Monday, June 4, 2012

ಬರವಣಿಗೆಗೆ ವಾಸ್ತವಿಕತೆಯ ನೆಲೆಗಟ್ಟಿರಲಿ

      ಇತ್ತೀಚಿಗೆ ಅಪ್ರಕಟಿತ ಕವನ ಸಂಕಲನವನ್ನು ಓದಿದೆ. ಅದು ಯುವ   ಬರಹಗಾರರೊಬ್ಬರು ಬರೆದ ಕವನ ಸಂಕಲನ. ಸ್ನಾತಕೋತ್ತರ ವಿದ್ಯಾರ್ಥಿಯಾದ ಈ ಯುವ ಕವಿಗೆ ಕವಿತೆ ಅಭಿವ್ಯಕ್ತಿ ಮಾಧ್ಯಮವಾಗಿ ಹೆಚ್ಚು ಆಕರ್ಷಿಸಿದೆ. ಜೊತೆಗೆ ಬರೆದದ್ದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಅದನ್ನು ಅನೇಕರು ಓದುವಂತಾಗಬೇಕೆನ್ನುವ ಹಂಬಲ ಅವರದು. ಈಗೀಗ ಬರವಣಿಗೆ ಎನ್ನುವುದು ನಮ್ಮ ಯುವ ಪೀಳಿಗೆಗೆ ಅಭಿವ್ಯಕ್ತಿ ಮಾಧ್ಯಮವಾಗಿ ಹೆಚ್ಚು ಹೆಚ್ಚು ಆಕರ್ಷಿಸುತ್ತಿದೆ. ಕಥೆ, ಕವನ, ಲಘು ಪ್ರಭಂದಗಳ ಮೂಲಕ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸುತ್ತಿರುವ ಯುವ ಬರಹಗಾರರು ಸಾಧ್ಯವಾದಷ್ಟು ಕಡಿಮೆ ಅವಧಿಯಲ್ಲಿ ಸಾಕಷ್ಟು ಬರೆದು ಜನಪ್ರಿಯರಾಗಬೇಕೆನ್ನುವ ಹಂಬಲ ಉಳ್ಳವರು. ಅಂಥದ್ದೊಂದು ಮನೋಭಾವದ ನಡುವೆ ಸಾಹಿತ್ಯ ಕೃಷಿಗೆ ಅಗತ್ಯವಾದ ಸಾಕಷ್ಟು ಓದು ನಿರ್ಲಕ್ಷಕ್ಕೆ ಒಳಗಾಗುತ್ತಿರುವುದು ವಿಪರ್ಯಾಸದ ಸಂಗತಿ.
       ಓದಿನ ಕೊರತೆ ಮತ್ತು ಸಾಕಷ್ಟು ಸಿದ್ಧತೆ ಇಲ್ಲದ ಪರಿಣಾಮ ಅನೇಕ ಯುವ ಲೇಖಕರ ಬರವಣಿಗೆ ವಾಸ್ತವಿಕತೆಯಿಂದ ದೂರವಾಗಿ ಅಲ್ಲಿ ತಪ್ಪುಗಳು ಢಾಳು ಢಾಳಾಗಿ ಕಣ್ಣಿಗೆ ರಾಚುತ್ತಿವೆ. ಕೆಲವೊಮ್ಮೆ ತಪ್ಪುಗಳ ಪರಿಣಾಮ ಈ ಬರಹಗಾರರ ಬರವಣಿಗೆ ಅಪಹಾಸ್ಯಕ್ಕೆ ಒಳಗಾಗುವುದೂ ಉಂಟು. ಸಾಮಾನ್ಯ ಓದುಗರಿಂದ ತಪ್ಪಿಸಿಕೊಳ್ಳಬಹುದು ಆದರೆ ವಿಮರ್ಶೆಯ ಕಣ್ಣಿನಿಂದ ಓದುವ ಓದುಗರು ಬಹುಬೇಗ ಗುರುತಿಸಬಲ್ಲರು. ಸಾಹಿತ್ಯಕ್ಕೊಂದು ಹೊಸ ಆಯಾಮ ದೊರಕಿಸಿಕೊಡಬೇಕೆನ್ನುವ ಭರಾಟೆಯಲ್ಲಿ ಮುನ್ನುಗ್ಗುವ ಈ ಯುವ ಸಾಹಿತಿಗಳು ತಮ್ಮ ತಪ್ಪುಗಳಿಂದ ಸೃಜನಶೀಲ ಕ್ಷೇತ್ರವನ್ನು ವಿರೂಪಗೊಳಿಸುತ್ತಿರುವುದು ದುರಂತದ ವಿಚಾರ. 
     ನಾನು ಈ ಮೇಲೆ ಹೇಳಿದ ಕವಿ ಶ್ರೀ ಶ್ರೀನಿವಾಸ ಬಡಿಗೇರ ಸೂಕ್ಷ್ಮ ಸಂವೇದನೆಯುಳ್ಳ ಯುವ ಬರಹಗಾರ. ತಮ್ಮ ಅಪ್ರಕಟಿತ ಕವನ ಸಂಕಲನವನ್ನು ತಂದು ಕೊಟ್ಟು ಅಭಿಪ್ರಾಯ ತಿಳಿಸುವಂತೆ ಕೇಳಿದಾಗ ನಾನು ಸಂದಿಗ್ಧದಲ್ಲಿ ಬಿದ್ದೆ. ಏಕೆಂದರೆ ಹೊಗಳಿಕೆಯನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸುವ ನಮ್ಮ ಬರಹಗಾರರು  ಟೀಕೆಗಳನ್ನು ಮುಕ್ತ ಮನಸ್ಸಿನಿಂದ ತೆಗೆದುಕೊಳ್ಳಲಾರರು. ಅಂಥದ್ದೊಂದು ಅಳುಕಿನಿಂದಲೇ ಶ್ರೀ ಬಡಿಗೇರ ಅವರ ಕವನ ಸಂಕಲನದ ಕುರಿತು ನನ್ನ ಅಭಿಪ್ರಾಯ ಬರೆದು ತಿಳಿಸಿದೆ. ಅದು ಹೀಗಿದೆ, 
      "ಶ್ರೀ ಶ್ರೀನಿವಾಸ ಬಡಿಗೇರ ಅವರಲ್ಲಿ ಕವಿತೆ ಬರೆಯುವ ಹಂಬಲವಿದೆ, ಒಂದು ತುಡಿತವಿದೆ, ತೀವ್ರವಾದ ಸಂವೇದನೆ ಇದೆ. ಅದೆಲ್ಲಕ್ಕೂ ಮಿಗಿಲಾಗಿ ಅವರಲ್ಲಿ ಬರೆಯಬೇಕೆನ್ನುವ ಒಂದು ಪ್ರಾಮಾಣಿಕ ಪ್ರಯತ್ನವಿದೆ. ಆದರೆ ಈ ವಿಷಯವಾಗಿ ಅವರು ಇನ್ನಷ್ಟು ಪ್ರಯತ್ನಿಸಬೇಕಿದೆ. ಬರಹ ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ ಅರಳಿ ನಿಲ್ಲಬೇಕು. ಅದು ಬರಹಗಾರನ ಕಲ್ಪನೆಯಲ್ಲಿ ಮೂಡಿ ಬಂದರೂ ಇನ್ನಾರದೋ ಬದುಕಿಗೆ ಹತ್ತಿರವಾಗಿರಬೇಕು. ಅಂದಾಗ ಮಾತ್ರ ಅಂಥ  ಬರವಣಿಗೆ ಬಹಳ ಕಾಲ ಉಳಿಯ ಬಲ್ಲದು.
      ಶ್ರೀ ಬಡಿಗೇರ ಅವರ ಹೆಚ್ಚಿನ ಕವಿತೆಗಳಲ್ಲಿ ಪ್ರೀತಿ, ಪ್ರೇಮ, ವಿರಹಗಳೇ ಪ್ರಧಾನ ವಿಷಯಗಳಾಗಿ ಮೂಡಿ ಬಂದಿವೆ. ಅದು ಸಹಜ ಕೂಡಾ ಹೌದು. ಏಕೆಂದರೆ ಅವರೊಬ್ಬ ಯುವ ಕವಿ. ಆದರೆ ಈ ವಿಷಯಗಳೇ ಹೆಚ್ಚು ಹೆಚ್ಚು ಪ್ರಧಾನವಾಗುತ್ತ ಹೋಗಿ ಸಮಾಜದಲ್ಲಿ ನಾವು ಕಾಣುವ ಇನ್ನೂ ಅನೇಕ ವೈರುದ್ಯಗಳಿಗೆ ಈ ಯುವ ಕವಿ ಕುರುಡಾಗಬಾರದು. ಅಂಥದ್ದೊಂದು ಆತಂಕ ಅವರ ಕವಿತೆಗಳನ್ನು ಓದುವಾಗ ನನ್ನನ್ನು ಕಾಡಿದೆ.
     ಶ್ರೀಯುತರು ಇಂಗ್ಲಿಷ ಸಾಹಿತ್ಯವನ್ನು ಅಭ್ಯಸಿಸುತ್ತಿರುವುದರಿಂದ ಅವರ ಅನುಭವ ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಇದೆ. ಜೊತೆಗೆ ಕನ್ನಡ ಸಾಹಿತ್ಯವನ್ನು ಹೆಚ್ಚು ಹೆಚ್ಚು ಓದಿಕೊಂಡರೆ ಈ ಪೂರ್ವ ಮತ್ತು ಪಶ್ಚಿಮದ ಸಾಹಿತ್ಯ ಖಂಡಿತವಾಗಿ ಅವರ ಬರವಣಿಗೆಯನ್ನು ಇನ್ನಷ್ಟು ಪಕ್ವಗೊಳಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. 
       ಈ ಯುವ ಕವಿಯ ಯಾವ ಕವಿತೆ ಇಷ್ಟವಾಯಿತು ಎನ್ನುವ ಆತುರದ ನಿರ್ಣಯಕ್ಕೆ ನಾನು ಬರುವುದಿಲ್ಲ. ಒಂದು ಕವಿತೆ ಇಷ್ಟವಾಯಿತೆಂದರೆ ಉಳಿದವುಗಳು ಇಷ್ಟವಾಗಲಿಲ್ಲ ಎಂದರ್ಥವೆ? ಹಾಗಾದರೆ ಆ ಕವಿತೆಗಳಲ್ಲಿ ನುಸುಳಿದ ತಪ್ಪುಗಳು ಯಾವುವು? ಹೀಗೆ ನಿರ್ಧರಿಸುವುದು ತಪ್ಪು. ಆ ನಿರ್ಣಯವನ್ನು ಓದುಗರ ದೊಡ್ಡ ಸಮೂಹಕ್ಕೆ ಬಿಡುವುದು ಸರಿಯಾದ ನಿರ್ಧಾರ. 
       ಈ ಸಂದರ್ಭ ಒಂದು  ಮಾತು. ಅದನ್ನು ಸಲಹೆ ಎಂದು ಪರಿಗಣಿಸಿದರೂ ಅಡ್ಡಿಯಿಲ್ಲ. ಬರಹಗಾರನಿಗೆ ಯಾವತ್ತಿಗೂ ತನ್ನ ಬರವಣಿಗೆ ಕುರಿತು ಒಂದು ನಿರ್ಲಿಪ್ತತೆ ಇರಲಿ. ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಬೇಡ. ನಿರೀಕ್ಷೆಗಳು ಹುಸಿಯಾದಾಗ ಬರಹಗಾರನ ಆತ್ಮವಿಶ್ವಾಸ ಕುಸಿದು ಅದು ಆತನ ಬರವಣಿಗೆಯ ದಾರಿ ತಪ್ಪಿಸಬಹುದು. ಈ ಒಂದು ಎಚ್ಚರಿಕೆಯನ್ನು ಜೊತೆಯಲ್ಲಿಟ್ಟುಕೊಂಡು ಶ್ರೀ ಶ್ರೀನಿವಾಸ ಬಡಿಗೇರ ಅವರು ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರೆಸಲಿ.
ಶುಭಾಶಯಗಳೊಂದಿಗೆ,"

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment