Monday, June 2, 2014

'ಮನದ ಮಾತು' ಪುಸ್ತಕ ಬಿಡುಗಡೆ

       


(ನನ್ನ ಪರವಾಗಿ ಸನ್ಮಾನ ಸ್ವೀಕರಿಸುತ್ತಿರುವ ನನ್ನ ಪತ್ನಿ ಮಂಜುಳಾ ಕುಲಕರ್ಣಿ)


      ಇದೇ ಮೇ  ೧೯ ರ ಸೋಮವಾರದಂದು  ಗುಲಬರ್ಗಾದ ಚೇಂಬರ ಆಫ್ ಕಾಮರ್ಸ್ ನ  ಸಭಾಂಗಣದಲ್ಲಿ ನನ್ನ 'ಮನದ ಮಾತು' ಕೃತಿ ಬಿಡುಗಡೆಯಾಯಿತು. 'ಮನದ ಮಾತು' ಇದು ಅಕ್ಷರಲೋಕದಲ್ಲಿ ನಾನಿಡುತ್ತಿರುವ ಮೂರನೇ ಹೆಜ್ಜೆ. ಪ್ರಥಮ ಕೃತಿ 'ಸಾಧನೆ' ಬರೆದದ್ದು ಬರೆಯಲೇ ಬೇಕೆನ್ನುವ ಪ್ರೀತಿಯ ಒತ್ತಡದಲ್ಲಿ. ಅದಕ್ಕಾಗಿ  ತೆಗೆದುಕೊಂಡ ಸಮಯ ಕೇವಲ ಮೂರು ತಿಂಗಳು. ಇನ್ನು ಎರಡನೇ ಪುಸ್ತಕ 'ಪೂರ್ಣ ಸತ್ಯ' ದ ಹಿಂದೆ ಸರಿಸುಮಾರು ಹತ್ತು ವರ್ಷಗಳ ಪರಿಶ್ರಮವಿತ್ತು. ಅದಾಗಲೇ ಹತ್ತಿರ ಹತ್ತಿರ ನೂರು ಲೇಖನಗಳನ್ನು 'ಸಮಾಚಾರ' ಎನ್ನುವ ಪತ್ರಿಕೆಗೆ ಬರೆದಿದ್ದರೂ ಪುಸ್ತಕ ಪ್ರಕಟಿಸುವ ಸಾಹಸ  ಮಾಡಿರಲಿಲ್ಲ. ಜೊತೆಗೆ ಲೇಖಕ ಪ್ರಕಾಶಕನಾಗಬಾರದು ಎನ್ನುವ ಹಠ ನನ್ನದು. ಇದನ್ನು ಕೆಲವರು ಒಪ್ಪದೇ ಇರಬಹುದು. ಇರಲಿ. ಗುಲಬರ್ಗಾದ  ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಶ್ರೀ ಬಸವರಾಜ ಕೊನೇಕ ಅವರು ಪುಸ್ತಕ ಪ್ರಕಟಿಸುತ್ತೇನೆ ಲೇಖನಗಳನ್ನು ತೆಗೆದುಕೊಂಡು ಬನ್ನಿ  ಎಂದು ಬೆನ್ನು ತಟ್ಟಿದ ಆ ಘಳಿಗೆ ನೂರರಲ್ಲಿ ಮನಸ್ಸಿಗೆ ಒಪ್ಪಿದ ಹದಿನೈದು ಲೇಖನಗಳನ್ನು ಅವರ ಮುಂದಿಟ್ಟಾಗ ಆಗ ಪ್ರಕಟವಾಗಿದ್ದೇ ನನ್ನ 'ಪೂರ್ಣ ಸತ್ಯ' ಪುಸ್ತಕ. ಅಕ್ಷರ ಲೋಕಕ್ಕೆ ಹೊಸಬನಾದ ನನ್ನನ್ನು ಪುಸ್ತಕ ಪ್ರಕಟಣೆಯ ಮೂಲಕ  ಪರಿಚಯಿಸಲು ಮುಂದಾಗಿದ್ದು ಅದು ಶ್ರೀ ಬಸವರಾಜ ಕೊನೇಕ ಅವರ ಔದಾರ್ಯ ಮತ್ತು ದೊಡ್ಡ ಗುಣ.



      ಇನ್ನು ಬರವಣಿಗೆ ಅದು ಹೇಗೆ ನನ್ನ ಕೈಹಿಡಿಯಿತು ಎನ್ನುವ ಅಚ್ಚರಿಯೊಂದು ನನ್ನನ್ನು ಕಾಡಿದಾಗಲೆಲ್ಲ ನನಗೆ ನೆನಪಾಗುವುದು ಬಾಗಲಕೋಟೆಯ ಬಸವೇಶ್ವರ  ವೀರಶೈವ ವಿದ್ಯಾವರ್ಧಕ ಸಂಘದವರು ಪ್ರಕಟಿಸುತ್ತಿರುವ 'ಸಮಾಚಾರ' ಎನ್ನುವ ಮಾಸ ಪತ್ರಿಕೆ. ಕಳೆದ ಹನ್ನೆರಡು ವರ್ಷಗಳಿಂದ ಪತ್ರಿಕೆ ನನ್ನ ಬರವಣಿಗೆಗೆ ವೇದಿಕೆಯಾಗಿದೆ. ಪತ್ರಿಕೆಯೊಂದನ್ನು ಪ್ರಕಟಿಸುವ ಮೂಲಕ ಬರಹಗಾರರಿಗೆ ಒಂದು ವೇದಿಕೆ ಒದಗಿಸುವುದರ ಜೊತೆಗೆ ಅವರ ನೈತಿಕ ಸ್ಥೈರ್ಯವನ್ನು ಇಮ್ಮಡಿಗೊಳಿಸುತ್ತಿರುವ ಕೆಲಸ ಮಾಡುತ್ತಿರುವವರು ಬ.ವಿ.ವಿ . ಸಂಘದ ಕಾರ್ಯಾಧ್ಯಕ್ಷರಾದ ಶ್ರೀ  ವೀರಣ್ಣ ಚರಂತಿಮಠ ಅವರು. ಅವರ  ಈ ಕೆಲಸಕ್ಕೆ ಹೆಗಲುಕೊಟ್ಟು ಪತ್ರಿಕೆಯನ್ನು ಅಂದವಾಗಿ ಮತ್ತು ನಿಯಮಿತವಾಗಿ ಹೊರತರುತ್ತಿರುವವರು ಪ್ರಧಾನ ಸಂಪಾದಕರಾದ ಶ್ರೀ ಏನ್. ಜಿ. ಕರೂರ ಹಾಗೂ ಸಂಪಾದಕರಾದ ಶ್ರೀ ಪಿ. ಏನ್. ಸಿಂಪಿ ಅವರು.

      ಇನ್ನು 'ಮನದ ಮಾತು' ಕೃತಿಯ ವಿಷಯಕ್ಕೆ ಬಂದರೆ ಇಲ್ಲಿನ ಎಲ್ಲ ಲೇಖನಗಳು ನಾನು ಬ್ಲಾಗಿಗೆ ಬರೆದವುಗಳು. ನಾನು ಬ್ಲಾಗ್  ಬರವಣಿಗೆಯನ್ನು ಪ್ರಾರಂಭಿಸಿದ್ದು ಕಳೆದ ಒಂದುವರ್ಷದಿಂದಿಚೆಗೆ. ಬೆಂಗಳೂರಿನಲ್ಲಿ ನೆಲೆಸಿರುವ ಸಹೋದರ ಅಮಿತ್ ಕುಲಕರ್ಣಿ ನನ್ನ ಬರೆಯುವ ಹವ್ಯಾಸ ಕಂಡು ಇನ್ನು ಮುಂದೆ ಬ್ಲಾಗಿಗೆ ಬರೆಯಿರಿ ಎಂದು ಬ್ಲಾಗ್ ಕಟ್ಟಿಕೊಟ್ಟ (http://manadamatu-rvk.blogspot.in ) ದಿನದಿಂದ ನಿಯಮಿತವಾಗಿ ಬರೆಯುತ್ತಿದ್ದೇನೆ. ಸರಿ ಸುಮಾರು ಒಂದು ವರ್ಷದ ಅವಧಿಯಲ್ಲಿ ಬರೆದ ಲೇಖನಗಳಿಂದ ಒಂದಿಷ್ಟು ಎದೆಯ ಕದ ತಟ್ಟಿ ಮನದೊಳಗೆ ಬಂದು ಕುಳಿತ ಲೇಖನಗಳನ್ನು ಎತ್ತಿ ಕೊಂಡಾಗ ಅವುಗಳ ಸಂಖ್ಯೆ ಇಪ್ಪತ್ತೈದಾಯಿತು.  ಆ ಎಲ್ಲ ಇಪ್ಪತ್ತೈದು ಲೇಖನಗಳನ್ನು ಒಯ್ದು ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಮಾಲೀಕರಾದ ಶ್ರೀ ಬಸವರಾಜ ಕೊನೇಕ ಅವರ ಮಡಿಲಿಗೆ ಹಾಕಿದಾಗ ಅದಕ್ಕೆ ಅವರು  ಚೆಂದದ ಬಟ್ಟೆ ತೊಡಿಸಿ 'ಮನದ ಮಾತು' ಎಂದು ಹೆಸರಿಟ್ಟು ಕೈಹಿಡಿದು ಅಕ್ಷರ ಲೋಕಕ್ಕೆ ಕರೆತಂದಿರುವರು.

       ನನ್ನ ಮನದ ಮಾತು ಕೃತಿ ಅಕ್ಷರ ಲೋಕದಲ್ಲಿ ಅಡಿಯಿಡುವ ವೇಳೆ ನೆರವಿಗೆ ಬಂದವರು ಡಾ. ಸ್ವಾಮಿರಾವ ಕುಲಕರ್ಣಿ, ಡಾ. ಗವಿಸಿದ್ದಪ್ಪ  ಪಾಟೀಲ, ಅಕ್ಷರ ಜೋಡಣೆಯ ಮೂಲಕ ಪ್ರತಿ ಪುಟದ ಮೆರಗನ್ನು ಹೆಚ್ಚಿಸಿದವರು ವಿ. ರಾಜ್  ಅಂದವಾದ ಮುಖಪುಟ ಬರೆದು ಕೊಟ್ಟವರು ಶ್ರೀ ವಿ. ರಾಜ್ ಮತ್ತು ಅತ್ಯಂತ ಶೃದ್ಧೆಯಿಂದ ಪ್ರಕಟಣೆಯ ಕೆಲಸವನ್ನು ಪೂರ್ಣಗೊಳಿಸಿದವರು ಬೆಂಗಳೂರಿನ ವಿಶ್ವಾಸ ಪ್ರಿಂಟರ್ಸ್ ನವರು.

      ಈ  ಎಲ್ಲರನ್ನೂ ನಾನು ಈ ಸಂದರ್ಭ ಅತ್ಯಂತ ವಿನಮೃನಾಗಿ ಸ್ಮರಿಸಿಕೊಳ್ಳುತ್ತ ನನ್ನ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ.



ಕ್ಷಮಿಸಿ ನಾನು ಯಾರೂಂತ ಹೇಳ್ಲೇ ಇಲ್ಲ 


     'ಸಾಹಿತ್ಯ ಜನರ ಬದುಕಿಗೆ ಹತ್ತಿರವಾಗಿದ್ದರೆ  ಮಾತ್ರ ಅದು ಸಮಾಜದಲ್ಲಿ ಒಂದು ಚಲನೆಯನ್ನುಂಟು ಮಾಡಬಲ್ಲದು. ಸಾಹಿತ್ಯದಿಂದ ಸಾಮಾಜಿಕ ಪಲ್ಲಟಗಳಾಗಬೇಕು. ಆದ್ದರಿಂದ ಬರವಣಿಗೆ ಬರಹಗಾರನ ಕಲ್ಪನೆಯಲ್ಲಿ ಮೂಡಿ ಬಂದರೂ  ಇನ್ನಾರದೋ ಬದುಕಿಗೆ ಹತ್ತಿರವಾಗಿರಬೇಕು. ಅಂದಾಗ ಮಾತ್ರ ಅಂಥ ಬರವಣಿಗೆ ಬಹುಕಾಲ ಉಳಿಯಬಲ್ಲದು' ಬರವಣಿಗೆ ಕುರಿತು ನನಗಿರುವ ಖಚಿತ ಅಭಿಪ್ರಾಯವಿದು. ಅಂದಹಾಗೆ ನಾನು ಹುಟ್ಟಿದ್ದು ಗುಲಬರ್ಗಾ ತಾಲೂಕಿನ ಕುಮಸಿ ಎನ್ನುವ ಹಳ್ಳಿಯಲ್ಲಿ. ಬಾಲ್ಯ ಕಳೆದಿದ್ದು  ಮತ್ತು ಅಕ್ಷರ ಕಲಿತಿದ್ದು ಹುಟ್ಟೂರಿನಲ್ಲೇ. ಚಿಕ್ಕವನಾಗಿದ್ದಾಗ ಶಾಲೆಗೆ ಹೋಗುತ್ತಾ ಆಗಾಗ ಶಾಲೆ ತಪ್ಪಿಸಿ ದನಗಳನ್ನು ಕಾಯುತ್ತ ಹೊಲದ ಪಕ್ಕದಲ್ಲಿ ಹರಿಯುತ್ತಿದ್ದ ಹಳ್ಳದಲ್ಲಿ ಈಜಾಡುತ್ತ ಕಳೆದ ಬಾಲ್ಯ ನನ್ನದು. ಈ ಓದುವ ಗೀಳು  ನನಗೆ ಅಮ್ಮನಿಂದ ಬಂದ ಬಳುವಳಿ. ನಾನು ಸಣ್ಣವನಾಗಿದ್ದಾಗ ಅಮ್ಮ ಮನೆಯಲ್ಲಿ ಓದುತ್ತಿದ್ದ ರಾಮಾಯಣ, ಮಹಾಭಾರತ, ಪೌರಾಣಿಕ ಕಾದಂಬರಿಗಳು ಮತ್ತು ನಾಟಕಗಳು ಇವತ್ತಿಗೂ ನನ್ನ ಓದು ಮತ್ತು ಬರವಣಿಗೆಗೆ ಸ್ಪೂರ್ತಿಯಾಗಿವೆ.

        ಅಕ್ಷರ ಕಲಿತದ್ದು ಪಕ್ಕಾ ಕನ್ನಡ ಭಾಷೆಯಲ್ಲಿ. ಈ ಜಾಗತೀಕರಣ, ಐ. ಟಿ, ಬಿಟಿಗಳು ನನ್ನ ಕಾಲಕ್ಕೆ ಈಗಿನಷ್ಟು ಸದ್ದು ಮಾಡುತ್ತಿರಲಿಲ್ಲವಾದ್ದರಿಂದ ಅಪ್ಪ ಖರ್ಚಾಗದೇ  ಕಲಿಸುವ ಸರ್ಕಾರಿ ಕನ್ನಡ ಶಾಲೆಗೆ ಸೇರಿಸಿದರು. ಹಾಗೆಂದು ಬೇಸರವೇನಿಲ್ಲ. ಕಲಿತ ಕನ್ನಡ ಶಾಲೆಗಳು ಪಠ್ಯ ಕ್ರಮದಾಚೆಯೂ ಕಲಿಸಿದ ಜೀವನಾನುಭವ ಅಪೂರ್ವ. ಮುಂದೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ. ವಿಶ್ವವಿದ್ಯಾಲಯದಿಂದ  ಹೊರಬಂದು ಆರೇಳು ವರ್ಷಗಳ ಕಾಲ ನಾಲ್ಕೈದು ಶಿಕ್ಷಣ ಸಂಸ್ಥೆಗಳಲ್ಲಿ ಅರೆಕಾಲಿಕ ಕೆಲಸ. ನಂತರ ಕೆಲಸ ಹುಡುಕಿಕೊಂಡು ಹೋಗಿ ಬದುಕು ಕಟ್ಟಿಕೊಂಡಿದ್ದು ಸಾಂಸ್ಕೃತಿಕ ನಗರ ಬಾಗಲಕೋಟೆಯಲ್ಲಿ. ಸಧ್ಯ ಬಾಗಲಕೋಟೆಯ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮುಖ್ಯ ಗ್ರಂಥಪಾಲಕನಾಗಿ ಕಾರ್ಯ ನಿರ್ವಹಣೆ. ಜೊತೆಗೆ ಬಿ.ವಿ.ವಿ. ಸಂಘದವರು ಪ್ರಕಟಿಸುತ್ತಿರುವ 'ಸಮಾಚಾರ' ಮಾಸಿಕ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಲ್ಲಿ ನಾನೂ ಒಬ್ಬ.

         ಇಲ್ಲಿಯ ವರೆಗೆ ಪ್ರಕಟವಾಗಿರುವುದು 'ಸಾಧನೆ', 'ಪೂರ್ಣ ಸತ್ಯ' ಮತ್ತು 'ಮನದ ಮಾತು' ಎನ್ನುವ ಮೂರು ಪುಸ್ತಕಗಳು. ಸಮಾಚಾರ ಪತ್ರಿಕೆಗೆ ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ಬರೆಯುತ್ತಿದ್ದು ಬರೆದ ಲೇಖನಗಳ ಸಂಖ್ಯೆ ನೂರರ ಗಡಿಯನ್ನು ದಾಟಿದೆ. ಕಥೆಗಳು ಮತ್ತು ಒಂದಿಷ್ಟು ಲೇಖನಗಳು ನಾಡಿನ ಪ್ರಮುಖ ನಿಯತಕಾಲಿಕೆಗಳು ಮತ್ತು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದುಂಟು. ಮುಂದಿನ ದಿನಗಳಲ್ಲಿ ಇನ್ನೂ ನಾಲ್ಕೈದು ಪುಸ್ತಕಗಳಾದರೂ ನನ್ನಿಂದ ರಚನೆಯಾಗಬಹುದು.  ಮನಸ್ಸಿನ ತಲ್ಲಣ ಮತ್ತು ಬೇಗುದಿಯನ್ನು ಹೊರಹಾಕಲು ಬರವಣಿಗೆಯೇ ಉತ್ತಮ ಅಭಿವ್ಯಕ್ತಿ ಮಾಧ್ಯಮವಾಗಿರುವುದರಿಂದ ನನ್ನದೇ ಬ್ಲಾಗ್ ಕಟ್ಟಿಕೊಂಡು ಕಳೆದ ಒಂದೆರಡು ವರ್ಷಗಳಿಂದ ನಿಯಮಿತವಾಗಿ ಬರೆಯುವುದು ಹವ್ಯಾಸವಾಗಿದೆ.  ಇದಿಷ್ಟು ನನ್ನ ಬಗ್ಗೆ ನಾನೇ ಹೇಳಿಕೊಂಡಿದ್ದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment