Monday, March 2, 2015

ಸಿನಿಮಾ: ನೀತಿ ಮತ್ತು ರಂಜನೆ








         ಸಿನಿಮಾ ಸಮಾಜಕ್ಕೆ ಒಂದು ಸಂದೇಶವನ್ನು ಸಾರುವಂತಿರಬೇಕೆ ಅಥವಾ ಅದರ ಉದ್ದೇಶ ಮನರಂಜನೆ ಮಾತ್ರವಾಗಿರಬೇಕೆ ಎನ್ನುವ ವಿಷಯ ಚರ್ಚೆಯ ವಸ್ತುವಾದಾಗಲೆಲ್ಲ ನನಗೆ 'ಬಂಗಾರದ ಮನುಷ್ಯ' ಸಿನಿಮಾ ನೆನಪಿಗೆ ಬರುತ್ತದೆ. ಈ ಸಿನಿಮಾವನ್ನು ವೀಕ್ಷಿಸಿದ ನಂತರ ಹಳ್ಳಿಯನ್ನು ತೊರೆದು ಹೋಗಿದ್ದ ಅನೇಕ ತರುಣರು ಮತ್ತೆ ಹಳ್ಳಿಗೆ ಮರಳಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. 'ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವು ಎಂದೂ' ಎನ್ನುವ ಆ ಸಿನಿಮಾದ ಹಾಡು ಅನೇಕರ ಬದುಕಿಗೆ ದಾರಿದೀಪವಾಯಿತು. ಇದು ಸಿನಿಮಾವೊಂದು ಸಮಾಜದ ಮೇಲೆ ಬೀರಬಹುದಾದ ಪರಿಣಾಮಕ್ಕೆ ಅತ್ಯುತ್ತಮ ಉದಾಹರಣೆ. ಸಮಾಜದ ಮೇಲೆ ಉತ್ತಮ ಪ್ರಭಾವ ಬೀರುವ ಇಂಥ ನೀತಿ ಬೋಧಕ  ಸಿನಿಮಾವನ್ನು ನಿರ್ಮಿಸಿದ ಇದೇ ಕನ್ನಡ ಚಿತ್ರರಂಗದಲ್ಲಿ ಕಾಲಾನಂತರದಲ್ಲಿ ಅನೇಕ ಬದಲಾವಣೆಗಳಾಗಿ ರಂಜನೆಯೇ ಸಿನಿಮಾದ ಮೂಲ ಉದ್ದೇಶ ಎಂದು ಸಾರುವ ಅನೇಕ ಸಿನಿಮಾಗಳು ನಿರ್ಮಾಣಗೊಂಡವು. ಸಿನಿಮಾ ಮಾಧ್ಯಮದಲ್ಲಿ ರಂಜನೆಯೇ ಪ್ರಧಾನವಾಗುತ್ತ ಹೋದಂತೆ ನೀತಿ ಬೋಧನೆಯ ಸಿನಿಮಾಗಳು ಕಲಾತ್ಮಕತೆ ಎನ್ನುವ ಹೆಸರಿನಲ್ಲಿ ಮೂಲೆಗುಂಪಾದವು ಮತ್ತು ವಾಸ್ತವಿಕತೆಗೆ ದೂರವಾದ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ  ನಿರ್ಮಾಣಗೊಳ್ಳತೊಡಗಿದವು.

              ಕನ್ನಡ  ಭಾಷೆಯಲ್ಲಿ  ಸಿನಿಮಾ ಮಾಧ್ಯಮ ನಡೆದು ಬಂದ ದಾರಿಯನ್ನು ಅವಲೋಕಿಸಿದಾಗ ಕಾಲಕಾಲಕ್ಕೆ ಸಿನಿಮಾದ ಉದ್ದೇಶ ಬದಲಾಗಿದ್ದನ್ನು ನಾವು ಕಾಣಬಹುದು. ಪ್ರಾರಂಭದ ದಿನಗಳಲ್ಲಿ ಕನ್ನಡ ಸಿನಿಮಾಗಳು ಸಮಾಜಕ್ಕೆ ಸಂದೇಶವನ್ನು ಕೊಡಬೇಕೆನ್ನುವ ಉದ್ದೇಶಕ್ಕೆ ಬದ್ಧವಾಗಿದ್ದವು. ಪರಿಣಾಮವಾಗಿ ಉತ್ತಮ ಕಥೆಯಾಧಾರಿತ ಸಿನಿಮಾಗಳು ಆ ಸಮಯದಲ್ಲಿ ನಿರ್ಮಾಣಗೊಂಡವು. ಜೊತೆಗೆ ಕನ್ನಡದ ಅನೇಕ ಕಾದಂಬರಿಗಳು ಆ ದಿನಗಳ ಸಿನಿಮಾಗಳ ಕಥಾವಸ್ತುವಾಗಿ ಉತ್ತಮ ಸದಭಿರುಚಿಯ ಸಿನಿಮಾಗಳು ಕನ್ನಡ ಭಾಷೆಯಲ್ಲಿ ನಿರ್ಮಾಣವಾಗಲು ಕಾರಣವಾದವು. ಸಾಹಿತ್ಯ ಲೋಕದ ಅನೇಕ ಸೃಜನಶೀಲರು ಸಿನಿಮಾಗಳ ಕಥೆ ಮತ್ತು ಹಾಡುಗಳನ್ನು ಬರೆದ ಸಾಕಷ್ಟು ಉದಾಹರಣೆಗಳಿವೆ. ಗಮನಿಸಬೇಕಾದ ಇನ್ನೊಂದು ಮುಖ್ಯ ಸಂಗತಿ ಎಂದರೆ ನೀತಿಯ ಜೊತೆಗೆ ಪ್ರೇಕ್ಷಕರಿಗೆ ಒಂದಿಷ್ಟು ರಂಜನೆಯನ್ನು ಕೊಡಲು ಪ್ರತ್ಯೇಕ ಟ್ರ್ಯಾಕ್ ನಲ್ಲಿ ಸಾಗುವ ಹಾಸ್ಯ ಪಾತ್ರಗಳಿರುತ್ತಿದ್ದವು. ಆದರೆ ಈ ಹಾಸ್ಯ ಪಾತ್ರಗಳು ಸಿನಿಮಾದ ಮೂಲಕಥೆಗೆ ಯಾವುದೇ ಧಕ್ಕೆ ಬರದಂತೆ ದೂರವೇ ಇರುತ್ತಿದ್ದವು. ಯಾವಾಗ ರಂಜನೆ ಪ್ರಾಧ್ಯಾನತೆ ಪಡೆಯಿತೋ ಆಗ ಸಿನಿಮಾ ನಿರ್ದೇಶಕರು ಸಿನಿಮಾದ ಮೂಲ ಪಾತ್ರಗಳಿಗೂ ಮತ್ತು ಹಾಸ್ಯ ಪಾತ್ರಗಳಿಗೂ ಸಂಪರ್ಕ ಕಲ್ಪಿಸಿ ಒಮ್ಮೊಮ್ಮೆ ಹಾಸ್ಯ ಪಾತ್ರಗಳಿಗೇ ಹೆಚ್ಚಿನ ಮಹತ್ವ ಕೊಡಲಾರಂಭಿಸಿದರು. ಇದಕ್ಕೆ ಉದಾಹರಣೆಯಾಗಿ ಪ್ರೊಫೆಸರ್ ಹುಚ್ಚುರಾಯ, ಪೆದ್ದ ಗೆದ್ದ, ಡ್ರೈವರ್ ಹನುಮಂತು, ಗುರು ಶಿಷ್ಯರು ಸಿನಿಮಾಗಳನ್ನು ಹೆಸರಿಸಬಹುದು. ಯಾವಾಗ ಪ್ರೇಕ್ಷಕರಲ್ಲಿ  ಸಿನಿಮಾ ಎನ್ನುವುದು ಅದು ಕೇವಲ ಮನೋರಂಜನೆಯ ಮಾಧ್ಯಮ ಎನ್ನುವ ಭಾವನೆ ಬಲವಾಯಿತೋ ಆಗ ಸಿನಿಮಾ ಮಾಧ್ಯಮದ ಜನ ಸಹ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸಿನಿಮಾಗಳನ್ನು ತಯ್ಯಾರಿಸುವ ಅನಿವಾರ್ಯತೆ ಎದುರಾಯಿತು. ಹೀಗೆ ಬದಲಾದ ಸಂದರ್ಭದಲ್ಲಿ ಹಾಸ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ದೊರೆಯತೊಡಗಿದಾಗ ನಾಯಕ ನಟರು ಸಿನಿಮಾದ ಮೂಲ ಪಾತ್ರದೊಂದಿಗೆ ಹಾಸ್ಯ ಪಾತ್ರದಲ್ಲೂ ಅಭಿನಯಿಸಲಾರಂಭಿಸಿದರು.  ಸಿನಿಮಾ ರಂಗದಲ್ಲಿ ಉಳಿಯಲು ಇಂಥದ್ದೊಂದು ಬದಲಾವಣೆ ಆ ನಟರಿಗೂ ಅನಿವಾರ್ಯವಾಗಿತ್ತು. ರಾಜಕುಮಾರ 'ಭಾಗ್ಯದ ಲಕ್ಷ್ಮಿ ಬಾರಮ್ಮ' ವಿಷ್ಣುವರ್ಧನ್ 'ಮಕ್ಕಳ ಸೈನ್ಯ' 'ಮನೆ ಮನೆಯ ಕಥೆ' ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿದ್ದು ಇದೇ ಕಾರಣಕ್ಕೆ. ಜಗ್ಗೇಶ್ ರಂಥ ವಿಚಿತ್ರ ಮ್ಯಾನರಿಸಂ ನ ನಟ ದಶಕಗಳ ಕಾಲ ಸಿನಿಮಾ ರಂಗದಲ್ಲಿ ನಾಯಕ ನಟನಾಗಿ ನೆಲೆಯೂರಿ ನಿಲ್ಲಲ್ಲು ಸಾಧ್ಯವಾಗಿದ್ದು  ಅವರ ಹಾಸ್ಯ ಪಾತ್ರಗಳೇ ಕಾರಣ. ಇವತ್ತಿನ ಪೀಳಿಗೆಯ ಕಲಾವಿದರು ನವರಸ ಗುಣಗಳನ್ನು ಹೊಂದಿದ್ದು ಹಾಸ್ಯ ಪಾತ್ರಗಳಲ್ಲೂ ಲೀಲಾಜಾಲವಾಗಿ ಅಭಿನಯಿಸುತ್ತ ಪ್ರೇಕ್ಷಕರಿಗೆ ಹಾಸ್ಯದ ರಸದೂತಣವನ್ನೇ ಉಣಬಡಿಸುತ್ತಿರುವರು. ಹಾಸ್ಯ ಪ್ರಧಾನ ಸಿನಿಮಾಗಳೇ ಕನ್ನಡ ಚಿತ್ರರಂಗಕ್ಕೆ ಅನಿವಾರ್ಯವಾಗಿದ್ದರೆ ವ್ಯಂಗ್ಯ ಮತ್ತು ನವಿರಾದ ಹಾಸ್ಯದ ಮೂಲಕ ನಮ್ಮ ಭ್ರಮೆಯನ್ನು ಕಳಚಿ ವಾಸ್ತವಿಕತೆಯ ಅರಿವು ಮೂಡಿಸುವ 'ತ್ರೀ ಇಡಿಯಟ್ಸ್' ನಂಥ ಸಿನಿಮಾಗಳು ನಿರ್ಮಾಣವಾಗಬೇಕು. ವಿಪರ್ಯಾಸ ನೋಡಿ ಈ ಸಿನಿಮಾದ ಶೀರ್ಷಿಕೆಯನ್ನು ಸ್ಪೂರ್ತಿಯಾಗಿಟ್ಟುಕೊಂಡು ಕನ್ನಡದಲ್ಲಿ ಅಶ್ಲೀಲ ಸಂಭಾಷಣೆಯ  'ಫೈವ್ ಇಡಿಯಟ್ಸ್' ನಂಥ ಹಳಸಲು ಹಾಸ್ಯದ ಸಿನಿಮಾಗಳು ನಿರ್ಮಾಣವಾಗುತ್ತವೆ. ಹೀಗೆ ಸಿನಿಮಾ ಮಾಧ್ಯಮ ಹಂತಹಂತವಾಗಿ ಹೊಸ ಹೊಸ ರೂಪಗಳನ್ನು ಪಡೆಯುತ್ತ ರಂಜನೆಯೇ ತನ್ನ ಮೂಲ ಉದ್ದೇಶವೆಂದು ಪಕ್ಕಾಗಿಬಿಟ್ಟಿದೆ.

ರಾಜಕುಮಾರ ಯುಗಾಂತ್ಯ


              ಕನ್ನಡ ಸಿನಿಮಾ ಮಾಧ್ಯಮವನ್ನು ನೀತಿಯ ಚೌಕಟ್ಟಿನೊಳಗೆ ಕಟ್ಟಿಕೊಟ್ಟಿದ್ದು ಅದು ರಾಜಕುಮಾರ ಸಿನಿಮಾಗಳ ಹೆಗ್ಗಳಿಕೆ. ಕನ್ನಡ ಸಿನಿಮಾ ಇನ್ನೂ ಕಪ್ಪು ಬಿಳುಪಿನ ಕಾಲದಲ್ಲಿದ್ದಾಗಲೇ ಸಿನಿಮಾ ಮಾಧ್ಯಮಕ್ಕೆ ಕಾಲಿಟ್ಟ ರಾಜಕುಮಾರ ಅನೇಕ ನೀತಿ ಬೋಧಕ ಸಿನಿಮಾಗಳಲ್ಲಿ ನಟಿಸಿ ಆ ಮೂಲಕ ಅನೇಕ ಸಾಮಾಜಿಕ ಪಲ್ಲಟಗಳಿಗೆ ಕಾರಣರಾದರು. ರಾಜಕುಮಾರ ನಟಿಸಿದ ಚೆಂದವಳ್ಳಿಯ ತೋಟ, ಬಂಗಾರದ ಮನುಷ್ಯ, ಬಂಗಾರದ ಹೂ, ಜೀವನ ಚೈತ್ರ, ಕಸ್ತೂರಿ ನಿವಾಸ, ಸಾಕ್ಷಾತ್ಕಾರ ಹೀಗೆ ಅನೇಕ ಸಿನಿಮಾಗಳು ಜನಸಮೂಹದ ಮೇಲೆ ಅತ್ಯುತ್ತಮ ಪರಿಣಾಮ ಬೀರಿದವು. ಕೃಷಿಕನ ಯಶೋಗಾಥೆಯನ್ನು ಸಾರುವ 'ಬಂಗಾರದ ಮನುಷ್ಯ', ರೈತರ ಬದುಕಿನ ದಾರುಣತೆಯನ್ನು ಹೇಳುವ ' ದ್ರುವ ತಾರೆ', ಕುಡಿತದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ 'ಜೀವನ ಚೈತ್ರ', ಮಾದಕ ವ್ಯಸನಕ್ಕೆ ಬಲಿಯಾದ ಯುವ ಜನತೆಯನ್ನು ಸರಿದಾರಿಗೆ ತರುವ 'ಶಬ್ದ ವೇದಿ' ಹೀಗೆ ರಾಜಕುಮಾರ ಅಭಿನಯದ ಸಿನಿಮಾಗಳಲ್ಲಿ ಸಮಾಜಕ್ಕೆ ಒಂದು ಸಂದೇಶವಿರುತ್ತಿತ್ತು. ಜೊತೆಗೆ ರಾಜಕುಮಾರ  ಅವರ ಸಿನಿಮಾಗಳ ಇನ್ನೊಂದು ಹೆಚ್ಚುಗಾರಿಕೆ ಎಂದರೆ ಅವರ ಸಿನಿಮಾಗಳು  ಕುಟುಂಬವೊಂದರ ಸದಸ್ಯರು ಒಟ್ಟಿಗೆ ಕುಳಿತು ನೋಡುವಂತಿರುತ್ತಿದ್ದವು. ಈ ಕಾರಣದಿಂದಲೇ ರಾಜಕುಮಾರ ಸಮಾಜಕ್ಕೆ ನೀತಿ ಸಂದೇಶವನ್ನು ಸಾರುವ ಸಿನಿಮಾಗಳ ರಾಯಭಾರಿಯಂತೆ ಕಾಣಿಸುತ್ತಿದ್ದರು. ಇವತ್ತಿಗೂ ರಾಜಕುಮಾರ ಅವರ ಸಿನಿಮಾಗಳ ಜನಪ್ರಿಯತೆ ಮತ್ತು ಅವುಗಳಲ್ಲಿನ ಸಂದೇಶದ ವರ್ಚಸ್ಸು ಕುಗ್ಗಿಲ್ಲ ಎನ್ನುವುದಕ್ಕೆ ಇತ್ತೀಚಿಗೆ ಬಣ್ಣದಲ್ಲಿ ಬಿಡುಗಡೆಯಾದ 'ಕಸ್ತೂರಿ ನಿವಾಸ'    ಸಿನಿಮಾಕ್ಕೆ ಪ್ರೇಕ್ಷಕರಿಂದ ದೊರೆತ  ಪ್ರತಿಕ್ರಿಯೆಯೇ  ಸಾಕ್ಷಿ. ರಾಜಕುಮಾರ ಸಿನಿಮಾದಲ್ಲಿ ಸಕ್ರಿಯರಾಗಿದ್ದಷ್ಟು ಕಾಲ ಕನ್ನಡ ಸಿನಿಮಾರಂಗದಲ್ಲಿ ಸಮಾಜದ ಮೇಲೆ ಉತ್ತಮ ಪ್ರಭಾವ ಬೀರುವ ಸಿನಿಮಾಗಳಿಗೆ ಕೊರತೆಯಿರಲಿಲ್ಲ. ರಾಜಕುಮಾರ ಅವರ ಇರುವಿಕೆ ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ಅದೊಂದು ಸ್ಪೂರ್ತಿ ಮತ್ತು ಪ್ರೇರಣೆಯಾಗಿತ್ತು. ರಾಜಕುಮಾರ ಸಿನಿಮಾ ಅಭಿನಯದಿಂದ ಹಿಂದೆ ಸರಿದಾಗ ರಾಜಕುಮಾರ ಯುಗಾಂತ್ಯದೊಂದಿಗೆ ಕನ್ನಡ ಸಿನಿಮಾ ರಂಗದಲ್ಲಿ ಉತ್ತಮ ಸದಭಿರುಚಿಯ ಸಿನಿಮಾಗಳ ಯುಗಾಂತ್ಯ ಪ್ರಾರಂಭವಾಯಿತು ಎನ್ನುವುದು ಇದು ಕನ್ನಡ ಸಿನಿಮಾಗಳನ್ನು ಉತ್ಕಟವಾಗಿ ಪ್ರೀತಿಸುವ ಪ್ರೇಕ್ಷಕರ ಅಭಿಮತ.

           ರಾಜಕುಮಾರ ಅವರ ಸಾವಿನ ನಂತರ ಕನ್ನಡ ಚಿತ್ರರಂಗ ಯಜಮಾನನಿಲ್ಲದ ಮನೆಯಂತಾಯಿತು. ಕನ್ನಡ ನಾಡು ಮತ್ತು ಈ ಭಾಷೆಯನ್ನು ಕಡು ವ್ಯಾಮೋಹಿಯಂತೆ ಪ್ರೀತಿಸುತ್ತಿದ್ದ  ರಾಜಕುಮಾರ ಅವರ ಗೈರು ಹಾಜರಿ ಕನ್ನಡ ಸಿನಿಮಾಗಳ ಗತಿಯನ್ನೇ ಬದಲಿಸಿತು. ಬೇರೆ ನಿರ್ಮಾಣ ಸಂಸ್ಥೆಗಳು ಮಾತ್ರವಲ್ಲದೇ ರಾಜಕುಮಾರ ಅವರ ನಿರ್ಮಾಣ ಸಂಸ್ಥೆಯಲ್ಲೇ ಮನರಂಜನೆಯನ್ನೇ ಮೂಲವಾಗಿಟ್ಟುಕೊಂಡು ಅನೇಕ ಸಿನಿಮಾಗಳು ತಯ್ಯಾರಾದವು. ಒಂದು ಕಾಲದಲ್ಲಿ ಸೃಜನಶೀಲ ನಿರ್ದೇಶಕರು ಮತ್ತು ಕಲಾವಿದರು ಮಾತ್ರ ಕಾಣಿಸಿಕೊಳ್ಳುತ್ತಿದ್ದ ರಾಜ್ ಸಂಸ್ಥೆಯಲ್ಲಿ ಗಾಂಡ್ ಗಾಬರಿಗಳೆಂದು ಬರೆಯುವ ನಿರ್ದೇಶಕರುಗಳು ಕಾಣಿಸಿಕೊಳ್ಳತೊಡಗಿದರು. ರಾಜಕುಮಾರ ಅವರ ಯುಗಾಂತ್ಯದೊಂದಿಗೆ ಕನ್ನಡ ಚಿತ್ರರಂಗ ಸಿನಿಮಾ ಎನ್ನುವುದು ಕೇವಲ ಮನರಂಜನೆಗಾಗಿ ಎನ್ನುವ ಹೊಸದೊಂದು ಮಗ್ಗಲಿಗೆ ಹೊರಳಿಕೊಂಡಿತು.

ದೈವ ಭಕ್ತಿಯ ಪರಾಕಾಷ್ಠೆ 


      ಸಿನಿಮಾವೊಂದು ಮನರಂಜನೆಯೇ ಮೂಲ ಉದ್ದೇಶ ಎನ್ನುವ ಹೊಸ ರೂಪಾಂತರ ಹೊಂದಿದ ಮೇಲೆ ಕನ್ನಡ ಸಿನಿಮಾರಂಗದಲ್ಲಿ ಮನರಂಜನೆಯ ಹೆಸರಿನಲ್ಲಿ ದೈವಭಕ್ತಿಯ ಮಹತ್ವವನ್ನು ಸಾರುವ ಪ್ರಯತ್ನಗಳು ಪ್ರಾರಂಭವಾದವು. ಬಹಳ ಹಿಂದೆ ದೈವ ಮತ್ತು ದೆವ್ವದ ಸಂಘರ್ಷದ ಕಥೆಯುಳ್ಳ 'ನಾ  ನಿನ್ನ ಬಿಡಲಾರೆ' ಸಿನಿಮಾ  ಬಿಡುಗಡೆಯಾಗಿ ಅದ್ಭುತ ಯಶಸ್ಸನ್ನು ಗಳಿಸಿತ್ತು. ಈ ದೆವ್ವ ಮತ್ತು ದೈವದ ಕಥೆಯ ಸಿನಿಮಾ ನಿರ್ಮಾಣಕ್ಕೆ ಆ ಕಾಲ  ಸಮಯೋಚಿತವಾಗಿತ್ತು. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನ ನಾಗಾಲೋಟದಿಂದ ಅಭಿವೃದ್ಧಿ ಹೊಂದುತ್ತಿರುವ ಈ ದಿನಗಳಲ್ಲಿ ಅದೇ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ದೈವಭಕ್ತಿಯ ಪರಾಕಾಷ್ಠೆಯನ್ನು ಸಾರುವ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ನಿರ್ಮಾಣಗೊಳ್ಳುತ್ತಿವೆ. ಭಜರಂಗಿ, ಜಯಮ್ಮನ ಮಗ, ಕನಕಾಂಬರಿ, ಚಿತ್ರಲೇಖ, ಚಂದ್ರಲೇಖ ದಂಥ ಸಾಲು ಸಾಲು ಸಿನಿಮಾಗಳು ಕನ್ನಡ ಸಿನಿಮಾಗಳ ಪ್ರೇಕ್ಷಕರ ಅಭಿರುಚಿಯನ್ನೇ ಬದಲಿಸಿ ಅವರನ್ನು ದೈವ ಮತ್ತು ದೆವ್ವದ ಮೂಢನಂಬಿಕೆಯ ತಪ್ಪುದಾರಿಗೆ ಎಳೆಯಲು ಪ್ರಯತ್ನಿಸಿದ್ದು ಕನ್ನಡ ಸಿನಿಮಾ ರಂಗದ ದುರಾದೃಷ್ಟ. ಇಲ್ಲಿ ಸಹ ಈ ಪ್ರಕಾರದ ಸಿನಿಮಾಗಳು ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಸಾರುವುದಕ್ಕಿಂತ ಮನರಂಜನೆಯನ್ನೇ ಮೂಲವಾಗಿಟ್ಟುಕೊಂಡವು. ದೈವ ಮತ್ತು ದೆವ್ವ ಎರಡನ್ನೂ  ಅತ್ಯಂತ ಮನೋರಂಜನಾತ್ಮಕವಾಗಿ ತೋರಿಸುವಲ್ಲಿಯೇ ನಮ್ಮ ನಿರ್ದೇಶಕರು ಹೆಚ್ಚು  ಪ್ರಯತ್ನಿಸಿದರು. ಆಪ್ತಮಿತ್ರ  ಚಿತ್ರದಲ್ಲಿ ಮನೋವಿಜ್ಞಾನಿಯ ಪಾತ್ರವಿದ್ದಾಗೂ  ಅಲ್ಲಿ ನಾಗವಲ್ಲಿ  ಎನ್ನುವ ಪ್ರೇತಾತ್ಮದ ಪಾತ್ರಕ್ಕೆ  ಅತ್ಯಂತ ಮಹತ್ವ ನೀಡಲಾಗಿತ್ತು. ಈ ಸಿನಿಮಾದ ಯಶಸ್ಸು ಮತ್ತು ಅದಕ್ಕೆ ದೊರೆತ ಪ್ರೇಕ್ಷಕರ ಅದ್ಭುತ ಪ್ರತಿಕ್ರಿಯೆಯ ಪರಿಣಾಮ ವಿಷ್ಣುವರ್ಧನ್ ರಂಥ ಜನಪ್ರಿಯ ನಟ ಮತ್ತೊಮ್ಮೆ ಅದೇ ರೀತಿಯ ಕಥೆಯ ಸಿನಿಮಾದಲ್ಲಿ ಅಭಿನಯಿಸಿದರು. ಇಂಥ ಪ್ರೇತಾತ್ಮದ ಕಥೆಯ ಸಿನಿಮಾ ವಿಷ್ಣುವರ್ಧನ್ ಚಿತ್ರ ಬದುಕಿಗೆ ಯಶಸ್ಸು ನೀಡಿದ್ದು ಇಲ್ಲಿ ಗಮನಿಸಬೇಕಾದ ಸಂಗತಿ. ಜೊತೆಗೆ ಸಿನಿಮಾಗಳ ಸೋಲಿನಿಂದ ಬಸವಳಿದಿದ್ದ ನಿರ್ಮಾಪಕ ದ್ವಾರಕೀಶ್ ಅವರನ್ನು ಈ ಪ್ರೇತಾತ್ಮದ ಕಥೆಯ ಸಿನಿಮಾ ಆರ್ಥಿಕವಾಗಿ ಸದೃಢಗೊಳಿಸಿತಲ್ಲದೆ ದ್ವಾರಕೀಶ್ ಮತ್ತೆ ಸಿನಿಮಾ ನಿರ್ಮಾಣದಲ್ಲಿ ಸಕ್ರಿಯರಾದರು. ಹೀಗೆ ಜನರ ಭಾವನಾತ್ಮಕತೆಯನ್ನು ಈ ಸಿನಿಮಾ ಜನ ತಮ್ಮ ಲಾಭಕ್ಕೆ ಬಳಸಿಕೊಂಡು ದೈವ ಮತ್ತು ದೆವ್ವ ಕಥೆಯಾಧಾರಿತ ಸಿನಿಮಾಗಳ  ನಿರ್ಮಾಣದತ್ತ ಹೆಚ್ಚು ಒಲವು  ತೋರಿದ್ದು ಮತ್ತು ಆ ಮೂಲಕ ಜನರನ್ನು ತಪ್ಪು ದಾರಿಗೆ ಎಳೆದದ್ದು ಕನ್ನಡ ಚಿತ್ರೋದ್ಯಮದ ಪ್ರಮುಖ ತಪ್ಪು ನಡೆಗಳಲ್ಲೊಂದು.

ಲಾಜಿಕ್ ಇಲ್ಲದ ಸಿನಿಮಾಗಳು 


            ಸಿನಿಮಾಗಳ ಕಥಾವಸ್ತು ನೈಜತೆಗೆ ಹತ್ತಿರವಾಗಿರಬೇಕು ಎನ್ನುವ ಸೈದ್ಧಾಂತಿಕ ಚೌಕಟ್ಟಿನಿಂದ ನಮ್ಮ  ಬಹುಪಾಲು ನಿರ್ದೇಶಕರು ಮತ್ತು ನಿರ್ಮಾಪಕರು ಹೊರಬಂದಾಗಿದೆ. ಪ್ರೇಕ್ಷಕರಿಗೆ ಮನರಂಜನೆಯನ್ನು ಒದಗಿಸುವ ಭರಾಟೆಯಲ್ಲಿ ಲಾಜಿಕ್ಕೇ ಇಲ್ಲದ ಸಿನಿಮಾಗಳು ಸಾಲುಸಾಲಾಗಿ ನಿರ್ಮಾಣಗೊಳ್ಳುತ್ತಿವೆ. ಅಪ್ಪುಪಪ್ಪು, ಬೊಂಬಾಟ್ ಕಾರ್, ಮ್ಯಾಜಿಕ್ ಅಜ್ಜಿ ಯಂಥ ಸಿನಿಮಾಗಳು ಗ್ರಾಫಿಕ್ ತಂತ್ರಜ್ಞಾನದಿಂದ ಕನ್ನಡ ಪ್ರೇಕ್ಷಕರಿಗೆ ಮನರಂಜನೆಯನ್ನು ಕೊಡುವಲ್ಲಿ ವಿಫಲವಾದರೂ ಮುಂದೊಂದು  ದಿನ ಈ ಪ್ರಕಾರದ ಸಿನಿಮಾಗಳೇ ನಮ್ಮ ಚಿತ್ರೋದ್ಯಮದ ಮಂದಿಗೆ ಮಾದರಿಯಾಗಬಹುದು. ರೋಬೋಟ್, ರಾ-ವನ್, ಈಗ, ಕ್ರಿಶ್ ನಂಥ ಗ್ರಾಫಿಕ್ ತಂತ್ರಜ್ಞಾನದ ಬಳಕೆಯಿಂದ ಅದ್ಭುತ ಯಶಸ್ಸು ಪಡೆದ ಈ ಅನ್ಯಭಾಷಾ ಚಿತ್ರಗಳು ಕನ್ನಡ ಸಿನಿಮಾಗಳ ಮೇಲೆ ಸಾಕಷ್ಟು ಪ್ರಭಾವ ಬೀರಿವೆ. ಜೊತೆಗೆ ಜುರಾಸಿಕ್ ಪಾರ್ಕ್, ಅನಕೊಂಡದಂಥ ಹಾಲಿವುಡ್ ಚಿತ್ರಗಳ ಪ್ರಭಾವವನ್ನೂ ನಾವು ಕಡೆಗಣಿಸುವಂತಿಲ್ಲ. ಭೂಮಿಯ ಮೇಲೆ ವಾಸವಾಗಿದ್ದವೆಂದು ಹೇಳಲಾಗುವ ಸರಿಸೃಪಗಳನ್ನು ಪರದೆಯ ಮೇಲೆ ಪರಿಣಾಮಕಾರಿಯಾಗಿ ತೋರಿಸುವ, ಬೃಹತ್ ಗಾತ್ರದ ಹಾವೊಂದು ಮನುಷ್ಯರನ್ನೇ ನುಂಗುವ, ಸತ್ತ ಪ್ರೇಮಿ ನೋಣವಾಗಿ ಬಂದು ಸೇಡು ತೀರಿಸಿಕೊಳ್ಳುವ ಇಂಥ ವಾಸ್ತವಿಕತೆಗೆ ದೂರವಾಗಿರುವ ಸಿನಿಮಾಗಳ ಯಶಸ್ಸು ಮುಂದೊಂದು ದಿನ ಕನ್ನಡದಲ್ಲೂ ಇಂಥ ಲಾಜಿಕ್ ಇಲ್ಲದ ಸಿನಿಮಾಗಳ ನಿರ್ಮಾಣಕ್ಕೆ ಪ್ರೇರಣೆಯಾಗಬಹುದು. ರಜನಿಕಾಂತ್, ಶಾರುಕ್ ಖಾನ್, ಹೃತಿಕ್ ರೋಷನ್ ನಂಥ ಜನಪ್ರಿಯ ನಟರ ಗ್ರಾಫಿಕ್ ತಂತ್ರಜ್ಞಾನ ಆಧಾರಿತ ಸಿನಿಮಾಗಳಲ್ಲಿನ ಅಭಿನಯ ನಮ್ಮ ಕನ್ನಡದ ಕಲಾವಿದರಿಗೂ ಸ್ಪೂರ್ತಿಯಾಗಬಹುದು. ಕನ್ನಡದ ಖ್ಯಾತ ನಟ ಸುದೀಪ್ ಈಗಾಗಲೇ ತೆಲುಗಿನ 'ಈಗ' ಎನ್ನುವ ಗ್ರಾಫಿಕ್ ತಂತ್ರಜ್ಞಾನದ ಸಿನಿಮಾದಲ್ಲಿ ನಟಿಸಿ ಯಶಸ್ಸಿನ ರುಚಿ ಕಂಡಾಗಿದೆ. ಮುಂದಿನ ದಿನಗಳಲ್ಲಿ ಇದೇ ನಟ ಕನ್ನಡದಲ್ಲೂ ಅಂಥ ಸಿನಿಮಾಗಳ ನಿರ್ಮಾಣಕ್ಕೆ ನಾಂದಿ ಹಾಡಬಹುದು. ಗ್ರಾಫಿಕ್ ತಂತ್ರಜ್ಞಾನದ ವಿಪರೀತ ಬಳಕೆಯಿಂದ ಸಿನಿಮಾಗಳು ಕೇವಲ ಮನರಂಜನೆಗೆ ಹೆಚ್ಚು ಒತ್ತು ನೀಡುತ್ತಿದ್ದು ಅವುಗಳು ಸಮಾಜಕ್ಕೆ ಸಂದೇಶ ನೀಡುವ ಉದ್ದೇಶದಿಂದ ವಿಮುಖವಾಗುತ್ತಿವೆ. ಕನ್ನಡದ ಜನಪ್ರಿಯ ಕಲಾವಿದರು ಗ್ರಾಫಿಕ್ ತಂತ್ರಜ್ಞಾನಕ್ಕೆ ಸಂಪೂರ್ಣವಾಗಿ ಮೊರೆ ಹೋಗುತ್ತಿಲ್ಲವಾದರೂ ಸಿನಿಮಾದ ಒಂದೆರಡು ದೃಶ್ಯಗಳಲ್ಲಾದರೂ ಅಗತ್ಯವಿಲ್ಲದಿದ್ದಾಗಲೂ ಗ್ರಾಫಿಕ್ ಬಳಕೆಯಾಗುತ್ತಿದೆ. ಹೀಗೆ ಹೊಸ ಹೊಸ ಅನ್ವೇಷಣೆಯಲ್ಲಿ ಸಿನಿಮಾ ನಿರ್ಮಾಣದ ಸೈದ್ಧಾಂತಿಕ  ಸೂತ್ರವನ್ನು  ಮುರಿದು ಹೊಸದನ್ನು ಕಟ್ಟುವ ಭರಾಟೆಯಲ್ಲಿ ನಮ್ಮ ಚಿತ್ರರಂಗದ ಜನ ಸಿನಿಮಾ ಮಾಧ್ಯಮವನ್ನು ನೀತಿಯ ನೆಲೆಯಿಂದ ಬೇರ್ಪಡಿಸಿ ಅದನ್ನು ಮನರಂಜನೆಯ ಮಾಧ್ಯಮವಾಗಿಸುತ್ತಿರುವರು.

    ಕನ್ನಡ ಸಿನಿಮಾಗಳಲ್ಲಿನ (ಬೇರೆ ಭಾಷೆಯ ಸಿನಿಮಾಗಳೂ ಇದರಿಂದ ಹೊರತಾಗಿಲ್ಲ) ಇನ್ನೊಂದು ಬಹುಮುಖ್ಯವಾದ ದುರಂತವೆಂದರೆ ಅದು  ನಮ್ಮ ಸಿನಿಮಾಗಳ ನಾಯಕರು  ಮಚ್ಚು, ಲಾಂಗ್, ಬಂದೂಕು ಹಿಡಿದು ಸಾಲು ಸಾಲು ಕೊಲೆಗಳನ್ನು ಮಾಡಿ ರಕ್ತದೋಕುಳಿ ಹರಿಸುತ್ತಿರುವುದು. ಸಿನಿಮಾ ಪ್ರಾರಂಭವಾಗುವ ಘಳಿಗೆಯಿಂದ ಕೊನೆಯವರೆಗೂ ಪಾತಕ ಲೋಕದಲ್ಲೇ ಮುಳಿಗೇಳುವ ನಾಯಕ ಕೊನೆಯ ದೃಶ್ಯದಲ್ಲಿ ಆದರ್ಶಪ್ರಾಯನಾಗಿ ಚಿತ್ರಿತವಾಗುತ್ತಿರುವನು. ನಿಜಕ್ಕೂ ಇಂಥ ಕಥೆಯುಳ್ಳ ಸಿನಿಮಾಗಳು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಓಂ, ದುನಿಯಾ, ಜೋಗಿ, ಕರಿಯದಂಥ ಭೂಗತ ಲೋಕದ ಕಥೆಯ ಸಿನಿಮಾಗಳು ಜನಪ್ರಿಯವಾಗಿತ್ತಿರುವುದು ಮತ್ತು ಕನ್ನಡ ಸಿನಿಮಾ ರಂಗ ಈ ಪ್ರಕಾರದ ಸಿನಿಮಾಗಳಿಗೆ ವೇದಿಕೆಯಾಗುತ್ತಿರುವುದು ದುರದೃಷ್ಟಕರ. ನೂರಾರು ಕೊಲೆಗಳನ್ನು ಮಾಡಿದ ವ್ಯಕ್ತಿ ಅದು ಹೇಗೆ ಸಮಾಜಕ್ಕೆ ಆದರ್ಶಪ್ರಾಯನಾಗಲು ಸಾಧ್ಯ ಎನ್ನುವುದನ್ನು ನಮ್ಮ ಸಿನಿಮಾಗಳ ನಿರ್ದೇಶಕರು ಯೋಚಿಸಬೇಕು.

ನೀತಿಗೆ ಕಲಾತ್ಮಕತೆಯ ಚೌಕಟ್ಟು 



         ಮನರಂಜನೆಯನ್ನೇ ಮೂಲ ಉದ್ದೇಶವಾಗಿಟ್ಟುಕೊಂಡು ಸಿನಿಮಾ ತಯ್ಯಾರಿಸುತ್ತಿರುವ ಸಂದರ್ಭದಲ್ಲೇ ಅದಕ್ಕೆ ಪರ್ಯಾಯವಾಗಿ ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಡುವ ಸಿನಿಮಾಗಳು ಕನ್ನಡ ಭಾಷೆಯಲ್ಲಿ ನಿರ್ಮಾಣಗೊಳ್ಳುತ್ತಿರುವುದು ಒಂದಿಷ್ಟು ನೆಮ್ಮದಿಯ ಸಂಗತಿ. ಆದರೆ ದುರಂತದ ವಿಷಯವೆಂದರೆ ಈ ಪ್ರಕಾರದ ಸಿನಿಮಾಗಳನ್ನು ಮೇನ್ ಸ್ಟ್ರೀಮ್ ನಿಂದ ದೂರವಿಟ್ಟು ಅವುಗಳನ್ನು ಕಲಾತ್ಮಕ ಸಿನಿಮಾಗಳು ಎನ್ನುವ ಹಣೆಪಟ್ಟಿ ಕಟ್ಟಲಾಗಿದೆ. ಹೀಗೆ ಸಿನಿಮಾ ರಂಗದಲ್ಲಿ ವ್ಯಾಪಾರಿ ಮತ್ತು ಕಲಾತ್ಮಕ ಸಿನಿಮಾಗಳು ಎಂದು ವಿಭಜಿಸಿ ಈ ಕಲಾತ್ಮಕ ಸಿನಿಮಾಗಳನ್ನು ಮತ್ತು ಅವುಗಳಲ್ಲಿನ ಕಲಾವಿದರನ್ನು ಅಸ್ಪೃಶ್ಯತೆಯ ಭಾವನೆಯಿಂದಲೇ ನೋಡಲಾಗುತ್ತಿದೆ. ಕನ್ನಡ ಭಾಷೆಯ ಚಿತ್ರರಂಗ ಮಾತ್ರವಲ್ಲ ಇದು ಇಡೀ ಭಾರತೀಯ ಚಿತ್ರರಂಗಕ್ಕೆ ಅನ್ವಯಿಸುವ ಮಾತು. ಈ ತಾರತಮ್ಯದ ನಡುವೆಯೂ ಕನ್ನಡ ಭಾಷೆಯಲ್ಲಿ ಸಾಕಷ್ಟು ಕಲಾತ್ಮಕ ಸಿನಿಮಾಗಳು ನಿರ್ಮಾಣಗೊಂಡಿವೆಯಾದರೂ ಅವುಗಳ ಸಂಖ್ಯೆ ತೃಪ್ತಿಕರವಾಗಿ ಇಲ್ಲ. ವರ್ಷಕ್ಕೆ ಮೂರೂ ಅಥವಾ ನಾಲ್ಕು ಕಲಾತ್ಮಕ ಸಿನಿಮಾಗಳು ಬಿಡುಗಡೆಯಾಗಿದ್ದೇ ಹೆಚ್ಚು. ಜೊತೆಗೆ ಈ ಪ್ರಕಾರದ ಸಿನಿಮಾಗಳಿಗೆ ಬಿಡುಗಡೆ ಮತ್ತು ಥೇಟರ್ ಸಮಸ್ಯೆ ಪ್ರತಿ ಸಂದರ್ಭದಲ್ಲೂ ಎದುರಾಗುತ್ತದೆ. ಅಲ್ಲದೆ ಕನ್ನಡದ ಸಹೃದಯಿ ಪ್ರೇಕ್ಷಕರಲ್ಲಿ  ಕಲಾತ್ಮಕ ಸಿನಿಮಾಗಳನ್ನು ವೀಕ್ಷಿಸಿ ಪ್ರೋತ್ಸಾಹಿಸುವ ದೊಡ್ಡ ಗುಣ ಇಲ್ಲದಿರುವುದು ಈ ಸಿನಿಮಾಗಳು ಎದುರಿಸುತ್ತಿರುವ  ಇನ್ನೊಂದು ಬಹುಮುಖ್ಯ ಸಮಸ್ಯೆ. ಇಂಥ ಅನೇಕ ಸಮಸ್ಯೆಗಳ ನಡುವೆಯೂ ಕನ್ನಡದಲ್ಲಿ ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ, ಬಿ. ಸುರೇಶ ಅವರಂಥ ಸೃಜನಶೀಲ ನಿರ್ದೇಶಕರು ಕಾಲಕಾಲಕ್ಕೆ ಅತ್ಯುತ್ತಮ ಕಲಾತ್ಮಕ ಸಿನಿಮಾಗಳನ್ನು ನಿರ್ದೇಶಿಸಿ ಸಮಾಜಕ್ಕೆ ಸಿನಿಮಾ ಒಂದು ಮೌಲಿಕ ಮಾಧ್ಯಮ ಎನ್ನುವುದನ್ನು  ತೋರಿಸಿಕೊಡಲು ಪ್ರಯತ್ನಿಸುತ್ತಿರುವರು.  ಆದರೆ ಈ ಮನೋಭಾವದ ನಿರ್ದೇಶಕರ ಸಂಖ್ಯೆ ಕನ್ನಡ ಚಿತ್ರರಂಗದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಎನ್ನುವುದು ವಿಷಾದದ ಸಂಗತಿ.

       ಕಲಾತ್ಮಕ ಸಿನಿಮಾಗಳು ವ್ಯಾಪಾರಿ ಸಿನಿಮಾಗಳೊಂದಿಗೆ ಸ್ಪರ್ಧಿಸಿ  ಸೋಲುತ್ತಿರುವುದು ಒಂದುಕಡೆಯಾದರೆ ಇನ್ನೊಂದೆಡೆ ಜನಪ್ರಿಯ ಕಲಾವಿದರು ಈ ಪ್ರಕಾರದ ಸಿನಿಮಾಗಳಲ್ಲಿ ಅಭಿನಯಿಸಲು ಹಿಂದೇಟು ಹಾಕುತ್ತಿರುವರು. ಸದಾಕಾಲ ವ್ಯಾಪಾರಿ ಸಿನಿಮಾಗಳಲ್ಲಿ ಅಭಿನಯಿಸಿ ಮೇನ್ ಸ್ಟ್ರೀಮ್ ನಲ್ಲೇ ಕಾಣಿಸಿಕೊಳ್ಳಲು ಬಯಸುವ ಈ ಜನಪ್ರಿಯ ಕಲಾವಿದರಿಗೆ ಕಲಾತ್ಮಕ ಸಿನಿಮಾಗಳೆಂದರೆ ಯಾವತ್ತಿಗೂ ಅಪಥ್ಯ. ನೂರಾರು ಜನರನ್ನು ಹೊಡೆದು ನೆಲಕ್ಕುರುಳಿಸುವ ನೈಜತೆಯಿಂದ ದೂರವಾದ ಪಾತ್ರಗಳಲ್ಲಿ ಅಭಿನಯಿಸಲು ಇಷ್ಟಪಡುವ ಈ ಕಲಾವಿದರಿಗೆ ವಾಸ್ತವಿಕೆತೆ ಹತ್ತಿರವಾಗಿರುವ ಕಲಾತ್ಮಕ ಸಿನಿಮಾಗಳಲ್ಲಿ ಅಭಿನಯಿಸುವ ಆಸಕ್ತಿಯಾಗಲಿ ಇಲ್ಲವೇ ಸಾಮಾಜಿಕ ಕಾಳಜಿಯಾಗಲಿ ಇಲ್ಲ. ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ಜನರ ಹೃದಯದಲ್ಲಿ ನೆಲೆಯೂರಿ ನಿಂತ ರಾಜಕುಮಾರ ಅವರಂಥ ಜನಪ್ರಿಯ ಕಲಾವಿದ ಒಮ್ಮೆಯೂ ಕಲಾತ್ಮಕ ಸಿನಿಮಾದಲ್ಲಿ ಅಭಿನಯಿಸದೇ ಇರುವುದು ಕನ್ನಡ ಸಿನಿಮಾರಂಗದ ಬಹುದೊಡ್ಡ ಕೊರತೆಗಳಲ್ಲೊಂದು. ರಾಜಕುಮಾರ   ಅವರ  ಈ ನಡೆ  ಅವರ ನಂತರದ  ಅನೇಕ ಜನಪ್ರಿಯ ಕಲಾವಿದರಿಗೆ ಮೇಲ್ಪಂಕ್ತಿಯಾಯಿತು. ಎಲ್ಲೋ ಒಂದು ಕಡೆ ಅನಂತನಾಗ್ ಮತ್ತು ಶಂಕರ್ ನಾಗ್ ಅವರಂಥ ಪ್ರತಿಭಾನ್ವಿತರು ಕಲಾತ್ಮಕ ಮತ್ತು ಕಮರ್ಷಿಯಲ್ ಎರಡೂ ಪ್ರಕಾರದ ಸಿನಿಮಾಗಳಲ್ಲಿ ಅಭಿನಯಿಸಿ ಯಶಸ್ಸನ್ನು ಪಡೆದರೂ ಅವರ ಹಾಕಿಕೊಟ್ಟ ದಾರಿಯಲ್ಲಿ ನಡೆಯಲು ನಂತರದ ಯಾವ ಕಲಾವಿದರೂ ಪ್ರಯತ್ನಿಸದೇ ಹೋದದ್ದು ಕನ್ನಡ ಸಿನಿಮಾರಂಗದ ಬಹುದೊಡ್ಡ ಸೋಲುಗಳಲ್ಲೊಂದು.

ಕೊನೆಯ ಮಾತು

        ಕನ್ನಡ ಸಿನಿಮಾ ರಂಗ ಈಗ  ಸೃಜನಶೀಲ ಮನಸ್ಸುಗಳ    ಕಾರ್ಯ ಕ್ಷೇತ್ರವಾಗಿ ಉಳಿದಿಲ್ಲ. ಹಣ ಮಾಡುವ ಉದ್ದೇಶದಿಂದ ಸಿನಿಮಾ ರಂಗಕ್ಕೆ  ಕಾಲಿಡುತ್ತಿರುವವರ ಸಂಖ್ಯೆ ವೃದ್ಧಿಸುತ್ತಿದೆ. ಹೀಗೆ ಹಣದ ಥೈಲಿಯೊಂದಿಗೆ ಬರುತ್ತಿರುವವರು ತಮ್ಮೊಂದಿಗೆ ಈ ನೆಲದ ಸಂಸ್ಕೃತಿಗೆ ಸಂಬಂಧವೇ ಇಲ್ಲದ ಕಥೆಗಳನ್ನೂ ಹೊತ್ತು ತರುತ್ತಿರುವರು. ಹಣ  ಗಳಿಸಬೇಕೆನ್ನುವ ದುರಾಸೆಯಿಂದ  ಯಾವ ಪೂರ್ವ ತಯ್ಯಾರಿಯೂ ಇಲ್ಲದೆ ರೀಲುಗಳನ್ನು ಸುತ್ತಿ ಹಸಿ ಹಸಿ ದೃಶ್ಯಗಳೊಂದಿಗೆ ಅಷ್ಟೇ ಹಸಿಯಾದ ಕಥೆಯನ್ನು  ಮನರಂಜನೆಯ ಹೆಸರಿನಲ್ಲಿ ಪ್ರೇಕ್ಷಕರ ಮುಂದಿಡುತ್ತಿರುವರು. ಹೀಗೆ ಭಾಷೆ ಮತ್ತು ಸಂಸ್ಕೃತಿಗೆ ಅಪರಿಚಿತರಾದ ಈ ನಿರ್ಮಾಪಕರುಗಳು ಸಿನಿಮಾ ಮಾಧ್ಯಮದ ಉದ್ದೇಶವನ್ನೇ ಮೂಲೆಗುಂಪಾಗಿಸಿ ಅದನ್ನು ಬಂಡವಾಳ ಹೂಡಿಕೆಯ ಉದ್ಯಮವಾಗಿ ಪರಿವರ್ತಿಸಿರುವರು. ಇಂಥ ಸಂಕ್ರಮಣದ  ಕಾಲಘಟ್ಟದಲ್ಲಿ  ಸಿನಿಮಾ ಮಾಧ್ಯಮದಿಂದ ನೀತಿ ಮತ್ತು ವೈಚಾರಿಕತೆಯನ್ನು ಅಪೇಕ್ಷಿಸುವುದು ಶುದ್ಧ ಮೂರ್ಖತನವಾಗುತ್ತದೆ.


- ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ