Tuesday, July 28, 2015

ನಮ್ಮ ಮೇಷ್ಟ್ರು ಕಲಾಂ







             ನಿನ್ನೆ ಡಾ. ಅಬ್ದುಲ್ ಕಲಾಂ ನಿಧನರಾದರು. ದೇಶಕ್ಕೆ ತುಂಬಲಾರದ ನಷ್ಟವಿದು. ಕಲಾಂ ಅವರು ಬದುಕಿದ್ದರೆ ಇನ್ನು ಅದೆಷ್ಟೋ ಯುವಕರ ಕನಸುಗಳಿಗೆ ನೀರೆರೆಯುತ್ತಿದ್ದರು. ನಾವುಗಳೆಲ್ಲ ಕನಸಿಸುವಂತೆ ಮತ್ತು ಕಂಡ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಿಸುವಂತೆ ಸದಾ ಕಾಲ ಪ್ರೇರಣೆಯಾಗಿದ್ದ ಹಾಗೂ ಸ್ಪೂರ್ತಿ ನೀಡುತ್ತಿದ್ದ ವ್ಯಕ್ತಿತ್ವ ಅವರದು. ಅಬ್ದುಲ್ ಕಲಾಂ ಭಾರತದ ರಾಷ್ಟ್ರಪತಿಯಾದ ಘಳಿಗೆ ರಾಜಕಾರಣಿಯಲ್ಲದ ವ್ಯಕ್ತಿ ಅದುಹೇಗೆ ಅಂಥದ್ದೊಂದು ಹುದ್ದೆಯನ್ನು ನಿಭಾಯಿಸ ಬಲ್ಲರು ಎನ್ನುವುದು ಅನೇಕರ ಆತಂಕವಾಗಿತ್ತು. ಒಂದರ್ಥದಲ್ಲಿ ಈ ಹುದ್ದೆ ಮತ್ತು ಅದನ್ನು ನಿರ್ವಹಿಸಿದ ಹಿಂದಿನವರ ನಿಷ್ಕ್ರಿಯತೆ ಕಲಾಂ ಅವರನ್ನು ಕೂಡ ನಿಷ್ಕ್ರಿಯಗೊಳಿಸಬಹುದೆನ್ನುವ ಆತಂಕ ಎಲ್ಲರದಾಗಿತ್ತು. ಆದರೆ ಅಬ್ದುಲ್ ಕಲಾಂ ತಮ್ಮ ಕಾರ್ಯನಿರ್ವಹಣೆ, ಘನ ವ್ಯಕ್ತಿತ್ವ, ಸರಳ ಜೀವನ, ಪ್ರಾಮಾಣಿಕತೆ, ಹೃದಯವಂತಿಕೆ, ವಿಶಾಲ ಮನೋಭಾವ, ರಾಷ್ಟ್ರ ಪ್ರೇಮ ಈ ಎಲ್ಲ ಗುಣಗಳಿಂದ ರಾಷ್ಟ್ರಪತಿ ಹುದ್ದೆಗೊಂದು ಘನತೆ ಮತ್ತು ಗೌರವ ತಂದುಕೊಟ್ಟರು. ಅವರು ರಾಷ್ಟ್ರಪತಿಗಳಾಗಿದ್ದ ಅವಧಿಯಲ್ಲಿ ಜನಸಾಮಾನ್ಯರ ರಾಷ್ಟ್ರಪತಿ ಎನ್ನುವ ಮನ್ನೆಣೆಗೆ ಪಾತ್ರರಾದರು. ರಾಷ್ಟ್ರಪತಿ ಭವನ  ಅದೊಂದು ರಾಜಕಾರಣಿಗಳ ಬದುಕಿನ ಕೊನೆಯ ದಿನಗಳ ವಿಶ್ರಾಂತಿ ತಾಣ ಎನ್ನುವ ಕಲ್ಪನೆಯನ್ನು ದೂರವಾಗಿಸಿದರು. ಜನಸಾಮಾನ್ಯರ ಸಮಸ್ಯೆಗಳು ರಾಷ್ಟ್ರಪತಿ ಭವನವನ್ನು ಪ್ರವೇಶಿಸಲು ಮುಕ್ತ ಅವಕಾಶ ಮಾಡಿಕೊಟ್ಟರು. ದೂರದಲ್ಲೆಲ್ಲೋ ಮರಗಳು ಉರುಳಿದಾಗ, ಹಳ್ಳಿಯ ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರು ಇಲ್ಲದಿದ್ದಾಗ, ಸಾರ್ವಜನಿಕರಿಗೆ ಓಡಾಡಲು ರಸ್ತೆ ಇಲ್ಲದಿದ್ದರೆ, ಅನಾರೋಗ್ಯದಿಂದ ಬಳಲುವವರಿಗೆ ವೈದ್ಯಕೀಯ ನೆರವು ದೊರೆಯದಿದ್ದಾಗ  ಕಲಾಂ ರಾಷ್ಟ್ರಪತಿ ಭವನದಿಂದಲೇ ಆ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಬದುಕಿನುದ್ದಕ್ಕೂ ಪಾಠ ಮಾಡುವುದನ್ನು ಪ್ರೀತಿಸುತ್ತಿದ್ದ ಕಲಾಂ ತಾವೊಬ್ಬ ಆದರ್ಶ ಶಿಕ್ಷಕನೆಂಬ ಗೌರವಕ್ಕೆ ಪಾತ್ರರಾಗಿದ್ದರು. ಶಿಕ್ಷಕ ವೃತ್ತಿ ಅವರ ಬದುಕಿನ ಮಹೋನ್ನತ ಸಾಧನೆಗಳಲ್ಲೊಂದು. ಪಾಠ ಮಾಡುತ್ತಲೇ ಕೊನೆಯುಸಿರೆಳೆದದ್ದು ಅವರು ಶಿಕ್ಷಕ ವೃತ್ತಿಯನ್ನು ಎಷ್ಟೊಂದು ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ನಿದರ್ಶನ.

ಕಲಾಂ ಮತ್ತು ಕರ್ನಾಟಕ 

   
      ನವೆಂಬರ್ ೨೦, ೨೦೦೫ ಕರ್ನಾಟಕದ ಇತಿಹಾಸದಲ್ಲಿ ಇದೊಂದು ಮಹತ್ವದ ದಿನ. ಆ ದಿನ ಡಾ. ಅಬ್ದುಲ್ ಕಲಾಂ ಕರ್ನಾಟಕದ ವಿಧಾನ ಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದರು. ಸುವರ್ಣ ಕರ್ನಾಟಕದ ಆಚರಣೆಯ ಆ ಸಂದರ್ಭದಲ್ಲಿ ಡಾ. ಅಬ್ದುಲ್ ಕಲಾಂ ಅವರು ಮಾಡಿದ ಭಾಷಣ ಅತ್ಯಂತ ಮಹತ್ವ ಪಡೆದುಕೊಂಡಿತು. ೨೦೧೫ ರ ವೇಳೆಗೆ ಕರ್ನಾಟಕವನ್ನು ಹೇಗೆ ಮಾದರಿ ರಾಜ್ಯವಾಗಿ ಮಾಡಬಹುದೆಂದು ಕಲಾಂ ಮಾತನಾಡಿದರು. ತಮ್ಮ ಭಾಷಣದ ಪ್ರಾರಂಭದಲ್ಲಿ ಕಲಾಂ ತಮಗೂ ಹಾಗೂ ಕರ್ನಾಟಕಕ್ಕಿರುವ ಸಂಬಂಧವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ೧೯೫೮ ರಲ್ಲಿ ತಮ್ಮ ವೃತ್ತಿ ಜೀವನವನ್ನು ಕರ್ನಾಟಕದಿಂದಲೇ ಪ್ರಾರಂಭಿಸಿದ್ದಾಗಿ ತಿಳಿಸಿದ ಕಲಾಂ ಅವರು ಆ ದಿನಗಳಲ್ಲಿ ತಮಗೆ ಸಹಕಾರ ನೀಡಿದ ಅಂದಿನ ಮುಖ್ಯಮಂತ್ರಿ ಶ್ರೀ ಎಸ್ ನಿಜಲಿಂಗಪ್ಪನವರನ್ನು ನೆನೆದರು. ಭಾರತೀಯ ಬಾಹ್ಯಾಕಾಶ ಸಂಶೋಧನೆಗೆ ವಿಶಿಷ್ಠ ಮೆರುಗು ನೀಡಿದ ತಮ್ಮ ಗುರುಗಳಾದ ಪ್ರೊ ಸತೀಶ್ ಧವನ್ ಅವರನ್ನು ತಾವು ಮೊದಲು ಭೇಟಿ ಮಾಡಿದ್ದು ಇದೆ ಬೆಂಗಳೂರಿನಲ್ಲಿ ಎಂದು ಹೇಳಿ ಇಡೀ ಸಭಾಂಗಣವನ್ನು ಭಾವಾವೇಶದಲ್ಲಿ ಮುಳುಗಿಸಿದರು. ಮಧ್ಯವತಿ ರಾಗದಲ್ಲಿರುವ 'ಭಾಗ್ಯದ ಲಕ್ಷ್ಮಿ ಬಾರಮ್ಮ' ಇವತ್ತಿಗೂ ತಮ್ಮ ಕಿವಿಯಲ್ಲಿ ಗುಂಯಿಗುಡುತ್ತಿದ್ದೆ ಎಂದು ಹೇಳಿದಾಗ ಇಡೀ ಸಭೆ ಮೂಕವಿಸ್ಮಯವಾಯಿತು. ಕರ್ನಾಟಕದ ಸಂಸ್ಕೃತಿ, ಗಡಿ ಪ್ರದೇಶಗಳು, ಹರಿಯವ ನದಿಗಳು, ಕೃಷಿ, ಮುಖ್ಯ ಬೆಳೆಗಳು, ಶೈಕ್ಷಣಿಕ ಸೌಲಭ್ಯ, ಶಿಲ್ಪಕಲೆ, ಪ್ರಮುಖ ಪ್ರವಾಸಿ ತಾಣಗಳು ಹೀಗೆ ಕರ್ನಾಟಕದ  ಸಂಪೂರ್ಣ ಮಾಹಿತಿ   ಅವರ ಭಾಷಣದಲ್ಲಿತ್ತು. ಜೊತೆಗೆ ಇಲ್ಲಿ ದೊರೆಯುವ ರುಚಿ ರುಚಿಯಾದ ಬಿಸಿಬೇಳೆ ಭಾತ್, ಹೋಳಿಗೆ, ಮೈಸೂರು ಬೊಂಡ, ಮದ್ದೂರು ವಡೆ ಕುರಿತು ಮಾತನಾಡಿ ಸಭಿಕರ ಬಾಯಿಯಲ್ಲಿ ನೀರೂರಿಸಿದರು. ತಮ್ಮ ವೃತ್ತಿ ಬದುಕಿಗೊಂದು ವೇದಿಕೆ ನೀಡಿದ ಕರ್ನಾಟಕ ರಾಜ್ಯದ ಕುರಿತು ಡಾ ಅಬ್ದುಲ್ ಕಲಾಂ ಭಾವುಕರಾಗಿ ಮಾತನಾಡಿದರು.

 
          ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಗಳಾಗಿದ್ದ ಅವಧಿಯಲ್ಲಿ ಅವರ ಕಾರ್ಯದರ್ಶಿಯಾಗಿದ್ದ ಪಿ ಎಂ ನಾಯರ್ ಅವರು ಬರೆದು ಅದನ್ನು ಶ್ರೀ ವಿಶ್ವೇಶ್ವರ ಭಟ್ ಅವರು ಕನ್ನಡಕ್ಕೆ ಅನುವಾದಿಸಿರುವ 'ಕಲಾಮ್ ಕಮಾಲ್' ಪುಸ್ತಕದಲ್ಲಿನ ಒಂದಿಷ್ಟು ಪ್ರಸಂಗಗಳು ನಿಮಗಾಗಿ........

            ನಾನು ರಾಷ್ಟ್ರಪತಿಯೆಂದು ತೋರಿಸಿಕೊಳ್ಳಬೇಕೆಂಬ  ಹುಸಿ ಆಡಂಬರ ಕಲಾಂ ಅವರಿಗಿರಲಿಲ್ಲ. ಅದಕ್ಕೊಂದು ಸರಳ ನಿದರ್ಶನ. ರಾಷ್ಟ್ರಪತಿ ಅವರ ಅಧಿಕೃತ ಚಿತ್ರವೊಂದಿರುತ್ತದೆ. ಅದರ ಒಂದು ಮೂಲೆಯಲ್ಲಿ ಅವರ ಸಹಿ ಇರುತ್ತದೆ. ಈ ಫೋಟೋವನ್ನು ಎಲ್ಲ ಸರ್ಕಾರಿ ಕಛೇರಿಗಳಲ್ಲಿ ಹಾಗೂ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ತಾಣಗಳಲ್ಲಿ ತೂಗು ಹಾಕಬೇಕು. ಕಲಾಂ ರಾಷ್ಟ್ರಪತಿಯಾದಾಗ ಸಂಗತಿಯನ್ನು ಅವರಿಗೆ ತಿಳಿಸಲಾಯಿತು. ಕಲಾಂ ಒಲ್ಲದ ಮನಸ್ಸಿನಿಂದ ಒಪ್ಪಿದರು. ಶಿಷ್ಟಾಚಾರದ ಸೂಕ್ಷ್ಮ ವಿಷಯಗಳ ಬಗ್ಗೆ ಅವರೆಂದೂ ತಲೆ ಕೆಡಿಸಿಕೊಂಡವರಲ್ಲ. ರಾಷ್ಟ್ರಪತಿ ಭವನದ ಒಳಗಿರಬಹುದು, ಹೊರಗಿರಬಹುದು ಅಥವಾ ವಿದೇಶಗಳಿಗೆ ಅಧಿಕೃತ ಭೇಟಿ ನೀಡಿದ ಸಂದರ್ಭವಿರಬಹುದು ಕಲಾಂ ಶಿಷ್ಟಾಚಾರಕ್ಕೆ ಒತ್ತು ನೀಡುತ್ತಿರಲಿಲ್ಲ. ಶಿಷ್ಟಾಚಾರದ ಆಡಂಬರ, ವೈಭವ, ಅಟ್ಟಹಾಸಗಳೆಂದರೆ ಅವರಿಗೆ ಆಗುತ್ತಿರಲಿಲ್ಲ. ರಾಷ್ಟ್ರಪತಿ ಭವನದಲ್ಲಿರುವ ನಾವು ಹೆಚ್ಚಾಗಿ ವಿದೇಶಾಂಗ ವ್ಯವಹಾರಗಳ ಅಧಿಕಾರಿಗಳು ರಾಷ್ಟ್ರಪತಿಯವರು ಕನಿಷ್ಠ ಅನುಸರಿಸಲೇ ಬೇಕಾದ ಶಿಷ್ಟಾಚಾರದ ಬಗ್ಗೆ ಮನವರಿಕೆ ಮಾಡಿಕೊಡುವ ಹೊತ್ತಿಗೆ ಸುಸ್ತಾಗಿ ಹೋಗುತ್ತಿದ್ದೆವು. ಅದರಲ್ಲೂ ಮುಖ್ಯವಾಗಿ ವಿದೇಶ ಪ್ರವಾಸದಲ್ಲಿ ಶಿಷ್ಟಾಚಾರದ ಅಗತ್ಯದ ಬಗ್ಗೆ ಕಲಾಂ ಅವರಿಗೆ ಒತ್ತಿ ಹೇಳಿ ಅವರ ಮನವೊಲಿಸುವುದು ಕಷ್ಟವಾಗುತ್ತಿತ್ತು.

---೦೦೦---

        "ಮಿಸ್ಟರ್ ನಾಯರ್ ನನ್ನ ಬಂಧುಗಳು ವಾರ ಅಥವಾ ಹತ್ತು ದಿನಗಳಮಟ್ಟಿಗೆ ಬರುತ್ತಾರೆ. ಅವರು ಬರುವುದು ಪಕ್ಕಾ ಖಾಸಗಿ ಉದ್ದೇಶಕ್ಕಾಗಿ ಇದರಲ್ಲಿ ಅಧಿಕೃತ ಎಂಬುದೇನೂ ಇರುವುದಿಲ್ಲ" ಎಂದರು ಕಲಾಂ. ಕೆಲದಿನಗಳಲ್ಲಿ ಕಲಾಂ ಅವರ ೫೨ ಮಂದಿ ಬಂಧು ಬಳಗದವರು ರಾಷ್ಟ್ರಪತಿ ಭವನಕ್ಕೆ ಬರುವವರಿದ್ದರು. ಅವರಲ್ಲಿ ತೊಬತ್ತು ವರ್ಷದ ಕಲಾಂ ಹಿರಿಯಣ್ಣನಿಂದ ಹಿಡಿದು ಒಂದೂವರೆ ವರ್ಷದ ಪುಟ್ಟು ಮಗು ಸಹ ಸೇರಿತ್ತು. ಕಲಾಂ ಅವರು ಹೇಳಿದ ಪ್ರತಿ ಪದ ನನಗೆ ಅರ್ಥವಾಗಿತ್ತು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂಬುದು ಗೊತ್ತಿತ್ತು.

           ಅವರೆಲ್ಲ ಆಗಮಿಸಿದರು. ಎಂಟು ದಿನಗಳ ಕಾಲ ಉಳಿದರು. ಅವರೆಲ್ಲ ಅಜ್ಮೀರ್ ಶರಿಫ್ ಗೆ ಹೋದರು. ಕೆಲವು ಕಿರಿಯರು ದಿಲ್ಲಿಯಲ್ಲಿ ಶಾಪಿಂಗ್ ಮಾಡಿದರು. ಅನಂತರ ಅವರೆಲ್ಲ ಊರಿಗೆ ವಾಪಸ್ ಹೋದರು. ಅಚ್ಚರಿಯ ಸಂಗತಿ ಎಂದರೆ ಒಂದೇ ಒಂದು ಸಲವೂ ಆಫೀಸಿನ ವಾಹನ ಬಳಸಲಿಲ್ಲ. ರಾಷ್ಟ್ರಪತಿ ಭವನದಲ್ಲಿ ಅವರೆಲ್ಲ ಉಳಿದುದಕ್ಕಾಗಿ ಕಲಾಂ ತಮ್ಮ ಕೈಯಿಂದ ಬಾಡಿಗೆ ಕಟ್ಟಿದರು. ಅವರೆಲ್ಲ ಕುಡಿದ ಸಿಂಗಲ್ ಚಹದ ಹಣವನ್ನೂ ಕಲಾಂ ಭರಿಸಿದರು. ಅವರೆಲ್ಲ ಅಷ್ಟು ದಿನ ಉಳಿದುದಕ್ಕೆ ೩.೫೨ ಲಕ್ಷ ರೂಪಾಯಿಗಳ ಬಿಲ್ ಬಂತು. ಕಲಾಂ ತಮ್ಮ ಕಿಸೆಯಿಂದ ಹಣ ಎಣಿಸಿದರು. ಇದನ್ನು ಕಲಾಂ ಯಾರ ಮುಂದೆಯೂ ಹೇಳಿಕೊಳ್ಳಲಿಲ್ಲ. ಪತ್ರಿಕೆಗಳಿಗೆ ತಿಳಿಯುವಂತೆ ಮಾಡಿ ಪ್ರಚಾರವನ್ನೂ ಗಿಟ್ಟಿಸಿಕೊಳ್ಳಲಿಲ.

---೦೦೦---

       ದೇವರು ಹಾಗೂ ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆಯುಳ್ಳವರಾದ ಕಲಾಂ 'ಮಿಸ್ಟರ್ ನಾಯರ್ ಈ ಇಫ್ತಾರ್ ಕೂಟಗಳನ್ನೇಕೆ ಏರ್ಪಡಿಸಬೇಕು? ಈ ಕೂಟಗಳಿಗೆ ಆಹ್ವಾನಿಸುವ ವ್ಯಕ್ತಿಗಳು ಹೇಗಿದ್ದರೂ ಚೆನ್ನಾಗಿ ಬದುಕಿರುವವರೆ. ಹೀಗಿರುವಾಗ ಹಣವನ್ನೇಕೆ ವೃಥಾ ವ್ಯಯಿಸಬೇಕು? ಈ ಕೂಟಗಳಿಗೆ ಎಷ್ಟು ಹಣ ಖರ್ಚು ಮಾಡುತ್ತಿರಿ?' ಎಂದು ಪ್ರಶ್ನಿಸಿದರು. ರಾಷ್ಟ್ರಪತಿ ಭವನದ ವಸತಿ ನಿಯಂತ್ರಣ ಅಧಿಕಾರಿಯನ್ನು ಕರೆದು ಖರ್ಚಿನ ವಿವರ ಕೇಳಿದೆ. ಒಂದು ಕೂಟಕ್ಕೆ ಭೋಜನದ ಖರ್ಚಿಗೆ ಕನಿಷ್ಠ ಎರಡೂವರೆ ಲಕ್ಷ ರೂಪಾಯಿಗಳು ತಗಲುವುದೆಂದು ಅವರು ಹೇಳಿದರು. ಇದನ್ನು ನಾನು ರಾಷ್ಟ್ರಪತಿಯವರಿಗೆ ತಿಳಿಸಿದೆ. ಒಂದು ಕ್ಷಣ ಅವರು ಯೋಚಿಸಿದರು 'ಈ ಹಣವನ್ನೇಕೆ ನಿರ್ಗತಿಕ ಮಕ್ಕಳ ಸಂಸ್ಥೆಗಳಿಗೆ ನೀಡಬಾರದು? ನಿಮ್ಮ ಅಭಿಪ್ರಾಯವೇನು?' ಎಂದು ಕೇಳಿದರು.

      'ಯಾವ ನಿರ್ಗತಿಕ ಮಕ್ಕಳ ಸಂಸ್ಥೆಗಳಿಗೆ ಹಣ ನೀಡಬೇಕೆಂಬುದನ್ನು ನೀವು ನಿರ್ಧರಿಸಿ' ಎಂದು ಕಲಾಂ ನನಗೆ ಸೂಚಿಸಿದರು. 'ಈ ಹಣ ಪೋಲಾಗದಂತೆ ಖಾತ್ರಿ ಪಡಿಸಿಕೊಳ್ಳಿ' ಎಂದೂ ಹೇಳಿದರು. ಕಲಾಂರ ಇಚ್ಛೆಯಂತೆ ಇಪ್ಪತ್ತೆಂಟು ನಿರ್ಗತಿಕ ಮಕ್ಕಳ ಸಂಸ್ಥೆಗಳಿಗೆ ನಮ್ಮ ತಂಡದ ಕಾರ್ಯಕರ್ತರು ಅಕ್ಕಿ, ಹಿಟ್ಟು, ಬೇಳೆ, ಬ್ಲಾಂಕೆಟ್ ಹಾಗೂ ಸ್ವೆಟರ್ ಗಳನ್ನು ವಿತರಿಸಿ ಬಂದರು. ಮಕ್ಕಳೆಲ್ಲ ಬಹಳ ಆನಂದ ಪಟ್ಟರು. ಈ ವಿವರಗಳನ್ನು ನಾನು ಕಲಾಂ ಅವರಿಗೆ ತಿಳಿಸಿದೆ.

            ಆದರೆ ನನಗೆ ಮತ್ತೊಂದು ಅಚ್ಚರಿ ಕಾದಿತ್ತು. ಕಲಾಂ ಪುನ: ನನ್ನನ್ನು ಕರೆದರು. ರೂಮಿನಲ್ಲಿ ನಾವಿಬ್ಬರೇ ಇದ್ದೆವು. ಅವರು ಸುತ್ತ ನೋಡಿ ಹೇಳಿದರು 'ನೀವು ಆ ಎಲ್ಲ ಸಾಮಾನು ಸರಂಜಾಮುಗಳನ್ನು ಸರಕಾರಿ ಹಣದಲ್ಲಿ ಖರೀದಿಸಿ ವಿತರಿಸಿದ್ದಿರಿ. ಇಫ್ತಾರ್ ಗೆ ನಾನು ನನ್ನ ಸ್ವಂತ ಹಣವನ್ನು ನೀಡುವವನಿದ್ದೆ. ನನ್ನ ವೈಯಕ್ತಿಕ ಖಾತೆಯಿಂದ ಒಂದು ಲಕ್ಷ ರೂ. ಚೆಕ್ ನೀಡುತ್ತೇನೆ. ಸರ್ಕಾರಿ ಹಣವನ್ನು ಬಳಸದಂತೆ ಈ ಹಣವನ್ನು ಉಪಯೋಗಿಸಿ. ಆದರೆ ನಾನು ಹಣ ಕೊಟ್ಟಿದ್ದನ್ನು ಮಾತ್ರ ಯಾರಿಗೂ ಹೇಳಬೇಡಿ'.

---೦೦೦---

          ಗಲ್ಲುಶಿಕ್ಷೆಗೆ ಸಂಬಂಧಿಸಿದಂತೆ ಕಲಾಂ ಅವರು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಸೇರಿದಂತೆ ಹಲವು ಕಾನೂನು ಪರಿಣಿತರೊಂದಿಗೆ ಸಮಾಲೋಚನೆ ನಡೆಸಿದ್ದರು. ಪಕ್ಕದ ರೂಮಿನಲ್ಲಿ ಕುಳಿತಿರುವಂತೆ ನನಗೆ ಸೂಚಿಸಲಾಗಿತ್ತು. ಹದಿನೈದು ನಿಮಿಷಗಳ ನಂತರ ಬೆಲ್ ಸದ್ದಾಯಿತು ಸಹಾಯಕ ಬಂದು 'ಸರ್  ನಿಮ್ಮನ್ನು ಕರೆಯುತ್ತಿದ್ದಾರೆ ಬರಬೇಕಂತೆ' ಎಂದ.

           ನಾನು ಒಳ ಹೋದೆ. ರಾಷ್ಟ್ರಪತಿ ಹಾಗೂ ಅವರ ಗೆಸ್ಟ್ ಸೋಫಾದಲ್ಲಿ ಕುಳಿತಿದ್ದರು. ನಾನು ಅವರ ಮುಂದಿನ ಆಸನದಲ್ಲಿ ಕುಳಿತೆ. ಗೆಸ್ಟ್ ಹೇಳಿದರು 'ಮಿಸ್ಟರ್ ನಾಯರ್ ಗಲ್ಲು ಶಿಕ್ಷೆ ಬಗ್ಗೆ  ಚರ್ಚಿಸುತ್ತಿದ್ದೇವೆ.  ರಾಷ್ಟ್ರಪತಿಯವರು ಈ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದಾರೆ ಹಾಗೂ ಅದೆನೆಂಬುದು ನಿಮಗೂ ಗೊತ್ತಿದೆ. ರಾಷ್ಟ್ರಪತಿಯವರ ನಿಲುವಿಗೆ ನಾನು ಸಮ್ಮತಿ ಸೂಚಿಸುತ್ತೇನೆ. ನಿಮ್ಮ ಅನಿಸಿಕೆ ಏನು?'

            ನಾನು ಕಲಾಂ ಅವರನ್ನು ನೋಡಿದೆ. ನಾನೇನು ಹೇಳುತ್ತೆನೆಂಬುದು ಅವರಿಗೆ ಗೊತ್ತಿತ್ತು. ಅವರು ಮುಗುಳ್ನಕ್ಕರು. 'ಸರ್ ನಾನು ನನ್ನ ಅನಿಸಿಕೆ ಹೇಳಬಹುದೇ?' ಎಂದೆ. ಕಲಾಂ ತಲೆಯಾಡಿಸಿದರು. ಗೌರವಯುತವಾಗಿ ನಾನು ನನ್ನ ಅಭಿಪ್ರಾಯ ತಿಳಿಸಿದೆ. ನನ್ನ ಮಾತು ಕೇಳಿ ಆ ಕಾನೂನು ಪರಿಣಿತರಿಗೆ ಬಹಳ ಅಚ್ಚರಿಯಾಯಿತು. ಆ  ಚರ್ಚೆ ಅಲ್ಲಿಗೇ ಮುಗಿಯಿತು. ನಾನು ಅವರನ್ನು ಕಳಿಸಲು  ಹೊರಟೆ. ಕಾರನ್ನೇರುವ ಮೊದಲು ಕಾನೂನು ಪರಿಣಿತರು ನನ್ನನ್ನು ನೋಡಿ 'ಭಾರತದ ರಾಷ್ಟ್ರಪತಿಯವರೊಂದಿಗೆ ನೀವು ಈ ರೀತಿ ಮಾತನಾಡಬಹುದಾ?' ಎಂದು ಕೇಳಿದರು.
'ಹೌದು ಸರ್ ಅದರಲ್ಲೇನು ಬಂತು? ಅದು ಅವರ ತಾಕತ್ತು ಹಾಗೂ ನನ್ನ ತಾಕತ್ತೂ ಹೌದು' ಎಂದೆ. ಕಾರು ಹೊರಟಿತು.

          ಒಬ್ಬ ಅಧಿಕಾರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಲಾಂ ದೊರಕಿಸಿಕೊಟ್ಟಿದ್ದರು.

ಕೊನೆಯ ಮಾತು 


           ಹೀಗೆ ಹೇಳುತ್ತ ಹೋದರೆ ಕಲಾಂ ಅವರ ಸರಳ ಮತ್ತು ಪ್ರಾಮಾಣಿಕ ಬದುಕಿನ ಅನೇಕ ಘಟನೆಗಳು  ಮನಸ್ಸನ್ನು ಆರ್ದ್ರಗೊಳಿಸುತ್ತವೆ. ಹೃದಯ ಆತ್ಮಿಯರೊಬ್ಬರನ್ನು ಕಳೆದುಕೊಂಡ ಅನಾಥ ಪ್ರಜ್ಞೆಯಿಂದ ಹೊಯ್ದಾಡುತ್ತದೆ. ಕಲಾಂ ಅವರ ಇರುವಿಕೆ ಮತ್ತು ಅವರ ಬದುಕು ಅನೇಕರಿಗೆ ಸ್ಪೂರ್ತಿಯ ಸೆಲೆಯಾಗಿತ್ತು. ನಿಜಕ್ಕೂ ಕಲಾಂ ನಮ್ಮ ನಡುವಿನ ಅದ್ಭುತ ಮತ್ತು ಅಚ್ಚರಿಗಳಲ್ಲೊಂದಾಗಿದ್ದರು. ಕಡುಬಡತನದಲ್ಲಿ ಹುಟ್ಟಿದ ಪೇಪರ್ ಮಾರುವ ಹುಡುಗನೊಬ್ಬ ತನ್ನಲ್ಲಿನ ಪ್ರತಿಭೆ ಮತ್ತು ಪ್ರಯತ್ನದಿಂದ ರಾಷ್ಟ್ರಪತಿ ಭವನದವರೆಗೆ ಪಯಣಿಸಿದ ಅವರ ಬದುಕಿನ ಆ ಪಯಣ ಸಣ್ಣ ಸಾಧನೆಯಲ್ಲ. ಅವರ ಆ ಪಯಣದ ದಾರಿಯಲ್ಲಿ ಹೂವುಗಳಿಗಿಂತ ಕಲ್ಲು ಮುಳ್ಳುಗಳೇ ತುಂಬಿದ್ದವು. ತನ್ನ ಸಾಧನೆಯ ದಾರಿಗೆ ಎದುರಾದ ಎಲ್ಲ ಅಡೆತಡೆಗಳನ್ನು ಬದಿಗೆ ಸರಿಸಿ ತಾನು ನಡೆಯಬೇಕಾದ ಪಥವನ್ನು ಸ್ವತ: ನಿರ್ಮಿಸಿಕೊಂಡ ಪಥಿಕರವರು. ಅವರ ಬದುಕಿನ ಯಶೋಗಾಥೆ ಅವರ ನಂತರದ ಪೀಳಿಗೆಗೆ ಅದು ಯಾವತ್ತಿಗೂ ದಾರಿದೀಪ. ಇಂಥ ಸಾಧಕ ಸಾಧನೆ ಮಾಡುತ್ತಿರುವ ಕಾಲದಲ್ಲಿ ನಾವು ಬದುಕಿರುವುದು ನಿಜಕ್ಕೂ ಅದು ನಮ್ಮ ಬದುಕಿನ ಬಹುದೊಡ್ಡ ಅದೃಷ್ಟ. ಅವರನ್ನು ನೆನಪಿಸಿಕೊಂಡಾಗಲೆಲ್ಲ ಮನಸ್ಸು ಹೇಳುತ್ತದೆ 'ಮೇಷ್ಟ್ರೆ ನೀವು ಇನ್ನೊಂದಿಷ್ಟು ಕಾಲ ಬದುಕಿರಬೇಕಿತ್ತು'.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


No comments:

Post a Comment