Friday, September 2, 2022

ಮೆದುಳಿಗೆ ಇಳಿಯುತ್ತಿದೆಯೇ ಮಾಹಿತಿ?

 



(೦೫.೦೭.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ)


ಇದು ಎರಡು ದಶಕಗಳ ಹಿಂದಿನ ಮಾತು-ಪದವಿ ತರಗತಿಯ ವಿದ್ಯಾರ್ಥಿಗಳಿಗೆ ನಾನು ಆಕ್ಸ್‍ಫರ್ಡ್ ಇಂಗ್ಲಿಷ್ ನಿಘಂಟುವಿನ ಸಂಪಾದಕ ಜೇಮ್ಸ್ ಮರ್ರೆ ಕುರಿತು ಪಾಠ ಮಾಡಬೇಕಿತ್ತು. ಬೃಹತ್ ಗಾತ್ರದ ಆಕ್ಸ್‍ಫರ್ಡ್ ಇಂಗ್ಲಿಷ್ ನಿಘಂಟುವಿನ ಯಾವ ಪುಟದಲ್ಲೂ ಅದರ ಸಂಪಾದಕ ಜೇಮ್ಸ್ ಮರ್ರೆ ಕುರಿತು ಹೆಚ್ಚಿನ ಮಾಹಿತಿ ಇರಲಿಲ್ಲ. ಕೊನೆಗೆ ಎರಡು ದಿನಗಳ ಕಾಲ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಭೇಟಿ ನೀಡಿ ಹಲವಾರು ಪರಾಮರ್ಶನ ಪುಸ್ತಕಗಳನ್ನು ಪರಿಶೀಲಿಸಿ ಮಾಹಿತಿಯನ್ನು ಹೆಕ್ಕಿ ತೆಗೆದಾಗ ಸಿಕ್ಕ ಮಾಹಿತಿ ಅರ್ಧಪುಟದಷ್ಟಿತ್ತು. 

ಇಂಟರ್‍ನೆಟ್ ಹೆಚ್ಚು ಬಳಕೆಯಿಲ್ಲದ ಕಾಲದಲ್ಲಿ ಮಾಹಿತಿಯ ಶೋಧನೆ ಹೆಚ್ಚು ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುತ್ತಿತ್ತು. ಆದರೆ ಆ ಎರಡು ದಿನಗಳ ಅನೇಕ ಪುಸ್ತಕಗಳ ಓದು ಹಲವು ವಿಷಯಗಳನ್ನು ತಿಳಿದುಕೊಳ್ಳಲು ಸಹಾಯವಾಯಿತು. ಇಂದು ಪರಿಸ್ಥಿತಿ ಹಿಂದಿನಂತಿಲ್ಲ- ಇಂಟರ್‍ನೆಟ್ ಬಳಕೆ ವ್ಯಾಪಕವಾಗಿದ್ದು ಜಾಲತಾಣದಲ್ಲಿ ಜೇಮ್ಸ್ ಮರ್ರೆ ಹೆಸರು ಟೈಪಿಸಿದ ಕ್ಷಣಾರ್ಧದಲ್ಲಿ ಹತ್ತಾರು ಪುಟಗಳ ಮಾಹಿತಿ ಕಂಪ್ಯೂಟರ್ ಪರದೆಯ ಮೇಲೆ ತೆರೆದುಕೊಳ್ಳುತ್ತದೆ. ಒಂದರ್ಥದಲ್ಲಿ ಮಾಹಿತಿಯು ಓದುಗನ ಬೆರಳ ತುದಿಯಲ್ಲಿದೆ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ.

ಸಾಮಾನ್ಯ ಮಾಹಿತಿ ಮಾತ್ರವಲ್ಲದೆ ಇಂದು ಸಂಶೋಧನಾ ಲೇಖನಗಳು ಕೂಡ ಓದುಗರಿಗೆ ಉಚಿತವಾಗಿ ಲಭ್ಯವಾಗುತ್ತಿವೆ. ಸ್ಕಿ-ಹಬ್ ಹೆಸರಿನ ಜಾಲತಾಣ ಸಂಶೋಧನಾ ಲೇಖನವೊಂದು ಪ್ರಕಟವಾದ ಕೆಲವೇ ದಿನಗಳಲ್ಲಿ ಓದುಗರ ಕೈಸೇರುವಂತೆ ಮಾಹಿತಿ ಪಡೆಯುವಿಕೆಯನ್ನು ಸರಳಗೊಳಿಸಿದೆ. ಸಾಮಾನ್ಯವಾಗಿ ಸಂಶೋಧನಾ ನಿಯತಕಾಲಿಕೆಗಳ ಜಾಲತಾಣದಿಂದ ಲೇಖನವನ್ನು ಪಡೆಯಲು ಓದುಗ ನಿರ್ಧಿಷ್ಟ ಮೊತ್ತದ ಹಣವನ್ನು ಭರಿಸಬೇಕು. ಆದರೆ ಸ್ಕಿ-ಹಬ್ ಜಾಲತಾಣದ ಮೂಲಕ ಹೊಸ ಸಂಶೋಧನಾ ಲೇಖನಗಳನ್ನು ಕೂಡ ಉಚಿತವಾಗಿ ಪಡೆಯುವ ಸೌಲಭ್ಯವುಂಟು. ಈ ಮಾಹಿತಿ ಸೋರುವಿಕೆಯನ್ನು ತಡೆಗಟ್ಟಲು ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಅಂತರರಾಷ್ಟ್ರೀಯ ನ್ಯಾಯÁಲಯದಲ್ಲಿ ಸ್ಕಿ-ಹಬ್ ಮೇಲೆ ದಾವೆ ಹೂಡಿವೆ. 

  ಮಾಹಿತಿಯು ಸುಲಭವಾಗಿ ಮತ್ತು ಹೆಚ್ಚಿನ ಪರಿಶ್ರಮವಿಲ್ಲದೆ ದೊರೆಯುತ್ತಿರುವುದರಿಂದ ಇಂದು ಬರವಣಿಗೆಯಲ್ಲಿ ‘ಕತ್ತರಿಸು ಮತ್ತು ಅಂಟಿಸು’ (ಕಟ್ ಆ್ಯಂಡ್ ಪೇಸ್ಟ್) ಸಂಸ್ಕೃತಿಯು ಮುನ್ನೆಲೆಗೆ ಬಂದಿದೆ. ಅತಿಹೆಚ್ಚಿನ ಬರಹಗಾರರು ತಮ್ಮ ಅಧ್ಯಯನದ ವಿಷಯದಲ್ಲಿ ಪ್ರಕಟವಾದ ವಿವಿಧ ಲೇಖನಗಳನ್ನು ಸಂಗ್ರಹಿಸಿ ಪ್ರತಿ ಲೇಖನದಿಂದ ಒಂದಿಷ್ಟು ಮಾಹಿತಿಯನ್ನು ಪಡೆದುಕೊಂಡು ಹೀಗೆ ಕಲೆಹಾಕಿದ ಮಾಹಿತಿಗೆ ಹೊಸ ಲೇಖನದ ಸ್ವರೂಪ ನೀಡುತ್ತಿರುವರು. ಬರಹಗಾರರ ಈ ನಕಲು ಸಂಸ್ಕೃತಿಗೆ ತಡೆ ಹಾಕಲು ಪ್ರಕಾಶಕರು ನಕಲು ಅಥವಾ ಕೃತಿಚೌರ್ಯವನ್ನು ಪತ್ತೆ ಹಚ್ಚಲು ತಂತ್ರಾಂಶಗಳನ್ನು ಉಪಯೋಗಿಸುತ್ತಿರುವರು. ಇಲ್ಲಿ ಜಾಣ ಬರಹಗಾರ ಮೂಲ ಲೇಖನದ ವಾಕ್ಯದಲ್ಲಿನ ಒಂದೆರಡು ಶಬ್ದಗಳನ್ನು ಕೈಬಿಡುವುದರಿಂದಲೊ ಅಥವಾ ಹೊಸ ಶಬ್ದಗಳ ಸೇರ್ಪಡೆಯಿಂದ ತಂತ್ರಾಂಶದ ನಕಲು ಶೋಧನೆಯ ಕಾರ್ಯವನ್ನೇ ಕಷ್ಟಸಾಧ್ಯಗೊಳಿಸುತ್ತಿರುವನು.

ತಂತ್ರಜ್ಞಾನ ಕೊಡಮಾಡುತ್ತಿರುವ ಸೌಲಭ್ಯಗಳಿಂದ ವಿದ್ಯಾರ್ಥಿಗಳು ಶಿಕ್ಷಕರ ಸಹಾಯವಿಲ್ಲದೆ ಅಭ್ಯಾಸಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಸುಲಭವಾಗಿ ಕಲೆಹಾಕುತ್ತಿರುವರು. ಪ್ರಾಯೋಗಿಕ ತರಗತಿಗಳಿಗೆ ಹಾಜರಾದರೆ ಸಾಕು ಥಿಯರಿಗೆ ಸಂಬಂಧಿಸಿದ ಸಾಮಗ್ರಿಯನ್ನು ತರಗತಿಗೆ ಹಾಜರಾಗದೇ ಕಲೆಹಾಕಬಹುದೆನ್ನುವ ಆತ್ಮವಿಶ್ವಾಸ ವಿದ್ಯಾರ್ಥಿಗಳಲ್ಲಿ ಇಂದು ನಾವು ಕಾಣುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನದ ಮೊರೆ ಹೋಗುತ್ತಿರುವುದರಿಂದ ಕಲಿಕೆ ಎನ್ನುವುದು ಶಿಕ್ಷಕ ಮತ್ತು ವಿದ್ಯಾರ್ಥಿ ಜೊತೆಯಾಗಿ ಪಾಲ್ಗೊಳ್ಳುವ ಚಟುವಟಿಕೆ ಎನ್ನುವ ಮಾತು ಸವಕಲಾಗಿ ಈಗ ಕಲಿಕೆಯು ಏಕಮುಖವಾದ ಕ್ರಿಯೆಯಾಗಿ ಬದಲಾಗುತ್ತಿದೆ.

ತಂತ್ರಜ್ಞಾನ ಅಗಾಧ ಪ್ರಮಾಣದಲ್ಲಿ ಮಾಹಿತಿಯನ್ನು ಉತ್ಪಾದಿಸಲು ಮತ್ತು ಓದುಗರಿಗೆ ಸುಲಭವಾಗಿ ದೊರೆಯಲು ನೆರವಾಗುತ್ತಿರುವ ಸಂದರ್ಭದಲ್ಲೇ ಗುಣಾತ್ಮಕ ಸಂಶೋಧನೆಗಳಾಗುತ್ತಿಲ್ಲ ಎಂದು ಚರ್ಚಿಸುವ ವಿಲಕ್ಷಣ ಸನ್ನಿವೇಶದಲ್ಲಿ ನಾವಿದ್ದೇವೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ, ರಾಷ್ಟ್ರೀಯ ವೈದ್ಯಕೀಯ ಸಮಿತಿ, ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ಈ ಉನ್ನತ ಶಿಕ್ಷಣ ಸಮಿತಿಗಳು ಶಿಕ್ಷಕರು ಉದ್ಯೋಗಬಡ್ತಿ ಮತ್ತು ವೇತನಬಡ್ತಿಗಾಗಿ ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದನ್ನು ಕಡ್ಡಾಯಗೊಳಿಸಿವೆ. ಶಿಕ್ಷಕರ ಈ ಅಗತ್ಯವನ್ನು ಮನಗಂಡು ಅನೇಕ ಸಂಶೋಧನಾ ನಿಯತಕಾಲಿಕೆಗಳು ಲೇಖನಗಳನ್ನು ಪ್ರಕಟಿಸಲು ನಿರ್ಧಿಷ್ಟ ಮೊತ್ತದ ಶುಲ್ಕವನ್ನು ನಿಗದಿಪಡಿಸಿವೆ. ಕೆಲವೊಮ್ಮೆ  ತುರ್ತುಪರಿಸ್ಥಿತಿಗನುಗುಣವಾಗಿ ಶಿಕ್ಷಕರು ಹೆಚ್ಚುವರಿ ಶುಲ್ಕವನ್ನು ಪಾವತಿಸಿ ತರಾತುರಿಯಲ್ಲಿ ತಮ್ಮ ಸಂಶೋಧನಾ ಲೇಖನಗಳನ್ನು ಶೀಘ್ರವಾಗಿ ಪ್ರಕಟಿಸುತ್ತಿರುವರು. ಶಿಕ್ಷಕರ ವೇತನ ಮತ್ತು ಉದ್ಯೋಗದ ಬಡ್ತಿಯನ್ನೇ ಬಂಡವಾಳವಾಗಿಸಿಕೊಂಡು ಅನೇಕ ನಿಯತಕಾಲಿಕೆಗಳು ಹೆಚ್ಚಿನ ಹಣ ಪಡೆದು ಲೇಖನಗಳನ್ನು ಪ್ರಕಟಿಸುತ್ತಿವೆ. ಈ ಬೆಳವಣಿಗೆಯನ್ನು ನಿಯಂತ್ರಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ ನಿರ್ಧಿಷ್ಟ ನಿಯತಕಾಲಿಕೆಗಳಲ್ಲೇ ಲೇಖನಗಳನ್ನು ಪ್ರಕಟಿಸಬೇಕೆನ್ನುವ ನಿಯಮವನ್ನು ಜಾರಿಗೆ ತಂದಿದೆ.

ವಿವಿಧ ಉನ್ನತ ಶಿಕ್ಷಣ ಸಮಿತಿಗಳ ಕಠಿಣ ನಿಯಮಗಳಿಂದಾಗಿ ಸಂಶೋಧನೆಯ ಪ್ರಮಾಣದಲ್ಲಿ ಏರುಗತಿ ಕಂಡುಬರುತ್ತಿದೆಯಾದರೂ ಗುಣಾತ್ಮಕ ಸಂಶೋಧನೆ ಎನ್ನುವುದು ಇನ್ನೂ ಮರಿಚಿಕೆಯಾಗಿಯೆ ಉಳಿದಿದೆ. ವೇತನಬಡ್ತಿ, ಉದ್ಯೋಗಬಡ್ತಿ, ಹುದ್ದೆಯ ನೇಮಕಾತಿಯ ನಿಯಮಗಳ ಚೌಕಟ್ಟಿಗೊಳಪಡಲು ಇಲ್ಲಿ ಬಹುಪಾಲು ಸಂಶೋಧನೆಗಳು ನಡೆಯುತ್ತಿವೆಯೇ ವಿನಾ ರಾಷ್ಟ್ರದ ಪ್ರಗತಿಗೆ ನೆರವಾಗಬಲ್ಲ ನಿಜವಾದ ಅರ್ಥದ ಸಂಶೋಧನೆಗಳು ನಿರೀಕ್ಷಿತ ಪ್ರಮಾಣದಲ್ಲಾಗುತ್ತಿಲ್ಲ. ಸಂಶೋಧನಾ ಪ್ರಬಂಧಗಳು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಗ್ರಂಥಾಲಯಗಳ ಅಲ್ಮೆರಾಗಳಿಗೆ ಶೋಭೆ ತರುತ್ತಿವೆಯೇ ಹೊರತು ಸಂಶೋಧಕರ ವಲಯದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗುತ್ತಿಲ್ಲ.

ಇನ್ನು ಸಾಹಿತ್ಯ ಕೃತಿಗಳನ್ನೂ ಡಿಜಿಟಲೀಕರಣಗೊಳಿಸಿ ಓದುಗರಿಗೆ ಒದಗಿಸುವ ಕಾರ್ಯಕ್ಕೆ ಸಾರ್ವಜನಿಕ ಗ್ರಂಥಾಲಯ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಚಾಲನೆ ದೊರೆತಿದೆ. ಏಕಕಾಲಕ್ಕೆ ಸಾಹಿತ್ಯ ಕೃತಿಯೊಂದು ಡಿಜಿಟಲೀಕರಣದ ರೂಪದಲ್ಲಿ ಹಲವು ಓದುಗರಿಗೆ ಲಭ್ಯವಾಗುವ ಈ ಸೌಲಭ್ಯವನ್ನು ಓದುಗರ ವಲಯ ಒಕ್ಕೊರಲಿನಿಂದ ಸ್ವಾಗತಿಸುತ್ತಿಲ್ಲ. ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಓದುವ ಸಾಹಿತ್ಯ ಕೃತಿಯೊಂದು ಪುಸ್ತಕ ಓದಿದಂತೆ ಸರಾಗವಾಗಿ ಮನಸ್ಸಿಗಿಳಿಯಲಾರದು ಎನ್ನುವ ಸಮಸ್ಯೆ ಅನೇಕ ಓದುಗರದು. ಎಲೆಕ್ಟ್ರಾನಿಕ್ ಮಾಧ್ಯಮದ  ವ್ಯಾಪಕ ಬಳಕೆಯಿಂದ ಪುಸ್ತಕ ಸಂಸ್ಕೃತಿ ನಶಿಸಿಹೋಗಬಹುದೆನ್ನುವ ಆತಂಕ ಒಂದುವರ್ಗದ ಓದುಗರನ್ನು ಕಾಡುತ್ತಿದೆ. ಈ ನಡುವೆ ಮಾಹಿತಿಯ ಸುಲಭ ಪ್ರಾಪ್ತಿ ಕೃತಿಚೌರ್ಯವನ್ನು ಸುಗಮವಾಗಿಸಿರುವುದರಿಂದ ಶಿಕ್ಷಕರ, ಸಂಶೋಧಕರ ಮತ್ತು ವಿದ್ಯಾರ್ಥಿಗಳ ಅರಿವಿನ ವ್ಯಾಪ್ತಿ ವಿಸ್ತರಿಸುತ್ತಿಲ್ಲ ಎನ್ನುವ ಆರೋಪ ಶೈಕ್ಷಣಿಕ ವಲಯದಲ್ಲಿ ಕೇಳಿಬರುತ್ತಿದೆ.

-ರಾಜಕುಮಾರ ಕುಲಕರ್ಣಿ