Tuesday, October 1, 2013

ಒಮ್ಮೆ ಓದಿ ನೋಡಿ


        ಒಮ್ಮೊಮ್ಮೆ ಬರಹವೊಂದು ತಟ್ಟನೆ ಕೈಹಿಡಿದು ನಮ್ಮನ್ನು ತಡೆದು ನಿಲ್ಲಿಸುತ್ತದೆ. ಬರಹದ ವಿಷಯವಸ್ತು, ಅದರಲ್ಲಿನ ಸಾಮಾಜಿಕ ಕಾಳಜಿ, ಬರಹಗಾರನ ಸಂವೇದನೆ ಮತ್ತು ತುಡಿತ ಓದುವಾಗ ಹೆಚ್ಚು ಅಪಾಯ್ಯಮಾನ ಎಂದೇನಿಸಿ ಬರವಣಿಗೆ ಆಪ್ತವಾಗುತ್ತದೆ. ಸೃಜನಶೀಲತೆಯೊಂದು ಉಂಟುಮಾಡಬಹುದಾದ ಬಹುದೊಡ್ಡ ಬೆರಗು ಮತ್ತು ತಲ್ಲಣವಿದು. ಬರಹವೊಂದು ನಮ್ಮನ್ನು ನಮ್ಮ ಸುತ್ತಮುತ್ತಲಿನ ಸಮಸ್ಯೆಗಳತ್ತ ಮುಖ ಮಾಡಿ ನಿಲ್ಲಿಸಬೇಕು. ಅದರಲ್ಲೇ ಬರಹಗಾರನ ಸಾರ್ಥಕತೆ ಇರುವುದು. ಹಿರಿಯ ಕವಿ ಜಿ.ಎಸ್.ಶಿವರುದ್ರಪ್ಪನವರು ಹೇಳುವಂತೆ ಸಾಹಿತ್ಯವಲ್ಲದೆ ಸಮಾಜವನ್ನು ಬೇರೆ ಯಾವುದು ಒಂದುಗೂಡಿಸಬೇಕು. ಹೀಗಾಗಿ ಸಾಹಿತ್ಯದ ಮೇಲೆ ಅತೀ ಹೆಚ್ಚಿನ ಜವಾಬ್ದಾರಿ ಇದೆ. ಸಾಹಿತ್ಯ ಸಮಾಜವನ್ನು ಒಂದುಗೂಡಿಸುವಂಥ ಕೆಲಸ ಮಾಡಬೇಕೆ ವಿನ: ಅದು ಸಮಾಜವನ್ನು ಒಡೆಯಬಾರದು. ಈಗ ಮತ್ತೆ ಸ್ಪೂರ್ತಿ ನೀಡುವ ಬರಹಗಳ ವಿಷಯಕ್ಕೆ ಬರುತ್ತೇನೆ. ಕೆಲವು ಬರಹಗಳೇ ಹಾಗೆ ಓದಿದ ನಂತರವೂ ಅನೇಕ ದಿನಗಳವರೆಗೆ ಕಾಡುತ್ತವೆ. ಹೀಗೆ ಕಾಡುವ ಬರಹಗಳನ್ನು ಇತರರೊಂದಿಗೆ ಹಂಚಿಕೊಂಡಾಗಲೇ ಓದುಗನಲ್ಲೂ ಒಂದು ಸಾರ್ಥಕ ಭಾವ. ಲೇಖಕ ತನ್ನ ವಿಚಾರಗಳನ್ನು ಒಂದು ಚೌಕಟ್ಟಿನಲ್ಲಿ ಕಟ್ಟಿ ಅವುಗಳಿಗೆ ಒಂದು ಮೂರ್ತ ರೂಪ ನೀಡಿದರೆ ಅಲ್ಲಿಗೆ ಆತನ ಕೆಲಸ ಮುಗಿದಂತೆ. ನಂತರದೇನಿದ್ದರು ಓದುಗರಿಗೆ ಸಂಬಂಧಿಸಿದ್ದು. ಓದಿದ ಉತ್ತಮ ಪುಸ್ತಕದಲ್ಲಿನ ವಿಚಾರಗಳನ್ನು ಹಲವು ಮನಸ್ಸುಗಳಿಗೆ ವಿಸ್ತರಿಸುವ ಕೆಲಸ ಓದುಗರಿಂದಾಗಬೇಕು. 

       ಎಂದೋ ಓದಿದ, ಮನಸ್ಸನ್ನು ತಟ್ಟಿದ, ಅನೇಕ ದಿನಗಳವರೆಗೆ ಕಾಡಿದ, ಬೆರಗುಗೊಳಿಸಿದ ಬರಹಗಳನ್ನು ಇಲ್ಲಿ ಯಥಾವತ್ತಾಗಿ ಕೊಟ್ಟಿದ್ದೇನೆ. ಒಮ್ಮೆ ಓದಿ ನೋಡಿ.........


ನನಗೆ ಧರ್ಮಕ್ಕಿಂತ ದೇಶ ಮುಖ್ಯ 


        ಸಿಖ್ ರು ಪ್ರತ್ಯೇಕ ಖಲಿಸ್ಥಾನ ರಾಜ್ಯದ ಸ್ಥಾಪನೆಗಾಗಿ ಹೋರಾಟ ಮಾಡುತ್ತಿದ್ದ ಕಾಲವದು. ಸಿಖ್ ರ ಉಪಟಳ ಮಿತಿ ಮೀರಿದಾಗ ಸರ್ಕಾರ ಪಂಜಾಬಿನ ಸ್ವರ್ಣ ಮಂದಿರದೊಳಗೆ ಸೇನೆ ನುಗ್ಗಿಸಲು ನಿರ್ಧರಿಸಿತು. ಜೂನ್ ೩, ೧೯೮೪ ರಂದು ಇಡೀ ಪಂಜಾಬಿನಲ್ಲಿ ಕರ್ಫ್ಯೂ ಹೇರಲಾಯಿತು. ಗಡಿಯುದ್ದಕ್ಕೂ ಸೇನೆ ನಿಯೋಜಿಸಲಾಯಿತು. ಜೂನ್ ೫ ರ ಮುಂಜಾನೆ ನಾಲ್ಕು ಗಂಟೆಯಿಂದಲೇ ಜನರಲ್ ಬ್ರಾರ್ ತಮ್ಮ ಬೆಟಾಲಿಯನ್ ಗಳನ್ನು ಹುರಿದುಂಬಿಸಲಾರಂಭಿಸಿದರು. ಕಾರ್ಯಾಚರಣೆ ತಂಡದಲ್ಲಿ ಸಿಖ್ ಯೋಧರೆ ಹೆಚ್ಚಿದ್ದರಿಂದ ಭಾವನಾತ್ಮಕವಾಗಿ ಅವರನ್ನು ಸಜ್ಜುಗೊಳಿಸುವುದು ಬ್ರಾರ್ ಗೆ ಸವಾಲಾಗಿತ್ತು. 'ಕಾರ್ಯಾಚರಣೆಯಲ್ಲಿ ಭಾಗವಹಿಸಲು ಮನಸ್ಸಿಲ್ಲದ ಸಿಖ್ ಯೋಧರು ಕೈ ಎತ್ತಬಹುದು. ಅಂಥವರನ್ನು ತಂಡದಿಂದ ಕೈಬಿಡಲಾಗುವುದು ಮತ್ತು ಅವರಿಗೆ ಯಾವ ಶಿಕ್ಷೆಯನ್ನೂ ನೀಡುವುದಿಲ್ಲ' ಎಂದು ಬ್ರಾರ್ ಹೇಳುತ್ತಿದ್ದರು. ೧, ೨ ಮತ್ತು ೩ ನೇ ಬೆಟಾಲಿಯನ್ ನ ಯಾರೊಬ್ಬರೂ ಕೈ ಎತ್ತಲಿಲ್ಲ. ಆದರೆ ೪ ನೇ ಬೆಟಾಲಿಯನ್ ನ ಯುವ ಸಿಖ್ ಯೋಧ ಕೈ ಎತ್ತಿದ. 'ಸರಿ ನಿನಗೆ ಇಷ್ಟವಿಲ್ಲದಿದ್ದರೆ ಬೇಡ ಬಿಡು' ಎಂದರು ಬ್ರಾರ್. ಆದರೆ ಆ ಯೋಧ ಎದೆಯುಬ್ಬಿಸಿ ಹೇಳಿದ 'ನಾನು ಕೈ ಎತ್ತಿದ್ದು ಓಡಿ ಹೋಗುವುದಕ್ಕಲ್ಲ. ನಾನೊಬ್ಬ ಸಿಖ್ ನಿಜ ಆದರೆ ನನಗೆ ಧರ್ಮಕ್ಕಿಂತ ದೇಶ ಮುಖ್ಯ. ಸ್ವರ್ಣ ಮಂದಿರದೊಳಗೆ ಎಲ್ಲರಿಗಿಂತ ಮೊದಲು ನಾನು ಕಾಲಿರಿಸಬೇಕು. ದಯವಿಟ್ಟು ನನಗೆ ಅವಕಾಶ ಕೊಡಿ'. ಹೀಗೆ ಕೇಳಿದ ಆ ಧೀರ ಯೋಧನ ಹೆಸರು ಲೆಫ್ಟಿನೆಂಟ್ ಜಸ್ಬೀರ್ ಸಿಂಗ ರೈನಾ. ವಿರಾವೇಶದಿಂದ ಹೋರಾಡುತ್ತ ಮಂದಿರದೊಳಗೆ ಪ್ರವೇಶಿಸಿದ ರೈನಾರ ಎರಡೂ ಕಾಲುಗಳನ್ನು ಉಗ್ರರ ಗುಂಡುಗಳು ಜಜ್ಜಿ ಹಾಕಿದವು. ವಿಶ್ರಮಿಸಲು ನಿರಾಕರಿಸಿ ತೆವಳುತ್ತಲೇ ಮುನ್ನುಗ್ಗುತ್ತಿದ್ದ ಆ ಯೋಧನನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಬೇಕಾಯಿತು.
(ವಿಜಯ ಕರ್ನಾಟಕ, ೦೯.೦೬. ೨೦೦೯ )

ವಿರೋಧಿಗೆ ಮತ ಹಾಕಿ 


     ಪ್ರಜಾಪ್ರಭುತ್ವಕ್ಕೆ ಉತ್ತಮ ಹೆಸರು ಬ್ರಿಟನ್. ನಾನು ಅಲ್ಲಿದ್ದ ೨೫ ವರ್ಷ ಅವಧಿಯಲ್ಲಿ ೫ ಚುನಾವಣೆ ಕಂಡಿದ್ದೆ. ಮಾರ್ಟಿನ್ ಸ್ಟಿವನ್ಸ್ ಎನ್ನುವ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಿದ್ದರು. ಒಳ್ಳೆಯ ವ್ಯಕ್ತಿ ನನಗೂ ಸ್ನೇಹಿತ. ಚುನಾವಣಾ ಸಂದರ್ಭ ಒಂದು ಸಾರಿ ' 'ನೀವು ಪ್ರಚಾರಕ್ಕೆ ಹೋಗುವಾಗ ನಾನು ನಿಮ್ಮ ಜೊತೆಗೆ ಒಂದು ಬಾರಿ ಬರುತ್ತೇನೆ' ಎಂದೆ. ಅದಕ್ಕೆ ಅವರು ಒಪ್ಪಿಗೆ ನೀಡಿದರು. ಪ್ರಚಾರಕ್ಕಾಗಿ ಮನೆಯೊಂದಕ್ಕೆ ಹೋದೆವು. ಆ ಮನೆಯ ಒಡತಿ ಅಂಗಳದಲ್ಲಿ ಗಿಡಗಳಿಗೆ ನೀರುಣಿಸುತ್ತಿದ್ದರು. ಮಾರ್ಟಿನ್ 'ಮೇಡಂ ಚುನಾವಣೆಗೆ ನಿಂತಿದ್ದೇನೆ ನನಗೆ ನಿಮ್ಮ ಮತ ಕೊಡಿ' ಎಂದರು. ಸಿಡುಕಿನ ಮುಖ ಸಡಿಲಿಸದ ಆಕೆ 'ನಾನು ನಿಮಗೆ ಮತ ಹಾಕುವುದಿಲ್ಲ' ಎಂದಳು. ಕೊಂಚವೂ ವಿಚಲಿತರಾಗದ ಮಾರ್ಟಿನ್ 'ಸರಿ ಮೇಡಂ ನನ್ನ ವಿರೋಧಿಗೆ ನಿಮ್ಮ ಮತ ನೀಡಿ ಆದರೆ ಮತ ಚಲಾಯಿಸದೇ ಇರಬೇಡಿ' ಎಂದು ಮುಂದಿನ ಮನೆಗೆ ಹೋದರು. ಅಚ್ಚರಿಯಿಂದ ನಾನು ಅವರನ್ನು ಹಿಂಬಾಲಿಸಿದೆ.

(ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ಮತ್ತೂರು ಕೃಷ್ಣಮೂರ್ತಿಯವರ ಅನುಭವ)

ಇವರನ್ನು ನೋಡುತ್ತಿದ್ದರೆ ಅಚ್ಚರಿ ಮತ್ತು ಪ್ರೀತಿ 


    ಅವರನ್ನು ಕನ್ನಡದ ಮಿಲ್ಟನ್ ಎಂದು ಕರೆದದ್ದು ಯಾರು ಎನ್ನುವುದೂ ಗೊತ್ತಿಲ್ಲ.  ಅನಗತ್ಯ ಹೋಲಿಕೆ. ಅಂಧತ್ವ ಮತ್ತು ಕವಿತ್ವ ಎರಡನ್ನೂ ಹೊಂದಿದ್ದ ಮಿಲ್ಟನ್ ಗಿಂತ ಎಷ್ಟೋ ಪಟ್ಟು ಎತ್ತರದಲ್ಲಿದ್ದವರು ಪುಟ್ಟರಾಜರು. ಅವರು ಇಲ್ಲವಾದ ಕ್ಷಣ ಎಪ್ಪತ್ತು ದಾಟಿದ ಮಹಿಳೆಯೊಬ್ಬರು ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಟೀವಿಯಲ್ಲಿ ಕಾಣಿಸುತ್ತಿತ್ತು. ಕೆಮರಾ ಚಲಿಸುತ್ತಿದ್ದರೆ ಹದಿ ಹರೆಯದ ಹುಡುಗನೊಬ್ಬ ಬದುಕೇ ಮುಗಿದು ಹೋಗಿದೆಯೇನೋ ಎಂಬಂತೆ ರೋಧಿಸುತ್ತಿದ್ದ. ನೂರಾರು ಮಂದಿ ಉರುಳು ಸೇವೆ ಮಾಡುತ್ತಿದ್ದರು. ಬಹುಶ: ಆ ಕ್ಷೇತ್ರದಲ್ಲಷ್ಟೇ ಅಂಥದ್ದೊಂದು ಪವಾಡ ಸಾಧ್ಯವೋ ಏನೋ? ಅಥವಾ ಅದನ್ನು ಅವರು ಸಾಧ್ಯವಾಗಿಸಿದರು ಎನ್ನಬೇಕಾ? ಲಕ್ಷಾಂತರ ಶಿಷ್ಯರು, ಅಸಂಖ್ಯ ಬಂಧುಗಳು, ಅವರ ಮೇಲೆ ಪ್ರಾಣವಿಟ್ಟು ಕೊಂಡಿದ್ದವರು, ಅವರ ದರ್ಶನಕ್ಕೆ ಸಾಲುಗಟ್ಟಿ ನಿಲ್ಲುತ್ತಿದ್ದವರು, ಅವರಿಂದ ಹಾಡಲು ಕಲಿತು ಹೊಟ್ಟೆ ಹೊರೆದು ಕೊಂಡವರು, ಅವರ ಆಶ್ರಮದಲ್ಲಿ ಬದುಕು ಸವೆಸಿದವರು ಎಲ್ಲರ ಪಾಲಿಗೂ ಅವರು ಗುರು, ನಡೆದಾಡುವ ದೇವರು ಮತ್ತು ಯುಗ ಪುರುಷ.

(ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ಗಿರೀಶ ರಾವ ಅವರ ಲೇಖನದಿಂದ)

ಕುಡಿತದ ಖರ್ಚು 


      ಇಂಗ್ಲೆಂಡಿನಿಂದ ನಾಲ್ಕೈದು ಮಂದಿ ಶಿಕ್ಷಣ ತಜ್ಞರ ತಂಡ ನಮ್ಮ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟಿತು. ದಿನವಿಡಿ ಶೈಕ್ಷಣಿಕ ಸಮಾವೇಶಗಳಾದ ಮೇಲೆ ಅಂದು ರಾತ್ರಿ ವೆಸ್ಟ್ ಎಂಡ್ ಹೋಟೆಲಿನಲ್ಲಿ ಅವರಿಗೆ ಭೋಜನ ಕೂಟ ಏರ್ಪಡಿಸಲಾಗಿತ್ತು. ಆ ಮಾದರಿಯ ಊಟಕ್ಕೂ ನನಗೂ ಬಹು ದೂರ. ಅತಿಥಿಗಳಿಗೆ ಮುಜುಗುರವಾಗಬಹುದೆಂದು ಯೋಚಿಸಿ ನಾನು ಊಟಕ್ಕೆ ಹೋಗದಿರಲು ನಿರ್ಧರಿಸಿದೆ. ಆ ರಾತ್ರಿಯ ಊಟಕ್ಕೆ ಹೊಂದುವ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರನ್ನು ಹೇಳಿಕಳುಹಿಸಿದೆ. ಅವರು ಬಂದರು. 'ನೋಡಿಯಪ್ಪ ದಯವಿಟ್ಟು ಅವರ ಜೊತೆಯಲ್ಲಿದ್ದು ಊಟ ಮಾಡಿಕೊಂಡು ಬನ್ನಿ. ಆದರೆ ನನ್ನದು ಒಂದೇ ವಿನಂತಿ. ಕುಡಿಯ  ಬೇಡಿ. ವಿಶ್ವವಿದ್ಯಾಲಯದ ಖರ್ಚಿನಲ್ಲಿ ಕುಡಿಯುವುದು ಚೆನ್ನಾಗಿ ಕಾಣುವುದಿಲ್ಲ' ಅಂತ ಹೇಳಿದೆ. 'ಪ್ರಯತ್ನಿಸುತ್ತೇವೆ' ಎಂದರು. ಮಾರನೆ ದಿನ ಹೋಟೆಲ್ ಬಿಲ್ ಬಂತು. '೫೦೦ ರೂಪಾಯಿಗಳಷ್ಟು ಕುಡಿದು ಬಿಟ್ಟಿದ್ದಾರೆ. ಏನಪ್ಪಾ ಹೀಗಾಯಿತಲ್ಲ' ಎಂದು ರಿಜಿಸ್ಟ್ರಾರ್ ಸೂರ್ಯ ಪ್ರಸಾದರಿಗೆ ಕೇಳಿದೆ. 'ಪಾಶ್ಚಾತ್ಯ ದೇಶದಿಂದ ಬಂದವರು ಕುಡಿಯದೇ ಊಟ ಮಾಡುವುದಿಲ್ಲ' ಎಂದರು. 'ಹಾಗಾದರೆ ಹೋಗಲಿ ಬಿಡಿ. ಕುಡಿದ ಬಿಲ್ಲನ್ನು ಪ್ರತ್ಯೇಕವಾಗಿ ತರಿಸಿ' ಎಂದೆ. ಮಾರನೆ ದಿನ ೫೦೦ ರೂಪಾಯಿಗೆ ಕುಡಿದ ಬಿಲ್ ತಂದು ಕೊಟ್ಟರು. ಅವರ ಮುಂದೆಯೇ ಬಿಲ್ ಹರಿದು ಹಾಕಿ ೫೦೦ ರೂಪಾಯಿ ಕೊಟ್ಟೆ. 'ಅಯ್ಯೋ ಅದೇಕೆ ನೀವು ಕೊಡ್ತಿರಿ ಸಾರ್. ವಿಶ್ವವಿದ್ಯಾಲಯ ಆ ಖರ್ಚನ್ನು ಕೊಟ್ಟರೆ ತಪ್ಪೇನೂ ಆಗುವುದಿಲ್ಲ' ಅಂದರು. 'ವಿಶ್ವವಿದ್ಯಾಲಯ ಕುಡಿಯುವ ಖರ್ಚು ವಹಿಸುವುದು ತಪ್ಪು ಅಂತ ನನಗೆ ಅನ್ನಿಸುತ್ತದೆ. ಪರವಾಗಿಲ್ಲ ಬಿಡಿ. ನನ್ನಿಂದ ೫೦೦ ರೂಪಾಯಿ ಹೋದರೆ ಅಡ್ಡಿಯಿಲ್ಲ. ಆದರೆ ವಿಶ್ವವಿದ್ಯಾಲಯ ಶುದ್ಧವಾಗಿರಲಿ' ಅಂತ ಹೇಳಿ ಸಮಾಧಾನಪಡಿಸಿದೆ.

(ಎಚ್.ನರಸಿಂಹಯ್ಯನವರ 'ಹೋರಾಟದ ಹಾದಿ' ಪುಸ್ತಕದಿಂದ)


ಬಂಧುಗಳ ಖರ್ಚು 


        ಮೇ ೨೦೦೬ 'ಮಿಸ್ಟರ್ ನಾಯರ್ ನನ್ನ ಬಂಧುಗಳು, ಪರಿಚಿತರು ವಾರ ಅಥವಾ ಹತ್ತು ದಿನಗಳ ಮಟ್ಟಿಗೆ ಬರುತ್ತಾರೆ. ಅವರು ಬರುವುದು ಪಕ್ಕಾ ಖಾಸಗಿ ಉದ್ದೇಶಕ್ಕಾಗಿ. ಇದರಲ್ಲಿ ಅಧಿಕೃತ ಎಂಬುದೇನೂ ಇರುವುದಿಲ್ಲ' ಎಂದರು ಕಲಾಂ. ಅವರ ಐವತ್ತೆರಡು ಮಂದಿ ಬಂಧು ಬಳಗದವರು ರಾಷ್ಟ್ರಪತಿ ಭವನಕ್ಕೆ ಬರುವವರಿದ್ದರು. ಅದರಲ್ಲಿ ತೊಬತ್ತು ವರ್ಷದ ಕಲಾಮ್ ಹಿರಿಯಣ್ಣನಿಂದ ಹಿಡಿದು ಒಂದೂವರೆ ವರ್ಷದ ಪುಟ್ಟ ಮಗು ಸಹ ಸೇರಿತ್ತು. ಕಲಾಮ್ ಅವರು ಹೇಳಿದ ಪ್ರತಿ ಪದವೂ ನನಗೆ ಚೆನ್ನಾಗಿ ಅರ್ಥವಾಗಿತ್ತು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂಬುದು ಗೊತ್ತಿತ್ತು.

    ಅವರೆಲ್ಲ ಆಗಮಿಸಿದರು. ಎಂಟು ದಿನಗಳ ಕಾಲ ದೆಹಲಿಯಲ್ಲಿ ಉಳಿದರು. ಅವರೆಲ್ಲ ಅಜ್ಮೀರ್ ಶರಿಫ್ ಗೆ ಭೇಟಿ ನೀಡಿದರು. ಅವರಲ್ಲಿ ಕೆಲವರು ದಿಲ್ಲಿಯಲ್ಲಿ ಶಾಪಿಂಗ್ ಮಾಡಿದರು. ಅನಂತರ ಅವರೆಲ್ಲ ಊರಿಗೆ ವಾಪಸ್ ಹೋದರು.

         ಅಚ್ಚರಿಯ ಸಂಗತಿ ಏನೆಂದರೆ ಅವರಿಗಾಗಿ ಒಂದೇ ಸಲವೂ ಆಫೀಸಿನ ವಾಹನ ಬಳಸಲಿಲ್ಲ. ರಾಷ್ಟ್ರಪತಿ ಭವನದಲ್ಲಿ ಅವರೆಲ್ಲ ಉಳಿದುದ್ದಕ್ಕಾಗಿ ಕಲಾಮ್ ತಮ್ಮ ಕೈಯಿಂದ ಬಾಡಿಗೆ ಕಟ್ಟಿದರು. ಅವರೆಲ್ಲ ಕುಡಿದ ಸಿಂಗಲ್ ಚಹಾದ ಹಣವನ್ನೂ ಅವರು ಭರಿಸಿದರು. ಅವರೆಲ್ಲ ಅಷ್ಟು ದಿನ ಉಳಿದುದಕ್ಕೆ ೩.೫೨ ಲಕ್ಷ ರೂಪಾಯಿಗಳ ಬಿಲ್ ಬಂತು. ಕಲಾಮ್ ತಮ್ಮ ಕಿಸೆಯಿಂದ ಹಣ ಎಣಿಸಿದರು. ಅದನ್ನು ಕಲಾಮ್ ಯಾರ ಮುಂದೆಯೂ ಹೇಳಿಕೊಳ್ಳಲಿಲ್ಲ. ಪತ್ರಿಕೆಗಳಿಗೆ ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳಲಿಲ್ಲ.

(ವಿಶ್ವೇಶ್ವರ ಭಟ್ ಅವರು ಕನ್ನಡಕ್ಕೆ ಅನುವಾದಿಸಿರುವ 'ಕಲಾಮ್ ಕಮಾಲ್' ಪುಸ್ತಕದಿಂದ)


Let him make some profit 


        ತರಕಾರಿ ಅಂಗಡಿಯಲ್ಲಿ ತರಕಾರಿ ಕೊಳ್ಳುವಾಗ ಚೌಕಾಸಿ ಮಾಡಿದರೆ ಇವರಿಗೆ ಆಗುತ್ತಿರಲಿಲ್ಲ. ಕೆಲವು ಮಹಿಳೆಯರು ಕೊತ್ತಂಬರಿ ಸೊಪ್ಪು ಕೊಳ್ಳುವಾಗ ಕೊಸರಾಡಿ ಗುಂಜಾಡುತ್ತಿದ್ದದ್ದನ್ನು ನೋಡಿದರೆ Let him make some profit I say ಅನ್ನೋವ್ರು.

       ಒಂದ್ಸಲ ಇವರು ಕಾರು ರಿವರ್ಸ್ ಮಾಡುವಾಗ ಹಳ್ಳಿಯವನ ಟೊಮೆಟೊ ಬುಟ್ಟಿಗೆ ತಾಗಿತು. ಮೂಡಿಗೆರೆಯ ಇಕ್ಕಟ್ಟಿನ ಬೀದಿ. ಅವನು ಸಾರ್ ಎಂದು ಕೂಗಿಕೊಂಡ. ಕಾರಿನಿಂದಿಳಿದು ಸಾರಿ ಮಾರಾಯ ಹೇಳಿ ಆ ಬುಟ್ಟಿ ಟೊಮೆಟೊದ ಬೆಲೆ ಕೊಟ್ಟು ಬಂದಿದ್ದರು.

        ಇನ್ನೊಂದು  ವಿಚಿತ್ರ ಇತ್ತು ಇವರಲ್ಲಿ. ತರಕಾರಿ ಕೊಂಡ ನಂತರ ಜೇಬಿಗೆ ಕೈಹಾಕಿ ಕೈಗೆ ಬಂದಷ್ಟು ದುಡ್ಡು ಕೊಟ್ಟು ಹೊರಟೆ  ಬಿಡುತ್ತಿದ್ದರು. ಸಾರ್ ಹೆಚ್ಚು ಕೊಟ್ರಿ ಎಂದರೆ ಇಟ್ಕೋ ಮುಂದಿನ ಸರ್ತಿಗೆ ಅಡ್ಜೆಸ್ಟ್ ಮಾಡ್ಕೊ ಎನ್ನುವರಂತೆ. ಎಷ್ಟು ಕೊಟ್ರಿ ಅಂತ ಕೇಳಿದ್ರೆ ಇವರು ಕಿವಿ ಮೇಲೆ ಹಾಕಿ ಕೊಳ್ಳುತ್ತಿರಲಿಲ್ಲ.

(ರಾಜೇಶ್ವರಿ ತೇಜಸ್ವಿ ಅವರು ಬರೆದ 'ನನ್ನ ತೇಜಸ್ವಿ' ಪುಸ್ತಕದಿಂದ)


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


   

   

No comments:

Post a Comment