Monday, June 25, 2012

ಬೇಂದ್ರೆ ಬಂದರೊಂದು ದಿನ

     ಬೇಂದ್ರೆ ಮಾಸ್ತರರೆಂದೇ ಖ್ಯಾತರಾದ ವರಕವಿ ದ.ರಾ.ಬೇಂದ್ರೆ ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ವಿಶಿಷ್ಟವಾದದ್ದು. ಸಾಧನಕೆರಿಯನ್ನು ಸಾಂಸ್ಕೃತಿಕ ವಲಯದಲ್ಲಿ ಶ್ರೀಮಂತಗೊಳಿಸಿದ ಕವಿ ಕನ್ನಡ ತಾಯಿಗೆ ಜ್ಞಾನಪೀಠದ ಗರಿಯನ್ನು ಮುಡಿಸಿ ಭಾಷೆಯ ಹಿರಿಮೆಯನ್ನು ಹೆಚ್ಚಿಸಿದವರು. ಬೇಂದ್ರೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಛಲದಂಕಮಲ್ಲರೆಂದೇ  ಪ್ರಸಿದ್ಧರು. ಇಂಥ ಛಲದಂಕಮಲ್ಲ ಕವಿ ಒಮ್ಮೆ ಕನ್ನಡ ಭುವನೇಶ್ವರಿಯನ್ನು ಕಂಡು ನಡುಗಿದ್ದರು ಎಂದರೆ ಯಾರಿಗೆ ತಾನೇ  ನಂಬಲು ಸಾಧ್ಯ. ಬೇಂದ್ರೆ ಅವರೇ ಒಂದು ಕವಿತೆಯಲ್ಲಿ ಹೇಳಿಕೊಂಡಂತೆ ಕನ್ನಡ ತಾಯಿ ಅವರ ಕನಸಿನಲ್ಲಿ ಬಂದು ಕನ್ನಡ ಭಾಷೆ ತನ್ನ ನೆಲೆ ಕಳೆದುಕೊಳ್ಳುತ್ತಿದೆ ಎಂದು ಗುಡುಗಿದ್ದಳು. ಅವಳ ಆರ್ಭಟಕ್ಕೆ ಬೇಂದ್ರೆ ಬೆವತಿದ್ದರು, ಬೆದರಿದ್ದರು. ಭುವನೇಶ್ವರಿಯ ಉಗ್ರ ರೂಪವನ್ನು ನೋಡಿ ಬೆನ್ನ ಹುರಿಯಲ್ಲಿ ಬೆಂಕಿ ಹರಿದಂತಾಯಿತು ಎಂದು ತಮ್ಮ ಅನುಭವವನ್ನು ಕವಿತೆಯಲ್ಲಿ ಹೇಳಿಕೊಂಡಿರುವರು. ಈಗ ಕನ್ನಡ ಭಾಷೆಯ ಸ್ಥಿತಿ ಅತ್ಯಂತ ಶೋಚನಿಯವಾಗಿದೆ. ಬೇಂದ್ರೆ ಅವರೊಮ್ಮೆ ಬಂದು ಕನ್ನಡಮ್ಮನ ಈಗಿನ ಅವಸ್ಥೆಯನ್ನು ನೋಡಿದರೆ ಎನ್ನುವ ಕಲ್ಪನೆ ಆಧರಿಸಿ 'ಬೇಂದ್ರೆ ಬಂದರೊಂದು ದಿನ' ಕವಿತೆ ಬರೆದಿದ್ದೇನೆ. ಇಲ್ಲಿ ಬರುವ ವರಕವಿ ಬೇಂದ್ರೆ ಮತ್ತು ಕನ್ನಡ ತಾಯಿಯ ನಡುವಣ ಸಂಭಾಷಣೆ ನನ್ನ ಕಲ್ಪನೆಯೇ ಹೊರತು ಬೇಂದ್ರೆ ಅವರ ಯಾವುದೇ ಕವಿತೆಗಳಿಂದ ಆಯ್ದ ಸಾಲುಗಳಲ್ಲ. ಬರೆದಿದ್ದೇನೆ ಈ ಕವಿತೆ ಬೇಂದ್ರೆ ಅವರಲ್ಲಿ ಕ್ಷಮೆ ಕೋರುತ್ತ.

ಬಂದೆನೊಂದು 
ಇರುಳು 
ಕನ್ನಡಮ್ಮನ 
ಕಾಣಲು 
-1-
ಝಗಮಗಿಸುವ 
ಬೆಳಕಿನಲ್ಲೂ 
ಕಾಣಿಸುತ್ತಿಲ್ಲ ಅವಳು 
ಇಲ್ಲೆಲ್ಲೂ 
-2-
ದಿಕ್ಕಿಗೊಂದು 
ಅನ್ಯಭಾಷೆ 
ಮನೆಗೊಂದು 
ಮಾತೃಭಾಷೆ 
-3-
ಏನು ಹೇಳಲಿ 
ಕನ್ನಡಮ್ಮನ ದೌರ್ಭಾಗ್ಯ 
ಕಳೆದು ಹೋಗಿದೆ 
ನಮ್ಮ ಕಾಲದ ಸೌಭಾಗ್ಯ 
-4-
ಬಿಡುವೆನೆ ನಾನು 
ಛಲದಂಕ ಮಲ್ಲ 
ಕೂಗಿಯೇ ಬಿಟ್ಟೆ 
ತಾಯೇ ನೀನೆಲ್ಲಿ 
-5-
ಕೇಳಿದಳು ತಾಯಿ 
ಬಂದೆಯಾ ಕಂದ 
ಕನ್ನಡದ ನುಡಿ ಕೇಳಿ 
ಕರ್ಣಾನಂದ 
-6-
ದನಿಕೇಳಿದರೂ ತಾಯಿ 
ಕಾಣಿಸುತ್ತಿಲ್ಲ ನೀನು 
ಏನು ಹೇಳಲಿ ಕಂದ 
ಪರದೇಶಿ ನಾನು 
-7-
ಎದೆ ಗಟ್ಟಿ ಇದ್ದರೊಮ್ಮೆ 
ದಿಟ್ಟಿಸಿ ನೋಡು 
ಕಾಣುವುದು ನಿನಗಾಗ 
ಕನ್ನಡಮ್ಮನ ಪಾಡು 
-8-
ನೋಡಿದೆನು ನೋಡಿದೆನು 
ಬರಿಗಣ್ಣ ಬಿಟ್ಟು 
ಹೇಗೆ ಹೇಳಲಿ 
ಆಗ ಬಿದ್ದ ಪೆಟ್ಟು 
-9-
ಕನಸಲೊಮ್ಮೆ ಬಂದು 
ಜರೆದವಳು ಇವಳೇನು?
ಹೇಗೆ ಮರೆಯಲಿ ಅಂದು 
ಬೆಂಕಿಯುಗಳಿದ ಮುಖವನು 
-10-
ಹರಕು ಸೀರೆಯುಟ್ಟು 
ಕೈಯಲ್ಲೊಂದು ಕೋಲು 
ಕನ್ನಡ ಭುವನೇಶ್ವರಿ 
ಹಾಕಿಹಳು ಮುಖ ಜೋಲು 
-11-
ಎಂಟು ಜ್ಞಾನಪೀಠ 
ಪಡೆದವಳು ನೀನು 
ಸುಮ್ಮನಿರುವಿ ಏಕೆ?
ಬೆಂಕಿಯುಗಳಲಿ ಕಣ್ಣು 
-12-
ಶಕ್ತಿಹೀನಳು ನಾನು 
ಪಾಮರರ ನಡುವೆ 
ನೆಲಬೇಕು ನೆಲೆಬೇಕು 
ಬೇಕಿಲ್ಲ ನುಡಿಯಗೊಡವೆ 
-13-
ಬೆಳಗಾಗುತಿದೆ ತಾಯಿ 
ಹೋಗುವೆನು ಇನ್ನು 
ಸಾಧ್ಯವಾದರೆ ಮತ್ತೊಮ್ಮೆ 
ಹುಟ್ಟಿ ಬರುವೆನು ನಾನು 
-14-
ಕನ್ನಡದ ಕಸ್ತೂರಿ 
ಕಳೆದುಕೊಂಡಿದೆ ಕಂಪು 
ಜೊತೆಗಿರಲಿ ಬರುವಾಗ 
ಕಾರಂತ ಕುವೆಂಪು 
-15-
ಮುನ್ನಡೆದೆ ನಾನು 
ಹಿಂತಿರುಗಿ ನೋಡುತ 
ಹನಿಗೂಡಿದವು ಕಣ್ಣು 
ಕನ್ನಡಮ್ಮನ ನೆನೆಯುತ 

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment