Sunday, April 14, 2013

ಹಿಂದುಳಿದವರನ್ನು ತುಳಿಯುತ್ತಿರುವವರು ಯಾರು?

       


    

         ೨೦೧೨-೧೩ ನೇ ಸಾಲಿನಿಂದ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸುವ ವಿಧಾನವನ್ನು ಜಾರಿಗೆ ತಂದಿದೆ. ಈ ಮೊದಲು ಮುದ್ರಿತ ಅರ್ಜಿಯನ್ನು ಸಲ್ಲಿಸುವ ಪದ್ಧತಿ ಬಳಕೆಯಲ್ಲಿದ್ದುದ್ದರಿಂದ ಹೊಸ ವಿಧಾನದ ಪರಿಣಾಮ ವಿದ್ಯಾರ್ಥಿಗಳಿಗೆ ಅರ್ಜಿಸಲ್ಲಿಸಲು ವಿಳಂಬವಾಗುವುದರ ಜೊತೆಗೆ ತೊಂದರೆ ಸಹ ಆಗುತ್ತಿದೆ. ಅದೆಷ್ಟೋ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಹೇಗೆ ಸಲ್ಲಿಸಬೇಕೆಂದು ತಿಳಿಯದೆ ನನ್ನನ್ನು ಸಹಾಯಕ್ಕಾಗಿ ಸಂಪರ್ಕಿಸಿದ್ದುಂಟು. ಸುಮಾರು ಹತ್ತಕ್ಕಿಂತ ಹೆಚ್ಚಿನ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸುವಾಗ ನನ್ನನ್ನು ಅಚ್ಚರಿಗೊಳಿಸಿದ ಸಂಗತಿ ಎಂದರೆ ಆ ಯಾವೊಬ್ಬ ವಿದ್ಯಾರ್ಥಿಯೂ ಬಡತನದ ಹಿನ್ನೆಲೆಯಿಂದ ಬಂದವರಾಗಿರಲಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಎಂಟರಿಂದ ಹತ್ತು ಲಕ್ಷ ರುಪಾಯಿಗಳನ್ನು ಮೀರುತ್ತಿತ್ತು. ಆ ಎಲ್ಲ ವಿದ್ಯಾರ್ಥಿಗಳ ಪೋಷಕರು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಸಂಗತಿ ನನ್ನನ್ನು ಇನ್ನಷ್ಟು ಅಚ್ಚರಿಗೊಳಿಸಿತು. ಇನ್ನೂ ವಿಶೇಷವೆಂದರೆ ಅವರಲ್ಲಿನ ಕೆಲ ವಿದ್ಯಾರ್ಥಿಗಳ ಪೋಷಕರು ತಮ್ಮ ಕೆಲಸಕ್ಕೆ ಒಂದೆರಡು ದಿನಗಳ ರಜೆ ಪಡೆದು ಮಕ್ಕಳ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಬಂದಿದ್ದರು. ಸರ್ಕಾರಿ ಕೆಲಸ, ಉನ್ನತ ಹುದ್ದೆ, ಕೈತುಂಬ ಸಂಬಳ ಹೀಗಿದ್ದೂ ಅವರುಗಳು ಸರ್ಕಾರದಿಂದ ವಿದ್ಯಾರ್ಥಿ ವೇತನ ಪಡೆಯಲು ಪಡುತ್ತಿದ್ದ ಪರಿಪಾಟಲು ನೋಡಿ ನಿಜಕ್ಕೂ ಹಿಂದುಳಿದ ವರ್ಗದವರನ್ನು ಕೈ ಹಿಡಿದೆತ್ತಿ ಮುಖ್ಯ ವಾಹಿನಿಗೆ ತಂದು ನಿಲ್ಲಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನ ಅದರ ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎನ್ನುವ ಪ್ರಶ್ನೆ ಆ ಕ್ಷಣ ನನ್ನಲ್ಲಿ ಮೂಡಿತು. 

            ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೆ ತಂದ ಈ ಮೀಸಲಾತಿ ಎನ್ನುವ ಯೋಜನೆ ಅದು ಹೇಗೆ ದುರ್ಬಳಕೆಯಾಗುತ್ತಿದೆ ಎನ್ನುವುದನ್ನು ಒಂದು ಉದಾಹರಣೆಯೊಂದಿಗೆ ಹೀಗೆ ವಿವರಿಸಬಹುದು. ನನ್ನೂರಿನ ಮೋಹನ ಮತ್ತು ಶ್ರೀನಿವಾಸ ಇವರಿಬ್ಬರೂ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು. ಮೋಹನನ ತಂದೆ ಮತ್ತು ತಾಯಿ ಇಬ್ಬರೂ ಸರ್ಕಾರಿ ಇಲಾಖೆಯಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದು ಸಾಕಷ್ಟು ಸ್ಥಿತಿವಂತರೂ ಹೌದು. ಶ್ರೀನಿವಾಸ ತಂದೆ ಊರಿನ ಶ್ರೀಮಂತರ ಹೊಲಗಳಲ್ಲಿ ದಿನಗೂಲಿಯಾಗಿ ದುಡಿಯುತ್ತಿದ್ದು ದಿನದ ದುಡಿಮೆಯೇ ಅವನ ಕುಟುಂಬಕ್ಕೆ ಆಧಾರ. ಪರಿಸ್ಥಿತಿ ಹೀಗಿರುವಾಗ ಮೋಹನ ಮತ್ತು ಶ್ರೀನಿವಾಸ ಇವರಿಬ್ಬರೂ ವೈದ್ಯಕೀಯ ವಿಜ್ಞಾನದ ಪ್ರವೇಶ ಪರೀಕ್ಷೆಗೆ ಕುಳಿತು ಕ್ರಮವಾಗಿ ೬೭೧೦ ಮತ್ತು ೬೭೧೨ Rank ನೊಂದಿಗೆ ತೇರ್ಗಡೆಯಾದರು. ವಿಪರ್ಯಾಸವೆಂದರೆ ಆ ವರ್ಷ ಪರಿಶಿಷ್ಟ ಜಾತಿಯ ಕೋಟಾದಡಿ ವೈದ್ಯಕೀಯ ಕೋರ್ಸಿನ ಪ್ರವೇಶ ೬೭೧೦ Rank ಗೆ ಸೀಮಿತಗೊಂಡಿತು. ಸಹಜವಾಗಿಯೇ ಮೋಹನನಿಗೆ ರಾಜ್ಯ ಸರ್ಕಾರದ ಸಿಇಟಿ ಮೂಲಕ ರಾಜ್ಯದ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ದೊರೆಯಿತು. ಕೇವಲ ಎರಡು Rank ಹಿಂದೆ ಇದ್ದ ಶ್ರೀನಿವಾಸ ಅಂಥದ್ದೊಂದು ಅವಕಾಶದಿಂದ ವಂಚಿತನಾದ. ಶ್ರೀನಿವಾಸ ಪರಿಶಿಷ್ಟ ಜಾತಿಗೆ ಸೇರಿದ್ದು, ಆರ್ಥಿಕವಾಗಿ ಹಿಂದುಳಿದವನಾಗಿದ್ದು ಮತ್ತು ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅರ್ಹತೆ ಹೊಂದಿದ್ದರೂ ಕೂಡ ಆತನಿಗೆ ವೈದ್ಯಕೀಯ ಕೋರ್ಸಿಗೆ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಮೋಹನನ ಪೋಷಕರು ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಆರ್ಥಿಕವಾಗಿ ಸ್ಥಿತಿವಂತರಾಗಿದ್ದಾಗೂ ಪರಿಶಿಷ್ಟ ಜಾತಿ ಎನ್ನುವ ಕಾರಣಕ್ಕೆ ಆತನಿಗೆ ಸುಲಭವಾಗಿ ಪ್ರವೇಶ ದೊರೆಯಿತು. ಮೋಹನ ಮತ್ತು ಶ್ರೀನಿವಾಸ ಈ ಇಬ್ಬರೂ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ಇಲ್ಲಿ ಯಾವ ವಿದ್ಯಾರ್ಥಿಗೆ ಮೀಸಲಾತಿಯಡಿ ಪ್ರವೇಶ ದೊರೆಯಬೇಕಿತ್ತು ಎನ್ನುವ ತರ್ಕ ಎದುರಾಗುತ್ತದೆ. ಆರ್ಥಿಕವಾಗಿ ಸ್ಥಿತಿವಂತನಾದ ಮೋಹನ ಹಿಂದುಳಿದ ಜಾತಿ ಎನ್ನುವ ಒಂದೇ ಕಾರಣದಿಂದ ತನ್ನದೇ ಜಾತಿಯ ಇನ್ನೊಬ್ಬ ಅರ್ಹ ವಿದ್ಯಾರ್ಥಿಯ ಅವಕಾಶವನ್ನು ಕಸಿದುಕೊಳ್ಳುವುದು ಸರಿಯಾದ ಕ್ರಮವೇ? ಮೀಸಲಾತಿಯಡಿ ಸೌಲಭ್ಯವನ್ನು ನೀಡುವಾಗ ವಿದ್ಯಾರ್ಥಿಯ ಆರ್ಥಿಕ ಸ್ಥಿತಿಯನ್ನೂ ಪರಿಗಣಿಸುವ ನಿಯಮಗಳು ಜಾರಿಗೆ ಬಂದಲ್ಲಿ ಮೀಸಲಾತಿಗೆ ಅರ್ಹರಾದವರು ಅವಕಾಶ ಪಡೆಯುವ ಸಾಧ್ಯತೆ ಹೆಚ್ಚುತ್ತದೆ. 

        ಹಿಂದುಳಿದ ವರ್ಗದವರ ಮೀಸಲಾತಿ ವಿಷಯದಲ್ಲಿ ಈ ಮೇಲೆ ಹೇಳಿದಂಥ ಅಸಂಗತ ಘಟನೆಗಳು ಪುನರಾವರ್ತನೆಯಾಗುತ್ತಲೇ ಇವೆ. ಆರ್ಥಿಕವಾಗಿ ಸ್ಥಿತಿವಂತರಾಗಿರುವ ಹಿಂದುಳಿದ ವರ್ಗದವರು ಮೀಸಲಾತಿ ವಿಷಯವಾಗಿ ತಮ್ಮ ಹಕ್ಕನ್ನು ಚಲಾಯಿಸುತ್ತಿರುವುದು ಹಾಗೂ ಸರ್ಕಾರ ಯಾವುದೇ ಪ್ರತಿರೋಧ ತೋರದೆ ತನ್ನ ಅಂಗೀಕಾರದ ಮುದ್ರೆ ಒತ್ತುತ್ತಿರುವುದು ದುರದೃಷ್ಟಕರ ಸಂಗತಿ. ಈ ಸಂದರ್ಭದಲ್ಲಿ ನಾಡಿನ ಹಿರಿಯ ಸಾಹಿತಿ ಡಾ.ಚೆನ್ನಣ್ಣ ವಾಲಿಕಾರ ಅವರು ಹೇಳಿದ ಮಾತು ಪ್ರಸ್ತುತ ವ್ಯವಸ್ಥೆಯ ದುರಂತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸಂದರ್ಶನವೊಂದರಲ್ಲಿ ಅವರು ಮಾತನಾಡುತ್ತ ಹೀಗೆ ಹೇಳಿರುವರು 'ಇವತ್ತು ಅಸ್ಪೃಶ್ಯರೆಂದು ಕರೆಯುವ ಹಿಂದುಳಿದ ವರ್ಗದವರು ಯಾವ ಮೇಲ್ವರ್ಗದವರೊಂದಿಗೂ ಹೋರಾಟ ಮಾಡಬೇಕಾಗಿಲ್ಲ. ಅವರು ನಿಜವಾಗಿಯೂ ಹೋರಾಟ ಮಾಡಬೇಕಾಗಿರುವುದು ತಮ್ಮದೇ ವರ್ಗದ ಸ್ಥಿತಿವಂತರೊಂದಿಗೆ'. 

       ಭಾರತದ ಸಂವಿಧಾನದ ೧೫ (೪) ನೇ ವಿಧಿಯಲ್ಲಿ ಮೀಸಲಾತಿ ಕುರಿತು ಹೀಗೆ ಉಲ್ಲೇಖಿಸಲಾಗಿದೆ 'The state shall promote with special care the educational and economic interests of the weaker sections of society and shall protect them from social injustice and all forms of exploitation'. ಮೀಸಲಾತಿ ಕಾಯ್ದೆಯಡಿ ನಿಜವಾಗಿಯೂ ಅವಕಾಶ ಪಡೆಯಬೇಕಾದವರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗದವರು. ಆ ಮೂಲಕ ಸಾಮಾಜಿಕ ಅಸಮಾನತೆ ಎನ್ನುವ ತಾರತಮ್ಯ ಹೋಗಲಾಡಬೇಕು. ಪ್ರಸ್ತುತ ಸಂದರ್ಭದಲ್ಲಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರೆದ ಆದರೆ ಜಾತಿಯಲ್ಲಿ ಹಿಂದುಳಿದ ವರ್ಗದವರು ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿರುವುದು ನ್ಯಾಯ ಸಮ್ಮತವಲ್ಲ. 
    
        ಅಸ್ಪೃಶ್ಯತಾ ವಿರೋಧಿ ಹೋರಾಟದಲ್ಲಿ ಸದಾ ಕಾಲ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ನಮ್ಮ ಹಿಂದುಳಿದ ವರ್ಗದ ಸಾಹಿತಿಗಳು, ಹೋರಾಟಗಾರರು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಪ್ರಭೃತಿಗಳು ಈ ಮೀಸಲಾತಿ ವಿಷಯದಲ್ಲಿ ಆಗುತ್ತಿರುವ ಅನ್ಯಾಯವನ್ನು ನೋಡಿಯೂ ಕಣ್ಮುಚ್ಚಿಕುಳಿತು ಕೊಂಡಿರುವುದು ಅಸ್ಪೃಶ್ಯತಾ ನಿರ್ಮೂಲನಾ ಹೋರಾಟದ ಬಹುದೊಡ್ಡ ಸೋಲು. ಜೊತೆಗೆ ಅವರೆಲ್ಲ ಅಂಥದ್ದೊಂದು ಯೋಜನೆಯ ಫಲಾನುಭವಿಗಳಾಗಿರುವುದರಿಂದ ವಿರೋಧಿಸುವ ನೈತಿಕ ತಾಕತ್ತು ಅವರಲ್ಲಿಲ್ಲ. ಹೊಡಿ, ಬಡಿ ಎಂದು ಬರೆದು ಹೋರಾಟದ ಕಿಚ್ಚನ್ನು ಹಚ್ಚುವ ಬಂಡಾಯ ಮನೋಭಾವದ ನಮ್ಮ ಹಿಂದುಳಿದ ವರ್ಗದ ಅತ್ಯಂತ ಸುಶಿಕ್ಷಿತ ನಾಯಕರುಗಳು ತಮ್ಮದೇ ವರ್ಗದ ಆರ್ಥಿಕ ದುರ್ಬಲರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಅವರೆಂದೂ ಧ್ವನಿ ಎತ್ತಲಾರರು. ಹೀಗೆ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಎಲ್ಲರನ್ನೂ ಸಮಾಜದ ಮುಖ್ಯ ವಾಹಿನಿಗೆ ತಂದಲ್ಲಿ ಸಾಮಾಜಿಕ ಅಸಮಾನತೆ ತೊಲಗಿ ಮೀಸಲಾತಿ ಎನ್ನುವ ಹಾಲು ಕೊಡುವ ಕಾಮಧೇನು ಮಾಯವಾಗಬಹುದೆನ್ನುವ ಆತಂಕ ಅವರುಗಳನ್ನು ಕಾಡುತ್ತಿರಲೂಬಹುದು.

           ಇನ್ನು ಈ ಮೀಸಲಾತಿ  ವಿಷಯವಾಗಿ ಚರ್ಚಿಸುವಾಗ ಈ ಯೋಜನೆಯ ಉದ್ದೇಶ ಏನು ಎನ್ನುವ ಪ್ರಶ್ನೆ ಎದುರಾಗುತ್ತದೆ. ಇಂಥದ್ದೊಂದು ವ್ಯವಸ್ಥೆಯನ್ನು ಜಾರಿಗೆ ತಂದಿರುವುದರ ಹಿಂದೆ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಬೇಕೆನ್ನುವ ಪ್ರಾಮಾಣಿಕ ಪ್ರಯತ್ನವಿದೆ. ನಿಜಕ್ಕೂ ಅಂಥದೊಂದು ಪ್ರಯತ್ನ ಸ್ವಾಗತಾರ್ಹ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಿಂದುಳಿದ ವರ್ಗದವರಿಗೆ ಸೌಲಭ್ಯವನ್ನೋದಗಿಸಿದಲ್ಲಿ ಆರ್ಥಿಕವಾಗಿ ಸಬಲರಾಗಿ ಅವರು ಸಮಾಜದ ಮುಖ್ಯವಾಹಿನಿಗೆ ಬರುವುದರಿಂದ  ಈ  ಸಾಮಾಜಿಕ ಅಸಮಾನತೆ ಎನ್ನುವ ತಾರತಮ್ಯವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ. ಇವತ್ತು ಆರ್ಥಿಕವಾಗಿ  ಸಬಲರಾದ ಹಿಂದುಳಿದ ಸಮುದಾಯದವರೊಂದಿಗೆ ವ್ಯವಹರಿಸುವಾಗ ಮೇಲುವರ್ಗಕ್ಕೆ ಸೇರಿದ ಜನ ಹಿಂದಿನಂತೆ ಅಸ್ಪೃಶ್ಯರು ಎನ್ನುವ ಭಾವನೆಯಿಂದ ಕಾಣುತ್ತಿಲ್ಲ ಎನ್ನುವುದನ್ನು ನಾವು ತಾತ್ವಿಕವಾಗಿ ಒಪ್ಪಿಕೊಳ್ಳಲೇ ಬೇಕು. ಇಂಥದ್ದೊಂದು   ಬದಲಾದ ಮನಸ್ಥಿತಿಯನ್ನು ಗ್ರಾಮ ಮತ್ತು  ನಗರ ಪ್ರದೇಶಗಳೆರಡರಲ್ಲೂ ಕಾಣಬಹುದು. ಇದಕ್ಕೆಲ್ಲ ಮುಖ್ಯ ಕಾರಣ ಬದಲಾದ ಆರ್ಥಿಕ ಸ್ಥಿತಿ. ಹೀಗೆ ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಮೀಸಲಾತಿ ಸೌಲಭ್ಯದ ಅಗತ್ಯವಿದೆ ಎನ್ನುವುದು ವಾಸ್ತವವಾದರೆ ಈ ಸೌಲಭ್ಯ ಆರ್ಥಿಕವಾಗಿ ಹಿಂದುಳಿದ ಎಲ್ಲರಿಗೂ ದೊರೆಯಬೇಕೆನ್ನುವ ಮಾತಿನಲ್ಲಿ ಹುರುಳಿದೆ ಎಂದರ್ಥ. ಆರ್ಥಿಕವಾಗಿ ಹಿಂದುಳಿದವರನ್ನು ನಾವು ಎಲ್ಲ ಜಾತಿ ಸಮುದಾಯಗಳಲ್ಲಿ ಕಾಣಬಹುದು. ಆದ್ದರಿಂದ ಈ ಮೀಸಲಾತಿ ಸೌಲಭ್ಯ ಕೇವಲ ಪರಿಶಿಷ್ಟ ಜಾತಿ ಮತ್ತು  ವರ್ಗದ ವಿದ್ಯಾರ್ಥಿಗಳಿಗೆ ಸೀಮಿತವಾಗಿರದೆ ಅದು ಆರ್ಥಿಕವಾಗಿ ಹಿಂದುಳಿದ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ದೊರೆಯಬೇಕು. 
 

ಆಗಬೇಕಾದದ್ದೇನು 


೧. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ಆರ್ಥಿಕವಾಗಿ ಹಿಂದುಳಿದವರು ಮತ್ತು ಆರ್ಥಿಕವಾಗಿ ಸಬಲರನ್ನು ಗುರುತಿಸುವ   ಕೆಲಸಕ್ಕೆ ಸರ್ಕಾರದಿಂದ ಚಾಲನೆ ದೊರೆಯಬೇಕು.

೨. ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳ ಪಾಲಕರು ಸರ್ಕಾರಿ ನೌಕರರಾಗಿದ್ದಲ್ಲಿ ಅವರ ಮಕ್ಕಳಿಗೆ ಮೀಸಲಾತಿಯಡಿ ಯಾವುದೇ ಸೌಲಭ್ಯಗಳು ದೊರೆಯಕೂಡದು. ಈ ಮಾತು ಸರ್ಕಾರಿ ನೌಕರರಾಗದೆಯೂ ಆರ್ಥಿಕವಾಗಿ ಸ್ಥಿತಿವಂತರಾಗಿರುವ ಪಾಲಕರಿಗೂ ಅನ್ವಯಿಸಬೇಕು.

೩. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಎನ್ನುವುದು ಕುಟುಂಬವೊಂದರ ಪರಂಪರಾಗತವಾದ ಆಸ್ತಿಯಾಗಕೂಡದು. ಪ್ರತಿ ಹಿಂದುಳಿದ ವರ್ಗದ ಕುಟುಂಬಕ್ಕೆ ಈ ಮೀಸಲಾತಿ ಸೌಲಭ್ಯ ಒಂದು ನಿರ್ಧಿಷ್ಟ ಕಾಲಮಿತಿಯವರೆಗೆ ಸೀಮಿತವಾಗಿರಬೇಕು.

೪. ಕೆಲವೊಮ್ಮೆ ವಿದ್ಯಾರ್ಥಿಗಳು ಈ ಮೀಸಲಾತಿ ಸೌಲಭ್ಯವನ್ನು ಹೊಂದಿಯೂ ಶೈಕ್ಷಣಿಕ ಪ್ರಗತಿಯನ್ನು ಸಾಧಿಸದೆಯೂ ಹೋಗಬಹುದು. ಅಂಥ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಕೊಡಮಾಡುತ್ತಿರುವ ಮೀಸಲಾತಿ ಸೌಲಭ್ಯಗಳನ್ನು ಸ್ಥಗಿತಗೊಳಿಸಬೇಕು.

೫. ರಾಜಕೀಯ ಕ್ಷೇತ್ರದಲ್ಲೂ ಮೀಸಲಾತಿಯನ್ನು ಜಾರಿಗೆ ತಂದದ್ದು ಈಗ ಹೇಗೆ ಬಳಕೆಯಾಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ದರಿಂದ ಮೀಸಲಾತಿಯಡಿ ಸ್ಪರ್ಧಿಸ ಬಯಸುವ ಅಭ್ಯರ್ಥಿ ಆ  ಸೌಲಭ್ಯದಡಿ ಒಂದಕ್ಕಿಂತ ಹೆಚ್ಚು ಬಾರಿ ಸ್ಪರ್ಧಿಸುವ ಅವಕಾಶ ಇರಕೂಡದು. ಜೊತೆಗೆ ಈ ಮತಕ್ಷೇತ್ರದ ಮೀಸಲಾತಿ ಎನ್ನುವುದು ಅಪ್ಪನಿಂದ ಮಕ್ಕಳಿಗೆ ವರ್ಗಾವಣೆಯಾಗಬಾರದು.

೬. ಮೀಸಲು ಮತಕ್ಷೇತ್ರಗಳನ್ನು ಶಾಶ್ವತವಾಗಿ ಮೀಸಲಾಗಿಡುವ ಸಾಂಪ್ರದಾಯಿಕ ಪದ್ಧತಿ ಕೊನೆಗೊಳ್ಳಬೇಕು. ಈ ಮಾತು ಸಾಮಾನ್ಯ ಮತಕ್ಷೇತ್ರಗಳಿಗೂ ಅನ್ವಯಿಸಬೇಕು. ಕಾಲಕಾಲಕ್ಕೆ ಸಾಮಾನ್ಯ ಮತಕ್ಷೇತ್ರಗಳು ಮೀಸಲಾಗಿಯೂ ಮತ್ತು ಮೀಸಲು ಮತಕ್ಷೇತ್ರಗಳು ಸಾಮಾನ್ಯವಾಗಿಯೂ ಬದಲಾಗಬೇಕು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗದವರನ್ನು ರಾಜಕೀಯದ ಮುಖ್ಯವಾಹಿನಿಗೆ ತರಲು ಸಾಧ್ಯವಾಗುವುದು.

೭. ಜಾತಿ ಆಧಾರಿತ ಮೀಸಲಾತಿಗಿಂತ ಆರ್ಥಿಕವಾಗಿ ಹಿಂದುಳಿದವರಿಗೆ ಈ ಮೀಸಲಾತಿ ಸೌಲಭ್ಯವನ್ನು ಒದಗಿಸುವುದು ಉತ್ತಮ ಕಾರ್ಯ. ಏಕೆಂದರೆ ಆರ್ಥಿಕವಾಗಿ ಹಿಂದುಳಿಯುವಿಕೆಯು ಯಾವುದೇ ಒಂದು ನಿರ್ಧಿಷ್ಟ ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಸಮುದಾಯ ಜಾತಿಗಳಲ್ಲಿ ನಾವು ಆರ್ಥಿಕವಾಗಿ ಹಿಂದುಳಿದವರನ್ನು ಕಾಣುತ್ತೇವೆ. ಆದ್ದರಿಂದ ಶಿಕ್ಷಣ ಮತ್ತು ಉದ್ಯೋಗದ ಈ ಮೀಸಲಾತಿ  ಸೌಲಭ್ಯವನ್ನು  ಆರ್ಥಿಕವಾಗಿ ಹಿಂದುಳಿದವರಿಗೆ ಒದಗಿಸುವುದು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದಂತೆ.

ಕೊನೆಯ ಮಾತು 


          ಇನ್ನು ನಮ್ಮ ರಾಜಕಾರಣಿಗಳದು ಈ ಸಾಮಾಜಿಕ ಅಸಮಾನತೆ ಸದಾ ಕಾಲ ಜೀವಂತವಾಗಿರಲಿ ಎನ್ನುವ ವಾಂಛೆ. ಈ ಅಸಮಾನತೆ ಹೋಗಲಾಡಿದಲ್ಲಿ 'ವೋಟ್ ಬ್ಯಾಂಕ್'ನ್ನು ಸೃಷ್ಟಿಸಿಕೊಳ್ಳುವ ಸುವರ್ಣ ಅವಕಾಶವೊಂದು ಕೈತಪ್ಪಿ ಹೋಗಬಹುದೆನ್ನುವ  ಭೀತಿ ಅವರದು. ಅದಕ್ಕೆಂದೇ ಕೇವಲ ಹತ್ತು ವರ್ಷಗಳ ಕಾಲ ಹಿಂದುಳಿದ ವರ್ಗದವರಿಗೆ ಮೀಸಲಾತಿ ಸೌಲಭ್ಯ ಒದಗಿಸಿ ಅವರನ್ನು ಮುಖ್ಯ ವಾಹಿನಿಗೆ ತಂದು ನಿಲ್ಲಿಸಿ ಎಂದು ಹೇಳಿದ್ದ ಡಾ.ಅಂಬೇಡ್ಕರ್ ಅವರ ಮಾತನ್ನು ಕಳೆದ ಆರು ದಶಕಗಳಿಂದ ಅತ್ಯಂತ ಪ್ರಜ್ಞಾಪೂರ್ವಕವಾಗಿ ಅನುಸರಿಸಿಕೊಂಡು ಬರುತ್ತಿರುವರು. ಹಾಗಾದರೆ ಆರು ದಶಕಗಳಾದರೂ ಈ  ಮೀಸಲಾತಿ ಯೋಜನೆಯಡಿ ಹಿಂದುಳಿದ ವರ್ಗದವರನ್ನು ಸಂಪೂರ್ಣವಾಗಿ ಕೈಹಿಡಿದೆತ್ತುವ ಪ್ರಯತ್ನ ಯಶ ಕಾಣದೆ ಇರಲು ಕಾರಣಗಳಾದರೂ ಏನು? ಹುಡುಕುತ್ತ  ಹೊರಟರೆ ನನ್ನೂರಿನ ಮೋಹನ ಮತ್ತು ಶ್ರೀನಿವಾಸರ ಕಥೆ ಪ್ರತಿ ಊರಿನಲ್ಲೂ ತೆರೆದುಕೊಳ್ಳುತ್ತ ಹೋಗುತ್ತದೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment