Thursday, June 26, 2014

ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳು

           







         







         




               ಈ ವರ್ಷ ವೈದ್ಯಕೀಯ ಕೋರ್ಸಿಗೆ ಪ್ರವೇಶ ಪಡೆಯಲು ಬಯಸುತ್ತಿರುವ ವಿದ್ಯಾರ್ಥಿಗಳ ಮನಸ್ಸು ಗೊಂದಲದ ಗೂಡಾಗಿದೆ. ಇದಕ್ಕೆ ಕಾರಣಗಳಿಲ್ಲದಿಲ್ಲ. ಅತ್ಯಂತ ಪ್ರಮುಖ ಕಾರಣಗಳಲ್ಲೊಂದೆಂದರೆ ಅದು ಈ ವರ್ಷ ಪ್ರಾರಂಭವಾಗಬೇಕಿದ್ದ ಆರು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಭಾರತೀಯ ವೈದ್ಯಕೀಯ ಮಂಡಳಿಯಿಂದ ಅನುಮತಿ ದೊರೆಯದಿರುವುದು. ಒಂದು ವೇಳೆ ಅನುಮತಿ ಪಡೆಯುವಲ್ಲಿ ಕಾಲೇಜುಗಳು ಯಶಸ್ವಿಯಾಗಿರುತ್ತಿದ್ದರೆ ಆಗ ೫೧೦ ವೈದ್ಯಕೀಯ ಸೀಟುಗಳು ಹೆಚ್ಚಳವಾಗಿ ಲಭ್ಯವಾಗುತ್ತಿದ್ದವು. ಆರು ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಈ ಶೈಕ್ಷಣಿಕ ವರ್ಷದಿಂದಲೇ ಆರಂಭಗೊಳ್ಳಬಹುದೆನ್ನುವ ಆಕಾಂಕ್ಷೆಯಿಂದ ಪ್ರವೇಶ ಪರೀಕ್ಷೆಯನ್ನು ಬರೆದು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಈಗ ಭ್ರಮನಿರಸನವಾಗಿದೆ. ಭಾರತೀಯ ವೈದ್ಯಕೀಯ ಮಂಡಳಿ ಅನುಮತಿ ನಿರಾಕರಿಸಿದ್ದರ ಪರಿಣಾಮ ರಾಜ್ಯದಲ್ಲಿ ವೈದ್ಯಕೀಯ ವಿಭಾಗದಲ್ಲಿ ೬೦೦೦ rank ಗಳಿಸಿದ್ದ ವಿದ್ಯಾರ್ಥಿನಿಯೋರ್ವಳು ತನಗೆ ವೈದ್ಯಕೀಯ ಸೀಟು ದೊರೆಯುವುದಿಲ್ಲ ಎಂದು ಗೊತ್ತಾಗಿ ಆತ್ಮಹತ್ಯೆಗೆ ಶರಣಾಗಿರುವಳು. ನಿಜಕ್ಕೂ ಇದು ಆತಂಕದ  ಮತ್ತು ಪಾಲಕರು ತಮ್ಮ ಮಕ್ಕಳ ಭವಿಷ್ಯದ ಕುರಿತು ಯೋಚಿಸಬೇಕಾದ ಸಂಗತಿ. ಇಂಥದ್ದೊಂದು ಘಟನೆ ನಡೆದ ಹಿನ್ನೆಲೆಯಲ್ಲಿ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರು ಆರು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡುವಂತೆ ಭಾರತೀಯ ವೈದ್ಯಕೀಯ ಮಂಡಳಿಯನ್ನು ಸರ್ಕಾರದ ಮಟ್ಟದಲ್ಲಿ ಒತ್ತಾಯಿಸುವುದಾಗಿ ಭರವಸೆಯ ಮಾತುಗಳನ್ನಾಡಿರುವರು. 

              ಉಲ್ಲೇಖಿಸಲೇ ಬೇಕಾದ ಇನ್ನೊಂದು ವಿಷಯವೆಂದರೆ ಭಾರತೀಯ ವೈದ್ಯಕೀಯ ಮಂಡಳಿಯೇ ಹೇಳಿಕೊಂಡಂತೆ ಈ ವರ್ಷ ಪ್ರತಿಶತ ೩೨ ರಷ್ಟು ವೈದ್ಯಕೀಯ ಸೀಟುಗಳನ್ನು ಕಡಿತಗೊಳಿಸಲಾಗಿದೆ. ಇದಕ್ಕೆ ಮಂಡಳಿಯು ನೀಡುವ ಕಾರಣ ರಾಷ್ಟ್ರದಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದಾಗಿದೆ. ಹೀಗೆ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಮುಂದಾದ ಭಾರತೀಯ ವೈದ್ಯಕೀಯ ಮಂಡಳಿ ಈ ವರ್ಷ ತಾನು ಪರಿಶೀಲಿಸಿದ ಬಹುತೇಕ ಕಾಲೇಜುಗಳಲ್ಲಿನ ವೈದ್ಯಕೀಯ ಸೀಟುಗಳನ್ನು ಕಡಿತಗೊಳಿಸಿದೆ. ಉದಾಹರಣೆಗೆ ೨೦೦ ಸೀಟುಗಳನ್ನು ಹೊಂದಿರುವ ಕಾಲೇಜುಗಳಲ್ಲಿ ಪ್ರವೇಶ ಮಿತಿಯನ್ನು ೧೫೦ ಕ್ಕೂ, ೧೫೦ ಸೀಟುಗಳಿದ್ದರೆ ಅಲ್ಲಿ ಪ್ರವೇಶ ಮಿತಿಯನ್ನು ೧೦೦ ಕ್ಕೂ ಸೀಮಿತಗೊಳಿಸಿದೆ. ಹೀಗಾಗಿ ಈ ಶೈಕ್ಷಣಿಕ ವರ್ಷ ಬಹಳಷ್ಟು ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳನ್ನು ಕಡಿಮೆಗೊಳಿಸಿ ಆದೇಶ ಹೊರಡಿಸಲಾಗಿದೆ. ಪತ್ರಿಕೆಯೊಂದರ ಸಮೀಕ್ಷೆಯ ಪ್ರಕಾರ ಒಟ್ಟು  ೧೬೦೦೦ ವೈದ್ಯಕೀಯ ಸೀಟುಗಳನ್ನು ಈ ವರ್ಷ ಕಡಿತಗೊಳಿಸಲಾಗಿದೆ. ಕರ್ನಾಟಕ ರಾಜ್ಯ ಒಂದರಲ್ಲೇ ಈ ಸಂಖ್ಯೆ ೧೪೫೦ ನ್ನು ದಾಟಲಿದೆ. ಈಗಾಗಲೇ ರಾಷ್ಟ್ರದಲ್ಲಿ ವೈದ್ಯ ಮತ್ತು ರೋಗಿಗಳ ನಡುವಣ ಅನುಪಾತದ ಸರಾಸರಿ ಅತ್ಯಂತ ಕಡಿಮೆ ಇರುವುದರಿಂದ ಭಾರತೀಯ ವೈದ್ಯಕೀಯ ಮಂಡಳಿಯ ಈ ಕಠಿಣ ನಿರ್ಧಾರ ಆ ಅಂತರವನ್ನು ಮತ್ತಷ್ಟು ಹೆಚ್ಚಿಸಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ನೇಮಕಾತಿ ಸರ್ಕಾರಕ್ಕೆ ಅತ್ಯಂತ ಕಠಿಣ ಸವಾಲಿನ ವಿಷಯವಾಗಿರುವುದರಿಂದ ವೈದ್ಯಕೀಯ ಸೀಟುಗಳ ಕಡಿತ ಈ ಒಂದು ಸವಾಲನ್ನು ಇನ್ನಷ್ಟು ಕಠಿಣಗೊಳಿಸಲಿದೆ. 

                 ಹೀಗೆ ವೈದ್ಯಕೀಯ ಶಿಕ್ಷಣದ ಗುಣಮಟ್ಟದ ನೆಪವೊಡ್ಡಿ ವೈದ್ಯಕೀಯ ಸೀಟುಗಳನ್ನು ಕಡಿಮೆ ಮಾಡುತ್ತಿರುವುದು ಅದು ನೇರವಾಗಿ ಪ್ರತಿಭಾವಂತ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ. ರಾಜ್ಯದಲ್ಲಿ ಈಗಿರುವ ಸರ್ಕಾರಿ ಸೀಟುಗಳ ಸಂಖ್ಯೆ ೧೮೦೩ ಮಾತ್ರ. ಅವುಗಳಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ದೊರೆಯುವ ಸೀಟುಗಳ ಸಂಖ್ಯೆ ೫೪೨. ಉಳಿದ ಸೀಟುಗಳನ್ನು ಹಿಂದುಳಿದ ಜಾತಿ ಮತ್ತು ಪಂಗಡದ, ವಿಶೇಷ ಕೋಟಾದಡಿ ಬರುವ ಹಾಗೂ ಹೈದರಾಬಾದ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗಾಗಿ ಮೀಸಲಾಗಿಡಲಾಗಿದೆ. ಸಾಮಾನ್ಯ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ಕೇವಲ ೫೪೨ ಸೀಟುಗಳ ಪರಿಮಿತಿಯಲ್ಲೇ ವೈದ್ಯಕೀಯ ಕೋರ್ಸಿನ ಪ್ರವೇಶಕ್ಕಾಗಿ ಪ್ರಯತ್ನಿಸಬೇಕು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳೆಂದ ಮಾತ್ರಕ್ಕೆ ಅವರು ಜಾತಿಯೊಂದಿಗೆ ಆರ್ಥಿಕವಾಗಿಯೂ ಪ್ರಬಲರು ಎನ್ನುವ ನಿರ್ಣಯಕ್ಕೆ ಬರುವುದು ಆತುರದ ನಿರ್ಧಾರವಾಗುತ್ತದೆ. ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವುದರಿಂದ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಸೀಟನ್ನು ಪಡೆದ ಅದೆಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ೪೫,೦೦೦ ರೂಪಾಯಿಗಳ ಶುಲ್ಕವನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ನನ್ನ ಗಮನಕ್ಕೆ ಬಂದಿರುವ ಸಂಗತಿ. ಪರಿಸ್ಥಿತಿ ಹೀಗಿರುವಾಗ ನಮ್ಮ ರಾಜ್ಯದ ಆರ್ಥಿಕವಾಗಿ ದುರ್ಬಲರಾದ ಪ್ರತಿಭಾವಂತ ವಿದ್ಯಾರ್ಥಿಗಳು ಕಾಮೆಡ್-ಕೆ ಮೂಲಕವಾಗಲಿ ಇಲ್ಲವೇ ಮ್ಯಾನೆಜಮೆಂಟ್ ಮೂಲಕವಾಗಲಿ  ನಿಗದಿಪಡಿಸಿದ ದುಬಾರಿ ಶುಲ್ಕವನ್ನು ಭರಿಸಿ ವೈದ್ಯಕೀಯ ಕೋರ್ಸಿಗೆ ಪ್ರವೇಶ ಪಡೆಯುವುದು ದೂರದ ಮಾತು.  ಒಂದೆಡೆ ಸರ್ಕಾರಿ ಸೀಟುಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಇನ್ನೊಂದೆಡೆ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಕಾಲೇಜುಗಳು ನಡುವೆ ಹಟಕ್ಕೆ ಬಿದ್ದಂತೆ ವರ್ತಿಸುತ್ತಿರುವ ವೈದ್ಯಕೀಯ ಮಂಡಳಿ ಈ ಎಲ್ಲ ಸಮಸ್ಯೆಗಳ ನಡುವೆ ಸಿಲುಕಿ ನರಳುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವರು. ನಮ್ಮನ್ನಾಳುವ ರಾಜಕಾರಣಿಗಳಿಗಾಗಲಿ ಮತ್ತು ವೈದ್ಯಕೀಯ ಮಂಡಳಿಯಲ್ಲಿನ ಕಾನೂನು ನಿರ್ಮಾತೃರಿಗಾಗಲಿ ಈ ಬಿಸಿ ತಟ್ಟದೆ ಇರಬಹುದು ಆದರೆ ಪಾಲಕರಿಗಂತೂ ಇದೊಂದು ಬಹುಮುಖ್ಯ ಸಮಸ್ಯೆಯಾಗಿ ಪರಿಣಮಿಸಿದೆ.

             ಇಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡಲೇ ಬೇಕೆನ್ನುವುದು  ನನ್ನ ವಾದವಲ್ಲ. ಆದರೆ ಹೀಗೆ ಅನುಮತಿಗೆ ನಿರಾಕರಿಸುತ್ತಿರುವ ಮಂಡಳಿ ಅದಕ್ಕೆ ಕೊಡುತ್ತಿರುವ ಕಾರಣಗಳು ತೀರ ಸಣ್ಣ ಸಂಗತಿಗಳಾಗಿರುವುದು ನಾವು ಯೋಚಿಸಬೇಕಾದ ವಿಷಯ. ಪರಿಶೀಲನೆಗೆ ಒಳಪಟ್ಟ ಎಲ್ಲ ವೈದ್ಯಕೀಯ ಕಾಲೇಜುಗಳನ್ನು ಭಾರತೀಯ ವೈದ್ಯಕೀಯ ಮಂಡಳಿ ಒಂದೇ ಸಮನಾಗಿ ನೋಡುತ್ತಿದೆ. ಕೇವಲ ವಿದ್ಯಾರ್ಥಿಗಳ ಪ್ರವೇಶವನ್ನೇ ತನ್ನ ಆದಾಯದ ಮೂಲವಾಗಿಟ್ಟುಕೊಂಡ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಗಣನೀಯವಾಗಿರಬಹುದು. ಅಂಥ ವೈದ್ಯಕೀಯ ಕಾಲೇಜುಗಳು ವೈದ್ಯಕೀಯ ಮಂಡಳಿಯ ನೀತಿ ನಿಯಮಗಳಿಗನ್ವಯವಾಗುವಂತೆ ಕಾರ್ಯನಿರ್ವಹಿಸದೇ ಇರಬಹುದು. ಆಗ ಮಂಡಳಿಯು ಅನುಮತಿ ನಿರಾಕರಿಸುವುದು ಎಲ್ಲರೂ ಒಪ್ಪತಕ್ಕ ಮಾತು.  ಹಾಗೆಂದ ಮಾತ್ರಕ್ಕೆ ಎಲ್ಲ ವೈದ್ಯಕೀಯ ಕಾಲೇಜುಗಳು ಅನುಮತಿ ನಿರಾಕರಣೆಗೆ ಅರ್ಹವಾದವುಗಳೆಂಬ ನಿರ್ಧಾರಕ್ಕೆ  ಬಂದು ನಿಲ್ಲುವುದು ಸರಿಯಲ್ಲ. ಜೊತೆಗೆ ವೈದ್ಯಕೀಯ ಮಂಡಳಿ ಪುನರ್ ಪರಿಶೀಲನೆಗೆ ಅವಕಾಶವೇ ಕೊಡದಂತೆ ಕೊನೆಯ ಕ್ಷಣಗಳಲ್ಲಿ ತನ್ನ ನಿರ್ಧಾರ ಪ್ರಕಟಿಸುತ್ತಿದೆ. ಇರಲಿ ಖಾಸಗಿ ಸಂಸ್ಥೆಗಳಿಗೆ ಅನುಮತಿ ನಿರಾಕರಿಸುತ್ತಿರುವುದರ ಹಿಂದೆ ಮಂಡಳಿಯ ಪ್ರಾಮಾಣಿಕ ಕಾಳಜಿ ಇದೆ ಎಂದು ಅಂದುಕೊಳ್ಳೋಣ. ಏಕೆಂದರೆ ಖಾಸಗಿ ಸಂಸ್ಥೆಗಳಲ್ಲಿನ ಸೀಟುಗಳನ್ನು ಕಡಿತಗೊಳಿಸುವುದರ ಹಿಂದೆ ಆರ್ಥಿಕ ಲಾಭವೆಂಬ ಒಂದು ಪ್ರಬಲ ಕಾರಣವಿರಬಹುದು. ಆದರೆ ಅದೇ ಮಾನದಂಡವನ್ನು ಸರ್ಕಾರಿ ಕಾಲೇಜುಗಳಿಗೂ ಅನ್ವಯಿಸುತ್ತಿರುವುದು ಅದು ಸಾಮಾಜಿಕ ನ್ಯಾಯದ ದೃಷ್ಥಿಯಿಂದ ನ್ಯಾಯೋಚಿತವಾದ ನಿರ್ಧಾರವಲ್ಲ.

         ಈ ಸಂದರ್ಭ ಗಮನಿಸಬೇಕಾದ ಇನ್ನೊಂದು ಮಹತ್ವದ  ಸಂಗತಿ ಎಂದರೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲದೆ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಪ್ರತಿಶತ ೪೦ ರಷ್ಟು ಸೀಟುಗಳನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಕಾಯ್ದಿರಿಸಿದ್ದು ಸ್ವಾಗತಾರ್ಹ ಕ್ರಮ. ಆದರೆ ಇದೇ ಸಂದರ್ಭ ಅನೇಕ ವೈದ್ಯಕೀಯ ಕಾಲೇಜುಗಳು ಡೀಮ್ಡ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದು ಸರ್ಕಾರದ ಈ ಒಂದು ಸೀಟು ಹಂಚುವಿಕೆಯ ನಿಯಮದಿಂದ ನುಣುಚಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು ಅತ್ಯಂತ ದುರಾದೃಷ್ಟಕರ ಸಂಗತಿಗಳಲ್ಲೊಂದು. ಹೀಗೆ ಖಾಸಗಿ ವೈದ್ಯಕೀಯ ಕಾಲೇಜುಗಳು ಡೀಮ್ಡ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆಯುವುದರೊಂದಿಗೆ ಸಹಜವಾಗಿಯೇ ಸರ್ಕಾರಿ ವೈದ್ಯಕೀಯ ಸೀಟುಗಳ ಸಂಖ್ಯೆ ಕ್ಷೀಣಿಸುತ್ತದೆ. ಇತ್ತ ಭಾರತೀಯ ವೈದ್ಯಕೀಯ ಮಂಡಳಿ ಸರ್ಕಾರಿ ಕಕ್ಷೆಯಲ್ಲಿ ಬರುವ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಮತ್ತು ನೇರವಾಗಿ ಸರ್ಕಾರದ ಅಧಿನಕ್ಕೊಳಪಟ್ಟ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳನ್ನು ಕಡಿತಗೊಳಿಸುತ್ತಿರುವುದರಿಂದ ಸಹಜವಾಗಿಯೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಜೊತೆಗೆ ರಾಜ್ಯ ಸರ್ಕಾರ ಹೊಸದಾಗಿ ಪ್ರಾರಂಭಿಸಲು ಯೋಜನೆ ರೂಪಿಸಿದ್ದ ಆರು ಕಾಲೇಜುಗಳಿಗೆ ಅನುಮತಿಯನ್ನು ಸಾರಾಸಗಟಾಗಿ ನಿರಾಕರಿಸಿರುವುದರಿಂದ ಆ ಹೆಚ್ಚುವರಿ ಸೀಟುಗಳ ಮೂಲಕವೂ ಪ್ರವೇಶ ಪಡೆಯುವ ಭಾಗ್ಯ ವಿದ್ಯಾರ್ಥಿಗಳಿಗೆ ಇಲ್ಲವಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳ ವಿಷಯವಾಗಿ ಭಾರತೀಯ ವೈದ್ಯಕೀಯ ಮಂಡಳಿಗೆ ಮೃದು ಧೋರಣೆ ಇದೆ ಎಂಬ ಭಾವನೆ ಈಗ ಸುಳ್ಳು ಎಂದೆನಿಸುತ್ತಿದೆ. ಸಾಮಾನ್ಯವಾಗಿ ಸರ್ಕಾರಿ ಕಾಲೇಜುಗಳಿಗೆ ಅನುಮತಿ ನೀಡಿ ಆ  ಮೂಲಕ ಆರ್ಥಿಕವಾಗಿ ಮತ್ತು ಜಾತಿ ಆಧಾರಿತವಾಗಿ ಹಿಂದುಳಿದ ಪ್ರತಿಭಾವಂತ ಮಕ್ಕಳಿಗೆ ಕಡಿಮೆ ಹಣದಲ್ಲಿ ವೈದ್ಯಕೀಯ ಶಿಕ್ಷಣವನ್ನು ಒದಗಿಸಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯ ಬೇಕಿದ್ದ ವೈದ್ಯಕೀಯ ಮಂಡಳಿ ನೇರವಾಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದೆ. ಜೊತೆಗೆ ವೈದ್ಯ ಮತ್ತು ರೋಗಿಗಳ ನಡುವಣ ಸಂಖ್ಯೆಯ ಅಂತರವನ್ನು  ಸಹ ಹೆಚ್ಚಿಸುತ್ತಿದೆ.

        ಇದೇ ಸಂದರ್ಭ ರಾಜ್ಯದ ಸರ್ಕಾರಿ ಕಕ್ಷೆಯಲ್ಲಿ ಬರುವ ಒಟ್ಟು ವೈದ್ಯಕೀಯ ಸೀಟುಗಳಲ್ಲಿ ೪೮೯ ಸೀಟುಗಳನ್ನು ಹೈದರಾಬಾದ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗಾಗಿ ಮೀಸಲಾಗಿಡಲಾಗಿದೆ. ಇದು ಇತರ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ವೈದ್ಯಕೀಯ ಸೀಟುಗಳು ಗಮನಾರ್ಹ ಸಂಖ್ಯೆಯಲ್ಲಿ ಕಡಿತಗೊಂಡಿರುವ ಹೊತ್ತಿನಲ್ಲೇ ಇಂಥದ್ದೊಂದು ಮೀಸಲಾತಿ ಇತರ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳ ರೋಷಕ್ಕೆ ಕಾರಣವಾಗುವುದು ಸಹಜವಾದ ಸಂಗತಿ. ಹೀಗೆ ಒಂದು ಭೌಗೋಳಿಕ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಿಕೊಡುತ್ತಿರುವ ಹೊತ್ತಿನಲ್ಲೇ ಅದು ಇನ್ನಿತರ ಭೌಗೋಳಿಕ ವ್ಯಾಪ್ತಿಯಲ್ಲಿನ ವಿದ್ಯಾರ್ಥಿಗಳ ಅವಕಾಶವನ್ನು ಕಸಿದುಕೊಂಡಂತೆ ಎನ್ನುವ ಸಂಗತಿ ನಮ್ಮ ರಾಜಕೀಯ ನಾಯಕರುಗಳಿಗೆ ಮತ್ತು ವೈದ್ಯಕೀಯ ಮಂಡಳಿಯಲ್ಲಿನ ಕಾನೂನು ಪಂಡಿತರಿಗೆ ಅರ್ಥವಾಗಬೇಕಿತ್ತು.  ಸಾಕಷ್ಟು ಪ್ರಮಾಣದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿ ಹೈದರಾಬಾದ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸಿದಲ್ಲಿ ಉಳಿದ ವಿದ್ಯಾರ್ಥಿಗಳಿಗೆ ಅಷ್ಟೊಂದು ಅಸಮಾಧಾನವಾಗುತ್ತಿರಲಿಲ್ಲ. ಆದರೆ ಸರ್ಕಾರ ಮತ್ತು ವೈದ್ಯಕೀಯ ಮಂಡಳಿ ಪ್ರತಿಭಾವಂತ ವಿದ್ಯಾರ್ಥಿಗಳ ಕರೆಗೆ ಪ್ರತಿಕ್ರಿಯಿಸದಷ್ಟು ಕಿವುಡಾಗಿವೆ.

          ಒಂದು ಉದಾಹರಣೆಯೊಂದಿಗೆ ಈ ಲೇಖನವನ್ನು ಪೂರ್ಣಗೊಳಿಸುವುದು ಹೆಚ್ಚು ಸಮಂಜಸವೆನಿಸುತ್ತದೆ. ನನ್ನ ಪರಿಚಿತರ ಮಗ  ರಾಮ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ. ಸಾಮಾನ್ಯ ವರ್ಗಕ್ಕೆ  ಸೇರಿದ ಆತ ಈ ವರ್ಷದ ವೈದ್ಯಕೀಯ ಕೋರ್ಸಿನ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ ೫೫೦ rank ಪಡೆದು ತೇರ್ಗಡೆಯಾದ. ಸಹಜವಾಗಿಯೇ ತನಗೆ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಇಲ್ಲವಾದರೂ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಕೋರ್ಸಿಗೆ ಪ್ರವೇಶ ದೊರೆಯಬಹುದೆಂದು ನಿರೀಕ್ಷಿಸಿದ್ದ. ಆದರೆ ಸಾಮಾನ್ಯ ವರ್ಗಕ್ಕೆ ೫೪೨ ಸೀಟುಗಳನ್ನು ಮಾತ್ರ ಮೀಸಲಾಗಿರಿಸಿದ್ದರಿಂದ ಅವನಿಗೆ ವೈದ್ಯಕೀಯ ಕೋರ್ಸಿಗೆ ಪ್ರವೇಶ ದೊರೆಯಲಿಲ್ಲ. ಕಾಮೆಡ್-ಕೆ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ಸೀಟು  ಪಡೆಯಲು ಅರ್ಹನಾಗಿದ್ದರೂ ಆ ದುಬಾರಿ ಶುಲ್ಕವನ್ನು ಭರಿಸುವುದು ಆತನ ಸಾಮರ್ಥ್ಯವನ್ನು ಮೀರಿದ ಸಂಗತಿಯಾಗಿತ್ತು. ಅವನ ವರ್ಗದಲ್ಲೇ ಓದುತ್ತಿದ್ದ ಮೋಹನ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ೩೫೦೦ rank ನೊಂದಿಗೆ  ಹಿಂದುಳಿದ ವರ್ಗದ ಕೋಟಾದಡಿ ವೈದ್ಯಕೀಯ ಕಾಲೇಜಿನಲ್ಲಿ ಸುಲಭವಾಗಿ ಪ್ರವೇಶ ಪಡೆದ.  ೧೮೦೦ ವೈದ್ಯಕೀಯ ಸೀಟುಗಳಿದ್ದಾಗೂ ತನ್ನ ೫೫೦ ನೇ rank ಗೆ ಅದೇಕೆ ತನಗೆ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ದೊರೆಯಲಿಲ್ಲ ಎಂದು ರಾಮ  ಅಮಾಯಕನಂತೆ ಪ್ರಶ್ನಿಸುವಾಗಲೆಲ್ಲ ಮನಸ್ಸು ನೋವಿನಿಂದ ನರಳುತ್ತದೆ. ಈ ನೋವು ನಮ್ಮ ರಾಜಕಾರಣಿಗಳಿಗೆ, ಕಾನೂನು ರೂಪಿಸುವ ಪಂಡಿತರಿಗೆ ಮತ್ತು ಭಾರತೀಯ ವೈದ್ಯಕೀಯ ಮಂಡಳಿಯ ತಜ್ಞರಿಗೆ  ಅರ್ಥವಾದರೆ ಒಳಿತು.

-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ     

        

No comments:

Post a Comment