ದೈಹಿಕವಾಗಿ ದುರ್ಬಲನಾದ ಶೋಷಿತನ ನಿಜದ ಎದುರು ದೈಹಿಕ ಪ್ರಬಲನಾದ ಶೋಷಕ ತಂತಾನೆ ಕುಸಿಯುತ್ತಾನೆ.

# ಒಬ್ಬನ ಭುಜದ ಮೇಲೆ ಇನ್ನೊಬ್ಬ ಕೂತಿದ್ದಾನೆ. ಮೇಲೆ ಕೂತಿರುವವನು ತನ್ನನ್ನು ಹೊತ್ತವನ ಭಾರವನ್ನು ತಾನೇ ಹೊತ್ತಿರುವುದು ಎಂದು ಆ ಭಾರ ಹೊತ್ತವನಿಗೆ ನಂಬಿಸುತ್ತಿದ್ದಾನೆ. ದುರಂತವೆಂದರೆ ಅದನ್ನೇ ತಾನೂ ನಂಬುತ್ತಿದ್ದಾನೆ.

# ನೋಡುವ ಕ್ರಮ ಬದಲಾಗುವುದಾದರೆ ಬದಲಾವಣೆಯ ದಾರಿಗಳೂ ತಂತಾನೆ ತೆರೆದುಕೊಳ್ಳಬಹುದು.

# ಮಾತೃಭೂಮಿಯನ್ನೇ ಮಾರ್ಕಂಡು ತಿನ್ನುವವರಿಗೆ ಮಾತೃ ಭಾಷೆ ಯಾವ ಲೆಕ್ಕ.

# ಈ ಎನರ್ಜಿಯ ಚೈತನ್ಯ ಉಕ್ಕಿ ಹರಿಯಲು ಲಂಕೇಶರಿಗೆ ಒಂದು ಹುಲ್ಲುಕಡ್ಡಿಯಾದರೂ ವೈರಿಯಾಗಿ ಅವರ ಎದುರಿಗೆ ಬಂದು ತಲೆ ಕುಣಿಸಬೇಕಿತ್ತು, ತೊಡೆ ತಟ್ಟ ಬೇಕಿತ್ತು.

# ಗುಲಾಮನನ್ನು ಪಳಗಿಸಲು ಹೆಣಗುವ ಮಾಲೀಕನ ಮನಸ್ಸಿನ ತುಂಬಾ ಗುಲಾಮತನ ತುಂಬಿರುತ್ತದೆ.

# ಕಠೋರ ಮಡಿ ಆಚರಿಸುವವರನ್ನು ಪಳೆಯುಳಿಕೆ ಎಂದು ಭಾವಿಸಿದರೆ ಸಮಸ್ಯೆ ಇಲ್ಲ. ಆದರೆ ಅವರ ಮಡಿಯನ್ನು ಪಾರಂಪರಿಕ ಮೌಲ್ಯ ಎಂದು ಗೌರವಿಸಿದರೆ ಅಪಾಯ ಆರಂಭವಾಗುತ್ತದೆ.


ಕೊನೆಯ ಮಾತು 


           'ಎದೆಗೆ ಬಿದ್ದ ಅಕ್ಷರ' ಕೃತಿಯುದ್ದಕ್ಕೂ ತಳಸಮುದಾಯಗಳ ಬದುಕಿನ ಸಮಸ್ಯೆಗಳು ಅನಾವರಣಗೊಳ್ಳುತ್ತ ಹೋಗುತ್ತವೆ. ಜೊತೆಗೆ ಅಲ್ಲಲ್ಲಿ   ಲೇಖಕರು  ಖಾಸಗೀಕರಣ,  ಜಾಗತೀಕರಣ, ರೈತರ ಸಮಸ್ಯೆಗಳು, ಕನ್ನಡ ಮಾಧ್ಯಮದ ಹಿನ್ನಡೆ  ಇತ್ಯಾದಿ ಸಂಗತಿಗಳನ್ನೂ  ಚರ್ಚಿಸುವರು. ಒಟ್ಟಾರೆ ಬರಹಗಾರ ತನ್ನ ಬರವಣಿಗೆಯ ಮೂಲಕ ಪ್ರತಿಭಟನೆಯ ಕಾವನ್ನು ಕಾಯ್ದುಕೊಳ್ಳಬೇಕೆನ್ನುವ ಸಿದ್ಧಾಂತವನ್ನು ದೇವನೂರ ಮಹಾದೇವರ ಬರವಣಿಗೆ ಕಾಲಕಾಲಕ್ಕೆ ಎತ್ತಿಹಿಡಿಯುತ್ತಲೇ ಬಂದಿದೆ. ಹಾಗೆಂದ ಮಾತ್ರಕ್ಕೆ ದೇವನೂರ ಮಹಾದೇವ ವಿತಂಡವಾದಿಯಾಗಲಿ ಇಲ್ಲವೇ ಖಂಡಿತವಾದಿಯಾಗಲಿ ಅಲ್ಲ. ಪ್ರಕಾಶಕರು ಹೇಳುವಂತೆ ಮಾತಿನಲ್ಲಾಗಲಿ, ಬದುಕಿನಲ್ಲಾಗಲಿ ಯಾರನ್ನೂ, ಯಾವುದನ್ನೂ ನೋಯಿಸುವ ಜಾಯಮಾನ ಮಹಾದೇವ ಅವರದಲ್ಲ. ಅದಕ್ಕೆಂದೇ ಇಲ್ಲಿನ ಲೇಖನಗಳಿಗೆ  ಧುಮ್ಮಿಕ್ಕಿ ಹರಿಯುವ ಜಲಪಾತದ ವೇಗವಿಲ್ಲ. ಇಲ್ಲಿನ ಬರಹದ ಪ್ರತಿಭಟನೆಗೆ ಶಾಂತವಾಗಿ ಹರಿಯುವ ನದಿಯ ಮನಸ್ಥಿತಿ ಇದೆ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 



Saturday, June 1, 2013

ಕಟ್ಟಿದ್ದನ್ನು ಕೆಡವಿದರು

     




           ಭಾರತ ಬಹುಧರ್ಮಗಳ ಸಂಗಮ. ಇದು ಅನೇಕತೆಯಲ್ಲಿ  ಏಕತೆಯನ್ನು ಮೈಗೂಡಿಸಿಕೊಂಡ ದೇಶ. ಇಲ್ಲಿ ಬಹುಸಂಖ್ಯಾತ ಹಿಂದೂಗಳಿರುವಂತೆ ಕ್ರೈಸ್ತರು, ಮುಸ್ಲಿಮರು, ಬೌದ್ಧರು, ಪಾರ್ಸಿಗಳು ಹೀಗೆ ಹಲವಾರು ಧರ್ಮೀಯರು ಬದುಕು ಕಟ್ಟಿಕೊಂಡಿರುವರು. ದೇಶದ ಸಾಹಿತ್ಯ, ವಿಜ್ಞಾನ, ಕಲೆ, ಸಂಸ್ಕೃತಿ ಎಲ್ಲ ಧರ್ಮೀಯರ ಕೊಡುಗೆಗಳಿಂದ ಶ್ರೀಮಂತ ಮತ್ತು ಸಂಪದ್ಭರಿತವಾಗಿವೆ. ಶರಣರು ಹಾಗೂ ಸೂಫಿಗಳು ಕೂಡಿಯೇ ಈ ನಾಡಿನ ಸಾಮಾಜಿಕ ಚಳುವಳಿಯನ್ನು ಅನನ್ಯವಾಗಿ ಕಟ್ಟಿರುವರು. ಶಂಕರಾಚಾರ್ಯ, ಸ್ವಾಮಿವಿವೇಕಾನಂದ, ಗೌತಮ ಬುದ್ಧ, ಮಹಾವೀರನಂಥ ದಾರ್ಶನಿಕರು  ಜನ್ಮತೆಳೆದ ನೆಲವಿದು. ಇಲ್ಲಿ ದಸರಾ, ದೀಪಾವಳಿ ಹಬ್ಬಗಳ ಜೊತೆಗೆ ಮೊಹರಂ, ರಂಜಾನ್, ಕ್ರಿಸ್ ಮಸ್ ಹಬ್ಬಗಳನ್ನೂ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಆಚರಿಸುವರು. ಭಾರತದ ಸಂವಿಧಾನ ಎಲ್ಲ ಧರ್ಮೀಯರ ಬಾಳ್ವೆಗೆ ಇಲ್ಲಿ ಅವಕಾಶ ಮಾಡಿಕೊಟ್ಟಿದೆ. ಹಿಂದೂ ಧರ್ಮೀಯರು ಬಹುಸಂಖ್ಯಾತರಾಗಿದ್ಡಾಗೂ ಅನ್ಯಧರ್ಮಿಯರಿಗೆ ಅವರದೇ ನೀತಿ ಸಂಪ್ರದಾಯಗಳ ಬದುಕಿಗೆ ಇಲ್ಲಿ ಅವಕಾಶವಿದೆ. ಹೀಗೆ ವಿವಿಧತೆಯಲ್ಲಿ ಏಕತೆಯನ್ನು ಕಂಡ ರಾಷ್ಟ್ರ ಭಾರತ ಬಿಟ್ಟರೆ ವಿಶ್ವದಲ್ಲಿ ಬೇರೊಂದಿಲ್ಲ. 

ಈಗ ಒಂದಿಷ್ಟು ಹಿಂದೆ ಹೋಗೋಣ 


           'ಮೊಹರಂ' ಮುಸ್ಲಿಮರು ಆಚರಿಸುವ ವಿಶಿಷ್ಠ ಹಬ್ಬಗಳಲ್ಲೊಂದು. ನಗರ ಮತ್ತು ಹಳ್ಳಿಗಳು ಸೇರಿದಂತೆ ಎಲ್ಲಕಡೆಯೂ ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುವರು. ನಾವು ಚಿಕ್ಕವರಾಗಿದ್ದಾಗ ಆ ಹಬ್ಬದ ದಿನಗಳಲ್ಲಿ ಪೀರದೇವರನ್ನು ಪ್ರತಿಷ್ಟಾಪಿಸಿದ ಅಷ್ಟೂ ದಿನಗಳು ಬೆಳೆಗ್ಗೆ ಹಾಗೂ ರಾತ್ರಿ ಹೋಗಿ ನಮಸ್ಕರಿಸಿ ಬರುತ್ತಿದ್ದೇವು. ಆ ಘಳಿಗೆ ಅಲ್ಲೇ ಪಕ್ಕದಲ್ಲೇ ಕುಳಿತಿರುತ್ತಿದ್ದ ಮುಲ್ಲಾ ತಲೆಯ ಮೇಲೆ ನವಿಲು ಗರಿಕೆಗಳಿಂದ ಆಶೀರ್ವದಿಸಿ ಕೈಗೆ ಪ್ರಸಾದದ ರೂಪದಲ್ಲಿ ಸಕ್ಕರೆಯನ್ನು ಹಾಕಿದಾಗ ನಮ್ಮಲ್ಲಿ ಒಂದು ರೀತಿಯ ಧನ್ಯತೆ ಮನೆಮಾಡುತ್ತಿತ್ತು. ಪೀರದೇವರ ಮೆರವಣಿಗೆಯ ಕೊನೆಯ ದಿನದಂದು ಇಡೀ ಊರಿಗೆ ಊರೇ ಶೃಂಗಾರಗೊಳ್ಳುತ್ತಿತ್ತು. ಮೆರವಣಿಗೆ ತಮ್ಮ ತಮ್ಮ ಮನೆಯೆದುರು ಬರುತ್ತಿದ್ದಂತೆ ದೇವರ ಕಾಲಿಗೆ ನೀರು ಹಾಕುವುದು ಮತ್ತು ಸಕ್ಕರೆಯನ್ನು ನೈವೇದ್ಯೆಯಾಗಿ ಸಮರ್ಪಿಸುವುದನ್ನು ಊರಿನ ಎಲ್ಲರೂ ಸಂಪ್ರದಾಯದಂತೆ ಆಚರಿಸುತ್ತಿದ್ದರು.

        ರಂಜಾನ್ ಆಚರಣೆಯಂತೂ ಇನ್ನೂ ವಿಶಿಷ್ಠವಾಗಿರುತ್ತಿತ್ತು. ಆ ಸಮಯದಲ್ಲಿ ಮುಸ್ಲಿಮರು ಇಡೀ ತಿಂಗಳು ಹಗಲು ಹೊತ್ತಿನಲ್ಲಿ ಉಪವಾಸವಿರುತ್ತಿದ್ದರು. ರಾತ್ರಿ ಪ್ರಾರ್ಥನೆಯ  ನಂತರ ಅವರು ಉಪವಾಸ ಬಿಡುವ ಇಫ್ತಿಯಾರ್ ಕೂಟದಲ್ಲಿ ಅನ್ಯಧರ್ಮಿಯರೂ ಪಾಲ್ಗೊಳ್ಳುತ್ತಿದ್ದುದೊಂದು ವಿಶೇಷ. ರಂಜಾನ್ ಹಬ್ಬದ ದಿನದಂದು ಮುಸ್ಲಿಂ ಬಾಂಧವರ ಮನೆಗಳಲ್ಲಿ ಹಾಲಿನಿಂದ ತಯ್ಯಾರಿಸುವ 'ಸುರಕುಂಬಾ' ಎನ್ನುವ ಖಾದ್ಯವನ್ನು ಸೇವಿಸುವುದೇ ಒಂದು ಸಂಭ್ರಮದ ವಿಷಯವಾಗಿರುತ್ತಿತ್ತು. ಆ ದಿನ ಅವರು ಹಿಂದೂ ಬಾಂಧವರಿಗಾಗಿ ಪ್ರತ್ಯೇಕ ಅಡುಗೆಯನ್ನು (ಸಸ್ಯಾಹಾರದ) ತಯ್ಯಾರಿಸಿ ಊಟಕ್ಕೆ ಆಮಂತ್ರಿಸುತ್ತಿದ್ದರು. ಆ ದಿನ ಪರಸ್ಪರ ಆಲಂಗಿಸಿಕೊಂಡು ಶುಭಾಷಯ ವಿನಿಮಯ ಮಾಡಿಕೊಳ್ಳುವುದರಿಂದ ಇಡೀ ಊರಿನಲ್ಲಿ ಭಾತೃತ್ವದ ಭಾವನೆಯೊಂದು ಅನಾವರಣಗೊಳ್ಳುತ್ತಿತ್ತು.

       ನಾವುಗಳು ಆಚರಿಸುವ ದೀಪಾವಳಿ, ಹೋಳಿ ಹುಣ್ಣಿಮೆ, ಕಾರ ಹುಣ್ಣಿಮೆ ಹಬ್ಬಗಳಲ್ಲೂ ಮುಸ್ಲಿಮರು ಅತ್ಯಂತ ಉತ್ಸಾಹದಿಂದಲೇ ಪಾಲ್ಗೊಳ್ಳುತ್ತಿದ್ದರು. ದೀಪಾವಳಿ ಹಬ್ಬದ ಆ ಮೂರೂ ದಿನಗಳಂದು ಅವರುಗಳ ಮನೆಗಳಲ್ಲೂ ಪಟಾಕಿ ಸಿಡಿಯುತ್ತಿದ್ದವು. ಹೋಳಿ ಹುಣ್ಣಿಮೆಯಂದು ಪರಸ್ಪರ ಬಣ್ಣ ಎರೆಚಿ ಸಂಭ್ರಮಿಸುತ್ತಿದ್ದರು. ಕಾರ ಹುಣ್ಣಿಮೆಯ ದಿನ ಓಡುವ ಎತ್ತಿನ ಬಂಡೆಯ ಮೇಲೆ ನನ್ನೂರಿನ ಖಬಲಾ ಸಾಬ್ ನಿಂತರೆ ಅವನನ್ನು ಸ್ಪರ್ಧೆಯಲ್ಲಿ ಸೋಲಿಸಲು ಬೇರೆ ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಯುಗಾದಿ ಹಬ್ಬದ ದಿನ ಆಂಜನೇಯನ ಗುಡಿಯಲ್ಲಿ ಸ್ವಾಮಿಗಳು ಪಂಚಾಗ ಪಠಿಸುತ್ತಿದ್ದರೆ ಆ ವರ್ಷದ ಮಳೆ ಬೆಳೆಯನ್ನು ತಿಳಿದುಕೊಳ್ಳಲು ಜನರ ಗುಂಪಿನಲ್ಲಿ ಟೋಲಾಸಾಬ್, ನಜೀರ್ ಸಾಬ್, ಖಾಸಿಂ, ಮಶಾಖ್, ರಸೂಲ್ ಸಾಬ್ ಇವರೆಲ್ಲ ಕುಳಿತಿರುತ್ತಿದ್ದರು. ಮಳೆಗಾಗಿ ಪ್ರಾರ್ಥಿಸುವ ಊರ ಬುತ್ತಿ ಜಾತ್ರೆಗೆ ಎಲ್ಲರೂ ಒಟ್ಟಾಗಿ ಕೆರೆಗೆ ಹೋಗಿ ಪೂಜೆ ಸಲ್ಲಿಸಿ ಊಟ ಮಾಡಿಕೊಂಡು ಬರುತ್ತಿದ್ದರು. ಊರೂರಿಗೆ ಹೋಗಿ ನಾಟಕಗಳನ್ನು ಕಲಿಸುತ್ತಿದ್ದ ಪೇಟಿ ಮಾಸ್ತರ್ ಮಸ್ತಾನ್ ಸಾಬ್ ರಾಮಾಯಣ ಮಾಹಾಭಾರತದ ಜೊತೆಗೆ ಅನೇಕ ಪೌರಾಣಿಕ ಪುಸ್ತಕಗಳನ್ನು ಓದಿಕೊಂಡಿದ್ದ. ಮೀಸೆ ಇಲ್ಲದೆ ಉದ್ದನೆ ಬಿಳಿ ಗಡ್ಡ ಬಿಟ್ಟಿದ್ದ ಟೋಲಾಸಾಬ್ ಸಂತ ಪ್ರವಾದಿಯಂತೆ ಕಾಣಿಸುತ್ತಿದ್ದ

         ನನ್ನನ್ನು ಇವತ್ತಿಗೂ ಅಚ್ಚರಿಗೊಳಿಸುವ ಸಂಗತಿ ಎಂದರೆ ಆಗ ನಮ್ಮ ಮನೆಗೆಲಸಕ್ಕೆ ಬರುತ್ತಿದ್ದ ಮುಸ್ಲಿಂ ಹೆಣ್ಣುಮಗಳು ಹೀರಾಳಿಗೆ ಕನ್ನಡ ಭಾಷೆ ಬಿಟ್ಟರೆ ಬೇರೆ ಭಾಷೆಯೇ ಗೊತ್ತಿರಲಿಲ್ಲ. ಸಾಮಾನ್ಯವಾಗಿ ಮುಸ್ಲಿಮರ ಸಂವಹನದ ಪ್ರಮುಖ ಭಾಷೆ ಉರ್ದು. ಹೀಗಿದ್ದೂ ಆಕೆ ಉರ್ದು ಕಲಿಯುವ ಗೋಜಿಗೆ ಹೋಗಿರಲಿಲ್ಲ. ನನ್ನ ತಾಯಿಯನ್ನು ಅಕ್ಕ ಎಂದೇ ಸಂಬೋಧಿಸುತ್ತಿದ್ದ ಆಕೆಗೆ ಸಾಲಾಗಿ ಮೂರು ಹೆಣ್ಣುಮಕ್ಕಳಿದ್ದರೆ ನನ್ನ ತಾಯಿಗೆ ನಾವು ಮೂರು ಜನ ಗಂಡು ಮಕ್ಕಳು. ಹೆಣ್ಣುಮಕ್ಕಳಿಲ್ಲ ಎನ್ನುವ ನನ್ನ ತಾಯಿಯ ಕೊರಗನ್ನು ಹೀರಾಳ ಮಕ್ಕಳು ನೀಗಿಸಿದ್ದರೆ ಗಂಡು ಮಕ್ಕಳಿಲ್ಲ ಎನ್ನುವ ಹೀರಾಳ ಚಿಂತೆಯನ್ನು ನಾವು ದೂರಾಗಿಸಿದ್ದೇವು. ಒಂದು ಅನ್ಯೋನ್ಯತೆಯ ನಡುವೆ ಧರ್ಮ ಎಂದೂ ತಲೆ ಹಾಕಿರಲಿಲ್ಲ

         ನನ್ನೂರಿಗೆ ಅತೀ ಸಮೀಪದಲ್ಲಿರುವ ಕಲಬುರ್ಗಿಯಲ್ಲಿ ದರ್ಗಾವೊಂದಿದೆ. ದರ್ಗಾದ ಹೆಸರು ರಾಣೇಶಪೀರ ಎಂದು. ಅದು ರಾಣೇಶ ಮತ್ತು ಪೀರ ಎನ್ನುವ ಹಿಂದೂ ಮತ್ತು ಮುಸ್ಲಿಂ ಸ್ನೇಹಿತರಿಬ್ಬರ ಸಮಾಧಿ ಸ್ಥಳ. ದರ್ಗಾಕ್ಕೆ ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರೂ  ಭೇಟಿ ನೀಡುವರು. ಅದು ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿದೆ. ಪ್ರತಿವರ್ಷ ನಡೆಯುವ ಶರಣಬಸವೇಶ್ವರ ರಥೋತ್ಸವದಲ್ಲಿ ಹಿಂದುಗಳಂತೆ ಮುಸ್ಲಿಮರೂ ಪಾಲ್ಗೊಂಡು ಶರಣನ ದರ್ಶನ ಪಡೆದು ಕಾಣಿಕೆ ಸಮರ್ಪಿಸುವರು. ಅದೇ ರೀತಿ ಬಂದೇ ನವಾಜ್ ಉರುಸನಲ್ಲಿ ಪಾಲ್ಗೊಳ್ಳುವ ಹಿಂದೂ ಭಕ್ತರ ಸಂಖ್ಯೆಯೂ ಅಧಿಕ

        ಒಟ್ಟಿನಲ್ಲಿ ಇಂಥದ್ದೊಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಭಾವೈಕ್ಯತೆಯನ್ನು ಖಾಸಗಿಯಾಗಿ ನಾವುಗಳು ಕಟ್ಟಿಕೊಂಡಿದ್ದೆ ಹೊರತು ಇದನ್ನು ಸರ್ಕಾರವಾಗಲಿ ಇಲ್ಲವೇ ಯಾವ ರಾಜಕೀಯ ಪಕ್ಷವಾಗಲಿ ಕಟ್ಟಿದ್ದಲ್ಲ. ಆದರೆ ಕಾಲಾನಂತರದಲ್ಲಿ ಈ ಭಾವೈಕ್ಯತೆ ಕೆಲವರಿಗೆ ಸಹನೀಯವಾಗಲಿಲ್ಲ. ಪರಿಣಾಮವಾಗಿ ನಮ್ಮ ಹಿರಿಯರು ಶ್ರಮಪಟ್ಟು ಕಟ್ಟಿದ ಈ ಭಾವೈಕ್ಯತೆಯಲ್ಲಿ ಬಿರುಕು ಮೂಡಲಾರಂಭಿಸಿದ್ದಂತೂ ನಿಜ. 


ಕ್ರಿಕೆಟ್  ಭಾವೈಕ್ಯತೆಯನ್ನು  ಒಡೆಯಿತಾ?


        ಪಾಕಿಸ್ತಾನಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್  ನಮ್ಮ ಕಿರಣ್ ಮೋರೆ ಕಡೆ ಮುಖಮಾಡಿ ಆತನ ಎತ್ತರಕ್ಕೆ ಜಿಗಿದಾಗಲೇ ಅಲ್ಲಲ್ಲಿ  ಅಪಸ್ವರಗಳು ಕೇಳಿ ಬಂದವು. ಮಿಯಾಂದಾದ್ ನ  ಈ ವರ್ತನೆಯನ್ನು ಭಾರತದ ಕೆಲವು ಮುಸ್ಲಿಂ ಯುವಕರು ಸಮರ್ಥಿಸಿಕೊಂಡರೆನ್ನುವ ಅನುಮಾನ ಸದ್ದಿಲ್ಲದೇ ಹರಿದಾಡ ತೊಡಗಿತು. ಈ ಕ್ರಿಕೆಟ್ ಆಟ ನಮ್ಮ ಭಾವೈಕ್ಯತೆಯ ನಡುವೆ ಬಿರುಕು ಮೂಡಿಸಬಹುದು ಎನ್ನುವ ಆತಂಕ ಕಾಡುತ್ತಿರುವ ಹೊತ್ತಿನಲ್ಲೇ ಮಿಯಾಂದಾದ್ ಕೊನೆಯ ಓವರ್ ನ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಪಾಕಿಸ್ತಾನವನ್ನು ಗೆಲ್ಲಿಸಿದ. ಆ ಗೆಲುವಿನಿಂದ ಖುಷಿಗೊಂಡ ಮುಸ್ಲಿಂ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರೆಂಬ ಮಾತುಗಳು ಕೇಳಿ ಬಂದವು. ಭಾರತದ ಸೋಲಿನಿಂದ ಕಂಗೆಟ್ಟಿದ್ದ ಹಿಂದೂ ಹುಡುಗರಿಗೆ ಆ ಮಾತುಗಳು ಗಾಯದ ಮೇಲೆ ಬರೆ ಎಳೆದಂತಾಯಿತು. ಈ ಕ್ರಿಕೆಟ್  ಆಟವನ್ನು ನಮ್ಮ ಯುವಪೀಳಿಗೆ ಅತಿಯಾಗಿ ಹಚ್ಚಿಕೊಂಡಿದೆ  ಎಂದು ನಮ್ಮ ಹಿರಿಯರು ಚಿಂತಿಸುತ್ತಿರುವ ಹೊತ್ತಿನಲ್ಲೇ ಅದೇ ಆಟ ಭಾರತದ ಹಿಂದೂ ಮತ್ತು ಮುಸ್ಲಿಂ ಯುವಕರ ನಡುವೆ ಗೆರೆ ಎಳೆದು ಬಿಟ್ಟಿತ್ತು.

            ನಂತರದ ದಿನಗಳಲ್ಲಿ ಕ್ರಿಕೆಟ್  ಭಾರತದ ಭಾವೈಕ್ಯತೆಯ ಮನಸ್ಸುಗಳನ್ನು ಒಡೆದು ನಮ್ಮಗಳ ನಡುವಣ ಕಂದಕವನ್ನು ಮತ್ತಷ್ಟು ವಿಸ್ತರಿಸುವಂತೆ ಮಾಡಿತು. ಇಲ್ಲಿ ನಮ್ಮ ನಮ್ಮ ಗ್ರಹಿಕೆಯೇ ತಪ್ಪು ಎಂದು ಅರ್ಥೈಸಬಹುದಾದರೂ ಅಂಥದ್ದೊಂದು ಗ್ರಹಿಕೆಯನ್ನು ಮೂಲೋಚ್ಚಾಟನೆ ಮಾಡುವಂಥ ಪ್ರಯತ್ನ ಇಲ್ಲಿ ನಡೆಯಲೇ ಇಲ್ಲ. ಬದಲಾಗಿ ನಮ್ಮ ಆ ಒಂದು ಗ್ರಹಿಕೆಯನ್ನೇ ಮೂಲವಾಗಿಸಿಕೊಂಡು ಮಾಧ್ಯಮಗಳು ಮತ್ತಷ್ಟು ತುಪ್ಪ ಸುರಿಯುತ್ತ ಹೋದರೆ ಕ್ರಿಕೆಟ್  ಮಂಡಳಿ ಅದನ್ನೇ ತನ್ನ ಲಾಭದ ಉದ್ದಿಮೆಗೆ ಉಪಯೋಗಿಸಿಕೊಂಡಿತು. ಭಾರತ ಮತ್ತು ಪಾಕಿಸ್ತಾನ ಈ ಎರಡು ರಾಷ್ಟ್ರಗಳ ನಡುವಣ ಕ್ರಿಕೆಟ್  ಆಟವನ್ನು ಮಾಧ್ಯಮಗಳು ಒಂದು ಯುದ್ಧ ಎನ್ನುವ ಅರ್ಥದಲ್ಲೇ ವರದಿ ಮಾಡಿದ್ದೆ ಹೆಚ್ಚು. ಕ್ರಿಕೆಟ್  ಮಂಡಳಿ ಸಹ ತನ್ನ ಖಜಾನೆಯನ್ನು ತುಂಬಿಸಿಕೊಳ್ಳಲು ಭಾರತದ ಹಿಂದೂ ಹಾಗೂ ಮುಸ್ಲಿಂ ಕ್ರಿಕೆಟ್  ಪ್ರೇಮಿಗಳ ಆ ಕ್ರೀಡೆಯೊಂದಿಗಿನ  ಭಾವನೆಗಳನ್ನೇ ಬಂಡವಾಳವಾಗಿಸಿಕೊಂಡು ಈ ಎರಡೂ ರಾಷ್ಟ್ರಗಳ ಆಟವನ್ನು ಸಂಘಟಿಸುತ್ತಲೇ ಹೋಯಿತು. ಅದಕ್ಕೆ ತಕ್ಕಂತೆ ಹಿಂದೂ ಯುವಕರುಗಳಿಗೆ ಆಫ್ರಿದಿ, ಶೋಯೆಬ್, ಅಜ್ಮಲ್ ಇವರುಗಳು ಕೇವಲ ಕ್ರೀಡಾಪಟುಗಳಾಗಿ ಕಾಣಿಸದೆ ಒಂದು ರೀತಿಯಲ್ಲಿ ಯುದ್ಧಕ್ಕೆ ದಂಡೆತ್ತಿ ಬಂದ ಶತ್ರುಗಳಂತೆ ಕಾಣಿಸತೊಡಗಿದರು. ಹಾಗೆಯೇ ನಮ್ಮ ಮುಸ್ಲಿಂ ಯುವಕರಿಗೆ ಸಚಿನ್, ಧೋನಿ, ಗಂಭೀರ್ ಎಂದಿಗೂ ಹಮಾರಾ ಕ್ರಿಕೆಟರ್ಸ್ ಆಗಲೇ ಇಲ್ಲ. ಈ ಕ್ರಿಕೆಟ್  ಆಟ ಹಿಂದೂ ಮತ್ತು ಮುಸ್ಲಿಂ ಮನಸ್ಸುಗಳನ್ನು ಬೆಸೆಯುವುದಕ್ಕಿಂತ ಬೇರ್ಪಡಿಸಿದ್ದೆ  ಹೆಚ್ಚು.

ಮತ್ತಷ್ಟು ಹೆಚ್ಚಿದ ಅಂತರ


             ೧೯೯೨ ರ ಆ ದಿನ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡುವುದರೊಂದಿಗೆ ಭಾರತದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂಪೂರ್ಣವಾಗಿ ಮುರಿದು ಬಿತ್ತು. ಆ ದಿನದ ಘಟನೆಯ ಕಪ್ಪು ನೆರಳು  ಕ್ಷಣಾರ್ಧದಲ್ಲಿ ಇಡೀ ರಾಷ್ಟ್ರವನ್ನು ವ್ಯಾಪಿಸಿತು. ನಗರಗಳನ್ನು ಮಾತ್ರವಲ್ಲದೆ ಹಳ್ಳಿ ಹಳ್ಳಿಗಳಿಗೂ ಅದರ ಬಿಸಿ ತಟ್ಟಿತು. ನಿನ್ನೆಯವರೆಗೂ ಅನ್ಯೋನ್ಯತೆಯಿಂದ ಬಾಳಿ ಬದುಕಿದವರು ಈಗ ಪರಸ್ಪರ ಅನುಮಾನದಿಂದ ನೋಡುವಂತಾಯಿತು. ಮುಸ್ಲಿಮರು ಹಿಂದೂಗಳ ಮನೆಗಳ ಮೇಲೂ ಹಿಂದೂಗಳು ಮುಸ್ಲಿಮರ ಮನೆಗಳ ಮೇಲೂ ದಾಳಿ ಮಾಡತೊಡಗಿದರು. ಕೊಲೆ,ಅತ್ಯಾಚಾರ, ಹೊಡೆದಾಟಗಳಾದವು. ಜನರು ಜೀವ ಕೈಯಲ್ಲಿ ಹಿಡಿದುಕೊಂಡು ರಾತ್ರಿಗಳನ್ನು ಕಳೆಯಬೇಕಾಯಿತು. ತಮ್ಮ ತಮ್ಮ ಧರ್ಮಿಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಿಗೆ ಅನೇಕ ಕುಟುಂಬಗಳು ವಲಸೆ ಹೋದವು.

          ಈ ಘಟನೆಯ ನಂತರ ಅದುವರೆಗೂ ಕೇವಲ ಯುವಕರಿಗೆ ಮಾತ್ರ ಸೀಮಿತವಾಗಿದ್ದ ದ್ವೇಷ ಅದು ಹಿರಿಯ ಮನಸ್ಸುಗಳಿಗೂ ವಿಸ್ತರಿಸಿತು. ಮಂದಿರ, ಮಸೀದಿಗಳಲ್ಲಿ ಚರ್ಚೆಯಾಗತೊಡಗಿದವು. ಅಲ್ಲಿಯವರೆಗೂ ಪ್ರಾರ್ಥನಾ ಸ್ಥಳಗಳಾಗಿದ್ದ ಮಂದಿರ ಮತ್ತು ಮಸಿದಿಗಳು ಕೋಮುಗಲಭೆಯನ್ನು ಸೃಷ್ಟಿಸುವ ಕೇಂದ್ರಗಳಾಗಿ ರೂಪಾಂತರಗೊಂಡವು. ಹಣೆಗೆ ಕುಂಕುಮ ಧರಿಸುವವರೆಲ್ಲ ಅವರಿಗೆ ಪ್ರಬಲ ಕೋಮುವಾದಿಗಳಂತೆ ಕಾಣಿಸತೊಡಗಿದರೆ ತಲೆಗೆ ಹಸಿರು ಟೊಪ್ಪಿಗೆ ಧರಿಸಿ ಉದ್ದನೆಯ ಗಡ್ಡ ಬಿಟ್ಟವರೆಲ್ಲ ಇವರಿಗೆ ಭಯೋತ್ಪಾದಕರಂತೆ ರಾಷ್ಟ್ರದ್ರೋಹಿಗಳಂತೆ ಗೋಚರಿಸತೊಡಗಿದರು. ಸೇಡು, ಪ್ರತಿಕಾರ ಬೆಳೆಯುತ್ತ ಹೋಯಿತು. ಸರಣಿ ಬಾಂಬ್ ಸ್ಫೋಟಗಳಿಗೆ ನೂರಾರು ಅಮಾಯಕ ಜೀವಗಳು  ಬಲಿಯಾದವು. ಅನುಮಾನಗೊಂಡ ಮನಸ್ಸುಗಳನ್ನು ಇನ್ನಷ್ಟು ವ್ಯಗ್ರಗೊಳಿಸಲು ಅಲ್ಲಲ್ಲಿ ಅನ್ಯರಾಷ್ಟ್ರದ ಧ್ವಜ ಹಾರಾಡತೊಡಗಿತು. ಒಟ್ಟಿನಲ್ಲಿ ಕೋಮುಸೌಹಾರ್ದತೆ ಅಳಿದು ಬಹುದೊಡ್ಡ ಕಂದಕವೊಂದು ಸೃಷ್ಟಿಯಾಯಿತು.

ಒಡೆದು ಆಳುವ ನೀತಿ


           ನಮ್ಮದು ವೋಟ್ ಬ್ಯಾಂಕ್  ರಾಜಕಾರಣವಾಗಿರುವುದರಿಂದ ನಮ್ಮ ರಾಜಕೀಯ ನಾಯಕರುಗಳು ಈ ಒಡೆದು ಆಳುವ ನೀತಿಯನ್ನು ಪ್ರಜ್ಞಾಪೂರ್ವಕವಾಗಿಯೇ ಮೈಗೂಡಿಸಿಕೊಂಡಿರುವರು. ಧರ್ಮ ಧರ್ಮದ ನಡುವೆ ಜಾತಿ ಜಾತಿಯ ನಡುವೆ ಬಹುದೊಡ್ಡ ಕಂದಕವನ್ನು ಸೃಷ್ಟಿಸಿದಾಗಲೇ ರಾಜಕೀಯದಲ್ಲಿ ಯಶಸ್ಸು ಸಾಧ್ಯ ಎನ್ನುವ ಮನೋಭಾವ ಇವತ್ತಿನ ರಾಜಕಾರಣಿಗಳದು. ಅದಕ್ಕೆಂದೇ ಅವರು ಎಂದಿಗೂ ಎರಡು ಧರ್ಮಗಳಾಗಲಿ ಇಲ್ಲವೇ ಜಾತಿಗಳಾಗಲಿ ಒಂದುಗೂಡಲು ಬಿಡಲಾರರು.

          ಇವತ್ತಿನ ದಿನಗಳಲ್ಲಿ ರಾಜಕೀಯ ಪಕ್ಷವೊಂದರ ಅಸ್ತಿತ್ವ ಅದು ಯಾವ ಧರ್ಮ, ಜಾತಿಯನ್ನು ಓಲೈಸುತ್ತಿದೆ ಎನ್ನುವುದನ್ನು ಆಧರಿಸಿದೆ. ಪರಿಣಾಮವಾಗಿ ರಾಜಕೀಯ ಪಕ್ಷಗಳು ದೇಶದ ಅಭಿವೃದ್ಧಿಗಿಂತ ಧರ್ಮ ಮತ್ತು ಜಾತಿಗಳ ಓಲೈಕೆಗೆ ಒತ್ತು ನೀಡುತ್ತಿವೆ. ಇದಕ್ಕೆ ಪೂರಕವಾಗಿ ರಾಜಕೀಯ ಪಕ್ಷಗಳು ಧರ್ಮ ಗುರುಗಳ ಹಾಗೂ ಧರ್ಮಾಂಧರ ಕಪಿಮುಷ್ಟಿಗೆ ಸಿಲುಕಿ ನರಳುತ್ತಿವೆ. ಪಕ್ಷಗಳ ಪ್ರಣಾಳಿಕೆಗಳಲ್ಲಿ ಸಾರ್ವಜನಿಕ ಹಿತಾಸಕ್ತಿಗಿಂತಲೂ ಧಾರ್ಮಿಕ ಹಿತಾಸಕ್ತಿ ಮೇಲುಗೈ ಸಾಧಿಸುತ್ತಿದೆ. ಮಠ, ಮಸೀದಿ, ಮಂದಿರಗಳು ದೇಶದ ರಾಜಕೀಯ ಸ್ಥಿತಿಗತಿಯನ್ನು ನಿರ್ಧರಿಸುವ ಮಟ್ಟಕ್ಕೆ ಬೆಳೆದು ನಿಂತಿರುವುದರ ಹಿಂದೆ ವಿವಿಧ ಧರ್ಮಗಳು ನಿರಂತರವಾಗಿ ಕೆಲಸ ಮಾಡಿವೆ. 

           ಇಲ್ಲಿ ಎಲ್ಲ ರಾಜಕೀಯ ಪಕ್ಷಗಳು ಹಿಂದೂ ಮತ್ತು ಮುಸ್ಲಿಮರ ಧಾರ್ಮಿಕ ಉನ್ಮತ್ತತೆ ಹಾಗೂ ಪರಸ್ಪರರ ನಡುವಣ ಸಂಘರ್ಷವನ್ನು ತಮ್ಮ ರಾಜಕೀಯ ಏಳ್ಗೆಯ ಲಾಭಕ್ಕಾಗಿ ಬಳಸಿಕೊಂಡಿದ್ದೆ ಹೆಚ್ಚು. ಮಠ, ಮಸೀದಿ, ಮಂದಿರ, ಚರ್ಚ್ ಗಳಿಗೆ ಕೋಟ್ಯಾಂತರ ರೂಪಾಯಿಗಳ ಅನುದಾನ, ಹಜ್ ಯಾತ್ರಿಕರಿಗೆ ವಿಶೇಷ ಸಹಾಯಧನ ಹೀಗೆ ಪ್ಯಾಕೇಜ್ ಗಳ ಮೂಲಕ ತಮ್ಮ ತಮ್ಮ ರಾಜಕೀಯದ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಂಡರೆ ವಿನ: ಒಂದು ಕೋಮು ಸೌಹಾರ್ದ ವಾತಾವರಣವನ್ನು ನೆಲೆಗೊಳಿಸಲು ಅವರುಗಳು ಪ್ರಯತ್ನಿಸಲೇ ಇಲ್ಲ.

           ಬಹುಸಂಖ್ಯಾತ ಹಿಂದುಗಳಿರುವ ಪ್ರದೇಶಗಳಿಗೆ ಹಿಂದೂ ಅಭ್ಯರ್ಥಿಗಳನ್ನು ಹಾಗೂ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶಗಳಿಗೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಡೆಯನ್ನು ನಾವು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಎಂದಿನಿಂದಲೂ ನೋಡುತ್ತ ಬಂದಿದ್ದೇವೆ. ಯಾವಾಗ ಧರ್ಮವೊಂದು ರಾಜಕೀಯದ ಜೊತೆಗೆ ಗುರುತಿಸಿಕೊಳ್ಳಲಾರಂಭಿಸುತ್ತದೆಯೋ ಆಗ ರಾಜಕಾರಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೂಲೆಗುಂಪಾಗಿ ಧಾರ್ಮಿಕ ಓಲೈಕೆ ಪ್ರಬಲವಾಗುತ್ತ ಹೋಗುತ್ತದೆ. ಜೊತೆಗೆ ನಮ್ಮ ರಾಜಕಾರಣಿಗಳ ಇಂಥದ್ದೊಂದು ನಡೆ ಧರ್ಮ ಧರ್ಮದ ನಡುವೆ ಗೋಡೆಯನ್ನು ಕಟ್ಟಲಾರಂಭಿಸುತ್ತದೆ. ನಮ್ಮ ರಾಜಕಾರಣಿಗಳು ಇಲ್ಲಿ ಮಾಡಿದ್ದೂ ಇದನ್ನೇ. ಅವರೆಂದೂ ಭಾರತದ ಈ ಎರಡು ಬಲಿಷ್ಠ ಧರ್ಮಗಳ ನಡುವೆ  ಸೇತುವೆಯಾಗಲೇ ಇಲ್ಲ.

       ಜೊತೆಗೆ ಉಲ್ಲೇಖಿಸಲೇ ಬೇಕಾದ ಇನ್ನೊಂದು ಮಹತ್ವದ ಕಾರಣವೆಂದರೆ ಅದು ಬೆಳೆಯುತ್ತಿರುವ ನಗರೀಕರಣ. ಹಳ್ಳಿ ಪ್ರದೇಶಗಳಲ್ಲಿ ಧಾರ್ಮಿಕ ಆಚರಣೆ ಹೆಚ್ಚಿದ್ದರೂ ಅಲ್ಲಿ ಅತಿಯಾದ ಧರ್ಮಾಂದತೆಗೆ ಅವಕಾಶ ತೀರ ಕಡಿಮೆ. ಆದರೆ ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ನಗರಗಳಲ್ಲಿ ಮಾತ್ರ ನಾವು ಅತಿಯಾದ ಧರ್ಮಾಂದತೆಯನ್ನು ಕಾಣಬಹುದು. ಈ ಹಳ್ಳಿಗರು ನಗರ ಪ್ರದೇಶಗಳಿಗೆ ವಲಸೆ ಹೋಗಿ ಹಿಂತಿರುಗಿ ಬರುವಾಗ ತಮ್ಮ ಜೊತೆಯಲ್ಲಿ ಗ್ರಾಮಗಳಿಗೆ ಧರ್ಮಾಂದತೆಯನ್ನೂ ಬಳುವಳಿಯಾಗಿ ತಂದಿದ್ದು ಬಹುದೊಡ್ಡ ದುರಂತ.

ಇವತ್ತು ಏನಾಗಿದೆ?


              ನನ್ನೂರಿನ ಹಿರಿಯ ತಲೆಮಾರಿನವರೆಲ್ಲ ಈಗ ನೆನಪು ಮಾತ್ರ. ಅವರ ನಂತರದ ಪೀಳಿಗೆ ರಾಜಕಾರಣದ ಕಪಿಮುಷ್ಟಿಗೆ ಸಿಲುಕಿ ಕೋಮು ಸೌಹಾರ್ದತೆಯನ್ನೇ ಹೊಸಕಿ ಹಾಕಿದೆ. ಮೊಹರಂ, ರಂಜಾನ್, ದೀಪಾವಳಿ, ಹೋಳಿ ಹುಣ್ಣಿಮೆ ಹಬ್ಬಗಳು ತಮ್ಮ ಗತಕಾಲದ ವೈಭವವನ್ನು ಕಳೆದುಕೊಂಡಿವೆ. ಆಗೆಲ್ಲ ಕನ್ನಡ ಮಾತನಾಡುತ್ತಿದ್ದ ಮುಸ್ಲಿಂ ಕುಟುಂಬಗಳಲ್ಲಿ ಈಗ ಉರ್ದು ತನ್ನ ಪ್ರಾಬಲ್ಯವನ್ನು ಸ್ಥಾಪಿಸಿದೆ. ಕನ್ನಡ ಶಾಲೆಗಳಿಗೆ ಓದಲು ಬರುತ್ತಿದ್ದ ಮುಸ್ಲಿಂ ಮಕ್ಕಳ ಸಂಖ್ಯೆ ಕಡಿಮೆಯಾಗಿ ಅವರೆಲ್ಲ ಮದರಸಾಗಳಿಗೆ ಹೋಗುತ್ತಿರುವರು. ಕಲ್ಲು ಮಣ್ಣುಗಳಿಂದ ನಿರ್ಮಾಣಗೊಂಡಿದ್ದ ಗುಡಿ, ಮಸೀದಿಗಳಿಗೆ ನಮ್ಮ ರಾಜಕಾರಣಿಗಳ ಕೃಪೆಯಿಂದ ಅಮೃತಶಿಲೆಯ ಭಾಗ್ಯ ದೊರೆತಿದೆ. ರಾಣೇಶ ಮತ್ತು ಪೀರರನ್ನು ಭಕ್ತರು ತಮ್ಮ ತಮ್ಮ ಧರ್ಮಕ್ಕನುಗುಣವಾಗಿ ಹಂಚಿಕೊಂಡಿರುವರು. ಶರಣಬಸವನ ರಥೋತ್ಸವದಲ್ಲಿ ಮುಸ್ಲಿಂ ಭಕ್ತರು ಪಾಲ್ಗೊಳ್ಳುತ್ತಿಲ್ಲವಾದರೆ ಖಾಜಾ ಬಂದೇನವಾಜ್ ನ ದರ್ಗಾಕ್ಕೆ ಭೇಟಿ ನೀಡುವ ಹಿಂದೂ ಭಕ್ತರ ಸಂಖ್ಯೆ ಗಣನೀಯವಾಗಿ ಕುಸಿದಿದೆ.   ಒಂದೇ ಊರಿನಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರೂ ಎರಡು ಪ್ರತ್ಯೇಕ ದೇಶಗಳಲ್ಲಿ ಬದುಕುತ್ತಿರುವ ಮನಸ್ಥಿತಿ ಅಲ್ಲಿ ಮನೆ ಮಾಡಿದೆ. ಒಂದು ಕಾಲದಲ್ಲಿ ಸೌಹಾರ್ದತೆ, ಸಹಬಾಳ್ವೆಗೆ ಒತ್ತುಕೊಟ್ಟು ನಮ್ಮ ಹಿರಿಯರು ಬದುಕಿ ಬಾಳಿದ ಆ ನೆಲದಲ್ಲಿ ಇವತ್ತು ತೀರ ಧರ್ಮಾಂಧರಂತೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದಂತೆ ಬಾಳುತ್ತಿರುವರು. ನನ್ನೂರು ಎನ್ನುವುದು ಇಲ್ಲಿ ರೂಪಕ ಮಾತ್ರ. ಇದು ಇಡೀ ದೇಶಕ್ಕೆ ಅನ್ವಯವಾಗುವ ಚಿತ್ರಣ.

ಕೊನೆಯ ಮಾತು


            ಅಜ್ಮೀರ್ ದರ್ಗಾ ಭಾರತದ ಪುಣ್ಯಕ್ಷೇತ್ರಗಳಲ್ಲೊಂದು. ಈ ದರ್ಗಾಕ್ಕೆ ಕೆಲವು ತಿಂಗಳುಗಳ ಹಿಂದೆ ಪಾಕಿಸ್ತಾನದ ಪ್ರಧಾನಿ ಭೇಟಿನೀಡಿದಾಗ ವಾಡಿಕೆಯಂತೆ ದರ್ಗಾದ ದಿವಾನ್ ಅವರನ್ನು ಸ್ವಾಗತಿಸಬೇಕಿತ್ತು. ಆದರೆ ಹಾಗಾಗಲಿಲ್ಲ. ಏಕೆಂದರೆ ಅಜ್ಮೀರ್ ದರ್ಗಾದ ದಿವಾನರು ಪಾಕಿಸ್ತಾನದ ಪ್ರಧಾನಿಯನ್ನು ಸ್ವಾಗತಿಸಲು ನಿರಾಕರಿಸಿ ಗೈರುಹಾಜರಾದರು. ಒಂದು ವೇಳೆ ಪಾಕಿಸ್ತಾನದ ಪ್ರಧಾನಿಯನ್ನು  ಸ್ವಾಗತಿಸಲೇ ಬೇಕೆನ್ನುವುದಾದರೆ ಆ ರಾಷ್ಟ್ರ ಮೊದಲು ಭಾರತೀಯ ಸೈನಿಕರ ಮೇಲೆ ಮಾಡುತ್ತಿರುವ ಮೋಸದ ಆಕ್ರಮಣವನ್ನು ನಿಲ್ಲಿಸಬೇಕು ಹಾಗೂ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ರಕ್ಷಣೆ ನೀಡಬೇಕೆಂದು ಷರತ್ತು ವಿಧಿಸಿದರು. ಇದು ಧರ್ಮವನ್ನೂ ಮೀರಿದ ರಾಷ್ಟ್ರೀಯತೆ. ಇಂಥದ್ದೊಂದು ರಾಷ್ಟ್ರಪ್ರೇಮ ಪ್ರತಿಯೊಬ್ಬರಲ್ಲೂ ಮೂಡಿದಾಗಲೇ ಈ ಧರ್ಮಾಂಧತೆ ಅಳಿಯಲು ಸಾಧ್ಯ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ