Wednesday, December 12, 2012

ಕಾಡುವ ಖಾಲಿತನದ ನಡುವೆ ಕದಡುವ ನೆನಪುಗಳು

      ದಯವಿಟ್ಟು ಕ್ಷಮಿಸಿ ಒಂದಿಷ್ಟು ಖಾಸಗಿ ವಿಷಯಗಳನ್ನು ಹಂಚಿಕೊಳ್ಳುತ್ತಿರುವುದಕ್ಕೆ. ಹನ್ನೊಂದು ವರ್ಷಗಳು ಕಳೆದು ಹೋದವು ನಾನು ಬಾಗಲಕೋಟೆಯ  ಬಿ.ವಿ.ವಿ.ಸಂಘದ 'ಸಮಾಚಾರ' ಪತ್ರಿಕೆಗೆ ಬರೆಯಲು ಪ್ರಾರಂಭಿಸಿ. ಈ ಹನ್ನೊಂದು ವರ್ಷಗಳಲ್ಲಿ ಪತ್ರಿಕೆಗೆ ಬರೆದ ನನ್ನ ಲೇಖನಗಳ ಸಂಖ್ಯೆ ನೂರರ ಸಮೀಪ ಬಂದು ನಿಂತಿದೆ. 'ಸಮಾಚಾರ'ಕ್ಕೆ ನಿಯಮಿತವಾಗಿ ಪ್ರತಿ ತಿಂಗಳು ಬರೆಯುವುದು ಒಂದು ಹವ್ಯಾಸವಾಗಿ ಬದಲಾಗಿದೆ. ಪತ್ರಿಕೆಯ ಮೇಲಿನ ಅಭಿಮಾನ ಮತ್ತು ಪ್ರೀತಿ ನನ್ನನ್ನು ಬರೆಯುವಂತೆ ಪ್ರಚೋದಿಸುತ್ತದೆ. ಅನೇಕ ಸಂದರ್ಭಗಳಲ್ಲಿ ಹಲವು ತಿಂಗಳುಗಳ ಮೊದಲೇ ಲೇಖನಗಳನ್ನು ಸಿದ್ದಪಡಿಸಿ ಸಂಪಾದಕರಿಗೆ ಕಳಿಸಿದ್ದುಂಟು. ಕೆಲವೊಮ್ಮೆ ಪತ್ರಿಕೆ ಅಚ್ಚಿಗೆ ಹೋಗಲು ಇನ್ನೇನು ಮೂರ್ನಾಲ್ಕು ದಿನಗಳಿವೆ ಎನ್ನುವಾಗ ಆತುರಾತುರವಾಗಿ ಬರೆದದ್ದುಂಟು. ಇನ್ನು ಕೆಲವೊಮ್ಮೆ ಏನನ್ನೂ ಬರೆಯಲು ಸಾಧ್ಯವಿಲ್ಲವೇನೋ ಎನ್ನುವ ಖಾಲಿತನ ಕಾಡಿದ್ದುಂಟು. ಈ ಬರೆಯುವ ಉಮೇದಿ, ಬರೆಯುವ ಆತುರತೆ ಮತ್ತು ಬರೆಯಲಾರೆನೆನ್ನುವ ಖಾಲಿತನದ ನಡುವೆಯೂ ಪತ್ರಿಕೆಯೊಂದಿಗಿನ ನನ್ನ ಒಡನಾಟ ಒಂದು ದಶಕದಿಂದ ಅವ್ಯಾಹತವಾಗಿ ಮುಂದುವರಿದುಕೊಂಡು  ಬಂದಿದೆ.

ಅರಳಿಕೊಂಡ ಬದುಕು 

       2001 ರಲ್ಲಿ ಬಾಗಲಕೋಟೆಗೆ ಬಂದ ಪ್ರಾರಂಭದ ಆ ಹೊಸದರಲ್ಲಿ ಇಡೀ ಜಿಲ್ಲೆಯಾದ್ಯಂತ ಮುಳುಗಡೆಯ ಭೀತಿ ಆವರಿಸಿತ್ತು. ಮುಳುಗಡೆಯ ನಾಡಿನಲ್ಲಿ ಬದುಕು ಕಟ್ಟಿಕೊಳ್ಳಲು ಬಂದ ನನ್ನ ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ. ನೂರಾರು ಮೈಲಿ ದೂರದ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯಿಂದ ದೂರವಾಗಿ ಹೊಸ ನೆಲದಲ್ಲಿ ಅಪರಿಚಿತರ ನಡುವೆ ಬದುಕಲು ಪ್ರಯತ್ನಿಸಿದ ಆ ಕ್ಷಣ ಹಲವು ಸಂದರ್ಭಗಳಲ್ಲಿ ಮನಸ್ಸು ತಲ್ಲಣಗೊಳ್ಳುತ್ತಿತ್ತು. ಇಲ್ಲಿಯೂ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಿಂದ ಬೇರು ಸಮೇತ ಕಿತ್ತು ಬೇರೊಂದು ಸಾಮಾಜಿಕ ತಾಣದಲ್ಲಿ ಬದುಕನ್ನು ರೂಪಿಸಿಕೊಳ್ಳಲು ಹೆಣಗಾಡುತ್ತಿದ್ದ ನನ್ನಂಥ ಸಾವಿರಾರು ಜನರಿದ್ದುದ್ದರಿಂದಲೇ ಬೇಗನೆ ಹೊಂದಿಕೊಳ್ಳಲು ಸಾಧ್ಯವಾಗಿರಬಹುದು. ಕೃಷ್ಣೆಯ ಹಿನ್ನೀರು ವರ್ಷದಿಂದ ವರ್ಷಕ್ಕೆ ನಗರದ ವಸತಿ ಪ್ರದೇಶಗಳನ್ನು ತನ್ನ ಒಡಲಿಗೆ ಸೇರಿಸಿಕೊಳ್ಳುತ್ತಿದ್ದುದ್ದನ್ನು ಕಣ್ಣಾರೆ ಕಂಡ ಆ ದಿನಗಳಲ್ಲಿ ಮುಳುಗಡೆಯ ಊರಿಗೆ ಬಂದು ತಪ್ಪು ಮಾಡಿದೆನೇನೋ ಎನ್ನುವ ಆತಂಕ ಕಾಡುತ್ತಿತ್ತು. ಆದರೆ ಈ ದಿಗಿಲು, ಆತಂಕಗಳನ್ನೆಲ್ಲ ಮೀರಿಸುವ ಅಚ್ಚರಿಯ ಸಂಗತಿ ಎಂದರೆ ಅದು ನಾನು ವೈದ್ಯಕೀಯ ಕಾಲೇಜಿನಂಥ ದೊಡ್ಡ ಮಹಾವಿದ್ಯಾಲಯದ ಗ್ರಂಥಪಾಲಕನಾಗಿ ನೇಮಕಗೊಂಡಿದ್ದು. ಉಪನ್ಯಾಸಕನಾಗಿ ಕೆಲಸ ಮಾಡಿ ಅನುಭವಿದ್ದ ನನಗೆ ಬಿ.ವಿ.ವಿ.ಸಂಘದ ಸಂದರ್ಶನ ಸಮಿತಿಯವರು ಅದು ಹೇಗೆ ನನ್ನಂಥ ಅನನುಭವಿಯನ್ನು ಗ್ರಂಥಪಾಲಕನಾಗಿ ಆಯ್ಕೆ ಮಾಡಿದರೆನ್ನುವ ಸಂಗತಿ ಇವತ್ತಿಗೂ ನನಗೆ ಅಚ್ಚರಿಯ ವಿಷಯ.
      ಮನಸ್ಸು ಕೃತಜ್ಞತೆಯಿಂದ ಭಾರವಾಗುತ್ತದೆ. ಈ ಹನ್ನೊಂದು ವರ್ಷಗಳ ಸುದೀರ್ಘ ಪಯಣ ವಿಶಿಷ್ಟ ಅನುಭವಗಳನ್ನು ನೀಡಿದೆ. ಮುಳುಗಡೆಯ ನಾಡಿನಲ್ಲಿ ಬದುಕು ಅರಳಿಕೊಂಡಿದೆ. ವೃತ್ತಿ ಬದುಕು ತೃಪ್ತಿ ನೀಡಿದೆ. ಹೊಸ ಹೊಸ ವಿಷಯಗಳನ್ನು ಕಲಿಯಲು ವೃತ್ತಿ ಅನುವುಮಾಡಿಕೊಟ್ಟಿದೆ. ಬದುಕಿನ ಅನೇಕ ಸಮಸ್ಯೆಗಳು ಮತ್ತು ಸವಾಲುಗಳಿಗೆ ಮುಖಾಮುಖಿಯಾಗಿ ನಿಲ್ಲುವ ಸಾಮರ್ಥ್ಯ ಈ ನೆಲ ತಂದುಕೊಟ್ಟಿದೆ. ಒಂದು ಗೌರವ, ಒಂದು ಸ್ವಾಭಿಮಾನ, ಒಂದಿಷ್ಟು ಸಾಮರ್ಥ್ಯ, ಒಂದಿಷ್ಟು ಸಂತೃಪ್ತಿ ಜೊತೆಗೊಂದಿಷ್ಟು ಅಸ್ತಿತ್ವ ಇವುಗಳನ್ನು ಬಿಟ್ಟು ಇನ್ನೇನು ಬೇಕು ಬದುಕಿಗೆ.

ವೃತ್ತಿ ಮತ್ತು ಪ್ರವೃತ್ತಿ 

     ವೃತ್ತಿ ಮತ್ತು ಪ್ರವೃತ್ತಿಗಳೆರಡೂ ಒಂದೇ ಸ್ಥಳದಲ್ಲಿ ಅದು ಹೇರಳವಾಗಿ ಸಿಗುವುದು ತೀರಾ ಅಪರೂಪದ ಸಂಗತಿ. ಆದರೆ ಈ ಮಾತಿಗೆ ಅಪವಾದ ಎನ್ನುವಂತೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ವೃತ್ತಿ ಮತ್ತು ಪ್ರವೃತ್ತಿಗಳೆರಡನ್ನೂ ಕಟ್ಟಿಕೊಡುವ ಸಂಸ್ಥೆ. ಇಲ್ಲಿ ಉದ್ಯೋಗದ ಜೊತೆ ಜೊತೆಗೆ ನನ್ನೊಳಗಿನ ಬರವಣಿಗೆಯ ಪ್ರವೃತ್ತಿಯೂ ಅರಳಿಕೊಂಡಿದೆ. ಬಿ.ವಿ.ವಿ.ಸಂಘ ಕಳೆದ ಹದಿನೆಂಟು ವರ್ಷಗಳಿಂದ ಪ್ರಕಟಿಸುತ್ತಿರುವ 'ಸಮಾಚಾರ' ಪತ್ರಿಕೆ ಅನೇಕ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಬರೆಯಲು ವೇದಿಕೆ ಒದಗಿಸಿದೆ. 'ಸಮಾಚಾರ' ಪತ್ರಿಕೆಯ ಮೂಲಕವೇ ಅನೇಕ ನೌಕರರು ಮತ್ತು ವಿದ್ಯಾರ್ಥಿಗಳು ಬರವಣಿಗೆಯ ಕ್ಷೇತ್ರಕ್ಕೆ ಕಾಲಿಟ್ಟಿರುವರು. ಹಲವಾರು ಲೇಖಕರ ಲೇಖನಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಸಣ್ಣ ಪುಟ್ಟ ಲೇಖನಗಳನ್ನು ಪತ್ರಿಕೆಗೆ ಬರೆಯುತ್ತಲೇ ತಮ್ಮ ಬರವಣಿಗೆಯನ್ನು ಹದಗೊಳಿಸಿಕೊಂಡ ಬರಹಗಾರರು ಇಲ್ಲಿರುವರು. ಹೀಗೆ ಬರವಣಿಗೆಯ ಮೂಲಕ 'ಸಮಾಚಾರ' ಪತ್ರಿಕೆ ಸಂಘದ ಅನೇಕ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ನಿಲ್ಲಿಸಿದೆ. ಒಂದು ಅಸ್ತಿತ್ವದ ನಿರಂತರ ಹುಡುಕಾಟದಲ್ಲಿರುವ ಮನಸ್ಸುಗಳಿಗೆ ನಿಜಕ್ಕೂ ಇಂಥದ್ದೊಂದು ನೆಲೆಯ ಅವಶ್ಯಕತೆ ಇದೆ.

ಬರವಣಿಗೆ ಖುಷಿ ನೀಡಿದೆ 

    ನನಗಿನ್ನೂ ನೆನಪಿದೆ ಹನ್ನೊಂದು ವರ್ಷಗಳ ಹಿಂದೆ 'ಸಮಾಚಾರ'ಕ್ಕೆ  ನಾನು ಬರೆದ ಮೊದಲ ಲೇಖನ ಗ್ರಂಥಾಲಯ ಚಳುವಳಿಯ ಜನಕರೆಂದೇ ಖ್ಯಾತರಾದ ಡಾ.ಎಸ್.ಆರ್.ರಂಗನಾಥನ್ ಅವರನ್ನು ಕುರಿತಾಗಿತ್ತು. ಸಂಘದಲ್ಲಿ ಪತ್ರಿಕೆಯೊಂದು ಪ್ರಕಟವಾಗುತ್ತಿದೆ ಎಂದು ಗೊತ್ತಾಗಿ ನನಗೆ ತಿಳಿದಂತೆ ಒಂದು ಲೇಖನ ಬರೆದು ಪತ್ರಿಕೆಯ ಕಾರ್ಯಾಲಯಕ್ಕೆ ಕಳುಹಿಸಿದ್ದೆ. ಲೇಖನ ಪ್ರಕಟವಾಗಿ ಪತ್ರಿಕೆ ಕೈಸೇರಿದಾಗ ನೋಡಿ ಖುಷಿಯಾಗಿತ್ತು. ಆದರೆ ಅಂದು ಬರೆದ ಲೇಖನವನ್ನು ಇಂದು ಓದಿದಾಗ ಇನ್ನೂ ಚೆನ್ನಾಗಿ ಬರೆಯಬೇಕಿತ್ತು ಎಂದೆನಿಸದೆ ಇರದು. ಆ ಲೇಖನದಲ್ಲಿನ ಪದಗಳು ಮತ್ತು ಬರವಣಿಗೆಯ ಶೈಲಿ ಸಪ್ಪೆಯಾಗಿತ್ತು ಎಂದೆನಿಸುತ್ತದೆ. ಹಾಗಿದ್ದಾಗೂ ಕೂಡಾ ಸಂಪಾದಕರು ಹೊಸ ಬರಹಗಾರ ಎನ್ನುವ ಕಾರಣದಿಂದ ಪ್ರೋತ್ಸಾಹಿಸಲು ಒಪ್ಪಿಕೊಂಡಿರಬಹುದು. ಅದೇ  ಉತ್ಸಾಹದಲ್ಲಿ ಮತ್ತೆರಡು ಲೇಖನಗಳನ್ನು ಗ್ರಂಥಾಲಯದ ಕುರಿತೇ ಬರೆದು ಪತ್ರಿಕೆಗೆ ಕಳುಹಿಸಿದೆ. ಅವುಗಳು ಕೂಡಾ ಪ್ರಕಟಗೊಂಡವು. ಹೀಗೆ ಬರೆಯಲು ಪ್ರಾರಂಭಿಸಿದ ಆರಂಭದ ದಿನಗಳಲ್ಲೇ ನಾನೊಂದು ನಿರ್ಧಾರಕ್ಕೆ ಬಂದಿದ್ದು ಅದೆಂದರೆ ನನ್ನ ಬರವಣಿಗೆ ಏಕತಾನತೆಯಿಂದ ಹೊರಬರಬೇಕು ಎಂದು. ಈ ಕಾರಣದಿಂದಲೇ ಸಂಚಿಕೆಯಿಂದ ಸಂಚಿಕೆಗೆ ನಾನು ವಿಭಿನ್ನ ವಿಷಯಗಳ ಮೇಲೆ ಬರೆಯಲು ಪ್ರಯತ್ನಿಸಿದ್ದು.
      'ಸಮಾಚಾರ' ಪತ್ರಿಕೆಯ ಬಹಳಷ್ಟು ಲೇಖನಗಳನ್ನು ನಾನು ಅತ್ಯಂತ ಖುಷಿಯಿಂದಲೇ ಬರೆದಿದ್ದೇನೆ. ಕೆಲವೊಮ್ಮೆ ಸಂಪಾದಕರ ಪ್ರೀತಿಯ ಒತ್ತಾಯಕ್ಕೆ ಮಣಿದು ಬರೆದ ಉದಾಹರಣೆಗಳೂ ಉಂಟು. ಓದಿದ ಉತ್ತಮ ಪುಸ್ತಕಗಳನ್ನು ಕುರಿತು ಪ್ರತಿಕ್ರಿಯಿಸಲು ನಾನು 'ಸಮಾಚಾರ' ಪತ್ರಿಕೆಯನ್ನೇ ವೇದಿಕೆಯಾಗಿ ಮಾಡಿಕೊಂಡಿರುವುದುಂಟು. ಒಟ್ಟಿನಲ್ಲಿ ಅಭಿವ್ಯಕ್ತಿ ಮಾಧ್ಯಮವಾಗಿ 'ಸಮಾಚಾರ' ಪತ್ರಿಕೆ ನನ್ನೊಳಗಿನ ಅನೇಕ ವಿಚಾರಗಳು ಅಕ್ಷರ ರೂಪದಲ್ಲಿ ಅನಾವರಣಗೊಳ್ಳಲು ನೆರವಾಗಿದೆ. ಸಂಚಿಕೆಯಿಂದ ಸಂಚಿಕೆಗೆ ನನ್ನ ಬರವಣಿಗೆ ಒಂದಿಷ್ಟು ಪಕ್ವಗೊಂಡಿದೆ ಎನ್ನುವುದನ್ನು ನಾನು ಅತ್ಯಂತ ವಿನಮೃತೆಯಿಂದ ಒಪ್ಪಿಕೊಳ್ಳುತ್ತೇನೆ. ಪತ್ರಿಕೆ ಬರೆಯುವ ಚೈತನ್ಯ ನೀಡಿದೆ. 'ಸಮಾಚಾರ'ದ ಬರವಣಿಗೆ ಬೇರೆ ಬೇರೆ ಪತ್ರಿಕೆಗಳಿಗೆ ಒಂದಿಷ್ಟು ಲೇಖನಗಳು ಮತ್ತು ಒಂದೆರಡು ಕಥೆಗಳನ್ನು ಬರೆಯಲು ಸಾಧ್ಯವಾಗಿಸಿದೆ. ಒಟ್ಟಿನಲ್ಲಿ ಬರವಣಿಗೆ ಖುಷಿ ನೀಡಿದೆ.
    ಈ ನಡುವೆ ನಾನೊಂದು  ಪುಸ್ತಕ ಬರೆದೆ ಎನ್ನುವುದು ಹೆಮ್ಮೆ ಮತ್ತು ಅಭಿಮಾನಕ್ಕಿಂತ ಅದು ನನಗೆ ಅತ್ಯಂತ ಅಚ್ಚರಿಯ ವಿಷಯ. 'ಸಮಾಚಾರ'ಕ್ಕೆ ನಿಯಮಿತವಾಗಿ ಬರೆಯುತ್ತಿರುವುದನ್ನು ಗಮನಿಸಿಯೇ ಅಂಥದ್ದೊಂದು ಜವಾಬ್ದಾರಿ ನನಗೆ ಕೊಟ್ಟಿರಲೂ ಬಹುದು. ಹೀಗೆ 'ಸಮಾಚಾರ' ಪತ್ರಿಕೆ ನನ್ನನ್ನು ಪುಸ್ತಕ ಬರೆಯುವ ಮಟ್ಟಕ್ಕೆ ಕರೆತಂದು ನಿಲ್ಲಿಸಿದೆ. ಈ ದಿನ ಮನೆಯ ಅಲ್ಮೇರಾದಲ್ಲಿ ಕಲಾಮ್,  ತೇಜಸ್ವಿ, ವಿಶ್ವೇಶ್ವರ ಭಟ್ ಅವರ ಪುಸ್ತಕಗಳ ಸಾಲಿನಲ್ಲಿ ಕುಳಿತಿರುವ ನನ್ನ 'ಸಾಧನೆ' ಪುಸ್ತಕವನ್ನು ನೋಡಿದಾಗಲೆಲ್ಲ ಮನಸ್ಸು ಮತ್ತದೇ ಕೃತಜ್ಞತೆಯಿಂದ ಭಾರವಾಗುತ್ತದೆ.
    ಈ ಪ್ರಶ್ನೆ ನನ್ನನ್ನು ಅನೇಕ ಸಾರಿ ಕಾಡಿದ್ದಿದೆ. ನಾನೇಕೆ ಬರೆಯುತ್ತೇನೆ? ಎಂದು. 'ಸಮಾಚಾರ'ಕ್ಕೆ ನಾನು ಬರೆದಿದ್ದು ಯಾವುದೇ ಉದ್ದೆಶಗಳನ್ನಿಟ್ಟುಕೊಂಡು ಅಲ್ಲ. ಬರವಣಿಗೆ ಎನ್ನುವುದು ಅದು ನನಗೆ ಖುಷಿ ಕೊಡುವ ನನ್ನ ಖಾಸಗಿ ವಿಷಯ. ಸಮಾಚಾರಕ್ಕೆ ಬರೆಯುವುದರಿಂದ ನನ್ನ ಬರವಣಿಗೆಯ ಶೈಲಿ ಸುಧಾರಿಸಿದೆ. ಪ್ರತಿ ತಿಂಗಳು ಹೊಸ ಹೊಸ ವಿಷಯಗಳ ಹುಡುಕಾಟದಿಂದ ಅನೇಕ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ. ಅನಗತ್ಯ ವಿಷಯಗಳಲ್ಲಿ ಬದುಕು ಕಳೆದು ಹೋಗದೆ ಒಂದು ಅಸ್ತಿತ್ವದ ಹುಡುಕಾಟದಲ್ಲಿ ತೊಡಗಿಸಿಕೊಳ್ಳಲು ಬರವಣಿಗೆ ನೆರವಾಗಿದೆ. ಜೊತೆಗೆ ಬೇರೆಯವರು ಓದಲೇ ಬೇಕೆನ್ನುವ ಹಟದಿಂದ ನಾನು ಬರೆಯುತ್ತಿಲ್ಲ. ಬರವಣಿಗೆ ನನ್ನ ಖಾಸಗಿ ವಿಷಯ ಎಂದು ತಿಳಿದುಕೊಂಡಿರುವುದರಿಂದಲೇ ಈ ವಿಷಯದ ಕುರಿತು ಬೇರೆಯವರೊಂದಿಗೆ ಮಾತನಾಡುವಾಗಲೆಲ್ಲ ಸಂಕೋಚ ನನಗೆ ಗೊತ್ತಿಲ್ಲದಂತೆ ಇಣುಕುತ್ತದೆ.

ವಾಸ್ತವಿಕತೆಯ ಅರಿವಿದೆ 

       ಬರವಣಿಗೆ ವಾಸ್ತವಿಕತೆಗೆ ಹತ್ತಿರವಾಗಿರಬೇಕು  ಎನ್ನುವುದರಲ್ಲಿ ನನಗೆ ಹೆಚ್ಚು ನಂಬಿಕೆ ಇದೆ. ಬರಹ ಲೇಖಕನ ಕಲ್ಪನೆಯಲ್ಲಿ ಮೂಡಿಬಂದರೂ ಇನ್ನಾರದೋ ಬದುಕಿಗೆ ಹತ್ತಿರವಾಗಿರಬೇಕು ಅಂದರೆ ಮಾತ್ರ ಅಂಥ ಬರಹ ಒಂದಿಷ್ಟು ದಿನಗಳವರೆಗಾದರೂ ಉಳಿಯಬಲ್ಲದು. ಜೊತೆಗೆ ಬರವಣಿಗೆಗೆ ಒಂದಿಷ್ಟು ಸಿದ್ಧತೆಯ ಅಗತ್ಯವೂ ಇದೆ. ಲೇಖನವೊಂದನ್ನು ಬರೆಯುತ್ತಿರುವ ಸಂದರ್ಭ ಅದಕ್ಕೆ ಪೂರಕವಾದ ಮಾಹಿತಿಗಾಗಿ ಪುಸ್ತಕವನ್ನೋ ಅಥವಾ ಪತ್ರಿಕೆಯನ್ನೋ ಓದುವುದು ಅತ್ಯವಶ್ಯಕ. ಇಲ್ಲದೆ ಇದ್ದಲ್ಲಿ ಸಾಹಿತ್ಯಕ್ಕೊಂದು ಹೊಸ ಆಯಾಮ ದೊರಕಿಸಿ ಕೊಡುವ ಭರಾಟೆಯಲ್ಲಿ ಮುನ್ನುಗ್ಗುವಾಗ ನಮ್ಮಿಂದಾಗುವ ತಪ್ಪುಗಳಿಂದ ಸಾಹಿತ್ಯ ಕ್ಷೇತ್ರ ವಿರೂಪಗೊಳ್ಳುವುದು ಸರಿಯಲ್ಲ. ಅದರೊಂದಿಗೆ ಬರವಣಿಗೆ ಕುರಿತು ಒಂದು ಸಣ್ಣ ನಿರ್ಲಿಪ್ತತೆ ಬರೆಯುವಾತನಿಗೆ ಇರುವುದು ಕೂಡಾ ಅತ್ಯಂತ ಅಗತ್ಯವಾಗಿದೆ. ಏಕೆಂದರೆ ನಿರೀಕ್ಷೆಗಳು ಹುಸಿಯಾದಾಗ ಬರಹಗಾರನ ಆತ್ಮವಿಶ್ವಾಸ ಕುಸಿದು ಅದರಿಂದ ಅವನ ಬರವಣಿಗೆಯ ದಾರಿ ತಪ್ಪುವ ಅಪಾಯವಿದೆ. ಈ ಎಲ್ಲ ವಿಚಾರಗಳನ್ನು  ಜೊತೆಯಲ್ಲಿಟ್ಟುಕೊಂಡೇ ನಾನು 'ಸಮಾಚಾರ' ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿರುವುದು.
     ಬರವಣಿಗೆ ಅದು ನನ್ನ ವೃತ್ತಿಯಲ್ಲ. ಬರವಣಿಗೆಯಿಂದಲೇ ಕಟ್ಟಿಕೊಂಡ ಬದುಕೂ ನನ್ನದಲ್ಲ. ಬರೆಯಲೇ ಬೇಕೆನ್ನುವ ತೀವೃತರವಾದ ಬೇಗುದಿಯೂ ನನಗಿಲ್ಲ. ಆದರೆ ಇವುಗಳೆಲ್ಲವನ್ನೂ ಮೀರಿದ ಒಂದು ಖುಷಿ ಬರವಣಿಗೆ ನನಗೆ ನೀಡಿದೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

    

No comments:

Post a Comment