Saturday, November 2, 2013

ದೀಪಾವಳಿ ಮತ್ತು ಸಾಂಸ್ಕೃತಿಕ ಸಂಕ್ರಮಣ

     



     









         




           
          ಇದು ಸಾಂಸ್ಕೃತಿಕ ಸಂಕ್ರಮಣದ ಕಾಲಘಟ್ಟ. ಏಕೆಂದರೆ ಆಧುನಿಕತೆ ಮತ್ತು ಜಾಗತೀಕರಣದ ಈ ಸಂದರ್ಭ ನಾವು ಜಗತ್ತಿನ ಆಗು ಹೋಗುಗಳಿಗೆ ಮುಖ ಮಾಡಿ ನಿಂತಿರುವ ಈ ಹೊತ್ತಿನಲ್ಲೇ ನಮ್ಮದೇ ನೆಲದ ಸಾಂಸ್ಕೃತಿಕ ಆಚರಣೆಗಳಾದ ಹಬ್ಬಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಅದಕ್ಕೆಂದೇ ನಾನು ಈ ಅವಧಿಯನ್ನು ಸಾಂಸ್ಕೃತಿಕ ಸಂಕ್ರಮಣದ ಕಾಲಘಟ್ಟವೆಂದು ಕರೆದಿದ್ದು. ನಿಮಗೊಂದು ಉದಾಹರಣೆ ಹೇಳುತ್ತೇನೆ ನನ್ನ ಪರಿಚಿತರ ಮಗ ಪ್ರದೀಪ ಹತ್ತನೇ ತರಗತಿಯಲ್ಲಿ ಓದುತ್ತಿರುವ ಹುಡುಗ. ಆತನನ್ನು ಮಾತನಾಡಿಸಿದಾಗ ಸೆಂಚುರಿಯನ್ ಇಂಗ್ಲಿಷ್ ಸಿನಿಮಾದ ಬಗ್ಗೆ, ರಫೆಲ್ ನಡಾಲ್ ಕುರಿತು, ಐಪಾಡ್ ಟ್ಯಾಬ್ಲೆಟ್ ವಿಷಯವಾಗಿ ಹೀಗೆ ಅನೇಕ ವಿಷಯಗಳನ್ನು ಹೇಳಿದ. ನಿಜಕ್ಕೂ ಆ ವಯಸ್ಸಿಗೆ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡಿದ್ದ. ಆದರೆ ನಮ್ಮ ಸಂಭಾಷಣೆಯ ಕೊನೆಯಲ್ಲಿ ಆತ ಕೇಳಿದ ಪ್ರಶ್ನೆ ನನ್ನನ್ನು ಆ ಕ್ಷಣಕ್ಕೆ ಒಂದಿಷ್ಟು ವಿವೇಚಿಸುವಂತೆ ಮಾಡಿತು. ಆತ ಕೇಳಿದ್ದಿಷ್ಟೆ ಗಾಂಧಿ ಜಯಂತಿ ಪ್ರತಿವರ್ಷ ಅಕ್ಟೋಬರ್ ಎರಡನೇ ತಾರಿಖಿಗೆ ಆಚರಿಸುವಂತೆ ಈ ದೀಪಾವಳಿ ಹಬ್ಬವನ್ನು ಪ್ರತಿವರ್ಷ ಅದೇ ತಿಂಗಳು ಮತ್ತು ತಾರಿಖಿಗೆ ಏಕೆ ಆಚರಿಸುವುದಿಲ್ಲ? ಜಗತ್ತಿನ ಅನೇಕ ವಿಷಯಗಳನ್ನು ತಿಳಿದುಕೊಂಡಿರುವ  ಮಗು ತನ್ನ ನೆಲದ ಸಾಂಸ್ಕೃತಿಕ ಹಿನ್ನೆಲೆಯನ್ನು ತಿಳಿದುಕೊಂಡಿಲ್ಲವಲ್ಲ ಎಂದು ಅಚ್ಚರಿಯ ಜೊತೆ ನನ್ನಲ್ಲಿ ಬೇಸರವೂ ಮೂಡಿತು. ಇಲ್ಲಿ ಆ ತಪ್ಪು ಹುಡುಗನದಲ್ಲ. ನೆಲದ ಸಾಂಸ್ಕೃತಿಕ ಮಹತ್ವ ಮತ್ತು ಹಿನ್ನೆಲೆಯನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ದಾಟಿಸುವ ಕೆಲಸವನ್ನು ಮನೆಯ ಹಿರಿಯರು, ಶಾಲೆಗಳಲ್ಲಿ ಶಿಕ್ಷಕರು ಮತ್ತು ಸಮಾಜದಲ್ಲಿನ ಮಾಧ್ಯಮಗಳು ಮಾಡಬೇಕು. ಆದರೆ ಈ ದಿನಗಳಲ್ಲಿ ರೋಚಕ ಸುದ್ದಿಗಳತ್ತ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳು ಈ ಸಾಂಸ್ಕೃತಿಕ ಮಹತ್ವವನ್ನು ದಾಟಿಸುವ ಕೆಲಸ ಮಾಡುತ್ತಿಲ್ಲ.

           ಈಗ ನಾನು ಮತ್ತೆ ಪ್ರದೀಪ ಕೇಳಿದ ಪ್ರಶ್ನೆಗೆ  ಬರುತ್ತೇನೆ ದೀಪಾವಳಿ ನಾವು ಆಚರಿಸುವ ಹಬ್ಬಗಳಲ್ಲೇ ಅತ್ಯಂತ ಮಹತ್ವದ ಹಬ್ಬ. ಈ ಹಬ್ಬವನ್ನು ಪ್ರತಿವರ್ಷ ಆಶ್ವಿಜಮಾಸ ಕೃಷ್ಣ ಪಕ್ಷದ ಚತುರ್ದಶಿ, ಅಮವಾಸೆ ಹಾಗೂ ಕಾರ್ತಿಕ ಮಾಸ ಶುಕ್ಲ ಪಕ್ಷದ ಪಾಡ್ಯ ಈ ಮೂರು ದಿನಗಳಂದು ಆಚರಿಸಲಾಗುತ್ತದೆ. ದೀಪಾವಳಿಯ ಆಚರಣೆ ಮುಖ್ಯವಾಗಿ ಎರಡು ಪೌರಾಣಿಕ ಘಟನೆಗಳಿಗೆ ಸಂಬಂಧಿಸಿದೆ. ದೀಪಾವಳಿಯ ಮೊದಲ ದಿನ ನರಕ ಚತುರ್ದಶಿಯನ್ನು ಶ್ರೀಕೃಷ್ಣ ನರಕಾಸುರನನ್ನು ಕೊಂದ ದಿನವೆಂದು ಹೇಳುವರು. ಕೊನೆಯ ದಿನ ಬಲಿಪಾಡ್ಯಮಿಯನ್ನು ಬಲಿಚಕ್ರವರ್ತಿ ಭಗವಾನ ವಿಷ್ಣುವಿಗೆ ಸರ್ವಸ್ವವನ್ನೂ ಸಮರ್ಪಿಸಿದ ದಿನ ಎಂದು ಹೇಳಲಾಗುತ್ತದೆ. ಹೀಗೆ ದೀಪಾವಳಿ ಹಬ್ಬದ ಆಚರಣೆಗೆ ಪೌರಾಣಿಕ ಹಿನ್ನೆಲೆಯಿದೆ.

ನರಕ ಚತುರ್ದಶಿ 


          ನರಕ ಚತುರ್ದಶಿಯನ್ನು ಆಶ್ವಿಜ ಮಾಸ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಆಚರಿಸಲಾಗುತ್ತದೆ. ಈ ಹಬ್ಬದ ಆಚರಣೆಯ ಹಿಂದೆ ಒಂದು ಪೌರಾಣಿಕ ಕಥೆಯೇ ಇದೆ. ನರಕಾಸುರನೆನ್ನುವ ರಾಕ್ಷಸನ ಕಥೆಯದು. ವಿಷ್ಣು ಮತ್ತು ಭೂದೇವಿಯ ಸಮಾಗಮದಿಂದ ಹುಟ್ಟಿದ ಮಗುವೇ ಈ ನರಕಾಸುರನೆನ್ನುವ ರಾಕ್ಷಸ. ಈ ನರಕಾಸುರ ತಪಸ್ಸು ಮಾಡಿ ತನಗೆ ತನ್ನ ತಾಯಿಯಿಂದ ಮಾತ್ರವಲ್ಲದೆ ಬೇರೆಯಾರಿಂದಲೂ ಸಾವು ಬರಬಾರದು ಎಂದು ಬೃಹ್ಮನಿಂದ ವರ ಪಡೆಯುತ್ತಾನೆ. ಹೀಗೆ ಬೃಹ್ಮನ   ಕೃಪೆಗೆ  ಒಳಗಾದ ನರಕಾಸುರ ಭೂಮಂಡಲವನ್ನು ಮಾತ್ರವಲ್ಲದೆ ದೇವಾನುದೇವತೆಗಳನ್ನೂ ತನ್ನ ಅಂಕಿತದಲ್ಲಿಟ್ಟು ಕೊಳ್ಳುತ್ತಾನೆ. ಅವನ ಉಪಟಳ ಹೆಚ್ಚಿದಾಗ ದೇವತೆಗಳೆಲ್ಲರೂ ವಿಷ್ಣುವಿನ ಮೊರೆ ಹೋಗುತ್ತಾರೆ. ಅದೇ ಅವಧಿಯಲ್ಲಿ ವಿಷ್ಣು ಭೂಮಿಯ ಮೇಲಿನ ದುಷ್ಟ ಶಕ್ತಿಗಳನ್ನು ನಾಶ ಮಾಡಲು ಶ್ರೀಕೃಷ್ಣನ ರೂಪದಲ್ಲಿ ಅವತರಿಸಿರುತ್ತಾನೆ. ಒಮ್ಮೆ ಕೃಷ್ಣ ತನ್ನ ಪ್ರೀತಿಯ ಮಡದಿ ಸತ್ಯಭಾಮೆಯೊಂದಿಗೆ ವಿಹರಿಸುತ್ತಿರುವಾಗ ನರಕಾಸುರ ದಾಳಿ ಮಾಡುತ್ತಾನೆ. ಇಲ್ಲಿ ಗಮನಿಸ  ಬೇಕಾದ ಸಂಗತಿ ಎಂದರೆ ಸತ್ಯಭಾಮೆ ಭೂದೇವಿಯ ಆಶೀರ್ವಾದದಿಂದ ಹುಟ್ಟಿರುವುದರಿಂದ ಅವಳು ಒಂದರ್ಥದಲ್ಲಿ ನರಕಾಸುರನಿಗೆ  ತಾಯಿ ಇದ್ದಂತೆ. ಈ ವಿಷಯ ತಿಳಿದಿದ್ದ ಕೃಷ್ಣ ಸತ್ಯಭಾಮೆಗೆ ತನ್ನ ಸುದರ್ಶನ ಚಕ್ರವನ್ನು ಕೊಟ್ಟು ನರಕಾಸುರನನ್ನು ಸಂಹರಿಸುವಂತೆ ಹೇಳುತ್ತಾನೆ. ಕೊನೆಗೆ ನರಕಾಸುರ ಸಂಹಾರದಿಂದ ಭೂಲೋಕ ಮತ್ತು ದೇವಲೋಕಗಳೆರಡೂ ಅಸುರನ ದೌರ್ಜನ್ಯದಿಂದ ಮುಕ್ತಿ ಹೊಂದುತ್ತವೆ. ನರಕಾಸುರನನ್ನು ಸಂಹರಿಸಿದ ನೆನಪಿಗಾಗಿ ನರಕ ಚತುರ್ದಶಿಯನ್ನು ಆಚರಿಸಲಾಗುವುದು. ಆ ದಿನ ಮನೆಯನ್ನು ದೀಪಗಳಿಂದ ಶೃಂಗರಿಸುವುದರ ಅರ್ಥ ಕತ್ತಲೆ ಕಳೆದು ಬೆಳಕಿನಡೆ ನಡೆಯುವುದು ಎಂದು.

ಬಲಿಪಾಡ್ಯಮಿ 


        ಬಲಿಪಾಡ್ಯಮಿ ಹಬ್ಬ ಕೂಡ ದುಷ್ಟತನವನ್ನು ಕಳೆದುಕೊಂಡು ಸನ್ಮಾರ್ಗದೆಡೆ ನಡೆಯುವುದರ ಸಂಕೇತ. ಹಿರಣ್ಯಕಶ್ಯಪುವಿನ ಪುತ್ರ ಪ್ರಹ್ಲಾದ ಮಹಾ ವಿಷ್ಣು ಭಕ್ತ. ಆತನ ಮಗನೇ ವಿರೋಚನ. ವಿರೋಚನನ ಮಗನೇ ಬಲಿಚಕ್ರವರ್ತಿ. ಬಲಿಚಕ್ರವರ್ತಿ ಸಹ ತನ್ನ ತಾತ ಪ್ರಹ್ಲಾದನಂತೆ ವಿಷ್ಣು ಭಕ್ತನಾಗಿದ್ದ. ಆದರೆ ಅಸುರರ ವಂಶದಲ್ಲಿ ಹುಟ್ಟಿದ್ದರಿಂದ ತನ್ನ ಹಿಂಸಾ ಪ್ರವೃತ್ತಿಯನ್ನು ಬಿಟ್ಟಿರಲಿಲ್ಲ. ಬಲಿಚಕ್ರವರ್ತಿಯ ರಾಜ್ಯ ಸುಭಿಕ್ಷವಾಗಿತ್ತು. ಆದರೆ ಈತ ಋಷಿ ಮುನಿಗಳ ತಪೋಭಂಗ ಮಾಡುವುದು, ಯಜ್ಞ ಯಾಗಾದಿಗಳಿಗೆ ಅಡ್ಡಿಪಡಿಸುವುದು ಮಾಡುತ್ತಿದ್ದ. ಈತನ ಉಪಟಳ ಹೆಚ್ಚಾದಾಗ ಋಷಿ ಮುನಿಗಳೆಲ್ಲ ವಿಷ್ಣುವಿನ ಮೊರೆ ಹೋಗುತ್ತಾರೆ. ಇದೇ ಸಮಯದಲ್ಲಿ ಬಲಿಚಕ್ರವರ್ತಿಯು ಅಶ್ವಮೇಧ ಯಾಗವನ್ನು ಮಾಡಲು ಪ್ರಾರಂಭಿಸುವನು. ಈ ಯಾಗ ಮಾಡುವ ವೇಳೆ ಯಾರೇ ಬಂದು ಏನನ್ನೇ ಕೇಳಿದರೂ ಯಾರನ್ನೂ ಬರಿಗೈಯಿಂದ ಕಳುಹಿಸಬಾರದೆಂದು ನಿರ್ಧರಿಸುತ್ತಾನೆ. ವಿಷ್ಣು ಬಲಿಯನ್ನು ಸಂಹರಿಸಲು ಇದೇ ತಕ್ಕ ಸಮಯವೆಂದು ಅರಿತು ಯಾಗದ ಸ್ಥಳಕ್ಕೆ ಬ್ರಾಹ್ಮಣ ಬಾಲಕನ ವೇಷದಲ್ಲಿ ಹೋಗಿ ತನಗೆ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ದಾನವಾಗಿ ಕೊಡುವಂತೆ ಕೇಳುತ್ತಾನೆ. ಆಗ ಬಲಿಚಕ್ರವರ್ತಿ ಒಪ್ಪಿಕೊಳ್ಳಲು ವಿಷ್ಣು ತ್ರಿವಿಕ್ರಮನಾಗಿ ಒಂದು ಹೆಜ್ಜೆಯನ್ನು ಭೂಮಿಯ  ಮೇಲೂ ಇನ್ನೊಂದು ಹೆಜ್ಜೆಯನ್ನು ಆಕಾಶದ ಮೇಲೂ ಇಡುತ್ತಾನೆ. ಮೂರನೇ ಹೆಜ್ಜೆ ಎಲ್ಲಿಡಬೇಕೆಂದು ಬಲಿಯನ್ನು ಕೇಳಿದಾಗ ಆಗ ಆತ ತನ್ನ ಮೇಲೆ ಎಂದು ಹೇಳಲು ವಿಷ್ಣು ತನ್ನ ಮೂರನೇ ಹೆಜ್ಜೆಯನ್ನು ಬಲಿಯ ತಲೆಯ ಮೇಲಿಟ್ಟು ಅವನನ್ನು ಪಾತಾಳಕ್ಕೆ ತಳ್ಳುವನು. ಆದರೆ ಬಲಿಚಕ್ರವರ್ತಿಯ ವಿಷ್ಣು ಭಕ್ತಿಯನ್ನು ಮೆಚ್ಚಿ ಅವನಿಗೆ ವಿಷ್ಣು ಪ್ರತಿವರ್ಷ ಆಶ್ವಿಜ ಮಾಸದಲ್ಲಿ ಮೂರು ದಿನಗಳ ಕಾಲ ಪೂಜೆಗೊಳ್ಳಲು ಭೂಲೋಕಕ್ಕೆ ಬರಬಹುದೆನ್ನುವ ಒಂದು ವರವನ್ನು ಕೊಡುವನು. ಆ ವರದ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರನ ಪೂಜೆ ಮಾಡುವರು.

ದೀಪಾವಳಿ ಮತ್ತು ಧಾರ್ಮಿಕ ಬೆಸುಗೆ


              ದೀಪಾವಳಿ ಇದು ಕೇವಲ ಹಿಂದೂ ಧರ್ಮದವರು ಮಾತ್ರ ಆಚರಿಸುವ ಹಬ್ಬವಲ್ಲ. ಇದನ್ನು ಸಿಖ್, ಜೈನ ಮತ್ತು ಬೌದ್ಧ ಧರ್ಮಗಳಲ್ಲೂ ಆಚರಿಸುವರು. ಸಿಖ್ ಧರ್ಮಿಯರಲ್ಲಿ ದೀಪಾವಳಿ ಹಬ್ಬವನ್ನು ಸಿಖ್ ರ ಆರನೇ ಗುರು ಹರಗೋಬಿಂದ ಸಿಂಗ್ ಗ್ವಾಲಿಯರ್ ನ ಕೋಟೆಯಲ್ಲಿ ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತಂದ ದಿನವೆಂದು ಆಚರಿಸುವರು. ದೀಪಾವಳಿ ಜೈನ ಧರ್ಮದಲ್ಲೂ ತನ್ನ ಮಹತ್ವವನ್ನು ಪಡೆದು ಕೊಂಡಿದೆ. ಜೈನಧರ್ಮದ ಕಡೆಯ ತೀರ್ಥಂಕರ ಮಾಹಾವೀರನು ಕಾರ್ತಿಕ ಚತುರ್ದಶಿಯಂದು ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ದೀಪಾವಳಿಯನ್ನು ಆಚರಿಸುವರು.

ಸಾಂಸ್ಕೃತಿಕ ಸಂಕ್ರಮಣಕ್ಕೆ ಕಾರಣ 


       ಇವತ್ತು ದಟ್ಟವಾಗಿ ಆವರಿಸಿರುವ ಸಾಂಸ್ಕೃತಿಕ ಸಂಕ್ರಮಣಕ್ಕೆ ಮೂಲ ಕಾರಣವೇನೆಂದು  ಹುಡುಕಿಕೊಂಡು  ಹೊರಟಾಗ ನಾವು ಗುರುತಿಸುವುದು ಎರಡು ಕಾರಣಗಳನ್ನು. ಒಂದು ಮನೋರಂಜನಾ ಮಾಧ್ಯಮಗಳು ಮತ್ತು ಎರಡನೆಯದು ಬೆಳೆಯುತ್ತಿರುವ ನಗರೀಕರಣ. ದಿನದ ೨೪ ಗಂಟೆಗಳ ಕಾಲ ಅವ್ಯಾಹತವಾಗಿ ಮನೋರಂಜನೆಯನ್ನು ಒದಗಿಸುತ್ತಿರುವ ಈ ಎಲೆಕ್ಟ್ರಾನಿಕ್ ಮಾಧ್ಯಮಗಳು ಸಾಂಸ್ಕೃತಿಕ ಹಿನ್ನೆಡೆಯನ್ನು ಸೃಷ್ಟಿಸಿವೆ. ಈ ಮಾಧ್ಯಮಗಳ ಪ್ರಭಾವ ಮತ್ತು ಆಕರ್ಷಣೆ  ಈ ದಿನಗಳಲ್ಲಿ ಎಷ್ಟೊಂದು ವ್ಯಾಪಕವಾಗಿದೆ ಎಂದರೆ ಜನರು ಹಬ್ಬಗಳ ಆಚರಣೆಯ ಬದಲು ಆ ದಿನದಂದು ಟಿವಿ ಚಾನೆಲ್ ಗಳಲ್ಲಿ ಪ್ರಸಾರವಾಗುವ ಹೊಸ ಹೊಸ ಸಿನಿಮಾಗಳು ಮತ್ತು ಹಾಸ್ಯ ಸನ್ನಿವೇಶಗಳನ್ನು ನೋಡಿ ಸಂಭ್ರಮಿಸುತ್ತಿರುವರು. ಹೀಗೆ ಹಬ್ಬಗಳಂಥ ಸಾಂಸ್ಕೃತಿಕ ಆಚರಣೆಗಳನ್ನು ಮೂಲೆಗುಂಪಾಗಿಸುತ್ತಿರುವ ಎಲೆಕ್ಟ್ರಾನಿಕ್ ಮಾಧ್ಯಮಗಳು ಒಂದು ಸಂಸ್ಕೃತಿಯನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಪರಿಚಯಿಸುವ ಮತ್ತು ದಾಟಿಸುವ ಕೆಲಸ ಮಾಡುತ್ತಿಲ್ಲ.

        ಇನ್ನು ಎರಡನೇ ಕಾರಣವೆಂದು ಗುರುತಿಸುತ್ತಿರುವ ನಗರೀಕರಣ ಸಮಾಜದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ನಗರ ಬದುಕಿನ ಯಾಂತ್ರಿಕತೆ ಮತ್ತು ಒತ್ತಡದ ಬದುಕಿನಿಂದಾಗಿ ಜನರಿಗೆ ತಮ್ಮ ಸಾಂಸ್ಕೃತಿಕ ಆಚರಣೆಗಳನ್ನು ಕಾಯ್ದುಕೊಳ್ಳುವಷ್ಟು ವ್ಯವಧಾನ ಇಲ್ಲವಾಗಿದೆ. ಜೊತೆಗೆ ಅವರೆಲ್ಲ ತಮ್ಮ ನಂತರದ ಪೀಳಿಗೆಯನ್ನು ಈ ಜಾಗತೀಕರಣಕ್ಕೆ ಮುಖಮಾಡಿ ನಿಲ್ಲಿಸುವ ಧಾವಂತದಲ್ಲಿರುವರು. ಇಂಥದ್ದೊಂದು ಧಾವಂತ ಮತ್ತು ಸಮಯದ ಅಭಾವದಿಂದಾಗಿ ಹಬ್ಬಗಳು ಅದರಲ್ಲೂ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ಆದ್ದರಿಂದ ಇಂಥದ್ದೊಂದು ಸಾಂಸ್ಕೃತಿಕ ಸಂಕ್ರಮಣದಿಂದ ಹೊರಬರುವ ಕೆಲಸ ಇವತ್ತಿನ ತುರ್ತು ಅಗತ್ಯವಾಗಿದೆ. ಒಂದು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದೆ  ಅಲ್ಲವೇ ಮತ್ತೊಂದು ಹೊಸ ಸಂಸ್ಕೃತಿಯ ಉಗಮಕ್ಕೆ ಕಾರಣವಾಗುವುದು?

-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment