Thursday, June 11, 2020

ಭವಿಷ್ಯದ ಬದುಕಿಗೆ ವರ್ತಮಾನದಲ್ಲೊಂದು ಪಾಠ

       ಪ್ರಕೃತಿಯ ಮೇಲೆ ಮನುಷ್ಯನ ಅಟ್ಟಹಾಸ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇದು ಇವತ್ತು ನಿನ್ನೆಯ ಮಾತಲ್ಲ. ವಿಪರ್ಯಾಸವೆಂದರೆ ಹೀಗೆ ಪ್ರಕೃತಿಯ ಮೇಲೆ ಅಟ್ಟಹಾಸ ಗೈಯುತ್ತಿರುವ ಮನುಷ್ಯನೇ ಹಿಂದೊಮ್ಮೆ ಅದನ್ನು ದೇವರೆಂದು ಪೂಜಿಸುತ್ತಿದ್ದ. ಇತಿಹಾಸದ ಕಾಲಗರ್ಭದಲ್ಲೊಮ್ಮೆ ಹಣಿಕಿಕ್ಕಿದಾಗ ಈ ಮನುಷ್ಯನ ಪೂರ್ವಜರು ಪ್ರಕೃತಿಯನ್ನೇ ದೇವರೆಂದು ಪೂಜಿಸಿದ ಸಾಕಷ್ಟು ಉದಾಹರಣೆಗಳಿವೆ. ಮಳೆ, ಗಾಳಿ, ಬೆಂಕಿ, ಬೆಟ್ಟ, ಗುಡ್ಡ, ನದಿ, ನೀರನ್ನೆ ಅವರೆಲ್ಲ ದೇವರೆಂದು ಪೂಜಿಸಿದ್ದುಂಟು. ಹೀಗೆ ಪೂಜಿಸುವುದರಲ್ಲೂ ಅದಕ್ಕೊಂದು ಅರ್ಥವಿದೆ. ಏಕೆಂದರೆ ಮನುಷ್ಯ ಜೀವಂತವಾಗಿರಲು ಅಗತ್ಯವಾದದ್ದನ್ನೆಲ್ಲ ಆತ ಪಡೆಯುವುದು ಪ್ರಕೃತಿಯಿಂದ. ಕುಡಿಯಲು ನೀರು, ಉಸಿರಾಡಲು ಗಾಳಿ, ತಿನ್ನಲು ಆಹಾರ ಮನುಷ್ಯನ ಈ ಎಲ್ಲ ಮೂಲಭೂತ ಅವಶ್ಯಕತೆಗಳು ಅವನಿಗೆ ಪ್ರಾಪ್ತವಾಗುವುದು ಪ್ರಕೃತಿಯಿಂದಲೇ. ಹೀಗಾಗಿ ಪ್ರಕೃತಿಯನ್ನು ದೇವರೆಂದು ಪೂಜಿಸುವುದರಲ್ಲಿ ತುಂಬ ವಿಶಾಲವಾದ ಅರ್ಥವಿದೆ.

    ದೇವರೆಂದೇ ಪರಿಗಣಿಸಲ್ಪಟ್ಟ ಪ್ರಕೃತಿ ಮುಂದೊಂದು ದಿನ ಅದೇ ಮನುಷ್ಯನ ಕ್ರೌರ್ಯಕ್ಕೆ ಒಳಗಾದದ್ದು ಮಾತ್ರ ಇತಿಹಾಸದ ವ್ಯಂಗ್ಯಗಳಲ್ಲೊಂದು. ಮಾತು, ಭಾಷೆ, ಅಕ್ಷರ, ವಿದ್ಯೆಯನ್ನು ಕಲಿತ ಮನುಷ್ಯ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಪ್ರಕೃತಿಯ ಮೇಲೆ ಪ್ರಚಂಡ ಯಶಸ್ಸು ಸಾಧಿಸಿದ್ದೆನೆಂಬ ಭ್ರಮೆಗೆ ಒಳಗಾದ. ಮನುಷ್ಯನ ಈ ಭ್ರಮೆಯೇ  ಅವನು ಪ್ರಕೃತಿಯ ಮೇಲೆ ಅಟ್ಟಹಾಸ ಮೆರೆಯಲು ಕಾರಣವಾಯಿತು. ಹೀಗೆ ಭ್ರಮೆಗೆ ಒಳಗಾದ ಮನುಷ್ಯನಿಗೆ ಪ್ರಕೃತಿ ಮಾತ್ರ ಕಾಲಕಾಲಕ್ಕೆ ತಕ್ಕ ಉತ್ತರವನ್ನೇ ನೀಡುತ್ತ ಬಂದಿದೆ. ಸುನಾಮಿ, ಚಂಡಮಾರುತ, ನೆರೆಹಾವಳಿ, ಪ್ರವಾಹ, ಭೀಕರ ಬರಗಾಲ ಇಂಥ ಸನ್ನಿವೇಶಗಳನ್ನು ಸೃಷ್ಟಿಸುತ್ತ ಪ್ರಕೃತಿಯು ಮನುಷ್ಯರ ಬದುಕನ್ನು ತಲ್ಲಣಗೊಳಿಸಿದೆ ಮತ್ತು ಎಚ್ಚರಿಕೆಯ ಪಾಠವನ್ನೂ ಕಲಿಸುತ್ತ ಬಂದಿದೆ. ಈಗ ಪ್ರಕೃತಿ ಮತ್ತೊಮ್ಮೆ ತನ್ನ ಮಗ್ಗಲು ಬದಲಿಸಿ ಕೊರೋನಾ ವೈರಾಣುವಿನ ಮೂಲಕ ಭೀಕರ ಕಾಯಿಲೆಯನ್ನು ಸೃಷ್ಟಿಸಿ ಇಡೀ ವಿಶ್ವವನ್ನೇ ನಡುಗಿಸಿದೆ. 

      ಎಷ್ಟು ವಿಚಿತ್ರ ನೋಡಿ ಬೀಸುವ ಗಾಳಿ, ಹರಿಯುವ ನೀರು, ಆಕಾಶದೆತ್ತರದ ಬೆಟ್ಟಗಳ ಮೇಲೆಲ್ಲ ದಿಗ್ವಿಜಯ ಸಾಧಿಸಿದ ಮನುಷ್ಯನನ್ನು ಸಣ್ಣದೊಂದು ಕ್ರಿಮಿ (ವೈರಸ್) ತಲ್ಲಣಗೊಳಿಸಿದೆ. ಮಾಸ್ಕ್, ಗ್ಲೌಜ್, ಸಾಮಾಜಿಕ ಅಂತರ, ಲಾಕ್‍ಡೌನ್, ಸೀಲ್‍ಡೌನ್ ಎನ್ನುವಂಥ ದೊಡ್ಡ ದೊಡ್ಡ ಪದಗಳನ್ನು ಬಳಸುತ್ತ ಆ ಸಣ್ಣದೊಂದು ಕ್ರಿಮಿಯನ್ನು ಎದುರಿಸಲು ಇಡೀ ವಿಶ್ವ ಸನ್ನದ್ದುಗೊಂಡು ನಿಂತಿತು. ವಿಶ್ವದ ದೊಡ್ಡಣ್ಣನೆಂದೇ ಖ್ಯಾತಿ ಪಡೆದ ಅಮೆರಿಕಾದಂಥ ಬಲಿಷ್ಠ ರಾಷ್ಟ್ರ ಕೂಡ ಅಕ್ಷರಶ: ಹತಾಶೆಯಿಂದ ಕೈಚೆಲ್ಲಿ ಕೂಡಬೇಕಾಯಿತು. ರೋಗದ ವಿಸ್ತರಣೆ, ಹೆಚ್ಚುತ್ತಿರುವ ಸಾವಿನ ಸಂಖ್ಯೆ, ವ್ಯಾಪಾರು ವಹಿವಾಟು ಸ್ಥಗಿತಗೊಂಡು ಕುಸಿದ ಆರ್ಥಿಕ ಮಟ್ಟ, ಭಯದ ನೆರಳಲ್ಲಿ ಜೀವ ಕೈಯಲ್ಲಿ ಹಿಡಿದು ಬದುಕಬೇಕಾದ ಸ್ಥಿತಿ, ದಿನನಿತ್ಯದ ಎರಡು ಹೊತ್ತಿನ ಊಟಕ್ಕೂ ದಿನದ ದುಡಿಮೆಯನ್ನೇ ಅವಲಂಬಿಸಿದವರ ಪರದಾಟ, ಭವಿಷ್ಯದ ಅನಿಶ್ಚಿತತೆ ಹೀಗೆ ಅನೇಕ ಆತಂಕದ ಕ್ಷಣಗಳನ್ನು ಎದುರಿಸಬೇಕಾಯಿತು.

     ಕೊರೋನಾವನ್ನು ವೈದ್ಯಕೀಯ ಹಿನ್ನೆಲೆಯಲ್ಲಿ ವಿಶ್ಲೇಷಿಸಿ ನೋಡುವುದು ನನ್ನ ಈ ಲೇಖನದ ಉದ್ದೇಶವಲ್ಲ ಮತ್ತು ಅದು ನನ್ನ ತಿಳುವಳಿಕೆಯ ಮಟ್ಟವನ್ನು ಮೀರಿದ ಸಂಗತಿ ಕೂಡ ಹೌದು. ನನ್ನ ತಿಳುವಳಿಕೆಯ ಇತಿ ಮಿತಿಯನ್ನು ಎಚ್ಚರದ ಪ್ರಜ್ಞೆಯಲ್ಲಿಟ್ಟುಕೊಂಡು ನಾನು ಕೊರೋನಾ ವೈರಾಣು ಸೃಷ್ಟಿಸಿದ ಈ ಸನ್ನಿವೇಶ ಬದುಕಿಗೆ ಅದು ಹೇಗೆ ಧನಾತ್ಮಕವಾಗಿ ಪ್ರಯೋಜನವಾಯಿತು ಎನ್ನುವುದನ್ನು ಈ ಮುಂದೆ ಹೇಳಲು ಬಯಸುತ್ತೇನೆ.

      ಕೊರೋನಾ ಎನ್ನುವ ಭೀಕರ ವೈರಾಣು ಕಾಣಿಸಿಕೊಂಡಿದ್ದೆ ತಡ ಜನರೆಲ್ಲ ತಮ್ಮ ತಮ್ಮ ಮನೆಗಳೆನ್ನುವ ನಾಲ್ಕು ಗೋಡೆಗಳ ನಡುವೆ ಬಂಧಿತರಾದರು. ರಸ್ತೆಗಳೆಲ್ಲ ಜನಸಂಚಾರವಿಲ್ಲದೆ ಬಿಕೋ ಎನ್ನತೊಡಗಿದವು. ರಸ್ತೆಗಿಳಿದರೆ ಸಾವು ಎನ್ನುವ ಹೆಮ್ಮಾರಿ ತನ್ನ ಕಬಂದ ಬಾಹುಗಳಿಂದ ನಮ್ಮನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದೆನ್ನುವ ಭೀತಿ ಅಬಾಲ ವೃದ್ಧರಾದಿಯಾಗಿ ಎಲ್ಲ ವಯೋಮಾನದವರನ್ನು ಕಾಡಲಾರಂಭಿಸಿತು. ಬಡವ-ಶ್ರೀಮಂತ, ಸ್ತ್ರೀ-ಪುರುಷ, ಮೇಲು-ಕೀಳು ಎನ್ನುವ ಯಾವ ಬೇಧಗಳಿಲ್ಲದೆ ಪ್ರತಿಯೊಬ್ಬರೂ ಕೊರೋನಾ ವೈರಾಣುವಿನ ಭೀತಿಗೆ ಒಳಗಾದರು. ಹೀಗೆ ಜನರೆಲ್ಲ ತಮ್ಮ ತಮ್ಮ ಮನೆಗಳಲ್ಲಿ ಬಂಧಿತರಾದದ್ದು ಒಂದರ್ಥದಲ್ಲಿ ಕುಟುಂಬದ ಸದಸ್ಯರ ನಡುವಣ ಪರಸ್ಪರ ಸಂಬಂಧ ಹೊಸ ಅರ್ಥದಲ್ಲಿ ಚಿಗುರೊಡೆಯಲು ಕಾರಣವಾಯಿತು. ಒಂದೇ ಸೂರಿನಡಿ ವಾಸಿಸುತ್ತಿದ್ದರೂ ಮಾನಸಿಕವಾಗಿ ಪರಸ್ಪರ ಅಪರಿಚಿತರಂತೆ ಬದುಕುತ್ತಿದ್ದವರಿಗೆ ಈ ಗೃಹಬಂಧನ ಸಂಬಂಧಗಳನ್ನು ಹೊಸ ಬೆಳಕಿನಡಿ ವಿಶ್ಲೇಷಿಸಿ ನೋಡಲು ಅನುವು ಮಾಡಿಕೊಟ್ಟಿತು. ಅಪ್ಪ, ಅಮ್ಮ, ಗಂಡ, ಹೆಂಡತಿ, ಮಕ್ಕಳು, ಅಜ್ಜ, ಅಜ್ಜಿ ಈ ಎಲ್ಲ ಸಂಬಂಧಗಳು ಪರಸ್ಪರ ಅರ್ಥಮಾಡಿಕೊಂಡು ಮತ್ತಷ್ಟು ಗಾಢವಾಗಲು ಸಾಧ್ಯವಾಯಿತು. ಎಲ್ಲರೂ ಜೊತೆಯಾಗಿ ಆಡುವುದು, ನಲಿಯುವುದು, ಊಟ ಮಾಡುವುದು, ಕಥೆ ಹೇಳುವುದು ಹೀಗೆ ಕುಟುಂಬದ ಸದಸ್ಯರೆಲ್ಲ ಜೊತೆಯಾಗಿ ಒಂದು ಗುಣಾತ್ಮಕ ಸಮಯವನ್ನು ಕಳೆಯಲು ಈ ಸನ್ನಿವೇಶ ಅನುಕೂಲ ಮಾಡಿಕೊಟ್ಟಿತು. ಆಧುನಿಕತೆಯ ಅನ್ವೇಷಣೆಯಾದ ತಂತ್ರಜ್ಞಾನವು ಮನುಷ್ಯ ಮನುಷ್ಯರ ಮಧ್ಯೆ ಕಂದಕ ಸೃಷ್ಟಿಸಿ ಪರಸ್ಪರ ಅಪರಿಚಿತರಂತೆ ಬದುಕುತ್ತಿರುವ ಈ ಸಂಕ್ರಮಣದ ಕಾಲದಲ್ಲಿ ಮನುಷ್ಯ ಸಂಬಂಧವನ್ನು ಹೊಸ ಪರಿವೇಷದಲ್ಲಿ ನೋಡುವಂತಾಯಿತು.   

     ನಾವೆಲ್ಲರೂ ಏಕಾಂತಕ್ಕಿಂತ ಲೋಕಾಂತ ಪ್ರಿಯರು. ಎಷ್ಟೇ ಲೋಕಾಂತ ಪ್ರಿಯರಾಗಿದ್ದರೂ ಪ್ರತಿಯೊಬ್ಬ ಮನುಷ್ಯನಲ್ಲಿ ಅವನದೆ ಆದ ಏಕಾಂತದ ಪ್ರದೇಶವೊಂದಿರುತ್ತದೆ ಎನ್ನುತಾರೆ ಕಥೆಗಾರ ಕೆ.ಸತ್ಯನಾರಾಯಣ. ಹೀಗಾಗಿ ಮನುಷ್ಯ ಆಗಾಗ ತನ್ನೊಳಗಿನ ಆ ಏಕಾಂತದ ಪ್ರದೇಶವನ್ನು ಪ್ರವೇಶಿಸಿ ತನ್ನೊಂದಿಗೆ ತಾನು ಮಾತನಾಡುತ್ತಿರಬೇಕು. ಒಂದರ್ಥದಲ್ಲಿ ಅದನ್ನು ಆತ್ಮಾವಲೋಕನ ಇಲ್ಲವೇ ಆತ್ಮ ವಿಮರ್ಶೆ ಎಂದೂ ಕರೆಯುವುದುಂಟು. ಹೀಗೆ ಮನುಷ್ಯ ಏಕಾಂತದಲ್ಲಿದ್ದಾಗಲೇ ಮಾತ್ರ ತನ್ನೊಂದಿಗೆ ತಾನು ಮಾತನಾಡಿಕೊಳ್ಳಲು ಸಾಧ್ಯವೆಂದೂ ಹಾಗೂ ತನ್ನೊಂದಿಗೆ ತಾನು ಮಾತನಾಡಿಕೊಳ್ಳುವಾಗ ಮಾತ್ರ ಮನುಷ್ಯ ಸತ್ಯ ನುಡಿಯುವನೆಂದೂ ಅನೇಕ ಮನೋವೈಜ್ಞಾನಿಕ ಸಂಶೋಧನೆಗಳು ರುಜುವಾತು ಪಡಿಸಿವೆ. ಇವತ್ತಿನ ಈ ಧಾವಂತದ ಬದುಕಿನಲ್ಲಿ ಮನುಷ್ಯನಿಗೆ ಏಕಾಂತಕ್ಕೆ ಅವಕಾಶವೇ ಇಲ್ಲದಂತಾಗಿದೆ. ಪ್ರತಿಕ್ಷಣ, ಪ್ರತಿಸಂದರ್ಭವನ್ನು ಅದೊಂದು ಸ್ಪರ್ಧೆ ಎನ್ನುವಂತೆ ಮನುಷ್ಯ ಬದುಕಬೇಕಾಗಿದೆ. ಅಸ್ತಿತ್ವಕ್ಕಾಗಿ ಹೋರಾಟದ ಈ ಬದುಕಿನಲ್ಲಿ ಬಲಶಾಲಿಯಾದವನು ಮಾತ್ರ ಬದುಕುಳಿಯುವ ಎನ್ನುವ ನಿಯಮ ಚಾಲ್ತಿಯಲ್ಲಿರುವ ಈ ಸಮಾಜದಲ್ಲಿ ಬಹಿರಂಗವೇ ಸತ್ಯವಾಗಿರುವಾಗ ಇನ್ನು ಅಂತರಂಗದ ಬದುಕಿಗೆ ಗಮನ ಕೊಡುವಷ್ಟು ವ್ಯವಧಾನವಾಗಲಿ, ಸಮಯ ಮತ್ತು ಸಂಯಮವಾಗಲಿ ಮನುಷ್ಯನಿಗೆಲ್ಲಿದೆ?. ಇದನ್ನು ಅರಿತೆ ಪ್ರಕೃತಿ ಕೊರೋನಾದ ಮೂಲಕ ಮನುಷ್ಯನಿಗೆ ಏಕಾಂತಕ್ಕೆ ಅವಕಾಶ ಕಲ್ಪಿಸಿ ಅವನೊಮ್ಮೆ ತನ್ನ ಅಂತರಂಗದ ಒಳಹೊಕ್ಕು ತನ್ನೊಂದಿಗೆ ತಾನು ಮಾತನಾಡಿಕೊಳ್ಳಲು ಉತ್ತಮ ಸಂದರ್ಭವನ್ನು ಒದಗಿಸಿತು. ಇನ್ನೊಂದು ಸಂತಸದ ಸಂಗತಿ ಎಂದರೆ ಹೀಗೆ ಒದಗಿದ ಏಕಾಂತ ಮನುಷ್ಯ ತನ್ನೊಳಗೆ ಅಡಗಿ ಕುಳಿತಿದ್ದ ಅನೇಕ ಉತ್ತಮ ಹವ್ಯಾಸಗಳತ್ತ ಮುಖ ಮಾಡಲು ಸೂಕ್ತ ಅವಕಾಶವನ್ನೊದಗಿಸಿತು. ತಮ್ಮ ಏಕಾಂತದ ಈ ಘಳಿಗೆಯಲ್ಲಿ ಅನೇಕರು ಪುಸ್ತಕಗಳನ್ನೊದಿದರು, ಸಂಗೀತ ಆಲಿಸಿದರು, ಚಿತ್ರ ಬಿಡಿಸಿದರು, ಸಿನಿಮಾ ನೋಡಿದರು ಹೀಗೆ ಸೃಜನಶೀಲ ಕ್ರಿಯೆಯಲ್ಲಿ ತೊಡಗಿಸಿಕೊಂಡು ಧನ್ಯತೆ ಅನುಭವಿಸಿದರು. ಕಪಾಟಿನಲ್ಲಿದ್ದ ಪುಸ್ತಕಗಳು ಧೂಳು ಕೊಡವಿಕೊಂಡು ಓದುಗರ ಕೈಸೇರಿದವು, ಕುವೆಂಪು, ಕಾರಂತ, ಚಿತ್ತಾಲ, ಭೈರಪ್ಪ ಆದಿಯಾಗಿ ಕನ್ನಡದ ಅನೇಕ ಮಹತ್ವದ ಲೇಖಕರು ಓದುಗರ ಮರುಓದಿಗೆ ಒಳಗಾದರು, ಪುಸ್ತಕಗಳ ಓದು ಹೊಸ ಹೊಸ ಚಿಂತನೆಗಳಿಗೆ ಕಾರಣವಾಯಿತು ಆ ಮೂಲಕ ಬದುಕನ್ನು ಹೊಸ ಅರ್ಥದಲ್ಲಿ ಗ್ರಹಿಸಲು ಸಾಧ್ಯವಾಯಿತು. ಜನಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ, ಚಿಂತಕರು, ರಾಜಕಾರಣಿಗಳು ಪ್ರತಿಯೊಬ್ಬರು ಈ ಏಕಾಂತದ ಬಿಡುವಿನ ವೇಳೆಯಲ್ಲಿ ತಮಗೆ ಪುಸ್ತಕಗಳು ಉತ್ತಮ ಸಾಂಗತ್ಯ ಒದಗಿಸಿದವು ಎಂದಿರುವರು. ಅನೇಕ ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರನ್ನು ಓದುಗರು ಸಂಪರ್ಕಿಸಿ ಪುಸ್ತಕಗಳನ್ನು ಪೂರೈಸುವಂತೆ ಬೇಡಿಕೆ ಇಟ್ಟರು. ಕರ್ನಾಟಕದ ಪ್ರಮುಖ ಪುಸ್ತಕ ಪ್ರಕಾಶಕರಾದ ನವಕರ್ನಾಟಕ, ಛಂದ, ಅಂಕಿತ, ಸಪ್ನ, ಅಭಿನವ ಓದುಗರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಲಾಕ್‍ಡೌನ್ ತೆರವಾದ ನಂತರ ಪುಸ್ತಕಗಳನ್ನು ಪೂರೈಸುವ ಭರವಸೆ ನೀಡಿದರು. ಛಂದ ಪುಸ್ತಕ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಪ್ರಕಟಿತ ಪುಸ್ತಕಗಳನ್ನು ಡಿಜಿಟಿಲೀಕರಣಗೊಳಿಸಿ ಪ್ರತಿಶತ 50 ರ ರಿಯಾಯಿತಿ ದರದಲ್ಲಿ ಓದಲು ಅವಕಾಶ ಮಾಡಿಕೊಟ್ಟಿತು. ಒಟ್ಟಿನಲ್ಲಿ ಜನರಲ್ಲಿ ಇದೇ ಓದಿನ ಅಭಿರುಚಿ ಭವಿಷ್ಯದಲ್ಲೂ ಮುಂದುವರೆದಲ್ಲಿ ಪುಸ್ತಕ ಪ್ರಕಾಶಕರಿಗೆ ಅದೊಂದು ವರದಾನವಾಗಿ ಪರಿಣಮಿಸಬಹುದು.

      ಕೊರೋನಾ ಭೀತಿಯಿಂದ ಸಾಮಾನ್ಯವಾಗಿ ಬಹುತೇಕ ಖಾಸಗಿ ಆಸ್ಪತ್ರೆಗಳು ಬಾಗಿಲು ಹಾಕಿದವು ಮತ್ತು ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ರೋಗಿಗಳಿಗಾಗಿ ಎಂದು ಪರಿವರ್ತಿಸಲಾಯಿತು. ಕೋವಿಡ್ ಹೊರತುಪಡಿಸಿದ ಇತರ ಸಾಮಾನ್ಯ ಕಾಯಿಲೆಗಳಿಗೆ ವೈದ್ಯಕೀಯ ಚಿಕಿತ್ಸೆ ದೊರೆಯುವುದು ಅಸಾಧ್ಯವಾಯಿತು. ಆರೋಗ್ಯಕ್ಕೆ ಮಹತ್ವಕೊಡುವ ಮತ್ತು ಸಣ್ಣಪುಟ್ಟ ಕಾಯಿಲೆಗಳಿಗೂ ಆಸ್ಪತ್ರೆಗಳ ಬಾಗಿಲು ತಟ್ಟುವ ನಾವು ಈ ಗೃಹಬಂಧನದ ಸಂದರ್ಭ ಆಸ್ಪತ್ರೆಗಳ ವೈದ್ಯಕೀಯ ನೆರವಿಲ್ಲದೆ ಸಣ್ಣಪುಟ್ಟ ಕಾಯಿಲೆಗಳಿಗೆ ಗೃಹ ಔಷಧಿಯನ್ನೇ ಅವಲಂಬಿಸಬೇಕಾಯಿತು. ಆಶ್ಚರ್ಯವೆಂದರೆ ಈ ಸಂದರ್ಭ ಬೇರೆ ಯಾವ ರೋಗರುಜಿನಗಳು ನಮ್ಮನ್ನು ಕಾಡಲಿಲ್ಲ ಕಂಗೆಡಿಸಲಿಲ್ಲ. ಸಾರ್ವಜನಿಕರ ಆರೋಗ್ಯದಲ್ಲಿ ಗಮನಾರ್ಹವಾದ ಪ್ರಗತಿ ಕಂಡುಬಂದಿತು. ಕುಟುಂಬ ಪ್ರೀತಿ, ಹಿತಮಿತವಾದ ಆಹಾರ, ಪುಸ್ತಕಗಳ ಓದು, ಸದಭಿರುಚಿಯ ಸಿನಿಮಾಗಳ ವೀಕ್ಷಣೆ ಒಟ್ಟಿನಲ್ಲಿ ಇಂಥ ದೈನಂದಿನ ಚಟುವಟಿಕೆಗಳ ಮೂಲಕ ನಾವೆಲ್ಲ ಆರೋಗ್ಯವನ್ನು ತುಂಬ ಉತ್ತಮವಾಗಿಯೇ  ಕಾಪಾಡಿಕೊಂಡು ಬಂದೆವು. ಇದಕ್ಕೆಲ್ಲ ಕಾರಣ ಜಂಕ್ ಫುಡ್‍ಗಳಿಂದ ದೂರವಿದ್ದುದು, ದೈಹಿಕ ಶ್ರಮಕ್ಕೆ ಒತ್ತು ನೀಡಿದ್ದು, ಹಿತಮಿತವಾದ ಆಹಾರ ಸೇವನೆ, ಮಾನಸಿಕ ಒತ್ತಡದಿಂದ ದೂರವಿದ್ದುದ್ದು ಕೂಡ ಮುಖ್ಯ ಸಂಗತಿಗಳು. ವಾಹನಗಳು ರಸ್ತೆಗಿಳಿಯದೇ ಇದ್ದದ್ದು, ಕಡಿಮೆ ಜನಸಂಚಾರ, ಕಾರ್ಖಾನೆಗಳ ಮಾಲಿನ್ಯ ಕಡಿಮೆಯಾದದ್ದು ಅಪರೋಕ್ಷವಾಗಿ ಪರಿಸರದ ನೈರ್ಮಲ್ಯಕ್ಕೆ ಕಾರಣಗಳಾದವು. ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಅದೆಷ್ಟೋ ಕುಟುಂಬಗಳು ಈ ಸಂದರ್ಭ ನಗರಗಳನ್ನು ತೊರೆದು ಹಳ್ಳಿಗಳತ್ತ ಮುಖಮಾಡಿದರು. ಗಾಂಧೀಜಿ ಅವರ ಗ್ರಾಮೀಣ ಭಾರತದ ಪರಿಕಲ್ಪನೆ ಈ ಮೂಲಕವಾದರೂ ಪ್ರಯೋಜನಕ್ಕೆ ಬಂದದ್ದು ಅದೊಂದು ಮಹತ್ವದ ಸಾಮಾಜಿಕ ಪಲ್ಲಟ. 

ಗಾಂಧಿ ನೆನಪಾದರು


ಗಾಂಧೀಜಿ ಅವರ ವ್ಯಕ್ತಿತ್ವ ಮತ್ತು ವಿಚಾರಗಳು ಎಲ್ಲ ಕಾಲಕ್ಕೂ ಪ್ರಸ್ತುತ ಏಕೆ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಂಡ ಸಂದರ್ಭವಿದು. ಗಾಂಧಿಯ ವ್ಯಕ್ತಿತ್ವವೇ ಹೀಗೆ ಸುಖದ ಸಂದರ್ಭದಲ್ಲೆಂದೂ ಅವರು ನೆನಪಾಗುವುದಿಲ್ಲ. ಸಂಕಟದ ಸಂದಿಗ್ಧ ಸನ್ನಿವೇಶದಲ್ಲೇ ನಮಗೆ ಗಾಂಧಿ ಮತ್ತೆ ಮತ್ತೆ ನೆನಪಾಗುತ್ತಾರೆ. ಕೊರೋನ ವೈರಾಣು ಸೃಷ್ಟಿಸಿದ ಈ ಆತಂಕಕಾರಿ ವಾತಾವರಣದಲ್ಲಿ ಸನ್ನಿವೇಶವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಲು ನಮಗೆ ನೆರವಾದದ್ದು ಇದೇ ಗಾಂಧೀಜಿಯ ವಿಚಾರಧಾರೆಗಳು ಎನ್ನುವುದು ಮಹತ್ವದ ಸಂಗತಿ. ಹಿತಮಿತವಾದ ಆಹಾರ ಸೇವನೆ, ದೈಹಿಕ ಪರಿಶ್ರಮ, ಸರಳ ಬದುಕು, ಆಧುನಿಕತೆಯ ಅನ್ವೇಷಣೆಯಾದ ಐಷಾರಾಮಿ ಬದುಕಿನಿಂದ ಕಾಯ್ದುಕೊಂಡ ಅಂತರ, ಏಕಾಂತದ ಪ್ರವೇಶ ಗಾಂಧೀಜಿಯ ಈ ಗುಣಗಳನ್ನೆಲ್ಲ ನಾವು ಬಲವಂತವಾಗಿಯಾದರೂ ಈ ಸಂದರ್ಭ ಮೈಗೂಡಿಸಿಕೊಳ್ಳಬೇಕಾಯಿತು. ಏಕೆಂದರೆ ಅದು ನಮಗೆ ಬದುಕು ಮತ್ತು ಸಾವು ಈ ಎರಡರಲ್ಲಿ ಒಂದನ್ನು ಆಯ್ದುಕೊಳ್ಳುವ ಅನಿವಾರ್ಯತೆಯಾಗಿತ್ತು. ಕೊನೆಗೂ ನಾವು ಆಯ್ದುಕೊಂಡಿದ್ದು ಗಾಂಧಿಯನ್ನು ಅಂದರೆ ಬದುಕನ್ನು. ಆದ್ದರಿಂದಲೇ ಗಾಂಧಿಯೆಂದರೆ  ಕೇವಲ ಮನುಷ್ಯನಲ್ಲ ಅವರೊಂದು ತತ್ವ, ಸಿದ್ಧಾಂತ, ಧರ್ಮ ಇದೆಲ್ಲವನ್ನೂ ಮೀರಿದ ಒಂದು ಜೀವಸೆಲೆ ಅವರು. ವಿಪರ್ಯಾಸ ನೋಡಿ ಯಾವ ವ್ಯಕ್ತಿಯನ್ನು ಅತ್ಯಂತ ಸರಳೀಕೃತಗೊಳಿಸಿ ನಾವು ನೋಡುತ್ತೇವೆಯೋ ಅದೇ ವ್ಯಕ್ತಿಯ ವಿಚಾರಧಾರೆಗಳನ್ನು ನಾವು ಈ ಆತಂಕದ ಕ್ಷಣಗಳನ್ನು ಎದುರಿಸಲು ಮೈಗೂಡಿಸಿಕೊಳ್ಳಬೇಕಾಯಿತು.

    ಕೊರೋನಾ ವೈರಾಣು ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವುದು ಅದೊಂದು ವಾಸ್ತವ ಸತ್ಯ. ಈ ವಾಸ್ತವದೊಂದಿಗೆ ಎಚ್ಚರಿಕೆಯಿಂದ ಹೆಜ್ಜೆಹಾಕಬೇಕಾಗಿದೆ. ಈ ಸಂದರ್ಭ ನಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಂಡು ಬದುಕನ್ನು ಮತ್ತು ಸುತ್ತಲಿನ ಸಮಾಜವನ್ನು ಹೊಸ ಅರ್ಥದಲ್ಲಿ ಗ್ರಹಿಸಲು ತೊಡಗಿದ್ದೇವೆ. ಪ್ರಕೃತಿಯೊಂದಿಗೆ ಹೇಗೆ ಸಮರಸದಿಂದ ಬದುಕಬೇಕೆಂಬುದು ಮನುಷ್ಯನಿಗೆ ಅರ್ಥವಾಗಿದೆ. ಮನುಷ್ಯನಿಗೆ ಪ್ರಕೃತಿ ಅನಿವಾರ್ಯವೇ ವಿನ: ಪ್ರಕೃತಿಗೆ ಮನುಷ್ಯ ಅನಿವಾರ್ಯವಲ್ಲ ಎನ್ನುವ ಸತ್ಯ ಮನದಟ್ಟಾಗಿದೆ. ಒಂದೊಮ್ಮೆ ಪ್ರಕೃತಿಯ ಮೇಲೆ ಇದೇ ಅಟ್ಟಹಾಸ ಮುಂದುವರೆದಲ್ಲಿ ಭವಿಷ್ಯದಲ್ಲಿ ಬದುಕು ಮತ್ತಷ್ಟು ಆತಂಕದ ಕ್ಷಣಗಳನ್ನು ಎದುರಿಸಬೇಕಾದಿತು ಎನ್ನುವ ಮುನ್ನೆಚ್ಚರಿಕೆಯೂ ಇದಾಗಿದೆ. ಒಟ್ಟಾರೆ ಪ್ರಕೃತಿಯು ನಮ್ಮ ಭವಿಷ್ಯದ ಬದುಕಿಗಾಗಿ ವರ್ತಮಾನದಲ್ಲಿ ಅತಿ ಮಹತ್ವದ ಪಾಠವನ್ನು ಕಲಿಸಿದೆ. ಇದೇ ಸಂದರ್ಭ ಕೊರೋನಾ ಅನೇಕ ಸತ್ಯಗಳ ಮೇಲೆ ಬೆಳಕು ಚೆಲ್ಲಿತು. ಒಂದೆಡೆ ಬಡವರು ಮತ್ತು ವಲಸಿಗರು ದುಡ್ಡಿಲ್ಲದೆ ತಮ್ಮ ತಮ್ಮ ಊರುಗಳಿಗೆ ತೆರಳಲು ಸಾವಿರಾರು ಕಿಲೋಮಿಟರ್ ದಾರಿಯನ್ನು ನಡೆದುಕೊಂಡು ಕ್ರಮಿಸಬೇಕಾಯಿತು. ಇನ್ನೊಂದೆಡೆ ಇಂದೂರಿನ ಉದ್ಯಮಿಯೊಬ್ಬರು ತಮ್ಮ ಮಗಳು, ಇಬ್ಬರು ಮೊಮ್ಮಕ್ಕಳು ಮತ್ತು ಒಬ್ಬ ಕೆಲಸದಾಯಕೆಯನ್ನು ದೆಹಲಿಗೆ ಕಳುಹಿಸಿಕೊಡಲು 20 ಲಕ್ಷ ರೂಪಾಯಿಗಳನ್ನು ವೆಚ್ಚಮಾಡಿ ಖಾಸಗಿ ವಿಮಾನವನ್ನು ಬಾಡಿಗೆಗೆ ಪಡೆದರು. ವ್ಯಾಪಾರಿಗಳು ಇದೇ ತಕ್ಕ ಸಮಯವೆಂದು ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿ ಹಣ ಮಾಡಿಕೊಂಡರು. ದೈಹಿಕ ತೊಂದರೆಯಿಂದ ಬಳಲುತ್ತಿದ್ದ ತನ್ನ ತಂದೆಯನ್ನು ಹುಡುಗಿಯೊಬ್ಬಳು ಸೈಕಲ್ ಮೇಲೆ ಕರೆದೊಯ್ಯುತ್ತಿರುವಾಗ ಅದೆಷ್ಟು ಜನ ಸಮಸ್ಯೆಗೆ ಸ್ಪಂದಿಸಿದರು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇವು ನಾವು ಬದುಕುತ್ತಿರುವ ಸಮಾಜದಲ್ಲಿನ ವೈರುಧ್ಯಗಳು. ಇಂಥ ಅನೇಕ ವೈರುಧ್ಯಗಳನ್ನು ಕೊರೋನಾ ತಂದೊಡ್ಡಿದ ಆತಂಕದ ವಾತಾವರಣದಲ್ಲಿ ನಾವೆಲ್ಲ ನೋಡುವಂತಾಯಿತು.

      ಯಶವಂತ ಚಿತ್ತಾಲರ ಕಥೆಯಲ್ಲಿ ಪಾತ್ರವೊಂದರ ಸಂಭಾಷಣೆ ಹೀಗಿದೆ ‘ಸೃಷ್ಟಿಯೊಳಗಿನ ಪ್ರತಿಯೊಂದು ಜೀವಂತ ಸಂಗತಿ ಉಳಿದೆಲ್ಲ ಜೀವಂತ ಸಂಗತಿಗಳೊಡನೆ ನಿಶ್ಯಬ್ದ ಮೌನದಲ್ಲಿ ಸಂವಾದ ನಡೆಸಿರುವಂಥದ್ದು-ಹುಟ್ಟುವಂತೆ, ಬೆಳೆಯುವಂತೆ, ಆರೋಗ್ಯ ಕಾಪಾಡಿಕೊಳ್ಳುವಂತೆ ಒಂದು ಇನ್ನೊಂದರ ಜೀವನೋತ್ಸಾಹವನ್ನು ಎತ್ತಿ ಹಿಡಿಯುವ, ಹುರಿದುಂಬಿಸುವ ಸತತ ಕ್ರಿಯೆಯಲ್ಲಿ ತೊಡಗಿರುವಂಥದ್ದು ಎಂಬ ಕಲ್ಪನೆಗೆ ಜೀವ ಝಲ್ಲೆನಿಸಿ ಮೈನವಿರಿಗೊಳಗಾಯಿತು. ಮನುಷ್ಯನು ಮಾತ್ರ ಈ ಕ್ರಿಯೆಗೆ ಹೇಗೆ ಹೊರತಾದನೋ ಎಂದು ದಿಗಿಲುಗೊಂಡೆ’. ಭವಿಷ್ಯದಲ್ಲಿ ಕೊರೋನಾದಂಥ ಮಾರಣಾಂತಿಕ ವೈರಾಣುಗಳು ಹೆಚ್ಚು ಹೆಚ್ಚು ಕಾಣಿಸಿಕೊಳ್ಳಲಿವೆ ಎನ್ನುವ ಆತಂಕ ತಂದೊಡ್ಡಿರುವ ಈ ಸಂದಿಗ್ಧ ಸನ್ನಿವೇಶದಲ್ಲಿ ಒಂದು ನೆಮ್ಮದಿಯ ಬದುಕಿಗಾಗಿ ಮನುಷ್ಯ ಚಿತ್ತಾಲರು ಹೇಳಿದಂತೆ ಪ್ರಕೃತಿಯ ಉದಾತ್ತ ಗುಣಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ