Tuesday, July 21, 2026

ಗ್ರಾಮಾಯಣ-ಕಥೆ

 ಗ್ರಾಮಾಯಣ

-ರಾಜಕುಮಾರ ಕುಲಕರ್ಣಿ


(ಮಾರ್ಚ್ ೨೦೨೬ ರ 'ಮಯೂರ' ಪತ್ರಿಕೆಯಲ್ಲಿ ಪ್ರಕಟವಾದ ಕಥೆ)

ಬಸವರಾಜಪ್ಪ ಆಡಿದ ಮಾತು ಕೇಳಿ ರಾಮಚಂದ್ರಮೇಷ್ಟ್ರಿಗೆ ಎದೆಮೇಲೆ ಮುಷ್ಟಿಯಿಂದ ಗುದ್ದಿದಂಗಾಗಿತ್ತು. ಎಂದೂ ಇಷ್ಟೊಂದು ಬಿರುಸಿನಿಂದ ಬಸವರಾಜಪ್ಪ ಮಾತನಾಡಿದವನಲ್ಲ. ಹತ್ತುವರ್ಷಗಳ ಹಿಂದೆ ಪಕ್ಕದ ಗಣಜಲಖೇಡದಿಂದ ಕುಮಸಿಗೆ ವರ್ಗವಾಗಿ ಬಂದ ರಾಮಚಂದ್ರ ಮೇಷ್ಟ್ರಿಗೆ ಊರಿನಲ್ಲಿ ವಾಸಿಸಲು ಒಂದು ನೆಲೆ ಅಂತ ಸಿಕ್ಕಿದ್ದು ಬಸವರಾಜಪ್ಪನ ಮನೆನಲ್ಲಿ. ಮೇಷ್ಟ್ರ ಸಣ್ಣ ಕುಟುಂಬ ನೆಲೆ ನಿಲ್ಲಲು ಎರಡು ಕೋಣೆಗಳಷ್ಟು ಜಾಗಸಾಕಿತ್ತು. ಬಸವರಾಜಪ್ಪನ ಮನೆಯಲ್ಲಿ ಪಡಸಾಲೆಗೆ ಹತ್ತಿಕೊಂಡಿದ್ದ ಎರಡು ಕೋಣೆಗಳು ಖಾಲಿ ಇದ್ದವು. ತೊಂದರೆ ಅನಿಸದಿದ್ದರೆ ಆ ಕೋಣೆಗಳಲ್ಲಿ ಸಂಸಾರ ಹೂಡಬಹುದೆಂದು ಬಸವರಾಜಪ್ಪ, ರಾಮಚಂದ್ರಮೇಷ್ಟ್ರಿಗೆ ಹೇಳಿದ್ದ. ಮೇಷ್ಟ್ರಿಗೂ ಅಪರಿಚತ ಜಾಗದಲ್ಲಿ ಒಳ್ಳೆಯ ಜನರ ಸಾಂಗತ್ಯದ ಅಗತ್ಯವಿತ್ತು. ಮಗ ಬೆಂಗಳೂರಿನಲ್ಲಿ ಪಿ.ಯು.ಸಿ ಓದುತ್ತಿದ್ದು ತಾವಿಬ್ಬರೆ ಗಂಡ ಹೆಂಡತಿ ಇರುವುದರಿಂದ ಎರಡು ಕೋಣೆಗಳ ಜಾಗ ಸಂಸಾರ ಹೂಡಲು ತಕ್ಕುದಾಗಿತ್ತು. ಹೀಗೆ ಬಸವರಾಜಪ್ಪನ ಮನೆ ಸೇರಿದ ರಾಮಚಂದ್ರಮೇಷ್ಟ್ರು ತಮ್ಮ ನಡೆ ನುಡಿಯಿಂದ ಹತ್ತಿರವಾಗಿ ಅವನ ಮನಸ್ಸು ಸೇರಲು ತಡವಾಗಲಿಲ್ಲ. ಮೇಷ್ಟ್ರ ಪತ್ನಿ ಸೀತಮ್ಮ ಪರಮಸಾಧ್ವಿ ಹೆಣ್ಣುಮಗಳು. ಅವರು ಬಸವರಾಜಪ್ಪನ ಪತ್ನಿ ಪಾರ್ವತಿಗೆ ಬಲುಬೇಗನೆ ಅಕ್ಕನ ಸ್ಥಾನ ತುಂಬಿದರು. ಬಸವರಾಜಪ್ಪನ ಎರಡು ಮಕ್ಕಳು ಕೂಡ ಮೇಷ್ಟ್ರ ಕುಟುಂಬದೊಂದಿಗೆ ಹೊಂದಿಕೊಂಡು ದೊಡ್ಡಪ್ಪ, ದೊಡ್ಡಮ್ಮ ಎಂದು ಬಾಯಿತುಂಬ ಕರೆಯುತ್ತಿದ್ದರು. ಈ ಹತ್ತು ವರ್ಷಗಳಲ್ಲಿ ಎರಡು ಕುಟುಂಬಗಳ ನಡುವೆ ಒಮ್ಮೆಕೂಡ ಅಸಮಾಧಾನ ಅಸಹನೆ ಹಣಿಕಿಕ್ಕಿರಲಿಲ್ಲ. ಇವತ್ತು ಮಾತ್ರ ಬಸವರಾಜಪ್ಪನ ನಿಯಂತ್ರಣ ಮೀರಿ ನಾಲಿಗೆ ಮಾತು ಹೊರಹಾಕಿತ್ತು. ರಾಮಚಂದ್ರಮೇಷ್ಟ್ರಿಗೆ ಕುಳಿತಲ್ಲಿ ನಿಂತಲ್ಲಿ ಬಸವರಾಜಪ್ಪನ ಮಾತುಗಳೇ ಕಿವಿಯಲ್ಲಿ ಪ್ರತಿಧ್ವನಿಸಿದಂತಾಗಿ ಮಕ್ಕಳಿಗೆ ಪಾಠಮಾಡಲು ಆಸಕ್ತಿ ಇಲ್ಲದಂತಾಗಿ ಹೆಡ್‍ಮೇಷ್ಟ್ರಗೆ ಹೇಳಿ ಮನೆಗೆ ಬಂದವರು ಕೋಣೆಯಲ್ಲಿ ಅಡ್ಡಾದರು.  ಎಂದೂ ಶಾಲೆಯ ಕೆಲಸದ ನಡುವೆ ಮನೆಗೆ ಬರದ ಪತಿ ಹೀಗೆ ಮನೆಗೆ ಬಂದು ಮಲಗಿರುವುದು ನೋಡಿ ಗಾಬರಿಯಾದ ಸೀತಮ್ಮ ಜ್ವರ ಬಂದಿರಬಹುದೆಂದು ಹಣೆಮುಟ್ಟಿ ನೋಡಿದರು. ಪತ್ನಿಯ ಕೈ ಸ್ಪರ್ಷದಿಂದ ಎಚ್ಚರಾದ ರಾಮಚಂದ್ರಪ್ಪನವರು ಕಣ್ಣುಗಳನ್ನು ತೆರೆದದ್ದೆ ನೀರಧಾರೆ ಕಪೆÇೀಲದ ಮೂಲಕ ಹರಿದು ತಲೆದಿಂಬನ್ನು ತೋಯಿಸಿತು. ಗಂಡನ ದು:ಖಕ್ಕೆ ಇಂದು ಬೆಳಗ್ಗೆ ಬಸವರಾಜಪ್ಪ ಆಡಿದ ಮಾತುಗಳೇ ಕಾರಣ ಎಂದು ಸೀತಮ್ಮನವರಿಗೆ ಅರ್ಥವಾಯಿತು. ಸೂಕ್ಷ್ಮಸ್ವಭಾವದ ಪತಿಯ ಮನಸ್ಸಿಗೆ ಘಾಸಿಯಾಗಿದೆ ಎಂದರಿವಾಗಿ ಹೊಟ್ಟೆಯಲ್ಲಿ ಹುಟ್ಟಿದ ಸಂಕಟ ಕೊರಳ ಮೂಲಕ ಹಾಯ್ದು ಕಣ್ಣುಗಳಲ್ಲಿ ಕಂಬನಿ ಮಿಡಿಸಿತು. ಆ ಕ್ಷಣಕ್ಕೆ ಬಸವರಾಜಪ್ಪನ ಮೇಲೆ ಸೀತಮ್ಮನವರಿಗೆ ಕೋಪ ಬಂದರೂ ಅವನು ಆಡಿದ ಮಾತಿನಲ್ಲಿ ಸತ್ಯವಿದೆ ಎಂದು ಅವರ ಒಳಮನಸ್ಸು ಹೇಳಿತು. ಸಿಟ್ಟಿನ ಭರದಲ್ಲಿ ಬಸವರಾಜಪ್ಪ ಕಠೋರವಾಗಿ ಮಾತನಾಡಿರಬಹುದು, ಹೆಂಗರುಳಿನ ಅವನಿಗೂ ಮೇಷ್ಟ್ರ ಮನಸ್ಸು ನೋಯಿಸಿದ್ದಕ್ಕಾಗಿ ಪಶ್ಚಾತ್ತಾಪವಾಗಿರುತ್ತದೆ ಎನ್ನುವ ಭರವಸೆ ಸೀತಮ್ಮನವರ ಮನಸ್ಸಿಗೆ ಸಮಾಧಾನ ತಂದಿತು.      

* * *

ರಾಮಚಂದ್ರಮೇಷ್ಟ್ರ ಮನಸ್ಸಿಗೆ ನೋವಾಗುವಂತೆ ಬಸವರಾಜಪ್ಪ ಮಾತನಾಡಿದ್ದರ ಹಿಂದೆ ಬಲವಾದ ಕಾರಣವಿತ್ತು. ನಡೆದದ್ದಿಷ್ಟು-ಅಂದು ಬೆಳಗ್ಗೆ ಶಾಲೆಗೆ ಹೋಗಲೆಂದು ತಯ್ಯಾರಾಗಿ ಹೊರಬಂದ ರಾಮಚಂದ್ರಮೇಷ್ಟ್ರಿಗೆ ಪಡಸಾಲೆಯಲ್ಲಿ ಕುಳಿತಿದ್ದ ಬಸವರಾಜಪ್ಪ ಕಣ್ಣಿಗೆಬಿದ್ದ. ಕಳೆದ ಎರಡು ದಿನಗಳಿಂದ ಬಸವರಾಜಪ್ಪನೊಂದಿಗೆ ಮಾತನಾಡಬೇಕೆಂದು ಕಾಯುತ್ತಿದ್ದ ಮೇಷ್ಟ್ರಿಗೆ ಆ ಘಳಿಗೆಯೇ ಕೂಡಿಬಂದಿರಲಿಲ್ಲ. ಎರಡು ದಿನಗಳ ಹಿಂದೆ ಯಾವುದೋ ಕೆಲಸಕ್ಕೆಂದು ಕಲಬುರಗಿಗೆ ಹೋಗಿದ್ದ ಬಸವರಾಜಪ್ಪ ನಿನ್ನೆ ತಡರಾತ್ರಿ ಮನೆಗೆ ಬಂದಿದ್ದ. ಬಸವರಾಜಪ್ಪ ಬರುವುದನ್ನೇ ಕಾಯುತ್ತಿದ್ದ ಮೇಷ್ಟ್ರು ಇಂದು ಅವನು ಕಣ್ಣಿಗೆ ಬಿದ್ದದ್ದೆ ಮಾತಿಗಾರಂಭಿಸಿದರು ‘ಬಸವರಾಜಪ್ಪ ಒಂದು ಸುದ್ಧಿ ಕಿವಿಮ್ಯಾಲ ಬಿದ್ದದ. ನಿನ್ನ ನಾಲ್ಕೆಕರೆ ಜಮೀನನ್ಯಾಗ ಸೈಟ್ ಮಾಡಲಿಕತ್ತೀದಿ ಅಂತ ಕೇಳೀನಿ. ಇರೋ ಹೊಲ ಮಾರಿ ಮುಂದೇನು ಮಾಡಬೇಕಂತಿ. ಬಂಗಾರದಂತ ಹೊಲ ಅದಾ. ಭೂಮಿತಾಯಿ ನಿನಗೇನು ಕಡಿಮಿ ಮಾಡ್ಯಾಳಂತ ಮಾರಲಿಕತ್ತಿದಿ. ನಿಮ್ಮಂಥ ರೈತರು ಹೀಂಗ ಕೃಷಿಜಮೀನು ಪರಭಾರೆ ಮಾಡಕೋತ ಹೋದರಿ ಅಂದರ ಜನ ಏನು ಮಣ್ಣು ತಿನ್ನಬೇಕೇನು. ರೈತನನ್ನ ಅನ್ನದಾತ ಅಂತ ಸುಮ್ನೆ ಅಂದಿಲ್ಲ. ಹಸಿದ ಹೊಟ್ಟಿಗೊಳಿಗಿ ತುತ್ತು ನೀಡೋ ಪುಣ್ಯದ ಕೆಲಸ ರೈತ ಮಾಡತಾನ. ನನಗ್ಯಾಕೋ ನೀ ಮಾಡೋ ಕೆಲಸ ಸರಿಕಾಣ್ತಿಲ್ಲ’ ಎಂದ ಮೇಷ್ಟ್ರಿಗೆ ಹಿಂದೆಯೇ ತಾವು ಆಡಿದ್ದು ಸ್ವಲ್ಪ ಬಿರುಸಾಯಿತೇನೋ ಅನಿಸಿತು. ‘ಮೇಷ್ಟ್ರೆ ವ್ಯಾಳಕ್ಕ ಸರಿಯಾಗಿ ಮಳಿ ಆಗವಲ್ದು. ಬೆಳಿಬೆಳದು ರೊಕ್ಕ ಕೈಗಿ ಬರೊದರೊಳಗ ಸಾಲ ಅದರ ಎರಡರಷ್ಟಾಗಿರತದ. ಮಣ್ಣಾಗ ಮಣ್ಣಾಗಿ ದುಡಿಯೋದೆ ಆಯ್ತು ಸುಖಾ ಅನ್ನೋದು ಹಣ್ಯಾಗ ಬರದಿಲ್ಲ. ಈ ಊರಾಗಿನ ದೊಡ್ಡಮಂದಿ ಬ್ಯಾರೆ ರೋಡಿಗಿ ಸಮೀಪದ ಹೊಲ ಅಂತ ಕಣ್ಣ ಹಾಕ್ಯಾರ. ಸುಮ್ಮ ಕೂತರ ಹೊಲ ಕೈಬಿಟ್ಟು ಹೋಗತದ. ದೇವಸ್ಥಾನ ಕಟ್ಟಿಸಬೇಕು ಎರಡು ಎಕರೆ ಹೊಲ ಪುಗ್ಸಟ್ಟೆ ಕೊಡು ಅಂತ ಧೀರೆಂದ್ರಗೌಡ ಮತ್ತ ಅಲ್ದಿ ಮಲಕಾಣಿ ಗಂಟು ಬಿದ್ದಾರ. ಇವರು ಕೇಳೋದು ನೋಡಿ ಮಸೀದಿಗೂ ಬೇಕು ಅಂತ ಬೇಡಲಿಕತ್ತಾರ. ಹೀಂಗ ಪುಗ್ಸಟ್ಟೆ ದಾನ ಮಾಡಕೋತ ಹೋದರ ಬೀದಿಗಿ ಬಿದ್ದು ಹೆಂಡತಿ ಮಕ್ಕಳ ಜೊತಿ ಭಿಕ್ಷಾ ಬೇಡಬೇಕಾಗತದ. ಇದೆಲ್ಲಾ ಉಸಾಬರಿನೇ ಬ್ಯಾಡ ಅಂತ ಹೊಲದಾಗ ಸೈಟ್ ಮಾಡಿ ಮಾರಬೇಕಂತ ವಿಚಾರ ಮಾಡೀನಿ. ಸಿಟ್ಯಾನ ಮಂದಿ ಸೈಟ್ ಖರೀದಿ ಮಾಡಲಿಕ್ಕಿ ತುದಿಗಾಲ ಮ್ಯಾಲ ನಿಂತಾರ. ಬಂದ ರೊಕ್ಕದಾಗ ಸಿಟ್ಯಾಗ ಏನರ ವ್ಯಾಪಾರ ಮಾಡಿ ನಾಲ್ಕು ದುಡ್ಡು ಗಳಿಸಿದರಾಯಿತು’ ಎಂದ ಬಸವರಾಜಪ್ಪನ ಮಾತಿನಲ್ಲಿ ನಿಲುವು ಖಚಿತವಾಗಿರುವಂತೆ ಮೇಷ್ಟ್ರಿಗೆ ತೋರಿತು. ‘ನಿನ್ನಂಗ ಊರಿನ ರೈತರೆಲ್ಲ ವಿಚಾರ ಮಾಡಿದರ ಕೃಷಿ ಜಮೀನುಗೋಳು ಸೈಟು, ಫ್ಯಾಕ್ಟರಿಗಳಾಗಿ ಬದಲಾಗತಾವ. ವರ್ಷದಿಂದ ವರ್ಷಕ್ಕ ಕೃಷಿ ಜಮೀನು ಕಡಿಮಿ ಆಗಲೀಕತ್ತದ. ಅದಕ್ಕೆ ನೋಡು ಕಾಳು ಕಡಿಗಳ ಧಾರಣಿ ಮುಗಿಲು ಮುಟ್ಯಾದ. ನೀ ಮಾಡಿದ ನಿರ್ಧಾರ ಅನ್ನದಾತನ ಹೆಸರಿಗಿ ಮಸಿ ಬಳದಂಗ’ ಎಂದು ರಾಮಚಂದ್ರಮೇಷ್ಟ್ರು ಸಿಟ್ಟಿನಿಂದ ನುಡಿದರು. ಮೇಷ್ಟ್ರ ಮಾತು ಬಸವರಾಜಪ್ಪನನ್ನು ಕೆರಳಿಸಿತು ‘ಅಲ್ರೀ ಮೇಷ್ಟ್ರೆ ರೈತರು ನಾವೇನು ದುಡಿದು ಇಡೀ ಜಗತ್ತಿಗಿ ಅನ್ನ ಉಣ್ಣಕ್ಕ ನೀಡತೀವಿ ಅಂತ ಆಣಿ ಮಾಡಿವೇನು. ಅನ್ನದಾತ, ದೇಶದ ಬೆನ್ನೆಲುಬು ಅಂತ ದೊಡ್ಡ ದೊಡ್ಡ ಮಾತ ಆಡ್ತಿರಿ ಆದರ ಅವನ ಕಷ್ಟ ಏನದಾ ಅಂತ ಕೇಳ್ತಿರೇನು. ನೀವು ಹೀಂಗ ರೈತರ ಬಗ್ಗೆ ಚಿಂತಿ ಮಾಡತಿದ್ದರ ಅವರು ನೇಣುಹಾಕಿಕೊಂಡು ಸಾಯ್ತಿರಲಿಲ್ಲ. ನಿಮಗೇನೋ ಸರ್ಕಾರ ತಿಂಗಳಾ ತಿಂಗಳಾ ಪಗಾರ ಕೊಡತದ. ಆಯ್ತುವಾರ, ಹಬ್ಬಗೊಳು, ಬ್ಯಾಸಿಗಿ ಅಂತ ವರ್ಷನ್ಯಾಗ ಆರು ತಿಂಗಳು ಕೆಲಸ ಮಾಡದೆ ಪಗಾರ ತಗೋತಿರಿ. ರೈತ ಹಗಲ ರಾತ್ರಿ ಭೇದ ಇಲ್ಲದಂಗ ದುಡಿಬೇಕು. ಬಿಸಿಲ, ಮಳಿ, ಚಳಿಗಿ ಮೈಯೊಡ್ಡಬೇಕು. ಇಷ್ಟೆಲ್ಲ ದುಡಿದರ ಏನು ಸಿಗತದ. ಬೆಳೆದ ಬೆಳಿ ಸಾಲಕ್ಕ ಸಾಕಾಗವಲ್ಲದು. ಹೊಟ್ಟಿ ತುಂಬಿದ ನಿಮ್ಮಂಥವರಿಗೆ ಹಸಿದವರ ಸಂಕಟ ಏನು ಗೊತ್ತದ. ಓದಿದವರು ಪಾಠ ಮಾಡ್ತೀರಿ ಅಂತ ನನಗ ಬುದ್ದಿ ಹೇಳಲ್ಲಿಕ್ಕಿ ಬರಬ್ಯಾಡರಿ’ ಎಂದವನೇ ಬಸವರಾಜಪ್ಪ ಎದ್ದು ಹೆಗಲ ಮೇಲಿನ ವಸ್ತ್ರವನ್ನೊಮ್ಮೆ ಝಾಡಿಸಿ ಅಂಗಳ ದಾಟಿ ಹೊರಹೋದ. ರಾಮಚಂದ್ರಮೇಷ್ಟ್ರಿಗೆ ನಿಂತ ನೆಲ ಕುಸಿದಂತಾಯಿತು. ಎಂದೂ ಇಷ್ಟೊಂದು ಸದರದಿಂದ ಬಸವರಾಜಪ್ಪ ಅವರೊಂದಿಗೆ ವರ್ತಿಸಿರಲಿಲ್ಲ. ಅವಮಾನವಾದಂತಾಗಿ ಮೇಷ್ಟ್ರು ತಲೆತಗ್ಗಿಸಿ ಹೊರನಡೆದರು. ಶಾಲೆಯಲ್ಲಿ ಮಕ್ಕಳಿಗೆ ಪಾಠಮಾಡಲೆಂದು ಪುಸ್ತಕ ಕೈಗೆ ತೆಗೆದುಕೊಂಡ ಮೇಷ್ಟ್ರ ಕಿವಿಯಲ್ಲಿ ಬಸವರಾಜಪ್ಪನ ಮಾತುಗಳೇ ಗುಂಯ್‍ಗುಡತೊಡಗಿದವು. ಇನ್ನು ಪಾಠ ಮಾಡುವುದು ಸಾಧ್ಯವಿಲ್ಲ ಎನಿಸಿ ಮನೆಗೆ ಬಂದವರು ಕೋಣೆಯಲ್ಲಿ ಅಡ್ಡಾಗಿದ್ದರು.   

* * *

‘ಮೇಷ್ಟ್ರ ಎದುರು ಅಷ್ಟೊಂದು ಒರಟಾಗಿ ಮಾತಾಡಬಾರದಿತ್ತು. ಪಾಪ ತುಂಬ ನೊಂದಕೊಂಡಂಗ ಕಾಣತದ. ಅವರು ಹೇಳಿದರಾಗ ಏನು ತಪ್ಪ ಅದಾ. ಜಮೀನು ಮಾರಿದರ ನಾಲ್ಕು ದುಡ್ಡು ಕೈಗಿ ಬರಬಹುದು. ಆದರ ಕೂತು ಉಂಡರ ಕುಡುಕೆ ಹೊನ್ನು ಸಾಲದು ಅಂತ ತಿಳಿದವರು ಹೇಳ್ಯಾರ. ಕೈಯಾಗಿನ ರೊಕ್ಕ ಖರ್ಚಾದ ಮ್ಯಾಲ ಕೂಲಿ ಮಾಡಬೇಕಾಗತದ. ಇನ್ನು ಮಗಳ ಬಸರ ಬಾಣಂತನ ಅಂತ ಖರ್ಚುಗೋಳು ಅವಾ. ಮಗನ ಮದಿ ಮಾಡಬೇಕು. ಓದು ಬ್ಯಾಡ ಅಂತ ಅವನಿಗೂ ಒಕ್ಕಲುತನಾನೇ ಬದುಕಿನ ದಾರಿ ಮಾಡೀರಿ. ಇನ್ನು ಅವನಿಗಿ ಎಲ್ಲಿ ಕೆಲಸ ಸಿಗತದ. ಮೇಷ್ಟ್ರು ನಮ್ಮ ಒಳ್ಳೆದಕ್ಕೆ ಹೇಳ್ಯಾರ. ಜಮೀನು ಪರಭಾರೆ ಮಾಡೋ ವಿಚಾರ ಬ್ಯಾಡ. ಬಾವಿನೋ ಬೋರೋ ತೆಗಸಿದರಾಯಿತು. ನೀರಾದರ ಅನುಕೂಲ ಆಗತದ. ಮೇಷ್ಟ್ರಿಗಿ ಹೋಗಿ ಆಡಿದ್ದು ತಪ್ಪಾಯಿತು ಅಂತ ಕೇಳರಿ. ಕ್ಷಮಿಸುವಂಥ ದೊಡ್ಡ ಗುಣ ಅವರದು ಅದಾ’ ಊಟ ಬಡಿಸುವಾಗ ಹೆಂಡತಿ ಪಾರ್ವತಿ ಹೇಳಿದ ಮಾತು ಕೇಳಿ ಬಸವರಾಜಪ್ಪನಿಗೆ ಅವಳ ಮಾತಿನಲ್ಲೂ ಸತ್ಯವಿದೆ ಎನಿಸಿತು.

ಕಲಬುರಗಿಗೆ ಸಮೀಪದ ಕುಮಸಿ ಗ್ರಾಮದಲ್ಲಿ ಪಿತ್ರಾರ್ಜಿತವಾಗಿ ಬಂದ ನಾಲ್ಕೆಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತ ಉಡಲು ಉಣ್ಣಲು ಕಡಿಮೆ ಇಲ್ಲದಂತೆ ಸಂಸಾರದ ಬಂಡಿ ಎಳೆಯುತ್ತಿದ್ದ ಬಸವರಾಜಪ್ಪ ಒಂದುಕಾಲದಲ್ಲಿ ಪ್ರಗತಿಪರ ರೈತನೆಂದು ಸುತ್ತಲಿನ ಫಾಸಲೆಯಲ್ಲಿ ಹೆಸರುಗಳಿಸಿದ್ದ. ಜಮೀನಿನ ಮೇಲ್ಭಾಗದಲ್ಲಿದ್ದ ಕೆರೆಯಿಂದ ಕಾಲುವೆಯ ಮೂಲಕ ಹರಿದು ಬರುತ್ತಿದ್ದ ನೀರಿನಿಂದ ವರ್ಷದಲ್ಲಿ ಮೂರು ಬೆಳೆಗಳನ್ನು ಬೆಳೆಯಲು ಅನುಕೂಲವಿತ್ತು. ತೊಗರಿ, ಜೋಳ, ಕಡಲೆ ಜೊತೆಗೆ ಬೇಸಿಗೆಯಲ್ಲಿ ತರಕಾರಿ, ಗೋದಿ ಬೆಳೆದು ಬಸವರಾಜಪ್ಪ ತಕ್ಕಮಟ್ಟಿಗೆ ಸ್ಥಿತಿವಂತನೆನಸಿದ್ದ. ಇಡೀ ಕುಟುಂಬ ಹೊಲದಲ್ಲಿ ದುಡಿಯುತ್ತಿದ್ದುದ್ದರಿಂದ ಆದಾಯದ ಮೂಲ ಹೆಚ್ಚಾಗಿತ್ತು. ಪಿ.ಯು.ಸಿ ಓದು ಮುಗಿದದ್ದೆ ಮಗಳನ್ನು ಪಕ್ಕದೂರಿನ ಕಲ್ಲಹಂಗರಗಾ ಗ್ರಾಮದಲ್ಲಿ ಪ್ರಗತಿಪರ ರೈತನೆಂದು ಹೆಸರಾಗಿದ್ದ ಯುವಕನಿಗೆ ಮದುವೆ ಮಾಡಿಕೊಟ್ಟಿದ್ದ. ಮಗಳು ಕೃಷಿಕುಟುಂಬಕ್ಕೆ ಸೇರಿ ಅನ್ನದಾತನ ಅನನ್ಯ ಕಾಯಕದಲ್ಲಿ ಕೈಜೋಡಿಸಲಿ ಎನ್ನುವುದು ಬಸವರಾಜಪ್ಪನ ಬಲವಾದ ಆಸೆಯಾಗಿತ್ತು. ಅವನ ಆಸೆಗೆ ಇಂಬುಕೊಡುವಂತೆ ಕೃಷಿಕುಟುಂಬದ ಸಂಬಂಧ ಬಂದದ್ದೆ ವಿಳಂಬಮಾಡದೆ ಖುಷಿಯಿಂದ ಮದುವೆಮಾಡಿದ್ದ. ಇದ್ದೊಬ್ಬಮಗನ ತಲೆಗೆ ವಿದ್ಯೆ ಹತ್ತದೆ ಮ್ಯಾಟ್ರಿಕ್ ಫೇಲಾದಾಗ ತನ್ನೊಂದಿಗೆ ಹೊಲದ ಕೆಲಸದಲ್ಲಿ ಜೊತೆಯಾಗಿಸಿಕೊಂಡಿದ್ದ. ಊರಿನಲ್ಲಿ ಹೆಚ್ಚಿನ ಕೃಷಿಕರು ತಮ್ಮ ಗಂಡುಮಕ್ಕಳನ್ನು ಕಲಬುರಗಿಯಲ್ಲಿಟ್ಟು ಓದಿಸುತ್ತ ಈ ಒಕ್ಕಲುತನ ತಮ್ಮೊಂದಿಗೇ ಕೊನೆಗೊಳ್ಳಲೆಂದು ಬಯಸುತ್ತಿದ್ದರೆ ಬಸವರಾಜಪ್ಪನ ನಡೆ ಮಾತ್ರ ವಿರುದ್ಧ ದಿಕ್ಕಿಗಿತ್ತು. ತನ್ನ ನಂತರ ಒಕ್ಕಲುತನಕ್ಕೆ ಮಗನೇ ವಾರಸುದಾರನಾಗಬೇಕೆಂದು ಇಚ್ಛಿಸುತ್ತಿದ್ದವನಿಗೆ ಮಗ ಫೇಲಾದದ್ದು ಅವನಿಗೆ ರೋಗಿ ಬಯಸಿದ್ದು ವೈದ್ಯರು ಹೇಳಿದ್ದು ಒಂದೇ ಎನ್ನುವಂತಾಗಿತ್ತು. ಸಾವಯವ ಕೃಷಿಗೆ ಆದ್ಯತೆ ನೀಡುತ್ತಿದ್ದ ಬಸವರಾಜಪ್ಪನಿಗೆ ಭೂಮಿತಾಯಿ ಎಂದೂ ಮೋಸಮಾಡಿರಲಿಲ್ಲ. ಎರಡುಬಾರಿ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಪ್ರಗತಿಪರ ರೈತನೆಂದು ಗೌರವಕ್ಕೆ ಪಾತ್ರನಾಗಿದ್ದ. ಕೆಲವೊಮ್ಮೆ ಕಷ್ಟಗಳು ಹುಡುಕಿಕೊಂಡು ಬರುವಂತೆ ಕಳೆದ ಎರಡು ವರ್ಷಗಳಿಂದ ಮಳೆ ಇಲ್ಲದೆ ಕೆರೆ ಒಣಗಿತ್ತು. ನೀರಿನ ಕೊರತೆಯಿಂದ ಕೃಷಿಕೆಲಸ ಕುಂಠಿತಗೊಂಡಿತ್ತು. ಗಾಯದ ಮೇಲೆ ಉಪ್ಪು ಸವರಿದಂತೆ ಊರಿನಲ್ಲಿ ಕರಟಕ ದಮನಕರೆಂದೇ ಖ್ಯಾತರಾಗಿದ್ದ ಧೀರೇಂದ್ರಗೌಡ ಮತ್ತು ಅಲ್ದಿ ಮಲಕಾಣಿ ಮುಖ್ಯರಸ್ತೆಗೆ ಹೊಂದಿಕೊಂಡಿದ್ದ ಬಸವರಾಜಪ್ಪನ ಹೊಲದ ಮೇಲೆ ಕಣ್ಣುಹಾಕಿದ್ದರು. 

* * *

ಧೀರೇಂದ್ರಗೌಡ ಮತ್ತು ಅಲ್ದಿ ಮಲಕಾಣಿ ಅವರೇನೂ ಗಳಸ್ಯಕಂಠಸ್ಯ ಗೆಳೆಯರಾಗಿರಲಿಲ್ಲ. ತಮಗೆ ಲಾಭವಾಗುವುದಾದರೆ ಅದು ಎಂಥ ಹೀನಕೆಲಸವಾದರೂ ಇಬ್ಬರೂ ಒಂದಾಗುತ್ತಿದ್ದರು. ಪ್ರತಿಬಾರಿ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ತಮ್ಮ ತಮ್ಮ ಗುಂಪು ಕಟ್ಟಿಕೊಂಡು ಪ್ರತಿಸ್ಪರ್ಧಿಗಳಾಗುತ್ತಿದ್ದರು. ಮೇಲ್ನೋಟಕ್ಕೆ ಅವರಿಬ್ಬರ ನಡುವೆ ಶತ್ರುತ್ವ ಇದೆ ಎಂದು ಊರಿನವರಿಗೆ ಅನ್ನಿಸುತ್ತಿದ್ದರೂ ಆಂತರ್ಯದಲ್ಲಿ ಇಬ್ಬರ ನಡೆ ಒಂದೇ ಆಗಿತ್ತು. ಯಾರದೇ ಗುಂಪು ಪಂಚಾಯಿತಿಯ ಗದ್ದುಗೆ ಏರಿದರೂ ಲಾಭವನ್ನು ಇಬ್ಬರೂ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಬಡರೈತರ ಜಮೀನಿನ ಮೇಲೆ ಬ್ಯಾಂಕ್‍ನಿಂದ ಸಾಲ ಪಡೆದು ಜಮೀನಿನ ನಿಜವಾದ ಯಜಮಾನರಿಗೆ ದಕ್ಕದಂತೆ ಯೋಜನೆ ಹೆಣೆಯುತ್ತಿದ್ದರು. ಅದೆಷ್ಟೋ ರೈತರಿಗೆ ಸಾಲ ಕೊಟ್ಟು ಜಮೀನು ಬರೆಸಿಕೊಂಡು ಬಡ್ಡಿ ಚಕ್ರಬಡ್ಡಿ ಲೆಕ್ಕ ಬರೆದು ಕೃಷಿಭೂಮಿಯನ್ನು ತಮ್ಮ ಕೈವಶಮಾಡಿಕೊಳ್ಳುವಲ್ಲಿ ಇಬ್ಬರೂ ಸಿದ್ದಹಸ್ತರಾಗಿದ್ದರು. 

ಧೀರೇಂದ್ರಗೌಡ ಮತ್ತು ಮಲಕಾಣಿಗೆ ರೊಕ್ಕಕ್ಕಿಂತ ಯಾವುದೂ ಮುಖ್ಯವಾಗಿರಲಿಲ್ಲ. ಹೇಲಿನಲ್ಲಿ ರೊಕ್ಕ ಬಿದ್ದರೂ ನಾಲಿಗೆಯಿಂದ ಎತ್ತುವರು ಎಂದು ಅವರಿಬ್ಬರ ಬಗ್ಗೆ ಊರಿನ ಜನ ಮಾತನಾಡಿಕೊಳ್ಳುತ್ತಿದ್ದರು. ಧೀರೇಂದ್ರಗೌಡನ ಮಗಳು ಹೆರಿಗೆಯಲ್ಲಿ ರಕ್ತಸ್ರಾವವಾಗಿ ಸಾವನ್ನಪ್ಪಿದಾಗ ಗೌಡ ಬೀಗರಿಗೆ ಪೆÇಲೀಸ್ ಕಂಪ್ಲೇಂಟ್ ಕೊಡುವುದಾಗಿ ಹೆದರಿಸಿದ್ದ. ಮರ್ಯಾದೆಗೆ ಅಂಜಿದ ಅಳಿಯನ ಮನೆಯವರು ಐವತ್ತು ಲಕ್ಷ ರೂಪಾಯಿಗಳನ್ನು ಕೊಟ್ಟು ರಾಜಿ ಮಾಡಿಕೊಂಡಿದ್ದರು. ಗೌಡ ಮಗಳ ಹೆಣ ಮುಂದಿಟ್ಟುಕೊಂಡು ವ್ಯವಹಾರ ಮಾಡಿದನೆಂದು ಇಡೀ ಊರು ಅಸಹ್ಯಪಟ್ಟುಕೊಂಡಿತ್ತು. ಇದೇ ಧೀರೇಂದ್ರಗೌಡನ ಮಗ ಶರಣಗೌಡ ತಮ್ಮ ಹೊಲದ ಕೆಲಸದಾಳು ಮಾದನ ಮಗಳನ್ನು ಪ್ರಿತಿಸುವ ನಾಟಕವಾಡಿ ಅವಳು ಬಸಿರಾದದ್ದೆ ತಿರುಗಿಬಿದ್ದಿದ್ದ. ಧೀರೇಂದ್ರಗೌಡ ಹಣಕೊಟ್ಟು ಮಾದನ ಕುಟುಂಬವನ್ನು ಊರಿನಿಂದ ಒಕ್ಕಲೆಬ್ಬಿಸಿ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರಮಾಡಿದ್ದ. ಬಸವರಾಜಪ್ಪ ಮಧ್ಯಪ್ರವೇಶಿಸಿದ್ದರಿಂದ ಧೀರೇಂದ್ರಗೌಡನ ಲೆಕ್ಕಾಚಾರ ತಲೆಕೆಳಗಾಗಿ ಮಾದನಿಗೆ ನ್ಯಾಯ ಸಿಕ್ಕಿತ್ತು. ಗೌಡ ಒಲ್ಲದ ಮನಸ್ಸಿನಿಂದ ಮಾದನ ಮಗಳನ್ನು ಸಣ್ಣಗೌಡನಿಗೆ ತಂದುಕೊಂಡು ಸಂಬಂಧಿಕರಲ್ಲಿ ಮರ್ಯಾದೆ ಹೋಯಿತೆಂದು ಮಗ ಸೊಸೆ ಇಬ್ಬರನ್ನೂ ಕಲಬುರಗಿಯಲ್ಲಿ ಮನೆಮಾಡಿ ಇಟ್ಟಿದ್ದ. ಬಸವರಾಜಪ್ಪನ ಮುಖ ನೋಡಿದಾಗಲೆಲ್ಲ ಧೀರೇಂದ್ರಗೌಡನಿಗೆ ಮಾದ ತನ್ನ ಸಂಬಂಧಿ ಎನ್ನುವುದು ನೆನಪಾಗಿ ಹೊಟ್ಟೆಯಲ್ಲಿ ಬೆಂಕಿಸುರಿದಂತಾಗುತ್ತಿತ್ತು.

ಧೀರೇಂದ್ರಗೌಡ ಚಾಪೆಯಡಿ ತೂರಿದರೆ  ಅಲ್ದಿ ಮಲಕಾಣಿ ರಂಗೋಲಿ ಕೆಳಗೆ ನುಸುಳುವಷ್ಟು ನಿಸ್ಸೀಮನಾಗಿದ್ದ. ವಾಸಪ್ಪ ಕುಲಕರ್ಣಿ ತಬ್ಬಿಕೊ ಪ್ರಕರಣದಲ್ಲಿ ಇಡೀ ಐದುಲಕ್ಷ ರೂಪಾಯಿಗಳ ಗಂಟನ್ನು ನುಂಗಿ ನೀರುಕುಡಿದಿರುವನೆಂದು ಊರಲ್ಲಿ ಜನ ಗುಸುಗುಸು ಮಾತನಾಡುತ್ತಿದ್ದರಾದರೂ ಯಾರೊಬ್ಬರಿಗೂ ಬಾಯಿಬಿಟ್ಟು ಹೇಳುವ ಧೈರ್ಯವಿರಲಿಲ್ಲ. ಮಲಕಾಣಿಯ ಅಣ್ಣನ ಮಗಳನ್ನು ತಬ್ಬಿಕೊಂಡಿದ್ದೆ ಎಡವಟ್ಟಾಗಿ ವಾಸಪ್ಪ ಕುಲಕರ್ಣಿ ಐದು ಲಕ್ಷ ರೂಪಾಯಿಗಳ ದಂಡತೆತ್ತಿದ್ದ. ಹದಿಮೂರರ ವಯಸ್ಸಿನ ಕಲಾವತಿ ಅದ್ಯಾವ ಘಳಿಗೆಯಲ್ಲಿ ಅರವತ್ತರ ಮುದುಕ ವಾಸಪ್ಪನ ಕಾಮವನ್ನು ಕೆರಳಿಸಿದಳೋ ವೇಳೆಯಲ್ಲದ ವೇಳೆಯಲ್ಲಿ ಅಲ್ದಿ ಶಿವಣ್ಣನ ಮನೆಗೆಹೋಗಿ ಹರೆಯದ ಪೆÇೀರಿಯನ್ನು ತಬ್ಬಿಹಿಡಿದು ಎದೆಯ ಮೇಲೆ ಕೈಯಾಡಿಸಿದ್ದ. ಆಗಷ್ಟೆ ಕಲಾವತಿ ಮೈನೆರೆದು ಎಂಟು ದಿನಗಳಾಗಿತ್ತು. ಆಗಾಗ ಕೈಹಿಡಿದು ಮುದ್ದಿಸುತ್ತಿದ್ದನಾದರೂ ಅಜ್ಜನಪ್ರೀತಿ ಎಂದು ಮನೆಯವರೂ ತಲೆಕೆಡಿಸಿಕೊಂಡಿರಲಿಲ್ಲ. ಪೆÇೀರಿ ಮೈನೆರೆಯುವುದನ್ನೇ ಕಾಯುತ್ತಿದ್ದ ಮುದುಕ ಮೊಮ್ಮಗಳ ವಯಸ್ಸಿನವಳೆಂದು ನೋಡದೆ ತಬ್ಬಿಕೊಂಡು ಅವಳೆದುರು ಬೆತ್ತಲಾಗಿದ್ದ. ಮುದುಕನ ವಿಶ್ವರೂಪಕ್ಕೆ ಹೆದರಿ ಕಿಟಾರನೆ ಕಿರುಚಿದ ಕಲಾವತಿ ಒಂದೇ ಹೆಜ್ಜೆಗೆ ಕೋಣೆಯಿಂದ ಹೊರಗೆ ಜಿಗಿದಿದ್ದಳು. ಶಿವಣ್ಣನ ಅವ್ವ ಮತ್ತು ಹೆಂಡತಿ ಕೋಣೆಹೊಕ್ಕು ಚಪ್ಪಲಿಯಿಂದ ವಾಸಪ್ಪನಿಗೆ ತಕ್ಕಶಾಸ್ತಿ ಮಾಡಿ ಹೊರಹಾಕಿದ್ದರು. ಮಕ್ಕಳಿಗೆ ಸುದ್ದಿ ತಿಳಿಯುವುದಕ್ಕಿಂತ ಮೊದಲೇ ವಾಸಪ್ಪ ಕುಲಕರ್ಣಿ ಊರುಬಿಟ್ಟು ಪರಾರಿಯಾಗಿದ್ದ. ಸ್ವಂತ ಅಣ್ಣನ ಮಗಳ ಮಾನಹರಾಜಾಗುತ್ತದೆ ಎಂದು ಲೆಕ್ಕಿಸದೆ ವಾಸಪ್ಪನ ಪ್ರಕರಣವನ್ನು ಇಡೀ ಊರಿನ ತುಂಬ ಹರಡುವಂತೆ ಮಲಕಾಣಿ ನೋಡಿಕೊಂಡಿದ್ದ. ಕಲಬುರಗಿ ಸಮೀಪದ ಯಾತ್ರಾಸ್ಥಳದಲ್ಲಿ ತಲೆಮರೆಸಿಕೊಂಡಿದ್ದ ವಾಸಪ್ಪನಿಗೆ ಊರಿನ ವಿದ್ಯಮಾನಗಳು ತಿಳಿಯುವ ವ್ಯವಸ್ಥೆಮಾಡಿ ಊರಿಗೆ ಕಾಲಿಟ್ಟರೆ ಅಲ್ದಿ ಶಿವಪ್ಪ ತನ್ನ ಪ್ರಾಣತೆಗೆಯುವುದು ನಿಶ್ಚಿತ ಎನ್ನುವ ಭಯ ಅವನಲ್ಲಿ ಹುಟ್ಟಿಸಿದ್ದ. ಊರಜನ ಮರೆತು ಇಡೀ ಪ್ರಕರಣ ತಣ್ಣಗಾದ ಮೇಲೆ ವಾಸಪ್ಪನನ್ನು ಸಂಪರ್ಕಿಸಿ ಊರಿಗೆ ಕರೆತರಲು ಐದುಲಕ್ಷ ರೂಪಾಯಿಗಳ ಬೇಡಿಕೆ ಇಟ್ಟಿದ್ದ. ಊರನ್ನು ಯಾವಾಗ ಸೇರುವೇನೋ ಎನ್ನುವ ತವಕದಲ್ಲಿದ್ದ ವಾಸಪ್ಪ ಐದುಲಕ್ಷ ರೂಪಾಯಿಗಳನ್ನು ಮಲಕಾಣಿಗೆ ಕೊಟ್ಟು ಊರಿಗೆ ಬಂದಿದ್ದ. ವಾಸಪ್ಪನಿಂದ ಪಡೆದ ಹಣದ ವಾಸನೆ ಬೇರೆಯವರಿಗಿರಲಿ ಸ್ವತ: ತನ್ನ ಕುಟುಂಬದವರ ಮೂಗಿಗೂ ಬಡಿಯದಂತೆ ಮಲಕಾಣಿ ಎಷ್ಟೆ ಎಚ್ಚರ ವಹಿಸಿದ್ದರೂ ಬಸವರಾಜಪ್ಪನಿಗೆ ಈ ಎಲ್ಲ ಹಕೀಕತ್ತು ಮನದಟ್ಟಾಗಿತ್ತು. ಶಿವಣ್ಣನಿಗೆ ವಿಷಯ ತಿಳಿಸಿ ಮಲಕಾಣಿ ಬಗ್ಗೆ ಎಚ್ಚರದಿಂದಿರುವಂತೆ ಹೇಳಿದ್ದ. ವಾಸಪ್ಪನ ಪ್ರಕರಣದ ನಂತರ ಶಿವಣ್ಣ ತನ್ನ ತಮ್ಮ ಮಲಕಾಣಿಯನ್ನು ದೂರವೇ ಇಟ್ಟಿದ್ದ. ಇದು ಮಲಕಾಣಿಗೆ ಬಸವರಾಜಪ್ಪನ ಮೇಲೆ ಕೋಪಗೊಳ್ಳಲು ಕಾರಣವಾಗಿತ್ತು.  

ಧೀರೇಂದ್ರಗೌಡ ಮತ್ತು ಮಲಕಾಣಿ ತಮಗಾದ ಅಪಮಾನಕ್ಕಾಗಿ ಬಸವರಾಜಪ್ಪನ ಮೇಲೆ ಹಗೆತೀರಿಸಿಕೊಳ್ಳಲು ಹೊಂಚುಹಾಕುತ್ತಿದ್ದರು.  ಕತ್ತಲಲ್ಲಿ ತಡುಕಾಡುವವನಿಗೆ ಮಿಣುಕು ದೀಪ ಎದುರಾದಂತೆ ಕಲಬುರಗಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹೊಂದಿಕೊಂಡಿದ್ದ ಬಸವರಾಜಪ್ಪನ ಜಮೀನು ಕಣ್ಣಿಗೆ ಬಿದ್ದದ್ದೆ ಇಬ್ಬರೂ ಕಾರ್ಯಪ್ರವರ್ತರಾದರು. ತಲೆಯ ಮೇಲೊಂದು ಸೂರಿಲ್ಲದೆ ಬಿಸಿಲಲ್ಲಿ ನಿಂತಿದ್ದ ಊರ ದೇವರಾದ ಮಲಕಣ್ಣಪ್ಪನಿಗೆ ನೆರಳಿನಾಶ್ರಯ ನೀಡದಿದ್ದರೆ ಊರಿಗೆ ಕೆಟ್ಟದಾಗುತ್ತದೆಂದು ಸುದ್ದಿ ಹಬ್ಬಿಸಿದರು.  ಗುಡಿಕಟ್ಟಲು ಬಸವರಾಜಪ್ಪನಿಗೆ ಎರಡೆಕರೆ ಜಮೀನಿನ ದಾನಪತ್ರ ಬರೆದುಕೊಡುವಂತೆ ಕಾಡತೊಡಗಿದರು. ಶಾಲೆಯ ಹಿಂದೆ ಸರ್ಕಾರದ ಲೆಕ್ಕದಲ್ಲಿದ್ದ ಬರಡು ಭೂಮಿ ಇದ್ದರೂ ಅದು ದೂರಾಗುತ್ತದೆಂದು ಬಸವರಾಜಪ್ಪನ ಜಮೀನು ದೇವಸ್ಥಾನ ನಿರ್ಮಾಣಕ್ಕೆ ಪ್ರಶಸ್ತವಾಗಿದೆ ಎಂದು ಪಂಚಾಯಿತಿ ಮೀಟಿಂಗ್‍ನಲ್ಲಿ ಊರ ಜನರ ಮನವೊಲಿಸಿ ದಾನಪತ್ರ ಬರೆದುಕೊಡುವಂತೆ ಒತ್ತಡ ತಂದಿದ್ದರು. ಊರಿನವನೇ ಆಗಿದ್ದ ಗಾಳಿಸಂಗಣ್ಣನಿಗೆ ಹೇಳಿ ಅವನ ‘ಸುಂಟರಗಾಳಿ’ ಪತ್ರಿಕೆಯಲ್ಲಿ ದೇವಸ್ಥಾನದ ಸ್ಥಾಪನೆಯಿಂದ ಊರಿನ ಅಭಿವೃದ್ಧಿಯಾಗುತ್ತದೆಂದು ಪುಟಗಟ್ಟಲೇ ವರದಿ ಪ್ರಕಟವಾಗುವಂತೆ ವ್ಯವಸ್ಥೆ ಮಾಡಿದ್ದರು.

* * *

ಗಾಳಿಸಂಗಣ್ಣನಿಗೂ ಬಸವರಾಜಪ್ಪನ ಮೇಲೆ ಹಳೆಯ ಸೇಡೊಂದು ಬಾಕಿಯಿತ್ತು. ಹಿಂದೊಮ್ಮೆ ಧೀರೇಂದ್ರಗೌಡನ ಮಗನ ಪ್ರಕರಣದಲ್ಲಿ ಬಸವರಾಜಪ್ಪನಿಂದ ಅವಮಾನಿತನಾದದ್ದು ಅವನು ಮರೆತಿರಲಿಲ್ಲ. ಮೂಲಿಮನಿ ಗುರುಲಿಂಗನ ನಾಲ್ಕು ಮಕ್ಕಳಲ್ಲಿ ಸಂಗಣ್ಣ ಕೊನೆಯವನಾಗಿದ್ದ. ಮೊದಲಿನ ಮೂರು ಮಕ್ಕಳು ವಿದ್ಯಾಭ್ಯಾಸಕ್ಕೆ ಎಳ್ಳುನೀರುಬಿಟ್ಟು ವ್ಯವಸಾಯದಲ್ಲಿ ಅಪ್ಪನಿಗೆ ಜೊತೆಯಾಗಿದ್ದರು. ಅಷ್ಟಿಷ್ಟು ಓದು ತಲೆಗೆ ಹತ್ತಿದ್ದ ಸಂಗಣ್ಣನಿಗೆ ಹೊಲದಲ್ಲಿ ಚಾಕರಿ ಮಾಡುವುದು ಇಷ್ಟವಿರಲಿಲ್ಲ. ಪಿ.ಯು.ಸಿ ನಲ್ಲಿ ಆರ್ಡಿನರಿ ಪಾಸಾಗಿ ಕಾಲೇಜಿಗೆ ಕೈಮುಗಿದು ‘ಕ್ರಾಂತಿ’ ಪತ್ರಿಕೆ ಸೇರಿಕೊಂಡಿದ್ದ. ಕಂಪ್ಯೂಟರ್ ಪತ್ರಿಕಾಕ್ಷೇತ್ರಕ್ಕೆ ಕಾಲಿಟ್ಟಿರದ ಆ ದಿನಗಳಲ್ಲಿ ಹತ್ತುವರ್ಷಗಳ ಕಾಲ ಅಕ್ಷರಗಳ ಮೊಳೆ ಜೋಡಿಸುತ್ತ ಪತ್ರಿಕಾ ಬರವಣಿಗೆಯ ಎಲ್ಲ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದ. ಮುಂದೆ ಕರೆಸ್ಪಾಂಡೆನ್ಸ್‍ನಲ್ಲಿ ಜರ್ನಲಿಸಂ ಶಿಕ್ಷಣಪಡೆದು ಕ್ರಾಂತಿಯಿಂದ ಹೊರಬಂದು ತನ್ನದೇ ‘ಸುಂಟರಗಾಳಿ’ ಪತ್ರಿಕೆ ಆರಂಭಿಸಿದ. ಅಂದಿನಿಂದ ಅವನು ಗಾಳಿಸಂಗಣ್ಣ ಎಂದೇ ಖ್ಯಾತನಾದ. ಸುಂಟರಗಾಳಿಯ ಪ್ರತಿಯನ್ನು ಬಗಲಲ್ಲಿಟ್ಟುಕೊಂಡು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ಗಾಳಿಸಂಗಣ್ಣ ದಿನನಿತ್ಯದ ಕಾಯಕ ಮಾಡಿಕೊಂಡಿದ್ದ. ಅವನ ಬಗಲಲ್ಲಿರುತ್ತಿದ್ದ ಪತ್ರಿಕೆಗೆ ಅಂಜಿ ಸರ್ಕಾರಿ ಅಧಿಕಾರಿಗಳು ಒಂದಿಷ್ಟು ಚೆಂದಾ ಎತ್ತಿ ಕೊಡುತ್ತಿದ್ದರು. ಗಾಳಿಸಂಗಣ್ಣ ಸುಂಟರಗಾಳಿ ಎದುರಿಗಿಟ್ಟುಕೊಂಡು ಹಪ್ತಾವಸೂಲಿ ಮಾಡುತ್ತಿದ್ದ ಸಂಗತಿ ಗುಟ್ಟಾಗೇನೂ ಉಳಿದಿರಲಿಲ್ಲ. ಊರಿಗೆ ಬಂದಾಗಲೆಲ್ಲ ಮಠಕ್ಕ ಭೇಟಿನೀಡಿ ಅಪಗೊಳ ಪಾದಕ್ಕ ಹಣೆಹಚ್ಚಿ ‘ಬುದ್ದಿ ಬಾಂಬೆ ಪ್ರವಚನ ಯಾವಾಗ’ ಎಂದು ಕುಚೇಷ್ಟೆ ಮಾಡುತ್ತಿದ್ದ. ಅಪಗೊಳಿಗಿ ಅರ್ಥ ಆಗಿ ತಮ್ಮ ಖಾಸಗಿ ಕೋಣೆಯಲ್ಲಿದ್ದ ತಿಜೋರಿಯಿಂದ ಐನೂರರ ಹತ್ತೋ ಇಪ್ಪತ್ತೋ ನೋಟುಗಳನ್ನು ಕಲ್ಲುಸಕ್ಕರೆ ಮತ್ತು ಎರಡು ಸೇವಂತಗಿ ಹೂವಿನ ಜೊತೆ ಸೇರಿಸಿ ಆಶೀರ್ವಾದದ ರೂಪದಲ್ಲಿ ಗಾಳಿಸಂಗಣ್ಣನ ಕೈಗೆ ಹಾಕುತ್ತಿದ್ದರು. ಮುಂಬೈನಲ್ಲಿ ಅಪಗೊಳು ಆಡಿದ ಆಟದ ಎಲ್ಲ ಭಂಗಿಗಳನ್ನು ಗಾಳಿಸಂಗಣ್ಣನ ಕ್ಯಾಮೆರಾ ಸೆರೆಹಿಡಿದಿತ್ತು. ಸರ್ಕಾರಿ ಅಧಿಕಾರಿಗಳನ್ನು ಮಠಾಧಿಪತಿಗಳನ್ನು ಹೆದರಿಸಿ ಹಣ ವಸೂಲಿಮಾಡಿ ಗಾಳಿಸಂಗಣ್ಣ ಊರಿನಲ್ಲಿ ದೊಡ್ಡಮನೆ ಕಟ್ಟಿಸಿದ್ದ. 

ಬಿರುಗಾಳಿಯಂತಿದ್ದ ಗಾಳಿಸಂಗಣ್ಣ ಧೀರೇಂದ್ರಗೌಡನ ಮಗನ ಪ್ರೇಮಪ್ರಕರಣದ ವರದಿ ಪ್ರಕಟಿಸಿ ತುಸು ಮೆತ್ತಗಾಗಿದ್ದ. ಧೀರೇಂದ್ರಗೌಡನ ಮಗನಿಂದ ತನ್ನ ಮಗಳಿಗಾದ ಅನ್ಯಾಯಕ್ಕಾಗಿ ನ್ಯಾಯ ಕೊಡಿಸುವಂತೆ ಮಾದ, ಬಸವರಾಜಪ್ಪನಲ್ಲಿ ಮೊರೆಹೋಗಿದ್ದ. ಮಾದನ ಮಗಳಿಗೆ ನ್ಯಾಯಕೊಡಿಸುವಂತೆ ಬಸವರಾಜಪ್ಪ, ಗಾಳಿಸಂಗಣ್ಣನಲ್ಲಿ ಕೇಳಿಕೊಂಡಿದ್ದ. ತನ್ನ ಪತ್ರಿಕೆಯಲ್ಲಿ ವಿವರವಾಗಿ ವರದಿ ಪ್ರಕಟಿಸುವುದಾಗಿ ಗಾಳಿಸಂಗಣ್ಣ ಭರವಸೆಕೊಟ್ಟಿದ್ದ. ಮರುದಿನ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಎಲ್ಲಾ ಉಲ್ಟಾ ಆಗಿತ್ತು. ಹಣದೋಚುವುದಕ್ಕಾಗಿ ಮಾದ ಮತ್ತು ಅವನ ಮಗಳು ಹೂಡಿದ ನಾಟಕ ಇದೆಂದು ಬರೆದಿದ್ದ. ‘ಪ್ರೇಮ್ ಕಹಾನಿ: ಹಣದೋಚುವ ಮೋಹಿನಿ’ ಎಂದು ವರದಿಗೆ ಥೇಟ್ ಕಂಪನಿ ನಾಟಕಗಳ ಹೆಸರಿನಂತೆ ಹೆಡ್ಡಿಂಗ್ ನೀಡಿದ್ದ. ಧೀರೇಂದ್ರಗೌಡ ಕುಮಸಿ ಮತ್ತು ಸುತ್ತಮುತ್ತಲಿನ ಎಲ್ಲ ಹತ್ತು ಹಳ್ಳಿಗಳಿಗೆ ಪತ್ರಿಕೆಯ ಪ್ರತಿಗಳನ್ನು ಪುಕ್ಕಟ್ಟೆ ಹಂಚಿದ್ದ. ವರದಿ ಓದಿದ್ದೆ ಬಸವರಾಜಪ್ಪನಿಗೆ ಗಾಳಿಸಂಗಣ್ಣನ ಮೇಲೆ ನಖಾಶಿಖಾಂತ ಸಿಟ್ಟು ಬಂತು. ನೇರ ಪತ್ರಿಕೆಯ ಕಚೇರಿಗೆ ಹೋಗಿ ಮಾನನಷ್ಟ ಮೊಕುದ್ದಮೆ ಹೂಡುವುದಾಗಿ ಬೆದರಿಸಿದ. ಹೆದರಿದ ಗಾಳಿಸಂಗಣ್ಣ ಮರುದಿನದ ಪತ್ರಿಕೆಯಲ್ಲಿ ಮಾದನ ಕ್ಷಮೆಕೋರಿ ತನ್ನ ಹೇಳಿಕೆ ಪ್ರಕಟಿಸಿದ್ದ. ತನಗಾದ ಅವಮಾನಕ್ಕಾಗಿ ಬಸವರಾಜಪ್ಪನ ಮೇಲೆ ಸೇಡು ತೀರಿಸಿಕೊಳ್ಳಲು ಸಮಯ ಸಂದರ್ಭಕ್ಕಾಗಿ ಕಾಯುತ್ತಿದ್ದವನಿಗೆ ದೇವಸ್ಥಾನದ ಸ್ಥಾಪನೆ ಸುವರ್ಣ ಅವಕಾಶವನ್ನೇ ಒದಗಿಸಿತ್ತು. ಅದಕ್ಕೆಂದೇ ಸುಂಟರಗಾಳಿಯಲ್ಲಿ ಊರಿನ ಅಭಿವೃದ್ಧಿಗೆ ಗುಡಿ ಮತ್ತು ಕಲ್ಯಾಣಮಂಟಪದ ಅಗತ್ಯ ಕುರಿತು ವಿವರಿಸಿ ಬರೆದಿದ್ದ. ಎಮ್.ಎಲ್.ಎ ಅಂದಾನಪ್ಪಗೌಡರು ಶಾಸಕರ ನಿಧಿಯಿಂದ ದೇವಸ್ಥಾನ ಹಾಗೂ ಕಲ್ಯಾಣಮಂಟಪದ ನಿರ್ಮಾಣಕ್ಕೆ ಹಣ ಮಂಜೂರು ಮಾಡಲಿದ್ದಾರೆಂದು ವರದಿಯಲ್ಲಿ ಬಾಕ್ಸ್ ಐಟೆಮ್ಮಾಗಿ ಪ್ರಕಟಿಸಿದ್ದ. ಅಂದಾನಪ್ಪಗೌಡರು ವರದಿ ಓದಿ ಧೀರೇಂದ್ರಗೌಡ ಮತ್ತು ಮಲಕಾಣಿಯನ್ನು ಕಲಬುರಗಿಯ ಓಕಳಿಕ್ಯಾಂಪ್‍ನಲ್ಲಿದ್ದ ತಮ್ಮ ಮನೆಗೆ ಬರಮಾಡಿಕೊಂಡು ಮುಂದುವರೆಯುವಂತೆ ಹಸಿರು ನಿಶಾನೆ ತೋರಿಸಿದ್ದರು. ಸಾಧ್ಯವಾದರೆ ಇನ್ನೊಂದು ಎಕರೆ ಜಮೀನು ಮಸೀದಿ ನಿರ್ಮಾಣಕ್ಕೆ ಬರೆದುಕೊಡುವಂತೆ ಬಸವರಾಜಪ್ಪನ ಮೇಲೆ ಒತ್ತಡಹಾಕಿ ಎಂದಿದ್ದರು. ಸಾಹೇಬರು ಬರುವ ಚುನಾವಣೆ ನಜರನಲ್ಲಿಟ್ಟುಕೊಂಡು ದೇವಸ್ಥಾನ ಮತ್ತು ಮಸೀದಿ ಕಟ್ಟಿಸಲು ಸ್ವತ: ತಾವೇ ಅಖಾಡಕ್ಕೆ ಇಳಿಯುತ್ತಿರುವಂತೆ ಧೀರೇಂದ್ರಗೌಡನಿಗೆ ಭಾಸವಾಯಿತು. ಊರಿಗೆ ಮರಳಿದ ಮಲಕಾಣಿ ರಾತ್ರೋರಾತ್ರಿ ನಜೀರಸಾಬರ ಮನೆಗೆ ಭೇಟಿಕೊಟ್ಟು ಅಂದಾನಪ್ಪಗೌಡರ ವಿಚಾರವನ್ನು ಸಾಧ್ಯಂತವಾಗಿ ವಿವರಿಸಿದ. ವಿಷಯ ತಿಳಿದದ್ದೆ ನಜೀರಸಾಬರು ತಮ್ಮ ಪಟಾಲಂ ಕಟ್ಟಿಕೊಂಡು ಬಸವರಾಜಪ್ಪನನ್ನು ಕಂಡು ಮಸೀದಿ ನಿರ್ಮಾಣಕ್ಕಾಗಿ ಒಂದು ಎಕರೆ ಜಮೀನಿನ ಬೇಡಿಕೆ ಮುಂದಿಟ್ಟರು. 

* * *

ದೇವಸ್ಥಾನ ನಿರ್ಮಾಣದ ಕುರಿತು ಚರ್ಚಿಸಲು ಮಠದ ಅಪಗೊಳ ನೇತೃತ್ವದಲ್ಲಿ ಧೀರೇಂದ್ರಗೌಡನ ಮನೆಯಲ್ಲಿ ಊರಮುಖಂಡರ ಸಭೆ ಕರೆಯಲಾಗಿತ್ತು. ಬಸವರಾಜಪ್ಪನೂ ಸಭೆಗೆ ಹಾಜರಾಗಿದ್ದ. ‘ಬಸವರಾಜಪ್ಪ ಊರದೇವರ ಸೇವಾ ಅಂದರ ಅದೇನು ಸಣ್ಣ ಮಾತಲ್ಲ. ಈ ಭಾಗ್ಯ ನಿನಗ ಸಿಗಬೇಕಂದರ ಅದು ನಿನ್ನ ಪೂರ್ವಜನ್ಮದ ಪುಣ್ಯ ಅಂತ ಕಾಣತದ. ಹೊಲ, ಮನಿ, ಸಂಸಾರ ಅನ್ನೊದೆಲ್ಲ ಲೌಕಿಕದ ಮಾತು. ಇಹಲೋಕದಾಗ ಒಳ್ಳೆಯ ಕೆಲಸ ಮಾಡಿದರ ಪರಲೋಕದಾಗ ಸದ್ಗತಿ ದೊರಿತದ. ದೇವರ ಆರ್ಶೀವಾದ ಒಂದು ತಲಿಮ್ಯಾಲಿದ್ದರ ಇಂಥ ನೂರು ಎಕರೆ ನಿಂದಾಗಬಹುದು. ದೇವರ ಸೇವಾ ಅಂತ ಹಿಂದಮುಂದ ವಿಚಾರಮಾಡದೆ ಒಪ್ಪಿಕೊಂಡುಬಿಡು. ಗುಡಿ, ಕಲ್ಯಾಣಮಂಟಪ ಕಟ್ಟಿಸಿದರ ಊರು ಅಭಿವೃದ್ಧಿ ಕಾಣತದ’ ಎಂದು ಅಪಗೊಳು ಆಧ್ಯಾತ್ಮದ ಜೊತೆಗೆ ವ್ಯವಾಹಾರಿಕ ಮಾತನಾಡಿ ಮನವೊಲಿಸಲು ನೋಡಿದರು. ಬಸವರಾಜಪ್ಪ ತಲೆ ಎತ್ತಿ ಅಪಗೊಳ ಮುಖ ನೋಡಿದ. ಆ ಮುಖದಲ್ಲಿ ಕುಣಿಯುತ್ತಿದ್ದ ಅರಿಷಡ್ವರ್ಗಗಳು ಕಣ್ಣಿಗೆ ರಾಚಿದಂತಾಗಿ ಅಪಗೊಳ ಬಗ್ಗೆ ಹೇಸಿಗೆ ಎನಿಸಿತು. ಅಪಗೊಳೇನು ನೀತಿವಂತರಾಗಿರಲಿಲ್ಲ. ಅವರ ಕಚ್ಚೆ ಬಿಗಿಯಿಲ್ಲ ಅನ್ನೋದು ಇಡೀ ಊರಿಗೇ ತಿಳಿದಿತ್ತು. ಆಗಾಗ ಪ್ರವಚನದ ನೆಪಮಾಡಿಕೊಂಡು ಸೋಲಾಪುರ, ಮುಂಬೈಗೆ ಹೋಗಿ ಮೈಭಾರ ಹಗುರಾಗಿಸುತ್ತಿದ್ದದ್ದು ಗುಟ್ಟಾಗೇನೂ ಉಳಿದಿರಲಿಲ್ಲ. ‘ಶಾಲೆ, ಆಸ್ಪತ್ರೆ ಕಟ್ಟಿಸ್ತೀವಿ ಅಂದರ ಜಮೀನು ಕೊಡಬಹುದಿತ್ತು. ಈ ಗುಡಿ ಗುಂಡಾರದ ಮ್ಯಾಲ ನನಗ ನಂಬಿಕೆ ಇಲ್ಲ. ನೀವು ಕೇಳಲಿಕತ್ತಿರಂತ ಮಸೀದಿಗೂ ಜಾಗ ಬೇಕಂತ ಅವರು ಕೇಳಲಿಕತ್ತಾರ. ನನ್ನ ಹೊಲ ಅಂದರ ಯಾರದೋ ರೊಕ್ಕ ಎಲ್ಲಮ್ಮನ ಜಾತ್ರಿ ಆದಂಗ ಆಗ್ಯಾದ. ಬಿಸಿಲಾಗ ನಿಂತ ಮಲಕಣ್ಣಪ್ಪ ಮತ್ತ ಪೀರದೇವರು ಇಬ್ಬರೂ ಕೂಡಿ  ಎದ್ದುಬಂದು ಕೇಳಿದರೂ ಒಂದಿಂಚು ಜಾಗ ಕೊಡೊಲ್ಲ’ ಎಂದು ದುರ್ದಾನ ತೆಗೆದುಕೊಂಡವನಂತೆ ಸಭೆಯ ಮಧ್ಯದಲ್ಲೇ ಎದ್ದು ಬಸವರಾಜಪ್ಪ ಹೊರನಡೆದ. ಬಸವರಾಜಪ್ಪನ ಮಾತು ಕೇಳಿ ಹಾಲಿನಂತೆ ಬೆಳ್ಳಗಿದ್ದ ಅಪಗೊಳ ಮುಖ ಕಪ್ಪಿಟ್ಟಿತು. ‘ಸಾಮ, ದಾನ, ದಂಡ, ಭೇದ ಪ್ರಯೋಗಿಸಿ ನೋಡಿ. ಕೊನಿಗಿ ಬಹಿಷ್ಕಾರ ಅಂತೂ ಇದ್ದದ್ದೆ’ ಎಂದು ಅಪಗೊಳು ತಮ್ಮ ತೀರ್ಮಾನ ಪ್ರಕಟಿಸಿದರು. ಸಭೆಯಲ್ಲಿನ ಎಲ್ಲರೂ ಅಪಗೊಳ ನಿರ್ಧಾರವನ್ನು ಒಕ್ಕೊರಳಿನಿಂದ ಅನುಮೋದಿಸಿದರು. ಚುರುಮುರಿ ವಗ್ಗರಣೆ ಮತ್ತು ಚಹಾ ಸೇವನೆಯ ನಂತರ ಸಭೆ ಬರ್ಖಾಸ್ತುಗೊಂಡಿತು. 

 ಈ ಎಲ್ಲ ವಿದ್ಯಮಾನ ನಡೆಯುತ್ತಿರುವ ಹೊತ್ತಿನಲ್ಲೇ ಕಲಬುರಗಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ ರಿಯಾಜ್ ಅಹ್ಮದ್  ಬಸವರಾಜಪ್ಪನನ್ನು ಸಂಪರ್ಕಿಸಿ ನಿನ್ನ ಹೊಲ ರಸ್ತೆಗೆ ಸಮೀಪದಲ್ಲಿರುವುದರಿಂದ ಸೈಟ್‍ಗಳನ್ನು ನಿರ್ಮಿಸಲು ತಕ್ಕುದಾಗಿದೆ ಪ್ರತಿಸೈಟ್‍ಗೆ ಹತ್ತು ಲಕ್ಷ ರೂಪಾಯಿಗಳಂತೆ ವ್ಯಾಪಾರ ಕುದರಿಸಲು ತಾನು ಸಿದ್ಧನಿರುವುದಾಗಿ ಹೇಳಿದ್ದು ಊರ ಮುಖಂಡರಿಗೆ ತಿರುಗೇಟು ನೀಡಲು ಬಸವರಾಜಪ್ಪನಿಗೆ ಹತಾರವೊಂದು ಸಿಕ್ಕಂತಾಗಿತ್ತು. ಬಸವರಾಜಪ್ಪನ ಸೈಟ್ ನಿರ್ಮಾಣದ ಯೋಜನೆ ಅವನ ಅಕ್ಕಪಕ್ಕದ ಹೊಲಗಳ ರೈತರಲ್ಲೂ ಆಸೆ ಹುಟ್ಟಿಸಿ ಅವರು ಕೂಡ ರಿಯಾಜ್ ಅಹ್ಮದ್‍ನನ್ನು ಸಂಪರ್ಕಿಸಿ ವ್ಯವಹಾರ ಕುದುರಿಸತೊಡಗಿದರು.

* * *

  ರಾಮಚಂದ್ರಮೇಷ್ಟ್ರು ಹಲವು ಬಗೆಯಲ್ಲಿ ಬಸವರಾಜಪ್ಪನಿಗೆ ತಿಳಿಹೇಳಲು ಪ್ರಯತ್ನಿಸಿದರೂ ಬಸವರಾಜಪ್ಪನದು ಒಂದೇ ಹಠ. ತನ್ನ ಕೃಷಿಭೂಮಿಯನ್ನು ಪುಕ್ಕಟ್ಟೆಯಾಗಿ ಕಬಳಿಸಲು ಹೊಂಚುಹಾಕಿದವರಿಗೆ ಬುದ್ದಿಕಲಿಸಲೆಂದೇ ಸೈಟುಗಳನ್ನು ನಿರ್ಮಿಸಲು ಪಣತೊಟ್ಟ. ದೇವಸ್ಥಾನಕ್ಕೆ ಬೇಕಾದರೆ ಶಾಲೆ ಹಿಂದಿನ ಸರ್ಕಾರದ ಪಾಳುಭೂಮಿ ಒದಗಿಸುವ ವ್ಯವಸ್ಥೆ ಮಾಡುವುದಾಗಿ ಮೇಷ್ಟ್ರು ಮಾತುಕೊಟ್ಟರೂ ಬಸವರಾಜಪ್ಪ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಬಸವರಾಜಪ್ಪನ ಜಮೀನಿನ ಅಕ್ಕಪಕ್ಕದ ರೈತರು ಕೂಡ ಆಸ್ಥೆತಾಳಿದ್ದು ಕ್ರಮೇಣ ಗ್ರಾಮದ ಕೃಷಿಭೂಮಿ ಕ್ಷೀಣಿಸುವ ಮುನ್ಸೂಚನೆಯಾಗಿ ತೋರಿತು. ವ್ಯವಸಾಯಯೋಗ್ಯ ಭೂಮಿ ಕ್ಷಯಿಸುತ್ತಿರುವುದು ರಾಮಚಂದ್ರಮೇಷ್ಟ್ರ ಆತಂಕವನ್ನು ಹೆಚ್ಚಿಸಿತು. ಊರಿನ ಕೆಲವು ವಿಚಾರವಂತರನ್ನು ಮತ್ತು ಜಮೀನು ಮಾರಾಟಕ್ಕೆ ಮುಂದಾದ ರೈತರ ಕುಟುಂಬದವರನ್ನು ಒಂದುಗೂಡಿಸಿ ಕೃಷಿಭೂಮಿ ಉಳಿಸಿಕೊಳ್ಳಲು ಮೇಷ್ಟ್ರು ಮುಷ್ಕರ ಆರಂಭಿಸಿದರು. ಊರಿನ ಕೆಲವರಿಗೆ ಮೇಷ್ಟ್ರ ಹೋರಾಟ ವ್ಯರ್ಥಪ್ರಯತ್ನದಂತೆ ತೋರಿತು. ಮೇಷ್ಟ್ರ ಮುಷ್ಕರದ ಸುದ್ದಿ ಟಿ.ವಿ ಚಾನೆಲ್ಲುಗಳು ಮತ್ತು ಪತ್ರಿಕೆಗಳ ಮೂಲಕ ರಾಜ್ಯದಾದ್ಯಂತ ಸಾರ್ವಜನಿಕರ ಗಮನ ಸೆಳೆಯಿತು. ವಿರೋಧಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು. ಪ್ರತಿಸ್ಪರ್ಧಿಗಳಿಗೆ ಚುನಾವಣೆಯಲ್ಲಿ ತಮ್ಮನ್ನು ಹಣಿಯಲು ಇದೊಂದು ಹತಾರ ಆಗಬಹುದೆಂದು ಹೆದರಿದ ಅಂದಾನಪ್ಪಗೌಡರು ದೇವಸ್ಥಾನ ನಿರ್ಮಾಣದ ಯೋಜನೆಯನ್ನು ಹಿಂತೆಗೆದುಕೊಂಡಿರುವುದಾಗಿ ಹೇಳಿಕೆ ನೀಡಿದರು.   ಈ ನಡುವೆ ಬಸವರಾಜಪ್ಪನ ಮಗಳು ಸರಸ್ವತಿ ಹೆರಿಗೆಗೆಂದು ತವರಿಗೆ ಬಂದವಳು ಊರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಇಡೀ ರಾತ್ರಿ ಪ್ರಸವ ವೇದನೆಯಿಂದ ನರಳಿ ನಸುಕಿನ ಜಾವ ಮಗುವಿಗೆ ಜನ್ಮ ನೀಡಿದಳು. ಹೆರಿಗೆಕೋಣೆಯ ಹೊರಗೆ ಶತಪಥ ಹೆಜ್ಜೆಹಾಕುತ್ತಿದ್ದ ಬಸವರಾಜಪ್ಪನಿಗೆ ಕೋಣೆ ಒಳಗಿನಿಂದ ಮಗಳ ನರಳುವಿಕೆ ಕೇಳಿ ಕರಳು ಕತ್ತರಿಸಿದಂಥ ಯಾತನೆಯಾಗಿತ್ತು. ಮಗುವಿನ ಅಳುವಿನ ಧ್ವನಿ ಕಿವಿಗೆ ಬಿದ್ದದ್ದೆ ಅವನ ಮನಸ್ಸಿಗೆ ಸಮಾಧಾನ ಎನಿಸಿತು. ಅಮ್ಮನ ಮಗ್ಗುಲಲ್ಲಿ ಮಲಗಿದ್ದ ಮಗುವನ್ನು ಮುದ್ದಿಸಿ ‘ಭಾಳ ತ್ರಾಸಾಯ್ತೇನು ಕೂಸು’ ಎಂದು ಕಕ್ಕುಲಾತಿಯಿಂದ ಮಗಳ ತಲೆ ಸವರಿದ. ಇಡೀ ರಾತ್ರಿ ಅನುಭವಿಸಿದ ನೋವಿನ ಛಾಯೆಯ ಒಂದೆಳೆಯೂ ಕಾಣಿಸದೆ ನಿನ್ನೆವರೆಗೂ ಚೆಲ್ಲಾಟದ ಹುಡುಗಿಯ ಕಳೆಯಿದ್ದ ಮುಖದಲ್ಲಿ ಈಗ ಮಾತೃತ್ವದ ಭಾವ ಮನೆಮಾಡಿತ್ತು. ‘ಅಪ್ಪಾ ನೋವು ಅಂತ ಹೆಣ್ಣು ಹೆರೊದನ್ನ ನಿಲ್ಲಿಸಿದರ ಈ ಜಗತ್ತು ಹ್ಯಾಂಗ ಮುಂದುವರಿಬೇಕು. ಭೂಮಿ ತಾಯಿ ನೋವು ಅಂತ ಬೆಳಿ ಬೆಳೆಯೊದನ್ನ ನಿಲ್ಲಿಸಿದಳಂದರ ಉಣ್ಣೊ ಬಾಯಿಗಳ ಗತಿ ಏನು. ಅವಳ ನೋವಿನ ಮುಂದ ನನ್ನ ನೋವೇನೂ ದೊಡ್ಡದಲ್ಲ’ ಮಗಳ ಮಾತು ಕೇಳಿ ಬಸವರಾಜಪ್ಪನಿಗೆ ತನ್ನ ತಪ್ಪಿನ ಅರಿವಾಯಿತು. ‘ಕೂಸು ನೀ ನನ್ನ ಮಗಳಲ್ಲವ, ನನಗ ನನ್ನ ತಪ್ಪು ತೋರಿಸಿಕೊಟ್ಟ ನನ್ನ ಹಡೆದವ್ವ ನೀ’ ಎಂದವನೆ ಮಗುವನ್ನು ಇನ್ನೊಮ್ಮೆ ಮುದ್ದಿಸಿ ರಾಮಚಂದ್ರಮೇಷ್ಟ್ರು ಮುಷ್ಕರ ಕುಳಿತಿದ್ದ ಸ್ಥಳದತ್ತ ಹೊರಟ. ಆಗಷ್ಟೇ ವೈಷ್ಣವ ಜನತೋ ಭಜನೆಹಾಡಿ ಮೂಡಣದಲ್ಲಿ ಉದಯಿಸುತ್ತಿದ್ದ ಸೂರ್ಯನಿಗೆ ನಮಸ್ಕರಿಸುತ್ತಿದ್ದ ರಾಮಚಂದ್ರಮೇಷ್ಟ್ರಿಗೆ ದೂರದಲ್ಲಿ ಬರುತ್ತಿರುವ ಬಸವರಾಜಪ್ಪ ಕಣ್ಣಿಗೆ ಬಿದ್ದದ್ದೆ ಅವರು ಗೆಲುವಾದರು. ಮೇಷ್ಟ್ರ ಗೆಲುವಿಗೆ ಸಾಕ್ಷಿಯಾಗಲೆಂಬಂತೆ ಸೂರ್ಯ ಕೂಡ ಆತುರಾತುರವಾಗಿ ಮೇಲೆರತೊಡಗಿದ.

* * *


ಆತ್ಮಕಥೆ

 ಆತ್ಮಕಥೆ


-ರಾಜಕುಮಾರ ಕುಲಕರ್ಣಿ





(ಮಾರ್ಚ್ ೨೨, ೨೦೨೬ ಕನ್ನಡಪ್ರಭ ಪತ್ರಿಕೆಯ ಸಾಹಿತ್ಯಪ್ರಭದಲ್ಲಿ ಪ್ರಕಟವಾದ ಕಥೆ)

‘ನೀವು ಹೀಂಗ ಅಂತ ಗೊತ್ತಿರಲಿಲ್ಲ. ಬಂಧು ಬಳಗದವರ ಎದುರು ತಲಿ ತಗ್ಗಿಸುವಂಗ ಮಾಡೀರಿ. ದಾಯಾದಿಗಳು ಆಡಿಕೊಂಡು ನಗಲಿಕತ್ತಾರ. ಬೆಳೆದ ಮಕ್ಕಳು ಮತ್ತು ಸೊಸಿಯಂದಿರಿಗಿ ಹ್ಯಾಂಗ ಮಾರಿತೋರಿಸಬೇಕು ಅನ್ನೋ ಖ್ಯಾಲ ಸ್ವಲ್ಪ ಆದರೂ ನಿಮಗಿದ್ದರ ಹೀಂಗ ಮಾಡತಿದ್ದಿರೇನು. ಅಲ್ಲ ಮುದುಕ ಆಗೀರಿ ಹೀಗೆಲ್ಲ ಮಾಡಿದರ ಛಲೋ ಅನಿಸಲ್ಲ ಅಂತ ಮನಸ್ಸಿಗಿ ಹೊಳಿಲಿಲ್ಲೇನು. ಆ ಪುಣ್ಯಾತಗಿತ್ತಿ ತನ್ನ ಕಥಿ ಬರೆದು ನಿಮ್ಮ ಹೊಲಸು ಪುರಾಣೆಲ್ಲಾ ಇಡೀ ಜಗತ್ತಿಗಿ ಹೇಳಿಬಿಟ್ಟಾಳ. ಇನ್ನು ನಿಮ್ಮ ಜೊತಿಗಿ ಸಂಸಾರ ಮಾಡೋದು ನನ್ನಿಂದ ಸುತಾರಾಂ ಅಂದರ ಆಗಲ್ಲ. ಮಕ್ಕಳ ಮನಿಗಿ ಹೋಗಿ ರಾಮಾ ಕೃಷ್ಣ ಅಂತ ಜೀವನ ಸಾಗಿಸ್ತೀನಿ. ನಿಮ್ಮ ಪಾಲಿಗಿ ಹೆಂಡತಿ ಮಕ್ಕಳು ಸತ್ತಾರ ಅಂತ ತಿಳಿಕೊಂಡು ಇಡೀ ಮನ್ಯಾಗ ಒಂಟಿಗೂಬೆ ಇದ್ದಂಗ ಇರ್ರೀ’ ಎಂದು ಪಾರ್ವತಮ್ಮ ಬಾಗಿಲು ಧಾಟಿ ಮನೆಯಿಂದ ಹೊರನಡೆದರು. ‘ಪಾರ್ವತಿ...’ ಎಂದು ಜೋರಾಗಿ ಕಿರುಚಿ ಕಣ್ಣುಬಿಟ್ಟರು ಪ್ರೊಫೆಸರ್ ಚಂದ್ರಕಾಂತ ಪಾಟೀಲ. ಸುತ್ತಲೂ ಕತ್ತಲು ಗವ್ವೆಂದು ಕಣ್ಣಿಗೆ ರಾಚಿತು. ಎದ್ದು ಲೈಟ್ ಹಾಕಿದರು. ದೊಡ್ಡ ಮಂಚದ ಮೇಲೆ ತಾವೊಬ್ಬರೆ ಇರುವುದು ಅರಿವಾಯಿತು. ಹೆಂಡತಿ ಬೆಂಗಳೂರಿನಲ್ಲಿರುವ ಹಿರಿಮಗನ ಮನೆಗೆ ಹೋಗಿ ಎರಡು ದಿನಗಳಾಯಿತೆಂದು ನೆನಪಾದದ್ದೆ ಇದುವರೆಗೂ ತಾವು ಕಂಡಿದ್ದು ಕನಸು ಎನ್ನುವುದು ಮನಸ್ಸಿಗೆ ಹೊಳೆದು ಹತ್ತಿರದ ಟೇಬಲ್ ಮೇಲಿಟ್ಟಿದ್ದ ತಂಬಿಗೆಯಿಂದ ತಣ್ಣಗಿನ ನೀರನ್ನು ಗಟಗಟಕನೆ ಕುಡಿದು ಮುಖದಲ್ಲಿ ಧಾರಾಕಾರವಾಗಿ ಹರಿಯುತ್ತಿದ್ದ ಬೆವರನ್ನು ಒರೆಸಿಕೊಂಡರು. ಮನಸ್ಸಿಗೆ ಒಂದಿಷ್ಟು ಸಮಾಧಾನ ಎನಿಸಿತು. ಲೈಟ್ ಆರಿಸಿ ಹಾಸಿಗೆಗೆ ಮೈಚಾಚಿದರೂ ನಿದ್ರೆ ಹತ್ತಿರ ಸುಳಿಯಲಿಲ್ಲ. ನಿದ್ದೆ ಬರದೆ ಘಳಿಗೆಗೊಮ್ಮೆ ಎಡ ಬಲ ಹೊರಳಿದರು. ‘ಆತ್ಮಕಥೆ ಬರೀತಾಳಂತೆ. ಬರೀಲಿ. ಎಷ್ಟೆಂದರೂ ನಾನು ಗಂಡಸು. ಮರ್ಯಾದೆ ಹೋಗೊದಾದರೆ ಅವಳದೆ ಹೋಗುತ್ತೆ. ನಿವೃತ್ತನಾಗಿ ಆಗಲೇ ಒಂದು ವರ್ಷ ಆಯಿತು ಇನ್ನೇನು ಹೆದರಿಕೆ’ ಎಂದು ಮನಸ್ಸಿಗೆ ಸಮಾಧಾನ ತಂದುಕೊಂಡರು. ಮೊಬೈಲ್ ಫೆÇೀನ್‍ನಲ್ಲಿ ಟೈಮ್ ಎಷ್ಟಾಗಿದೆಯೆಂದು ನೋಡಿದರು. ರಾತ್ರಿ ಹನ್ನೆರಡು ಗಂಟೆಯಾಗಿತ್ತು. ಇನ್ನು ನಿದ್ದೆ ಹತ್ತುವುದಿಲ್ಲ ಎಂದೆನಿಸಿ ಎದ್ದು ಲೈಟ್ ಹಾಕಿ ಸೆಲ್ಫ್‍ನಲ್ಲಿದ್ದ ಕಾಫ್ಕಾನ ದಿ ಜಡ್ಜ್‍ಮೆಂಟ್ ಪುಸ್ತಕ ಕೈಗೆತ್ತಿಕೊಂಡರು. ಪುಟ ತೆರೆದರೆ ಅವಳದೆ ಪ್ರತಿಬಿಂಬ ಕಾಣಿಸಿದಂತಾಗಿ ಅರೆಕ್ಷಣ ಬೆಚ್ಚಿಬಿದ್ದು ಪುಸ್ತಕ ಮುಚ್ಚಿಟ್ಟು ಮತ್ತೆ ಹಾಸಿಗೆಯಲ್ಲಿ ಅಡ್ಡಾದರು.  

‘ಸರ್ ಸರೋಜಿನಿ ಆತ್ಮಕಥೆ ಬರೀತಿದ್ದಾಳಂತೆ. ಕೊನೆಯ ಅಧ್ಯಾಯದ ಬರವಣಿಗೆ ಮಾತ್ರ ಬಾಕಿ ಇದೆಯಂತೆ. ಪುಸ್ತಕ ಹೊರಗಬಂದ ಮ್ಯಾಲ ಯಾರ್ಯಾರ ಮರ್ಯಾದಿ ಬೀದಿಪಾಲಾಗುತ್ತೊ ಅಂತ ಭಯ ಶುರುವಾಗಿದೆ’ ಸದಾನಂದ ರಾತ್ರಿ ಫೆÇೀನ್‍ಮಾಡಿ ಹೇಳಿದಾಗ ಪೆÇ್ರಫೆಸರ್ ಚಂದ್ರಕಾಂತರಿಗೆ ಕುಡಿದಿದ್ದ ರಮ್‍ನ ಅಮಲು ಜರ್ರಂತ ಇಳಿದುಹೋಗಿತ್ತು. ಸಾಯಂಕಾಲದ ವಾಕಿಂಗ್ ಮುಗಿಸಿ ಮನೆಗೆಬಂದು ಪಾನಗೋಷ್ಠಿ ಆರಂಭಿಸಿದ್ದವರಿಗೆ ಸದಾನಂದನ ಮಾತು ಕೇಳಿ ಮೆದುಳಿನಲ್ಲಿ ನೀರು ಸುರಿದಂತಾಗಿತ್ತು. ಪತ್ನಿ ಊರಿನಲ್ಲಿ ಇಲ್ಲದಿದ್ದಾಗ ಪ್ರೊಫೆಸರ್ ಚಂದ್ರಕಾಂತ ಮನೆಯಲ್ಲೆ ಪಾನಗೋಷ್ಠಿಗೆ ಶುರುವಿಟ್ಟುಕೊಳ್ಳುತ್ತಿದ್ದರು. ಸಾಯಂಕಾಲದ ವಾಯುವಿಹಾರದಲ್ಲಿ ಎದುರಾದ ಪಕ್ಕದ ಮನೆಯ ಪ್ರೊಫೆಸರ್  ಹೊಸಮನಿ ಅವರನ್ನು ಮನೆಗೆ ಆಹ್ವಾನಿಸಿ ಆಗಷ್ಟೆ ಒಂದು ಗ್ಲಾಸ್ ಮುಗಿಸಿ ಎರಡನೆಯದನ್ನು ಕೈಗೆತ್ತಿಕೊಳ್ಳುತ್ತಿದ್ದವರಿಗೆ ಸರೋಜಿನಿ ಹೆಸರು ಕೇಳಿ ಆ ಕೊರೆಯುವ ಚಳಿಯಲ್ಲೂ ಹಣೆಯ ಮೇಲೆ ಬೆವರೊಡೆಯಿತು. ‘ಯಾಕ್ರಿ ಪ್ರೊಫೆಸರ್  ಏನೂ ಮಾತಾಡದೆ ದೆವ್ವ ಬಡಿದವರಂಗ ಸುಮ್ನೆ ಕುಳಿತಿರಲ್ಲ’ ಎಂದು ಎಚ್ಚರಿಸಿದ ಹೊಸಮನಿ ಅದಾಗಲೇ ಎರಡನೇ ಗ್ಲಾಸ್ ಖಾಲಿಮಾಡಿಯಾಗಿತ್ತು. ಸದಾನಂದನ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ದಿಕ್ಕು ತೋಚದಂತಾಗಿದ್ದ ಚಂದ್ರಕಾಂತ ‘ಹಾಂ ಏನಿಲ್ಲರಿ. ನೀವು ಮುಂದುವರೆಸಿ. ಸ್ವಲ್ಪ ಪರ್ಸನಲ್ ಸಂಗತಿ ಅದಾ. ನಾ ಆಮ್ಯಾಲ ಜಾಯಿನ್ ಆಗತೀನಿ’ ಎಂದು ಹಾಲ್‍ನಿಂದ ಅಂಗಳಕ್ಕೆ ಬಂದರು. ‘ಸರ್ ನೀವೇನು ಹೆದರ ಬ್ಯಾಡರಿ. ಏನು ಬರೀತಾಳ ಬರೀಲಿ. ಮಾನಹಾನಿ ಆಗೋವಂತದ್ದು ಅದರೊಳಗದಾ ಅಂತ ಗೊತ್ತಾದರ ಕೋರ್ಟಿಗಿ ಹೋದರಾಯಿತು’ ಎಂದು ಸದಾನಂದ ಭರವಸೆ ನೀಡಿದನಾದರೂ ಚಂದ್ರಕಾಂತರಿಗೆ ಅವನ ಮಾತಿನಲ್ಲಿ ತನ್ನನ್ನು ಸಮಾಧಾನಪಡಿಸಬೇಕು ಎನ್ನುವುದಕ್ಕಿಂತ ಹೆದರಿಸುವ ಬಯಕೆಯೇ ಅಡಕವಾಗಿರುವಂತೆ ಭಾಸವಾಗಿ ಹೊರಗಿನ ತಣ್ಣನೆ ಚಳಿಗೆ ಮೈ ನಡುಗಿತು. ‘ಸರ್ ನಾಳಿಗಿ ಬಂದು ಭೇಟಿ ಆಗತೀನಿ. ಖುಲ್ಲಂಖುಲ್ಲಾ ಮಾತಾಡಿದರಾಯಿತು’ ಎಂದು ಸದಾನಂದ ಕರೆ ಕತ್ತರಿಸಿದ. ಸದಾನಂದನನ್ನು ಹೇಗೆ ನಂಬುವುದು ಎನ್ನುವ ಆತಂಕ ಶುರುವಾಯಿತು. ಮೂರು ವರ್ಷಗಳಲ್ಲಿ ಪೂರ್ಣಗೊಳಿಸಬೇಕಿದ್ದ ಡಾಕ್ಟರೇಟ್‍ಗಾಗಿ ಸದಾನಂದ ಆರುವರ್ಷಗಳನ್ನು ತೆಗೆದುಕೊಂಡಿದ್ದ. ಈ ವಿಳಂಬದಲ್ಲಿ ತಮ್ಮದೆ ಸಿಂಹಪಾಲು ಎಂದರಿವಾಗಿ ಆ ಸಿಟ್ಟನ್ನು ಈ ರೀತಿಯಾಗಿ ಅವನು ತಿರಿಸಿಕೊಳ್ಳುತ್ತಿರುವನೇನೋ ಎನ್ನುವ ಶಂಕೆ ಚಂದ್ರಕಾಂತರ ಮನಸ್ಸನ್ನು ಹೊಕ್ಕು ಕೊರೆಯತೊಡಗಿತು. ‘ಎಲ್ಲರೂ ಹೇಳುವಂತೆ ನಾನು ಮಾರ್ಗದರ್ಶನ ಮಾಡುತ್ತಿದ್ದುದ್ದು ಮಹಿಳಾ ಸ್ಕಾಲರ್‍ಗಳಿಗೆ ಮಾತ್ರ. ಎಜ್ಯುಕೇಶನ್ ಮಿನಿಸ್ಟರ್ ಹೇಳಿದರೆಂದು ಒಲ್ಲದ ಮನಸ್ಸಿನಿಂದ ಸದಾನಂದನಿಗೆ ಗೈಡ್ ಮಾಡಲು ಒಪ್ಪಿಕೊಂಡಿದ್ದು. ಅಷ್ಟೇನು ಪ್ರತಿಭಾವಂತನಲ್ಲದಿದ್ದರೂ ಕಷ್ಟಪಟ್ಟು ಓದುತ್ತಿದ್ದ. ಆ ಆರು ವರ್ಷಗಳಲ್ಲಿ ಒಮ್ಮೆ ಕೂಡ ಅವನನ್ನು ಕಾನ್ಫರೆನ್ಸ್‍ಗೆ ಜೊತೆಯಲ್ಲಿ ಕರೆದುಕೊಂಡು ಹೋಗಿರಲಿಲ್ಲ’ ಹಿಂದಿನದೆಲ್ಲ ನೆನಪಾಗಿ ಚಂದ್ರಕಾಂತ ಒಳಗೊಳಗೆ ತಪ್ಪುಮಾಡಿದ ಭಾವನೆಯಿಂದ ನರಳಿದರು. ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿನ ಕಾನ್ಫರೆನ್ಸ್‍ಗಳಿಗೆ ಹೋದಾಗಲೆಲ್ಲ ಮಹಿಳಾ ಸಂಶೋಧನಾ ಅಭ್ಯರ್ಥಿಗಳು ಜೊತೆಗಿರುತ್ತಿದ್ದರು. ಸರೋಜಿನಿ ಕೂಡ ತಮ್ಮೊಂದಿಗೆ ಹಲವು ಸಲ ಬಂದಿದ್ದಳು ಎನ್ನುವುದು ನೆನಪಾಗಿ ಆ ಕ್ಷಣಕ್ಕೆ ಮಧುರ ಅನುಭವವೊಂದು ಸ್ಮರಣೆಗೆ ಬಂದು ಪ್ರೊಫೆಸರ್  ಮೈ ಬೆಚ್ಚಗಾಯಿತು. ಮಧುರ ನೆನಪಿಗೆ ಮತ್ತಷ್ಟು ಕಾವು ಕೊಡಲು ರಮ್ ಸೇವನೆಗೆಂದು ಒಳಗೆ ಬಂದರು. ಪ್ರೊಫೆಸರ್  ಹೊಸಮನಿ ಅದಾಗಲೇ ಸೋಫಾದ ಮೇಲೆ ಮೈಚೆಲ್ಲಿ ನಿದ್ದೆಗೆ ಜಾರಿದ್ದರು. ಒಬ್ಬರೇ ಕುಳಿತು ಬರಿದಾಗಿದ್ದ ಗ್ಲಾಸಿಗೆ ರಮ್ ಸುರಿದು ಗುಟುಕರಿಸಿದವರಿಗೆ ಇನ್ನು ಸಾಕು ಎಂದೆನಿಸಿ ಬಾಟ್ಲಿ ತೆಗೆದಿಟ್ಟು ಒಂದಿಷ್ಟು ಮೊಸರನ್ನ ತಿಂದು ಊಟದ ಶಾಸ್ತ್ರ ಮುಗಿಸಿ ಹಾಸಿಗೆಗೆ ಮೈತಾಗಿಸಿದರು. ಕಣ್ಮುಚ್ಚಿದರೂ ಸರೋಜಿನಿ ಎದುರು ನಿಂತಂತೆ ಭಾಸವಾಯಿತು. ಸದಾನಂದ ಶಾಂತ ಸರೋವರಕ್ಕೆ ಕಲ್ಲು ಎಸೆದಿದ್ದ. ಅವಳು ನನ್ನ ಬಗ್ಗೆ ಬರಿಲೇ ಬೇಕು. ನಾನಿಲ್ಲದೆ ಅವಳ ಬದುಕಿನ ಅಧ್ಯಾಯ ಪೂರ್ಣಗೊಳ್ಳುವುದಾದರೂ ಹೇಗೆ?. ಏನು ಬರಿದಿರಬಹುದು? ಕುತೂಹಲಕ್ಕೆಂಬಂತೆ ಎದುರಾದ ಪ್ರಶ್ನೆ ಮುಂದೆ ಬೃಹದಾಕಾರವಾಗಿ ಬೆಳೆದು ಕೊರೆಯುವ ಚಿಂತೆಯಾಗಿ ಮಾರ್ಪಟ್ಟಿತು. 

ಪೆÇ್ರಫೆಸರ್ ಟೈಮ್ ನೋಡಿಕೊಂಡರು. ರಾತ್ರಿ ಎರಡು ಗಂಟೆಯಾಗಿತ್ತು. ಇದ್ದಕ್ಕಿದ್ದಂತೆ ಅವರಿಗೆ ಊರು, ಮನೆ, ಅಪ್ಪನ ನೆನಪಾಯಿತು. ಹಳ್ಳಿಯ ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿದ ಹುಡುಗ ಮುಂದೊಂದು ದಿನ ವಿಶ್ವವಿದ್ಯಾಲಯದ ವಿಭಾಗ ಮುಖ್ಯಸ್ಥನಾಗುವ ಹಂತಕ್ಕೆ ಬೆಳೆದು ನಿಂತಿದ್ದು ಸಣ್ಣ ಸಾಧನೆಯಲ್ಲ ಎಂದು ಚಂದ್ರಕಾಂತರ ಮನಸ್ಸು ಗರ್ವದಿಂದ ಬೀಗಿತು. ‘ವಂಶಪಾರಂಪರ್ಯವಾಗಿ ಬಂದಿದ್ದ ಇಪ್ಪತ್ತು ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಊರಿನ ಜನರ ಗೌರವಕ್ಕೆ ಪಾತ್ರರಾಗಿದ್ದ ಅಪ್ಪ ಮಲ್ಲಣ್ಣಗೌಡರಿಗೆ ಮಕ್ಕಳಿಬ್ಬರ ಮೇಲೂ ಪ್ರೀತಿಯಿತ್ತು. ಇಬ್ಬರಲ್ಲಿ ಒಬ್ಬ ಓದುವುದಕ್ಕೆ ಇನ್ನೊಬ್ಬ ವ್ಯವಸಾಯಕ್ಕೆ ಎಂದು ಅಪ್ಪ ನಿರ್ಧರಿಸಿಯಾಗಿತ್ತು. ಸೂರ್ಯಕಾಂತನಿಗೂ ಓದುವ ಆಸೆಯಿತ್ತು. ಮನೆದೇವರಾದ ಗುಡ್ಡದ ಮಲ್ಲಿಕಾರ್ಜುನನ ಮೇಲೆ ಅಪ್ಪನಿಗೆ ಅಪಾರ ಭಕ್ತಿ. ರಾತ್ರಿ ಮಲಗುವಾಗ ದೇವರ ತಲೆಯ ಮೇಲೆ ಹೂವಿಟ್ಟು ಬೆಳಗ್ಗೆ ಬಲಕ್ಕೆ ಬಿದ್ದಿದ್ದರೆ ಚಂದ್ರಕಾಂತನಿಗೆ ಎಡಕ್ಕಾದರೆ ಸೂರ್ಯಕಾಂತನಿಗೆ ದೇವರ ಆಶೀರ್ವಾದ ಎಂದು ಎಲ್ಲ ಭಾರವನ್ನು ಮಲ್ಲಿಕಾರ್ಜುನನ ಮೇಲೆ ಹಾಕಿ ನಿಶ್ಚಿಂತರಾಗಿದ್ದರು. ರಾತ್ರಿ ಎಲ್ಲರೂ ಮಲಗಿರುವಾಗ ಕತ್ತಲಲ್ಲೆ ತೆವಳಿಕೊಂಡು ದೇವರಕೋಣೆ ಹೊಕ್ಕು ಹೂವನ್ನು ಬಲಕ್ಕೆ ಬೀಳಿಸುವಾಗ ಕೈನಡುಗುತ್ತಿತ್ತು. ಅಮಾಯಕರಾದ ಅಪ್ಪ ಮತ್ತು ತಮ್ಮ ದೇವರ ಆಶೀರ್ವಾದ ಎಂದು ನಂಬಿದರು. ಕಲಬುರಗಿಯ ಎಸ್.ಬಿ ಕಾಲೇಜಿನಲ್ಲಿ ಬಿ.ಎ ಪಾಸಾಗಿ ಜ್ಞಾನಗಂಗಾದಲ್ಲಿ ಎಂ.ಎ ಸೊಸಿಯಾಲಜಿ ಮುಗಿಸಿ ಪಿಎಚ್.ಡಿ ಪೂರ್ಣಗೊಳಿಸಿದ ನೆನಪು ಇನ್ನೂ ಹಚ್ಚಹಸಿರಾಗಿದೆ. ಸೂರ್ಯಕಾಂತ ಊರಿನಲ್ಲೆ ಇದ್ದು ವ್ಯವಸಾಯದಲ್ಲಿ ಅಪ್ಪನಿಗೆ ಜೊತೆಯಾದ. ಅವನೂ ಓದು ಮುಂದುವರೆಸಿದ್ದರೆ ನನ್ನಂತೆ ಯಾವುದಾದರೂ ಯೂನಿವರ್ಸಿಟಿನಲ್ಲಿ ಪೆÇ್ರಫೆಸರ್ ಆಗಿರುತ್ತಿದ್ದ’. ವ್ಯವಸಾಯದಲ್ಲಿ ನಷ್ಟವಾಗಿ ಸೂರ್ಯಕಾಂತನ ಹೆಚ್ಚುತ್ತಿರುವ ಸಾಲದಹೊರೆ ನೆನಪಾಗಿ ಪೆÇ್ರಫೆಸರ್ ಎದೆ ಭಾರವಾಯಿತು. 

ಹಿಂದೆಯೇ ಗಿರಿಜಾಳ ನೆನಪಾಯಿತು. ‘ಸಂಬಂಧದಲ್ಲಿ ಸೊದರತ್ತೆ ಮಗಳು. ಊರಿನಲ್ಲೆ ಮೆಟ್ರಿಕ್‍ವರೆಗೆ ಓದಿದ್ದ ಗಿರಿಜಾ ಬೆಳ್ಳಗೆ ತೆಳ್ಳಗೆ ಸುಂದರಳಾಗಿದ್ದಳು. ಯೂನಿವರ್ಸಿಟಿನಲ್ಲಿ ಓದುತ್ತಿದ್ದ ನಾನೆಂದರೆ ಅವಳಿಗೆ ಅಭಿಮಾನ ಪ್ರೀತಿಯಿತ್ತು. ಕಲಬುರಗಿಯಲ್ಲಿ ಗೆಳೆಯರೊಡಗೂಡಿ ನೋಡಿದ ನೀಲಿ ಸಿನಿಮಾಗಳು ಮನದಲ್ಲಿ ಕಾಮನೆಯ ಭಾವವನ್ನು ಉದ್ದೀಪನಗೊಳಿಸುತ್ತಿದ್ದವು. ಬೇಸಿಗೆ ರಜೆಯಲ್ಲಿ ಊರಿಗೆ ಹೋಗಿದ್ದಾಗ ಬಯಕೆ ಕೆರಳಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಮಾಗಮಕ್ಕಾಗಿ ಒತ್ತಾಯಿಸಿದ್ದೆ. ಮದುವೆಯಾಗುವ ಅಭಯನೀಡಿ ಬಲವಂತಪಡಿಸಿದಾಗ ಒಪ್ಪಿದಳು. ಊರಿಗೆ ಹೋದಾಗಲೆಲ್ಲ ಕದ್ದುಮುಚ್ಚಿ ಅವಳನ್ನು ಸೇರುತ್ತಿದ್ದೆ’ ಪ್ರೊಫೆಸರ್  ಅರೆಕ್ಷಣ ಹಿಂದಿನ ನೆನಪಿನಲ್ಲಿ ಕಳೆದುಹೋದರು. ‘ಯೂನಿವರ್ಸಿಟಿನಲ್ಲಿ ಅಸಿಸ್ಟಂಟ್ ಪ್ರೊಫೆಸರ್  ಹುದ್ದೆಗೆ ಸಂದರ್ಶನಕ್ಕೆ ಕರೆಬಂದಾಗ ನನ್ನ ಬದುಕಿನ ಗತಿಯೇ ಬದಲಾಯಿತು. ಸಂದರ್ಶನ ಸಮಿತಿಯಲ್ಲಿದ್ದ ಪೆÇ್ರಫೆಸರ್ ವಿರುಪಾಕ್ಷಪ್ಪಗೌಡರು ತಮ್ಮ ಬಳಕೆಯವನೆಂದು ಸಂದರ್ಶನಕ್ಕೆ ಮೊದಲೇ ಸಂಪರ್ಕಿಸಿ ಮಗಳು ಪಾರ್ವತಿಯ ಕೈಹಿಡಿದರೆ ನೌಕರಿ ಕೊಡಿಸುವ ಭರವಸೆ ನೀಡಿದರು. ಗಿರಿಜಾಳಿಗಿಂತ ಯೂನಿವರ್ಸಿಟಿನಲ್ಲಿ ಮೇಷ್ಟ್ರಾಗುವುದೆ ದೊಡ್ಡದು ಎನಿಸಿತು. ಅಪ್ಪ ಜಗಳ ತೆಗೆದ. ತಂಗಿಗೆ ಮಾತು ಕೊಟ್ಟಿದ್ದು ತನ್ನನ್ನು ವಚನಭ್ರಷ್ಟನಾಗಿಸಬೇಡ ಎಂದು ಕೈಮುಗಿದು ಬೇಡಿಕೊಂಡ. ನನಗೆ ನೌಕರಿಯೇ ಮುಖ್ಯವಾಗಿತ್ತು. ಹಠಕ್ಕೆಬಿದ್ದ ಅಪ್ಪ ತನ್ನ ಮಾತು ಉಳಿಸಿಕೊಳ್ಳಲು ಗಿರಿಜಾಳನ್ನು ಸೂರ್ಯಕಾಂತನಿಗೆ ತಂದುಕೊಳ್ಳಲು ನಿಶ್ಚಯಿಸಿದ. ಆ ಸಂದರ್ಭ ನನಗೇಕೋ ತಮ್ಮನ ಹೆಂಡತಿಯಾಗಿ ಅವಳನ್ನು ನೋಡಲು ಮನಸ್ಸಿಗೆ ಹಿಂಸೆ ಎನಿಸಿತು. ಗಿರಿಜಾ, ಸೂರ್ಯಕಾಂತನ ಕೈಹಿಡಿಯಲು ನಿರಾಕರಿಸಿದಳು. ಅವಳ ಅಪ್ಪ ತನ್ನ ದೂರದ ಸಂಬಂಧದಲ್ಲೆ ಅವಳಿಗೆ ಗಂಡುನೋಡಿ ಮದುವೆ ಮಾಡಿದ. ಮದುವೆಯಾದ ವರ್ಷಕ್ಕೆ ಗಂಡ ತೀರಿಕೊಂಡ. ಬಡತನ ಮತ್ತು ವೈಧವ್ಯ ತಂದ ಅಕಾಲಿಕ ಮುಪ್ಪಿನಿಂದ ಈಗ ಗುರುತುಸಿಗದಷ್ಟು ಹಣ್ಣಾಗಿರುವಳು’ ಗಿರಿಜಾಳ ನೆನಪಾಗಿ ಚಂದ್ರಕಾಂತರ ಮನಸ್ಸು ಕ್ಷೋಭೆಗೊಂಡಿತು. ಹಿಂದೆಯೇ ಸರೋಜಿನಿಗೆ ಗಿರಿಜಾ ಮತ್ತು ತಮ್ಮ ಸಂಬಂಧದ ಬಗ್ಗೆ ಹೇಳಿದ್ದು ಸ್ಮರಣೆಗೆ ಬಂತು. ‘ಸರೋಜಿನಿಯನ್ನು ಕೂಡುವಾಗಲೆಲ್ಲ ನಾನು ಬರೀ ದೈಹಿಕವಾಗಿ ಮಾತ್ರ ಬೆತ್ತಲಾಗಿಲ್ಲ. ನನ್ನೊಳಗನ್ನು ಅವಳೆದುರು ತೆರೆದಿಟ್ಟು ಅಂತರಂಗದಿಂದಲೂ ಬೆತ್ತಲಾಗಿದ್ದೇನೆ. ಸರೋಜಿನಿ ತನ್ನ ಆತ್ಮಕಥೆಯಲ್ಲಿ ಗಿರಿಜಾಳ ಸಂಗತಿ ಕೂಡ ಬರೀಬಹುದೇನೋ’ ತನ್ನೊಳಗನ್ನು ಅವಳೆದುರು ತೆರೆದಿಟ್ಟು ತಪ್ಪು ಮಾಡಿದೆನೇನೊ ಎಂದೆನಿಸಿ ಮೊದಲ ಬಾರಿಗೆ ಪೆÇ್ರಫೆಸರ್ ಚಂದ್ರಕಾಂತರಿಗೆ ಎದೆಯಲ್ಲಿ ಮುಳ್ಳು ಆಡಿಸಿದಂತೆ ನೋವಾಯಿತು. 

ತಣ್ಣಗಿನ ನೀರು ಕುಡಿದು ಎದೆಯನ್ನು ಹಗುರಾಗಿ ನೀವಿಕೊಂಡರು. ಒಂದಿಷ್ಟು ಸಮಾಧಾನ ಎನಿಸಿತು.     ‘ಪ್ರೊಫೆಸರ್ ಎಂದು ಬಡ್ತಿಹೊಂದಲು ಬಹಳಕಾಲ ಕಾಯಲಿಲ್ಲ. ಮಾವ ಪ್ರೊಫೆಸರ್  ವಿರುಪಾಕ್ಷಪ್ಪಗೌಡರ ಪ್ರಭಾವ ಬಳಸಿ ಪೆÇ್ರಫೆಸರ್ ಹುದ್ದೆಗೆ ಬಡ್ತಿಹೊಂದಿದಾಗ ಮುಂದಿದ್ದದ್ದು ಡಿಪಾರ್ಟಮೆಂಟ್ ಮುಖ್ಯಸ್ಥ ಆಗಬೇಕೆನ್ನುವ ಗುರಿ. ಒಂದು ಹೆಜ್ಜೆಯಷ್ಟೆ ಬಾಕಿಯಿತ್ತು. ಆದರೆ ಅದಕ್ಕಾಗಿ ದೀರ್ಘಕಾಲ ಕಾಯುವ ತಾಳ್ಮೆ ಇರಲಿಲ್ಲ. ವಿಭಾಗದ ಮುಖ್ಯಸ್ಥರಾಗಿದ್ದ ಪೆÇ್ರಫೆಸರ್ ಲಕ್ಕಪ್ಪ ಅವರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡಲು ಅಹಂ ಅಡ್ಡ ಬರುತ್ತಿತ್ತು. ಎಷ್ಟೆಂದರೂ ನಮ್ಮ ಹೊಲಗಳಲ್ಲಿ ದುಡಿಯುತ್ತಿದ್ದ ಆಳು ಮಾದನ ಕುಲಬಳಕೆಯವರು. ವಯಸ್ಸಿನಲ್ಲಿ ತಮಗಿಂತ ಎರಡುವರ್ಷ ದೊಡ್ಡವರು. ಅವರ ನಿವೃತ್ತಿಯ ನಂತರ ಮುಖ್ಯಸ್ಥನ ಪೀಠದಲ್ಲಿ ತಾವು ಆಸೀನರಾಗುವುದು ಎರಡು ವರ್ಷಗಳು ಮಾತ್ರ ಎನ್ನುವ ಹತಾಶೆ ಪ್ರೊಫೆಸರ್  ಲಕ್ಕಪ್ಪ ಅವರ ವಿರುದ್ಧ ಸಂಚು ರೂಪಿಸಲು ಪ್ರೇರೇಪಿಸಿತು’. ಪೆÇ್ರಫೆಸರ್ ಲಕ್ಕಪ್ಪ ಅವರಿಗೆ ತಾವು ಮಾಡಿದ ಮೋಸದ ನೆನಪಾಗಿ ಪೆÇ್ರಫೆಸರ್ ಚಂದ್ರಕಾಂತ ಖಿನ್ನರಾದರು. 

‘ಸರೋಜಿನಿ ಆಗಿನ್ನೂ ಎಂ.ಎ ಮೊದಲ ವರ್ಷದ ವಿದ್ಯಾರ್ಥಿನಿ. ಓದಿನಲ್ಲಿ ಜಾಣೆ. ಮುಂದೊಂದು ದಿನ ಪಿಎಚ್.ಡಿ ಪ್ರಾಡಕ್ಟೆಂದು ಇಡೀ ಡಿಪಾರ್ಟಮೆಂಟಿನ ಪ್ರಾಧ್ಯಾಪಕರು ಅವಳನ್ನು ಗುರುತಿಸಿದ್ದರು.  ನಾನೆಂದರೆ ವಿಶೇಷ ಗೌರವ ಅವಳಿಗೆ. ಅವಳಿಗೂ ಪಿಎಚ್.ಡಿ ಮಾಡಬೇಕೆನ್ನುವ ಕನಸಿತ್ತು. ಪೆÇ್ರಫೆಸರ್ ಲಕ್ಕಪ್ಪ ಅವರ ದಮನಕ್ಕೆ ಸರೋಜಿನಿ ಅಸ್ತ್ರವಾದಳು. ಮೊದಮೊದಲು ಸರೋಜಿನಿ ಸಹಕರಿಸಲು ಹಿಂದೇಟು ಹಾಕಿದಳು. ವಿಭಾಗ ಮುಖ್ಯಸ್ಥನಾದರೆ ಪಿಎಚ್.ಡಿ ಅಭ್ಯರ್ಥಿಯಾಗಿ ನಿನ್ನನ್ನು ಸುಲಭವಾಗಿ ಆಯ್ಕೆ ಮಾಡಬಹುದೆಂದು ಆಸೆ ಹುಟ್ಟಿಸಿದಾಗ ಒಲ್ಲದ ಮನಸ್ಸಿನಿಂದಲೇ ಒಪ್ಪಿದಳು. ಪೆÇ್ರಫೆಸರ್ ಲಕ್ಕಪ್ಪ ರಜಾದಿನದಂದು ಕೂಡ ವಿಭಾಗಕ್ಕೆ ಬಂದು ತಮ್ಮ ಚೇಂಬರ್‍ನಲ್ಲಿ ಸಂಶೋಧನಾ ಲೇಖನಗಳ ಓದು ಮತ್ತು ಬರವಣಿಗೆಯಲ್ಲಿ ನಿರತರಾಗುತ್ತಿದ್ದರು. ಅದೇ ಅವರಿಗೆ ಮುಳುವಾಯಿತು. ಸುಲಭವಾಗಿ ಖೆಡ್ಡಾಕ್ಕೆ ಬಿದ್ದರು. ಅದೊಂದು ಭಾನುವಾರ ಮಧ್ಯಾಹ್ನದ ಹೊತ್ತು ಇಡೀ ಯೂನಿವರ್ಸಿಟಿ ಕ್ಯಾಂಪಸ್ ಬೆಚ್ಚಿಬೀಳುವಂತೆ ಸರೋಜಿನಿ ಕೂಗುಹಾಕಿದಳು. ಅವಳ ಅಸ್ತವ್ಯಸ್ತವಾಗಿದ್ದ ಸೀರೆ ಕೆದರಿದ ತಲೆಗೂದಲು ಅಲ್ಲಲ್ಲಿ ಹರಿದಿದ್ದ ರವಿಕೆ ಕಥೆಗೆ ಕಳೆಕಟ್ಟಿದವು. ತನ್ನ ಪುಂಡಗೆಳೆಯರೊಂದಿಗೆ ಅಡಗಿಕುಳಿತಿದ್ದ ಸದಾನಂದ ಘಟಿಸದ ಕಥೆಗೆ ಸಾಕ್ಷಿಯಾದ. ಮಾವನ ಪ್ರಭಾವದಿಂದ ಯೂನಿವರ್ಸಿಟಿ ರಚಿಸಿದ ವಿಚಾರಣಾ ಸಮಿತಿಯಲ್ಲಿ ನಾನು ಕೂಡ ಸದಸ್ಯನಾಗಿದ್ದೆ. ಸಮಿತಿ ಒಪ್ಪಿಸಿದ ವರದಿಯಲ್ಲಿ ಪೆÇ್ರಫೆಸರ್ ಲಕ್ಕಪ್ಪ ತಪ್ಪಿತಸ್ಥರೆಂದು ನಮೂದಾಗಿತ್ತು. ಶಿಕ್ಷೆ ಪ್ರಕಟವಾಗುವ ಮೊದಲೆ ವಿಷಕುಡಿದು ಆತ್ಮಹತ್ಯೆ ಮಾಡಿಕೊಂಡರು. ಸೇವಾಹಿರಿತನದ ಮೇಲೆ ವಿಭಾಗದ ಮುಖ್ಯಸ್ಥನೆಂದು ವಿಶ್ವವಿದ್ಯಾಲಯ ಬಡ್ತಿನೀಡಿತು. ಅವಳು ಆತ್ಮಕಥೆಯಲ್ಲಿ ಇದನ್ನೆಲ್ಲ ಬರಿಬಹುದೇನೋ. ನನ್ನ ಮರ್ಯಾದೆ ಮಾತ್ರವಲ್ಲ ಅವಳ ಮರ್ಯಾದೆನೂ ಹೋಗುತ್ತೆ. ಮರ್ಯಾದೆಗೆ ಅಂಜಿ ಇದನ್ನೆಲ್ಲ ಬರೀಲಿಕ್ಕಿಲ್ಲ’ ಒಂದಿಷ್ಟು ಸಮಾಧಾನ ಮನಸ್ಸಿನಲ್ಲಿ ಮೂಡಿ ಪ್ರೊಫೆಸರ್  ಚಂದ್ರಕಾಂತರಿಗೆ ನಿರಾಳವೆನಿಸಿತು.

ಮನಸ್ಸಿಗೆ ನಿರಾಳವೆನಿಸಿದ್ದು ಅರೆಘಳಿಗೆ ಮಾತ್ರ. ಹಿಂದೆಯೇ ಹೆಂಡತಿ ಮಕ್ಕಳ ನೆನಪಾಯಿತು. ಅವಳ ಆತ್ಮಕಥೆ ಮನೆಯವರ ಕೈಗೆ ಸಿಕ್ಕರೆ ಏನೆಲ್ಲ ರಂಪಾಟವಾಗಬಹುದೆಂಬ ಕಲ್ಪನೆ ಮನಸ್ಸಿನಲ್ಲಿ ಮೂಡಿ ಹಾಸಿಗೆಯಲ್ಲಿ ಧಗ್ಗನೆ ಎದ್ದು ಕುಳಿತರು. ‘ಮುಳ್ಳುಗಿಡದಲ್ಲೊಂದು ಗುಲಾಬಿ ಹೂವು, ಸದಾನಂದ ಹೇಳಿದ ಇದು ಅವಳ ಆತ್ಮವೃತ್ತಾಂತದ ಶೀರ್ಷಿಕೆಯಂತೆ’ ಮುಳ್ಳುಗಿಡ ತಾವೆ ಆಗಿರಬಹುದೆನ್ನುವ ಊಹೆಯಿಂದಲೇ ಪೆÇ್ರಫೆಸರ್ ಹಣೆಯ ಮೇಲೆ ಬೆವರು ಹನಿಗಳು ಮೂಡಿದವು. ‘ಅವಳು ಪಿಎಚ್.ಡಿ ಸಂಶೋಧನೆಗೆ ಸೇರಿದ ಮೊದಲ ವರ್ಷವೇ ಶಿಮ್ಲಾದಲ್ಲಿ ಆಯೋಜಿಸಿದ್ದ ಸಮಾಜಶಾಸ್ತ್ರಜ್ಞರ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ತಮ್ಮನ್ನು ವಿಶೇಷ ಉಪನ್ಯಾಸಕ್ಕಾಗಿ ಆಹ್ವಾನ ಬಂದಿತ್ತು. ಸರೋಜಿನಿ ತನ್ನ ಥಿಸೀಸ್ ಟಾಪಿಕ್ ಮೇಲೆ ಸಂಶೋಧನಾ ಲೇಖನ ಸಿದ್ಧಪಡಿಸಿದ್ದಳು. ನನ್ನ ವಿಶೇಷ ಉಪನ್ಯಾಸ ಸರೋಜಿನಿಯ ಲೇಖನಮಂಡನೆ ಇಡೀ ಸಮ್ಮೇಳನದ ವಿಶೇಷ ಆಕರ್ಷಣೆಯಾಗಿತ್ತು. ಪ್ರಶ್ನೆಗಳಿಗೆ ಸರೋಜಿನಿ ಉತ್ತರಿಸುತ್ತಿದ್ದ ರೀತಿಗೆ ಎಲ್ಲರೂ ಬೆರಗಾಗಿದ್ದರು. ವೇದಿಕೆಯ ಮೇಲಿಂದ ಸರೋಜಿನಿ ತಮ್ಮನ್ನು ಹೆಮ್ಮೆಯಿಂದ ನೋಡಿದ್ದಳು. ಸರಳ ಅಲಂಕಾರದಲ್ಲಿ ಸುಂದರಳಾಗಿ ಕಾಣಿಸುತ್ತಿದ್ದಳು’ ಸರೋಜಿನಿ ರೂಪ ಕಣ್ಣೆದುರು ಸುಳಿದು ಚಂದ್ರಕಾಂತರ ಮನಸ್ಸು ಮುದಗೊಂಡಿತು. 

‘ರಾತ್ರಿ ವಿಶೇಷ ಔತಣಕೂಟದಿಂದ ಅತಿಥಿಗೃಹಕ್ಕೆ ಬಂದು ನೇರವಾಗಿ ರೂಮು ಸೇರಿದ್ದೇವು. ಆ ದಿನ ಸರೋಜಿನಿಯ ಸಾಂಗತ್ಯದಲ್ಲಿ ನನ್ನಲ್ಲಿ ಯೌವನ ಮತ್ತೆ ಚಿಗುರಿತ್ತು. ಶಿಮ್ಲಾ ನಂತರ ದೆಹಲಿ, ಮುಂಬೈ, ಜಯಪುರ, ಹೈದರಾಬಾದ ಸಮ್ಮೇಳನಗಳು ನಮ್ಮಿಬ್ಬರ ಮಿಲನಮಹೋತ್ಸವಕ್ಕೆ ಸಾಕ್ಷಿಯಾದವು’ ಅವಳೊಡನೆ ಕೊನೆಯಸಲ ಸೇರಿದ್ದು ಎಲ್ಲಿ ಎಂದು ಚಂದ್ರಕಾಂತರ ಮನಸ್ಸು ಯೋಚಿಸಲು ತೊಡಗಿತು. ಅವಳ ಪಿಎಚ್.ಡಿ ಪರೀಕ್ಷೆಯ ಸಂದರ್ಶನದ ಹಿಂದಿನ ರಾತ್ರಿ ಎಂದು ಥಟ್ಟನೆ ನೆನಪಾಯಿತು. ಅಂದು ಮಿಲನದ ಖುಷಿಗಿಂತ ಸಂದರ್ಶನದಲ್ಲಿ ಕೇಳಬಹುದಾದ ಪ್ರಶ್ನೆಗಳ ಕುರಿತೆ ಅವಳು ಹೆಚ್ಚು ಮಾತನಾಡಿದ್ದು ನೆನಪಾಗಿ ಸುಂದರ ಘಳಿಗೆಯೊಂದು ವ್ಯರ್ಥವಾಗಿ ಕಳೆದುಹೋಯಿತೆಂದು ಚಂದ್ರಕಾಂತರಿಗೆ ಹಳಹಳಿಯಾಯಿತು. ‘ಅದೇಕೋ ಆ ರಾತ್ರಿಯ ನಮ್ಮಿಬ್ಬರ ಸಮಾಗಮ ದೀರ್ಘಕಾಲ ನೆನಪಿನಲ್ಲಿ ಉಳಿಯುವಂತಾಗಲಿಲ್ಲ. ಆ ದಿನದ ನಂತರ ಅವಳೆಂದೂ ಕೈಗೆ ಸಿಗಲೇ ಇಲ್ಲ. ತಾನು ಹಲವು ಸಲ ಪ್ರಯತ್ನಿಸಿದರೂ ಅವಳು ಕೈಜಾರುತ್ತಲೇ ಹೋದಳು. ಈ ನಡುವೆ ಇಷ್ಟಪಟ್ಟ ಹುಡುಗನನ್ನು ಮದುವೆಯಾಗಿ ಇದೇ ಊರಿನ ಖಾಸಗಿ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿರುವಳೆಂದು ಸದಾನಂದ ಹೇಳಿದ. ನನ್ನನ್ನು ಮದುವೆಗೂ ಕರೆದಿರಲಿಲ್ಲ. ಆತ್ಮಕಥೆಯಲ್ಲಿ ನಮ್ಮಿಬ್ಬರ ಸಂಬಂಧದ ಕುರಿತು ಬರೆದಿರಬಹುದು. ಈ ವಿಷಯ ಹೆಂಡತಿ ಮಕ್ಕಳಿಗೆ ಗೊತ್ತಾದರೆ ಆಗ ನನ್ನ ಗೌರವದ ಗತಿ ಏನು?’ ಪ್ರೊಫೆಸರ್  ಚಂದ್ರಕಾಂತರಿಗೆ ಈಗ ಎದೆಯಲ್ಲಿ ಈ ಮೊದಲಿಗಿಂತ ಹೆಚ್ಚು ನೋವಿದೆ ಎನಿಸಿ ಎದೆಯನ್ನು ಗಟ್ಟಿಯಾಗಿ ನೀವಿಕೊಂಡರು. 

‘ಸರ್ ಅಸಿಸ್ಟಂಟ್ ಪ್ರೊಫೆಸರ್  ಹುದ್ದೆಯ ಸಂದರ್ಶನಕ್ಕೆ ಹಾಜರಾಗುತ್ತಿದ್ದೀನಿ. ಸಮಿತಿಯಲ್ಲಿ ನೀವು ಇದ್ದೆ ಇರ್ತೀರಿ. ಯೂನಿವರ್ಸಿಟಿನಲ್ಲಿ ಪಾಠ ಮಾಡಬೇಕು ಅಂತ ನನಗೂ ಆಸೆ ಇದೆ. ಜೊತೆಗೆ ಯೋಗ್ಯತೆನೂ ಇದೆ. ನನ್ನ ನೇಮಕಾತಿಗೆ ಅಡ್ಡಬರಬೇಡಿ’ ಆ ದಿನ ಸರೋಜಿನಿ ಆಡಿದ ಮಾತು ನೆನಪಾಗಿ ಚಂದ್ರಕಾಂತರಿಗೆ ಒಂದು ಕ್ಷಣ ಸಿಟ್ಟು ಬಂತು. ‘ಸಹಾಯಮಾಡಿ ಅಂತ ಕೇಳಿದ್ದರೆ ನೆರವಾಗುತ್ತಿದ್ದೆನೇನೋ. ಅಡ್ಡಬರಬೇಡಿ ಅಂತ ಮುಖಕ್ಕೆ ಹೊಡೆದಂತೆ ಹೇಳಿಹೋದಳು. ಭೇಟಿಯಾಗದೆ ಸುಮಾರು ಒಂದುವರ್ಷ ಆಗಿತ್ತು. ಮದುವೆಯಾಗಿ ಈಗ ಮೊದಲಿಗಿಂತ ಕಳೆಕಳೆಯಾಗಿದ್ದಳು. ಮದುವೆಯಾದರೇನಂತೆ ನೋಡಿದ ಕ್ಷಣ ಅವಳನ್ನು ಸೇರಬೇಕು ಅನ್ನೋ ಬಯಕೆ ಉತ್ಕಟವಾಗಿತ್ತು. ಸಹಕರಿಸಿದಿದ್ದರೆ ಯೂನಿವರ್ಸಿಟಿನಲ್ಲಿ ಸುಲಭವಾಗಿ ಕೆಲಸ ಸಿಗುತ್ತಿತ್ತು. ತನ್ನ ಕಾಲು ಮೇಲೆ ತಾನೇ ಕಲ್ಲು ಹಾಕಿಕೊಂಡಳು. ನೌಕರಿ ಬೇರೆಯವರ ಪಾಲಾಯಿತು. ಅದಕ್ಕೆ ನಾನೇ ಕಾರಣ ಎಂದು ಆರೋಪಿಸಿದಳೆಂದು ಸದಾನಂದ ಹೇಳಿದ. ಈ ಸದಾನಂದ ಹೇಳೊದರಲ್ಲಿ ಎಷ್ಟು ನಿಜವಿರುತ್ತೋ ಎಷ್ಟು ಸುಳ್ಳು ಇರುತ್ತೋ ಯಾರಿಗೆ ಗೊತ್ತು. ನನ್ನನ್ನು ಮೆಚ್ಚಿಸಬೇಕೆಂದು ಅವನು ಇಲ್ಲಸಲ್ಲದ್ದನ್ನೆಲ್ಲ ಹೇಳುತ್ತಿರುತ್ತಾನೆ ಅಂತ ಆಗಾಗ ಮನಸ್ಸಿಗೆ ಅನಿಸುತ್ತದೆ. ನನ್ನನ್ನು ಹೆದರಿಸುವ ತಂತ್ರವೂ ಇದರ ಹಿಂದಿರಬಹುದು. ಇನ್ನುಮುಂದೆ ಅವನ ವಿಷಯದಲ್ಲಿ ಸಾಧ್ಯವಾದಷ್ಟು ಎಚ್ಚರದಿಂದ ಇರಬೇಕು’.

ಪ್ರೊಫೆಸರ್  ಚಂದ್ರಕಾಂತ ಟೈಮ್ ನೋಡಿಕೊಂಡರು. ನಸುಕಿನಜಾವ ನಾಲ್ಕುಗಂಟೆಯಾಗಿತ್ತು. ಇಡೀರಾತ್ರಿ ನಿದ್ದೆ ಇಲ್ಲದೆ ಕಣ್ಣುಗಳು ಉರಿಯುತ್ತಿದ್ದವು. ಹಾಲ್‍ನಿಂದ ಪ್ರೊಫೆಸರ್  ಹೊಸಮನಿ ಅವರ ಗೊರಕೆ ಸದ್ದು ಜೋರಾಗಿ ಕೇಳಿಸುತ್ತಿತ್ತು. ಹೆಂಡತಿ ಮಕ್ಕಳು ಸಂಸಾರವೆಂದು ತೀರ ಸಪ್ಪೆಯಾಗಿ ಬದುಕು ಸವೆಸಿದ ಜೀವವಿದು ಎಂದೆನಿಸಿ ಪೆÇ್ರಫೆಸರ್ ಹೊಸಮನಿ ಅವರ ಬಗ್ಗೆ ಚಂದ್ರಕಾಂತರಲ್ಲಿ ಮರುಕ ಹುಟ್ಟಿತು. ತಮ್ಮ ವರ್ಣಮಯ ಬದುಕು ನೆನೆದು ಹೆಮ್ಮೆಪಟ್ಟರು. ತಾನೂ ಏಕೆ ಅನುಭವವನ್ನು ಆತ್ಮಕಥೆಯಾಗಿಸಬಾರದು ಎನ್ನುವ ವಿಚಾರ ಹೊಳೆದು ಮನಸ್ಸಿನಲ್ಲಿ ಹೊಳೆದ ಆ ವಿಚಾರದಿಂದ ಖುಷಿಗೊಂಡರು. ಪೆನ್ನು ಕಾಗದ ತೆಗೆದುಕೊಂಡು ಬರೆಯಲು ಕುಳಿತರು. ಎಷ್ಟು ಯೋಚಿಸಿದರೂ ಆತ್ಮಕಥೆಯ ಮೊದಲ ಸಾಲು ಹೊಳೆಯದೆ ಕಂಗಾಲಾದರು. ಯೋಚಿಸಿ ಯೋಚಿಸಿ ಹೈರಾಣಾದರು. ‘ಅಪ್ಪ ಮತ್ತು ತಮ್ಮನಿಗೆ ಮಾಡಿದ ಮೋಸ, ಗಿರಿಜಾಳಿಗಾದ ಅನ್ಯಾಯ, ಪ್ರೊಫೆಸರ್  ಲಕ್ಕಪ್ಪ ಅವರನ್ನು ಬಲಿತೆಗೆದುಕೊಂಡಿದ್ದು, ಪಿಎಚ್.ಡಿ ಆಸೆ ತೋರಿಸಿ ಸರೋಜಿನಿಯನ್ನು ದೇಹಬಯಕೆಗಾಗಿ ಕಾಡಿದ್ದು, ತಾನಿಟ್ಟ ತಪ್ಪು ಹೆಜ್ಜೆಗಳಿಗಾಗಿ ಸದಾನಂದನನ್ನು ಬಳಸಿಕೊಂಡಿದ್ದು ಇದೇ ಅನುಭವಗಳನ್ನು ಆತ್ಮವೃತ್ತಾಂತವಾಗಿಸಬೇಕು. ಹಣ, ವಿದ್ಯೆ, ಅಧಿಕಾರ ಇದೆ ಎಂದು ಬದುಕಿನಲ್ಲಿ ತಪ್ಪು ಮಾಡಿದೆ’ ಯೋಚಿಸಿದಷ್ಟೂ ಚಂದ್ರಕಾಂತರಿಗೆ ತಮ್ಮ ಅನುಭವಗಳೆಲ್ಲ ಬರೆಯಲು ಯೋಗ್ಯತೆ ಇಲ್ಲದ ಗಲೀಜು ಸಂಗತಿಗಳು ಎನಿಸಿತು. ಬರೆಯುವುದು ಬೇಡವೆಂದೆನಿಸಿ ಪೆನ್ನು ಹಾಳೆ ತೆಗೆದಿಟ್ಟು ಇನ್ನೇನು ಬೆಳಗಾಗುವ ಹೊತ್ತು ಘಳಿಗೆ ನಿದ್ದೆಮಾಡಿದರಾಯಿತೆಂದು ಹಾಸಿಗೆಗೆ ಮೈತಾಗಿಸಿದರು. ಮಂಚದ ಮೇಲೆ ಮೈಚಾಚಿದ್ದೆ ತಡ ಕಣ್ಣುಗಳನ್ನು ನಿದ್ದೆ ಆವರಿಸಿತು. ‘ಆತ್ಮಕಥೆ ಬರೀತಾಳಂತೆ. ಬರೆದು ನನ್ನ ಮಾನ ಹರಾಜು ಹಾಕಬೇಕಂತ ಅನಕೊಂಡಿದ್ದಾಳೆ. ಇದಕ್ಕೆಲ್ಲ ಸದಾನಂದನ ಕುಮ್ಮಕ್ಕು ಇರಬೇಕು’ ನಿದ್ದೆಯಲ್ಲೆ ಪೆÇ್ರಫೆಸರ್ ಚಂದ್ರಕಾಂತ ಕನವರಿಸಿದರು.

ಬೆಳಗ್ಗೆ ನಿದ್ದೆಯಿಂದ ಎಚ್ಚೆತ್ತ ಪ್ರೊಫೆಸರ್  ಹೊಸಮನಿ ಅವರಿಗೆ ತಾವು ಪ್ರೊಫೆಸರ್  ಚಂದ್ರಕಾಂತರ ಮನೆಯಲ್ಲಿ ಮಲಗಿರುವ ಸಂಗತಿ ಸ್ವಲ್ಪ ತಡವಾಗಿ ಮನಸ್ಸಿಗೆ ಹೊಳೆಯಿತು. ಮನೆಗೆ ಹೊರಡುವ ಮೊದಲು ಚಂದ್ರಕಾಂತರಿಗೆ ಹೇಳಿಹೋದರಾಯಿತೆಂದು ಅವರ ಕೊಠಡಿಯತ್ತ ತೆರಳಿದರು. ಕೊಠಡಿಯ ಬಾಗಿಲುಗಳು ತೆರೆದೆ ಇದ್ದವು. ಚಂದ್ರಕಾಂತ ಮಲಗಿದ್ದರು. ಕೈಹಿಡಿದು ಎಬ್ಬಿಸಲು ನೋಡಿದರು. ಪೆÇ್ರಫೆಸರ್ ಚಂದ್ರಕಾಂತರ ದೇಹ ತಣ್ಣಗೆ ಕೊರೆಯುತ್ತಿತ್ತು. ಅನುಮಾನ ಬಂದು ಕಾಲೋನಿಯಲ್ಲೆ ವಾಸಿಸುತ್ತಿದ್ದ ಪರಿಚಿತ ಡಾಕ್ಟರ್ ನ್ನು ಫೋನ್ ಮಾಡಿ ಕರೆಸಿಕೊಂಡರು. ಪರೀಕ್ಷಿಸಿದ ವೈದ್ಯರು ನಿದ್ದೆಯಲ್ಲೇ ಹೃದಯಾಘಾತವಾಗಿ ಪ್ರೊಫೆಸರ್  ಚಂದ್ರಕಾಂತ ನಿಧನರಾಗಿರುವರೆಂದು ಹೇಳಿದರು. ಅವರ ಶವದ ಪಕ್ಕದಲ್ಲಿ ಕಾಫ್ಕಾನ ದಿ ಜಡ್ಜ್‍ಮೆಂಟ್ ಪುಸ್ತಕದ ಪುಟಗಳು ಫ್ಯಾನಿನ ಗಾಳಿಗೆ ಜೀವಪಡೆದುಕೊಂಡು ತೊನೆದಾಡುತ್ತಿದ್ದವು. 

* * *

Thursday, May 7, 2026

ಚಿಣ್ಣರಿಗೆ ಸೆರೆಮನೆ ಆಗದಿರಲಿ ಬೇಸಿಗೆ ಶಿಬಿರ

 




(ಪ್ರಜಾವಾಣಿ, 04.04.2026)

   ಹಿಂದೆಲ್ಲ ಶಾಲಾಪರೀಕ್ಷೆಗಳು ಮುಗಿಯುತ್ತಿದ್ದಂತೆ ಮಕ್ಕಳು ಅಜ್ಜಂದಿರ ಮನೆಗಳಿಗೆ ದಾಂಗುಡಿ ಇಡುತ್ತಿದ್ದರು. ಬೇಸಿಗೆ ರಜೆಯ ಆ ಎರಡು ತಿಂಗಳುಗಳಲ್ಲಿ ಈಜು, ಆಟ, ತೋಟಗಳಲ್ಲಿ ಸುತ್ತಾಟ ಎಂದು ಸಮಯ ಕಳೆದುಹೋದದ್ದೆ ಗೊತ್ತಾಗುತ್ತಿರಲಿಲ್ಲ. ಬೇಸಿಗೆ ರಜೆಯಿಂದ ದೊರೆತ ಹೊಸ ಹುರುಪು, ಹೊಸ ಚೈತನ್ಯದೊಂದಿಗೆ ಮಕ್ಕಳು ಶಾಲೆಗಳಿಗೆ ಮರಳುತ್ತಿದ್ದರು. ಈಗ ಕಾಲ ಬದಲಾಗಿದೆ. ಪರೀಕ್ಷೆ ಮುಗಿದು ರಜೆ  ಆರಂಭವಾಗುತ್ತಿದ್ದಂತೆ ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ ಸೇರಿಸುವ ಧಾವಂತ ಪಾಲಕರಲ್ಲಿ ಶುರುವಾಗುತ್ತದೆ. ರಜೆಯ ನಂತರವೂ ಪಠ್ಯಪುಸ್ತಕಗಳನ್ನು ಓದಬೇಕಾದ ಸಜೆ ಮಕ್ಕಳಿಗೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಅಮೂಲ್ಯ ಸಮಯ ವ್ಯರ್ಥವಾಗಬಾರದೆಂಬ ಆಸೆ ಪಾಲಕರದು. ಪರೀಕ್ಷೆ ಮುಗಿಯುತ್ತಿದ್ದಂತೆ ಮುಂದಿನ ವರ್ಷದ ಓದಿಗೆ ಮಕ್ಕಳು ಸಿದ್ಧಗೊಳ್ಳಬೇಕು. ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿ ಮಕ್ಕಳನ್ನು ವಸತಿ ವ್ಯವಸ್ಥೆಯ ಬೇಸಿಗೆ ಶಿಬಿರಗಳಿಗೆ ಸೇರಿಸಿ ಪಾಲಕರು ನಿರಾಳರಾಗುವರು.

ಪಾಲಕರ ಮನೋಭಾವವನ್ನು ಬಂಡವಾಳ ಆಗಿಸಿಕೊಳ್ಳುತ್ತಿರುವ ಬೇಸಿಗೆ ಶಿಬಿರಗಳು ಈಗ ಉದ್ಯಮವಾಗಿ ಬೆಳೆದು ನಿಂತಿವೆ. ವರ್ಷಪೂರ್ತಿ ಬೋಧಿಸುವುದನ್ನು ಎರಡು ತಿಂಗಳುಗಳ ಕಾಲಾವಧಿಯಲ್ಲಿ ಬೋಧಿಸಲಾಗುತ್ತಿದೆ. ಜೊತೆಗೆ ವಾರದ ಕೊನೆಯ ದಿನ ಮಕ್ಕಳು ಪರೀಕ್ಷೆಗೆ ಸಿದ್ಧರಾಗಬೇಕು.  ಒಂದರ್ಥದಲ್ಲಿ ಇದು ನೀರು ಇಳಿಯದ ಗಂಟಲಲ್ಲಿ ಕಡುಬು ತುರುಕಿದಂತಹ ಪರಿಸ್ಥಿತಿ. ಕಡಿಮೆ ಅವಧಿಯಲ್ಲಿ ಹೆಚ್ಚಿನ ವಿಷಯವಸ್ತುವನ್ನು ಅಧ್ಯಯನ ಮಾಡಬೇಕಾದ ಒತ್ತಡದಲ್ಲಿ ಮಕ್ಕಳು ಸಿಲುಕಿರುವರು. ವಾರಪೂರ್ತಿ ತರಗತಿಗಳು, ಕಲಿಕೆ ಮತ್ತು ಪರೀಕ್ಷೆಯ ಸಿದ್ಧತೆಯಿಂದ ಮಕ್ಕಳು ಹೈರಾಣಾಗುತ್ತಿರುವರು. 

ವರ್ಷಪೂರ್ತಿ ಓದು, ಪರೀಕ್ಷೆ ಎಂದು ಮಾನಸಿಕ ಶ್ರಮದಿಂದ ಬಸವಳಿಯುವ ಮಕ್ಕಳಿಗೆ ಬೇಸಿಗೆ ರಜೆಯ ವಿರಾಮ ಸಮಯವನ್ನು ಒದಗಿಸಲು ಪಾಲಕರು ಸಿದ್ಧರಿಲ್ಲ. ಪ್ರಾಥಮಿಕ ಶಿಕ್ಷಣದಿಂದಲೇ ಮಕ್ಕಳನ್ನು ಭವಿಷ್ಯದಲ್ಲಿ ವೈದ್ಯರು, ಎಂಜಿನಿಯರರು, ಉನ್ನತ ಅಧಿಕಾರಿಗಳನ್ನಾಗಿಸುವ ಪ್ರಯತ್ನ ಆರಂಭಗೊಳ್ಳುತ್ತದೆ. ನಿರಂತರ ಮಾನಸಿಕ ಶ್ರಮ ಮಕ್ಕಳ ಮನಸ್ಸು ಮತ್ತು ದೇಹದ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳ ಬೌದ್ಧಿಕ ಬೆಳವಣಿಗೆಯಷ್ಟೇ ಅವರ ದೈಹಿಕ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ಇಂದಿನ ಅದೆಷ್ಟೋ ಶಾಲೆ ಮತ್ತು ಕಾಲೇಜುಗಳಲ್ಲಿ ಆಟದ ಮೈದಾನಗಳಿಲ್ಲ. ವಿದ್ಯಾರ್ಥಿಗಳು ತಮ್ಮ ದಿನದ ಹೆಚ್ಚಿನ ಸಮಯವನ್ನು ತರಗತಿಯ ನಾಲ್ಕು ಗೋಡೆಗಳ ಮಧ್ಯದಲ್ಲೇ ಕಳೆಯುತ್ತಿರುವರು. ಇಂತಹ ಪರಿಸ್ಥಿತಿಯಲ್ಲಿ ಬೇಸಿಗೆ ರಜೆಯಲ್ಲೂ ಮಕ್ಕಳನ್ನು ಮತ್ತದೆ ಶೈಕ್ಷಣಿಕ ವಾತಾವರಣದಲ್ಲೇ ಸಮಯ ಕಳೆಯುವಂತಹ ಶಿಕ್ಷೆಗೆ ಗುರಿಪಡಿಸುವುದು ಸರಿಯಲ್ಲ.

ಮಕ್ಕಳನ್ನು ಪರೀಕ್ಷಾಕಣದಲ್ಲಿ ಸ್ಪರ್ಧೆಗೆ ಸಿದ್ಧಗೊಳಿಸುತ್ತಿರುವ ಭರಾಟೆಯಲ್ಲಿ ಅವರು ಏನನ್ನು ಕಳೆದುಕೊಳ್ಳುತ್ತಿರುವರು ಎಂದು ಆಲೋಚಿಸಬೇಕಿದೆ. ಬೇಸಿಗೆಯ ರಜೆ ಎನ್ನುವುದು ವರ್ಷಪೂರ್ತಿ ಓದಿ ಹೈರಾಣಾದ ಮಕ್ಕಳು ಒಂದಿಷ್ಟು ಮನೋರಂಜನೆ ಮತ್ತು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ದೊರೆಯುವ ಒಂದು ಉತ್ತಮ ಅವಕಾಶ. ಪ್ರವಾಸ, ಮನೆಯ ಸದಸ್ಯರೊಡನೆ ಸಮಯಪಾಲನೆ, ಹಳ್ಳಿಗಳಲ್ಲಿರುವ ಅಜ್ಜ-ಅಜ್ಜಿಯ ಮನೆಗೆ ಭೇಟಿ, ಗೆಳೆಯರೊಡನೆ ಆಟೋಟ, ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಇಷ್ಟದ ಪುಸ್ತಕಗಳ ಓದು, ಹೊಲ-ತೋಟದಲ್ಲೊಂದು ಸುತ್ತು, ಚಿತ್ರಕಲೆ-ಸಂಗೀತ-ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳುವುದು ಇತ್ಯಾದಿ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮಕ್ಕಳು ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಹೊಂದಬೇಕು. ಇಂತಹ ಚಟುವಟಿಕೆಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಾಯಕವಾಗುತ್ತವೆ. 

ಈ ಮೊದಲು ಬೇಸಿಗೆ ಶಿಬಿರಗಳಲ್ಲಿ ಚಾರಣ, ಕ್ರೀಡೆ, ನಾಟಕಗಳನ್ನಾಡಿಸುವುದು, ಚಿತ್ರಬಿಡಿಸುವುದು, ಕಥೆಗಳನ್ನು ಹೇಳುವುದು ಇತ್ಯಾದಿ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಈಗ ಬೇಸಿಗೆ ಶಿಬಿರಗಳು ಟ್ಯುಟೋರಿಯಲ್‍ಗಳಾಗಿ ರೂಪಾಂತರಗೊಂಡಿವೆ. ವರ್ಷಪೂರ್ತಿ ಶಾಲೆಯ ನಾಲ್ಕು ಗೋಡೆಗಳ ತರಗತಿಯಲ್ಲಿ ಕಲಿಯಬೇಕಾದದ್ದನ್ನು ಮಕ್ಕಳು ಬೇಸಿಗೆ ಶಿಬಿರಗಳಲ್ಲಿ ಕಲಿಯುತ್ತಿದ್ದಾರೆ. ಮಕ್ಕಳ ಮಾನಸಿಕ ಉಲ್ಲಾಸಕ್ಕೆ ಕಾರಣವಾಗುವ ಚಟುವಟಿಕೆಗಳನ್ನು ಶಿಬಿರಗಳಲ್ಲಿ ಸ್ಥಗಿತಗೊಳಿಸಲಾಗಿದೆ. ಗಣಿತ, ವಿಜ್ಞಾನ, ಇಂಗ್ಲಿಷ್ ವ್ಯಾಕರಣದಂತಹ ವಿಷಯಗಳು ಮುನ್ನೆಲೆಗೆ ಬಂದಿವೆ. ಪಾಲಕರು ಕೂಡ ತಮ್ಮ ಮಕ್ಕಳು ಈ ವಿಷಯಗಳನ್ನೇ ಬೇಸಿಗೆ ಶಿಬಿರಗಳಲ್ಲಿ ಕಲಿಯಬೇಕೆಂದು ಅಪೇಕ್ಷಿಸುತ್ತಿರುವರು. 

ಕುಟುಂಬ ಘಟಕ ಒಡೆದು ನ್ಯೂಕ್ಲಿಯರ್ ಕುಟುಂಬಗಳು ಸೃಷ್ಟಿಯಾಗಿರುವ ಈ ದಿನಗಳಲ್ಲಿ ಮಕ್ಕಳನ್ನು ವಸತಿ ಶಾಲೆಗಳಲ್ಲಿಟ್ಟು ಓದಿಸುವ ಪ್ರವೃತ್ತಿ ಪಾಲಕರಲ್ಲಿ ಹೆಚ್ಚುತ್ತಿದೆ. ಶೈಕ್ಷಣಿಕ ವರ್ಷದುದ್ದಕ್ಕೂ ವಸತಿ ಶಾಲೆಗಳಲ್ಲಿರುವ ಮಕ್ಕಳಿಗೆ ಪರೀಕ್ಷೆ ನಂತರದ ರಜಾದಿನಗಳಲ್ಲಾದರೂ ಪಾಲಕರ ಸಾಂಗತ್ಯ ಅಗತ್ಯವಾಗಿರುತ್ತದೆ. ವಿಪರ್ಯಾಸವೆಂದರೆ ಉದ್ಯೋಗದ ಕಾರಣದಿಂದ ಪಾಲಕರಿಗೆ ಬೇಸಿಗೆಯ ರಜಾದಿನಗಳಲ್ಲೂ ಮಕ್ಕಳೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಪಾಲಕರು ಬೇಸಿಗೆ ಶಿಬಿರಗಳ ಮೊರೆ ಹೋಗುತ್ತಿರುವರು. ಮಕ್ಕಳನ್ನು ಒಂದು ಸುರಕ್ಷಿತ ವಲಯದೊಳಗೆ ಸೇರಿಸುವ ಧಾವಂತದಲ್ಲಿ ಅವರನ್ನು ಮತ್ತದೇ ಅಸಹನೀಯ ಎನಿಸುವ ಶೈಕ್ಷಣಿಕ ವಾತಾವರಣಕ್ಕೆ ದೂಡುತ್ತಿರುವರು. 

ಬೇಸಿಗೆ ಶಿಬಿರಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡುವುದು ಅಗತ್ಯವಾಗಿದೆ. ಯೋಗ, ಬರವಣಿಗೆ, ಚಿತ್ರಕಲೆ, ಸಂಗೀತ, ನಾಟಕ ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡುವುದು ಉತ್ತಮ ವಿಧಾನ. ಕಥಾಕಮ್ಮಟವನ್ನು ಆಯೋಜಿಸಿ ಮಕ್ಕಳಲ್ಲಿ ಕಥೆ ಹೇಳುವ ಮತ್ತು ಕೇಳುವ ಪ್ರವೃತ್ತಿಗೆ ಉತ್ತೇಜನ ನೀಡಬೇಕು. ಕ್ರೀಡೆಯ ಮೂಲಕ ಸಹಬಾಳ್ವೆಯ ಅರಿವು ಮೂಡಿಸಬೇಕು. ದುರಂತವೆಂದರೆ ಹೆಚ್ಚಿನ ಪಾಲಕರು ಬೇಸಿಗೆ ಶಿಬಿರಗಳ ಸೃಜನಾತ್ಮಕ ಚಟುವಟಿಕೆಗಳಲ್ಲಿ ತಮ್ಮ ಮಕ್ಕಳು ತೊಡಗಿಸಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಬೇಸಿಗೆ ಶಿಬಿರಗಳಲ್ಲೂ ಮಕ್ಕಳು ಪಠ್ಯಪುಸ್ತಕಗಳನ್ನೇ ಓದಬೇಕೆನ್ನುವ ಹಟ ಅವರದು. ಪಾಲಕರ ಇಷ್ಟಾರ್ಥ ಪೂರೈಸಲು ಬೇಸಿಗೆ ಶಿಬಿರಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಪಾಲಕರ ಹಟ ಮತ್ತು ಶಿಬಿರಗಳ ಆಯೋಜಕರ ಹಣಗಳಿಸುವ ದಾಹದಿಂದ ಮಕ್ಕಳು ಹೈರಾಣಾಗುತ್ತಿರುವರು. ಬೇಸಿಗೆ ಶಿಬಿರಗಳು ರಿಯಾಲಿಟಿ ಶೋಗಳಲ್ಲ ಮತ್ತು ಮಕ್ಕಳು ಸ್ಪರ್ಧಿಗಳಲ್ಲ ಎನ್ನುವುದನ್ನು ಪಾಲಕರು ಹಾಗೂ ಶಿಬಿರಗಳ ಆಯೋಜಕರು ಅರ್ಥಮಾಡಿಕೊಳ್ಳಬೇಕಿದೆ. 

ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಂಸಾತ್ಮಕ ಕೃತ್ಯಗಳು ಘಟಿಸುತ್ತಿವೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಹಿಂಸಾತ್ಮಕ ಪ್ರವೃತ್ತಿಗೆ ನೈತಿಕತೆಯ ಕೊರತೆಯೇ ಕಾರಣವಾಗಿದೆ. ನೈತಿಕ ಅಧ:ಪತನ ಭವಿಷ್ಯದ ನಾಗರಿಕರೆಂದು ಕರೆಯಲ್ಪಡುತ್ತಿರುವ ಮಕ್ಕಳಿಂದ ಶುರುವಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಶಿಕ್ಷಣ ವ್ಯವಸ್ಥೆ ವಾಣಿಜ್ಯೀಕರಣಗೊಂಡಿರುವ ಸಧ್ಯದ ಸಂದರ್ಭದಲ್ಲಿ ಶಾಲೆಗಳಲ್ಲಿ ನೈತಿಕ ಬೋಧನೆ ಮರೀಚಿಕೆಯಾಗಿದೆ. ಇಂಥ ಸಂದಿಗ್ಧ ಸನ್ನಿವೇಶದಲ್ಲಿ ಬೇಸಿಗೆ ಶಿಬಿರಗಳು ನೈತಿಕ ಬೋಧನೆ ಮತ್ತು ಸೃಜನಾತ್ಮಕ ಚಟುವಟಿಕೆಗಳಿಂದ ದೂರವಾದರೆ ಮಕ್ಕಳಲ್ಲಿ ನೈತಿಕ ಅಧ:ಪತನ ಮತ್ತಷ್ಟು ಹೆಚ್ಚುವ ಅಪಾಯದ ಸಾಧ್ಯತೆಯಿದೆ. ಪಾಲಕರು ಈ ಕುರಿತು ಯೋಚಿಸಬೇಕು. 

-ರಾಜಕುಮಾರ ಕುಲಕರ್ಣಿ

Thursday, July 17, 2025

ಪ್ರಭಾವಿ ಪ್ರಕಾಶಕರು: ಸರ್ಕಾರದ ಮೌನವೇಕೆ?

 



(ಪ್ರಜಾವಾಣಿ, 21.10.2024)

   ಗ್ರಂಥಾಲಯ ಇಲಾಖೆಯಿಂದ 2020ನೇ ಸಾಲಿನಲ್ಲಿ ಆಯ್ಕೆಗೊಂಡು ಪೂರೈಸಿರುವ ಪುಸ್ತಕಗಳ ಹಣ ಪೂರ್ಣಪ್ರಮಾಣದಲ್ಲಿ ಪಾವತಿಯಾಗಿಲ್ಲವೆಂದು ಕೆಲವು ಪ್ರಕಾಶಕರು ಇತ್ತೀಚೆಗೆ ಪತ್ರಿಕೆಯಲ್ಲಿ ತಮ್ಮ ಅಳಲು ತೋಡಿಕೊಂಡಿರುವರು. ಜೊತೆಗೆ ಕೆಲವು ಪಟ್ಟಭದ್ರ ಪ್ರಕಾಶಕರು ಇಲಾಖೆಯ ಪುಸ್ತಕ ಖರೀದಿ ಆದೇಶಪತ್ರ ಎಲ್ಲ ಪ್ರಕಾಶಕರಿಗೆ ತಲುಪುವ ಮೊದಲೆ ಪೂಸ್ತಕಗಳನ್ನು ಪೂರೈಸಿ ಹಣ ಪಡೆಯುತ್ತಿರುವರೆಂದು ಪತ್ರದಲ್ಲಿ ಉಲ್ಲೇಖಿಸಿರುವರು. ಒಟ್ಟಾರೆ ಪ್ರಕಾಶಕರ ಪತ್ರದನ್ವಯ ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಪೂರೈಸುತ್ತಿರುವ ಪ್ರಕಾಶಕರಲ್ಲಿ ದುರ್ಬಲರು ಮತ್ತು ಸಬಲರು ಎಂದು ಎರಡು ಗುಂಪುಗಳಿರುವ ಸತ್ಯ ಬಹಿರಂಗಗೊಂಡಿದೆ.  

2020ನೇ ಸಾಲಿನ  ಹಣ ಪೂರ್ಣಪ್ರಮಾಣದಲ್ಲಿ ತಮಗೆ ಪಾವತಿಯಾಗದೆ 2021ನೇ ಸಾಲಿನ ಪುಸ್ತಕಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು ವ್ಯಾವಹಾರಿಕ ನೈತಿಕತೆ ಅಲ್ಲ ಎನ್ನುವ ಪ್ರಕಾಶಕರ ಮಾತಿನಲ್ಲಿ ಸತ್ಯವಿದೆ. ಹೀಗೆ ಪೂರ್ಣಪ್ರಮಾಣದಲ್ಲಿ ಹಣ ಪಾವತಿಯಾಗದೇ ಇರುವುದು ಎಲ್ಲ ಪ್ರಕಾಶಕರಿಗಲ್ಲ, ಕೆಲವು ಪ್ರಕಾಶಕರಿಗೆ ಮಾತ್ರ ಎನ್ನುವ ಸಂಗತಿ ಬೆಳಕಿಗೆಬಂದಿದೆ. ಇಂತಹ ತಾರತಮ್ಯದ ವಿರುದ್ಧ ಧ್ವನಿ ಎತ್ತಿರುವ ಪ್ರಕಾಶಕರ ನಡೆ  ನಿಜಕ್ಕೂ ಅಭಿನಂದನಾರ್ಹ. ಒಂದು ವರ್ಷದ ಅವಧಿಯಲ್ಲಿ ಪುಸ್ತಕಗಳನ್ನು ಪೂರೈಸಿರುವ ಎಲ್ಲ ಪ್ರಕಾಶಕರಿಗೆ ಹಣವನ್ನು ಪಾವತಿಸಬೇಕಾದದ್ದು ಇಲಾಖೆಯ ನೈತಿಕ ಜವಾಬ್ದಾರಿಯಾಗಿದೆ. ಕೆಲವು ಪಟ್ಟಭದ್ರ ಪ್ರಕಾಶಕರಿಗೆ ಹೆಚ್ಚು ಆದ್ಯತೆ ನೀಡಿ ಉಳಿದ ಪ್ರಕಾಶಕರ ವಿಷಯದಲ್ಲಿ ಮಲತಾಯಿಧೋರಣೆಯ ನಿಲುವು ತಳೆಯುವುದು ಸರಿಯಲ್ಲ.

ಕೆಲವು ಪ್ರಕಾಶಕರನ್ನು ಹೊರತುಪಡಿಸಿ ಹೆಚ್ಚಿನ ಪ್ರಕಾಶಕರು ಪ್ರತಿವರ್ಷ ಸೀಮಿತ ಸಂಖ್ಯೆಯಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಇಲಾಖೆಯ ವಿರುದ್ಧ ಧ್ವನಿ ಎತ್ತಿದವರಲ್ಲಿ ಬಹುತೇಕರು ಸೀಮಿತ ಸಂಖ್ಯೆಯಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಪ್ರಕಾಶಕರು ಎನ್ನುವುದು ಗಮನಿಸಬೇಕಾದ ಸಂಗತಿ. ಸರ್ಕಾರ ತಮಗೆ ಪಾವತಿಸಬೇಕಾದ ಹಣವನ್ನು ಮೊದಲು ಪಾವತಿಸಿ ನಂತರದ ವರ್ಷದ ಪುಸ್ತಕಗಳ ಆಯ್ಕೆಯ ಪ್ರಕ್ರಿಯೆಯನ್ನು ಆರಂಭಿಸಲಿ ಎನ್ನುವುದು ಅವರ ಬೇಡಿಕೆಯಾಗಿದೆ. ಇಂತಹ ಸನ್ನಿವೇಶದಲ್ಲಿ ಪ್ರತಿವರ್ಷ ನೂರಾರು ಶೀರ್ಷಿಕೆಗಳ ಸಾವಿರಾರು ಪುಸ್ತಕಗಳನ್ನು ಪ್ರಕಟಿಸುತ್ತಿರುವ ಪ್ರಕಾಶಕರೇಕೆ ಇಲಾಖೆಯ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎನ್ನುವ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಪ್ರಕಾಶಕರ ಈ ಮೌನ ಹಲವು ಸಂದೇಹಗಳಿಗೆ ಆಸ್ಪದ ಮಾಡಿಕೊಡುತ್ತದೆ.

ಇಲಾಖೆಯ ತಾರತಮ್ಯದ ವಿರುದ್ಧ ಧ್ವನಿ ಎತ್ತದೆ ಇರುವ ಪ್ರಕಾಶಕರ ನಡೆ ಅವರನ್ನು ಪಟ್ಟಭದ್ರ ಪ್ರಕಾಶಕರ ಸಾಲಿನಲ್ಲಿ ನಿಲ್ಲಿಸುತ್ತದೆ. ಹಾಗೆಂದು ವಿರೋಧಿಸದೆ ಮೌನದಿಂದಿರುವ ಎಲ್ಲ ಪ್ರಕಾಶಕರನ್ನು ಪಟ್ಟಭದ್ರರೆಂದು ಆರೋಪಿಸುವುದು ತಪ್ಪು ಮತ್ತು ಆತುರದ ನಿರ್ಧಾರವಾಗುತ್ತದೆ. ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸುವುದರ ಮೂಲಕ ತಮ್ಮದೆ ಓದುಗರ ಬಳಗವನ್ನು ಸೃಷ್ಟಿಸಿಕೊಂಡಿರುವ ಕೆಲವು ಪ್ರಕಾಶಕರು ಗ್ರಂಥಾಲಯ ಇಲಾಖೆಯನ್ನು ನೆಚ್ಚಿಕೊಂಡಿರುವುದು ತುಂಬ ಕಡಿಮೆ. ಗುಣಾತ್ಮಕ ಪುಸ್ತಕಗಳನ್ನು ಖರೀದಿಸುವಲ್ಲಿ ಓದುಗರು ತೋರಿಸುತ್ತಿರುವ ಆಸಕ್ತಿಯೇ ಕೆಲವು ಪ್ರಕಾಶಕರಿಗೆ ನಿಯಮಿತವಾಗಿ ಪುಸ್ತಕಗಳನ್ನು ಪ್ರಕಟಿಸಲು ಪ್ರೇರಣೆಯಾಗಿದೆ. ಹಾಗೆಂದು ಇಲಾಖೆಯ ವಿರುದ್ಧ ಧ್ವನಿ ಎತ್ತಿರುವ ಪ್ರಕಾಶಕರು ಗುಣಾತ್ಮಕ ಪುಸ್ತಕಗಳನ್ನು ಪ್ರಕಟಿಸುತ್ತಿಲ್ಲ ಎಂದರ್ಥವಲ್ಲ. ಹೋರಾಟದ ಕಹಳೆ ಊದಿರುವ ಅಹರ್ನಿಶಿ, ವೈಷ್ಣವಿ, ಸೃಷ್ಟಿ, ಸಂಗಾತ, ಪಲ್ಲವ ಇತ್ಯಾದಿ ಪ್ರಕಾಶಕರು ಪ್ರತಿವರ್ಷ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಆದರೆ ತಮ್ಮ ಸೀಮಿತ ಸಂಖ್ಯೆಯ ಪ್ರಕಟಣೆ ಹಾಗೂ ಸೀಮಿತ ಓದುಗರ ಬಳಗದಿಂದಾಗಿ ಒಂದಿಷ್ಟು ಆರ್ಥಿಕವಾಗಿ ಚೇತರಿಸಿಕೊಳ್ಳಲು ಅವರು ಗ್ರಂಥಾಲಯ ಇಲಾಖೆಯನ್ನು ಅವಲಂಬಿಸಿರುವರು.

ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಪೂರೈಸಲೆಂದೆ ಹಲವಾರು ಪ್ರಕಾಶನ ಸಂಸ್ಥೆಗಳು ಹುಟ್ಟಿಕೊಂಡಿವೆ. ಅನೇಕ ಪ್ರಕಾಶನ ಸಂಸ್ಥೆಗಳು ದಾಖಲೆಗಳಲ್ಲಿ ಮಾತ್ರ ಕಾಣಿಸಿಕೊಂಡು  ಗ್ರಂಥಾಲಯ ಇಲಾಖೆಗೆ ಪ್ರತಿವರ್ಷ ಪುಸ್ತಕಗಳನ್ನು ಪೂರೈಸುವ ಕೆಲಸದಲ್ಲಿ ನಿರತವಾಗಿವೆ. ಇನ್ನು ಕೆಲವು ಪ್ರಕಾಶಕರು ಅಸ್ತಿತ್ವದಲ್ಲಿಯೇ ಇಲ್ಲದ ಹತ್ತಾರು ಪ್ರಕಾಶನ ಸಂಸ್ಥೆಗಳ ಹೆಸರಿನಿಂದ ಪುಸ್ತಕಗಳನ್ನು ಪೂರೈಸಿ ಆರ್ಥಿಕವಾಗಿ ಬಲಾಢ್ಯರಾಗುತ್ತಿರುವರು. ಇಂತಹ ಪ್ರಕಾಶಕರೆ ಇಲಾಖೆಯನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ನಿಯಂತ್ರಿಸುತ್ತಿರುವರು. ಇಲಾಖೆಯ ಮೇಲಧಿಕಾರಿಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಪುಸ್ತಕ ಪೂರೈಕೆಗೆ ಸಂಬಂಧಿಸಿದ ಮಾಹಿತಿಯನ್ನು ಶೀಘ್ರವೇ ಕಲೆಹಾಕಿ ಪುಸ್ತಕಗಳನ್ನು ಪೂರೈಸುತ್ತಿರುವರು. ಪೂರೈಸಿದ ಪುಸ್ತಕಗಳ ಹಣವನ್ನು ಕೂಡ ಎಲ್ಲರಿಗಿಂತ ಮೊದಲು ಪಡೆಯುತ್ತಿರುವರು. ಇಂತಹ ಪಟ್ಟಭದ್ರ ಪ್ರಕಾಶಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಗ್ರಂಥಾಲಯ ಇಲಾಖೆ ಪುಸ್ತಕಗಳ ಖರೀದಿಯಲ್ಲಿ ಅನುಸರಿಸುತ್ತಿರುವ ವಿಳಂಬನೀತಿ ಇಲಾಖೆಯ ಸೋಮಾರಿತನ ಮತ್ತು ನಿರ್ಲಕ್ಷ್ಯಕ್ಕೆ  ಕೈಗನ್ನಡಿಯಾಗಿದೆ. 2021ನೇ ಸಾಲಿನ ಪುಸ್ತಕಗಳ ಆಯ್ಕೆ ಪ್ರಕ್ರಿಯೆಯನ್ನು 2024 ರಲ್ಲಿ ಪೂರ್ಣಗೊಳಿಸಿದ್ದು ನ್ಯಾಯಸಮ್ಮತವಲ್ಲ. ಪ್ರಕಾಶಕರ ಬೇಡಿಕೆಯಂತೆ ಆಯಾ ವರ್ಷದ ಪುಸ್ತಕಗಳ ಆಯ್ಕೆ, ಖರೀದಿ ಮತ್ತು ಹಣಪಾವತಿಯನ್ನು ಆಯಾ ಆರ್ಥಿಕ ವರ್ಷದಲ್ಲೇ ಪೂರ್ಣಗೊಳಿಸುವುದು ಸರಿಯಾದ ಕ್ರಮ. ಪಟ್ಟಭದ್ರರಿಗೆ ಬೇಗನೆ ಹಣ ಪಾವತಿಸುವುದು ಮತ್ತು ಉಳಿದ ಪ್ರಕಾಶಕರಿಗೆ ವಿಳಂಬಮಾಡುವ ತಾರತಮ್ಯ ನೀತಿಯನ್ನು ಇನ್ನಾದರೂ ಕೈಬಿಡುವುದೊಳಿತು.

ಗ್ರಂಥಾಲಯ ಇಲಾಖೆ ಕುರಿತು ಸರ್ಕಾರಕ್ಕಿರುವ ನಿರಾಸಕ್ತಿಯೇ ಇಲಾಖೆಯಲ್ಲಿ ಅಪ್ರಾಮಾಣಿಕತೆ ಮತ್ತು ಅವ್ಯವಹಾರ ಹೆಚ್ಚಲು ಕಾರಣವಾಗಿದೆ. ಬೇರೆ ಸಚಿವಾಲಯದ ಸುಪರ್ದಿಗೆ ಗ್ರಂಥಾಲಯ ಇಲಾಖೆಯನ್ನು ಒಪ್ಪಿಸುವ ಬದಲು ಪ್ರತ್ಯೇಕ ಸಚಿವಾಲಯ ರಚಿಸುವುದೊಳಿತು. ಗ್ರಂಥಾಲಯ ಕ್ಷೇತ್ರವನ್ನು ಅನುತ್ಪಾದಕ ಕ್ಷೇತ್ರವೆಂದು ಪರಿಗಣಿಸದೆ ಪುಸ್ತಕ ಸಂಸ್ಕೃತಿಯನ್ನು ಬಿತ್ತಿ ಬೆಳೆಯುತ್ತಿರುವ ಕ್ಷೇತ್ರವೆಂದು ಪರಿಗಣಿಸಬೇಕಾದ ತುರ್ತು ಅಗತ್ಯ ಈಗ ಎದುರಾಗಿದೆ. 

ಗ್ರಂಥಾಲಯ ಇಲಾಖೆಯಲ್ಲಿ ಅವ್ಯವಹಾರ ಏಕೆ ತಾಂಡವವಾಡುತ್ತಿದೆ?. ಪುಸ್ತಕಗಳ ಖರೀದಿ ಮತ್ತು ಹಣ ಪಾವತಿಯಲ್ಲಿ ಏಕೆ ತಾರತಮ್ಯ ಮಾಡಲಾಗುತ್ತಿದೆ? ಪ್ರಭಾವಶಾಲಿ ಪ್ರಕಾಶಕರು ಹತ್ತಾರು ಪ್ರಕಾಶನ ಸಂಸ್ಥೆಗಳ ಹೆಸರುಗಳಿಂದ ಪುಸ್ತಕಗಳನ್ನು ಪೂರೈಸುತ್ತಿರುವುದು ಇಲಾಖೆ ಗಮನಕ್ಕೆ ಬಂದಿಲ್ಲವೆ? ಗಮನಕ್ಕೆ ಬಂದರೂ ಮೇಲಧಿಕಾರಿಗಳು ಕಣ್ಣಿದ್ದು ಕುರುಡರಂತೆ ಇರಲು ಏನು ಕಾರಣ?  ಈ ಎಲ್ಲ ಪ್ರಶ್ನೆಗಳಿಗೆ ಸರ್ಕಾರ ಉತ್ತರದಾಯಿಯಾಗಬೇಕಿದೆ. ಸರ್ಕಾರ ಕಠಿಣ ನಿಲುವು ತಳೆಯದೆ ಹೋದರೆ ಪಟ್ಟಭದ್ರ ಪ್ರಕಾಶಕರು ಇಡೀ ಇಲಾಖೆಯನ್ನೇ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. 

-ರಾಜಕುಮಾರ ಕುಲಕರ್ಣಿ 

Monday, May 5, 2025

ವಿ.ವಿ.ಗಳಲ್ಲಿ ಸಂಶೋಧನೆ: ನಿಂತ ನೀರು?

 



(ಪ್ರಜಾವಾಣಿ 'ಸಂಗತ' ಅಂಕಣ, ೦೪.೧೦.೨೦೨೪)

   ಇತ್ತೀಚೆಗೆ ಕಾಲೇಜು ಅನುಮತಿಯ ನವೀಕರಣದ ಪರಿವೀಕ್ಷಣೆಗೆಂದು ಹೋಗಿದ್ದ ಪ್ರಾಧ್ಯಾಪಕರು ಅಲ್ಲಿನ ಸಂಶೋಧನಾ ಬೆಳವಣಿಗೆಯನ್ನು ನೋಡಿ ದಂಗಾದರು. ಒಂದು ವಿಭಾಗದ ಮೂರುಜನ ಪ್ರಾಧ್ಯಾಪಕರ ದಾಖಲೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿದಾಗ ಒಂದು ವರ್ಷದ ಅವಧಿಯಲ್ಲಿ ಆ ವಿಭಾಗ ಸಂಬಂಧಿತ ವಿಷಯದಲ್ಲಿ ಒಂಬತ್ತು ಸಂಶೋಧನಾ ಲೇಖನಗಳು ಪ್ರಕಟವಾಗಿರುವುದನ್ನು ದಾಖಲೆ ತೋರಿಸುತ್ತಿತ್ತು. ಆ ಒಂಬತ್ತು ಲೇಖನಗಳನ್ನು ಒಟ್ಟಿಗೆ ಸೇರಿಸಿ ನೋಡಿದಾಗ ಪ್ರಕಟವಾದ ಲೇಖನಗಳ ಸಂಖ್ಯೆ ಕೇವಲ ಮೂರು ಮಾತ್ರ ಎನ್ನುವ ಸತ್ಯ ಬಹಿರಂಗಗೊಂಡಿತು. ಅಂದರೆ ಪ್ರತಿಯೊಬ್ಬ ಪ್ರಾಧ್ಯಾಪಕ ತನ್ನ ಲೇಖನದಲ್ಲಿ ಉಳಿದ ಇಬ್ಬರು ಪ್ರಾಧ್ಯಾಪಕರ ಹೆಸರುಗಳನ್ನು ಸಹ ಲೇಖಕರೆಂದು ಸೇರಿಸಿದ್ದು ಕಂಡುಬಂತು. ಮೂವರೂ ಪ್ರಾಧ್ಯಾಪಕರು ಲೇಖನಗಳನ್ನು ಪ್ರತ್ಯೇಕವಾಗಿ ತೋರಿಸಿದ ಪರಿಣಾಮ ಮೂರು ಲೇಖನಗಳ ಸಂಖ್ಯೆ ಒಂಬತ್ತಾಗಿ ತ್ರಿಗುಣಗೊಂಡಿತ್ತು. ಬೋಧಕರು ತಮ್ಮ ಶೈಕ್ಷಣಿಕ ಸಾಧನೆಯ ಉತ್ಕೃಷ್ಟತೆಯ ಪ್ರದರ್ಶನಕ್ಕಾಗಿ ಈ ರೀತಿಯ ಕೊಡು-ಕೊಳ್ಳುವಿಕೆಯ ಮಾರ್ಗವನ್ನು ಅನುಸರಿಸುತ್ತಿರುವರು. 

ಬೋಧಕರು ಸಂಶೋಧನಾ ಲೇಖನಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ತಮ್ಮ ಸಂಶೋಧನಾ ವಿದ್ಯಾರ್ಥಿಗಳನ್ನು ಅವಲಂಬಿಸಿರುವ ಇನ್ನೊಂದು ವಿಧಾನ ಚಾಲ್ತಿಯಲ್ಲಿದೆ. ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರು ತಮ್ಮ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಸಂಶೋಧನಾ ಲೇಖನಗಳನ್ನು ಪ್ರಕಟಿಸುವಂತೆ ಒತ್ತಡ ತರುವ ಪ್ರವೃತ್ತಿ ಹೆಚ್ಚುತ್ತಿದೆ. ಸಂಶೋಧನಾ ವಿದ್ಯಾರ್ಥಿ ತನ್ನ ಸಂಶೋಧನಾ ಲೇಖನದಲ್ಲಿ ಮಾರ್ಗದರ್ಶಕರ ಹೆಸರನ್ನು ಪ್ರಥಮ ಇಲ್ಲವೇ ಸಹಲೇಖಕರೆಂದು ನಮೂದಿಸುವುದೇ ಇಂತಹದ್ದೊಂದು ಹುನ್ನಾರಕ್ಕೆ ಕಾರಣ. ಇಲ್ಲಿ ಕೂಡ ಪ್ರಾಧ್ಯಾಪಕರು ತಮ್ಮ ಸಂಶೋಧನಾ ವಿದ್ಯಾರ್ಥಿಗಳ ಲೇಖನಗಳ ಮೂಲಕ ತಮ್ಮ ಶೈಕ್ಷಣಿಕ ಸಾಧನೆಯ ಉತ್ಕೃಷ್ಟತೆಯನ್ನು ಪ್ರದರ್ಶಿಸಲು ಪ್ರಯತ್ನಿಸುವರು. 

ಈ ನಡುವೆ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಬೋಧಕರಿಂದ ಉಚಿತ ಸಂಶೋಧನಾ ಲೇಖನಗಳ ಬೇಡಿಕೆ ಹೆಚ್ಚುತ್ತಿದೆ. ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಸಹಾಯಕ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ನನ್ನ ಸ್ನೇಹಿತರಿಗೆ ಇತ್ತೀಚೆಗೆ ಸಂಶೋಧನಾ ವಿದ್ಯಾರ್ಥಿಯಿಂದ ನಿರ್ಧಿಷ್ಟ ಲೇಖನದ ಬೇಡಿಕೆ ಬಂತು. ವಿವಿಧ ಜಾಲತಾಣಗಳನ್ನು ಪರಿಶೀಲಿಸಿದಾಗ ಲೇಖನ ಪಡೆಯಲು ನಿರ್ಧಿಷ್ಟ ಶುಲ್ಕ ಪಾವತಿಸುವುದು ಕಡ್ಡಾಯವೆಂದು ತಿಳಿದುಬಂತು. ಈ ವಿಷಯವನ್ನು ಸಂಶೋಧನಾ ವಿದ್ಯಾರ್ಥಿಗೆ ತಿಳಿಸಿದಾಗ ಆತ ಉಚಿತವಾಗಿ ದೊರೆಯುವ ಬೇರೆ ಲೇಖನ ಓದಿದರಾಯಿತು ಎಂದು ಪ್ರತಿಕ್ರಿಯಿಸಿದ. ಸಂಶೋಧನೆಯ ವೇಳೆ ನಿರ್ಧಿಷ್ಟ ಲೇಖನಕ್ಕೆ ಬದಲಾಗಿ ಪರ್ಯಾಯ ಲೇಖನ ಎನ್ನುವ ಅನುಕೂಲಸಿಂಧುವಿನಿಂದ ಸಂಶೋಧನೆಯಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವುದಾದರೂ ಹೇಗೆ ಸಾಧ್ಯ ಎನ್ನುವುದು ನನ್ನ ಸ್ನೇಹಿತರ ಆತಂಕವಾಗಿತ್ತು. ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ ಆಕರ್ಷಕ ಸಂಬಳ ಪಡೆಯುವ ಬೋಧಕರು ಕೂಡ ಉಚಿತ ಮಾಹಿತಿಗಾಗಿ ಬೇಡಿಕೆ ಸಲ್ಲಿಸುತ್ತಿರುವುದು ವಿಪರ್ಯಾಸದ ಸಂಗತಿ.

ವಿದ್ಯಾರ್ಥಿಗಳ ಮತ್ತು ಬೋಧಕರ ಈ ಉಚಿತ ಬೇಡಿಕೆಗೆ ಇಂದು ಮಾಹಿತಿಯನ್ನು ವಾಮಮಾರ್ಗದ ಮೂಲಕ ಓದುಗರಿಗೆ ತಲುಪಿಸಲು ಅನೇಕ ಜಾಲತಾಣಗಳು ಕಾರ್ಯಪ್ರವೃತ್ತವಾಗಿರುವುದೇ ಕಾರಣ. ಸಾಮಾನ್ಯ ಮಾಹಿತಿ ಮಾತ್ರವಲ್ಲದೆ ಸಂಶೋಧನಾ ಲೇಖನಗಳು ಕೂಡ ಓದುಗರಿಗೆ ಉಚಿತವಾಗಿ ಲಭ್ಯವಾಗುತ್ತಿವೆ. ಪ್ರಕಾಶಕರ ಅನುಮತಿ ಇಲ್ಲದೆ  ಉಚಿತ ಸಂಶೋಧನಾ ಲೇಖನಗಳನ್ನು ಒದಗಿಸುವ ಜಾಲತಾಣಗಳನ್ನು ಪತ್ತೆಹಚ್ಚುವಲ್ಲಿ ಗ್ರಂಥಪಾಲಕರ ಪಾತ್ರ ಪ್ರಮುಖವಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಯಾವುದೇ ಮಾರ್ಗದಿಂದಾದರೂ ಸರಿ ಗ್ರಂಥಪಾಲಕ ತಮಗೆ ಬೇಕಾದ ಲೇಖನವನ್ನು ಉಚಿತವಾಗಿ ಒದಗಿಸಬೇಕೆಂದು ಅಪೇಕ್ಷಿಸುವರು. ತಮ್ಮ ವೃತ್ತಿಯ ಅಸ್ತಿತ್ವಕ್ಕಾಗಿ ಗ್ರಂಥಪಾಲಕರು ಹಲವು ವಿಧಾನಗಳ ಮೂಲಕ ಲೇಖನಗಳನ್ನು ಉಚಿತವಾಗಿ ಸಂಗ್ರಹಿಸಿ ಒದಗಿಸುತ್ತಿರುವರು.  

ಇತ್ತೀಚಿನ ದಿನಗಳಲ್ಲಿ ಸಂಖ್ಯಾತ್ಮಕವಾಗಿ ಸಂಶೋಧನಾ ನಿಯತಕಾಲಿಕೆಗಳ (ಜರ್ನಲ್) ಪೇಪರ್ ಮಾದರಿಯ ಪ್ರಕಟಣೆ ಕ್ಷೀಣಿಸುತ್ತಿದೆ. ಹೆಚ್ಚಿನ ಪ್ರಕಾಶಕರು ವಿದ್ಯುನ್ಮಾನ (ಎಲೆಕ್ಟ್ರಾನಿಕ್) ಮಾದರಿಯಲ್ಲಿ ನಿಯತಕಾಲಿಕೆಗಳನ್ನು ಪ್ರಕಟಿಸಲು ಒಲವು ತೋರುತ್ತಿರುವರು. ಕಾಗದ ಮತ್ತು ಮುದ್ರಣ ಸಾಮಗ್ರಿಗಳ ಅಧಿಕ ಬೆಲೆ ಈ ಮಾರ್ಪಾಡಿಗೆ ಕಾರಣ. ಇಂಥ ಸನ್ನಿವೇಶದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಶೋಧನಾ ಲೇಖನಗಳನ್ನು ಶುಲ್ಕ ಪಾವತಿಸಿ ಪಡೆಯಲು ಸಿದ್ಧರಿಲ್ಲದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜೊತೆಗೆ ಕೆಲವು ಜಾಲತಾಣಗಳು ಉಚಿತವಾಗಿ ಸಂಶೋಧನಾ ಲೇಖನಗಳನ್ನು ವಿತರಿಸುತ್ತಿರುವುದು ಪ್ರಕಾಶಕರ ಆರ್ಥಿಕ ಸಮಸ್ಯೆಯನ್ನು ಉಲ್ಬಣಗೊಳಿಸಿದೆ.  

ಇನ್ನು ಸಂಶೋಧಕರ ಆಸಕ್ತಿ ಗಮನಿಸಿದರೆ ಸಂಶೋಧನೆಯ ಹಿಂದಿನ ಉದ್ದೇಶ ಹುದ್ದೆ ಮತ್ತು ವೇತನ ಬಡ್ತಿ ಎನ್ನುವುದು ಪಾರದರ್ಶಕ ಸತ್ಯವಾಗಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ, ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಯಂಥ ಉನ್ನತ ಶಿಕ್ಷಣ ಸಮಿತಿಗಳು ಬೋಧಕರು ಸಂಶೋಧನಾ ಲೇಖನ ಪ್ರಕಟಿಸುವುದನ್ನು ಕಡ್ಡಾಯಗೊಳಿಸಿವೆ. ವೇತನ ಬಡ್ತಿ ಮತ್ತು ಹುದ್ದೆಯ ಬಡ್ತಿಗೆ ಸಂಬಂಧಿಸಿದಂತೆ ಸಂಶೋಧನಾ ಲೇಖನಗಳ ಪ್ರಕಟಣೆ ಕಡ್ಡಾಯವಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಶಿಕ್ಷಕರು ಇದನ್ನೊಂದು ಅನಿವಾರ್ಯ ನಿಯಮವೆನ್ನುವಂತೆ ಪಾಲಿಸುತ್ತಾರೆಯೇ ವಿನಾ ಸ್ವಯಂ ಆಸಕ್ತಿಯಿಂದ ತಮ್ಮನ್ನು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದು ತುಂಬಾ ವಿರಳ.

ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಎನ್ನುವುದು ನಿಂತ ನೀರಾಗಿದೆ. ಸಂಶೋಧನೆಯಲ್ಲಿ ಗುಣಮಟ್ಟದ ಕೊರತೆಯು ಎದ್ದು ಕಾಣುತ್ತಿದೆ. ಪ್ರತಿವರ್ಷದ ಸಂಶೋಧನಾ ಶೀರ್ಷಿಕೆಗಳನ್ನು ಗಮನಿಸಿದರೆ ವಿಷಯ ಪುನರಾವರ್ತನೆಯಾಗುತ್ತಿರುವುದು ಢಾಳಾಗಿ ಕಣ್ಣಿಗೆ ಗೋಚರಿಸುತ್ತದೆ. ದೀರ್ಘಕಾಲ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಸಿದ್ಧರಿಲ್ಲದ ಸಂಶೋಧಕರಲ್ಲಿ ನಕಲು ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ನಕಲನ್ನು ಪತ್ತೆಹಚ್ಚಲು ತಂತ್ರಾಂಶಗಳು ಬಳಕೆಯಲ್ಲಿವೆಯಾದರೂ ಅದೇ ತಂತ್ರಾಂಶಗಳ ಸಹಾಯದಿಂದ ನಕಲಿನ ಪ್ರಮಾಣವನ್ನು ಕಡಿಮೆಗೊಳಿಸಲು ಕೂಡ ಸಾಧ್ಯವಿದೆ ಎಂದು ಸಂಶೋಧಕರು ಬಲ್ಲರು. 

ಒಟ್ಟಾರೆ ವೇತನ ಬಡ್ತಿ ಮತ್ತು ಉದ್ಯೋಗ ಬಡ್ತಿ ಶಿಕ್ಷಣಕ್ಷೇತ್ರದಲ್ಲಿ ಸಂಶೋಧನೆಯ ಮೊದಲ ಆದ್ಯತೆಯಾಗಿದೆ. ಜೊತೆಗೆ ಸಂಶೋಧನಾ ಲೇಖನಗಳನ್ನು ಖರೀದಿಸುವ ಔದಾರ್ಯವನ್ನು ಶಿಕ್ಷಕರು ತೋರುತ್ತಿಲ್ಲ. ಸಂಶೋಧನಾ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಈ ಉಚಿತ ಬೇಡಿಕೆಗೆ ಗ್ರಂಥಪಾಲಕರು ಮತ್ತು ಜಾಲತಾಣಗಳು ಸ್ಪಂದಿಸುತ್ತಿರುವುದು ಸಂಶೋಧನಾಕ್ಷೇತ್ರದ ದುರಂತ. ಗುಣಮಟ್ಟದ ಸಂಶೋಧನೆಗಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಾತ್ರವಲ್ಲದೆ ಗ್ರಂಥಪಾಲಕರ ಹಾಗೂ ಜಾಲತಾಣಗಳ ನಿರ್ವಾಹಕರ ಮನೋಭಾವದಲ್ಲೂ ಸಾಕಷ್ಟು ಬದಲಾವಣೆಗಳಾಗಬೇಕಾದದ್ದು ಸಧ್ಯದ ಅಗತ್ಯವಾಗಿದೆ.  

-ರಾಜಕುಮಾರ ಕುಲಕರ್ಣಿ

Wednesday, April 9, 2025

ಪುಸ್ತಕೋದ್ಯಮ: ಮುಳುವಾಗುತ್ತಿದೆ ‘ಗಿಮಿಕ್’

   




(ಪ್ರಜಾವಾಣಿ 'ಸಂಗತ' ಅಂಕಣ, ೦೬.೦೯.೨೦೨೪)

    ಕನ್ನಡ ಪುಸ್ತಕೋದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಪುಸ್ತಕ ಪ್ರಕಾಶಕರಾದ ಸೃಷ್ಟಿ ನಾಗೇಶ್ ತಮ್ಮ ಲೇಖನದ (ಚರ್ಚೆ, ಸೆ.3) ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಅವರು ಹೇಳಿದಂತೆ ಪ್ರಭಾವಶಾಲಿ ಪ್ರಕಾಶಕರು ಮಾತ್ರ ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಪೂರೈಸಿ ಹಣ ಮಾಡಿಕೊಳ್ಳುತ್ತಿರುವರು ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಪ್ರಬಲ ಪ್ರಕಾಶಕರು ತಾವು ಹಣಗಳಿಸುವ ಉಮೇದಿಯಲ್ಲಿ ಸಣ್ಣ ಪುಟ್ಟ ಪ್ರಕಾಶನ ಸಂಸ್ಥೆಗಳನ್ನು ಮೂಲೆಗುಂಪಾಗಿಸುತ್ತಿರುವರು.

ಇತ್ತೀಚಿನ ದಿನಗಳಲ್ಲಿ ಪ್ರಕಾಶಕರ ನಡುವೆ ಅನಾರೋಗ್ಯಕರ ಸ್ಪರ್ಧೆ ನಡೆಯುತ್ತಿರುವುದು ಸುಳ್ಳಲ್ಲ. ಕೆಲವು ಪ್ರಕಾಶಕರು ಗ್ರಂಥಾಲಯ ಇಲಾಖೆಯನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ಇನ್ನುಳಿದ ಪ್ರಕಾಶಕರನ್ನು ಹತ್ತಿರವೂ ಸುಳಿಯಗೊಡುತ್ತಿಲ್ಲ. ಪ್ರಭಾವಶಾಲಿ ಪ್ರಕಾಶಕರು ಹತ್ತಾರು ಪ್ರಕಾಶನ ಸಂಸ್ಥೆಗಳ ಹೆಸರಿನಲ್ಲಿ ಪುಸ್ತಕಗಳನ್ನು ಪ್ರಕಟಿಸಿ ಗ್ರಂಥಾಲಯ ಇಲಾಖೆಗೆ ಪೂರೈಸುತ್ತಿರುವರು. ಒಬ್ಬ ಪ್ರಕಾಶಕ ಹತ್ತು ಹೆಸರುಗಳಿಂದ ಪುಸ್ತಕಗಳನ್ನು ಇಲಾಖೆಗೆ ಪೂರೈಸಿದರೆ ಆಗ ಒಂಬತ್ತು ಪ್ರಕಾಶಕರ ಅವಕಾಶಗಳನ್ನು ಕಸಿದುಕೊಂಡಂತಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಪ್ರಾಮಾಣಿಕವಾಗಿ ಒಂದೇ ಪ್ರಕಾಶನ ಸಂಸ್ಥೆಯ ಹೆಸರಿನಿಂದ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಪ್ರಕಾಶಕರು ಬದುಕುಳಿಯುವುದಾದರೂ ಹೇಗೆ ಸಾಧ್ಯ?. ಇನ್ನು ಕೆಲವು ಪ್ರಕಾಶಕರು ಪುಸ್ತಕ ಪ್ರಕಾಶನವನ್ನು ಪುಸ್ತಕೋದ್ಯಮವಾಗಿಸಲು ಹಲವಾರು ತಂತ್ರಗಳನ್ನು ಬಳಸಿಕೊಳ್ಳುತ್ತಿರುವರು. ಪುಸ್ತಕ ಬಿಡುಗಡೆ, ಮಾರಾಟ, ಚರ್ಚೆ, ಸಂವಾದಗಳು ಇಂದು ಹೊಸ ಪರಿವೇಷದಲ್ಲಿ ಕಾಣಿಸತೊಡಗಿವೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಪಾನಗೋಷ್ಠಿ ಮತ್ತು ಔತಣಕೂಟಗಳ ಮೆರಗು ನೀಡಲಾಗುತ್ತಿದೆ. ಇದನ್ನೆಲ್ಲ ಆರ್ಥಿಕವಾಗಿ ಬಲಶಾಲಿಗಳಾದ ಪ್ರಕಾಶಕರು ಮಾತ್ರ ಮಾಡಲು ಸಾಧ್ಯ. ಹೀಗಾಗಿ ಬಲಶಾಲಿಗಳಲ್ಲದ ಪ್ರಕಾಶಕರು ಒಂದೆರಡು ಪುಸ್ತಕಗಳ ಪ್ರಕಟಣೆಯಲ್ಲೇ ಹೈರಾಣಾಗಿ ಪುಸ್ತಕ ಪ್ರಕಟಣೆಯ ಕೆಲಸವನ್ನೆ ಕೈಬಿಡುತ್ತಿರುವರು. 

ಪ್ರತಿ ಪ್ರಕಾಶಕನೂ ಗ್ರಂಥಾಲಯ ಅವಲಂಬಿತನೆ ಎನ್ನುವುದು ಒಪ್ಪುವಂತಹ ಮಾತು. ಈ ವಿಷಯದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ತನ್ನ ಯೋಜನೆ ಮತ್ತು ನಿಯಮಗಳಲ್ಲಿ ಸಾಕಷ್ಟು ಬದಲಾವಣೆ ಹಾಗೂ ಸಡಿಲತೆಯನ್ನು ತರುವ ಅಗತ್ಯವಿದೆ. ಒಂದು ಪ್ರಕಾಶನ ಸಂಸ್ಥೆಯಿಂದ ಒಂದೊಂದು ಪುಸ್ತಕದ ಮುನ್ನೂರು ಪ್ರತಿಗಳನ್ನು ಮಾತ್ರ ಇಲಾಖೆ ಖರೀದಿಸುತ್ತದೆ. ಆಯ್ಕೆ ಸಮಿತಿಯು ಪ್ರಕಾಶನ ಸಂಸ್ಥೆ ಒಂದು ವರ್ಷದಲ್ಲಿ ಪ್ರಕಟಿಸಿದ ಎಲ್ಲ ಪುಸ್ತಕಗಳನ್ನು ಆಯ್ಕೆ ಮಾಡಲಾರದು. ಆಯ್ಕೆಗೆಂದು ಕಳುಹಿಸಿದ ಪುಸ್ತಕಗಳಲ್ಲಿ ಯಾವುದೋ ಮಾನದಂಡವನ್ನಾಧರಿಸಿ ಕೆಲವು ಪುಸ್ತಕಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ಒಂದರ್ಥದಲ್ಲಿ ಇದು ಕುಂಭಕರ್ಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ. ಗ್ರಂಥಾಲಯ ಇಲಾಖೆಯ ಈ ನಡೆಯನ್ನು ಗಮನಿಸಿಯೇ ಕೆಲವು ಪ್ರಕಾಶಕರು ತಾವು ಒಂದು ವರ್ಷದಲ್ಲಿ ಪ್ರಕಟಿಸಿದ ಒಟ್ಟು ಪುಸ್ತಕಗಳನ್ನು ಬೇರೆ ಬೇರೆ ಪ್ರಕಾಶನ ಸಂಸ್ಥೆಗಳ ಹೆಸರಿನಡಿ ಆಯ್ಕೆಗೆ ಕಳುಹಿಸುವರು. ಇದು ಇಲಾಖೆಗೆ ಗೊತ್ತಿಲ್ಲದ ಸತ್ಯವೇನಲ್ಲ. 

ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲೂ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ ಎನ್ನುವ ಸತ್ಯ ಗ್ರಂಥಾಲಯ ಇಲಾಖೆಗೆ ಮನವರಿಕೆಯಾಗಬೇಕು. ಸಾಕಷ್ಟು ಸಂಖ್ಯೆಯಲ್ಲಿ ಗ್ರಂಥಾಲಯಗಳು ಸ್ಥಾಪನೆಯಾಗಿರುವಾಗ ಪ್ರಕಾಶಕರಿಂದ ಖರೀದಿಸುವ ಪುಸ್ತಕಗಳ ಸಂಖ್ಯೆ ಹೆಚ್ಚಬೇಕು. ಒಂದೆಡೆ ಇದು ಪ್ರಕಾಶಕರನ್ನು ಆರ್ಥಿಕವಾಗಿ ಪೆÇ್ರೀತ್ಸಾಹಿಸಿದಂತಾದರೆ ಇನ್ನೊಂದೆಡೆ ಓದುಗರಿಗೆ ಓದಲು ಹೆಚ್ಚಿನ ಪುಸ್ತಕಗಳನ್ನು ಒದಗಿಸಿದಂತಾಗುತ್ತದೆ. ವಿಪರ್ಯಾಸದ ಸಂಗತಿ ಎಂದರೆ ಸರ್ಕಾರ ಗ್ರಂಥಾಲಯವನ್ನು ಅನುತ್ಪಾದನಾ ಕ್ಷೇತ್ರವೆಂದು ಪರಿಗಣಿಸಿದೆ. ಆರ್ಥಿಕ ಬೆಳವಣಿಗೆಯೊಂದೆ ಬೆಳವಣಿಗೆಯಲ್ಲ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಬೆಳವಣಿಗೆಗಳು ಕೂಡ ನಾಡಿನ ಬೆಳವಣಿಗೆಯ ಭಾಗವೆಂದು ಸರ್ಕಾರ ಅರಿತುಕೊಳ್ಳಬೇಕು.

ಇಂದು ಪ್ರಕಾಶಕರು ಮಾತ್ರ ಸಮಸ್ಯೆಗಳನ್ನು ಎದುರಿಸುತ್ತಿಲ್ಲ. ಹೊಸ ಲೇಖಕರು ಕೂಡ ಸಂಕಷ್ಟದ ಹಾದಿಯಲ್ಲಿ ನಿಂತಿರುವರು. ಪ್ರಕಾಶಕರು ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸಲು ಮುಂದೆ ಬರುತ್ತಿಲ್ಲ. ಗೌರವಧನದ ಯಾವ ನಿರೀಕ್ಷೆಯೂ ಇಲ್ಲದೆ ಹೊಸ ಲೇಖಕರು ಯಾರಾದರೂ ತಮ್ಮ ಪುಸ್ತಕಗಳನ್ನು ಪ್ರಕಟಿಸಿದರೆ ಸಾಕು ಎನ್ನುವ ಮನಸ್ಥಿತಿಗೆ ತಲುಪಿರುವರು. ಸ್ಥಾಪಿತ ಹಾಗೂ ಜನಪ್ರಿಯ ಲೇಖಕರ ಪುಸ್ತಕಗಳನ್ನು ಪ್ರಕಟಿಸಲು ಮುಂದಾಗುವ ಪ್ರಕಾಶಕರಿಗೆ ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸಲು ಬಂಡವಾಳ ಹೂಡುವ ಧೈರ್ಯ ಇಲ್ಲವಾಗಿದೆ. ಹೆಚ್ಚಿನ ಪ್ರಕಾಶಕರು ಹಾಕಿದ ಬಂಡವಳ ವಾಪಸ್ಸಾಗಲು ಅವರು ನೆಚ್ಚಿಕೊಂಡಿರುವುದು ಗ್ರಂಥಾಲಯ ಇಲಾಖೆಯನ್ನು. ಅಲ್ಲಿಯೂ ನೂರೆಂಟು ರಾಜಕೀಯಗಳಿವೆ. ಪುಸ್ತಕಗಳನ್ನು ಪೂರೈಸಿ ಹಣ ಪಡೆಯುವುದು ಅದೊಂದು ಹರಸಾಹಸದ ಕೆಲಸ ಎನ್ನುವಂತಾಗಿದೆ. ಜೊತೆಗೆ ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಪೂರೈಸಲು ಪ್ರಬಲ ಪ್ರಕಾಶನ ಸಂಸ್ಥೆಗಳೊಂದಿಗೆ ಸ್ಪರ್ಧೆಗೆ ಇಳಿಯಬೇಕಾದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಪ್ರಭಾವಶಾಲಿ ಪ್ರಕಾಶಕ ಮಾತ್ರ ಸ್ಪರ್ಧೆಯಲ್ಲಿ ಗೆಲುವು ಸಾಧಿಸುತ್ತಾನೆ. 

ಇನ್ನು ಕೆಲವು ಲೇಖಕರು ಸ್ವತ: ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಅಚ್ಚರಿಯ ಸಂಗತಿ ಎಂದರೆ ಪುಸ್ತಕ ಪ್ರಕಟಿಸಿದ ನಾಲ್ಕೈದು ತಿಂಗಳುಗಳಲ್ಲಿ ಎರಡನೆ ಮುದ್ರಣವನ್ನು ಹೊರತರುತ್ತಿರುವರು. ಓದುಗರ ನಿರುತ್ಸಾಹ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಸಹಕಾರ, ಪುಸ್ತಕ ಮಳಿಗೆಗಳ ಕೊರತೆಯ ನಡುವೆ ಕೆಲವು ಲೇಖಕರು ಕಡಿಮೆ ಅವಧಿಯಲ್ಲಿ ಎರಡನೆ ಮುದ್ರಣವನ್ನು ತರುತ್ತಿರುವರು. ಕೇವಲ ಇನ್ನೂರು, ಮುನ್ನೂರು ಪ್ರತಿಗಳನ್ನು ಪ್ರಕಟಿಸಿ ಮೊದಲ ಮುದ್ರಣದ ಪ್ರತಿಗಳೆಲ್ಲ ಖಾಲಿಯಾದವು ಎನ್ನುವಂತಹ ವಾತಾವರಣವನ್ನು ಸೃಷ್ಟಿಸುತ್ತಿರುವರೆಂದು ನಾಗೇಶ ತಮ್ಮ ಲೇಖನದಲ್ಲಿ ಉಲ್ಲೇಖಿಸಿರುವರು. ಹೀಗೆ ಮಾಡುವುದರ ಮೂಲಕ ಲೇಖಕರು ಏನು ಸಾಧಿಸಿದಂತಾಗುತ್ತದೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇಂತಹ ಕೃತ್ಯಗಳು ಆ ಲೇಖಕನನ್ನು ಜನಪ್ರಿಯ ಸಾಹಿತಿಯನ್ನಾಗಿ ರೂಪಿಸುವುದಾಗಲಿ ಮತ್ತು ಪುಸ್ತಕೋದ್ಯಮಕ್ಕೆ ನೆರವಾಗುವುದಾಗಲಿ ಮಾಡಲಾರವು. ಕೊನೆಗೂ ಓದುಗರ ವಲಯದಲ್ಲಿ ಹೆಚ್ಚು ದಿನಗಳ ಕಾಲ ನೆನಪಿನಲ್ಲಿ ಉಳಿಯುವುದು ಗಟ್ಟಿ ಸಾಹಿತ್ಯವೇ ವಿನಾ ಇಂತಹ ಗಿಮಿಕ್‍ಗಳಲ್ಲ. ಲೇಖಕರ ಮತ್ತು ಪ್ರಕಾಶಕರ ಇಂತಹ ಗಿಮಿಕ್‍ಗಳು ಪ್ರಕಾಶನ ಸಂಸ್ಥೆಗಳಿಗೆ ಮುಳುವಾಗುತ್ತಿವೆ.

ಪುಸ್ತಕಗಳನ್ನು ಖರೀದಿಸಿ ಓದುತ್ತಿರುವ ಓದುಗರಿಗೂ ಜಾಲತಾಣಗಳಲ್ಲಿ ಸಂಪೂರ್ಣ ಮಾಹಿತಿ ಸಿಗುತ್ತಿಲ್ಲ. ಯಾವುದೇ ಪ್ರಕಾಶನ ಸಂಸ್ಥೆ ಅಥವಾ ಪುಸ್ತಕ ಮಳಿಗೆಯ ಜಾಲತಾಣಕ್ಕೆ ಭೇಟಿಕೊಟ್ಟರೆ ಅಲ್ಲಿ ಜನಪ್ರಿಯ ಲೇಖಕರ ಮತ್ತು ಪ್ರಕಾಶನ ಸಂಸ್ಥೆಗಳ ಪುಸ್ತಕಗಳ ಮಾಹಿತಿ ಮಾತ್ರ ಲಭ್ಯವಿರುತ್ತದೆ. ಪ್ರತಿವರ್ಷ ಸಾವಿರಾರು ಪುಸ್ತಕಗಳು ಪ್ರಕಟವಾಗುತ್ತಿದ್ದರೂ ಆನ್‍ಲೈನ್‍ನಲ್ಲಿ ಸಿಗುತ್ತಿರುವ ಪುಸ್ತಕಗಳ ಸಂಖ್ಯೆ ಅಭಿಮಾನ ಪಡುವಂತಿಲ್ಲ. ಒಂದರ್ಥದಲ್ಲಿ ಅದೆಷ್ಟೋ ಅತ್ಯುತ್ತಮ ಪುಸ್ತಕಗಳು ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳದೆ ಓದಿಗೆ ದಕ್ಕದೆ ಹೋಗುವ ಸಂದರ್ಭವೇ ಹೆಚ್ಚು. ಪುಸ್ತಕಗಳ ಮಾರಾಟದ ವಿಷಯದಲ್ಲಿ ಪ್ರಕಾಶಕರ ನಡುವೆ ಒಂದು ಸೌಹಾರ್ದಯುತವಾದ ವಾತಾವರಣ ನಿರ್ಮಾಣವಾಗಬೇಕು. ಆ ಮೂಲಕ ಪ್ರಕಾಶಕ ಮತ್ತು ಲೇಖಕ ಬೆಳೆಯುವಂತಾಗಬೇಕು. ಸಧ್ಯದ ಸಂದರ್ಭದಲ್ಲಿ ಇಂತಹದ್ದೊಂದು ವಾತಾವರಣ ಸೃಷ್ಟಿಯಾಗುವ ಯಾವ ಸುಳಿವು ಗೋಚರಿಸುತ್ತಿಲ್ಲ. 

-ರಾಜಕುಮಾರ ಕುಲಕರ್ಣಿ

Tuesday, February 11, 2025

ಇಲ್ಲಿದೆ ಜ್ಞಾನಧಾರೆ, ಸವಿಯಬನ್ನಿ





(ಪ್ರಜಾವಾಣಿ, ೦೬.೦೯.೨೦೨೪)

 ಪ್ರಿಯ ಓದುಗ ನಮಸ್ಕಾರಗಳು,

ಪ್ರತಿವರ್ಷ ಅಗಸ್ಟ್ 12 ರಂದು ನನ್ನ ಕುರಿತು ವಿಚಾರಸಂಕೀರಣ, ಉಪನ್ಯಾಸ, ನನ್ನಲ್ಲಿರುವ ಪುಸ್ತಕಗಳ ಪ್ರದರ್ಶನದಂತಹ ಕಾರ್ಯಕ್ರಮಗಳನ್ನು ದೇಶದಾದ್ಯಂತ ಆಯೋಜಿಸುವರು. ಭಾರತದಲ್ಲಿ ಗ್ರಂಥಾಲಯಗಳ ಬೆಳವಣಿಗೆಯ ಜನಕ ಎಂದೇ ಖ್ಯಾತರಾದ ಡಾ.ಎಸ್.ಆರ್.ರಂಗನಾಥನ್‍ರ ಜನ್ಮದಿನದ ನಿಮಿತ್ಯ ಈ ಎಲ್ಲ ಸಂಭ್ರಮ ಮತ್ತು ಸಡಗರ. ಭಾರತದಲ್ಲಿ ಗ್ರಂಥಾಲಯ ವ್ಯವಸ್ಥೆಗೆ ಒಂದು ವೈಜ್ಞಾನಿಕ ತಳಹದಿಯನ್ನು ನಿರ್ಮಿಸಿದವರು ಅವರು. ಗ್ರಂಥಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಟ್ಟು ಆಸಕ್ತ ಓದುಗರಿಗೆ ಒದಗಿಸುವ ಗ್ರಂಥಾಲಯ ವ್ಯವಸ್ಥೆಯ ರೂಪುರೇಷೆಯ ಹಿಂದೆ ರಂಗನಾಥನ್‍ರ ಅಗಾಧ ಪರಿಶ್ರಮ ಮತ್ತು ಪ್ರತಿಭೆ ಪರಿಣಾಮಕಾರಿಯಾಗಿ ಕೆಲಸ ಮಾಡಿ

ಜನಸಾಮಾನ್ಯರಿಗೂ ಓದಲು ಪುಸ್ತಕಗಳು ದೊರೆಯುವಂತಾಗಬೇಕು ಎನ್ನುವುದು ರಂಗನಾಥನ್‍ರ ಆಲೋಚನೆಯಾಗಿತ್ತು. ಗ್ರಂಥಾಲಯಗಳ ಮೂಲಕ ಜ್ಞಾನ ಪ್ರಸಾರದ ಕಾರ್ಯ ಅತ್ಯಂತ ಸುಲಲಿತವಾಗಿ ನಡೆಯಲಿ ಎನ್ನುವ ಮಹತ್ವಾಕಾಂಕ್ಷೆಯಿಂದ ರಂಗನಾಥನ್ ನನ್ನ (ಸಾರ್ವಜನಿಕ ಗ್ರಂಥಾಲಯಗಳ) ಕಾರ್ಯನಿರ್ವಹಣೆಗೆ ಒಂದು ವೈಜ್ಞಾನಿಕ ವ್ಯವಸ್ಥೆಯನ್ನು ನಿರ್ಮಿಸಿದರೇನೋ ಸರಿ. ಆದರೆ ಕಾಲಾನಂತರದಲ್ಲಿ ನಾನು ಸಮಸ್ಯೆಗಳ ಆಗರವಾದೆ. ಗುಣಮಟ್ಟದ ಪುಸ್ತಕಗಳ ಕೊರತೆ, ಪೀಠೋಪಕರಣಗಳ ಕೊರತೆ, ವ್ಯವಸ್ಥಿತ ಕಟ್ಟಡ ಇಲ್ಲದಿರುವುದು, ಸಿಬ್ಬಂದಿಯ ಕೊರತೆ ಮತ್ತು ಅವರ ಅಸಮರ್ಪಕ ಕಾರ್ಯನಿರ್ವಹಣೆ, ತಂತ್ರಜ್ಞಾನವನ್ನು ಬಳಸಿಕೊಳ್ಳದೇ ಇರುವುದು ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ಪೆÇಣಿಸಲಾಗುತ್ತಿದೆ. 

ಪ್ರಿಯ ಓದುಗ ಈ ಮೇಲಿನ ಸಮಸ್ಯೆಗಳೆಲ್ಲ ನಿರಾಧಾರವಾದವುಗಳೆಂದು ನಾನು ವಾದಿಸುತ್ತಿಲ್ಲ. ಸಮಸ್ಯೆಗಳ ಹುತ್ತದಲ್ಲಿ ನಾನು ಮುಳುಗಿ ಹೋಗಿದ್ದೇನೆ. ಪುಸ್ತಕಗಳ ವಿಷಯವಾಗಿ ಹೇಳುವುದಾದರೆ ಓದಲು ಗುಣಾತ್ಮಕ ಪುಸ್ತಕಗಳು ನನ್ನಲ್ಲಿರುವುದು ಶೇಕಡಾ 30 ರಿಂದ 40 ಮಾತ್ರ. ಉಳಿದ ಪ್ರತಿಶತ 60 ರಷ್ಟು ಪುಸ್ತಕಗಳು ಸಂಖ್ಯಾತ್ಮಕ ದೃಷ್ಟಿಯಿಂದ ಖರೀದಿಸಿದವುಗಳೇ ವಿನಾ ಓದಲು ಯೋಗ್ಯವಾಗಿಲ್ಲ. ನನ್ನಲ್ಲಿರುವ ಪುಸ್ತಕಗಳ ರಾಶಿಯನ್ನು ನೋಡಿ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ತಕ್ಕಡಿಯಲ್ಲಿ ತೂಗಿ ಖರೀದಿಸುವರೆಂಬ ವಿಡಂಬನಾತ್ಮಕ ಹೇಳಿಕೆ ಚಾಲ್ತಿಯಲ್ಲಿದೆ. ಈ ಮಾತು ಕೇಳಿದಾಗಲೆಲ್ಲ ನಾನು ಅದೆಷ್ಟು ವೇದನೆಯಿಂದ ನರಳಿದ್ದೇನೆಂದು ಗೊತ್ತೇ ನಿನಗೆ?. 

ಓದಲು ಯೋಗ್ಯವಲ್ಲದ ಪುಸ್ತಕಗಳ ರಾಶಿಯನ್ನು ನನ್ನ ಒಡಲಲ್ಲಿ ತುಂಬುತ್ತಿರುವವರು ಯಾರು ಎಂದು ದೂಷಿಸಲು ನನ್ನಲ್ಲಿ ದೀರ್ಘ ಪಟ್ಟಿಯೇ ಇದೆ. ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟಕ್ಕಾಗಿ ರಾಜ್ಯದ ರಾಜಧಾನಿ, ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರವಲ್ಲದೆ ಹೊಬಳಿ ಮತ್ತು ಹಳ್ಳಿಗಳಲ್ಲೂ ಪ್ರಕಾಶನ ಸಂಸ್ಥೆಗಳು ಹುಟ್ಟಿಕೊಂಡಿವೆ. ಜೊತೆಗೆ ಲೇಖಕರೆ ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಪರಿಣಾಮವಾಗಿ ಪ್ರತಿವರ್ಷ ಅಸಂಖ್ಯಾತ ಪುಸ್ತಕಗಳು ಕನ್ನಡ ಭಾಷೆಯಲ್ಲಿ ಪ್ರಕಟಗೊಳ್ಳುತ್ತಿವೆ. ಕೆಲವು ಪ್ರಕಾಶಕರಂತೂ ಎರಡು ಮೂರು ಪ್ರಕಾಶನ ಸಂಸ್ಥೆಗಳ ಹೆಸರಿನಡಿ ಪುಸ್ತಕಗಳನ್ನು ಪ್ರಕಟಿಸಿ ಲಾಭ ಮಾಡಿಕೊಳುತ್ತಿರುವರೆಂಬ ಆರೋಪ ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಸಂಬಂಧಿಸಿದ ಇಲಾಖೆ ಮತ್ತು ಸರ್ಕಾರ ಕಣ್ಣಿದ್ದು ಕುರುಡಾಗಿವೆ. ಹಾಗೆಂದು ನಾನು ಎಲ್ಲ ಪ್ರಕಾಶಕರನ್ನು ಕಾಮಾಲೆ ಕಣ್ಣಿನಿಂದ ನೋಡುತ್ತಿಲ್ಲ. ಗುಣಾತ್ಮಕ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಪ್ರಕಾಶಕರು ನನ್ನಿಂದ ದೂರವೇ ಉಳಿದಿರುವರು.

ಪ್ರಕಾಶಕರ ಹುನ್ನಾರದ ಹಿಂದೆ ನನ್ನ ಇಲಾಖೆಯ ಅಧಿಕಾರಿಗಳ ಪಾತ್ರವಿದೆ ಎನ್ನುವುದು ಪಾರದರ್ಶಕ ಸತ್ಯ. ಪ್ರಕಾಶನ ಸಂಸ್ಥೆಗಳೊಂದಿಗೆ ಒಳಒಪ್ಪಂದಕ್ಕಿಳಿದು ಕಸದ ರಾಶಿಯನ್ನೆಲ್ಲ ನನ್ನ ಒಡಲಲ್ಲಿ ತುಂಬುತ್ತಿರುವರು. ಪುಸ್ತಕ ಆಯ್ಕೆ ಸಮಿತಿಯವರು ತಮಗೆ ನಿಗದಿಪಡಿಸಿದ ಅಲ್ಪ ಸಮಯದಲ್ಲೆ ರಾಶಿ ರಾಶಿ ಪುಸ್ತಕಗಳನ್ನು ನನಗಾಗಿ ಆಯ್ಕೆ ಮಾಡುವರು. ಒಂದೆರಡು ದಿನಗಳಲ್ಲಿ ಸಾವಿರಾರು ಪುಸ್ತಕಗಳನ್ನು ಓದುವುದಾದರೂ ಹೇಗೆ ಸಾಧ್ಯ?. ಇನ್ನು ಇರುವ ಅಲ್ಪ ಸಂಖ್ಯೆಯ ಗುಣಾತ್ಮಕ ಪುಸ್ತಕಗಳಾದರೂ ಓದಲು ಓದುಗರಿಗೆ ದೊರೆಯುತ್ತಿವೆಯೆ ಎನ್ನುವ ಪ್ರಶ್ನೆಗೆ ಮತ್ತದೆ ನಿರಾಶಾದಾಯಕ ಉತ್ತರ.  ಪುಸ್ತಕಗಳ ಉಪಯೋಗ ಹೆಚ್ಚಿಸಲು ಗ್ರಂಥಾಲಯ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲವೆಂಬ ಕೂಗು ಕೇಳಿ ಬರುತ್ತಿದೆ. ಗ್ರಂಥಾಲಯದಲ್ಲಿ ಕೆಲಸದ ವೇಳೆ  ಸಿಬ್ಬಂದಿಯ ಅನುಪಸ್ಥಿತಿ ಸಾಮಾನ್ಯವಾಗಿದೆ. ಓದುಗರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವುದಿಲ್ಲ. ಅದೆಷ್ಟೋ ಸಿಬ್ಬಂದಿಗೆ ನನ್ನಲ್ಲಿರುವ ಪುಸ್ತಕಗಳ ಹೆಸರೇ ಗೊತ್ತಿರುವುದಿಲ್ಲ. 

ಹಳ್ಳಿ ಪ್ರದೇಶಗಳಲ್ಲಿನ ಜನರಿಗೂ ಪುಸ್ತಕ ಓದುವ ಭಾಗ್ಯ ದೊರೆಯಲೆಂದು ನನ್ನನ್ನು ಗ್ರಾಮೀಣ ಪ್ರದೇಶಗಳಲ್ಲೂ ಒಯ್ದು ಪ್ರತಿಷ್ಠಾಪಿಸಿರುವರು. ಪುಸ್ತಕಗಳ ಸಂಗ್ರಹಣಾ ವಿಷಯವಾಗಿ ಆಯಾ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಾದ ಓದಿನ ಬೇಕು-ಬೇಡಗಳನ್ನು ಸಮೀಕ್ಷೆ ಮಾಡಬೇಕು. ಗ್ರಾಮೀಣ ಗ್ರಂಥಾಲಯಗಳ ಮೇಲ್ವಿಚಾರಕರಿಂದ ಬೇಡಿಕೆಯ ಪಟ್ಟಿಯನ್ನು ಪಡೆಯಬೇಕು. ಆದರೆ ಇಲ್ಲಿಯೂ ಇಲಾಖೆಯದು ಸರ್ವಾಧಿಕಾರಿ ಧೋರಣೆ. ದೂರದ ನಗರದಲ್ಲಿ ಕುಳಿತು ತಾವು ಆಯ್ಕೆ ಮಾಡಿ ಕಳುಹಿಸಿದ ಪುಸ್ತಕಗಳನ್ನೆ ನನ್ನಲ್ಲಿನ ಅಲ್ಮೆರಾಗಳಲ್ಲಿ ತುಂಬುತ್ತಿರುವರು. ಅರೆಕಾಲಿಕ ನೌಕರಿ ಮತ್ತು ಸೀಮಿತ ಸಂಬಳದಿಂದ ಮೇಲ್ವಿಚಾರಕರು ನನ್ನನ್ನು ಸರಿಯಾಗಿ ಪೆÇೀಷಿಸುತ್ತಿಲ್ಲ. ಸ್ಥಳೀಯರು ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿರುವ ಪರಿಣಾಮ ಅದೆಷ್ಟೋ ಗ್ರಾಮೀಣ ಪ್ರದೇಶಗಳಲ್ಲಿ ನನ್ನ ಬಾಗಿಲುಗಳು ಸದಾಕಾಲ ಮುಚ್ಚಿರುತ್ತವೆ.

ಶಿಕ್ಷಣ ಸಂಸ್ಥೆಗಳಲ್ಲಿರುವ ನನ್ನ ಸಹೋದರ/ಸಹೋದರಿಯರದೂ ಇದೇ ಅವಸ್ಥೆ. ಅಲ್ಲಿ ಕೂಡ ವಿದ್ಯಾರ್ಥಿಗಳಾಗಲಿ, ಶಿಕ್ಷಕರಾಗಲಿ ಪುಸ್ತಕಗಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲವಂತೆ. ಅಧ್ಯಾಪನಕ್ಕೆ ಅಧ್ಯಯನವೇ ಬಂಡವಾಳವಾಗಿರುವ ಸರಸ್ವತಿ ಮಂದಿರಗಳಲ್ಲೇ ಪುಸ್ತಕಗಳು ಅನಾದರಕ್ಕೆ ಒಳಗಾಗಿವೆ. ಹೀಗಿರುವಾಗ ಶ್ರೀಸಾಮಾನ್ಯರನ್ನೇ ನಂಬಿಕುಳಿತಿರುವ ನನ್ನದಂತೂ ಶೋಚನೀಯ ಸ್ಥಿತಿ. 

ಇಷ್ಟೆಲ್ಲ ಅಸಂಗತಗಳ ನಡುವೆ ನಾನಿನ್ನೂ ಉಸಿರಾಡುತ್ತಿರುವೆ. ನಾನು ದೀರ್ಘಕಾಲ ಬದುಕುಳಿಯಲು ಈಗ ನನಗಿರುವ ಏಕೈಕ ಆಸರೆ ಎಂದರೆ ಓದುಗ ದೊರೆ ನೀನು ಮಾತ್ರ. ಮೊಬೈಲ್ ವ್ಯಸನಿಯಾದ ನೀನು ಈಗ ನನ್ನನ್ನು ನಿರ್ಲಕ್ಷಿಸುತ್ತಿರುವುದು ಸತ್ಯಕ್ಕೆ ಹತ್ತಿರವಾದ ಮಾತು. ತಂತ್ರಜ್ಞಾನದ ಹೊಡೆತಕ್ಕೆ ನಾನು ನಲುಗಿಹೋಗಿದ್ದೇನೆ. ನಾನು ನಶಿಸಿ ಹೋಗುವ ಮೊದಲು ನನ್ನ ಒಡಲಲ್ಲಿರುವ ಜ್ಞಾನಾಮೃತದ ಧಾರೆಯನ್ನು ಸವಿಯಲು ಬಾ. ನಿನ್ನ ಆಗಮನಕ್ಕಾಗಿ ಕಾದಿರುವೆ.

ಇಂತಿ ನಿನ್ನ ಗ್ರಂಥಾಲಯ 

-ರಾಜಕುಮಾರ ಕುಲಕರ್ಣಿ