Tuesday, December 24, 2013

ಹಚ್ಚಿದರು ಹಣತೆ

              






            ಕನ್ನಡದ ಹಿರಿಯ ಸಾಹಿತಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ನಿನ್ನೆ ಅಸ್ತಂಗತರಾದರು. ಇದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ  ನಷ್ಟ. ಜಿಎಸ್ಎಸ್ ಕನ್ನಡ ನಾಡಿನ ಸಮನ್ವಯ ಕವಿ. ತಮ್ಮ ಭಾವ ಗೀತೆಗಳ ಮೂಲಕ ಇಡೀ ನಾಡಿನ ಜನರ ಮನಸ್ಸುಗಳನ್ನು ಭಾವಲೋಕಕ್ಕೆ ಕೊಂಡೊಯ್ದ ಗಾರುಡಿಗ. ಯಾವ ನವ್ಯ, ನವೋದಯ, ಬಂಡಾಯಗಳ ಬೇಲಿಯನ್ನು ತಮ್ಮ ಸುತ್ತ ಕಟ್ಟಿಕೊಳ್ಳದೆ ತಮ್ಮೊಳಗಿನ ಸೃಜನಶೀಲತೆಯು  ಮುಕ್ಕಾಗದಂತೆ ಕಾಪಾಡಿಕೊಂಡು ಬಂದ ಕನ್ನಡದ ಅನನ್ಯ ಬರಹಗಾರ. ಅಪ್ರಮಾಣಿಕತೆ, ಭ್ರಷ್ಟಾಚಾರವೇ ನಮ್ಮ ಸುತ್ತ ಕುಣಿದು ಕೇಕೆ ಹಾಕುತ್ತಿರುವ ಹೊತ್ತು ಇದೇ ಜಿಎಸ್ಎಸ್ ಅವರ ಭಾವಗಿತೆಗಳು ನಮ್ಮ ಬದುಕನ್ನು ಸಹನೀಯವಾಗಿಸಿದವು.  ಬದುಕಿನ  ನಿಜಾರ್ಥ ನಮ್ಮೆದುರು ಅನಾವರಣಗೊಂಡಿದ್ದು ಅವರದೇ ಭಾವಗೀತೆಗಳ ಮೂಲಕ. ಒಂದರ್ಥದಲ್ಲಿ ಜಿಎಸ್ಎಸ್ ಅವರ ಭಾವಗೀತೆಗಳಿಗೆ ಬದುಕನ್ನೇ  ಬದಲಿಸುವ ಶಕ್ತಿಯಿದೆ. ಅದಕ್ಕೆಂದೇ ಅವು ಎಲ್ಲ ಕಾಲಕ್ಕೂ ಸಲ್ಲುವ ಗೀತೆಗಳು.

       ಜಿಎಸ್ಎಸ್ ಅವರದು ಜಾಗೃತಿ ಮತ್ತು ಚಿಂತನೆಗಳನ್ನು ಓದುಗರಲ್ಲಿ ಒಡಮೂಡಿಸುವ ಕಾವ್ಯ. ಅವರ ಕವಿತೆಗಳಲ್ಲಿ ಸಾಮಾಜಿಕ ಆಯಾಮ ಅನಾವರಣಗೊಂಡಿದೆ. ಕಾವ್ಯರಚನೆ ಅವರಿಗೆ ಅದೊಂದು ಸಾಮಾಜಿಕ ಬದುಕನ್ನು ಕಟ್ಟಿಕೊಡುವ ಪ್ರಕ್ರಿಯೆ. ಇಂಥ ಮನೋಭಾವವಿರುವ ಅವರ ಕವಿ ಮನಸ್ಸು 'ಕಾವ್ಯ ಬರೀ ಶಬ್ದ ಸೇರಿಸುವ ಕ್ರಿಯೆಯಲ್ಲ. ಬರೀ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೆ?' ಎಂದು ಪ್ರಶ್ನಿಸುತ್ತದೆ. ಅದಕ್ಕೆಂದೇ ಅವರು ತಮ್ಮ ಕಾವ್ಯ ರಚನೆಯನ್ನು ಹೀಗೆ ಹೇಳುತ್ತಾರೆ

          ನಾನು ಬರೆಯುತ್ತೇನೆ
          ಖುಷಿಗೆ, ನೋವಿಗೆ
          ರೊಚ್ಚಿಗೆ ಮತ್ತು ಹುಚ್ಚಿಗೆ
          ಅಥವಾ ನಂದಿಸಲಾರದ ಕಿಚ್ಚಿಗೆ

    ಸಮಾಜದ ಸಮಸ್ಯೆಗಳಿಗೆ ದನಿಯಾಗುವಲ್ಲಿ ಕವಿಯ ಸಾಫಲ್ಯವಡಗಿದೆ. ಕವಿಯಾದವನು ವೈಯಕ್ತಿಕವಾದದ್ದನ್ನು ಸಾರ್ವತ್ರಿಕರಿಸುತ್ತ ಹೋಗುತ್ತಾನೆ. ಜಿಎಸ್ಎಸ್ ಅವರ ಹೆಚ್ಚಿನ ಕವಿತೆಗಳಲ್ಲಿ ಶೋಷಿತರ ದನಿ ಅನುರಣಿಸಿದೆ.

          ಸುತ್ತ ಮುತ್ತ ಮನೆ ಮಠಗಳು
          ಹೊತ್ತಿಕೊಂಡು ಉರಿಯುವಲ್ಲಿ
          ಸೋತು ಮೂಕವಾದ ಬದುಕು
          ನಿಟ್ಟುಸಿರೊಳು ತೇಲುವಲ್ಲಿ
          ಯಾವ ಹಾಡ ಹಾಡಲಿ?

           ಉರಿವ ಕಣ್ಣ ಚಿತೆಗಳಲ್ಲಿ
           ಇರುವ ಕನಸು ಸೀಯುವಲ್ಲಿ
           ಎದೆ ಎದೆಗಳ ಜ್ವಾಲಾಮುಖಿ
           ಹೊಗೆ  ಬೆಂಕಿ ಕಾರುವಲ್ಲಿ
           ಯಾವ ಹಾಡ ಹಾಡಲಿ?

     ಹೀಗೆ ಸೋತ ಸಮಾಜಕ್ಕೆ ದನಿಯಾಗುವ ಕವಿಯಲ್ಲಿ ನಂಬಿಕೆಯೂ ಇದೆ. ಶೋಷಿತರ ಸಮಸ್ಯೆಗಳನ್ನು ತನ್ನ ಹೃದಯಕ್ಕೆ ತೆಗೆದುಕೊಂಡು ಅವುಗಳನ್ನು ಪರಿಹರಿಸುವ ಆತ್ಮವಿಶ್ವಾಸವೂ  ಅವರದಾಗಿತ್ತು. ನಂಬಿಕೆ ಮತ್ತು ಆತ್ಮವಿಶ್ವಾಸಗಳೇ ಬರಹಗಾರನ ಬಹುಮುಖ್ಯವಾದ ಆಸ್ತಿಗಳು. ಜೊತೆಗೆ ಇದರೊಂದಿಗೆ ತಾಯ್ತನದ ಅಂತ:ಕರಣವೂ  ಸೇರಿದರೆ ಬರಹಗಾರ ಎಲ್ಲ ಸಾಮಾಜಿಕ ವೈರುಧ್ಯಗಳಿಗೂ ಮುಖಾಮುಖಿಯಾಗಿ ನಿಲ್ಲಬಲ್ಲ.

        ದೀಪವಿರದ ದಾರಿಯಲ್ಲಿ
        ತಡವರಿಸುವ ನುಡಿಗಳೇ
         ಕಂಬನಿಗಳ ತಲಾತಲದಿ
         ನಂದುತಿರುವ ಕಿಡಿಗಳೇ
         ಉಸಿರನಿಡುವೆ
         ಹೆಸರ ಕೊಡುವೆ
         ಬನ್ನಿ ನನ್ನ ಹೃದಯಕೆ

       ಜಿಎಸ್ಎಸ್ ಅವರಲ್ಲಿ ತಾಯ್ತನದ ಅಂತ:ಕಾರಣದ ಜೊತೆಗೆ ಆ ತಾಯ್ತನಕ್ಕೆ ಸಂಕೇತಳಾದ ಹೆಣ್ಣನ್ನು ಗೌರವಿಸುವ ವಿಶಾಲ ಮನೋಭಾವವೂ ಇತ್ತು. ಅವರ 'ಸ್ತ್ರೀ' ಕವಿತೆ ಹೆಣ್ಣನ್ನು ಪೂಜ್ಯನೀಯ ದೃಷ್ಟಿಯಿಂದ ಕಾಣುವ ಅವರ ಮನೋಭಾವಕ್ಕೊಂದು ದೃಷ್ಟಾಂತ. ಅವರೊಳಗಿನ ಸ್ತ್ರೀ ಸಂವೇದನೆಯ ಗುಣ ಈ ರೀತಿಯಾಗಿ ಅನಾವರಣಗೊಂಡಿದೆ

          ಆಕಾಶದ ನೀಲಿಯಲ್ಲಿ
          ಚಂದ್ರ ತಾರೆ ತೊಟ್ಟಿಲಲ್ಲಿ
          ಬೆಳಕನಿಟ್ಟು ತೂಗಿದಾಕೆ
          ನಿನಗೆ ಬೇರೆ ಹೆಸರು ಬೇಕೆ
          ಸ್ತ್ರೀ ಅಂದರೆ ಅಷ್ಟೆ ಸಾಕೇ ?

           ಮನೆಮನೆಯಲಿ ದೀಪ ಮುಡಿಸಿ
           ಹೊತ್ತು ಹೊತ್ತಿಗನ್ನ ಉಣಿಸಿ
           ತಂದೆ ಮಗುವ ತಬ್ಬಿದಾಕೆ
           ನಿನಗೆ ಬೇರೆ ಹೆಸರು ಬೇಕೆ
           ಸ್ತ್ರೀ ಅಂದರೆ ಅಷ್ಟೆ ಸಾಕೇ ?

    ಜಿಎಸ್ಎಸ್ ಅವರಲ್ಲಿ ಬಹುಮುಖ್ಯವಾಗಿ ನಾವು ಕಾಣುವ ಇನ್ನೊಂದು ಗುಣ ಅದು ಅವರೊಳಗಿನ ನಿರ್ಲಿಪ್ತತೆ. ಯಾವ ಬಿರುದು, ಪ್ರಶಸ್ತಿಗಳ ಬೆನ್ನು ಹತ್ತಿ ಹೋದವರಲ್ಲ. ಅವುಗಳು ಅವರನ್ನು ಅರಸಿ ಬಂದಾಗಲೂ ಈ ಕವಿಯದು ಅದೇ ದಿವ್ಯ ನಿರ್ಲಿಪ್ತತೆ. ಕಲಾವಿದನಲ್ಲಿ ಇರಲೇ ಬೇಕಾದ ಗುಣವಿದು. ನಿರೀಕ್ಷೆ ಮತ್ತು ಅಹಂಕಾರಗಳನ್ನು ಮೀರಿ ನಿಂತಾಗಲೇ ಬರಹಗಾರನಲ್ಲಿ ಸೃಜನಶೀಲತೆ ಸೃಷ್ಟಿಯಾಗಬಲ್ಲದು. ಅಂಥದ್ದೊಂದು ಆಶಯವನ್ನು ಜಿಎಸ್ಎಸ್ ತಮ್ಮ 'ಎದೆ ತುಂಬಿ ಹಾಡಿದೆನು' ಕವಿತೆಯಲ್ಲಿ ವ್ಯಕ್ತಪಡಿಸಿರುವರು.

           ಎಲ್ಲ ಕೇಳಲಿ ಎಂದು
           ನಾನು ಹಾಡುವುದಿಲ್ಲ
           ಹಾಡುವುದು ಅನಿವಾರ್ಯ
           ಕರ್ಮ ನನಗೆ

           ಕೇಳುವವರಿಹರೆಂದು
           ನಾ ಬಲ್ಲೆ ಅದರಿಂದ
           ಹಾಡುವೇನು ಮೈದುಂಬಿ
           ಎಂದಿನಂತೆ ಯಾರು
           ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ


         ವೈಚಾರಿಕತೆ ಜಿಎಸ್ಎಸ್ ಕಾವ್ಯದ ಇನ್ನೊಂದು ಬಹುಮುಖ್ಯವಾದ ಗುಣ. ಜಿಎಸ್ಎಸ್ ವ್ಯಕ್ತಿತ್ವ ಜಾತಿ, ಧರ್ಮಗಳ ಸಂಕೋಲೆಯಿಂದ ಮುಕ್ತವಾದದ್ದು. ಅವರ ಕವಿ ಮನಸ್ಸು ಅದನ್ನೇ ಸಮಾಜದಿಂದಲೂ ನಿರೀಕ್ಷಿಸುತ್ತದೆ (ಇಲ್ಲಿ ನಿರೀಕ್ಷೆ ವೈಯಕ್ತಿಕ ನೆಲೆಯಲ್ಲಲ್ಲ. ಅದು ಸಮಾಜಮುಖಿ ನಿರೀಕ್ಷೆ). ವೈಚಾರಿಕ ಪ್ರಜ್ಞೆಯೊಂದು ನಮ್ಮಲ್ಲಿ ಒಡಮೂಡಲು ಅದಕ್ಕೆ ಧರ್ಮನಿರಪೇಕ್ಷಿತ ದೃಷ್ಟಿಕೊನವೇ ದಾರಿ. ಹಲವು ದೇವರನ್ನು ದೂರ ನೂಕಿ ಪ್ರೀತಿ, ಸ್ನೇಹವೇ ನಮ್ಮ ದೇವರಾಗಬೇಕೆನ್ನುವ ವೈಚಾರಿಕ ಪ್ರಜ್ಞೆ ಅವರದಾಗಿತ್ತು.

          ಎಲ್ಲೋ ಹುಡುಕಿದೆ ಇಲ್ಲದ ದೇವರ
          ಕಲ್ಲು ಮಣ್ಣುಗಳ ಗುಡಿಯೊಳಗೆ
          ಇಲ್ಲೇ ಇರುವ ಪ್ರೀತಿ ಸ್ನೇಹಗಳ
          ಗುರುತಿಸದಾದೆನು ನಮ್ಮೊಳಗೆ

          ಎಲ್ಲಿದೆ ನಂದನ ಎಲ್ಲಿದೆ ಬಂಧನ
          ಎಲ್ಲಾ ಇದೆ ಈ ನಮ್ಮೊಳಗೆ
          ಒಳಗಿನ ತಿಳಿಯನು ಕಲಕದೆ ಇದ್ದರೆ
          ಅಮೃತದ ಸವಿಯಿದೆ ನಾಲಿಗೆಗೆ

     
          ಹೀಗೆ ವೈಚಾರಿಕ ಪ್ರಜ್ಞೆಗೊಳಗಾದ ಕವಿ ಸಮಾಜದಲ್ಲಿ ಜನರ ದುಷ್ಟತನವನ್ನು ಕಂಡು ಸಂಕಟಪಡುತ್ತಾರೆ. ಮನುಷ್ಯರೊಳಗಿನ ಕೆಟ್ಟತನ ಅವರನ್ನು ಯಾತನೆಗೊಳಿಸುತ್ತದೆ. ದುಷ್ಟರ ದುಷ್ಟತನವನ್ನು ಪ್ರಶ್ನಿಸುತ್ತಲೇ ಸಮಾಜದೊಂದಿಗಿನ ತಮ್ಮ ಸಂಬಂಧವೇನು ಎನ್ನುವ ವಿವೇಚನೆಗೆ ಮುಂದಾಗುತ್ತಾರೆ.

          ದು:ಖ ಅವಮಾನ ಸಂಕಟಗಳಲ್ಲಿ ನಾನು
          ಒಬ್ಬಂಟಿಯಾಗುತ್ತೇನೆ. ಅದುವರೆಗು ಜತೆಗೆ
          ನಿಂತವರೊಬ್ಬರೂ ಇರದ ದ್ವೀಪವಾಗುತ್ತೇನೆ
          ಹಬ್ಬಿರುವ ಮಬ್ಬಿನ ಮಧ್ಯೆ ಒಬ್ಬನೇ ಕೂತು
          ಯೋಚಿಸುತ್ತೇನೆ ಯಾಕಿಷ್ಟು ದುಷ್ಟರಾಗುತ್ತಾರೆ
          ಜನ ಕೊಂಬೆಗಳ ಕಡಿದು ಹೂವುಗಳ
          ಹೊಸಕಿ ಹಕ್ಕಿಗಳ ಕೊರಳು ಹಿಸುಕುತ್ತಾರೆ
          ನಿಷ್ಕಾರಣ? ಈ ಹೊತ್ತಿನಲ್ಲಿ ಮತ್ತೆ ಕಾಡುವುದು
          ಪ್ರಶ್ನೆ ಈ ಇವರಿಗೂ ನನಗೂ ಏನು ಸಂಬಂಧ?


          ಒಟ್ಟಿನಲ್ಲಿ ಜಿಎಸ್ಎಸ್ ಅವರ ಕವಿತೆಗಳು ಕಾಲ ಮತ್ತು ದೇಶಾತೀತವಾದವುಗಳು. ಅವರು ತಮ್ಮ ಭಾವಗೀತೆಗಳ ಮೂಲಕ ನಮ್ಮನ್ನು ಭಾವಲೋಕಕ್ಕೆ ಕರೆದೊಯ್ದು ನಮ್ಮಗಳ ಬದುಕನ್ನು ಒಂದಿಷ್ಟು ಸಹನೀಯವಾಗಿಸಿದ್ದು ಎಷ್ಟು ಸತ್ಯವೋ  ನಮ್ಮಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ್ದು ಕೂಡ ಅಷ್ಟೆ ಸತ್ಯ. ಕುವೆಂಪು ನಂತರ ನಮಗೆ ಜಿಎಸ್ಎಸ್ ಇದ್ದರು ಈಗ ಜಿಎಸ್ಎಸ್ ನಂತರ _________ ಎನ್ನುವ ಪ್ರಶ್ನೆಯೊಂದು ನಮ್ಮ ಮನದಲ್ಲಿ ಮೂಡುವುದು ಸಹಜ. ಜಿಎಸ್ಎಸ್ ಕೂಡ ತಮ್ಮ ಗುರು ಕುವೆಂಪು ಅವರಂತೆ ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಉತ್ಕೃಷ್ಟ ಗುರು-ಶಿಷ್ಯ ಪರಂಪರೆಯನ್ನೇ ಬೆಳೆಸಿದರು. ಅದಕ್ಕೆಂದೇ ಯು. ಆರ್. ಅನಂತಮೂರ್ತಿ ಅವರು ಜಿಎಸ್ ಎಸ್ ಅವರನ್ನು 'ನಮ್ಮ ಕಾಲದ ದ್ರೋಣ' ಎಂದು ಕರೆಯುತ್ತಾರೆ. ಜಿಎಸ್ಎಸ್ ಕನ್ನಡ ಸಾಹಿತ್ಯದಲ್ಲಿ ತಮ್ಮೊಂದಿಗೆ ಒಂದು ದೊಡ್ಡ ಶಿಷ್ಯ ಸಮೂಹವನ್ನೇ ಕಟ್ಟಿ ಬೆಳೆಸಿದರು. ಜಿಎಸ್ಎಸ್ ಅವರ ಈ ಗುಣವನ್ನು ದುಂಡಿರಾಜ್ ತಮ್ಮ 'ತೆಂಗಿನ ಮರ' ಕವಿತೆಯಲ್ಲಿ ಬಹು ವಿಶಿಷ್ಟವಾಗಿ ಕಟ್ಟಿಕೊಟ್ಟಿರುವರು.


          ಮರಗಳಲ್ಲಿ
          ತೆಂಗಿನ ಮರ
          ಕವಿಗಳಲ್ಲಿ ಇವರು
          ಅದೇ ಥರ
          ಎತ್ತರ
          ಸರಳ, ನೇರ

          ನೆಲದ ಸಾರವನ್ನೆಲ್ಲ ಒಬ್ಬರೇ
          ಹೊಟ್ಟೆ ಬಾಕನಂತೆ ಹೀರಿ
          ಅಡ್ಡಾದಿಡ್ಡಿ ಬೆಳೆದು
          ಎಲ್ಲ ಕಡೆಗೂ ಗೆಲ್ಲು
          ಚಾಚಿದವರಲ್ಲ

          ಗಾಳಿ ಬೆಳಕು
          ತಾವಷ್ಟೇ ಕುಡಿದು
          ಬೇರೆ ಕುಡಿ ಚಿಗುರದಂತೆ
          ನೆರಳು ರಾಚಿದವರಲ್ಲ
       
          ಬೆಳೆಯುವಂತೆ ತೆಂಗಿನ
          ತೋಟದಲ್ಲಿ ಬಾಳೆ,
          ಕೋಕೋ, ಅಡಿಕೆ, ವೀಳ್ಯದೆಲೆ
          ಬೆಳೆಸಿದರು ನೂರಾರು
          ಸಾಹಿತಿಗಳನ್ನು ತಮ್ಮ
          ಜೊತೆ ಜೊತೆಯಲ್ಲೆ 

      ಜಿಎಸ್ಎಸ್ ಭೌತಿಕವಾಗಿ  ನಮ್ಮಿಂದ  ದೂರಾದರೂ ತಮ್ಮ ಕವಿತೆಗಳ ಮೂಲಕ ಅವರು ಎಂದಿಗೂ ನಮ್ಮೊಂದಿಗಿರುತ್ತಾರೆ. ಈ ಸಮನ್ವಯದ ಕವಿಗೆ ಒಂದು ಪುಟ್ಟ ಕವನದ ಮೂಲಕ ಭಾವಪೂರ್ಣ ನಮನಗಳು. 

                             ಹಚ್ಚಿದರು ಹಣತೆ 


                                     ಸಿಡಿದು ಬಂತೊಂದು 
                                     ಬೆಂಕಿಯ ಕಿಡಿ 
                                     ರಸಋಷಿ  (ಕುವೆಂಪು) ಯ 
                                     ಯಜ್ಞ ಕುಂಡದಿಂದ 


                                    ಗುರು ಹಚ್ಚಿದ  ಹಣತೆಯಲಿ 
                                    ಬೆಳಗಿದವರು ನೀವು 
                                    ಗುರುವಿನಂತೆ ಶಿಷ್ಯ 
                                    ಕಂಡಿತು ಈ ಜಗವು 


                                    ಸುತ್ತಲೂ ಕತ್ತಲೆಯೊಳಗೆ 
                                    ಪ್ರೀತಿಯ ಹಣತೆ ಹಚ್ಚಿ 
                                    ಉಣಬಡಿಸಿದಿರಿ ಸಾಹಿತ್ಯದೂಟ 
                                    ಅನುಭವದ ಜೋಳಿಗೆ ಬಿಚ್ಚಿ 


                                    ಭೋರ್ಗರೆಯುತ್ತಿತ್ತು  ನಿಮ್ಮಲ್ಲಿ 
                                    ಕನ್ನಡದ ಅಭಿಮಾನ 
                                    ಮುಗ್ಧ ನಗುವಿನ ಹಿಂದೆ 
                                    ಜಗವ ಮಣಿಸುವ ಸ್ವಾಭಿಮಾನ 


                                    ನವ್ಯ ನವೋದಯ 
                                    ಬಂಡಾಯದ ಹಣೆಪಟ್ಟಿ 
                                    ಹಚ್ಚಿಕೊಂಡವರಲ್ಲ 
                                    ಅದಕ್ಕೆಂದೇ ರಾಷ್ಟ್ರಕವಿಯ ಪಟ್ಟ 


                                    ಕಳಚಿಕೊಂಡವರು ನೀವು 
                                    ಹಮ್ಮು ಬಿಮ್ಮಿನ ಸಂಕೋಲೆ 
                                    ಕೊನೆ ಉಸಿರಿನಲ್ಲೂ  
                                    ಕನ್ನಡದ  ಪ್ರೇಮ ಬತ್ತದ ಸೆಲೆ 


                                     ರಾಷ್ಟ್ರಕವಿಯಾದರೂ 
                                     ಅದೇ ನಿರ್ಲಿಪ್ತ ಮನ 
                                     ಹಾಡು ಹಕ್ಕಿಗೆ ಬೇಕೇ 
                                     ಬಿರುದು ಸನ್ಮಾನ 


                                     ಗುರುವಿನಂತೆ ನೀವು 
                                     ಹಚ್ಚಿದಿರಿ ಹಣತೆ ನೂರಾರು 
                                     ಸದ್ದುಗದ್ದಲದಾಚೆ ನಿಂತು 
                                     ನಿಮ್ಮ ನೆನೆಯುವ ನಾವು ಧನ್ಯರು 

                                                       -ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment