Tuesday, March 2, 2021

ಪುರುಕಾಕಾ (ಕಥೆ)

     



(೧೧.೦೨.೨೦೨೧ ರ 'ತರಂಗ' ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ)

  ‘ಒಂದುವಾರ ಆಯ್ತು ನಿನ್ನ ಕಾಕಾ ಇಲ್ಲಿಂದ ಹೋಗಿ. ಹೋಗುವಾಗ ಊರಿಗೆ ಅಂತ ಹೇಳಿದ್ರು. ಹೋಗಿ ಮುಟ್ಟಿದ ತಕ್ಷಣ ಒಂದು ಫೋನ್  ಆದರೂ ಮಾಡೊವಷ್ಟು ಪುರುಸೊತ್ತಿಲ್ಲ ಅಂದ್ರ ಇಂಥವರಿಗಿ ಹೆಂಡತಿ, ಮಕ್ಕಳು, ಸಂಸಾರ ಅಂತಾದ್ರೂ ಯಾಕ್ಬೇಕು. ವಸುಮತಿ ಬಾಣಂತನ ಮುಗಿಸಿಕೊಂಡು ಗಂಡನ ಮನಿಗಿ ಹೊರಟು ನಿಂತಾಳ. ಇಂಥಾ ವ್ಯಾಳ್ಯಾದಾಗ ಅಪ್ಪ ಅನಿಸಿಕೊಂಡವರು ಇರಲಿಲ್ಲಂದ್ರ ಜನ ಏನು ತಿಳ್ಕೊತಾರ. ಜನದ ಮನಿ ಹಾಳಾಗ್ಲಿ ಬೀಗರ ಬಗ್ಗ್ಯಾದರೂ ವಿಚಾರ ಮಾಡ್ಬೇಕಲ್ಲ. ನಿನ್ನ ಕಾಕಾಗ ಜಲ್ದಿ ಕಳಿಸಿಕೊಡು’ ವತ್ಸಲಾಕಕ್ಕಿಯ ಮಾತು ಯಾವಾಗಲೂ ಹೀಗೆ ಭರ್ತ್ಸನೆಯಿಂದಲೆ ಕೂಡಿರುತ್ತದೆ ಎಂದೆನಿಸಿದರೂ ಶ್ರೀಧರನಿಗೆ ಪುರುಕಾಕಾನದೆ ಚಿಂತೆ ಕಾಡಲಾರಂಭಿಸಿತು. ಕಾಕಾ ಇಲ್ಲಿಂದ ಹೋಗಿ ಇವತ್ತಿಗೆ ನಾಲ್ಕು ದಿನಗಳಾದವು. ಇನ್ನೂ ಮನೆಗೆ ಹೋಗಿಲ್ಲ ಅಂದರೆ ಎಲ್ಲಿ ಹೋಗಿರಬಹುದು ಎನ್ನುವ ಚಿಂತೆಯಿಂದ ಕ್ರಮೇಣ ಮನಸ್ಸಿನಲ್ಲಿ ಅಸ್ಪಷ್ಟವಾದ ಆಕೃತಿಯೊಂದು ಮೂಡಲಾರಂಭಿಸಿ ಹಲವು ಕ್ಷಣಗಳ ನಂತರ ಅದು ಸ್ಪಷ್ಟರೂಪ ತಾಳಿ ಕಣ್ಣೆದುರು ಗೋಚರಿಸಲಾರಂಭಿಸಿದಾಗ ಕುಳಿತಿದ್ದ ಶ್ರೀಧರ ಧಗ್ಗನೆ ಎದ್ದು ಪಡಸಾಲೆಯಿಂದ ಅಂಗಳಕ್ಕೆ ಬಂದು ಶ್ರೀಹರಿಯ ಮನೆಯತ್ತ ಹೆಜ್ಜೆ ಹಾಕತೊಡಗಿದ. 

ಪುರುಷೋತ್ತಮ ನಾರಾಯಣರಾವ್ ಮಳಖೇಡಕರ್ ಯಾನೆ ಪುರುಕಾಕಾ ಶ್ರೀಧರನಿಗೆ ವರಸೆಯಲ್ಲಿ ಚಿಕ್ಕಪ್ಪನಾಗಬೇಕು. ಶ್ರೀಧರನ ಅಜ್ಜ ಮತ್ತು ಪುರುಕಾಕಾನ ಅಪ್ಪ ಖಾಸಾ ಅಣ್ಣತಮ್ಮಂದಿರು. ಪುರುಕಾಕಾನ ಅಜ್ಜ ಶೇಷಗಿರಿರಾವ್ ಈ ಮನೆತನದ ಮೂಲ ವ್ಯಕ್ತಿ. ಮಳಖೇಡದಿಂದ ಇಲ್ಲಿಗೆ ವಲಸೆ ಬಂದವರಂತೆ. ಹಾಗೆಂದೆ ಬಿಟ್ಟುಬಂದ ಊರಿನ ಹೆಸರಿನಿಂದಲೇ ಅವರನ್ನು ಇಲ್ಲಿನವರು ಕರೆಯುತ್ತಿದ್ದುದ್ದರಿಂದ ಮಳಖೇಡಕರ್ ಎನ್ನುವ ಹೆಸರು ಮನೆತನದ ಶಾಶ್ವತ ಹೆಸರಾಗಿ ಉಳಿದುಕೊಂಡಿತೆಂದು ಪುರುಕಾಕಾನೇ ಆಗಾಗ ಹೇಳುತ್ತಿದ್ದ ನೆನಪು ಶ್ರೀಧರನಿಗಿದೆ. ಪೌರೋಹಿತ್ಯ, ಗುಡಿಯ ಪೂಜೆ ಜೊತೆಗೆ ಬಳುವಳಿಯಾಗಿ ಬಂದ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದ ಕುಟುಂಬದಲ್ಲಿ ಕಾಲೇಜು ಮೆಟ್ಟಿಲು ಹತ್ತಿದ್ದು ಪುರುಕಾಕಾ ಒಬ್ಬರೆ ಎನ್ನುವುದು ಆ ಮನೆತನದ ಎಲ್ಲರಿಗೂ ಇವತ್ತಿಗೂ ಗೌರವ ಮತ್ತು ಹೆಮ್ಮೆ ಇದೆ. ದಾಯಾದಿಗಳೆಂಬ ಬೇಧವಿಲ್ಲದೆ ನನ್ನನ್ನು ಮತ್ತು ಶ್ರೀಹರಿಯನ್ನು ಪಟ್ಟಣದ ತಮ್ಮ ಮನೆಯಲ್ಲಿಟ್ಟುಕೊಂಡು ಶಾಲೆಗೆ ಸೇರಿಸಿದರೂ ನಮ್ಮಿಬ್ಬರಿಗೂ ವಿದ್ಯೆ ತಲೆಗೆ ಹತ್ತದೆ ಪೌರೋಹಿತ್ಯ, ವ್ಯವಸಾಯವೆಂದು ಊರನ್ನೇ ನೆಚ್ಚಿಕೊಂಡಿದ್ದು ತಪ್ಪಾಯ್ತೇನೋ ಎಂದು ಈಗೀಗ ಶ್ರೀಧರನಿಗೆ ಅನಿಸುವುದಿದೆ. ಊರು ಈಗ ಮೊದಲಿನಂತಿಲ್ಲ. ಕುಟುಂಬಗಳು ಪಟ್ಟಣಕ್ಕೆ ವಲಸೆ ಹೋಗಿರುವುದರಿಂದ ಊರು ಅರ್ಧಕ್ಕರ್ಧ ಖಾಲಿಯಾಗಿದೆ. ಕೂಲಿಗೆ ಆಳುಗಳು ಸಿಗದೆ ವ್ಯವಸಾಯದಿಂದ ಬರುತ್ತಿರುವ ಆದಾಯ ಶಾಕಾಯ ಲವಣಾಯ ಎನ್ನುವಂತಾಗಿದೆ. ಪೌರೋಹಿತ್ಯವನ್ನೇ ನಂಬಿಕೊಂಡು ಕೂಡುವಂತಿಲ್ಲ. ವತ್ಸಲಾ ಕಕ್ಕಿಗೆ ನಮ್ಮಿಬ್ಬರನ್ನೂ ಮನೆಯಲ್ಲಿಟ್ಟುಕೊಂಡು ಓದಿಸುವುದು ಹೊರೆಯ ಸಂಗತಿಯೆನಿಸಿದರೂ ಪುರುಕಾಕಾನಿಗೆ ಎದುರು ಹೇಳುವ ಧೈರ್ಯಸಾಲದೆ ನುಂಗಿಕೊಂಡಿದ್ದರು. ಅವರ ಮನೆಯಲ್ಲಿದ್ದ ಆ ಮೂರು ವರ್ಷಗಳ ಕಾರಣದಿಂದ ಪುರುಕಾಕಾನೊಂದಿಗೆ ನಮ್ಮಿಬ್ಬರ ಒಡನಾಟ ಮತ್ತಷ್ಟು ಆಪ್ತವಾಯಿತು ಎನ್ನುವ ನೆನಪು ಮನಸ್ಸನ್ನು ತುಂಬಿ ಶ್ರೀಧರನ ಕಣ್ಣುಗಳು ಒದ್ದೆಯಾದವು. 

ಶ್ರೀಧರ ಗೇಟು ತೆರೆದು ಮನೆಯ ಅಂಗಳದಲ್ಲಿ ಕಾಲಿಡುವ ಹೊತ್ತಿಗಾಗಲೇ ಶ್ರೀಹರಿ ಅದೇ ಆಗ ಜಳಕ ಮಾಡಿ ಅಂಗಳದಲ್ಲಿ ನಿಂತು ಸೂರ್ಯ ನಮಸ್ಕಾರ ಮಾಡುತ್ತಿದ್ದ. ಈ ವೇಳೆಯಲ್ಲಿ ಅಣ್ಣನ ಆಗಮನ ಅನಿರೀಕ್ಷಿತವೆನಿಸಿದರೂ ಅಣ್ಣ ಯಾವುದೋ ಗಹನವಾದ ವಿಷಯವನ್ನು ನನ್ನೊಡನೆ ಮಾತನಾಡಲು ಬಂದಿರುವನೆಂದು ಅವನು ಊಹಿಸಿದ. ಶ್ರೀಹರಿಯ ಊಹೆ ನಿಜ ಎನ್ನುವಂತೆ ಇನ್ನು ಅಂಗಳದಲ್ಲಿ ಇರುವಾಗಲೇ ‘ನೋಡೋ ಶ್ರೀಹರಿ ಇದೇ ಈಗ ಕೆಲವು ಕ್ಷಣಗಳ ಹಿಂದೆ ವತ್ಸಲಾ ಕಕ್ಕಿ ಫೆÇೀನ್ ಮಾಡಿದ್ದರು. ಪುರುಕಾಕಾ ಇನ್ನೂ ಮನೆಗೇ ಬಂದಿಲ್ಲಂತ ಇನ್ನು ಏನೇನೋ ತಗಾದೆಯ ಮಾತಾಡಿದರು. ಅಲ್ಲ ಇಲ್ಲಿಂದ ಹೋಗಿ ನಾಲ್ಕು ದಿನಗಳಾಯ್ತು ಕಾಕಾ ಎಲ್ಲಿ ಹೋಗಿರ್ಬಹುದು ಅನ್ನೊದೇ ತಿಳಿವಲ್ದು. ಹೋಗುವಾಗ ಎಲ್ಲಿಗಿ ಹೋಗ್ತಿನಂತ ನಿನಗೇನಾದ್ರೂ ಹೇಳಿ ಹೋಗ್ಯಾರೇನು’ ಶ್ರೀಧರ ದೊಡ್ಡ ಧ್ವನಿಯಲ್ಲಿ ಹೇಳಿದ ಮಾತು ಕೇಳಿ ಶ್ರೀಹರಿಗೆ ಪರಿಸ್ಥಿತಿಯನ್ನು ಅರಿಯಲು ಕೆಲವು ಕ್ಷಣಗಳೇ ಹಿಡಿದವು. ಮೂರುದಿನಗಳ ಕಾಲ ತಮ್ಮೊಂದಿಗಿದ್ದು ಆಪ್ತತೆಯ ಭಾವವನ್ನು ಉಣಿಸಿ ಹೋದ ಜೀವ ಈಗ ಎಲ್ಲೋ ದಿಕ್ಕಿಲ್ಲದೆ ಅಲೆದಾಡುತ್ತಿದೆ ಎನ್ನುವ ಸಂಗತಿಯೇ ಅವರಿಬ್ಬರ ಕಳವಳಕ್ಕೆ ಕಾರಣವಾಗಿ ಮುಂದಿನ ಕೆಲವು ಕ್ಷಣಗಳ ಕಾಲ ತಾವು ಹುಟ್ಟಿನಿಂದಲೇ ಮಾತು ಬರದವರೇನೋ ಎನ್ನುವಂತೆ ಮೌನವಾಗಿ ಒಬ್ಬರನ್ನೊಬ್ಬರು ನೋಡುತ್ತ ನಿಂತರು.

‘ನಾನು ಎಷ್ಟು ಬ್ಯಾಡಾ ಅಂತ ಬಡ್ಕೊಂಡರು ಕಾಕಾ ಕೇಳಲಿಲ್ಲ. ತಮ್ಮದೆ ಹಟ ಸಾಧಿಸಿದರು. ನನ್ನಂಥ ಹುಂಬ ಮನಸ್ಸಿನವರಿಗೆ ಆಕಿ ದ್ವೇಷದ ಮಾತು ತಡಕೊಳ್ಳಲಿಕ್ಕಿ ಆಗಲ್ಲ. ಅಂಥದ್ದರಾಗ ಕಾಕಾನಂಥ ಮೃದು ಮನಸ್ಸಿನವರಿಗಿ ಎಷ್ಟು ಸಂಕಟ ಆಗಿರ್ಲಿಕ್ಕಿಲ್ಲ’ ಶ್ರೀಹರಿಯೆ ಮೌನ ಮುರಿದು ಮಾತಿಗೆ ಶುರುವಿಟ್ಟ. ತಮ್ಮನ ಮಾತಿನಿಂದ ಶ್ರೀಧರನಿಗೆ ಎಲ್ಲವೂ ಅರ್ಥವಾಯಿತು. ‘ಖೋಡಿ ಮುದಿಕಿ ಜೀವನ ಪೂರ್ತಿ ದ್ವೇಷ ಮಾಡ್ಕೊತೆ ಬಂತು. ಒಳ್ಳೆಯವರ್ಯಾರು ಕೆಟ್ಟವರ್ಯಾರು ಅಂತ ಈ ವಯಸ್ಸಿನ್ಯಾಗೂ ತಿಳಿವಲ್ದು ಅಂದ್ರ ಆಕೀನ ಹ್ಯಾಂಗರೆ ಮನುಷ್ಯರ ಜಾತಿಗಿ ಸೇರಿದವಳು ಅಂತ ಅನ್ಬೇಕು’ ಶ್ರೀಧರ ಸ್ವಗತದಲ್ಲೆಂಬಂತೆ ಆಡಿದರೂ ಅವನಾಡಿದ ಮಾತುಗಳು ಅಲ್ಲೇ ಸಮೀಪದಲ್ಲಿ ನಿಂತಿದ್ದ ಶ್ರೀಹರಿಗೂ ಕೇಳಿಸದೆ ಉಳಿಯಲಿಲ್ಲ. ‘ಆವತ್ತು ಕಾಕಾಗ ನಾ ಹೇಳದೆ ಹೋಗೋದು ಬ್ಯಾಡಾಂತ. ಯಾಕಂದರ ಆ ಮುದುಕಿ ನಮ್ಮನ್ನ ಮೊದಲಿನಿಂದಲೂ ದಾಯಾದಿಗಳಂತ ದ್ವೇಷಿಸ್ತಾನೆ ಬಂತು. ಆದರ ಕಾಕಾ ಏನಂದ ಗೊತ್ತದಾಯೇನು ಅಲ್ಲೋ ಶ್ರೀಹರಿ ಸಾಯೋ ಹೊತ್ತನ್ಯಾಗ ಏನು ಒಯ್ತಿವಿ. ಈ ಜಗಳ, ದ್ವೇಷ ಎಲ್ಲ ಬದುಕಿರೊತನಕ ನೋಡು. ಸತ್ತಮ್ಯಾಲ ಎಲ್ಲರೂ ಖಾಲಿಕೈಲೇ ಹೋಗ್ಬೇಕು. ಕಾಕಾನ ಮಾತು ಕೇಳಿ ಅವರನ್ನ ತಡಿಬೇಕು ಅಂತ ನನಗ ಅನಿಸಲಿಲ್ಲ. ಕಾಕಾನ ನೋಡಿದ್ದೆ ಸಕ್ಕುಕಕ್ಕಿ ಅವತಾರ ನೋಡ್ಬೇಕಿತ್ತು. ಮೈದಾಗ ಸಿಂಪಿ ರಕ್ತಾಯಿಲ್ಲ ಎಲ್ಲಿ ಇತ್ತೋ ಶಕ್ತಿ ಎದ್ದು ಕೂತು ಬಾಯಿಗಿ ಬಂದಂಗ ಮಾತಾಡ್ಲಿಕತ್ಳು. ಆಕಿ ಗಂಡ, ಮಕ್ಳು ಸತ್ತಿದ್ದಕ್ಕೆಲ್ಲ ಪುರುಕಾಕಾ ಕಾರಣ ಅಂತ. ದಾಯಾದಿಗಳ ಆಸ್ತಿ ಹಿಸ್ಸೆ ಮಾಡುವಾಗ ನೌಕರದಾರರಿಗಿ, ಸ್ಥಿತಿವಂತರಿಗಿ ಹಿಸ್ಸೆ ಬ್ಯಾಡ. ಊರಲ್ಲೇ ಇದ್ದು ವ್ಯವಸಾಯ ಮಾಡೊರಿಗಿ ಮಾತ್ರ ಹಕ್ಕದಾ ಅಂತ ಕಾಕಾ ಹೇಳಿದ್ದಕ್ಕ ತನ್ನ ಮಕ್ಕಳಿಗಿ ಮಳಖೇಡಕರ್ ಮನೆತನದ ಆಸ್ತಿನಲ್ಲಿ ಪಾಲು ಸಿಗಲಿಲ್ಲ ನೀ ಉದ್ಧಾರ ಆಗಲ್ಲ ಅಂತ ಅಲ್ಲೆ ಅಂಗಳದಾಗಿದ್ದ ಮಣ್ಣು ತೊಗೊಂಡು ಕಾಕಾನ ಕಡಿ ತೂರಿದ್ಳು. ಕಾಕಾಗ ನೋಡ್ಬೇಕಿತ್ತು ಅಂಥ ಹೊತ್ತನ್ಯಾಗೂ ದೇವರು ನಿಂತಂಗ ನಿಂತಿದ್ರು. ಅವರೊಳಗಿನ ಸಂತತನ, ಆ ನಿರ್ಲಿಪ್ತತೆ ಬದುಕಿಡೀ ದ್ವೇಷ ಮಾಡ್ಕೋತ ಬಂದ ಸಕ್ಕುಕಕ್ಕಿಗಿ ಎಲ್ಲಿ ಅರ್ಥ ಆಗ್ಬೇಕು’ ಶ್ರೀಹರಿ ಅಣ್ಣನೆದುರು ಅಂದಿನ ಘಟನೆಯ ವಾಸ್ತವ ಬಿಚ್ಚಿಟ್ಟ.   

ಪುರುಕಾಕಾ ಇಲ್ಲಿಂದ ಹೋದಮೇಲೆ ಮನೆಗೆ ಹೋಗದೆ ಎಲ್ಲಿಯೋ ಹೋಗಿರುವುದಕ್ಕೂ ಸಕ್ಕುಕಕ್ಕಿಯ ಭೇಟಿಗೂ ನಡುವೆ ಇರಬಹುದಾದ ಸಂಬಂಧವನ್ನು ಶ್ರೀಧರನ ಮನಸ್ಸು ಲೆಕ್ಕಹಾಕತೊಡಗಿತು. ಒಂದೇ ಊರಲ್ಲಿದ್ದರೂ ಸಕ್ಕುಕಕ್ಕಿಯನ್ನು ಕೊನೆಯ ಸಲ ನೋಡಿದ್ದು ಅವಳ ಮಗ ವೆಂಕಟರಮಣ ತೀರಿಕೊಂಡಾಗ. ಅದಾಗಿ ಐದು ವರ್ಷಗಳಾದರು ಒಂದುಸಲವೂ ಅವಳ ಮನೆಗೆ ಹೋಗಿಲ್ಲ. ಹತ್ತು ವರ್ಷಗಳ ಹಿಂದೆ ಸುಬ್ಬರಾಯ ಕಾಕಾ ತೀರಿಕೊಂಡ ಮೇಲೆ ಸಕ್ಕುಕಕ್ಕಿಯ ದಾಯಾದಿ ಮತ್ಸರ ಮತ್ತಷ್ಟು ಬೆಳೆಯುತ್ತ ಕೊನೆಗೆ ಅದು ವೆಂಕಟರಮಣನನ್ನು ಬಲಿ ತೆಗೆದುಕೊಳ್ಳುವ ಹಂತಕ್ಕೆ ಹೋದದ್ದನ್ನು ಈಗ ನೆನಪಿಸಿಕೊಂಡಾಗ ಶ್ರೀಧರನ ಮನಸ್ಸಿಗೆ ಒಂದುತೆರನಾದ ಜಡತ್ವ ಆವರಿಸಿತು. ಎರಡು ತಲೆಮಾರುಗಳಾದರೂ ಹಿಸ್ಸೆ ಆಗದೇ ಉಳಿದಿದ್ದ ಆಸ್ತಿಯನ್ನು ಸಕ್ಕುಕಕ್ಕಿಯ ಕುಮ್ಮಕ್ಕಿನಿಂದಲೇ ಸುಬ್ಬರಾಯ ಕಾಕಾ ಪಾಲು ಕೇಳಲು ಮುಂದೆ ಬಂದಿದ್ದ. ವ್ಯವಸಾಯ ಮಾಡುತ್ತಿರುವವರಿಗೆ ಮಾತ್ರ ಆಸ್ತಿಯಲ್ಲಿ ಪಾಲು ಉಳಿದವರಿಗೆ ಇಲ್ಲ ಎಂದು ಪುರುಕಾಕಾ ಕಡ್ಡಿಮುರಿದಂತೆ ಹೇಳಿದ್ದರು. ಆಸ್ತಿಯೇನೂ ಪಿತ್ರಾರ್ಜಿತವಾಗಿ ಬಂದಿದ್ದಲ್ಲ. ಗುಡಿಯ ಪೌರೋಹಿತ್ಯದಿಂದ ಬಳುವಳಿಯಾಗಿ ಬಂದಿದ್ದ ಜಮೀನನನ್ನು ಸರ್ಕಾರ ಹಿಂದೆ ಪಡೆದ ಮೇಲೆ ಈಗಿರುವುದು ಪುರುಕಾಕಾ ದುಡಿದು ಖರೀದಿಸಿದ ಆಸ್ತಿ. ನ್ಯಾಯವಾಗಿ ನೋಡುವುದಾದರೆ ಮಳಖೇಡಕರ್ ಮನೆತನದ ಬೇರೆಯವರಿಗೆ ಆಸ್ತಿಯ ಮೇಲೆ ಹಕ್ಕೇ ಇರಲಿಲ್ಲ. ಮಳಖೇಡಕೇರ್ ಮನೆತನದಲ್ಲಿ ಹೆಚ್ಚು ಓದದೆ ಮನೆತನದ ಪೌರೋಹಿತ್ಯವನ್ನೇ ನಂಬಿ ಬದುಕುತ್ತಿರುವವರೆಂದರೆ ನಾನು ಮತ್ತು ಶ್ರೀಹರಿ ಮಾತ್ರ. ಅದಕ್ಕೆಂದೆ ಪುರುಕಾಕಾ ಖರೀದಿಸಿದ ಕೃಷಿ ಜಮೀನಿನಲ್ಲಿ ನಮ್ಮಿಬ್ಬರಿಗೂ ಸಮಪಾಲು ಮಾಡಿ ಕಾನೂನಿನ ರೀತಿ ನಮ್ಮಿಬ್ಬರ ಹೆಸರಿನಲ್ಲಿ ನೊಂದಾಯಿಸಿದ್ದರು. ವತ್ಸಲಾ ಕಕ್ಕಿಗೆ ಗೊತ್ತಾದರೆ ಎಲ್ಲಿ ತಗಾದೆ ತೆಗೆಯುವಳೊ ಎಂದು ಕಾಕಾ ಅಸಲಿ ವಿಷಯವನ್ನು ಅವರಿಂದ ಮುಚ್ಚಿಟ್ಟು ಅಪ್ಪ ಖರೀದಿಸಿದ್ದೆನ್ನುವಂತೆ ಬಿಂಬಿಸಿದ್ದರು. ಆದರೂ ಅದೆಷ್ಟೋ ದಿನಗಳ ಕಾಲ ಪುರುಕಾಕಾ ಬೆಳೆದದ್ದರಲ್ಲಿ ಎಲ್ಲರಿಗೂ ಸಮಪಾಲು ಹಂಚುತ್ತಿದ್ದರು. ಸಕ್ಕುಕಕ್ಕಿ ತಾನು ಜೀವಹಿಡಿದಿರುವುದೆ ಆಸ್ತಿಯಲ್ಲಿ ಪಾಲು ಪಡೆಯಲು ಎನ್ನುವಂತೆ ಬದುಕುತ್ತಿರುವುದನ್ನು ನೋಡುತ್ತಿದ್ದರೆ ತನಗೆ ಬದುಕಿನ ಮೇಲೇ ಜಿಗುಪ್ಸೆ ಹುಟ್ಟುತ್ತಿದೆ ಎಂದೆನಿಸಿತು ಶ್ರೀಧರನಿಗೆ. ಮಳಖೇಡಕರ್ ಮನೆತನದ ಆಸ್ತಿಯಲ್ಲಿ ಹಿಸ್ಸೆ ಮಾಡಿಸಿಯೇ ತಾನು ಸಾಯುವವಳು ಎಂದು ಸಕ್ಕುಕಕ್ಕಿ ಅವರಿವರ ಎದುರು ಹೇಳುತ್ತಿದ್ದ ಮಾತು ಶ್ರೀಧರನ ಕಿವಿಗೂ ತಲುಪಿ ಈಗ ಎರಡು ಮನೆತನಗಳ ನಡುವೆ ದ್ವೇಷದ ಗೋಡೆಯನ್ನೆಬ್ಬಿಸಿದೆ. ದ್ವೇಷಿಸುವುದಕ್ಕೆ ಆ ಮನೆಯಲ್ಲಿ ಒಂಟಿಗೂಬೆಯಂತೆ ಬದುಕುತ್ತಿರುವ ಕಕ್ಕಿಯನ್ನು ಬಿಟ್ಟರೆ ಬೇರೆ ಯಾರಿದ್ದಾರೆ. ವೆಂಕಟರಮಣ ಸತ್ತಾಗ ಹೆಣ ಎತ್ತುವುದಕ್ಕೂ ಗತಿ ಇರಲಿಲ್ಲ. ಪುರುಕಾಕಾ ಬರುವವರೆಗೆ ಯಾರೊಬ್ಬರೂ ಮನೆಯ ಅಂಗಳದಲ್ಲಿ ಕಾಲಿಟ್ಟಿರಲಿಲ್ಲ. ಪುರುಕಾಕಾ ಸೂತಕದ ಮನೆಯಲ್ಲೂ ಅದೆಂಥ ದ್ವೇಷ ಎಂದು ಎಲ್ಲರಿಗೂ ಬುದ್ಧಿ ಹೇಳಿ ತಾವೆ ಮುಂದೆ ನಿಂತು ಶವಸಂಸ್ಕಾರದಿಂದ ಹಿಡಿದು ವೈಕುಂಠದವರೆಗೆ ಎಷ್ಟೊಂದು ಮುತುವರ್ಜಿಯಿಂದ ನಿರ್ವಹಿಸಿದರು ಎಂದು ಈಗ ನೆನಪಾದರೆ ಮನದ ಭಾವದಲ್ಲಿ ಪುರುಕಾಕಾನ ಬಗ್ಗೆ ಅಭಿಮಾನ ಇಮ್ಮಡಿಯಾಗುತ್ತದೆ. ಗಂಡು ಮಕ್ಕಳು ಗತಿಯಿಲ್ಲದ ಮನೆಯಲ್ಲಿ ವೆಂಕಟರಮಣನ ಹೆಣಕ್ಕೆ ಬೆಂಕಿ ಇಟ್ಟಿದ್ದು ಪುರುಕಾಕಾನೆ. ಆ ಹದಿಮೂರು ದಿನಗಳ ಖರ್ಚನ್ನೆಲ್ಲ ಸ್ವತ: ನೋಡಿಕೊಂಡು ಹೋಗುವ ದಿನ ವಯಸ್ಸಾಗಿದೆ ಒಬ್ಬರೆ ಮನೆಯಲ್ಲಿ ಹ್ಯಾಗ ಇರ್ತಿರಿ ನಂಜೊತೆ ಊರಿಗೆ ಬನ್ನಿ ಕೊನೆಗಾಲದಲ್ಲಿ ನಿಮ್ಮ ಸೇವೆ ಮಾಡಿದ ಪುಣ್ಯ ಆದರೂ ಸಿಕ್ಕುತ್ತೆ ಎಂದಾಗ ಇದೇ ಸಕ್ಕುಕಕ್ಕಿ ಮುಖ ನೋಡಬೇಕಾಗಿತ್ತು. ಮತ್ತೆ ಅದೇ ಹಟ, ಅದೇ ದ್ವೇಷ. ತಾನು ದ್ವೇಷಕ್ಕಾಗಿಯೇ ಬದುಕಿರುವವಳು ಎಂದು ತೋರಿಸಿಕೊಂಡಳು. ಪುರುಕಾಕಾನದು ಮಾತ್ರ ಅದೇ ಶಾಂತ, ಗಂಭೀರ, ನಿರ್ಲಿಪ್ತ ನಿಲುವು. ಊರಿಗೆ ಹೋಗುವಾಗ ಕುಳಿತವಳ ಹತ್ತಿರ ಹೋಗಿ ಪಾದ ಮುಟ್ಟಿ ಪಾದ ಮುಟ್ಟುವುದೇನು ತಮ್ಮ ತಲೆಯನ್ನೇ ಅವಳ ಪಾದಕ್ಕೆ ಹಚ್ಚಿ ನಮಸ್ಕರಿಸಿ ಎದ್ದುಬರುವಾಗಲಾದರೂ ಮುದುಕಿಯ ಮನಸ್ಸು ಒಂದಿಷ್ಟಾದರೂ ಕರಗಬೇಕಲ್ಲ. ಅವಳ ಮನಸ್ಸು ಅದೆಂಥ ಜಡವಾದದ್ದು ನೆನಪಿಸಿಕೊಂಡರೆ ಇವತ್ತಿಗೂ ಮೈಜುಮ್ಮೆಂದು ಮೈಮೇಲಿನ ರೋಮಗಳೆಲ್ಲ ಎದ್ದು ನಿಲ್ಲುತ್ತವೆ. ‘ತಡಮಾಡೋದು ಬ್ಯಾಡ ಶ್ರೀಹರಿ ಈಗಲೇ ಊರಿಗಿ ಹೋಗಿ ವತ್ಸಲಾಕಕ್ಕಿನ ನೋಡಿದರೆ ವಿಷಯ ಏನಂತ ತಿಳಿಬಹುದು’ ಶ್ರೀಧರನ ಮಾತಿಗೆ ಶ್ರೀಹರಿ ತಲೆಯಾಡಿಸಿ ಸಮ್ಮತಿ ಸೂಚಿಸಿದ.

●●●

‘ಮನಿಬಿಟ್ಟು ಎಂಟು ದಿವಸ ಆಯ್ತು. ಸ್ವಲ್ಪ ಆದರೂ ಸಂಸಾರದ ಚಿಂತಿ ಬ್ಯಾಡೇನು. ಇಂಥವರಿಗಿ ಹೆಂಡತಿ, ಮಕ್ಕಳು ಬ್ಯಾರೆ ಕೇಡು. ಇಂಥಲ್ಲಿ ಹೋಗ್ತೀನಿ ಅಂತ ಹೇಳಿ ಹೋಗೊದಕ್ಕೇನು ಧಾಡಿ. ಬರೀ ಪುಸ್ತಕ ಓದಿದರ ಶಾಣ್ಯಾ ಆಗಲ್ಲೊ ಶ್ರೀಧರ ಸಂಸಾರ ಅಂದರೇನು, ಹೆಂಡತಿ-ಮಕ್ಕಳನ್ನ ಹ್ಯಾಗ ನೋಡ್ಕೊಬೇಕು ಅಂತ ಬುದ್ಧಿ ಇರಬೇಕು. ಪ್ರಾಮಾಣಿಕತೆ, ಸರಳ ಜೀವನ ಬರೀ ಇದೇ ಆಯ್ತು. ಇಂಥದ್ದರಿಂದೆಲ್ಲ ಹೊಟ್ಟಿ ತುಂಬ್ತುದೇನು. ನನಗಂತೂ ಇವರಗೂಡ ಏಗದರೊಳಗ ಸಾಕು ಆಗಿ ಹೋಗ್ಯಾದ. ಇನ್ನೊಂದು ವರ್ಷದಾಗ ರಿಟೈರ್ಡ್ ಆಗ್ತಾರ ಇನ್ನೂ ತಲಿ ಮ್ಯಾಲ ಸ್ವಂತದ್ದು ಅಂತ ಒಂದು ಸೂರು ಇಲ್ಲ ನೋಡು. ಹೀಂಗ ಎಂಟೆಂಟು ದಿವಸ ನೌಕರಿ ಬಿಟ್ಟು ಕೂತರ ಮನಿಗಿ ಕಳಿಸ್ತಾರ. ಆಮ್ಯಾಲ ಹೊಟ್ಟಿಗೇನು ತಿಂತಾರ. ತಾವೇನೋ ಊರೂರು ತಿರಗ್ತಾರ ಇಲ್ಲಿ ಹೆಂಡತಿ, ಮಕ್ಕಳು ಏನು ತಿನ್ಬೇಕು. ಶ್ರೀಧರ ಈ ಸಲ ಛಂದ ಬುದ್ಧಿ ಹೇಳಿ ತಿಳಿಸಿ ಮನಿಗಿ ಕರಕೊಂಡು ಬಾ ನೋಡು’ ವತ್ಸಲಾಕಕ್ಕಿ ಮಾತುಗಳಲ್ಲಿ ಕಾಕಾನ ಕುರಿತು ಕಾಳಜಿಗಿಂತ ಅವಳ ಮತ್ತು ಮಕ್ಕಳ ಬದುಕೇ ದೊಡ್ಡದಾಗಿ ಕಾಣಿಸಿ ಶ್ರೀಧರನಲ್ಲಿ ಅವ್ಯಕ್ತ ಸಂಕಟದ ಅನುಭವವೊಂದು ಹುಟ್ಟಿ ಅದು ಕ್ರಮೇಣ ನರನಾಡಿಗಳನ್ನು ವ್ಯಾಪಿಸುತ್ತ ಇಡೀ ದೇಹ ಒಂದು ತೆರನಾದ ನೋವಿನಿಂದ ಬಳಲುತ್ತಿರುವಂತೆ ಭಾಸವಾದಾಗ ಅಲ್ಲಿ ಕುಳಿತು ಕೊಳ್ಳುವುದು ಅಸಹನೀಯವೆನಿಸಿ ಧಗ್ಗನೆ ಎದ್ದು ಮನೆಯಿಂದ ಹೊರಬಂದು ಎದುರು ಕಾಣಿಸಿದ ರಸ್ತೆಯಲ್ಲಿ ಬಿರುಸಿನಿಂದ ಹೆಜ್ಜೆಹಾಕತೊಡಗಿದ. ಹಿಂದೆಯೇ ಓಡಿ ಬಂದ ಶ್ರೀಹರಿ ಅಣ್ಣನನ್ನು ಕೂಡಿಕೊಂಡ. ಈಗ ಮಾತನಾಡುವುದರಿಂದ ಅದು ಮತ್ತಷ್ಟು ಸಂಕಟಕ್ಕೆ ದಾರಿಮಾಡಿ ಕೊಡುತ್ತದೆ ಎನ್ನುವ ಅರಿವು ಏಕಕಾಲಕ್ಕೆ ಇಬ್ಬರಲ್ಲೂ ಮೂಡಿದೆಯೇನೋ ಎನ್ನುವಂತೆ ಮೌನವಾಗಿ ನಡೆಯತೊಡಗಿದರು. ಸ್ವಲ್ಪದೂರ ನಡೆಯುವುದರಲ್ಲಿ ಬಳಲಿಕೆ ಕಾಣಿಸಿಕೊಂಡಂತಾಗಿ ಶ್ರೀಧರ ನೆರಳಿಗಾಗಿ ಸುತ್ತಲೂ ನೋಡಿದ. ಅಣ್ಣನ ಮನಸ್ಥಿಯನ್ನರಿತ ಶ್ರೀಹರಿ ಅಲ್ಲೇ ಸಮೀಪದಲ್ಲಿದ್ದ ಮಠದ ಆವರಣದೊಳಕ್ಕೆ ಅಣ್ಣನ ಕೈಹಿಡಿದು ನಡೆಸಿಕೊಂಡು ಕರೆದೊಯ್ದ. ‘ಜೊತಿಗಿ ಸಂಸಾರ ಮಾಡ್ಲಿಕತ್ತು ಇಷ್ಟು ವರ್ಷಗಳಾದರೂ ಕಕ್ಕಿ ಇನ್ನೂ ಕಾಕಾಗ ಅರ್ಥ ಮಾಡಿಕೊಂಡೆಯಿಲ್ಲ ಅಂದರ ಮನಸ್ಸಿಗಿ ಭಾಳ ಬ್ಯಾಸರ ಅನಿಸ್ತದ’ ಶ್ರೀಹರಿಯ ಧ್ವನಿಯಲ್ಲಿ ನೋವಿನ ಛಾಯೆಯಿತ್ತು. ‘ಇದೇನು ಹೊಸದೇನೋ ಶ್ರೀಹರಿ. ನಾವು ಸಣ್ಣವರಿದ್ದಾಗ ಕಾಕಾನ ಮನ್ಯಾಗ ನಡೆದ ಆ ಘಟನೆ ನೆನಪಿಸಿಕೊ. ಬಡತನದಲ್ಲಿ ಬೆಳೆದ ಕಾಕಾಗ ಉಣ್ಣೊ ಅನ್ನ ಅಂದರ ದೇವರ ಇದ್ದಂಗ. ತಾಟನ್ಯಾಗ ಒಂದು ಅಗಳ ಕೂಡ ಚೆಲ್ಲಬಾರದು. ಆ ದಿನ ಬಚ್ಚಲಿನಲ್ಲಿ ಪಾತ್ರಿದೊಳಗಿದ್ದ ಮುಸುರಿ ನೋಡಿ ಅದೆಲ್ಲಿ ಸಿಟ್ಟು ಇತ್ತೊ ಎಂದೂ ಜೋರು ಧ್ವನಿಲೆ ಮಾತಾಡದವರು ಕಕ್ಕಿಗಿ ಬೈದು ಬಿಟ್ರು. ಕಕ್ಕಿ ಬಚ್ಚಲದಾಂದ ಪಾತ್ರಿ ತಂದು ಹಾಲ್‍ನ್ಯಾಗ ಕೂತು ಮುಸುರಿ ಒಳಗಿಂದ ಅನ್ನ ತಿನ್ನೊದು ನೋಡಿ ಪುರುಕಾಕಾ ಬೆಚ್ಚಿ ಬಿದ್ದಿದ್ರು. ಅನ್ನ ಹಾಳಾಯ್ತು ಅನ್ನೊ ನೋವಿಗಿಂತ ಕಕ್ಕಿ ವರ್ತನೆ ಅವರಿಗಿ ಆಘಾತ ತಂದಿತ್ತು. ಮಾಡಿದ ತಪ್ಪಿಗಿ ಪ್ರಾಯಶ್ಚಿತ ಅಂತ ಮೂರು ದಿವಸ ಕಾಕಾ ಬರೀ ನೀರು ಕುಡಿದು ಇದ್ರು. ಈ ನೋವು, ಯಾತನೆಯಿಂದಲೆ ಕಾಕಾನ ವ್ಯಕ್ತಿತ್ವ ಎಷ್ಟೊಂದು ಕಳೆಗಟ್ಟಿದೆ ನೋಡು’ ಪುರುಕಾಕಾನ ನೆನಪಾಗಿ ಶ್ರೀಧರನ ಕಣ್ಣುಗಳು ತುಂಬಿಬಂದವು.  

ಪೂಜೆ ಮುಗಿಸಿ ಗರ್ಭ ಗುಡಿಯ ಬಾಗಿಲಿಗೆ ಬೀಗ ಹಾಕಿ ಹೊರಹೋಗುತ್ತಿದ್ದ ಅರ್ಚಕರು ಇವರಿಬ್ಬರನ್ನು ನೋಡಿ ಹತ್ತಿರ ಬಂದು ತೀರ್ಥ ಪ್ರಸಾದ ಕೊಟ್ಟು ಮಾತಿಗೆ ನಿಂತರು. ಪೂರ್ವಾಪರಗಳನ್ನೆಲ್ಲ ವಿಚಾರಿಸಿದಾಗ ಮಠದ ಹತ್ತಿರದಲ್ಲೇ ಇರುವ ಪುರುಷೋತ್ತಮರಾಯರ ಸಂಬಂಧಿಗಳೆಂದು ತಿಳಿದು ಅವರ ಮುಖದಲ್ಲಿ ಪ್ರಸನ್ನತೆ ಮೂಡಿತು. ಅರ್ಚಕರ ಮುಖದಲ್ಲಿ ಅರಳಿನಿಂತ ಪ್ರಸನ್ನ ಭಾವದಿಂದಲೇ ಪುರುಕಾಕನ ಬಗ್ಗೆ ಅವರಿಗಿರುವ ಗೌರವದ ಅರಿವಾಗಿ ಬೆಳಗ್ಗೆಯಿಂದ ಬಾಡಿಹೋದ ಶ್ರೀಧರನ ಮನಸ್ಸು ಕೂಡ ಅರಳಿಕೊಂಡಿತು. ಇಬ್ಬರಲ್ಲಿ ಯಾರಾದರೊಬ್ಬರು ಮಾತಿಗಿಳಿಯುವ ಮೊದಲೇ ಅರ್ಚಕರೆ ಮಾತಿಗೆ ಶುರುವಿಟ್ಟುಕೊಂಡರು. ‘ಪುರುಷೋತ್ತಮರಾಯರು ನನಗೆ ನೇರವಾಗಿ ಪರಿಚಿತರೆನಲ್ಲ. ಅವರ ಕುರಿತು ಸಾಕಷ್ಟು ಕೇಳಿದ್ದೀನಿ. ಪ್ರತಿದಿನ ಮಠದ ಎದುರಿಂದಲೇ ಅವರು ತಮ್ಮ ಕಚೇರಿಗೆ ಹೋಗ್ತಿದ್ದರು. ಒಂದುದಿನ ಕೂಡ ಮಠದೊಳಗೆ ಕಾಲಿಟ್ಟವರಲ್ಲ. ಹೊರಗಿನಿಂದಲೇ ಒಂದು ಕ್ಷಣ ನಿಂತು ಗರ್ಭಗುಡಿಯಲ್ಲಿರುವ ದೇವರ ಮೂರ್ತಿಗೆ ಕೈಮುಗಿದು ಹೋಗೋದನ್ನ ನಾನು ಎಷ್ಟೋ ಸಲ ನೋಡಿದ್ದೀನಿ. ದೇವರು, ಸಂಪ್ರದಾಯ ಈ ಕುರಿತು ಅವರಿಗೆ ಸ್ವಲ್ಪ ಒಲುವು ಕಡಿಮೆ ಅಂತ ಕೇಳಿಗೊತ್ತು. ತುಂಬಾ ಓದಿಕೊಂಡವರಂತೆ. ಕೆಲವು ಪುಸ್ತಕಗಳನ್ನು ಬರಿದಿದ್ದಾರಂತೆ. ಒಮ್ಮೆ ನಮ್ಮ ಮಠದಿಂದ ಅವರನ್ನು ಸನ್ಮಾನ ಮಾಡಬೇಕು ಅಂತ ನಿರ್ಧರಿಸಿ ನಾಲ್ಕಾರುಜನ ಜೊತೆಗೂಡಿ ಅವರಿಗೆ ತಿಳಿಸೊದಕ್ಕೆ ಹೋದಾಗ ತನಗೆ ಇದರಲ್ಲೆಲ್ಲ ಆಸಕ್ತಿ ಇಲ್ಲ ಅಂತ ನಯವಾಗಿ ನಿರಾಕರಿಸಿದರು. ಆ ನಿರಾಕರಣೆಯಲ್ಲೂ ಎಂಥ ಘನತೆ ಇತ್ತು ಅಂತೀರಿ. ಯಾವ ಆರೋಪ, ವ್ಯಂಗ್ಯ, ಸಿಟ್ಟು ಇಲ್ಲದೆ ಅವರು ನಿರಾಕರಿಸಿದ ರೀತಿ ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ. ಸಂಸಾರದ ಈ ಎಲ್ಲ ಬಂಧನಗಳ ನಡುವಿದ್ದೂ ಆ ಒಂದು ನಿರ್ಲಿಪ್ತತೆಯನ್ನು ಬೆಳೆಸಿಕೊಳ್ಳೊದಿದೆಯಲ್ಲ ಅದು ನಮ್ಮಂಥವರಿಂದ ಸಾಧ್ಯವಾಗುವಂಥದ್ದಲ್ಲ. ಪುರುಷೋತ್ತಮರಾಯರು ಅದನ್ನೆಲ್ಲ ಸಾಧಿಸಿದ್ದಾರೆ. ಹೆಸರಿಗೆ ತಕ್ಕಂತೆ ಅವರು ಪುರುಷೋತ್ತಮರೆ’ ಅರ್ಚಕರು ಮಾತನಾಡಿ ಮುಗಿಸಿದಾಗ ಯಾವ ಏರಿಳಿತಗಳಿಲ್ಲದೆ ಒಂದೇ ಲಯದಲ್ಲಿ ಹರಿಯುತ್ತಿರುವ ಅವರ ಧ್ವನಿಯಲ್ಲಿನ ಅಂತ:ಕರಣದಿಂದ ಶ್ರೀಧರ ಮತ್ತು ಶ್ರೀಹರಿಯ ಮನಸ್ಸು ತುಂಬಿ ಬಂದಿತು. ಅರ್ಚಕರನ್ನು ನಮಸ್ಕರಿಸಿ ಮಠದಿಂದ ಹೊರಬಂದ ಇಬ್ಬರೂ ಪುರುಷೋತ್ತಮರಾಯರು ಕೆಲಸ ಮಾಡುತ್ತಿದ್ದ ಕಚೇರಿಯತ್ತ ನಡೆಯತೊಡಗಿದರು.  

●●●

‘ಬನ್ನಿ ಆಫೀಸ್ ಎದುರುಗಡೆ ಪಾರ್ಕ್ ಇದೆ. ಈಗ ಅಲ್ಲಿ ಜನಸಂಚಾರ ಕೂಡ ಕಡಿಮೆ ಇರುತ್ತೆ. ಪುರುಷೋತ್ತಮರಾಯರ ಬಗ್ಗೆ ಮಾತನಾಡಬೇಕು ಅಂದರೆ ಶಾಂತವಾತಾವರಣದಲ್ಲೇ ಮನಸ್ಸು ಬಿಚ್ಚಿಕೊಳ್ಳುತ್ತೆ. ಅಲ್ಲೆ ಕುಳಿತು ಮಾತನಾಡಿದರಾಯ್ತು’ ಪುರುಷೋತ್ತಮರಾಯರೊಂದಿಗೆ ಒಂದೇ ಸೆಕ್ಷನ್‍ನಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜಪ್ಪ ಇಬ್ಬರನ್ನೂ ಕರೆದುಕೊಂಡು ಪಾರ್ಕ್‍ನ ಒಳ ಆವರಣವನ್ನು ಪ್ರವೇಶಿಸಿದರು. ಅವರು ಹೇಳಿದಂತೆ ಜನಸಂಚಾರವಿಲ್ಲದೆ ಅಲ್ಲಿನ ವಾತಾವರಣ ತುಂಬ ಪ್ರಶಾಂತವಾಗಿತ್ತು. ‘ಹೀಗೆ ಪುರುಷೋತ್ತಮರಾಯರು ಹೇಳದೆ ಕೇಳದೆ ಹೋದವರಲ್ಲ. ಇಪ್ಪತ್ತು ವರ್ಷಗಳಿಂದ ನನಗೂ ಅವರಿಗೂ ಪರಿಚಯ. ರಾಯರದು ಇಡೀ ಆಫೀಸಿನಲ್ಲೆ ತುಂಬ ಘನವಾದ ವ್ಯಕ್ತಿತ್ವ. ಸಂಬಳ ಬಿಟ್ಟು ಒಂದು ರೂಪಾಯಿಯನ್ನೂ ತೆಗೆದುಕೊಂಡವರಲ್ಲ. ಸಿಟ್ಟು, ದ್ವೇಷ, ವ್ಯಂಗ್ಯ ಈ ಎಲ್ಲ ಗುಣಗಳು ಈ ಮನುಷ್ಯನಿಗೆ ಪರಿಚಯವೇ ಇಲ್ಲವೇನೋ ಅನ್ನುವಷ್ಟು ರಾಯರು ತಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಂಡವರು. ಈ ಕೆಲಸದ ವಾತಾವರಣದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ತಾರತಮ್ಯ, ಮೇಲಾಧಿಕಾರಿಗಳ ಅಸಹಕಾರ, ತಮ್ಮ ತಮ್ಮ ಜನರನ್ನೇ ಆಯಕಟ್ಟಿನ ಜಾಗದಲ್ಲಿರುವಂತೆ ನೋಡಿಕೊಳ್ಳೊದು ಇದೆಲ್ಲ ನೋಡಿ ಅವರ ಮನಸ್ಸು ನೊಂದುಕೊಳ್ಳುತ್ತಿತ್ತು. ಹಾಗಂತ ಯಾರೆದರೂ ಹೇಳಿಕೊಂಡವರಲ್ಲ. ಎಲ್ಲವನ್ನೂ ನಗುನಗುತ್ತಲೆ ಸಹಿಸಿಕೊಳ್ಳುತ್ತಿದ್ದರು. ನನಗನಿಸುತ್ತೆ ಅವರೊಳಗೊಬ್ಬ ಅವಧೂತ ಇದ್ದಾನೆ ಅಂತ. ಈ ಸಾಹಿತ್ಯ ಓದೊದು, ಬರೆಯೊದು ಮಾಡುವುದರಿಂದ ಅವರಿಗೆಲ್ಲ ಇದು ಸಾಧ್ಯವಾಯ್ತೇನೋ ಅನಿಸುತ್ತೆ. ಈ ಹಣ, ಕೀರ್ತಿ, ಹೆಸರು ಇವುಗಳ ಹಿಂದೆ ಬೀಳುವ ಹಪಾಪಿತನ ಅವರಲ್ಲಿರಲಿಲ್ಲ. ಜವಾನನಿಂದ ಮೇಲಾಧಿಕಾರಿಗಳವರೆಗೆ ಎಲ್ಲರಿಗೂ ಗೌರವಕೊಡೊರು. ಅಧಿಕಾರದಲ್ಲಿರೊರನ್ನು ಓಲೈಸಬೇಕು, ಅಧಿಕಾರ ಇಲ್ಲದೆ ಇರೊರನ್ನು ಕಡೆಗಣಿಸೊದು ಇಂಥದ್ದನ್ನು ಎಂದೂ ಮಾಡಿದವರಲ್ಲ. ಇಡೀ ಬದುಕನ್ನು ಒಂದು ನಿರ್ಲಿಪ್ತತೆಯ ನೆಲೆಯಲ್ಲಿ ನೋಡಿದವರು ಅವರು. ಆ ಗುಣ ನಮಗೆಲ್ಲ ಬರೊದಿಲ್ಲ ಬಿಡಿ. ಒಂದು ವ್ಯವಸ್ಥೆಯೊಳಗಿದ್ದೂ ಆ ವವ್ಯಸ್ಥೆಯೊಂದಿಗೆ ಅಂತರವನ್ನು ಕಾಯ್ದುಕೊಳ್ಳೊಕೆ ಆ ಮನುಷ್ಯನಿಗೆ ಹೇಗೆ ಸಾಧ್ಯವಾಯ್ತು ಅನ್ನೊದು ಇವತ್ತಿಗೂ ನನಗೆ ಅದೊಂದು ಒಗಟಿನ ಸಂಗತಿ. ಅವರನ್ನು ನೋಡಿದಾಗಲೆಲ್ಲ ಭಕ್ತಿಯಿಂದ ಕೈಮುಗಿಬೇಕು ಅನಿಸುತ್ತೆ. ನಿಜಕ್ಕೂ ಪುರುಷೋತ್ತಮರಾಯರದು ಅಪರೂಪದ ವಿರಳ ವ್ಯಕ್ತಿತ್ವ. ನೋಡಿ ಈಗ ಒಂದು ಮೀಟಿಂಗ್ ಇದೆ. ನಾನು ಹೋಗಲೇಬೇಕು. ಬೇಕಾದರೆ ಸಂಜೆ ಭೇಟಿಯಾಗಿ ಇನ್ನಷ್ಟು ಮಾತಾಡಿದರಾಯ್ತು. ನೀವೇನೂ ಚಿಂತೆ ಮಾಡಬೇಡಿ. ರಾಯರಲ್ಲಿ ಬದುಕನ್ನು ಕೊನೆಗಾಣಿಸುವ ವಿಚಾರಕ್ಕೆ ಅವಕಾಶವೇ ಇಲ್ಲ. ಅವರದು ಯಾವತ್ತಿದ್ದರೂ ಬದುಕನ್ನು ತುಂಬ ಉಲ್ಲಾಸದಿಂದ ಅನುಭವಿಸುವ ಮನಸ್ಸು. ಜೀವಪ್ರೀತಿಯಿಂದ ಇರೋರು ಯಾರೂ ಜೀವವಿರೋಧಿಯಾಗಿರಲ್ಲ ಅಂತ ನಾನು ಭರವಸೆ ಕೊಡ್ತೀನಿ’ ಇಷ್ಟು ಹೇಳಿ ಬಸವರಾಜಪ್ಪ ಟೈಮಾಯಿತೆಂದು ಅವಸವಸರವಾಗಿ ಕಚೇರಿಯೊಳಗೆ ನಡೆದು ಹೋದರು. ಶ್ರೀಧರ ಮತ್ತು ಶ್ರೀಹರಿಗೆ ಮತ್ತೆ ಬಸವರಾಜಪ್ಪ ಅವರನ್ನು ಭೇಟಿ ಮಾಡುವ ಅವಶ್ಯಕತೆ ಕಾಣಿಸಲಿಲ್ಲ. ಪುರುಕಾಕನ ಘನವಾದ ವ್ಯಕ್ತಿತ್ವ ತಾವು ತಿಳಿದುಕೊಂಡಿದ್ದಕ್ಕಿಂತ ಹೆಚ್ಚೆ ಅವರೆದುರು ತೆರೆದುಕೊಂಡಿತ್ತು. ಪುರುಕಾಕನ ಬಗ್ಗೆ ಹೆಮ್ಮೆಯೂ ಅನಿಸಿತು. ಈಗ ಊರಿಗೆ ಹೊರಡುವುದೊಂದೆ ತಮ್ಮೆದುರಿರುವ ಏಕೈಕ ಮಾರ್ಗವೆಂದರಿತು ರೇಲ್ವೆ ಸ್ಟೇಷನ್ನಿನ ಹಾದಿಯನ್ನು ತುಳಿಯತೊಡಗಿದರು.

ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್ ಮೇಲಿದ್ದ ಸಿಮೆಂಟ್ ಬೆಂಚಿನ ಮೇಲೆ ಕುಳಿತಿದ್ದ ಶ್ರೀಧರ ಮತ್ತು ಶ್ರೀಹರಿಯ ಮನಸ್ಸಿನ ತುಂಬೆಲ್ಲ ಪುರುಕಾಕಾನೇ ತುಂಬಿಕೊಂಡಿದ್ದ. ವತ್ಸಲಾಕಕ್ಕಿಯ ಭರ್ತ್ಸನೆಯ ಮಾತುಗಳಿಂದ ನೊಂದ ಮನಸ್ಸುಗಳಿಗೆ ಮಠದ ಅರ್ಚಕರ ಮತ್ತು ಬಸವರಾಜಪ್ಪನವರ ಮಾತುಗಳು ಒಂದಿಷ್ಟು ಸಮಾಧಾನ ನೀಡಿದ್ದವು. ಶ್ರೀಧರನ ಮನಸ್ಸು ವತ್ಸಲಾಕಕ್ಕಿಯ ಕೋಪದ ಮಾತುಗಳಿಗೆ ಕಾರಣವನ್ನು ಹುಡುಕುವುದರಲ್ಲಿ ತೊಡಗಿತ್ತು. ನಾರಾಯಣಕಾಕಾ ತೀರಿಕೊಂಡ ಮೇಲೆ ಅಲ್ವೆ ಸಕ್ಕುಕಕ್ಕಿಯೊಳಗಿನ ದ್ವೇಷ ಮತ್ತಷ್ಟು ಹೆಚ್ಚಿದ್ದು. ಅದಕ್ಕೆಲ್ಲ ಕಕ್ಕಿಗೆ ದೊರೆತ ಆರ್ಥಿಕ ಸ್ವಾತಂತ್ರ್ಯ ಮತ್ತು ಪರಾವಲಂಬಿತನದಿಂದ ಹೊರಬಂದ ಮನೋಭಾವವೇ ಕಾರಣವಾಗಿರಬಹುದೆ?. ಹಬ್ಬ ಹರಿದಿನ, ಸಂಬಂಧಿಕರ ಮದುವೆ ಮುಂಜಿಗಳಲ್ಲೆಲ್ಲ ಎಲ್ಲರೂ ಒಂದೆಡೆ ಸೇರಿದಾಗ ಹೆಣ್ಣುಮಕ್ಕಳೆಲ್ಲ ಸಕ್ಕುಕಕ್ಕಿಯ ಆರ್ಥಿಕ ಸ್ವಾತಂತ್ರ್ಯದ ಕುರಿತೇ ಎಷ್ಟೊಂದು ಮಾತನಾಡಿಕೊಳ್ಳುವರು. ಸಕ್ಕುಕಕ್ಕಿಯಲ್ಲಿ ನಾರಾಯಣಕಾಕಾ ಬದುಕಿದ್ದಾಗಿನ ಹಿಂಜರಿತ ಈಗಿಲ್ಲ. ಕಾಸುಕಾಸಿಗೂ ಪರದಾಡುತ್ತಿದ್ದ ತನ್ನ ತವರು ಮನೆಯವರಿಗೆ ಹಣಕಾಸಿನ ನೆರವು ನೀಡುವಷ್ಟು ಸುಭದ್ರಳಾಗಿದ್ದಾಳೆ ಆಕೆ. ಸಕ್ಕುಕಕ್ಕಿಯನ್ನು ನೋಡಿದಾಗಲೆಲ್ಲ ತಮಗಿಲ್ಲದ ಆ ಒಂದು ಭಾಗ್ಯಕ್ಕಾಗಿ ಉಳಿದವರೆಲ್ಲ ಮಮ್ಮಲ ಮರುಗುತ್ತಿದ್ದರು. ಹಾಗಾದರೆ ವತ್ಸಲಾಕಕ್ಕಿಯಲ್ಲೂ... ಈ ವಿಷಯ ಮನಸ್ಸಿನಲ್ಲಿ ಹೊಳೆದದ್ದೆ ಅಂಥ ಚಳಿಯಲ್ಲೂ ಶ್ರೀಧರನ ಮೈ ಬೆವರೊಡೆಯಿತು. ಕಕ್ಕಿಗೂ ತಾನು ಸ್ವತಂತ್ರಳಾಗಬೇಕೆನಿಸಿ ಅವಳೂ ಪುರುಕಾಕಾನ ಸಾವನ್ನು ಬಯಸುತ್ತಿರಬಹುದೇ? ಸಕ್ಕುಕಕ್ಕಿಯ ಆರ್ಥಿಕ ಸ್ವಾತಂತ್ರ್ಯ ವತ್ಸಲಾಕಕ್ಕಿಗೆ ಪ್ರೇರಣೆಯಾಯಿತೆ? ಕಕ್ಕಿಯ ಮನೋಗತವನ್ನು ಪುರುಕಾಕಾ ಮನಗಂಡಿದ್ದರೆ? ವತ್ಸಲಾಕಕ್ಕಿಯ ಅಭಿಲಾಷೆಯನ್ನು ಈಡೇರಿಸುವುದಕ್ಕಾಗಿಯೇ ಪುರುಕಾಕಾ ದೂರ ಎಲ್ಲಿಯಾದರೂ ಹೋಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆ? ಪ್ರಶ್ನೆಯ ಮೇಲೆ ಪ್ರಶ್ನೆ ಹುಟ್ಟಿ ಕುಳಿತಲ್ಲೇ ಮೈ ಮತ್ತು ಮನಸ್ಸಿಗೆ ಕೂಡಿಯೇ ಜೋಮು ಹಿಡಿದ ಸ್ಥಿತಿ. ವಾಸ್ತವದ ಅರಿವು ಮತ್ತಷ್ಟು ಮನಸ್ಸಿನ ಆಳಕ್ಕೆ ಇಳಿಯುತ್ತಿದ್ದಂತೆ ಶ್ರೀಧರನ ಕಣ್ಣಿಗೆ ಕತ್ತಲಾವರಿಸಿ ಇಡೀ ರೈಲುನಿಲ್ದಾಣದ ತುಂಬ ಕತ್ತಲು ತುಂಬಿಕೊಂಡಂತಾಗಿ ತನಗೆ ಶಬ್ದದ ವಿನ: ಕಣ್ಣಿಗೆ ಏನೂ ಗೋಚರಿಸುತ್ತಿಲ್ಲ ಎಂದರಿವಾದದ್ದೆ  ಆಸರೆಗಾಗಿ ಕುಳಿತಿದ್ದ ಸಿಮೆಂಟ್ ಬೆಂಚನ್ನು  ತನ್ನ ಎರಡೂ ಕೈಗಳಿಂದ ಭದ್ರವಾಗಿ ಹಿಡಿದುಕೊಂಡ.

-ರಾಜಕುಮಾರ ಕುಲಕರ್ಣಿ