Saturday, January 4, 2014

ಲೂಯಿ ಬ್ರೈಲ್: ಅಂಧರ ಬದುಕಿನ ಆಶಾಕಿರಣ

     

                                                       ( ಲೂಯಿ ಬ್ರೈಲ್ : ೧೮೦೯- ೧೮೫೨)


     (ಇಂದು ಲೂಯಿ ಬ್ರೈಲ್ ಜನ್ಮದಿನ ಅದಕ್ಕಾಗಿ ಒಂದಿಷ್ಟು ಸ್ಮರಣೆ)

        ಅಂಧತ್ವ ಅದು ಬದುಕಿನ ಬಹುದೊಡ್ಡ ಸಮಸ್ಯೆ. ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡು ಬದುಕುವ ರೀತಿ ನಿಜಕ್ಕೂ ಅದೊಂದು ಹೋರಾಟದ ಬದುಕು. ಎಲ್ಲ ಅಂಗಗಳು ಸರಿಯಿದ್ದೂ ಸಮಾಜಕ್ಕೆ ಹೊರೆಯಾಗಿ ಬದುಕುವವರ ನಡುವೆ ಅಂಧರು ಇಂದು ಸಮಾಜದಿಂದ ಯಾವುದೇ ರೀತಿಯ ಅನುಕಂಪ ನಿರೀಕ್ಷಿಸದೆ ಸಹಜ ರೀತಿಯಿಂದ ಬದುಕು ನಡೆಸುತ್ತಿರುವರು. ಅಂಗವೈಕಲ್ಯವನ್ನು ಮರೆತು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮೆರೆಯುತ್ತಿರುವರು. ಬದುಕು ಅವರಿಗೆ ಯಾವತ್ತಿಗೂ ಹೊರೆಯಾಗಿಲ್ಲ. ಅಮೇರಿಕ ದೇಶದ ಲೇಖಕಿ ಹೆಲನ್ ಕೆಲ್ಲರ್, ತನ್ನ ೪೩ ನೇ ವಯಸ್ಸಿನಲ್ಲಿ ಅಂಧನಾದ ಕವಿ ಜಾನ್ ಮಿಲ್ಟನ್,  ಕಾರ್ಟೂನಿಸ್ಟ್ ಜೆಮ್ಸ್  ಟರ್ಬರ್, ಹುಟ್ಟು ಅಂಧರಾಗಿ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದ ಪುಟ್ಟರಾಜ ಗವಾಯಿಗಳು ಈ ಎಲ್ಲ ಮಹನೀಯರು ತಮ್ಮ ದೈಹಿಕ ವೈಕಲ್ಯವನ್ನು ಮರೆತು ಮಾಡಿದ ಸಾಧನೆ ಮತ್ತು ಪಡೆದ ಯಶಸ್ಸು ಅಪಾರ.  ಅಂಧರ ಬದುಕಿನ ಇವತ್ತಿನ ಆತ್ಮವಿಶ್ವಾಸ ಮತ್ತು ಅವರ ಸಾಧನೆಗಳ ಹಿಂದೆ ಲೂಯಿ ಬ್ರೈಲ್ ಎನ್ನುವ ಸಾಧಕನ ಪರಿಶ್ರಮವಿದೆ. ಬ್ರೈಲ್ ನ ಬದುಕು ಮತ್ತು ಆತ ಮಾಡಿದ ಸಾಧನೆ ಅದೊಂದು ಯಶೋಗಾಥೆ. ತನ್ನ ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಆತ  ಮಾಡಿದ ಸಾಧನೆ ಅದು ಅನೇಕ ದೃಷ್ಟಿಹೀನರ ಬದುಕಿಗೆ ಸ್ಪೂರ್ತಿಯ ಸೆಲೆಯಾಗಿದೆ.

ಬಾಲ್ಯ ಮತ್ತು ಎದುರಾದ ಸಂಕಷ್ಟ 


        ಜನವರಿ ೪, ೧೮೦೯ ರಂದು ಪ್ಯಾರಿಸ್ ಸಮೀಪದ ಗ್ರಾಮವೊಂದರಲ್ಲಿ ಜನಸಿದ ಲೂಯಿ ಬ್ರೈಲ್ ಹುಟ್ಟು ಕುರುಡನಾಗಿರಲಿಲ್ಲ. ಜನಿಸಿದಾಗ ಅವನು ಸಾಮಾನ್ಯ ಮಕ್ಕಳಂತೆಯೇ ಇದ್ದ. ಲೂಯಿಯದು ತಂದೆ ತಾಯಿ ಮತ್ತು ನಾಲ್ಕು ಜನ ಸಹೋದರರಿಂದ ಕೂಡಿದ  ದೊಡ್ಡ ಕುಟುಂಬ.  ಲೂಯಿಯ ತಂದೆ ಅತ್ಯಂತ ಬಡವನಾಗಿದ್ದು ಪಾದರಕ್ಷೆಗಳನ್ನು ತಯ್ಯಾರಿಸುವ ಒಂದು ಸಣ್ಣ ಅಂಗಡಿಯೇ ಅವರ ಕುಟುಂಬದ ಜೀವನ ನಿರ್ವಹಣೆಗೆ ಆಧಾರವಾಗಿತ್ತು. ಚಿಕ್ಕ ಮಗುವಾಗಿದ್ದ ಲೂಯಿ ತನ್ನ ದಿನದ ಬಹುಪಾಲು ಸಮಯವನ್ನು ತಂದೆಯೊಂದಿಗೆ ಪಾದರಕ್ಷೆಗಳ ಅಂಗಡಿಯಲ್ಲೇ ಕಳೆಯುತ್ತಿದ್ದ. ಬದುಕಿನಲ್ಲಿ ನಡೆಯುವ ಆಕಸ್ಮಿಕ ಘಟನೆಗಳು ಬದುಕಿನ ದಿಕ್ಕನ್ನೇ ಬದಲಿಸುವಂತೆ ಲೂಯಿ ಬ್ರೈಲ್ ಚಿಕ್ಕವನಾಗಿದ್ದಾಗ ನಡೆದ ಒಂದು ಘಟನೆ ಶಾಶ್ವತವಾಗಿ ಆತ ತನ್ನ ದೃಷ್ಟಿಯನ್ನು ಕಳೆದುಕೊಳ್ಳುವಂತೆ ಮಾಡಿತು. ಒಮ್ಮೆ ತಂದೆ ತಯ್ಯಾರಿಸುತ್ತಿದ್ದ ಚಪ್ಪಲಿ ಅಂಗಡಿಗೆ ಹೋದ ಲೂಯಿ ಬ್ರೈಲ್ ಒಂದು ದಪ್ಪ ಚರ್ಮವನ್ನು ತೆಗೆದುಕೊಂಡು ಸೂಜಿಯಿಂದ ಹೊಲಿಯ ತೊಡಗಿದ. ಹೀಗೆ ಚರ್ಮದ ಮೇಲೆ ದಾರದಿಂದ ಚಿತ್ರ ಬಿಡಿಸುತ್ತಿದ್ದ ಆ ಘಳಿಗೆ ಆಕಸ್ಮಿಕವಾಗಿ ಸೂಜಿ ಲೂಯಿಯ ಬಲ  ಕಣ್ಣಿಗೆ ತಾಗಿತು. ಶಸ್ತ್ರ ಚಿಕಿತ್ಸೆಯ ನಂತರವೂ ಗಾಯ ಗುಣವಾಗುವ ಲಕ್ಷಣ ಕಂಡುಬರಲಿಲ್ಲ. ಒಂದು ಕಣ್ಣಿಗೆ ಆದ ಗಾಯದ ಸೋಂಕು ಮತ್ತೊಂದು ಕಣ್ಣಿಗೆ ತಗುಲಿತು. ಪರಿಣಾಮವಾಗಿ  ಲೂಯಿ ಬ್ರೈಲ್ ತನ್ನ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡ. ಹೀಗೆ ದೃಷ್ಟಿಹೀನನಾದ ಆ ಹೊತ್ತು ಲೂಯಿಗೆ ಆಗಿನ್ನೂ ಕೇವಲ ೪ ವರ್ಷ ವಯಸ್ಸು. ಪಾಲಕರಿಗೆ ಲೂಯಿಯ ಬದುಕು ಒಂದು ಸಮಸ್ಯೆಯಾಗಿ ಕಾಡತೊಡಗಿತು. ಆತನನ್ನು ಬೇರೆ ಮಕ್ಕಳಂತೆ ಶಾಲೆಗೆ ಕಳುಹಿಸಲಾಯಿತಾದರೂ ಅಲ್ಲಿ ಅನೇಕ ಸಮಸ್ಯೆಗಳು ಎದುರಾದವು. ಶಿಕ್ಷಕರಿಗೂ ಆ ಅಂಧ ಮಗುವಿಗೆ ಪಾಠ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿತು. ಅಂಥ ಸಮಸ್ಯೆಗಳ ನಡುವೆಯೂ ಲೂಯಿ ಬ್ರೈಲ್ ಆ ಶಾಲೆಯಲ್ಲಿ  ಕೆಲವು ವರ್ಷ ಅಭ್ಯಾಸ ಮಾಡಿದ. ಆದರೆ ಆ ಶಾಲೆಯಲ್ಲಿ ಅಂಧ ಮಕ್ಕಳಿಗಾಗಿ ಓದಲು ಪುಸ್ತಕಗಳಿರಲಿಲ್ಲ.  ತನ್ನ ಅಂಧತ್ವದಿಂದಾಗಿ ಲೂಯಿಗೆ ಶಾಲೆಯಲ್ಲಿ ಏನನ್ನೂ ಕಲಿಯಲು ಸಾಧ್ಯವಾಗಲಿಲ್ಲ. ಇನ್ನು ಅದೇ ಶಾಲೆಯಲ್ಲಿ ಮುಂದುವರಿದರೆ ಶಿಕ್ಷಣ ಪಡೆಯುವುದು ಅಸಾಧ್ಯ ಎಂದರಿತ ಲೂಯಿಯ ತಂದೆ ತನ್ನ ಮಗನಿಗಾಗಿ ಹೊಸ ಶಾಲೆಯನ್ನು ಹುಡುಕತೊಡಗಿದ.

ಪ್ಯಾರಿಸ್ ನಡೆಗೆ ಪಯಣ   


            ಲೂಯಿಗೆ ಉತ್ತಮ ಶಿಕ್ಷಣ ಒದಗಿಸಿ ಆತನನ್ನು ಸ್ವಾವಲಂಬಿಯಾಗಿಸಬೇಕೆನ್ನುವುದು ಆತನ ತಂದೆಯ ಬಯಕೆಯಾಗಿತ್ತು. ಆ ದಿನಗಳಲ್ಲಿ ಅಂಧ ಮಕ್ಕಳು ಪ್ಯಾರಿಸ್  ಬೀದಿಗಳಲ್ಲಿ ಬಿಕ್ಷೆ ಬೇಡುವುದು ಸಾಮಾನ್ಯ ದೃಶ್ಯವಾಗಿತ್ತು. ಲೂಯಿ ಬ್ರೈಲ್ ನ   ತಂದೆಗೆ ತನ್ನ ಮಗ ಬಿಕ್ಷೆ ಬೇಡುವ ಚಿತ್ರವನ್ನು ಕಲ್ಪಿಸಿಕೊಳ್ಳುವುದೂ ಕಷ್ಟದ ಸಂಗತಿಯಾಗಿತ್ತು. ಸ್ವತಹ ಅಕ್ಷರಸ್ಥನಾದ ಲೂಯಿಯ  ತಂದೆಗೆ ಶಿಕ್ಷಣದ ಮಹತ್ವದ ಅರಿವಿತ್ತು. ಆತ ತನ್ನ ಕುರುಡು ಮಗನ ಭವಿಷ್ಯವನ್ನು ಉಜ್ವಲಗೊಳಿಸಲು ಶಿಕ್ಷಣದ ಮೊರೆ ಹೋದ.   ಸಾಮಾನ್ಯ ಮಕ್ಕಳ ಶಾಲೆಯಲ್ಲಿ  ಲೂಯಿಗೆ ಸಮಸ್ಯೆ ಎದುರಾದಾಗ ಆತನ ತಂದೆ ಅವನನ್ನು ಪ್ಯಾರಿಸ್ ನಲ್ಲಿರುವ ವಿಶ್ವದ ಪ್ರಥಮ ಅಂಧರ ಶಾಲೆಯಾದ 'ರಾಯಲ್ ಇನ್ಸ್ಟಿಟ್ಯೂಟ್ ಆಫ್ ಬ್ಲೈಂಡ್ ಯುಥ್' ಎನ್ನುವ  ಅಂಧರ ಶಾಲೆಗೆ ಸೇರಿಸಿದ. ಲೂಯಿ ಬ್ರೈಲ್ ಗೆ ಎರಡನೇ ಆಯ್ಕೆಯೇ ಇರಲಿಲ್ಲ. ಉತ್ತಮ ಶಿಕ್ಷಣ ಪಡೆಯಬೇಕೆನ್ನುವ ಅವನೊಳಗಿನ ಮಹತ್ವಾಕಾಂಕ್ಷೆ ಆತನನ್ನು ಪ್ಯಾರಿಸ್ ನಲ್ಲಿರುವ ಅಂಧರ ಶಾಲೆಗೆ ಕರೆದೊಯ್ಯಿತು. ಪ್ಯಾರಿಸ್ ನಡೆಗಿನ ಆ ಪಯಣ ನಂತರದ  ದಿನಗಳಲ್ಲಿ ಲೂಯಿ ಬ್ರೈಲ್ ನ ಬದುಕಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು. ೧೭೮೬ ರಲ್ಲಿ ಸ್ಥಾಪನೆಯಾದ ಈ ಶಾಲೆ ಪ್ರಥಮ ಅಂಧ ಮಕ್ಕಳ ಶಾಲೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ.  ಆ ಶಾಲೆಯ ಸ್ಥಾಪಕನಾದ ವಾಲೆಂಟಿನ್ ಹೂಯಿ ಅಂಧ ಮಕ್ಕಳು ಓದಲು ಮತ್ತು ಬರೆಯಲು ತನ್ನದೇ ವಿಧಾನವನ್ನು ಅನುಸರಿಸುತ್ತಿದ್ದ. ಅಂಧನಾಗಿರದ ವಾಲೆಂಟಿನ್ ಗೆ ಅಂಧ ಮಕ್ಕಳ ಸಮಸ್ಯೆಯನ್ನು ಸಹಜವಾಗಿ ಗುರುತಿಸಿ ಅದಕ್ಕೆ ಪರಿಹಾರ ಕಂಡುಹಿಡಿಯುವುದು ಅಸಾಧ್ಯದ ಸಂಗತಿಯಾಗಿತ್ತು. ಅಂಧ ಮಕ್ಕಳಿಗೆ ಸಹಾಯ ಮಾಡಬೇಕೆನ್ನುವ ಅವನೊಳಗಿನ ಇಂಗಿತ ಅವನನ್ನು ಅಂಧ ಮಕ್ಕಳ ಶಾಲೆ ತೆರೆಯಲು ಪ್ರೇರೇಪಿಸಿತ್ತು.  ಆದರೆ ಆ ಶಾಲೆಯಲ್ಲಿನ ಪುಸ್ತಕಗಳನ್ನು ಅಂಧ ಮಕ್ಕಳು ಸರಾಗವಾಗಿ ಓದಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಪುಸ್ತಕಗಳ ಗಾತ್ರ ಮತ್ತು ಭಾರ ಮಕ್ಕಳಿಗೆ ಹೊಂದಾಣಿಕೆಯಾಗುತ್ತಿರಲಿಲ್ಲ. ಆ ಸಂದರ್ಭ ಶಾಲೆಯಲ್ಲಿನ ಅದೆಷ್ಟೋ ಅಂಧ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಹೋಗುತ್ತಿದ್ದದುಂಟು. ಆಗೆಲ್ಲ ಆ ಶಾಲೆಯ ಸಂಸ್ಥಾಪಕನಾದ ವಾಲೆಂಟಿನ್ ಹೂಯಿಗೆ ನಿರಾಶೆ ಎದುರಾಗುತ್ತಿತ್ತು. ಲೂಯಿ ಬ್ರೈಲ್ ಮಾತ್ರ ಎಂಥ ಕಷ್ಟದ ಪರಿಸ್ಥಿತಿಯಲ್ಲೂ ಅತ್ಯಂತ ಶ್ರದ್ಧೆಯಿಂದ ಓದುತ್ತಿದ್ದ. ಆ ಶಾಲೆಯಲ್ಲಿದ್ದ ಅಂಧ ಮಕ್ಕಳಿಗೆಂದೇ  ಪ್ರಕಟವಾಗಿದ್ದ ಎಲ್ಲ ೧೪ ಪುಸ್ತಕಗಳನ್ನೂ ಓದಿ ಮುಗಿಸಿದ. ತನ್ನ ಬದುಕನ್ನು ಕವಿದ ಕಾರ್ಮೋಡದಿಂದ ಹೊರಬರಬೇಕೆನ್ನುವ ಮಹತ್ವಾಕಾಂಕ್ಷೆ ಆತನದಾಗಿತ್ತು. ಪರೀಕ್ಷೆಯಲ್ಲಿ ಉತ್ತಿರ್ಣನಾದ ಲೂಯಿ ಬ್ರೈಲ್ ತನ್ನ ಗುರುವಿನ ಆಸೆಯಂತೆ ತಾನೊದಿದ ಶಾಲೆಯಲ್ಲೇ ಶಿಕ್ಷಕನಾಗಿ ವೃತ್ತಿಯನ್ನಾರಂಭಿಸಿದ.

ಬ್ರೈಲ್ ಲಿಪಿಯ ಅವಿಷ್ಕಾರ 


          ಅಂಧ ಮಕ್ಕಳಿಗಾಗಿ ಏನಾದರೂ ಉಪಯುಕ್ತವಾದದ್ದನ್ನು ಮಾಡಬೇಕೆನ್ನುವ ಆಸೆಯೊಂದಿಗೇ ಲೂಯಿ ಬ್ರೈಲ್ ಆ ಶಾಲೆಯಲ್ಲಿ ಶಿಕ್ಷಕನಾಗಿ ಸೇರಿದ. ಆತನ ಮೊದಲ ಆದ್ಯತೆ ಮಕ್ಕಳು  ಓದಲು ಮತ್ತು ಬರೆಯಲು ಅನುಕೂಲವಾಗುವಂತೆ ಹೊಸ ಬರವಣಿಗೆಯ ವಿಧಾನವೊಂದನ್ನು ಕಂಡು ಹಿಡಿಯ ಬೇಕೆನ್ನುವುದಾಗಿತ್ತು. ಆ ಶಾಲೆಯಲ್ಲಿ ಅಂಧ ಮಕ್ಕಳಿಗಾಗಿ  ಪುಸ್ತಕಗಳಿದ್ದರೂ ಅಕ್ಷರಗಳನ್ನು ಬೇಗನೆ ಗುರುತಿಸಿ ಸಾಮಾನ್ಯ ಮಕ್ಕಳಂತೆ ವೇಗವಾಗಿ ಓದಲು ಸಾಧ್ಯವಾಗುತ್ತಿರಲಿಲ್ಲ. ಅಕ್ಷರಗಳನ್ನು ಗುರುತಿಸಿ ವಾಕ್ಯಗಳನ್ನು ಓದುವುದು  ಕಷ್ಟದ ಕೆಲಸವಾಗಿತ್ತು.  ಆದ್ದರಿಂದ ಅಕ್ಷರಗಳನ್ನು ಬಲುಬೇಗನೆ ಗುರುತಿಸಿ ವೇಗವಾಗಿ ಓದಲು   ಸಹಾಯವಾಗುವಂಥ ಲಿಪಿಯನ್ನು ಕಂಡು ಹಿಡಿಯಬೇಕೆನ್ನುವುದು ಲೂಯಿ ಬ್ರೈಲ್ ನ ಉದ್ದೇಶವಾಗಿತ್ತು.   ಅವನು ವಿದ್ಯಾರ್ಥಿಯಾಗಿದ್ದ ಸಂದರ್ಭ  ಆ ಶಾಲೆಯಲ್ಲಿ ನಡೆದ ಒಂದು ಘಟನೆ ಲೂಯಿ ಬ್ರೈಲ್ ನ ಸಮಸ್ಯೆಗೆ ಶಾಶ್ವತ ಪರಿಹಾರವನ್ನೊದಗಿಸಿತು. ಆ ಘಟನೆ ಹೀಗಿದೆ ೧೮೨೧ ರಲ್ಲಿ  ಚಾರ್ಲ್ಸ್ ಬಾರ್ಬೈರ್ ಎನ್ನುವ ಸೈನಿಕ ಲೂಯಿ ಓದುತ್ತಿದ್ದ ಅಂಧರ ಶಾಲೆಗೆ ಭೇಟಿ ನೀಡಿ ತಾನು ಕಂಡುಹಿಡಿದಿದ್ದ 'ನೈಟ್ ರೈಟಿಂಗ್' ಎನ್ನುವ ಯಂತ್ರದ ಕುರಿತು ವಿವರಿಸಿದನು. ನೈಟ್ ರೈಟಿಂಗ್ ಸೈನಿಕರು ದೂರದಿಂದಲೇ ಪರಸ್ಪರ ಸಂದೇಶಗಳನ್ನು ರವಾನಿಸುವ ಒಂದು ಯಂತ್ರವಾಗಿದ್ದು ಅದು ೧೨ ರಂಧ್ರಗಳನ್ನೊಳಗೊಂಡಿತ್ತು. ಆ ಎಲ್ಲ ೧೨ ರಂಧ್ರಗಳು ವಿಭಿನ್ನ ಶಬ್ದಗಳನ್ನು ಹೊರಡಿಸುತ್ತಿದ್ದವು. ದುರದೃಷ್ಟವಶಾತ್ ಸೈನಿಕರು ಈ ಯಂತ್ರವನ್ನು ಉಪಯೋಗಿಸಲು ವಿಫಲರಾದ ಕಾರಣ ಅದರ ಉಪಯೋಗವನ್ನು ತಿರಸ್ಕರಿಸಲಾಯಿತು. 

            ನೈಟ್ ರೈಟಿಂಗ್ ಯಂತ್ರದ ಪ್ರಾತ್ಯಕ್ಷಿಕತೆ ಲೂಯಿ ಬ್ರೈಲ್ ಮೇಲೆ ತುಂಬ ಪ್ರಭಾವ ಬೀರಿತು. ಈ ಯಂತ್ರ ಅಂಧ ಮಕ್ಕಳ ಓದಿಗೆ ಅನುಕೂಲವಾಗಬಹುದೆನ್ನುವ ಮಹತ್ವಾಕಾಂಕ್ಷೆ ಅವನಲ್ಲಿ ಚಿಗುರೊಡೆಯಿತು. ಪರಿಣಾಮವಾಗಿ ಲೂಯಿ ಬ್ರೈಲ್ ರಂಧ್ರಗಳ ಸಹಾಯದಿಂದ ಬರೆಯುವ ಮತ್ತು ಓದುವ ವಿಧಾನವನ್ನು ಕಂಡು ಹಿಡಿಯಲು ಪ್ರಯತ್ನಿಸಿದ. ಲೂಯಿ  ಹಗಲಿರುಳೆನ್ನದೆ ಶ್ರಮಿಸಿದ.ಕೊನೆಗೂ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿ ಆತ ಬ್ರೈಲ್ ಲಿಪಿಯನ್ನು ಅವಿಷ್ಕರಿಸಿದ ಆ ಸಂದರ್ಭ ಅವನಿಗಿನ್ನೂ ೧೫ ವರ್ಷ ವಯಸ್ಸು. ಲೂಯಿ ಬ್ರೈಲ್ ಪ್ರಾರಂಭದಲ್ಲಿ ಗಣಿತ ಮತ್ತು ಸಂಗೀತ ವಿಷಯಗಳನ್ನು ಓದಲು ಮತ್ತು ಬರೆಯಲು ಸಂಕೇತಗಳನ್ನು ಕಂಡುಹಿಡಿದ. ೧೮೨೭ ರಲ್ಲಿ ಪ್ರಥಮ ಬಾರಿಗೆ ಬ್ರೈಲ್ ಲಿಪಿಯಲ್ಲಿ ಪುಸ್ತಕ ಪ್ರಕಟವಾಯಿತು. ಆದರೆ ಆಗ ಲೂಯಿ ಬ್ರೈಲ್ ಗೆ ದೊರೆಯಬೇಕಾದ ಸೂಕ್ತ ಪ್ರೋತ್ಸಾಹ ದೊರೆಯಲಿಲ್ಲ. ಅವನು ಪಾಠ ಮಾಡುತ್ತಿದ್ದ ಶಾಲೆಯಲ್ಲಿ ಬ್ರೈಲ್ ಲಿಪಿಯನ್ನು ಬಳಸಲು  ಅವಕಾಶ ನೀಡಲಿಲ್ಲ. ಇದರಿಂದ ಆತ ನಿರಾಶನಾಗದೆ  ಬ್ರೈಲ್ ಲಿಪಿಯಲ್ಲಿ ಅನೇಕ ಪುಸ್ತಕಗಳನ್ನು ಪ್ರಕಟಿಸಿ ಆ  ಮೂಲಕ ಅಂಧರ ಬದುಕಿಗೆ ಬೆಳಕು ನೀಡಲು ಪ್ರಯತ್ನಿಸಿದ. ಲೂಯಿ ಬದುಕಿರುವ ಅವಧಿಯಲ್ಲಿ ಆತನ ಪ್ರಯೋಗ ನಿರೀಕ್ಷಿತ ಮಟ್ಟದ ಯಶಸ್ಸು ಕಾಣಲಿಲ್ಲ. ಸತತ ಅನಾರೋಗ್ಯದಿಂದ ಬಳಲುತ್ತಿದ್ದ ಲೂಯಿ ಬ್ರೈಲ್ ಕ್ಷಯರೋಗದಿಂದ ೧೮೫೨ ರಲ್ಲಿ ಅಸುನೀಗಿದಾಗ ಅವನ ವಯಸ್ಸು ೪೩ ವರ್ಷಗಳು. ತನ್ನ ಮರಣದ ನಂತರ ಆತ ತನ್ನಲ್ಲಿದ್ದ ಹಣವನ್ನೆಲ್ಲ ಅಂಧರ ಸಂಘಗಳಿಗೆ ದೇಣಿಯಾಗಿ ಕೊಡುವಂತೆ ಸೂಚಿಸಿದ್ದ.


                                                                  (ಬ್ರೈಲ್ ಲಿಪಿಯ ಮಾದರಿ)


ದೊರೆತ ಗೌರವ 


               ಲೂಯಿ ಬ್ರೈಲ್ ನ ಸಾವಿನ ನಂತರ ಅನೇಕ ವರ್ಷಗಳವರೆಗೆ ಬ್ರೈಲ್ ಲಿಪಿ ಜನರ ನೆನಪಿನಿಂದ ಮರೆಯಾಯಿತು. ಆದರೆ ೧೮೬೮ ರಲ್ಲಿ ಡಾ. ಥಾಮಸ್ ಆರ್ಮಿಟೆಜ್ ಫ್ರಾನ್ಸ್ ನಲ್ಲಿ ಅಂಧರ ಒಂದು ಸಂಘವನ್ನು ಸ್ಥಾಪಿಸಿ ಬ್ರೈಲ್ ಲಿಪಿಯ ಸಹಾಯದಿಂದ ಅನೇಕ ಪುಸ್ತಕಗಳನ್ನು ಪ್ರಕಟಿಸಿದರು. ಥಾಮಸ್ ಆರ್ಮಿಟೆಜ್ ಅವರ ನಿರಂತರ  ಪ್ರಯತ್ನದ ಪರಿಣಾಮ ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ರೈಲ್ ಲಿಪಿಯ ಬಳಕೆ ಹೆಚ್ಚಿತು. ೧೯೯೦ ರ ಹೊತ್ತಿಗೆ ಪ್ರತಿಯೊಂದು ರಾಷ್ಟ್ರದಲ್ಲಿನ ಎಲ್ಲ ಪ್ರಮುಖ ಭಾಷೆಗಳಲ್ಲಿ ಬ್ರೈಲ್ ಲಿಪಿಯಲ್ಲಿ ಪುಸ್ತಕಗಳು ಪ್ರಕಟವಾದವು. ಇದೇ ವೇಳೆ 'ಬ್ರೈಲ್ ಲಿಪಿಯನ್ನು ಬಳಸದೇ ಇರುವ ಅಂಧರ ಶಾಲೆ ಜಗತ್ತಿನ  ಯಾವ ದೇಶದಲ್ಲೂ  ಇಲ್ಲ' ಎಂದು ಥಾಮಸ್ ಆರ್ಮಿಟೆಜ್ ಘೋಷಿಸಿದರು.  ಇಂದು ಜಗತ್ತಿನ ಆಲ್ಬೇನಿಯನ್ (Albanian) ಭಾಷೆಯಿಂದ ಝುಲು (Zulu) ಭಾಷೆಯವರೆಗೆ ಎಲ್ಲ ಭಾಷೆಗಳಲ್ಲಿ ಬ್ರೈಲ್ ಲಿಪಿ ಬಳಕೆಯಲ್ಲಿದೆ. 

            ನಂತರದ ವರ್ಷಗಳಲ್ಲಿ ಬ್ರೈಲ್ ಲಿಪಿಯ ಯಶಸ್ಸು, ಜನಪ್ರಿಯತೆ ಮತ್ತು ಅದರ ಉಪಯುಕ್ತತೆಯನ್ನು ಪರಿಗಣಿಸಿ ಫ್ರಾನ್ಸ್ ರಾಷ್ಟ್ರದಲ್ಲಿ ಲೂಯಿ ಬ್ರೈಲ್ ಗೆ ದೊರೆಯಬೇಕಾದ ಮನ್ನಣೆ ಮತ್ತು ಗೌರವ ದೊರೆತವು. ವಿಪರ್ಯಾಸದ ಸಂಗತಿ ಎಂದರೆ ಆ ಹೊತ್ತಿಗೆ ಪ್ರಶಸ್ತಿ ಪುರಸ್ಕಾರಗಳನ್ನು ಸ್ವೀಕರಿಸಲು ಲೂಯಿ ಬ್ರೈಲ್ ಬದುಕಿರಲಿಲ್ಲ. ಬದುಕಿನುದ್ದಕ್ಕೂ ಸಂಕಷ್ಟಗಳ ಮಧ್ಯೆಯೇ ಜೀವನ ಸಾಗಿಸಿದ ಲೂಯಿ ಬ್ರೈಲ್ ಸಾವಿನ ನಂತರವೂ ನೆನಪಿನಲ್ಲುಳಿಯುವಂಥ ಮಹತ್ವದ ಕಾಣಿಕೆಯನ್ನು ಪ್ರಪಂಚಕ್ಕೆ ನೀಡಿ ಫ್ರಾನ್ಸ್ ದೇಶದ ಮಹಾನ್ ನಾಯಕನೆನಸಿಕೊಂಡ. ಲೂಯಿಯ ಸಾವಿನ ನಂತರ ಆತ ಜನಿಸಿದ ಮನೆಯನ್ನು ಐತಿಹಾಸಿಕ ಸ್ಥಳವಾಗಿ ಪರಿವರ್ತಿಸಲಾಯಿತು.  ೧೯೫೨ ರಲ್ಲಿ ಲೂಯಿ ಬ್ರೈಲ್ ನ ಸಮಾಧಿಯನ್ನು ಫ್ರಾನ್ಸ್ ದೇಶದ ರಾಷ್ಟ್ರೀಯ ನಾಯಕರ ಸಮಾಧಿ ಸ್ಥಳವಾದ ಪ್ಯಾಂಥೆನ್ (Pantheon) ರುದ್ರಭೂಮಿಗೆ ಸ್ಥಳಾಂತರಿಸಿ ಆತನ ಸಾಧನೆಯನ್ನು ಗೌರವಿಸಲಾಯಿತು. ೨೦೦೯ ರಲ್ಲಿ ಲೂಯಿ ಬ್ರೈಲ್ ನ ೨೦೦ನೇ ಜನ್ಮದಿನದ ಸ್ಮರಣಾರ್ಥ ಅಮೇರಿಕ, ಭಾರತ, ಇಟಲಿ ಮತ್ತು ಬೆಲ್ಜಿಯಂ ದೇಶಗಳಲ್ಲಿ ಲೂಯಿ ಚಿತ್ರವಿರುವ ನಾಣ್ಯಗಳನ್ನು ಹೊರತರಲಾಯಿತು. ಜರ್ಮನ್ ರಾಷ್ಟ್ರವು ಲೂಯಿ ಬ್ರೈಲ್ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಬಿಡುಗಡೆಮಾಡಿ ಆ ಸಾಧಕನನ್ನು ಗೌರವಿಸಿತು. ಜೊತೆಗೆ ಲೂಯಿ ಬ್ರೈಲ್ ನ ಸಾಧನೆ ಕುರಿತು ಅನೇಕ ಭಾಷೆಗಳಲ್ಲಿ ಮಕ್ಕಳ ಪುಸ್ತಕಗಳು ಪ್ರಕಟವಾಗಿವೆ. ಫ್ರಾನ್ಸ್  ದೇಶದಲ್ಲಿ ಲೂಯಿ ಬ್ರೈಲ್ ನ  ಸಾಧನೆಯ ಮೇಲೆ ಬೆಳಕು ಚೆಲ್ಲುವ ನಾಟಕಗಳು ಅಲ್ಲಲ್ಲಿ ಪ್ರದರ್ಶನಗೊಂಡವು ಮತ್ತು ೨೦೦೮ ರಲ್ಲಿ ಫ್ರಾನ್ಸ್ ಭಾಷೆಯಲ್ಲಿ ಸಿನಿಮಾ ಕೂಡ ತಯ್ಯಾರಾಯಿತು. 

ಕೊನೆಯ ಮಾತು 


ರಸಲ್ ಫ್ರೀಡಮನ್ ಬರೆದ 'ಔಟ್ ಆಫ್ ಡಾರ್ಕ್ ನೆಸ್' (Out of Darkness) ಪುಸ್ತಕದಲ್ಲಿನ ಪ್ರಾರಂಭದ ಈ ಕೆಳಗಿನ ಸಾಲುಗಳು ಲೂಯಿ ಬ್ರೈಲ್ ನೊಳಗಿನ ಮಹತ್ವಾಕಾಂಕ್ಷೆ ಮತ್ತು ತಹತಹಿಕೆಗೆ ಕನ್ನಡಿ ಹಿಡಿಯುತ್ತವೆ.

'More than anything else Louis Braille wanted to read. He could not accept the fact that as a blind boy, in the year 1821 he was unable to communicate by the written word. So each night in the darkness of his dormitory room he punched tiny holes in paper. His friends told him he was wasting his time, but Braille's experiment with dots became a system that as the plaque on the front of Braille's house reads, 'Open the doors of knowledge to all those who cannot see'.


-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ  



No comments:

Post a Comment