Thursday, January 16, 2014

ಸಾಹಿತ್ಯ ಸಮ್ಮೇಳನ ಮತ್ತು ಪ್ರಚಲಿತ ಸವಾಲುಗಳು




(ಚಿತ್ರ ಕೃಪೆ: www.oneindia.com)



           ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಾಯಿತು. ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದ ಸಮ್ಮೇಳನದ ಫಲಶ್ರುತಿ ಅದು ಎಷ್ಟರ ಮಟ್ಟಿಗೆ ನಾಡು ನುಡಿಯ ಬೆಳವಣಿಗೆಗೆ ಸಹಾಯವಾಗಲಿದೆಯೋ ಗೊತ್ತಿಲ್ಲ. ಪ್ರತಿವರ್ಷ ಸಮ್ಮೇಳನ ಏರ್ಪಡಿಸಿದಾಗ ಕೊನೆಯ ದಿನ ಒಂದಿಷ್ಟು ನಿರ್ಣಯಗಳನ್ನು ತೆಗೆದುಕೊಂಡು ಅವುಗಳನ್ನು ಕಾರ್ಯರೂಪಕ್ಕೆ ತರುವ ಹೊಣೆಗಾರಿಕೆಯನ್ನು ಸರ್ಕಾರದ ಹೆಗಲಿಗೇರಿಸಿ ನಮ್ಮ ಸಾಹಿತಿಗಳು ತಮ್ಮ ಕೆಲಸ ಇಷ್ಟಕ್ಕೇ ಮುಗಿಯಿತು ಎಂದು ಕೈತೊಳೆದುಕೊಳ್ಳುವುದು ಪರಂಪರಾಗತವಾದ  ರೂಢಿಯಾಗಿ ಬಿಟ್ಟಿದೆ. ಹೀಗೆ ತೆಗೆದುಕೊಂಡ ನಿರ್ಣಯಗಳು ನಂತರದ ದಿನಗಳಲ್ಲಿ ಕಾರ್ಯರೂಪಕ್ಕೆ ಬಂದಿವೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಯಾರೂ ಹೋಗಲಾರರು. ಮತ್ತೊಂದು ಸಮ್ಮೇಳನ ಮತ್ತೊಂದಿಷ್ಟು ನಿರ್ಣಯಗಳು ಇದು ಪ್ರತಿವರ್ಷ ಪುನರಾವರ್ತನೆಯಾಗುತ್ತಿದೆ. ನಮ್ಮನ್ನಾಳುವ ಪ್ರಭುಗಳಿಗೂ ಹೀಗೆ ಸಮ್ಮೇಳನಗಳಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವುದು ಅದೊಂದು ಸಾಹಿತಿಗಳ ಚಟ ಎನ್ನುವಷ್ಟು ಸಹಜವಾಗಿದೆ. ಜೊತೆಗೆ ದುರಂತದ ಸಂಗತಿ ಎಂದರೆ ನಮ್ಮ ಸಾಹಿತಿ ಗಣ್ಯರು ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳೆಲ್ಲ ಭಾಷೆಯ ಸುತ್ತಲೇ ಗಿರಕಿ ಹೊಡೆಯುತ್ತವೆ. ಕನ್ನಡ ಶಾಲೆಗಳನ್ನು ಮುಚ್ಚ ಬೇಡಿ, ಕೋರ್ಟಿನಲ್ಲಿ ಕನ್ನಡ ಬಳಸಿ, ಆಡಳಿತದಲ್ಲಿ ಕನ್ನಡ ಬಳಸಿ, ಮಕ್ಕಳಿಂದ ನಾಡಗೀತೆ ಹಾಡಿಸಿ ಹೀಗೆ ಇಂಥದ್ದೇ ಹತ್ತು ಹಲವು ಸಲಹೆಗಳನ್ನು ನೀಡಿ ಕೃತಾರ್ಥರಾಗುವರು. ನಿಜಕ್ಕೂ ಸಾಹಿತ್ಯ ಸಮ್ಮೇಳನದ ವೇದಿಕೆ ಕನ್ನಡ ಭಾಷೆಯ ಜೊತೆಗೆ ಸಮಾಜದ ಸಮಸ್ಯೆಗಳಿಗೂ ಮುಖಾಮುಖಿಯಾಗಬೇಕು.

ಶಿಕ್ಷಣೋದ್ಯಮದ ವಿರುದ್ಧ ಆಕ್ರೋಶವಿಲ್ಲ 


            ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಬೇಡಿ ಎಂದು ಸರ್ಕಾರದೆದುರು ಅಲವತ್ತುಕೊಳ್ಳುವ  ಸಾಹಿತ್ಯ ವಲಯ ಇವತ್ತು ಶಿಕ್ಷಣ ಕ್ಷೇತ್ರ ಒಂದು ಉದ್ಯಮವಾಗಿ ಬದಲಾಗುತ್ತಿರುವುದರ ವಿರುದ್ಧ ಆಕ್ರೋಶದ ಮಾತುಗಳನ್ನಾಡಲು ಸಿದ್ಧರಿಲ್ಲ. ೮೦ನೇ ಸಾಹಿತ್ಯ ಸಮ್ಮೇಳನ ನಡೆದ ಕೊಡಗಿನ ಆ ನೆಲದಲ್ಲೇ ಇವತ್ತು ಅನೇಕ ಕುಟುಂಬಗಳು ಶಿಕ್ಷಣವನ್ನು ಕುಟುಂಬದ ಖಾಸಗಿ ಉದಮ್ಯವನ್ನಾಗಿ ಮಾಡಿಕೊಂಡಿರುವರು. ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಖಾಸಗಿಯವರ ಸುಪರ್ದಿಗೆ ಒಳಪಟ್ಟು ಅನೇಕ ದಶಕಗಳಾದವು. ಈ ಶಿಕ್ಷಣದ ಖಾಸಗೀಕರಣ ಇಂಗ್ಲಿಷ್ ಮಾಧ್ಯಮದ ಶಾಲೆಗಳ ಸ್ಥಾಪನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತ ಇನ್ನೊಂದೆಡೆ ಕನ್ನಡ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣದ ಕೊರತೆಯನ್ನು ಹುಟ್ಟುಹಾಕುತ್ತಿದೆ. ಕನ್ನಡ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂದರಿತ ಬಹುಪಾಲು ಪಾಲಕರು ಖಾಸಗಿ ಇಂಗ್ಲಿಶ್ ಶಾಲೆಗಳತ್ತ ವಲಸೆ ಹೋಗುತ್ತಿರುವರು. ಗುಣಾತ್ಮಕ ಶಿಕ್ಷಣದ ಮೂಲಕ ಮಕ್ಕಳ ಬದುಕನ್ನು ಕಟ್ಟಿಕೊಡಬೇಕೆನ್ನುವ ಪಾಲಕರ ಈ ಮನೋಭಾವವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ರುಪಾಯಿಗಳನ್ನು ಶುಲ್ಕದ ರೂಪದಲ್ಲಿ ಪಡೆಯುತ್ತಿರುವರು. ಇವತ್ತು ನಾಡಿನ ಉದ್ಯಮಿಗಳು ಮತ್ತು ರಾಜಕಾರಣಿಗಳು ಮಾತ್ರವಲ್ಲದೆ ನೆರೆಯ ರಾಜ್ಯಗಳ ಉದ್ಯಮಿಗಳೂ ಸಹ ರಾಜ್ಯಕ್ಕೆ ಬಂದು ಶಿಕ್ಷಣದ ಮೇಲೆ ಬಂಡವಾಳ ಹೂಡುತ್ತಿರುವರು. ಒಂದು ಕಾಲದಲ್ಲಿ ಶಾಲೆಗಳ ಸ್ಥಾಪನೆ ಎನ್ನುವುದು ಸಾಮಾಜಿಕ ಸೇವೆ ಎಂದೇ ಪರಿಗಣಿಸಲ್ಪಟ್ಟಿದ್ದ ನಾಡಿನಲ್ಲಿ ಇವತ್ತು ಶಿಕ್ಷಣ ಲಾಭತರುವ ಬೃಹತ್ ಉದ್ಯಮವಾಗಿ ಬದಲಾಗಿದೆ. ಮಠ ಮಾನ್ಯಗಳು ಮತ್ತು ಸಂಘ ಸಂಸ್ಥೆಗಳು  ಮಾತ್ರವಲ್ಲದೆ ಶ್ರೀಮಂತ ಕುಟುಂಬಗಳು ಇವತ್ತು ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಶಿಕ್ಷಣವನ್ನು ಕುಟುಂಬದ ಬಂಡವಾಳ ಹೂಡಿ ಲಾಭ ಮಾಡಿಕೊಳ್ಳುವ ಉದ್ದಿಮೆಯಾಗಿ ಪರಿವರ್ತಿಸಿರುವರು. ಪರಿಸ್ಥಿತಿ ಹೀಗಿರುವಾಗ ಇವತ್ತು ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಬೇಡಿ, ಇಂಗ್ಲಿಷ್ ಶಾಲೆಗಳಲ್ಲಿಯೂ ನಾಡಗೀತೆ ಹಾಡಿಸಿ ಎನ್ನುವ ನಿರ್ಣಯಗಳನ್ನು ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನವಾಗಲಾರದು. ಬದಲಾಗಿ ಹತ್ತನೇ ತರಗತಿಯವರೆಗೂ ಇಂಗ್ಲಿಷ್ ಶಾಲೆಗಳನ್ನು ಮುಚ್ಚಿಸಿ ಎನ್ನುವ ಆಕ್ರೋಶದ ಮಾತುಗಳು ಕೇಳಿಬರಬೇಕು. ಏಕೆಂದರೆ  ಶಿಕ್ಷಣವನ್ನು ಉದ್ಯಮದ ಸ್ವರೂಪದಿಂದ ಬಿಡುಗಡೆಗೊಳಿಸುವುದು ಇವತ್ತಿನ ತುರ್ತು ಅಗತ್ಯಗಳಲ್ಲೊಂದು.

ಮಹಿಳಾ ಗೋಷ್ಠಿ ಮತ್ತು ಸ್ತ್ರೀ ಸಮಸ್ಯೆ 


              ಪ್ರತಿವರ್ಷ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಸಮಸ್ಯೆಗಳನ್ನು ಚರ್ಚಿಸಲು ಹಾಗೂ ಪರಿಹಾರಗಳನ್ನು ಸೂಚಿಸಲು ಪ್ರತ್ಯೇಕ ಮಹಿಳಾ ಗೋಷ್ಠಿಯನ್ನು ಏರ್ಪಡಿಸುವುದು ಒಂದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಮಹಿಳಾ ಲೇಖಕಿಯರನ್ನು ಒಂದುಗೂಡಿಸಿ ಆ ಮೂಲಕ ಮಹಿಳೆಯರ ಪ್ರಚಲಿತ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಆದರೆ ಸಮ್ಮೇಳನದ ವೇದಿಕೆಯಲ್ಲಿ ಹೀಗೆ ಒಂದೆಡೆ ಸೇರುವ ಮಹಿಳಾ ಲೇಖಕಿಯರ ಬಹುಪಾಲು ಚರ್ಚೆ ಮಹಿಳಾ ಸಾಹಿತ್ಯಕ್ಷೆತ್ರಕ್ಕಷ್ಟೇ ಸೀಮಿತವಾಗುತ್ತಿದೆ. ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ, ಸಾಹಿತ್ಯ ವಲಯದಲ್ಲಿನ ಲಿಂಗ ತಾರತಮ್ಯ, ಅನುವಾದಕಿಯಾಗಿ ಸ್ತ್ರೀ, ಲೇಖಕಿಯಾಗಿ ಸ್ತ್ರೀ ಹೀಗೆ ಸಾಹಿತ್ಯ ಸಮ್ಮೇಳನಗಳಲ್ಲಿ  ಮಹಿಳಾ ಲೇಖಕಿಯರ ಮಹಿಳಾಪರ ಚರ್ಚೆ ಯಲ್ಲಿ ಹೆಣ್ಣನ್ನು  ಕೇವಲ ಲೇಖಕಿಯಾಗಿ ಮಾತ್ರ ನೋಡಲಾಗುತ್ತಿದೆ. ಅವರುಗಳ ಚರ್ಚೆ  ಸಾಹಿತ್ಯವಲಯವನ್ನು ದಾಟಿ ಹೋಗುತ್ತಿಲ್ಲ. ದೇವದಾಸಿಯರ ಬಗ್ಗೆ, ಶೋಷಿತ ಹೆಣ್ಣಿನ ಬಗ್ಗೆ ತಮ್ಮ ಕಥೆ, ಕಾವ್ಯ, ಕಾದಂಬರಿಗಳಲ್ಲಿ ಪುಂಖಾನುಪುಂಖವಾಗಿ ಬರೆಯುವ ಮಹಿಳಾ ಲೇಖಕಿಯರು ಯಾವತ್ತೂ ಸಾಹಿತ್ಯ ಸಮ್ಮೇಳನದ ಚರ್ಚಾ ವೇದಿಕೆಗೆ ತಮ್ಮ ಬರವಣಿಗೆಗೆ ವಸ್ತುವಾಗುವ ಹೆಣ್ಣಿನ ಸಮಸ್ಯೆಗಳನ್ನು ತೆಗೆದುಕೊಂಡು ಹೋಗುತ್ತಿಲ್ಲ.

ದಲಿತ ಸಾಹಿತ್ಯ ಗೋಷ್ಠಿ 


          ದಲಿತ ಸಾಹಿತ್ಯ ಚರ್ಚೆಗೆ ಸಾಹಿತ್ಯ ಸಮ್ಮೇಳನದಲ್ಲಿ ಪ್ರತ್ಯೇಕ ಗೋಷ್ಠಿಗೆ ಅವಕಾಶ ಒದಗಿಸಬೇಕೆನ್ನುವುದು ಬಹುವರ್ಷಗಳ ಬೇಡಿಕೆಯಾಗಿತ್ತು. ಕೆಲವು ಸಂದರ್ಭಗಳಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ದಲಿತ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಿದ ಉದಾಹರಣೆಯೂ ಉಂಟು. ಈ ವರ್ಷದ ೮೦ನೇ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯ  ಗೋಷ್ಠಿಗೆ ವೇದಿಕೆ ಒದಗಿಸಿದ್ದು ನಿಜಕ್ಕೂ ಅದೊಂದು ಉತ್ತಮ ಪ್ರಯತ್ನ. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ದಲಿಂಗಯ್ಯನವರು ದಲಿತರ ಸಮಸ್ಯೆಗಳನ್ನು ವೈಯಕ್ತಿಕ ನೆಲೆಯಲ್ಲಿ ನೋಡದೆ ಸಾಮಾಜಿಕ ನೆಲೆಯಲ್ಲಿ ನೋಡುವಂತಾಗಬೇಕೆನ್ನುವ ಆಶಯ ವ್ಯಕ್ತಪಡಿಸಿದರು. ಹೀಗೆ ತಳ ಸಮುದಾಯದ ಸಮಸ್ಯೆಗಳನ್ನು ಚರ್ಚಿಸುವಾಗಲೆಲ್ಲ ನಮ್ಮ ದಲಿತ ಸಾಹಿತಿಗಳು ತಮ್ಮ ಚರ್ಚೆಯನ್ನು ಅಂಬೇಡ್ಕರ್ ವಿಚಾರಗಳಿಗೆ ಮತ್ತು ಮೇಲ್ವರ್ಗದವರನ್ನು ತೆಗಳುವುದಕ್ಕೆ ಸೀಮಿತಗೊಳಿಸುತ್ತಿರುವರು. ಯಾವ ದಲಿತ ಬರಹಗಾರರೂ ದಲಿತ ಸಮುದಾಯವನ್ನು ಆರ್ಥಿಕವಾಗಿ ಪ್ರಬಲರಾದ ಮತ್ತು ದುರ್ಬಲರಾದ ಎಂದು ಎರಡು ಬಣಗಳಾಗಿ ವಿಂಗಡಿಸಿ ಚರ್ಚಿಸಲು ಮುಂದೆ ಬರುತ್ತಿಲ್ಲ. ಆರ್ಥಿಕವಾಗಿ ಪ್ರಬಲರಾದ ದಲಿತರು ಇವತ್ತಿಗೂ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿರುವುದು ಒಂದರ್ಥದಲ್ಲಿ ಅದು ಆರ್ಥಿಕವಾಗಿ ದುರ್ಬಲರಾದ ದಲಿತರಿಗೆ ಮಾಡುತ್ತಿರುವ ಅನ್ಯಾಯ. ದಲಿತ ರಾಜಕಾರಣಿಗಳ ಮತ್ತು ದಲಿತ ಅಧಿಕಾರಿಗಳ ಮಕ್ಕಳು ಸರ್ಕಾರ ಕೊಡಮಾಡುತ್ತಿರುವ ಸೌಲಭ್ಯಗಳನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಿದಲ್ಲಿ ಆರ್ಥಿಕವಾಗಿ ಹಿಂದುಳಿದ ದಲಿತರಿಗೆ ಇನ್ನು ಹೆಚ್ಚಿನ ಸವಲತ್ತುಗಳನ್ನು  ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗುವುದು. ಇಂಥದ್ದೊಂದು ಚರ್ಚೆಗೆ ಸಾಹಿತ್ಯ ಸಮ್ಮೇಳನದ ದಲಿತ ಸಾಹಿತ್ಯ ಗೋಷ್ಠಿ ಮುನ್ನುಡಿ ಬರೆಯಬೇಕು. ಆದರೆ ವೇದಿಕೆಯಲ್ಲಿ ನಿಂತು ಮಾತನಾಡುವ ನಮ್ಮ ಬಹುಪಾಲು ದಲಿತ ಸಾಹಿತಿಗಳಿಗೆ ಸರ್ಕಾರದ ಸೌಲಭ್ಯಗಳಿಂದ ತಮ್ಮ ಮಕ್ಕಳನ್ನು ವಂಚಿತರನ್ನಾಗಿಸುವ ಇಚ್ಛೆ ಇಲ್ಲದಿರುವುದರಿಂದ ಅವರಿಂದ ಅಂಥದ್ದೊಂದು ಪ್ರಾಮಾಣಿಕ ಪ್ರಯತ್ನವನ್ನು ನಿರೀಕ್ಷಿಸುವುದು ಅಸಾಧ್ಯದ ಸಂಗತಿ.

ರೈತಪರ ದನಿ ಮೊಳಗುತ್ತಿಲ್ಲ 


               ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ರೈತಪರ ದನಿ ಮೊಳಗಿದ ಉದಾಹರಣೆಯೇ ಇಲ್ಲ. ನಮ್ಮ ಸಾಹಿತಿಗಳು ಯಾವತ್ತೂ ರೈತನ ಸಮಸ್ಯೆಗಳನ್ನು ಕುರಿತು ಮಾತನಾಡಲಾರರು. ಬೆಳೆಯುತ್ತಿರುವ ನಗರೀಕರಣ ಮತ್ತು ಕ್ಷಿಣೀಸುತ್ತಿರುವ ಕೃಷಿ ಭೂಮಿ ಇವತ್ತು ನಾವು ಎದುರಿಸುತ್ತಿರುವ ಸವಾಲುಗಳಲ್ಲಿ ಬಹುಮುಖ್ಯವಾದವುಗಳು. ಇವುಗಳನ್ನು ಕೇವಲ ರೈತನ ಸಮಸ್ಯೆಗಳೆಂದು ಉದಾಸಿನ ತೋರದೆ ಅವುಗಳನ್ನು ಸಾರ್ವತ್ರಿಕ ನೆಲೆಯಲ್ಲಿ ಚರ್ಚಿಸಬೇಕಾದ ಅಗತ್ಯ ಎದುರಾಗಿದೆ. ಆ ಕೆಲಸವನ್ನು ಮಾಡಬೇಕಾದ ಮಹತ್ವದ ಜವಾಬ್ದಾರಿ ಸಾಹಿತ್ಯದ ಮೇಲಿದೆ. ಆದ್ದರಿಂದ ಬರಹಗಾರನು ತನ್ನ ನೆಲದ ಸಮಸ್ಯೆಗೂ ದನಿಯಾಗಬೇಕು. ದುರಂತವೆಂದರೆ ರೈತನ ಸಮಸ್ಯೆಗಳನ್ನು ಸಮಾಜದ ಸಮಸ್ಯೆಗಳೆಂದು ತೆಗೆದುಕೊಂಡು ಬರೆದ ಬರಹಗಾರರ ಸಂಖ್ಯೆ ಕನ್ನಡದಲ್ಲಿ ಬಹಳಷ್ಟು ಕಡಿಮೆ. ಈ ವಿಷಯದಲ್ಲಿ ನಾವು ಪೂರ್ಣಚಂದ್ರ ತೇಜಸ್ವಿ ಮತ್ತು ಶಿವರಾಮ ಕಾರಂತರನ್ನು ಅಭಿನಂದಿಸಲೇ ಬೇಕು. ಆದರೆ ಇವರುಗಳ ನಂತರ ರೈತಪರವಾದ ಸಾಹಿತ್ಯ ಸಂಪೂರ್ಣವಾಗಿ ಕ್ಷಿಣೀಸಿದೆ. ಯಾವ ಲೇಖಕನೂ ರೈತರ ಪರವಾಗಿ ಬರೆಯಲು ಮನಸ್ಸು ಮಾಡುತ್ತಿಲ್ಲ. ಗತಕಾಲದ ನೆನಪುಗಳೊಂದಿಗೆ ಬದುಕುತ್ತ ಆ ನೆನಪುಗಳಿಗೆ ಅಕ್ಷರ ರೂಪ ಕೊಡುತ್ತಿರುವ ನಮ್ಮ ಬರಹಗಾರರು ಪ್ರಚಲಿತ ಸಮಸ್ಯೆಗಳಿಗೆ ಮುಖಾಮುಖಿಯಾಗಿ ನಿಲ್ಲುತ್ತಿಲ್ಲ. ನಿಜಕ್ಕೂ ಇದು ಯೋಚಿಸಬೇಕಾದ ಸಂಗತಿ. ಸಾಹಿತ್ಯ ಸಮ್ಮೇಳನದಲ್ಲಿ ಇಂಥ ಸಮಸ್ಯೆಗಳು ಚರ್ಚೆಗೆ ಬರಬೇಕು.

ಸ್ವಜಾತಿ ಮತ್ತು ಪ್ರಾದೇಶಿಕ ಪ್ರೇಮ


            ಸಾಹಿತ್ಯ ವಲಯವನ್ನು ಆವರಿಸಿಕೊಂಡಿರುವ ಬಹುದೊಡ್ಡ ಪಿಡುಗಿದು. ಯಾವ ವರ್ಣ ವ್ಯವಸ್ಥೆಯನ್ನು ವಿರೋಧಿಸಿ  ನಮ್ಮ ಸಾಹಿತಿಗಳು ಆಕ್ರೋಶದಿಂದ ಬರೆಯುವರೋ ಅವರು ತಮ್ಮ ಆಂತರ್ಯದಲ್ಲಿ ಆ ವ್ಯವಸ್ಥೆಯನ್ನು ಅಷ್ಟೇ ಗಾಢವಾಗಿ ಪ್ರೀತಿಸುತ್ತಿರುವುದು ನಿಜಕ್ಕೂ ಬಹುದೊಡ್ಡ ವಿಪರ್ಯಾಸ. ಈ ಸ್ವಜಾತಿ ಪ್ರೇಮ ಮತ್ತು ಪ್ರಾದೇಶಿಕ ಪ್ರೇಮದ ಬಿಸಿ ಸಾಹಿತ್ಯ ಸಮ್ಮೇಳನಕ್ಕೂ ತಟ್ಟಿದೆ. ಮೊನ್ನೆ ಕೊಡಗಿನಲ್ಲಿ ನಡೆದ ಸಮ್ಮೇಳನದಲ್ಲಿ ಒಂದು ಕವಿಗೋಷ್ಠಿಯ ಬದಲಾಗಿ ಎರಡು ಕವಿಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಇದಕ್ಕೆ ಕವಿತೆಗಳನ್ನು ವಾಚಿಸುವ ಕವಿಗಳ ಸಂಖ್ಯೆ ಬಹಳಷ್ಟಿದ್ದದ್ದೆ ಕಾರಣವಾಗಿತ್ತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷರು  ಸ್ವಜಾತಿ ಮತ್ತು ಪ್ರಾದೇಶಿಕ ಪ್ರೇಮ ಮೆರೆದು ತಮ್ಮ ತಮ್ಮ ಕೋಟಾದಲ್ಲಿ ಅನೇಕ ಕವಿಗಳಿಗೆ ಅವಕಾಶ ಮಾಡಿಕೊಟ್ಟಿದ್ದರ ಪರಿಣಾಮವಿದು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಬರಹಗಾರ ಅಬ್ದುಲ್ ರಶೀದ ಈ ಬೆಳವಣಿಗೆಗೆ ವೇದಿಕೆಯಲ್ಲೇ ಖಾರವಾಗಿ ಪ್ರತಿಕ್ರಿಯಿಸಿದರು. ಮುಂದಿನ ದಿನಗಳಲ್ಲಿ ಸಾಹಿತ್ಯ ಮತ್ತು ಸಾಹಿತ್ಯ ಸಮ್ಮೇಳನ ಇಂಥದ್ದೊಂದು ದುರಂತದಿಂದ ಮುಕ್ತವಾಗಲಿ ಎನ್ನುವ ಕಿವಿಮಾತು ಹೇಳಿದರು. ಆದ್ದರಿಂದ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ವಲಯವನ್ನು ಜಾತಿ ಮತ್ತು ಪ್ರಾದೇಶಿಕ ಪ್ರೇಮದಿಂದ ಮುಕ್ತಗೊಳಿಸಿ ಅದನ್ನು ಪರಿಶುದ್ಧಗೊಳಿಸುವ ಕೆಲಸವಾಗಬೇಕು. ಇಂಥದ್ದೊಂದು ಸವಾಲಿಗೆ ಪರಿಹಾರ ಕಂಡುಕೊಳ್ಳಬೇಕಿರುವುದು ಸಾಹಿತ್ಯವನ್ನು ಅದರ ಮೂಲ ಉದ್ದೇಶದಿಂದ ಬೇರ್ಪಡಿಸದೆ ಇರುವ ಕಾರಣದಿಂದ  ಇವತ್ತಿನ ತುರ್ತು ಅಗತ್ಯವಾಗಿದೆ.

ನಾನ್ ಅಕಾಡೆಮಿಕ್  ಎನ್ನುವ ಅಸ್ಪೃಶ್ಯತೆ


          ಕನ್ನಡ ಸಾಹಿತ್ಯ ವಲಯದಲ್ಲಿ ಬಹುಕಾಲದಿಂದ ನಡೆದುಕೊಂಡು ಬಂದ ಸಂಸ್ಕೃತಿ ಇದು. ಇಡೀ ಕನ್ನಡ ಸಾಹಿತ್ಯವಲಯವನ್ನು ನಮ್ಮ ಪ್ರಜ್ಞಾವಂತ ಬರಹಗಾರರು ಅಕಾಡೆಮಿಕ್ ಮತ್ತು ನಾನ್ ಅಕಾಡೆಮಿಕ್ ಎಂದು ವಿಭಜಿಸಿ ನಾನ್ ಅಕಾಡೆಮಿಕ್ ಬರಹಗಾರರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳುತ್ತಿರುವರು. ೮೦ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ    ನಾ. ಡಿಸೋಜಾ ಅವರನ್ನು ಆಯ್ಕೆ ಮಾಡಿದಾಗಲೇ ಅವರು ನಾನ್ ಅಕಾಡೆಮಿಕ್ ಬರಹಗಾರ ಎನ್ನುವ ಅಪಸ್ವರದ ಮಾತುಗಳು ಅಲ್ಲಲ್ಲಿ ಕೇಳಿ ಬಂದವು. ಜೊತೆಗೆ ಅವರನ್ನು ಆಯ್ಕೆಮಾಡುವ ಮೂಲಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ತಮ್ಮ ಜಾತ್ಯಾತೀತ ಮನೋಭಾವವನ್ನು ಪ್ರದರ್ಶಿಸುವ ಆಕಾಂಕ್ಷೆ ದಟ್ಟವಾಗಿತ್ತು. ಹೀಗೆ ನಾ. ಡಿಸೋಜಾ ಅವರನ್ನು ನಾನ್ ಅಕಾಡೆಮಿಕ್ ಮತ್ತು ಅನ್ಯ ಧರ್ಮೀಯ ಎಂದು ಬಿಂಬಿಸುವ ನಮ್ಮ ಸಾಹಿತ್ಯ ವಲಯದ ಹುನ್ನಾರ ಅತ್ಯಂತ ವ್ಯವಸ್ಥಿತವಾಗಿ ಕೆಲಸ ಮಾಡಿತು. ಇವರ ನಾನ್ ಅಕಾಡೆಮಿಕ್ ಹಿನ್ನೆಲೆಯನ್ನು ಸರಿಯಾಗಿಯೇ ಬಳಸಿಕೊಂಡ ಪರಿಷತ್ತಿನ ಅಧ್ಯಕ್ಷರು ಸಮ್ಮೇಳನದ ಅಧ್ಯಕ್ಷರಿಗೆ ಭಾಷಣದ ಮಧ್ಯದಲ್ಲೇ ಮೊಟಕುಗೊಳಿಸುವಂತೆ ಚೀಟಿ ಕಳುಹಿಸುವರು. ಒಂದು ಗುಂಪು ವೇದಿಕೆಯನ್ನೇರಿ ಸಮ್ಮೇಳನದ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಳ್ಳುತ್ತದೆ. ಬೇಸರದ ಸಂಗತಿ ಎಂದರೆ ಈ ಎರಡೂ ಘಟನೆಗಳಿಗೆ ನಮ್ಮ ಅಕಾಡೆಮಿಕ್ ಸಾಹಿತ್ಯದ ವಲಯದಿಂದ ಒಂದೇ ಒಂದು ವಿರೋಧದ ಮಾತುಗಳು ಕೇಳಿ ಬರದಿರುವುದು. ಇಂಥದ್ದೊಂದು ಘಟನೆಗಾಗಿ ಕಾದವರಂತೆ ಅವರೆಲ್ಲ ಸಂಭ್ರಮಿಸುತ್ತಾರೆ. ಇಂಥದ್ದೊಂದು ಕೆಟ್ಟ ಸಂಪ್ರದಾಯದಿಂದ ಕನ್ನಡ ಸಾಹಿತ್ಯ ವಲಯ ಮುಕ್ತವಾಗಬೇಕು. ಈ ಮುಕ್ತಿಗೊಳಿಸುವ ಕೆಲಸ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಾಗಬೇಕು.

ಸಿನಿಮಾ ಎಂದರೆ ಮಾರು ದೂರ 


                ಸಿನಿಮಾ ಮಾಧ್ಯಮ ಕನ್ನಡ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ಕನ್ನಡ ಸಾಹಿತ್ಯಕ್ಕೆ ಸಮಾನಾಂತರವಾಗಿ ಕೆಲಸ ಮಾಡಿದೆ. ರಾಜಕುಮಾರ, ಬಾಲಕೃಷ್ಣ, ಪಂಢರೀಬಾಯಿ ಅವರಂಥ ಪ್ರತಿಭಾನ್ವಿತ ಕಲಾವಿದರು ಮತ್ತು ನಾಗೇಂದ್ರರಾಯರು,  ಅಯ್ಯರ, ಪುಟ್ಟಣ್ಣ ಕಣಗಾಲ್ ಅವರಂಥ ಸೃಜನಶೀಲ ನಿರ್ದೇಶಕರು ಕನ್ನಡ ಸಿನಿಮಾಗಳ ಮೂಲಕ ನಾಡಿನ ಭವ್ಯ ಪರಂಪರೆಯನ್ನು ಇಡೀ ದೇಶಕ್ಕೆ ಪರಿಚಯಿಸಿದರು. ಬಂಗಾರದ ಮನುಷ್ಯ, ಭೂದಾನ, ಭೂತಯ್ಯನ ಮಗು ಅಯ್ಯು, ಚೋಮನ ದುಡಿಯಂಥ ಸಿನಿಮಾಗಳಲ್ಲಿ ಸಾಮಾಜಿಕ ಕಾಳಜಿ ಅನಾವರಣಗೊಂಡಿದೆ. ಅನೇಕ ಕಾದಂಬರಿಗಳನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸಿ ಒಂದರ್ಥದಲ್ಲಿ ಕನ್ನಡ ಸಾಹಿತ್ಯವನ್ನು ಈ ಸಿನಿಮಾ ಮಾಧ್ಯಮ ಜನಪ್ರಿಯಗೊಳಿಸಿತು. ತರಾಸು, ಶಿವರಾಮ ಕಾರಂತ, ಅನಂತಮೂರ್ತಿ, ಭೈರಪ್ಪನವರ ಕಾದಂಬರಿಗಳನ್ನು ಸಿನಿಮಾ ಪರದೆಯ ಮೇಲೆ ನೋಡುವ ಭಾಗ್ಯ ಕನ್ನಡಿಗರಿಗೆ ಸಿಕ್ಕಿದ್ದು ಈ ಸಿನಿಮಾ ಮಾಧ್ಯಮದ ಮೂಲಕವೇ. ಕನ್ನಡಕ್ಕೆ ಅನ್ಯಾಯವಾದಾಗಲೆಲ್ಲ ಕನ್ನಡ ಚಿತ್ರರಂಗ ಸಾಹಿತ್ಯ ವಲಯದೊಡನೆ ದನಿಗೂಡಿಸಿದೆ. ಚಳುವಳಿಯ ಸಂದರ್ಭ ಸಿನಿಮಾ ಕಲಾವಿದರೆಲ್ಲ ಮುಂಚೂಣಿಯಲ್ಲಿ ನಿಂತು ಹೋರಾಡಿದ ಉದಾಹರಣೆಗಳಿವೆ. ಗೋಕಾಕ ಚಳುವಳಿಯೇ ಅದಕ್ಕೆ ಪ್ರತ್ಯಕ್ಷ ಸಾಕ್ಷಿ. ಹೀಗಿದ್ದೂ ನಮ್ಮ ಸಾಹಿತ್ಯ ವಲಯ ಸಿನಿಮಾ ಮಾಧ್ಯಮವನ್ನು ಈ ನೆಲದ ಸೃಜನಶೀಲ ಹಿರಿಮೆಯಂದು ಪರಿಗಣಿಸಿಯೇ ಇಲ್ಲ. ಸಿನಿಮಾ, ಸಿನಿಮಾ ಕಲಾವಿದರು ಮತ್ತು ಸಿನಿಮಾ ಸಾಹಿತಿಗಳನ್ನು ನಮ್ಮ ಸಾಹಿತ್ಯ ವಲಯ ಎಂದಿಗೂ ಅಸ್ಪೃಶ್ಯತೆಯ ಭಾವನೆಯಿಂದಲೇ ಕಾಣುತ್ತ ಬಂದಿದೆ. ಅದಕ್ಕೆಂದೇ ಸಿನಿಮಾ ಮಾಧ್ಯಮದ ಕುರಿತಾದ ಚರ್ಚೆಗೆ ಸಾಹಿತ್ಯ ಸಮ್ಮೇಳನದಲ್ಲಿ ವೇದಿಕೆ ಲಭ್ಯವಾಗಿಲ್ಲ (ಒಂದೆರಡು ಸಮ್ಮೇಳನಗಳಲ್ಲಿ ಪರಭಾಷೆಗಳಿಂದ ಕನ್ನಡಕ್ಕೆ ಸಿನಿಮಾ ಡಬ್ಬಿಂಗ್ ನ್ನು ನಿಲ್ಲಿಸಬೇಕೆನ್ನುವ ನಿರ್ಣಯ ಕೈಗೊಳ್ಳಲಾಗಿತ್ತು ಆದರೆ ಈ ವಿಷಯ ಚರ್ಚೆಗೆ ಒಳಗಾಗಿರಲಿಲ್ಲ). ಸಿನಿಮಾ ಮಾಧ್ಯಮವನ್ನು ಒಂದು ಸೃಜನಶೀಲತೆಯ ನೆಲೆಯಲ್ಲಿ ನೋಡುವ ಮತ್ತು ಅದರ ಕೊಡುಗೆಯನ್ನು ಸ್ಮರಿಸುವ ಜೊತೆಗೆ ಸಮಾಜದ ಮೇಲೆ ಅದರಿಂದಾಗುವ ಪರಿಣಾಮಗಳನ್ನು ಕುರಿತು ಚರ್ಚಿಸಲು ಸಾಹಿತ್ಯ ಸಮ್ಮೇಳಗಳು ಅವಕಾಶ ಒದಗಿಸಬೇಕು. ಸಾಂಸ್ಕೃತಿಕ ಸಂಕ್ರಮಣದ ಈ ಕಾಲಘಟ್ಟದಲ್ಲಿ ಸಿನಿಮಾ ಮಾಧ್ಯಮ ತನ್ನ ಮೂಲ ಆಶಯದಿಂದ ಬಹುದೂರ ಸಾಗಿಬಂದಿದೆ. ಅದಕ್ಕೆಂದೇ ಇಲ್ಲಿ ಚಿತ್ರ ವಿಚಿತ್ರ ಸಿನಿಮಾಗಳು ಈಗ ನಿರ್ಮಾಣವಾಗುತ್ತಿವೆ.  ಸಾಹಿತ್ಯ ವಲಯ ತನ್ನ ಸುತ್ತಲಿನ ಈ ಎಲ್ಲ ರೂಪಾಂತರಗಳಿಗೆ  ಕಣ್ಣಾದಲ್ಲಿ ಒಂದಿಷ್ಟು ಭರವಸೆಯ ಹೊಸ ಗಾಳಿ ಬೀಸಬಹುದು. ಆದ್ದರಿಂದ ಸಿನಿಮಾ ಮಾಧ್ಯಮವನ್ನು ಸಾಹಿತ್ಯ ಸಮ್ಮೇಳನಗಳು ತಮ್ಮ ಚರ್ಚಾ ವೇದಿಕೆಗೆ ಎಳೆದುಕೊಳ್ಳುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ.

ಕೊನೆಯ ಮಾತು 


         ಸಾಹಿತ್ಯ ಸಮ್ಮೇಳನ ನಮ್ಮ ಸಾಹಿತಿಗಳ ಒಣ ಪ್ರತಿಷ್ಠೆ ಮತ್ತು ಅವರವರ ಅನುಕೂಲಸಿಂಧುವಿಗೆ ವೇದಿಕೆಯಾಗುತ್ತಿರುವುದು ಅದು ಎಲ್ಲರಿಗೂ ತಿಳಿದಿರುವ ಸಂಗತಿ. ಅದಕ್ಕೆಂದೇ ವೇದಿಕೆಯಲ್ಲಿ ಸಾಹಿತಿಗಳು ಸಮಾಜದ ಸಮಸ್ಯೆಗಳನ್ನು ಮೂಲೆಗುಂಪಾಗಿಸಿ ವೈಯಕ್ತಿಕ ನಿಂದನೆಗೆ ತೊಡಗುವರು. ಜೊತೆಗೆ ಸಾಹಿತ್ಯದ ಉದ್ದೇಶ ಕೇವಲ ಭಾಷಾಭಿವೃದ್ಧಿ ಮಾತ್ರವಲ್ಲ ಅದು ಸಮಾಜದ ಎಲ್ಲ ಸಮಸ್ಯೆಗಳಿಗೂ ಮುಖಾಮುಖಿಯಾಗಬೇಕು. ಬರಹಗಾರರನ್ನು ಮತ್ತು ಸಾರ್ವಜನಿಕರನ್ನು ಸಮ್ಮೇಳನ, ವಿಚಾರ ಸಂಕೀರಣಗಳ ಮೂಲಕ ಒಂದು ವೇದಿಕೆಗೆ ಕರೆತಂದಾಗ ಅಲ್ಲಿ ಭಾಷೆಯೊಂದು ಎದುರಿಸುತ್ತಿರುವ ಸಮಸ್ಯೆಗಳ ಜೊತೆಗೆ ಸಾಮಾಜಿಕ ಸಮಸ್ಯೆಗಳೂ ಚರ್ಚೆಗೆ ಒಳಪಡಬೇಕು. ಎಲ್ಲವನ್ನೂ ಭಾಷೆ ಮತ್ತು ಸಾಹಿತ್ಯದ ನೆಲೆಯಲ್ಲಿ ಮಾತ್ರ ನೋಡಿದರೆ ಸಾಹಿತ್ಯ ಸಮ್ಮೇಳನಗಳು ಜನರಿಗೆ ಹತ್ತಿರವಾಗಲಾರವು. ಹಳೆಗನ್ನಡ, ನಡುಗನ್ನಡಗಳ  ಕುರಿತು ಚರ್ಚಿಸುವುದಕ್ಕಿಂತ ಸಮಾಜದ ಜ್ವಲಂತ ಸಮಸ್ಯೆಗಳಿಗೆ ಸಾಹಿತ್ಯ ಸಮ್ಮೇಳನಗಳು ವೇದಿಕೆಯಾಗಲಿ. ಮುಂದಿನ ದಿನಗಳಲ್ಲಾದರೂ ಇಂಥದ್ದೊಂದು ಬದಲಾವಣೆಗೆ  ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು  ಮತ್ತು ನಮ್ಮ ಅಕಾಡೆಮಿಕ್ ಬರಹಗಾರರು ತಮ್ಮನ್ನು ತಾವು ತೆರೆದುಕೊಳ್ಳಲಿ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


No comments:

Post a Comment