ಮೊನ್ನೆ ಮೊನ್ನೆ ನನ್ನೂರಲ್ಲಿ ಗಾಂಧಿ ಕೊಲೆಯಾಯ್ತು. ನಡೆದ ಘಟನೆ ಹೇಳದೆ ಹೋದರೆ ೧೯೪೮ ರಲ್ಲೇ ಕೊಲೆಯಾದ ಗಾಂಧಿ ಅದು ಹೇಗೆ ಮತ್ತೊಮ್ಮೆ ಕೊಲೆಯಾಗಲು ಸಾಧ್ಯ ಎನ್ನುವ ಗೊಂದಲ ನಿಮ್ಮಲ್ಲಿ ಉಂಟಾಗಬಹುದು. ಗೊಂದಲ ಉಂಟಾಗದಿರಲೆಂದೇ ಹೇಳುತ್ತಿದ್ದೇನೆ ಕೇಳಿ. ನನ್ನೂರಿನ ಶಾಲೆಯ ಪಕ್ಕದಲ್ಲಿ ವಿಶಾಲವಾದ ಬಯಲಿದೆ. ಅದು ಸರ್ಕಾರಕ್ಕೆ ಸೇರಿದ ಜಾಗ. ಆ ಬಯಲು ಜಾಗದಲ್ಲಿ ಊರ ಮಕ್ಕಳು ಆಡಿಕೊಂಡು ಮತ್ತು ಜಾನುವಾರುಗಳು ಅಲೆದಾಡಿಕೊಂಡು ಇರುತ್ತಿದ್ದವು. ಒಟ್ಟಿನಲ್ಲಿ ಯಾವುದೋ ಒಂದು ರೀತಿಯಲ್ಲಿ ಆ ಜಾಗ ಊರಿನವರ ಉಪಯೋಗಕ್ಕೆ ಬರುತ್ತಿತ್ತು. ಕೆಲವೊಮ್ಮೆ ಅದು ಊರಿನವರ ಮದುವೆಗೆ ಛತ್ರವಾಗಿಯೋ ಇಲ್ಲವೇ ಸರ್ಕಾರಿ ಕಾರ್ಯಕ್ರಮಗಳಿಗಾಗಿಯೋ ಉಪಯೋಗವಾಗುತ್ತಿದ್ದದ್ದುಂಟು. ಹೀಗೆ ಅನೇಕ ವರ್ಷಗಳ ಕಾಲ ಯಾವ ಅಡೆತಡೆಯೂ ಇಲ್ಲದೆ ಊರಿನ ಎಲ್ಲ ಜಾತಿ ಧರ್ಮದವರು ತಮಗೆ ಅಗತ್ಯವೆನಿಸಿದಾಗಲೆಲ್ಲ ಆ ಜಾಗವನ್ನು ಬಳಸಿಕೊಳ್ಳುತ್ತಿದ್ದರು. ಇಷ್ಟು ದಿನ ಅದಕ್ಕೆ ಯಾರ ತಂಟೆ ತಕರಾರು ಇರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಒಂದು ಜಾತಿಯ ಜನ ತಮ್ಮ ಇಷ್ಟ ದೈವದ ಗುಡಿಯನ್ನು ಆ ಜಾಗದಲ್ಲಿ ಕಟ್ಟಲು ನಿರ್ಧರಿಸಿದರು. ಅದಕ್ಕೆ ಪೂರಕವಾಗಿ ತಮ್ಮ ದೇವರ ಹೆಸರಿರುವ ಫಲಕವನ್ನು ಅಲ್ಲಿ ನೆಟ್ಟು ಅದಕ್ಕೆ ಪೂಜೆ ಮಾಡಿ ಹೂಹಾರ ಹಾಕಿ ಅಲಂಕರಿಸಿದರು. ಇನ್ನು ಮುಂದೆ ಸರ್ಕಾರದ ಆ ಬಯಲು ಜಾಗ ಒಂದು ನಿರ್ಧಿಷ್ಟ ಜಾತಿಯ ಸುಪರ್ದಿಗೆ ಸೇರಿತು ಎಂದು ಜನ ಮಾತನಾಡಿಕೊಂಡರು. ಕೆಲವರಂತೂ ತಮಗೇಕೆ ಈ ರಗಳೆ ಎಂದು ಸುಮ್ಮನೆ ಕುಳಿತರೆ ಇನ್ನು ಕೆಲವರು ಊರಿನಲ್ಲಿ ಮುಂದೆ ಏನೋ ಅನಾಹುತವಾಗಲಿದೆ ಎಂದು ಭವಿಷ್ಯ ನುಡಿದರು. ಈ ನಡುವೆ ಊರಿನ ಇನ್ನೊಂದು ಜಾತಿಗೆ ಸೇರಿದ ಜನ ಆ ಜಾಗ ತಮಗೆ ಸೇರಬೇಕೆಂದು ತಕರಾರು ತೆಗೆದರು. ತಮ್ಮ ಜಾತಿಗೆ ಸೇರಿದ ಪ್ರಬಲ ನಾಯಕನ ಹೆಸರಿನಲ್ಲಿ ಅಲ್ಲೊಂದು ಸಮುದಾಯ ಭವನ ಸ್ಥಾಪಿಸಿ ಆ ಜಾಗವನ್ನು ತಮ್ಮ ಒಡೆತನಕ್ಕೆ ತೆಗೆದುಕೊಳ್ಳಬೇಕೆಂಬ ಇರಾದೆ ಅವರದಾಗಿತ್ತು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅಲ್ಲಿದ್ದ ದೇವರ ಹೆಸರಿನ ಫಲಕ ಮಾಯವಾಗಿ ಅಲ್ಲಿ ಪ್ರಭಾವಿ ನಾಯಕನ ಹೆಸರಿನ ಫಲಕ ಎದ್ದು ನಿಂತಿತು. ತಮ್ಮ ದೇವರಿಗೆ ಅವಮಾನವಾಯಿತೆಂದು ಭಾವಿಸಿದ ಇನ್ನೊಂದು ಗುಂಪು ರಾತ್ರೋರಾತ್ರಿ ಆ ಫಲಕವನ್ನು ನೆಲಸಮಗೊಳಿಸಿತು. ಅವರು ತಂದು ನೆಟ್ಟಿದ್ದನ್ನು ಇವರು, ಇವರು ತಂದು ನೆಟ್ಟಿದ್ದನ್ನು ಅವರು ಕಿತ್ತೆಸೆಯುವ ಈ ಪ್ರಕ್ರಿಯೆ ಅನೇಕ ದಿನಗಳಕಾಲ ಪುನರಾವರ್ತನೆಯಾಯಿತು. ಕೊನೆಗೊಂದು ದಿನ ಆ ಎರಡೂ ಗುಂಪುಗಳ ನಡುವೆ ಕಲ್ಲು ತೂರಾಟವಾಗಿ ಅನೇಕರಿಗೆ ಗಾಯಗಳಾದವು. ಕೆಲವರನ್ನು ಆಸ್ಪತ್ರೆಗೂ ಸೇರಿಸಲಾಯಿತು. ಬಿಕ್ಕಟ್ಟು ಉಲ್ಬಣಿಸಿದಾಗ ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು. ಎರಡೂ ಗುಂಪಿನ ಪ್ರಮುಖರನ್ನು ಬಂಧಿಸಿ ಕರೆದೊಯ್ದು ಜೈಲಿನಲ್ಲಿಟ್ಟರು. ಆಯಾ ಜಾತಿಯವರು ಹಣ ಸೇರಿಸಿ ತಮ್ಮವರನ್ನು ಜೈಲಿನಿಂದ ಬಿಡಿಸಿಕೊಂಡು ಬರಬೇಕಾಯಿತು. ಊರಿನ ಈ ಸಮಸ್ಯೆ ಕೋರ್ಟ್ ಮೆಟ್ಟಿಲೇರಿದೆ. ಇನ್ನು ಇತ್ಯರ್ಥವಾಗಿಲ್ಲ. ಒಂದು ಕಾಲದಲ್ಲಿ ಸಹಬಾಳ್ವೆಯಿಂದ ಬದುಕಿ ಬಾಳಿದ ಊರು ಈಗ ತನ್ನ ಮಡಿಲಲ್ಲಿ ದ್ವೇಷದ ಕೆಂಡ ಇಟ್ಟುಕೊಂಡು ತಣ್ಣಗೆ ಮಲಗಿದೆ. ಒಬ್ಬರ ಮುಖ ಕಂಡರೆ ಇನ್ನೊಬ್ಬರಿಗೆ ಆಗುತ್ತಿಲ್ಲ. ಮಕ್ಕಳ ಆಟಕ್ಕೆ, ಜಾನುವಾರಗಳ ಓಡಾಟಕ್ಕೆ, ಊರಿನ ಮದುವೆ ಕಾರ್ಯಗಳಿಗೆ ಪ್ರಶಸ್ತವಾಗಿದ್ದ ಆ ಜಾಗ ಈಗ ನಿಷೇಧಿತ ಪ್ರದೇಶವಾಗಿ ಸುತ್ತಲೂ ಮುಳ್ಳು ಬೇಲಿಯನ್ನು ಕಟ್ಟಿಕೊಂಡು ನಿಂತಿದೆ. ಆ ಜಾಗದ ಎದುರು ನಿಂತಾಗಲೆಲ್ಲ ಗಾಂಧಿ ನೆನಪಾಗುತ್ತಾರೆ. ನನ್ನೂರಿನ ಜನರ ತಣ್ಣನೆಯ ಕ್ರೌರ್ಯ ಆ ಜಾಗದಲ್ಲಿ ಗಾಂಧಿಯನ್ನು ಕೊಲೆ ಮಾಡಿ ಮಲಗಿಸಿದಂತೆ ಭಾಸವಾಗುತ್ತದೆ.
ಹೀಗೆ ನನ್ನೂರಲ್ಲಿ ಗಾಂಧಿಯನ್ನು ಕೊಲೆ ಮಾಡಿದ್ದು ಇದೆ ಮೊದಲೇನಲ್ಲ. ೧೯೯೧-೯೨ ರ ಸಮಯದಲ್ಲೂ ಆಗೊಮ್ಮೆ ಗಾಂಧಿಯನ್ನು ಕೊಲೆ ಮಾಡಲಾಗಿತ್ತು. ಅದು ಬಾಬರಿ ಮಸೀದಿ ನೆಲಸಮವಾದ ಘಳಿಗೆ. ಆಗಿನ್ನೂ ಈಗಿನಂತೆ ನೂರಾರು ಚಾನೆಲ್ ಗಳಿರಲಿಲ್ಲ. ಇದ್ದದ್ದು ಸರ್ಕಾರಿ ಸ್ವಾಮ್ಯದ ದೂರದರ್ಶನವೊಂದೆ. ದೂರದ ಉತ್ತರ ಪ್ರದೇಶದಲ್ಲಿ ಮಸೀದಿ ನೆಲಸಮವಾಯಿತೆಂಬ ಸುದ್ದಿ ದೂರದರ್ಶನದ ವಾರ್ತೆಯ ಮೂಲಕ ಬಂದು ತಲುಪುತ್ತಿದ್ದಂತೆಯೇ ಇಲ್ಲಿಯೂ ಒಂದಿಷ್ಟು ಆತಂಕ ಸೃಷ್ಟಿಯಾಯಿತು. ಜನರೆಲ್ಲ ತಮ್ಮ ತಮ್ಮ ಮನೆ ಸೇರಿದ ಪರಿಣಾಮ ರಸ್ತೆಗಳೆಲ್ಲ ನಿರ್ಜನವಾದವು. ಆ ಸಮಯ ಮನೆಯ ಹೊರಗೆ ಕಾಲಿಡಲೂ ಹೆದರಿಕೆ. ನಂತರದ ದಿನಗಳ ಬದುಕು ನಿಜಕ್ಕೂ ಅದೊಂದು ನರಕ ಸದೃಶ್ಯ ಯಾತನೆ. ಯಾವುದೋ ಊರಲ್ಲಿ ಮುಸ್ಲಿಂ ಹುಡುಗನನ್ನು ಹಿಂದೂ ಯುವಕರು ಕೊಲೆ ಮಾಡಿದರಂತೆ, ಇಲ್ಲೇ ಪಕ್ಕದೂರಲ್ಲಿ ಹಿಂದೂ ಯುವತಿಯನ್ನು ಮುಸ್ಲಿಂ ಹುಡುಗರು ಅತ್ಯಾಚಾರವೆಸಗಿ ಕೊಲೆ ಮಾಡಿದರಂತೆ, ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿನ ಹಿಂದೂಗಳ ಮನೆಯನ್ನು ಸುಟ್ಟುಹಾಕಲಾಗಿದೆಯಂತೆ, ಅನೇಕ ಮುಸ್ಲಿಂ ಕುಟುಂಬಗಳು ಊರು ಬಿಟ್ಟು ಪಲಾಯನಗೈದಿವೆಯಂತೆ ಹೀಗೆ ದಿನಕ್ಕೊಂದು ಬಗೆಯ ಸುದ್ದಿಗಳು ದಿನನಿತ್ಯದ ಬದುಕನ್ನು ಅಸಹನೀಯವಾಗಿಸಿದವು. ಹೀಗೆ ದೂರದಲ್ಲೆಲ್ಲೋ ನಡೆದ ಘಟನೆಗಳು ನನ್ನೂರಿನ ಚಿತ್ರಣವನ್ನೇ ಬದಲಿಸಿದವು. ಒಂದೇ ಊರಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದ ಹಿಂದೂ ಮುಸ್ಲಿಂ ಕುಟುಂಬಗಳು ಪರಸ್ಪರ ಅನುಮಾನದಿಂದ ನೋಡುವಂತಾಯಿತು. ಪಕ್ಕದ ಮನೆಯ ಖಾದೀರ ಎಲ್ಲಿ ಬಂದು ತನ್ನನ್ನು ಕೊಲೆ ಮಾಡುವನೋ ಎಂದು ಹಿಂದೂ ಧರ್ಮದ ಹಣಮಂತ ನಿದ್ದೆಯಿಲ್ಲದ ರಾತ್ರಿಯನ್ನು ಕಳೆಯುತ್ತಿದ್ದರೆ, ಹಣಮಂತ ನನ್ನ ಕುಟುಂಬವನ್ನೇ ಮುಗಿಸಲು ಹೊಂಚು ಹಾಕಿರಬಹುದೆಂಬ ಅನುಮಾನ ಖಾದೀರನನ್ನು ಕಾಡುತ್ತಿತ್ತು. ಈ ಪರಸ್ಪರ ಅನುಮಾನದಿಂದ ನೋಡುವ ಪ್ರಕ್ರಿಯೆ ದಿನದಿಂದ ದಿನಕ್ಕೆ ದಟ್ಟವಾಗಿ ಬೆಳೆಯುತ್ತಲೇ ಹೋಯಿತು. ಖಾದೀರ ಈ ನೆಲದವನೇ ಅಲ್ಲ ಎನ್ನುವ ಭ್ರಮೆ ಹಣಮಂತನಲ್ಲೂ ಮತ್ತು ಹಣಮಂತನಿಂದ ತನ್ನ ಧರ್ಮೀಯರಿಗೆ ಅನ್ಯಾಯವಾಗಿದೆ ಎನ್ನುವ ಅನುಮಾನ ಖಾದೀರನಲ್ಲೂ ಮೊಳಕೆಯೊಡೆದು ಅದು ನಂತರದ ಪೀಳಿಗೆಗೂ ಹರಿದು ಹೆಮ್ಮರವಾಗಿ ಬೆಳೆಯಿತು. ಖಾದೀರನ ಮಕ್ಕಳು ಊರಿನಲ್ಲಿದ್ದು ಊರಿನವರಾಗಿಲ್ಲ. ಈ ನೆಲ ನಮ್ಮದಲ್ಲ ಎನ್ನುವ ಭಾವನೆ ಅವರಲ್ಲಿ ದಟ್ಟವಾಗಿ ಬೆಳೆದು ಅವರನ್ನು ಪರಕೀಯರನ್ನಾಗಿಸಿದೆ. ಇವತ್ತಲ್ಲ ನಾಳೆ ನಾವು ನಮ್ಮವರನ್ನು ಸೇರಲು ನಮ್ಮದೇ ನೆಲದಲ್ಲಿ ಬದುಕು ಕಟ್ಟಿಕೊಳ್ಳಲು ಹೋಗಲಿದ್ದೇವೆ ಎನ್ನುವ ಭ್ರಮೆಯಲ್ಲೇ ಅವರು ಬದುಕುತ್ತಿರುವರು. ಈ ಕಡೆ ಹಣಮಂತನ ಮಕ್ಕಳಲ್ಲಿ ಬೇರೆ ಇನ್ನಾರೋ ಪರಕೀಯರು ನಮ್ಮ ಅವಕಾಶಗಳನ್ನು ಕಸಿದು ಕೊಳ್ಳುತ್ತಿರುವರೆನ್ನುವ ದ್ವೇಷ ಮನೆಮಾಡಿದೆ. ಪರಸ್ಪರ ದ್ವೇಷ ಹಗೆತನದ ಪರಿಣಾಮ ಅನ್ಯೋನ್ಯತೆ ಮರೆಯಾಗಿದೆ. ಪ್ರೀತಿ ಸ್ನೇಹಗಳ ಜಾಗದಲ್ಲಿ ಸೇಡು ದ್ವೇಷ ಮನೆಮಾಡಿವೆ. ಗಾಂಧಿ ಹೇಳಿದ್ದ ತತ್ವಗಳ ಕತ್ತು ಹಿಚುಕಿ ಸಾಯಿಸಿದ್ದೇವೆ. ಹೀಗೆ ಹಗೆತನವನ್ನು ಅನಾವರಣಗೊಳಿಸುವ ಭರದಲ್ಲಿ ನಾವು ನೇರವಾಗಿ ಕೈಹಾಕಿದ್ದು ಗಾಂಧಿಯ ಕುತ್ತಿಗೆಗೆ. ಗಾಂಧಿ ನನ್ನೂರಲ್ಲಿ ಮತ್ತೊಮ್ಮೆ ಕೊಲೆಯಾಗಿದ್ದಾರೆ. ಕೊಲೆ ಮಾಡಿದ್ದು ನಾವುಗಳೆ.
ಮತ್ತೊಮ್ಮೆ ನನ್ನೂರಲ್ಲಿ ಗಾಂಧಿ ಕೊಲೆಯಾಯ್ತು. ಹೀಗೆ ಆಗುತ್ತಿರುವುದು ಅದು ಎಷ್ಟನೆ ಸಲವೋ ಗೊತ್ತಿಲ್ಲ. ಆದರೆ ಕೊಲೆಯಾದದ್ದಂತೂ ನಿಜ. ಹೇಗೆ ಕೊಲೆಯಾಯ್ತು ಎಂದು ಹೇಳುತ್ತೇನೆ ಅದೊಂದು ದಿನ ಇದ್ದಕ್ಕಿದ್ದಂತೆ ಊರಿನ ನಡುವೆಯೇ ಅದು ಹಗಲೆಂಬ ಹಗಲು ಹೊತ್ತಿನಲ್ಲೇ ಸರಾಯಿ ಅಂಗಡಿಯೊಂದು ತಲೆ ಎತ್ತಿ ನಿಂತಿತು. ಸರಾಯಿ ಅಂಗಡಿ ಇರುವ ಜಾಗ ಅದು ಅತ್ಯಂತ ಜನನಿಬಿಡ ಜಾಗವದು. ಊರಿನ ಜನ ತಮ್ಮ ದೈನಂದಿನ ಬಹುಪಾಲು ಕೆಲಸಗಳಿಗಾಗಿ ಆ ಸರಾಯಿ ಅಂಗಡಿಯ ಮುಂದಿನಿಂದಲೇ ಹಾದು ಹೋಗಬೇಕು. ಶಾಲೆಗೆ ಹೋಗುವ ಮಕ್ಕಳು, ಹೆಣ್ಣುಮಕ್ಕಳು ನೀರು ತರಲು, ಬಸ್ ನಿಲ್ದಾಣಕ್ಕೆ, ಹೊಲದ ಕೆಲಸಗಳಿಗೆ ಹೀಗೆ ಅನೇಕ ಸಂದರ್ಭಗಳಲ್ಲಿ ಸರಾಯಿ ಅಂಗಡಿಯ ಎದುರಿನಿಂದಲೇ ನಡೆದು ಹೋಗಬೇಕು. ಆ ದಾರಿಯಲ್ಲಿ ಹೋಗುವಾಗಲೆಲ್ಲ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಹೆಚ್ಚು ಮುಜುಗರವಾಗುತ್ತಿತ್ತು. ಶಾಲಾ ಮಕ್ಕಳಂತೂ ಅತ್ಯಂತ ಕುತೂಹಲದಿಂದ ಆ ಅಂಗಡಿಯಕಡೆ ನೋಡುತ್ತಿದ್ದರು. ಕೆಲವರಂತೂ ತಮ್ಮ ಮನಸ್ಸನ್ನು ನಿಗ್ರಹಿಸಿಕೊಳ್ಳಲು ಸೋತು ಒಂದಿಷ್ಟು ಸರಾಯಿ ಸೇವಿಸಿಯೇ ಮನೆಗೆ ಹೋಗುತ್ತಿದ್ದರು. ಹಣವಿರುವ ಹಣವಂತರು ಕುಡಿದು ಕುಡಿದು ಬರಗೈ ದಾಸರಾದರೆ ಹಣವಿಲ್ಲದ ಬಡವರು ಕುಡಿತದ ಚಟಕ್ಕೆ ಸಾಲಮಾಡಿ ಆಸ್ತಿಯನ್ನು ಕಳೆದುಕೊಂಡು ಬೀದಿಗೆ ಬಂದರು. ಹೀಗಿದ್ದೂ ಸರಾಯಿ ಅಂಗಡಿಯನ್ನು ಸ್ಥಳಾಂತರಿಸಲು ಯಾರೂ ಮುಂದೆ ಬರಲಿಲ್ಲ. ಕೆಲವರು ಪ್ರಯತ್ನಿಸಿದರೂ ಊರಿನವರ ಬೆಂಬಲ ದೊರೆಯದೆ ಅದು ಪ್ರಯತ್ನವಾಗಿಯೇ ಉಳಿಯಿತು. ಮುಂದೊಂದು ದಿನ ಸರಾಯಿ ವ್ಯಸನಕ್ಕೆ ಬಲಿಯಾಗಿ ಊರಿನಲ್ಲಿ ಒಂದೆರಡು ಸಾವುಗಳೂ ಸಂಭವಿಸಿದವು. ಆಗಲೂ ಜನ ಎಚ್ಚೆತ್ತುಕೊಳ್ಳಲಿಲ್ಲ. ಸರಾಯಿ ಅಂಗಡಿಯ ಮಾಲೀಕ ಮಾತ್ರ ಜನರ ಚಟವನ್ನೇ ತನ್ನ ಅನುಕೂಲಕ್ಕೆ ಬಳಸಿಕೊಂಡು ದಿನದಿಂದ ದಿನಕ್ಕೆ ತನ್ನ ಸಂಪತ್ತನ್ನು ವೃದ್ಧಿಸಿಕೊಂಡ. ಸಾಲ ಕೊಟ್ಟು ಕುಡಿಸಿ ಬೇರೆಯವರ ಆಸ್ತಿಯನ್ನು ಕಬಳಿಸಿ ಕುಬೇರನಾದ. ರಾಜಕೀಯ ಪ್ರವೇಶಿಸಿ ಮಂತ್ರಿಯಾಗುವ ಮಹತ್ವಾಕಾಂಕ್ಷೆಯನ್ನು ಬೆಳೆಸಿಕೊಂಡ. ಆದರೆ ಊರು ಮಾತ್ರ ಕುಡುಕರ ಗೂಡಾಯಿತು. ಅಬಾಲವೃದ್ಧರಾದಿಯಾಗಿ ಎಲ್ಲರೂ ಕುಡಿತದ ಚಟಕ್ಕೆ ಬಲಿಯಾದರು. ದುರಂತವೆಂದರೆ ಸರಾಯಿ ಅಂಗಡಿಯ ಎದುರಿಗಿರುವ ಗಾಂಧಿಯ ಪ್ರತಿಮೆ ಇದೆಲ್ಲದಕ್ಕೂ ಮೂಕ ಸಾಕ್ಷಿಯಾಗಿ ನಿಂತಿದೆ. ಗಾಂಧಿಯನ್ನು ನನ್ನೂರಲ್ಲಿ ಮತ್ತೊಮ್ಮೆ ಕೊಲೆ ಮಾಡಲಾಗಿದೆ.
ಗಾಂಧಿಯನ್ನು ನನ್ನೂರಿನ ಜನ ಮತ್ತೊಮ್ಮೆ ಸಾಯಿಸಿದರು. ಇದೇನೂ ಆಶ್ಚರ್ಯದ ವಿಷಯವಲ್ಲ. ಹೀಗೆ ಗಾಂಧಿಯನ್ನು ನನ್ನೂರಲ್ಲಿ ಅನೇಕ ಸಲ ಸಾಯಿಸಲಾಗಿದೆ. ಈ ಸಲ ಗಾಂಧಿಯನ್ನು ಸಾಯಿಸಿದವರು ಈ ಗುಡಿಕೈಗಾರಿಕೆಗಳ ಜನ. ಕೆಲವು ವರ್ಷಗಳ ಹಿಂದೆ ನನ್ನೂರಿನ ಈ ಕಂಬಾರ, ಕುಂಬಾರ, ನೇಕಾರ, ಬಡಿಗ ಇವರೆಲ್ಲ ಹಠಾತ್ತನೆ ಇನ್ನು ಮುಂದೆ ನಮ್ಮ ನಮ್ಮ ಕುಲದ ಕೆಲಸವನ್ನು ಮಾಡುವುದಿಲ್ಲವೆನ್ನುವ ನಿರ್ಧಾರಕ್ಕೆ ಬಂದರು. ಅವರ ಆ ನಿರ್ಧಾರಕ್ಕೆ ಊರಿಗೆ ಸಮೀಪದಲ್ಲಿ ಕಾರ್ಖಾನೆಯೊಂದು ತಲೆ ಎತ್ತಿದ್ದೆ ಕಾರಣವಾಗಿತ್ತು. ಕಾರ್ಖಾನೆಯ ಕೆಲಸ ಮತ್ತು ತಿಂಗಳ ಸಂಬಳದ ಆಮಿಷ ಅವರನ್ನು ಹೀಗೆ ಮಾಡುವಂತೆ ಪ್ರಚೋದಿಸಿತ್ತು. ಅವರ ಆ ನಿರ್ಧಾರ ನೇರವಾಗಿ ಪರಿಣಾಮ ಬೀರಿದ್ದು ರೈತರ ಕೃಷಿ ಕಾರ್ಯದ ಮೇಲೆ. ತಮ್ಮ ದೈನಂದಿನ ಕೆಲಸಗಳಿಗಾಗಿ ಕಂಬಾರ, ಬಡಿಗರಂಥ ವೃತ್ತಿ ಪರಿಣಿತರನ್ನು ಅವಲಂಬಿಸಿದ್ದ ರೈತಾಪಿ ವರ್ಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ದೊಡ್ಡ ರೈತರು ಯಂತ್ರೋಪಕರಣಗಳ ಮೊರೆ ಹೋದರೆ ಸಣ್ಣ ರೈತರಿಗೆ ವ್ಯವಸಾಯ ಬಹುದೊಡ್ಡ ಹೊರೆಯಾಗಿ ಕಾಣತೊಡಗಿತು. ಪರಿಣಾಮವಾಗಿ ಅವರೆಲ್ಲ ತಮ್ಮ ಕೃಷಿ ಭೂಮಿಯನ್ನು ವಿಲೇವಾರಿ ಮಾಡಿ ಕೃಷಿ ಕೆಲಸದಿಂದ ನಿವೃತ್ತರಾದರು. ರೈತರ ಮಕ್ಕಳು ಈ ಬಡಿಗ, ಕುಂಬಾರ, ಕಂಬಾರರ ಮಕ್ಕಳಂತೆ ತಾವುಸಹ ಕಾರ್ಖಾನೆಯಲ್ಲಿ ದಿನಗೂಲಿಗಳಾಗಿ ದುಡಿಯಲಾರಂಭಿಸಿದರು. ಒಂದು ಕಾಲದಲ್ಲಿ ಸ್ವಉದ್ಯೋಗಗಳಿಂದ ಸ್ವಾವಲಂಬಿಗಳಾಗಿ ಬದುಕುತ್ತಿದ್ದ ನನ್ನೂರಿನ ಜನ ಕಾಲಾನಂತರದಲ್ಲಿ ಪರಾವಲಂಬಿಗಳಾದರು. ಮುಂದೊಂದು ದಿನ ಕಾರ್ಖಾನೆಯೂ ಉತ್ಪಾದನೆ ಇಲ್ಲದೆ ಬಾಗಿಲು ಮುಚ್ಚಿತು. ಆಗ ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿದವರು ಇದೇ ರೈತರು ಮತ್ತು ಸಣ್ಣ ಸಣ್ಣ ವೃತ್ತಿಯವರು. ಗಾಂಧಿಯ ಕೊಲೆಗೈದ ಪರಿಣಾಮವಿದು. ಗಾಂಧಿ ಆ ಕಾಲಕ್ಕೆ ಹೇಳಿದ್ದ ಗುಡಿಕೈಗಾರಿಕೆಗಳಿಂದ ಸ್ವಾವಲಂಬಿ ಬದುಕು ಸಾಧ್ಯವೆಂದು. ಆದರೆ ಗಾಂಧಿಯ ಮಾತನ್ನು ಕೇಳದೆ ಇವರೆಲ್ಲ ಆತನ ಕೊಲೆ ಮಾಡಿದರು.
ಗಾಂಧಿಯವರ ತತ್ವ, ಆದರ್ಶ ಮತ್ತು ಸಿದ್ದಾಂತಗಳು ಮರೆಯಾಗುತ್ತಿವೆ ಎನ್ನುವುದನ್ನು ನಾನು ಗಾಂಧಿ ಕೊಲೆಯಾಯ್ತು ಎನ್ನುವ ಧಾಟಿಯಲ್ಲಿ ಹೇಳಿದ್ದೇನೆ. ಹಾಗೆಯೇ ನನ್ನೂರು ಎನ್ನುವುದು ಇಲ್ಲಿ ಅದೊಂದು ರೂಪಕ ಮಾತ್ರ. ಅದು ಯಾವ ಊರಾದರೂ ಆಗಿರಬಹುದು. ಗಾಂಧಿ ಕಂಡ ಸ್ವಾಭಿಮಾನ ಮತ್ತು ರಾಮರಾಜ್ಯದ ಕನಸು ಭಗ್ನಗೊಂಡಿದೆ. ನಮ್ಮೊಳಗಿನ ದ್ವೇಷ, ಅಸೂಯೆ, ಹಗೆತನ ಮತ್ತು ದುಷ್ಟ ಗುಣಗಳ ಮೂಲಕ ಗಾಂಧಿಯನ್ನು ಅದೆಷ್ಟೋ ಸಲ ಕೊಲೆ ಮಾಡಿದ್ದೇವೆ. ಗಾಂಧಿಯನ್ನು ಭೌತಿಕವಾಗಿ ಕೊಲೆ ಮಾಡಿದ್ದು ಒಂದೇ ಸಲವಾದರೂ ಸೈದ್ದಾಂತಿಕವಾಗಿ ಕೊಲೆ ಮಾಡಿದ ಅನೇಕ ಸಂದರ್ಭಗಳಿವೆ. ಹೀಗೆ ಸ್ವತಂತ್ರ ಭಾರತದಲ್ಲಿ ಗಾಂಧಿ ನಿರಂತರವಾಗಿ ಕೊಲೆಯಾಗುತ್ತಿರುವರು.

ಕೊನೆಯ ಮಾತು

No comments:
Post a Comment