Wednesday, November 13, 2013

ಸಚಿನ್ ತೆಂಡೂಲ್ಕರ್: ಕ್ರಿಕೆಟ್ ಲೋಕದ ಅನರ್ಘ್ಯ ರತ್ನ

                                 (ಎರಡು ದಶಕಗಳ ಕಾಲ ನಮ್ಮನ್ನು ರಂಜಿಸಿದ ಸಚಿನ್ ನಿನಗೊಂದು ಸಲಾಂ)



         ನಾಳೆ  ೨೦೦ ನೇ ಟೆಸ್ಟ್ ಆಡುತ್ತಿರುವ ಸಚಿನ್ ಗೆ ಇದು ಕೊನೆಯ ಆಟ. ಇನ್ನು ಮುಂದೆ ಕ್ರಿಕೆಟ್ ಮೈದಾನದಲ್ಲಿ ಸಚಿನ್ ಆಟವನ್ನು ನಾವು ನೋಡಲಾರೆವು. ಸತತ ೨೪ ವರ್ಷಗಳಿಂದ ಕ್ರಿಕೆಟ್ ಆಟದ ಸೊಗಸನ್ನು ನಾವುಗಳೆಲ್ಲ ಸವಿಯುವಂತೆ ಮಾಡಿದ ವ್ಯಕ್ತಿ ಈ ಸಚಿನ್ ತೆಂಡೂಲ್ಕರ್. ಸಚಿನ್ ಬಗ್ಗೆ ಬರೆಯಲು ಕುಳಿತರೆ ಹೇಳಿದ್ದನ್ನೇ ಹೇಳಿದಂತಾಗುತ್ತದೆ ಎನ್ನುವ ಭಯ ಕಾಡಲಾರಂಭಿಸುತ್ತದೆ. ಏಕೆಂದರೆ ಆತನ ಬಗ್ಗೆ ಬರೆಯದ ಮತ್ತು ಹೇಳದ ಯಾವ ಮಾಧ್ಯಮವೂ ಇಲ್ಲ. ಬರಹ ಮಾಧ್ಯಮದಿಂದ ಎಲೆಕ್ಟ್ರಾನಿಕ್ ಮಾಧ್ಯಮಗಳವರೆಗೆ ಸಚಿನ್ ವ್ಯಾಪಿಸಿ ಬೆಳೆದು ನಿಂತ ರೀತಿ ನಿಜಕ್ಕೂ ವಿಸ್ಮಯ. ಎರಡು ದಶಕಗಳಿಂದ ಕಳಂಕ ರಹಿತ ಕ್ರಿಕೆಟ್ ಆಟ ಆಡುತ್ತ ಆ ಆಟಕ್ಕೊಂದು ವಿಶಿಷ್ಠ ಮೆರುಗು ತಂದ ಈ ಅದ್ಭುತ ಪ್ರತಿಭೆಯ ಆಟಗಾರನನ್ನು ಆತನ ಈ ವಿದಾಯದ ಸಂದರ್ಭ ಒಂದಿಷ್ಟು ಸ್ಮರಿಸೋಣ ಎನ್ನುವ ಕಾರಣಕ್ಕಾಗಿ ಈ ಲೇಖನ.

           ೧೯೮೯ ರಲ್ಲಿ ಸಚಿನ್ ತನ್ನ ೧೬ ನೇ ವಯಸ್ಸಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದಾಗ ನಾನಾಗ    ಬಿ. ಎ ಮೊದಲ ವರ್ಷದ ವಿದ್ಯಾರ್ಥಿ. ಆ ಮೊದಲು ಗವಾಸ್ಕರ್ ಮತ್ತು ಕಪಿಲ್ ದೇವ್ ಹೆಸರು ಕೇಳಿದ್ದೆನಾದರೂ ಕ್ರಿಕೆಟ್ ಆಟ ನೋಡಿರಲಿಲ್ಲ. ಸಚಿನ್ ಕ್ರಿಕೆಟ್ ಪ್ರಪಂಚದಲ್ಲಿ ಒಂದಾದ ಮೇಲೊಂದರಂತೆ ದಾಖಲೆ ಬರೆಯುತ್ತಿದ್ದಂತೆ ನನ್ನ ಸಮಕಾಲಿನ ಪೀಳಿಗೆಯಲ್ಲಿ ಆ ಆಟದ ಕುರಿತು ಒಂದಿಷ್ಟು ಕುತೂಹಲ ಮೂಡತೊಡಗಿತು. ಅದಾಗಲೇ ಕ್ರಿಕೆಟ್ ಆಟವನ್ನು ಆರಾಧಿಸುತ್ತಿದ್ದವರಲ್ಲಿ ಆ ಆಟದ ಬಗೆಗಿನ ಕುತೂಹಲ ಮತ್ತಷ್ಟು ಇಮ್ಮಡಿಸಿತು. ಕ್ರಿಕೆಟ್ ಆಟವನ್ನೇ ದ್ವೇಷಿಸುತ್ತಿದ್ದ ಹಿರಿಯ ಜೀವಗಳಲ್ಲಿ ಆ ಆಟವನ್ನು ನೋಡಬೇಕೆಂಬ ಆಸೆ ಮೊಳಕೆಯೊಡೆಯಿತು. ಒಂದರ್ಥದಲ್ಲಿ ಸಚಿನ್ ಈ ಎರಡು ದಶಕಗಳಲ್ಲಿ ಕ್ರಿಕೆಟ್ ಆಟವನ್ನು ಪ್ರಪಂಚದ ಮನೆ ಮತ್ತು ಮನಸ್ಸುಗಳಿಗೆ ಮುಟ್ಟಿಸಿ ಜನಪ್ರಿಯಗೊಳಿಸಿದ. ಆತನ ಕಳಂಕ ರಹಿತ ಆಟ, ಮಾನಸಿಕ ದೃಢತೆ, ವೃತ್ತಿ ಪಾವಿತ್ರ್ಯತೆ, ಆಟದ ಮೇಲಿನ ನೈಜ ಪ್ರೀತಿ ಈ ಎಲ್ಲ ಗುಣಗಳು ಆತನ ವ್ಯಕ್ತಿತ್ವವನ್ನು ಹಿಮಾಲಯದೆತ್ತರಕ್ಕೆ ತಂದು ನಿಲ್ಲಿಸಿವೆ. ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ಗೆ ಸಚಿನ್ ಮಾತ್ರ ಸಾಟಿ ಎನ್ನುವ ಮಾತು ಅಕ್ಷರಶ: ನಿಜ.

ಅದು ಅದ್ಭುತ ಆಟ


            ೧೯೯೮ ಎಪ್ರಿಲ್ ೨೨ ಅದು ಶಾರ್ಜಾದ ಕ್ರಿಕೆಟ್ ಮೈದಾನ. ಅಲ್ಲಿ ಆ ದಿನ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಕೋಕ ಕೋಲಾ ಕಪ್ ನ ಕೊನೆಯ ಲೀಗ್ ಪಂದ್ಯದಲ್ಲಿ ಮುಖಾಮುಖಾಯಾಗಿದ್ದವು. ಆ ಹೊತ್ತಿಗಾಗಲೇ ಆಸ್ಟ್ರೇಲಿಯಾ ತಂಡ ಫೈನಲ್ ಗೆ ಅರ್ಹತೆ ಗಿಟ್ಟಿಸಿದ್ದರಿಂದ ಆ ದಿನದ ಪಂದ್ಯ ಅವರಿಗೆ ಔಪಚಾರಿಕವಾಗಿತ್ತು. ಆದರೆ ಭಾರತೀಯ ತಂಡದ ಪರಿಸ್ಥಿತಿ ತೀರ ಭಿನ್ನವಾಗಿತ್ತು. ತ್ರಿಕೋನ ಸರಣಿಯಲ್ಲಿನ ಇನ್ನೊಂದು ತಂಡವಾದ ನ್ಯೂಜಿಲೆಂಡ್ ಭಾರತಕ್ಕಿಂತ ಹೆಚ್ಚಿನ ರನ್ ರೇಟ್ ಹೊಂದಿದ್ದರಿಂದ ಭಾರತ  ಪಂದ್ಯವನ್ನು ಔಪಚಾರಿಕವಾಗಿ ತೆಗೆದುಕೊಳ್ಳುವಂತಿರಲಿಲ್ಲ. ಭಾರತ ಆ  ಪಂದ್ಯವನ್ನು ಸೋತರೂ ಅದು ೨೫೦ ಕ್ಕಿಂತ ಹೆಚ್ಚು ರನ್ ಗಳನ್ನು ಗಳಿಸಲೇ ಬೇಕಿತ್ತು. ಈ ಒಂದು ಒತ್ತಡದಲ್ಲಿ ಭಾರತ ಆಟದ ಅಂಗಳಕ್ಕಿಳಿದಾಗ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ೨೮೪ ರನ್ ಗಳ ಬೃಹತ್ ಮೊತ್ತ ಪೇರಿಸಿತು. ಭಾರತ ಇನ್ನಿಂಗ್ಸ್ ಆರಂಭಿಸಿದಾಗ ಅದರೆದುರು ಎರಡು ಆಯ್ಕೆಗಳಿದ್ದವು.  ಒಂದು ಪಂದ್ಯವನ್ನು ಗೆಲ್ಲಬೇಕು ಅಥವಾ ೨೫೪ ರನ್ ಗಳನ್ನಾದರೂ ಗಳಿಸಬೇಕು. ಪ್ರತಿ ಓವರ್ ಗೆ ಸರಾಸರಿ ೫.೪ ರನ್ ಗಳ ಗುರಿಯೊಂದಿಗೆ ಆಟ ಪ್ರಾರಂಭಿಸಿದ ಭಾರತಕ್ಕೆ ಸಚಿನ್ ತನ್ನ ಅಮೋಘ ಆಟದಿಂದ ಉತ್ತಮ ಅಡಿಪಾಯ ಒದಗಿಸಿದ. ಕ್ಯಾಸ್ಟ್ರೋವಿಚ್ ನ ಆರನೇ ಓವರ್ ನಲ್ಲಿ ಸತತವಾಗಿ ಭಾರಿಸಿದ ಎರಡು ಸಿಕ್ಸರ್ ಗಳು ಮನಮೋಹಕವಾಗಿದ್ದವು. ಸಚಿನ್ ಆಟ ಸೊಗಸಾಗಿದ್ದು ಮತ್ತು  ಆಕ್ರಮಣಕಾರಿಯಾಗಿದ್ದರೂ  ಬೇರೆ ಆಟಗಾರರಿಂದ ಬೆಂಬಲ ದೊರೆಯಲಿಲ್ಲ. ೨೯ ಓವರ್ ಗಳಾಗುವಷ್ಟರಲ್ಲಿ ಭಾರತ ೧೩೪ ರನ್ ಗಳಿಗೆ ೪ ವಿಕೆಟ್ ಗಳನ್ನು ಕಳೆದುಕೊಂಡು ಅಪಾಯದಲ್ಲಿತ್ತು. ಆ ಹೊತ್ತಿಗಾಗಲೇ ಮೈದಾನವನ್ನು ಪ್ರವೇಶಿಸಿದ ಗಾಳಿ ಕೆಲವು ನಿಮಿಷಗಳ ಕಾಲ ಆಟಕ್ಕೆ ತಡೆಯೊಡ್ಡಿತು. ಪರಿಣಾಮವಾಗಿ ೪೬ ಓವರ್ ಗಳಿಗೆ ಆಟವನ್ನು ಸೀಮಿತಗೊಳಿಸಿ ಭಾರತಕ್ಕೆ ಗೆಲ್ಲಲು ೨೭೬ ರನ್ ಗಳ ಗುರಿ ನೀಡಲಾಯಿತು ಇಲ್ಲವೇ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲು ೨೩೭ ರನ್ ಗಳನ್ನು ಗಳಿಸಬೇಕಿತ್ತು. ಗಾಳಿ ಶಾಂತವಾದ ನಂತರ ಮೈದಾನಕ್ಕೆ ಬಂದ ಸಚಿನ್ ಆಟ ಆಕ್ರಮಣಕಾರಿಯಾಗಿತ್ತು.  ಕೇವಲ ೧೦೯ ಎಸೆತಗಳಲ್ಲಿ ೧೪೩ ರನ್ ಗಳಿಸಿ ಆತ ಔಟಾದಾಗ ಸ್ಕೋರ್ ಬೋರ್ಡಿನಲ್ಲಿ ಭಾರತದ ಮೊತ್ತ ೨೩೭ ನ್ನು ದಾಟಿಯಾಗಿತ್ತು. ಭಾರತ ಆ ಪಂದ್ಯವನ್ನು ಸೋತರೂ ಹೆಚ್ಚಿನ ರನ್ ರೇಟ್ ಕಾರಣದಿಂದ ಫೈನಲ್ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿತು. ಸಚಿನ್ ಏಕಾಂಗಿಯಾಗಿ ಹೋರಾಡಿ ಭಾರತವನ್ನು ಫೈನಲ್ ನ ಹೊಸ್ತಿಲಿಗೆ  ತಂದು ನಿಲ್ಲಿಸಿದ್ದ. ಫೈನಲ್ ಪಂದ್ಯ ಎಪ್ರಿಲ್ ೨೪ ರಂದು ನಿಗದಿಯಾಗಿತ್ತು. ಆ ದಿನ ಸಚಿನ್ ತೆಂಡೂಲ್ಕರನದು ೨೫ ನೆ ಹುಟ್ಟು ಹಬ್ಬ.

            ಎಲ್ಲರೂ ಕಾತುರದಿಂದ ನಿರೀಕ್ಷಿಸುತ್ತಿದ ಎಪ್ರಿಲ್ ೨೪ ಬಂದೆ ಬಿಟ್ಟಿತು. ಅದೇ ಶಾರ್ಜಾದ  ಕ್ರಿಕೆಟ್ ಮೈದಾನ. ಮತ್ತೆ ಅದೇ ಎರಡು ತಂಡಗಳು ಫೈನಲ್ ನಲ್ಲಿ ಮುಖಾಮುಖಿಯಾಗಿದ್ದವು. ಹೊನಲು ಬೆಳಕಿನ ಪಂದ್ಯ ಆರಂಭವಾದಾಗ  ಮಧ್ಯಾಹ್ನದ ಸಮಯ. ಇಲ್ಲಿ ಭಾರತದಲ್ಲಿ ಟಿವಿ ಪರದೆಯ ಮುಂದೆ ಕುಳಿತಿದ್ದ ಕೋಟ್ಯಾಂತರ ಭಾರತೀಯರು ಭಾರತ ಗೆಲ್ಲಲೆಂದು ಪ್ರಾರ್ಥಿಸುತ್ತಿದ್ದರು. ಟಾಸ್ ಗೆದ್ದ ಭಾರತ ಆಸ್ಟ್ರೇಲಿಯಾಕ್ಕೆ ಬ್ಯಾಟಿಂಗ್ ನೀಡಿತು. ತನಗೆ ನೀಡಿದ ಆಹ್ವಾನವನ್ನು ಸರಿಯಾಗಿಯೇ ಬಳಸಿಕೊಂಡ ಆಸ್ಟ್ರೇಲಿಯಾ ೫೦ ಓವರ್ ಗಳಲ್ಲಿ ಸವಾಲಿನ ೨೭೨ ರನ್ ಗಳನ್ನು ಕಲೆಹಾಕಿ ಭಾರತಕ್ಕೆ ಗೆಲ್ಲಲು ೨೭೩ ರನ್ ಗಳ ಗುರಿ ನೀಡಿತು. ನೆನಪಿರಲಿ ೧೯೯೦ ರ ದಶಕದಲ್ಲಿ ಏಕದಿನ ಪಂದ್ಯದಲ್ಲಿ ೨೫೦ ರನ್ ಗಳಿಸುವುದೇ ಬೃಹತ್ ಮೊತ್ತವಾಗಿತ್ತು. ಅಂಥದ್ದರಲ್ಲಿ ೨೭೩ ಭಾರತಕ್ಕೆ ಸವಾಲಿನ ಮೊತ್ತವಾಗಿತ್ತು. ಓವರ್ ಗೆ ಸರಾಸರಿ ೫.೫ ರನ್ ಗಳ ಗುರಿಯೊಂದಿಗೆ ಬ್ಯಾಟಿಂಗ್ ಗಿಳಿದ ಭಾರತಕ್ಕೆ ಮತ್ತೆ ಅದೇ ಸಚಿನ್ ಆಸರೆಯಾದ. ಮೊಂಗಿಯಾ ಮತ್ತು ಅಜರ್ ರೊಂದಿಗಿನ ಎರಡು ಉತ್ತಮ ಜೊತೆಯಾಟದಲ್ಲಿ ಉತ್ತಮ ರನ್ ಕಲೆಹಾಕಿ ಭದ್ರ ಅಡಿಪಾಯ ಒದಗಿಸಿದ. ಆತನ ಮೊದಲ ಐವತ್ತು ರನ್ ಗಳು ಕೇವಲ ೪೪ ಎಸೆತಗಳಲ್ಲಿ ಬಂದವು. ಅದು ಆ ಸರಣಿಯ ಅತಿ ವೇಗದ ಅರ್ಧ ಶತಕ ಎಂದು ದಾಖಲಾಯಿತು. ಅಂದಿನ ಸಚಿನ್ ಆಟದ ವೈಖರಿ ಫೈನಲ್ ಪಂದ್ಯವನ್ನು ಗೆಲ್ಲಲೇ ಬೇಕೆಂದು ನಿರ್ಧರಿಸಿದಂತಿತ್ತು. ಮತ್ತೆ ಸಚಿನ್ ಸರಣಿಯಲ್ಲಿ ಸತತ ಎರಡನೇ ಶತಕ ದಾಖಲಿಸಿದ. ೧೩೪ ರನ್ ಗಳಿಸಿ ಸಚಿನ್ ಔಟಾದಾಗ ಭಾರತದ ಮೊತ್ತ ೨೪೮. ಆಗ ಭಾರತಕ್ಕೆ ಪಂದ್ಯ ಗೆಲ್ಲಲು  ಬೇಕಾಗಿದ್ದದ್ದು ಕೇವಲ ೨೫ ರನ್ ಗಳು ಮಾತ್ರ. ಜಡೇಜಾ ಮತ್ತು ಕಾನಿಟ್ಕರ್ ಇನ್ನೂ ೯ ಎಸೆತಗಳು ಉಳಿದಿರುವಂತೆಯೇ ಜಯದ ಔಪಚಾರಿಕತೆಯನ್ನು ಪೂರೈಸಿದರು. ಶಾರ್ಜಾದ ಕ್ರೀಡಾಂಗಣದ ತುಂಬ ಭಾರತದ ತ್ರಿವರ್ಣ ಧ್ವಜ ಹಾರಾಡಿತು. ಅರ್ಹವಾಗಿಯೇ ಸಚಿನ್ ಪಂದ್ಯ ಶ್ರೇಷ್ಠ ಮತ್ತು ಸರಣಿ  ಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದ. ದಶಕದ ನಂತರವೂ ಅಂದಿನ ಆ ಎರಡು ಪಂದ್ಯಗಳು ಭಾರತೀಯರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿವೆ. ಅದಕ್ಕೆ ಕಾರಣ ಅಂದು ಸಚಿನ್ ನೀಡಿದ ಆ ಅದ್ಭುತ ಪ್ರದರ್ಶನ.

ಆ ದಾಖಲೆ ಸಚಿನ್ ಗಾಗಿ ಕಾಯುತ್ತಿತ್ತು


            ಏಕದಿನ ಪಂದ್ಯದಲ್ಲಿ ಮೊದಲ ದ್ವಿಶತಕ ಇದು ಸಚಿನ್ ಬರೆದ ಹೊಸ ದಾಖಲೆ. ನಮಗೆಲ್ಲ ನೆನಪಿರುವಂತೆ ೧೯೭೧ ರಿಂದ ಪ್ರಾರಂಭವಾದ ಏಕದಿನ ಕ್ರಿಕೆಟ್ ನಲ್ಲಿ ಸಚಿನ್ ಗಿಂತ ಮೊದಲು ಯಾವೊಬ್ಬ ಕ್ರಿಕೆಟಿಗ ದ್ವಿಶತಕ ದಾಖಲಿಸಿರಲಿಲ್ಲ. ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಎಂದಾಕ್ಷಣ ಎಲ್ಲರಿಗೂ ನೆನಪಾಗುತ್ತಿದ್ದದ್ದು ಆಕ್ರಮಣಕಾರಿ ಆಟಕ್ಕೆ ಹೆಸರಾದ ಜಯಸೂರ್ಯ, ಆಫ್ರಿದಿ, ಗಿಲ್ ಕ್ರಿಸ್ಟ್, ಸೆಹ್ವಾಗ್ ಮಾತ್ರ. ಆದರೆ ಅಂಥದ್ದೊಂದು ದಾಖಲೆಯ ಆಟ ಆಡಲು ತಾಳ್ಮೆ, ಇಡೀ ಇನ್ನಿಂಗ್ಸ್ ಆಡುವ ದೈಹಿಕ ಸಾಮರ್ಥ್ಯ, ಸಂಯಮ ಈ ಎಲ್ಲ ಗುಣಗಳು ಬೇಕು. ಈ ಎಲ್ಲ ಗುಣಗಳು ಇಡಿಯಾಗಿ ಒಂದೇ ವ್ಯಕ್ತಿತ್ವದಲ್ಲಿರುವುದು ಅದು ಸಚಿನ್ ನಲ್ಲಿ ಮಾತ್ರ. ಫೆಬ್ರುವರಿ ೨೩, ೨೦೧೦ ರಂದು ಗ್ವಾಲಿಯರ್ ನ ರೂಪಸಿಂಗ್ ಮೈದಾನ ಅವಿಸ್ಮರಣೀಯ ಘಟನೆಗೆ ಸಾಕ್ಷಿಯಾಯಿತು. ಆ ದಿನ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ ಏಕದಿನ ಪಂದ್ಯ ಯಾರೂ ನಿರೀಕ್ಷಿಸದ ಮೈಲಿಗಲ್ಲನ್ನು ಕ್ರಿಕೆಟ್ ನ ಇತಿಹಾಸದಲ್ಲಿ ದಾಖಲಿಸಿತು. ಇನ್ನಿಂಗ್ಸ್ ನ ಕೊನೆಯ ಓವರ್ ನ ಎರಡನೇ ಚೆಂಡನ್ನು ಎದುರಿಸಿದ ಸಚಿನ್ ಒಂದು ರನ್ ಗಾಗಿ ಓಡಿದಾಗ ಇಡೀ ಕ್ರೀಡಾಂಗಣದ ತುಂಬ ರೋಮಾಂಚನದ ಕ್ಷಣವದು. ಇದು ಕನಸಿರಬಹುದೇ ಎನ್ನುವ ಅಚ್ಚರಿ ಅನೇಕರದು. ಏಕದಿನ ಕ್ರಿಕೆಟ್ ನಲ್ಲಿ ಶತಕಕ್ಕೊಂದು ಸಂಗಾತಿಯನ್ನು ಒದಗಿಸಿದ ಈ ವಾಮನ ಆ ಕ್ಷಣ ತ್ರಿವಿಕ್ರಮನಾಗಿ ಗೋಚರಿಸಿದ. ನಾಲ್ಕು ದಶಕಗಳಿಂದ ಯಾವ ಕ್ರಿಕೆಟಿಗ ಮಾಡದೆ ಇದ್ದ ಸಾಧನೆ ಅಂದು ಸಚಿನ್ ನಿಂದ ದಾಖಲಾಯಿತು. ಇಪ್ಪತ್ತು ವರ್ಷಗಳಿಂದ ಸತತ ಕ್ರಿಕೆಟ್ ಆಡುತ್ತಿರುವ ಸಚಿನ್ ಅಂದು ಇಡೀ ಇನ್ನಿಂಗ್ಸ್ ಆಡಿ ದ್ವಿಶತಕ ದಾಖಲಿಸಿದ. ಇಡೀ ಇನ್ನಿಂಗ್ಸ್ ಆಡಿದ್ದರೂ ಆತನ ಆಟ ಆಕ್ರಮಣಕಾರಿಯಾಗಿತ್ತು. ದ್ವಿಶತಕಕ್ಕಾಗಿ ಎದುರಿಸಿದ್ದು ಕೇವಲ ೧೪೭ ಎಸೆತಗಳನ್ನು ಮಾತ್ರ. ಇಂಥದ್ದೊಂದು ದಾಖಲೆ ಯಾವಾಗ ಬರೆಯುತ್ತದೆಂದು ಕ್ರಿಕೆಟ್ ಪ್ರಿಯರು ಕಾಯುತ್ತಿದ್ದರು. ಕೊನೆಗೂ ಅದು ಸಚಿನ್ ನಿಂದ ಸಾಧ್ಯವಾಯಿತು. ಏಕೆಂದರೆ ಆ ದಾಖಲೆ ಸಚಿನ್ ಗಾಗಿ ಕಾಯುತ್ತಿತ್ತು.

ಮಾನಸಿಕ ದೃಢತೆ


            ಸಚಿನ್ ಆಟದಲ್ಲಿನ ಸ್ಥಿರತೆ ನಿಜಕ್ಕೂ ಅಚ್ಚರಿಯ ಸಂಗತಿ. ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವ ಒಬ್ಬ ಕ್ರಿಕೆಟಿಗ ನಿರಂತರವಾಗಿ ಸ್ಥಿರತೆಯನ್ನು ಕಾಪಾಡಿಕೊಂಡು ಬರುವುದು ಸಣ್ಣ ಸಂಗತಿಯಲ್ಲ. ಕ್ರಿಕೆಟ್ ಆಟದಿಂದ ದೊರೆಯುತ್ತಿರುವ ಜನಪ್ರಿಯತೆ ಮತ್ತು ಶ್ರೀಮಂತಿಕೆಯಿಂದ ಆಟಗಾರರು ಉನ್ಮತ್ತರಾಗುತ್ತಿರುವರು. ಪರಿಣಾಮವಾಗಿ ಆಟದಲ್ಲಿನ ಕನ್ಸಿಸ್ಟೆನ್ಸಿ ಯನ್ನು ಅವರು ಬೇಗನೆ ಕಳೆದುಕೊಳ್ಳುತ್ತಿರುವರು. ಆದರೆ ಸಚಿನ್ ವ್ಯಕ್ತಿತ್ವ ಹಾಗಿಲ್ಲ. ಈ ಜನಪ್ರಿಯತೆ ಮತ್ತು ಹಣ   ಆತನನ್ನು ಉನ್ಮತ್ತನನ್ನಾಗಿಸಿಲ್ಲ. ದಾಖಲೆ ಮೇಲೆ ದಾಖಲೆ ಬರೆದರೂ ಆತನ ತಲೆ ಭುಜದ ಮೇಲೇ ಇದೆ. ರೂಪಸಿಂಗ್ ಮೈದಾನದಲ್ಲಿ ದ್ವಿಶತಕದ ಆಟವಾಡಿದಾಗ ಆತ ಕುಣಿಯಲಿಲ್ಲ, ಕುಪ್ಪಳಿಸಲಿಲ್ಲ, ಪಿಚ್ ಗೆ ಬಾಗಿ ನಮಿಸಲಿಲ್ಲ, ಕ್ರೀಡಾಂಗಣದ ತುಂಬ ಓಡಾಡಲಿಲ್ಲ, ಬ್ಯಾಟಿಗೆ ಮುತ್ತಿಕ್ಕಲಿಲ್ಲ. ಪ್ರತಿ ಬಾರಿ ಅರ್ಧ ಶತಕ, ಶತಕ ದಾಖಲಿಸಿದಾಗ ಆತನ ಪ್ರತಿಕ್ರಿಯೆ ಹೇಗಿರುತ್ತಿತ್ತೋ ಆ ದಿನ ಕೂಡ ಹಾಗೆ ಇತ್ತು.

           ಹೊಗಳಿಕೆ ಮತ್ತು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಆತನದು. ಸಚಿನ್ ವೃತ್ತಿ ಬದುಕಿನ ಈ ಎರಡು ದಶಕಗಳಲ್ಲಿ ಅನೇಕರು ಅನೇಕ  ರೀತಿಯ ಟೀಕೆಗಳನ್ನು ಮಾಡಿರುವರು. ಸಚಿನ್ ಗೆ ವಯಸ್ಸಾಗಿದೆ, ಆತನ ದೇಹ ಆಟಕ್ಕೆ ಸ್ಪಂದಿಸುತ್ತಿಲ್ಲ, ಆತ ಒಳ್ಳೆಯ ಫಿನಿಶರ್ ಅಲ್ಲ, ಸಚಿನ್ ಒತ್ತಡದಲ್ಲಿ ಆಡಲಾರ, ಆತ ಕೇವಲ ದಾಖಲೆಗಾಗಿ   ಆಡುವನು ಹೀಗೆ ಸಚಿನ್ ಹಲವು ಬಗೆಯ ಟೀಕೆಗಳನ್ನು ಎದುರಿಸಿರುವನು. ಆದರೆ ಸಚಿನ್  ಯಾವ ಟೀಕೆಗಳಿಗೂ ಉತ್ತರಿಸಲಾರ. ಯಾವ ಟೀಕೆಯೂ ಆಟದ ಬಗೆಗಿನ ಆತನ ಬದ್ಧತೆಯನ್ನು ಹಾಳುಗೆಡುವಲಿಲ್ಲ. ಪ್ರತಿಯೊಂದು ಟೀಕೆ ಬಂದಾಗಲೂ ಅವನೊಬ್ಬ ಪ್ರಬುದ್ಧ ಆಟಗಾರನಾಗಿ ಬೆಳೆಯುತ್ತಲೇ ಹೋದ.

ಆ ಒಂದು ಕೊರಗು ಆತನಿಗೂ ಇತ್ತು


             ಎಷ್ಟೆಲ್ಲಾ ದಾಖಲೆಗಳನ್ನು ಬರೆದು ಏನೆಲ್ಲಾ ವಿಕ್ರಮಗಳನ್ನು ಸಾಧಿಸಿಯೂ ಸಚಿನ್ ನಲ್ಲಿ ಒಂದು ಕೊರಗಿತ್ತು. ೨೦೧೧ ರ ವಿಶ್ವಕಪ್ ಗಿಂತ ಮೊದಲು ಐದು ವಿಶ್ವಕಪ್ ಗಳಲ್ಲಿ ಆಡಿರುವ ಸಚಿನ್ ಗೆ ವಿಶ್ವಕಪ್ ಗೆದ್ದ ತಂಡದ ಸದಸ್ಯನಾಗದೆ ಇರುವುದು ಒಂದು ಕೊರಗಾಗಿ ಪರಿಣಮಿಸಿತ್ತು. ಸಚಿನ್ ಆಡಿದ ಮೊದಲಿನ ಆ ಐದು ವಿಶ್ವಕಪ್ ಗಳಲ್ಲಿ ಭಾರತ ವಿಶ್ವಕಪ್ ಗೆಲ್ಲದಿದ್ದರೂ ಸಚಿನ್ ಮಾತ್ರ ವಿಶ್ವಕಪ್ ನಲ್ಲಿ ತನ್ನ ಛಾಪು ಮೂಡಿಸಿದ್ದ. ವಿಶ್ವಕಪ್ ನಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಸಚಿನ್ ಹೆಸರಿನಲ್ಲಿದೆ. ೨೦೦೩ ರ ವಿಶ್ವಕಪ್ ನಲ್ಲಿ ೬೭೩ ರನ್ ಕಲೆಹಾಕಿದ ಸಚಿನ್ ಒಂದೇ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕೀರ್ತಿಗೆ ಭಾಜನನಾದ. ಅದೇ ವರ್ಷ ವಿಶ್ವಕಪ್ ಸರಣಿ ಪುರುಷ ಪ್ರಶಸ್ತಿ ಸಚಿನ್ ಮುಡಿಗೇರಿತು. ೨೦೦೩ ರ ವಿಶ್ವಕಪ್ ನಲ್ಲಿ ಸಚಿನ್ ತನ್ನ ಅಮೋಘ ಆಟದಿಂದ ಭಾರತವನ್ನು ಫೈನಲ್  ವರೆಗೂ ಕೊಂಡೊಯ್ದ. ಆದರೆ   ಸಚಿನ್ ಕನಸು ನನಸಾದದ್ದು ೨೦೧೧ ರಲ್ಲಿ. ಅದು ಸಚಿನ್ ಪಾಲಿಗೆ ಆರನೇ ಮತ್ತು ಕೊನೆಯ ವಿಶ್ವಕಪ್ ಆಗಿತ್ತು. ಅದ್ಭುತ ಫಾರ್ಮ್ ನಲ್ಲಿದ್ದ ಭಾರತೀಯ ಕ್ರಿಕೆಟಿಗರು ಸಚಿನ್ ಗಾಗಿ ವಿಶ್ವಕಪ್ ಗೆಲ್ಲುವ ಪಣ ತೊಟ್ಟಿದ್ದರು. ವಿಶ್ವಕಪ್ ಗೆದ್ದ ಆ ದಿನ ಸಚಿನ್  ನನ್ನು ತಮ್ಮ ಹೆಗಲೆ ಮೇಲೆ ಹೊತ್ತು ಗೌರವಿಸಿದರು. ಕ್ರಿಕೆಟ್ ಲೋಕದ ಅನರ್ಘ್ಯ ರತ್ನ ಸಚಿನ್ ಗೆ ತನ್ನ ನಿವೃತ್ತಿಯ ದಿನಗಳಲ್ಲಿ ವಿಶ್ವಕಪ್ ಗೆಲ್ಲಲಿಲ್ಲ ಎನ್ನುವ ಕೊರಗು ಕಾಡದಿರಲಿ ಎನ್ನುವುದು ಅವರೆಲ್ಲರ ಬಯಕೆಯಾಗಿತ್ತು. 'ಕಳೆದ ಎರಡು ದಶಕಗಳಿಂದ ರಾಷ್ಟ್ರದ ಕ್ರಿಕೆಟ್ ಆಟದ ಕೀರ್ತಿಯನ್ನು  ಹೆಗಲೆ ಮೇಲೆ ಹೊತ್ತು ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಸಚಿನ್ ನನ್ನು ನಾವು ಈ ದಿನ ಹೆಗಲ ಮೇಲೆ ಕುಳ್ಳಿರಿಸಿಕೊಂಡು ಗೌರವಿಸುತ್ತಿದ್ದೇವೆ' ಸಚಿನ್ ನನ್ನು ಗೌರವಿಸಿದ ಆ ಘಳಿಗೆ ಯುವ  ಕ್ರಿಕೆಟಿಗ  ವಿರಾಟ್ ಕೊಹ್ಲಿ ಹೇಳಿದ ಈ ಮಾತು ನಿಜಕ್ಕೂ ಅರ್ಥಪೂರ್ಣ.

ಸಚಿನ್ ಗೂ ಅಂಟಿದ ಕಳಂಕ


            ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ಒಬ್ಬ ವಿವಾದೀತ ಆಟಗಾರ. ಭಾರತದ ಪ್ರತಿಯೊಬ್ಬ ಕ್ರಿಕೆಟಿಗನಿಗೆ ಸಚಿನ್ ಜೊತೆ ಆಡುವುದು ಜೀವನದ ಬಹುಮುಖ್ಯ ಕನಸು. ಎದುರಾಳಿ ತಂಡ ಯಾವುದೇ ದೇಶವಾಗಿರಲಿ ಆ ಆಟಗಾರರೆಲ್ಲರೂ ಸಚಿನ್ ನನ್ನು ಗೌರವಿಸುತ್ತಾರೆ. ಮೈದಾನದಲ್ಲಿನ ಆತನ ಸಭ್ಯ ವರ್ತನೆ ವಿದೇಶಿ ಪ್ರೇಕ್ಷಕರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಆತ ಶತಕ ಸಿಡಿಸಿದಾಗ ದೇಶ, ಭಾಷೆಯ ಗಡಿಯನ್ನು ಮೀರಿ ಎಲ್ಲ ಪ್ರೇಕ್ಷಕರು ಎದ್ದು ನಿಂತು ಕರತಾಡನದ ಮೂಲಕ ಸಂಭ್ರಮಿಸುತ್ತಾರೆ. ಇಂಥ ಸಭ್ಯ ಸಚಿನ್ ಗೂ ಒಂದು ಸಾರಿ ಕಳಂಕ ಅಂಟಿಕೊಂಡಿತ್ತು. ೨೦೦೧ ರಲ್ಲಿ ದಕ್ಷಿಣ ಆಫ್ರಿಕ ಜೊತೆಗಿನ ಎರಡನೇ ಟೆಸ್ಟ್ ನಲ್ಲಿ ಸಚಿನ್ ಚೆಂಡನ್ನು ಸ್ವಚ್ಚಗೊಳಿಸಿದ್ದು ವಿವಾದಕ್ಕೆ ಕಾರಣವಾಯಿತು. ಮ್ಯಾಚ್ ರೆಫರಿ ಮೈಕ್ ಡೆನ್ನಿಸ್ ಚೆಂಡು ವಿರೂಪಗೊಳಿಸಿದ ಆರೋಪದ ಮೇಲೆ ಸಚಿನ್ ಗೆ ಒಂದು ಪಂದ್ಯದ ನಿಷೇಧ ವಿಧಿಸಿದ. ನಂತರದ ದಿನಗಳಲ್ಲಿ ಮೈಕ್ ಡೆನಿಸ್ ವಿರುದ್ಧ ಆಕ್ರೋಶದ ಮಾತುಗಳು ಕೇಳಿ ಬಂದವು. ಎಲ್ಲ ದೇಶಗಳ ಕ್ರಿಕೆಟಿಗರು ಸಚಿನ್ ಬೆಂಬಲಕ್ಕೆ ನಿಂತರು. ಕೊನೆಗೆ ಎಚ್ಚೆತ್ತುಕೊಂಡ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮೈಕ್ ಡೆನಿಸ್ ನನ್ನು ಮೂರನೆ ಪಂದ್ಯದ ಮ್ಯಾಚ್ ರೆಫರಿ ಸ್ಥಾನದಿಂದ ಕೆಳಗಿಳಿಸಿತು. ಸಚಿನ್ ತನ್ನ ನಿಷ್ಕಳಂಕ ವ್ಯಕ್ತಿತ್ವದಿಂದ ಕ್ರಿಕೆಟ್ ಆಟವನ್ನು ಗೆಲ್ಲಿಸಿದ. ಇದು ಆತನ  ಸ್ಟ್ರೆಂಗ್ತ್    ಕೂಡ ಹೌದು.

ಕ್ರಿಕೆಟ್  ಹನ್ನೊಂದು ಜನರ ಆಟ


         ಸಚಿನ್ ಶತಕವನ್ನೂ ದಾಖಲಿಸಿಯೂ ಭಾರತ ಪಂದ್ಯವನ್ನು ಸೋತಾಗ ಆತನ ಆಟದ ಕುರಿತು ಟೀಕೆಗಳು ಕೇಳಿ ಬರುತ್ತವೆ. ಕ್ರಿಕೆಟ್ ಪಂಡಿತರು ಸಚಿನ್ ಕ್ರಿಕೆಟ್ ಬದುಕು ಮುಗಿಯಿತು ಎಂದು ಷರಾ ಬರೆಯುತ್ತಾರೆ. ಸಚಿನ್ ಆಡುವುದು ದಾಖಲೆಗಾಗಿ ಎಂದು ಮಾಧ್ಯಮಗಳು ವ್ಯಂಗ್ಯವಾಡುತ್ತವೆ. ಹೀಗೆ ಟೀಕಿಸುವವರು ಕ್ರಿಕೆಟ್   ಕೇವಲ ಒಬ್ಬನ ಆಟವಲ್ಲ ಅದು ಹನ್ನೊಂದು ಜನರ ಆಟ ಎಂದು ಅರ್ಥೈಸಿಕೊಳ್ಳದಿರುವುದು ದೊಡ್ಡ ದುರಂತ. ಚೆಸ್, ಟೆನಿಸ್, ಬಾಕ್ಸಿಂಗ್ ನಂಥ ಆಟಗಳು ಒಬ್ಬನೇ ಆಟಗಾರನ ಸಾಮರ್ಥ್ಯವನ್ನು ಅವಲಂಬಿಸಿವೆ. ಆದರೆ ಕ್ರಿಕೆಟ್ ಹಾಗಲ್ಲ. ಇಲ್ಲಿ ಬ್ಯಾಟ್ಸ್ ಮನ್ ರನ್ ಗಳಿಸಬೇಕು, ಬೌಲರ್ ವಿಕೆಟ್ ಉರುಳಿಸ ಬೇಕು, ಕಿಪರ್ ವಿಕೆಟ್ ಹಿಂದೆ ಅದ್ಭುತವಾಗಿ ಕಾರ್ಯನಿರ್ವಹಿಸಬೇಕು, ಕ್ಷೇತ್ರ  ರಕ್ಷಕ  ರನ್ ಉಳಿಸಬೇಕು ಇದೆಲ್ಲಕ್ಕೂ ಮಿಗಿಲಾಗಿ ನಾಯಕ ಇಡೀ ತಂಡವನ್ನು ಜಯದತ್ತ  ಮುನ್ನಡೆಸಬೇಕು.  ಅಂದಾಗ ಮಾತ್ರ ಕ್ರಿಕೆಟ್  ನಲ್ಲಿ ಗೆಲುವು ಸಾಧ್ಯ.  ಈ ಎಲ್ಲ ಪಾತ್ರಗಳನ್ನು ನಿರ್ವಹಿಸಲೆಂದೇ ಕ್ರಿಕೆಟ್ ಆಟದಲ್ಲಿ ಹನ್ನೊಂದು ಜನ ಆಟಗಾರರಿರುವರು. ಈ ಎಲ್ಲ ಪಾತ್ರಗಳನ್ನು ಸಚಿನ್ ಒಬ್ಬನೇ ನಿರ್ವಹಿಸಲು ಸಾಧ್ಯವಿಲ್ಲ. ಹೀಗಿದ್ದೂ ಸಚಿನ್ ಅನೇಕ ಪಂದ್ಯಗಳಲ್ಲಿ ಏಕಾಂಗಿಯಾಗಿ ಹೋರಾಡಿ ಭಾರತಕ್ಕೆ ಜಯ ತಂದಿರುವನು. ಆಟದ ಬಗೆಗಿನ ಆತನ ವೃತ್ತಿ ಬದ್ಧತೆಯನ್ನು ಪ್ರಶ್ನಿಸುವಂತಿಲ್ಲ. ಕ್ರಿಕೆಟ್ ಮೇಲಿನ ಅನನ್ಯ ಪ್ರೀತಿಯೆ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಡಲು ಸಾಧ್ಯವಾಗಿಸಿರುವುದು. ಸಚಿನ್ ಆಡುತ್ತ ಹೋದಂತೆ ದಾಖಲೆಗಳು ನಿರ್ಮಾಣವಾಗುತ್ತ ಹೋದವು. ಒಂದು ವೇಳೆ ಸಚಿನ್  ಪಂದ್ಯದಲ್ಲಿ  ಐದು ಹತ್ತು ರನ್ ಗಳಿಸಿ ಔಟಾಗುತ್ತಿದ್ದರೆ ಆತನ ಕ್ರಿಕೆಟ್ ಬದುಕು ಇವತ್ತಿನವರೆಗೂ ಮುಂದುವರಿಯುತ್ತಿತ್ತೆ?

ಕೊನೆಯ ಮಾತು 


           ಸಚಿನ್ ಮತ್ತು ಆತನ ಬಾಲ್ಯದ ಗೆಳೆಯ ಕಾಂಬ್ಳಿ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಇಬ್ಬರೂ ಪ್ರತಿಭಾನ್ವಿತ ಆಟಗಾರರು. ಆದರೆ ಕಾಂಬ್ಳಿ ಬಹುಬೇಗ ತನ್ನ ಫಾರ್ಮ್ ಕಳೆದುಕೊಂಡು ಕ್ರಿಕೆಟ್ ನಿಂದ ದೂರವಾದ. ಸಚಿನ್ ಎರಡೂವರೆ ದಶಕಗಳ ಕಾಲ  ತನ್ನ ಸ್ಥಿರತೆಯನ್ನು ಕಾಯ್ದುಕೊಂಡು ಕ್ರಿಕೆಟ್ ಆಡಿದ. ಜನಪ್ರಿಯತೆ ಮತ್ತು ಹಣ ಒಬ್ಬನ ಕ್ರಿಕೆಟ್ ಬದುಕನ್ನು ಮೊಟಕುಗೊಳಿಸಿದರೆ ಇನ್ನೊಬ್ಬ ತನ್ನ ನಿಷ್ಕಳಂಕ ಆಟದಿಂದ ಕ್ರಿಕೆಟ್ ಆಟಕ್ಕೆ ಹೊಸ ಮೆರುಗು ತಂದಿತ್ತ. ಇಪ್ಪತ್ನಾಲ್ಕು  ವರ್ಷಗಳಿಂದ ನಾವು ನೋಡುತ್ತಿರುವ ಸಚಿನ್ ವ್ಯಕ್ತಿತ್ವದಲ್ಲಿ ಸ್ವಲ್ಪವೂ ಬದಲಾವಣೆಯಾಗಿಲ್ಲ. ಬದಲಾಗಿರುವುದು ಕಾಲ ಮತ್ತು ಕ್ರಿಕೆಟ್ ಮಾತ್ರ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 



 
       

No comments:

Post a Comment