Wednesday, June 6, 2012

ನಾನೇಕೆ ಓದುತ್ತೇನೆ?

      'ರೀಡಿಂಗ್ ಮೇಕ್ಸ್  ಮ್ಯಾನ್ ಪರ್ಫೆಕ್ಟ್' ಎಂದು ತತ್ವಜ್ಞಾನಿ  ಬೇಕನ್ ಹೇಳಿರುವನು. ಓದು ಒಂದು ಮಾನಸಿಕ ಕ್ರಿಯೆ. ಇದು ನಮ್ಮ ವ್ಯಕ್ತಿತ್ವ ರೂಪಿಸುವುದರ ಜೊತೆಗೆ ಭಾಷೆಯ ಬೆಳವಣಿಗೆಗೂ ಕಾರಣವಾಗುತ್ತದೆ. ಓದು ಒಂದು ಸುಸಂಸ್ಕೃತ ಚಟುವಟಿಕೆಯಾಗಿರುವುದರಿಂದ ಅದು ನಮ್ಮ ಬದುಕಿನ ಭಾಗವಾಗಬೇಕು. ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಒಂದಾಗಬೇಕು. ಆದ್ದರಿಂದ ಅದೊಂದು ಹವ್ಯಾಸವಾಗಿ ರೂಪಗೊಳ್ಳಬೇಕು. 
      ಓದು ಅದು ನನ್ನ ಪ್ರಕಾರ ಅದು ಮನೆಯ ಪರಿಸರದಲ್ಲೇ ಮೊಳಕೆಯೊಡೆದು ಬೆಳೆಯಬೇಕು. ಮಕ್ಕಳಲ್ಲಿ ಓದುವ ಹವ್ಯಾಸ ಒಡಮೂಡಿಸುವುದು ಪಾಲಕರ ಪ್ರಥಮ ಆದ್ಯತೆಗಳಲ್ಲೊಂದು. ಶಿಕ್ಷಣ ಬದುಕನ್ನು ರೂಪಿಸಬಹುದು. ಆದರೆ ವ್ಯಕ್ತಿತ್ವವನ್ನು ರೂಪಿಸುವುದು ಒಂದು ಉತ್ತಮ ಓದು ಮಾತ್ರ. ಬಾಲ್ಯದಲ್ಲಿ ದೊರೆಯುವ ಒಂದು ಹಸನಾದ ಓದು, ಓದಿಗೆ ಪ್ರಚೋದನೆ ನೀಡುವ ಮನೆಯ ಮತ್ತು ಶಾಲೆಯ ಪರಿಸರ ಓದುವ ಹವ್ಯಾಸ ಮೊಳಕೆಯೊಡೆದು ಮುಂದೆ ಅದು ಟಿಸಿಲೊಡೆದು ಬೆಳೆಯಲು ನೆರವಾಗುತ್ತದೆ. ಓದು ಗಂಭೀರ ಸಾಹಿತ್ಯದಿಂದಲೇ ಪ್ರಾರಂಭವಾಗಬೇಕೆನ್ನುವ ನಿಯಮವಿಲ್ಲ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಗುವಿಗೆ ಕಾರಂತರ ಕಾದಂಬರಿಯನ್ನೋ  ಇಲ್ಲವೇ ಡಿವಿಜಿ ಅವರ ಕಗ್ಗವನ್ನೋ ಕೊಟ್ಟು ಓದು ಎಂದೆನ್ನುವುದು ಅವನಲ್ಲಿ ಓದುವ ಹವ್ಯಾಸ ಬೆಳೆಯಲು ನೆರವಾಗುವುದಿಲ್ಲ.ಮಗುವಿನ ಆರಂಭದ ಓದು ಸರಳ ಪುಸ್ತಕಗಳಿಂದಲೇ ಪ್ರಾರಂಭವಾಗಲಿ. ಮಗುವಿಗೆ ಓದಿನ ರುಚಿ ಹತ್ತಲಿ. ಸರಳ ಓದಿನೊಂದಿಗೆ ಓದುವ ಹವ್ಯಾಸ ಮಗುವಿನಲ್ಲಿ ಮೊಳಕೆಯೊಡೆಯುವ ಆ ಕ್ಷಣ ಮನೆ ಮತ್ತು ಶಾಲೆಯ ಪರಿಸರ ಕೂಡಾ ಉತ್ತೇಜನ ನೀಡುವಂತಿರಲಿ.  ಒಟ್ಟಿನಲ್ಲಿ ಓದುವ ಹವ್ಯಾಸವನ್ನು ಕಟ್ಟಿಕೊಳ್ಳುವ ಪ್ರಕ್ರಿಯೆ ಅದು ಬಾಲ್ಯದಿಂದಲೇ ಪ್ರಾರಂಭವಾಗಲಿ. 
      ಓದು ನನಗೆ ಅತ್ಯಂತ ಖುಷಿ ಕೊಡುವ ಸಂಗತಿ. ಸಿನಿಮಾ ನೋಡುವ, ಕ್ರಿಕೆಟ್ ವೀಕ್ಷಿಸುವ, ಇಂಟರ್ ನೆಟ್ ನ ಒಳ  ಹೊಕ್ಕು ಕೂಡುವ, ಪುಸ್ತಕಗಳನ್ನು ಓದುವ, ಒಂದಿಷ್ಟು ಬರೆಯುವ ಈ ಎಲ್ಲ ಹವ್ಯಾಸಗಳಲ್ಲಿ ನನಗೆ ಅತ್ಯಂತ ಪ್ರಿಯವಾದದ್ದು ಅದು ಪುಸ್ತಕದ ಓದು ಮಾತ್ರ. ಏಕೆಂದರೆ ಓದು ನನ್ನ ಭಾಷೆಯನ್ನು ಸುಧಾರಿಸಿದೆ, ಒಂದಿಷ್ಟು ಬರೆಯುವ ಚೈತನ್ಯ ನೀಡಿದೆ, ಬದುಕಿನಲ್ಲಿ ಕೆಲವು ಬದಲಾವಣೆಗಳಿಗೆ ಕಾರಣವಾಗಿದೆ. ಆದ್ದರಿಂದ ಖುಷಿಯಿಂದಲೇ ಓದುವ ಪ್ರಕ್ರಿಯೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ. 
       ಓದುವ ವಿಚಾರಕ್ಕೆ ಬಂದರೆ ಇಂಥ ಲೇಖಕರ ಇಂಥ ಕೃತಿಗಳನ್ನೇ ಓದಬೇಕೆನ್ನುವ ನಿಯಮವನ್ನೇನೂ ಹೇರಿಕೊಂಡಿಲ್ಲ. ಪುಸ್ತಕದಲ್ಲಿನ ವಿಚಾರ ಸರಿ ಎಂದೆನಿಸಿದರೆ ಇಡೀ ಪುಸ್ತಕವನ್ನು ಒಂದೇ ಗುಕ್ಕಿಗೆ ಓದಿಕೊಂಡು ಹೋಗಿದ್ದೇನೆ. ಕೆಲವೊಮ್ಮೆ ಪ್ರಾರಂಭದ ಪುಟಗಳಲ್ಲೇ ಬೇಜಾರು ಇಣುಕಿದಾಗ ಅಷ್ಟಕ್ಕೇ ಬಿಟ್ಟ ಉದಾಹರಣೆಯೂ ಉಂಟು. ಓದಲೇ ಬೇಕೆನ್ನುವ ಹಟಕ್ಕೆ ಬಿದ್ದು ಓದಿದ ಕೃತಿಗಳೂ ಸಾಕಷ್ಟಿವೆ. ಅಂಥವುಗಳಲ್ಲಿ 'ಹೋರಾಟದ ಹಾದಿ' ಮತ್ತು 'ನನ್ನ ತೇಜಸ್ವಿ' ಪುಸ್ತಕಗಳು ಪ್ರಮುಖವಾದವುಗಳು. ಮನಸ್ಸು ಕ್ಷೋಭೆಗೊಂಡಾಗ, ಏಕತಾನತೆಯಿಂದ ಬೇಸರಿಸಿದಾಗ ಓದು ನನ್ನ ಕೈ ಹಿಡಿದು ಮರು ಚೈತನ್ಯ ನೀಡಿದೆ. ಅದೇ ರೀತಿ ಓದಿದ ಕೃತಿಯೊಂದು ಅನೇಕ ದಿನಗಳವರೆಗೆ ನನ್ನನ್ನು ಕಾಡಿದ್ದಿದೆ. ಅದಕ್ಕೊಂದು ಸ್ಪಷ್ಟ ಉದಾಹರಣೆ ಭೈರಪ್ಪನವರ 'ಮಂದ್ರ' ಕಾದಂಬರಿ. ಆ ಕೃತಿಯಲ್ಲಿನ ಭಾವತೀವ್ರತೆಯಿಂದ ಹೊರಬರಲು ಅದೆಷ್ಟೋ ದಿನಗಳು ಬೇಕಾದವು. ಒಂದು ಓದಿನ ಭಾವತೀವ್ರತೆಯಿಂದ ಹೊರಬರಲು ಇನ್ನೊಂದು ಪುಸ್ತಕದ ಓದು ಅನಿವಾರ್ಯವಾಗುತ್ತದೆ. ಒಂದು ಸಾಮಾಜಿಕ ಪಲ್ಲಟಕ್ಕೆ  ಕಾರಣವಾಗುವ ಮತ್ತು ಓದುಗರನ್ನು ಸಾಂಸ್ಕೃತಿಕವಾಗಿ ಕೈ ಹಿಡಿದು ನಡಿಸಿಕೊಂಡು ಹೋಗುವ ಜವಾಬ್ದಾರಿ ಲೇಖಕನಿಗಿರುವಷ್ಟೇ ಲೇಖಕರನ್ನು ಬೆಳೆಸುವ ಮತ್ತು ಪ್ರೋತ್ಸಾಹಿಸುವ ಮಹತ್ವದ ಹೊಣೆಗಾರಿಕೆ ಓದುಗರ ಮೇಲಿದೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ.
     ಓದು  ಅದೆಂಥ ಸುಸಂಸ್ಕೃತ ಹವ್ಯಾಸ ಎನ್ನುವುದಕ್ಕೆ ಒಂದು ಉದಾಹರಣೆ ಹೀಗಿದೆ. ನನ್ನೂರಿನ ನನ್ನ ಸಮಕಾಲಿನ ಅನಕ್ಷರಸ್ಥ ವ್ಯಕ್ತಿಯೊಬ್ಬ ಗೋಡೆಗಳಿಗೆ ಅಂಟಿಸುತ್ತಿದ್ದ ಸಿನಿಮಾ ಪೋಸ್ಟರ್ ಗಳನ್ನು ನೋಡುತ್ತ ಅಕ್ಷರಗಳನ್ನು ಕಲಿತ. ಕ್ರಮೇಣ ಸಿನಿಮಾ ಪುರವಣಿಗಳನ್ನು ಓದಲು ಶುರು ಮಾಡಿದ. ನಂತರ ಕನ್ನಡ ಪುಸ್ತಕಗಳನ್ನು ಕೈಗೆತ್ತಿಕೊಂಡ. ಈಗ ಅವನೊಬ್ಬ ಕನ್ನಡ ಸಾಹಿತ್ಯದ ಅತ್ಯುತ್ತಮ ಓದುಗ. ಓದು ಅವನ ಬದುಕಿನಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಯಾವುದೋ ಕೆಟ್ಟ  ಹವ್ಯಾಸಗಳಲ್ಲಿ ಕಳೆದು ಹೋಗುತ್ತಿದ್ದ ಬದುಕನ್ನು ಸೃಜನಶೀಲ ಓದಿನ ಮೂಲಕ ಸುಸಂಸ್ಕೃತವಾಗಿ ಕಟ್ಟಿಕೊಂಡಿರುವನು. ಅವನನ್ನು ನೋಡಿದಾಗಲೆಲ್ಲ  ನನಗೆ ರಾಮಾಯಣವನ್ನು ಬರೆದ ವಾಲ್ಮೀಕಿಯೇ ನೆನಪಾಗುತ್ತಾನೆ.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment