Wednesday, July 1, 2015

ಮಹಿಳಾ ಅಸ್ತಿತ್ವದ ವಿವಿಧ ನೆಲೆಗಳು






            ರಾಮಾಯಣದಲ್ಲಿ ಊರ್ಮಿಳೆ ಎನ್ನುವ ಪಾತ್ರವೊಂದಿದೆ. ಈಕೆ ಲಕ್ಷ್ಮಣನ ಹೆಂಡತಿ. ರಾಮ ಕಾಡಿಗೆ ಹೋಗುವ ಸಂದರ್ಭ ಅಣ್ಣನನ್ನು ಅನುಸರಿಸಿ ಲಕ್ಷ್ಮಣ ಸಹ ಕಾಡಿಗೆ ತೆರಳುತ್ತಾನೆ. ಕಾಡಿಗೆ ಹೋಗುತ್ತಿರುವ ಲಕ್ಷ್ಮಣನಿಗೆ ತನ್ನನ್ನೇ ನಂಬಿಕೊಂಡ ಜೀವವೊಂದಿದೆ ಎನ್ನುವ ನೆನಪಾಗುವುದಿಲ್ಲ. ಹೆಂಡತಿ ಸೀತೆಯನ್ನೂ ತನ್ನೊಂದಿಗೆ ಕಾಡಿಗೆ ಕರೆದೊಯ್ಯುತ್ತಿರುವ ರಾಮನಿಗೂ ತನ್ನ ತಮ್ಮ ಲಕ್ಷ್ಮಣನಿಗೂ ಪತ್ನಿ ಇರುವ ಸತ್ಯ ಗೋಚರವಾಗುವುದಿಲ್ಲ. ರಾವಣ ಕಾಡಿನಲ್ಲಿ ಸೀತೆಯನ್ನು ಅಪಹರಿಸಿದಾಗ ವಿರಹ ವೇದನೆಯಿಂದ ಬಳಲುವ ರಾಮ ತಮ್ಮ ಲಕ್ಷ್ಮಣನೆದುರು ಸೀತೆಯ ಅಗಲುವಿಕೆಯಿಂದಾದ ದು:ಖವನ್ನು ತೋಡಿಕೊಳ್ಳುತ್ತಾನೆ. ದಾರಿಯಲ್ಲಿ ಎದುರಾಗುವ ಮರ, ಗಿಡ, ಬಳ್ಳಿ, ನದಿ, ಬೆಟ್ಟಗಳನ್ನು ಮಾತನಾಡಿಸಿ ನನ್ನ ಸೀತೆಯನ್ನು ಕಂಡಿರಾ ಎಂದು ಪ್ರಲಾಪಿಸುತ್ತಾನೆ. ಹೀಗೆ ದು:ಖಿಸುತ್ತಿರುವ ರಾಮನಿಗೆ ಲಕ್ಷ್ಮಣನೂ ವಿರಹಾಗ್ನಿಯಿಂದ ಬಳಲುತ್ತಿರಬಹುದೆನ್ನುವ ಕಿಂಚಿತ್ ಸಂದೇಹವೂ ಮನಸ್ಸಿನಲ್ಲಿ ಸುಳಿಯದೇ ಹೋಗುತ್ತದೆ. ರಾಮ ರಾವಣನನ್ನು ಜಯಿಸಿ ಹದಿನಾಲ್ಕು ವರ್ಷಗಳ ವನವಾಸವನ್ನು ಪೂರ್ಣಗೊಳಿಸಿ ಸೀತೆ ಮತ್ತು ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಮರಳುತ್ತಾನೆ. ಹಾಗಾದರೆ ಆ ಹದಿನಾಲ್ಕು ವರ್ಷಗಳ ಕಾಲ ಪತಿಯಿಂದ ದೂರಾಗಿ ಊರ್ಮಿಳೆ ಅನುಭವಿಸಿದ ವೇದನೆ ಮತ್ತು ಸಂಕಟಗಳ ಕಥೆ ಏನಾಯಿತು? ರಾಮಾಯಣವನ್ನು ಓದುತ್ತಿರುವ ಘಳಿಗೆ ಓದುಗ ಊರ್ಮಿಳೆಯ ಪಾತ್ರದೊಂದಿಗೆ ಮುಖಾಮುಖಿಯಾಗುವುದೇ ಇಲ್ಲ. ಭಾತೃತ್ವದ   ಪ್ರಶ್ನೆ  ಎದುರಾದಾಗ ಅದಕ್ಕೆ ಶ್ರೇಷ್ಠ ಉದಾಹರಣೆಯಾಗಿ ಲಕ್ಷ್ಮಣನ ಹೆಸರನ್ನು ಹೇಳುವ ನಾವು ಊರ್ಮಿಳೆಯನ್ನು ಮರೆತು ಬಿಡುತ್ತೇವೆ. ಹಾಗಾದರೆ ಊರ್ಮಿಳೆಯದು ಶ್ರೇಷ್ಠ ತ್ಯಾಗವಲ್ಲವೇ? ಹದಿನಾಲ್ಕು ವರ್ಷಗಳ ಕಾಲ ಗಂಡನಿಂದ ದೂರವೇ ಉಳಿದು ಆತನನ್ನು ಅಣ್ಣನ ಸೇವೆಗಾಗಿ ಪ್ರಾಂಜಲ ಮನಸ್ಸಿನಿಂದ ಕಳಿಸಿಕೊಟ್ಟ ಊರ್ಮಿಳೆಯ ವ್ಯಕ್ತಿತ್ವಕ್ಕೆ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ದೊರೆಯಬೇಕಾದ ಮನ್ನಣೆ ಸಿಗಲೇ ಇಲ್ಲ. ಅಂದರೆ ಮಹಿಳೆಯನ್ನು ಪುರುಷ ಪ್ರಧಾನ ನೆಲೆಯಲ್ಲಿ ಶೋಷಣೆಗೊಳಪಡಿಸುತ್ತ ಬಂದಿರುವುದಕ್ಕೆ ನಮ್ಮ ಪ್ರಾಚೀನ ಪರಂಪರೆಯ ಒತ್ತಾಸೆಯಿದೆ ಎಂದರ್ಥ. ರಾಮಾಯಣ ಮತ್ತು ಮಹಾಭಾರತದ ಕಾಲದಿಂದಲೂ ಸ್ತ್ರೀ ಶೋಷಣೆಯ ವಸ್ತುವಾಗಿಯೇ ಬಿಂಬಿತವಾಗುತ್ತ ಬಂದಿರುವಳು.

             ಇತಿಹಾಸದ ಪಾತ್ರವೊಂದು ಸ್ತ್ರೀ ಶೋಷಣೆಯ ವಸ್ತುವಾಗಿ ಪುರುಷ ಪ್ರಧಾನ ವ್ಯವಸ್ಥೆಗೆ ಒತ್ತಾಸೆಯಾಗಿ ನಿಂತಾಗ ಇತಿಹಾಸದ ಮತ್ತೊಂದು ಪಾತ್ರವಾದ ಅಕ್ಕ ಮಹಾದೇವಿಯದು ಪುರುಷ ಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಿ ಹೊಸ ವ್ಯವಸ್ಥೆಯನ್ನು ಕಟ್ಟುವ ತಹತಹಿಕೆ. ಚೆನ್ನಮಲ್ಲಿಕಾರ್ಜುನನನ್ನೇ ತನ್ನ ಪತಿಯೆಂದು ಮಾನಸಿಕವಾಗಿ ಪರಿಭಾವಿಸಿದ ಅಕ್ಕ ಕೌಶಿಕ ರಾಜನ ಕಾಮನೆಗಳನ್ನು ಮೆಟ್ಟಿನಿಂತು ಮಹಿಳಾ ವಿಮೋಚನೆಗೆ ಹೊಸ ದಾರಿ ತೋರುತ್ತಾಳೆ. ಒಂದು ಪಾತ್ರದ ಮೂಲಕ ಸ್ತ್ರೀ ಶೋಷಣೆಗೆ ಸಾಕ್ಷಿಯಾದ ಇತಿಹಾಸ ಮತ್ತೊಂದು ಪಾತ್ರದ ಮೂಲಕ ಸ್ತ್ರೀ ವಿಮೋಚನೆಗೂ ಸಾಕ್ಷಿಯಾದದ್ದು ಇತಿಹಾಸದ ಮಹತ್ವಗಳಲ್ಲೊಂದು.  ಇತಿಹಾಸದಿಂದ ಬಿಡುವಷ್ಟೇ ಪಡೆಯುವುದು ಕೂಡ ಬಹುಮುಖ್ಯವಾದದ್ದು. ನಮ್ಮ ನೆಲದ ಮಹಿಳೆಯರು ಅಕ್ಕ ಮಹಾದೇವಿಯ ಧೋರಣೆ ಹಾಗೂ ಪುರುಷ ಸಮಾಜವನ್ನು ಧಿಕ್ಕರಿಸಿ ನಿಂತ ಆಕೆಯ ಮನೋಸ್ಥೈರ್ಯವನ್ನು ಬಳುವಳಿಯಾಗಿ ಪಡೆದು ಸ್ತ್ರೀ ವಿಮೋಚನೆಯ ಅನೇಕ ಸ್ಥಿತ್ಯಂತರಗಳಿಗೆ ಪ್ರಯತ್ನಿಸಿದರು. ಒಂದು ರೀತಿಯಲ್ಲಿ ಮಹಿಳೆ ತನ್ನ ಅಸ್ಮಿತೆಯನ್ನು ವಿವಿಧ ನೆಲೆಗಳಲ್ಲಿ ಗುರುತಿಸಿಕೊಳ್ಳಲು ಮಾಡಿದ ಪ್ರಯತ್ನವೂ ಅದಾಗಿತ್ತು.

          ಮಹಿಳೆ ಪುರುಷ ಪ್ರಧಾನ ವ್ಯವಸ್ಥೆಯ ನೆರಳಿನಿಂದ  ಹೊರಬಂದು  ತನ್ನದೇ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳಲು ಮಾಡಿದ ಪ್ರಯತ್ನಗಳಲ್ಲಿ ಆಕೆ ಅತ್ಯಂತ ಸಮರ್ಥನಿಯವಾಗಿ ಬಳಸಿಕೊಂಡಿದ್ದು  ಬರವಣಿಗೆಯನ್ನು ಎನ್ನುವ ನಂಬಿಕೆ ನನ್ನದು. ಅಕ್ಕ ಮಹಾದೇವಿಯ ಜೊತೆಗೆ ಅನೇಕ ವಚನಕಾರ್ತಿಯರು ೧೨ನೇ ಶತಮಾನದಲ್ಲಿ ಬರವಣಿಗೆಯನ್ನೇ ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿಸಿಕೊಂಡು ಸಾವಿರಾರು ವಚನಗಳನ್ನು ಬರೆದು ಆ ಮೂಲಕ ಹೆಣ್ಣಿನ ತುಮುಲ ಹಾಗೂ ಒಳತೋಟಿಗಳನ್ನು ತೆರೆದಿಡುವ ಪ್ರಯತ್ನ ಮಾಡಿದರು. ವಚನಕಾರ್ತಿಯರ ಆ ಒಂದು ಪ್ರಯತ್ನವನ್ನೇ ಆಧಾರವಾಗಿಟ್ಟುಕೊಂಡು ೧೯ನೇ ಶತಮಾನದಲ್ಲಿ ಅನೇಕ ಮಹಿಳೆಯರು ಬರವಣಿಗೆಯ ಮೂಲಕ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಯತ್ನಿಸಿದರು. ಪ್ರಾರಂಭದಲ್ಲಿ ಮಹಿಳೆ ತನ್ನ ಗೃಹ ಕೃತ್ಯಗಳ ನಡುವೆ ದೊರೆಯುವ ಬಿಡುವಿನ ಸಮಯವನ್ನು ದೇವರ ಹಾಡು, ಕೀರ್ತನೆ, ಭಜನೆಯಂಥ ಬರವಣಿಗೆಗೆ ವಿನಿಯೋಗಿಸಿಕೊಂಡು ಪುರುಷ ದಬ್ಬಾಳಿಕೆಯಿಂದ ಯಾತನೆಗೊಂಡ ಮನಸ್ಸಿಗೆ ಒಂದಿಷ್ಟು ಸಾಂತ್ವನದ ಸಿಂಚನ ಗೈದಳು. ನಂತರದ ದಿನಗಳಲ್ಲಿ ದೇವರ ಕೋಣೆಯಿಂದ ನಡುಮನೆ ಹಾಗೂ ಹಿತ್ತಲನ್ನು ಪ್ರವೇಶಿಸಿದ ಮಹಿಳಾ ಬರವಣಿಗೆ ದೇವರ ನಾಮ, ಕೀರ್ತನೆಗಳಿಂದ ಕಥೆ ಕವಿತೆಗಳಿಗೆ ವಿಸ್ತರಿಸತೊಡಗಿತು. ಆದರೂ ಮಹಿಳಾ ಸಾಹಿತ್ಯವೆಂದರೆ ಅದು ಅಡುಗೆ ಮನೆಯ ಸಾಹಿತ್ಯ ಎನ್ನುವ ಗೇಲಿಗೆ ಒಳಗಾಗಬೇಕಾಯಿತು. ಅಂಥದ್ದೊಂದು ಗೇಲಿಗೆ ಪುರಾವೆಯಾಗಿ ಕೆಲವು ಬರಹಗಾರ್ತಿಯರ ಬರವಣಿಗೆ ಅಡುಗೆ, ಶೃಂಗಾರ, ಗಂಡ, ಮಕ್ಕಳ ಪಾಲನೆಗೆ ಮಾತ್ರ ಸೀಮಿತವಾಗಿರುತ್ತಿತ್ತು. ಇಂಥದ್ದೊಂದು ಆರೋಪದಿಂದ ಹೊರಬರುವುದು ಆ ದಿನಗಳಲ್ಲಿನ ಮಹಿಳಾ ಸಾಹಿತ್ಯದ ತುರ್ತು ಅಗತ್ಯವಾಗಿತ್ತು. ಅದಕ್ಕೆಂದೇ ಅನೇಕ ಲೇಖಕಿಯರು ತಮ್ಮದೇ ಮನೆಯ ಮಹಿಳೆಯರ ಸಮಸ್ಯೆಗಳನ್ನು ಬರವಣಿಗೆಯ ಮೂಲಕ ತೆರೆದಿಡಲಾರಂಭಿಸಿದರು. ನಡುಮನೆ ಮತ್ತು ಹಿತ್ತಲಿಗೆ ಸೀಮಿತವಾಗಿದ್ದ ಮಹಿಳಾ ಸಾಹಿತ್ಯದ ಬಿಕ್ಕಳಿಕೆ ಮನೆಯ ಅಂಗಳ ಹಾಗೂ ಜಗುಲಿಯನ್ನು ಹೋಗಿ ತಲುಪಿದಾಗಲೇ ಬರವಣಿಗೆ ಮಹಿಳೆಯರ ದು:ಖ ಮತ್ತು ಸಂಕಟಗಳಿಗೆ ವೇದಿಕೆಯಾಗುತ್ತಿದೆ ಎನ್ನುವ ಅನುಮಾನ ಮೊಳಕೆಯೊಡೆಯಲಾರಂಭಿಸಿತು. ಪ್ರಾರಂಭದ ದಿನಗಳಲ್ಲಿನ ಮಹಿಳಾ ಸಾಹಿತ್ಯದ ವಿಷಯವಸ್ತು ಅಡುಗೆ ಕೋಣೆ ಹಾಗೂ ಮಲಗುವ ಕೋಣೆಗಳ ನಾಲ್ಕು ಗೋಡೆಗಳ ನಡುವಿನ ಆಕೆಯ ಬಿಸಿಯುಸಿರು ಮತ್ತು ಬಿಕ್ಕಳಿಕೆಗೆ ಸೀಮಿತವಾಗಿದ್ದರೂ ಒಂದಿಷ್ಟಾದರೂ ಸ್ತ್ರೀ ಸಮಸ್ಯೆಗಳು ಸಮಾಜದ ಮುಖ್ಯಸ್ತರಕ್ಕೆ ಹೋಗಿ ತಲುಪಲು ಸಾಧ್ಯವಾಯಿತು. ಇಂಥದ್ದೊಂದು ಪ್ರಯತ್ನದ ಪರಿಣಾಮ ಮಹಿಳೆ ತನ್ನ ಸುತ್ತಲಿನ ನಿರ್ಬಂಧನೆಗಳಿಂದ ಬಿಡಿಸಿಕೊಂಡು ಹೊರಬಂದು ತನ್ನದಲ್ಲದೆ ಬೇರೆ ಸ್ತ್ರೀಯರ ಬದುಕಿನ ಬವಣೆಗಳನ್ನೂ ಬರಹಕ್ಕಿಳಿಸಲು ಯತ್ನಿಸತೊಡಗಿದಳು.

            ನಂತರದ ದಿನಗಳಲ್ಲಿ ಬರವಣಿಗೆಯ ಮೂಲಕ ಇಂದಿರಾ, ತ್ರಿವೇಣಿ, ಪ್ರೇಮಾ ಭಟ್ಟ, ಉಷಾನವರತ್ನ ರಾಮ್, ಅನುಪಮಾ ಇತ್ಯಾದಿ ಲೇಖಕಿಯರು ಸ್ತ್ರೀ ಸಮಸ್ಯೆಗಳನ್ನು ಅತ್ಯಂತ ಸಮರ್ಥವಾಗಿ ಸಮಾಜದ ಮುಖ್ಯವಾಹಿನಿಗೆ ಒಯ್ದು ಮುಟ್ಟಿಸುವಲ್ಲಿ ಯಶಸ್ವಿಯಾದರು. ಮಹಿಳಾ ಸಂವೇದನೆಯ ಅನೇಕ ಮುಖಗಳು ಈ ಲೇಖಕಿಯರ ಬರಹಗಳಿಂದ ಅನಾವರಣಗೊಂಡವು. ತ್ರಿವೇಣಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯ ಮನಸ್ಸಿಗೆ ಕನ್ನಡಿ ಹಿಡಿಯುವ ಕೆಲಸ ಮಾಡಿದರು. ಕನ್ನಡ ಸಾಹಿತ್ಯದಲ್ಲಿ ಮಹಿಳಾ ಲೇಖಕಿಯಿಂದಾದ ಬಹುದೊಡ್ಡ ಬದಲಾವಣೆ ಇದು. ಮಹಿಳಾ ಲೇಖಕಿಯರದು ಅಡುಗೆ ಮನೆಯ ಸಾಹಿತ್ಯ ಎಂದು ಗೇಲಿ ಮಾಡುತ್ತಿದ್ದ ಪುರುಷ ಲೇಖಕ ಬಣದ ಅಹಂಕಾರಕ್ಕೆ ತ್ರಿವೇಣಿ ತಮ್ಮ ಕಾದಂಬರಿಗಳ ಕಥಾವಸ್ತುವಿನ ಮೂಲಕವೇ ದೊಡ್ಡ ಪೆಟ್ಟು ನೀಡಿದರು. ಅವರ ಬೆಕ್ಕಿನ ಕಣ್ಣು, ಶರಪಂಜರ, ಬೆಳ್ಳಿ ಮೋಡ ಕಾದಂಬರಿಗಳು ಹೆಣ್ಣಿನ ಸಂಕಟ ಹಾಗೂ ಸಂವೇದನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟವು. ಆದರೆ ಈ ಮೇಲೆ ಹೆಸರಿಸಿದ ಮಹಿಳಾ ಲೇಖಕಿಯರ ಬಹುತೇಕ ಕಥೆ ಕಾದಂಬರಿಗಳಲ್ಲಿ ಹೆಣ್ಣಿನ ಬದುಕು ಒಂದೋ ಪುರುಷ ಪ್ರಧಾನ ವ್ಯವಸ್ಥೆ ಎದುರು ಸೋಲೊಪ್ಪಿಕೊಳ್ಳುವುದು ಇಲ್ಲವೇ ಆತ್ಮಹತ್ಯೆಯಂಥ ದುರಂತದಲ್ಲಿ ಕೊನೆಗೊಳ್ಳುತ್ತಿತ್ತು. ಅವರ ಕಥೆಯ ನಾಯಕಿಯರು ಶೋಷಣೆಯನ್ನು ವಿರೋಧಿಸಿ ಹೊರಬರುವ ಪ್ರಯತ್ನ ಮಾಡಲಿಲ್ಲವಾದರೂ ಸ್ತ್ರೀ ಶೋಷಿತಳು ಎನ್ನುವುದನ್ನು ತೋರಿಸಿಕೊಟ್ಟಿದ್ದು ನಿಜಕ್ಕೂ ಬಹುದೊಡ್ಡ ಸಾಮಾಜಿಕ ಪಲ್ಲಟಕ್ಕೆ ಕಾರಣವಾಯಿತು. ಇಂಥದ್ದೊಂದು ಪ್ರಯತ್ನದ ಪರಿಣಾಮ ಮಹಿಳಾ ಸಾಹಿತ್ಯಕ್ಕೆ ಮಹತ್ವದ ತಿರುವು ಸಿಕ್ಕು ಶೋಷಣೆಯನ್ನು ವಿರೋಧಿಸಿ ಹೊರಬರುವ ನಾಯಕಿಯರು ನಂತರದ ತಲೆಮಾರಿನ ಲೇಖಕಿಯರ ಬರಹಗಳಲ್ಲಿ ರೂಪುಗೊಳ್ಳತೊಡಗಿದರು.

         ಹೀಗೆ ಮಹಿಳಾ ಸಾಹಿತ್ಯದ ಪರಂಪರೆಯನ್ನೇ ಮುರಿದು ಕಟ್ಟುವ ಪ್ರಯತ್ನಕ್ಕೆ ಮುಂದಾದ ಲೇಖಕಿಯರಲ್ಲಿ ಬಹುಮುಖ್ಯವಾಗಿ ಕೇಳಿಬರುವ ಹೆಸರುಗಳಲ್ಲಿ ಗೀತಾ ನಾಗಭೂಷಣ, ಸಾರಾ ಅಬೂಬಕ್ಕರ, ವೈದೇಹಿ, ಲಲಿತಾ ನಾಯಕ್, ವೀಣಾ ಶಾಂತೇಶ್ವರ ಪ್ರಮುಖವಾದವುಗಳು. ಈ ಲೇಖಕಿಯರು ತಮ್ಮ ಕಥೆ ಕಾದಂಬರಿಗಳ ನಾಯಕಿಯ ಪಾತ್ರದ ಮೂಲಕ ಸಮಾಜದಲ್ಲಿ ಮನೆಮಾಡಿಕೊಂಡಿರುವ ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸತೊಡಗಿದರು. ಇವರು ಸೃಷ್ಟಿಸಿದ ನಾಯಕಿಯರು ಶೋಷಣೆಯನ್ನು ಧಿಕ್ಕರಿಸಿ ಹೊರಬಂದು ಹೊಸಬದುಕನ್ನು ಕಟ್ಟಿಕೊಳ್ಳುವಷ್ಟು ಸಮರ್ಥರು. ಇದುವರೆಗೂ ಮನೆಯ ಹಿತ್ತಲು ಮತ್ತು ಜಗುಲಿಯವರೆಗೆ ಮಾತ್ರ ಓಡಾಡಿಕೊಂಡಿದ್ದ ಮಹಿಳಾ ಸಮಸ್ಯೆಗಳಿಗೆ ರಸ್ತೆಯ ಮುಖ ಕಾಣುವ ಅವಕಾಶ ದೊರೆಯಿತು. ಗೀತಾ ನಾಗಭೂಷಣ ಅವರ ಅನೇಕ ಕಾದಂಬರಿಗಳ ನಾಯಕಿಯರು ರಸ್ತೆಯ ಮೇಲೆ ನಿಂತು ಗಂಡಸಿನ ಕೊರಳುಪಟ್ಟಿ ಹಿಡಿದು ಜಗಳವಾಡುವಷ್ಟು ಗಟ್ಟಿಗರು. ಜೊತೆಗೆ ಗಮನಿಸಬೇಕಾದ ಇನ್ನೊಂದು ಗಮನಾರ್ಹವಾದ ಬೆಳವಣಿಗೆ ಎಂದರೆ ಇದುವರೆಗೂ ಮಧ್ಯಮ ವರ್ಗದ ಮಹಿಳೆಯರ ಸಮಸ್ಯೆಗಳನ್ನು ಮಾತ್ರ ತಮ್ಮ ಬರವಣಿಗೆಯ ವಸ್ತುವಾಗಿಸಿಕೊಳ್ಳುತ್ತಿದ್ದ ಲೇಖಕಿಯರು ಈ ಬಂಡಾಯ ಲೇಖಕಿಯರ ಆಗಮನದ ನಂತರ ಕೆಳವರ್ಗದ ಮಹಿಳೆಯರ ಸಮಸ್ಯೆಗಳನ್ನೂ ತಮ್ಮ ಬರವಣಿಗೆಗೆ ದಕ್ಕಿಸಕೊಳ್ಳತೊಡಗಿದರು. ಇನ್ನು ಕಾರ್ಪೊರೇಟ್ ಸಂಸ್ಕೃತಿಗೆ ಸೇರಿದ ಮಹಿಳೆಯರ ಸಮಸ್ಯೆಗಳನ್ನು ನೇಮಿಚಂದ್ರ, ಸುನಂದಾ ಅವರಂಥ ಉದಯೋನ್ಮುಖ ಬರಹಗಾರ್ತಿಯರು ಸಮರ್ಥವಾಗಿ ಕನ್ನಡ ಸಾಹಿತ್ಯಕ್ಕೆ ಎಳೆದುತಂದರು. ಅಕ್ಷಿತಾ ಹುಂಚನಕಟ್ಟೆ, ಸಬೀಹಾ ಭೂಮಿಗೌಡ, ರೂಪ ಹಾಸನ, ಶಶಿಕಲಾ, ನಾಗವೇಣಿ ಇತ್ಯಾದಿ ಈ ದಿನಗಳಲ್ಲಿನ ಲೇಖಕಿಯರು ಮಹಿಳೆಯನ್ನು ಪುರುಷ ಪ್ರಧಾನ ನೆಲೆಯಿಂದ ಸಂಪೂರ್ಣವಾಗಿ ಹೊರತಂದು ಅವಳದೇ ಒಂದು ಅಸ್ಮಿತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಿರುವುದು ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಾಹಿತ್ಯದಲ್ಲಾಗುತ್ತಿರುವ ಪ್ರಮುಖ ಬೆಳವಣಿಗೆಗಳಲ್ಲೊಂದು. ಅಕ್ಷತಾ ಹುಂಚನಕಟ್ಟೆ ಬರವಣಿಗೆಯೊಂದಿಗೆ ಪುಸ್ತಕ ಪ್ರಕಾಶನಕ್ಕೂ ಕೈಹಾಕಿ ಪ್ರತ್ಯೇಕ ಅಸ್ತಿತ್ವದಿಂದ ಗುರುತಿಸಿಕೊಂಡಿರುವರು.

                ಸ್ತ್ರೀ ತನ್ನ ಅಸ್ಮಿತೆಯ ಹುಡುಕಾಟದಲ್ಲಿ ಸಿನಿಮಾ ಮಾಧ್ಯಮವನ್ನೂ ಒಂದು ನೆಲೆಯಾಗಿ ರೂಪಿಸಿಕೊಂಡಿದ್ದುಂಟು. ಆದರೆ ಸಿನಿಮಾ ಮಾಧ್ಯಮಕ್ಕೆ ಕಾಲಿಡುವುದಕ್ಕಿಂತ ಪೂರ್ವದಲ್ಲಿ ಆಕೆ ಅಭಿನಯದ ಒಂದಿಷ್ಟು ತಾಲೀಮು ಮಾಡಿ ತರಬೇತಿ ಪಡೆದದ್ದು ರಂಗಭೂಮಿಯಲ್ಲಿ. ಆದರೆ ಮಹಿಳೆ ಸಂಪ್ರದಾಯದ ಚೌಕಟ್ಟಿನಿಂದ ಹೊರಬಂದು ರಂಗಭೂಮಿಯನ್ನು ಪ್ರವೇಶಿಸಲು ಸಾಕಷ್ಟು ಕಾಲಾವಕಾಶ ಬೇಕಾಯಿತು. ಜೊತೆಗೆ ಗಮನಿಸಬೇಕಾದ ಸಂಗತಿ ಎಂದರೆ ಮಹಿಳೆ ರಂಗಭೂಮಿಗೆ ಕಲಾವಿದೆಯಾಗಿ ಬಂದದ್ದು ನಟನೆಯನ್ನು ತನ್ನ ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಳ್ಳಲು ಅಲ್ಲ. ಹೊಟ್ಟೆಪಾಡಿನ ಸಮಸ್ಯೆಗೆ ಪರಿಹಾರವಾಗಿ ಆಕೆ ರಂಗಭೂಮಿಯನ್ನು ಆಶ್ರಯಿಸಿದಳೇ ವಿನ: ಅದನ್ನು ತನ್ನ ಸಮಸ್ಯೆಗಳ ಹಾಗೂ ಸಂವೇದನೆಯ ಅನಾವರಣಕ್ಕಾಗಿ ಉಪಯೋಗಿಸಿಕೊಳ್ಳಬೇಕೆನ್ನುವ ಘನ ಉದ್ದೇಶ ಅವಳದಾಗಿರಲಿಲ್ಲ. ಈ ಕಾರಣದಿಂದಾಗಿ ಆರ್ಥಿಕವಾಗಿ ತೀರ ಸಂಕಷ್ಟದಲ್ಲಿರುವ ಹಾಗೂ ಕೆಳಸಮುದಾಯಗಳ ಮಹಿಳೆಯರೇ ಪ್ರಾರಂಭದ ದಿನಗಳಲ್ಲಿ ರಂಗಭೂಮಿಯನ್ನು ಪ್ರವೇಶಿಸಿದರು. ಈ ಕಾರಣದಿಂದಾಗಿ ಆ ದಿನಗಳಲ್ಲಿನ ಮಹಿಳಾ ಕಲಾವಿದೆಯರ ಅಭಿನಯ ನಾಟಕದ ಮಧ್ಯದಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಹಾಡು ಮತ್ತು ಕುಣಿತಕ್ಕಷ್ಟೇ ಸೀಮಿತವಾಗಿತ್ತು. ಇದು ಪ್ರೇಕ್ಷಕರನ್ನು ರಂಗಭೂಮಿಯತ್ತ ಸೆಳೆಯುವ ನಾಟಕ ಕಂಪನಿಗಳ ಮಾಲೀಕರ ತಂತ್ರವೂ ಆಗಿತ್ತು. ಪುರುಷ ಕಲಾವಿದರೇ ಸ್ತ್ರೀ ಪಾತ್ರಗಳಲ್ಲೂ ಅಭಿನಯಿಸುತ್ತಿದ್ದುದ್ದರಿಂದ ಮಹಿಳಾ ಕಲಾವಿದರ ಅಭಿನಯವನ್ನು ರಂಗಭೂಮಿ ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಹಾಡು, ಕುಣಿತದಿಂದ ನಾಟಕದ ಮುಖ್ಯ ಪಾತ್ರಗಳಿಗೆ ಮಹಿಳಾ ಕಲಾವಿದರು ಬಡ್ತಿ ಪಡೆದರಾದರೂ ಅವರು ಪುರುಷ ಪ್ರಧಾನ ನಾಟಕಗಳಲ್ಲೇ ಅಭಿನಯಿಸಬೇಕಾಯಿತು. ಇಂಥ ವೈಪರಿತ್ಯಗಳ ನಡುವೆಯೂ ಚಿಂದೋಡಿ ಲೀಲಾ, ಮಾಲತಿ ಸುಧೀರ ಅವರಂಥ ಕೆಲ ನಟಿಯರು ಅಭಿನಯದೊಂದಿಗೆ ನಾಟಕ ಕಂಪನಿಗಳ ಮಾಲೀಕರಾಗುವಷ್ಟು ಎತ್ತರಕ್ಕೆರಿದ್ದೇ ಬಹುದೊಡ್ಡ ಸಾಧನೆ ಎನ್ನಬಹುದು. ಮಹಿಳಾ ಕಲಾವಿದೆಯರನ್ನು ರಂಗಭೂಮಿಯಲ್ಲಿ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದೆ ವಿದ್ಯಾವಂತ ಮಹಿಳೆಯರು ರಂಗಭೂಮಿಯನ್ನು ಪ್ರವೇಶಿಸಲು ತೊಡಕಾಗಿ ಪರಿಣಮಿಸಿತು. ನಂತರದ ದಿನಗಳಲ್ಲಿ ಹವ್ಯಾಸಿ ನಾಟಕಗಳ ಮೂಲಕ ವಿದ್ಯಾವಂತ ಮಹಿಳೆಯರು ಅಭಿನಯದಲ್ಲಿ ತಮ್ಮ ಅಸ್ಮಿತೆಯ ಹುಡುಕಾಟಕ್ಕೆ ತೊಡಗಿ ಯಶಸ್ವಿಯಾದರು.

            ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ನಾಟಕಗಳಲ್ಲಿ ಅಭಿನಯದ ತರಬೇತಿ ಪಡೆದ ಮಹಿಳಾ ಕಲಾವಿದೆಯರು ಸಿನಿಮಾ ಮಾಧ್ಯಮಕ್ಕೂ ಕಾಲಿಟ್ಟು ಹೆಸರು ಮತ್ತು  ಹಣ  ಸಂಪಾದಿಸಿದರು. ಸಿನಿಮಾ ನಿರ್ಮಾಣದ ಪ್ರಾರಂಭದ ದಿನಗಳಲ್ಲಿ ನಾಯಕ ಪ್ರಧಾನ ಸಿನಿಮಾಗಳಿಗೆ ಮಾತ್ರ ಮಹಿಳಾ ಕಲಾವಿದರ ಅಭಿನಯ ಸೀಮಿತವಾಗಿದ್ದರೂ ನಂತರದ ದಿನಗಳಲ್ಲಿ ನಾಯಕಿ ಪ್ರಧಾನ ಸಿನಿಮಾಗಳೂ ನಿರ್ಮಾಣಗೊಳ್ಳತೊಡಗಿದವು. ಅನೇಕ ಕಲಾವಿದೆಯರು ಮಹಿಳಾ ಪ್ರಧಾನ ಸಿನಿಮಾಗಳಿಗೆ ತಮ್ಮ ಅಭಿನಯದ ಮೂಲಕ ಜೀವತುಂಬಿದರು. ಮಲ್ಲಮ್ಮನ ಪವಾಡ, ಕಿತ್ತೂರು ರಾಣಿ ಚೆನ್ನಮ್ಮ, ಶರಪಂಜರ, ಇಬ್ಬನಿ ಕರಗಿತು, ಗೆಜ್ಜೆಪೂಜೆ ಯಂಥ ಸಿನಿಮಾಗಳ ಮೂಲಕ ಹೆಣ್ಣಿನ ಸಂಕಟ ಹಾಗೂ ಒಳತೋಟಿಗಳು ಸಶಕ್ತವಾಗಿ ಬೆಳ್ಳಿಪರದೆಯ ಮೇಲೆ ಮೂಡಿ ಪ್ರೇಕ್ಷಕ ವರ್ಗವನ್ನು ತಲುಪಲು ಸಾಧ್ಯವಾಯಿತು. ಮಹಿಳಾ ಪ್ರಧಾನ ಸಿನಿಮಾಗಳನ್ನು ಕನ್ನಡ ಸಿನಿಮಾ ರಂಗದಲ್ಲಿ ತಯ್ಯಾರಿಸಿದ್ದು ಪುಟ್ಟಣ್ಣ ಕಣಗಾಲ್, ದೊರೈ ಭಗವಾನ್, ಕೆ ವಿ ಜಯರಾಂ ಅವರಂಥ ಪುರುಷ ನಿರ್ದೇಶಕರು ಎನ್ನುವುದು ಗಮನಾರ್ಹವಾದ ಸಂಗತಿ. ಮಹಿಳೆಯರೇ ನಿರ್ದೇಶಕಿಯಾಗಿ ಮಹಿಳಾ ಪ್ರಧಾನ ಸಿನಿಮಾಗಳನ್ನು ತಯ್ಯಾರಿಸಿದಲ್ಲಿ ಸ್ತ್ರೀ ಸಂವೇದನೆಯನ್ನು ಇನ್ನಷ್ಟು ಸಶಕ್ತವಾಗಿ ಅನಾವರಣಗೊಳಿಸಲು ಸಾಧ್ಯವಾಗುತ್ತಿತ್ತು. ಆದರೆ ನೂರು ವರ್ಷಗಳ ಇತಿಹಾಸವಿರುವ ಸಾವಿರಾರು ಸಿನಿಮಾಗಳು ನಿರ್ಮಾಣಗೊಂಡಿರುವ ಇಲ್ಲಿ ಮಹಿಳೆ ಸಿನಿಮಾ ನಿರ್ದೇಶನವನ್ನು ತನ್ನ ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಂಡಿದ್ದು ತೀರ ಕಡಿಮೆ.

          ಇನ್ನೊಂದು ಚರ್ಚಿಸಲೇ ಬೇಕಾದ ಮುಖ್ಯ ಸಂಗತಿ ಎಂದರೆ ನಮ್ಮ ಕನ್ನಡ ಸಿನಿಮಾಗಳಲ್ಲಿ ಮುಸ್ಲಿಂ ಮತ್ತು ದಲಿತ ಮಹಿಳೆ ಅವಳು ಅನುಭವಿಸುತ್ತಿರುವ ಸಮಸ್ಯೆಗಳೊಂದಿಗೆ ಚಿತ್ರಿತವಾಗಿರುವುದು ತೀರ ಕಡಿಮೆ. ಈ ಮಾತನ್ನು ನಾವು ಇತರ ವರ್ಗಗಳ ಮಹಿಳೆಯರ ಸಮಸ್ಯೆಗಳಿಗೂ ಅನ್ವಯಿಸಿ ಹೇಳಬಹುದು. ಹೀಗೆ ಹೇಳುವಾಗ ಮಹಿಳೆ ಅನುಭವಿಸುತ್ತಿರುವ ಸಮಸ್ಯೆಗಳು ಒಂದು ವರ್ಗದಿಂದ ಇನ್ನೊಂದು ವರ್ಗಕ್ಕೆ ಬೇರೆ ಬೇರೆಯಾಗಿವೆ ಎನ್ನುವುದನ್ನೂ ನಾವು ಗಮನಿಸಬೇಕು. ಫಣಿಯಮ್ಮ ಸಿನಿಮಾವೊಂದೇ ಎಲ್ಲ ವರ್ಗದ ಮಹಿಳೆಯರನ್ನು ಪ್ರತಿನಿಧಿಸಲಾರದು. ನಮ್ಮದು ವಿಭಿನ್ನ ಜಾತಿ ಸಮುದಾಯಗಳ ಸಮಾಜವಾಗಿರುವುದರಿಂದ ಇಡೀ ಮಹಿಳಾ ಸಮುದಾಯದ ಸಮಸ್ಯೆಗಳನ್ನು ಚಿತ್ರಿಸುವಲ್ಲಿ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಸೋತಿದೆ ಎನ್ನುವ ಸಂಗತಿಯನ್ನು ನಮ್ಮ ಮಹಿಳಾ ಕಲಾವಿದರು ಅರ್ಥಮಾಡಿಕೊಂಡಿಲ್ಲ.

            ಆಗಾಗ ಮಹಿಳೆಯರು ರಾಜಕಾರಣ ಮತ್ತು ಹೋರಾಟಗಳಲ್ಲೂ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಪ್ರಯತ್ನ ಮಾಡಿದ ಅನೇಕ ಉದಾಹರಣೆಗಳಿವೆ. ರಾಜಕಾರಣದ ವಿಷಯ ಬಂದಾಗ ನಾಗರತ್ನಮ್ಮ, ಬಸವರಾಜೇಶ್ವರಿ, ಚಂದ್ರಪ್ರಭ ಅರಸು ಲೀಲಾದೇವಿ ಪ್ರಸಾದ  ಇತ್ಯಾದಿ ಮಹಿಳಾ ನಾಯಕಿಯರು ರಾಜ್ಯದ ಮಂತ್ರಿಗಳಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದರು. ಆದರೂ ಕರ್ನಾಟಕದಲ್ಲಿ ಜಯಲಲಿತಾ, ಮಾಯಾವತಿ, ಮಮತಾ ಬ್ಯಾನರ್ಜಿ ಅವರಂಥ ಇಡೀ ಪಕ್ಷ   ಹಾಗೂ ಸರ್ಕಾರವನ್ನು ನಿಯಂತ್ರಿಸುವ ಧಾಡಸೀತನದ ಮಹಿಳಾ ರಾಜಕಾರಣಿಗಳು ಕಾಣಿಸಿಕೊಳ್ಳಲೇ ಇಲ್ಲ. ಮಹಿಳಾ ಮೀಸಲಾತಿಯ ಮೂಲಕ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ರಾಜಕೀಯ ಅಧಿಕಾರ ನೀಡಲಾಗಿದೆಯಾದರೂ ಅಲ್ಲಿ ಅಧಿಕಾರ ನಡೆಸುವವರೆಲ್ಲ ಪುರುಷರೇ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಇನ್ನು ಹೋರಾಟದ ವಿಷಯಕ್ಕೆ ಬಂದರೆ ಇಲ್ಲಿ ಮೇಧಾ ಪಾಟ್ಕರ್ ಅವರಂಥ ಹೋರಾಟಗಾರ್ತಿ ರೂಪುಗೊಳ್ಳಲೇ ಇಲ್ಲ. ಹೋರಾಟ ಮತ್ತು ಚಳವಳಿಯ ಇತಿಹಾಸವನ್ನು ಬಗೆದು ನೋಡಿದಾಗ ಶಾಂತವೇರಿ ಗೋಪಾಲಗೌಡರು, ಗಣಪತಿಯಪ್ಪನವರು, ನಂಜುಂಡ ಸ್ವಾಮಿ, ಕಡಿದಾಳು ಶಾಮಣ್ಣ ಅವರ ಹೆಸರುಗಳ ಸಾಲಿನಲ್ಲಿ ನಿಲ್ಲುವಂಥ ಒಬ್ಬ ಮಹಿಳಾ ಹೋರಾಟಗಾರ್ತಿಯ ಹೆಸರೂ ಸಿಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲವು ಲೇಖಕಿಯರು ಹೋರಾಟದ ಮುಂಚೂಣಿಗೆ ಬರಲು ಪ್ರಯತ್ನಿಸುತ್ತಿರುವರಾದರೂ ಎಡ ಬಲ ಎನ್ನುವ ಸಿದ್ಧಾಂತಗಳು ಅವರನ್ನು ತಪ್ಪು ದಾರಿಗೆ ಎಳೆಯುತ್ತಿವೆ.

           ಒಟ್ಟಿನಲ್ಲಿ ಮಹಿಳೆ ತನ್ನೊಳಗಿನ ಸಂವೇದನೆಯನ್ನು ಅಭಿವ್ಯಕ್ತಗೊಳಿಸಲು ವಿವಿಧ ನೆಲೆಗಳಲ್ಲಿ ಪ್ರಯತ್ನಿಸಿದಳಾದರೂ ಆಕೆ ಬರವಣಿಗೆ ಮಾಧ್ಯಮವನ್ನು ಸಶಕ್ತವಾಗಿ ಮತ್ತು ಸಮರ್ಥವಾಗಿ ಬಳಸಿಕೊಂಡಷ್ಟು ಬೇರೆ ಮಾಧ್ಯಮಗಳಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವಲ್ಲಿ ವಿಫಲಳಾಗಿರುವಳು. ಇದಕ್ಕೆಲ್ಲ ಪುರುಷ ಪ್ರಧಾನ ವ್ಯವಸ್ಥೆ ಸೂಕ್ತ ಅವಕಾಶ ನೀಡದೆ ಇರುವುದು ಒಂದು ಕಾರಣವಾದರೆ ಇನ್ನೊಂದು ಬರವಣಿಗೆ ಹೊರತಾಗಿ ಬೇರೆ ನೆಲೆಗಳಿಗೆ ತನ್ನ ಅಸ್ತಿತ್ವವನ್ನು ವಿಸ್ತರಿಸಲು ತಾನು ದುರ್ಬಲಳು ಎನ್ನುವ ಭಾವನೆ ಅವಳದಾಗಿರಬಹುದು.

            ಸಿಂಡ್ರೆಲಾ ಇದು ನಮಗೆಲ್ಲ ಗೊತ್ತಿರುವ ಕಥೆ. ಸುಂದರಿಯೂ ಮತ್ತು ಮುಗ್ಧಳೂ ಆದ ಸಿಂಡ್ರೆಲಾಳದು ಅತ್ಯಂತ ಸಂಕಷ್ಟದ ಬದುಕು. ಅವಳಿಗೆ ಕಷ್ಟಕೊಡಲೆಂದೇ ಮನೆಯಲ್ಲಿ ರಾಕ್ಷಸ ರೂಪದ ಮಲತಾಯಿ ಹಾಗೂ ಮಲ ಸಹೋದರಿಯರಿದ್ದಾರೆ. ಮನೆಯ ಮಗಳಾದರೂ ಅವಳದು ಆಳಿನ ದುಡಿಮೆ. ಅದೊಂದು ದಿನ ರಾಜಕುಮಾರ ಊರಿನವರಿಗಾಗಿ ಔತಣಕೂಟವನ್ನು ಏರ್ಪಡಿಸಿದ್ದಾನೆ. ತನ್ನಿಬ್ಬರು ಮಕ್ಕಳೊಂದಿಗೆ ಔತಣಕೂಟಕ್ಕೆ ಹೊರಡುವ ಮಲತಾಯಿ ಸಿಂಡ್ರೆಲಾಳನ್ನು ಜೊತೆಗೆ ಕರೆದೊಯ್ಯುವುದಿಲ್ಲ. ಸಿಂಡ್ರೆಲಾಳ ಪ್ರಾರ್ಥನೆಗೆ ಪ್ರತ್ಯಕ್ಷನಾಗುವ ದೇವರು ಆಕೆಯನ್ನು ಶೃಂಗರಿಸಿ ಪುಷ್ಪಕ ವಿಮಾನದಲ್ಲಿ ರಾಜಕುಮಾರನ ಅರಮನೆಗೆ ಕರೆದೊಯ್ಯುತ್ತಾನೆ. ಸಿಂಡ್ರೆಲಾಳ ಸೌಂದರ್ಯ ಹಾಗೂ ಮುಗ್ಧತೆಗೆ ಮಾರುಹೋಗುವ ರಾಜಕುಮಾರ ಅವಳನ್ನು ಎಲ್ಲ ಸಂಕಷ್ಟಗಳಿಂದ ಪಾರುಮಾಡಿ ಮದುವೆಯಾಗುವುದರೊಂದಿಗೆ ಆಕೆಯ ಬದುಕಿನ ಕಥೆ ಸುಖಾಂತ್ಯಗೊಳ್ಳುತ್ತದೆ. ಸಿಂಡ್ರೆಲಾಳದು ಮಹಿಳೆಯರಿಂದ ಶೋಷಣೆಗೆ ಒಳಗಾಗುವ ಪಾತ್ರ ಮತ್ತು ಆಕೆಯನ್ನು ಶೋಷಣೆಯಿಂದ ಮುಕ್ತಿಗೊಳಿಸಿ ಅವಳಿಗೊಂದು ಸುಖದ ಬಾಳು ನೀಡುವವನು ಪುರುಷನಾದ ರಾಜಕುಮಾರ. ಮಹಿಳೆ ಮಹಿಳೆಯಿಂದಲೇ ಶೋಷಣೆಗೆ ಒಳಗಾಗುತ್ತಿರುವುದು ಮತ್ತು ಆ ಒಂದು ಶೋಷಣೆಯಿಂದ ಹೊರಬರಲು ಪುರುಷನನ್ನಾಶ್ರಯಿಸುತ್ತಿರುವುದು ವ್ಯಂಗ್ಯವಾದರೂ ಸತ್ಯ. ಆದರೆ ಮಹಿಳೆ ಪರಾವಲಂಬನೆಯಿಂದ ಹೊರಬಂದು ತನ್ನ ಅಸ್ತಿತ್ವದ ನೆಲೆಯನ್ನು ಇನ್ನೂ ವಿಸ್ತರಿಸಿಕೊಳ್ಳಬೇಕಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

    

No comments:

Post a Comment