Thursday, December 20, 2012

ವೈಯಕ್ತಿಕವಾದದ್ದು ಸಾರ್ವತ್ರಿಕವಾಗುತ್ತಿರುವಾಗ......

        ಮೊನ್ನೆ ನನ್ನ ಪರಿಚಿತರು ಗೃಹಪ್ರವೇಶದ ಆಮಂತ್ರಣ ಪತ್ರ ಹಿಡಿದುಕೊಂಡು ಆಹ್ವಾನಿಸಲು ಬಂದಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಅವರು ಇನ್ನೇನು ಕೆಲವೇ ತಿಂಗಳಲ್ಲಿ ನಿವೃತ್ತರಾಗಲಿರುವರು. ವೃತ್ತಿ ಬದುಕಿನುದ್ದಕ್ಕೂ ಮಕ್ಕಳ ವಿದ್ಯಾಭ್ಯಾಸ, ಹೆಣ್ಣು ಮಕ್ಕಳ ಮದುವೆ  ಎಂದು ದುಡಿದುದ್ದನ್ನೆಲ್ಲ ಖರ್ಚು ಮಾಡಿ ಹೈರಾಣಾಗಿರುವ ಅವರಿಗೆ ನಿವೃತ್ತಿಗಿಂತ ಮೊದಲು ತೆಲೆಯ ಮೇಲೊಂದು ಸೂರಿರಲಿ ಎನ್ನುವ  ಆಸೆ. ಯಾವ ಕಾಲದಲ್ಲೋ ಖರೀದಿಸಿದ್ದ ಸೈಟು ಖಾಲಿಯಾಗಿಯೇ ಉಳಿದಿತ್ತು. ಬಳಿಯಲ್ಲಿರುವ ಒಂದಿಷ್ಟು ಈಡುಗಂಟಿಗೆ ಮತ್ತೊಂದಿಷ್ಟನ್ನು ಸಾಲಸೋಲ ಮಾಡಿ ಸೇರಿಸಿ ಕೊನೆಗೂ ಸಣ್ಣದೊಂದು ಮನೆಯನ್ನು ಕಟ್ಟಿಸಿರುವರು. ಎಲ್ಲ ಮುಗಿಯಿತು ಎನ್ನುವಾಗಲೇ ಹೆಂಡತಿ ಮತ್ತು ಮಕ್ಕಳ ವರಾತ ಶುರುವಾಗಿದ್ದು. ನನ್ನ ಪರಿಚಿತರಿಗೋ ಒಂದು ಸಣ್ಣ ಪೂಜೆ ಮಾಡಿ ಅತ್ಯಂತ ಸರಳವಾಗಿ ಗೃಹಪ್ರವೇಶದ ಸಂಪ್ರದಾಯವನ್ನು ಮುಗಿಸಿಬಿಟ್ಟರಾಯಿತು ಎನ್ನುವ ಆಲೋಚನೆ. ಆದರೆ ಅವರ ಯೋಚೆನೆಗೆ ವಿರುದ್ಧವಾಗಿ ಹೆಂಡತಿ ಮಕ್ಕಳದು ಅತ್ಯಂತ ಅದ್ದೂರಿಯಾಗಿಯೇ ಈ ಕಾರ್ಯಕ್ರಮವನ್ನು ಮಾಡಬೇಕೆನ್ನುವ ಹಟ. ಮನೆ ಕಟ್ಟುವುದಕ್ಕೆಂದೇ ಈಗಾಗಲೇ ಐದಾರು ಲಕ್ಷ ರುಪಾಯಿಗಳನ್ನು ಸಾಲ ಮಾಡಿರುವಾಗ ಮತ್ತಷ್ಟು ಸಾಲ ಮಾಡುವ ಪ್ರಾರಬ್ಧವನ್ನೇಕೆ ಮೈಮೇಲೆ ಎಳೆದುಕೊಳ್ಳಬೇಕೆನ್ನುವ ಇರಾದೆ ಈ ಯಜಮಾನರದು. ಸಾಲಮಾಡಿಯಾದರೂ ಸರಿ ಬಂಧುಗಳು ಮತ್ತು ಪರಿಚಿತರನ್ನು ಆಹ್ವಾನಿಸಿ ಭರ್ಜರಿ ಊಟದ ವ್ಯವಸ್ಥೆ ಮಾಡಿ ಎಲ್ಲರೂ ಅನೇಕ ದಿನಗಳವರೆಗೆ ನೆನಪಿನಲ್ಲಿಟ್ಟುಕೊಳ್ಳುವಂತೆ ಅದ್ದೂರಿಯಾಗಿ ಗೃಹಪ್ರವೇಶದ ಸಮಾರಂಭ ಮಾಡಲೇ ಬೇಕೆಂದು ಕುಟುಂಬದ ಸದಸ್ಯರು ಅವರ ಮೇಲೆ ಒತ್ತಡ ತರುತ್ತಿರುವರು. ಕುಟುಂಬದವರ ಮಾತಿಗೆ ಒಪ್ಪಿಕೊಂಡ ಈ ಯಜಮಾನರು ಸುಮಾರು ಒಂದು ಲಕ್ಷ ರುಪಾಯಿಗಳನ್ನು ಸಾಲ ಮಾಡಿ ಸಮಾರಂಭವನ್ನು ಭರ್ಜರಿಯಾಗಿಯೇ ಏರ್ಪಡಿಸಲು ಸಿದ್ಧರಾಗಿದ್ದಾರೆ. ಆದರೆ ಈಗಾಗಲೇ ಮನೆ ಕಟ್ಟುವುದಕ್ಕಾಗಿ ಸಾಲ ಮಾಡಿರುವಾಗ ಮತ್ತೊಮ್ಮೆ ಸಾಲ ಮಾಡುವಂಥ ಅವಶ್ಯಕತೆ ಏನಿತ್ತು ಎನ್ನುವ ಆತಂಕ ಮಾತ್ರ ಅವರಲ್ಲಿ ಜೀವಂತವಾಗಿದೆ.
         ಅವರು ಹೊರಟು ಹೋದ ನಂತರ ನನ್ನನ್ನು ಕಾಡಿದ ಸಂಗತಿ ಎಂದರೆ ನಮ್ಮ ಜನರೇಕೆ ತೀರ ವೈಯಕ್ತಿಕವಾದ ಸಂಗತಿಗಳನ್ನು ಮತ್ತು ಆಚಾರ ವಿಚಾರಗಳನ್ನು ಸಾರ್ವತ್ರಿಕರಣಗೊಳಿಸುತ್ತಿರುವುರೆನ್ನುವುದು. ಹೀಗೆ ಯೋಚಿಸುತ್ತಿರುವ ಹೊತ್ತಿನಲ್ಲೇ ಮೇಜಿನ ಮೇಲಿದ್ದ  ಆಹ್ವಾನ ಪತ್ರವೊಂದು ನನ್ನ ಗಮನ ಸೆಳೆಯಿತು. ಅದು ನನ್ನ ಪರಿಚಿತರ ಒಂದು ವರ್ಷದ ಮಗುವಿನ  ಮೊದಲ ಹುಟ್ಟುಹಬ್ಬದ ಆಹ್ವಾನ ಪತ್ರ. ನಗರದ ಭವ್ಯ ಹೋಟೆಲ್ ಒಂದರಲ್ಲಿ ಏರ್ಪಡಿಸಿರುವ ಆ ಔತಣಕೂಟಕ್ಕೆ ಸರಿ ಸುಮಾರು ೫೦೦ ಜನರನ್ನು ಆಹ್ವಾನಿಸಿರುವರಂತೆ. ಅವರೇ ಹೇಳಿದಂತೆ ಅಲ್ಲಿ ಪ್ರತಿ ಊಟಕ್ಕೆ ಸುಮಾರು ೨೦೦ ರುಪಾಯಿಗಳು ಖರ್ಚಾಗುವ ಸಾಧ್ಯತೆಯಿದ್ದು ಒಟ್ಟಾರೆ ಆ ದಿನದ ಎರಡು ಗಂಟೆಗಳ ಔತಣಕೂಟಕ್ಕೆ ಏನಿಲ್ಲವೆಂದರೂ ಒಂದು ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಲಿದೆ. ಅತ್ಯಂತ ಸಣ್ಣ ಊರಾಗಿರುವುದರಿಂದ ಇಲ್ಲಿ ಇದಕ್ಕಿಂತ ಹೆಚ್ಚು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ಅವರದಾಗಿದೆ. ಇನ್ನು ಅಚ್ಚರಿಯ ಸಂಗತಿ ಎಂದರೆ ಆಹ್ವಾನ  ಪತ್ರದ ಹೊರತಾಗಿಯೂ ದಿನಪತ್ರಿಕೆಗಳಲ್ಲಿ ಮತ್ತು ಟಿ.ವಿ.ಚಾನೆಲ್ ಗಳಲ್ಲಿ ಆಹ್ವಾನ ಪತ್ರ ಬಿತ್ತರವಾಗುವುದರ ಜೊತೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ಫ್ಲೆಕ್ಸ್ ಗಳನ್ನೂ ತೂಗು ಹಾಕಿರುವರು. ತಮ್ಮ  ಮಗನ ಹುಟ್ಟುಹಬ್ಬವನ್ನು ಅತ್ಯಂತ ಉಮೇದಿಯಿಂದ  ಆಚರಿಸುತ್ತಿರುವ ಅವರಿಗೆ ನಾನೊಂದು ಪ್ರಶ್ನೆ ಕೇಳಿದೆ. 'ಡಿಸೆಂಬರ್ ೨೩ ರಂದು ನಿಮ್ಮ ಮಗನ ಜನ್ಮದಿನ ಆಚರಿಸುತ್ತಿರುವ ನಿಮಗೆ ಆ ದಿನದ ವಿಶೇಷತೆ ಏನೆಂದು ಗೊತ್ತೇ?'. ಅವರು ಗೊತ್ತಿಲ್ಲ ಎಂದು ಪೆಚ್ಚಾಗಿ ನನ್ನ ಮುಖ ನೋಡಿದರು. ಅವರ ಸಂಭ್ರಮಕ್ಕೆ ನಾನೇಕೆ ತಣ್ಣೀರೆರಚಲೆಂದು ಏನಿಲ್ಲ ಎಂದು ಹೇಳಿ ಅವರನ್ನು ಕಳುಹಿಸಿದೆ. ನಿಜಕ್ಕೂ ಆ ದಿನ 'ಕಿಸಾನ್ ದಿವಸ್' (ರೈತರ ದಿನ) ಎಂದು ಆಚರಿಸಲಾಗುತ್ತದೆ. ಅನ್ನ ನೀಡುತ್ತಿರುವ ರೈತರನ್ನು ಸ್ಮರಿಸಿಕೊಳ್ಳುವ ದಿನವದು. ಆದರೆ ತೀರ ಖಾಸಗಿ ಆಚರಣೆಗಳನ್ನು ಸಾರ್ವತ್ರಿಕರಣಗೊಳಿಸುತ್ತಿರುವ ನಾವು  ಸಾರ್ವತ್ರಿಕವಾಗಿ ಆಚರಣೆಯಾಗಬೇಕಾದ ದಿನವನ್ನು ಕೇವಲ ಅವಶ್ಯಕತೆ ಇರುವವರು ಆಚರಿಸಿಕೊಳ್ಳಲಿ ಎಂದು ಅದನ್ನು ವೈಯಕ್ತಿಕಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಯಾರನ್ನಾದರೂ ಕೇಳಿ ನೋಡಿ ಆಚರಿಸಲು ನಾವೇನು ರೈತರೇ ಎನ್ನುವ ವಿತಂಡವಾದ ಕೇಳಿ ಬರುತ್ತದೆ. ಹಗಲಿರುಳೆನ್ನದೆ ದುಡಿದು ಆತ  ನಮಗೆ ಅನ್ನ  ನಿಡುತ್ತಿರುವನೆಂಬ ಸಣ್ಣ ಕೃತಜ್ಞತೆಯೂ ನಮಗಿಲ್ಲ.
       ನೀವುಗಳೆಲ್ಲ ಡಾ.ಸ.ಜ.ನಾಗಲೋಟಿಮಠ ಅವರ ಹೆಸರು ಕೇಳಿರಬಹುದು. ದೇಶದ ಅತ್ಯುನ್ನತ ಪ್ರಶಸ್ತಿಯಾದ 'ಬಿ.ಸಿ.ರಾಯ್ ಪ್ರಶಸ್ತಿ' ಪಡೆದ ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯರವರು. ಬಾಗಲಕೋಟೆಯ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಸಮಯ ಅವರ ಮಗನ ಮದುವೆ ನಡೆಯಿತು. ಆ ಮದುವೆಯನ್ನು ಅವರು ಅತ್ಯಂತ ಸರಳವಾಗಿ ಮಠವೊಂದರಲ್ಲಿ ಏರ್ಪಡಿಸಿದ್ದರು. ಕಾಲೇಜಿನ ಯಾವ ಸಿಬ್ಬಂದಿಯನ್ನು ಮದುವೆಗೆ ಆಹ್ವಾನಿಸಿರಲಿಲ್ಲ. ಮರುದಿನ ಅವರು ಕೆಲಸಕ್ಕೆ ಹಾಜರಾದಾಗಲೇ ಗೊತ್ತಾಗಿದ್ದು ನಿನ್ನೆ ಸಜನಾ ಅವರ ಮಗನ ಮದುವೆ ಇತ್ತೆಂದು. ಅನೇಕರು ತಮಗೇಕೆ ಆಹ್ವಾನಿಸಲಿಲ್ಲವೆಂದು ಕೋಪ ತೋರ್ಪಡಿಸಿದರು. ಅದ್ದೂರಿಯಾಗಿ ಆಚರಿಸುವುದರ ಮೂಲಕ ಅನಾವಶ್ಯಕವಾಗಿ ಖರ್ಚು ಮಾಡುವುದೇಕೆ ಎನ್ನುವುದು ಸಜನಾ ಅವರ ವಾದವಾಗಿತ್ತು. ಅದಕ್ಕೂ ಮಿಗಿಲಾಗಿ ಅವರು ಹೇಳಿದ ವಿಷಯವೆಂದರೆ ಇದು ನನ್ನ ಕುಟುಂಬದ ಖಾಸಗಿ ಕಾರ್ಯಕ್ರಮ ಎಲ್ಲರನ್ನೂ ಆಹ್ವಾನಿಸುವುದಕ್ಕೆ ಅದೇನು ರಾಷ್ಟ್ರೀಯ ಕಾರ್ಯಕ್ರಮವಾಗಿರಲಿಲ್ಲ. ಇವತ್ತಿನ  ರಾಜಕಾರಣಿಗಳು ಮತ್ತು ಸಿನಿಮಾ ಕಲಾವಿದರ ಖಾಸಗಿ ಕಾರ್ಯಕ್ರಮಗಳ ಆಚರಣೆಯನ್ನು ನೋಡಿದಾಗ ಸಜನಾ ಅವರು ಅಂದು ಹೇಳಿದ ಮಾತು ಮತ್ತೆ ಮತ್ತೆ ನೆನಪಾಗುತ್ತದೆ.
         ಇರಲಿ ಈ ರೀತಿಯ ಖಾಸಗಿ ಆಚರಣೆಗಳನ್ನು ಖುಷಿಯನ್ನೋ ಅಥವಾ ಸಂತೋಷವನ್ನೋ ಹಂಚಿಕೊಳ್ಳಲು  ಸಾರ್ವತ್ರಿಕವಾಗಿ ಆಚರಿಸಿಕೊಳ್ಳುತ್ತಾರೆಂದುಕೊಳ್ಳೋಣ. ಆದರೆ ಸಾರ್ವತ್ರಿಕವಾಗಿ ಆಚರಿಸಬೇಕಾದ ಕಾರ್ಯಕ್ರಮಗಳನ್ನು ನಾವೇಕೆ ವೈಯಕ್ತಿಕವಾಗಿಸುತ್ತಿದ್ದೇವೆ. ಉದಾಹರಣೆಯಾಗಿ  ಹೇಳಬೇಕಾದರೆ ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ, ರೈತರ ದಿನ, ಸ್ವಾತಂತ್ರ್ಯ ದಿನ, ಗಣರಾಜ್ಯ ದಿನ ಇಂಥ ಯಾವ ದಿನಗಳಲ್ಲಿ ನಾವುಗಳೆಲ್ಲ ಸಾಮೂಹಿಕವಾಗಿ ಪಾಲ್ಗೊಳ್ಳುತ್ತಿದ್ದೇವೆ. ನಮ್ಮ ಕೌಟಂಬಿಕ ಆಚರಣೆಗೆ ಮಾತ್ರ ಸೀಮಿತವಾಗಿರಬೇಕಿದ್ದ ಕಾರ್ಯಕ್ರಮಗಳನ್ನು ಅತ್ಯಂತ ಉಮೇದಿಯಿಂದ ಸಾರ್ವಜನಿಕವಾಗಿ ಆಚರಿಸಿಕೊಳ್ಳುವ ಅನೇಕರಿಗೆ ಸ್ವಾತಂತ್ರ್ಯ ದಿನದಂದು ಕಡ್ಡಾಯವಾಗಿ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆನ್ನುವ ಕನಿಷ್ಟ ಪ್ರಜ್ಞೆಯೂ ಇರುವುದಿಲ್ಲ. ಅಕ್ಟೋಬರ್ ೨  ದೇಶ ಕಂಡ ಪ್ರಾಮಾಣಿಕ ಪ್ರಧಾನ ಮಂತ್ರಿ ಲಾಲ ಬಹಾದ್ದೂರ ಶಾಸ್ತ್ರಿ ಅವರ ಜನ್ಮದಿನವೆಂದು ಅದೆಷ್ಟು ಜನರಿಗೆ ಗೊತ್ತಿದೆ?. ಹೊಸ ಸಿನಿಮಾವೊಂದು ಬಿಡುಗಡೆಯಾದಾಗ ಆ ಚಿತ್ರದ  ನಾಯಕನ ಆಳೆತ್ತರದ ಕಟೌಟ್ ನಿಲ್ಲಿಸಿ ಕ್ಷಿರಾಭಿಷೇಕ ಮಾಡುವ ನಮಗೆ ಜನೆವರಿ ೩೦ ರಂದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರಮರಣವನ್ನಪ್ಪಿದ ಹುತಾತ್ಮರನ್ನು ಸ್ಮರಿಸಿಕೊಳ್ಳುವ ದಿನವೆಂದು ನೆನಪಿಗೇ ಬರುವುದಿಲ್ಲ.
             ಇನ್ನೂ ಆಘಾತಕಾರಿ ಸಂಗತಿ ಎಂದರೆ ಎಲ್ಲರೂ ಒಟ್ಟಾಗಿ ಆಚರಿಸಬೇಕಾದ ಆಚರಣೆಗಳನ್ನು ನಾವು  ಸಂಕುಚಿತ ಮನಸ್ಸಿನಿಂದ ಒಂದು  ಗುಂಪು, ಸಮುದಾಯಕ್ಕೆ ಸೀಮಿತಗೊಳಿಸುತ್ತಿರುವುದು. ಗಾಂಧಿ ರಾಷ್ಟ್ರಪಿತನಾದರೂ    ಅವರ  ಜನ್ಮದಿನದ ಆಚರಣೆ ಕೆಲವೇ ವರ್ಗದವರಿಗೆ ಸೀಮಿತ. ಅದರಲ್ಲೂ ರಾಜಕೀಯ ಪಕ್ಷವೊಂದು ಗಾಂಧಿ ಜಯಂತಿಯನ್ನು  ಗುತ್ತಿಗೆಗೆ ಹಿಡಿದಂತೆ ವರ್ತಿಸುತ್ತಿದೆ. ಹೀಗಿರುವಾಗ ವೀರ ಸಾವರ್ಕರ್, ಭಗತ್ ಸಿಂಗ್ ರ ನೆನಪು ಮತ್ತೊಂದು ಪಕ್ಷದ ಪಿತ್ರಾರ್ಜಿತ ಆಸ್ತಿ ಎನ್ನುವಂತಾಗಿದೆ. ಅಂಬೇಡ್ಕರ್ ಏನಿದ್ದರೂ ದಲಿತರ ಮತ್ತು ದಮನಿತರ ನೇತಾರ. ಈ ನಡುವೆ ಜಯಪ್ರಕಾಶ ನಾರಾಯಣ, ಸುಭಾಷಚಂದ್ರ ಭೋಸ್, ವಿವೇಕಾನಂದರಂಥ ಮಹಾನ್ ನಾಯಕರು ನೇಪಥ್ಯಕ್ಕೆ ಸರಿಯುತ್ತಾರೆ. ರೈತರ ದಿನವನ್ನು ರೈತ ಸಂಘದವರೇ ಆಚರಿಸುವುದಿಲ್ಲ. ಎರಡು ದಿನಗಳ ಹಿಂದೆ ಇಲ್ಲೊಂದು ಕವಿರತ್ನ ಕಾಳಿದಾಸ ವೃತ್ತ ಉದ್ಘಾಟನೆಯಾಯಿತು. ಅಲ್ಲಿದ್ದ ಬೆರಳೆಣಿಕೆಯ ಜನರಲ್ಲಿ ಹೆಚ್ಚಿನವರು ಕುರುಬ ಸಮುದಾಯದವರಾಗಿದ್ದೊಂದು ವಿಶೇಷ. ಮೇಘದೂತ, ಅಭಿಜ್ಞಾನ ಶಾಕುಂತಲದಂಥ ಮಹಾ ಕಾವ್ಯಗಳನ್ನು ಬರೆದ ಮೇರು ಕವಿಯನ್ನು ನಾವು ಕುರುಬ ಸಮುದಾಯಕ್ಕೆ ಸಿಮಿತಗೊಳಿಸುತ್ತಿರುವುದಕ್ಕೆ ಸಾಕ್ಷಿಯಾಗಿ  ಅಂದಿನ ಆ ದೃಶ್ಯ  ನಮ್ಮ ಸಂಕುಚಿತ ಮನಸ್ಸಿಗೆ ಹಿಡಿದ ಕೈಗನ್ನಡಿಯಾಗಿತ್ತು.
        ಕೆಲವೊಮ್ಮೆ ವೈಯಕ್ತಿಕ ಸಂಗತಿಗಳು ಸಾರ್ವತ್ರಿಕವಾದಾಗ ಅದಕ್ಕೆ ಸಮಾಜದ ಒಪ್ಪಿಗೆಯ ಮುದ್ರೆ ಇರುತ್ತದೆ. ಇದಕ್ಕೊಂದು ಉದಾಹರಣೆ ಹೇಳುವುದಾದರೆ ಕೆಲದಿನಗಳ ಹಿಂದೆ ನಾನೊಂದು ಪುಸ್ತಕ ಓದಿದೆ. ಆ ಪುಸ್ತಕದ ಹೆಸರು 'ಊರು ಕೇರಿ' ಎಂದು. ಕವಿ ಸಿದ್ಧಲಿಂಗಯ್ಯನವರ ಆತ್ಮಕಥನವದು. ಇದು ಕವಿಯ ವೈಯಕ್ತಿಕ ವಿಷಯವಾದರೂ ಓದುತ್ತ ಹೋದಂತೆ ಒಂದು ವರ್ಗದ ಸಮಸ್ಯೆಗಳು ನಮ್ಮೆದುರು ತೆರೆದುಕೊಳ್ಳುತ್ತ ಹೋಗುತ್ತವೆ. ದಲಿತ ಸಮುದಾಯದ ಸಮಸ್ಯೆಗಳನ್ನು ಹೇಳುವ ಕವಿ ಇಲ್ಲಿ ಕೇವಲ ಒಂದು ರೂಪಕವಾಗುತ್ತಾನೆ. ಹಾಗಾಗಿ ಇದನ್ನು ಲೇಖಕರ ತೀರ ಖಾಸಗಿ ವಿಷಯ  ಎನ್ನುವಂತಿಲ್ಲ. ತಮ್ಮೊಳಗಿನ ಆಂತರಿಕವನ್ನು ಬಾಹ್ಯಿಕರಿಸುವ ಕವಿಯ ಈ ಕಾರ್ಯ ಸಾರ್ವಜನಿಕ ಒಪ್ಪಿಗೆ ಪಡೆಯುತ್ತದೆ.
           ಈ ನಡುವೆ ರಾಷ್ಟ್ರದ ಮಹತ್ವದ ದಿನಗಳು ಮತ್ತು ಮಹಾನ್ ನಾಯಕರುಗಳ ನೆನಪುಗಳೆಲ್ಲ ನೇಪಥ್ಯಕ್ಕೆ  ಸರಿಯುತ್ತಿರುವ ಹೊತ್ತಿನಲ್ಲೇ ಸಿನಿಮಾ ನಟನೊಬ್ಬನ ಹುಟ್ಟುಹಬ್ಬ ಬರುತ್ತದೆ. ಅಭಿಮಾನಿಗಳೆಲ್ಲ ಮಧ್ಯರಾತ್ರಿಯಿಂದಲೇ ಆತನ ಮನೆ ಎದುರು ಉದ್ದನೇ ಸಾಲಿನಲ್ಲಿ ನಿಂತು ದರ್ಶನ ಮಾಡಿ ಕೃತಾರ್ಥರಾಗುತ್ತಾರೆ. ಇನ್ನಾರದೋ ಮನೆಯ ಮಗುವಿನ ಹುಟ್ಟುಹಬ್ಬದ ಆಹ್ವಾನ ಪತ್ರ ಮನೆಯ ಬಾಗಿಲ ಬಳಿ ಬಂದು ಬೀಳುತ್ತದೆ. ಅದರ ಹಿಂದೆಯೇ ಸಾಂಸ್ಕೃತಿಕ ಸಭಾಭವನದಲ್ಲಿ ಅತ್ಯಂತ  ಅದ್ದೂರಿಯಾಗಿ ವೈಕುಂಠ  ಸಮಾರಾಧನೆ ಏರ್ಪಡಿಸಿದ್ದೇವೆ ಬರಲೇ ಬೇಕೆನ್ನುವ ಒತ್ತಾಯ. ಹೀಗೆ ವೈಯಕ್ತಿಕವಾದದ್ದು ಸಾರ್ವತ್ರಿಕರಣಗೊಳ್ಳುತ್ತ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತ ಹೋಗುತ್ತದೆ.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ       



No comments:

Post a Comment