Friday, June 22, 2012

ಸಾಮಾಜಿಕ ಪ್ರಜ್ಞೆ ಮತ್ತು ನಾವು

     ಒಮ್ಮೆ ಹೀಗಾಯ್ತು ಮನೆಗೆ ಬರುತ್ತಿರುವಾಗ ದಾರಿಯಲ್ಲಿ ನನ್ನ ಸ್ನೇಹಿತ ಜಗಳವಾಡಿದ. ಅವನ ಜಗಳಕ್ಕೂ ಒಂದು ಕಾರಣವಿತ್ತು. ಮನೆ ಕಟ್ಟಿಸುತ್ತಿದ್ದ ಯಜಮಾನರೊಬ್ಬರು ರಸ್ತೆ ಬದಿಯ ಚರಂಡಿಗೆ ಮರಳು, ಜಲ್ಲಿಕಲ್ಲುಗಳನ್ನು ತುಂಬಿದ್ದರು. ಕೊಳಚೆ ನೀರು ಹರಿದು ಹೋಗದೆ ಚರಂಡಿ ತುಂಬಿ ನಿಂತಿತ್ತು. ಅಂಥದ್ದೊಂದು ಘಟನೆ ಅವನ ಆಕ್ರೋಶಕ್ಕೆ ಕಾರಣವಾಗಿತ್ತು. ಚರಂಡಿಯಲ್ಲಿ ತುಂಬಿರುವ ಮರಳು ಮತ್ತು ಜಲ್ಲಿಕಲ್ಲುಗಳನ್ನು ಕೂಡಲೇ ತೆಗೆಯುವಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಹೇಳಿದ. ಅಲ್ಲೇ ಸಮೀಪದಲ್ಲಿ ನಿಂತಿದ್ದ ಯಜಮಾನರು ಮನೆ ಕೆಲಸ ಪೂರ್ಣಗೊಳ್ಳುವವರೆಗೆ ಅದು ಸಾಧ್ಯವಿಲ್ಲವೆಂದು ಬಿರುಸಾಗಿಯೇ ನುಡಿದರು. ಮಾತಿಗೆ ಮಾತು ಬೆಳೆಯಿತು. ಗಲಾಟೆ ಕೇಳಿ ಸುತ್ತಲಿನ ಮನೆಯವರು ಹೊರಗೆ ಬಂದರು. ಆಶ್ಚರ್ಯವೆಂದರೆ ಯಾರೊಬ್ಬರೂ ನನ್ನ ಗೆಳೆಯನ ಬೆಂಬಲಕ್ಕೆ ನಿಲ್ಲಲಿಲ್ಲ. ಅವನನ್ನೇ ವಿಚಿತ್ರ ಪ್ರಾಣಿಯನ್ನು ನೋಡುವಂತೆ ನೋಡಿದರು. ಆದ ತಪ್ಪನ್ನು ತಪ್ಪು ಎಂದು ಹೇಳುವ ಧೈರ್ಯ ಅಲ್ಲಿದ್ದ ಯಾರೊಬ್ಬರಲ್ಲೂ ಇರಲಿಲ್ಲ. ಅಷ್ಟಕ್ಕೂ ಅದು ತಪ್ಪೆಂದು ಜಗಳಕ್ಕೆ ನಿಂತವನು ಅಸಲಿಗೆ ಆ ಕಾಲೋನಿಯವನು ಆಗಿರಲಿಲ್ಲ. ಆ ನೀರಿನ ಪಕ್ಕದ ಮನೆಯೂ ಅವನದಾಗಿರಲಿಲ್ಲ. ಆದರೂ ಆ ಸಂದರ್ಭ ಅವನಲ್ಲಿನ ಸಾಮಾಜಿಕ ಪ್ರಜ್ಞೆ ಜಾಗೃತಗೊಂಡಿತ್ತು. ತಪ್ಪನ್ನು ಸರಿಪಡಿಸಲು ಪ್ರಯತ್ನಿಸಿದ. ಯಾರು ಸಮಸ್ಯೆಯ ಸಮಿಪದಲ್ಲಿದ್ದರೋ ಅವರಲ್ಲಿ ಮಾತ್ರ ಸಾಮಾಜಿಕ ಪ್ರಜ್ಞೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿತ್ತು. ಆದರೆ ಅದೇ ಜನ ಅಣ್ಣಾ ಹಜಾರೆ ಹೆಸರಿನ ಟೊಪ್ಪಿಗೆ ಧರಿಸಿ ಭೃಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ್ದು ವ್ಯವಸ್ಥೆಯೊಂದರ ವ್ಯಂಗ್ಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
        ಕೆಲವು ತಿಂಗಳುಗಳ ಹಿಂದೆ ದೆಹಲಿಯಲ್ಲಿ ನಡೆದ ಅಣ್ಣಾ ಹಜಾರೆ ಅವರ ಭೃಷ್ಟಾಚಾರ ವಿರೋಧಿ ಆಂದೋಲನದಲ್ಲಿ ಯಾರು ಯಾರು ಭಾಗವಹಿಸಿದ್ದರು ಎಂದೊಮ್ಮೆ ಅವಲೋಕಿಸಿ. ಹೀಗೆ ಭಾಗವಹಿಸಿದವರಲ್ಲಿ ಹೆಚ್ಚಿನವರು ಒಂದು ಸಂತೃಪ್ತ ಬದುಕಿನಿಂದ ಬಂದವರಾಗಿದ್ದರು. ಅವರು ಸಂತೃಪ ಬದುಕಿನವರೆಂಬ ಕಾರಣಕ್ಕೆ ಎಲ್ಲರಿಗೂ ಭಾರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅಣ್ಣಾ ಹಜಾರೆ ಅವರೊಬ್ಬರನ್ನು ಬಿಟ್ಟು ಎಲ್ಲರೂ ತಿಂದು  ತೇಗಿ ಮಜಾ ಅನುಭವಿಸಿದರು. ಚಳುವಳಿ ಎನ್ನುವುದಕ್ಕಿಂತ ಅವರೆಲ್ಲ ಪಿಕ್ ನಿಕ್ ಗೆ ಬಂದವರಂತೆ ವರ್ತಿಸಿದರು. ಪ್ಲಾಸ್ಟಿಕ್ ತಟ್ಟೆ, ಬಟ್ಟಲುಗಳಿಂದ ಚಳುವಳಿಯ ಆ ಮೈದಾನ ತಿಪ್ಪೆ ರಾಶಿಯಾಗಿತ್ತು. ಮುಂಬೈ ನಗರದಲ್ಲಿ ಮತ್ತೊಮ್ಮೆ ಅಂಥದ್ದೇ ಚಳುವಳಿ ಸಂಘಟಿಸಿದಾಗ ಜನ ಬೆಸತ್ತುಕೊಂಡರು. ಮತ್ತೆ ಮತ್ತೆ ಚಳುವಳಿಗಳಲ್ಲಿ ಭಾಗವಹಿಸುವುದು ಅವರಿಗೆ ಬೇಕಿರಲಿಲ್ಲ. ಅದಕ್ಕೆಂದೇ ಈ ಸಾರಿ ಅವರು ಚಳುವಳಿಯಿಂದ ದೂರ ಉಳಿದರು. ಭೃಷ್ಟಾಚಾರ ವಿರೋಧಿ ಆಂದೋಲನದ ಚಳುವಳಿಗೆ ಎರಡೇ ದಿನಗಳಲ್ಲಿ ತೆರೆ ಬಿತ್ತು. ಏಕೆಂದರೆ ಹೋರಾಟ ಎನ್ನುವುದು ನಮಗೆಲ್ಲ ಸಾಮಾಜಿಕ ಪ್ರಜ್ಞೆ ಎನ್ನುವುದಕ್ಕಿಂತ ಅದೊಂದು ಫ್ಯಾಶನ್ ಆಗಿ ಬದಲಾಗಿದೆ. ಯಾವ ಚಳುವಳಿ ಮತ್ತು ಹೋರಾಟದಿಂದ ವೈಯಕ್ತಿಕವಾಗಿ ನಮಗೆ ತೊಂದರೆ ಆಗುವುದಿಲ್ಲವೋ ಅಂಥ ಹೋರಾಟಗಳಲ್ಲಿ ಅತ್ಯಂತ ಮುತುವರ್ಜಿಯಿಂದ ಭಾಗವಹಿಸುತ್ತೇವೆ. ತೀರ ವೈಯಕ್ತಿಕವಾಗಿ ತೊಂದರೆ ಆಗುತ್ತದೆ ಎಂದರಿವಾದಾಗ ಮನೆಯ ಬಾಗಿಲು ಮುಚ್ಚಿಕೊಂಡು ಕುಳಿತುಕೊಳ್ಳುತ್ತೇವೆ.
      ಮೊನ್ನೆ ಒಂದು ಘಟನೆ ನಡೆಯಿತು. ಯುವಕನೊಬ್ಬ ಬಸ್ಸಿನಲ್ಲಿ ಅಂಗವಿಕಲರಿಗಾಗಿ ಕಾಯ್ದಿರಿಸಿದ್ದ ಸೀಟಿನಲ್ಲಿ ಕುಳಿತಿದ್ದ. ಅವನು ಹಾಗೆ ಕುಳಿತದ್ದೆ ಮಹಾಪರಾಧ ಎನ್ನುವಂತೆ ಸರಿ ಸುಮಾರು ಅರ್ಧ ತಾಸು ಹಿರಿಯ ವ್ಯಕ್ತಿಯೊಬ್ಬರು ಉಪದೇಶ ನೀಡಿದರು. ಸ್ವಲ್ಪ ಸಮಯದ ನಂತರ ಬಸ್ಸಿನಲ್ಲಿ ಗಲಾಟೆಯಾಯಿತು. ನಾಲ್ಕು ಜನ ಕೆಟ್ಟ ಹುಡುಗರು ಯುವತಿಯೊಡನೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಅರ್ಧ ತಾಸಿನ ಹಿಂದೆ ಉಪದೇಶ ನೀಡಿದ್ದ ಹಿರಿಯರು ಈಗ ಏನೂ ಆಗಿಲ್ಲವೇನೋ ಎನ್ನುವಂತೆ ಸುಮ್ಮನೆ ಕುಳಿತಿದ್ದರು. ಕೇವಲ ಅರ್ಧ ತಾಸಿನ ಹಿಂದೆ ಅವರಲ್ಲಿ ಜಾಗೃತವಾಗಿದ್ದ ಸಾಮಾಜಿಕ ಪ್ರಜ್ಞೆ ಸಂಪೂರ್ಣ ನಿಷ್ಕ್ರಿಯವಾಗಿತ್ತು. ಇದನ್ನು ಅವಕಾಶವಾದಿತನ ಎಂದು ಕರೆದರೆ ಸರಿಹೋದಿತು.
      ಈ ಸಮೂಹ ಮಾಧ್ಯಮಗಳು ಸಹ ಸಾಮಾಜಿಕ ಪ್ರಜ್ಞೆಯಿಂದ ವಿಮುಖವಾಗಿವೆ. ಸಾಮಾಜಿಕವಾಗಿ ಸಾಕಷ್ಟು ಪರಿವರ್ತನೆಗಳಿಗೆ ಕಾರಣವಾಗಬೇಕಿದ್ದ ದೃಶ್ಯ ಮಾಧ್ಯಮ ಕೇವಲ ಮನೋರಂಜನಾ ಮಾಧ್ಯಮವಾಗಿ ಬಳಕೆಯಾಗುತ್ತಿದೆ. ಈ ಸಿನಿಮಾ ಮಾಧ್ಯಮದಲ್ಲಿ ವಿಶೇಷವಾಗಿ ನಮ್ಮ ಕನ್ನಡ ಸಿನಿಮಾರಂಗದಲ್ಲಿ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸಿನಿಮಾಗಳನ್ನು ಕಲಾತ್ಮಕ ಚಿತ್ರಗಳೆಂಬ ಹಣೆಪಟ್ಟಿ ಕಟ್ಟಿ ಮೂಲೆಗುಂಪಾಗಿಸಲಾಗುತ್ತಿದೆ. ಅಂಥ  ಚಿತ್ರಗಳನ್ನು  ಯಾವ ಸಿನಿಮಾ ಮಂದಿರಗಳ ಮಾಲೀಕರು ಪ್ರದರ್ಶಿಸಲು ತಯ್ಯಾರಿರುವುದಿಲ್ಲ. ಅಂಥ ಸಿನಿಮಾಗಳ ನಿರ್ಮಾಣ ನಿರ್ಮಾಪಕರಿಗೆ ಹೊರೆಯಾಗುತ್ತಿರುವುದರಿಂದ ಇಂದಿನ ಚಲನಚಿತ್ರಗಳಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಪ್ರಾಧಾನ್ಯತೆ ದೊರೆಯುತ್ತಿಲ್ಲ. ಅನೈತಿಕ ಕಥೆಗಳುಳ್ಳ ಧಾರಾವಾಹಿಗಳು ಮತ್ತು ರಿಯಾಲಿಟಿ ಷೋಗಳ ಬೆನ್ನು ಬಿದ್ದಿರುವ ಟಿವಿ ಚಾನೆಲ್ ಗಳಿಂದ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಂಥ ಕಾರ್ಯಕ್ರಮಗಳನ್ನು ನಿರೀಕ್ಷಿಸುವುದು ಸಧ್ಯದ ಪರಿಸ್ಥಿಯಲ್ಲಿ ಅದೊಂದು ಮೂರ್ಖತನದ ಕೆಲಸವಾದಿತು. ಜೊತೆಗೆ ಇವತ್ತಿನ ಬಹುತೇಕ ಬರಹಗಾರಿಂದ  ಓದುಗರನ್ನು ಸಾಮಾಜಿಕ ಸಮಸ್ಯೆಗಳತ್ತ ಮುಖ ಮಾಡಿ ನಿಲ್ಲಿಸುವಂಥ ಕೃತಿಗಳು ರಚನೆಯಾಗುತ್ತಿಲ್ಲ. ಈ ದಿನಗಳಲ್ಲಿ ಹೆಚ್ಚಿನ ಲೇಖಕರು ವೈಯಕ್ತಿಕವಾದದ್ದನ್ನು ಸಾರ್ವತ್ರಿಕರಣಗೊಳಿಸಲು ಪ್ರಯತ್ನಿಸುತ್ತಿರುವರು. ತೀರ ಖಾಸಗಿ ಬದುಕಿನ ಸಂಕಟ ಮತ್ತು ಸಮಸ್ಯೆಗಳನ್ನು ಓದುಗರ ಮೇಲೆ ಹೇರಲು ಹೊರಟಿರುವ ಇಂಥ ಲೇಖಕ ವರ್ಗ ಸಾಮಾಜಿಕ ಪ್ರಜ್ಞೆಯಿಂದ ಸಂಪೂರ್ಣವಾಗಿ ವಿಮುಖವಾಗಿದೆ.
       ಇನ್ನೊಂದು ಬಹುಮುಖ್ಯ ಸಂಗತಿ ಎಂದರೆ ಸಾಮಾನ್ಯವಾಗಿ ನಾವುಗಳೆಲ್ಲ ಒಂದು ಸಂತೃಪ್ತ ಬದುಕಿಗಾಗಿ ಹಂಬಲಿಸುತ್ತೇವೆ. ಮನೆ, ನೌಕರಿ, ಹೆಂಡತಿ, ಮಕ್ಕಳು, ಓಡಾಡಲೊಂದು ಕಾರು ಇದೇ ನಮ್ಮ ಬದುಕಿನ ಬಹುಮುಖ್ಯ ಉದ್ದೇಶ. ನಿವೃತ್ತಿಯ ವೇಳೆ ಮಕ್ಕಳನ್ನು ಒಂದು ದಡ ಮುಟ್ಟಿಸುವುದು, ನಂತರ ಮೊಮ್ಮಕ್ಕಳೊಡನೆ ಕಳೆಯುವ ಬದುಕಿನ ಕೊನೆಯ ದಿನಗಳು, ಮುಂಜಾನೆಯ ಒಂದು ಸಣ್ಣ ವಾಕ್, ಒಂದು ಪತ್ರಿಕೆಯ ಓದು, ಒಂದಿಷ್ಟು ಕಚೇರಿ ಕೆಲಸ, ಸಾಯಂಕಾಲದ ತಿರುಗಾಟ, ಮಕ್ಕಳ ಹೋಂ ವರ್ಕ್, ವರ್ಷಕ್ಕೊಂದು ಪ್ರವಾಸ, ತಿಂಗಳಿಗೊಂದು ಪಿಕ್ ನಿಕ್, ವಾರಕ್ಕೊಂದು ಸಿನಿಮಾ ಹೀಗೆ ಬದುಕು ನಮ್ಮದೇ ಇತಿಮಿತಿಗಳ ಸುತ್ತ ಸುತ್ತುತ್ತಿದೆ. ಬದುಕಿನ ಒಂದು ಕಂಫರ್ಟ್ ಝೋನ್ ನಲ್ಲಿ  ಬಂದು ನಿಲ್ಲುವ ನಾವುಗಳು ಸಾಮಾಜಿಕ ಜವಾಬ್ದಾರಿಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತೇವೆ. ಯಾವ ಸಾಮಾಜಿಕ ಸಮಸ್ಯೆಯೂ ಹೊಸ್ತಿಲನ್ನು ದಾಟಿ ಮನೆಯೊಳಗೆ  ಪ್ರವೇಶಿಸುವುದನ್ನು ನಾವು ಇಚ್ಚಿಸಲಾರೆವು. ಯಾವ ಸಾಮಾಜಿಕ ಸಮಸ್ಯೆಯೂ ನಮ್ಮ ಸಂತೃಪ್ತ ಬದುಕನ್ನು ಅಲುಗಾಡಿಸಬಾರದು. ಅಂಥದ್ದೊಂದು ಕಂಫರ್ಟ್ ಝೋನ್ ನಲ್ಲಿ ಬದುಕುತ್ತಿರುವಾಗಲೇ ನಮಗೆ ಅಣ್ಣಾ ಹಜಾರೆ ಅವರ ಚಳುವಳಿಯಲ್ಲಿ ಭಾಗವಹಿಸುವ ಉಮೇದಿ ಮೂಡುತ್ತದೆ. ನೆನಪಿರಲಿ ಭೃಷ್ಟಾಚಾರ ವಿರೋಧಿ ಆಂದೋಲನದಲ್ಲಿ ಪಾಲ್ಗೊಳ್ಳುವ ನಮಗೆ ನಮ್ಮದೇ ಮನೆಯ ಪಕ್ಕ ಚರಂಡಿ ಮುಚ್ಚಿ ಹೋಗಿರುವುದು, ಜನ ಎಲ್ಲೆಂದರಲ್ಲಿ ಕಸ ಚೆಲ್ಲಿರುವುದು, ಸಾರ್ವಜನಿಕ ನಳವನ್ನು ಬೇಕಾಬಿಟ್ಟಿ ಉಪಯೋಗಿಸುವುದು, ಬಸ್ಸುಗಳಿಗೆ ಬೆಂಕಿ ಹಚ್ಚುವುದು, ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಈ ಯಾವ ಕೃತ್ಯಗಳೂ ದೊಡ್ಡದಾಗಿ ಕಾಣಿಸುವುದಿಲ್ಲ.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 
  

No comments:

Post a Comment