Thursday, February 14, 2013

ಸಿಟ್ಟೊಂದೆ ಸ್ಥಾಯಿಭಾವ

         ಕೆ.ಪಿ.ಪೂರ್ಣಚಂದ್ರ ತೇಜಸ್ವಿ ತಮ್ಮ ಪುಸ್ತಕವೊಂದರಲ್ಲಿ ಹೀಗೆ ಬರೆಯುತ್ತಾರೆ 'ಮೂರ್ಖರ ಬಗ್ಗೆ ಮತ್ತು ಬದಲಾಗದ   ವ್ಯವಸ್ಥೆ ಕುರಿತು ನಾವುಗಳು ಏನೆಲ್ಲಾ ಮಾತನಾಡಿದರೂ ಕೊನೆಗೆ ನಮ್ಮಲ್ಲಿ ಉಳಿಯುವುದು ಸಿಟ್ಟೊಂದೆ ಸ್ಥಾಯಿಭಾವವಾಗಿ'. ಅವರು ಈ ಮಾತುಗಳನ್ನು ಆ ಕಾಲಘಟ್ಟದ ಚಳುವಳಿಗಳ ಕುರಿತು ಹೇಳುತ್ತಾರೆ. ಚಳುವಳಿಗಾರರಲ್ಲಿನ ಸಣ್ಣತನ, ಅಸಹಕಾರ, ಒಳಜಗಳಗಳಿಂದ ಆಗಬಹುದಾಗಿದ್ದ ಬಹುದೊಡ್ಡ ಬದಲಾವಣೆಯನ್ನು ನಾವು ಕಳೆದುಕೊಂಡೆವು ಎನ್ನುವ ತೇಜಸ್ವಿ ಸಿಟ್ಟೊಂದೆ ಸ್ಥಾಯಿಭಾವ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ. 
    
          ವ್ಯವಸ್ಥೆಯಲ್ಲಿ ಬದಲಾವಣೆಯೇ ಸಾಧ್ಯವಿಲ್ಲವೇನೋ ಎನ್ನುವ ರೀತಿಯಲ್ಲಿ ಅಪ್ರಾಮಾಣಿಕತೆ ಮತ್ತು ಅಪಮೌಲ್ಯಗಳು ಸಮಾಜದಲ್ಲಿ ಸ್ಥಾಪಿತವಾಗಿವೆ. ಇದನ್ನೆಲ್ಲ ನೋಡಿದಾಗ ತೇಜಸ್ವಿ ಅವರು ಹೇಳಿದಂತೆ ನಮ್ಮಲ್ಲಿ ಸ್ಥಾಯಿಭಾವವಾಗಿ ಉಳಿಯುವುದು ಸಿಟ್ಟೊಂದೆ. ಸಿಟ್ಟೊಂದೆ ಸ್ಥಾಯಿಭಾವವಾಗಿ ಉಳಿಯುವುದಕ್ಕೆ ಕಾರಣವಾದ ಒಂದಿಷ್ಟು ಪ್ರಸಂಗಗಳು ನಿಮಗಾಗಿ...................................

           ಎಲ್ಲರಿಗೂ ಗೊತ್ತಿರುವಂತೆ ೨೦೦೨ ನೇ ಇಸ್ವಿ ದೇಶದ ರಾಜಕೀಯ ಕ್ಷೇತ್ರದಲ್ಲಿ ಚರಿತ್ರಾರ್ಹ ಹೆಜ್ಜೆಯನ್ನಿಟ್ಟಿತು. ಆ ಸಂದರ್ಭ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ರಾಷ್ಟ್ರಪತಿ ಹುದ್ದೆಗೆ ಡಾ.ಅಬ್ದುಲ್ ಕಲಾಮ್ ಅವರ ಹೆಸರನ್ನು ಸೂಚಿಸಿದರು. ಆಗೆಲ್ಲ ಅಲ್ಪಸಂಖ್ಯಾತರ ಮತಗಳ ಮೇಲೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಕಣ್ಣು ನೆಟ್ಟಿದೆ ಎನ್ನುವ ವ್ಯಂಗ್ಯದ ಮಾತುಗಳು ಕೇಳಿಬಂದವು. ವಿರೋಧಿಸಿದಲ್ಲಿ ಅಲ್ಪಸಂಖ್ಯಾತರ ಕೋಪಕ್ಕೆ ಗುರಿಯಾಗಬಹುದೆಂಬ ಭಯದಿಂದ ಕಾಂಗ್ರೆಸ್ ಪಕ್ಷ ಕೂಡ ಬೆಂಬಲಿಸದೆ ವಿಧಿಯಿರಲಿಲ್ಲ. ಒಟ್ಟಿನಲ್ಲಿ  ಆಯಾ ಪಕ್ಷಗಳ ವೈಯಕ್ತಿಕ ಹಿತಾಸಕ್ತಿ ಮೇಲುಗೈ ಸಾಧಿಸಿದರೂ ದೇಶದ ಇತಿಹಾಸದಲ್ಲಿ ಒಬ್ಬ ಅಪರೂಪದ ರಾಷ್ಟ್ರಪತಿಯನ್ನು ಜನಸಾಮಾನ್ಯರು  ಕಾಣುವಂತಾಯಿತು. ರಾಷ್ಟ್ರಪತಿ ಹುದ್ದೆ ಕೇಂದ್ರ ಸರ್ಕಾರದ ಕೈಗೊಂಬೆ ಎನ್ನುವ ಆಪಾದನೆ ಇರುವಾಗ ಮತ್ತು ಆ ಆಪಾದನೆ ನಿಜವಾಗಿರುವ ಹೊತ್ತಿನಲ್ಲಿ ರಾಜಕಾರಣಿಯಲ್ಲದ ವ್ಯಕ್ತಿ ಅದು ಹೇಗೆ ದೇಶದ ಉನ್ನತ ಹುದ್ದೆಯನ್ನು ನಿರ್ವಹಿಸಬಲ್ಲರು ಎನ್ನುವ ಆತಂಕ ಎಲ್ಲರದಾಗಿತ್ತು. ಏಕೆಂದರೆ ಡಾ.ಅಬ್ದುಲ್ ಕಲಾಮ್ ರಾಜಕಾರಣಿಯಾಗಿ ರಾಷ್ಟ್ರಪತಿಗಳಾದವರಲ್ಲ. ರಾಜಕಾರಣದ ಯಾವೊಂದು ಪಟ್ಟನ್ನು ಕರಗತ ಮಾಡಿಕೊಳ್ಳದೆ ಅಬ್ದುಲ್ ಕಲಾಮ್ ಆ ಹುದ್ದೆಯ ಸ್ವರೂಪವನ್ನೇ ಬದಲಿಸಿದ್ದು ಈಗ ಇತಿಹಾಸ. ಅಬ್ದುಲ್ ಕಲಾಮ್ ರಾಷ್ಟ್ರಪತಿಯಾಗಿ 'ಮಿಸ್ಟರ್ ನಾಯರ್ ನಿಮ್ಮ ತಾಯಿಯನ್ನು ಕಳುಹಿಸಿ ಕೊಡಲು ನಾನು ಕೆಳಗೆ ಕಾರಿನವರೆಗೂ ಬರಲೇ' ಎಂದು ಕೇಳುವ ಮಗುವಿನ ಮುಗ್ಧತೆಯನ್ನು ರಾಷ್ಟ್ರಪತಿ ಭವನದವರೆಗೂ ಕೊಂಡೊಯ್ದರು. ರಾಷ್ಟ್ರಪತಿಗಳಾದವರು ಪಾಲಿಸಲೇ ಬೇಕಾದ ಕೆಲವೊಂದು ಶಿಷ್ಟಾಚಾರಗಳಿವೆ. ರಾಷ್ಟ್ರಪತಿಯಾಗಿದ್ದುಕೊಂಡು ತನ್ನ ಆಪ್ತಕಾರ್ಯದರ್ಶಿಯ ತಾಯಿಯನ್ನು ಕಳುಹಿಸಿ ಕೊಡಲು ಹೊರಬಾಗಿಲ ತನಕ  ಬರುವುದು  ಆ ಹುದ್ದೆಯ ಘನತೆಗೆ ತಕ್ಕದ್ದಲ್ಲ ಎನ್ನುವ ಶಿಷ್ಟಾಚಾರದ ನಡುವೆ ಕಲಾಮ್ ತಮ್ಮ ಸರಳ ನಡೆ ನುಡಿಯಿಂದ ಶಿಷ್ಟಾಚಾರವನ್ನು ಬದಿಗೆ ಸರಿಸುತ್ತಾರೆ. ರಾಷ್ಟ್ರಪತಿ ಎಂದರೆ ಮೂರು ನೂರಕ್ಕೂ ಹೆಚ್ಚು ಕೋಣೆಗಳಿರುವ ಐಶಾರಾಮಿ ಬಂಗ್ಲೆಯಲ್ಲಿ ತಮ್ಮ ಬದುಕಿನ ಕೊನೆಯ ದಿನಗಳನ್ನು ಕಳೆಯುವ ವ್ಯಕ್ತಿ ಎನ್ನುವ ಸಿದ್ದ ಸೂತ್ರವನ್ನು ಅಬ್ದುಲ್ ಕಲಾಮ್ ದೂರವಾಗಿಸಿದರು. ಅವರ ಅಧಿಕಾರವಧಿಯಲ್ಲಿ ಜನಸಾಮಾನ್ಯರ ಸಮಸ್ಯೆಗಳೂ ರಾಷ್ಟ್ರಪತಿ ಭವನವನ್ನು ಪ್ರವೇಶಿಸಲಾರಂಭಿಸಿದವು. ಎಲ್ಲೋ ಮರಗಳು ಉರುಳಿ ಬಿದ್ದಾಗ, ಹಳ್ಳಿಯೊಂದರ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಅಬ್ದುಲ್ ಕಲಾಮ್ ತಕ್ಷಣವೇ ಸ್ಪಂದಿಸಿ ತಮ್ಮ ಅಧಿಕಾರವನ್ನುಪಯೋಗಿಸಿ ಸಮಸ್ಯೆಯ ನಿವಾರಣೆಗೆ ಪ್ರಯತ್ನಿಸುತ್ತಿದ್ದರು. ಈ ಮೊದಲು ಭಾರತದ  ರಾಷ್ಟ್ರಪತಿ ಎಂದರೆ ಪ್ರದರ್ಶನದ ಗೊಂಬೆ ಎಂದೇ ತಿಳಿದಿದ್ದ ಸಾರ್ವಜನಿಕರು ಅಬ್ದುಲ್ ಕಲಾಮ್ ರ ಕಾರ್ಯದಕ್ಷತೆಯ ಪರಿಣಾಮ ಆ ಹುದ್ದೆಯ ಮಹತ್ವವನ್ನರಿತದ್ದು ಅವರ ವ್ಯಕ್ತಿತ್ವಕ್ಕೊಂದು ನಿದರ್ಶನ. ಅಬ್ದುಲ್ ಕಲಾಮ್ ಅವರ ಅಧಿಕಾರಾವಧಿ ಕೊನೆಗೊಳ್ಳುವ ದಿನಗಳು ಸಮೀಪಿಸುತ್ತಿದ್ದ ಸಂದರ್ಭ ದೇಶದ ಇಡೀ ಜನತೆ ಅವರು ಇನ್ನೊಂದು ಅವಧಿಗೆ ಆಯ್ಕೆಯಾಗಬಹುದೆಂದು ನಿರೀಕ್ಷಿಸಿದ್ದರು. ಆ ನಿರೀಕ್ಷೆ ಕೂಡ ಸಹಜವಾಗಿತ್ತು. ಆದರೆ ನಮ್ಮನಾಳುವ ಜನನಾಯಕರುಗಳಿಗೆ ಅಬ್ದುಲ್ ಕಲಾಮ್ ಅವರ ವಿದ್ವತ್ತನ್ನು ಉಪಯೋಗಿಸಿಕೊಂಡು ರಾಷ್ಟ್ರವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುವ ಬಯಕೆ ಇರಲಿಲ್ಲ. ಅವರುಗಳಿಗೆ ತಮ್ಮ ಕೈಗೊಂಬೆಯಾಗಿ ಕುಳಿತು ಕೊಳ್ಳುವ ರಾಷ್ಟ್ರಪತಿ ಬೇಕಿತ್ತು. ಅದಕ್ಕೆಂದೇ ಜನಾದೇಶವನ್ನು (ಮತದಾನದ ಮೂಲಕವಲ್ಲ) ತಿರಸ್ಕರಿಸಿ ಅಬ್ದುಲ್ ಕಲಾಮ್ ಅವರು ಮತ್ತೊಂದು ಅವಧಿಗೆ ಆಯ್ಕೆಯಾಗುವುದನ್ನು ಅಡ್ಡಿಪಡಿಸಿದರು. ಆ ಮೂಲಕ ಪ್ರಜಾಪ್ರಭುತ್ವ ರಾಷ್ಟ್ರವೊಂದರ ಪ್ರಜ್ಞಾವಂತ ಜನರ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿದರು. ಅಬ್ದುಲ್ ಕಲಾಮ್ ಅವರ ನಂತರ ರಾಷ್ಟ್ರಪತಿ ಭವನ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿತು. ನಂತರ ಬಂದ ರಾಷ್ಟ್ರಪತಿಗಳು ಭಾರತದ ಇತಿಹಾಸದಲ್ಲೇ ಕೇಳರಿಯದ ಕಳಂಕವನ್ನು ಅಂಟಿಸಿಕೊಂಡರು. ಈ ವಿಷಯವಾಗಿ ಏನೆಲ್ಲ ಚರ್ಚೆಗಳಾದ ನಂತರ ನಮ್ಮಲ್ಲಿ ಕೊನೆಗೆ ಉಳಿದದ್ದು ಮಾತ್ರ ಸಿಟ್ಟೊಂದೆ ಸ್ಥಾಯಿಭಾವವಾಗಿ.

            ೨೦೦೮ ರಲ್ಲಿ  ರಾಜ್ಯ ರಾಜಕೀಯದಲ್ಲಿ ಕರ್ನಾಟಕದ ಮತದಾರರು ಹೊಸದೊಂದು ಜನಾದೇಶವನ್ನು ನೀಡಿದರು. ಹೊಸ ಪಕ್ಷವೊಂದು ರಾಜ್ಯದಲ್ಲಿ ಮೊದಲ ಬಾರಿಗೆ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಹೀಗೆ ಅಧಿಕಾರಕ್ಕೆ ಬಂದದ್ದು ದಕ್ಷಿಣ ಭಾರತದಲ್ಲೇ ಮೊದಲು ಎನ್ನುವುದು ಇನ್ನೊಂದು ಮಹತ್ವದ ಸಂಗತಿ. ಆದರೆ ನಂತರದ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಾದ ಬೆಳವಣಿಗೆಗಳು ರಾಜ್ಯದ ಇಡೀ ಜನತೆಗೆ ಭ್ರಮನಿರಸನವನ್ನುಂಟು ಮಾಡಿದವು. ಏಕೆಂದರೆ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ  ಹಿಡಿದ ಪಕ್ಷದಿಂದ ಬಹುದೊಡ್ಡ ಬದಲಾವಣೆಯೊಂದು ರಾಜ್ಯದಲ್ಲಿ ಸಂಭವಿಸಲಿದೆ ಎನ್ನುವ ನಿರೀಕ್ಷೆ ಎಲ್ಲರದಾಗಿತ್ತು. ಆದರೆ ಜನರ ನಿರೀಕ್ಷೆಗಳೆಲ್ಲ ತಲೆಕೆಳಗಾಗುವಂಥ ಘಟನೆಗಳು ರಾಜ್ಯದ ರಾಜಕೀಯ ಇತಿಹಾಸದಲ್ಲಿ ದಾಖಲಾದವು. ಅಧಿಕಾರಕ್ಕೆ ಬಂದ ಪಕ್ಷ ಜನೋಪಯೋಗಿ ಕೆಲಸಗಳಿಗಿಂತ ತನ್ನ ಹೆಚ್ಚಿನ ಅವಧಿಯನ್ನು ಉಪಚುನಾವಣೆಗಳನ್ನು ಸಂಘಟಿಸುವುದರಲ್ಲೇ ಕಳೆಯಿತು. ಬಲವಂತವಾಗಿಯಾದರೂ ಜನರು ಮತ್ತೆ ಮತ್ತೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂಥ ಸನ್ನಿವೇಶಗಳು ಸೃಷ್ಟಿಯಾದವು. ಮುಂದಿನ ದಿನಗಳಲ್ಲಿ ಎದುರಾದ ಇನ್ನೊಂದು ಅಪಾಯವೆಂದರೆ ಭೂಮಿಯನ್ನು ಅಗೆದು ಹಣ ಕೊಳ್ಳೆ ಹೊಡೆಯುವ ಲೂಟಿಕೋರರು ಇಡೀ ಸರ್ಕಾರದ ಮೇಲೆ ಹಿಡಿತ ಸಾಧಿಸಿದ್ದು. ಆ ಹಿಡಿತದಿಂದ ಪಾರಾಗುವುದಕ್ಕಾಗಿ ಸರ್ಕಾರ ಕಂಡು ಕೊಂಡ ಇನ್ನೊಂದು ಅನೈತಿಕ ಮಾರ್ಗವೆಂದರೆ ಅದು ಸರ್ಕಾರವನ್ನು ಒಂದು ನಿರ್ಧಿಷ್ಟ ಜಾತಿಯ ಸುಪರ್ದಿಗೊಳಪಡಿಸಿದ್ದು. ರಾಜ್ಯ ರಾಜಕೀಯದ ಇತಿಹಾಸದಲ್ಲೇ ಕಂಡು ಕೇಳರಿಯದ ಲಜ್ಜೆಗೇಡಿತನದ ವರ್ತನೆಯಿದು. ನಿರಂತರ ಒಳ ಜಗಳ ಮತ್ತು ತಮ್ಮ ತಮ್ಮಲ್ಲಿನ ಒಣ ಪ್ರತಿಷ್ಠೆಯ ಪರಿಣಾಮ ರಾಜ್ಯದ ಜನತೆ ಐದು ವರ್ಷಗಳಲ್ಲಿ ಮೂರು ಜನ ಮುಖ್ಯಮಂತ್ರಿಗಳನ್ನು ಕಾಣ ಬೇಕಾಯಿತು. ಮುಖ್ಯಮಂತ್ರಿಯಾದಿಯಾಗಿ ಅನೇಕ ಮಂತ್ರಿಗಳು ಭೃಷ್ಟಾಚಾರದ ಆರೋಪಕ್ಕೆ ಗುರಿಯಾಗಿ ಅಧಿಕಾರವನ್ನು ಕಳೆದು ಕೊಂಡು ಜೈಲು ಪಾಲಾಗುವಂಥ ಘಟನೆಗಳಿಗೆ ಕರ್ನಾಟಕದ ಜನತೆ ಸಾಕ್ಷಿಯಾಗಬೇಕಾದದ್ದು ಅತ್ಯಂತ ವಿಷಾಧನಿಯ. ದೇಶದಲ್ಲೇ ಕರ್ನಾಟಕವನ್ನು ಒಂದು ಮಾದರಿ ರಾಜ್ಯವನ್ನಾಗಿ ಮಾಡುವ ಎಲ್ಲ ಅವಕಾಶಗಳನ್ನು ಕೈ ಚೆಲ್ಲಿದ ಈ ರಾಜಕೀಯ ನಾಯಕರುಗಳು ದೋಚಿಕೊಂಡಿದ್ದು ಮಾತ್ರ ಕೋಟಿಗಳ ಲೆಕ್ಕದಲ್ಲಿ. ತನ್ನ ಕಣ್ಣೆದುರೇ ಅಪ್ರಾಮಾಣಿಕತೆ ಮತ್ತು ಭೃಷ್ಟಾಚಾರ ತಾಂಡವವಾಡುತ್ತಿರುವಾಗ ರಾಜ್ಯದ ಪ್ರಜೆ ಮಾತ್ರ ಅಸಾಹಯಕನಾಗಿ ನೋಡುತ್ತ ಕೂಡಬೇಕಾದ ಪರಿಸ್ಥಿತಿ. ಏನೆಲ್ಲ ವಾದಿಸಿದರೂ ಪ್ರತಿರೋಧ ತೋರಿದರೂ ಕೊನೆಗೂ ನಮ್ಮಲ್ಲಿ ಉಳಿಯುವುದು ಸಿಟ್ಟೊಂದೆ ಸ್ಥಾಯಿಭಾವವಾಗಿ.

         ಈ ನಡುವೆ ಇತ್ತೀಚಿಗೆ ನಾನೊಂದು ಪುಸ್ತಕ ಓದಿದೆ. ಆ ಪುಸ್ತಕದಲ್ಲಿ ನಾಡಿನ ಹಿರಿಯ ಸಾಹಿತಿ ಆರ್ಥಿಕವಾಗಿ ಹಿಂದುಳಿದವರು ಎನ್ನುವ ಪ್ರತ್ಯೆಕತೆಯೇ ತಪ್ಪು ಎನ್ನುವ ಮಾತುಗಳನ್ನಾಡುತ್ತಾರೆ. ಜಾತಿ ಆಧಾರಿತವಾಗಿ ಹಿಂದುಳಿದವರು ಎನ್ನುವ ಪ್ರತ್ಯೇಕತೆ ಇರಲಿ ಎಂದು ವಾದಿಸುವ ಅವರು ಚಲನ ಸಮಾಜ ಮತ್ತು ತೆವಳುವ ಸಮಾಜ ಎನ್ನುವ ಕಾರಣಗಳನ್ನು ನೀಡಿ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಾರೆ. ಆರ್ಥಿಕವಾಗಿ ಹಿಂದುಳಿದವರು ಚಲನ ಸಮಾಜದಲ್ಲಿ  ಬದುಕುತ್ತಿರುವುದರಿಂದ ಅವರಿಗೆ ಆರ್ಥಿಕ ಹಿನ್ನೆಡೆಯಿಂದ ಎದ್ದು ನಿಲ್ಲುವ ಸಾಮರ್ಥ್ಯವಿದೆ ಎಂದು ಹೇಳುವ ಶ್ರೀಯುತರು ಇಂಥವರಿಗೆ ಸರ್ಕಾರದ ಸೌಲಭ್ಯಗಳು ಅನಗತ್ಯ ಎನ್ನುತ್ತಾರೆ. ಅವರ ಪ್ರಕಾರ ಜಾತಿ ಆಧಾರಿತವಾಗಿ ನಾವು ಯಾರನ್ನು ಹಿಂದುಳಿದ ವರ್ಗದವರೆಂದು ಕರೆಯುತ್ತೇವೆಯೋ ಅವರಿಗೆ ಮಾತ್ರ ಸರ್ಕಾರ ಕೊಡಮಾಡುವ ಎಲ್ಲ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುವ ಹಕ್ಕಿದೆ. ಅವರ ಈ ಅಭಿಪ್ರಾಯವನ್ನು ನಾವು ಕಾಳಜಿ ಎನ್ನುವುದಾದರೆ ಆರ್ಥಿಕವಾಗಿ ಹಿಂದುಳಿದವರನ್ನು ಕೈಹಿಡಿದು ಮೇಲೆತ್ತುವುದು ಸಾಮಾಜಿಕ ಅಪರಾಧವೇ ಎನ್ನುವುದು ಎಲ್ಲರಲ್ಲೂ ಮೂಡುವ ಪ್ರಶ್ನೆ. ಇವತ್ತು ಮೇಲ್ವರ್ಗದವರೆಂದು ಕರೆದುಕೊಳ್ಳುವ ಅದೆಷ್ಟು ಜಾತಿಗಳಲ್ಲಿ ಬಡವರಿಲ್ಲ. ಹಾಗೆಯೇ ಹಿಂದುಳಿದ ವರ್ಗದವರೆಂದು ಕರೆದುಕೊಳ್ಳುವ ಎಷ್ಟು ಜಾತಿಗಳಲ್ಲಿ ಸ್ಥಿತಿವಂತರಿಲ್ಲ. ಅಪ್ಪ ಅಮ್ಮ ಸರ್ಕಾರಿ ನೌಕರಿಯಲ್ಲಿದ್ದೂ ಅವರ ಮಕ್ಕಳು ಹಿಂದುಳಿದ ವರ್ಗದ ಕೋಟಾದಡಿ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಹೀಗೆ ಮಾಡುತ್ತಿರುವದು ಸರಿ ಎಂದಾದರೆ ಮೇಲ್ವರ್ಗದ ಆದರೆ ಆರ್ಥಿಕವಾಗಿ ಹಿಂದುಳಿದ ಜನರು ಸರ್ಕಾರದಿಂದ ಒಂದಿಷ್ಟು ಸೌಲಭ್ಯಗಳನ್ನು ನಿರೀಕ್ಷಿಸುವುದು ಅದು ಹೇಗೆ ವಂಚನೆಯಾಗುತ್ತದೆ. ಜಾತಿ ವ್ಯವಸ್ಥೆಯೇ ಅಳಿದು ಎಲ್ಲರೂ ಒಂದು ಎನ್ನುವ ಪರಿಕಲ್ಪನೆ ಒಡಮೂಡಬೇಕು ಎಂದು  ಬಯಸುವ ಈ ಬರಹಗಾರರು ಆಂತರ್ಯದಲ್ಲಿ ಮಾತ್ರ ಹಿಂದುಳಿದ ವರ್ಗದವರು ಎನ್ನುವ ವ್ಯವಸ್ಥೆ ನಿರಂತರವಾಗಿ ಮುಂದುವರೆಯಲಿ ಎಂದು ಬಯಸುವುದು ಸರಿಯಲ್ಲ. ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಿದಾಗ ಮಾತ್ರ ಈ ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯ. ಈ ವ್ಯವಸ್ಥೆಯಡಿಯಲ್ಲಿ ಸೌಲಭ್ಯಗಳನ್ನು ಅನುಭವಿಸುತ್ತಿರುವವರಿಗೂ ಮತ್ತು ನಮ್ಮನ್ನಾಳುವ ರಾಜಕಾರಣಿಗಳಿಗೂ ಜಾತಿ ಎನ್ನುವ ಚಿನ್ನದ ಮೊಟ್ಟೆಯಿಡುವ ಕೋಳಿಯನ್ನು ಒಂದೇ ಸಲಕ್ಕೆ ಕತ್ತರಿಸಲು ಇಷ್ಟವಿಲ್ಲ. ಈ ವಿಷಯದಲ್ಲಿ ಏನೆಲ್ಲ ಚರ್ಚೆ  ವಾದಗಳ   ನಂತರ ಕೊನೆಗೂ ನಮ್ಮಲ್ಲುಳಿಯುವುದು ಸಿಟ್ಟೊಂದೆ ಸ್ಥಾಯಿಭಾವವಾಗಿ.

           ಜಾಗತೀಕರಣದ ಈ ದಿನಗಳಲ್ಲಿ ಬಡವರ ಮಕ್ಕಳು ಯಾವ ಭಾಷೆಯಲ್ಲಿ ಶಿಕ್ಷಣವನ್ನು ಪಡೆಯಬೇಕು ಎನ್ನುವ ಆತಂಕ ನನ್ನನ್ನು ಕಾಡುತ್ತಿದೆ. ಇಲ್ಲಿ ನಾನು ಬಡವರ ಮಕ್ಕಳೆಂದು ಹೇಳಲು ಕಾರಣ ಸ್ಥಿತಿವಂತರ ಮಕ್ಕಳಿಗಾಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ರಾಜ್ಯದಲ್ಲಿ ಈಗಾಗಲೇ ಅಸ್ತಿತ್ವಕ್ಕೆ ಬಂದಿವೆ. ಈ ಶಾಲೆಗಳು ದುಬಾರಿ ಶುಲ್ಕವನ್ನು ವಸೂಲಿ ಮಾಡುತ್ತಿರುವುದರಿಂದ ಅಂಥ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ದೊರಕಿಸಿ ಕೊಡಬೇಕೆನ್ನುವ ಬಡ ಕುಟುಂಬಗಳಲ್ಲಿನ ಪಾಲಕರ ಆಸೆ ಇವತ್ತಿಗೂ ಮರೀಚಿಕೆಯಾಗಿಯೇ ಉಳಿದಿದೆ. ಇಂಗ್ಲಿಷ್ ಭಾಷೆ ರಾಜ್ಯದಲ್ಲಿ  ಶಿಕ್ಷಣದ ಮಾಧ್ಯಮವಾಗಬೇಕೆನ್ನುವುದು ನನ್ನ ವಾದವಲ್ಲ. ಆದರೆ ಜಾಗತೀಕರಣದ ಪರಿಣಾಮ ಇವತ್ತು ಇಂಗ್ಲಿಷ್ ಮಾಧ್ಯಮದ ಶಿಕ್ಷಣ ನಮ್ಮ ಮಕ್ಕಳಿಗೆ ಅನಿವಾರ್ಯವಾಗುತ್ತಿದೆ. ಏಕೆಂದರೆ ಇಂಗ್ಲಿಷ್ ಬದುಕಿನ ಭಾಷೆಯಾಗಿ ನಮ್ಮೆಲ್ಲರ ಬದುಕಿನಲ್ಲಿ ತನ್ನ ಮಹತ್ವವನ್ನು ಹೆಚ್ಚಿಸಿಕೊಂಡಿದೆ. ಇಂಥ ವಾತಾವರಣದಲ್ಲಿ ಕನ್ನಡ ಮಾಧ್ಯಮದ ಶಿಕ್ಷಣವನ್ನು ನೆಚ್ಚಿಕೊಂಡು ಕೂಡುವುದು ಸಧ್ಯದ ಮಟ್ಟಿಗೆ ಮೂರ್ಖತನದ ಪರಮಾವಧಿ. ಇಲ್ಲಿ ಕನ್ನಡ ಭಾಷೆಯನ್ನು ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಒಡ್ಡುತ್ತಿರುವ ಪೈಪೋಟಿ ಎದುರು ಅದನ್ನು ಉಳಿಸಬೇಕಾದರೆ ಮೊದಲು ನಾವು ಮಾಡಬೇಕಾಗಿರುವ ಕೆಲಸ ಕನ್ನಡವನ್ನು ಹೃದಯದ ಭಾಷೆಯನ್ನಾಗಿಸಿಕೊಳ್ಳಬೇಕು. ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಅನಿವಾರ್ಯತೆಯನ್ನು ಅರಿತ ಸರ್ಕಾರ ಒಂದು ಹಂತದಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯುವ ಯೋಜನೆ ರೂಪಿಸಿತು. ಆಗಲೇ ನಮ್ಮ ಸಾಹಿತಿ ಗಣ್ಯರಲ್ಲಿ ಕನ್ನಡದ ಪ್ರೀತಿ ಉಕ್ಕಿ ಹರಿದದ್ದು. ಕನ್ನಡ ಪ್ರೀತಿ ಅವರಲ್ಲಿ ನಾಭಿಯಿಂದಲೇ ಹುಟ್ಟಿದೆ ಏನೋ ಎನ್ನುವಂತೆ ಸರ್ಕಾರದ ಆ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆಗಿಳಿದರು. ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಸರ್ಕಾರ ತೆರೆಯಲೇ ಕೂಡದು ಎಂದು ಪಟ್ಟು ಹಿಡಿದರು (ಖಾಸಗಿಯವರಿಂದ ನಾಯಿ ಕೊಡೆಗಳಂತೆ ಸ್ಥಾಪನೆಯಾಗಲಿ ಅದನ್ನು ವಿರೋಧಿಸಲಾರರು). ನಿಜಕ್ಕೂ ಕನ್ನಡ ಭಾಷೆಯ ಬಗೆಗಿರುವ ಅವರ ಕಾಳಜಿಯನ್ನು ಮೆಚ್ಚಿಕೊಳ್ಳೋಣ. ದುರಂತದ ಸಂಗತಿ ಎಂದರೆ ಹೀಗೆ ಬೀದಿಗಿಳಿದು ಹೋರಾಟ ಮಾಡಿದ ಬಹುತೇಕ ಹೋರಾಟಗಾರರ ಮಕ್ಕಳು ಮತ್ತು ಮೊಮ್ಮಕ್ಕಳು ಓದುತ್ತಿರುವುದು ರಾಜ್ಯದ ಪ್ರತಿಷ್ಠಿತ ಇಂಗ್ಲಿಷ್ ಶಾಲೆಗಳಲ್ಲಿ. ಭಾಷೆಯ ಮೇಲೆ ನಿಜವಾದ ಕಾಳಜಿ ಇದ್ದಿದ್ದರೆ ಕನ್ನಡ ಮಾಧ್ಯಮದ ಶಿಕ್ಷಣವೇ ಕಡ್ಡಾಯವಾಗಿ ಜಾರಿಗೆ ಬರಲಿ ಎಂದು ಅವರು ಸರ್ಕಾರವನ್ನು ಒತ್ತಾಯಿಸಬೇಕಿತ್ತು. ತಮ್ಮ ಮಕ್ಕಳು ಮಾತ್ರ ಬದುಕಿನ ಭಾಷೆಯಲ್ಲಿ ಕಲಿತು ಬಲಾಢ್ಯರಾಗಲಿ ಎನ್ನುವ ಈ ಪ್ರಭೃತಿಗಳ ಸ್ವಾರ್ಥ ಕಂಡಾಗ ಕೊನೆಗೂ ನಮ್ಮಲ್ಲುಳಿಯುವುದು ಸಿಟ್ಟೊಂದೆ ಸ್ಥಾಯಿಭಾವವಾಗಿ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 


No comments:

Post a Comment