ಇದು ಎಲ್ಲೋ ಓದಿದ ನೆನಪು. ಎಲ್ಲರಿಗೂ ಗೊತ್ತಿರುವಂತೆ ರಾಮೋಜಿರಾವ ಹತ್ತು ಹಲವು ಉದ್ಯಮಗಳ ಯಜಮಾನ. ಆ ವ್ಯಕ್ತಿಯ ಬದುಕಿನ ಯಶೋಗಾಥೆ ಕುರಿತು ಪುಸ್ತಕ ಬರೆಯಲು ಕನ್ನಡದ ಪತ್ರಕರ್ತರೋರ್ವರು ಅವರನ್ನು ಸಂಪರ್ಕಿಸಿದಾಗ ರಸ್ತೆಯಲ್ಲಿ ಕಸಗೂಡಿಸುತ್ತಿದ್ದ ವ್ಯಕ್ತಿಯನ್ನು ತೋರಿಸಿ ರಾಮೋಜಿರಾವ ಹೇಳಿದರಂತೆ 'ಬರೆಯುವುದಿದ್ದರೆ ಅಂಥವನ ಬಗ್ಗೆ ಬರೆಯಿರಿ. ಹೆಸರು ಮಾಡಬೇಕೆನ್ನುವ ಹಪಾಹಪಿಗೆ ಬೀಳದೆ ಕೆಲಸ ಮಾಡುವ ಇಂಥ ನೂರಾರು ಜನ ನಮ್ಮ ನಡುವೆ ಇದ್ದಾರೆ. ಒಂದರ್ಥದಲ್ಲಿ ಅವರೆಲ್ಲ ನಮ್ಮಂಥವರ ನಡುವೆ ಕಳೆದು ಹೋದವರು. ಬೇಕಿದ್ದರೆ ಅವರ ಬಗ್ಗೆ ಬರೆಯಿರಿ'. ರಾಮೋಜಿರಾವ ಅವರ ಮಾತನ್ನು ನೆನಪಿಸಿಕೊಂಡಾಗ ನನಗೆ ಥಟ್ಟನೆ ನೆನಪಾದದ್ದು ಆಗಾಗ ಕಾಡುವ ಒಂದಿಷ್ಟು ಪಾತ್ರಗಳು. ಆ ಪಾತ್ರಗಳ ನೆನಪಿಗೆ ಇಲ್ಲಿ ಅಕ್ಷರ ರೂಪ ಕೊಡಲು ಪ್ರಯತ್ನಿಸಿದ್ದೇನೆ. ಓದಿ ನೋಡಿ ಒಂದಿಷ್ಟು ಮನಸ್ಸಿಗೆ ತಟ್ಟದೆ ಹೋದರೆ ಅದು ನನ್ನ ಬರವಣಿಗೆಯ ಲೋಪವೇ ಹೊರತು ಅವರ ಬದುಕಿನ ಲೋಪವಲ್ಲ.
ಕಾಡುವ ಪಾತ್ರಗಳು
'ಬೀಡಿಗಿ ರೊಕ್ಕಾ ಕೊಡು' ಊರಿಗೆ ಹೊರಟು ನಿಂತಿದ್ದವನನ್ನು ಅಡ್ಡಗಟ್ಟಿ ಕೇಳಿದವನ ಮುಖವನ್ನೊಮ್ಮೆ ದಿಟ್ಟಿಸಿ ನೋಡಿದೆ. ಅಲ್ಲಿ ಚಿಕ್ಕ ಮಗುವಿನ ಮುಗ್ಧಭಾವವಿತ್ತು. ಜೇಬಿನಿಂದ ಐವತ್ತು ರುಪಾಯಿ ನೋಟು ತೆಗೆದು ಕೊಡಲು ಹೋದೆ. ರೊಕ್ಕಕ್ಕಾಗಿ ಚಾಚಿದ್ದ ಕೈ ಹಿಂದೆ ಸರಿಯಿತು. 'ನನಗ ಎರಡು ರುಪಾಯಿ ಕೊಡು' ಧ್ವನಿಯಲ್ಲಿ ಎಂದಿನ ಕಾಠಿಣ್ಯತೆ ಇತ್ತು. ನನಗೆ ಗೊತ್ತಿತ್ತು ಎಷ್ಟೇ ಒತ್ತಾಯಿಸಿದರೂ ಎರಡು ರುಪಾಯಿಗಿಂತ ಹೆಚ್ಚು ತೆಗೆದುಕೊಳ್ಳುವುದಿಲ್ಲವೆಂದು. ಮೇಲಾಗಿ ದುಡ್ಡಿನ ವಿಷಯದಲ್ಲಿ ಅವನಿಗೆ ಎರಡು ರುಪಾಯಿಯೇ ದೊಡ್ಡ ಹಣ. ಎರಡು ರುಪಾಯಿ ಕೊಟ್ಟ ತಕ್ಷಣ ನನ್ನ ಕೈಯಲ್ಲಿನ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಬಸ್ ಸ್ಟ್ಯಾಂಡ್ ಕಡೆ ಹೆಜ್ಜೆ ಹಾಕಿದ.
ಅವನ ಹೆಸರು ಇಸ್ಮಾಯಿಲ್. ಆದರೆ ಊರಿನವರ ಬಾಯಿಯಲ್ಲಿ ಅದು ಇಸ್ಮಲ್ಲ್ಯಾ ಆಗಿ ಬದಲಾಗಿತ್ತು. ಇಷ್ಟಕ್ಕೂ ಇಸ್ಮಲ್ಲ್ಯಾ ಆ ಊರಿನವನಾಗಿರಲಿಲ್ಲ. ನಿಜಕ್ಕೂ ಅವನ ಊರು ಯಾವುದೆಂದು ಯಾರಿಗೂ ಗೊತ್ತಿರಲಿಲ್ಲ . ಇದ್ದಕಿದ್ದಂತೆ ಒಂದು ದಿನ ಅವನು ಊರನ್ನು ಪ್ರವೇಶಿಸಿದ. ಹೀಗೆ ಬಂದವನನ್ನು ಆ ಊರು ಬಾಚಿ ತಬ್ಬಿಕೊಂಡಿತ್ತು. ಹಾಗೆ ಬಂದವನು ಆ ಉರಿನಲ್ಲಿ ಸರಿಸುಮಾರು ನಾಲ್ಕು ದಶಕಗಳ ಬದುಕನ್ನು ಕಳೆದ. ಆ ನಲವತ್ತು ವರ್ಷಗಳಲ್ಲಿ ಅವನನ್ನು ಹುಡುಕಿಕೊಂಡು ಅವನವರೆಂದು ಹೇಳಿಕೊಳ್ಳುವ ಯಾವ ಬಂಧುವೂ ಬರಲಿಲ್ಲ. ಅವನ ವಿಷಯದಲ್ಲಿ ಅಚ್ಚರಿಯ ಇನ್ನೊಂದು ಸಂಗತಿ ಎಂದರೆ ಇಸ್ಮಲ್ಲ್ಯಾ ಒಬ್ಬ ಮಾನಸಿಕ ಅಸ್ವಸ್ಥನಾಗಿದ್ದ.
ಅಂಥ ಮಾನಸಿಕ ಅಸ್ವಸ್ಥನನ್ನು ಆ ಊರು ಅಖಂಡ ನಾಲ್ಕು ದಶಕಗಳ ಕಾಲ ತನ್ನ ಒಡಲಲ್ಲಿಟ್ಟುಕೊಂಡು ಅತ್ಯಂತ ಪ್ರೀತಿಯಿಂದಲೇ ಸಾಕಿತು. ಒಂದು ದಿನವೂ ಅವನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕೆನ್ನುವ ವಿಚಾರ ಯಾರ ಮನಸ್ಸಿನಲ್ಲೂ ಸುಳಿಯಲಿಲ್ಲ. ಇದಕ್ಕೆಲ್ಲ ಕಾರಣ ಇಸ್ಮಲ್ಲ್ಯಾನ ವರ್ತನೆ, ನಡೆ ನುಡಿ, ನಿಷ್ಕಾಮ ಮತ್ತು ನಿಷ್ಕಳಂಕ ವ್ಯಕ್ತಿತ್ವ. ಆ ನಲವತ್ತು ವರ್ಷಗಳಲ್ಲಿ ಒಂದೇ ಒಂದು ಅಪವಾದ ಅವನ ಮೇಲೆ ಬರಲಿಲ್ಲ. ಯಾರೊಬ್ಬರೂ ಅವನ ಬಗ್ಗೆ ಕೋಪದಿಂದ ಮಾತನಾಡಲಿಲ್ಲ. ಜೊತೆಗೆ ಅವನ ಬದುಕು ಯಾರಿಗೂ ಹೊರೆಯಾಗಲಿಲ್ಲ. ಅವನು ಪಡೆದುಕೊಂಡದ್ದಕ್ಕಿಂತ ಮರಳಿ ಕೊಟ್ಟಿದ್ದೆ ಹೆಚ್ಚು.
ಇಸ್ಮಲ್ಲ್ಯಾನ ಬದುಕು ಅತ್ಯಂತ ಶಿಸ್ತಿನ ಬದುಕಾಗಿತ್ತು. ದಿನಕ್ಕೆ ಎರಡು ಹೊತ್ತು ಚಹಾ ಮತ್ತು ಊಟ, ಸೇದಲು ಇಂತಿಷ್ಟೇ ಬೀಡಿಗಳು, ತೊಡಲು ಎರಡು ಜೊತೆ ಬಟ್ಟೆ ಇದಿಷ್ಟೇ ಅವನ ಬದುಕಿನ ಅವಶ್ಯಕತೆಯಾಗಿತ್ತು. ಊರಿನ ಒಬ್ಬೊಬ್ಬರ ಮನೆಯಲ್ಲಿ ಅವನ ಒಂದೊಂದು ದಿನದ ಊಟದ ವ್ಯವಸ್ಥೆಯಾಗುತ್ತಿತ್ತು. ಆ ದಿನದ ಊಟ ಕೊಟ್ಟವರ ಮನೆಯಲ್ಲಿ ಕಸಗುಡಿಸುವುದು, ನೀರು ತರುವುದು, ಹೊಲಕ್ಕೆ ಹೋಗಿ ಹುಲ್ಲು ತರುವುದು ಈ ಎಲ್ಲ ಕೆಲಸಗಳನ್ನು ಇಸ್ಮಲ್ಲ್ಯಾ ಮಾಡುತ್ತಿದ್ದ. ಬೆಳೆಗ್ಗೆಯಿಂದ ಸಂಜೆಯವರೆಗೆ ಈ ಎಲ್ಲ ಕೆಲಸಗಳನ್ನು ಮಾಡಿಯೂ ಅವನು ತೆಗೆದುಕೊಳ್ಳುತ್ತಿದ್ದುದ್ದು ಕೇವಲ ಎರಡು ರೂಪಾಯಿಗಳು. ಮಾನಸಿಕ ಅಸ್ವಸ್ಥನಾದರೂ ಒಂದು ದಿನವೂ ಒಬ್ಬರಿಗೂ ಅಪಾಯ ಮಾಡಿದವನಲ್ಲ. ಊರಿನ ಒಂದು ಚಿಕ್ಕ ಮಗುವೂ ಅವನನ್ನು ಕಂಡು ಹೆದರಿ ದೂರ ಓಡಿ ಹೋಗುತ್ತಿರಲಿಲ್ಲ. ಅವನು ಯಾವತ್ತೂ ಕೆಲಸ ಮಾಡದೆ ಯಾರ ಮನೆಯಲ್ಲೂ ಊಟ ಮಾಡಿದವನಲ್ಲ. ಒಮ್ಮೆ ಊಟ ಮಾಡಿದನೆಂದರೆ ಮೃಷ್ಟಾನ್ನ ಕೊಟ್ಟರೂ ಆ ಕಡೆ ಹೊರಳಿ ನೋಡುತ್ತಿರಲಿಲ್ಲ. ಎರಡು ರೂಪಾಯಿ ಕೆಲಸ ಮಾಡಿ ಪಡೆದ ಆ ದಿನ ಬೇರೆ ಯಾರ ಹತ್ತಿರವೂ ರೊಕ್ಕಕ್ಕಾಗಿ ಕೈ ಚಾಚುತ್ತಿರಲಿಲ್ಲ. ಇಸ್ಮಲ್ಲ್ಯಾನಲ್ಲಿದ್ದ ಈ ಗುಣಗಳೇ ಅವನನ್ನು ಆ ಊರು ತನ್ನ ತೆಕ್ಕೆಯಲ್ಲಿ ತೆಗೆದುಕೊಳ್ಳಲು ಕಾರಣವಾಗಿತ್ತು.
ಇಂಥ ಅತಿಮಾನವ ಇಸ್ಮಲ್ಲ್ಯಾ ಸಾಯುವ ಆ ಘಳಿಗೆ ಊರ ಮುಂದಿನ ಬಯಲು ಕಟ್ಟೆಯ ಮೇಲೆ ಮಲಗಿ ಯಾರಿಗೂ ತೊಂದರೆ ಕೊಡದೆ ತನ್ನ ಕೊನೆಯುಸಿರೆಳೆದಿದ್ದ. ನನ್ನ ಬಂಧು ಹೇಳಿದಂತೆ ಆ ದಿನದ ಅವನ ಅಂತ್ಯಕ್ರಿಯೆಯಲ್ಲಿ ಇಡೀ ಊರಿನ ಜನರೆಲ್ಲ ಸೇರಿದ್ದರಂತೆ. ಬೇರೆ ಊರುಗಳಂತೆ ಆ ಊರಿನಲ್ಲೂ ಗುಂಪುಗಾರಿಕೆ ಇದೆ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ. ಆದರೆ ಇಸ್ಮಲ್ಲ್ಯಾನ ಸಾವು ಆ ದಿನ ಊರಿನವರನ್ನೆಲ್ಲ ಒಂದುಗೂಡಿಸಿತ್ತು. ಮಾನಸಿಕ ಅಸ್ವಸ್ಥನೊಬ್ಬ ಸಾಮಾನ್ಯರನ್ನೂ ಮೀರಿ ಅಸಾಮಾನ್ಯಂತೆ ಬದುಕಿದ್ದಕ್ಕೆ ಆ ಊರು ಸಾಕ್ಷಿಯಾಗಿತ್ತು.
'ಕುಲಕರ್ಣಿ ಸಾಲಿಗಿ ಹೋಗೋ ಹುಡುಗನ್ನ ಹೊಲಕ್ಕ ಕರಕೊಂಡು ಬಂದು ಕೆಲಸಕ್ಕ ಹಚ್ಚಿರಲ್ಲ ಬುದ್ದಿ ಅದ ಇಲ್ಲ ನಿಮಗ' ಹೀಗೆ ಹೇಳಿದವರೇ ಆ ವ್ಯಕ್ತಿ ನನ್ನನ್ನು ಕೈಹಿಡಿದು ಎಳೆದೊಯ್ದು ಶಾಲೆಯಲ್ಲಿ ಕೂಡಿಸಿದರು. ಆ ದಿನಗಳಲ್ಲಿ ಅಂಥದ್ದೊಂದು ತಾಕತ್ತು ಇದ್ದದ್ದು ನನ್ನೂರಿನ ಗುರುಲಿಂಗಪ್ಪ ಗೋಳಾ ಮಾಸ್ತರರಲ್ಲಿ ಮಾತ್ರ. ನನಗೆ ಗೊತ್ತಿರುವಂತೆ ಊರಿನವರೆಲ್ಲ ಅವರನ್ನು ಗೋಳಾ ಮಾಸ್ತರ ಎಂದೇ ಕರೆಯುತ್ತಿದ್ದರು. ಆಶ್ಚರ್ಯವೆಂದರೆ ಅವರು ವೃತ್ತಿಯಿಂದ ಶಿಕ್ಷಕರಾಗಿರಲಿಲ್ಲ. ಚಿಕ್ಕ ಕಿರಾಣಿ ಅಂಗಡಿಯನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಅವರನ್ನು ಮಾಸ್ತರ ಎಂದೇಕೆ ಕರೆಯುತ್ತಾರೆ ಎಂದೆಲ್ಲ ನಾವು ಸಣ್ಣವರಾಗಿದ್ದಾಗ ಮಾತನಾಡಿಕೊಳ್ಳುತ್ತಿದ್ದೇವು. ನಾವು ಮಕ್ಕಳೆಲ್ಲ ಅಂಗಡಿಗೆ ಹೋದಾಗ ಒಂದೆರಡು ನೀತಿ ಮಾತುಗಳನ್ನು ಹೇಳಿಯೇ ಅವರು ನಮಗೆ ಬೇಕಾದ ದಿನಸಿ ಸಾಮಾನು ಕೊಡುತ್ತಿದ್ದರು. ಅದರಲ್ಲೂ ಕನ್ನಡ ವ್ಯಾಕರಣದ ವಿಷಯದಲ್ಲಿ ಅವರೊಬ್ಬ ದೊಡ್ಡ ಪಂಡಿತರೇ ಸರಿ. ಅವರು ಬಿಡುವಾಗಿದ್ದ ಸಮಯ ಊರಿನ ಮಕ್ಕಳನ್ನು ಕೂಡಿಸಿಕೊಂಡು ಉಚಿತವಾಗಿ ಪಾಠ ಮಾಡುತ್ತಿದ್ದರು. ತನ್ನೂರಿನ ಮಕ್ಕಳೆಲ್ಲ ಕಲಿತು ವಿದ್ಯಾವಂತರಾಗಬೇಕೆನ್ನುವುದು ಅವರ ಹಂಬಲವಾಗಿತ್ತು. ಮಕ್ಕಳನ್ನು ಶಾಲೆಗೆ ಕಳಿಸದ ತಂದೆ ತಾಯಿಯನ್ನು ಕರೆದು ಬುದ್ದಿ ಹೇಳುತ್ತಿದ್ದರು.
ಗೋಳಾ ಮಾಸ್ತರ ಆರ್ಥಿಕವಾಗಿ ಅಷ್ಟೇನೂ ಸ್ಥಿತಿವಂತರಾಗಿರಲಿಲ್ಲ. ಬೇರೆ ಊರಿನಿಂದ ಬದುಕನ್ನು ಕಟ್ಟಿಕೊಳ್ಳಲು ಅವರು ನನ್ನೂರಿಗೆ ಬಂದಿದ್ದರು. ಊರಿನ ಗಣ್ಯರೊಬ್ಬರು ಕೊಟ್ಟ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದ ಅವರಿಗೆ ಬಡತನ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಕಿರಾಣಿ ಅಂಗಡಿಯಿಂದ ಅವರಿಗೆ ಹೆಚ್ಚಿನ ಲಾಭವೇನೂ ಇರಲಿಲ್ಲ. ಒಂದಿಷ್ಟು ಹಣ ಪಡೆದು ಊರಿನ ಮಕ್ಕಳಿಗೆ ಪಾಠ ಮಾಡಿದರೆ ಅವರ ಬಡತನ ನೀಗೂತ್ತಿತ್ತು. ಆದರೆ ಹಣಕ್ಕೆ ವಿದ್ಯೆಯನ್ನು ಮಾರಿಕೊಳ್ಳುವ ಜಾಯಮಾನ ಅವರದಾಗಿರಲಿಲ್ಲ. ಬಡತನದಿಂದಾಗಿ ಅವರ ಹೆಂಡತಿಗೆ ಬೇರೆಯವರ ಹೊಲದಲ್ಲಿ ಕೂಲಿ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿತ್ತು.
ಬದುಕಿನ ಬಡತನ ಅವರನ್ನೆಂದೂ ತಾವು ಮಾಡುತ್ತಿದ್ದ ಮಹೋನ್ನತ ಕೆಲಸದಿಂದ ವಿಮುಖರನ್ನಾಗಿಸಲಿಲ್ಲ. ಯಾವ ಸಂಘ ಸಂಸ್ಥೆಯೂ ಅವರನ್ನು ಕರೆದು ಸನ್ಮಾನಿಸಲಿಲ್ಲ. ಯಾವ ಪ್ರಶಸ್ತಿಯೂ ಅವರನ್ನು ಹುಡುಕಿಕೊಂಡು ಬರಲಿಲ್ಲ. ಯಾವ ಫಲಾಪೇಕ್ಷೆಯೂ ಇಲ್ಲದೆ ಅವರು ಮಕ್ಕಳಿಗೆ ಪಾಠ ಮಾಡಿದರು. ಗೋಳಾ ಮಾಸ್ತರ ಇಂದು ನಮ್ಮೊಂದಿಗಿಲ್ಲ. ಅವರು ಕಾಲವಾಗಿ ಹತ್ತಿರ ಹತ್ತಿರ ಮೂರು ದಶಕಗಳಾಗಿವೆ. ನನ್ನೂರಿನಲ್ಲಿ ಈ ಮೂವತ್ತು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ. ಗೋಳಾ ಮಾಸ್ತರರಿಂದ ಅಂದು ಪಾಠ ಹೇಳಿಸಿಕೊಂಡ ನಾವುಗಳೆಲ್ಲ ಇಂದು ಮಧ್ಯ ವಯಸ್ಕರಾಗಿದ್ದೇವೆ. ಈ ಎಲ್ಲ ಬದಲಾವಣೆಗಳ ನಡುವೆಯೂ ಇವತ್ತಿಗೂ ನನ್ನೂರಿನಲ್ಲಿ ಗೋಳಾ ಮಾಸ್ತರ ನೆನಪು ಹಚ್ಚ ಹಸಿರಾಗಿದೆ.
'ಮಗೀಗಿ ಜ್ವರಾ ಬಂದಾದ ಬುಧವಾರ ಬರಲಿ ಅಂತ ಕಾಯ್ಲಿಕತ್ತಿನಿ' ಆ ದಿನಗಳಲ್ಲಿ ನನ್ನ ಅಜ್ಜನೂರಿನಲ್ಲಿ ಮತ್ತು ಆ ಊರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಈ ಮಾತು ಸಾಮಾನ್ಯವಾಗಿತ್ತು. ಪ್ರತಿ ಬುಧವಾರ ಸಮೀಪದ ಪಟ್ಟಣದಿಂದ ಆ ಹಳ್ಳಿಗೆ ಬರುತ್ತಿದ್ದ ವೈದ್ಯರೊಬ್ಬರು ದಿನ ಪೂರ್ತಿ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿ ಹೋಗುತ್ತಿದ್ದರು. ಊರಿನವರೆಲ್ಲ ಅವರನ್ನು ಬುಧವಾರ ಡಾಕ್ಟರ್ ಎಂದೇ ಕರೆಯುತ್ತಿದ್ದರು. ಕ್ರಿಶ್ಚಿಯನ್ ಧರ್ಮಿಯರಾದ ಅವರ ಹೆಸರು ನನ್ನಂತೆ ಅನೇಕರಿಗೆ ಇವತ್ತಿಗೂ ಗೊತ್ತಿಲ್ಲ. ಪ್ರತಿ ಬುಧವಾರದಂದು ಊರಿನ ಚಿತ್ರಣವೇ ಬದಲಾಗುತ್ತಿತ್ತು. ನಾಲ್ಕಾರು ಹಳ್ಳಿಗಳ ರೋಗಿಗಳಿಂದ ಊರು ಗಿಜಿಗೂಡುತ್ತಿತ್ತು. ವೈದ್ಯರು ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ಒಂದು ಚಿಕ್ಕಾಸೂ ಪಡೆಯದೇ ನಗುನಗುತ್ತ ಚಿಕಿತ್ಸೆ ನೀಡುತ್ತಿದ್ದರು. ಕೆಲವೊಮ್ಮೆ ಹತ್ತಿರದ ನಗರದಲ್ಲಿನ ಸರ್ಕಾರಿ ಆಸ್ಪತ್ರೆಗೆ ತಮ್ಮ ಸ್ವಂತ ಖರ್ಚಿನಲ್ಲಿ ರೋಗಿಗಳನ್ನು ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ಕೊಡಿಸುತ್ತಿದ್ದರು. ಬುಧವಾರಕ್ಕೊಮ್ಮೆ ಬರುತ್ತಿದ್ದ ಅವರು ಕ್ರಮೇಣ ಆ ಊರಿನಲ್ಲೇ ನೆಲೆನಿಂತರು. ಸಂಘ ಸಂಸ್ಥೆಗಳಿಂದ ದೇಣಿಗೆ ಪಡೆದು ಸುಸಜ್ಜಿತ ಆಸ್ಪತ್ರೆಯನ್ನು ಕಟ್ಟಿಸಿದರು. ಆ ಆಸ್ಪತ್ರೆಯಲ್ಲಿ ಇವತ್ತಿಗೂ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಅದರಲ್ಲೂ ಎಡ್ಸ್ ನಂಥ ಮಾರಕ ರೋಗದಿಂದ ನರಳುತ್ತಿರುವವರಿಗೆ ಅವರ ಆಸ್ಪತ್ರೆಯೊಂದು ಆಶ್ರಯ ತಾಣವಾಗಿದೆ. ಬದುಕಿನ ಕೊನೆಯ ದಿನಗಳನ್ನು ಕಳೆಯುತ್ತಿರುವ ರೋಗಿಗಗಳನ್ನು ಅಲ್ಲಿ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುವರು. ಸಮಾಜದಿಂದ ಬಹಿಷ್ಕೃತರಾದ ಅವರನ್ನು ಈ ವೈದ್ಯರು ಬಾಚಿ ತಬ್ಬಿಕೊಳ್ಳುತ್ತಾರೆ. ಪ್ರೀತಿಯಿಂದ ಮೈದಡುವುತ್ತಾರೆ. ಮನಸ್ಸು ಬಿಚ್ಚಿ ಮಾತನಾಡುತ್ತಾರೆ.
ಸಾಮಾನ್ಯವಾಗಿ ಧರ್ಮ ಪ್ರಚಾರ ಕ್ರಿಶ್ಚಿಯನ್ನರ ಮೂಲ ಉದ್ದೇಶ ಎನ್ನುವ ಆರೋಪವಿದೆ. ಅದು ಸತ್ಯ ಕೂಡ ಹೌದು. ಆದರೆ ಈ ಬುಧವಾರ ಡಾಕ್ಟರ್ ವಿಷಯದಲ್ಲಿ ಆ ಮಾತು ಸುಳ್ಳಾಗಿದೆ. ಈ ಮೂರು ದಶಕಗಳಲ್ಲಿ ಆ ಊರಿನಲ್ಲಾಗಲಿ ಅಥವಾ ಸುತ್ತಮುತ್ತಲಿನ ಹಳ್ಳಿಗಳಲ್ಲಾಗಲಿ ಒಂದೇ ಒಂದು ಮತಾಂತರ ನಡೆದ ಆರೋಪ ಕೇಳಿ ಬಂದಿಲ್ಲ. ಅಷ್ಟರಮಟ್ಟಿಗೆ ಆ ವೈದ್ಯರು ತಮ್ಮ ವೃತ್ತಿ ಮತ್ತು ಸೇವೆಗೆ ನಿಷ್ಠರಾಗಿ ಬದುಕುತ್ತಿರುವರು. ಆ ಆಸ್ಪತ್ರೆಯ ಸೇವೆಯನ್ನು ಗುರುತಿಸಿ ಸರ್ಕಾರ ನಿರಂತರ ೨೪ ತಾಸುಗಳ ವಿದ್ಯುತ್ ಪೂರೈಕೆಯ ಸೌಲಭ್ಯವನ್ನು ಒದಗಿಸಿದೆ. ವೈದ್ಯರು ಆ ವಿದ್ಯುತ್ ಸೌಲಭ್ಯವನ್ನು ಇಡೀ ಊರಿನ ನೀರು ಪೂರೈಕೆಗೆ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟು ದೊಡ್ಡ ಗುಣ ಮೆರೆದಿರುವರು. ಇಡೀ ಊರು ಅವರ ಉಪಕಾರ ಸ್ಮರಿಸುತ್ತಿರುವಾಗ ಅವರು ಮಾತ್ರ ಯಾವ ಹೆಸರು, ಹಣ, ಪ್ರತಿಷ್ಠೆಯ ಗೊಡವೆಗೂ ಹೋಗದೆ ತಾವು ಅಂದುಕೊಂಡಿದ್ದನ್ನು ಸಾಧಿಸುವ ಕೈಂಕರ್ಯಕ್ಕೆ ಪ್ರತಿದಿನವೂ ಮುನ್ನುಡಿ ಬರೆಯುತ್ತಿರುವರು.
'ಅಪ್ಪಾ ಅಕ್ಕಗ ಹೆರಿಗಿ ಬ್ಯಾನಿ ಕಾಣಿಸಿಕೊಂಡಾವ ಅದಕ್ಕ ಅವ್ವ ನಿನಗ ಜಲ್ದಿ ಬಾ ಅಂದಾಳ' ಸೈಕಲ್ ಮೇಲೆ ಧಾವಿಸಿ ಬಂದ ಮಗ ಹೇಳಿದಾಗ ಬಸ್ ಹತ್ತುತ್ತಿದ್ದ ಅಪ್ಪ ಅರೆಕ್ಷಣ ಯೋಚಿಸಿದ. ಒಂದೆಡೆ ಹೆರಿಗೆ ನೋವಿನಿಂದ ನರಳುತ್ತಿರುವ ಮಗಳು ಇನ್ನೊಂದೆಡೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕಾಯುತ್ತಿದ್ದ ಸತ್ತ ವ್ಯಕ್ತಿಯ ಸಂಬಂಧಿಕರು. ಒಂದಿಷ್ಟು ಸಮಯದ ನಂತರ ನಿರ್ಧರಿಸಿದ ಅಪ್ಪ ಬಸ್ ಹತ್ತಿ ಮಗನಿಗೆ ಹೇಳಿದ 'ನಿಮ್ಮ ಅವ್ವ ಮತ್ತ ನೀ ಅಕ್ಕಗ ದವಾಖಾನಿಗಿ ಕರ್ಕೊಂಡು ಹೋಗ್ರಿ. ನನಗ ಡ್ಯೂಟಿ ಅದಾ ಅದಕ್ಕ ಬರಲಿಕ್ಕಿ ಆಗಲ್ಲ ಅಂತ ಹೇಳು'. ಕೆಳಗೆ ನಿಂತ ಮಗನ ಮೈಮೇಲಿನ ಬೆವರು ಇನ್ನು ಆರಿರಲಿಲ್ಲ ಬಸ್ ಬರ್ರ್ ಯಂದು ಹೊರಟು ಹೋಯಿತು. ಇದು ಮಾರುತಿ ಎನ್ನುವ ಡ್ರೈವರ್ ಒಬ್ಬನ ಕಥೆ.
ಆ ದಿನ ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಶಾಲೆ ಬೇಗನೆ ಬಿಟ್ಟಿದ್ದರಿಂದ ಮಧ್ಯಾಹ್ನದ ಆ ಹೊತ್ತು ಊರಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದೆ. ಮಧ್ಯಾಹ್ನದ ಹೊತ್ತಿನಲ್ಲೂ ಬಸ್ ನಿಲ್ದಾಣ ಜನರಿಂದ ತುಂಬಿತ್ತು. ಆ ದಿನ ಊರಿನಲ್ಲಿ ವ್ಯಕ್ತಿಯೋರ್ವರು ತೀರಿಕೊಂಡಿದ್ದರಿಂದ ಅವರೆಲ್ಲ ಬಸ್ಸಿಗಾಗಿ ಕಾಯುತ್ತಿದ್ದರು. ಎಷ್ಟು ಹೊತ್ತಾದರೂ ಬಸ್ ಬರದೆ ಇದ್ದುದ್ದರಿಂದ ಜನರೆಲ್ಲಾ ಹತ್ತಿರದಲ್ಲೇ ಇದ್ದ ಕೇಂದ್ರ ಬಸ್ ನಿಲ್ದಾಣಕ್ಕೆ ವಿಚಾರಿಸಲು ತೆರಳಿದರು. ದುರಾದೃಷ್ಟಕ್ಕೆ ಆ ದಿನದ ಮಧ್ಯಾಹ್ನದ ಡ್ಯೂಟಿಗೆ ಹಾಜರಾಗಬೇಕಿದ್ದ ಡ್ರೈವರ್ ಬಂದಿರಲಿಲ್ಲ. ಅದೇ ಆಗ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಮಾರುತಿ ಡ್ರೈವರ್ ಗೆ ಬಸ್ ತೆಗೆದುಕೊಂಡು ಬರುವಂತೆ ಜನ ಅವರಲ್ಲಿ ವಿನಂತಿಸಿಕೊಂಡರು. ಮಾನವೀಯತೆಯ ಪ್ರತಿರೂಪದಂತಿದ್ದ ಮಾರುತಿ ಡ್ರೈವರ್ ತಕ್ಷಣವೇ ಮತ್ತೆ ಕೆಲಸಕ್ಕೆ ಹಾಜರಾದರು. ಅಷ್ಟರಲ್ಲೇ ಅವರ ಮಗ ಬಂದದ್ದು, ಮಗನ ಮಾತನ್ನು ಕೇಳದೆ ಬಸ್ ತೆಗೆದುಕೊಂಡು ಊರಿಗೆ ಬಂದದ್ದು ಇದೆಲ್ಲ ನಡೆದು ಹೋಯಿತು. ಆ ದಿನ ಅವರ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ ಅಂಥದ್ದೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ತಮ್ಮ ಸೇವಾವಧಿಯ ಕೊನೆಯ ದಿನಗಳಲ್ಲಿ ನನ್ನೂರಿನಲ್ಲೇ ಸೇವೆ ಸಲ್ಲಿಸಿದ ಮಾರುತಿ ಡ್ರೈವರ್ ಒಂದೇ ಒಂದು ದಿನವೂ ಕೆಲಸದಿಂದ ತಪ್ಪಿಸಿಕೊಂಡವರಲ್ಲ. ಉತ್ತಮ ರಸ್ತೆ ಸಂಪರ್ಕವೇ ಇಲ್ಲದ ಆ ದಿನಗಳಲ್ಲೂ ಅವರು ತಮ್ಮ ಸೇವಾ ಮನೋಭಾವದಿಂದ ಬಸ್ ಸೌಕರ್ಯದ ಅತ್ಯುತ್ತಮ ಸೌಲಭ್ಯವನ್ನು ನನ್ನೂರಿಗೆ ದೊರಕಿಸಿಕೊಟ್ಟಿದ್ದರು. ವೃತ್ತಿ ಬದುಕಿನುದ್ದಕ್ಕೂ ಒಂದೇ ಒಂದು ಅಪಘಾತ ಅವರ ಹೆಸರಿನಲ್ಲಿ ದಾಖಲಾಗಲಿಲ್ಲ. ನಿಷ್ಕಳಂಕ ವೃತ್ತಿ ಜೀವನವನ್ನು ಕಳೆದ ಮಾರುತಿ ಈಗ ನಿವೃತ್ತರಾಗಿರುವರು. ವೃತ್ತಿ ಬದುಕಿನಂತೆ ಅವರ ವೈಯಕ್ತಿಕ ಬದುಕು ಕೂಡ ಹಸನಾಗಿದೆ. ಕಪಟ, ಮೋಸಗಳನ್ನರಿಯದ ಆ ಹಿರಿಯ ಜೀವ ಇನ್ನಷ್ಟು ವರ್ಷಗಳ ಕಾಲ ಹಾಯಾಗಿ ಬದುಕಿರಲಿ.
ನನ್ನೂರಿನ ಈ ಮಹನೀಯರು ಕಪಟ, ಮೋಸ, ಅಪ್ರಾಮಾಣಿಕತೆ ಎನ್ನುವ ಕೆಟ್ಟ ಗುಣಗಳ ನಡುವೆ ಕಳೆದುಹೋದವರಲ್ಲ, ಕರಗಿ ಹೋದವರಲ್ಲ, ಕೊಳೆತು ಹೋದವರಂತೂ ಅಲ್ಲವೇ ಅಲ್ಲ. ಅದೆಲ್ಲವನ್ನು ಮೀರಿ ಮಾನವೀಯತೆಯ ದರ್ಶನ ಮಾಡಿಸಿದ ಮಹೋನ್ನತರಿವರು. ನಿಷ್ಕಾಮ, ನಿಷ್ಕಳಂಕ, ನಿಸ್ವಾರ್ಥವೆ ಇವರ ಬದುಕಿನ ಮೂಲ ದ್ರವ್ಯವಾಗಿತ್ತು. ಅದನ್ನು ಯಾವತ್ತೂ ಬತ್ತದಂತೆ ಅತ್ಯಂತ ಜತನದಿಂದ ಕಾಪಾಡಿಕೊಂಡು ಬಂದ ಹೆಗ್ಗಳಿಕೆ ಇವರದು. ಅವರ ಬದುಕಿನ ಆ ಮೂಲ ದ್ರವ್ಯವೇ ನನ್ನೂರಿನ ಕೆಲವರಾದರೂ ಬದುಕನ್ನು ಒಂದಿಷ್ಟು ಪರಿಶುದ್ಧವಾಗಿರಿಸಿಕೊಳ್ಳಲು ಕಾರಣವಾಗಿದೆ.

---೦೦೦---

ಕೊನೆಯ ಮಾತು

No comments:
Post a Comment