Monday, June 1, 2015

ಪೀಕೂ: ಅಪ್ಪ ಮಗಳ ಬಾಂಧವ್ಯದ ಕಥನ





          ಪೀಕೂ ಸಿನಿಮಾ ವೀಕ್ಷಣೆಯಿಂದ ಬಹಳ  ದಿನಗಳ ನಂತರ ಒಂದು ಒಳ್ಳೆಯ ಸಿನಿಮಾ ನೋಡಿದ ಅನುಭವವಾಯಿತು. ಹಾಡು ಹೊಡೆದಾಟಗಳಿಗೆ  ಸೀಮಿತವಾಗುತ್ತಿರುವ   ಇತ್ತೀಚಿನ ಸಿನಿಮಾಗಳ ನಡುವೆ ಪೀಕೂ ವಿಶಿಷ್ಠ ಕತೆಯಿಂದ ಒಂದು ಸದಭಿರುಚಿಯ ಸಿನಿಮಾ ಎನ್ನಬಹುದು. ಹಾಡು ಮತ್ತು ಹೊಡೆದಾಟಗಳಿಲ್ಲದೆ ಸಿನಿಮಾ ನಿರ್ಮಾಣ ಮಾಡುವುದು ಅಸಾಧ್ಯ ಎನ್ನುವ ವಾತಾವರಣ ಸ್ಥಾಪಿತವಾಗಿರುವ ಹಿನ್ನೆಲೆಯಲ್ಲಿ ಕೇವಲ ಕಥೆ ಮತ್ತು ಕಲಾವಿದರ ಅಭಿನಯವನ್ನೇ ನೆಚ್ಚಿಕೊಂಡು ಸಿನಿಮಾ ಮಾಡುವುದು ಅದು ನಿರ್ದೆಶಕನಿಗೂ ನಿಜಕ್ಕೂ ಸವಾಲಿನ ಕೆಲಸ. ಜೊತೆಗೆ ಪೀಕೂ ಸಿನಿಮಾದ ಕಥಾವಸ್ತು ಸಹ ಅಷ್ಟೇನೂ ಸಂಕೀರ್ಣವಾದದ್ದಲ್ಲ. ಮಲಬದ್ಧತೆಯಂಥ ಸಣ್ಣ ಮತ್ತು ಈ ವಿಷಯವಾಗಿ ಬೇರೆಯವರೊಂದಿಗೆ ಮಾತನಾಡಲು ಹಿಂಜರಿಯುವಂಥ ಸಮಸ್ಯೆಯನ್ನು ಆಧಾರವಾಗಿಟ್ಟುಕೊಂಡು ಕಥೆ ಹೆಣೆದ ನಿರ್ದೇಶಕನ ಜಾಣ್ಮೆ ಮೆಚ್ಚಲೇ ಬೇಕು. ಆದರೆ ದೈಹಿಕ ಸಮಸ್ಯೆಯನ್ನು ಮನುಷ್ಯ ಸಂಬಂಧಗಳಿಗೆ ತಳುಕು ಹಾಕುವ ನಿರ್ದೇಶಕ ನೇರವಾಗಿ ಕೈಹಾಕುವುದು ಪ್ರೇಕ್ಷಕರ ಮನಸ್ಸುಗಳಿಗೆ. ಇಲ್ಲೇ ನಿರ್ದೇಶಕ ಗೆಲುವು ಸಾಧಿಸುವುದು. ಒಂದರ್ಥದಲ್ಲಿ ಇದು ಹೀರೋ ಹೀರೋಯಿನ್ ಗಳ ಸಿನಿಮಾ ಎನ್ನುವುದಕ್ಕಿಂತ ಇದೊಂದು ನಿರ್ದೇಶಕನ ಸಿನಿಮಾ. ನಾಯಕ ಪ್ರಧಾನ ಸಿನಿಮಾಗಳೇ ಹೆಚ್ಚು ಹೆಚ್ಚು ನಿರ್ಮಾಣವಾಗುತ್ತಿರುವ ಹಿಂದಿ ಚಿತ್ರರಂಗದಲ್ಲಿ ನಿರ್ದೇಶಕನ ಸಿನಿಮಾವೊಂದು ನಿರ್ಮಾಣಗೊಂಡಿರುವುದು ಅದೊಂದು ಆಶಾದಾಯಕ ಬೆಳವಣಿಗೆ ಎನ್ನಬಹುದು. 

           ಇನ್ನು ಪೀಕೂ ಸಿನಿಮಾದ ಕಥೆಯ ಕುರಿತು ಹೇಳುವುದಾದರೆ ಅದು ಹೀಗಿದೆ, ತನ್ನ ಮಗಳು ಪೀಕೂವಿನೊಂದಿಗೆ ವಾಸಿಸುತ್ತಿರುವ ಭಾಸ್ಕೊರ್ ಬ್ಯಾನರ್ಜಿಗೆ (ಆತ ಕೊಲಕತ್ತಾ ಮೂಲದವನು) ಚಿಕ್ಕ ವಯಸ್ಸಿನಿಂದಲೇ ಮಲಬದ್ಧತೆಯ ಸಮಸ್ಯೆ ಇದೆ. ಆ ಒಂದು ಸಮಸ್ಯೆಯನ್ನೇ ಕುರಿತು ಯಾವ ಸಂಕೋಚವೂ ಇಲ್ಲದೆ ಆತ ಎಲ್ಲರೊಡನೆ ಚರ್ಚಿಸಬಲ್ಲ . ದಿನಕ್ಕೆ ಎಷ್ಟು ಸಲ ಮಲವಿಸರ್ಜನೆಗೆ ಹೋದೆ, ಪ್ರತಿಸಾರಿ ಹೇಗಾಯಿತು ಎನ್ನುವುದನ್ನು ಆತ ವಿವರವಾಗಿ ತನ್ನ ಮಗಳಿಗೆ ಮತ್ತು ಕುಟುಂಬದ ವೈದ್ಯರಿಗೆ ಹೇಳುತ್ತಿರುತ್ತಾನೆ. ತನ್ನ ಆರೋಗ್ಯದ ಏರು ಪೇರುಗಳ ಬಗ್ಗೆ ಆತನಿಗೆ ಸದಾ ಎಚ್ಚರಿಕೆ. ಇದೇ ವಿಷಯವಾಗಿ ಅಪ್ಪ ಮತ್ತು ಮಗಳ ನಡುವೆ ಭಾರೀ ಜಗಳ. ದಿನಕ್ಕೆ ಏನಿಲ್ಲವೆಂದರೂ ಹತ್ತಾರು ಬಾರಿ ಅವರು ಜಗಳವಾಡುತ್ತಾರೆ. ಮಗಳು ತನ್ನನ್ನು ನಿರ್ಲಕ್ಷಿಸಬಾರದು ಎನ್ನುವುದು ಅಪ್ಪನ ಇರಾದೆಯಾದರೆ ಅಪ್ಪನಿಗಾಗಿ ತಾನು ತ್ಯಾಗ ಮಾಡುತ್ತಿದ್ದೇನೆ ಎನ್ನುವ ಭಾವನೆ ಮಗಳದು. ಕಣ್ಣೀರು ತರಿಸುವ ತೀರ ಭಾವನಾತ್ಮಕ ಸನ್ನಿವೇಶಗಳೇನೂ ಈ ಸಿನಿಮಾದಲ್ಲಿಲ್ಲ. ಆದರೆ ಅಪ್ಪ ಮತ್ತು ಮಗಳ ನಡುವಣ ಬಾಂಧವ್ಯವೇ ಸಿನಿಮಾದ ಹೈಲೇಟ್. 

         ಮಲಬದ್ಧತೆಯ ಸಮಸ್ಯೆಯ ಜೊತೆಗೆ ಆತನಿಗಿರುವ ಇನ್ನೊಂದು ಸಮಸ್ಯೆ ಎಂದರೆ ಭಾಸ್ಕೊರ್ ಬ್ಯಾನರ್ಜಿ ತೀರ ವಾಚಾಳಿ. ಯಾವದಾದರೊಂದು ವಿಷಯದ ಕುರಿತು ಆತ ಮಾತನಾಡತೊಡಗಿದರೆ ಎದುರಿನವರಿಗೆ ತಲೆ ಚಿಟ್ಟು ಹಿಡಿಯುತ್ತದೆ. ವಾಚಾಳಿತನದೊಂದಿಗೆ ಆತ ಮಹಾ ಜಗಳಗಂಟ. ಬಾತ್ ರೂಮ್ ಸ್ವಚ್ಛಗೊಳಿಸಲಿಲ್ಲವೆಂದು ಆತ ಮನೆಯ ಕೆಲಸದಾಕೆಯೊಂದಿಗೂ ಜಗಳಕ್ಕೆ ನಿಲ್ಲಬಲ್ಲ. ಅಕ್ಕಪಕ್ಕದ ಮನೆಯವರ ಪ್ರಶ್ನೆಗಳಿಗೂ  ವ್ಯಂಗ್ಯವೇ ಅವನ ಉತ್ತರ. ತಾನು ಸಾಯುವವರೆಗೂ ಮಗಳು ತನ್ನ ಸೇವೆ ಮಾಡಬೇಕೆನ್ನುವ ಹಠಮಾರಿ ಆತ. ಅದಕ್ಕೆಂದೇ ಮಗಳನ್ನು  ಮದುವೆ ಮಾಡಿ  ಕಳುಹಿಸಲು ಆತನಿಗೆ ಸುತಾರಾಂ ಇಷ್ಟವಿಲ್ಲ. ಮದುವೆಯನ್ನು ತಪ್ಪಿಸಲು ತನ್ನ ಮಗಳು ಕನ್ಯೆಯಾಗಿ ಉಳಿದಿಲ್ಲ ಎಂದು ಹೇಳಲೂ ಆತ ಹಿಂಜರಿಯಲಾರ. ಮಗಳು ಮಗುವಾಗಿದ್ದಾಗ ಅವಳನ್ನು ನೋಡಿಕೊಂಡ ಆಕೆಗೆ ಈಗ ನಾನೇ ಮಗು ಎನ್ನುವ ಭಾವನೆ ಅವನದು.

             ಕೆಲಸ ಮಾಡುತ್ತ ಅಪ್ಪನನ್ನು ನೋಡಿಕೊಳ್ಳುತ್ತಿರುವ ಪೀಕೂಗೆ ಕೆಲಸದ ಸ್ಥಳದಲ್ಲೂ ಅಪ್ಪನ ವರ್ತನೆಯಿಂದ ಮುಜುಗರ ಪಡುವ ಸ್ಥಿತಿ. ಅಪ್ಪನ ಮಲಬದ್ಧತೆಯ ವಿಷಯ ಪೀಕೂ ಕೆಲಸ ಮಾಡುತ್ತಿರುವ ಕಂಪನಿಯಲ್ಲೂ ಚರ್ಚೆಯ ವಿಷಯ. ಒಮ್ಮೊಮ್ಮೆ ತಾನು ಮಾಡುತ್ತಿರುವ ಕೆಲಸವನ್ನು ಅರ್ಧಕ್ಕೆ ಬಿಟ್ಟು ಮಗಳು ತನ್ನ ಆರೋಗ್ಯ ವಿಚಾರಿಸಲು ಬರಬೇಕೆನ್ನುವ ಅಪ್ಪನ ಸ್ವಾರ್ಥ ಪೀಕೂಗೆ ಅನೇಕ ಸಂದರ್ಭಗಳಲ್ಲಿ ಪೇಚಿಗೆ ಸಿಲುಕಿಸುತ್ತದೆ. ಅದೊಂದು ದಿನ ಕೊಲಕತ್ತಾಗೆ ಹೊರಟು ನಿಲ್ಲುವ ಅಪ್ಪನಿಗಾಗಿ ಮಗಳು ಪೀಕೂ ತನ್ನ ಕೆಲಸವನ್ನು ಬಿಟ್ಟು ಅಪ್ಪನೊಂದಿಗೆ ಜೊತೆಯಾಗುತ್ತಾಳೆ. ಕಾರ್ ಬಾಡಿಗೆ ಪಡೆದು ಹೋಗಬೇಕೆನ್ನುವ ಅಪ್ಪನ ಹಟದ ಎದುರು ಸೋಲುವ ಮಗಳು ಕಾರ್ ಬಾಡಿಗೆಗೆ ಗೊತ್ತು ಮಾಡುತ್ತಾಳೆ. ಡ್ರೈವರ್ ಗಳಿಲ್ಲದೆ ಟ್ಯಾಕ್ಸಿ ಮಾಲೀಕ ರಾಣಾ ಚೌಧರಿ ತಾನೇ ಡ್ರೈವರ್ ಆಗಿ ಬರುವುದುರೊಂದಿಗೆ ಕಥೆ ಮತ್ತಷ್ಟು ರಂಜನೀಯವಾಗುತ್ತದೆ. ಸಿನಿಮಾದ ಕಥೆ ಬಹುಮುಖ್ಯ ತಿರುವು ಪಡೆಯುವುದು ಇಲ್ಲಿಂದಲೇ.  ರಾಣಾ ಚೌಧರಿಗೆ ಅಪ್ಪ ಮಗಳ ಈ ಸಂಬಂಧ ವಿಚಿತ್ರವಾಗಿ ಕಾಣಿಸುತ್ತದೆ. ಒಮ್ಮೊಮ್ಮೆ ಪೀಕೂ ಬ್ಯಾನರ್ಜಿಯ ಮಗಳಲ್ಲವೇನೋ ಎನ್ನುವ ಅನುಮಾನ ಆತನನ್ನು ಕಾಡುತ್ತದೆ. ಅದನ್ನು ಆತ ನೇರವಾಗಿ ಪೀಕೂಗೆ ಕೇಳಿ ತನ್ನ ಅನುಮಾನವನ್ನು ಪರಿಹರಿಸಿಕೊಳ್ಳುತ್ತಾನೆ. ಜೊತೆಗೆ ಬ್ಯಾನರ್ಜಿಯ ಮಲಬದ್ಧತೆಯ ಸಮಸ್ಯೆಗೆ ರಾಣಾ ಹಲವು ಸಲಹೆಗಳನ್ನು ಕೂಡ ನೀಡುತ್ತಾನೆ. ರಸ್ತೆಯ ಮೇಲೆ ಅಪ್ಪ ಮಗಳು ಮತ್ತು ರಾಣಾ ಜಗಳವಾಡುತ್ತಲೇ ಕೊಲಕತ್ತಾ ತಲಪುತ್ತಾರೆ. ಅಲ್ಲಿ ಹೋದ ಕೆಲ ದಿನಗಳಲ್ಲೇ ಒಂದು ದಿನ ತನ್ನ ಮಲಬದ್ಧತೆಯ ಸಮಸ್ಯೆಯಿಂದ ಹೊರಬರುವ ರಾಣಾ ಅದೇ ರಾತ್ರಿ ಸುಖದ ಸಾವನ್ನು ಕಾಣುತ್ತಾನೆ. ಪೀಕೂಗೆ ಅಪ್ಪನ ಸಾವು ಆಘಾತ ತಂದರೂ ಆತ ಬದುಕಿನ ಕೊನೆಯ ದಿನವಾದರೂ ನೆಮ್ಮದಿ ಕಂಡ ಎನ್ನುವ ಸಂತಸ ಅವಳಲ್ಲಿದೆ. ಇಲ್ಲಿ ಸ್ವಾರ್ಥವಿದೆ, ಸಣ್ಣತನವಿದೆ, ಜಗಳ ಕಾಯುವ ಮನಸ್ಸುಗಳಿವೆ, ಬೇಸರದಿಂದ ಸಿಡಿಮಿಡಿ ಗುಟ್ಟುವ ನಿಟ್ಟುಸಿರಿದೆ, ಹಠಮಾರಿತನವಿದೆ ಒಟ್ಟಾರೆ ನಮ್ಮಗಳ ಬದುಕಿನ ಅನೇಕ ಸಣ್ಣ ಸಣ್ಣ ಸಂಗತಿಗಳು ಇಲ್ಲಿವೆ. ಆದರೆ ಅವೆಲ್ಲವನ್ನೂ ಮೀರಿದ ಮನುಷ್ಯ ಸಂಬಂಧ ಇಲ್ಲಿದೆ.

                ಅಪ್ಪ- ಮಗಳು, ತಾಯಿ-ಮಗ, ಪತಿ-ಪತ್ನಿ, ಅಣ್ಣ-ತಂಗಿ ಇಂಥ ಸಂಬಂಧಗಳ ಅನೇಕ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ನಿರ್ಮಾಣಗೊಂಡಿವೆಯಾದರೂ ಅಲ್ಲಿ ವಾಸ್ತವಿಕತೆ ಮರೆಯಾಗಿ ಒಣ ಆದರ್ಶವೇ ಮೇಲುಗೈ ಸಾಧಿಸಿದೆ. ಕರಳು ಹಿಂಡುವ, ಕಣ್ಣೀರು ಸುರಿಸುವ ಸನ್ನಿವೇಶಗಳಿಗೆ ಹೆಚ್ಚಿನ ಒತ್ತು ನೀಡಿ ಜನರ ಭಾವಾನೆಗಳನ್ನೇ ಬಂಡವಾಳವಾಗಿಸಿಕೊಂಡು ಕೋಟಿ ಕೋಟಿ ಹಣ ಮಾಡುತ್ತಿರುವ ಸಿನಿಮಾ ರಂಗದಲ್ಲಿ ಪೀಕೂ ಆ ಯಾವ ಗಿಮಿಕ್ ಗಳಿಗೆ ಆಸ್ಪದೆ ಕೊಡದೆ ತನ್ನ ನೇರ ಮತ್ತು ಸರಳ ಕಥಾ ಹಂದರದಿಂದ ಗಮನ ಸೆಳೆಯುತ್ತದೆ.   ಮನುಷ್ಯ   ಸಂಬಂಧಗಳನ್ನು ವ್ಯಾಪಾರಿ ಮನೋಭಾವದಿಂದ ನೋಡುತ್ತಿರುವ ಅವಕಾಶವಾದಿಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಪೀಕೂ ಸಿನಿಮಾದ   ನಿರ್ದೇಶಕ ನಮ್ಮ ಮನಸ್ಸುಗಳಿಗೆ ಕನ್ನಡಿ ಹಿಡಿಯುವ ಕೆಲಸ ಮಾಡಿದ್ದಾರೆ. ಮನುಷ್ಯ ಸಂಬಂಧವನ್ನು ತೀರ ಆದರ್ಶದ ನೆಲೆಯಲ್ಲಿ ತೋರಿಸಿ ಮನುಷ್ಯರನ್ನು ದೇವತಾ ಸ್ವರೂಪಿಯಾಗಿ ಚಿತ್ರಿಸದೆ ಆ ಎಲ್ಲ ಸಂಬಂಧಗಳನ್ನು ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ ತೋರಿಸುವುದರ ಮೂಲಕ ಇಲ್ಲಿ ಮನುಷ್ಯ ಮನುಷ್ಯನಾಗಿಯೇ ಚಿತ್ರಿತವಾಗಿರುವನು. ಕೋಪ ತಾಪ ಜಗಳ ಪ್ರೀತಿ ಪ್ರೇಮ ವಾತ್ಸಲ್ಯಗಳೆಲ್ಲ ಮನುಷ್ಯನ ಸಹಜ ಗುಣಗಳೆನ್ನುವ   ಸಿನಿಮಾ ದ ಮೂಲ ಉದ್ದೇಶ ಜನರನ್ನು ಹೋಗಿ ತಲುಪಬೇಕು ಆಗ ನಿರ್ದೇಶಕನ ಪ್ರಯತ್ನ ಸಾರ್ಥಕವಾದಂತೆ.

      ಇಲ್ಲಿ ವಾಸ್ತವಿಕತೆಗೆ ಒತ್ತು ಕೊಟ್ಟರೂ ನಿರ್ದೇಶಕ ಸಂಬಂಧಗಳ ಮಹತ್ವ ಮತ್ತು ಮಕ್ಕಳ ಜವಾಬ್ದಾರಿಯನ್ನು ಕುರಿತು ಪ್ರೇಕ್ಷಕರನ್ನು ವಿವೇಚಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿರುವರು. ತ್ಯಾಗದಿಂದಲೇ ಸಂಬಂಧಕ್ಕೊಂದು ಅರ್ಥವಿದೆ ಎನ್ನುವ ಒಣ ವೇದಾಂತ ಇಲ್ಲಿಲ್ಲ. ಸಂಬಂಧಗಳ ನಡುವೆಯೂ ಅಲ್ಲಿ ಸ್ವಾರ್ಥವಿದೆ ಮನಸ್ಸುಗಳನ್ನು ನೋಯಿಸುವ ಕೋಪ ತಾಪಗಳಿವೆ. ಆದರೆ ಅದೆಲ್ಲವನ್ನೂ ಮೀರಿ ಕೊನೆಗೆ ಉಳಿಯುವುದು ಮನುಷ್ಯ ಮನುಷ್ಯರ  ನಡುವಿನ ಸಂಬಂಧ ಮಾತ್ರ ಎನ್ನುವ ಅರಿವು ಪ್ರೇಕ್ಷಕನಿಗಾಗುತ್ತದೆ. ನಿರ್ದೇಶಕರ ಉದ್ದೇಶವೇ ಅದು ಸಂಬಂಧಗಳನ್ನು ವಾಸ್ತವಿಕತೆಯ ಮೂಲಕ ಬೆಸುಗೆ ಹಾಕುವ ಪ್ರಯತ್ನ ಅವರದು. ಭಾವನೆಗಳೇ ಮೇಲುಗೈ ಸಾಧಿಸಿದಾಗ ಅಲ್ಲಿ ಮನುಷ್ಯ ದೇವತಾ ಸ್ವರೂಪಿಯಾಗುತ್ತಾನೆ. ಮನುಷ್ಯ ದೇವರಾದಾಗ ಆತ ಕೋಪ ತಾಪ ಸಿಟ್ಟು ರೋಷಗಳಿಂದ ಮುಕ್ತನಾಗಿ ವರ ಕೊಡುವ ಕಾಮಧೇನುವಾಗುತ್ತಾನೆ. ಹೀಗೆ ಮನುಷ್ಯ ದೇವತಾ ಸ್ವರೂಪಿಯಾದಾಗ ಅಲ್ಲಿ ಸಂಬಂಧಗಳ ನಡುವೆ ಬಹುದೊಡ್ಡ ಕಂದಕ ನಿರ್ಮಾಣವಾಗಿ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ. ಮನುಷ್ಯ ಸ್ವಾರ್ಥಿಯಾದಾಗ ಮಾತ್ರ ಸಂಬಂಧಗಳನ್ನು ಹುಡುಕಿ ಹೊರಡುತ್ತಾನೆ. ಹೀಗೆ ಸಂಬಂಧಗಳನ್ನು ಹುಡುಕಿ ಹೊರಟಾಗಲೇ ಆತನಿಗೆ ಸಂಬಂಧಗಳ ಮಹತ್ವದ ಅರಿವಾಗಿ ಆತ ಅವುಗಳೆದುರು ಸೋಲುತ್ತಾನೆ. ಮನುಷ್ಯನ ಸೋಲೇ ಸಂಬಂಧಗಳು ಮತ್ತಷ್ಟು ಗಟ್ಟಿಗೊಳ್ಳಲು ಕಾರಣವಾಗುತ್ತದೆ.

    ಸಿನಿಮಾವೊಂದರ ಸಂದೇಶ ಹೆಚ್ಚು ಜನರನ್ನು ಹೋಗಿ ತಲುಪುವುದು ಮತ್ತು ಅದು ಅನೇಕ ದಿನಗಳವರೆಗೆ ನೆನಪಿನಲ್ಲುಳಿಯುವುದು ಪೀಕೂ ವಿನಂಥ ಸಿನಿಮಾಗಳಿಂದ ಮಾತ್ರ ಸಾಧ್ಯ. ಒಂದೆಡೆ ಹೊಡೆದಾಟ ರಕ್ತಪಾತಗಳಂಥ ಸಿನಿಮಾಗಳು ನಿರ್ಮಾಣಗೊಳ್ಳುತ್ತಿದ್ದರೆ ಇನ್ನೊಂದೆಡೆ ಮನುಷ್ಯ ಸಂಬಂಧಗಳನ್ನು ತೀರ ವೈಭವಿಕರಿಸುತ್ತಿರುವ ಸಿನಿಮಾಗಳು. ಈ ನಡುವೆ ಕೆಲ ನಾಯಕ ನಟರು ಹಾಸ್ಯಪ್ರಧಾನ ಕಥಾವಸ್ತುವಿನ ಸಿನಿಮಾಗಳಲ್ಲಿ ನಟಿಸುತ್ತ ಜನರಿಗೆ ಮನರಂಜನೆ ನೀಡುತ್ತಿರುವರು. ಹೀಗಾಗಿ ಇಲ್ಲಿ ಕಥೆಯೇ ಇಲ್ಲದ ಸಿನಿಮಾಗಳು ಮತ್ತು ಕಥೆಯಿದ್ದೂ ತೀರ ಡ್ರಾಮಾಟಿಕ್ ಆಗಿ ಚಿತ್ರಿತವಾಗುತ್ತಿರುವ ಸಿನಿಮಾಗಳು ಎನ್ನುವ ಎರಡು ವರ್ಗಗಳಿವೆ. ಈ ಎರಡೂ ವರ್ಗದ ಸಿನಿಮಾಗಳು ಪ್ರೇಕ್ಷಕರ ಮನ್ನಣೆ ಮತ್ತು ಜನಾದಾರಕ್ಕೆ ಪಾತ್ರವಾಗುತ್ತಿದ್ದರೂ ಅವುಗಳು  ಸಮಾಜಕ್ಕೊಂದು ಸಂದೇಶ ನೀಡುವಲ್ಲಿ ಎಡುವುತ್ತಿವೆ. ಈ ದೃಷ್ಟಿಯಿಂದ ಪೀಕೂ ಸಿನಿಮಾವನ್ನು ಮೂರನೆಯ ವರ್ಗಕ್ಕೆ ಸೇರಿದ ಸಿನಿಮಾ ಎಂದು ಪರಿಗಣಿಸಬಹುದು. ಆ ಮೂರನೆ ವರ್ಗದ ಸಿನಿಮಾವನ್ನೇ  ನಾವೆಲ್ಲ ಕಲಾತ್ಮಕ ಸಿನಿಮಾ ಎನ್ನುವ ಹಣೆಪಟ್ಟಿ ಕಟ್ಟಿ ನಿರ್ಲಕ್ಷಿಸುತ್ತಿದ್ದೇವೆ. ಒಂದು ವೇಳೆ ಅಮಿತಾಭ್, ದೀಪಿಕಾ ರಂಥ ಜನಪ್ರಿಯ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸದೇ ಹೋಗಿದ್ದರೆ ಪೀಕೂ ಕೂಡ ಕಲಾತ್ಮಕ ಸಿನಿಮಾ ಎನ್ನುವ ನಿರ್ಲಕ್ಷಕ್ಕೆ ಒಳಗಾಗುವ ಅಪಾಯವಿತ್ತು.

                ಇಲ್ಲಿ ಅಮಿತಾಭ್ ಬಚ್ಚನ್ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕು. ನಾಯಕ ನಟನಿಂದ ಆತ ನಿವೃತ್ತಿ ಪಡೆದು ಪೋಷಕ ಪಾತ್ರಗಳ ನಟನೆಯತ್ತ ಹೊರಳಿದ ನಂತರ ಈ ಕಲಾವಿದನಿಗೆ  ಅನೇಕ ಚಾರಿತ್ರಿಕ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶ ದೊರೆಯಿತು. ನಟನೋರ್ವ ಕಲಾವಿದನಾಗಿ ರೂಪುಗೊಳ್ಳುವುದೇ ಆತ ವಿಭಿನ್ನ ಪಾತ್ರಗಳಲ್ಲಿ ನಟಿಸಿದಾಗ. ಈ ದೃಷ್ಟಿಯಿಂದ ಅಮಿತಾಭ್ ಕೇವಲ ನಟನಲ್ಲ ಅವನೊಬ್ಬ ಪರಿಪೂರ್ಣ ಕಲಾವಿದ. ಹಟಕ್ಕೆ  ಬಿದ್ದಂತೆ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವ ಅಮಿತಾಭ್ ಇನ್ನಷ್ಟು ಚಾರಿತ್ರಿಕ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶಗಳು ಹೇರಳವಾಗಿವೆ. ಆತನ ಸಮಕಾಲೀನ ನಟರು ಮರಸುತ್ತುವ ನಾಯಕ ಪಾತ್ರಗಳಿಂದ ನಿವೃತ್ತರಾಗಿ ಮೂಲೆ ಗುಂಪಾಗಿರುವ ಈ ಹೊತ್ತಿನಲ್ಲಿ ಅಮಿತಾಬ್ ಇವತ್ತಿಗೂ ತನ್ನ ನಟನೆಯಿಂದ ನಾಯಕನಿಗೆ ಸಮನಾದ ಪಾತ್ರಗಳಲ್ಲಿ ಅಭಿನಯಿಸುತ್ತಿರುವರು. ಕೇವಲ ಇಮೇಜಿಗೆ ಅಂಟಿಕೊಂಡು ಒಬ್ಬ ಕಲಾವಿದನಾಗಿ ಬೆಳೆಯುವ ಅವಕಾಶದಿಂದ ವಂಚಿತರಾಗುವ ನಟ ನಟಿಯರ ನಡುವೆ ಅಮಿತಾಭ್ ತಮ್ಮ ಅಭಿನಯ ಮತ್ತು ಪಾತ್ರಗಳ ಆಯ್ಕೆಯಿಂದ ವಿಭಿನ್ನರಾಗಿ ನಿಲ್ಲುತ್ತಾರೆ. ಒಟ್ಟಿನಲ್ಲಿ ಅಮಿತಾಭ್ ನಿರ್ದೇಶಕರ ನಟನಾಗಿ ಬದಲಾಗಿ ತಮ್ಮ ಎರಡನೇ ಇನ್ನಿಂಗ್ಸ್ ನ್ನು ಭರ್ಜರಿಯಾಗೇ ಆರಂಭಿಸಿರುವರು. ಇಲ್ಲಿ ಅಮಿತಾಭ್ ನಟಿಸಿರುವ ಅಪ್ಪನ ಪಾತ್ರ ಅದೇನು ಆದರ್ಶದ್ದಲ್ಲ. ಆದರೆ ತನ್ನ ಮನೋಜ್ಞ ಅಭಿನಯದಿಂದ ಅಮಿತಾಭ್ ಸ್ವಾರ್ಥ ಮತ್ತು ವಾಚಾಳಿತನದ ಅಪ್ಪನ ಪಾತ್ರವನ್ನು ಕಥೆಯ ಕೇಂದ್ರವಾಗಿಸಿರುವರು. ಬ್ಲ್ಯಾಕ್, ಪಾ ದಂಥ ಸಿನಿಮಾಗಳಲ್ಲಿನ ಅಮಿತಾಭ್ ಅಭಿನಯ ಇಲ್ಲಿ ನಮಗೆ ಮತ್ತೊಮ್ಮೆ ನೆನಪಾಗುತ್ತದೆ.

                 ಅಮಿತಾಭ್, ದೀಪಿಕಾ ಪಡುಕೋಣೆ, ಇರ್ಫಾನ್ ತಮ್ಮ ಪಾತ್ರಗಳಿಗೆ ಈ ಸಿನಿಮಾದಲ್ಲಿ ಜೀವತುಂಬಿ  ನಟಿಸಿರುವರು. ಸಿನಿಮಾದಲ್ಲಿ ಹಾಡುಗಳು ಇಲ್ಲದೆ ಇರುವುದು ಅದೇನು ದೊಡ್ಡ ಕೊರತೆ ಎನಿಸುವುದಿಲ್ಲ. ಇರ್ಫಾನ್ ರಂಗಭೂಮಿಯಿಂದ ಬಂದ ಕಲಾವಿದನಾಗಿರುವುದರಿಂದ ಆತನ ನಟನೆಯಲ್ಲಿ ಸಹಜತೆ ಇದೆ. ದೀಪಿಕಾಳಂಥ ಕಮರ್ಷಿಯಲ್ ಸಿನಿಮಾಗಳ ನಟಿ  ದೇಹ ಮತ್ತು ಸೌಂದರ್ಯವನ್ನು ಪ್ರದರ್ಶಿಸಲು  ಅವಕಾಶವಿಲ್ಲದಂಥ ಪೀಕೂ ಸಿನಿಮಾದಲ್ಲಿ ನಟಿಸಿದ್ದು ನಿಜಕ್ಕೂ ಆರೋಗ್ಯಕರ ಬೆಳವಣಿಗೆ. ಇಂಥ ಪಾತ್ರಗಳಲ್ಲಿ  ಅಭಿನಯಿಸುವುದರಿಂದಲೇ ನಟ ನಟಿಯರು ಕಲಾವಿದರಾಗಿ ರೂಪುಗೊಳ್ಳುವುದು. ಆದರೆ ಪ್ರೇಕ್ಷಕರು ಮಾತ್ರ ಇಂಥ ಸದಭಿರುಚಿಯ ಸಿನಿಮಾಗಳನ್ನು ಪ್ರೋತ್ಸಾಹಿಸದಿರುವುದು ದುರಾದೃಷ್ಟದ ಸಂಗತಿ. ಬಿಡುಗಡೆಯಾದ ಎರಡನೇ ದಿನಕ್ಕೆ ಅಲ್ಲಿದ್ದ ಪ್ರೇಕ್ಷಕರ ಸಂಖ್ಯೆ  ಬೆರಳೆಣಿಕೆಯಷ್ಟು ಎನ್ನುವುದು ನಮ್ಮ ಸಿನಿಮಾ ನೋಡುಗರ  ಅಭಿರುಚಿಗೆ ಕನ್ನಡಿ ಹಿಡಿಯುತ್ತದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ  


No comments:

Post a Comment