Thursday, November 3, 2016

ಮಾರ್ಕ್ಸ್ ವಾದಿಯೊಂದಿಗೆ ಮುಖಾಮುಖಿ




(ಶ್ರೀ ಬಿ.ವ್ಹಿ. ಮಠ ಅವರ ಅಭಿನಂದನಾ ಗ್ರಂಥಕ್ಕಾಗಿ ದಿನಾಂಕ ೨೪.೦೫.೨೦೧೫ ರಂದು ನಡೆಸಿದ ಸಂದರ್ಶನ) 


ಶ್ರೀ ಬಿ.ವಿ. ಮಠ ಅವರ ಸಾಧನೆಯ ಕ್ಷೇತ್ರದ ವ್ಯಾಪ್ತಿ ಬಹುದೊಡ್ಡದು. ಅವರು ಶಿಕ್ಷಕರಾಗಿ, ಪ್ರಾಂಶುಪಾಲರಾಗಿ, ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ, ಸಮಾಜವಾದಿಯಾಗಿ ಅನೇಕ ಸಾಧನೆಗಳನ್ನು ಮಾಡಿರುವರು. ಜೊತೆಗೆ ಅವರೊಬ್ಬ ಉತ್ತಮ ಓದುಗರು. ವೈಚಾರಿಕ ಚಿಂತನೆಯ ಗ್ರಂಥಗಳ ರಾಶಿಯೇ ಅವರ ಮನೆಯಲ್ಲಿದೆ. ಕಾರ್ಲ್ ಮಾರ್ಕ್ಸ್ ನನ್ನು ಓದಿಕೊಂಡಿರುವ ಶ್ರೀಯುತರು ಬಸವಣ್ಣ, ಅಕ್ಕಮಹಾದೇವಿ, ಲೋಹಿಯಾ ಇತ್ಯಾದಿ ಚಿಂತಕರ ಬರಹಗಳ ಓದಿನಲ್ಲೂ ಆಸಕ್ತರು. ಇತಿಹಾಸ, ಶಿಕ್ಷಣ ಶಾಸ್ತ್ರ, ಅರ್ಥಶಾಸ್ತ್ರ, ಇಂಗ್ಲಿಷ್ ಸಾಹಿತ್ಯದಲ್ಲಿನ ಮಹತ್ವದ ಕೃತಿಗಳನ್ನು ಓದಿಕೊಂಡಿರುವ ಶ್ರೀ ಬಿ. ವಿ. ಮಠ ಅವರು ಓದಿನ ಜೊತೆ ಜೊತೆಗೆ ಬರವಣಿಗೆಯಲ್ಲೂ ಕೃಷಿ ಮಾಡಿರುವರು. ಅವರು ತಮ್ಮ ಬರವಣಿಗೆಯನ್ನು ಮಾರ್ಕ್ಸ್ ವಾದದ ಹಿನ್ನೆಲೆಯಲ್ಲಿ ರೂಪಿಸಿಕೊಂಡಿದ್ದು ಬಹಳ ವಿಶಿಷ್ಠವಾದ ಬೆಳವಣಿಗೆಯನ್ನು ಎನ್ನಬಹುದು. ಅವರ ಲೇಖನಗಳಲ್ಲಿ ಸಮಾನತೆ, ವರ್ಗರಹಿತ ಸಮಾಜ, ಬಂಡವಾಳ ಶಾಹಿಯ ವಿರುದ್ಧದ ನಿಲುವು ಹೆಚ್ಚಿನ ಪ್ರಾಧಾನ್ಯತೆ ಪಡೆದಿವೆ. ಜೊತೆಗೆ ಮಾರ್ಕ್ಸ್ ವಾದದ ಹಿನ್ನೆಲೆಯುಳ್ಳ ಲೇಖಕರನ್ನು ಗುರುತಿಸಿ ಬೆಳೆಸಲು ಬಿ. ವ್ಹಿ. ಮಠ ಅವರು ತಾವು ಅಧ್ಯಕ್ಷರಾಗಿರುವ ಟ್ರಸ್ಟ್ ನಡಿ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದರು. ಅನೇಕ ಕೃತಿಗಳು ಅವರ ಪ್ರಕಾಶನ ಸಂಸ್ಥೆಯಿಂದ ಪ್ರಕಟವಾಗಿವೆ. ಮಹಾದೇವಿಯಕ್ಕನ ಮದುವೆ, ಕ್ರಾಂತಿದೂತ ಬಸವಣ್ಣ, ಬಸವಾದೀ ಪ್ರಮಥರ ಭಕ್ತ ಚಳವಳಿಯ ಭೌತಿಕವಾದೀ ಅಧ್ಯಯನಗಳು ಇತ್ಯಾದಿ ಪುಸ್ತಕಗಳು ಅವರ ಪ್ರಕಟಣೆಯ ಮಹತ್ವದ ಕೃತಿಗಳು. ೨೦೦೬ ರಲ್ಲಿ ಬಿ ವ್ಹಿ ಮಠ ಅವರು ತಮ್ಮ ಗೆಳೆಯರಾದ ಪಿ ಎಸ ಪಾಟೀಲರೊಂದಿಗೆ ಜೊತೆಗೂಡಿ ರಚಿಸಿ ಪ್ರಕಟಿಸಿರುವ 'ಮಹಾದೇವಿಯಕ್ಕನ ಮದುವೆ' ಅವರ ಮೆಚ್ಚಿನ ಪ್ರಕಟಣೆಗಳಲ್ಲೊಂದು. ಅಕ್ಕ ಮಹಾದೇವಿಯ ಮದುವೆಯನ್ನು ಮಾರ್ಕ್ಸ್ ವಾದದ ಹಿನ್ನೆಲೆಯಲ್ಲಿ ವಿಶ್ಲೇಷಿಸಿ ನೋಡುವ ಈ ಕೃತಿ ಕನ್ನಡದಲ್ಲಿ ಒಂದು ವಿನೂತನ ಪ್ರಯೋಗ ಎನ್ನುವ ಮನ್ನಣೆಗೆ ಪಾತ್ರವಾಗಿದೆ.
      ಶ್ರೀ ಬಿ ವ್ಹಿ ಮಠ ಅವರಿಗೀಗ ೯೦ ವರ್ಷ ವಯಸ್ಸು. ಶ್ರೀಯುತರನ್ನು ಸಂದರ್ಶಿಸಲು ಎದುರಿಗೆ ಕುಳಿತ ಘಳಿಗೆ ವಯೋಸಹಜ ಸಮಸ್ಯೆಯಿಂದ ನಿಖರವಾಗಿ ಮಾತನಾಡಲಾರರೆನೋ ಎನ್ನುವ ಆತಂಕ ನನ್ನದಾಗಿತ್ತು. ನನ್ನ ಆತಂಕವನ್ನು ಅರಿತವರಂತೆ ಕೇಳಿದ ಪ್ರಶ್ನೆಗಳಿಗೆಲ್ಲ  ಚುರುಕಾಗಿ ಮತ್ತು ಸ್ಪಷ್ಟವಾಗಿ ಪ್ರತಿಕ್ರಿಯಿಸುತ್ತ ಹೋದರು. ತಮ್ಮ ನೆನಪಿನ ಖಜಾನೆಯಿಂದ ಸರಕುಗಳನ್ನೆಲ್ಲ ಹೊರತೆಗೆದು ಮಾತನಾಡುತ್ತಿದ್ದರೆ ಕೆಲವೊಮ್ಮೆ  ಪ್ರಶ್ನೆ ಕೇಳಲು ನಾನೆ ತಡವರಿಸುವಂತಾಯಿತು. ಗತಕ್ಕೆ ಹೋಗಿ ಅಲ್ಲಿನ ನೆನಪುಗಳನ್ನು ಹೆಕ್ಕಿ ತಂದು ಒಂದೊಂದಾಗಿ ವಿವರಿಸುತ್ತಿದ್ದ ಅವರ ಆ ಭಂಗಿ ಹದಿಹರೆಯದವರನ್ನೂ ನಾಚಿಸುವಂತಿತ್ತು. ತುಂಬ ಮಾತನಾಡುವ ಲಹರಿಯಲ್ಲಿ ಅವರಿದ್ದರೂ ಶ್ರೀಯುತರಿಗೆ ದಣಿವಾಗಬಾರದೆನ್ನುವ ಕಾಳಜಿ ನನ್ನದಾಗಿತ್ತು. ಜೊತೆಗೆ ಮನಸ್ಸಿಗೆ ಅಹಿತವೆನ್ನಿಸುವ ಯಾವುದನ್ನೂ ಅವರಿಗೆ ಕೇಳಬಾರದೆನ್ನುವ ಎಚ್ಚರಿಕೆಯಿಂದಲೇ ನನ್ನ ಪ್ರಶ್ನೆಗಳನ್ನು ಸಮಾಜ, ಶಿಕ್ಷಣ, ಮಾರ್ಕ್ಸ್ ವಾದಕ್ಕೆ ಸೀಮಿತಗೊಳಿಸಿಕೊಂಡಿದ್ದರೂ ಅವರೊಂದಿಗಿನ ಸಂದರ್ಶನದಲ್ಲಿ ಅನೇಕ ವಿಷಯಗಳು ನುಸುಳಿದವು. ಒಟ್ಟಾರೆ ಅವರೊಂದಿಗಿನ ಮಾತುಕತೆಯಲ್ಲಿ ಒಂದು ಕಾಲದ ಇಡೀ ಸಾಮಾಜಿಕ ಬದುಕು ಕಣ್ಣೆದುರು ಹಾದು ಹೋಯಿತು.

* ನಮಸ್ಕಾರಗಳು ಸರ್ ತಮ್ಮ ಸಂದರ್ಶನಕ್ಕಾಗಿ ಬಂದಿದ್ದೇನೆ. ಇದನ್ನು ಮಾತುಕತೆ ಒಂದಿಷ್ಟು ಹರಟೆ ಎಂದರೂ ಅಡ್ಡಿಯಿಲ್ಲ ಕೆಲವು ಪ್ರಶ್ನೆ ಮತ್ತು ಅನುಮಾನಗಳಿವೆ ಉತ್ತರಿಸಿ

        ತಮಗೂ ನಮಸ್ಕಾರಗಳು. ಸಂದರ್ಶನದ ಚೌಕಟ್ಟಿಗೆ ಸೀಮಿತವಾಗಿ ಮಾತನಾಡದೆ ಮನಸ್ಸು ಬಿಚ್ಚಿ ಮಾತನಾಡಿ. ಚರ್ಚೆಯ ಮೂಲಕ ನಿಮ್ಮ ಪ್ರಶ್ನೆ ಅಥವಾ ಅನುಮಾನಗಳಿಗೆ ಒಂದಿಷ್ಟು ಉತ್ತರಗಳು ಸಿಗಬಹುದು.

* ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದವರು ನೀವು. ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭ ನಿಮಗೆ ೨೨ ವರ್ಷ ವಯಸ್ಸು. ಆ ಕಾಲಘಟ್ಟದ ಸ್ವಾತಂತ್ರ್ಯ ಹೋರಾಟವನ್ನು ಈಗ ಹೇಗೆ ನೆನಪಿಸಿಕೊಳ್ಳುವಿರಿ?

      ಆಗೆಲ್ಲ ಜನರು ಗಾಂಧಿಯವರಿಂದ ಪ್ರೇರಿತರಾಗಿ ಅವರನ್ನು ಅನುಕರಿಸುತ್ತಿದ್ದರು. ಆ ಸಂದರ್ಭ ನಾನು ಕಾಲೇಜು ವಿದ್ಯಾರ್ಥಿಯಾಗಿದ್ದೆ. ಅದೇ ಆಗ ಮಾರ್ಕ್ಸ್ ವಾದ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿತ್ತು. ಇಲ್ಲಿ ಒಂದು ಮಾತು ಹೇಳಲು ಬಯಸುತ್ತೇನೆ ಸ್ವಾತಂತ್ರ್ಯ ಹೋರಾಟದ ಆ ದಿನಗಳಲ್ಲಿ ನನಗೆ ಗಾಂಧೀಜಿ ಅವರ ಹೋರಾಟದ ರೀತಿ ಮತ್ತು ವಿಚಾರಗಳ ಕುರಿತು ಭಿನ್ನಾಭಿಪ್ರಾಯಗಳಿದ್ದವು. ಅವರ ಅಹಿಂಸಾತ್ಮಕ ಹೋರಾಟವನ್ನು ನಾನು ಇಷ್ಟ ಪಡುತ್ತಿರಲಿಲ್ಲ. ಬ್ರಿಟಿಷರನ್ನು ಅಹಿಂಸೆಯ ಮೂಲಕ ಭಾರತವನ್ನು ಬಿಟ್ಟು ತೊಲಗುವಂತೆ ಮಾಡುವುದು ಅಸಾಧ್ಯವಾದದ್ದು ಎನ್ನುವುದು ನನ್ನ ನಿಲುವಾಗಿತ್ತು. ಅವರನ್ನು ಹಿಂಸೆಯ ಮೂಲಕವೇ ಹೊರದಬ್ಬುವ ಪ್ರಯತ್ನವಾಗಬೇಕು ಎನ್ನುವ ಅಭಿಪ್ರಾಯಕ್ಕೆ ನಾನು ಬದ್ದನಾಗಿದ್ದೆ. ಬದಲಾವಣೆ ಮತ್ತು ಬೆಳವಣಿಗೆಗಳು ತ್ವರಿತವಾಗಿ ಆಗಬೇಕೆನ್ನುವ ವಯಸ್ಸು ಜೊತೆಗೆ ಮಾರ್ಕ್ಸ್ ವಾದದ ಪ್ರಭಾವ ಬೇರೆ. ಈ ಕಾರಣದಿಂದಾಗಿ ಗಾಂಧೀಜಿ ಅವರಿಗಿಂತಲೂ ಉಗ್ರಗಾಮಿಗಳ ಹೋರಾಟವೇ ನನಗೆ ಆದರ್ಶವಾಗಿತ್ತು. ಇದನ್ನು ಆ ಸಂದರ್ಭ ನಾನು ವ್ಯಕ್ತಪಡಿಸಿದ್ದೆ ಕೂಡ. ಅಂದಮಾತ್ರಕ್ಕೆ ಗಾಂಧೀಜಿ  ಬಗ್ಗೆ ಗೌರವ ಭಾವನೆ ಇಲ್ಲ ಎಂದರ್ಥವಲ್ಲ. ಅಭಿಪ್ರಾಯ ಭೇದಗಳಿರಬಹುದು ಆದರೆ ಒಬ್ಬ ಪ್ರಾಮಾಣಿಕ ವ್ಯಕ್ತಿಯಾಗಿ ಗಾಂಧಿ ನನಗೆ ಇವತ್ತಿಗೂ ಆದರ್ಶ.

* ಸಾಮಾನ್ಯವಾಗಿ ನೀವು ಔದ್ಯೋಗಿಕ ಶಿಕ್ಷಣಕ್ಕೆ ಒತ್ತು ನೀಡಿದವರು. ಕೈಗಾರಿಕಾ ತರಬೇತಿ ಕೇಂದ್ರವನ್ನು ಸ್ಥಾಪಿಸಿದ್ದು ಅದಕ್ಕೊಂದು ಉದಾಹರಣೆ. ಶಿಕ್ಷಣ ಎನ್ನುವುದು ನಮ್ಮನ್ನು ಪರಾವಲಂಬಿಗಳನ್ನಾಗಿಸುತ್ತಿದೆಯೋ ಅಥವಾ ಸ್ವಾವಲಂಬಿಗಳನ್ನಾಗಿ ರೂಪಿಸುತ್ತಿದೆಯೊ? 

            ನನ್ನ  ದೃಷ್ಟಿಯಲ್ಲಿ   ಶಿಕ್ಷಣ ಉದ್ಯೋಗಕ್ಕೆ ದಾರಿ ಎನ್ನುವುದಕ್ಕಿಂತ ಅದು ಆತ್ಮವಿಕಾಸಕ್ಕೆ ನೆರವಾಗಬೇಕು. ಹಿಂದೆಯೆಲ್ಲ ಜನರು ಉದ್ಯೋಗಕ್ಕಾಗಿ ಶಿಕ್ಷಣವನ್ನು ಅವಲಂಬಿಸಿರಲಿಲ್ಲ. ಪ್ರತಿಯೊಬ್ಬರಿಗೂ ಜೀವನ ನಿರ್ವಹಣೆಗೆ ಮನೆತನದ ಪರಂಪರಾಗತವಾಗಿ ಬಂದ ಉದ್ಯೋಗಗಳಿರುತ್ತಿದ್ದವು. ಉದಾಹರಣೆಗೆ ಕುಂಬಾರ, ಕಮ್ಮಾರ, ನೇಕಾರ, ಬಡಿಗ, ಕೃಷಿಕ ಇತ್ಯಾದಿ. ಈ ಕಾರಣದಿಂದಲೇ ಆಗೆಲ್ಲ ಜನರು ಶಿಕ್ಷಣವಿಲ್ಲದೆಯೂ ಸ್ವಾವಲಂಬಿಗಳಾಗಿ ಬದುಕುತ್ತಿದ್ದರು. ಅವರೆಲ್ಲ ಶಿಕ್ಷಣವೆಂದರೆ ಅದು ವ್ಯಕ್ತಿತ್ವ ವಿಕಾಸಕ್ಕೆ ದಾರಿ ಎಂದು ನಂಬಿರುತ್ತಿದ್ದರು. ನಿಮಗೆ ನೆನಪಿರಬಹುದು ಇದೆ ಉದ್ದೇಶದಿಂದ ಆ ಕಾಲದಲ್ಲಿ ಜನರನ್ನು ವಿದ್ಯಾವಂತರನ್ನಾಗಿ ಮಾಡಲು ರಾತ್ರಿ ಶಾಲೆಗಳು ಹಳ್ಳಿ ಹಳ್ಳಿಯಲ್ಲಿ ಪ್ರಾರಂಭವಾದವು. ಆದರೆ ಕಾಲಾನಂತರದಲ್ಲಿ ಶಿಕ್ಷಣದ ಧ್ಯೇಯೋದ್ದೇಶ ಮತ್ತು ಜನರ ಅಭಿಪ್ರಾಯಗಳಲ್ಲಿ ಬದಲಾವಣೆಗಳಾಗಿ ಶಿಕ್ಷಣ ಎನ್ನುವುದು ಉದ್ಯೋಗ ಕೊಡುವ ಕ್ಷೇತ್ರ ಎನ್ನುವ ಕಲ್ಪನೆ ಬಲವಾಯಿತು.

* ಹಿಂದೆಯೆಲ್ಲ ಮಠಮಾನ್ಯಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದವು. ಅದರಲ್ಲೂ ಉಚಿತ ಶಿಕ್ಷಣ ಅವುಗಳ ಉದ್ದೇಶವಾಗಿತ್ತು. ಇವತ್ತು ರಾಜ್ಯದಲ್ಲಿ ಸಿದ್ಧಗಂಗ ಮಠ ಬಿಟ್ಟರೆ ಉಳಿದೆಲ್ಲ ಮಠಗಳು ಉಚಿತ ಶಿಕ್ಷಣದಿಂದ ದೂರವೇ ಉಳಿದಿವೆ. ಈ ಬೆಳವಣಿಗೆಯನ್ನು ನೀವು ಹೇಗೆ ನೋಡುವಿರಿ? 

     ಮಠಗಳು ಹಿಂದಿನ ಕಾಲದಲ್ಲಿ ಉಚಿತ ಶಿಕ್ಷಣ ಕೊಡುತ್ತಿದ್ದವು ಎನ್ನುವುದರ ಜೊತೆಗೆ ಆಗ ಮಠಗಳಲ್ಲಿ ಯಾವ ರೀತಿಯ ಶಿಕ್ಷಣ ದೊರೆಯುತ್ತಿತ್ತು ಎಂದು ನಾವು ಪ್ರಶ್ನಿಸಬೇಕು. ಅಲ್ಲಿ ಧಾರ್ಮಿಕ ಶಿಕ್ಷಣವೇ ಮಠಗಳ ಮೂಲ ಉದ್ದೇಶವಾಗಿತ್ತು. ಜೊತೆಗೆ ಆಗ ಮಠಗಳು ಸ್ಥಾಪನೆಯಾದದ್ದು ಕೂಡ ಜನರಿಗೆ ಧಾರ್ಮಿಕ ಶಿಕ್ಷಣ ನೀಡಬೇಕೆನ್ನುವ ಉದ್ದೇಶದಿಂದ. ಮಠಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಬೇರೆ ಬೇರೆ ಮಠಗಳ ಮಠಾಧೀಶರಾಗಿ ಇಲ್ಲವೇ ಮಠಗಳಲ್ಲಿ ಶಿಕ್ಷಕರಾಗಿ ಸಾತ್ವಿಕ ಜೀವನ ನಡೆಸುತ್ತಿದ್ದರು. ಈಗ ನೋಡಿ ಮಠಗಳು ಕೂಡ ಮೆಡಿಕಲ್, ಇಂಜಿನಿಯರಿಂಗ್ ಕೋರ್ಸುಗಳಂಥ ವೃತ್ತಿಪರ ಕಾಲೇಜುಗಳನ್ನು ನಡೆಸಲು ಮುಂದಾಗುತ್ತಿರುವಾಗ ಅಲ್ಲಿ ಉಚಿತ ಮತ್ತು ಧಾರ್ಮಿಕ ಶಿಕ್ಷಣ ಎನ್ನುವ ಉದ್ದೇಶ ಮೂಲೆಗುಂಪಾಯಿತು. ಈಗ ಯಾವ ಮಠಗಳು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಮಾತ್ರ ನಡೆಸಲು ಮುಂದಾಗುತ್ತಿಲ್ಲ.

* ಒಂದು ಹಂತದಲ್ಲಿ ಕಮ್ಯುನಿಜಮ್ ನಿಮ್ಮನ್ನು ಹೆಚ್ಚು ಹೆಚ್ಚು ಪ್ರಭಾವಿಸಿತು. ಇನ್ನೊಂದೆಡೆ ಬಂಥನಾಳ ಶ್ರೀಗಳು ನಿಮ್ಮ ಮೇಲೆ ಪ್ರಭಾವ ಬೀರಿದರು. ಏಕಕಾಲದಲ್ಲಿ ಮಠದ ಸಾಂಗತ್ಯ ಮತ್ತು ಕಮ್ಯುನಿಜಮ್ ನತ್ತ ಒಲವು ಇವೆರಡು ಹೇಗೆ ಸಾಧ್ಯವಾದವು? 

          ನಿಮಗೆ ಮೊದಲೇ ಸ್ಪಷ್ಟಪಡಿಸುತ್ತೇನೆ ನಾನು ಕಾಲೇಜು ವಿದ್ಯಾರ್ಥಿಯಾಗಿದ್ದ ದಿನಗಳಿಂದಲೇ ಕಮ್ಯುನಿಜಮ್ ನತ್ತ ಒಲವು ಬೆಳೆಸಿಕೊಂಡವನು. ಆದರೆ ಬಂಥನಾಳ ಶ್ರೀಗಳ ಸಂಪರ್ಕಕ್ಕೆ ಬಂದದ್ದು ನಾನು ಶಿಕ್ಷಕನಾಗಿ ವೃತ್ತಿಯನ್ನು ಆರಂಭಿಸಿದ ಮೇಲೆ. ಶ್ರೀಗಳ ಸಂಪರ್ಕಕ್ಕೆ ಬಂದ ಮೇಲೆಯೂ ನಾನು ಕಮ್ಯುನಿಷ್ಟ್ ನಾಗಿಯೆ ಉಳಿದೆ. ಮಠದ ಸಾಂಗತ್ಯಕ್ಕೆ ಬಂದ ಮೇಲೆ ನನ್ನ ನಿಲುವು ಮತ್ತು ವಿಚಾರಗಳನ್ನು ಬದಲಿಸಿಕೊಳ್ಳಬೇಕೆಂದು ನನಗೆ ಅನ್ನಿಸಲಿಲ್ಲ. ಹಾಗೊಂದು ವೇಳೆ ನಾನು ನನ್ನ ನಿಲುವುಗಳನ್ನು ಬದಲಿಸಿಕೊಂಡಿದ್ದರೆ ಅದು ಆಷಾಢಭೂತಿತನ ಎಂದೆನಿಸುತ್ತಿತ್ತು. ಹೀಗೆ ಬದಲಾಗುವುದು ನನಗೆ ಇಷ್ಟವಿರಲಿಲ್ಲ. ಜೊತೆಗೆ ನಾನು ಮಠಗಳೊಂದಿಗೆ ಸಂಪರ್ಕವನ್ನಿಟ್ಟುಕೊಂಡವನಲ್ಲ. ಬಂಥನಾಳ ಶ್ರೀಗಳನ್ನು ನಾನು ಗೌರವಿಸುವುದು ಅವರೊಬ್ಬರು ಮಠಾಧೀಶರಾಗಿದ್ದರು ಎನ್ನುವ ಕಾರಣಕ್ಕಲ್ಲ. ಬದಲಾಗಿ ಸಮಾಜ ಮತ್ತು ಶಿಕ್ಷಣದ ಕುರಿತು ಅವರಿಗಿದ್ದ ಕಾಳಜಿ ನನ್ನನ್ನು ಹೆಚ್ಚು ಪ್ರಭಾವಿಸಿತು.

* ತಮ್ಮ ವೃತ್ತಿ ಬದುಕನ್ನೆಲ್ಲ ತಾವು ಗ್ರಾಮೀಣ ಪರಿಸರದಲ್ಲೇ ಕಳೆದಿರಿ. ಅಂಥದ್ದೊಂದು ಬದುಕನ್ನು ತಾವೇ ಇಷ್ಟ ಪಟ್ಟು ಆಯ್ಕೆ ಮಾಡಿಕೊಂಡಿದ್ದು ಎನ್ನುವುದನ್ನು ನಾನು ನೆನಪಿಸ ಬಯಸುತ್ತೇನೆ. ಇದೆ ಸಂದರ್ಭ ಗಾಂಧೀಜಿ ಗ್ರಾಮೀಣಾಭಿವೃದ್ಧಿಗೆ ಕರೆ ಕೊಟ್ಟಿದ್ದರು. ಹಾಗಾದರೆ ಗಾಂಧಿ ವಿಚಾರಧಾರೆ ನಿಮ್ಮನ್ನು ಹೇಗೆ ಪ್ರಭಾವಿಸಿತು? 

      ನೋಡಿ ನಾನು ಬಿ ಎ ಪದವಿ ಪೂರೈಸಿದ ನಂತರ ಎಂ ಎ ಮಾಡುವ ಆಸೆಯಿತ್ತು.  ಆದರೆ ಆಗ ಸಿದ್ಧೇಶ್ವರ ಹೈಸ್ಕೂಲಿನಲ್ಲಿ ಶಿಕ್ಷಕರ ಅಗತ್ಯವಿದ್ದುದ್ದರಿಂದ ನನ್ನ ಗುರುಗಳಾದ ಶ್ರೀ ಸಾಸನೂರ ಅವರು ನನ್ನನ್ನು ಕರೆದು ಅಲ್ಲಿ ಶಿಕ್ಷಕನಾಗಿ ಸೇರುವಂತೆ ಹೇಳಿದರು. ಗುರುಗಳ ಆಜ್ಞೆಯನ್ನು ಮೀರುವಂತಿರಲಿಲ್ಲ. ಕೆಲಸಕ್ಕೆ ಸೇರಿಕೊಂಡೆ. ನಂತರ ಗ್ರಾಮೀಣ ಪ್ರದೇಶದ ಶಾಲೆಗೆ ಹೋಗುವಂತೆ ಆಡಳಿತ ಮಂಡಳಿ ಆದೇಶಿಸಿದಾಗ ಅದನ್ನೂ ಪಾಲಿಸಿದೆ. ಹೀಗೆ ಗ್ರಾಮೀಣ ಪ್ರದೇಶಕ್ಕೆ ಹೋದ ನಂತರ ಅಲ್ಲಿನ ಮಕ್ಕಳ ಸಮಸ್ಯೆಗಳಿಗೆ ಶಿಕ್ಷಣದ ಮೂಲಕವೇ ಪರಿಹಾರ ಹುಡುಕಲು ಪ್ರಯತ್ನಿಸಿದೆ. ಈ ಸಂದರ್ಭ ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಬಗ್ಗೆ ನನ್ನ ಮೇಲೆ ಗಾಂಧೀಜಿ ಅವರ ಪ್ರಭಾವ ಎನ್ನುವುದರ ಬದಲು ಅದು ಕಮ್ಯುನಿಜಂನ ಪ್ರಭಾವ ಎಂದರೆ ಸರಿಹೋದಿತು. ಏಕೆಂದರೆ ಸಮಾನತೆ ಕಮ್ಯುನಿಜಂನ ಮೂಲ ಉದ್ದೇಶವಾಗಿರುವುದರಿಂದ ಗ್ರಾಮೀಣ ಮಕ್ಕಳಿಗೆ ಅನ್ಯಾಯವಾಗಬಾರದೆಂದು ನಾನು ಅಲ್ಲಿ ಉತ್ತಮ ಶಿಕ್ಷಣಕ್ಕೆ ಪ್ರಯತ್ನಿಸಿದೆ.

* ನಿಮ್ಮ ಪ್ರಕಟಣೆಗಳೆಲ್ಲ ಮಾರ್ಕ್ಸ್ ವಾದದ ಹಿನ್ನೆಲೆಯಲ್ಲಿ ಪ್ರಕಟವಾಗಿರುವುದು ಓದಿನ ಅನುಭವಕ್ಕೆ ಬರುತ್ತದೆ. ಉದಾಹರಣೆಗೆ 'ಮಾದೇವಿಯಕ್ಕನ ಮದುವೆ' ಕೃತಿಯಲ್ಲಿ ಅಕ್ಕ ವಿರಾಗಿಣಿಯೇ? ಎನ್ನುವ ಪ್ರಶ್ನೆ ಬರುತ್ತದೆ. ಅಂದರೆ ನಿಮ್ಮ ಪ್ರಕಟಣೆಯಲ್ಲಿ ಕಾಲ್ಪನಿಕತೆಗಿಂತ ವಾಸ್ತವಿಕತೆಗೆ ಮಹತ್ವ ನೀಡಿರುವಿರಿ. ಏಕೆ ಈ ಬಂಡಾಯದ ದಾರಿ. 

      ಟ್ರಸ್ಟ್ ನಡಿ ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ಹಾಕಿಕೊಂಡಾಗಲೇ ನನ್ನ ಉದ್ದೇಶ ಸ್ಪಷ್ಟವಾಗಿತ್ತು. ಈ ಮೊದಲೆ ಹೇಳಿದಂತೆ ಕಾಲೇಜು ದಿನಗಳಲ್ಲೇ ನಾನು ಮಾರ್ಕ್ಸ್ ವಾದದ ಪ್ರಭಾವಕ್ಕೆ ಒಳಗಾಗಿದ್ದೆ. ಹೀಗಾಗಿ ನಮ್ಮ ಟ್ರಸ್ಟ್ ನಡಿ ಪ್ರಕಟಿಸುವ ಪುಸ್ತಕಗಳಲ್ಲಿ ಮಾರ್ಕ್ಸ್ ವಾದಕ್ಕೆ ಆದ್ಯತೆ ನೀಡಿದ್ದು. ಅಂಥ ಮನೋಭಾವದ ಲೇಖಕರನ್ನು ಗುರುತಿಸಿ ಅವರ ಪುಸ್ತಕಗಳನ್ನು ಪ್ರಕಟಿಸಿದೆ. ಇನ್ನು ಮಾದೇವಿಯಕ್ಕನ ಮದುವೆ ಪುಸ್ತಕದ ವಿಷಯಕ್ಕೆ ಬಂದರೆ ಅಕ್ಕ ಮಹಾದೇವಿಯ ಹೋರಾಟ ಮಾರ್ಕ್ಸ್ ವಾದಕ್ಕೆ ತೀರ ಹತ್ತಿರವಾಗಿತ್ತು. ೧೨ ನೆ ಶತಮಾನದಲ್ಲಿ ಅಂಥದ್ದೊಂದು ಬದಲಾವಣೆಗೆ ಮುಂದಾದ ಅಕ್ಕನ ಕುರಿತು ಪುಸ್ತಕ ಪ್ರಕಟಿಸುವುದು ಯೋಗ್ಯ ಎಂದೆನಿಸಿತು. ಇನ್ನು ಅಕ್ಕ ಮಹಾದೇವಿ ವಿರಾಗಿಣಿಯೇ ಎನ್ನುವುದನ್ನು ನೀವು ಬಂಡಾಯ ಎಂದು ಕರೆದಿರುವಿರಿ. ಆದರೆ ಅದು ಬಂಡಾಯವಲ್ಲ ಇದ್ದ ವಸ್ತುಸ್ಥಿತಿ ಅದು. ಏಕೆಂದರೆ ಅಕ್ಕನಿಗೆ ಮದುವೆಯ ಬಗ್ಗೆ ಅವಳದೇ ಕನಸಿತ್ತು.

* ಒಂದು ಹಂತದಲ್ಲಿ ಬಸವಣ್ಣನವರಿಗೆ ವೈಜ್ಞಾನಿಕ ಸಮಾಜವಾದ ಕಲ್ಪನಾತೀತ ಎನ್ನುತ್ತಿರಿ. ಹೀಗೆ ಹೇಳುವಾಗ ಅಸಂಖ್ಯಾತ ಜನರ ಕಲ್ಪನೆಯನ್ನೇ ಬುಡಮೇಲು ಮಾಡುತ್ತಿದ್ದೇನೆ ಎಂದೆನಿಸಲಿಲ್ಲವೇ? 

     ಕೆಲವರು ಬಸವಣ್ಣನವರಿಗೆ ವೈಜ್ಞಾನಿಕ ಸಮಾಜವಾದದ ಕಲ್ಪನೆಯಿತ್ತು ಎನ್ನುತ್ತಾರೆ. ಆದರೆ ಒಂದು ವಿಷಯವನ್ನು ಸ್ಪಷ್ಟಪಡಿಸಬಯಸುತ್ತೇನೆ. ವೈಜ್ಞಾನಿಕ ಸಮಾಜವಾದ ಕಲ್ಪನೆ ಮೂಡಿದ್ದು ಬಂಡವಾಳ ಶಾಹಿ ಮತ್ತು ವಸಹಾತು ಶಾಹಿ ಆಡಳಿತದ ಸಂದರ್ಭ. ೧೨ ನೆ ಶತಮಾನದಲ್ಲಿ ಬಂಡವಾಳ ಶಾಹಿಯ ಕಲ್ಪನೆಯೇ ಇರಲಿಲ್ಲ. ಹೀಗಿದ್ದಾಗ ಆಗ ವೈಜ್ಞಾನಿಕ ಸಮಾಜವಾದದ ಕಲ್ಪನೆಯಂತೂ ಬಹುದೂರ. ನಾನು ಬಸವಣ್ಣನವರಿಗೆ ವೈಜ್ಞಾನಿಕ ಸಮಾಜವಾದದ ಕಲ್ಪನೆ ಇರಲಿಲ್ಲ ಎನ್ನುವುದು ವಾಸ್ತವಿಕತೆ. ಅವರ ಸಾಮಾಜಿಕ ಚಳವಳಿಯನ್ನು ನಾನು ಬಸವವಾದ ಎಂದು ಕರೆಯಲು ಇಚ್ಚಿಸುತ್ತೇನೆ. ಹೀಗೆ ವಾಸ್ತವಿಕತೆಯನ್ನು ಹೇಳುವಾಗ ಅದು ಜನರ ಭಾವನೆಗಳಿಗೆ ನೋವಾಗುತ್ತದೆಂದು ನಾನು ಸುಳ್ಳನ್ನು ಹೇಗೆ ಹೇಳಲಿ. ೧೨ ನೆ ಶತಮಾನದಲ್ಲಿ ಬಸವಣ್ಣನವರು ಮಾಡಿದ ಪ್ರಯತ್ನ ಮಾತ್ರ ನಿಜಕ್ಕೂ ಹೋರಾಟಗಾರರಿಗೆ ಅದೊಂದು ಪ್ರೇರಣೆ.

* ನಾವು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸುಸಂಘಟಿತ ಪ್ರಯತ್ನ ಮಾಡಿದಲ್ಲಿ ವರ್ಗರಹಿತ ಸಮಾಜದ ಮರುಸ್ಥಾಪನೆ ಸಾಧ್ಯ ಎನ್ನುವ ಆಶಯ ನಿಮ್ಮದು. ಬಂಡವಾಳ ಶಾಹಿ ಬಲಗೊಳ್ಳುತ್ತಿರುವ ಈ ಜಾಗತೀಕರಣದ  ದಿನಗಳಲ್ಲಿ ವರ್ಗರಹಿತ ಸಮಾಜದ ಆದರ್ಶವನ್ನು ಮರುಸ್ಥಾಪಿಸುವುದು ಸಾಧ್ಯವೇ? 

     ಜನರು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸುಸಂಘಟಿತರಾಗಬೇಕು. ಅಂದರೆ ಮಾತ್ರ ವರ್ಗರಹಿತ ಸಮಾಜವನ್ನು ಮತ್ತೆ ಮರುಸ್ಥಾಪಿಸಲು ಸಾಧ್ಯ. ಇಲ್ಲಿ ಜನರೆಂದರೆ ಯಾರು ಎನ್ನುವುದು ಮುಖ್ಯವಾಗುತ್ತದೆ. ಅವರೇನು ರೈತರೆ, ಪತ್ರಕರ್ತರೆ, ಬುದ್ದಿಜೀವಿಗಳೆ, ಅಧಿಕಾರಿ ವರ್ಗವೆ, ಬಂಡವಾಳ ಶಾಹಿಗಳೇ ಯಾರು ಈ ಜನ. ಈ ಬಂಡವಾಳ ಶಾಹಿಗಳಂತೂ ವರ್ಗರಹಿತ ಸಮಾಜವನ್ನು ಸ್ಥಾಪಿಸಲು ಬಯಸಲಾರರು. ಆದ್ದರಿಂದ ಸಾಮಾನ್ಯ ಜನರು (ಅಲ್ಲಿ ರೈತರು, ಕಾರ್ಮಿಕರು ಒಟ್ಟಿನಲ್ಲಿ ವರ್ಗರಹಿತ ಸಮಾಜದ ಕನಸು ಕಾಣುವ ಎಲ್ಲರೂ ಸೇರುತ್ತಾರೆ) ಮತ್ತು ಬುದ್ದಿಜೀವಿಗಳು ಸೇರಿ ಸಂಘಟಿತ ಪ್ರಯತ್ನ ಮಾಡಿದಲ್ಲಿ ವರ್ಗಪೂರ್ವ ಸಮಾಜದ ಆದರ್ಶವನ್ನು ನಾವು ಮರುಸ್ಥಾಪಿಸಲು ಸಾಧ್ಯ. ಆದರೆ ಸಾಧ್ಯವಾಗುತ್ತದೆ ಎಂದು ನಾನು ನಿಖರವಾಗಿ ಹೇಳುವುದಿಲ್ಲ. ಸಾಧ್ಯವಾಗಬಹುದು ಇಲ್ಲವೆ ಸಾಧ್ಯವಾಗದೆಯೂ ಇರಬಹುದು.

     ಜೊತೆಗೆ ನಾನು ಈ ಸಂದರ್ಭ ಇನ್ನೊಂದು ಮಾತನ್ನು ಹೇಳಲು ಬಯಸುತ್ತೇನೆ. ಈ ನಮ್ಮ ರಾಜಕಾರಣಿಗಳ ಹಿಡಿತದಲ್ಲಿ ದೇಶ ಇರುವವರೆಗೂ ನಮ್ಮ ಜನ ಸಂಘಟಿತ ರಾಗುವುದಿಲ್ಲ. ಏಕೆಂದರೆ ಇವರು ಜಾತಿ ಮತ್ತು ಧರ್ಮಗಳಿಂದ ಜನರನ್ನು ಒಡೆಯುತ್ತಿರುವರು. ಇನ್ನೊಂದು ಮಾತು ೧೯೧೭ ರಲ್ಲಿ ರಷ್ಯಾದಲ್ಲಿ ರಾಜಕಾರಣಿಗಳು ಮಾರ್ಕ್ಸ್ ವಾದಿಗಳಾಗಿದ್ದರಿಂದ ಅಲ್ಲಿ ಕ್ರಾಂತಿ ಸಾಧ್ಯವಾಯಿತು. ಆದರೆ ಭಾರತದಲ್ಲಿ ನಮ್ಮ ರಾಜಕಾರಣಿಗಳಿಂದ ಅಂಥದ್ದೊಂದು ಬದಲಾವಣೆಯನ್ನು ನಾವು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಮೊನ್ನೆ ಶ್ರೀ ವಾಜಪೇಯಿ ಅವರಿಗೆ ಭಾರತ ರತ್ನ ಪ್ರಶಸ್ತಿ ಸಂದ ಸಂದರ್ಭ ಮಾನ್ಯ ರಾಷ್ಟ್ರಪತಿಗಳು ಅವರ ನಿವಾಸಕ್ಕೆ ಹೋಗಿ ಗೌರವಿಸಿದರು. ನೋಡಿ ಇಲ್ಲಿ ಇವರಿಬ್ಬರೂ ಒಂದೇ ಪಕ್ಷಕ್ಕೆ ಸೇರಿದವರಲ್ಲ. ಬೇರೆ ಬೇರೆ ಪಕ್ಷಕ್ಕೆ ಸೇರಿದವರಾಗಿದ್ದರೂ ಹಾಗೂ ಅವರುಗಳ ನಡುವೆ ಅಭಿಪ್ರಾಯ ಭೇದಗಳಿದ್ದರೂ ಅವರಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಗೌರವವಿದೆ. ಇಂಥ ಮನೋಭಾವದ ರಾಜಕಾರಣಿಗಳಿದ್ದರೆ ಮಾತ್ರ ಸಂಘಟಿತ ಪ್ರಯತ್ನ ಸಾಧ್ಯವಿದೆ. ಆದರೆ ಇಂಥ ಮನೋಭಾವದ ರಾಜಕಾರಣಿಗಳ ಸಂಖ್ಯೆ ನಮ್ಮಲ್ಲಿ ಎಷ್ಟಿದೆ?

* ಪ್ರಕಾಶಕರಾಗಿ ತಾವು ಹಲವು ಪುಸ್ತಕಗಳನ್ನು ಪ್ರಕಟಿಸಿರುವಿರಿ. ಸಾಮಾನ್ಯವಾಗಿ ಲೇಖಕರು ಎಷ್ಟೇ ಆಧುನಿಕ ಮನೋಭಾವದವರಾದರೂ ಜಾತಿ ಧರ್ಮದ ಕುರಿತು ಅವರು ಸಂಕುಚಿತರು ಎನ್ನುವ ತಕರಾರು ಓದುಗರದು. ಈ ಕುರಿತು ತಮ್ಮ ಅನುಭವವೇನು? 

    ಇದು ಇವತ್ತಿನ ಸಮಸ್ಯೆ ಮಾತ್ರವಲ್ಲ. ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಿದು. ಅದು ಏಕೋ ಗೊತ್ತಿಲ್ಲ ನಮ್ಮ ಲೇಖಕರು ಎಷ್ಟೇ ಬಂಡಾಯದ ಮನೋಭಾವದವರಾದರೂ ಜಾತಿ ಧರ್ಮದ ವಿಷಯ ಬಂದಾಗ ಅವರು ತೀರ ಸಂಕುಚಿತರಾಗುತ್ತಿರುವರು. ನಿಮಗೊಂದು ದೃಷ್ಟಾಂತ ಹೇಳುತ್ತೇನೆ ನನ್ನ ಮಿತ್ರರೊಬ್ಬರು ಬಂಡಾಯ ಪ್ರವೃತ್ತಿಯವರಾಗಿದ್ದು ಒಂದು ಕಡೆ ಅಕ್ಕ ಮಹಾದೇವಿ ಇಂಥ ಉಪಪಂಗಡಕ್ಕೆ ಸೇರಿದವಳೆಂದು ಉಲ್ಲೇಖಿಸಿದ್ದರು. ಆಶ್ಚರ್ಯದ ಸಂಗತಿ ಎಂದರೆ ಅವರು ಹೀಗೆ ಉಲ್ಲೇಖಿಸಿದ ಉಪಪಂಗಡ ೧೨ ನೆ ಶತಮಾನದಲ್ಲಿ ಆಚರಣೆಯಲ್ಲೇ ಇರಲಿಲ್ಲ. ಈ ವಚನಗಳಲ್ಲಿ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಎಂದು ಉಲ್ಲೇಖವಿದೆ. ಆದರೆ ನನ್ನ ಮಿತ್ರರು ಗುರುತಿಸಿದ ಉಪಜಾತಿ ಯಾವ ವಚನಗಳಲ್ಲೂ ಉಲ್ಲೇಖಿತವಾಗಿಲ್ಲ. ಇದು ನನಗೆ ಅತ್ಯಂತ ಖೇದವೆನಿಸಿತು. ಬರಹಗಾರರು ಎಷ್ಟೇ ಆಧುನಿಕ ಮನೋಭಾವದವರಾದರೂ ಸ್ವಜಾತಿ ಸ್ವಧರ್ಮದ ಕುರಿತಾದ ತಮ್ಮ ಒಲವು ಮತ್ತು ಪ್ರೀತಿಯನ್ನು ಬಿಡುತ್ತಿಲ್ಲ. ಇಂಥ ವಿಪರ್ಯಾಸಗಳನ್ನು ಓದುಗರು ಖಂಡಿಸಬೇಕು.

* ನಮಸ್ಕಾರಗಳು ಸರ್ ತಮ್ಮಿಂದ ಅನೇಕ ಸಂಗತಿಗಳು ತಿಳಿದವು. 

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Tuesday, October 4, 2016

ಓದುಗ ಮತ್ತು ಗ್ರಂಥಾಲಯಗಳ ಅಸ್ತಿತ್ವ





             
ಇದು ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು. ನಾನಾಗ ಕಲಬುರಗಿಯ ಪದವಿ ಮಾಹಾವಿದ್ಯಾಲಯದಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದ ಘಳಿಗೆಯದು. ವಿದ್ಯಾರ್ಥಿಗಳಿಗೆ ಆಕ್ಸಫರ್ಡ್ ಇಂಗ್ಲಿಷ್ ನಿಘಂಟು ಕುರಿತು ಪಾಠ ಮಾಡಬೇಕಿತ್ತು. ಆ ಸಂದರ್ಭ ಆಕ್ಸಫರ್ಡ್ ಇಂಗ್ಲಿಷ್ ನಿಘಂಟುವಿನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಆ ನಿಘಂಟುವಿನ ಸಂಪಾದಕ ಜೇಮ್ಸ್ ಮರ್ರೆ ಕುರಿತು ವಿದ್ಯಾರ್ಥಿಗಳಿಗೆ ಹೇಳದೆ ಹೋದರೆ ಮಾಡಿದ ಪಾಠ ಅಪೂರ್ಣವಾದಂತೆ ಎನ್ನುವ ವಿಚಾರ ನನ್ನನ್ನು ಕಾಡತೊಡಗಿತು. ಬೃಹತ್ ಗಾತ್ರದ ಆಕ್ಸಫರ್ಡ್ ಇಂಗ್ಲಿಷ್ ನಿಘಂಟುವಿನ ಯಾವ ಪುಟದಲ್ಲೂ ಅದರ ಸಂಪಾದಕನಾದ ಜೇಮ್ಸ್ ಮರ್ರೆ ಕುರಿತು ಮಾಹಿತಿ ಇರಲಿಲ್ಲ. ಕೊನೆಗೆ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಭೇಟಿ ನೀಡಿ ವಿವಿಧ ವಿಶ್ವಕೋಶಗಳನ್ನು ತಡಕಾಡಿ ಒಂದರ್ಧ ಪುಟದಷ್ಟು ಜೇಮ್ಸ್ ಮರ್ರೆ ಬಗೆಗಿನ ಮಾಹಿತಿಯನ್ನು ಕಲೆಹಾಕುವಲ್ಲಿ ನಾನು ಯಶಸ್ವಿಯಾದೆ. ಈ ಹದಿನೈದು ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆಯ ಗಾಳಿ ಬೀಸಿದಂತೆ ಅದು ಮಾಹಿತಿ ವಿಜ್ಞಾನ ಕ್ಷೇತ್ರವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ತಂತ್ರಜ್ಞಾನದ ಪರಿಣಾಮ ಇವತ್ತು ಹಿಂದಿನಂತೆ ಪುಸ್ತಕಗಳನ್ನೋ, ವಿಶ್ವಕೋಶಗಳನ್ನೋ ನೆಚ್ಚಿ ಕೂಡಬೇಕಾದ ಅನಿವಾರ್ಯತೆ ಓದುಗರಿಗಿಲ್ಲ. ಇಂಟರ್‍ನೆಟ್ ಅವಿಷ್ಕಾರದ ಪರಿಣಾಮ ರಾಶಿ ರಾಶಿ ಮಾಹಿತಿಯನ್ನು ಇವತ್ತು ನಾವು ಕುಳಿತ ಸ್ಥಳದಲ್ಲೇ ನಮ್ಮ ಎದುರಿಗಿರುವ ಕಂಪ್ಯೂಟರ್‍ನ ಮೂಲಕ ಪಡೆಯಬಹುದಾಗಿದೆ. ಕಂಪ್ಯೂಟರ್‍ನ ಕೀ ಬೋರ್ಡ್ ಮೇಲೆ ಜೇಮ್ಸ್ ಮರ್ರೆ ಎಂದು ಟೈಪಿಸಿದರೆ ಸಾಕು ಕ್ಷಣಾರ್ಧದಲ್ಲಿ ಹತ್ತು ಹದಿನೈದು ಪುಟಗಳಷ್ಟು ಮಾಹಿತಿ ನಮ್ಮೆದುರಿನ ಪರದೆಯ ಮೇಲೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಹದಿನೈದು ವರ್ಷಗಳ ಹಿಂದಿದ್ದಂತೆ ಅರ್ಧ ಪುಟದಷ್ಟು ಮಾಹಿತಿಗಾಗಿ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಭೇಟಿ ನೀಡಬೇಕಾದ ಅನಿವಾರ್ಯತೆಯಾಗಲಿ ಅಗತ್ಯವಾಗಲಿ ಇವತ್ತಿನ ಓದುಗರಿಗಿಲ್ಲ. ಆದರೆ ಮಾಹಿತಿಯನ್ನು ದಕ್ಕಿಸಿಕೊಳ್ಳುವ ಭರಾಟೆಯಲ್ಲಿ ಓದುಗ ಒಂದಿಷ್ಟು ಹಾನಿಗೆ ಒಳಗಾಗುತ್ತಿರುವನು ಎನ್ನುವುದು ನನ್ನ ಅನುಭವದ ಮಾತು. ಈ ಹಿಂದೆ ಜೇಮ್ಸ್ ಮರ್ರೆ ಕುರಿತು ಕೇವಲ ಅರ್ಧಪುಟದಷ್ಟು ಮಾತ್ರ ಮಾಹಿತಿಯನ್ನು ವಿಶ್ವಕೋಶಗಳಿಂದ ಹೆಕ್ಕಿ ತೆಗೆಯುವಲ್ಲಿ ಸಫಲನಾದ ನನಗೆ ಹೀಗೆ ವಿಷಯಕ್ಕಾಗಿ ವಿವಿಧ ಗ್ರಂಥಗಳ ಮೇಲೆ ಕಣ್ಣಾಡಿಸುವಾಗ ಕೆಲವೊಂದಿಷ್ಟು ಬೇರೆ ಬೇರೆ ಮಾಹಿತಿಯನ್ನು ನನ್ನದಾಗಿಸಿಕೊಳ್ಳಲು ಸಾಧ್ಯವಾಗಿತ್ತು. ಆದರೆ ಇವತ್ತು ಹಲವಾರು ಪುಟಗಳಲ್ಲಿ ಮಾಹಿತಿಯು ಯಾವ ತೊಂದರೆಯಿಲ್ಲದೆ ಮತ್ತು ಕಾಲವ್ಯಯವಿಲ್ಲದೆ ದೊರೆಯುತ್ತಿರುವುದರಿಂದ ಓದುಗ ಬೇರೆ ವಿಷಯಗಳ ಓದಿನಿಂದ ವಂಚಿತನಾಗುತ್ತಿರುವನು ಎನ್ನುವ ಅಭಿಪ್ರಾಯ ನನ್ನದು. 

           ನನ್ನ ಅನುಭವದ ಮಾತು ಒಂದಿಷ್ಟು ಹೆಚ್ಚಾಯಿತೇನೋ ಎಂದೆನಿಸುತ್ತಿದೆ ಇರಲಿ. ಮಾಹಿತಿ ತಂತ್ರಜ್ಞಾನದ ಈ ಸುವರ್ಣ ಯುಗದಲ್ಲಿ ನಿಜವಾಗಿಯೂ ಸಂಕಷ್ಟಕ್ಕೆ ಸಿಲುಕಿರುವವರು ಯಾರು ಎನ್ನುವ ಪ್ರಶ್ನೆ ಅನೇಕ ದಿಕ್ಕುಗಳಿಂದ ಮಾರ್ಧನಿಸುತ್ತಿದೆ. ಸಾಮಾನ್ಯವಾಗಿ ಈ ಪ್ರಶ್ನೆಗೆ ಗ್ರಂಥಾಲಯಗಳು ನಿಜವಾದ ಅರ್ಥದಲ್ಲಿ ಸಂಕಷ್ಟಕ್ಕೆ ಸಿಲುಕಿವೆ ಎನ್ನುವುದು ಅದೊಂದು ಸಿದ್ಧ ಉತ್ತರವಾಗಿ ನಮ್ಮೆದುರು ಬೃಹದಾಕಾರವಾಗಿ ಬೆಳೆದು ನಿಂತಿದೆ. ಒಂದೆಡೆ ಮಾಹಿತಿ ತಂತ್ರಜ್ಞಾನ ಅಗಾಧ ಪ್ರಮಾಣದ ಮಾಹಿತಿಯನ್ನು ಉತ್ಪಾದಿಸಲು ನೆರವಾಗುತ್ತಿರುವ ಸಂದರ್ಭದಲ್ಲೇ ಇನ್ನೊಂದೆಡೆ ಗ್ರಂಥಾಲಯಗಳಲ್ಲಿ ಓದುಗರ ಕೊರತೆ ಎದುರಾಗಿದೆ ಎನ್ನುವುದನ್ನು ಚರ್ಚಿಸುವ ವಿಲಕ್ಷಣ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಓದುಗರು ಗ್ರಂಥಾಲಯಗಳಿಗೆ ಏಕೆ ಭೇಟಿ ನೀಡುತ್ತಿಲ್ಲ ಎನ್ನುವ ಸಮಸ್ಯೆಯ ಮೂಲವನ್ನು ಹುಡುಕಿ ಹೊರಟರೆ ನಮಗೆ ಈ ಮಾಹಿತಿ ತಂತ್ರಜ್ಞಾನದ ಅಗಾಧ ಮತ್ತು ಅಪರಿಮಿತ ಬೆಳವಣಿಗೆ ಎದುರಾಗುತ್ತದೆ. ಇವತ್ತು ಮಾಹಿತಿಯ ಉತ್ಪಾದನೆ ಅಧಿಕಗೊಳ್ಳುತ್ತಿರುವುದರ ಜೊತೆಗೆ ತಂತ್ರಜ್ಞಾನವು ಓದುಗರಿಗೆ ಮಾಹಿತಿಯು ಸುಲಭವಾಗಿ ದೊರೆಯುವ ಅನೇಕ ಸಾಧ್ಯತೆಗಳನ್ನು ಅವಿಷ್ಕಾರಗೊಳಿಸಿದೆ. ಪರಿಣಾಮವಾಗಿ ಇಂದು ನಾವು ಮನೆಯಲ್ಲಿ ಊಟ ಮಾಡುತ್ತಲೋ, ಸಿನಿಮಾ ವೀಕ್ಷಿಸುತ್ತಲೋ ಅಥವಾ ಪ್ರಯಾಣ ಮಾಡುತ್ತಲೋ ನಾವು ನಮಗೆ ಬೇಕಾದ ಮಾಹಿತಿಯನ್ನು ಕಲೆಹಾಕಬಹುದು. ಹೀಗೆ ಮಾಹಿತಿ ಸಂಗ್ರಹಣೆಯ ಕೆಲಸವನ್ನು ತಂತ್ರಜ್ಞಾನವು ಸುಲಭ ಸಾಧ್ಯವಾಗಿಸಿರುವಾಗ ಓದುಗ ನಾನೇಕೆ ಗ್ರಂಥಾಲಯಕ್ಕೆ ಹೋಗಿ ನನ್ನ ಸಮಯವನ್ನು ಹಾಳುಮಾಡಿಕೊಳ್ಳಲಿ ಎಂದು ಪ್ರಶ್ನಿಸುತ್ತಿದ್ದಾನೆ. ಓದುಗ ಎಡುವುತ್ತಿರುವುದು ಇಲ್ಲಿಯೇ.  ಏಕೆಂದರೆ ಮಾಹಿತಿ ಕಲೆಹಾಕುವಿಕೆ ಎನ್ನುವುದು ಅದೊಂದು ಶಾಸ್ತ್ರಿಯ ಮತ್ತು ಅಭ್ಯಾಸಯೋಗ್ಯ ವಿಷಯವಾಗಿ ವಿಶ್ವವಿದ್ಯಾಲಯಗಳಲ್ಲಿ ಬೋಧಿಸಲ್ಪಡುತ್ತಿದೆ ಎನ್ನುವ ವಿಷಯವನ್ನು ವಿದ್ಯಾರ್ಥಿ ಮತ್ತು ಶಿಕ್ಷಕರ ಸಮೂಹ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ರಾಶಿ ರಾಶಿ ಉತ್ಪಾದನೆಯಾಗುತ್ತಿರುವ ಮಾಹಿತಿಯಿಂದ ತನಗೆ ಅಗತ್ಯವಾದ ಮಾಹಿತಿಯನ್ನು ಹುಡುಕುವುದು ವಿದ್ಯಾರ್ಥಿಗಳಿಗಾಗಲಿ ಇಲ್ಲವೇ ಶಿಕ್ಷಕರಿಗಾಗಲಿ ಅತಿ ಕಷ್ಟದ ಕೆಲಸ. ಜೊತೆಗೆ ಓದು, ಅಧ್ಯಯನ ಮತ್ತು ಸಂಶೋಧನೆಗಾಗಿ ಮೀಸಲಾಗಿಡಬೇಕಾದ ತನ್ನ ಸಮಯವನ್ನು ವಿದ್ಯಾರ್ಥಿ/ಶಿಕ್ಷಕ ಮಾಹಿತಿಯ ಹುಡುಕುವಿಕೆಗೆ ವ್ಯಯಿಸಿದಾಗ ಸಹಜವಾಗಿಯೇ ಅಲ್ಲಿ ಆತನ ಶ್ರಮ ಮತ್ತು ಸಮಯ ವ್ಯರ್ಥವಾಗುತ್ತದೆ. ಇದು ನೇರವಾಗಿ ಸಂಶೋಧನೆಯ ಕಾರ್ಯಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಲೇ ಸಂಶೋಧನಾ ಕೇಂದ್ರಗಳು ಮಾಹಿತಿಯ ಸಂಗ್ರಹಣೆ ಮತ್ತು ಪೂರೈಕೆಗಾಗಿ ಸುಸಜ್ಜಿತ ಗ್ರಂಥಾಲಯಗಳನ್ನು ಹೊಂದಿವೆ. ಪರಸ್ಥಿತಿ ಹೀಗಿರುವಾಗ ಗ್ರಂಥಾಲಯಕ್ಕೆ ಭೇಟಿ ನೀಡಿ ನಾನೇಕೆ ಸಮಯ ಹಾಳು ಮಾಡಿಕೊಳ್ಳಲಿ ಎನ್ನುವ ಓದುಗನ ಪ್ರತಿಕ್ರಿಯೆಯನ್ನು  ಸುಲಭವಾಗಿ ತಳ್ಳಿಹಾಕುವಂತಿಲ್ಲ ಮತ್ತು ನಿರ್ಲಕ್ಷಿಸುವಂತಿಲ್ಲ. ಇಲ್ಲಿ ಯಾವ ಪ್ರಕಾರದ ಗ್ರಂಥಾಲಯಗಳು ಓದುಗರ ಕೊರತೆಯಂಥ ಬಹುಮುಖ್ಯವಾದ ಸಮಸ್ಯೆಯನ್ನು ಎದುರಿಸುತ್ತಿವೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಸಾಮಾನ್ಯವಾಗಿ ಸಾರ್ವಜನಿಕ ಗ್ರಂಥಾಲಯ ತನ್ನದೇ ಆದ ಓದುಗರ ಸಮೂಹವನ್ನು ಹೊಂದಿದೆ. ಅಲ್ಲಿ ಶೈಕ್ಷಣಿಕ ಅರ್ಹತೆಯ ಅವಶ್ಯಕತೆಯಾಗಲಿ ಮತ್ತು ವಯೋಮಾನದ ಹಂಗಾಗಲಿ ಇಲ್ಲದಿರುವುದರಿಂದ ಸಾರ್ವಜನಿಕ ಗ್ರಂಥಾಲಯಗಳಲ್ಲಿ ನಾವು ಇವತ್ತಿಗೂ ದೊಡ್ಡ ಓದುಗರ ಗುಂಪನ್ನು ಕಾಣಬಹುದು. ಇನ್ನು ವಿಶೇಷ ಗ್ರಂಥಾಲಯಗಳ ವಿಷಯಕ್ಕೆ ಬಂದರೆ ಅವುಗಳು ಸಂಶೋಧನಾ ಕೇಂದ್ರಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಅಲ್ಲಿನ ಓದುಗ ವಲಯಕ್ಕೆ ಸಂಶೋಧನೆಯೇ  ಬಹುಮುಖ್ಯವಾದ ಕಾರ್ಯಯೋಜನೆಯಾಗಿರುವುದರಿಂದ ಜೊತೆಗೆ ಆಯಾ ವಿಶೇಷ ಗ್ರಂಥಾಲಯಗಳು ಸೀಮಿತ ಓದುಗ ವಲಯವನ್ನು ಹೊಂದಿರುವುದರಿಂದ ಅಲ್ಲಿ ಓದುಗರ ಕೊರತೆಯಂಥ ಸಮಸ್ಯೆ ಎದುರಾಗದು. ನಿಜವಾದ ಸಮಸ್ಯೆ ಇರುವುದು ಶೈಕ್ಷಣಿಕ ಗ್ರಂಥಾಲಯಗಳ ವಿಷಯದಲ್ಲಿ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಂಶೋಧಕರಂಥ ಬಹುದೊಡ್ಡ ಓದುಗರ ವಲಯವನ್ನು ಹೊಂದಿಯೂ ಕೂಡ ಶೈಕ್ಷಣಿಕ ಗ್ರಂಥಾಲಯಗಳು ಓದುಗರ ಕೊರತೆಯನ್ನು ಎದುರಿಸುತ್ತಿರುವುದು ವ್ಯವಸ್ಥೆಯೊಂದರ ವ್ಯಂಗ್ಯಕ್ಕೆ ಹಿಡಿದ ಕೈಗನ್ನಡಿ. ಶೈಕ್ಷಣಿಕ ಗ್ರಂಥಾಲಯಗಳು ಎದುರಿಸುತ್ತಿರುವ ಈ ಸಮಸ್ಯೆಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಗ್ರಂಥಪಾಲಕರು ಜೊತೆಯಾಗಿಯೇ  ಕಾರಣರಾಗಿರುವರು. ಅಲ್ಲದೆ ನಮ್ಮ ಸಧ್ಯದ ಶಿಕ್ಷಣ ವ್ಯವಸ್ಥೆಗೆ ಕೂಡ ಈ ಸಮಸ್ಯೆಯನ್ನು ಹುಟ್ಟುಹಾಕಿದ ಆರೋಪದಲ್ಲಿ ಒಂದಿಷ್ಟು ಪಾಲು ಸಹಜವಾಗಿಯೇ ದೊರೆಯಬೇಕು. 

ನಮ್ಮ ಶಿಕ್ಷಣ ವ್ಯವಸ್ಥೆ:

      ಶಿಕ್ಷಣದ ಉದ್ದೇಶಗಳಲ್ಲಿ ರಾಷ್ಟ್ರದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳು ಮಹತ್ವದ ಸ್ಥಾನ ಪಡೆದುಕೊಂಡಿವೆ. ಈ ಉದ್ದೇಶ ಸಾಧನೆಗಾಗಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವವನ್ನು ಬೆಳೆಸುವುದು ಅಗತ್ಯವಾಗಿದೆ. ಆದರೆ ವೃತ್ತಿಯೇ ಶಿಕ್ಷಣದ ಮೂಲ ಉದ್ದೇಶವಾಗುತ್ತಿರುವ ಈ ದಿನಗಳಲ್ಲಿ ವಿದ್ಯಾರ್ಥಿಗಳ ಓದು ಪರೀಕ್ಷೆಗಷ್ಟೆ ಸೀಮಿತವಾಗುತ್ತಿದೆ. ವಿದ್ಯಾರ್ಥಿಗಳ ಜಾಣ್ಮೆಯನ್ನು ಅವರು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನಾಧರಿಸಿ ಗುರುತಿಸುತ್ತಿರುವುದರಿಂದ ವಿದ್ಯಾರ್ಥಿ ತನ್ನ ಓದನ್ನು ಪರೀಕ್ಷೆಗಷ್ಟೇ ಸೀಮಿತಗೊಳಿಸಿಕೊಳ್ಳುತ್ತಿರುವನು. ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸೆಮಿಸ್ಟರ್ ಪದ್ಧತಿಯನ್ನು ಜಾರಿಗೆ ತಂದಿರುವುದರಿಂದ ವಿದ್ಯಾರ್ಥಿಯ ಓದಿನ ವ್ಯಾಪ್ತಿಯೂ ಸೀಮಿತಗೊಳ್ಳುತ್ತಿದೆ. ಇನ್ನು ಬೋಧನೆ, ಅಧ್ಯಯನ ಮತ್ತು ಸಂಶೋಧನೆಯಲ್ಲಿ ತಮ್ಮ ಹೆಚ್ಚಿನ ಸಮಯವನ್ನು ವಿನಿಯೋಗಿಸಬೇಕಾದ ಶಿಕ್ಷಕರನ್ನು ಶಿಕ್ಷಣದ ಉನ್ನತ ಸಮಿತಿಗಳು ಕಡ್ಡಾಯವಾಗಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವಂತೆ ನಿಯಮಗಳನ್ನು ಜಾರಿಗೆ ತರುತ್ತಿರುವುದು ಇಂದಿನ ಶಿಕ್ಷಣ ವ್ಯವಸ್ಥೆಯ ದುರಂತಗಳಲ್ಲೊಂದು. ವಿಶ್ವವಿದ್ಯಾಲಯ ಧನ ಸಹಾಯ ಆಯೋಗ, ಭಾರತೀಯ ವೈದ್ಯಕೀಯ ಮಡಳಿ, ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ಈ ಉನ್ನತ ಸಮಿತಿಗಳು ಶಿಕ್ಷಕರು ಬಡ್ತಿಗಾಗಿ ಮತ್ತು ವೇತನ ಹೆಚ್ಚಳದ ಸೌಲಭ್ಯಕ್ಕಾಗಿ ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದು ಕಡ್ಡಾಯಗೊಳಿಸಿವೆ. ಬಡ್ತಿ ಮತ್ತು ವೇತನ ಹೆಚ್ಚಳದ ಪ್ರಲೋಭನೆಗಳನ್ನೊಡ್ಡಿ ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನಾ ಮನೋಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವುದು ಒಂದು ವಿಲಕ್ಷಣ ಸಂಗತಿ. ಆದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆ ಎನ್ನುವುದು ಕಾಟಾಚಾರಕ್ಕೆಂಬತೆ ನಡೆದುಕೊಂಡು ಬರುತ್ತಿದೆ ಜೊತೆಗೆ ಸಂಶೋಧನಾ ಫಲಿತಾಂಶ ರಾಷ್ಟ್ರದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿಲ್ಲ. ಈ ಸಂಶೋಧನಾ ಮನೋಭಾವದ ಕೊರತೆಯೇ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಅಧ್ಯಯನದಿಂದ ವಿಮುಖರನ್ನಾಗಿಸುತ್ತಿದೆ. ಇದರ ನೇರ ಪರಿಣಾಮ ಗ್ರಂಥಾಲಯಗಳ ಮೇಲಾಗುತ್ತಿದ್ದು ಅಲ್ಲಿ ಓದುಗರಿಲ್ಲದೆ ಇಡೀ ಗ್ರಂಥಾಲಯ ವ್ಯವಸ್ಥೆಯೇ  ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಬಹುದಾದ ಭೀತಿಯನ್ನು ಅನುಭವಿಸುತ್ತಿದೆ.

ತಂತ್ರಜ್ಞಾನ ಕೊಡಮಾಡುತ್ತಿರುವ ಹೆಚ್ಚಿನ ಸೌಲಭ್ಯಗಳಿಂದಾಗಿ ವಿದ್ಯಾರ್ಥಿಗಳು ಶಿಕ್ಷಕರ ಸಹಾಯವಿಲ್ಲದೆ ಪರೀಕ್ಷೆಯನ್ನು ಬರೆಯಲು ಅಗತ್ಯವಾದ ಸಾಮಗ್ರಿಗಳನ್ನು ಬಹಳ ಸುಲಭವಾಗಿ ಕಲೆಹಾಕುತ್ತಿರುವರು. ಪ್ರಾಯೋಗಿಕ ತರಗತಿಗಳಿಗೆ ಹಾಜರಾದರೆ ಸಾಕು ಥೆಯರಿಗೆ ಸಂಬಂಧಿಸಿದ ಸಾಮಗ್ರಿಯನ್ನು ತರಗತಿಗೆ ಹಾಜರಾಗದೇ ಕಲೆಹಾಕಬಹುದೆನ್ನುವ ಆತ್ಮವಿಶ್ವಾಸವನ್ನು ಅನೇಕ ವಿದ್ಯಾರ್ಥಿಗಳಲ್ಲಿ ಇಂದು ನಾವು ಕಾಣುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನದ ಮೊರೆ ಹೋಗುತ್ತಿರುವುದರಿಂದ ಕಲಿಕೆ ಎನ್ನುವುದು ಶಿಕ್ಷಕ ಮತ್ತು ವಿದ್ಯಾರ್ಥಿ ಜೊತೆಯಾಗಿ ಪಾಲ್ಗೊಳ್ಳುವ ಚಟುವಟಿಕೆ ಎನ್ನುವ ಮಾತು ಸವಕಲಾಗಿ ಈಗ ಕಲಿಕೆ ಎನ್ನುವುದು ವಿದ್ಯಾರ್ಥಿ ಮಾತ್ರ ತೊಡಗಿಸಿಕೊಳ್ಳುತ್ತಿರುವ ಏಕಮುಖವಾದ ಕ್ರಿಯೆಯಾಗಿ  ಬದಲಾಗುತ್ತಿದೆ. ಶಿಕ್ಷಕರ ಮಾರ್ಗದರ್ಶನವಿಲ್ಲದೇ ವಿದ್ಯಾರ್ಥಿ ಕಲಿಕೆಯಲ್ಲಿ ತೊಡಗಿರುವುದರಿಂದ ತಂತ್ರಜ್ಞಾನವೇ ಆತನಿಗೆ ಶಿಕ್ಷಕ, ತರಗತಿ, ಪ್ರಯೋಗಾಲಯ ಮತ್ತು ಗ್ರಂಥಾಲಯ ಎಲ್ಲವೂ ಆಗಿ ನಿಜವಾದ ತರಗತಿ ಮತ್ತು ಗ್ರಂಥಾಲಯ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ.

ಜೊತೆಗೆ ಚರ್ಚಿಸಲೇ ಬೇಕಾದ ಇನ್ನೊಂದು ಮಹತ್ವದ ವಿಷಯವೆಂದರೆ ಅದು ನಮ್ಮ ಶಿಕ್ಷಕರು ಬೋಧಿಸುತ್ತಿರುವ ಮತ್ತು ನಮ್ಮ ಮಕ್ಕಳು ಕಲಿಯುತ್ತಿರುವ ಪಠ್ಯಕ್ರಮ. ಇವತ್ತಿಗೂ ಇಪ್ಪತ್ತು ವರ್ಷಗಳ ಹಿಂದೆ ಮಾಡಿಟ್ಟ ಟಿಪ್ಪಣಿಯನ್ನೇ ಹಿಡಿದುಕೊಂಡು ಬಂದು ತರಗತಿಯಲ್ಲಿ ಪಾಠ ಮಾಡುವ ಶಿಕ್ಷಕರನ್ನು ನಾವು ಸಾಮಾನ್ಯವಾಗಿ ಪ್ರತಿ ಶಾಲೆ ಮತ್ತು ಕಾಲೇಜಿನಲ್ಲಿ ಕಾಣಬಹುದು. ವಿದ್ಯಾರ್ಥಿಗಳು ಸಹ ತಮ್ಮ ಹಿರಿಯ ವಿದ್ಯಾರ್ಥಿಗಳು ಮಾಡಿಟ್ಟ ಅಥವಾ ಅವರು ಅವರ ಹಿರಿಯರಿಂದ ಎರವಲಾಗಿ ಪಡೆದ ಉತ್ತರಗಳನ್ನೇ ನೆಚ್ಚಿಕೊಂಡು ಅವುಗಳನ್ನೇ ಓದಿ ಪರೀಕ್ಷೆ ಬರೆಯುತ್ತಿರುವರು. ಇದಕ್ಕೆಲ್ಲ ಕಾರಣ ಬದಲಾಗದೇ ಇರುವ ನಮ್ಮ ಪಠ್ಯಕ್ರಮ. ಇಂಥದ್ದೊಂದು ವಾತಾವರಣದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜೊತೆಯಾಗಿಯೇ  ವಿಷಯವೊಂದನ್ನು ವಿಶ್ಲೇಷಿಸುವ ಮತ್ತು ವಿಷಯದ ಆಳಕ್ಕಿಳಿಯುವ ವಿಶ್ಲೇಷಣಾತ್ಮಕ ಓದಿನ ಕಡೆ ತಮ್ಮ ಗಮನವನ್ನು ಕೇಂದ್ರಿಕರಿಸುತ್ತಿಲ್ಲ. ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ಮತ್ತು ವಿಶ್ಲೇಷಣಾತ್ಮಕ ಓದು ಏಕೆ ಕಡಿಮೆಯಾಗುತ್ತಿದೆ ಎನ್ನುವ ಪ್ರಶ್ನೆ ಎದುರಾದಾಗ ಆಗ ಶಿಕ್ಷಣ ತಜ್ಞರು ಮತ್ತು ಚಿಂತಕರು ಆರೋಪಿಸುವುದು ಇಂದು ಪರೀಕ್ಷಾಕೇಂದ್ರಿತವಾಗುತ್ತಿರುವ ನಮ್ಮ ಶಿಕ್ಷಣ ವ್ಯವಸ್ಥೆಯನ್ನು. ಶಿಕ್ಷಣ ಜ್ಞಾನಾರ್ಜನೆಗೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಎನ್ನುವ ನಿಲುವು ಬದಲಾಗಿ ಅನೇಕ ದಶಕಗಳೇ ಕಳೆದುಹೋಗಿವೆ. ಈಗ ಶಿಕ್ಷಣ ಎನ್ನುವುದು ಉದ್ಯೋಗಕ್ಕೆ ಮತ್ತು ಬದುಕು ಕಟ್ಟಿಕೊಳ್ಳಲು ಎನ್ನುವ ಹೊಸ ಅರ್ಥದಲ್ಲಿ ನಾವೆಲ್ಲ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದೇವೆ. ಈ ಬದಲಾದ ಸನ್ನಿವೇಶದಲ್ಲಿ ವಿದ್ಯಾರ್ಥಿಯ ಬುದ್ದಿಮತ್ತೆಯನ್ನು ಆತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನಾಧರಿಸಿ ನಿರ್ಧರಿಸುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಮತ್ತು ಅಂಕಗಳ ದೃಷ್ಟಿಯಿಂದ ಓದುತ್ತಿರುವುದು ಸಾಮಾನ್ಯವಾಗಿದೆ. ಈ ಸಂದರ್ಭ ವಿದ್ಯಾರ್ಥಿ ಸಮೂಹವನ್ನು ವಿಶ್ಲೇಷಣಾತ್ಮಕ ಓದಿಗೆ ಪ್ರೋತ್ಸಾಹಿಸುವುದು  ಮತ್ತು ಪ್ರೇರೇಪಿಸುವುದು ಅತಿ ಸವಾಲಿನ ಕೆಲಸವಾಗಿ ಕಾಣಿಸುತ್ತಿದೆ. 

ಗ್ರಂಥಾಲಯಗಳ ಅಸ್ತಿತ್ವ:

       ಪ್ರತಿಕೂಲ ವಾತಾವರಣಕ್ಕೆ ವಿರುದ್ಧವಾಗಿ ಈಜುವುದು ಅಸಾಧ್ಯದ ಸಂಗತಿ. ಸಧ್ಯದ ಸನ್ನಿವೇಶದಲ್ಲಿ ಗ್ರಂಥಾಲಯಗಳ ಮಹತ್ವವನ್ನು ಎತ್ತಿಹಿಡಿಯುವ ಮತ್ತು ಆ ಮೂಲಕ ಅವುಗಳ ಅಸ್ತಿತ್ವವನ್ನು ಉಳಿಸುವ ಬಹುದೊಡ್ಡ ಜವಾಬ್ದಾರಿ ಗ್ರಂಥಪಾಲಕರ ಮೇಲಿದೆ. ಸಾಮಾನ್ಯವಾಗಿ ಸಾರ್ವಜನಿಕ ಗ್ರಂಥಾಲಯಗಳು ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರು ಓದುಗರ ಕೊರತೆಯಂಥ ಸಮಸ್ಯೆಯನ್ನು ಎದುರಿಸುವುದು ತೀರ ಕಡಿಮೆ. ಈ ಮಾತು ಶೈಕ್ಷಣಿಕ ಗ್ರಂಥಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಂಥಪಾಲಕರಿಗೆ ಅನ್ವಯಿಸಿ ಹೇಳುವುದು ತೀರ ಕಷ್ಟ. ಈ ಸಂದರ್ಭ ಗ್ರಂಥಪಾಲಕರ ಎದುರಿರುವ ಏಕೈಕ ಮಾರ್ಗವೆಂದರೆ ಅದು ತಂತ್ರಜ್ಞಾನ ಕೊಡಮಾಡುತ್ತಿರುವ ಸೌಲಭ್ಯಗಳು. ಈ ಸೌಲಭ್ಯಗಳನ್ನು ಉಪಯೋಗಿಸಿಕೊಂಡೇ ಗ್ರಂಥಪಾಲಕರು ಅತಿ ಹೆಚ್ಚಿನ ಓದುಗರನ್ನು ತಲುಪಬೇಕಾಗಿದೆ. ಮಾಹಿತಿ ಶೋಧ ಎನ್ನುವುದು ಒಂದು ಶಿಸ್ತಿನ ಕ್ರಿಯೆಯಾಗಿರುವುದರಿಂದ ತಂತ್ರಜ್ಞಾನವನ್ನು ಮಾಹಿತಿ ಶೊಧದ ಶಿಸ್ತಿಗೆ ಒಳಪಡಿಸುವುದು ಮತ್ತು ಆ ಕುರಿತು ಓದುಗರಿಗೆ ಪ್ರಾಯೋಗಿಕ ತರಬೇತಿ ನೀಡುವ ಶಿಕ್ಷಕನಾಗಿ ಗ್ರಂಥಪಾಲಕರು ಕಾರ್ಯನಿರ್ವಹಿಸಬೇಕಾಗಿದೆ. ಕೇವಲ ಪುಸ್ತಕಗಳ ರಾಶಿಯಿಂದಲೇ ಓದುಗರಿಗೆ ಅಗತ್ಯವಾದ ಮಾಹಿತಿಯನ್ನು ಒದಗಿಸುವುದು ಮತ್ತು ಓದುಗರ ಸಮೂಹವನ್ನು ಗ್ರಂಥಾಲಯದೆಡೆಗೆ ಆಕರ್ಷಿಸುವುದು ದೂರದ ಮಾತು. ಬದಲಾದ ಪರಿಸ್ಥಿತಿಯಲ್ಲಿ ಗ್ರಂಥಪಾಲಕರು ತಂತ್ರಜ್ಞಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ದುಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಆತ ತಂತ್ರಜ್ಞಾನ ಬಳಕೆಯ ನೈಪುಣ್ಯವನ್ನು ಮೊದಲು ತನ್ನದಾಗಿಸಿಕೊಳ್ಳಬೇಕಾಗಿದೆ. ಹಾಗೆಂದ ಮಾತ್ರಕ್ಕೆ ಸಾಂಪ್ರದಾಯಕ ವಾತಾವರಣಕ್ಕೆ ಗ್ರಂಥಪಾಲಕರು ವಿಮುಖರಾಗಿ ನಡೆಯಬೇಕಿಲ್ಲ. ಸಾಂಪ್ರದಾಯಕ ಮತ್ತು ಆಧುನಿಕತೆಯ ಸಂಯೋಗವಾದ ಹೈಬ್ರೀಡ್ ಗ್ರಂಥಾಲಯಗಳು ಈಗ ಅಸ್ತಿತ್ವದಲ್ಲಿರುವುದರಿಂದ ಗ್ರಂಥಪಾಲಕರು ಗ್ರಂಥಗಳು ಮತ್ತು ತಂತ್ರಜ್ಞಾನ ಈ ಎರಡನ್ನೂ ಜೊತೆಜೊತೆಯಾಗಿ ಉಪಯೋಗಿಸಿಕೊಳ್ಳುವ ಜಾಣ್ಮೆ ಹಾಗೂ ತಿಳುವಳಿಕೆಯನ್ನು ಹೊಂದಿರಬೇಕು. ಈ ತಿಳುವಳಿಕೆಯ ಜೊತೆಗೆ ವಿಶ್ಲೇಷಣಾತ್ಮಕವಾದ ಅಧ್ಯಯನ, ಸೇವಾ ಮನೋಭಾವ, ಹೊಸ ವಿಷಯಗಳನ್ನು ಅರಿತುಕೊಳ್ಳುವ ತುಡಿತ, ಹೊಸ ಹೊಸ ಬದಲಾವಣೆಗಳಿಗೆ ತೆರೆದುಕೊಳ್ಳುವ ಮನಸ್ಸು ಇದ್ದಲ್ಲಿ ಗ್ರಂಥಪಾಲಕರು ಕಳೆದು ಹೋಗುತ್ತಿರುವ ಗ್ರಂಥಾಲಯಗಳ ಅಸ್ತಿತ್ವವನ್ನು ಮತ್ತೆ ಮರುಸ್ಥಾಪಿಸುವುದು ಅಸಾಧ್ಯದ ಕಾರ್ಯವೆನಲ್ಲ. 

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Saturday, September 3, 2016

ಕೊಂದು ಹುಟ್ಟುವ ಆಧುನಿಕತೆ



            ದಶಕದ  ನಂತರ ಆ ಹಳ್ಳಿಗೆ ಭೇಟಿ ನೀಡುವ ಪ್ರಸಂಗವೊಂದು ಮೊನ್ನೆ ಎದುರಾಯಿತು. ಅದನ್ನು ಈಗ ಹಳ್ಳಿ ಎನ್ನುವುದಕ್ಕಿಂತ ಅದು ತನ್ನೊಳಗಿನ ಹಳ್ಳಿಯ ಸ್ವರೂಪದಿಂದ ಬಿಡುಗಡೆ  ಹೊಂದುವ  ಹಾದಿಯಲ್ಲಿತ್ತು. ಹತ್ತು ವರ್ಷಗಳ ಹಿಂದಿನ  ಚಿತ್ರಣಕ್ಕೂ ಈಗ ನೋಡುತ್ತಿರುವ ವಾಸ್ತವಿಕತೆಗೂ ಅಜಗಜಾಂತರ ವ್ಯತಾಸವಿತ್ತು. ಹಿಂದೆ ಹತ್ತಾರು ಸಣ್ಣ ಸಣ್ಣ ಅಂಗಡಿಗಳಿದ್ದ ಜಾಗದಲ್ಲಿ ದೊಡ್ಡದೊಂದು ಸುಪರ್ ಬಜಾರ್ (ಮಾಲ್ ನ ಮೂಲ  ರೂಪ) ತಲೆ ಎತ್ತಿ ನಿಂತಿತ್ತು. ಪಟ್ಟಣದಲ್ಲಿ ಮಾರಾಟವಾಗುವ ವಿದೇಶಿ ವಸ್ತುಗಳೆಲ್ಲ ಅಲ್ಲಿ ಖರೀದಿಗೆ  ಲಭ್ಯವಿದ್ದವು. ಊರಿನ ಮಧ್ಯದಲ್ಲಿದ್ದ ನಾಟಕದ ಥೇಟರ್ ಸಿನಿಮಾ ಮಂದಿರವಾಗಿ ಬದಲಾಗಿತ್ತು. ಊರಿನ ನಾಟಕ ಪ್ರೇಮಿಗಳೆಲ್ಲ ಸಿನಿಮಾ ಪ್ರೇಕ್ಷಕರಾಗಿ ಬದಲಾಗಿ ಹೊಸದೊಂದು ಸಾಂಸ್ಕೃತಿಕ ಸ್ಥಿತ್ಯಂತರಕ್ಕೆ ಸಾಕ್ಷಿಗಳಾಗಿದ್ದರು. ಊರಿಗೆ ಒಂದೆರಡು ಮೈಲಿಗಳ ದೂರದಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಯೊಂದು ತಲೆ ಎತ್ತಿ ಊರಿನ ಮಕ್ಕಳೆಲ್ಲ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವ ಹೊಸ ಪರಿಸರವನ್ನು ಸೃಷ್ಟಿಸಿ ಊರಿನ ಚಿತ್ರಣವನ್ನೇ ಬದಲಿಸುವ ಸನ್ನಾಹದಲ್ಲಿತ್ತು. ಊರಿಗೆ ಸಮೀಪದಲ್ಲಿದ್ದ ಹೊಲಗದ್ದೆಗಳು ತಮ್ಮ ಮೂಲ ಸ್ವರೂಪವನ್ನೇ ಬದಲಾಯಿಸಿಕೊಂಡು ಅಪಾರ್ಟ್ ಮೆಂಟ್ ಗಳೆಂಬ ಜನವಸತಿ ಪ್ರದೇಶಗಳಾಗಿ ರೂಪಾಂತರಗೊಂಡಿದ್ದವು. ಒಟ್ಟಿನಲ್ಲಿ ಆಧುನಿಕತೆಯ ಗಾಳಿ ಇಡೀ ಊರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಜನರನ್ನು ಹೊಸ ಬದುಕು ಮತ್ತು ಹೊಸಸವಾಲುಗಳಿಗೆ ತೆರೆದುಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸಿತ್ತು. 

           ಈ ಮೇಲಿನದು ಆಧುನಿಕತೆಯ ಒಂದು ಮುಖವಾದರೆ ಅದು ಸೃಷ್ಟಿಸಿದ ಸಮಸ್ಯೆ ಇನ್ನೊಂದು ರೀತಿಯಾಗಿತ್ತು. ಊರಿನಲ್ಲಿ ದೊಡ್ಡದೊಂದು ಸುಪರ್ ಬಜಾರ್ ತಲೆ ಎತ್ತುತ್ತಿದ್ದಂತೆ ಆ ಜಾಗದಲ್ಲಿದ್ದ ಹತ್ತಾರು ಸಣ್ಣ ಸಣ್ಣ ಅಂಗಡಿಗಳು ಮುಚ್ಚಿ ಹೋದ ಪರಿಣಾಮ  ಬದುಕಿಗಾಗಿ ಆ ಅಂಗಡಿಗಳನ್ನೇ ಆಶ್ರಯಿಸಿದ್ದ ಕುಟುಂಬಗಳು ಅಕ್ಷರಶ: ಬೀದಿಗೆ ಬಂದಿವೆ. ವಿದೇಶಿ ವಸ್ತುಗಳೆಲ್ಲ ಆ ಸುಪರ್ ಬಜಾರ್ ನಲ್ಲಿ ಲಭ್ಯವಿರುವುದರಿಂದ ಆ ಹಳ್ಳಿಯ ಚಮ್ಮಾರ, ನೇಕಾರ, ದರ್ಜಿ  ಇವರೆಲ್ಲ ನಿರುದ್ಯೋಗಿಗಳಾಗಿರುವರು. ಆ ಊರಿನ ಕುಂಬಾರನ  ಗಡಿಗೆಗಳಿಗೆ ಬೇಡಿಕೆ ಸಂಪೂರ್ಣವಾಗಿ ಕುಸಿದಿರುವುದರಿಂದ ಆತ ತನ್ನ ಮನೆತನದ ಕಸುಬನ್ನೇ ಕೈಬಿಟ್ಟು ಮುಂದೆ ಬದುಕು  ಹೇಗೆ ಎಂದು ತಲೆಯ ಮೇಲೆ ಕೈಹೊತ್ತು ಕುಳಿತಿರುವನು. ಊರಿನ ಬಹಳಷ್ಟು ಕೃಷಿ ಭೂಮಿ ವಸತಿ ಸಮುಚ್ಚಯಕ್ಕಾಗಿ ಮಾರಾಟವಾಗಿರುವುದರಿಂದ ಮತ್ತು ಉಳಿದಿರುವ ಕೃಷಿ ಭೂಮಿಯಲ್ಲಿ ರೈತರು ಯಂತ್ರೋಪಕರಣಗಳನ್ನು ಬಳಸುತ್ತಿರುವುದರಿಂದ ಬಡಿಗ  ಮತ್ತು ಕಮ್ಮಾರ  ಇಬ್ಬರಿಗೂ ಕೆಲಸ ಇಲ್ಲವಾಗಿದೆ. ಪಿತ್ರಾರ್ಜಿತವಾಗಿ ಬಂದ ಮನೆತನದ ಕೆಲಸವನ್ನೇ ನಂಬಿ ಕುಳಿತ ಅವರ ಕುಟುಂಬಗಳು ಇಂದು ನಿರ್ಗತಿಕವಾಗಿವೆ. ಸಮೀಪದಲ್ಲೇ ಇಂಗ್ಲಿಷ್ ಶಾಲೆ ಇರುವುದರಿಂದ ಹಾಗೂ ಹಳ್ಳಿಯ ಬಹಳಷ್ಟು ಮಕ್ಕಳು ಕನ್ನಡ ಶಾಲೆಯಿಂದ ಆ ಶಾಲೆಗೆ ವಲಸೆ ಹೋಗುತ್ತಿರುವುದರಿಂದ ಮನೆಪಾಠವನ್ನೇ ನಂಬಿ ಕುಳಿತಿದ್ದ ಕನ್ನಡ ಮಾಧ್ಯಮದಲ್ಲಿ ಓದಿ ಡಿಗ್ರಿ ಸಂಪಾದಿಸಿರುವ ಆ ಊರಿನ ನಿರುದ್ಯೋಗಿ ಯುವಕನ  ಕುಟುಂಬಕ್ಕೆ ಬರುತ್ತಿರುವ ಅಲ್ಪ ಆದಾಯವೂ ನಿಂತು ಹೋಗುವ ಚಿಂತೆ ಕಾಡುತ್ತಿದೆ. ಊರ ಮಧ್ಯದಲ್ಲಿದ್ದ ನಾಟಕ ಥೇಟರ್ ಸಿನಿಮಾ ಮಂದಿರವಾಗಿ ಹೊಸ ರೂಪ ಪಡೆದಿರುವುದರಿಂದ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಊರಿನಲ್ಲಿನ ಅನೇಕ ಯುವಕರೊಳಗಿನ  ಕಲಾವಿದ ನೇಪಥ್ಯಕ್ಕೆ ಸರಿದಿರುವನು. ವಾರಕ್ಕೊಂದು ಹೊಸ ಸಿನಿಮಾ ಊರಿನ ಸಿನಿಮಾ ಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವುದರಿಂದ ಊರ ಅಜ್ಜನ  ಜನಪದ ಹಾಡುಗಳಿಗೆ ಕಿವಿಯಾಗುವವರು ಯಾರೊಬ್ಬರೂ ಇಲ್ಲ.

              ಹೀಗೆ ಈ ಎಲ್ಲ ಸಮಸ್ಯೆಗಳನ್ನು  ತಂದೊಡ್ಡಿದ ಆಧುನಿಕತೆಯನ್ನು ನಾನು ಚಲನಶೀಲ ಎಂದಾಗಲಿ ಇಲ್ಲವೇ ಗತಿಶೀಲತೆ ಎಂದಾಗಲಿ ಕರೆಯಲು ಇಚ್ಛಿಸುವುದಿಲ್ಲ. ಏಕೆಂದರೆ ಹೊಸ ಅವಿಷ್ಕಾರ ಹಳೆಯ ವ್ಯವಸ್ಥೆಯನ್ನು ಇಲ್ಲವಾಗಿಸಿ  ಅದನ್ನು ನಂಬಿರುವ ಜನರನ್ನು ನಿರ್ಗತಿಕರನ್ನಾಗಿಸಿ  ತನ್ನ ಅಸ್ತಿತ್ವವನ್ನು ಕಟ್ಟಿಕೊಳ್ಳುತ್ತಿದೆ. ಹೀಗೆ ನಮ್ಮ ನಡುವೆ ಇದ್ದ ವ್ಯವಸ್ಥೆಯೊಂದು ಸಂಪೂರ್ಣವಾಗಿ ನೇಪಥ್ಯಕ್ಕೆ ಸರಿಯುತ್ತಿರುವುದರಿಂದ ಈ ಆಧುನಿಕ ಸ್ವರೂಪವನ್ನು ಚಲನಶೀಲತೆ ಎಂದು ಗುರುತಿಸುವುದು  ತಪ್ಪಾಗುತ್ತದೆ.

ಗುಡಿಕೈಗಾರಿಕೆಗಳ ಪತನ


           ತತ್ರಾಣಿ ಎನ್ನುವುದು ಅದೊಂದು ನೀರನ್ನು ಹಿಡಿದಿಡಲು ಉಪಯೋಗಿಸುವ ಸಾಧನ. ಮಣ್ಣಿನಿಂದ ತಯ್ಯಾರಿಸುವ ಇದನ್ನು ಸುಲಭವಾಗಿ ರೈತರು ತಮ್ಮೊಂದಿಗೆ ಹೊಲದ ಕೆಲಸಕ್ಕೆಂದು ದೂರ ಹೋಗುವಾಗ ತೆಗೆದುಕೊಂಡು ಹೋಗುತ್ತಿದ್ದರು. ಅನೇಕ ಗಂಟೆಗಳವರೆಗೆ ನೀರನ್ನು ತಂಪಾಗಿ ಹಿಡಿದಿಡುವ ನೈಸರ್ಗಿಕ ಗುಣ ಈ ಸಾಧನಕ್ಕಿದೆ. ನನ್ನ ವಯೋಮಾನದವರಿಗೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪರಿಸರದಿಂದ ಬಂದವರಿಗೆ ಇದರ ಬಗ್ಗೆ ಗೊತ್ತು. ಆದರೆ ಇಂದಿನ ಮಕ್ಕಳೆದುರು 'ತತ್ರಾಣಿ' ಎನ್ನುವ ಶಬ್ದವನ್ನು ನಾವು ಉಪಯೋಗಿಸಿದಲ್ಲಿ ಅದು ಅವರಿಗೆ ವಿಚಿತ್ರವಾಗಿಯೂ ಮತ್ತು ಅಪರಿಚಿತವಾಗಿಯೂ ಕಾಣುತ್ತದೆ. ಇದಕ್ಕೆಲ್ಲ ಕಾರಣ ಈ ದಿನಗಳಲ್ಲಿ ತತ್ರಾಣಿ ಎನ್ನುವ ಮಣ್ಣಿನ ಮಡಿಕೆಯ ಬಳಕೆ ಮತ್ತು ಉತ್ಪಾದನೆ ಎರಡೂ ಕಾಲನ ಗರ್ಭವನ್ನು ಸೇರಿಕೊಂಡಿವೆ. ನೀರನ್ನು ಉಪಯೋಗಿಸಲು ಪ್ಲಾಸ್ಟಿಕ್ ಬಾಟಲಿಗಳ ಬಳಕೆ ಶುರುವಾದ ಮೇಲೆ ಅದರ ಉಪಯೋಗ ನಗರ ಪ್ರದೇಶವನ್ನು ದಾಟಿ ಹಳ್ಳಿಗಳಿಗೂ ವಿಸ್ತರಿಸಿದೆ. ರೈತರು ಮತ್ತು ದನಗಾಹಿಗಳು ಈ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ಕೊಂಡೊಯ್ಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಹೀಗೆ ತತ್ರಾಣಿಯ ಬಳಕೆ ಸಂಪೂರ್ಣವಾಗಿ ನಿಂತು ಹೋದ ಮೇಲೆ ಅದರ ನೇರ ಪರಿಣಾಮ ಇಂಥ ಮಣ್ಣಿನ ಮಡಿಕೆಗಳನ್ನು ತಯ್ಯಾರಿಸಿ ಮಾರುತ್ತಿದ್ದ ಕುಟುಂಬಗಳ ಮೇಲಾಯಿತು. ತಮ್ಮ ಉತ್ಪಾದಿತ ವಸ್ತುಗಳಿಗೆ ಗ್ರಾಹಕರೇ ದೊರೆಯದಿದ್ದಾಗ ಸಹಜವಾಗಿಯೇ ಅಂಥ  ಕುಟುಂಬಗಳು ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ಸಂದರ್ಭ ಮಣ್ಣಿನ ಮಡಿಕೆಗಳ ಬದಲಾಗಿ ಪ್ಲಾಸ್ಟಿಕ್ ಬಾಟಲಿಗಳನ್ನು ನಮ್ಮ ಊರಿನ ಕುಂಬಾರರ ಕುಟುಂಬಗಳು ತಯ್ಯಾರಿಸಲಿ ಎನ್ನುವುದು ಶುದ್ಧ ಮೂರ್ಖತನವಾಗುತ್ತದೆ. ಗ್ರಾಹಕರ ಅಗತ್ಯಗಳು ಬದಲಾದಂತೆ ಅಂಥದ್ದೊಂದು ಬದಲಾವಣೆಗೆ ಉತ್ಪಾದಕರನ್ನು ಸಿದ್ದಗೊಳಿಸುವುದು ಅಸಾಧ್ಯದ ಸಂಗತಿ. ಈ ಮಾತು ಇನ್ ವೇಟರ್ ಗಳ ಬಳಕೆ ಶುರುವಾದ ಮೇಲೆ ಕಂದಿಲುಗಳನ್ನು ತಯ್ಯಾರಿಸುವ ಕಮ್ಮಾರನಿಗೆ ಇನ್ ವೇಟರ್ ಗಳನ್ನು ತಯಾರಿಸುವಂತೆ  ಹೇಳಲು ಸಾಧ್ಯವಿಲ್ಲ ಎನ್ನುವುದಕ್ಕೂ ಅನ್ವಯವಾಗುತ್ತದೆ.

             ಈ ಮೇಲಿನ ಸಮಸ್ಯೆ ನೇಕಾರ, ಬಡಿಗ, ಸಿಂಪಿಗ, ಚಮ್ಮಾರ, ಕುಂಬಾರ, ಕಮ್ಮಾರ  ಹೀಗೆ ಪರಂಪರಾಗತವಾಗಿ ಬಂದ ಮನೆತನದ ಕಸುಬನ್ನೇ ಬದುಕಿನ ಮೂಲಾಧಾರವೆಂದು ನಂಬಿಕೊಂಡು ಕುಳಿತ ಕುಟುಂಬಗಳನ್ನು ಕಾಡುತ್ತಿದೆ. ಹೊಸ ವಸ್ತುಗಳ ಅವಿಷ್ಕಾರ ಮತ್ತು ಅವುಗಳ ಜನಪ್ರಿಯತೆ ಹೆಚ್ಚುತ್ತಿದ್ದಂತೆ ಗುಡಿಕೈಗಾರಿಕೆಗಳಲ್ಲಿನ ಉತ್ಪನ್ನಗಳ ಬೇಡಿಕೆ ಕುಸಿಯುತ್ತಿದೆ. ರೆಫಿಜಿರೆಟರ್ ಬಳಕೆ ಮಣ್ಣಿನ ಮಡಿಕೆಯನ್ನೇ ನುಂಗಿಹಾಕಿತು, ಇನ್ ವೇಟರ್ ನ ಅವಿಷ್ಕಾರ  ಕಂದಿಲು ಮತ್ತು ಚಿಮಣಿಗಳನ್ನು ನೇಪಥ್ಯಕ್ಕೆ ಸರಿಸಿತು, ಟ್ರ್ಯಾಕ್ಟರ್ ಉಪಯೋಗ ಕಬ್ಬಿಣ ಮತ್ತು ಕಟ್ಟಿಗೆಯ ಕೃಷಿ ಉಪಕರಣಗಳನ್ನು ಮೂಲೆಗುಂಪಾಗಿಸಿತು, ವಿದೇಶದಿಂದ ಆಮದಾಗುತ್ತಿರುವ ಬೂಟು ಚಪ್ಪಲಿಗಳಿಂದಾಗಿ ದೇಶಿಯ ಪಾದರಕ್ಷೆಗಳಿಗೆ ಗ್ರಾಹಕರೇ ಇಲ್ಲವಾದರು, ಸಿದ್ದ ಉಡುಪುಗಳ ಜನಪ್ರಿಯತೆ ನೇಕಾರರ ಕಸುಬನ್ನೇ ಕಸಿಯಿತು.  ಒಟ್ಟಿನಲ್ಲಿ ಆಧುನಿಕ ತಂತ್ರಜ್ಞಾನದ ಫಲವಾಗಿ ಆದ ರೂಪಾಂತರ ವ್ಯವಸ್ಥೆಯೊಂದನ್ನು ಕಾಲಗರ್ಭಕ್ಕೆ ಸೇರಿಸಿ ಅದೇನಿದ್ದರೂ ಈಗ ಇತಿಹಾಸ ಎನ್ನುವಂತಾಗಿದೆ.

ಸಾಂಸ್ಕೃತಿಕ ಪಲ್ಲಟ


           ನಾನು ಚಿಕ್ಕವನಾಗಿದ್ದಾಗ ಆಗೆಲ್ಲ ಬೆಸಿಗೆಯ ರಜೆಯಲ್ಲಿನ ಮನೋರಂಜನೆ ಎಂದರೆ ಅದು ಪ್ರತಿನಿತ್ಯ ಬಣ್ಣದ ವೇಷದವರು ಊರಿನಲ್ಲಿ ಆಡುತ್ತಿದ್ದ ನಾಟಕಗಳು. ಬೆಸಿಗೆ ಸಾಮಾನ್ಯವಾಗಿ ರೈತರನ್ನೂ ಒಳಗೊಂಡಂತೆ ಎಲ್ಲರಿಗೂ ಬಿಡುವಿನ ಕಾಲವದು. ಇಂಥ ಸಮಯದಲ್ಲೇ ಊರಿಗೆ ಬರುತ್ತಿದ್ದ ಬಣ್ಣದ ವೇಷದವರು ಪ್ರತಿನಿತ್ಯ ರಾಮಾಯಣ, ಮಹಾಭಾರತದ ಪ್ರಸಂಗಗಳನ್ನು ಊರ ಮಧ್ಯದ ಬಯಲು ಜಾಗದಲ್ಲಿ ಪ್ರದರ್ಶಿಸುತ್ತಿದ್ದರು. ಹೀಗೆ ತಿಂಗಳು ಎರಡು ತಿಂಗಳುಗಳ ಕಾಲ ಊರೂರು ಅಲೆಯುವ ಅವರು ತಮ್ಮ ನಾಟಕ ಪ್ರದರ್ಶನದಿಂದ ಒಂದು ವರ್ಷದ ಕೂಳಿಗಾಗುವಷ್ಟು ದವಸ ಧಾನ್ಯ ಸಂಗ್ರಹಿಸುವುದು ಸಾಮಾನ್ಯವಾಗಿತ್ತು. ಜನರಿಗೆಲ್ಲ ಬಣ್ಣದ ವೇಷದವರ ಹಾಡು ಮತ್ತು ಕುಣಿತವೇ ಮನೋರಂಜನೆಯಾದರೆ ಅವರಿಗೆ ಊರಿನ ಜನ ಕೊಡುತ್ತಿದ್ದ ಕಾಳು ಕಡಿಗಳೇ ಜೀವನ ನಿರ್ವಹಣೆಗೆ ಆಧಾರ.

          ಇನ್ನು ಒಂದಿಷ್ಟು ಹೆಚ್ಚು ಮನೋರಂಜನೆ ಬೇಕೆಂದರೆ ಆಗ ಇದ್ದ ಇನ್ನೊಂದು ಮಾಧ್ಯವೆಂದರೆ ಅದು ರಂಗಭೂಮಿ. ಅನೇಕ ವೃತ್ತಿಪರ ನಾಟಕ ಕಂಪನಿಗಳು ಊರುಗಳಲ್ಲಿ ಬಿಡಾರ ಹೂಡಿ ಇಡೀ ರಾತ್ರಿ ನಾಟಕ ಪ್ರದರ್ಶಿಸುತ್ತಿದ್ದವು. ಸಾಮಾನ್ಯವಾಗಿ ಆ ನಾಟಕ ಕಂಪನಿಗಳು ಪ್ರದರ್ಶಿಸುತ್ತಿದ್ದ ನಾಟಕಗಳ ಕಥೆ ಪೌರಾಣಿಕ ಕಥೆಗಳೇ ಆಗಿರುತ್ತಿದ್ದವು. ಯಾವಾಗ ಪರದೆಯ ಮೇಲೆ ಚಲಿಸುವ ಚಿತ್ರಗಳನ್ನು ಪ್ರದರ್ಶಿಸುವ ಸಿನಿಮಾ ಎನ್ನುವ ಮಾಧ್ಯಮವೊಂದು ಅವಿಷ್ಕಾರವಾಯಿತೋ ಆಗ ರಂಗಭೂಮಿಯ ಕಲಾವಿದರು ಬೆಳ್ಳಿ ಪರದೆಯ ಕಡೆಗೆ ಆಕರ್ಷಿತರಾಗ ತೊಡಗಿದರು. ಇದೊಂದು ಬಹುದೊಡ್ಡ ಸಾಂಸ್ಕೃತಿಕ ಪಲ್ಲಟ. ಇಂಥದ್ದೊಂದು ಪಲ್ಲಟಕ್ಕೆ ಸಾಕ್ಷಿಯಾಗಿ ಭಾರತದ ಮೊದಲ ಸಿನಿಮಾ 'ರಾಜಾ ಹರಿಶ್ಚಂದ್ರ' ತಯ್ಯಾರಾಯಿತು. ವಿಪರ್ಯಾಸವೆಂದರೆ ಈ ಮೂಕಿ ಸಿನಿಮಾದ ಕಥಾವಸ್ತು ನೇರವಾಗಿ ರಂಗಭೂಮಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ನಾಟಕವೇ ಆಗಿತ್ತು. ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಪ್ರಥಮ ಟಾಕಿ ಸಿನಿಮಾ 'ಆಲಂ ಆರಾ' ದ ಕಥಾವಸ್ತು ಸಹ ರಂಗಭೂಮಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ನಾಟಕವೇ ಆಗಿತ್ತು. ಆದರೆ ಕಾಲಕ್ರಮೇಣ ಸಿನಿಮಾ ನಾಟಕದಿಂದ ಬಿಡಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಯಿತು. ದುರಂತವೆಂದರೆ ನಾಟಕದ ಗರ್ಭಸೀಳಿ ಹೊರಬಂದ ಸಿನಿಮಾ ನಂತರದ ದಿನಗಳಲ್ಲಿ ನಾಟಕವನ್ನೇ ನುಂಗಿಹಾಕಿತು. ಒಂದರ್ಥದಲ್ಲಿ ಇದು  ತಾಯಿಯ ಗರ್ಭಸೀಳಿ ಹೊರಬಂದ ಶಿಶು ತಾಯಿಯನ್ನೇ ಕೊಂದಂತಾಯಿತು. ಸಿನಿಮಾ ನಾಟಕದಿಂದ ಬಿಡಿಸಿಕೊಂಡಂತೆ ನಾಟಕ ಕಲಾವಿದರು ಸಹ ರಂಗಭೂಮಿಯ ಪ್ರಭಾವದಿಂದ ಹೊರಬರಲಾರಂಭಿಸಿದರು. ಪ್ರಾರಂಭದಲ್ಲಿ ಇದು ಅವರಿಗೆ ಕಷ್ಟ ಎಂದೆನಿಸಿದರೂ ಹೊರಬರುವ ಅನಿವಾರ್ಯತೆ ಎದುರಾಯಿತು. ರಾಜಕುಮಾರ ಪ್ರಾರಂಭದ ಒಂದೆರಡು ಸಿನಿಮಾಗಳಲ್ಲಿ ಪೌರಾಣಿಕ ಪಾತ್ರವನ್ನೇ ಆಯ್ಕೆ ಮಾಡಿಕೊಂಡರೂ 'ರಾಯರ ಸೊಸೆ' ಎನ್ನುವ ಸಾಮಾಜಿಕ ಚಿತ್ರದ ನಂತರ ಅವರು ಸಾಮಾಜಿಕ ಮತ್ತು ಬಾಂಡ್ ಪಾತ್ರಗಳಿಗೆ ತಮ್ಮನ್ನು ಒಗ್ಗಿಸಿಕೊಂಡಿದ್ದು ಅವರು ರಂಗಭೂಮಿಯಿಂದ ಬಿಡುಗಡೆ ಹೊಂದಿದಕ್ಕೊಂದು ಉತ್ತಮ ಉದಾಹರಣೆ. ಇಂಥದ್ದೊಂದು ಹೊಸತನಕ್ಕೆ ರಂಗಭೂಮಿ  ಕಲಾವಿದರ ವಲಸೆ ನೇರವಾಗಿಯೇ ರಂಗಭೂಮಿಯನ್ನು ಬಡವಾಗಿಸಿತು.  ಸಾಂಸ್ಕೃತಿಕ ಕ್ಷೇತ್ರದಲ್ಲಾದ ಈ ಪಲ್ಲಟ ಪ್ರೇಕ್ಷಕರ ಜಿಗಿತಕ್ಕೂ ಕಾರಣವಾಗಿ ನಾಟಕಗಳನ್ನು  ನೋಡಲು ಜನರೇ ಇಲ್ಲದಂತಾಯಿತು. ಅನೇಕ ವೃತ್ತಿಪರ ನಾಟಕ ಕಂಪನಿಗಳು ಪ್ರೇಕ್ಷಕರಿಲ್ಲದೆ ಬಾಗಿಲು ಮುಚ್ಚಿದವು. ಇನ್ನು ಕೆಲವು ನಾಟಕ ಕಂಪನಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ದ್ವಂದ್ವಾರ್ಥ  ಸಂಭಾಷಣೆಯ ಮೊರೆ ಹೋಗಿ ಜನರ ಅಭಿರುಚಿಯನ್ನು ಬೇರೆಡೆ ಹೊರಳಿಸಿದವು.

          ನನ್ನನ್ನು ಕಾಡುವ ಇನ್ನೊಂದು ಸಾಂಸ್ಕೃತಿಕ ಪಲ್ಲಟ ಅದು ಜನರಲ್ಲಿ ಕಡಿಮೆಯಾಗುತ್ತಿರುವ  ಓದಿನ ಅಭಿರುಚಿ. ಬಣ್ಣದ ಟಿವಿ ನಮ್ಮ ನಮ್ಮ ಮನೆಯನ್ನು ಪ್ರವೇಶಿಸಿದ ಆ ಕ್ಷಣ ಪುಸ್ತಕಗಳನ್ನು ಓದುವ ಗೃಹಿಣಿಯರೆಲ್ಲ ಟಿವಿ ಪ್ರೇಕ್ಷಕರಾಗಿ ಬದಲಾದರು. ಜೊತೆಗೆ ಅದು ಮನೋರಂಜನೆಯನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸಲಾರಂಭಿಸಿದ ಮೇಲೆ ಗಂಭೀರ ಓದುಗರೂ ಸಹ ಧಾರಾವಾಹಿಗಳು ಮತ್ತು ಸಿನಿಮಾಗಳ ಪ್ರೇಕ್ಷಕರಾಗಿ ಬದಲಾದದ್ದು ಈ ದಿನಗಳಲ್ಲಿ ನಾವು ಕಂಡ ಬಹುದೊಡ್ಡ ಸಾಂಸ್ಕೃತಿಕ ಪಲ್ಲಟ. ಯಾವಾಗ ಓದುಗರ ಸಂಖ್ಯೆ ಕ್ಷೀಣಿಸಲಾರಂಭಿಸಿತೋ ಆಗ ಪುಸ್ತಕಗಳ ಪ್ರಕಾಶಕರು ಮತ್ತು ಮಾರಾಟಗಾರರಿಗೆ ನಿರುದ್ಯೋಗ ಪರ್ವ ಎದುರಾಯಿತು. ಈಗೀಗ ಅಂತರ್ಜಾಲದಲ್ಲೇ ಪುಸ್ತಕ ಮತ್ತು ಪತ್ರಿಕೆಗಳು ದೊರೆಯುತ್ತಿರುವುದರಿಂದ ಇರುವ ಅತ್ಯಲ್ಪ ಸಂಖ್ಯೆಯ ಓದುಗರೂ ಕೂಡ ಪ್ರಕಟಿತ ಪತ್ರಿಕೆ ಮತ್ತು ಪುಸ್ತಕಗಳನ್ನು ಕೊಂಡು ಓದುತ್ತಿಲ್ಲ. ಪರಿಣಾಮವಾಗಿ ಪುಸ್ತಕ ಪ್ರಕಾಶಕರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಖರೀದಿಯನ್ನು ನಂಬಿಕೊಂಡು ಪುಸ್ತಕಗಳನ್ನು ಪ್ರಕಟಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಒಂದು ಕಾಲದಲ್ಲಿ ಮಾರುಕಟ್ಟೆಯೊಂದರ ಅತಿ ಹೆಚ್ಚಿನ ಜಾಗವನ್ನು ಆಕ್ರಮಿಸುತ್ತಿದ್ದ ಪುಸ್ತಕ ಅಂಗಡಿಗಳೆಲ್ಲ ಇಂದು ಗ್ರಾಹಕರಿಲ್ಲದೆ ಮುಚ್ಚಿಹೋಗಿವೆ. ಅಂತರ್ಜಾಲ, ಬಣ್ಣದ ಟಿವಿ, ಮನೋರಂಜನಾ ಚಾನೆಲ್ ಗಳ ಅವಿಷ್ಕಾರ ಅನೇಕ ಶತಮಾನಗಳಿಂದ ಬಳಕೆಯಲ್ಲಿದ್ದ ಪುಸ್ತಕ ಎನ್ನುವ ಸಾಂಸ್ಕೃತಿಕ ಮಾಧ್ಯಮವನ್ನು ತೆರೆಮರೆಗೆ ಸರಿಸುತ್ತಿದೆ.

ಸಾಮಾಜಿಕ ಪರಿವರ್ತನೆ


        ಆಧುನಿಕತೆ ಎನ್ನುವ ಪ್ರವಾಹದ ಸೆಳೆತಕ್ಕೆ ಸಿಕ್ಕು ಬದಲಾದ ಸಾಮಾಜಿಕ ಪರಿವರ್ತನೆಯಲ್ಲಿ ಕುಟುಂಬ ವ್ಯವಸ್ಥೆ ಮುಖ್ಯವಾದದ್ದು. ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬ ಮತ್ತು ವಿಭಕ್ತ ಕುಟುಂಬ ಮತ್ತಷ್ಟು ಒಡೆದು ಸಣ್ಣ ಸಣ್ಣ ಚೂರುಗಳಾಗಿ ನ್ಯೂಕ್ಲಿಯರ್ ಕುಟುಂಬಗಳು ಅಸ್ತಿತ್ವಕ್ಕೆ ಬಂದಿವೆ. ಇದು ಒಂದರ ಗರ್ಭವನ್ನು ಮತ್ತೊಂದು ಸೀಳಿಕೊಂಡು ಹೊರಬಂದು  ತನ್ನ ಮೂಲ ಸ್ವರೂಪವನ್ನು ಸಂಪೂರ್ಣವಾಗಿ ಸಾಯಿಸಿ  ಆದ ರೂಪಾಂತರ. ಇಂಥದ್ದೊಂದು ರೂಪಾಂತರದ ಪ್ರಕ್ರಿಯೆಯಲ್ಲಿ ನಾವು ಕಳೆದುಕೊಳ್ಳುತ್ತಿರುವುದೇನು? ಎಂದು ವಿವೇಚಿಸಬೇಕಿದೆ. ಕೂಡು ಕುಟುಂಬಗಳು ಒಡೆದು ಹೋಳಾಗುತ್ತಿರುವ ಈ ಸಮಯ ಅಲ್ಲಿ ಕೇವಲ ಭೌತಿಕ ವಸ್ತುಗಳು ಒಡೆದು ಚೂರಾಗುತ್ತಿಲ್ಲ. ಇಂಥದ್ದೊಂದು ರೂಪಾಂತರದಿಂದ  ಮನುಷ್ಯ ಸಂಬಂಧಗಳು ಶಿಥಿಲಗೊಳ್ಳುತ್ತಿವೆ. ಈ ಒಂದು ರೂಪಾಂತರದ ಕ್ರಿಯೆಗೆ ಕಾರಣವಾಗುತ್ತಿರುವ ಸಂಗತಿಗಳನ್ನು ಈ  ರೀತಿಯಾಗಿ ಗುರುತಿಸಬಹುದು

೧. ಅತಿ ಎನ್ನುವಷ್ಟು ಆರ್ಥಿಕ ಸ್ವಾವಲಂಬನೆ ಮನುಷ್ಯರನ್ನು ಕುಟುಂಬದ ಸಂಬಂಧಗಳಿಂದ ಬೇರ್ಪಡಿಸುತ್ತಿ ರಬಹುದು.
೨. ಮನುಷ್ಯ ವೈಯಕ್ತಿಕ ಅಸ್ತಿತ್ವವನ್ನು ಕಟ್ಟಿಕೊಳ್ಳುವ ಮಹತ್ವಾಕಾಂಕ್ಷೆಗೆ ಒಳಗಾಗಿರುವ ಸಾಧ್ಯತೆ ಇರಬಹುದು

          ಈ ಎರಡು ಮೇಲಿನ ಕಾರಣಗಳನ್ನು ನಾವು ನಗರ ವಾಸಿಗಳಲ್ಲಿ ಕಾಣುವ ಸಾಧ್ಯತೆ ಹೆಚ್ಚು. ಈ ಕಾರಣಗಳನ್ನು ವಿಶ್ಲೇಷಿಸುವಾಗ ಇವುಗಳು ವಿಭಕ್ತ ಕುಟುಂಬಗಳನ್ನು ಮತ್ತಷ್ಟು ಒಡೆದು ಚೂರಾಗಿಸುವ ಸಾಧ್ಯತೆ ಹೆಚ್ಚು ಹೆಚ್ಚು ಕಂಡು ಬರುತ್ತದೆ. ಅದಕ್ಕೆ ಉದಾಹರಣೆ ಈ ಸಿಂಗಲ್ ಪೆರೆಂಟ್ ಕುಟುಂಬಗಳು ಮತ್ತು ಲಿವಿಂಗ್ ಟುಗೆದರ್ ಕುಟುಂಬಗಳು. ಹೀಗೆ ಕುಟುಂಬವೊಂದು ಅನೇಕ ಸ್ತರಗಳಲ್ಲಿ ಒಡೆದು ಹೊಳಾಗುತ್ತಿರುವುದರಿಂದ ಮನುಷ್ಯನಿಗೆ ನೆಮ್ಮದಿ, ಸಂತಸ, ಸುರಕ್ಷತಾ ಭಾವನೆ ಇದೆಲ್ಲ ಗಗನ ಕುಸುಮವಾಗುತ್ತಿದೆ. ಕೂಡು ಕುಟುಂಬದಿಂದ ಒಡೆದು ಹೊರಬಂದು ಪ್ರತ್ಯೇಕವಾಗಿ ನಿಲ್ಲುವ ಬದುಕು ಸ್ವಾತಂತ್ರ್ಯದ ಜೊತೆಗೆ ಸ್ವೆಚ್ಛಾಚಾರವನ್ನೂ ತಂದು ಕೊಡುತ್ತಿರುವುದರಿಂದ ಒಂದೇ ಸೂರಿನಡಿ ಬದುಕುತ್ತಿರುವಾಗಲೂ ಮನುಷ್ಯ  ಸಂಬಂಧಗಳು ಅರ್ಥಕಳೆದುಕೊಳ್ಳುತ್ತಿವೆ. ಕುಟುಂಬದ ಮೂಲ ಸ್ವರೂಪವನ್ನು ರೂಪಾಂತರಿಸಿ ಅಸ್ತಿತ್ವಕ್ಕೆ ಬಂದ ಈ ನ್ಯೂಕ್ಲಿಯರ್ ಕುಟುಂಬಗಳು ಸಹ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದು ಈಗ ನಾವು ನೋಡುತ್ತಿರುವ ಸಾಮಾಜಿಕ ಪರಿವರ್ತನೆಯ ಬಹುದೊಡ್ಡ ದುರಂತಗಳಲ್ಲೊಂದು.

ಹಳ್ಳಿಗಳ ನಾಶ


        ಹಳ್ಳಿಗಳೆಲ್ಲ ಬೆಳೆದು ನಗರಗಳಾಗಿವೆ. ಇನ್ನೂ ಹಳ್ಳಿಯಾಗಿಯೇ ಉಳಿದವುಗಳು ನಗರಗಳಾಗುವ ಧಾವಂತದಲ್ಲಿವೆ. ನಗರವಾಗಿ ರೂಪಾಂತರವಾಗುವ ಅರ್ಹತೆ ಇಲ್ಲದ ಊರುಗಳು ಸಂಕಷ್ಟದಲ್ಲಿವೆ. ಯಾವಾಗ ಹಳ್ಳಿ ಎನ್ನುವುದು ನಗರವಾಗಿ ಮಾರ್ಪಟ್ಟಿತೋ ಆಗ ಹಳ್ಳಿಗಳೆಲ್ಲ ಶಾಪಗ್ರಸ್ತ ಅಹಲ್ಯೆಯಂತಾದವು. ನಗರ ಬದುಕಿನ ಆಕರ್ಷಣೆ ಮತ್ತು ಅಲ್ಲಿ ದೊರೆಯುವ ಸವಲತ್ತುಗಳಿಂದಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಲಕ್ಷಾಂತರ ಜನ ವಾಸಿಸುವ ನಗರ ಪ್ರದೇಶಗಳಲ್ಲಿ ದಿನಕ್ಕೆ ೨೪ ಗಂಟೆ ವಿದ್ಯುತ್, ನೀರು, ವೈದ್ಯಕೀಯ ಸೌಲಭ್ಯ, ಉತ್ತಮ ಶಿಕ್ಷಣ, ರಸ್ತೆ ಸಂಪರ್ಕ ಹೀಗೆ ಅನೇಕ ಸೌಲಭ್ಯಗಳು ದೊರೆಯುತ್ತಿವೆ. ಅದೇ ಕಡಿಮೆ ಜನಸಂಖ್ಯೆ ಇರುವ ಹಳ್ಳಿಗಳು ಸಮಸ್ಯೆಗಳ ಆಗರಗಳಾಗಿವೆ. ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಕೊರತೆ, ವೈದ್ಯಕೀಯ ಸೌಲಭ್ಯದ ಕೊರತೆ, ಸರಿಯಾದ ರಸ್ತೆ ಸಂಪರ್ಕವಿಲ್ಲದಿರುವುದು ಹೀಗೆ ಅನೇಕ ಸಮಸ್ಯೆಗಳು ಗ್ರಾಮೀಣ ಜನರ ಬದುಕನ್ನು ಕಾಡುತ್ತಿವೆ. ಅಲ್ಲಿನ ಮಕ್ಕಳು ಬಾಗಿಲಿಲ್ಲದ ಮತ್ತು ಸೂರಿಲ್ಲದ ಕನ್ನಡ ಶಾಲೆಗಳಲ್ಲೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದೆ. ನಮ್ಮ ಜನಪ್ರತಿನಿಧಿಗಳು ನಗರ ಪ್ರದೇಶಗಳಿಗೆ ಕೊಡುತ್ತಿರುವಷ್ಟು ಆದ್ಯತೆ ಗ್ರಾಮೀಣ ಪ್ರದೇಶಗಳಿಗೆ ಕೊಡುತ್ತಿಲ್ಲದಿರುವುದು ದುರಂತದ ಸಂಗತಿ. ಪರಿಣಾಮವಾಗಿ ಒಂದು ಕಾಲದಲ್ಲಿ ನೆಮ್ಮದಿಯ ಬದುಕಿನ ತಾಣಗಳಾಗಿದ್ದ ಹಳ್ಳಿಗಳು ಇಂದು ಸಮಸ್ಯೆಗಳ ಕೇಂದ್ರಗಳಾಗಿ ಹಳ್ಳಿಗರ ಭವಿಷ್ಯವನ್ನು ಅನಿಶ್ಚಿತತೆಗೆ ದೂಡಿವೆ.

ಕೊನೆಯ ಮಾತು 

       ಅಣ್ಣನ ಮಗಳ ಮದುವೆಗೆಂದು ಗುಲಬರ್ಗಾಕ್ಕೆ  ಹೋಗಿದ್ದಾಗ ಮನೆಯಲ್ಲಿ ಮಕ್ಕಳೆಲ್ಲ ಹಠ ಮಾಡಿ ನನ್ನನ್ನು ಶಂಕರ್ ನಿರ್ದೇಶನದ 'ಐ' ಸಿನಿಮಾ ನೋಡಲು ಕರೆದೊಯ್ದರು. ನಾನಿರುವ  ಊರಿನಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಇಲ್ಲದಿರುವುದರಿಂದ ಹಾಗೂ ಅಂಥದ್ದೊಂದು ವಾತಾವರಣದಲ್ಲಿ ಸಿನಿಮಾ ನೋಡದೆ ಇದ್ದುದ್ದರಿಂದ ನನಗೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ನೋಡುವ ಆಸೆಯಾಗಿ ಮನೆಯ ಮಕ್ಕಳೊಂದಿಗೆ ಸಿನಿಮಾ ನೋಡಿ ಬಂದೆ. ಸಂಕೀರ್ಣದ ಬೃಹತ್ ಕಟ್ಟಡದಲ್ಲಿರುವ ಆ ಸಿನಿಮಾ ಮಂದಿರ ಅದೊಂದು ದೊಡ್ಡ ಜೈಲಿನಂತೆ ಭಾಸವಾಯಿತು. ಚಿತ್ರಮಂದಿರದ ಒಳಗೆ ಪ್ರವೇಶಿಸಲು ಎರಡೆರಡು ಬಾರಿ ಸೆಕ್ಯೂರಿಟಿ ಗಾರ್ಡ್ ಗಳಿಂದ ತಪಾಸಣೆಗೆ ಒಳಗಾಗಬೇಕು. ಹೆಣ್ಣುಮಕ್ಕಳ ಬ್ಯಾಗ್ ಮತ್ತು ಗಂಡಸರನ್ನು ದೈಹಿಕವಾಗಿ ತಪಾಸಿಸುವ ಆ ಚಿತ್ರಮಂದಿರದಲ್ಲಿ ಹೊರಗಿನಿಂದ ಯಾವ ತಿಂಡಿ ಪದಾರ್ಥಗಳನ್ನು ಒಳಗೆ ಒಯ್ಯುವಂತಿಲ್ಲ. ದುಬಾರಿಯಾದರೂ ಚಿತ್ರಮಂದಿರದ ಒಳಗೆ ಇರುವ ಕ್ಯಾಂಟೀನ್ ನಿಂದಲೇ ಬೇಕಾದ ತಿಂಡಿ ಮತ್ತು ಪಾನೀಯಗಳನ್ನು ಖರೀದಿಸಬೇಕು. ಈ ಮೊದಲು ಒಂದು ಚಿತ್ರಮಂದಿರದ ಸುತ್ತ ಹತ್ತಾರು ತಳ್ಳು ಗಾಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದುದ್ದನ್ನು ನೋಡಿದ್ದ ನನಗೆ ಈ ಹೊಸ ಬದಲಾವಣೆ ಅಚ್ಚರಿ ತರಿಸಿತು. ಒಂದೊಮ್ಮೆ ಸಿನಿಮಾ ಮಂದಿರಗಳ ಸುತ್ತ ವ್ಯಾಪಾರ ಮಾಡಿ ನೂರಾರು ಕುಟುಂಬಗಳು ಬದುಕುತ್ತಿದ್ದ ಕಾಲ ಬದಲಾಗಿ ಈಗ ನಾಲ್ಕಾರು ಪರದೆಗಳಿರುವ ಮಲ್ಟಿಪ್ಲೆಕ್ಸ್ ನಲ್ಲಿ ಇದ್ದದ್ದು ಒಂದು ಕ್ಯಾಂಟೀನ್ ಮಾತ್ರ. ಆಧುನೀಕರಣ ಸಾವಿರಾರು ಸಣ್ಣ ಸಣ್ಣ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿ ಅವರ ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದ್ದಕ್ಕೆ ಆ ಮಲ್ಟಿಪ್ಲೆಕ್ಸ್ ಒಂದು ದೃಷ್ಟಾಂತದಂತೆ ಗೋಚರಿಸಿ ಮಧ್ಯಮ ಹಾಗೂ ಬಡ ಕುಟುಂಬಗಳ ಭವಿಷ್ಯ ಕಣ್ಣೆದುರು ಬಂದಂತಾಗಿ  ನೋಡಿದ ಸಿನಿಮಾ ಮನಸ್ಸಿನೊಳಗೆ ಇಳಿಯಲೇ ಇಲ್ಲ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 



             

Saturday, August 6, 2016

ಅನಂತಮೂರ್ತಿ ಅವರ ಕಥೆಗಳ ಅನನ್ಯತೆ

       





           ‘ಎಲ್ಲ ದೊಡ್ಡ ಲೇಖಕರಂತೆ ಅನಂತಮೂರ್ತಿ ಬದುಕಿನ ಕೆಲವು ಮೂಲಭೂತ ಸಂಗತಿಗಳನ್ನು ಉದ್ದಕ್ಕೂ ಧ್ಯಾನಿಸಿಕೊಂಡು ಬಂದಿದ್ದಾರೆ. ಅವು ಕೆಲವೊಮ್ಮೆ ಬೇರೆ ಬೇರೆ ವಿವರಗಳಲ್ಲಿ ಕಾಣಿಸಿಕೊಂಡಿವೆ. ಕೆಲವೊಮ್ಮೆ ಬೇರೆ ಬೇರೆ ಪ್ರಕಾರಗಳಲ್ಲಿ ಮೈದಾಳಿವೆ. ಅವರ ನಿರಂತರ ಕಥನ ಕ್ರಮದಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ್ದು ಈ ಲೇಖಕ ಕಥೆಗಾಗಿ ಕಥೆ ಹೇಳುವ ಜಾಯಮಾನದವನಲ್ಲ. ಒಂದೇ ವಿಷಯವನ್ನು ಹಲವು ಮಗ್ಗಲುಗಳಲ್ಲಿ ನೋಡಬಯಸುವವನು. ಕೆಲವೊಮ್ಮೆ ಈ ಮಗ್ಗಲುಗಳು ಒಂದೇ ರಚನೆಯಲ್ಲಿ ತೋರಬಹುದು. ಅಥವಾ ಆತನ ಮುಂದುವರಿದ ರಚನೆಗಳಲ್ಲಿ ಕಾಣಿಸಿಕೊಳ್ಳಬಹುದು. ಮೌಲ್ಯಗಳ ಹಲವು ರೂಪಗಳು, ಸತ್ಯದ ಬಹುಮುಖತೆ, ಒಂದು ಸನ್ನಿವೇಶದ ಅನೇಕ ಸಾಧ್ಯತೆಗಳು ಹೀಗೆ ಏಕದಿಂದ ಅನೇಕದ ಕಡೆಗೆ ಅನಂತಮೂರ್ತಿ ಸಾಹಿತ್ಯ ಬೆಳೆದು ಬಂದಿದೆ. ಈ ಬಹುಮುಖ ದೃಷ್ಟಿ ಅನಂತಮೂರ್ತಿ ಅವರ ಸಾಹಿತ್ಯದ ಬಹುಮುಖ್ಯ ಗುಣ’ ಅನಂತಮೂರ್ತಿ ಅವರ ಕಥಾ ಸಾಹಿತ್ಯವನ್ನು ವಿಮರ್ಶಕ ಟಿ.ಪಿ.ಅಶೋಕ ವಿಶ್ಲೇಷಿಸುವ ಪರಿಯಿದು. ಅನಂತಮೂರ್ತಿ ಅವರ ಕಥೆಗಳನ್ನು ಓದಿದ ಓದುಗರ ಅನುಭವಕ್ಕೆ ಇಳಿಯುವ ಮಾತಿದು. ಈ ಲೇಖಕ ಕಥೆಗಾಗಿ ಕಥೆ ಹೇಳುವ ಜಾಯಮಾನದವನಲ್ಲ ಎನ್ನುವ ಮಾತನ್ನು ನಾವು ಇಲ್ಲಿ ಬಹುಮುಖ್ಯವಾಗಿ ಗಮನಿಸಬೇಕು. ಸಂಬಂಧಗಳ ಹುಡುಕಾಟ ಅವರ ಕಥೆಗಳ ಬಹುಮುಖ್ಯವಾದ ವಿಷಯವಸ್ತು. ಗ್ರಾಮೀಣ ಮತ್ತು ನಗರ ಪರಿಸರವನ್ನು ಹಿನ್ನೆಲೆಯಾಗಿಟ್ಟುಕೊಂಡು ಬರೆದ ಅವರ ಪ್ರತಿಯೊಂದು ಕಥೆಯಲ್ಲೂ ಮನುಷ್ಯ ಸಂಬಂಧಗಳ ನಡುವಣ ಸಂಕೀರ್ಣತೆ ಮತ್ತು ಆ ಸಂಕೀರ್ಣತೆಯನ್ನು ಸೀಳಿ ನೋಡುವ ಲೇಖಕರ ಪ್ರಯತ್ನ ಎದ್ದು ಕಾಣುತ್ತದೆ. ಅನಂತಮೂರ್ತಿ ಅವರು ಪರಿಪೂರ್ಣ ಎಂದುಕೊಂಡಿರುವ ಗತವನ್ನು ಬಿರುಕು ಬಿಟ್ಟಿರುವ ವರ್ತಮಾನದ ಜೊತೆಯಲ್ಲಿ ನೋಡುತ್ತಾರೆ ಎನ್ನುವ ಮಾತು ಅವರ ಕಥೆಗಳಿಗೆ ಹೆಚ್ಚು ಅನ್ವಯವಾಗುತ್ತದೆ. ಈ ಮಾತಿಗೆ ಪುರಾವೆಯಾಗಿ ಅವರ ‘ಕಾರ್ತಿಕ’ ಕಥೆಯನ್ನು ಹೆಸರಿಸಬಹುದು. ‘ಕಾರ್ತಿಕ’ದಲ್ಲಿ ಲೇಖಕರು ಭೂತ ಮತ್ತು ವರ್ತಮಾನಗಳೆರಡನ್ನು ಏಕಕಾಲದಲ್ಲಿ ಓದುಗರ ಮುಂದಿಡುವಲ್ಲಿ ಯಶಸ್ವಿಯಾಗಿರುವರು. ‘ಕಾರ್ತಿಕ’ ಕಥೆಯ ಕಥಾನಾಯಕ ರಾಘವನಿಗೆ ಆತನ ವರ್ತಮಾನದ ಬದುಕಿನ ಪ್ರತಿ ಘಳಿಗೆ ಭೂತವಾಗುತ್ತ ಹೋಗುತ್ತದೆ. ರಾಗಜ್ಜ, ಅಮ್ಮ, ಅಬ್ಬಕ್ಕ, ಅಪ್ಪನ ಜೊತೆಗಿನ ಬಾಲ್ಯದ ಒಡನಾಟದ ನೆನಪು ರಾಘವನ ವರ್ತಮಾನದ ಬದುಕಿನ ಪ್ರತಿ ಘಳಿಗೆ ಎದುರಾಗುತ್ತ ಹೋಗುತ್ತದೆ. ಈಗಿನ ನನ್ನ ಪಾಡಿಗೂ ಜೀವನ ಹಿಡಿದ ಜಾಡಿಗೂ ಅಂದು ನಾನು ಹುಡುಗನಾಗಿದ್ದಾಗ ಅನುಭವಿಸಿದ್ದಕ್ಕೂ ಏನು ಸಂಬಂಧ ಎನ್ನುವ ಹುಡುಕಾಟ ರಾಘವನದು. ‘ಹೋಗಿಯಪ್ಪ ನಿಮಗೇನೋ ಯೋಚನೆ. ಮನೆಯಲ್ಲಿ ಇದ್ದರೂ ನೀವು ಇಲ್ಲದಂತೆ’ ಎನ್ನುವ ಛಾಯಾಳ ಮಾತು ರಾಘವನ ಇಡೀ ವರ್ತಮಾನದ ಬದುಕು ಗತದ ನೆನಪುಗಳಲ್ಲಿ ಕಳೆದುಹೋಗಿರುವುದನ್ನು ಸೂಚಿಸುತ್ತದೆ. ಕರುಳು ಬಳ್ಳಿಗಳನ್ನು ಸಂಪೂರ್ಣ ಕಡಿದು ಹಾಕಿ ಬಾಳಿನ ಗತಿಯನ್ನು ಹುಡುಕಬೇಕೆಂದು, ತಂದೆತಾಯಿಗೆ ಪರಕೀಯನಾಗಿ ಬಾಳಬೇಕೆಂದು ಹೊರಟ ರಾಘವ ಭೌತಿಕವಾಗಿ ದೂರಾದರೂ ಗತದ ನೆನಪುಗಳಿಂದ ಕಳಚಿಕೊಳ್ಳುವಲ್ಲಿ  ವಿಫಲನಾಗುತ್ತಾನೆ. 
‘ಪ್ರಕೃತಿ’ಯಲ್ಲಿ ರೈತನೊಬ್ಬ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ತನ್ನ ಮನೆಯವರೊಂದಿಗೆ ಹೋರಾಟಕ್ಕಿಳಿಯುವ ಕಥೆಯಿದೆ. ಇಲ್ಲಿ ಎರಡು ತಲೆಮಾರುಗಳ ನಡುವೆ ನಡೆಯುವ ಸಂಘರ್ಷವಿದೆ. ಮಲೆನಾಡಿನ ಅತ್ಯುತ್ತಮ ಬೇಸಾಯಗಾರನೆಂದು ಸರ್ಕಾರದಿಂದ ಬೆಳ್ಳಿ ಪದಕ ಪಡೆದ ಸಂಕಯ್ಯಪ್ಪನಿಗೆ ತನ್ನ ಭೂಮಿಯಲ್ಲಿ ಕಿತ್ತಳೆ ಬೆಳೆಯುವಾಸೆ. ಆದರೆ ಮಗ ನಾರಾಯಣನಿಗೆ ಪಟ್ಟಣ ಸೇರಿ ಹೊಟೆಲ್ ಇಟ್ಟು ಬದುಕನ್ನು ರೂಪಿಸಿಕೊಳ್ಳುವ ಹಂಬಲ. ನಾರಾಯಣನ ಈ ಬಯಕೆಗೆ ತಾಯಿಯ ಒತ್ತಾಸೆಯೂ ಇದೆ. ಅಪ್ಪ ದುಡ್ಡು ಕೊಡಲು ಒಪ್ಪದಿದ್ದರೆ ಆಸ್ತಿಯಲ್ಲಿ ಪಾಲು ಕೇಳುತ್ತೇನೆ ಎನ್ನುವ ಹಠಮಾರಿ ನಾರಾಯಣನಾದರೆ ಶತಾಯಗತಾಯ ಅಮ್ಮ ಮಗನ ಬೇಡಿಕೆಗೆ ಸೋಲದ ನಿರ್ಧಾರ ಸಂಕಪ್ಪಯ್ಯನದು. ಆ ಮನೆಯಲ್ಲಿ ಅಪ್ಪನನ್ನು ಬೆಂಬಲಿಸುವ ಜೀವಗಳೆಂದರೆ ಮದುವೆಯಾಗಿ ಆರು ತಿಂಗಳಿಗೆ ಗಂಡ ಸತ್ತು ತವರು ಮನೆ ಸೇರಿದ ಹಿರಿಯ ಮಗಳು ಲಕ್ಷ್ಮಿ ಮತ್ತು ಕೊನೆಯ ಮಗಳು ಶಾಂತ. ಹರೆಯದ ಲಕ್ಷ್ಮಿ ಪ್ರಕೃತಿ ಸಹಜವಾದ ಬಯಕೆಯನ್ನು ತನ್ನಂತೆ ಕೆಚ್ಚಿನಿಂದ ಹೋರಾಡಿ ನಿಗ್ರಹಿಸಿಕೊಳ್ಳುವಳೆಂಬ ಅಪರಿಮಿತ ವಿಶ್ವಾಸ ಸಂಕಪ್ಪಯ್ಯನದು. ಮುಂದೊಂದು ದಿನ ಅವನ ಈ ವಿಶ್ವಾಸದ ಕಟ್ಟೆ ಕುಸಿದು ಬೀಳುತ್ತದೆ. ಕಾಡಿನಲ್ಲಿ ಶಾನುಭೋಗನ ಮಗ ಕಿಟ್ಟಿಯನ್ನು ತಬ್ಬಿಕೊಂಡು ಮಲಗಿದ್ದ ಲಕ್ಷ್ಮಿಯನ್ನು ನೋಡಿದ ಆ ಘಳಿಗೆ ಸಂಕಪ್ಪಯ್ಯನ ಕೆಚ್ಚಿನ ಹೋರಾಟ ಪ್ರಕೃತಿ ಎದುರು ಸೋಲು ಕಾಣುತ್ತದೆ. ತೋಟ ಮನೆಯನ್ನು ಮಾರಿ ಹೆಂಡತಿ ಮಕ್ಕಳನ್ನು ಪಟ್ಟಣಕ್ಕೆ ಕಳುಹಿಸಿ ಗುಡಿಸಿಲಿನಲ್ಲಿ ಒಬ್ಬನೆ ಉಳಿಯುವುದರೊಂದಿಗೆ ಕಥೆ ಮುಗಿಯುತ್ತದೆ. 
‘ಘಟಶ್ರಾದ್ಧ’ ಕಥೆಯಲ್ಲಿ ಹದಿಹರೆಯದ ವಿಧವೆಯ ಬದುಕಿನ ತಲ್ಲಣಗಳನ್ನು ಅನಂತಮೂರ್ತಿಯವರು ಹೃದಯಂಗಮವಾಗಿ ಕಟ್ಟಿಕೊಟ್ಟಿರುವರು. ಮದುವೆಯಾಗಿ ಕೆಲವೆ ದಿನಗಳಲ್ಲಿ ಗಂಡನನ್ನು ಕಳೆದುಕೊಂಡು ತವರು ಮನೆಗೆ ಮರಳುವ ಯಮುನಾ ಪ್ರಕೃತಿ ಕೊಡಮಾಡಿದ ಬಯಕೆಗಳೆದುರು ಸೋಲುತ್ತಾಳೆ. ಮನೆ ಪಕ್ಕದಲ್ಲಿನ ಶಾಲೆಯ  ಮೇಷ್ಟರೊಂದಿಗಿನ ದೈಹಿಕ ಸಂಪರ್ಕದಿಂದ ಬಸಿರಾಗುವ ಯಮುನಾ ಹಲವರ ಕುಚೋದ್ಯ ಮತ್ತು ವ್ಯಂಗ್ಯಕ್ಕೆ ಗ್ರಾಸವಾಗುತ್ತಾಳೆ. ಪೌರೋಹಿತ್ಯದ ಕಲಿಕೆಗೆಂದು ಮನೆ ಸೇರುವ ಹುಡುಗ ಯಮುನಾಳ ದುರಂತ ಬದುಕಿಗೆ ಸಾಕ್ಷಿಯಾಗುತ್ತಾನೆ. ಇಡೀ ಕಥೆ ಓದುಗನೆದುರು ತೆರೆದುಕೊಳ್ಳುವುದೇ ಆ ಹುಡುಗನ  ಸ್ವಗತದಿಂದ. ಯಮುನಕ್ಕನಲ್ಲಿ ತಾಯಿಯ ಮಮತೆ, ಪ್ರೀತಿ, ವಾತ್ಸಲ್ಯವನ್ನು ಕಾಣುವ ಆತ ಅವಳು ದೈಹಿಕ ಬಯಕೆಯಿಂದ ಬಳಲುವುದಕ್ಕು ಮತ್ತು ಅವಳ ಬಸಿರಿಳಿಯುವುದಕ್ಕೂ ಸಾಕ್ಷಿಯಾಗುತ್ತಾನೆ. ‘ಅಲ್ಲಿ ಯಮುನಕ್ಕನನ್ನು ಬೆತ್ತಲೆಯಾಗಿ ಮಲಗಿಸಿದ್ದರು. ಉಚ್ಚೆ ಹೊಯ್ಯುವ ಜಾಗವನ್ನು ಮಾತ್ರ ಮುಚ್ಚಿದ್ದರು’ ಎನ್ನುವ ಈ ಮಾತು ಹುಡುಗನ ಅಮಾಯಕತೆಯ ಜೊತೆಗೆ ಅನಂತಮೂರ್ತಿ ಅವರು ಭಾಷೆಯನ್ನು ದುಡಿಸಿಕೊಂಡ ಅನನ್ಯತೆಯನ್ನು ಓದುಗರಿಗೆ ಪರಿಚಯಿಸುತ್ತದೆ. ಕಥೆಯ ಅಂತ್ಯದಲ್ಲಿ ಉಡುಪರು ಯಮುನಕ್ಕ ಬದುಕಿರುವಾಗಲೆ ಶ್ರಾದ್ಧ ಮಾಡಿ ಅವಳನ್ನು ಜಾತಿಯಿಂದ ಹೊರಹಾಕಿ ತಾವು ಮುಪ್ಪಿನಲ್ಲಿ ಪುಟ್ಟ ಹುಡುಗಿಯ ಜೊತೆ ಹಸೆಮಣೆ ಏರುವುದು ವ್ಯವಸ್ಥೆಯ ವಿಪರ್ಯಾಸವನ್ನು ಅನಾವರಣಗೊಳಿಸುತ್ತದೆ. 
‘ತಾಯಿ’ ಕಥೆಯಲ್ಲಿ ಮಾತೆಯ ಮಮತೆ ಮತ್ತು ಕ್ರೂರತ್ವ ಎರಡನ್ನೂ ಒಟ್ಟೊಟ್ಟಿಗೆ ಚಿತ್ರಿಸಿರುವ ಪರಿ ವಿಶಿಷ್ಠವಾಗಿದೆ. ತನ್ನ ಮಗ ಶೀನನಿಗೆ ಕ್ರೂರ ತಾಯಿಯೊಬ್ಬಳ ಕಥೆಯನ್ನು ಹೇಳುತ್ತ ಆ ಕಥೆಯ ಪಾತ್ರವೇ ತಾನಾಗುತ್ತ ಮನೆಬಿಟ್ಟು ಹೋದ ಮಗನನ್ನು ನೆನೆಯುತ್ತ ದು:ಖಿಸುವ ಮತ್ತು ತನ್ನ ತಪ್ಪಿಗಾಗಿ ಪಶ್ಚಾತ್ತಾಪ  ಪಡುವ ಹೆಣ್ಣಿನ ಕಥೆ ಓದುಗನ ಮನ ಕಲುಕುತ್ತದೆ. ಗಂಡನ ಸಾವಿನ ನಂತರ ಇನ್ನೊಬ್ಬನೊಂದಿಗೆ ಕೂಡಿಕೆ ಮಾಡಿಕೊಳ್ಳುವ ತಾಯಿಯನ್ನು ಧಿಕ್ಕರಿಸಿ ಮನೆಬಿಟ್ಟು ಹೋದ ಮಗ ಚೆಲುವ ಮತ್ತೆ ಮರಳಿ ಬಂದಾನೆಂಬ ನಿರೀಕ್ಷೆ ಆ ತಾಯಿಯದು. ತಾಯಿಯಾದರೂ ಮೊದಲು ಅವಳು ಹೆಣ್ಣಲ್ಲವೆ? ಪ್ರಕೃತಿ ಸಹಜ ಬಯಕೆಗಳು ಅವಳಿಗಿಲ್ಲವೆ? ಸಮಾಜದ ಕಾಕದೃಷ್ಟಿಯಿಂದ ತಪ್ಪಿಸಿಕೊಳ್ಳಲು ಅವಳಿಗೂ ಒಂದು ಗಂಡಿನ ಆಸರೆ ಬೇಕಿತ್ತಲ್ಲವೆ? ಎನ್ನುವ ಪ್ರಶ್ನೆಗಳು ಕಥೆ ಓದುತ್ತ ಓದುಗನ ಮನಸ್ಸಿನಲ್ಲಿ ಮೂಡಿ ಚಿಂತನೆಗೆ ಹಚ್ಚುತ್ತವೆ. ಕಥೆಗಾರನ ಕಥನ ಕಲೆ ಹೀಗೆ ಓದುಗರನ್ನು ಚಿಂತನೆಗೆ ಹಚ್ಚುವಲ್ಲೇ ಆ ಕಲೆಯ ಶ್ರೇಷ್ಠತೆ ಅಡಗಿದೆ. ತಮ್ಮ ಕಥೆಗಳಲ್ಲಿ ಅನಂತಮೂರ್ತಿ ಅವರು ಬದುಕಿನ ಒಂದು ಮಗ್ಗುಲನ್ನು ಓದುಗರಿಗೆ ಪರಿಚಯಿಸದೆ ಇಡೀ ಬದುಕನ್ನು ವಿಶಾಲ ಅರ್ಥದಲ್ಲಿ ಕಟ್ಟಿಕೊಡುತ್ತಾರೆ. ಬದುಕಿನ ಒಂದು ಪಾರ್ಶ್ವದಿಂದ ಮಾತ್ರ ಸರಿ ತಪ್ಪುಗಳ ನಿರ್ಯಣಕ್ಕೆ ಬಂದು ನಿಲ್ಲುವುದು ತಪ್ಪು. ‘ತಾಯಿ’ ಕಥೆಯಲ್ಲಿ ಹೆಣ್ಣು ಮಮತಾಮಯಿ ತಾಯಿಯಾಗಿಯೂ ಮತ್ತು ಗಂಡಿನ ರಸಿಕತೆಗೆ ಸೋಲುವ ಹೆಣ್ಣಾಗಿಯೂ ಚಿತ್ರಿತವಾಗಿರುವಳು. ಕಥೆಯ ಕೊನೆಯಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವ ಆತ್ಮವಿಮರ್ಶೆಗಿಳಿದಾಗ ಕೊನೆಗೂ ಅಲ್ಲಿ ಗೆಲುವು ಸಾಧಿಸುವವಳು ತಾಯಿಯೆ. ‘ಆ ನೀರವ ಗಂಭೀರ ಕತ್ತಲಲ್ಲಿ ದು:ಖತಪ್ತ ಎದೆಯಿಂದ ಹಾಲು ಹರಿಯುತ್ತದೆ ಸಿಹಿಯಾದ ಹಾಲು. ಆದರೆ ತಾಯಿಯ ಕಣ್ಣಿನಿಂದ ನೀರೂ ಸುರಿಯುತ್ತದೆ ಉಪ್ಪಾದ ನೀರು ಅನಂತವಾಗಿ’ ಎನ್ನುವ ಈ ಸಾಲುಗಳು ಹೆಣ್ಣಿನ ಇಡೀ ವ್ಯಕ್ತಿತ್ವವನ್ನು ಅರ್ಥಪೂರ್ಣವಾಗಿ ಕಟ್ಟಿಕೊಡುತ್ತವೆ. 

ಮಧ್ಯಮ ವರ್ಗದ ಕುಟುಂಬದ ಯುವಕನ ಆಸೆ, ನಿರೀಕ್ಷೆ, ಹತಾಸೆ, ಕೋಪ, ಸ್ವಾರ್ಥ, ಕೀಳರಿಮೆಗಳೇ ‘ಕ್ಲಿಪ್ ಜಾಯಿಂಟ್’ ನ ಕಥಾವಸ್ತು. ಕಥಾ ನಾಯಕ ಕೇಶವ ಇಲ್ಲಿ ಭಾರತದ ಮಧ್ಯಮ ವರ್ಗದ ಯುವಕರನ್ನು ಪ್ರತಿನಿಧಿಸುತ್ತಾನೆ. ಇಬ್ಬರು ತಂಗಿಯರ ಮದುವೆ, ತಮ್ಮಿಂದರ ಬದುಕು, ಅಮ್ಮನ ನಿರೀಕ್ಷೆಗಳು ಹೀಗೆ ಸಂಸಾರದ ಬಹುದೊಡ್ಡ ಜವಾಬ್ದಾರಿ ಕೇಶವನ ಮೇಲಿದೆ. ವಯಸ್ಸು ಮೂವತ್ತು ದಾಟಿದರೂ ಕೇಶವನಿಗೆ ಇನ್ನು ಮದುವೆಯಾಗಿಲ್ಲ. ಮನೆಗೆ ನೆರವಾಗಬೇಕೆಂದು ದುಡಿದು ಗಳಿಸಲು ಆತ ಇಂಗ್ಲೆಂಡಿಗೆ ಬಂದಿದ್ದಾನೆ. ಹಾಗೆಂದ ಮಾತ್ರಕ್ಕೆ ಕನ್ನಡ ಸಿನಿಮಾಗಳಲ್ಲಿ ತೋರಿಸುವಂತೆ ಅವನೇನೂ ಆದರ್ಶ ನಾಯಕನಲ್ಲ. ಭಾರತ ಮತ್ತು ಅಲ್ಲಿನ ಬದುಕೆಂದರೆ ಕೇಶವನಿಗೆ ಜಿಗುಪ್ಸೆ, ತಮ್ಮಂದಿರು ತಂಗಿಯರೆಂದರೆ ಧಗಧಗನೆ ಉರಿಯುತ್ತಾನೆ. ಮನೆ ಮಂದಿಯೆಲ್ಲ  ಅಪರಾಧಿಗಳು ಎನ್ನುವ ಭಾವನೆ ಅವನದು. ಪಶ್ಚಿಮ ದೇಶಗಳೆಂದರೆ ಸಭ್ಯತೆಯ ಮತ್ತು ಆದರ್ಶದ ತಾಣಗಳೆಂದು ಅಪಾರ ಭರವಸೆಗಳೊಂದಿಗೆ ಇಂಗ್ಲೆಂಡಿಗೆ ಬಂದಿರುವ ಕೇಶವನಿಗೆ ಇಲ್ಲಿ ಸ್ಟೂಅರ್ಟ್‍ನ ಪರಿಚಯವಾಗುತ್ತದೆ. ಸ್ಟೂಅರ್ಟ್‍ನ ಜೀವನದಲ್ಲೊಂದು ನಿಯತ್ತಿದೆ. ಅವನೆಂದೂ ಮಂಕು ಬಡಿದಂತೆ ಶಾಪಗ್ರಸ್ತನಂತೆ ಕೂಡಲಾರ. ತನ್ನ ಜೀವನದ ಪ್ರತಿಕ್ಷಣವನ್ನು ವಿವೇಚಿಸಿ ಜೀವಿಸುತ್ತಾನೆ. ತನ್ನಿಂದ ಪರರಿಗೆ ನೋವಾಗಬಾರದು, ಅನ್ಯಾಯವಾಗಬಾರದು; ಹಂಗಿನಲ್ಲಿ ಇರುವುದೂ ಬೇಡ, ಇಡುವುದೂ ಬೇಡ ಇದು ಅವನ ಬದುಕಿನ ಗುರಿ. ಸ್ಟೂಅರ್ಟ್‍ನ ಈ ಒಟ್ಟು ವ್ಯಕ್ತಿತ್ವ ಕೇಶವನಲ್ಲಿ ಅಸೂಯೆಯನ್ನು ಮೆಚ್ಚುಗೆಯನ್ನು ಒಟ್ಟೊಟ್ಟಿಗೆ ಹುಟ್ಟಿಸುತ್ತದೆ. ಇಂಥ ವಿಶಾಲ ವ್ಯಕ್ತಿತ್ವದ ಸ್ಟೂಅರ್ಟ್‍ನ ಒಳಗಡೆ ಕೂಡ ಅಸಹನೆಯ ಕುದಿಯುತ್ತಿದೆ. ತಾನು ಬದುಕುತ್ತಿರುವ ದೇಶ ಸ್ವಾರ್ಥದ ಪುಟ್ಟ ಲೋಕ ಎನ್ನುವ ಅಸಹನೆ ಅವನದು. ಬಡತನದ ಅನುಭವವಿಲ್ಲ, ಹಸಿವೆಂದರೆ ಏನೂಂತ ಗೊತ್ತಿಲ್ಲ, ಹೆಣ್ಣಿನ ಸುಖದ ಕೊರತೆಯಿಲ್ಲ. ಇಂಥ ಬದುಕಿನಲ್ಲಿ ಯಾವ ಥ್ರಿಲ್ ಇದೆ ಎನ್ನುವ ಸ್ಟೂಅರ್ಟ್‍ಗೆ ಸಾಧು ಸಂತರ ನೆಲೆಯಾದ ಭಾರತದಿಂದ ಬಂದ ಕೇಶವನನ್ನು ಕಂಡರೆ ಅಪಾರ ಅಭಿಮಾನ. ಹೀಗೆ ತನ್ನಲ್ಲಿ ಇಲ್ಲದಿರುವುದನ್ನು ಅರಸುವ ಸಹಜ ಮಾನವ ಸ್ವಭಾವಕ್ಕೆ ಈ ಎರಡು ಪಾತ್ರಗಳು ಉದಾಹರಣೆಯಾಗಿ ನಿಲ್ಲುತ್ತವೆ. ಕಥೆಯ ಕೊನೆಯಲ್ಲಿ ಸುಖವನ್ನು ಹುಡುಕುತ್ತ ಕ್ಲಿಪ್ ಜಾಯಿಂಟ್‍ಗೆ ಬರುವ ಕೇಶವನಿಗೆ ಅವನೆಂದುಕೊಂಡ ರಾಷ್ಟ್ರದಲ್ಲೂ ಅಸಭ್ಯತೆಯ ದರ್ಶನವಾಗುತ್ತದೆ.
             ‘ನವಿಲುಗಳು’ ಕಥೆ ವಯಸ್ಸಾದಂತೆ ಬದಲಾಗುವ ಮನುಷ್ಯನ ಭಾವನೆಗಳಿಗೆ ಕನ್ನಡಿ ಹಿಡಿಯುತ್ತದೆ. ಅಪ್ಪನ ಶ್ರಾದ್ಧಕ್ಕೆಂದು ಹಳ್ಳಿಗೆ ಹೋಗುವ ಕಿಟ್ಟು ಹದಿನೈದು ಮೈಲಿಯಾಚೆಯ ಹಳ್ಳಿಯಲ್ಲಿರುವ ವಿಧವೆ ಜಾನಕಮ್ಮನನ್ನು ಭೇಟಿಯಾಗಲು ಹೋಗುತ್ತಾನೆ. ಹೀಗೆ ಅವನು ಹೋಗುತ್ತಿರುವುದು ಇದೇ ಮೊದಲೆನಲ್ಲ. ಅಪ್ಪಯ್ಯನನ್ನು ಹುಡುಕಿಕೊಂಡು ಬಾಲಕನಾಗಿದ್ದಾಗ ಆ ಮನೆಗೆ ಅವನು ಹೋಗಿದ್ದಿದೆ. ಹಾಗೆ ಆ ಮನೆಗೆ ಹೋಗಲು ಅವನಿಗಿರುವ ಆಕರ್ಷಣೆ ಗದ್ದೆಯ ಪಕ್ಕದಲ್ಲಿ ನೋಡಲು ಸಿಗುವ ನವಿಲುಗಳು. ಹೀಗೆ ಒಮ್ಮೆ ಹೋದವನು ಅಪ್ಪ ಬೆತ್ತಲೆ ಸ್ನಾನ ಮಾಡುತ್ತಿರುವುದನ್ನು, ಜಾನಕಮ್ಮ ಅಪ್ಪನ ಮೈ ಉಜ್ಜುತ್ತಿರುವುದನ್ನು ನೋಡಿ ಅರ್ಥವಾಗದೆ ಗದ್ದೆಯಲ್ಲಿ ಸಿಕ್ಕ ನವಿಲು ಗರಿಯನ್ನು ತಂದು ಪುಸ್ತಕದಲ್ಲಿ ಇಟ್ಟವನಿಗೆ ಈಗ ಎಲ್ಲವೂ ಅರ್ಥವಾಗಿದೆ. ಹಾಗೆಂದು ಅಪ್ಪನ ಬಗ್ಗೆ ಕಿಟ್ಟುವಿಗೆ ಕೋಪವಾಗಲಿ ಅಸಹ್ಯವಾಗಲಿ ಇಲ್ಲ. ಸದಾ ಕಾಯಿಲೆಯಿಂದ ಮಲಗಿರುತ್ತಿದ್ದ ಅಮ್ಮ ಅದಕ್ಕೆಂದೆ ಅಪ್ಪಯ್ಯ ಈ ಜಾನಕಮ್ಮನಿಂದ ತೃಪ್ತಿ ಪಡೆದಿರಬೇಕು ಎನ್ನುವ ಸ್ಥಿತಪ್ರಜ್ಞತೆ ಅವನದು. ಪರಿಸ್ಥಿತಿಯನ್ನು (ಅನೈತಿಕತೆ ಎಂದರೆ ತಪ್ಪಾದಿತು) ಸಮಯ ಸಂದರ್ಭಗಳ ವಿಶ್ಲೇಷಣೆಗೊಳಪಡಿಸಿ ನೋಡುವುದು ಅನಂತಮೂರ್ತಿ ಅವರೊಳಗಿನ ಕಥೆಗಾರನ ಜಾಯಮಾನ. ಇದನ್ನು ಅವರ ಬಹಳಷ್ಟು ಕಥೆಗಳಲ್ಲಿ ಕಾಣಬಹುದು. ಜಾನಕಮ್ಮನ ಮನೆಯಿಂದ ಮರಳಿ ಬರುವಾಗ ಮತ್ತದೆ ಗದ್ದೆಯಲ್ಲಿ ನವಿಲುಗಳು ಕುಣಿಯುವುದನ್ನು ಕಿಟ್ಟು ನೋಡುತ್ತಾನೆ. ಬಾಲಕನಾಗಿದ್ದಾಗ ಮೈಮರೆತಂತೆ ಈಗ ನವಿಲುಗಳು ಕುಣಿಯುವುದನ್ನು ನೋಡಿ ಕಿಟ್ಟು ಮೈಮರೆಯುವುದಿಲ್ಲ. ಹೀಗಾಗುವುದಕ್ಕೆ ವಯಸ್ಸು ಕಾರಣವಲ್ಲವೆ? ಎನ್ನುವ ಪ್ರಶ್ನೆಯೊಂದು ಅವನ ಮನಸ್ಸಿನಲ್ಲಿ ಮೂಡಿ ಈ ಪ್ರಶ್ನೆ ವಯಸ್ಸಾದಂತೆ ಮನುಷ್ಯನ ಭಾವನೆಗಳು ಬದಲಾಗುವುದನ್ನು ಧ್ವನಿಸುತ್ತದೆ.
             ವಿದೇಶಿ ಹೆಣ್ಣೊಬ್ಬಳ ಬದುಕಿನ ಕುರಿತಾದ ನಂಬಿಕೆ, ಕ್ರಾಂತಿಕಾರಿ ನಿಲುವು, ಆತ್ಮವಿಶ್ವಾಸವನ್ನು ‘ರೂತ್ ಮತ್ತು ರಸುಲ್’ ಕಥೆಯಲ್ಲಿ ಮನೋಜ್ಞವಾಗಿ ಚಿತ್ರಿಸಿರುವರು. ಇಂಗ್ಲೆಂಡಿನ ಎಳೆಯ ಪ್ರಾಯದ ರೂತ್ ಭಾರತದ ದಿನೇಶನನ್ನು ಪ್ರೀತಿಸಿ ತನ್ನ ಪ್ರೀತಿಯ ಪರೀಕ್ಷೆಗಾಗಿ ಭಾರತಕ್ಕೆ ಹೊರಟು ನಿಂತಿದ್ದಾಳೆ. ಭಾರತಕ್ಕೆ ಹೊರಟು ನಿಂತವಳಿಗೆ ಪಾಶ್ಚಾತ್ಯ ನಾಗರೀಕತೆಯೆಂದರೆ  ಹೆಸಿಗೆಯಾಗಿದೆ. ಭಾರತದಲ್ಲೇ ಬದುಕಿಗೆ ಅರ್ಥವಿದೆ ಎಂದವಳ ನಿಲುವು. ಹಿಂದೂಸ್ತಾನಿ ಸಂಗೀತವನ್ನು ಕಲಿತು ಭಾರತದಲ್ಲೇ ಒಂದು ವರ್ಷ ಬದುಕಿ ಅಲ್ಲಿ ಬದುಕುವುದು ಸಾಧ್ಯವೆಂದಾದರೆ ದಿನೇಶನನ್ನು ಮದುವೆಯಾಗಬೇಕೆಂದು ನಿರ್ಧಿರಿಸಿರುವಳು. ಹೀಗೆ ಭಾರತಕ್ಕೆ ಹೊರಟು ನಿಂತವಳನ್ನು ಹೇಗಾದರೂ ತಡೆಯಬೇಕೆಂಬ ಹಠ ರಸುಲನದು. ಐವತ್ತರ ಪ್ರಾಯದ ರಸುಲ್ ಇಪ್ಪತರ ವಯಸ್ಸಿನಲ್ಲೇ ಪೂರ್ವ ಬಂಗಾಳದಿಂದ ಓಡಿ ಬಂದು ಇಂಗ್ಲೆಂಡಿನಲ್ಲಿ ಬದುಕು ಕಟ್ಟಿಕೊಂಡಿರುವನು. ಭಾರತೀಯರ ಬದುಕಿನ ಬಗೆಗೂ ರಸುಲ್‍ಗೆ ಅನುಭವವಿದೆ. ಪ್ರೀತಿ ಪ್ರೇಮದ ಅಮಲಿನಲ್ಲಿ ಭಾರತಕ್ಕೆ ಹೋದರೆ ರೂತ್ ನಾಶವಾಗುವುದು ನಿಶ್ಚಿತ ಎನ್ನುವ ಚಿಂತೆ ರಸುಲ್‍ನದು. ರೂತ್ ಮತ್ತು ರಸುಲ್ ಈ ಎರಡು ವಿರುದ್ಧ ವ್ಯಕ್ತಿತ್ವವುಳ್ಳ ಪಾತ್ರಗಳ ಭಾವನೆಗಳಿಗೂ ಮತ್ತು ಬದುಕಿಗೂ ಲೇಖಕರೆ ಇಲ್ಲಿ ತಾವೊಂದು ಪಾತ್ರವಾಗಿ ಸಾಕ್ಷಿಯಾಗುತ್ತಾರೆ. ರೂತ್ ಗಂಭೀರ ಸ್ವಭಾವದ ಗಟ್ಟಿ ನಿರ್ಧಾರದ ಹೆಣ್ಣಾಗಿಯೂ ಮತ್ತು ರಸುಲ್ ಬದುಕಿನ ಪ್ರತಿಯೊಂದು ಕ್ಷಣವನ್ನು ತೀರ ಸರಳವಾಗಿ ತೆಗೆದುಕೊಂಡು ಲವಲವಿಕೆಯಿಂದ ಬದುಕುವ ವ್ಯಕ್ತಿಯಾಗಿಯೂ ಓದುಗರ ಮೆಚ್ಚುಗೆಗೆ ಪಾತ್ರರಾಗುತ್ತಾರೆ.
             ‘ಸಂಯೋಗ’ ಕಥೆಯಲ್ಲಿ ಅರ್ಥ ಕಳೆದುಕೊಳ್ಳುತ್ತಿರುವ ಮನುಷ್ಯ ಸಂಬಂಧಗಳು ಅನಾವರಣಗೊಂಡಿವೆ. ಸರ್ಕಾರಿ ಕಚೇರಿಯಲ್ಲಿ ಸೆಕ್ಷನ್ನಿನ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿರುವ ವೆಂಕಟಕೃಷ್ಣರಾವನೊಂದಿಗೆ ಒಂದು ಸಂದರ್ಭ ಲೇಖಕರು ಮುಖಾಮುಖಿಯಾಗುತ್ತಾರೆ. ಲೇಖಕರೆದುರು ವೆಂಕಟಕೃಷ್ಣರಾವನ ಬದುಕಿನ ಕಥೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ತನ್ನ ಬಂಧುಗಳಲ್ಲೇ ಕನಿಷ್ಠ ಕೆಲಸದಲ್ಲಿರುವವನು ತಾನು ಎನ್ನುವ ಹತಾಶೆ ವೆಂಕಟಕೃಷ್ಣರಾವನದು. ಜೊತೆಗೆ ಅರ್ಹನಾಗಿದ್ದರೂ ಪ್ರಮೋಶನ್ ದೊರೆಯುತ್ತಿಲ್ಲ ಎನ್ನುವ ಬೇಸರ ಬೇರೆ. ವೆಂಕಟಕೃಷಣರಾವ ಇಂಥದ್ದೊಂದು ಸಂಕಟದಲ್ಲಿರುವಾಗಲೇ ಕೆಲವು ದಿನಗಳ ಹಿಂದೆ ಅವನ ಹದಿನಾಲ್ಕು ವರ್ಷದ ಮಗ ಗೋಪಾಲ ಆಕ್ಸಿಡೆಂಟಿನಲ್ಲಿ ತೀರಿಕೊಂಡಿದ್ದಾನೆ. ಆಕ್ಸಿಡೆಂಟ್ ಮಾಡಿದ ವ್ಯಕ್ತಿ ಕಾಂಪ್ರಮೈಸ್‍ಗೆ ಪ್ರಯತ್ನಿಸುತ್ತಿದ್ದು ವೆಂಕಟಕೃಷ್ಣರಾವಗೆ ತಹಸೀಲ್ದಾರನಾಗಿ ಪ್ರಮೋಶನ್ ಮಾಡಿಸಲು ಮುಂದಾಗಿದ್ದಾರೆ. ಇಲ್ಲಿ ಮಗನ ಸಾವನ್ನು ಅಪ್ಪ ತನ್ನ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿದ್ದಾನೆ. ಮನುಷ್ಯ ಸಂಬಂಧಗಳ ಶಿಥಿಲಾವಸ್ಥೆಯನ್ನು ಲೇಖಕರು ಕಥೆಯಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿರುವರು.   

           ‘ಮೂಲ’ ಕಥೆಯಲ್ಲಿ ಮಠ ಕಥೆಯ ಕೇಂದ್ರಬಿಂದುವಾಗಿದೆ. ಜಾತಿ, ಧರ್ಮದ ಆಧಾರದ ಮೇಲೆ ಮಠವನ್ನು ಬಳಸಿಕೊಂಡು ಪ್ರಬಲರಾಗಬೇಕೆನ್ನುವ ಶ್ರೀಕಂಠ ಶರ್ಮ ಮತ್ತು ಗುರುಲಿಂಗಪ್ಪನಂಥವರು ಸಮಾಜದ ವಿವಿಧ ಸ್ತರಗಳಲ್ಲಿ ಕಾಣಸಿಗುತ್ತಾರೆ. ಉಗುಳು ಸ್ವಾಮಿ ಹೆಸರಲ್ಲಿ ಆಶ್ರಮ ಕಟ್ಟಿ ದೀನ ದಲಿತರ ಸೇವೆಯಲ್ಲಿ ತೊಡಗಿರುವ ಚಿದಂಬರ ಸ್ವಾಮಿಯ ಮೂಲವನ್ನು ಸಾರ್ವಜನಿಕರಿಗೆ ಪರಿಚಯಿಸಿ ಮಠವನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುವ ಇರಾದೆ ಗುರುಲಿಂಗಪ್ಪನದಾದರೆ, ಚಿದಂಬರ ಸ್ವಾಮಿಯನ್ನು ಮುಂದಿಟ್ಟುಕೊಂಡು ತಾನು ಬೆಳೆಯಬೇಕೆಂಬ ಹಂಬಲ ಶ್ರೀಕಂಠ ಶರ್ಮಾನದು. ‘ತಲೆ ಹಿಡುಕ ಅದು ಹೇಗೆ ಸಂತನಾದ?’ ಎನ್ನುವ ಪ್ರಶ್ನೆಗೆ ‘ಎರಡೂ ಅಹಂಕಾರವಿಲ್ಲದ ಅವಸ್ಥೆಗಳಲ್ಲವ’ ಎನ್ನುವ ಲೇಖಕರ ಪ್ರತಿಕ್ರಿಯೆ  ಆ ಕ್ಷಣಕ್ಕೆ ವ್ಯಂಗ್ಯವಾಗಿ ತೋರಿದರೂ ಕಥೆಗೊಂದು ತಾರ್ಕಿಕ ಅಂತ್ಯ ನೀಡುವಲ್ಲಿ ಸಫಲವಾಗಿದೆ.
         ಕಥೆ ಓದುತ್ತ ಹೋದಂತೆ ಮನಸ್ಸಿನೊಳಗೆ ಇಳಿಯುವ ‘ಸೂರ್ಯನ ಕುದುರೆ’ ಯ ವೆಂಕಟ ನಂತರವೂ ಹಲವು ದಿನಗಳವರೆಗೆ ಚಂಡಿ ಹಿಡಿದು ಮನಸ್ಸಿನಲ್ಲೇ ನೆಲೆಯೂರುತ್ತಾನೆ. ಊರಿನವರಿಗೆಲ್ಲ ಉಪಕಾರ ಮಾಡುವ ವೆಂಕಟನದು ನಿರುಪದ್ರವಿ ವ್ಯಕ್ತಿತ್ವ. ಒಂದರ್ಥದಲ್ಲಿ ಜಡತ್ವದ ಪರಮಸ್ಥಿತಿಯಲ್ಲಿ ಬದುಕುತ್ತಿರುವವರನ್ನೆಲ್ಲ ಸಂಕೇತಿಸುವಂತೆ ವೆಂಕಟ ಲೇಖಕರಿಗೆ ಕಾಣಿಸುತ್ತಾನೆ. ವೆಂಕಟನಂಥ ನಾನ್ ಪೊಲಿಟಿಕಲ್  ಬೀಯಿಂಗ್ ಎದುರಿನಲ್ಲಿ ಲೇಖಕರಿಗೆ ತಮ್ಮ  ಎಲ್ಲ ಜ್ಞಾನವೂ ವ್ಯರ್ಥ ಎಂದೆನಿಸುತ್ತದೆ. ವೆಂಕಟನ ವ್ಯಕ್ತಿತ್ವ ಇಡೀ ಕಥೆಯನ್ನು ಆವರಿಸಿ ಬೆಳೆದು ನಿಲ್ಲುತ್ತದೆ. ಗರ್ವ, ಅಹಂಕಾರ, ಪ್ರಲೋಭನೆ, ಸಿಟ್ಟು, ಅಸಹ್ಯ, ಅಸಹನೆಗಳಿಲ್ಲದ ವೆಂಕಟನ ವ್ಯಕ್ತಿತ್ವ ಮನಸ್ಸಿನಲ್ಲುಳಿದು ಬಹುಕಾಲ ಕಾಡುತ್ತದೆ. ‘ನಿನ್ನ ಸ್ನೇಹಿತರಿಗೆ ನನ್ನ ಮಗ ಗೊತ್ತಿರಬಹುದು. ಡಾಕ್ಟರ್ ಸುಬ್ರಮಣ್ಯ ಶಾಸ್ತ್ರಿ ಲಂಡನ್ನಿನಲ್ಲಿ ಓದಿದ್ದು. ಬೊಂಬಾಯಿಯಲ್ಲಿ ಇಂಜಿನಿಯರ್. ಮೂರು ಸಾವಿರ ಸಂಬಳವಂತಪ್ಪ. ಒಳ್ಳೇ ಬಂಗ್ಲೆ’ ಕ್ಷಯರೋಗದಿಂದ ಹಾಸಿಗೆ ಹಿಡಿದ ತನ್ನನ್ನು ನೋಡಲೂ ಬಾರದ ಮಗನನ್ನು ಹೊಗಳುವ ಶೇಷಣ್ಣನ ಮಾತು ಆ ಕ್ಷಣಕ್ಕೆ ತೀರ ಅಸಹ್ಯವೆನಿಸುತ್ತದೆ.
    ಬಾಲ್ಯದಲ್ಲಿ ತಾನು ಬೆಳೆದ ಮತ್ತು ತನ್ನ ಅನುಭವಕ್ಕೆ ದಕ್ಕಿದ  ಪರಿಸರ  ಬರಹಗಾರನ ಬರವಣಿಗೆಯನ್ನು ಹೆಚ್ಚು ಪ್ರಭಾವಿಸುತ್ತದೆ ಎನ್ನುವ ಮಾತಿಗೆ ಅನಂತಮೂರ್ತಿ ಅವರ ಕಥೆಗಳು ದೃಷ್ಟಾಂತವಾಗಿವೆ. ಏಕೆಂದರೆ ಅವರ ಬಹಳಷ್ಟು ಕಥೆಗಳಲ್ಲಿ ಮಲೆನಾಡಿನ ಬದುಕಿನ ವಿಶೇಷವಾಗಿ ಬ್ರಾಹ್ಮಣರ ಬದುಕಿನ ಸಂಕಟ ಮತ್ತು ಸಮಸ್ಯೆಗಳು ಕೇಂದ್ರ ಬಿಂದುವಾಗಿವೆ. ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ  ಬಹುಪಾಲು ಕಥೆಗಳಲ್ಲಿ ತಾವು ಸೃಷ್ಟಿಸಿದ ಪಾತ್ರಗಳ ಕುರಿತು ಅನಂತಮೂರ್ತಿ ಅವರಿಗೆ ಒಂದು ರೀತಿಯ ಸಹಾನುಭೂತಿ ಮತ್ತು ಔದಾರ್ಯವಿರುವುದು ಓದುಗನ ಅನುಭವಕ್ಕೆ ಬರುತ್ತದೆ. ನವಿಲುಗಳು ಕಥೆಯಲ್ಲಿನ ಅಪ್ಪಯ್ಯ, ಮೌನಿಯ ಅಪ್ಪಣ್ಣಭಟ್ಟ, ಪ್ರಸ್ಥದ ಶಿನಪ್ಪಯ್ಯ, ಸಂಯೋಗದ ವೆಂಕಟಕೃಷ್ಣರಾವ, ಸೂರ್ಯನ ಕುದುರೆಯ ಶೇಷಣ್ಣ ಬೇರೆ ಪಾತ್ರಗಳಿಂದ ತಿರಸ್ಕಾರಕ್ಕಾಗಲಿ ಇಲ್ಲವೆ ಅಸಹ್ಯಕ್ಕಾಗಲಿ ಒಳಗಾಗುವುದು ತೀರ ಕಡಿಮೆ. ಜೊತೆಗೆ ಆಯಾ ಸಂದರ್ಭದಲ್ಲಿ ಲೇಖಕರ ಆತ್ಮವಿಮರ್ಶೆಯ ಗುಣವೂ ಸ್ಪುಟವಾಗಿ ಎದ್ದುಕಾಣುತ್ತದೆ. ಇದಕ್ಕೆ ‘ಸೂರ್ಯನ ಕುದುರೆ’ ಉತ್ತಮ ಉದಾಹರಣೆ. ಬಾಲ್ಯದ ಗೆಳೆಯ ವೆಂಕಟನ ಗುಣಗಳನ್ನು ವಿಮರ್ಶಿಸುತ್ತಲೇ ಇಲ್ಲಿ ಅನಂತಮೂರ್ತಿ ತಮ್ಮನ್ನು ಸ್ವವಿಮರ್ಶೆಯ ಪರೀಕ್ಷೆಗೆ ಒಡ್ಡಿಕೊಳ್ಳುತ್ತಾರೆ. ಬರಹಗಾರನಲ್ಲಿರಬೇಕಾದ ಅಗತ್ಯದ ಮತ್ತು ಮಹತ್ವದ ಗುಣವಿದು. ಈ ಕಾರಣದಿಂದಲೇ ಅನಂತಮೂರ್ತಿ ಅವರ ಕಥೆಗಳ ಓದು ತುಂಬ ಆಪ್ತವಾಗುತ್ತ ಹೊಸ ಅನುಭವವನ್ನು ಕಟ್ಟಿಕೊಡುತ್ತದೆ. ವಿಮರ್ಶಕರೋರ್ವರು ಹೇಳುವಂತೆ ಅನಂತಮೂರ್ತಿ ಅವರ ಕಥೆಗಳನ್ನು ಈಗ ನಾವು ಬದುಕುತ್ತಿರುವ ಕಾಲಮಾನಕ್ಕೆ ಒಗ್ಗಿಸಿ ಓದಬೇಕಾದ  ಅನಿವಾರ್ಯತೆ ಇದೆ. ಇದು ಆರೋಗ್ಯಕರ ಸಮಾಜದ ದೃಷ್ಟಿಯಿಂದ ಅಗತ್ಯವೂ ಹೌದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 




Monday, July 4, 2016

ಬರಹಗಾರನ ತಲ್ಲಣಗಳು

                                      ಹಚ್ಚಿದರೆ ದೀಪ ಹಚ್ಚು, ಬೆಂಕಿ ಹಚ್ಚಬೇಡ
                                  ಆರಿಸಿದರೆ ಬೆಂಕಿ ಆರಿಸು, ದೀಪ ಆರಿಸಬೇಡ
                                                                                        -ದಿನಕರ ದೇಸಾಯಿ

       ತೀರ ಬೇಸರ, ಅವಮಾನದ ಸಂದರ್ಭ ಖಿನ್ನತೆ ಮನಸ್ಸನ್ನು ಆವರಿಸಿದಾಗ ಆ ಘಳಿಗೆ ನಾನು ಓದಿನ ಮೊರೆ ಹೋಗುತ್ತೇನೆ. ಓದುತ್ತ ಹೋದಂತೆ ಬರಹಗಾರನ ತಲ್ಲಣಗಳೆದುರು ನನ್ನ ವೈಯಕ್ತಿಕ ಸಂಕಟಗಳೆಲ್ಲ ತೀರ ಸಣ್ಣ ಸಂಗತಿಗಳೆನಿಸಿ ಆ ಕ್ಷಣ ಮನಸ್ಸನ್ನು ಆವರಿಸಿದ ಖಿನ್ನತೆಯ ತೆರೆ ಸರಿದು ಹೋಗುತ್ತದೆ. ಬರಹಗಾರರ ಸಮಾಜಮುಖಿ ತಲ್ಲಣಗಳ ಎದುರು ನನ್ನ ವೈಯಕ್ತಿಕ ತಲ್ಲಣಗಳು ಸೋತು ನೆಲಕಚ್ಚುತ್ತವೆ.  ಈ ದೃಷ್ಟಿಯಿಂದ ನಾನು ಬರಹಗಾರರಿಗೆ ಮತ್ತು ಅವರೊಳಗಿನ ತಲ್ಲಣಗಳಿಗೆ ಹೆಚ್ಚು ಕೃತಜ್ಞನಾಗಿದ್ದೇನೆ. ನನ್ನನ್ನಾವರಿಸುವ ಬೇಸರದಿಂದ ಹೊರಬರಲು ಓದು ನನಗೆ ಪರ್ಯಾಯ ಮಾರ್ಗವಾಗಿ ತೋರುತ್ತದೆ. ಮನುಷ್ಯ ಸಂಬಂಧಗಳಿಂದ ಮನಸ್ಸು ಘಾಸಿಗೊಂಡಾಗ ನಾನು ಕಾಫ್ಕಾನ ಮೆಟಾಮಾರ್ಫಸಿಸ್ ಕಥೆಯನ್ನು  ಮತ್ತೆ ಮತ್ತೆ ಓದಿಗೆ ಕೈಗೆತ್ತಿಕೊಳ್ಳುತ್ತೇನೆ. ಮನುಷ್ಯ ಸಂಬಂಧಗಳು ಸಂದರ್ಭದ ಕೈಗೆ ಸಿಲುಕಿ ಹೇಗೆ ಬದಲಾಗುತ್ತ ಹೋಗುತ್ತವೆ ಎನ್ನುವುದನ್ನು ಗ್ರೇಗರ್‍ನ ಪಾತ್ರದ ಮೂಲಕ ಕಾಫ್ಕಾ ತುಂಬ ಅನನ್ಯವಾಗಿ ಹೇಳುತ್ತಾನೆ. ಕಥೆ ಕಾಲ್ಪನಿಕವಾಗಿದ್ದರೂ ಅಲ್ಲಿ ಮನುಷ್ಯ ಸಂಬಂಧಗಳನ್ನು ಬದಲಾದ ಸನ್ನಿವೇಶದಲ್ಲಿ ನೋಡುವ ಕಾಫ್ಕಾನ ತಲ್ಲಣಗಳಿವೆ. ಅನಂತಮೂರ್ತಿ ಅವರ ಕಥೆಗಳು, ಭೈರಪ್ಪನವರ ಕಾದಂಬರಿಗಳು, ಮಹಾದೇವರ ಲೇಖನಗಳನ್ನು ಓದುವಾಗಲೆಲ್ಲ ಈ ಬರಹಗಾರರ ತಲ್ಲಣಗಳು ಒಬ್ಬ ಓದುಗನಾಗಿ ನನಗೆ ಅನೇಕ ಸಲ ಎದುರಾದದ್ದುಂಟು. ಈ ಮೇಲಿನದೆಲ್ಲ ‘ಬರಹಗಾರನ ತಲ್ಲಣಗಳು’ ಎಂದು ನಾನು ಬರೆಯುತ್ತಿರುವ ಲೇಖನಕ್ಕೆ ಪೀಠಿಕೆಯಾಯಿತು. ಇನ್ನು ಮುಖ್ಯ ವಿಷಯಕ್ಕೆ ಬರುತ್ತೇನೆ ಇವತ್ತಿನ ಸಂದರ್ಭ ಪ್ರತಿಯೊಬ್ಬ ಲೇಖಕ ಹಲವು ಬಗೆಯ ತಲ್ಲಣಗಳು ಮತ್ತು ಆತಂಕಕ್ಕೆ ಒಳಗಾಗುತ್ತಿರುವನು. ಏನು ಬರೆಯಬೇಕು? ಯಾರಿಗಾಗಿ ಬರೆಯಬೇಕು? ಹೇಗೆ ತನ್ನನ್ನು ಅಭಿವ್ಯಕ್ತಿಗೊಳಿಸಿಕೊಳ್ಳಬೇಕು? ತಾನು ಬರೆದದ್ದನ್ನು ಪ್ರಕಟಿಸುವುದು ಹೇಗೆ? ಈ ಎಲ್ಲ ಸಮಸ್ಯೆಗಳು ಬರಹಗಾರರನ್ನು ಕಾಡುತ್ತಿರುವ ಬಹುಮುಖ್ಯ ಸಂಗತಿಗಳಾಗಿವೆ. ಅದರಲ್ಲೂ ಬರವಣಿಗೆಯ ವಿಷಯವಾಗಿ ಮಹಿಳೆಯರು ಎದುರಿಸುತ್ತಿರುವ ತಲ್ಲಣಗಳು ಪುರುಷರಿಗಿಂತ ಒಂದಿಷ್ಟು ಹೆಚ್ಚೆ ಎನ್ನಬಹುದು.


ಎಡ-ಬಲ:

ಕನ್ನಡ ಮಾತ್ರವಲ್ಲ ಭಾರತದ ಎಲ್ಲ ಭಾಷೆಗಳಲ್ಲೂ ಬರಹಗಾರರು ಎರಡು ಪ್ರತ್ಯೇಕ ಬಣಗಳಾಗಿ ಒಡೆದು ಹೋಗಿರುವರು. ಹೀಗೆ ಪ್ರತ್ಯೇಕ ಗುಂಪಿನೊಂದಿಗೆ ಗುರುತಿಸಿಕೊಂಡಿರುವ ಲೇಖಕರಿಗೆ ಬರೆಯಲು ಅವರದೇ ಆದ ಅಜೆಂಡಾಗಳಿವೆ. ಒಂದು ಗುಂಪಿನ ಲೇಖಕರು ದೇಶ, ಧರ್ಮದ ಪರ ಬರೆದರೆ ಇನ್ನೊಂದು ಗುಂಪು ಅದನ್ನು ವಿರೋಧಿಸಿ ಬರೆಯುತ್ತದೆ. ಒಂದರ್ಥದಲ್ಲಿ ಇದು ಲೇಖಕರ ಅಸ್ತಿತ್ವದ ಪ್ರಶ್ನೆ ಕೂಡ ಹೌದು. ಯಾವುದಾದರು ಗುಂಪಿನೊಂದಿಗೆ ಗುರುತಿಸಿಕೊಂಡಲ್ಲಿ ಮಾತ್ರ ಲೇಖಕರ ಬರವಣಿಗೆಗೆ ಹೇರಳ ಸಂಖ್ಯೆಯ ಓದುಗರು ಸಿಗುವ ಸಾಧ್ಯತೆ ಹೆಚ್ಚು. ನಮ್ಮ ಹಿರಿಯ ಲೇಖಕರ ಈ ನಡೆ ಇವತ್ತಿನ ತರುಣ ಬರಹಗಾರರನ್ನು ಹೆಚ್ಚು ಹೆಚ್ಚು ಪ್ರಭಾವಿಸುತ್ತಿದೆ. ವಿಶ್ವವಿದ್ಯಾಲಯದಂಥ ಉನ್ನತ ಶಿಕ್ಷಣದ ಕೇಂದ್ರಗಳು ಅತ್ಯಂತ ವ್ಯವಸ್ಥಿತವಾಗಿ ಎಡ ಮತ್ತು ಬಲ ಗುಂಪಿನ ಲೇಖಕರನ್ನು ಹುಟ್ಟುಹಾಕುತ್ತಿವೆ. ಆದರೆ ಇಂಥದ್ದೊಂದು ವಾತಾವರಣದ ನಡುವೆ ನಿಜಕ್ಕೂ ಆತಂಕಕ್ಕೊಳಗಾಗುವವನು ಈ ಯಾವ ಮಾರ್ಗವನ್ನು ಅನುಸರಿಸದೆ ತನ್ನದೆ ಪ್ರತ್ಯೇಕ ದಾರಿಯೊಂದನ್ನು ಕಂಡುಕೊಳ್ಳುವ ಲೇಖಕ. ಏಕೆಂದರೆ ಈ ಮೂರನೇ ಮಾರ್ಗದ ಲೇಖಕನಿಗೆ ಬರೆಯಲು ಯಾವುದೇ ಅಜೆಂಡಾ ಇಲ್ಲವೇ ಸಿದ್ಧ ಸೂತ್ರವಾಗಲಿ ಇಲ್ಲ. ಅವನದು ಸಮಾಜಮುಖಿ ಚಿಂತನೆ. ವ್ಯವಸ್ಥೆಯಲ್ಲಿ ತಾನು ಕಂಡಿದ್ದನ್ನು ಮತ್ತು ಅನುಭವಿಸಿದ್ದನ್ನು ತನ್ನದೇ ಸರಳ ಭಾಷೆಯಲ್ಲಿ ಅಭಿವ್ಯಕ್ತಿಗೊಳಿಸುವ ಈ ಮೂರನೇ ಮಾರ್ಗದ ಲೇಖಕನಿಗೆ ಎದುರಾಗುವ ಬಹುದೊಡ್ಡ ಸಮಸ್ಯೆ ಎಂದರೆ ಅದು ಓದುಗರ ಕೊರತೆ. ಓದುಗರೆ ಇಲ್ಲ ಎಂದಾದಲ್ಲಿ ಯಾರಿಗಾಗಿ ಬರೆಯಬೇಕು? ಇದು ಲೇಖಕನನ್ನು ಕಾಡುವ ಪ್ರಶ್ನೆ. ದೇವನೂರ ಮಹಾದೇವ ಒಂದು ಮಹತ್ವದ ಪ್ರಶ್ನೆಯನ್ನು ಓದುಗರೆದುರು ಇಡುತ್ತಾರೆ ‘ತನ್ನ ಸಮುದಾಯದ ಓದುಗರೇ ಅಪರೂಪವಾಗಿರುವ ಇಂಥ ಸಂದರ್ಭದಲ್ಲಿ ಆ ಸಮುದಾಯದ ಲೇಖಕನೊಬ್ಬ ಯಾರನ್ನು ತನ್ನ ಓದುಗರೆಂದು ಉದ್ದೇಶಿಸಿ ಬರೆಯಬೇಕು? ಇತರರಿಗೆಂದು ಬರೆದರೆ ಆ ಬರವಣಿಗೆ ಇತರರ ಆಸಕ್ತಿ, ಕುತೂಹಲ ಪೂರೈಸಲು ಮಾನವಶಾಸ್ತ್ರೀಯ ವಸ್ತುವಿನಂತಾಗಿ ಬಿಡುವುದರಿಂದ ತನ್ನ ಸಮುದಾಯದ ಗಾಯದ ಮೇಲೆ ಆ ಸಮುದಾಯದ ಪ್ರಜ್ಞಾವಂತನೇ ಬರೆ ಎಳೆದಂತಾಗುವುದಿಲ್ಲವೆ?’. ಮಹಾದೇವರ ಮಾತನ್ನು ಉಲ್ಲೇಖಿಸುತ್ತಿರುವ ಸಂದರ್ಭ ನನಗೆ ರಷ್ಯನ ಕಥೆಗಾರ್ತಿ ಆನಾ ಸ್ಟಾರೊಬಿನೆಜ್ ಹೇಳಿದ ಮಾತು ನೆನಪಾಗುತ್ತಿದೆ. ಆಕೆ ಲೇಖಕನ ಅಸ್ತಿತ್ವ ಮತ್ತು ಬದಲಾಗಬೇಕಾದ ಲೇಖಕನ ಮನೋಭಾವವನ್ನು ಕುರಿತು ಹೀಗೆ ಹೇಳುತ್ತಾಳೆ ‘ಲೇಖಕರಿಗೆ ಯಾವುದೇ ಇಸಂ ಅಥವಾ ಪ್ರಾದೇಶಿಕತೆಯ ಮಿತಿ ಇರುವುದು ಇವತ್ತಿನ ಸಂದರ್ಭದಲ್ಲಿ ಬರವಣಿಗೆಗೆ ಪೂರಕವಲ್ಲ. ಇಡೀ ಜಗತ್ತೇ ನನ್ನ ಓದುಗ ಎಂದುಕೊಂಡೇ ಬರವಣಿಗೆ ಆರಂಭಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂಟರ್‍ನೆಟ್ ಯುಗದಲ್ಲಿ ಬರಹಗಾರರಿಗೆ ಇರುವ ಸವಾಲು ಇದು. ಹಾಗಾಗಿ ಯಾವುದೇ ಬರಹಗಾರರಿಗೆ ಲೇಬಲ್ ಹಾಕುವುದೆಂದರೆ ಅವರನ್ನು ಒಂದು ಮಿತಿಯಲ್ಲಿ ಕಟ್ಟಿಹಾಕುವುದು ಎಂದೇ ಅರ್ಥ. ಆದ್ದರಿಂದ ಸೃಜನಶೀಲ ಲೇಖಕರು ಇಂತಹ ಮಿತಿಗಳಿಂದ ಹೊರಬಂದು ಬರೆಯಬೇಕಿದೆ. ಇಡೀ ಜಗತ್ತೇ ನಮ್ಮ ಬರವಣಿಗೆಗೆ ಕ್ಯಾನ್‍ವಾಸ್ ಆಗಬೇಕಿದೆ. ಆಗ ನಾವು ಎಲ್ಲರನ್ನೂ ತಲುಪುವುದು ಸಾಧ್ಯ. ಭಾಷೆಯ ಮಿತಿಯನ್ನು ಕೂಡ ಆ ಮೂಲಕ ಮೀರುವುದು ಸಾಧ್ಯ’.  ಆನಾ ಸ್ಟಾರೊಬಿನೆಜ್‍ಳ ಈ ಮಾತು ಲೇಖಕರು ತಮ್ಮನ್ನು ಕಾಡುತ್ತಿರುವ ಆತಂಕ ಮತ್ತು ತಲ್ಲಣಗಳಿಂದ ಹೊರಬರಲು ಪರ್ಯಾಯ ಮಾರ್ಗವನ್ನು ತೋರಿಸುವಂತಿದೆ.
ಕನ್ನಡದಲ್ಲಿ ಸಧ್ಯದ ಮಟ್ಟಿಗೆ ಬಹುದೊಡ್ಡ ಓದುಗರ ವಲಯವನ್ನು ಹೊಂದಿರುವ ಲೇಖಕರೆಂದರೆ ಅದು ಎಸ್.ಎಲ್.ಭೈರಪ್ಪನವರು. ಅವರ ಕಾದಂಬರಿಯೊಂದು ಪ್ರಕಟವಾದ ಕಡಿಮೆ ಸಮಯದಲ್ಲಿ ಅನೇಕ ಮುದ್ರಣಗಳನ್ನು ಕಾಣುತ್ತದೆ. ಆದರೆ ವಿಪರ್ಯಾಸದ ಸಂಗತಿ ಎಂದರೆ ಒಂದು ವೈಚಾರಿಕ ವಲಯ ಉದ್ದೇಶಪೂರ್ವಕವಾಗಿ ಭೈರಪ್ಪನವರಿಗೆ ಬಲಪಂಥೀಯ ಬರಹಗಾರನೆಂಬ ಹಣೆಪಟ್ಟಿಯನ್ನು ಅಂಟಿಸಿದೆ. ಈ ಒಂದು ಅಪವಾದಕ್ಕೆ ಪೂರಕವಾಗಿ ಭೈರಪ್ಪನವರು ಕೂಡ ತಮ್ಮ ಕಾದಂಬರಿಗಳಲ್ಲಿ ಬಲಪಂಥೀಯ ವಿಚಾರಗಳನ್ನು ಸಮರ್ಥಿಕೊಂಡು ಬರೆದಿರುವುದುಂಟು. ಹೀಗೆ ಭೈರಪ್ಪನವರನ್ನು ಒಂದು ಗುಂಪಿಗೆ ಸೇರಿಸಿದ ವೈಚಾರಿಕ ವಲಯ ಅವರಿಗೆ ವಿರುದ್ಧವಾಗಿ ಅನಂತಮೂರ್ತಿ ಅವರನ್ನು ಎಡಪಂಥೀಯರನ್ನಾಗಿಸಿ ಸಾಹಿತ್ಯ ಕ್ಷೇತ್ರದ ಈ ಇಬ್ಬರು ಸೃಜನಶೀಲರ ನಡುವೆ ಬಹುದೊಡ್ಡ ಕಂದಕವನ್ನೇ ಸೃಷ್ಟಿಸಿತು. ಆತಂಕದ ಸಂಗತಿ ಎಂದರೆ ಇವತ್ತಿನ ಬಹಳಷ್ಟು ಬರಹಗಾರರು ಈ ಇಬ್ಬರನ್ನು ಆದರ್ಶವಾಗಿಟ್ಟುಕೊಂಡು ತಮ್ಮ ಬರವಣಿಗೆಯನ್ನು ನಿರ್ಧಿಷ್ಟ ಗುಂಪಿಗೆ ಸೀಮಿತಗೊಳಿಸಿಕೊಳ್ಳುತ್ತಿರುವರು. ಹಾಗಾದರೆ ಬರಹಗಾರ ಭಾಷೆ ಮತ್ತು ದೇಶದ ಮಿತಿಯನ್ನು ದಾಟುವ ಸಾಧ್ಯತೆಯನ್ನು ತನ್ನದಾಗಿಸಿಕೊಳ್ಳುವುದು ಹೇಗೆ?

ಅಭಿವ್ಯಕ್ತಿಯ ದಮನ

ತಮಿಳುನಾಡಿನ ಬರಹಗಾರ ಬರವಣಿಗೆಯ ಕೃಷಿಯನ್ನು ನಿಲ್ಲಿಸಿ ಇನ್ನುಮುಂದೆ ಪೆರುಮಾಳ್ ಮುರುಗನ್ ಎನ್ನುವ ಲೇಖಕ ಸತ್ತುಹೋದ ಎಂದು ಘೋಷಿಸಿಕೊಳ್ಳಬೇಕಾದರೆ ಆ ಬರಹಗಾರ ನಿಜಕ್ಕೂ ಅನುಭವಿಸಿದ ಮಾನಸಿಕ ಹಿಂಸೆ ಹೇಗಿತ್ತು? ಬರಹಗಾರನ ವೈಚಾರಿಕ ಚಿಂತನೆಯನ್ನು ಕತ್ತು ಹಿಸುಕಿ ಸಾಯಿಸುವ ಮತ್ತು ಅವನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುವ ಹುನ್ನಾರ ಕಾಲಕಾಲಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಅಟ್ಟಹಾಸವನ್ನು ಮೆರೆಯುತ್ತ ಬಂದಿದೆ. ಕಮೂ, ಕಾಫ್ಕಾನಿಂದ ಕುವೆಂಪು, ಲಂಕೇಶ್, ಭೈರಪ್ಪನವರವರೆಗೆ ಬರಹಗಾರರು ತಮ್ಮ ಬರವಣಿಗೆಯ ಬದುಕಿನಲ್ಲಿ ಒಮ್ಮೆಯಾದರೂ ಪ್ರತಿಭಟನೆ ಮತ್ತು ಅಭಿವ್ಯಕ್ತಿಯ ದಮನಕ್ಕೆ ಒಳಗಾದವರೆ. ಆಲ್ಬರ್ಟ್ ಕಮೂ ಒಂದೆಡೆ ಹೇಳುತ್ತಾನೆ ‘I rebel therefore we are exist’ ಎಂದು. ಈ ಮಾತನ್ನು ಕಮೂ ಬರವಣಿಗೆ ಎನ್ನುವುದು ಅದು ವ್ಯವಸ್ಥೆಯ ವಿರುದ್ಧದ ಬರಹಗಾರನ ಪ್ರತಿಭಟನೆ ಎನ್ನುವ ಅರ್ಥದಲ್ಲಿ ಹೇಳುತ್ತಾನೆ. ಕನ್ನಡದ ಪ್ರಮುಖ ದಿನಪತ್ರಿಕೆಯಲ್ಲಿ ಅಂಕಣ ಬರೆಯುತ್ತಿದ್ದ ಲಂಕೇಶ್ ತಮ್ಮ ನೇರ ಮತ್ತು ಪ್ರತಿಭಟನಾತ್ಮಕ ಬರವಣಿಗೆಯಿಂದ ಕೆಲಸ ಕಳೆದುಕೊಂಡು ತಮ್ಮದೇ ಸ್ವಂತ ಪತ್ರಿಕೆಯನ್ನು ಆರಂಭಿಸಬೇಕಾಗುತ್ತದೆ. ಕನ್ನಡದ ಪ್ರಮುಖ ಕಾದಂಬರಿಕಾರರಾದ ಎಸ್.ಎಲ್.ಭೈರಪ್ಪನವರು ಅನೇಕ ಸಂದರ್ಭಗಳಲ್ಲಿ ಒಂದು ವರ್ಗದ ಪ್ರತಿಭಟನೆಯ ಅಗ್ನಿ ದಿವ್ಯವನ್ನು ಹಾಯ್ದು ಬಂದಿರುವರು. ‘ಸಂಸ್ಕಾರ’ ಬರೆದ ಸಂದರ್ಭದಲ್ಲಿ ಅನಂತಮೂರ್ತಿ ಅವರು ತಮ್ಮದೇ ಸಮುದಾಯದ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ‘ಅವಸ್ಥೆ’ ಬರೆದು ಅವರು ಇನ್ನೊಂದು ಸಮುದಾಯವನ್ನು ಎದುರುಹಾಕಿಕೊಳ್ಳಬೇಕಾಯಿತು.
ಬರಹಗಾರನ ಅಭಿವ್ಯಕ್ತಿಯನ್ನು ದಮನಗೊಳಿಸಲು ಆಳುವ ಅಥವಾ ಓದುಗ ವರ್ಗ ಒಂದು ಮಾರ್ಗವನ್ನು ಅನುಸರಿಸಿದರೆ ವೈಚಾರಿಕ ವಲಯದ ತಂತ್ರ ಇನ್ನೊಂದು ರೀತಿಯದು. ಸಾಮಾನ್ಯವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಪಾಂಡಿತ್ಯಪೂರ್ಣ ಬರಹಗಾರರು ತಮ್ಮ ಸಮಕಾಲೀನ ಬರಹಗಾರರಿಂದ ಅವಜ್ಞಗೆ ಒಳಗಾಗುವ ಸಾಧ್ಯತೆ ಹೆಚ್ಚು.  ಇಂಥ ಬರಹಗಾರರ ಬರವಣಿಗೆಯನ್ನು ವಿಮರ್ಶಿಸದೆ (ಅದು ಮೆಚ್ಚುಗೆಯಾಗಲಿ ಇಲ್ಲವೇ ಟೀಕೆಯಾಗಲಿ) ವೈಚಾರಿಕ ವಲಯ ತಟಸ್ಥವಾಗಿ ಉಳಿದಲ್ಲಿ ಆಗ ಲೇಖಕನಿಗೆ ತಾನು ಯಾರಿಗಾಗಿ ಬರೆಯಬೇಕು ಎನ್ನುವ ಜಿಜ್ಞಾಸೆ ಕಾಡಲಾರಂಭಿಸುತ್ತದೆ. ವೈಚಾರಿಕ ವಲಯದ ಈ ತಟಸ್ಥ ನೀತಿಯನ್ನು ಕೆಲವು ಲೇಖಕರು ‘ಮೌನ ಪಿತೂರಿ’ ಎಂದು ಕರೆಯುತ್ತಾರೆ. ಎನ್.ಎಸ್.ಶಂಕರ ಇಂಥದ್ದೊಂದು ಮೌನಪಿತೂರಿಗೆ ಒಳಗಾದ ಶಂಭಾ ಜೋಷಿ ಅವರ ಮನಸ್ಥಿತಿಯನ್ನು ತಮ್ಮ ಲೇಖನದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿರುವರು. ಅವರು ಹೇಳುವಂತೆ ಹಿಂದೂ ಸಂಸ್ಕೃತಿಯ ಬೇರಿಗೆ ಕೈಯಿಟ್ಟ ಅದ್ವಿತೀಯ ಸಂಶೋಧಕ ಶಂಭಾ ಪ್ರಾಚೀನ ಪಠ್ಯಗಳನ್ನು ಶೋಧಿಸುತ್ತ ಸಂಪ್ರದಾಯಶೀಲರು ತತ್ತರಿಸುವಂತ ಗೂಢಾರ್ಥವನ್ನು ಬಿಡಿಸಿ ಹೇಳತೊಡಗಿದ ಕೂಡಲೇ ಅವರಿಗೆದುರಾದದ್ದು ವಿಮರ್ಶೆಯಲ್ಲ, ಛೀಮಾರಿಯಲ್ಲ, ಜಗಳವೂ ಅಲ್ಲ. ವೈಚಾರಿಕ ವಲಯ ಶಂಬಾರನ್ನು ಸಂಪೂರ್ಣ ನಿರ್ಲಕ್ಷಿಸಿ ಮೌನದ ಮಹಾಗೋಡೆಯನ್ನೇ ಅವರೆದುರು ನಿಲ್ಲಿಸಿಬಿಟ್ಟಿತು. ಗಾಡ ಕತ್ತಲಿನಂಥ ಮೌನ. ತನ್ನೊಂದಿಗೆ ಮಾತನಾಡುವವರೇ ಸಿಕ್ಕದ ಶಂಭಾರಿಗೆ ಪ್ರತಿವಾದದ ಎದುರು ತನ್ನ ನೋಟವನ್ನು ಸ್ಫುಟಗೊಳಿಸಿಕೊಳ್ಳುವ, ಹರಿತಗೊಳಿಸಿಕೊಳ್ಳುವ ಅವಕಾಶವೇ ದೊರೆಯದಾಯಿತು. ಕ್ರಮೇಣ ಅವರ ಪಾಲಿಗೆ ಪಾಂಡಿತ್ಯವೇ ಪಂಜರವಾಗಿಹೋಯಿತು.

ಲೇಖಕಿಯರ ತಲ್ಲಣಗಳು

ಬರವಣಿಗೆ ಕುರಿತು ಲೇಖಕಿಯರ ತಲ್ಲಣವನ್ನು ಇಂಗ್ಲಿಷ್ ಲೇಖಕಿ ಲೈಲಾ ಅಹ್ಮದ್ ಹೀಗೆ ವಿವರಿಸುತ್ತಾರೆ ‘ಬರವಣಿಗೆ ಎಂಬುದು ಮಹಿಳೆಯ ಪಾಲಿಗೆ ಚರಿತ್ರೆ ಎದುರುಗೊಳ್ಳುವ ಸವಾಲಿನ  ಕ್ರಿಯೆಯೇ. ಅದರಲ್ಲೂ ಮೂರನೇ ಜಗತ್ತಿನ ಮಹಿಳೆಯರಿಗೆ ಅದು ಇನ್ನಷ್ಟು ದೊಡ್ಡ ಸವಾಲು. ಇನ್ನು ಮುಸ್ಲಿಂ ಜಗತ್ತಿನ ಮಹಿಳೆಯ ಪಾಲಿಗೆ ಬರವಣಿಗೆ ಎನ್ನುವುದು ಏಕಕಾಲಕ್ಕೆ ಚರಿತ್ರೆಯನ್ನೂ ವರ್ತಮಾನದ ಆತಂಕಗಳನ್ನೂ ಎದುರುಹಾಕಿಕೊಂಡ ನಿರಂತರ ಹೋರಾಟದಂತೆಯೇ  ಸರಿ. ತನ್ನ ಪರಿಸರದ ಕಟು ಸಂಪ್ರದಾಯ, ಆಚರಣೆ, ನಂಬಿಕೆ, ಮೌಢ್ಯಗಳೊಂದಿಗೆ ಧಾರ್ಮಿಕ, ಕೌಟಂಬಿಕ ದಬ್ಬಾಳಿಕೆಯನ್ನು ಪ್ರಶ್ನಿಸುತ್ತಲೇ ಆಕೆಯೊಳಗಿನ ಲೇಖಕಿ ಶತಮಾನಗಳ ಪುರುಷ ಪ್ರಧಾನ ಯಜಮಾನ್ಯವನ್ನು ಒಡೆಯಬೇಕಾಗುತ್ತದೆ. ಹಾಗಾಗಿ ಬರವಣಿಗೆ ಎನ್ನುವುದು ಮಹಿಳೆಯ ಪಾಲಿಗೆ ದಣಿವರಿಯದ ಹಾದಿ’.  ಕನ್ನಡ ಭಾಷೆ ಮಾತ್ರವಲ್ಲ ಜಗತ್ತಿನ ಎಲ್ಲ ಭಾಷೆಗಳಲ್ಲಿ ಮಹಿಳೆ ಒಬ್ಬ ಲೇಖಕಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬಂದದ್ದು ತುಂಬ ಕಡಿಮೆ. ಲೇಖಕರಿಗೆ ದೊರೆತಷ್ಟು ಮತ್ತು ದೊರೆಯುತ್ತಿರುವ ಮಾನ್ಯತೆ ಲೇಖಕಿಯರಿಗೆ ದೊರೆಯುತ್ತಿಲ್ಲ. ಹೀಗಾಗಿ ಬರಹಗಾರ್ತಿಯರು ಲೇಖಕರಿಗಿಂತ ಒಂದಿಷ್ಟು ಹೆಚ್ಚೆ ಎನ್ನುವಷ್ಟು ಆತಂಕ ಮತ್ತು ತಲ್ಲಣಗಳನ್ನು ಎದುರಿಸುತ್ತಿರುವರು. ಜೊತೆಗೆ ಸಂಪ್ರದಾಯದ ಬೇಲಿಯಿಂದಾಗಿ ಮಹಿಳೆಯರು ಮುಕ್ತವಾಗಿ ಬರವಣಿಗೆಯ ಮೂಲಕ ಅಭಿವ್ಯಕ್ತಗೊಳ್ಳಲು ಸಾಧ್ಯವಾಗುತ್ತಿಲ್ಲ. ತ್ರಿವೇಣಿ, ಎಂ.ಕೆ.ಇಂದಿರಾ, ಪ್ರೇಮಾ ಭಟ್ಟ, ಅನುಪಮಾ ನಿರಂಜನ, ಸಾರಾ ಅಬೂಬಕ್ಕರ ಇವರೆಲ್ಲ ಬರವಣಿಗೆಯ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟ ಘಳಿಗೆ ಸಮಾಜ ಸಂಪ್ರದಾಯಗಳಿಂದ ಈಗಿನಷ್ಟು ಮುಕ್ತವಾಗಿರಲಿಲ್ಲ. ಪರಿಣಾಮವಾಗಿ ಆಗೆಲ್ಲ ಹೆಚ್ಚಿನ ಲೇಖಕಿಯರು ಕಥೆ ಕಾದಂಬರಿಗಳಿಗೆ ಮಾತ್ರ ತಮ್ಮ ಬರವಣಿಗೆಯನ್ನು ಸೀಮಿತಗೊಳಿಸಿಕೊಂಡು ಒಂದಿಷ್ಟು ಶೃಂಗಾರ ಭರಿತ ಮನೋರಂಜನಾತ್ಮಕ ಸಾಹಿತ್ಯವನ್ನು ಸೃಷ್ಟಿಸಿದರು. ಈ ಕಾರಣದಿಂದಲೇ ಮಹಿಳಾ ಸಾಹಿತ್ಯ ಅಡುಗಮನೆ ಸಾಹಿತ್ಯ ಎನ್ನುವ ಗೇಲಿಗೆ ಒಳಗಾಗಬೇಕಾಯಿತು. ತ್ರಿವೇಣಿ ಅವರು ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರ ಬದುಕಿನ ಸಮಸ್ಯೆಗಳನ್ನು ಮನೋವಿಜ್ಞಾನದ ಹಿನ್ನೆಲೆಯಲ್ಲಿ ಕಾದಂಬರಿಕಥನದ ಮೂಲಕ ಒಂದಿಷ್ಟು ಬಿಡಿಸಿನೋಡುವ ಪ್ರಯತ್ನ ಮಾಡಿದರು. ಆದರೂ ಅವರ ಪ್ರಯತ್ನ ಸುಶಿಕ್ಷಿತ ವರ್ಗದ ಮಹಿಳೆಯರ ಸಮಸ್ಯೆಗಳಿಗೆ ಮಾತ್ರ ಸೀಮಿತವಾಗಿತ್ತು ಎನ್ನುವ ಅಪವಾದವಿದೆ. ಹೀಗೆ ತ್ರಿವೇಣಿ ಅವರ ಪ್ರಯತ್ನವನ್ನು ಅನುಮಾನದ ದೃಷ್ಟಿಯಿಂದ ನೋಡುವ ಮೊದಲು ಆ ಕಾಲದ ಸಮಾಜದ ಕಟ್ಟಳೆಗಳು ಮತ್ತು ಆ ಸಂದರ್ಭ ಲೇಖಕಿಯ ತಲ್ಲಣಗಳತ್ತ ಗಮನಹರಿಸಬೇಕು. ಒಬ್ಬ ಲೇಖಕಿಯಾಗಿ ತ್ರಿವೇಣಿ ಅವರು ಅಂದು ಇಟ್ಟ ದಿಟ್ಟ ಹೆಜ್ಜೆ ನಂತರದ ದಿನಗಳಲ್ಲಿ ಅನೇಕ ಬರಹಗಾರ್ತಿಯರು ಸಂಪ್ರದಾಯದ ಚೌಕಟ್ಟನ್ನು ಮುರಿದು ಹೊರಬರಲು ದಾರಿದೀಪವಾಯಿತು. ತ್ರಿವೇಣಿ ಅವರ ಆ ನಡೆಯನ್ನು ದಿಕ್ಸೂಚಿಯಾಗಿಟ್ಟುಕೊಂಡು ಗೀತಾ ನಾಗಭೂಷಣ, ಸಾರಾ ಅಬೂಬಕ್ಕರ, ವೈದೇಹಿ, ನೇಮಿಚಂದ್ರ, ಸಬೀಹಾ ಭೂಮಿಗೌಡ, ಪ್ರತಿಭಾ ನಂದಕುಮಾರ, ಬಿ.ಟಿ.ಲಲಿತಾ ನಾಯಕ್ ಅವರಂಥ ಬರಹಗಾರ್ತಿಯರು ಸಾಹಿತ್ಯ ಕ್ಷೇತ್ರದ ಮುನ್ನೆಲೆಗೆ ಬಂದರು. ಗೀತಾ ನಾಗಭೂಷಣ ಲೇಖಕಿಯಾಗಿ ಶೋಷಣೆಗೆ ಒಳಗಾದ ತಳ ಸಮುದಾಯಗಳ ಹೆಣ್ಣಿನ ಒಳತೋಟಿಗಳನ್ನು ಅತ್ಯಂತ ಸಮರ್ಥವಾಗಿ ತಮ್ಮ ಕಾದಂಬರಿಗಳ ಮೂಲಕ ಅಭಿವ್ಯಕ್ತಿಗೊಳಿಸಿದರು. ಆದರೂ ಕನ್ನಡ ಸಾಹಿತ್ಯದಲ್ಲಿ ಸೃಷ್ಟಿಯಾದ ಹೆಣ್ಣಿನ ಪಾತ್ರವನ್ನು ಕುರಿತು ಚರ್ಚಿಸುವಾಗ ದೇವನೂರರ ‘ಕುಸುಮ ಬಾಲೆ’ ಮತ್ತು ‘ಒಡಲಾಳ’ ಚರ್ಚೆಗೆ ಒಳಗಾದಷ್ಟು ಲೇಖಕಿಯರಿಂದ ಸೃಷ್ಟಿಯಾದ ಸ್ತ್ರೀ ಪಾತ್ರಗಳು ಚರ್ಚೆಗೆ ಒಳಗಾದದ್ದು ತೀರ ಕಡಿಮೆ. ಇದು ಕನ್ನಡ ಭಾಷೆಯಲ್ಲಿ ಮಹಿಳಾ ಸಾಹಿತ್ಯದ ಇತಿಮಿತಿಯನ್ನು ಎತ್ತಿ ತೋರಿಸುತ್ತದೆ. ಬರಹಗಾರ್ತಿಯಾಗಿ ಮಹಿಳೆ ಸಾಹಿತ್ಯ ಕ್ಷೇತ್ರದಲ್ಲಿ ಪುರುಷ ಬಣದ ಸವಾಲುಗಳನ್ನು ನಿರಂತರವಾಗಿ ಎದುರಿಸಬೇಕಾದದ್ದು ಅವಳ ಸಧ್ಯದ ತಲ್ಲಣಗಳಲ್ಲೊಂದು. ಮಹಿಳೆ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಮುನ್ನೆಲೆಗೆ ಏಕೆ ಬರುತ್ತಿಲ್ಲ ಎನ್ನುವುದಕ್ಕೆ ಲೇಖಕಿಯೊಬ್ಬರು ವಿವರಿಸುವ ಕಾರಣ ಹೀಗಿದೆ ‘ನಮಗೆ ಅಡುಗೆ ಮಾಡುವಾಗ ಲೇಖನ ಮುಗಿಸಲಿಲ್ಲ ಎಂಬ ಚಿಂತೆ. ಲೇಖನ ಬರೆಯಲು ಕುಳಿತಾಗ ಮನೆಕೆಲಸದ ಹೊರೆ ಕಾಡುತ್ತಿರುತ್ತದೆ. ಒಟ್ಟಿನಲ್ಲಿ ಮಹಿಳೆ ಏನನ್ನಾದರೂ ಸಾಧಿಸಬೇಕಾದರೆ ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗಿಂತ ಹತ್ತು ಪಟ್ಟು ಹೆಚ್ಚು ಶ್ರಮವಹಿಸಿ ದುಡಿಯಬೇಕಾಗುತ್ತದೆ. ತನ್ನ ವಿರಾಮ, ವಿಶ್ರಾಂತಿ, ಚಿಕ್ಕ ಚಿಕ್ಕ ಆಸೆಗಳನ್ನೆಲ್ಲ ಬದಿಗಿಟ್ಟು ತೊಡಗಿಸಿಕೊಳ್ಳಬೇಕಾಗುತ್ತದೆ. ಇಷ್ಟಾದರೂ ತನ್ನ ಸಂಸಾರಿಕ ಜವಾಬ್ದಾರಿಗೆ ಅಪಚಾರವೆಸಗಿದೆನೇನೋ ಎಂಬ ದ್ವಂದ್ವ ಆಕೆಯನ್ನು ಕಾಡುತ್ತಿರುತ್ತದೆ. ಹೆಂಗಸರ ಇಂಥ ದ್ವಂದ್ವಗಳು ಪುರುಷಲೋಕದಲ್ಲಿಲ್ಲ. ಪುರುಷನೊಬ್ಬ ಒಂದು ಸಾಧನೆ ಮಾಡಬೇಕಾದರೆ ಅವನು ತನ್ನ ಎಲ್ಲ ಸಮಯವನ್ನು ಅದಕ್ಕಾಗೇ ಮೀಸಲಿಡಲು ಸಾಧ್ಯ’.

ಕೊನೆಯ ಮಾತು

ಬರೆಯುವ ಸುಖವನ್ನು ಬರೆಯುವ ಅಭ್ಯಾಸವಿಲ್ಲದವರಿಗೆ ವಿವರಿಸುವುದು ಕಷ್ಟ ಎಂದು ಲಂಕೇಶ್ ಹೇಳುತ್ತಾರೆ. ‘ಬರವಣಿಗೆ ಅನ್ನುವುದು ಒಂದು ರೀತಿಯ ಹಿಂಸೆಯ ಕೆಲಸವಾದರೂ ಬರೆದ ನಂತರ ದೊರೆಯುವ ಸುಖ ಅಪೂರ್ವವಾದದ್ದು’ ಬರವಣಿಗೆ ಕುರಿತು ಜಿ.ಎಸ್.ಶಿವರುದ್ರಪ್ಪನವರ ಅಭಿಪ್ರಾಯವಿದು. ಒಟ್ಟಿನಲ್ಲಿ ಲೇಖಕನ ತೊಳಲಾಟ, ತಾಕಲಾಟ, ತಲ್ಲಣ ಮತ್ತು ಆತಂಕಗಳ ಒಟ್ಟು ಪರಿಣಾಮವೇ ಬರವಣಿಗೆ. ತಲ್ಲಣ ಮತ್ತು ಆತಂಕಕ್ಕೆ ಒಳಗಾಗುವುದು ಹಿಂಸೆಯ ಕೆಲಸವಾದರೂ ತನ್ನ ತೊಳಲಾಟಗಳಿಗೆ ಅಕ್ಷರರೂಪ ನೀಡಿದ ನಂತರದ ಸಂತೃಪ್ತಿ ಮಾತ್ರ ತುಂಬ ಅನನ್ಯವಾದದ್ದು. ಲೇಖಕ ಯಾರಿಗಾಗಿ ಮತ್ತು ಏತಕ್ಕಾಗಿ ಬರೆಯಬೇಕು ಎನ್ನುವ ಪ್ರಶ್ನೆಯೇ  ನಿಜಕ್ಕೂ ಅರ್ಥಹೀನ. ತಾನು ಬದುಕುತ್ತಿರುವ ಸಮಾಜದ ಎಲ್ಲ ತಲ್ಲಣಗಳು ಮತ್ತು ಆತಂಕವನ್ನು ತನ್ನದಾಗಿಸಿಕೊಂಡು ಬರೆಯಲು ಹೊರಡುವ ಬರಹಗಾರನದು ಸಮಾಜಮುಖಿ ಚಿಂತನೆಯೇ  ವಿನ: ಅದು ವೈಯಕ್ತಿಕವಾದದ್ದಲ್ಲ. ಲಂಕೇಶ್‍ರ ಪ್ರಕಾರ ಬರಹಗಾರನೆಂದರೆ ಒಂದು ಅನುಭವದ ಅಪಾಯ ಮತ್ತು ದುರಂತವನ್ನು ಎದುರಿಸಿ ಬರವಣಿಗೆಗೆ ಕತ್ತು ಕೊಡುವ ವ್ಯಕ್ತಿ. ಆದರೆ ಇಲ್ಲಿ ಅಪಾಯ ಮತ್ತು ದುರಂತವನ್ನು ಎದುರಿಸಿಯೂ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಲೇಖಕನಿಗೆ ಸಾಧ್ಯವೇ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ ಮತ್ತು ಸಧ್ಯದ ಸಂದರ್ಭದಲ್ಲಿ ಅನೇಕ ಬರಹಗಾರರನ್ನು ಕಾಡುತ್ತಿರುವ ಆತಂಕವೂ ಇದಾಗಿದೆ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Wednesday, June 8, 2016

ಸೃಜನಶೀಲತೆಯ ತಲ್ಲಣಗಳು



          ಇತ್ತೀಚಿಗೆ ತಮಿಳು ಭಾಷೆಯಲ್ಲಿ ಲೇಖಕನ  ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುವ   ಪ್ರಯತ್ನಗಳು ಕಾಣಿಸಿಕೊಂಡವು ಮತ್ತು ಅವು ಯಶಸ್ವಿಯೂ ಆದವು. ನಡೆದದ್ದಿಷ್ಟು ಪೆರುಮಾಳ್ ಮುರುಗನ್ ಎನ್ನುವ ತಮಿಳು ಲೇಖಕ ಬರೆದ 'ಮಾದೊರುಬಾಗನ್' ಕಾದಂಬರಿ ತಮಿಳರ ಮನಸ್ಸನ್ನು ಘಾಸಿಗೊಳಿಸಿದೆ ಎಂದು ಒಂದು ವರ್ಗದ ಜನ ಕಾದಂಬರಿಯನ್ನು ಹಿಂದಕ್ಕೆ ಪಡೆಯುವಂತೆ ಹಾಗೂ ಲೇಖಕ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಪಟ್ಟು ಹಿಡಿದರು. ಒಂದು ಸಮುದಾಯ ಮತ್ತು ಭೌಗೋಳಿಕ ಪ್ರದೇಶದಲ್ಲಿ ಒಂದು ಕಾಲದಲ್ಲಿ ಆಚರಣೆಯಲ್ಲಿದ್ದ ಪದ್ಧತಿಯನ್ನು ಕಾದಂಬರಿಕಾರ ತನ್ನ ಕೃತಿಯ ಕಥಾವಸ್ತುವಾಗಿ ಆಯ್ಕೆ ಮಾಡಿಕೊಂಡಿದ್ದು ಅದು ಅನೇಕರಿಗೆ ತಪ್ಪಾಗಿ ಕಾಣಿಸಿತು. ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದ ಲೇಖಕ ಪೆರುಮಾಳ್ ಮುರುಗನ್ ತಮ್ಮ ಕಾದಂಬರಿಯನ್ನು ಹಿಂಪಡೆದರಲ್ಲದೆ ಇದುವರೆಗೂ ತಾವು ಬರೆದ ಎಲ್ಲ ಕೃತಿಗಳನ್ನು ಹಿಂಪಡೆಯುತ್ತಿರುವುದಾಗಿಯೂ ಮತ್ತು ಬರವಣಿಗೆಯಿಂದ ನಿವೃತ್ತರಾಗಿ ಲೇಖಕ ಮುರುಗನ್ ಸತ್ತು ಹೋದನೆಂದು ಘೋಷಿಸಿದರು. ನಿಜಕ್ಕೂ ಸಾಹಿತ್ಯಲೋಕದಲ್ಲಿ ಇದು ನಾವುಗಳೆಲ್ಲ ಆತಂಕಪಡಬೇಕಾದ ಸಂಗತಿ. ಲೇಖಕನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದಾಗ ಸಮಾಜಕ್ಕೆ ಮುಖಾಮುಖಿಯಾಗಿ ನಿಲ್ಲುವಂತಹ ಕೃತಿಗಳು ರಚನೆಯಾಗುವುದು ಅಸಾಧ್ಯದ ಮಾತು. ಈ ಸಂದರ್ಭ ನನ್ನನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದ ಸಂಗತಿ ಎಂದರೆ ಪೆರುಮಾಳ್ ಮುರುಗನ್ ಅವರ 'ಮಾದೊರುಬಾಗನ್' ಕಾದಂಬರಿ ಪ್ರಕಟವಾಗಿ ಆಗಲೇ ನಾಲ್ಕು ವರ್ಷಗಳು ಕಳೆದು ಹೋಗಿವೆ. ಆದರೆ ಕಾದಂಬರಿ ವಿರುದ್ಧದ ಪ್ರತಿಭಟನೆ ಕಾಣಿಸಿಕೊಂಡಿದ್ದು ಅದು ಇತ್ತೀಚಿಗೆ ಅಂದರೆ ಡಿಸೆಂಬರ್ ೨೦೧೪ ರಲ್ಲಿ. 'ಮಾದೊರುಬಾಗನ್' ಕಾದಂಬರಿ ಇಂಗ್ಲಿಷ್ ಭಾಷೆಗೆ ಅನುವಾದಗೊಂಡ ನಂತರ ಈಗ ಪ್ರತಿಭಟಿಸುತ್ತಿರುವ ಜನರಿಗೆ ತಮಿಳು ಭಾಷೆಯಲ್ಲಿ ಇಂಥದ್ದೊಂದು ಕೃತಿ ರಚನೆಯಾಗಿದೆ ಎಂದು ಗೊತ್ತಾಯಿತು. ಕಳೆದ ವರ್ಷ ತಮಿಳಿನ ಈ ಕಾದಂಬರಿ ಇಂಗ್ಲಿಷ್ ಗೆ ಅನುವಾದಗೊಂಡ ಮೇಲೆ ಒಂದು ವರ್ಗದ ಜನ ಒಟ್ಟಾಗಿ ಕೃತಿ ಮತ್ತು ಕೃತಿಕಾರನ ವಿರುದ್ಧ ಪ್ರತಿಭಟನೆಗಿಳಿದರು. ಉತ್ತರ ಸ್ಪಷ್ಟವಾಗಿದೆ ಅತಿ ಹೆಚ್ಚಿನ ಅದರಲ್ಲೂ ಅತಿ ವಿದ್ಯಾವಂತರಾದ ತಮಿಳರಿಗೆ ಈ ಕಾದಂಬರಿಯ ಓದು ದಕ್ಕಿದ್ದು ಅದು ಇಂಗ್ಲಿಷ್ ಭಾಷೆಯ ಮುಖಾಂತರ. ಇಂಗ್ಲಿಷ್ ಭಾಷೆಗೆ ಅನುವಾದಗೊಳ್ಳುವುದಕ್ಕಿಂತ ಪೂರ್ವದಲ್ಲಿ ಈಗ ಪ್ರತಿಭಟಿಸುತ್ತಿರುವ ತಮಿಳರಿಗೆ ತಮ್ಮ ಭಾಷೆಯಲ್ಲಿ 'ಮಾದೊರುಬಾಗನ್' ನಂಥ ಶ್ರೇಷ್ಠ ಕೃತಿ ರಚನೆಯಾಗಿರುವ ಸಂಗತಿ ಅದವರ ಗಮನಕ್ಕೆ ಬಂದಿರಲಿಲ್ಲ. ಶಾಸ್ತ್ರೀಯ ಸ್ಥಾನಮಾನ ಪಡೆದ ಬಲಿಷ್ಠ ಭಾಷೆಯೊಂದು ಹೀಗೆ ನಿರ್ಲಕ್ಷಕ್ಕೆ  ಒಳಗಾಗಿರುವುದನ್ನು ನೋಡಿದಾಗ ನನಗೆ ಪ್ರಾದೇಶಿಕ ಭಾಷೆಗಳ ಉಳಿವಿನ ಕುರಿತು ಯು. ಆರ್. ಅನಂತಮೂರ್ತಿ ಅವರು ಹೇಳಿದ ಮಾತು ನೆನಪಾಗುತ್ತದೆ 'ಪ್ರಾದೇಶಿಕ ಭಾಷೆಗಳು ಅನಕ್ಷರಸ್ಥರಿಂದ ಹಾಗೂ ಕಡಿಮೆ ವಿದ್ಯಾವಂತರಿಂದ ಮಾತ್ರ ಉಳಿದು ಬೆಳೆಯಲು ಸಾಧ್ಯವೇ ವಿನ: ಅತಿ ವಿದ್ಯಾವಂತರಿಂದ ಈ ಭಾಷೆಗಳು ಉಳಿಯಲು ಸಾಧ್ಯವಿಲ್ಲ. ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಇಂಗ್ಲಿಷ್ ಭಾಷೆ ಬಿಟ್ಟು ಯಾವ ಪ್ರಾದೇಶಿಕ ಭಾಷೆಗಳ ಜ್ಞಾನ ಅಷ್ಟಕಷ್ಟೆ. ಅದೇ ಬಸ್ಟ್ಯಾಂಡಿನಲ್ಲಿ ಕೆಲಸ ಮಾಡುತ್ತಿರುವ ಕೂಲಿಗೆ ಕನ್ನಡ, ತಮಿಳು, ತೆಲಗು, ಮಲೆಯಾಳಂ, ಹಿಂದಿ ಜೊತೆಗೆ ಅಷ್ಟಿಷ್ಟು ಅರ್ಥಮಾಡಿಕೊಳ್ಳುವಷ್ಟು ಇಂಗ್ಲಿಷ್ ಭಾಷೆಯ ಪರಿಚಯವಿರುತ್ತದೆ.' 

                ತಮಿಳು ಸಾಹಿತಿ ಪೆರುಮಾಳ್ ಮುರುಗನ್ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸಿದ ಪ್ರತಿಭಟನೆಯನ್ನು ವಿರೋಧಿಸುತ್ತಿರುವ ಸಂದರ್ಭದಲ್ಲೇ ನಾನು    ಮಟ್ಟು ಅವರು ವಿವೇಕಾನಂದರ ಕುರಿತು ಬರೆದ ಲೇಖನದಲ್ಲಿನ ಅವರ ವಿಚಾರಗಳನ್ನು ಖಂಡಿಸುತ್ತೇನೆ. ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಲೇಖಕನಾದವನು ಓದುಗರ ಮೇಲೆ ತನ್ನ ವಿಚಾರಗಳನ್ನು ಒತ್ತಾಯದಿಂದ ಹೇರುವುದು ಸರಿಯಲ್ಲ. ವಿವೇಕಾನಂದರು ದಡ್ಡ ವಿದ್ಯಾರ್ಥಿಯಾಗಿದ್ದರು, ಮಧ್ಯಪಾನ ಮತ್ತು ಧೂಮಪಾನ ಸೇವಿಸುತ್ತಿದ್ದರು, ಹಲವು ರೋಗಗಳಿಂದ ಬಳಲುತ್ತಿದ್ದರು ಎಂದು ಹೇಳುವ ಲೇಖಕರು ವಿವೇಕಾನಂದರ ವಿಚಾರಗಳು ಹೆಚ್ಚು ಪ್ರಸ್ತುತವಾಗುತ್ತಿರುವ    ಈ ದಿನಗಳಲ್ಲಿ  ಅವರನ್ನು  ನೆಗೆಟಿವ್ ಇಮೇಜಿನಲ್ಲಿ ಪ್ರತಿಬಿಂಬಿಸಲು ಹೊರಟಿರುವರು.  ದಿನೇಶ್ ಅಮೀನ ಮಟ್ಟು ಅವರ ಲೇಖನವನ್ನು ಆಧಾರವಾಗಿಟ್ಟುಕೊಂಡು ನಾವು ನಮ್ಮ ನಂತರದ ಪೀಳಿಗೆಗೆ ವಿವೇಕಾನಂದರನ್ನು ಯಾವ ರೀತಿ ಪರಿಚಯಿಸಬೇಕು ಎನ್ನುವ ಪ್ರಶ್ನೆ ಎದುರಾಗುತ್ತದೆ. ವಿವೇಕಾನಂದರಲ್ಲಿದ್ದವೆಂದು ಹೇಳಲಾಗುವ  ದುರ್ಗಣಗಳನ್ನು ವೈಭವೀಕರಿಸಿ ಲೇಖಕರು ಅವರ ಅನುಯಾಯಿಗಳ ಮನಸ್ಸನ್ನು ಘಾಸಿಗೊಳಿಸಿರುವರು. ಹೀಗೆ ಹೊಸ ಪ್ರಶ್ನೆ ಮತ್ತು ವಿಚಾರಗಳನ್ನು ಹುಟ್ಟುಹಾಕುವ ಬರಹಗಾರ ತನ್ನ ಬರವಣಿಗೆಗೆ ಎದುರಾಗುವ ಟೀಕೆಗಳನ್ನೂ ಸಮರ್ಥವಾಗಿ ಎದುರಿಸುವ  ಜೊತೆಗೆ ಓದುಗರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ ಕೊಡುವ ವಿಶಾಲ ಮನೋಭಾವದವನಾಗಿರಬೇಕು. ಆದರೆ ಮಟ್ಟು ಅವರ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ವಿರೋಧಿಸುವ ಮಾತುಗಳು ಕೇಳಿ ಬಂದಾಗ ಲೇಖಕ ತನ್ನ ಅಧಿಕಾರವನ್ನು ಉಪಯೋಗಿಸಿಕೊಂಡು ಓದುಗರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳಲು ಪ್ರಯತ್ನಿಸಿದ್ದು ಖಂಡನಾರ್ಹ. ಈಗೀಗ ಸೃಜನಶೀಲ ಸಾಹಿತಿಗಳು ಕೂಡ ರಾಜಕಾರಣಿಗಳಾಗುತ್ತಿರುವುದು ಸಾಹಿತ್ಯ ಲೋಕದ ಆತಂಕದ ಸಂಗತಿಗಳಲ್ಲೊಂದು.

                   ಸಾಹಿತ್ಯ ಕ್ಷೇತ್ರದಲ್ಲಿನ ಎಡಪಂಥಿಯ ಮತ್ತು ಬಲಪಂಥಿಯ ಎನ್ನುವ ಗುಂಪುಗಾರಿಕೆ  ಸಾಹಿತ್ಯದ ವಿಚಾರವಾಗಿ ನನ್ನನ್ನು ಆತಂಕಗೊಳಿಸುವ ಇನ್ನೊಂದು ಸಂಗತಿ. ಕೆಲವರು ಧರ್ಮ, ಸಂಸ್ಕೃತಿ, ಸಂಪ್ರದಾಯದ ಪರ ಬರೆದು ಬಲಪಂಥಿಯ ಲೇಖಕ ಎಂದು ಗುರುತಿಸಿಕೊಂಡರೆ ಶಾಸ್ತ್ರ ಸಂಪ್ರದಾಯವನ್ನು ವಿರೋಧಿಸಿದವರು ಎಡಪಂಥಿಯ ಲೇಖಕರಾದರು. ಧರ್ಮ, ಸಂಸ್ಕೃತಿಯ ಬಗ್ಗೆ ಪಟ್ಟು ಹಿಡಿದಂತೆ ಬರೆಯುವ ಎಸ್ ಎಲ್ ಭೈರಪ್ಪನವರು ಎಡಪಂಥಿಯ ಲೇಖಕ ಬಳಗದ ದೃಷ್ಟಿಯಲ್ಲಿ ಅವರೊಬ್ಬ ತಾತ್ವಿಕ ಚಿಂತನೆಯ ಲೇಖಕನೇ ಅಲ್ಲ. ಅವರೊಬ್ಬ ಅಪಾರ ಓದುಗ ಬಳಗವನ್ನು ತಮ್ಮ ಕಾದಂಬರಿಗಳ ಓದಿಗೆ ದಕ್ಕಿಸಿಕೊಂಡಿರುವ ಜನಪ್ರಿಯ ಬರಹಗಾರ ಮಾತ್ರ. ಇದೇ ಕಾರಣದಿಂದ ಅನಂತಮೂರ್ತಿ ಅವರಿಗೆ ಭೈರಪ್ಪನವರ ಯಾವ ಕಾದಂಬರಿಯೂ ಓದಿಗೆ ಒಗ್ಗುವುದಿಲ್ಲ. ಕನ್ನಡ ಸಾಹಿತ್ಯದ ಇತಿಹಾಸವನ್ನು ಅವಲೋಕಿಸುವಾಗ ಅನಂತಮೂರ್ತಿ ಅವರ ಯಾವೊಂದು ಲೇಖನದಲ್ಲೂ ಭೈರಪ್ಪನವರ ಹೆಸರು ಸುಳಿಯುವುದಿಲ್ಲ. ತತ್ವಜ್ಞಾನವನ್ನು ಓದಿಕೊಂಡ ಮಾತ್ರಕ್ಕೆ ಸಾಹಿತ್ಯ ಸೃಷ್ಟಿ ಸಾಧ್ಯವಿಲ್ಲ ಎಂದು ಅನಂತಮೂರ್ತಿ ಅವರು ಬರೆಯುವಾಗ ಅವರ ದೃಷ್ಟಿಯಲ್ಲಿ ಯಾರಿದ್ದರು ಎನ್ನುವುದನ್ನು ಕನ್ನಡ ಸಾಹಿತ್ಯದ ಓದುಗರು ಅರ್ಥ ಮಾಡಿಕೊಳ್ಳದೇ ಇರುವಷ್ಟು ದಡ್ದರೆನಲ್ಲ. ನನ್ನ ಓದಿನ ಅನುಭವಕ್ಕೆ ಬಂದಂತೆ ಭೈರಪ್ಪನವರ 'ಆವರಣ' ಕಾದಂಬರಿಯಲ್ಲಿ ಬರುವ ಪಾತ್ರವೊಂದು ಅನಂತಮೂರ್ತಿ ಅವರನ್ನು ಮನಸ್ಸಿನಲ್ಲಿಟ್ಟುಕೊಂಡೆ ಸೃಷ್ಟಿಸಿರಬಹುದು ಎಂದೆನಿಸುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿನ ಈ ಎಡ ಮತ್ತು ಬಲ ನಮ್ಮ ಬರಹಗಾರರನ್ನು ಅಸೂಕ್ಷ್ಮಜ್ಞರನ್ನಾಗಿಯೂ ಮತ್ತು ಅಸಂವೇದನಾಶೀಲರನ್ನಾಗಿಯೂ ಮಾಡುತ್ತಿದೆ. ಪಾಕಿಸ್ತಾನದಲ್ಲಿನ ಅಮಾಯಕ ಮಕ್ಕಳ ಮಾರಣಹೋಮಕ್ಕೆ ಉಗ್ರರನ್ನು ಬೆಳೆಸಿದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯಾಯಿತೆಂದು ಬರಹಗಾರ ಪ್ರತಿಕ್ರಿಯಿಸಿದರೆ ಅದು ಅವನ ಅಸೂಕ್ಷ್ಮಜ್ಞತೆ ಮತ್ತು ಅಸಂವೆದನಾಶೀಲ ಗುಣವನ್ನು ಪ್ರದರ್ಶಿಸಿದಂತಾಗುತ್ತದೆ. ಸಮಾಜದ ಸಮಸ್ಯೆಗಳಿಗೆ ಜನರ ನೋವಿಗೆ ಸ್ಪಂದಿಸುವ ಗುಣವನ್ನು ಲೇಖಕನಾದವನು ಸಾಹಿತ್ಯದಲ್ಲಿನ ಈ ಗುಂಪುಗಾರಿಕೆಯಿಂದ ಕಳೆದುಕೊಳ್ಳುತ್ತಿರುವನು ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ.  

              ೮೧ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ದಲಿತ ಸಾಹಿತಿಯನ್ನು ಆಯ್ಕೆ ಮಾಡಲಾಗುವುದೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಈ ಮೊದಲೇ ಘೋಷಿಸಿದ್ದು ಈಗ ಕಾರ್ಯ ರೂಪಕ್ಕೆ ಬಂದದ್ದು ಸಂತಸದ ವಿಷಯ.  ದೇವನೂರ ಮಹಾದೇವರ ಹೆಸರು  ಸಾಹಿತ್ಯ ಪರಿಷತ್ತಿನ ಮೊದಲ ಆದ್ಯತೆಯಾಗಿತ್ತಾದರೂ ಅವರು ಕನ್ನಡವನ್ನು ಹತ್ತನೇ ತರಗತಿಯವರೆಗೆ ಶಿಕ್ಷಣದ ಮಾಧ್ಯಮವನ್ನಾಗಿ ಮಾಡುವವರೆಗೆ ನಾನು ಯಾವ ಗೌರವವನ್ನು ಸ್ವೀಕರಿಸುವುದಿಲ್ಲ ಎಂದು ಪಟ್ಟು ಹಿಡಿದ ಪರಿಣಾಮ ಸಿದ್ದಲಿಂಗಯ್ಯನವರನ್ನು ಆಯ್ಕೆ ಮಾಡುವ ಅನಿವಾರ್ಯತೆ  ಸಾಹಿತ್ಯ ಪರಿಷತ್ತಿಗೆ ಎದುರಾಯಿತು. ಕನ್ನಡ ಸಾಹಿತ್ಯ ಸಂಪದ್ಭರಿತವಾಗಿರುವುದರ ಹಿಂದೆ  ದಲಿತ ಬರಹಗಾರರ ಕೊಡುಗೆಯೂ ಅಪಾರವಾಗಿದೆ. ದೇವನೂರ ಮಹಾದೇವ, ಬರಗೂರು ರಾಮಚಂದ್ರಪ್ಪ, ಡಿ. ಆರ್. ನಾಗರಾಜ, ಸಿದ್ದಲಿಂಗಯ್ಯ, ಶ್ರೀಕೃಷ್ಣ ಆಲನಹಳ್ಳಿ ಯಂಥ ದಲಿತ ಬರಹಗಾರರು ಕನ್ನಡ ಸಾಹಿತ್ಯಕ್ಕೆ ಅತ್ಯುತ್ತಮ  ಕೃತಿಗಳನ್ನು ನೀಡಿರುವರು. ತಮ್ಮೊಳಗಿನ ಸಂವೇದನೆ ಮತ್ತು ಸೂಕ್ಷ್ಮಜ್ಞತೆಯಿಂದ ಕಾಲಕಾಲಕ್ಕೆ ಸಮಾಜದ ಸಮಸ್ಯೆಗಳಿಗೆ ಓದುಗರನ್ನು   ಮುಖಾಮುಖಿಯಾಗಿಸುತ್ತ ಬಂದವರು. ದೇವನೂರ ಮಹಾದೇವರ ಕೃತಿಯೊಂದು ಪ್ರಕಟವಾದ ಕೆಲವೇ ದಿನಗಳಲ್ಲಿ ಅದು ಅಸಂಖ್ಯಾತ ಓದುಗರನ್ನು ತಲಪುತ್ತದೆ. ಇಂಥ ಗಟ್ಟಿ ಹಿನ್ನೆಲೆಯುಳ್ಳ ದಲಿತ ಬರಹಗಾರರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಅನೇಕ ವರ್ಷಗಳ ಕಾಲ ಕಾಯಬೇಕಾಯಿತು. ಜೊತೆಗೆ ದೇವನೂರ ಮತ್ತು ಸಿದ್ದಲಿಂಗಯ್ಯನವರು ಸಮ್ಮೇಳನದ ಅಧ್ಯಕ್ಷರಾಗಲು  ದಲಿತ ಕೋಟಾಕ್ಕಾಗಿ ಕಾಯುವ ಅಗತ್ಯವೇನಿರಲಿಲ್ಲ. ಸಿದ್ದಲಿಂಗಯ್ಯನವರನ್ನು ಕನ್ನಡದ ಬರಹಗಾರ ಎನ್ನುವ ಒಂದು ಮಾನದಂಡದಿಂದ ಅವರನ್ನು ಆಯ್ಕೆ ಮಾಡಿದಿದ್ದರೆ ಕನ್ನಡ ನಾಡು ಸಂಭ್ರಮಿಸುತ್ತಿತ್ತು. ಹೆಸರು ಮಾಡಬೇಕೆನ್ನುವ  ತೆವಲು ಮತ್ತು ವಾಂಛೆ ನಮ್ಮನ್ನು ಆವರಿಸಿದಾಗ ಹೀಗೆ ಸಾಹಿತ್ಯ ಲೋಕದ ಸೃಜನಶೀಲರನ್ನು ದಲಿತ, ಬಲಿತ ಎಂದು ವರ್ಗೀಕರಿಸಿ ನೋಡುವ ಸಣ್ಣ ಗುಣ ಮೇಲುಗೈ ಸಾಧಿಸುತ್ತದೆ.

                     ಕೊಪ್ಪಳದಲ್ಲಿ ನಡೆದ ಸಮಾರಂಭವೊಂದರಲ್ಲಿ ಕುಂವೀ ಯಾಕೆ ಹೀಗೆ ಮಾತನಾಡಿದರೆಂದು ಗೊತ್ತಿಲ್ಲ. ಮಾತನಾಡುವ ಭರಾಟೆಯಲ್ಲಿ ಆ ದಿನ ಕನ್ನಡ ಸಾಹಿತ್ಯಾಸಕ್ತರೆದುರು ನಮ್ಮೆಲ್ಲರ ಅಭಿಮಾನದ ಬರಹಗಾರ ಕುಂವೀ 'ಜ್ಞಾನಪೀಠ ನಾನ್ ಸೆನ್ಸ್' ಎಂದು ಕೋಪ ವ್ಯಕ್ತ ಪಡಿಸಿದರು. ಪ್ರಶಸ್ತಿ ಬರುವುದಾದರೆ ಬರಲಿ ಆದರೆ ಜ್ಞಾನಪೀಠ ನಾನ್ ಸೆನ್ಸ್ ಎನ್ನುವುದು ಅವರ ವಾದವಾಗಿತ್ತು. ಲೇಖಕನಾದವನು ಪ್ರಶಸ್ತಿಗಳಿಂದ ದೊಡ್ಡವನಾಗುವುದಿಲ್ಲ. ಇದು ಕುಂವೀ ಅವರಂಥ ಸೃಜನಶೀಲ ಲೇಖಕರಿಗೆ ಗೊತ್ತಿಲ್ಲದ ಮಾತೇನಲ್ಲ. ಲೇಖಕ ತನ್ನ ವಿಚಾರಗಳಿಂದ ಮತ್ತು ಸತ್ವಯುತ ಬರವಣಿಗೆಯಿಂದ ಮಾತ್ರ ಓದುಗರ ನೆನಪುಗಳಲ್ಲಿ ಸದಾಕಾಲ ನೆಲೆಯೂರಿ ನಿಲ್ಲಲ್ಲು ಸಾಧ್ಯ. ಜೊತೆಗೆ ಲೇಖಕನೊಬ್ಬನ ವಿಚಾರಗಳು ಎಲ್ಲಕಾಲಕ್ಕೂ ಪ್ರಸ್ತುತವಾಗುಳಿಯಬೇಕಾದರೆ ಆತನ ಕೃತಿಗಳು  ಕಾಲಕಾಲಕ್ಕೆ ವಿಮರ್ಶೆಯ ಅಗ್ನಿದಿವ್ಯವನ್ನು ಹಾದು ಬರಬೇಕಾಗುತ್ತದೆ. ಕುಂವೀ ಅವರ ಬರವಣಿಗೆ ವಿಮರ್ಶಯ ಅಗ್ನಿದಿವ್ಯವನ್ನು ಹಾಯ್ದು  ಬಂದುದ್ದರಿಂದಲೇ ಅದು ಎಲ್ಲಕಾಲಕ್ಕೂ ಪ್ರಸ್ತುತವಾಗುಳಿಯುವ ಸಾಧ್ಯತೆ ನಿಚ್ಚಳವಾಗಿದೆ. ಕನ್ನಡದಲ್ಲಿ ಜ್ಞಾನಪೀಠ ಪುರಸ್ಕಾರಕ್ಕೆ ಭಾಜನರಾದ ಬರಹಗಾರರ ಸಂಖ್ಯೆ ಕೇವಲ ಎಂಟು ಮಾತ್ರ. ಹಾಗೆಂದು ಕನ್ನಡ ಸಾಹಿತ್ಯದಲ್ಲಿ ಇನ್ನುಳಿದ ಬರಹಗಾರರನ್ನು ಕಡೆಗಣಿಸಲಾಗಿದೆ ಎಂದರ್ಥವಲ್ಲ. ಜಿ ಎಸ್ ಶಿವರುದ್ರಪ್ಪ, ನರಸಿಂಹ ಸ್ವಾಮಿ, ಎಸ್ ಎಲ್ ಭೈರಪ್ಪ, ದೇವನೂರ ಮಹಾದೇವ, ತೇಜಸ್ವಿ, ಲಂಕೇಶ್, ಸ್ವತಹ ಕುಂವೀ ಇವರೆಲ್ಲ ನಾಡಿನ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅನನ್ಯ.  ಜ್ಞಾನಪೀಠಕ್ಕೆ ಪಾತ್ರರಾದ ಬರಹಗಾರರು ಮಾತ್ರ ಶ್ರೇಷ್ಠರು ಇನ್ನುಳಿದವರು ನಗಣ್ಯರು ಎನ್ನುವ ನಿರ್ಧಾರಕ್ಕೆ ಬರುವುದು ತಪ್ಪು. ಕನ್ನಡ ಸಾಹಿತ್ಯದ ಓದುಗ ಬಳಗ ನಾಡಿನ ಬರಹಗಾರರನ್ನು ಯಾವತ್ತೂ ಹೀಗೆ ವರ್ಗೀಕರಿಸಿ ನೋಡಿದ ಉದಾಹರಣೆ ಇಲ್ಲ. ಪ್ರಶಸ್ತಿ ಪುರಸ್ಕಾರಗಳ ಗೊಡವೆಗೆ ಹೋಗದೆ ತೇಜಸ್ವಿ ಮತ್ತು ದೇವನೂರ ಮಹಾದೇವ ಕನ್ನಡಕ್ಕೆ ಉತ್ಕೃಷ್ಟ ಕೃತಿಗಳನ್ನು ಕೊಡುಗೆಯಾಗಿ ನೀಡಿದ ಪರಂಪರೆಯೇ ನಮ್ಮ ಮುಂದಿದೆ. ಲೇಖಕನಾದವನು ಪ್ರಶಸ್ತಿ ಪುರಸ್ಕಾರಗಳ ಬೆನ್ನುಬಿದ್ದು ತನ್ನನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡರೆ ಅವನಿಂದ ಬಹುಕಾಲ ಉಳಿಯುವಂಥ ಮತ್ತು ಸಮಾಜಕ್ಕೆ ಮುಖಾಮುಖಿಯಾಗುವಂಥ ಸಾಹಿತ್ಯ ರಚನೆಯಾಗಲಾರದು. ಕುಂವೀ ಅವರ ಕೃತಿಗಳು ಸಮಾಜ ಮುಖಿಯಾಗಿಯೂ ಮತ್ತು ಬಹುಕಾಲ ಜನಮಾನಸದಲ್ಲಿ ಉಳಿಯುವಂಥ ವೈಚಾರಿಕ ಚಿಂತನೆಗಳಿಂದ ಕೂಡಿದ್ದವುಗಳೂ ಆಗಿವೆ. ಗಾಂಧಿಕ್ಲಾಸು, ಚಾರ್ಲಿ ಚಾಪ್ಲಿನ್, ಅರಮನೆ, ಶಾಮಣ್ಣ ಹೀಗೆ ಅನೇಕ ಸತ್ವಯುತ ಕೃತಿಗಳನ್ನು ಕನ್ನಡದ ಓದುಗರಿಗೆ ಕೊಟ್ಟ ಕುಂವೀ ಅಂದು ಅದೇಕೆ 'ಜ್ಞಾನಪೀಠ ನಾನ್ ಸೆನ್ಸ್' ಎಂದರು ಗೊತ್ತಾಗುತ್ತಿಲ್ಲ. ನಮ್ಮ ಅರಿವಿನ ವ್ಯಾಪ್ತಿಯನ್ನು ತನ್ನ ಕೃತಿಗಳ ಮೂಲಕ ವಿಸ್ತರಿಸಿದ ಲೇಖಕ ಹೀಗೆ ಮಾತನಾಡಿದ್ದು ನನಗಂತೂ ಬೇಸರದ ಸಂಗತಿ.

                      ಭವಿಷ್ಯದಲ್ಲಿ ಕನ್ನಡ ಪುಸ್ತಕಗಳನ್ನು ಯಾರು ಓದಬೇಕು ಇದು ಭೈರಪ್ಪನವರು ಎತ್ತಿರುವ ಪ್ರಶ್ನೆ. ಏಕೆಂದರೆ ಕನ್ನಡ ಮಾಧ್ಯಮದ ಶಾಲೆಗಳು ಮಕ್ಕಳಿಲ್ಲದೆ ಮುಚ್ಚುತ್ತಿರುವಾಗ ಅವರು ಆತಂಕದಿಂದ ಮೇಲಿನ ಪ್ರಶ್ನೆಯನ್ನು ಕೇಳುತ್ತಾರೆ. ಖಾಸಗಿಯಾಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವಾಗ ಮತ್ತು ನಾವುಗಳೆಲ್ಲ ನಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಮೂಲಕ ಕಲಿಯಲು ಪ್ರೋತ್ಸಾಹಿಸುತ್ತಿರುವಾಗ ಮುಂದೊಂದು ದಿನ ಕನ್ನಡ ಪುಸ್ತಕಗಳ ಓದಿಗೆ ಓದುಗರ ಬಹುದೊಡ್ಡ ಕೊರತೆ ಎದುರಾಗಲಿದೆ. ಆಗ ಕನ್ನಡ ಪುಸ್ತಕಗಳ ಓದಿನ ಜೊತೆಗೆ ಕನ್ನಡ ಸಾಹಿತ್ಯದ ಉತ್ಪಾದನಾ ಪ್ರಮಾಣವೂ ಕುಸಿಯುವುದರಲ್ಲಿ ಸಂಶಯವಿಲ್ಲ. ಹೀಗೆ ಸಾಹಿತ್ಯ ಸೃಷ್ಟಿ ಕುಂಠಿತಗೊಂಡರೆ ಅದು ನಾಡಿನ ವೈಚಾರಿಕ ದಾರಿದ್ರ್ಯವನ್ನು ಪ್ರದರ್ಶಿಸಿದಂತಾಗುತ್ತದೆ. ಕನ್ನಡ ಮಾಧ್ಯಮದ ಶಿಕ್ಷಣ ಮೂಲೆಗುಂಪಾಗುತ್ತಿರುವುದಕ್ಕೂ ಮತ್ತು ಅದು ನೇರವಾಗಿ ಸಾಹಿತ್ಯ ಸೃಷ್ಟಿಯಂಥ ಸೃಜನಶೀಲತೆಯ ಮೇಲೆ ಪರಿಣಾಮ ಬೀರುವುದಕ್ಕೂ ನಿಕಟವಾದ ಸಂಬಂಧವಿದೆ. ಇಂಥದ್ದೊಂದು ಅನಾಹುತ ಭವಿಷ್ಯದಲ್ಲಿ ಎದುರಾಗಬಾರದೆಂದು ನಮ್ಮ ಸಾಹಿತ್ಯ ವಲಯ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯುವುದು ಹೆಚ್ಚು ಸಮಂಜಸವೇ ವಿನ: ಅದನ್ನು ಮಾಧ್ಯಮವಾಗಿ ಕಲಿಯುವುದರಿಂದ ನಮ್ಮ ಮಾತೃಭಾಷೆಯನ್ನೇ ಸಾಯಿಸಿದಂತಾಗುತ್ತದೆ ಎಂದು ಎಂದು ಎಚ್ಚರಿಸುತ್ತ ಬಂದಿರುವುದು. ಜೊತೆಗೆ ಈ ಇಂಗ್ಲಿಷ್ ಮಾಧ್ಯಮದ ಕಲಿಕೆಯಿಂದ ಹೊರಬರುತ್ತಿರುವ ನಮ್ಮ ಎದುರಿರುವ ಈ ಯುವ ಪೀಳಿಗೆಗೆ ಇಂಗ್ಲಿಷ್ ಸಾಹಿತ್ಯದಲ್ಲಿ ಇರುವಷ್ಟು ಆಸಕ್ತಿ ಕನ್ನಡ ಸಾಹಿತ್ಯದಲ್ಲಿಲ್ಲ. ಚೇತನ್ ಭಗತ್, ಅರುಂಧತಿ ರಾಯ್, ಅರುಣ ಶೌರಿ ಅವರ ಪುಸ್ತಕಗಳನ್ನು ಮುಗಿಬಿದ್ದು ಓದುವ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಬಂದ ನಮ್ಮ ಯುವ ಪೀಳಿಗೆಗೆ ಕನ್ನಡ ಪುಸ್ತಕಗಳ ಒದೆಂದರೆ ಅಷ್ಟಕಷ್ಟೆ. ನನ್ನನ್ನು  ಆತಂಕಗೊಳಿಸುವ ಇನ್ನೊಂದು  ಸಂಗತಿ ಎಂದರೆ ಈ ವಯೋಮಾನದ ಓದುಗರು ಇಂಗ್ಲಿಷ್ ಸಾಹಿತ್ಯವನ್ನಾದರೂ ಗಂಭೀರವಾಗಿ ಮತ್ತು ವೈಚಾರಿಕತೆಯ ನೆಲೆಯಲ್ಲಿ ಓದುತ್ತಿರುವರೆ ಎಂದು ಪ್ರಶ್ನಿಸ ಹೋದರೆ ನಿಜಕ್ಕೂ ನಾವು ನಿರೀಕ್ಷಿಸುವ ಉತ್ತರ  ದೊರೆಯಲಾರದು. ಈ ಪ್ರಕಾರದ ಓದುಗರಿಗೆ ಓದು ಅದೊಂದು ಮನೋರಂಜನೆಯೇ ವಿನ: ಚಿಂತನೆಯನ್ನು ಸಮೃದ್ಧಗೊಳಿಸುವ ಪ್ರಕ್ರಿಯೆಯಲ್ಲ. ಒಂದೆಡೆ ಇಂಗ್ಲಿಷ್ ಸಾಹಿತ್ಯವನ್ನೂ ಗಂಭೀರವಾಗಿ ಓದದ ಇನ್ನೊಂದೆಡೆ ಕನ್ನಡ ಸಾಹಿತ್ಯವನ್ನು ನಿರ್ಲಕ್ಷಿಸುತ್ತಿರುವ  ಈ ಪ್ರಕಾರದ ಓದುಗರಿಂದ ಭವಿಷ್ಯದಲ್ಲಿ ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಗಂಡಾಂತರ ಎದುರಾಗಲಿದೆ. ಜೊತೆಗೆ ಜಾಗತೀಕರಣದ ಪರಿಣಾಮ ಬಳಕೆಯ ವಸ್ತುಗಳು ಮಾತ್ರವಲ್ಲದೆ ಇಂಗ್ಲಿಷ್ ಭಾಷೆಯ ಪುಸ್ತಕಗಳೂ ನಮ್ಮ ಓದುಗರಿಗೆ ಸುಲಭವಾಗಿ ಕೈಗೆಟುಕುತ್ತಿವೆ. ಹೀಗೆ ಕಡಿಮೆ ದರದಲ್ಲಿ ಮನರಂಜನೆಯ ಸರಕಿನಂತೆ ಮಾರಾಟವಾಗುತ್ತಿರುವ ಇಂಗ್ಲಿಷ್ ಭಾಷೆಯ ಪುಸ್ತಕಗಳು ಹಾಗೂ ಶಿಕ್ಷಣ ಮಾಧ್ಯಮ ಸಂಪೂರ್ಣವಾಗಿ ಇಂಗ್ಲಿಷ್ ಭಾಷೆಯಾಗಿರುವುದರ ಪರಿಣಾಮ ಈಗಾಗಲೇ ಕನ್ನಡ ಪುಸ್ತಕಗಳಿಗೆ ಓದುಗರ ಕೊರತೆ ಎದುರಾಗಿದೆ. ಈ ಕೊರತೆ ಹೀಗೆ ಮುಂದುವರೆದಲ್ಲಿ ಇನ್ನು ಹತ್ತಿಪ್ಪತ್ತು ವರ್ಷಗಳ ನಂತರ ಕನ್ನಡ ಪುಸ್ತಕಗಳನ್ನು ಯಾರು ಓದುವರು ಎನ್ನುವ ಆತಂಕ ಭೈರಪ್ಪನವರದು. ಹೀಗೆ ಇಂದಿನ ಯುವ ಓದುಗರು ಇಂಗ್ಲಿಷ್ ಸಾಹಿತ್ಯದೆಡೆ ವಾಲುತ್ತಿರುವ ಸಂದರ್ಭದಲ್ಲೇ ನಮ್ಮ ಬಹಳಷ್ಟು ಬರಹಗಾರರು ಪಾಶ್ಚಿಮಾತ್ಯ ಸಾಹಿತ್ಯಕ್ಕೆ ಮುಖಾಮುಖಿಯಾಗಿ ನಿಂತಿದ್ದು ಮತ್ತು ತಮ್ಮೊಂದಿಗೆ ಓದುಗರನ್ನೂ ಆ ಕಡೆ ಮುಖಮಾಡಿ ನಿಲ್ಲಿಸಿದ್ದು  ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಅದೊಂದು ಪ್ರಮುಖ ಘಟ್ಟ. ಷೇಕ್ಸಪಿಯರ್, ಬೋದಿಲೇರ್, ಈಟ್ಸ್, ಟಾಲಸ್ಟಾಯ್, ಬರ್ನಾಡ್ ಷಾ ನಮ್ಮ ಅರಿವಿನ ವ್ಯಾಪ್ತಿಗೆ ಬಂದಿದ್ದು ನಮ್ಮ ಕನ್ನಡ ಲೇಖಕರ ಬರಹಗಳಿಂದಲೇ. ಹಾಗೆಂದು ಇದನ್ನು ನಾನು ತಪ್ಪೆಂದು ವಾದಿಸುತ್ತಿಲ್ಲ. ನಮ್ಮ ಅರಿವಿನ ವ್ಯಾಪ್ತಿಯನ್ನು ಈ ಮೂಲಕ ಹಿಗ್ಗಿಸಿದ ಕನ್ನಡದ ಲೇಖಕರಿಗೆ ನಾವು ಋಣಿಗಳಾಗಿರಬೇಕು. ಆದರೆ ಇದೇ ಸಂದರ್ಭ ಪಾಶ್ಚಿಮಾತ್ಯ ಚಿಂತಕರಿಗೆ ಮುಖಾಮುಖಿಯಾಗಿ ನಿಂತ ನಮ್ಮ ಬಹಳಷ್ಟು ಲೇಖಕರು ಕನ್ನಡದ ರನ್ನ, ಪಂಪ, ಅಲ್ಲಮ, ಬಸವಣ್ಣ, ಕಾಳಿದಾಸ, ಕುವೆಂಪು, ಬೇಂದ್ರೆ ಅವರನ್ನು ತಮ್ಮ ಬರಹಕ್ಕೆ ಅದೇಕೆ ಕರೆದುಕೊಂಡು ಬರಲಿಲ್ಲ?.  ಈ ನೆಲದ ತತ್ವ ಜಾನಪದಕಾರ ಶಿಶುನಾಳ ಶರೀಪರು ನಮಗೆ ದಕ್ಕಿದ್ದು ಸಿನಿಮಾ ಮತ್ತು ಹಾಡುಗಳ ಮೂಲಕ ಮಾತ್ರ ಎನ್ನುವುದನ್ನು ನಾನು ಈ ಸಂದರ್ಭ ಉಲ್ಲೇಖಿಸಲು  ಬಯಸುತ್ತೇನೆ. ಈ ನಾಡಿನ ಚಳುವಳಿಗಾರರನ್ನು ಗುರುತಿಸುವಲ್ಲಿ  ಕೂಡ ನಮ್ಮ ಲೇಖಕರು ಎಡವಿದ್ದು ಕನ್ನಡ ಸಾಹಿತ್ಯ ಲೋಕದ ಬಹುದೊಡ್ಡ ದುರಂತಗಳಲ್ಲೊಂದು. ಮಾರ್ಕ್ಸ್, ಲೆನಿನ್, ರುಸೋ ಇವರುಗಳ ಚಿಂತನೆ ಎದುರು ಗಾಂಧಿಯ ವಿಚಾರಗಳು ಸಹ ಮಂಕಾಗಿವೆ. ಗಾಂಧಿ ಮತ್ತು ಲೋಹಿಯಾ ಅಲ್ಲಲ್ಲಿ ಒಂದಿಷ್ಟು ಕನ್ನಡದ ಲೇಖಕರಿಗೆ ದಕ್ಕಿದ್ದು ಬಿಟ್ಟರೆ ಕನ್ನಡದವರೇ ಆದ ಶಾಂತವೇರಿ ಗೋಪಾಲಗೌಡರು, ಕಡಿದಾಳ ಮಂಜಪ್ಪನವರು, ಗಣಪತಿಯಪ್ಪನವರಂಥ ಚಳುವಳಿಗಾರರ ಉಲ್ಲೇಖ ಕನ್ನಡ ಸಾಹಿತ್ಯದಲ್ಲಿ ಬಹಳಷ್ಟು ಕಡಿಮೆ. ಭೂ ಮಾಲೀಕರ ವಿರುದ್ಧ ದಂಗೆ ಎದ್ದ ಸಿಂಧೂರ ಲಕ್ಷ್ಮಣನನ್ನು ಕಥೆ ಕಾದಂಬರಿಗಳಲ್ಲಿ ಕಳ್ಳನಂತೆ ಚಿತ್ರಿಸಲಾಗಿದೆ.

      ಕನ್ನಡ ಸಾಹಿತ್ಯದ ಕುರಿತಾದ  ಸಧ್ಯದ ಸನ್ನಿವೇಶಗಳು ನನ್ನನ್ನು ಆತಂಕಗೊಳಿಸುತ್ತಿರುವ ಈ ಸಮಯದಲ್ಲೇ ಕನ್ನಡ ಭಾಷೆಯ ಸಿನಿಮಾ ಮತ್ತು ರಂಗಭೂಮಿ ಕೂಡ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಸಾಹಿತ್ಯದಂತೆ ಸಿನಿಮಾ ಮತ್ತು ರಂಗಭೂಮಿ ಸಹ ಭಾಷೆಯೊಂದರ ಸೃಜನಶೀಲ ಮತ್ತು ಅಭಿವ್ಯಕ್ತಿ ಮಾಧ್ಯಮಗಳು. ನೂರು ವರ್ಷಗಳ ಇತಿಹಾಸವಿರುವ ಸಿನಿಮಾ ರಂಗ ಕನ್ನಡ ಭಾಷೆಯ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದೆ. ನಾಡಿನ ಇತಿಹಾಸ, ವೈಭವ, ಸಾಂಸ್ಕೃತಿಕ ಪರಂಪರೆಯನ್ನು ಆಧರಿಸಿ ಅನೇಕ ಸಿನಿಮಾಗಳು ನಿರ್ಮಾಣಗೊಂಡಿವೆ. ಈ ನೆಲದ ದಾರ್ಶನಿಕರು, ಚಿಂತಕರು, ಹೋರಾಟಗಾರರು, ಚಳವಳಿಗಾರರು, ಸಂತರು, ಶರಣರನ್ನು ಪರಿಚಯಿಸುವ ಆದರ್ಶದ ಕೆಲಸ ಈ ಸಿನಿಮಾಗಳಿಂದಾಗಿದೆ. ಒಟ್ಟಿನಲ್ಲಿ ಸೃಜನಶೀಲ  ಮಾಧ್ಯಮವಾಗಿ ಸಿನಿಮಾ ನಮ್ಮ ಗತ ವೈಭವವನ್ನು ನಮ್ಮ ಕಣ್ಣೆದುರು ಅನಾವರಣಗೊಳಿಸಿದಷ್ಟೇ ಅದು ಅಭಿವ್ಯಕ್ತಿ ಮಾಧ್ಯಮವಾಗಿಯೂ  ಸಮಾಜದಲ್ಲಿನ ಶೋಷಣೆಗೆ ಒಳಗಾದವರ ಧ್ವನಿಯಾಗಿ ತನ್ನನ್ನು ಸಶಕ್ತವಾಗಿ ಬಿಂಬಿಸಿಕೊಂಡಿದೆ. ಸಿನಿಮಾ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿದ್ದರಿಂದಲೇ ಕನ್ನಡ ಭಾಷೆಯಲ್ಲಿ ಬರ, ಫಣಿಯಮ್ಮ, ತಬ್ಬಲಿ ನೀನಾದೆ ಮಗನೆ, ಘಟಶ್ರಾದ್ಧ, ಚೋಮನ ದುಡಿ ಯಂಥ ಸೂಕ್ಷ್ಮ ಸಂವೇದನೆಯ ಸಿನಿಮಾಗಳು ನಿರ್ಮಾಣಗೊಳ್ಳಲು ಸಾಧ್ಯವಾಯಿತು. ಕಾದಂಬರಿ ಆಧಾರಿತ ಸಿನಿಮಾಗಳು ನಿರ್ಮಾಣ ಮಾಡುವುದರ ಮೂಲಕ ಕನ್ನಡ ಚಿತ್ರರಂಗ ಕನ್ನಡ ಸಾಹಿತ್ಯಕ್ಕೆ ಅಪಾರ ಓದುಗ ಬಳಗವನ್ನು ತಂದು ಕೊಟ್ಟಿತು ಎನ್ನುವ ಹೆಗ್ಗಳಿಕೆ ನಮ್ಮ ಕನ್ನಡ ಸಿನಿಮಾಗಳದ್ದು. ಈ ನೆಲದ ಭಾಷೆ ಮತ್ತು ಸಂಸ್ಕೃತಿಗೆ ಅಪಾಯ ಎದುರಾದಾಗಲೆಲ್ಲ ನಮ್ಮ ಸಿನಿಮಾ ಕಲಾವಿದರು ಮತ್ತು ತಂತ್ರಜ್ಞರು ಹೋರಾಟ ಮತ್ತು ಚಳವಳಿಯ ಮೂಲಕ ಬೆಂಬಲಕ್ಕೆ ನಿಂತ ಉದಾಹರಣೆಗಳೂ ನಮ್ಮೆದುರಿವೆ. ಹೀಗೆ ಅತ್ಯಂತ ಸೃಜನಶೀಲ ನೆಲೆಯಲ್ಲಿ ರೂಪುಗೊಂಡ ಕನ್ನಡ ಸಿನಿಮಾರಂಗ ಕಾಲಾನಂತರದಲ್ಲಿ ಅನೇಕ ಬದಲಾವಣೆಗಳಿಗೆ ಸಿಕ್ಕು ತನ್ನ ಮೂಲ ಉದ್ದೇಶವನ್ನೇ ಮರೆತು ವಾಣಿಜ್ಯಕರಣಗೊಳ್ಳುತ್ತ ಹೋಯಿತು.  ಹಣ ಗಳಿಕೆಯೇ  ಸಿನಿಮಾ ನಿರ್ಮಾಣದ ಉದ್ದೇಶವಾಗಿ ಈಗದು ಹಣ ಹೂಡಿಕೆಯ ಉದ್ಯಮವಾಗಿ ರೂಪಾಂತರಗೊಂಡಿದೆ. ಲಾಭ  ನಷ್ಟಗಳ ಲೆಕ್ಕಾಚಾರಗಳ ಮಧ್ಯೆ ಸಿಲುಕಿರುವ ಸಿನಿಮಾ ಮಾಧ್ಯಮ ತನ್ನ ಮೂಲ ಉದ್ದೇಶದಿಂದ ಬಹುದೂರ ಸಾಗಿ ಬಂದಿರುವುದರಿಂದ ಇಲ್ಲಿ ಮೆಂಟಲ್ ಮಂಜ, ಜಂಗ್ಲಿ, ಹುಚ್ಚ, ಜಾಕಿ, ಜಾನಿ, ಹೊಡಿಮಗಾದಂಥ ಸಿನಿಮಾಗಳು ಮತ್ತು ಅಪ್ಪಾ ಲೂಜಾ ಅಮ್ಮ ಲೂಜಾದಂಥ ಹಾಡುಗಳು ಜನಪ್ರಿಯವಾಗಲು ಸಾಧ್ಯವಾಯಿತು. ಜೊತೆಗೆ ಪರಭಾಷೆಯ ಸಿನಿಮಾಗಳ ವ್ಯಾಮೋಹಕ್ಕೆ ಬಲಿಯಾದ ನಮ್ಮ ಸಿನಿಮಾ ಜನ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ಕನ್ನಡ ಭಾಷೆಗೆ ಭಟ್ಟಿ ಇಳಿಸುತ್ತಿರುವರು. ಒಟ್ಟಿನಲ್ಲಿ ಈ ನೆಲದ ಸಂಸ್ಕೃತಿಗೆ ಸಂಬಂಧವೇ ಇಲ್ಲದ ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ ಮತ್ತು ಅಂಥ ಸಿನಿಮಾಗಳನ್ನು ಪ್ರೇಕ್ಷಕರೂ ಜನಪ್ರಿಯಗೊಳಿಸುತ್ತಿರುವರು. ಸೃಜನಶೀಲ ಮಾಧ್ಯಮವಾದ ಸಿನಿಮಾ ಈಗ ತಪ್ಪು  ದಾರಿಯಲ್ಲಿದೆ ಎನ್ನುವುದು ಸಿನಿಮಾವನ್ನು  ಉತ್ಕಟವಾಗಿ ಪ್ರೀತಿಸುವ ಪ್ರೇಕ್ಷಕರ ಆತಂಕ.

     ಸಿನಿಮಾ ಉದ್ಯಮ ಭದ್ರವಾಗಿ ನೆಲೆಯೂರಿ ನಿಲ್ಲಲ್ಲು ಕಾರಣವಾದದ್ದು ರಂಗಭೂಮಿ. ರಂಗಭೂಮಿ ಸಿನಿಮಾ ಮಾಧ್ಯಮಕ್ಕೆ ಅನೇಕ ಕಲಾವಿದರು ಮತ್ತು  ತಂತ್ರಜ್ಞರನ್ನು ಬಳುವಳಿಯಾಗಿ ನೀಡಿದೆ. ಹುಣಸೂರು ಕೃಷ್ಣಮೂರ್ತಿ, ಸುಬ್ಬಯ್ಯ ನಾಯ್ಡು, ರಾಜಕುಮಾರ, ಕೆ ವಿ ಅಯ್ಯರ, ನರಸಿಂಹರಾಜು ಇವರೆಲ್ಲ ರಂಗಭೂಮಿಯಿಂದ ಸಿನಿಮಾ ಮಾಧ್ಯಮಕ್ಕೆ ವಲಸೆ ಬಂದು ಹೆಸರು ಮಾಡಿದರು. ಗುಬ್ಬಿ ವೀರಣ್ಣನವರ ನಾಟಕ ಕಂಪನಿ ಅನೇಕ ಕಲಾವಿದರಿಗೆ ಆಶ್ರಯತಾಣವಾಗಿತ್ತು. ಸಿನಿಮಾ ಮಾಧ್ಯಮ ಇನ್ನೂ ಕಾಲೂರಿ ನಿಲ್ಲಲ್ಲು ಪ್ರಯತ್ನಿಸುತ್ತಿದ್ದ ಸಮಯದಲ್ಲಿ ರಂಗಭೂಮಿ ಅದಾಗಲೇ ಅತ್ಯುತ್ತಮ ರಂಗ ಪ್ರಯೋಗಗಳಿಂದ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಐತಿಹಾಸಿಕ ಮತ್ತು ಪೌರಾಣಿಕ  ನಾಟಕಗಳಿಂದ ರಂಗಭೂಮಿ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕ ವರ್ಗವನ್ನು ತನ್ನತ್ತ ಆಕರ್ಷಿಸುವಲ್ಲಿ ಯಶಸ್ಸನ್ನು ಕಂಡಿತ್ತು. ರಂಗಭೂಮಿಯ ಜನಪ್ರಿಯತೆ ಹೆಚ್ಚುವಲ್ಲಿ ಪ್ರೇಕ್ಷಕರ ಕೊಡುಗೆಯೂ ಗಣನೀಯವಾಗಿತ್ತು. ಜೊತೆಗೆ ರಂಗಭೂಮಿಯ ಇನ್ನೊಂದು ಮಹತ್ವದ ಸೃಜನಶೀಲ ಕೊಡುಗೆ ಎಂದರೆ ಅದು ಅಪರೋಕ್ಷವಾಗಿ ಅತ್ಯುತ್ತಮ ಸಿನಿಮಾ ಕಲಾವಿದರನ್ನು ರೂಪಿಸಿದ್ದು. ಸಿನಿಮಾಗಳಲ್ಲಿ ಅಭಿನಯಿಸುವುದಕ್ಕಿಂತ ಮೊದಲು ಪೂರ್ವಭಾವಿಯಾಗಿ ಒಂದಿಷ್ಟು ರಂಗಭೂಮಿಯ ತಾಲೀಮು ದೊರೆಯಲಿ ಎನ್ನುವುದು ಪ್ರಾಮುಖ್ಯತೆ ಪಡೆಯಿತು. ವಿಪರ್ಯಾಸದ ಸಂಗತಿ ಎಂದರೆ ಯಾವ ರಂಗಭೂಮಿ ಸಿನಿಮಾ ಮಾಧ್ಯಮವನ್ನು ಬೆಳೆಸಿತೋ ಮುಂದೊಂದು ದಿನ ಅದೇ ಮಾಧ್ಯಮಕ್ಕೆ ಬಲಿಯಾಗಿ ತನ್ನ ಜನಾಕರ್ಷಣೆಯನ್ನು ಕಳೆದುಕೊಂಡಿತು. ಪರದೆಯ ಮೇಲೆ ನೋಡುವ ಸಿನಿಮಾ ವೀಕ್ಷಣೆಯ ಎದುರು ನಾಟಕದ ನೋಡು ಸಪ್ಪೆ ಎನಿಸಲಾರಂಭಿಸಿತು. ಹೀಗೆ ಸಿನಿಮಾದ ಜನಪ್ರಿಯತೆ ಮತ್ತು ಪ್ರೇಕ್ಷಕರ ಬದಲಾದ ಅಭಿರುಚಿಯ ಪರಿಣಾಮ ರಂಗಭೂಮಿಯ ಕಲಾವಿದರುಗಳಿಗೆ ಬದುಕಿನ ಪ್ರಶ್ನೆ ಎದುರಾಯಿತು. ಬದಲಾದ ಕಾಲಘಟ್ಟದಲ್ಲಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ರಂಗಭೂಮಿ ಒಂದಿಷ್ಟು ಬದಲಾವಣೆಗೆ ತನ್ನನ್ನು  ತೆರೆದು ಕೊಂಡಿತು. ದ್ವಂದ್ವಾರ್ಥದ ಸಂಭಾಷಣೆ, ಕಾಮ ಪ್ರಚೋದನೆಯ ಕಥೆ, ಮಾದಕ ನೃತ್ಯ  ಇತ್ಯಾದಿ ಹೊಸ ಹೊಸ ಪ್ರಯೋಗಗಳಿಗೆ  ಆದ್ಯತೆ ಕೊಡುವುದು ಅನಿವಾರ್ಯವಾಯಿತು. ಈ ರೂಪಾಂತರದಿಂದ ರಂಗಭೂಮಿ ಕಳೆದು ಹೋದ ಒಂದಿಷ್ಟು ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾದರೂ ಅದು ಸದಭಿರುಚಿಯ ಪ್ರೇಕ್ಷಕ ವರ್ಗವನ್ನು ಕಳೆದುಕೊಂಡಿತು. ಮುಂದೊಂದು ದಿನ ಈ ಬದಲಾವಣೆಯೇ ರಂಗಭೂಮಿಯನ್ನು ವೃತ್ತಿಪರ ಮತ್ತು ಹವ್ಯಾಸಿ ಎನ್ನುವ ಒಡಕಿಗೂ ಕಾರಣವಾಯಿತು. ನೀನಾಸಂ ಮತ್ತು ರಂಗಾಯಣ ನಾಟಕ ಸಂಘಗಳು ರಂಗಭೂಮಿಯನ್ನು ಸೃಜನಶೀಲತೆಯ ನೆಲೆಯಲ್ಲಿ ಮತ್ತೆ ರೂಪಿಸಲು ಪ್ರಯತ್ನಿಸುತ್ತಿರುವ ಹೊತ್ತಿನಲ್ಲೇ ವೃತ್ತಿಪರ ನಾಟಕ ಸಂಘಗಳು ಪ್ರೇಕ್ಷಕರ ಅಭಿರುಚಿಯನ್ನು ಕೀಳುಮಟ್ಟಕ್ಕಿಳಿಸಿ ರಂಗಭೂಮಿಯ ಅವನತಿಗೆ ಕಾರಣವಾಗಿವೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


 
     

Monday, May 23, 2016

ಸಂಬಂಧಗಳು (ಕಥೆ)

           
(ಲೇಖನಗಳನ್ನು ಬರೆಯುವ ನನಗೆ ಕಥೆ ಬರೆಯುವುದು ಕಷ್ಟದ ಕೆಲಸ. ಒಂದರ್ಥದಲ್ಲಿ ಬರಹಗಾರನ ನಿಜವಾದ ಸೃಜನಶೀಲತೆ ಪರೀಕ್ಷೆಗೆ ಒಳಗಾಗುವುದು ಕಥೆಯ ರಚನೆಯಲ್ಲಿ. ಅನೇಕ ಬರಹಗಾರರು ಕಥಾ ಪ್ರಕಾರವನ್ನು ಬರವಣಿಗೆಯ ಅಭಿವ್ಯಕ್ತಿ ಮಾಧ್ಯಮವಾಗಿ ಮಾಡಿಕೊಂಡು ಉತ್ಕೃಷ್ಟ ಸಾಹಿತ್ಯವನ್ನು ರಚಿಸಿದ ಉದಾಹರಣೆ ಕನ್ನಡದಲ್ಲಿ ಸಾಕಷ್ಟಿದೆ. ಮಾಸ್ತಿಯವರು ಕಥಾ ಪ್ರಕಾರಕ್ಕೆ ಹೊಸ ಭಾಷ್ಯ ಬರೆದು ತಮ್ಮ ನಂತರದ ಅನೇಕ ಬರಹಗಾರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟರು. ಲಂಕೇಶ್, ಅನಂತಮೂರ್ತಿ, ತೇಜಸ್ವಿ, ದೇವನೂರು ಅವರ ಕಥೆಗಳಿಂದ ಕನ್ನಡದಲ್ಲಿ ಕಥಾ ಸಾಹಿತ್ಯ ಹೊಸದೊಂದು ಮಾರ್ಗಕ್ಕೆ ತೆರೆದುಕೊಂಡಿತು. ಲೇಖಕರೋರ್ವರು ಹೇಳುವಂತೆ ಅನಂತಮೂರ್ತಿ ಅವರ ಬರವಣಿಗೆಯ ಸೃಜನಶೀಲತೆ ವ್ಯಕ್ತವಾಗಿತ್ತಿದ್ದದ್ದು ಲೇಖನಗಳಿಗಿಂತ ಕಥೆಗಳಲ್ಲೇ ಹೆಚ್ಚು ಎನ್ನುವ ಮಾತು ಕಥಾ ಪ್ರಕಾರದ ಮಹತ್ವಕ್ಕೆ ಸಾಕ್ಷಿಯಾಗಿದೆ. ಒಂದೆರಡು ಕಥೆಗಳನ್ನು ಬರೆಯುವ ಮೂಲಕ ನಾನು ಆಗಾಗ ಕಥೆಗಾರನೆಂಬ ಭ್ರಮೆಗೆ ಒಳಗಾಗಿದ್ದುಂಟು. ಅಂಥದ್ದೇ ಒಂದು ಭ್ರಮೆಯಲ್ಲಿ ಬರೆದ ಈ ಕಥೆ 'ಕರ್ಮವೀರ' ದಲ್ಲಿ ಪ್ರಕಟವಾಗಿ ಸಂತೋಷ, ಸಂಕಟ, ಭ್ರಮೆಗಳನ್ನು ಒಟ್ಟೊಟ್ಟಿಗೆ ಅನುಭವಿಸುವಂತೆ ಮಾಡಿತು).




         ಆಟೋ ಚಾಲಕನಿಗೆ ಹಣ ಕೊಟ್ಟು ಬಸ್ ಸ್ಟ್ಯಾಂಡ್ ಒಳಗಡೆ ಬಂದಾಗ ಗಡಿಯಾರದ ಮುಳ್ಳು ಎಂಟು ಗಂಟೆ ತೋರಿಸುತ್ತಿತ್ತು. ರಜಾದಿನವಾದ್ದರಿಂದ ಬಸ್ ನಿಲ್ದಾಣದಲ್ಲಿ ಗದ್ದಲವಿರಲಿಲ್ಲ. ಅಣ್ಣನ ಮಕ್ಕಳಿಗಾಗಿ ಮೈಸೂರು ಪಾಕ್ ಮತ್ತು ಧಾರವಾಡದ ಸ್ಪೆಷಲ್ ಪೇಡಾ ಪ್ಯಾಕ್ ಮಾಡಿಸಿ ಅಂಗಡಿಯವನಿಗೆ ಬಸ್ ಯಾವಾಗ ಹೊರಡುವದೆಂದು ವಿಚಾರಿಸಿದೆ. ಇನ್ನೂ ಅರ್ಧ ಗಂಟೆ ಸಮಯವಿದೆಯೆಂದು ಹೇಳಿದ. ಮನೆಯಿಂದ ಬರುವಾಗ ಬರೀ ಚಹಾ ಕುಡಿದು ಬಂದಿದ್ದರಿಂದ ಹೊಟ್ಟೆ ಚುರುಗುಟ್ಟುತ್ತಿತ್ತು. ಇಲ್ಲಿಂದ ಊರಿಗೆ ಎನಿಲ್ಲವೆಂದರೂ ಮೂರು ಗಂಟೆಗಳ ಪ್ರಯಾಣ. ಊಟದ ಹೊತ್ತಿಗೆ ಮನೆ ಸೇರಬಹುದು. ಅಲ್ಲಿಯವರೆಗೂ ಹೊಟ್ಟೆ ಸಮಾಧಾನದಿಂದಿರಲು ಒಂದಿಷ್ಟು ಉಪಹಾರ ಮಾಡಿದರಾಯಿತೆಂದು ಬಸ್ ಸ್ಟ್ಯಾಂಡಿನಲ್ಲೇ ಇದ್ದ ಉಪಹಾರಗೃಹವನ್ನು ಪ್ರವೇಶಿಸಿದೆ. ಖಾಲಿಯಿದ್ದ ಟೇಬಲ್ ಸಮಿಪಿಸಿ ಮನೆಯಿಂದ ತಂದಿದ್ದ ದಿನಪತ್ರಿಕೆ ಓದುತ್ತ ಕುಳಿತೆ. `ಟಿಫಿನ್ ಏನು ಕೊಡ್ಲಿ ಸರ್'  ವೇಟರ್ ಬಂದು ಕೇಳಿದಾಗ ಓದುತ್ತಿದ್ದ ಪತ್ರಿಕೆಯಿಂದ ತಲೆ ಎತ್ತಿ ನೋಡಿದೆ. ಒಂದು ಕ್ಷಣ ಆಶ್ಚರ್ಯದಿಂದ ಎದುರಿಗೆ ನಿಂತ ವ್ಯಕ್ತಿಯನ್ನು ದಿಟ್ಟಿಸಿದೆ. ಅನುಮಾನವೇ ಇಲ್ಲ. `ರಘು ನೀನಿಲ್ಲಿ' ಅಪ್ರಯತ್ನವಾಗಿ ಶಬ್ದಗಳು ಹೊರಬಂದವು. `ಅನಂತ ಎಷ್ಟು ದಿನಗಳಾದ್ವು ನಿನ್ನ ನೋಡಿ' ರಘು ಕಣ್ಣಲ್ಲಿ ಆನಂದಭಾಷ್ಪ. ಮರುಕ್ಷಣ ಒಬ್ಬರ ಅಪ್ಪುಗೆಯಲ್ಲಿ ಇನ್ನೊಬ್ಬರು. ಎಲ್ಲರೂ ನಮ್ಮನ್ನೇ ನೋಡ್ತಿದ್ದಾರೆ ಎಂದರಿವಾದಾಗ ಇಬ್ಬರಿಗೂ ಮುಜುಗರವಾಯಿತು. `ಅನಂತ ಇಲ್ಲೇ ನನ್ನ ರೂಂ ಇದೆ ಬಾ' ಎಂದು ರಘು ಕೈ ಹಿಡಿದು ಹೊಟೆಲ್‍ನಲ್ಲೇ ಇರುವ ಒಂದು ಕೋಣೆಗೆ ಕರೆದೊಯ್ದ. ಚಾಪೆ ಹಾಸಿ ಕೂತ್ಕೊ ಎಂದು ಹೇಳಿ ಹೊರಗೆ ಹೋದ ರಘು ನನಗೆ ಪ್ರೀಯವಾದ ಉಪ್ಪಿಟ್ಟು ಕೇಸರಿಬಾತ್ ತಂದು `ತಿಂಡಿ ತಿನ್ನಲು ಬಂದವನನ್ನು ಖಾಲಿ ಹೊಟ್ಟೆಯಲ್ಲಿ ಕೂಡಿಸಿದಂಗಾಯಿತು' ಎಂದು ಉಪಚರಿಸಿದ. ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ನನಗೆ ಕೆಲವು ಕ್ಷಣಗಳೇ ಬೇಕಾದವು. ಒಬ್ಬರು ಮಾತ್ರ ಇರಲು ಸಾಧ್ಯವಿರುವ ತೀರ ಇಕ್ಕಟ್ಟಾದ ಸಣ್ಣ ಕೋಣೆ. ಆದರೆ ಅಲ್ಲಿನ ವಾತಾವರಣ ಸುಮಾರು ಏಳೆಂಟು ಜನ ಆ ಕೋಣೆಯಲ್ಲಿ ವಾಸವಾಗಿದ್ದಾರೆ ಎಂದು ಹೇಳುವಂತಿತ್ತು. `ಏನಿದೆಲ್ಲ ರಘು' ಕೈಹಿಡಿದು ಸಂಕಟದಿಂದ ಕೇಳಿದೆ. `ಇದು ನನ್ನ ಬದುಕಿನ ವಾಸ್ತವ ಅನಂತ. ಯಾರಿಗೂ ನನ್ನ ಬದುಕಿನ ಸತ್ಯ ಗೊತ್ತಾಗಬಾರದೆಂದು ಪ್ರಯತ್ನಿಸಿದೆ. ಇವತ್ತು ನಿನಗೆ ಗೊತ್ತಾಗಿಹೋಯಿತು. ಸತ್ಯ ಗೊತ್ತಾದಮೇಲೆ ಅದನ್ನು ಒಪ್ಪಿಕೊಳ್ಳಲೇ ಬೇಕು' ರಘು ನಿರ್ವಿಕಾರದ ದ್ವನಿಯಲ್ಲಿ ಹೇಳಿದ. `ಆದರೆ ಊರಿನಲ್ಲಿ ಎಲ್ಲರೂ' ನನ್ನ ಮಾತನ್ನು ಅರ್ಧಕ್ಕೆ  ತುಂಡರಿಸಿದ ರಘು `ಗೊತ್ತು ಅನಂತ ನೀನೇನು ಹೇಳ್ತಿಯಂತ. ಊರವರಷ್ಟೇ ಏಕೆ ನನ್ನ ಮನೆಯವರೆಲ್ಲ ನಾನು ಒಳ್ಳೆ ಕೆಲಸದಲ್ಲಿದ್ದೆನೆಂದೆ ತಿಳಿದಿದ್ದಾರೆ. ಆದರೆ ವಿಧಿಯಾಟ ನೋಡು ನಾವು ಇವತ್ತು ಎಂಥ ಪರಿಸ್ಥಿತಿಯಲ್ಲಿ ಭೇಟಿಯಾಗ್ತಿದ್ದಿವಿ.' ರಘು ದ್ವನಿ ಕಂಪಿಸುತ್ತಿತ್ತು. `ಅನಂತ ನೀನು ಓದಲೇ ಬೇಕು ಅಂತ ಹಟ ಹಿಡಿದೆ. ನಿನ್ನ ತಂದೆ ತಕ್ಕ ಮಟ್ಟಿಗೆ ಅನುಕೂಲಸ್ಥರೆ. ನಿನ್ನ ಅಣ್ಣನಿಗೆ ತಮ್ಮ ಓದಿ ಒಳ್ಳೆ ಕೆಲಸ ಹಿಡೀ ಬೇಕು ಎನ್ನುವ ಪ್ರೀತಿ ಬೇರೆ. ನೀನು ಓದಿ ಇವತ್ತು ಒಳ್ಳೆ ಕೆಲಸದಲ್ಲಿದ್ದಿಯ. ಆದರೆ ನನ್ನ ಪರಿಸ್ಥಿತಿ ನೀನಗಿಂತ ಬೇರೆಯಾಗಿತ್ತು. ಸದಾ ಅನಾರೋಗ್ಯದಿಂದ ಹಾಸಿಗೆ ಹಿಡಿಯುವ ತಾಯಿ, ಪೌರೋಹಿತ್ಯವನ್ನೇ ನಂಬಿ ಜೀವನಸಾಗಿಸುತ್ತಿದ್ದ ತಂದೆ, ಹುಟ್ಟಿನಿಂದಲೇ ಅಂಗವಿಕಲನಾದ ಅಣ್ಣ, ಮದುವೆ ವಯಸ್ಸಿಗೆ ಬಂದ ಅಕ್ಕ ಇಂತಹ ಸ್ಥಿತಿಯಲ್ಲಿ ನಾನು ಓದಬೇಕೆಂದು ಹಟ ಹಿಡಿದರೂ ಪ್ರಯೋಜನವಿರಲಿಲ್ಲ. ಊರಲ್ಲಿ ಅಭ್ಯಾಸ ಮುಗಿದ ನಂತರ ಪಟ್ಟಣಕ್ಕೆ ಬಂದೆ. ನಾನು ಕಲಿತ ನಾಲ್ಕಕ್ಷರಕ್ಕೆ ಇಲ್ಲಿ ಸರ್ಕಾರಿ  ನೌಕರಿ ಸಿಗಲಿಲ್ಲ. ಕೊನೆಗೆ ನನ್ನಂತವರಿಗೆ ಹೊಟೆಲ್ ಬಾರ್‍ಗಳೆ ಗತಿ ಅಂತ ಗೊತ್ತಾಯಿತು. ಇಲ್ಲಿ ಬರುವ ಸಂಬಳದಲ್ಲಿ ಒಂದು ಪೈಸೆ ಖರ್ಚುಮಾಡದೆ ಊರಿಗೆ ಕಳಿಸ್ತಿದ್ದೆನೆ' ರಘು ಹೇಳಿ ಮುಗಿಸಿದಾಗ ಬೇರೆಯವರ ಬದುಕಿಗಾಗಿ ಜೀವಿಸುತ್ತಿರುವ ಸಂತಸ ಅವನ ಧ್ವನಿಯಲ್ಲಿತ್ತು. `ರಘು ನಾನೊಬ್ಬ ಸ್ನೇಹಿತ ಇದೇ ಊರಿನಲ್ಲಿದ್ದೆನೆಂದು ನೆನಪೇ ಆಗಲಿಲ್ವ' ಕೋಪದಿಂದ ಕೇಳಿದೆ. `ನನ್ಗೊತ್ತಿತ್ತು ನೀನು ಇದೇ ಊರಿನಲ್ಲಿರೊದಂತ. ಅದೆಷ್ಟೋ ಸಲ ನಿನ್ನನ್ನ ನೋಡಿದ್ದೀನಿ. ಆದರೆ ಅವರವರ ಬದುಕಿಗೆ ಅವರೇ ಹೊಣೆ ಅಲ್ವ ಅನಂತ. ನನ್ನ ಬದುಕು ಬೇರೆಯವರ ಸಹಾನುಭೂತಿಗೆ ಆಹಾರವಾಗೊದು ನನಗಿಷ್ಟವಿಲ್ಲ. ಅಲ್ಲದೆ ಗೆಳೆತನವನ್ನು ದುರೂಪಯೋಗ ಪಡಿಸಿಕೊಳ್ಳೊಷ್ಟು ಸ್ವಾಥಿ9ನಾನಲ್ಲ'. ಅತ್ಯಂತ ಸ್ವಾಭಿಮಾನಿಯಾದ ರಘುಗೆ ಹೇಳುವ ಸಾಮರ್ಥ್ಯ  ನನಗಿರಲಿಲ್ಲ. `ಅನಂತು ಊರಿಗೆ ಹೋಗ್ತಿದ್ದಿಯ' ರಘು ಕೇಳಿದ. `ಹೌದು ಹಳ್ಳಿಲಿ ಒಂದಿಷ್ಟು ಕೆಲಸಯಿತ್ತು ಅದಕ್ಕೆ ಹೋಗ್ತಿದ್ದಿನಿ'. `ಹಾಗಾದರೆ ನನಗೊಂದು ಸಹಾಯ ಮಾಡ್ತಿಯ' ಎಂದವನೆ ರಘು ಅಲ್ಲೇ ಮೂಲೆಯಲ್ಲಿದ್ದ ಟ್ರಂಕ್ ನಿಂದ ಕಾಗದದ ಪೊಟ್ಟಣವನ್ನು  ತೆಗೆದು ನನ್ನ ಕೈಯಲ್ಲಿಟ್ಟ. ಅರ್ಥವಾಗದೆ  ಅವನ ಮುಖ ನೋಡಿದೆ. `ಅನಂತ ಅದರಲ್ಲಿ ಒಂದು ಲಕ್ಷ ರೂಪಾಯಿ ಇವೆ. ಈ ಹಣನ ರಾಧಕ್ಕನಿಗೆ ಒಯ್ದು ಕೊಡು'. ನನ್ನ ಮೌನವನ್ನು ಬೇರೆಯೇ ರೀತಿಯಾಗ ಅರ್ಥೈಸಿಕೊಂಡ ರಘು ಹೇಳಿದ ` ಅನಂತ ಇದು ಕಳ್ಳತನದ ಹಣ ಅಲ್ಲ. ಕಿಡ್ನಿ ವೈಫಲ್ಯದಿಂದ ಸಾವಿಗೆ ಹತ್ತೀರವಾಗಿದ್ದ ಶ್ರೀಮಂತ ಯುವಕನಿಗೆ ಕಿಡ್ನಿಯ ಅವಶ್ಯಕತೆಯಿತ್ತು. ಒಂದು ವಾರದ ಹಿಂದೆ ನಾನು ಒಂದು ಕಿಡ್ನಿನ ಒಂದು ಲಕ್ಷ ರೂಪಾಯಿಗಳಿಗೆ ಮಾರಿದೆ. ಅದರಿಂದ ಬಂದ ಹಣ ಇದು'. ರಘುನ ಮಾತುಗಳನ್ನ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಅವನ ಈಗಿನ ಪರಿಸ್ಥಿತಿ ನೋಡಿ ದು:ಖ  ಉಮ್ಮಳಿಸಿ ಬಂತು. ಎರಡೂ ಕೈಗಳಿಂದ ಮುಖ ಮುಚ್ಚಿ ಮನಸ್ಸಿಗೆ ಸಮಾಧಾನವಾಗುವವರೆಗೂ ಅತ್ತೆ. ಎಷ್ಟೋ ಹೊತ್ತು ಒಬ್ಬರಿಗೊಬ್ಬರು ಸಮಾಧಾನಪಡಿಸುತ್ತ ಹಾಗೇ ಕುಳಿತಿದ್ದೇವು. ಕೊನೆಗೆ ರಘು ಎಚ್ಚೆತ್ತು ನಾನು ಊರಿಗೆ ಹೋಗಬೇಕಾಗಿರುವುದನ್ನು ನೆನಪಿಸಿದ. ಬಸ್ಸಿನವರೆಗೂ ಜೊತೆಗೆ ಬಂದು ನನ್ನನ್ನು ಬಸ್ ಹತ್ತಿಸಿ ಹಿಂದಿರುಗುವಾಗ ರಘು ಕೇಳಿದ ` ಅನಂತ ನನ್ಗೊಂದು ಉಪಕಾರ ಮಾಡ್ತಿಯ'. ಏನು ಎನ್ನುವಂತೆ ನೋಡಿದೆ. `ದಯವಿಟ್ಟು ನಾನಿರುವ ಪರಿಸ್ಥಿತಿಯನ್ನು ನಮ್ಮ ಮನೆಯಲ್ಲಿ ಯಾರಿಗೂ ಹೇಳ್ಬೇಡ' ಎಂದವನೆ ಉತ್ತರಕ್ಕೂ ಕಾಯದೆ ಸರಿದು ಹೋದ. ಹೋಗುತ್ತಿದ್ದವನನ್ನು ನೀರು ತುಂಬಿದ ಕಣ್ಣುಗಳಿಂದ ನೋಡುತ್ತ ಕುಳಿತುಬಿಟ್ಟೆ. ಬಸ್ ಮುಂದೆ ಚಲಿಸುತ್ತಿದ್ದಂತೆ ರಘುನ ಆಕೃತಿ ಮುಸುಕು ಮುಸುಕಾಗಿ ಕೊನೆಗೆ ಅವನು ನನ್ನಿಂದ ಶಾಶ್ವತವಾಗಿ ದೂರ ಹೋಗುತ್ತಿರುವಂತೆ ಭಾಸವಾಯಿತು.  

           ಬಸ್ಸಿನಿಂದಿಳಿದಾಗ ಸೂರ್ಯ  ನೆತ್ತಿಯ ಮೇಲೆ ಬಂದಿದ್ದ. ಬರುವ ವಿಷಯ ಮೊದಲೇ ತಿಳಿಸಿದ್ದರಿಂದ ಅಣ್ಣ ಕೊಡೆ ಹಿಡಿದುಕೊಂಡು ನನಗಾಗಿ ಕಾಯುತ್ತ ನಿಂತಿದ್ದು ಕಾಣಿಸಿತು. `ಚೆನ್ನಾಗಿದ್ದಿಯ ಅನಂತು' ಎಂದು ಅಪ್ಯಾಯತೆಯಿಂದ ಬೆನ್ನು ಸವರಿ ಬಿಸಿಲು ತಾಗದಂತೆ ನನ್ನೆಡೆ ಕೊಡೆ ಬಾಗಿಸಿದ ಅಣ್ಣ ಮೊದಲಿನಂತೆ ಲವಲವಿಕೆಯಿಂದಿರದೆ ತೀರ ಸೊರಗಿದಂತೆ ಅನ್ನಿಸಿತು. ಅಂಗಳದಲ್ಲಿ ಆಡುತ್ತಿದ್ದ ಅಣ್ಣನ ಮಕ್ಕಳು ಚಿಕ್ಕಪ್ಪ ಬಂದ್ರು ಎನ್ನುತ್ತ ಒಳಗೋಡಿ ವಿಷಯ ತಿಳಿಸಿದರು. `ಎಷ್ಟೊಂದು ಬಡವಾಗಿದ್ಯೋ' ಅಮ್ಮ ಕಕ್ಕುಲತೆಯಿಂದ ತೆಲೆ ಸವರಿದಳು. ಅಪ್ಪ ಎಂದಿನಂತೆ ಗಂಭೀರವಾಗಿದ್ದರೂ ಮಗ ಬಂದ ಸಂತೋಷ ಅವರ ಕಣ್ಣುಗಳಲ್ಲಿ ಕಾಣಿಸುತ್ತಿತ್ತು. ಅತ್ತಿಗೆ ಅಡುಗೆ ಮನೆಯಲ್ಲಿ ಊಟದ ತಯ್ಯಾರಿಯಲ್ಲಿದ್ದರು. ಮನೆಯಲ್ಲಿನ ಎಲ್ಲರ ಪ್ರೀತ್ಯಾದಾರಗಳಿಂದ ಮನಸ್ಸು ತುಂಬಿತ್ತು. ಜೊತೆಗೆ ಭರ್ಜರಿ  ಊಟ. ಒಂದು ನಿದ್ದೆ ತೆಗೆದು ರಘುನ ಮನೆಗೆ ಹೋದರಾಯಿತೆಂದು ಅಮ್ಮ ಹಾಕಿಕೊಟ್ಟ ಹಾಸಿಗೆಯಲ್ಲಿ ಉರುಳಿದೆ. ಎಚ್ಚರವಾದಾಗ ಐದು ಗಂಟೆಯಾಗುತ್ತಿತ್ತು. ಮುಖ ತೊಳೆದು ಕಾಫಿ ಕುಡಿದು `ಅಮ್ಮ ರಘು ಮನೆಕಡೆ ಹೋಗಿಬರ್ತೀನಿ' ಅವಳ ಉತ್ತರಕ್ಕೂ ಕಾಯದೆ ಹೊರ ಬಂದೆ. ಊರು ತುಂಬ ಬದಲಾಗಿತ್ತು. ಒಂದೆರಡು ಪರಿಚಿತ ಮುಖಗಳನ್ನು ಬಿಟ್ಟರೆ ಎಲ್ಲರೂ ಅಪರಿಚಿತರೆ. ಪಟ್ಟಣಕ್ಕೆ ಹೋಗಿ ಅದಾಗಲೇ ಹದಿನೈದು ವರ್ಷಗಳಾದವು . ಹಬ್ಬ ಜಾತ್ರೆ ಅಂತ ಬಿಟ್ಟರೆ ಊರಿಗೆ ಬರುವುದೇ ಅಪರೂಪವಾಗಿತ್ತು. ವೆಂಕಟರಮಣ ದೇವಸ್ಥಾನದ ಪಕ್ಕವೆ ರಘುನ ಮನೆ. ಚಿಕ್ಕವರಾಗಿದ್ದಾಗ ಪ್ರಸಾದದ ಆಸೆಗಾಗಿ ರಘುನ ಮನೆಗೆ ಹೋಗುತ್ತಿದ್ದುದ್ದು ಅವರ ಅಮ್ಮನ ಕೈಯಿಂದ ಬೈಸಿಕೊಳ್ಳುತ್ತಿದ್ದುದ್ದು ನೆನಪಾಗಿ ನಗು ಬಂತು. ಊರು ಬದಲಾದರೂ ರಘುನ ಮನೆ ಬದಲಾಗಿರಲಿಲ್ಲ. ಮನೆಯ ಒಂದು ಭಾಗ ಕುಸಿದು ಬಿದ್ದು ಅಲ್ಲಲ್ಲಿ ಬೆಳೆದ ಹುಲ್ಲು ಮನೆಯಲ್ಲಿ ವಾಸಿಸುವವರ ಶೋಚನೀಯ ಸ್ಥಿತಿಯನ್ನು ಸಾರಿ ಹೇಳುವಂತಿತ್ತು. ತಲೆಬಾಗಿಲು ದಾಟಿ ಒಳಗಡಿಯಿಟ್ಟಾಗ ಕತ್ತಲು ಗುಹೆಯನ್ನು ಪ್ರವೇಶಿಸಿದಂತೆ ಭಾಸವಾಯಿತು. ಕಾಲೇಜು ಶಿಕ್ಷಣಕ್ಕೆಂದು ಪಟ್ಟಣಕ್ಕೆ ಹೋದಂದಿನಿಂದ ರಘುನ ಮನೆ ಕಡೆ ಬಂದಿರಲಿಲ್ಲ. ಪಡಸಾಲೆಯಲ್ಲಿ ಕುಳಿತು ಕೈಬೆರೆಳುಗಳನ್ನೆಣಿಸುತ್ತ ಲೆಖ್ಖಹಾಕುತ್ತಿದ್ದ ಶ್ರೀನಿವಾಸ ದೀರ್ಘ  ಯೋಚನೆಯಲ್ಲಿದ್ದಂತೆ ಕಂಡು ಬಂದ. ಕಂಬಕ್ಕೊರಗಿ ಕುಳಿತಿದ್ದ ಸೀತಾರಾಮಶಾಸ್ತ್ರಿಗಳು ಎನನ್ನೊ ಗೊಣುಗುತ್ತಿದ್ದರು. ಅಡುಗೆ ಕೋಣೆಯ ಹೊಸ್ತಿಲಿಗೆ ತಲೆಯಾನಿಸಿ ಮಲಗಿದ್ದ ಕಮಲಮ್ಮನವರ ಗಂಟಲಿನಿಂದ ಬರುತ್ತಿದ್ದ ಗೊರ ಗೊರ ಶಬ್ದ ಆ ಇಡೀ ವಾತಾವರಣಕ್ಕೆ ಭೀಕರ ಸ್ವರೂಪವನ್ನು ನೀಡಿತ್ತು. ಒಟ್ಟಿನಲ್ಲಿ ಅಲ್ಲಿದ್ದ ಆ ಮೂವರಿಗೂ ಹೊರ ಪ್ರಪಂಚದ ಸಂಪರ್ಕವೇ  ಇದ್ದಂತಿರಲಿಲ್ಲ. ಎಷ್ಟು ಹೊತ್ತಿನಿಂದ ಹಾಗೇ ನಿಂತಿದ್ದೇನೊ ರಾಧಕ್ಕ ಬಾ ಅನಂತು ಎಂದು ಕೂಗಿದಾಗಲೇ ಎಚ್ಚರವಾಯಿತು. `ಯಾವಾಗ ಬಂದೆ ಹೆಂಡ್ತಿ ಮಗಳನ್ನೂ ಕರದೆಕೊಂಡು ಬಂದಿದ್ಯ' ಕೇಳಿದಳು ರಾಧಕ್ಕ. ಚಹಾ ಮಾಡುತ್ತೆನೆಂದವಳನ್ನು ಬೇಡ ಎಂದು ತಡೆದೆ. `ಏನು ರಾಧಕ್ಕ ಮನೆಯ ಸ್ಥಿತಿ ಹೀಗಾಗಿದೆ' ವೇದನೆಯಿಂದ ಕೇಳಿದ್ದಕ್ಕೆ ರಾಧಕ್ಕ ಅಳುವುದೊಂದೆ ಬಾಕಿ. `ಏನ್ಹೇಳ್ಲಿ ಅನಂತು ಅಪ್ಪನಿಗೆ ಈಗೀಗ ಕಣ್ಣು ಕಾಣಿಸ್ತಿಲ್ಲ ಅಂತ ಪೂಜೆ ಮಾಡೋದನ್ನ ಬಿಡಿಸಿ ಬಿಟ್ಟಿದ್ದಾರೆ. ಶಿನಣ್ಣನ ಪರಿಸ್ಥಿತಿ ಬೇರೆ ಹೀಗೆ. ಬದುಕಿನಲ್ಲಿ ಭರವಸೆನೇ ಕಳ್ಕೊಂಡು ಬಿಟ್ಟಿದ್ದಾನೆ. ಅಮ್ಮ ಸಾವು ಯಾವಾಗ ಬರುತ್ತೋ ಅಂತ ಕಾಯ್ತಿದ್ದಾಳೆ. ಮದುವೆಯಾದ ಎರಡೇ ತಿಂಗಳಿಗೆ ಗಂಡನ್ನ ಕಳ್ಕೊಂಡೆ ಅಂತ ಅತ್ತೆ ಮನೆಯವರು ನನ್ನನ್ನ ತವರಿಗೆ ಕಳಿಸಿದ್ರು. ಇನ್ನು ಈ ಕುಟುಂಬಕ್ಕೆ ಆಸರೆ ಅಂದ್ರೆ ರಘು ಒಬ್ನೆ. ಮದುವೆ ಮುಂಜಿ ಎನೂ ಇಲ್ದೆ ನಮಗಾಗಿ ದುಡಿತಿದ್ದಾನೆ. ಒಳ್ಳೆ ಕೆಲಸದಲ್ಲಿದ್ದಿಯ ಮದುವೆಯಾಗಿ ಸುಖವಾಗಿರು ಅಂದ್ರೆ ಕೇಳ್ತಿಲ್ಲ. ನೀನಾದ್ರು ಅವನಿಗೆ ಬುದ್ಧಿ ಹೇಳು' ಎಂದ ರಾಧಕ್ಕ ಸೇರಗಿನಿಂದ ಕಣ್ಣೊರಿಸಿಕೊಂಡಳು. ಇನ್ನು ಅಲ್ಲಿ ಕುಳಿತುಕೊಳ್ಳಲಾಗದೆ ಹಣವನ್ನು ರಾಧಕ್ಕನ ಕೈಗಿಟ್ಟು `ರಘು ಕೊಟ್ಟಿದ್ದಾನೆ ನಾನಿನ್ನು ಬರ್ತೀನಿ' ಎಂದು ಹೇಳಿ ಹೊರಬಂದೆ. ಹೇಳಿಕೊಳ್ಳಲಾಗದ ತಳಮಳ. ಬಡತನ ಅಂದ್ರೇ ಏನು ಎಂದು ಮೊದಲಬಾರಿಗೆ ಪರಿಚಯವಾಗಿತ್ತು. ಬಡತನ ಬದುಕನ್ನ ಇಷ್ಟೊಂದು ಹತಾಶ ಸ್ಥಿತಿಗೆ ನೂಕುತ್ತೆ ಅಂತ ಗೊತ್ತಿರಲಿಲ್ಲ. ಮನೆಗೆ ಬಂದವನೇ ಊಟದ ಶಾಸ್ತ್ರ ಮಾಡಿ ಮಲಗಿದೆ. ಕಣ್ಮುಚ್ಚಿದರೂ ರಘುನ ಮನೆಯ ಚಿತ್ರ ಮತ್ತೆ ಮತ್ತೆ ಕಣ್ಣೆದುರು ಬಂದು ಮನಸ್ಸನ್ನು ಚುಚ್ಚುತಿತ್ತು. ನಿದ್ರೆ ಹತ್ತೀರ ಸುಳಿಯುತ್ತಿಲ್ಲ. ಕೆಲ ದಿನಗಳಿಂದ ಈ ಮನೆಯ ಪರಿಸ್ಥಿತಿ ಕೂಡ ಮೊದಲಿನಂತಿಲ್ಲ. ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಜಮೀನಿನಿಂದ ಬರುವ ಆದಾಯ ಕಡಿಮೆಯಾಗುತ್ತಿದೆ. ಅಣ್ಣನದು ದೊಡ್ಡ ಕುಟುಂಬ ಬೇರೆ. ಎಲ್ಲ ಗೊತ್ತಿದ್ದೂ ಈ ವಿಷಯ ಅಣ್ಣನೊಡನೆ ಮಾತನಾಡುವುದಾದರೂ ಹೇಗೆ ಎಂಬ ಚಿಂತೆ ಮನಸ್ಸನ್ನು ಆವರಿಸಿತ್ತು. ಹೊರಡುವ ಹಿಂದಿನ ರಾತ್ರಿ ಶಾಲಿನಿ ಹೇಳಿದ ಮಾತು ನೆನಪಾಯ್ತು `ಈ ಸಾರಿ ಬರುವಾಗ ಒಂದು ನಿರ್ಧಾರ  ಮಾಡ್ಕೊಂಡು ಬನ್ನಿ. ನಮ್ದೂ ಸಂಸಾರ ಬೆಳಿತಿದೆ. ಎಷ್ಟು ದಿನಾಂತ ಬಾಡಿಗೆ ಮನೆಯಲ್ಲಿರೊದು. ವರ್ಷಕ್ಕೆ  ಇಂತಿಷ್ಟು ಅಂತ ಹಣ ಕೊಡೊದಾದ್ರೆ ಕೊಡ್ಲಿ. ಇಲ್ಲಾಂದ್ರೆ ಜಮೀನಿನಲ್ಲಿ ಪಾಲು ಕೊಡ್ಲಿ. ನಿಮಗೆ ಕೇಳೊಕ್ಕೆ ಧೈರ್ಯ  ಇಲ್ಲಾಂದ್ರೆ ನಾನೂ ಬರ್ತಿನಿ' ಎಂದಿದ್ದಳು. ರಘು ಭೇಟಿಯಾದದ್ದೂ, ಅವನ ಮನೆಯ ದಾರುಣ ಸ್ಥಿತಿ, ಅಣ್ಣ ಪಡುತ್ತಿರುವ ಕಷ್ಟ ಇದನ್ನೆಲ್ಲ ನೋಡಿ ನನ್ನ ನಿರ್ಧಾರ  ಗಟ್ಟಿಯಾಗತೊಡಗಿತು. ಮನಸ್ಸಿನಲ್ಲಿ ಒಂದು ಸ್ಪಷ್ಟ ಚಿತ್ರ ಮೂಡುವ ಹೊತ್ತಿಗೆ ಪೂರ್ವ  ಕೆಂಪಾಗುತ್ತಿತ್ತು.
        ಬೆಳ್ಳಿಗ್ಗೆ ಎದ್ದು ಸ್ನಾನ ಕರ್ಮಾದಿಗಳನ್ನೆಲ್ಲ ಮುಗಿಸಿ ಮನೆಯವರಿಗೆ ಊರಿಗೆ ಹೊರಡುವದಾಗಿ ತಿಳಿಸಿದೆ. `ಎಷ್ಟೊಂದು ಅವಸರ ಇನ್ನೆರಡು ದಿನ ಇದ್ದು ಹೋಗಬಾರ್ದ' ಅಮ್ಮ ಆಕ್ಷೇಪಿಸಿದಳು. ಅಣ್ಣ ಸಣ್ಣ ಸಣ್ಣ ಮೂಟೆಗಳನ್ನೆಲ್ಲ ಒಂದು ಚೀಲಕ್ಕೆ ಸೇರಿಸಿ ತಂದಿಟ್ಟ. `ಅಣ್ಣ ಏನಿದೆಲ್ಲ' ಕೇಳಿದೆ. `ಅನಂತು ನೀನು ಕೆಲಸಕ್ಕೆ ಸೇರ್ದಾಗಿಂದ ನಮ್ಮಿಂದ ಯಾವ ಸಹಾಯನೂ ಕೇಳ್ದೊನಲ್ಲ. ಜಮೀನಿನಿಂದ ಬರೋ ಆದಾಯದಲ್ಲಿ ನಿನಗೂ ಕೊಡೋಣಾಂದ್ರೆ ಇತ್ತೀಚಿಗೆ ಆದಾಯ ಕಡಿಮೆಯಾಗ್ತಿದೆ. ನಿನಗೂ ಸಂಸಾರ ಇದೆ. ಒಲ್ಲ ಅನ್ಬೇಡ' ಅಣ್ಣನ ಮಾತಿನಲ್ಲಿ ಬೇಡಿಕೆಯಿತ್ತು. ಗಂಟಲುಬ್ಬಿ ಮಾತು ಹೊರಬರಲಿಲ್ಲ. ಅಪ್ಪ ಅಮ್ಮ ಅತ್ತಿಗೆಗೆ ನಮಸ್ಕರಿಸಿ ಅಣ್ಣನೊಡನೆ ಬಸ್ ಸ್ಟ್ಯಾಂಡ್ ಕಡೆ ಹೆಜ್ಜೆ ಹಾಕಿದೆ. ನಮ್ಮಿಬ್ಬರ ನಡುವೆ ಮೌನ ಹೆಪ್ಪುಗಟ್ಟಿತ್ತು. ಬಸ್ ಹೊರಡುವ ವೇಳೆ ಅಣ್ಣ ಹೇಳಿದ `ಇನ್ನೊಂದ್ಸಾರಿ ಹೆಂಡ್ತಿ ಮಗು ಜೊತೆ ಬಂದು ನಾಲ್ಕಾರು ದಿನ ಇದ್ದು ಹೋಗು ಅಂದ್ರೆ ಅಪ್ಪ ಅಮ್ಮನಿಗೂ ಸಂತೋಷವಾಗುತ್ತೆ'. ಬರ್ತೀನಿ ಎಂದು ಅಣ್ಣನಿಗೆ ನಮಸ್ಕರಿಸಿ ಯಾವುದಕ್ಕೂ ಇರಲಿ ಎಂದು ತಂದಿದ್ದ ಹತ್ತು ಸಾವಿರ ರೂಪಾಯಿಗಳನ್ನು ಕೈಗಿಟ್ಟು ` ಮುಂದಿನ ಸಾರಿ ಬರೋವಷ್ಟರಲ್ಲಿ ಮನೆ ಮತ್ತು ಜಮೀನು ನಿನ್ನ ಹೆಸರಲ್ಲಿ ಮಾಡೊದಕ್ಕೆ ಅಗತ್ಯವಾದ ಎಲ್ಲ ಕಾಗದ ಪತ್ರಗಳನ್ನೂ ತಂದಿಡು. ಬಂದು ಸಹಿ ಮಾಡ್ತಿನಿ' ಹೇಳಿದವನೆ ಬಸ್ ಹತ್ತಿದೆ. ಅಚ್ಚರಿಯಿಂದ ನೋಡುತ್ತಿದ್ದ ಅಣ್ಣ ಆ ಕ್ಷಣ ತನ್ನ ಇರುವಿಕೆಯನ್ನೇ ಮರೆತಂತಿತ್ತು. ಬಸ್ ಮುಂದೆ ಮುಂದೆ ಹೋಗುತ್ತಿದ್ದಂತೆ ಕೆಳಗೆ ನಿಂತು ಕೈ ಬೀಸುತ್ತಿದ್ದ ಅಣ್ಣನ ಚಿತ್ರ ಕಿರಿದಾಗುತ್ತ ಕೊನೆಗೆ ನೀರು ತುಂಬಿದ ಕಣ್ಣುಗಳಿಗೆ ಎಲ್ಲವೂ ಅಸ್ಪಷ್ಟವಾಗಿ ಕಾಣತೊಡಗಿತು.
       ಬಸ್ ಸ್ಟ್ಯಾಂಡಿನಲ್ಲಿ ಇಳಿದವನೇ ರಘುನ ನೋಡಲು ಹೊಟೆಲ್ ನ ಕಡೆ ಧಾವಿಸಿದೆ. ನನ್ನ ಬದುಕು ಮಹತ್ವದ ತಿರುವು ಪಡೆಯಲು ಕಾರಣನಾದ ಆ ಮಹಾಪುರುಷನನ್ನು ಕಂಡು ಅಭಿನಂದಿಸಬೇಕಾಗಿತ್ತು. ಸಂಬಂಧಗಳ ಮಹತ್ವವನ್ನು ತೋರಿಸಿಕೊಟ್ಟ ಅವನನ್ನು ಪೂಜಿಸಬೇಕಿತ್ತು. `ರಘು ರಘು' ಎಂದು ಕೂಗುತ್ತ ಒಳ ನಡೆದೆ. ಗಲ್ಲಾ ಪೆಟ್ಟಿಗೆಯ ಮೇಲೆ ಕುಳಿತಿದ್ದ ವ್ಯಕ್ತಿ ನನ್ನೆಡೆ ಬಂದು ಯಾರು ಬೇಕಿತ್ತು ಎಂದು ಕೇಳಿದ. ರಘುನಂದನ ಎಂದೆ. `ಇಲ್ಲ ಅವರು ಇವತ್ತು ಬೆಳಿಗ್ಗೆನೇ ಕೆಲಸ ಬಿಟ್ಟು ಬೇರೆ ಊರಿಗೆ ಹೊರಟು ಹೋದ್ರು' ಎಂದ. ನನಗೆ ನಿಂತ ನೆಲ ಕುಸಿಯುತ್ತಿರುವಂತೆ ಭಾಸವಾಯಿತು. ಎಲ್ಲ ಅನುಕೂಲವಿದ್ದು ಹೆಂಡತಿ ಮಾತು ಕೇಳಿ ಪಾಲು ಕೇಳಲು ಹೋದ ಸ್ವಾರ್ಥಿ  ನಾನು. ಇನ್ನೊಬ್ಬರ ಬದುಕಿಗಾಗಿ ಅವರ ಒಳಿತಿಗಾಗಿ ನಿಸ್ವಾರ್ಥದಿಂದ  ದುಡಿಯುತ್ತಿರುವ ರಘು. ನಮ್ಮಿಬ್ಬರ ನಡುವೆ ಹೋಲಿಕೆಯೇ ಸಲ್ಲದು. ಕ್ಷಣ ಕ್ಷಣಕ್ಕೂ ರಘು ಹೆಮ್ಮರವಾಗಿ ಬೆಳೆಯುತ್ತಿರುವಂತೆ ನಾನು ಅವನೆದುರು ತೀರ ಕುಬ್ಜನಾದಂತೆ ಅನ್ನಿಸಿ ಕಣ್ಣು ಕತ್ತಲಾವರಿಸಿ ಕುಸಿದು ಬಿದ್ದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Tuesday, May 3, 2016

ಅರುಣಾ ಶಾನಭಾಗ: ಸ್ತ್ರೀ ಶೋಷಣೆಯ ಇನ್ನೊಂದು ಮುಖ



     

                                   (೨೦೧೫, ಮೇ ೧೮ ರಂದು ಕೊನೆಯುಸಿರೆಳೆದ ಅರುಣಾ ಶಾನಭಾಗ)


                                          ಆಕಾಶದ ನೀಲಿಯಲ್ಲಿ
                                          ಚಂದ್ರ ತಾರೆ ತೊಟ್ಟಿಲಲ್ಲಿ
                                          ಬೆಳಕನಿಟ್ಟು ತೂಗಿದಾಕೆ
                                          ನಿನಗೆ ಬೇರೆ ಹೆಸರು ಬೇಕೆ
                                          ಸ್ತ್ರೀ ಅಂದರೆ ಅಷ್ಟೆ ಸಾಕೇ?
                                                                                   - ಜಿ. ಎಸ್. ಶಿವರುದ್ರಪ್ಪ

        ಸ್ತ್ರೀ ಶೋಷಿತಳು ಎನ್ನುವುದಕ್ಕೆ ಇತಿಹಾಸವೇ ಬಹುದೊಡ್ಡ ಸಾಕ್ಷಿ. ಇಲ್ಲಿ ಕಾನೂನಿನ ನಿಯಮಗಳು ಎಷ್ಟೇ ಕಠಿಣವಾಗಿದ್ದರೂ ಮಹಿಳೆಯನ್ನು ಶೋಷಣೆಯ ಪರಧಿಯಿಂದ ಹೊರತರಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಶೋಷಣೆಗೆ ಒಳಗಾಗುವ ಮಹಿಳೆ ಮಾನ ಮತ್ತು ಗೌರವಕ್ಕೆ ಹೆದರಿ ಕಾನೂನಿನ ನೆರವು ಪಡೆಯಲು ಮುಂದಾಗುತ್ತಿಲ್ಲವಾದ್ದರಿಂದ ಮಹಿಳಾ ಶೋಷಣೆ ಎನ್ನುವುದು ಅನೂಚಾನವಾಗಿ ಮುಂದುವರೆಯುತ್ತಿದೆ. ಈ ಸಂದರ್ಭ ಮಾಧ್ಯಮಗಳ ಪಾತ್ರವನ್ನು ನಾವು ಒಂದಿಷ್ಟು ಶ್ಲಾಘಿಸಲೇ ಬೇಕು. ಸ್ತ್ರೀ ದೌರ್ಜನ್ಯದ ಸಂದರ್ಭಗಳಲ್ಲೆಲ್ಲ ಪತ್ರಿಕಾ ಮಾಧ್ಯಮ ಕಾನೂನಿಗೆ ತನ್ನ ನೆರವನ್ನು ನೀಡುತ್ತ ಬಂದಿದೆ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಪತ್ರಿಕಾ ಮಾಧ್ಯಮದಲ್ಲಿ ತಂತ್ರಜ್ಞಾನದ ಬಳಕೆಯ ಪರಿಣಾಮ ಮಹಿಳೆಯರ ಮೇಲಿನ ದೌರ್ಜನ್ಯ ಬಹುಬೇಗ ಜನರನ್ನು ಹೋಗಿ ತಲುಪುತ್ತಿದೆ. ಹೀಗೆ ಸುದ್ದಿ ವಾಹಿನಿಗಳು ಮಹಿಳೆಯ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ಶೋಷಣೆಯನ್ನು ಜನರಿಗೆ ಒಯ್ದು ತಲುಪಿಸುತ್ತಿರುವ ಸಂದರ್ಭ ನನಗೆ ಅರುಣಾ ಶಾನಭಾಗ ಎನ್ನುವ ನತದೃಷ್ಟ ಹೆಣ್ಣು ಮಗಳು ನೆನಪಾಗುತ್ತಾಳೆ. ಒಂದು ವೇಳೆ ೧೯೭೦ ರ ದಶಕದಲ್ಲಿ ಸುದ್ದಿ ವಾಹಿನಿಗಳು ಈಗಿನಂತೆ ಕಾರ್ಯನಿರ್ವಹಿಸುತ್ತಿದ್ದರೆ   ಆ ಹತಭಾಗ್ಯಳಿಗೆ ನಿಜಕ್ಕೂ ನ್ಯಾಯ ದೊರೆಯುತ್ತಿತ್ತು.

             ಅದು ೨೦೧೧ ಪಿಂಕಿ ವಿರಾನಿ ಎನ್ನುವ ಮುಂಬೈ ಮೂಲದ ಪತ್ರಕರ್ತೆ ಕಿಂಗ್ಸ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಸುದೀರ್ಘ ೩೮ ವರ್ಷಗಳಿಂದ ಜೀವಂತ ಶವದಂತೆ ಬದುಕುತ್ತಿರುವ ಮಹಿಳೆಯ ದಯಾಮರಣಕ್ಕೆ ಅವಕಾಶ ಕೋರಿ ಸುಪ್ರೀಂ ಕೋರ್ಟ್ ಗೆ ಮೊರೆ ಹೋದಾಗ ಸುದ್ದಿ ವಾಹಿನಿಗಳು ಈ ವಿಷಯವನ್ನು ಅತಿ ಮುಖ್ಯ ಸುದ್ದಿಯಾಗಿ ಬಿತ್ತರಿಸಿದವು. ಸುಪ್ರೀಮ್ ಕೋರ್ಟ್ ಪಿಂಕಿ ವಿರಾನಿಗೂ ಮತ್ತು ಆ ಮಹಿಳೆಗೂ ಯಾವುದೇ ಸಂಬಂಧವಿಲ್ಲ ಎನ್ನುವ ಹಿನ್ನೆಲೆಯಲ್ಲಿ ಅರ್ಜಿಯನ್ನು ತಿರಸ್ಕರಿಸಿತು. ಆದರೂ ಈ ಸಂದರ್ಭ ನ್ಯಾಯಾಲಯ ಸುದೀರ್ಘ ಕಾಲ ಜೀವಚ್ಛವದಂತೆ ಬದುಕುತ್ತಿರುವ ವ್ಯಕ್ತಿಗಳಿಗೆ ಒದಗಿಸಲಾಗಿರುವ ಜೀವರಕ್ಷಕ ಸೌಲಭ್ಯಗಳಲ್ಲಿ ಭಾಗಶ: ಸೌಲಭ್ಯವನ್ನು ತೆಗೆದುಹಾಕಬಹುದೆನ್ನುವ ಮಹತ್ವದ ತೀರ್ಪನ್ನು ನೀಡಿತು. ಹೀಗೆ ಈ ದೇಶದಲ್ಲಿ ದಯಾಮರಣಕ್ಕೆ ಸಂಬಂಧಿಸಿದಂತೆ ಹೊಸ ಕಾಯ್ದೆಯೊಂದು ಜಾರಿಗೆ ಬರಲು ಕಾರಣಳಾದ ಮಹಿಳೆಯ ಜಾಡನ್ನು ಹಿಡಿದು ಹೊರಟ ಪತ್ರಕರ್ತರಿಗೆ ಆಗ ಎದುರಾದದ್ದೇ ಅರುಣಾ ಶಾನಭಾಗ ಎನ್ನುವ ನತದೃಷ್ಟ ಹೆಣ್ಣುಮಗಳ ಕಥೆ. ೧೯೭೩ ರಿಂದ ಮುಂಬೈನ ಕಿಂಗ್ಸ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಮಾಂಸದ ಮುದ್ದೆಯಂತೆ ಯಾವ ಪ್ರತಿಕ್ರಿಯೆಯೂ ತೋರದೆ ಜೀವಂತ ಶವದಂತೆ ಬದುಕುತ್ತಿದ್ದ  ಅರುಣಾ ಶಾನಭಾಗಳ ಕಥೆ ಮುಂದಿನ ದಿನಗಳಲ್ಲಿ ಪತ್ರಿಕೆಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪ್ರಸಾರವಾದಾಗಲೇ ಜನರಿಗೆ ಅಂಥದ್ದೊಂದು ಕರಾಳ ಘಟನೆಯ ಅರಿವಾಯಿತು.

             ಈ ಅರುಣಾ ಶಾನಭಾಗ ಮೂಲತ: ಕರ್ನಾಟಕದವರು. ಶಿವಮೊಗ್ಗ ಜಿಲ್ಲೆಯ ಹಳದೀಪುರ ಆಕೆಯ ಹುಟ್ಟೂರು. ಅರುಣಾ ಜನಿಸಿದ್ದು ೧೯೪೮ ಜೂನ್  ೧ ರಂದು. ಅರುಣಾಳ ತಂದೆ ರಾಮಚಂದ್ರ ಶಾನಭಾಗ ಸಣ್ಣ ವ್ಯಾಪಾರಿಯಾಗಿದ್ದರು. ಅವರಿಗೆ ಆರು ಗಂಡು ಮತ್ತು ಮೂರು ಹೆಣ್ಣು ಒಟ್ಟು ಒಂಬತ್ತು ಜನ ಮಕ್ಕಳು. ಬೆನ್ನು ಹತ್ತಿದ ಬಡತನ ಮತ್ತು ತುಂಬು ಸಂಸಾರದ ಕಾರಣ ರಾಮಚಂದ್ರ ಶಾನಭಾಗರ ಮಕ್ಕಳೆಲ್ಲ ಕಷ್ಟದಲ್ಲೇ ಬೆಳೆದರು. ಅರುಣಾ ಹತ್ತನೇ ತರಗತಿಯವರೆಗೆ ಹುಟ್ಟೂರಲ್ಲೇ ಶಿಕ್ಷಣ ಪಡೆದು ನರ್ಸ್ ತರಬೇತಿಗಾಗಿ ಮುಂಬೈನ ಕೆ ಇ ಎಮ್ ಆಸ್ಪತ್ರೆಯಲ್ಲಿ ಪ್ರವೇಶ ಪಡೆದರು. ತರಬೇತಿಯ ನಂತರ ಅದೇ ಆಸ್ಪತ್ರೆಯಲ್ಲಿ ನರ್ಸ್ ಎಂದು ನೇಮಕಾತಿ ಹೊಂದಿ ತಮ್ಮ ವೃತ್ತಿಯನ್ನಾರಂಭಿಸಿದ ಅರುಣಾ ವೃತ್ತಿಯಲ್ಲಿ ಮಹತ್ತರವಾದದ್ದನ್ನು ಸಾಧಿಸಬೇಕೆನ್ನುವ ಮಹತ್ವಾಕಾಂಕ್ಷಿಯಾಗಿದ್ದರು. ಅರುಣಾಳ ವೃತ್ತಿಪರತೆ ಮತ್ತು ಸೇವಾ ಮನೋಭಾವದಿಂದ ಆಕೆಯನ್ನು ಬಹುಬೇಗ ಎಲ್ಲರೂ ಗುರುತಿಸುವಂತಾಯಿತು. ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ತರುಣ ವೈದ್ಯ ಅರುಣಾಳ ಸರಳತೆ ಸದ್ಗುಣಕ್ಕೆ ಮಾರುಹೋಗಿ ಅವಳನ್ನು ಮದುವೆಯಾಗುವ ತನ್ನ ಮನದಾಸೆಯನ್ನು ಹೇಳಿಕೊಂಡ. ಅದೇ ಆಗ ವೃತ್ತಿಯನ್ನಾರಂಭಿಸಿ ಬದುಕಿನಲ್ಲಿ ಒಂದು ನೆಲೆ ಕಂಡು ಕೊಳ್ಳಲು ಪ್ರಯತ್ನಿಸುತ್ತಿದ್ದ ಅರುಣಾ ಆ ವೈದ್ಯನ ಬೇಡಿಕೆಗೆ ಸ್ಪಂದಿಸಿ ಭವಿಷ್ಯದ ಕನಸು ಕಾಣತೊಡಗಿದಳು. ಆ ಎರಡೂ ಮನೆಗಳ ಕಡೆಯಿಂದ ಅವರ ಮದುವೆಗೆ ಯಾವುದೇ ತಕರಾರುಗಳಿರಲಿಲ್ಲ. ಇಬ್ಬರೂ ಜೊತೆಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈಯುವ ಪಣ ತೊಟ್ಟರು. ೧೯೭೩ ರ ಡಿಸೆಂಬರ್ ನ ಒಂದು ದಿನ ಆತನೊಡನೆ ಸಪ್ತಪದಿ ತುಳಿಯುವ ಅರುಣಾಳ ನಿರ್ಧಾರಕ್ಕೆ ಮನೆಯವರು ಅಸ್ತು ಎಂದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಅರುಣಾ ಮದುವೆಯಾಗಿ ಪತಿಯೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಳು. ಆದರೆ ಕ್ರೂರ ವಿಧಿ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ೧೯೭೩ ನವೆಂಬರ್ ೨೭ ರಂದು ಆಸ್ಪತ್ರೆಯ ತನ್ನ ಕೆಲಸ ಮುಗಿಸಿ ಮನೆಗೆ ತೆರಳುವ ಮೊದಲು ಬಟ್ಟೆ ಬದಲಾಯಿಸುವ ವೇಳೆ ಆ ಒಂದು ಅಸಂಗತ ಘಟನೆ ನಡೆದು ಹೋಯಿತು. ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಕಸಗುಡಿಸುವಾತ ಅರುಣಾಳ ಮೇಲಿನ ಯಾವುದೋ ಹಳೆಯ ದ್ವೇಷದಿಂದ ಅವಳ ಬದುಕನ್ನೇ ಹೊಸಕಿ ಹಾಕಿದ. ಚೀರಲು ಬಾಯಿ ತೆರೆದವಳ ಕುತ್ತಿಗೆಗೆ ಸರಪಳಿಯಿಂದ ಬಿಗಿದ ಪರಿಣಾಮ ಆಕೆಯ ಮಿದುಳಿನ ರಕ್ತದ ಸಂಚಲನ ಸ್ಥಗಿತಗೊಂಡಿತು. ಮಿದುಳು ಯಾವ ಪ್ರತಿಕ್ರಿಯೆ ತೋರದೆ ನಿಷ್ಕ್ರಿಯಗೊಂಡಿತು. ಆಸ್ಪತ್ರೆಯ ಸಿಬ್ಬಂದಿ ಬಂದು ನೋಡಿದಾಗ ಅರುಣಾ ರಕ್ತದ ಮಡುವಿನಲ್ಲಿ ಜೀವಂತ ಶವದಂತೆ ಬಿದ್ದುಕೊಂಡಿದ್ದು ಕಾಣಿಸಿತು. ಆಕೆ ಉಸಿರಾಡುತ್ತಿದ್ದಳು ಆದರೆ ದೇಹ ಮಾತ್ರ ಮಾಂಸದ ಮೂಟೆಯಂತಾಗಿತ್ತು. ಆಸ್ಪತ್ರೆಯ ವೈದ್ಯರು ಅರುಣಾಳಿಗೆ ಅಗತ್ಯವಾದ ಎಲ್ಲ ಚಿಕಿತ್ಸೆಯನ್ನು ನೀಡಿ ಅವಳ ಪ್ರಾಣವನ್ನು ಉಳಿಸಿದರಾದರೂ ಆಕೆ ಮೊದಲಿನಂತಾಗಲಿಲ್ಲ. ಮಿದುಳಿನ ನಿಷ್ಕ್ರಿಯತೆ ಮತ್ತು ಪಾರ್ಶ್ವವಾಯುಗಳಿಂದಾಗಿ ಆಕೆ ಹಾಸಿಗೆಯ ಮೇಲೇ ಬದುಕು ಕಳೆಯುವಂತಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಉತ್ತಮ ದರ್ಜೆಯ ಆಸ್ಪತ್ರೆಗೆ ದಾಖಲಿಸಬೇಕೆನ್ನುವ ಆಲೋಚನೆ ಬಂದರೂ ಒಂದಿಷ್ಟು ಚಲಿಸಿದರೂ ಅರುಣಾಳ ಮೂಳೆಗಳು ಮುರಿದು ಪುಡಿಯಾಗುವ ಸಮಸ್ಯೆ ಎದುರಾಯಿತು. ಕೆ ಇ ಎಮ್ ಆಸ್ಪತ್ರೆಯಲ್ಲೇ ಅವಳು ಬದುಕಿರುವವರೆಗೆ ನೋಡಿಕೊಳ್ಳುವ ನಿರ್ಧಾರದಿಂದ ವಾರ್ಡ್ ನಂಬರ್ ನಾಲ್ಕನ್ನು ವಿಶೇಷವಾಗಿ ಸಿದ್ಧಪಡಿಸಲಾಯಿತು. ಈ ನಡುವೆ ಅವಳ ಸಂಬಂಧಿಕರು ಮತ್ತು ಸಹೋದರ ಸಹೋದರಿಯರು ನೋಡಲು ಬಂದರಾದರೂ ಯಾರೊಬ್ಬರೂ ಅವಳ ಆರೈಕೆಗೆ ಮುಂದಾಗಲಿಲ್ಲ. ಕೆಲವು ದಿನಗಳ ನಂತರ ಸಂಬಂಧಿಕರು ಬರುವುದೂ ಕಡಿಮೆಯಾಗಿ ಮುಂದೊಂದು ದಿನ ಅವರ ಆಗಮನ ಶಾಶ್ವತವಾಗಿ ನಿಂತು ಹೋಯಿತು.

              ಅರುಣಾ ಶಾನಭಾಗಳ ಅತಿ ಸಂಕಷ್ಟದ ಸಮಯದಲ್ಲಿ ಆಕೆಯ  ನೆರವಿಗೆ ಬಂದವರು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ದಾದಿಯರು. ಅವರೆಲ್ಲ ಒಟ್ಟಾಗಿ ನಿಂತು ಅರುಣಾ ಬದುಕಿರುವವರೆಗೆ ಮಗಳಂತೆ, ಸಹೋದರಿಯಂತೆ, ತಾಯಿಯಂತೆ ನೋಡಿಕೊಳ್ಳುವುದಾಗಿ ಪ್ರತಿಜ್ಞೆಗೈದರು. ಈ ಘಟನೆಯಾದ ಎಷ್ಟೋ ವರ್ಷಗಳ ನಂತರ ಆಸ್ಪತ್ರೆಗೆ ಹೊಸದಾಗಿ ಬಂದ ಡೀನ್ ಅರುಣಾಳನ್ನು ಅನಾಥಾಶ್ರಮಕ್ಕೆ ಸಾಗಿಸಲು ಪ್ರಯತ್ನಿಸಿದಾಗ ಆ ಸಂದರ್ಭ ಅದನ್ನು ವಿರೋಧಿಸಿ ಅರುಣಾ ಆಸ್ಪತ್ರೆಯಲ್ಲೇ ಉಳಿಯುವಂತೆ ಮಾಡಿದ್ದು ಇದೇ ದಾದಿಯರು. ಆ ದಾದಿಯರಿಗೆಲ್ಲ ವಾರ್ಡ್ ನಂಬರ್ ನಾಲ್ಕರಲ್ಲಿ ದಾಖಲಾಗಿದ್ದ ಕೇವಲ ರೋಗಿಯಾಗಿರಲಿಲ್ಲ. ವಾರ್ಡ್ ನಂಬರ್ ನಾಲ್ಕು ಮತ್ತು ಅರುಣಾಳೊಂದಿಗೆ ಅವರಿಗೆಲ್ಲ ಅದೊಂದು ರೀತಿಯ ಭಾವನಾತ್ಮಕ ಸಂಬಂಧವಿತ್ತು. ಅದಕ್ಕೆಂದೇ ಸುದೀರ್ಘ ೪೨ ವರ್ಷಗಳ ಕಾಲದ ಅವಳ ಆರೈಕೆಯಲ್ಲಿ ಅವರೆಂದೂ ಬೇಸರ ಮಾಡಿಕೊಳ್ಳಲಿಲ್ಲ. ಒಂದು ಮಗುವಿನಂತೆ ಅವರು ಅರುಣಾಳನ್ನು ಆಕೆ  ಬದುಕಿರುವಷ್ಟು ಕಾಲ ಆರೈಕೆ ಮಾಡಿದರು. ಸುದೀರ್ಘ ೪೨ ವರ್ಷಗಳ ಕಾಲ ಆಕೆ ಹಾಸಿಗೆಯ ಮೇಲೆಯೇ ಮಲಗಿಕೊಂಡಿದ್ದರೂ ಒಂದೇ ಒಂದು ಹಾಸಿಗೆ ಹುಣ್ಣು ಅವಳ ದೇಹವನ್ನು ಬಾಧಿಸಲಿಲ್ಲ. ಇದು      ಕೆ. ಇ. ಎಮ್  ಆಸ್ಪತ್ರೆಯ ದಾದಿಯರು ಅರುಣಾ ಶಾನಭಾಗಳಿಗೆ ಮಾಡಿದ ಆರೈಕೆ ಹಾಗೂ ಸೇವೆಗೊಂದು ಉತ್ಕೃಷ್ಟ ಉದಾಹರಣೆ. ಈ ನಡುವೆ ಅರುಣಾ ಚೇತರಿಸಿಕೊಳ್ಳಬಹುದೆನ್ನುವ ನಿರೀಕ್ಷೆಯಲ್ಲೇ ಆ ಆಸ್ಪತ್ರೆಯ ತರುಣ ವೈದ್ಯ ಹತ್ತು ವರ್ಷಗಳ ಕಾಲ ಆಕೆಗಾಗಿ ಕಾಯ್ದ. ಪ್ರತಿನಿತ್ಯ ವಾರ್ಡ್ ನಂಬರ್ ನಾಲ್ಕರ ಮುಂದೆ ನಿಂತು ಅರುಣಾ ಚೇತರಿಸಿಕೊಳ್ಳಲೆಂದು ದೇವರಲ್ಲಿ ಪ್ರಾರ್ಥಿಸಿದ. ಇಂದಲ್ಲ ನಾಳೆ ಅರುಣಾ ಗುಣಮುಖಳಾಗಬಹುದೆನ್ನುವ ಅವನ ಆಸೆ ಕೊನೆಗೂ ಆಸೆಯಾಗಿಯೇ ಉಳಿಯಿತು. ಅರುಣಾ ಮೊದಲಿನಂತಾಗಲಿಲ್ಲ. ಮನೆಯವರ, ಸ್ನೇಹಿತರ, ಬಂಧುಗಳ ಒತ್ತಡಕ್ಕೆ ಮಣಿದು ಹತ್ತು ವರ್ಷಗಳ ನಂತರ ಆ ವೈದ್ಯ ಬೇರೊಂದು ಹೆಣ್ಣನ್ನು ಮದುವೆಯಾಗಿ ತನ್ನ ಹೊಸ ಬದುಕನ್ನು ಕಟ್ಟಿಕೊಂಡ. ಅರುಣಾಳೆನೋ ಜೀವಂತ ಶವವಾಗಿ ಹಾಸಿಗೆ ಹಿಡಿದಳು ಆದರೆ ಅವಳನ್ನು ಆ ಸ್ಥಿತಿಗೆ ತಂದ ಪಾಪಿ ಕೇವಲ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿ ಹೊರಬಂದ. ದೆಹಲಿಯ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿ ಅವನೂ ತನ್ನ ಬದುಕನ್ನು ಕಟ್ಟಿಕೊಂಡ. ಆಸ್ಪತ್ರೆಯ ಆಡಳಿತ ಮಂಡಳಿ ದೂರು ದಾಖಲಿಸುವಲ್ಲಿ ಮಾಡಿದ ವಿಳಂಬ ಮತ್ತು ಅರುಣಾಳ ಗೌರವಕ್ಕೆ ಧಕ್ಕೆ ಬರಬಾರದೆಂಬ ಮುಂಜಾಗ್ರತೆಯಿಂದಾಗಿ ಆತನಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾಯಿತು. ಜೊತೆಗೆ ಪತ್ರಿಕಾ ಮಾಧ್ಯಮ ಈಗಿನಷ್ಟು ಆ ದಿನಗಳಲ್ಲಿ ಪ್ರಬಲವಾಗಿರದ ಕಾರಣ ಅರುಣಾಳ ಬದುಕಿನಲ್ಲಾದ ಅಸಂಗತ ಘಟನೆ ಬೆಳಕಿಗೆ ಬರದೇ ಹೋಯಿತು.

                  ಪಿಂಕಿ ವಿರಾನಿ ಎನ್ನುವ ಮುಂಬೈ ಮೂಲದ ಪತ್ರಕರ್ತೆ ಈ ಘಟನೆಯ ಬೆನ್ನು ಹತ್ತಿ ಪುಸ್ತಕ ಬರೆದಾಗಲೇ ಅರುಣಾಳ ಬದುಕಿನ ದುರಾದೃಷ್ಟ ಹಾಗೂ ಆಕೆ ಅನುಭವಿಸುತ್ತಿದ್ದ ನರಕಯಾತನೆಯ ಅರಿವು ನಮಗಾದದ್ದು. ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪಿಂಕಿ ವಿರಾನಿ ಮೂಲತ: ಗುಜರಾತ ರಾಜ್ಯದವರು. ಪತ್ರಿಕೋದ್ಯಮದ ಶಿಕ್ಷಣದ ನಂತರ ಪೂರ್ಣ ಪ್ರಮಾಣದ ಪತ್ರಕರ್ತೆಯಾಗಿ ಕೆಲಸ ಮಾಡಲಾರಂಭಿಸಿದ ಪಿಂಕಿ ವಿರಾನಿ ದೌರ್ಜನ್ಯಕ್ಕೊಳಗಾದ ಮಕ್ಕಳು ಮತ್ತು ಮಹಿಳೆಯರ ಪರ ಹೋರಾಟಗಾರ್ತಿಯಾಗಿಯೂ ಗುರುತಿಸಿಕೊಂಡಿರುವರು. ಪುರುಷ ಪ್ರಧಾನ ಸಮಾಜದ ದೌರ್ಜನ್ಯಕ್ಕೊಳಗಾದ ಮಹಿಳೆಯರ ಬದುಕಿನ ಸ್ಥಿತಿಗತಿಯನ್ನು ಅಧ್ಯಯನ ಮಾಡಲು ಪ್ರಾರಂಭಿಸಿದ ಆ ಘಳಿಗೆ ಅವರಿಗೆ ಅರುಣಾಳ ಬದುಕಿನ ದಾರುಣತೆ ಗೊತ್ತಾಯಿತು. ಕಿಂಗ್ಸ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಗೆ ಹೋಗಿ ನೋಡಿದಾಗ ಅರುಣಾ ಹಾಸಿಗೆಯ ಮೇಲೆ ಬಿದ್ದಿರುವ ಮಾಂಸದ ಮೂಟೆಯಂತೆ ಗೋಚರಿಸಿದಳು. ಸುದೀರ್ಘ ಕಾಲ ಯಾವ ಚಿಕಿತ್ಸೆಗೂ ಸ್ಪಂದಿಸದೆ ಬದುಕುತ್ತಿರುವ ಅರುಣಾಳನ್ನು ನೋಡಿದ ಆ ಘಳಿಗೆ ಪಿಂಕಿ ವಿರಾನಿಗೆ ಜೀವಂತ ಶವವೊಂದನ್ನು ನೋಡಿದ ಅನುಭವವಾಯಿತು. ಆಸ್ಪತ್ರೆಯಲ್ಲಿನ ದಾಖಲೆಗಳು, ಕೋರ್ಟಿನ ತೀರ್ಪು, ಅವಳ ಹುಟ್ಟಿದೂರು, ಬಂಧುಗಳು, ಸ್ನೇಹಿತರು ಈ ಎಲ್ಲ ಕಡೆಯಿಂದ ಮಾಹಿತಿ ಕಲೆಹಾಕಿ ಟಿಪ್ಪಣಿ ಮಾಡಿದಾಗ ಅದೊಂದು ಪುಸ್ತಕದ ರೂಪತಾಳಿತು. ಹೀಗೆ ೧೯೯೮ ರಲ್ಲಿ ಪಿಂಕಿ ವಿರಾನಿ ಬರೆದ 'ಅರುಣಾಸ್ ಸ್ಟೋರಿ' ಎನ್ನುವ ಪುಸ್ತಕ ಅರುಣಾ ಶಾನಭಾಗಳ ದುರಂತಮಯ ಬದುಕನ್ನು ಅನಾವರಣಗೊಳಿಸಿತು. ೧೯೯೮ ರಿಂದ ಅರುಣಾಳಿಗೆ ಹತ್ತಿರವಾದ ಪತ್ರಕರ್ತೆ ಪಿಂಕಿ ವಿರಾನಿ ಆಕೆಗೊಂದು ಸುಖದ ಸಾವನ್ನು ತಂದುಕೊಡಲು ಇನ್ನಿಲ್ಲದಂತೆ ಪ್ರಯತ್ನಿಸಿದರು. ಅನ್ಯರಾಷ್ಟ್ರಗಳಲ್ಲಿ ಜಾರಿಯಲಿರುವ  ದಯಾಮರಣ ಎನ್ನುವ ಕಾಯ್ದೆಯ ಎಳೆಯನ್ನು ಹಿಡಿದು ೨೦೧೧ ರಲ್ಲಿ ಸುಪ್ರೀಮ್ ಕೋರ್ಟ್ ನ ಮೊರೆಹೋದ ಆಕೆ ಅರುಣಾ ಶಾನಭಾಗಗೆ ದಯಾಮರಣ ನೀಡುವಂತೆ ಅರ್ಜಿ ಸಲ್ಲಿಸಿದರು. ಇದೆ ಸಂದರ್ಭ ಕೆ ಇ ಎಮ್ ಆಸ್ಪತ್ರೆಯ ದಾದಿಯರು ಪಿಂಕಿ ವಿರಾನಿ ವಿರುದ್ಧ ಪ್ರತಿಭಟನೆಗಿಳಿದರು. ಅರುಣಾ ಬದುಕಿರುವವರೆಗೆ ಆಕೆಯ ಆರೈಕೆಯ ಹೊಣೆ ನಮ್ಮದು ಅವಳೆಂದೂ ನಮಗೆ ಭಾರವಾಗಿಲ್ಲ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಬೇಕೆಂದು ಮನವಿ ಮಾಡಿದರು. ಆದರೆ ಪಿಂಕಿ ವಿರಾನಿಯದು ಅರುಣಾಳನ್ನು ನರಕಯಾತನೆಯಿಂದ ಬಿಡುಗಡೆಗೊಳಿಸುವ ಪ್ರಯತ್ನವಾಗಿತ್ತು. ಸುಪ್ರೀಮ್ ಕೋರ್ಟ್ ದಯಾಮರಣ ಕೋರಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿ ಪಿಂಕಿ ವಿರಾನಿಗೂ ಮತ್ತು ಅರುಣಾ ಶಾನಭಾಗಳಿಗೂ ಏನು ಸಂಬಂಧ ಎಂದು ಪ್ರಶ್ನಿಸಿತು. ಆದರೆ ಇದೆ ಸಂದರ್ಭ ಸುಪ್ರೀಮ್ ಕೋರ್ಟ್ ಅಗತ್ಯವಾದ ಜೀವ ಸೌಲಭ್ಯ ರಕ್ಷಕಗಳನ್ನು ಬೇಕಾದರೆ ಕಡಿಮೆ ಮಾಡಬಹುದೆನ್ನುವ ಮಹತ್ವದ ತೀರ್ಪನ್ನು ನೀಡಿತು. ಪರಿಣಾಮವಾಗಿ ಆಸ್ಪತ್ರೆಯ ದಾದಿಯರ ವಿರೋಧದ ನಡುವೆಯೂ ನಾಲ್ಕು ವರ್ಷಗಳ ಹಿಂದೆ ಅರುಣಾ ಶಾನಭಾಗಳಿಗೆ ನೀಡುತ್ತಿದ್ದ ಚಿಕಿತ್ಸೆಯನ್ನು ನಿಲ್ಲಿಸಲಾಯಿತು. ದೀರ್ಘ ೪೨ ವರ್ಷಗಳ ಕಾಲ ಕೋಮಾದಲ್ಲಿದ್ದ ಅರುಣಾಳ ಬದುಕು ೨೦೧೫ ಮೇ ೧೮ ರಂದು ಅಂತ್ಯಗೊಂಡಿತು. ಕೆ ಇ ಎಮ್ ಆಸ್ಪತ್ರೆಯ ದಾದಿಯರು, ವೈದ್ಯರು ಮತ್ತು ಸಿಬ್ಬಂದಿ ಅರುಣಾಳನ್ನು ಕಳೆದುಕೊಂಡು ರೋಧಿಸಿದರು. 'ಸತ್ತು ಬದುಕಿದ ಅರುಣಾ ಇವತ್ತು ಕಾನೂನು ಬದ್ಧವಾಗಿ ಸತ್ತು ಹೋದಳು. ಸಾಯುವ ದಿನದವರೆಗೂ ಅವಳಿಗೆ ನ್ಯಾಯ ದೊರೆಯಲಿಲ್ಲ' ಎಂದು ಪಿಂಕಿ ವಿರಾನಿ ಅರುಣಾ ಸಾವಿಗೆ ಪ್ರತಿಕ್ರಿಯಿಸಿದರು.

              ವಿಚಿತ್ರ ಮತ್ತು ವಿಪರ್ಯಾಸವೆಂದರೆ ೧೯೭೩ ರಲ್ಲಿ ಅರುಣಾ ಶಾನಭಾಗ ಮೇಲೆ ಹೀಗೊಂದು ದೌರ್ಜನ್ಯ ನಡೆದಾಗ ಆಗ ಭಾರತದಲ್ಲಿ ಮಹಿಳಾ ಪ್ರಧಾನ ಮಂತ್ರಿಯ ಆಡಳಿತವಿತ್ತು. ಆಗಲೇ ಸ್ತ್ರೀ ಶೋಷಣೆಯ ವಿರುದ್ಧ ಕಠಿಣ ಕಾನೂನು ರೂಪುಗೊಳ್ಳಬೇಕಿತ್ತು. ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕಿತ್ತು. ಮಹಿಳೆಯನ್ನು ಶೋಷಣೆಯ ಪರಧಿಯಿಂದ ಹೊರತರುವ ಅನೇಕ ಪ್ರಯತ್ನಗಳು ನಡೆಯಬೇಕಿತ್ತು. ಆದರೆ ಅರುಣಾಳ ದುರಂತಮಯ ಬದುಕು ನಮ್ಮನ್ನಾಳುವವರಿಗೆ ಯಾವತ್ತೂ ಎಚ್ಚರಿಕೆಯ ಘಂಟೆಯಾಗಲೇ ಇಲ್ಲ. ಒಂದು ವೇಳೆ ಪ್ರಯತ್ನಗಳೆನಾದರೂ ನಡೆದಿದ್ದಲ್ಲಿ ಇವತ್ತು ನಿರ್ಭಯಾಳಂಥ ಅಮಾಯಕರು ದೌರ್ಜನ್ಯಕ್ಕೆ ಬಲಿಯಾಗುತ್ತಿರಲಿಲ್ಲ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ