Monday, March 3, 2014

ಶಿಕ್ಷಣದ ಸಮಸ್ಯೆಗಳೊಂದಿಗೆ ಒಂದು ಅನುಸಂಧಾನ

     


         ಶಿಕ್ಷಣ ಕ್ಷೇತ್ರ ವ್ಯಾಪಕವಾಗಿ ಚರ್ಚೆಗೆ ಮತ್ತು ಪ್ರಯೋಗಕ್ಕೆ  ಒಳಪಡುವ ಕ್ಷೇತ್ರ. ಪತ್ರಿಕೆ, ಪುಸ್ತಕ, ಅಲ್ಲಲ್ಲಿ ನಡೆಸುವ ಸೆಮಿನಾರ್ ಮತ್ತು ಸಮ್ಮೇಳನಗಳ ಮೂಲಕ ಶಿಕ್ಷಣ ಚರ್ಚೆಗೆ ಗ್ರಾಸವಾಗುತ್ತಿದೆ. ಜೊತೆಗೆ ಕಲಿಯುವ ಮಕ್ಕಳಿಗೆ ಶಿಕ್ಷಣ ಹೊರೆಯಾಗದಿರಲಿ ಎನ್ನುವ ಪ್ರಯೋಗಗಳು ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ  ನಡೆದುಕೊಂಡು ಬರುತ್ತಿವೆ. ಪ್ರತಿಯೊಂದು ಚರ್ಚೆ, ಸಂವಾದ ಮತ್ತು ಪ್ರಯೋಗಗಳ  ಗುರಿಯೊಂದೆ ಅದು ಎಲ್ಲರಿಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕೆನ್ನುವುದಾಗಿದೆ. ಭಾರತದ ಸ್ವಾತಂತ್ರ್ಯಾ ನಂತರದ ದಿನಗಳಿಂದಲೂ ಗುಣಾತ್ಮಕ ಶಿಕ್ಷಣಕ್ಕಾಗಿ ಮತ್ತು ಸಮಾಜದ ಯಾವ ಮಗುವೂ ಶಿಕ್ಷಣದಿಂದ ವಂಚಿತನಾಗಬಾರದೆನ್ನುವ ಕಾರಣಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡಲಾಗಿದೆ. ಅದು ಕಡ್ಡಾಯ ಶಿಕ್ಷಣವಾಗಿರಬಹುದು ಇಲ್ಲವೇ ಶಿಕ್ಷಣದ ಹಕ್ಕು ಕಾಯ್ದೆಯಾಗಿರಬಹುದು. ಹೀಗೆ ಶಿಕ್ಷಣವನ್ನು ಗುಣಾತ್ಮಕವಾಗಿಸುವ ಪ್ರಯತ್ನವನ್ನು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಕಾಲಕಾಲಕ್ಕೆ ಬಂದ ಸರ್ಕಾರಗಳು ಮಾಡಿರುವುದಕ್ಕೆ ಅನೇಕ ಉದಾಹರಣೆಗಳಿವೆ. ಹೀಗಿದ್ದೂ ಶಿಕ್ಷಣ ಕ್ಷೇತ್ರ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಅಂಥ ಕೆಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವೇ ಈ ಲೇಖನದ ಉದ್ದೇಶ.

ಒತ್ತಡದ ಪರಿಸರದಲ್ಲಿ ಶಿಕ್ಷಕರು 


           ಸಾಮಾನ್ಯವಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಈ ಮಾತು ಅನ್ವಯವಾಗುತ್ತದೆ.
ನಮಗೆಲ್ಲ ನೆನಪಿರುವಂತೆ ಕೆಲವು ದಿನಗಳ ಹಿಂದೆ ಬಿಹಾರ ರಾಜ್ಯದ ಗ್ರಾಮವೊಂದರ ಶಾಲೆಯಲ್ಲಿ ಮದ್ಯಾಹ್ನದ ಬಿಸಿಯೂಟವನ್ನು ಸೇವಿಸಿದ ಮಕ್ಕಳಲ್ಲಿ ಕೆಲವು ಮಕ್ಕಳು ಅಸುನೀಗಿದವು. ನಿಜಕ್ಕೂ ಅದೊಂದು ಬಹುದೊಡ್ಡ ದುರಂತ. ಅಂಥದ್ದೊಂದು ದುರಂತ ಸಂಭವಿಸಿದಾಗ ಅಲ್ಲಿ ಜನರಾಗಲಿ ಇಲ್ಲವೇ ಮಾಧ್ಯಮದವರಾಗಲಿ ಆರೋಪಿಗಳೆಂದು ಗುರುತಿಸಿದ್ದು ಆ ಶಾಲೆಯಲ್ಲಿ ಕೆಲಸ ಮಾಡುತ್ತಿರುವ  ಶಿಕ್ಷಕರನ್ನು. ಇನ್ನೊಂದು ಘಟನೆ ಹೀಗಿದೆ ಪತ್ರಿಕೆಯೊಂದು ಮಕ್ಕಳು ಶಾಲೆಯಲ್ಲಿ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿದ್ದ ಚಿತ್ರವನ್ನು ಪ್ರಕಟಿಸಿ ಆ ಕೃತ್ಯಕ್ಕೆ  ಶಿಕ್ಷಕರನ್ನೇ ಹೊಣೆಗಾರರೆಂಬಂತೆ ವರದಿ ಮಾಡಿತ್ತು. ಈಗ ಕೆಲವು ದಿನಗಳಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹಾಲು ಕೊಡುವ ಮತ್ತು ಪೌಷ್ಥಿಕ ಮಾತ್ರೆಗಳನ್ನು ವಿತರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಕಾರ್ಯಗಳ ಜವಾಬ್ದಾರಿಯನ್ನೂ ಆಯಾ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರ ಹೆಗಲಿಗೇರಿಸಲಾಗಿದೆ.  ಹಾಗಾದರೆ ಶಾಲೆಯಲ್ಲಿ ಶಿಕ್ಷಕರು ಏನು ಕೆಲಸ ಮಾಡಬೇಕು? ಎನ್ನುವ ಪ್ರಶ್ನೆ ಎದುರಾಗುತ್ತದೆ. ಮಕ್ಕಳ ಮದ್ಯಾಹ್ನದ ಬಿಸಿಯೂಟದ ತಯ್ಯಾರಿ, ಹಾಲು ಕಾಯಿಸುವುದು, ಶೌಚಾಲಯ ಸ್ವಚ್ಛಗೊಳಿಸುವುದು, ಪೌಷ್ಥಿಕ ಮಾತ್ರೆಗಳನ್ನು ನುಂಗಿಸುವುದು ಈ ಕೆಲಸಗಳಲ್ಲಿ ಶಿಕ್ಷಕರು ತಮ್ಮನ್ನು ತೊಡಗಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಈ ಕೆಲಸಗಳೊಂದಿಗೆ ಜನಗಣತಿ, ಪಶು ಪಕ್ಷಿಗಳ ಗಣತಿ, ಚುನಾವಣಾ ಕೆಲಸ ಈ ಎಲ್ಲ ಕೆಲಸ ಕಾರ್ಯಗಳಿಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರೇ ಬೇಕು. ಈ ನಡುವೆ ಮಧ್ಯದಲ್ಲೇ ಶಾಲೆ ಬಿಟ್ಟ ಮಕ್ಕಳ ಅಂಕಿ ಸಂಖ್ಯೆಯನ್ನು ಒದಗಿಸುವಂತೆ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ಮೇಲೆ ಒತ್ತಡ ತಂದಿದೆ.  ಜೊತೆಗೆ ಪ್ರತಿಯೊಂದು ಸರ್ಕಾರಿ ಪ್ರಾಥಮಿಕ ಶಾಲೆಯ ಆಡಳಿತಕ್ಕೆ ಸಂಬಂಧಿಸಿದಂತೆ ಶಾಲಾ ಸುಧಾರಣಾ ಸಮಿತಿ ಎನ್ನುವ ಅವೈಜ್ಞಾನಿಕ ಸಮಿತಿಯನ್ನು ಸರ್ಕಾರ ರಚಿಸಿದೆ. ಆ ಸಮಿತಿಯವರು ಶಿಕ್ಷಕರಿಗೆ ನೀಡುತ್ತಿರುವ ಕಿರುಕುಳದ ಕುರಿತು ಅನೇಕ ಸಂದರ್ಭಗಳಲ್ಲಿ ಪತ್ರಿಕೆಗಳು ವರದಿ ಪ್ರಕಟಿಸಿವೆ. ಇಂಥ ಒತ್ತಡದ ವಾತಾವರಣದಲ್ಲಿ ಶಿಕ್ಷಕರು ಬೋಧನಾ ಕೆಲಸದಲ್ಲಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದಾದರೂ ಹೇಗೆ ಸಾಧ್ಯ. ಇದರ ನೇರ ಪರಿಣಾಮ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಕಲಿಕೆಯ ಮೇಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿನ ಗುಣಾತ್ಮಕ ಶಿಕ್ಷಣದ ಕೊರತೆಗೆ ಇದು ನೇರವಾಗಿ ಕಾರಣವಾಗುತ್ತಿದೆ.

ಉನ್ನತ ಶಿಕ್ಷಣದಲ್ಲಿ ಸಂಶೋಧನೆ 


          ಅಧ್ಯಯನವೇ ಅಧ್ಯಾಪನದ ಜೀವಾಳ. ನಿರಂತರ ಅಧ್ಯಯನದಲ್ಲಿ ತನ್ನನ್ನು ತೊಡಗಿಸಿಕೊಂಡ ಅಧ್ಯಾಪಕ ಮಾತ್ರ ಒಬ್ಬ ಶ್ರೇಷ್ಠ ಅಧ್ಯಾಪಕನಾಗಲು ಸಾಧ್ಯ. ಇಲ್ಲಿ ನಾನು ಹೇಳುತ್ತಿರುವುದು ಉನ್ನತ ಶಿಕ್ಷಣದಲ್ಲಿ ಪಾಠ ಮಾಡುತ್ತಿರುವ ಅಧ್ಯಾಪಕರ ಕುರಿತಾಗಿರುವುದರಿಂದ ಅವರಿಗೆ ಬಿಸಿಯೂಟ, ಬಿಸಿ ಹಾಲು ತಯ್ಯಾರಿಸುವ ಇಲ್ಲವೇ ಶೌಚಾಲಯ ಸ್ವಚ್ಛಗೊಳಿಸುವ ಸಮಸ್ಯೆ ಇಲ್ಲ ಎನ್ನುವ ನಂಬಿಕೆ ನನ್ನದು. ವಿಷಯಾಂತರಕ್ಕೆ ಕ್ಷಮಿಸಿ. ಉನ್ನತ ಶಿಕ್ಷಣದಲ್ಲಿ ಪಾಠ ಮಾಡುತ್ತಿರುವ ಶಿಕ್ಷಕನ ಅಧ್ಯಯನದ ವ್ಯಾಪ್ತಿ ಕೇವಲ ತಾನು ಬೋಧಿಸುತ್ತಿರುವ  ವಿಷಯಕ್ಕೆ ಮಾತ್ರ ಸೀಮಿತವಾಗಿರದೆ ಪಠ್ಯಕ್ರಮದಾಚೆಯೂ ಅದು ವಿಸ್ತರಿಸಬೇಕು. ಹೀಗಾದಾಗ ಮಾತ್ರ ವಿದ್ಯಾರ್ಥಿಗಣವನ್ನು ಸಮಾಜದ ಸಮಸ್ಯೆಗಳಿಗೆ ಮುಖಾಮುಖಿಯಾಗಿ ನಿಲ್ಲಿಸಲು ಸಾಧ್ಯವಾಗುವುದು. ಇಲ್ಲೊಂದು ಕ್ಲಾಸಿಕ್ ಉದಾಹರಣೆ ಕೊಡಬಯುಸುತ್ತೇನೆ ನಾನು ಈ ಲೇಖನ ಬರೆಯುವ ಪೂರ್ವದಲ್ಲಿ ಭೈರಪ್ಪನವರ ಆತ್ಮಕಥೆ  ' ಭಿತ್ತಿ'   ಯನ್ನು ಓದಿದೆ. ಅವರ ವೃತ್ತಿ ಬದುಕಿನಲ್ಲಿ ಸನ್ನಿವೇಶವೊಂದು ಎದುರಾಗುತ್ತದೆ ಅದು ಭೈರಪ್ಪನವರ  ಬಡ್ತಿಗೆ ಸಂಬಂಧಿಸಿದ ಸಂಗತಿ. ರೀಡರ್ ಹುದ್ದೆಯಲ್ಲಿದ್ದ ಭೈರಪ್ಪನವರಿಗೆ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಹೊಂದುವ ಅವಕಾಶ ಹುಡುಕಿಕೊಂಡು ಬರುತ್ತದೆ. ಆದರೆ ಅವರು ಆ ಅವಕಾಶವನ್ನು ನಿರಾಕರಿಸುತ್ತಾರೆ. ಹೀಗೆ ನಿರಾಕರಿಸಲು ಅವರು ಕೊಡುವ ಕಾರಣ ಪ್ರಾಧ್ಯಾಪಕ ಹುದ್ದೆಯನ್ನು ಒಪ್ಪಿಕೊಂಡಲ್ಲಿ ವಿಭಾಗದ ಮುಖ್ಯಸ್ಥ ನಾಗಬೇಕಾಗುತ್ತದೆ. ಅದು ಆಡಳಿತಾತ್ಮಕ ಹುದ್ದೆಯಾಗುವುದರಿಂದ ತಮ್ಮ ಅಧ್ಯಯನ ಮತ್ತು ಬರವಣಿಗೆಗೆ ಆಗುವ ತೊಂದರೆಯೇ ಹೆಚ್ಚೆಂದು ಅವರು ಬಡ್ತಿಯನ್ನೇ ನಿರಾಕರಿಸುತ್ತಾರೆ. ಇದು ಅಧ್ಯಯನ ಮತ್ತು ಬರವಣಿಗೆಯ ಬಗ್ಗೆ ಅವರಿಗಿದ್ದ ನಿಷ್ಥೆ ಮತ್ತು ಕಾಳಜಿಯನ್ನು ತೋರಿಸುತ್ತದೆ. ಇಂಥದ್ದೊಂದು ಮನೋಭಾವ ಇವತ್ತಿನ ಅಧ್ಯಾಪಕರಲ್ಲಿ ಇರಲು ಸಾಧ್ಯವೇ?

       ಇವತ್ತು  ವಿಶ್ವವಿದ್ಯಾಲಯಗಳಲ್ಲಿನ ಮತ್ತು ಕಾಲೇಜುಗಳಲ್ಲಿನ ಅದೆಷ್ಟೋ  ಅದ್ಯಾಪಕರುಗಳು ಶಿಫಾರಸುಗಳ ಮೂಲಕಆಡಳಿತಾತ್ಮಕ  ಹುದ್ದೆಗಳನ್ನು ಪಡೆಯಲು ಪ್ರಯತ್ನಿಸುತ್ತಿರುವರು. ಇವತ್ತಿಗೂ ಎಷ್ಟೋ ವರ್ಷಗಳ ಹಿಂದೆ ಮಾಡಿಟ್ಟ ಟಿಪ್ಪಣಿಯನ್ನೇ ಹಿಡಿದುಕೊಂಡು ಪಾಠ ಮಾಡುವ ಅಧ್ಯಾಪಕರನ್ನು ನಾವು ವಿಶ್ವವಿದ್ಯಾಲಯಗಳಲ್ಲಿ   ಕಾಣುತ್ತಿದ್ದೇವೆ. ಸಿಂಡಿಕೇಟ್ ಸೆನೆಟ್ ಗಳ ಚುನಾವಣೆ ಅಕಾಡೆಮಿಗಳ ಅಧಿಕಾರ ಈ ಚಟುವಟಿಕೆಗಳಲ್ಲೇ ಅಧ್ಯಾಪಕರ ಹೆಚ್ಚಿನ ಸಮಯ ವಿನಿಯೋಗವಾಗುತ್ತಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಕಠಿಣ ನಿಯಮಗಳನ್ನು    ಜಾರಿಗೆ  ತಂದಿರುವುದರಿಂದ ಬಡ್ತಿಗಾಗಿ ಅಧ್ಯಾಪಕರು ಸಂಶೋಧನಾ ಲೇಖನಗಳನ್ನು ಬರೆಯುತ್ತಿರುವರು. ನಿಗದಿಪಡಿಸಿದ ಸಂಖ್ಯೆಯಲ್ಲಿ ಲೇಖನಗಳನ್ನು ಬರೆದು ಬಡ್ತಿ ಹೊಂದಿದ ನಂತರ ಹೆಚ್ಚಿನ ಅಧ್ಯಾಪಕರ ಸಂಶೋಧನಾ  ಕೆಲಸ ಸ್ಥಗಿತಗೊಳ್ಳುತ್ತಿದೆ. ಅಧ್ಯಯನ, ಅಧ್ಯಾಪನ, ಬರವಣಿಗೆ, ಸಂಶೋಧನೆ ಇವುಗಳ ಮೂಲಕ ಗುರುತಿಸಿಕೊಳ್ಳುವುದಕ್ಕಿಂತ ಬೇರೆ ಅಧ್ಯಯನೇತರ ಚಟುವಟಿಕೆಗಳಿಂದ ಗುರುತಿಸಿಕೊಳ್ಳಲು ಅಧ್ಯಾಪಕರು ಬಯಸುತ್ತಿರುವುದು ಸಧ್ಯದ ಮಟ್ಟಿಗೆ ಉನ್ನತ ಶಿಕ್ಷಣದ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

            ಜೊತೆಗೆ ಅಧ್ಯಾಪಕರು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮತ್ತು ಶೋಧಿಸುವ ಮನೋಭಾವವನ್ನೇ ಬೆಳೆಸುತ್ತಿಲ್ಲ. ಪ್ರಶ್ನಿಸುವಿಕೆ ಮತ್ತು ಸಂಘರ್ಷದಿಂದ ಮಾತ್ರ ಹೊಸದನ್ನು ಸೃಷ್ಟಿಸಲು ಸಾಧ್ಯ. ಸಂಘರ್ಷವೆಂದರೆ ಅದು ವೈಚಾರಿಕ ಘರ್ಷಣೆ. ಗುರು  ಶಿಷ್ಯರ ನಡುವೆ ಒಂದು     ವೈಚಾರಿಕ ಸಂಘರ್ಷಕ್ಕೆ ಅವಕಾಶ ಇಲ್ಲದೆ ಹೋದಲ್ಲಿ ವಿದ್ಯಾರ್ಥಿ ಗಣ ನಿಂತ ನೀರಾಗಿ ಕೊಳೆಯುವ ಅಪಾಯ ಎದುರಾಗಬಹುದು. ದಯವಿಟ್ಟು ಕೊಳೆಯುವಿಕೆಯನ್ನು ಮಾಗುವಿಕೆ ಎಂದು ತಪ್ಪಾಗಿ ಅರ್ಥೈಸುವುದು ಬೇಡ. ನಿಂತ ನೀರಿನ ಮನಸ್ಥಿತಿಗೆ ಒಂದು ಉದಾಹರಣೆ ಹೀಗಿದೆ ಸಮ್ಮೇಳನವೊಂದರಲ್ಲಿ ಭೇಟಿಯಾದ ಕನ್ನಡದಲ್ಲಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಯನ್ನು ದೇವನೂರರ ಇತ್ತೀಚಿನ ಯಾವ ಪುಸ್ತಕವನ್ನು ಓದಿರುವಿರಿ ಎಂದು ಕೇಳಿದಾಗ ಅವನಿಗೆ 'ಎದೆಗೆ ಬಿದ್ದ ಅಕ್ಷರ' ಕುರಿತು ಗೊತ್ತೇ ಇರಲಿಲ್ಲ. ಇದು ಇವತ್ತು ಉನ್ನತ ಶಿಕ್ಷಣದಲ್ಲಿನ ಸಂಶೋಧನೆಯಲ್ಲಿ ನಾವು ಕಾಣುತ್ತಿರುವ ಬಹುದೊಡ್ಡ ಕೊರತೆ. ನಿಜಕ್ಕೂ ಚಿಂತಿಸುವ ಸಂಗತಿ ಇದು. ಏಕೆ ಹೀಗಾಗಿದೆ ಎಂದರೆ ಇದು ಆತನಲ್ಲಿರುವ ಪ್ರಶ್ನಿಸುವಿಕೆ ಮತ್ತು ಶೋಧಿಸುವಿಕೆಯ ಕೊರತೆಯನ್ನು ತೋರಿಸುತ್ತದೆ. ಪರಿಣಾಮವಾಗಿ ತಾನೂ ಬೆಳೆದು ವಿದ್ಯಾರ್ಥಿಗಳನ್ನೂ ಬೆಳೆಸುವ ದ್ವಿಮುಖ ಬೆಳವಣಿಗೆಯನ್ನು ಇವತ್ತು ಉನ್ನತ ಶಿಕ್ಷಣದಲ್ಲಿ ನಾವು ಕಾಣಲು ಸಾಧ್ಯವಾಗುತ್ತಿಲ್ಲ.

ಮಕ್ಕಳ ಶಿಕ್ಷಣದಲ್ಲಿ ತಾರತಮ್ಯ 


          ಮಕ್ಕಳ ಶಿಕ್ಷಣದಲ್ಲಿ ತಾರತಮ್ಯವಾಗುತ್ತಿದೆ ಎಂದಾಗ ನನಗೆ ಥಟ್ಟನೆ ನೆನಪಾಗುವುದು ನನ್ನೂರಿನ ನನ್ನ ಬಾಲ್ಯದ ಗೆಳೆಯ ಹೇಳಿದ ಒಂದು ಸಂಗತಿ. ಕೆಲವು ದಿನಗಳ ಹಿಂದೆ ಆತ ಹೀಗೆ ಆಕಸ್ಮಿಕವಾಗಿ ಭೇಟಿಯಾಗಿದ್ದ. ಬಹಳ ದಿನಗಳ ನಂತರದ ಭೇಟಿಯಾಗಿದ್ದರಿಂದ ಒಂದಿಷ್ಟು ಸಮಯ ಮಾಡಿಕೊಂಡು ಹರಟಿದೆವು. ಮಾತಿನ ನಡುವೆ ಅವನೊಂದು ವಿಷಯ ಹೇಳಿದ. ಅವನು ಹೇಳಿದ ಸಂಗತಿ ಆ ಕ್ಷಣಕ್ಕೆ ಮತ್ತು ಅನಂತರದ ಅನೇಕ ದಿನಗಳವರೆಗೆ ನನ್ನನ್ನು ಕಾಡಿದ್ದು ನಿಜ. ನನ್ನೂರಿಗೆ ಒಂದೆರಡು ಮೈಲಿ ದೂರದಲ್ಲಿ ಇಂಗ್ಲಿಶ್ ಮಾಧ್ಯಮದ ಶಾಲೆಯೊಂದು ತಲೆ ಎತ್ತಿದೆಯಂತೆ. ಅವನು ಹೇಳಿದಂತೆ ಆ ಶಾಲೆಯಲ್ಲಿ ಪ್ರತಿಷ್ಟಿತರ ಮಕ್ಕಳಿಗಾಗಿ ಒಂದು ವಿಭಾಗ ಮತ್ತು ಸಾಮಾನ್ಯ ಕುಟುಂಬಗಳಲ್ಲಿನ ಮಕ್ಕಳಿಗಾಗಿ ಮತ್ತೊಂದು ವಿಭಾಗ ಹೀಗೆ ಪ್ರತ್ಯೇಕ ವಿಭಾಗಗಳಿವೆ. ಶಿಕ್ಷಕರೂ ಸಹ ಪ್ರತಿಷ್ಟಿತರ ಮಕ್ಕಳಿರುವ ತರಗತಿಗಳಲ್ಲಿ ಪರಿಣಾಮಕಾರಿಯಾಗಿ ಪಾಠ ಮಾಡುತ್ತಿದ್ದರೆ  ಸಾಮಾನ್ಯರ ಮಕ್ಕಳಿರುವ ತರಗತಿಗಳಲ್ಲಿ ಅವರ ಬೋಧನಾ ಗುಣಮಟ್ಟ ನಿರೀಕ್ಷಿತ ಮಟ್ಟದಲ್ಲಿಲ್ಲವಂತೆ. ಹಾಗೆಂದು ಶಾಲಾ ಶುಲ್ಕದಲ್ಲಿ ಯಾವುದೇ ರಿಯಾಯಿತಿ ಅಲ್ಲಿಲ್ಲ. ಎಲ್ಲ ಮಕ್ಕಳಿಗೂ ಒಂದೇ ಶುಲ್ಕ ಇದ್ದಾಗೂ ಕೂಡ ಹೀಗೆ ಪ್ರತ್ಯೇಕಿಸಲ್ಪಟ್ಟಿರುವುದು ಸಹಜವಾಗಿಯೇ ಸಾಮಾನ್ಯ ಕುಟುಂಬಗಳಲ್ಲಿನ ಮಕ್ಕಳ ಕಲಿಕೆಯ ಗುಣಮಟ್ಟದ ಕುಸಿತಕ್ಕೆ ಕಾರಣವಾಗುತ್ತಿದೆ. ಪೂರ್ಣ ಶುಲ್ಕವನ್ನು ಭರಿಸಿಯೂ ಸಾಮಾನ್ಯ ಕುಟುಂಬಗಳಲ್ಲಿನ ಮಕ್ಕಳು ಇಂಥದ್ದೊಂದು ತಾರತಮ್ಯಕ್ಕೆ ಒಳಗಾಗುತ್ತಿರಬೇಕಾದರೆ ಶಿಕ್ಷಣ ಹಕ್ಕು ಕಾಯ್ದೆಯಡಿ ವಿನಾಯಿತಿ ಶುಲ್ಕವನ್ನು ಭರಿಸಿ ಪ್ರವೇಶ ಪಡೆದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿನ ಮಕ್ಕಳು ಇನ್ನು ಅದೆಂಥ ಸಮಸ್ಯೆಗಳನ್ನು ಎದುರಿಸುತ್ತಿರಬಹುದು?.

             ಇದು ತಾರತಮ್ಯದ ಒಂದು ಮುಖವಾದರೆ ಇನ್ನೊಂದು ಅದು ಮಕ್ಕಳ ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದ್ದು. ಇವತ್ತು ಸಹಜವಾಗಿಯೇ ಹೆಚ್ಚಿನ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಇಂಗ್ಲಿಷ್ ಶಾಲೆಗಳತ್ತ ವಲಸೆ ಹೋಗುತ್ತಿರುವರು. ಇಂಗ್ಲಿಷ್ ಬದುಕಿನ ಭಾಷೆಯಾಗಿ ಮಹತ್ವ ಪಡೆಯುತ್ತಿರುವುದರಿಂದ ಅವರ ವಲಸೆಯನ್ನು ನಾವು ತಪ್ಪು ಎಂದು ಹೇಳುವಂತಿಲ್ಲ ಜೊತೆಗೆ ಶಿಕ್ಷಣ ಅದು ಎಲ್ಲರ ಹಕ್ಕಾಗಿರುವುದರಿಂದ ಮಾಧ್ಯಮದ ಆಯ್ಕೆ ಪಾಲಕರ ಮತ್ತು ವಿದ್ಯಾರ್ಥಿಗಳ ಇಷ್ಟಕ್ಕೆ ಬಿಟ್ಟ ವಿಷಯ. ಆದರೆ ಇಲ್ಲಿರುವ ಮುಖ್ಯ ಸಮಸ್ಯೆಎಂದರೆ ಅದು ಇಂಗ್ಲಿಷ್ ಶಾಲೆಗಳ ಅಂಕಿ ಸಂಖ್ಯೆಗೆ ಸಂಬಂಧಿಸಿದ್ದು. ನಗರ ಪ್ರದೇಶಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಕನ್ನಡ ಶಾಲೆಗಳಿಗಿಂತ ಅಧಿಕವಾಗಿವೆ ಮತ್ತು ಅಲ್ಲಿ ಗುಣಾತ್ಮಕ ಶಿಕ್ಷಣ ನಮ್ಮ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ದೊರೆಯುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಅದು ವ್ಯವಸಾಯವನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳಲ್ಲಿನ ಮಕ್ಕಳಿಗೆ ಇಂಗ್ಲಿಷ್ ಶಾಲೆಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತಿದೆಯೇ? ಏಕೆಂದರೆ  ಹಳ್ಳಿಗಳಲ್ಲಿ ಕೇವಲ ಸರ್ಕಾರದ ಕನ್ನಡ ಶಾಲೆಗಳು ಮಾತ್ರ ಇರುವುದರಿಂದ ಹಾಗೂ ಆ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯಾಗಿ ಮಾತ್ರ ಕಳಿಸುತ್ತಿರುವುದರಿಂದ (ಅದು ಐದನೇ ತರಗತಿಯಿಂದ) ನಮ್ಮ ಹಳ್ಳಿಯ ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿ ಪ್ರಭುತ್ವವನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಇಂಥದ್ದೊಂದು ಪರಿಸರದಲ್ಲಿ ಕಲಿತು ಬರುತ್ತಿರುವ ಮಕ್ಕಳು ನಗರ ಪ್ರದೇಶಗಳಲ್ಲಿನ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಮಕ್ಕಳು ಒಡ್ಡುತ್ತಿರುವ ಪ್ರಬಲ ಸ್ಪರ್ಧೆಯಲ್ಲಿ ಸಹಜವಾಗಿಯೇ ಹಿಂದೆ ಉಳಿಯುತ್ತಿರುವರು. ಪರಿಣಾಮವಾಗಿ ಶಿಕ್ಷಣ ಬದುಕನ್ನು ರೂಪಿಸುತ್ತಿಲ್ಲ ಎನ್ನುವ ಭಾವನೆ ಗ್ರಾಮೀಣ ಪ್ರದೇಶಗಳ ಜನರಲ್ಲಿ ಬಲವಾಗುತ್ತಿದೆ. ಈ ಒಂದು ಸಮಸ್ಯೆಯ ನಡುವೆಯೂ ಸರ್ಕಾರವೇ ಮುಂದಾಗಿ ಇಂಗ್ಲಿಷ್ ಶಾಲೆಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಿದಾಗ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೂ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಲಭ್ಯವಾಗಿ ಮುಂದೊಂದು ದಿನ ಈ ಯೋಜನೆ ಹಳ್ಳಿಗಳಿಗೂ ವಿಸ್ತರಿಸಿ ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳ ಬದುಕನ್ನು ಶಿಕ್ಷಣ ಕಟ್ಟಿಕೊಡಬಹುದೆನ್ನುವ ಆಶಯ ಎಲ್ಲರದಾಗಿತ್ತು. ಆದರೆ ಈ ಯೋಜನೆ ಅನೇಕ ವರ್ಷಗಳು ಕಳೆದರೂ ಕಾರ್ಯ ರೂಪಕ್ಕೆ ಬರದಿರುವುದು ಸರ್ಕಾರದ ಅಸಹಾಯಕತೆಗೆ ಹಿಡಿದ ಕೈಗನ್ನಡಿಯಾಗಿದೆ. ಆದ್ದರಿಂದ ನನ್ನೂರಿನ ತಿಮ್ಮ,  ರುಕ್ಮ್ಯಾ ನಂಥ ಮಕ್ಕಳು ಇಂಗ್ಲಿಷ್ ಶಾಲೆಗಳಿಲ್ಲದ ಪರಿಣಾಮ  ಅವರು  ಮನೆಯ ಹಿರಿಕರೊಂದಿಗೆ ಹೊಲಗಳಲ್ಲಿಯೋ ಇಲ್ಲವೇ ಸರ್ಕಾರದ ಕಾಳಿಗಾಗಿ ಕೂಲಿ ಯೋಜನೆಯಡಿಯಲ್ಲೋ  ದುಡಿಯುತ್ತಿರುವರು.

ಕೊನೆಯ ಮಾತು 


           ಶಿಕ್ಷಣ ಬದುಕನ್ನು ರೂಪಿಸುವ ಮಹತ್ವದ ಕಲಿಕೆಯಾಗಬೇಕು. ಸಧ್ಯದ ಪರಿಸ್ಥಿತಿಯಲ್ಲಿ ನಮ್ಮ ಮಕ್ಕಳು ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿರುವುದರಿಂದ ಅವರನ್ನು ಸ್ಪರ್ಧೆಗೆ ಅಣಿಗೊಳಿಸುವ ಶಿಕ್ಷಣದ ಅಗತ್ಯವಿದೆ. ಜೊತೆಗೆ ಇಂದಿನ ಶಿಕ್ಷಕರು   ನಿರಂತರ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದು ಗುಣಾತ್ಮಕ ಶಿಕ್ಷಣದ ಅಗತ್ಯಗಳಲ್ಲೊಂದಾಗಿದೆ. ಈ ಸಂದರ್ಭ ನಾವೆಲ್ಲಾ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯೊಂದಿದೆ ಅದು ಶಿಕ್ಷಣದ ಮಾಧ್ಯಮಕ್ಕೆ ಸಂಬಂಧಿಸಿದ್ದು. ಕನ್ನಡವನ್ನು ಹೃದಯದ ಭಾಷೆಯಾಗಿಸಿಕೊಂಡು ಕನ್ನಡ ಪ್ರೇಮವನ್ನು ಮೆರೆಯೋಣ ಆದರೆ ಜಾಗತೀಕರಣಕ್ಕೆ ನಮ್ಮ  ಮಕ್ಕಳನ್ನು ಮುಖಾಮುಖಿಯಾಗಿ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿರುವುದರಿಂದ ಇಂಗ್ಲಿಷ್ ಮಾಧ್ಯಮದ ಶಿಕ್ಷಣದ ಆಯ್ಕೆ ಅನಿವಾರ್ಯವಾಗುತ್ತಿದೆ ಮತ್ತು ಅದು ಈ ಸಂದರ್ಭದ ತುರ್ತು ಅಗತ್ಯವೂ  ಹೌದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment