Monday, December 2, 2013

ಮೈನಾ: ಒಂದು ಸುಂದರ ದೃಶ್ಯ ಕಾವ್ಯ



     







       



                ಮೊನ್ನೆ 'ಮೈನಾ' ಎನ್ನುವ ಕನ್ನಡ ಸಿನಿಮಾ ನೋಡಿದೆ. ಹಲವು ದಿನಗಳ ನಂತರ ನೋಡಿದ ಉತ್ತಮ ಕನ್ನಡ ಸಿನಿಮಾವಿದು.  ಇಲ್ಲಿ ನಾನು ಉತ್ತಮ ಸಿನಿಮಾ ಎಂದು  ಹೇಳಲು ಕಾರಣ ಈ ದಿನಗಳಲ್ಲಿ ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಕುಳಿತು ನೋಡುವಂಥ ಸದಭಿರುಚಿಯ ಸಿನಿಮಾಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇಂಥದ್ದೊಂದು ನಿರಾಸೆಯ ನಡುವೆಯೂ 'ಮೈನಾ' ದಂಥ ಸಿನಿಮಾಗಳ ನಿರ್ಮಾಣ ಅದೊಂದು ಆಶಾದಾಯಕ ಬೆಳವಣಿಗೆ ಎನ್ನಬಹುದು. ಜೊತೆಗೆ ಇಂಥ ಸಿನಿಮಾಗಳಿಗೆ ಪ್ರೇಕ್ಷಕರಿಂದ ದೊರೆಯಬೇಕಾದ ಉತ್ತೇಜನ ಮತ್ತು ಪ್ರೋತ್ಸಾಹ ದೊರೆಯದಿರುವುದು ವಿಪರ್ಯಾಸದ ಸಂಗತಿ. ಈ ವಿಷಯದಲ್ಲಿ ನಮ್ಮ ಕನ್ನಡದ ಸಿನಿಮಾ ಪ್ರೇಕ್ಷಕ ವರ್ಗ ನೆರೆಯ ತಮಿಳು ಮತ್ತು ಮಲೆಯಾಳಿ ಸಿನಿಮಾಗಳ ಪ್ರೇಕ್ಷಕರಿಂದ ಕಲಿಯ ಬೇಕಾದದ್ದು ಬಹಳಷ್ಟಿದೆ. ಇರಲಿ ಈಗ ನಾನು ಮತ್ತೆ 'ಮೈನಾ' ಚಿತ್ರದ ವಿಷಯಕ್ಕೆ ಬರುತ್ತೇನೆ. ಹಾಸ್ಯನಟನಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಾಗಶೇಖರ ಅವರ ನಿರ್ದೇಶನದ ಮೂರನೇ ಸಿನಿಮಾವಿದು. ಈ ಮೊದಲು 'ಅರಮನೆ' ಮತ್ತು 'ಸಂಜು ವೆಡ್ಸ್ ಗೀತಾ' ಸಿನಿಮಾಗಳನ್ನು ನಿರ್ದೇಶಿಸಿ ಗಾಂಧಿ ನಗರದ ನಿರ್ಮಾಪಕರಿಂದ ಮತ್ತು ಕನ್ನಡದ ಪ್ರೇಕ್ಷಕರಿಂದ ಸೈ  ಎನಿಸಿಕೊಂಡ ನಿರ್ದೇಶಕನೀತ. 'ಅರಮನೆ' ಮತ್ತು 'ಸಂಜು ವೆಡ್ಸ್ ಗೀತಾ' ಎರಡೂ ವಿಭಿನ್ನ ಕಥೆಯ ಸಿನಿಮಾಗಳು. ಅವರ ನಿರ್ದೇಶನದ 'ಮೈನಾ' ಕೂಡ ಮೊದಲೆರಡು ಸಿನಿಮಾಗಳಿಂದ ವಿಭಿನ್ನವಾಗಿದ್ದರೂ ಕಥೆಯ ಜೀವಾಳ ಮಾತ್ರ ಮನುಷ್ಯ ಸಂಬಂಧಗಳೇ.

         ಪೋಲೀಸ್ ಇಲಾಖೆಯ ದಾಖಲೆಗಳಲ್ಲಿ ಸರಣಿ ಹಂತಕನೆಂದೇ ಖ್ಯಾತನಾದ ಸತ್ಯನನ್ನು ಚೆನ್ನೈನ ಸಮುದ್ರ ತೀರದಲ್ಲಿ ಕರ್ನಾಟಕದ ಪೋಲಿಸರು ಬಂಧಿಸುವುದರೊಂದಿಗೆ 'ಮೈನಾ' ಸಿನಿಮಾದ ಕಥೆ ಪ್ರಾರಂಭವಾಗುತ್ತದೆ. ಈ ಅಪಾದಿತನೆ ಸಿನಿಮಾದ ನಾಯಕ ಕೂಡ ಹೌದು. ಅವನನ್ನು ಬಂಧಿಸಿರುವ ಪೋಲೀಸ್ ಅಧಿಕಾರಿಗೆ ಸತ್ಯನನ್ನು ಕಂಡರೆ ಒಂದಿಷ್ಟು ಪ್ರೀತಿ ಜೊತೆಗೆ ವಿಶ್ವಾಸ ಕೂಡ ಇದೆ. ಆ ವಿಶ್ವಾಸವೇ ಸತ್ಯನ  ಬದುಕಿನ  ಕಥೆ ಬಿಚ್ಚಿಕೊಳ್ಳಲು ಕಾರಣವಾಗುತ್ತದೆ. ಸತ್ಯ ರೀಯಾಲಿಟಿ ಷೋ ಒಂದರಲ್ಲಿ ಭಾಗವಹಿಸಲು ಬೆಳಗಾವ ಮತ್ತು ಗೋವಾ ಮಧ್ಯದಲ್ಲಿರುವ ದೂದ ಸಾಗರ ರೈಲು ನಿಲ್ದಾಣಕ್ಕೆ ಬಂದಿಳಿದಿರುವ ಹುಡುಗ. ಯಾರಿಗೂ ಕೇಡು ಬಗೆಯದ ತಾನಾಯಿತು ತನ್ನ ಬದುಕಾಯಿತು ಎನ್ನುವಂತ ಅಮಾಯಕ ಹುಡುಗನಾತ.  ರೀಯಾಲಿಟಿ ಷೋ ನಲ್ಲಿ ಗೆದ್ದು ಬರುವ ಹಣದಿಂದ ಬೆಂಗಳೂರಿನಲ್ಲಿ ಒಂದು ಸ್ವಂತದ  ಜಿಮ್ ಪ್ರಾರಂಭಿಸಬೇಕೆನ್ನುವ ಆಸೆ ಸತ್ಯನದು. ಜೊತೆಗೆ  ಅಪ್ಪ ಅಮ್ಮನ ಕನಸುಗಳು ಅವನ ಈ ಆಸೆಗೆ ನೀರೆರೆಯುತ್ತವೆ.

            ಷೋ ನ ಎರಡನೇ ದಿನವೇ ಅವನಿಗೆ ರೈಲಿನಲ್ಲಿ ನಾಯಕಿಯ ಭೇಟಿಯಾಗುತ್ತದೆ.  ಕಾಲಿಲ್ಲದ ಅಂಗವಿಕಲ ಬಿಕ್ಷುಕನಂತೆ ವೇಷಧರಿಸಿ  ಬಿಕ್ಷೆ ಬೇಡುತ್ತ ಹೋಗುತ್ತಿದ್ದವನನ್ನು ನಾಯಕಿಯ  ಸ್ನಿಗ್ಧ ಸೌಂದರ್ಯ ಒಂದು ಕ್ಷಣ ಹಿಡಿದು ನಿಲ್ಲಿಸುತ್ತದೆ. ಕಿಟಕಿಯ ಪಕ್ಕ ಕುಳಿತು ನಿಸರ್ಗದ ಚೆಲುವನ್ನು ಸವಿಯುತ್ತಿದ್ದ  ಅವಳೋ ಸೌಂದರ್ಯದೊಂದಿಗೆ ಸ್ಪರ್ಧೆಗಿಳಿದಂತೆ ಕಾಣುವ  ಚೆಲುವೆ.  ಅವಳ ಆ ನಗು ಹಾಲು ಚೆಲ್ಲಿದ ಬೆಳ್ಳನೆಯ  ಬೆಳದಿಂಗಳು. ಬಿಕ್ಷೆಗಾಗಿ ಕೈ ಮುಂದೆ ಚಾಚಿದವನ ಕೈಗೆ ನೂರರ ನೋಟನ್ನಿತ್ತು ತನ್ನ ಮಂದ ಸ್ವರದಲ್ಲಿ ನುಡಿಯುತ್ತಾಳೆ 'ಇದು ನಾನು ಕಷ್ಟ ಪಟ್ಟು ದುಡಿದ ಹಣ. ದಯವಿಟ್ಟು misuse ಮಾಡ್ಬೇಡಿ'. ರೈಲಿನಿಂದ ಕೆಳಗಿಳಿದವನಿಗೆ ಪ್ರಪಂಚವನ್ನೇ ಗೆದ್ದ  ಪುಟ್ಟ ಮಗುವಿನ  ಸಂಭ್ರಮ.

            ಆ ರೀಯಾಲಿಟಿ ಷೋ ನಲ್ಲಿ ಎರಡು ತಂಡಗಳಿವೆ. ಸಿನಿಮಾದ ನಾಯಕ ಸತ್ಯನ ತಂಡ ಆ ದಿನ ಗಳಿಸಿದ ಹಣ ಎದುರಾಳಿ ತಂಡಕ್ಕಿಂತ ಒಂದಿಷ್ಟು ಕಡಿಮೆ. ಸತ್ಯನ ಹತ್ತಿರ ನೂರು ರುಪಾಯಿಗಳಿವೆ ಎಂದು ಆ ಕಾರ್ಯಕ್ರಮದ ನಿರೂಪಕನಿಗೆ  ಗೊತ್ತು. ಆ ಹಣವನ್ನು ಸೇರಿಸಿದಲ್ಲಿ ಸತ್ಯನ ತಂಡ ಅವತ್ತಿನ ಸ್ಪರ್ಧೆಯಲ್ಲಿ ಗೆಲ್ಲುವುದು ಗ್ಯಾರಂಟಿ. ಆ ಗುಂಪಿಗೂ ಗೆಲುವು ಬೇಕಿದೆ. ಯಾರು ಎಷ್ಟೇ ಒತ್ತಾಯ ಮಾಡಿದರೂ ಸತ್ಯ ತನ್ನಲ್ಲಿರುವ ಆ ಸ್ನಿಗ್ಧ ಸೌಂದರ್ಯದ ಚೆಲುವೆ ಕೊಟ್ಟಿರುವ  ಹಣ ಬಳಸಿಕೊಳ್ಳಲು ಸಿದ್ಧನಿಲ್ಲ. ಅದು ಅವನಿಗೆ ಹಣಮಾತ್ರವಲ್ಲ. ಅದವಳ ನೆನಪು ತನ್ನ ಪ್ರಿಯತಮೆಯ ಒಲವಿನ ಉಡುಗೊರೆ. ಆ  ಮಧುರ ನೆನಪನ್ನು ಕಳೆದುಕೊಳ್ಳಲು ಅವನ ಮನಸ್ಸು ಒಪ್ಪುತ್ತಿಲ್ಲ. ತನ್ನ ಪ್ರೀತಿಗಾಗಿ ಕೊನೆಗೂ ಸತ್ಯ ರೀಯಾಲಿಟಿ ಷೋನಿಂದ ಹೊರಬರುತ್ತಾನೆ. ಹೀಗೆ ಹೊರಬಂದವನಿಗೆ ತನ್ನ ಪ್ರಿಯತಮೆಯನ್ನು ಕಾಣುವ ಅವಳಲ್ಲಿ ತನ್ನ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳುವ ತವಕ. ಅವನಿಗೆ ಗೊತ್ತಿದೆ ಅವಳು ಪ್ರತಿದಿನ ತಾನು ಬಿಕ್ಷೆ ಬೇಡಿದ ರೈಲಿನಲ್ಲೇ ದಿನಕ್ಕೆ ಎರಡು ಬಾರಿ ಸಂಚರಿಸುತ್ತಾಳೆಂದು.

           ಮರುದಿನ ಸತ್ಯ ಮತ್ತದೇ ರೈಲಿನ ಅವಳಿದ್ದ ಭೋಗಿಯಲ್ಲಿ ಆಕೆಯನ್ನು ಕಾಣಲು ಬರುತ್ತಾನೆ.  ದಿನಪತ್ರಿಕೆ ಮಾರುವವನಾಗಿ ತೆವಳುತ್ತ  ಅವಳಿದ್ದಲ್ಲಿಗೆ ಬಂದವನನ್ನು   ಕರೆದು ಪತ್ರಿಕೆ ಕೊಳ್ಳುತ್ತಾಳೆ. ಅವಳ ಕಣ್ಣ ಮೆಚ್ಚುಗೆಗಾಗಿ ಕಾದವನಿಗೆ ಅವಳು ನಿರಾಸೆ ಮಾಡಲಾರಳು. ಇಬ್ಬರದೂ  ಪ್ರೀತಿಗಾಗಿ  ಹಂಬಲಿಸುವ ಹೃದಯ. ಸತ್ಯನ ಒಡನಾಟದಿಂದ  ಅವಳಿಗೆ ಬದುಕು  ಅದು  ಬಣ್ಣಗಳ ಚಿತ್ತಾರ ಎಂದೆನಿಸುತ್ತದೆ. ಹಸಿರುಹೊದ್ದು ಮಲಗಿರುವ ಬೆಟ್ಟಗಳ ನಡುವೆ ಭೋರ್ಗರೆದು ಹರಿಯುತ್ತ ನದಿ ವಸುಂಧರೆಯ ಒಡಲು ಸೇರುತ್ತಿರುವ ಆ ನಿರ್ಜನ ತಾಣದಲ್ಲಿ ತನ್ನ ಪ್ರಿಯತಮೆಯ ವರ್ಣನೆಯನ್ನು ಆಲಿಸಲು ಸತ್ಯನಿಗೂ ಒಬ್ಬ ಜೊತೆಗಾರ ಬೇಕು. ಮನುಷ್ಯ ತನ್ನ ದುಃಖಕ್ಕೆ ಕಿವಿಯಾಗುವವರಿಗಿಂತ ತನ್ನ ಸಂತಸಕ್ಕೆ ಕಿವಿಯಾಗುವವರಿಗಾಗಿ ಹಂಬಲಿಸುತ್ತಾನೆ. ಇದು ಮನುಷ್ಯ ಸಹಜ ಸ್ವಭಾವ. ಸತ್ಯನ ಸಂತಸವನ್ನು ಹಂಚಿಕೊಳ್ಳಲು ಅಲ್ಲೊಂದು ಪಾತ್ರವನ್ನು ಸೃಷ್ಟಿಸಲಾಗಿದೆ. ಆತ ಸತ್ಯನ ಪ್ರೀತಿಗೆ ಸಾಕ್ಷಿಯಾಗುತ್ತಾನೆ. ಅವನ ಸಂತೋಷದಲ್ಲಿ ಭಾಗಿಯಾಗುತ್ತಾನೆ ಸಂಕಟದಲ್ಲಿ ನೆರವಾಗುತ್ತಾನೆ. ಹಿರಿಯಣ್ಣನಂತೆ ಬುದ್ದಿ ಹೇಳುತ್ತಾನೆ. ಪ್ರೀತಿಯ ಏಕತಾನತೆ ಪ್ರೇಕ್ಷಕನಿಗೆ ಕಾಡದಿರಲೆಂದು ನಕ್ಕು ನಗಿಸಲು ಅಲ್ಲೊಂದು ಕುರುಡು ಬಿಕ್ಷುಕನ  ಪಾತ್ರವಿದೆ. ನಿಜವಾದ ಸಂಗತಿಯೆಂದರೆ ಆತನದೂ  ಚಿತ್ರದ ನಾಯಕ ಸತ್ಯನಂತೆ ನಟನೆಯ ಕುರುಡುತನ. ಒಬ್ಬನ ನಟನೆ ಪ್ರೀತಿಗಾಗಿ ಇನ್ನೊಬ್ಬನದು ಎರಡ್ಹೊತ್ತಿನ ಹಿಡಿ ಅನ್ನಕ್ಕಾಗಿ. ಆ ಎರಡೂ ನಟನೆಗಳನ್ನು ಪ್ರೇಕ್ಷಕರು ಸಮೀಕರಿಸಿ ನೋಡಲೆಂದೇ ನಿರ್ದೇಶಕರು ಅತಿ ಜಾಣ್ಮೆಯಿಂದ ಸೃಷ್ಟಿಸಿರುವ ಪಾತ್ರವಿದು.

          ಈ ನಡುವೆ ನಾಯಕ ನಾಯಕಿಯರ ನಡುವೆ ಪ್ರೀತಿಯ ವಿನಿಮಯವಾಗುತ್ತದೆ. ಎಲ್ಲ ಪ್ರೇಮಿಗಳಂತೆ ಅವರು ಪ್ರೀತಿಯನ್ನು ಐ ಲವ್ ಯು ಎನ್ನುವ ಅರ್ಥ ಕಳೆದುಕೊಂಡ ಶಬ್ದಗಳಲ್ಲಿ ಹೇಳಲಾರರು. ಅದಕ್ಕವರಿಟ್ಟ ಹೆಸರು ಕಲರ್ ಫುಲ್ ಎಂದು. ಇಬ್ಬರೂ ಒಬ್ಬರನ್ನೊಬ್ಬರು ನೋಡಿ ಕಲರ್ ಫುಲ್ ಎಂದು ಹೇಳಿದ ಸಂದರ್ಭಗಳೆಷ್ಟೋ. ನಾಯಕನ ಕನಸುಗಳಲ್ಲಿ ನಾಯಕಿ ಮತ್ತು ನಾಯಕಿಯ ಮಧುರ ನೆನಪುಗಳಲ್ಲಿ ನಾಯಕ ಇಬ್ಬರೂ ಕೈ ಕೈ ಹಿಡಿದು ಹಾಡುತ್ತಾರೆ ಕುಣಿಯುತ್ತಾರೆ. ಈ ಪ್ರೇಮದ ಪರವಶತೆಯಲ್ಲೇ ಅವಳ ಕೋಗಿಲೆಯ ಕಂಠ  ತನ್ಹೇಸರು 'ಮೈನಾ' ಎಂದು ಉಲಿಯುತ್ತದೆ. ಮುಂದೇನಾಗುತ್ತದೆ ಎಂದು ಉಸಿರು ಬಿಗಿ ಹಿಡಿದು ನೋಡುವ ಸರದಿ ಪ್ರೇಕ್ಷಕನದು. ಏಕೆಂದರೆ ಆ ಪ್ರೀತಿಯ ಹುಡುಗಿ ಮೈನಾಗೆ ಗೊತ್ತಿಲ್ಲ ತಾನು ಪ್ರೀತಿಸುತ್ತಿರುವ ಹುಡುಗ ಕಾಲಿಲ್ಲದ ನಾಟಕ ಆಡುತ್ತಿರುವ ಸುಳ್ಳುಗಾರನೆಂದು. ಸುಳ್ಳನ್ನು ಸತ್ಯವೆಂದು ಆ ಕ್ಷಣಕ್ಕೆ ನಂಬಿಸಬಹುದಾದರೂ ಅದನ್ನು ಕೊನೆಯವರೆಗೂ ನಂಬಿಸುವುದು ಸತ್ಯನಂಥ ಪ್ರೀತಿಯ ಹುಡುಗನಿಗೂ ಸಾಧ್ಯವಿಲ್ಲ. ಕೊನೆಗೂ ಆ ಸುಳ್ಳಿಗೊಂದು ತೆರೆ ಬೀಳುವ ಸಂದರ್ಭ ಎದುರಾಗುತ್ತದೆ.

          ಪ್ರತಿದಿನದಂತೆ ಆ ದಿನವೂ ಸತ್ಯ ಅವಳೆದುರು ಕುಳಿತು ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಾನೆ. ಆಕೆ ತನ್ನ ಪ್ರಿಯತಮನ ಮಾತುಗಳಿಗಾಗಿ ಕಾತರಿಸುತ್ತ  ಅವನ ಕಣ್ಣುಗಳಲ್ಲಿನ  ತನ್ನ ಪ್ರತಿಬಿಂಬವನ್ನು ಹುಡುಕುತ್ತಿದ್ದಾಳೆ. ಇಬ್ಬರೂ  ಒಬ್ಬರನ್ನೊಬ್ಬರು ನೋಡುತ್ತ ಪ್ರಪಂಚವನ್ನೇ ಮರೆತ ಕ್ಷಣವದು. ಇದೇ ಸಮಯವೆಂದು ಹೊಂಚು ಹಾಕಿದ ಕಳ್ಳ ಅವಳ ಬ್ಯಾಗಿನೊಂದಿಗೆ ಓಟ ಕೀಳುತ್ತಾನೆ. ಇಬ್ಬರೂ ವಾಸ್ತವಕ್ಕೆ ಮರಳಿದಾಗ ನಡೆದ ಅನಾಹುತದ ಅರಿವಾಗುತ್ತದೆ. ಸತ್ಯ ರೈಲಿನಿಂದ ಹೊರ ಜಿಗಿದು ಕಳ್ಳನನ್ನು ಬೆನ್ನಟ್ಟಿ ಬ್ಯಾಗನ್ನು ಮರಳಿ ತರುತ್ತಾನೆ. ಅದುವರೆಗೂ ತಾನು ನಂಬಿದ್ದು ಸುಳ್ಳೆಂದು ನಾಯಕಿಗೆ ಅರಿವಾಗುತ್ತದೆ. ನಾಯಕನ ಪ್ರೀತಿಯನ್ನು ತಿರಸ್ಕರಿಸಿ  ಆಕೆ ತೆವಳುತ್ತ ಸಾಗುವ ದೃಶ್ಯ ಆ ಕ್ಷಣಕ್ಕೆ ಇಡೀ ಪ್ರೇಕ್ಷಕ ಸಮೂಹವನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಚಿತ್ರದ ನಾಯಕಿ ಮೈನಾ ಅಂಗವಿಕಲೆ. ಪೋಲಿಯೋ ದಿಂದ ತನ್ನೆರಡೂ ಕಾಲುಗಳನ್ನು ಕಳೆದುಕೊಂಡಿರುವ ಅವಳಿಗೆ ನಡೆಯಲು ಬಾರದು ಎನ್ನುವ ಸತ್ಯವನ್ನು ಒಪ್ಪಿಕೊಳ್ಳಲು ಕೆಲವು ಕ್ಷಣಗಳೇ ಬೇಕಾಗುತ್ತವೆ. ಸುಳ್ಳು ಹೇಳಿ ತನ್ನ ಪ್ರೀತಿ ಗಿಟ್ಟಿಸಿದ ನಾಯಕನ ಪ್ರೀತಿಯನ್ನು ಮೈನಾ ತಿರಸ್ಕರಿಸುತ್ತಾಳೆ. ನಿನ್ನನ್ನು ಪ್ರೀತಿಸುತ್ತೇನೆ ಎಂದ ಸತ್ಯನ ಮಾತಿಗೆ ಮೈನಾ ಅನುಕಂಪದ ಪ್ರೀತಿ ನನಗೆ ಬೇಕಿಲ್ಲ ಎಂದುತ್ತರಿಸುತ್ತಾಳೆ. ನಿನಗೆ ಕಾಲಿಲ್ಲದ ವಿಷಯ ನನಗೆ ಮೊದಲೇ ಗೊತ್ತಿತ್ತು ಎಂದು ಆತ ನುಡಿದಾಗ ಮತ್ತೊಮ್ಮೆ ಅಚ್ಚರಿ ಪಡುವ ಸರದಿ ಪ್ರೇಕ್ಷಕರದು. ತನ್ನ ಪ್ರೀತಿಯ ಪ್ರಾರಂಭದಲ್ಲಿ ಅದೊಂದು ದಿನ ಅವಳನ್ನು ಹಿಂಬಾಲಿಸಿ ಹೋದ ಸತ್ಯನಿಗೆ ಆಕೆ ಅಂಗವಿಕಲೆ ಎಂದು ಗೊತ್ತಾಗುತ್ತದೆ. ಆದರೆ ಆತ ಪ್ರೀತಿಸುವುದು ಅವಳ ದೈಹಿಕ ಸೌಂದರ್ಯವನ್ನಲ್ಲ. ಬದುಕಿನುದ್ದಕ್ಕೂ ನಾನು ನಿನ್ನ ಜೊತೆಗಿರುವೆ ಎಂದು ಅಭಯ ನೀಡಿದ ಆ ಘಳಿಗೆ ಮೈನಾ ಸತ್ಯನ ಪ್ರೀತಿ ಎದುರು ಸೋಲುತ್ತಾಳೆ. ನಿಜಸ್ಥಿತಿಯನ್ನು ನಂತರ ತಿಳಿದು ನಾಯಕ ನಾಯಕಿಯನ್ನು ಪ್ರೀತಿಸಲು ಮುಂದಾಗಿದ್ದರೆ ಅದು ಅನುಕಂಪದ ಪ್ರೀತಿಯಾಗುತ್ತಿತ್ತು. ಆದ್ದರಿಂದ ಇಂಥದ್ದೊಂದು ಸಮಸ್ಯೆಯಿಂದ ಪಾರಾಗುವಲ್ಲಿ ನಿರ್ದೇಶಕರು ಜಾಣ್ಮೆ ಮೆರೆದಿದ್ದಾರೆ. ಸತ್ಯನಿಗೆ ಮೈನಾಳ ಪರಿಸ್ಥಿತಿಯನ್ನು ಮೊದಲೇ ಪರಿಚಯಿಸಿ ಇಲ್ಲಿ ಪ್ರೀತಿಯನ್ನು ಗೆಲ್ಲಿಸಿದ್ದಾರೆ. ಸತ್ಯ ಮತ್ತು ಮೈನಾ ಒಂದಾಗುವುದನ್ನು ಕುರುಡನಂತೆ ನಟಿಸುವ ಬಿಕ್ಷುಕ ದೂರದಲ್ಲಿ ನಿಂತು ನೋಡುವ ದೃಶ್ಯ ಆ ಸನ್ನಿವೇಶಕ್ಕೆ ಸಂದರ್ಭೋಚಿತವಾಗಿದೆ.

      ಸಿನಿಮಾದಲ್ಲಿ  ಸತ್ಯ ಮತ್ತು ಮೈನಾಳ ಪ್ರೀತಿಗೆ ಅಡ್ಡಿಯುಂಟು ಮಾಡುವ ವಿಲನ್ ಗಳಿಲ್ಲ. ಮದುವೆಯಾಗಿ ಆ ಯುವಜೋಡಿ ದೂರದ ಬೆಂಗಳೂರಿನಲ್ಲಿ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಸತ್ಯನಿಗಿರುವುದು ಒಂದೇ ಆಸೆ ತನ್ನ ಪ್ರೀತಿಯ ಹುಡುಗಿ ಎಲ್ಲರಂತೆ ನಡೆಯುವಂತಾಗಬೇಕು. ಆದರೆ ಅವಳಿಗೋ ನಾನೆಲ್ಲಿ ತನ್ನ ಪ್ರೀತಿಯ ಹುಡುಗನ ತೋಳ ತೆಕ್ಕೆಯಿಂದ ದೂರಾಗುವೇನೋ  ಎನ್ನುವ ಆತಂಕ. ಈ ಕೈ ಹಿಡಿದು ನಡೆಸುವ, ಮಗುವಿನಂತೆ ತೋಳುಗಳಲ್ಲಿ ಎತ್ತಿಕೊಳ್ಳುವ ಮಧುರ ಅನುಭವ ಇವೆಲ್ಲ ನಾಳೆಯಿಂದ ಬರೀ ನೆನಪುಗಳಾಗಿ ಉಳಿಯುವ ಬೇಸರ ಅವಳದು. ಆದರೆ ಸತ್ಯನ ಪ್ರೀತಿಯೇದುರು ಅವಳ ಹಠ ಮತ್ತೊಮ್ಮೆ ಸೋಲುತ್ತದೆ. ಅವಳನ್ನು ಪರೀಕ್ಷಿಸಿದ ಡಾ. ಅನಿರುದ್ಧ ದೇಸಾಯಿ ಮೈನಾ ಚಿಕಿತ್ಸೆಯ ನಂತರ ಸಹಜವಾಗಿ ನಡೆಯುವಳು ಎನ್ನುವ  ಭರವಸೆ ನೀಡುವನು. ಆದರೆ ಚಿತ್ರದ ಕಥೆ ತಿರುವು ಪಡೆಯುವುದೇ ಇಲ್ಲಿಂದ. ಮೈನಾಳ ಸೌಂದರ್ಯಕ್ಕೆ ಮನಸೋತ ಅನಿರುದ್ಧ ದೇಸಾಯಿಗೆ ಅವಳ ಮೇಲೆ ದೈಹಿಕ ವಾಂಛೆ ಬೆಳೆಯುತ್ತದೆ. ಮೈನಾಳನ್ನು ಸೇರಬೇಕೆನ್ನುವ ಅವನ ಆಸೆ ಅವಳ ನಗ್ನ ದೇಹವನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿಯುವಂತೆ ಪ್ರಚೋದಿಸುತ್ತದೆ. ಅದನ್ನೇ ಮುಂದಿಟ್ಟುಕೊಂಡು ಆತ ಮೈನಾಳನ್ನು ಬ್ಲಾಕ್ ಮೇಲ್ ಮಾಡಲಾರಂಭಿಸುವನು. ಒಂದೆಡೆ ಜೀವಕ್ಕೆ ಜೀವವಾಗಿ ಪ್ರೀತಿಸುವ ಪತಿ. ಇನ್ನೊಂದೆಡೆ ದೈಹಿಕ ತೃಷೆಯಿಂದ ಉನ್ಮತ್ತಗೊಂಡ  ಮೃಗ. ಹೇಳಲೂ ಆಗದ ಅನುಭವಿಸಲೂ ಆಗದ ಸ್ಥಿತಿಯಲ್ಲಿ ಮೈನಾಳ ಮಾನಸಿಕ ತೊಳಲಾಟ ಆ ಕ್ಷಣ ಪ್ರೇಕ್ಷಕರ  ಮನಸ್ಸನ್ನು ಆರ್ದ್ರವಾಗಿಸುತ್ತದೆ.  ವಿಷಯ ತಿಳಿದ ಸತ್ಯ ಡಾ.ಅನಿರುದ್ಧ ದೇಸಾಯಿಯ ಕೊಲೆ ಮಾಡುತ್ತಾನೆ. ಆದರೆ ಇಡೀ ಸತ್ಯವನ್ನು  ಮೈನಾಳಿಂದ ಮುಚ್ಚಿಡುತ್ತಾನೆ. ಆ ಪರಿಸರದಲ್ಲಿ ಬದುಕುವುದು ಅಸಹನೀಯ ಎಂದೆನಿಸಿದಾಗ  ಹೊಸ ಪರಿಸರದಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳಲು ಇಬ್ಬರೂ ಚೆನ್ನೈಗೆ ಪಯಣಿಸುತ್ತಾರೆ.

             ಇತ್ತ ಬೆಂಗಳೂರಿನಲ್ಲಿ ರಾಜಕಾರಣಿ ಸಂಜಯ ದೇಸಾಯಿ ತನ್ನ ತಮ್ಮನ ಕೊಲೆಗಾರನನ್ನು ಬಂಧಿಸುವಂತೆ ಪೋಲೀಸ್ ಇಲಾಖೆಯ ಮೇಲೆ ಒತ್ತಡ ತರುತ್ತಾನೆ. ಪೋಲೀಸ್ ಇಲಾಖೆ ಈ ಕೆಲಸವನ್ನು ದಕ್ಷ ಪೋಲೀಸ್ ಅಧಿಕಾರಿ ಶರತ್ ಕುಮಾರಗೆ ವಹಿಸುತ್ತದೆ. ಕೊನೆಗೂ ಪೋಲೀಸರು ಕೊಲೆಯ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗುವರು. ಮೈನಾಳ ಸ್ನೇಹಿತೆಯ ನೆರವಿನಿಂದ ಕೊಲೆಗಾರ ಸತ್ಯ ಚೆನ್ನೈನಲ್ಲಿರುವ ಸಂಗತಿ ಬಹಿರಂಗವಾಗಿ ಅವನನ್ನು ಬಂಧಿಸುತ್ತಾರೆ. ಇತ್ತ ರಾಜಕಾರಣಿ ಸಂಜಯ ದೇಸಾಯಿ ಸತ್ಯನನ್ನು ಕೊಲ್ಲಲು ಬಾಡಿಗೆ ಹಂತಕರನ್ನು ನೇಮಿಸುತ್ತಾನೆ. ಸತ್ಯನನ್ನು ಬೆಂಗಳೂರಿಗೆ ಕರೆತರುವ ಶರತ್ ಕುಮಾರ ಅವನನ್ನು ತನ್ನ ಸ್ನೇಹಿತನ ಸುಪರ್ದಿಗೆ ಒಪ್ಪಿಸಿ ಕಾನೂನಿನ ಮೂಲಕ ಸತ್ಯನನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ. ಬಂಧಿತನಾದ ಸತ್ಯನಿಗೆ ಮೈನಾಳದೆ ಚಿಂತೆ. ಅವಳನ್ನು ಕಾಣಲು ಅಲ್ಲಿಂದ ತಪ್ಪಿಸಿಕೊಳ್ಳಲು ಸಂಚು ರೂಪಿಸುತ್ತಾನೆ. ಕೊನೆಗೂ ತಪ್ಪಿಸಿಕೊಳ್ಳುವ ಸತ್ಯ ಮೈನಾಳನ್ನು ರೈಲು ನಿಲ್ದಾಣಕ್ಕೆ ಕರೆತರಲು ತನ್ನ ಸ್ನೇಹಿತನಿಗೆ ಸೂಚಿಸುವನು. ಸತ್ಯ ತಪ್ಪಿಸಿಕೊಂಡ ಸುದ್ದಿ ತಿಳಿದ ಹಂತಕರು ಅವನನ್ನು ಬೇಟೆಯಾಡಲು ಬೆನ್ನಟ್ಟುತ್ತಾರೆ. ಇನ್ನೊಂದೆಡೆ ಪೋಲೀಸ್ ಇಲಾಖೆಯೂ ಸತ್ಯನನ್ನು ಬಂಧಿಸಲು ಕಾರ್ಯತಂತ್ರ ರೂಪಿಸುತ್ತದೆ. ಸತ್ಯನ ಕೊಲೆಯ ಸಂಚಿನ ರಹಸ್ಯ ಅರಿತ ಪೋಲಿಸ್ ಅಧಿಕಾರಿ ಶರತ್ ಕುಮಾರ   ಅವನನ್ನು ಹಂತಕರಿಂದ ಉಳಿಸುತ್ತಾನೆ. ಸತ್ಯ ಮತ್ತು ಮೈನಾ ಒಂದಾಗುತ್ತಾರೆ. ಆದರೆ  ಅಷ್ಟರಲ್ಲೇ ಅನಾಹುತ ಸಂಭವಿಸುತ್ತದೆ. ರೈಲು ನಿಲ್ದಾಣವನ್ನು ಸುತ್ತುವರಿದ ಪೋಲೀಸರ ಗುಂಡಿಗೆ ಸತ್ಯ ಮತ್ತು ಮೈನಾರ  ದೇಹಗಳು ನೆಳಕ್ಕುರುಳುವುದರೊಂದಿಗೆ  ಚಿತ್ರ ಮುಗಿಯುತ್ತದೆ.

           ಸಿನಿಮಾದ ಮೊದಲರ್ಧ ಲವಲವಿಕೆಯಿಂದ ಕೂಡಿದ್ದರೆ ಉಳಿದರ್ಧದಲ್ಲಿ ಕಥೆಯ ಓಟ ಪಡೆದುಕೊಳ್ಳುವ ವೇಗ ಪ್ರೇಕ್ಷಕರನ್ನು ಒಂದಿಷ್ಟು ಗೊಂದಲಕ್ಕಿಡು ಮಾಡುತ್ತದೆ. ಎರಡುವರೆ ಗಂಟೆಗಳಿಗೆ ಮಾತ್ರ  ಸಿನಿಮಾ ಹೆಣೆಯ ಬೇಕೆಂಬ ಗಾಂಧಿನಗರದ ಸಿದ್ದ ಸೂತ್ರಕ್ಕೆ ಬದ್ದರಾದ ನಿರ್ದೇಶಕ ನಾಗಶೇಖರ ದ್ವಿತಿಯಾರ್ಧದಲ್ಲಿ ಕಥೆಯ ವೇಗಕ್ಕೆ ಒತ್ತು ನೀಡಿರುವರು. ಅದಕ್ಕೆಂದೇ ಅನಂತ ನಾಗ, ಸುಹಾಸಿನಿ, ಜೈ ಜಗದೀಶ, ರವಿವರ್ಮ  ಅವರಂಥ ಪ್ರತಿಭಾನ್ವಿತ ಕಲಾವಿದರ ಪಾತ್ರಗಳು ನೆಪಕ್ಕೆ ಮಾತ್ರ ಎನ್ನುವಂತೆ ಬಂದು ಹೋಗುತ್ತವೆ. ಇವರುಗಳ ಪ್ರತಿಭೆಯನ್ನು ನಿರ್ದೇಶಕರು ಸರಿಯಾದ ರೀತಿಯಲ್ಲಿ ದುಡಿಸಿಕೊಳ್ಳುವಲ್ಲಿ ಸೋತಿರುವರು. ಚಿತ್ರದ ನಾಯಕ ಸತ್ಯನ ಪಾತ್ರದಲ್ಲಿ  ನಟ ಚೇತನ್ ಅಭಿನಯ ಸಿನಿಮಾದ  ಮುಖ್ಯ ಜೀವಾಳ. ವಿದೇಶದಲ್ಲಿ ಓದಿರುವ ಈ ನಟ ಕಲೆಯ ಮೇಲಿನ ಆಸಕ್ತಿಯಿಂದ ಕರ್ನಾಟಕಕ್ಕೆ ಬಂದು ಅಭಿನಯ ತರಬೇತಿ ಪಡೆದವರು. ತಮ್ಮ ಮೊದಲ ಚಿತ್ರ 'ಆ ದಿನಗಳು' ಮೂಲಕ ಚಿತ್ರರಂಗದಲ್ಲಿ ಭದ್ರವಾಗಿ ತಳವೂರುವ ಭರವಸೆ ಮೂಡಿಸಿದ ನಟ. ನಾಯಕಿ ನಿತ್ಯಾ ಮೆನನ್ ಬೆಂಗಳೂರಿನ ಹುಡುಗಿ. ಆದರೆ ಹೆಸರು ಮಾಡಿದ್ದು ಮಲೆಯಾಳಂ ಮತ್ತು ತೆಲುಗು ಸಿನಿಮಾಗಳಲ್ಲಿ. ಅವರ ಸೌಂದರ್ಯ ಮತ್ತು ಅಭಿನಯ ಸಿನಿಮಾದ ಪ್ಲಸ್ ಪಾಯಿಂಟ್ ಗಳು. ತಮಿಳಿನ ಶರತ್ ಕುಮಾರ  ಖಡಕ್ ಪೋಲೀಸ್ ಅಧಿಕಾರಿಯ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿರುವರು. ಸಾಧು ಕೋಕಿಲ ಕೆಲವೇ  ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಪ್ರೇಕ್ಷಕರಿಗೆ ಹಾಸ್ಯದ ರಸದೌತಣ ನೀಡಿರುವರು. ಸತ್ಯ ಹೆಗಡೆ ಅವರ ಛಾಯಾಗ್ರಹಣ ಚಿತ್ರದ ಹೈಲೆಟ್. ಅವರ ಫೋಟೋಗ್ರಾಫಿ ಕಣ್ಣು ದೂದ ಸಾಗರನ ರಮಣೀಯ ದೃಶ್ಯವನ್ನು ಅತ್ಯಂತ ಸುಂದರವಾಗಿ ಸೆರೆ ಹಿಡಿದಿದೆ. ಸಿ. ಅಶ್ವತ್ಥ ಅವರ ಕಂಠದಲ್ಲಿ ಮೂಡಿ ಬಂದ ' ಕಾಣದ ಕಡಲಿಗೆ ಹಂಬಲಿಸಿದೆ ಮನ' ಹಾಡು ಕೇಳಲು ಇಂಪಾಗಿದೆ. ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಹಾಡಿರುವ 'ಮೊದಲ ಮಳೆಯಂತೆ' ಯುಗಳ ಗೀತೆ ಅನೇಕ ದಿನಗಳವರೆಗೆ ಕಾಡುತ್ತದೆ. ೧೯೬೫ ರಲ್ಲಿ ತೆರೆಕಂಡ 'ನಾಗ ಪೂಜಾ' ಚಿತ್ರದ ಎಲ್. ಆರ್. ಈಶ್ವರಿ ಹಾಡಿರುವ 'ಓ ಪ್ರೇಮದ ಪುಜಾರಿ' ಹಾಡನ್ನು ಈ ಚಿತ್ರದಲ್ಲಿ ಬಳಸಿಕೊಂಡಿರುವುದು ಸಿನಿಮಾದ ಇನ್ನೊಂದು ವಿಶೇಷ. ಶ್ರೇಯಾ ಘೋಷಾಲ ಅವರ ಕಂಠಸಿರಿಯಲ್ಲಿ ಹಾಡು ಸೊಗಸಾಗಿ ಮೂಡಿ ಬಂದಿದೆ.

            'ಮೈನಾ' ಚಿತ್ರದಲ್ಲಿ ಒಂದೆರಡು ನ್ಯೂನ್ಯತೆಗಳು ಕಂಡು ಬಂದರು ಒಟ್ಟಾರೆ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ದ್ವಂದ್ವಾರ್ಥ ಸಂಭಾಷಣೆಯಾಗಲಿ ಅಶ್ಲೀಲ ದೃಶ್ಯಗಳಾಗಲಿ ಇಲ್ಲದ ಸಿನಿಮಾವಿದು. ಕಥೆ ಮತ್ತು ತಾಂತ್ರಿಕವಾಗಿಯೂ ಸಿನಿಮಾ ಗೆದ್ದಿದೆ. ಒಂದು ಕಾಲದಲ್ಲಿ ನಿರ್ದೇಶಕನ ಮಾಧ್ಯಮವಾಗಿದ್ದ ಸಿನಿಮಾ ಕಾಲಾನಂತರದಲ್ಲಿ ಅನೇಕ ರೂಪಾಂತರಗಳನ್ನು ಹೊಂದಿ  ಅದು ನಾಯಕ ಪ್ರಧಾನ ಸಿನಿಮಾ ಎನ್ನುವ ಹಣೆಪಟ್ಟಿ ಅಂಟಿಸಿಕೊಂಡಿತು. ನಾಯಕನನ್ನು ಹೊರತು ಪಡಿಸಿ ಪೋಷಕ  ಪಾತ್ರಗಳೆಲ್ಲ ನೇಪಥ್ಯಕ್ಕೆ ಸರಿದದ್ದು ಈಗ ಇತಿಹಾಸ. ಹೀಗೆ ನಾಯಕ ನಟನನ್ನೇ ಕೇಂದ್ರವಾಗಿಟ್ಟುಕೊಂಡು ಸಿನಿಮಾ ರೀಲು ಸುತ್ತುತ್ತಿರುವ ಕನ್ನಡ ಚಿತ್ರೋದ್ಯಮದಲ್ಲಿ  ನಾಗಶೇಖರ, ಪ್ರಕಾಶ, ಚಂದ್ರು  ಅವರಂಥ ನಿರ್ದೇಶಕರು ಪುಟ್ಟಣ್ಣ ಕಣಗಾಲ ಅವರ ವಾರಸುದಾರರಂತೆ ಕಾಣಿಸುತ್ತಾರೆ.  ಇಂಥವರ ಸಂಖ್ಯೆ ಇನ್ನಷ್ಟು ಹೆಚ್ಚಲಿ ಎನ್ನುವುದೇ ಪ್ರಜ್ಞಾವಂತ ಪ್ರೇಕ್ಷಕರ ಹಾರೈಕೆ.

-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ



No comments:

Post a Comment