Monday, September 16, 2013

ಹೀಗಿದ್ದರು ತೇಜಸ್ವಿ

   



          ತೇಜಸ್ವಿ ಕಾಲವಾಗಿ ಆಗಲೇ ಕೆಲವು ವರ್ಷಗಳು ಕಳೆದು ಹೋದವು. ತನ್ನ ನಂತರದ ಪೀಳಿಗೆಯನ್ನು ಬರವಣಿಗೆಯ ಮೂಲಕ ನಿರಂತರವಾಗಿ ಕಾಡಿದ ಕೆಲವೇ ಕೆಲವು ಬರಹಗಾರರಲ್ಲಿ ತೇಜಸ್ವಿ ಒಬ್ಬರು. ತೇಜಸ್ವಿ ಬದುಕಿದ್ದಾಗಲೇ ಅವರ ವ್ಯಕ್ತಿತ್ವ ಮತ್ತು ಬದುಕಿನ ಕುರಿತು ಅನೇಕ ಕಥೆಗಳು ಚಾಲ್ತಿಯಲ್ಲಿದ್ದವು. ತೇಜಸ್ವಿ ಮಹಾ ಮುಂಗೋಪಿಯಂತೆ, ಅವರ ಸ್ಕೂಟರ್ ಗೆ ಒಂದೇ ಸೀಟಂತೆ, ಕಾಡಿನಲ್ಲೇ ಮನೆಮಾಡಿಕೊಂಡು ಇರುವರಂತೆ, ಸಾಹಿತ್ಯ ಸಮ್ಮೇಳನ ಹಾಗೂ ಪ್ರಶಸ್ತಿಗಳೆಂದರೆ ಅವರಿಗೆ ಅಲರ್ಜಿಯಂತೆ ಹೀಗೆ ಅನೇಕಾನೇಕ ಕಥೆಗಳು ಯುವ ಓದುಗರ ಸಮೂಹದಲ್ಲಿ ಆಗಾಗ ಚರ್ಚೆಗೆ ಆಹಾರವಾಗುತ್ತಿದ್ದದ್ದುಂಟು. ಹೀಗೆ ತೇಜಸ್ವಿ ಬದುಕಿದ್ದಾಗಲೇ ಒಂದು ಒಗಟಾಗಿದ್ದರು. ತೇಜಸ್ವಿ ಬದುಕಿ ಬಾಳಿದ ಮೂಡಿಗೆರೆ ಬಗ್ಗೆ ಆಗ ನಮಗೆಲ್ಲ ನಮ್ಮದೇ ಆದ ಒಂದು ಸ್ಪಷ್ಟ ಕಲ್ಪನೆಯಿತ್ತು. ಅದು ಈಗಲೂ ಇದೆ ಬಿಡಿ. ಚಾರ್ಮಾಡಿ  ಬೆಟ್ಟದ ಮಡಿಲಲ್ಲಿರುವ ಆ ಪುಟ್ಟ ಊರು ತೇಜಸ್ವಿ ಅವರಿಂದ ಇಡೀ ನಾಡಿಗೆ ಪರಿಚಿತವಾಗಿತ್ತು. ಮೂಡಿಗೆರೆ ಎಂದ ತಕ್ಷಣ ನಮಗೆ ಥಟ್ಟನೆ ಈಗಲೂ ಕಣ್ಣೆದುರು ಬರುವುದು  ಕರ್ವಾಲೋನಂತೆ ಕಾಡಿನಲ್ಲಿ ಅಲೆಯುತ್ತಿರುವ ತೇಜಸ್ವಿ ಅವರ ಚಿತ್ರವೇ. 

           ತೇಜಸ್ವಿ ಅವರ ಬರವಣಿಗೆಯಷ್ಟೇ ಅವರ ವೈಯಕ್ತಿಕ ಬದುಕು ಕೂಡ ಅತ್ಯಂತ ಕುತೂಹಲದ ವಿಷಯವಾಗಿತ್ತು. ಬೇರೆ ಬರಹಗಾರರಂತೆಯೇ ತೇಜಸ್ವಿ ಕೂಡ ಬದುಕಿದ್ದರೆ ನಮಗಳೆಲ್ಲರ ಅಭಿಮಾನ ಮತ್ತು ಕುತೂಹಲ ಅವರ ಬರವಣಿಗೆಗೆ ಮಾತ್ರ ಸೀಮಿತವಾಗುತ್ತಿತ್ತೇನೋ. ಆದರೆ ತೇಜಸ್ವಿ ಅವರು ಆಯ್ದುಕೊಂಡ ಬದುಕು ಮತ್ತು ಅವರು ಬಾಳಿದ ರೀತಿ ಅದು ಅವರ ಬರವಣಿಗೆಯಾಚೆಯೂ ಅನೇಕ ಕುತೂಹಲಗಳಿಗೆ ದಾರಿಮಾಡಿಕೊಟ್ಟಿತು. ಎರಡನೇ ಪಿಯುಸಿಯಲ್ಲಿ ಅವರ 'ಕರ್ವಾಲೋ' ಕಾದಂಬರಿಯನ್ನು ಪಠ್ಯವಾಗಿ ಓದುವಾಗಲೇ ನಮಗೆಲ್ಲ ತೇಜಸ್ವಿ ಅವರ ಕುರಿತು ಸಣ್ಣದೊಂದು ಕುತೂಹಲ ಮೊಳಕೆಯೊಡೆಯಿತು. ನಂತರ ಲಂಕೇಶ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ  ಅವರ ವಿಜ್ಞಾನ ಮತ್ತು ಪ್ರಕೃತಿ ವಿಸ್ಮಯದ ಲೇಖನಗಳು ಸಹಜವಾಗಿಯೇ ನನ್ನ ವಯೋಮಾನದ ಓದುಗರನ್ನು ಅವರ ಬರವಣಿಗೆಯತ್ತ ಹೊರಳುವಂತೆ ಮಾಡಿದವು. ನಂತರದ ದಿನಗಳಲ್ಲಿ ಅವರ ಚಿದಂಬರ ರಹಸ್ಯ ಮತ್ತು ಜುಗಾರಿ ಕ್ರಾಸ್ ಕಾದಂಬರಿಗಳನ್ನು ಓದಿದ್ದಾಯಿತು. ಹೀಗೆ ಒಂದು ವಯೋಮಾನದ ಓದುಗರು ತೇಜಸ್ವಿ ಅವರ ಸಾಹಿತ್ಯವನ್ನು ಹಠಕ್ಕೆ ಬಿದ್ದಂತೆ ಓದುತ್ತಿರುವಾಗಲೇ ಸಾವಿನ ರೂಪದಲ್ಲಿ ಬಂದ ವಿಧಿ ತೇಜಸ್ವಿ ಅವರನ್ನು ಓದುಗರಿಂದ ದೂರವಾಗಿಸಿತು. ನಿಜಕ್ಕೂ ತೇಜಸ್ವಿ ಕಾಲವಾದ ನಂತರ ಅವರ ಪರಂಪರೆಯನ್ನು ಮುಂದುವರೆಸುವ ವಾರಸುದಾರರಿಲ್ಲದೆ ಓದುಗರ ಸಮೂಹ ಅನಾಥ ಪ್ರಜ್ಞೆಯಿಂದ ಒಂದಿಷ್ಟು ಕಾಲ ಬಳಲಿದ್ದುಂಟು. ಇದು ತೇಜಸ್ವಿ ಅವರ ಬರವಣಿಗೆಯ ಹಾಗೂ ಅವರ ವ್ಯಕ್ತಿತ್ವದ ತಾಕತ್ತಿಗೊಂದು ನಿದರ್ಶನ.

            ತೇಜಸ್ವಿ ಕಾಲವಾದ ನಂತರ ಅವರ ವ್ಯಕ್ತಿತ್ವವನ್ನು ಹಿಡಿದಿಡುವ ಪ್ರಯತ್ನವಾಗಿ ಎರಡು ಪುಸ್ತಕಗಳು ಪ್ರಕಟವಾದವು. ಅವುಗಳಲ್ಲಿ ಒಂದು ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರು ಬರೆದ 'ನನ್ನ ತೇಜಸ್ವಿ'. ತೇಜಸ್ವಿ ಅವರೊಂದಿಗೆ ದಾಂಪತ್ಯ ಜೀವನದ ಮೂರು ದಶಕಕ್ಕೂ ಹೆಚ್ಚು ಅವಧಿಯನ್ನು ಸವೆಸಿದ ರಾಜೇಶ್ವರಿ ಅವರು ಬರೆದ ಪುಸ್ತಕ ಸಹಜವಾಗಿಯೇ ಕನ್ನಡ ಸಾಹಿತ್ಯಾಸಕ್ತರಲ್ಲಿ ಅದರಲ್ಲೂ ವಿಶೇಷವಾಗಿ ತೇಜಸ್ವಿ ಅವರ ಅಭಿಮಾನಿಗಳ ಸಮೂಹದಲ್ಲಿ ಒಂದು ಸಂಚಲನವನ್ನೇ ಮೂಡಿಸಿತು. ತೇಜಸ್ವಿ ಅವರ ಬದುಕನ್ನು ಒಂದು ಕಾಲಕ್ರಮದಲ್ಲಿ ಕಟ್ಟಿಕೊಟ್ಟ ಲೇಖಕಿ ಅವರ ಬದುಕಿನ ಅನೇಕ ಮಗ್ಗಲುಗಳ ಪರಿಚಯ ಮಾಡಿಕೊಡುವಲ್ಲಿ ಪ್ರಯತ್ನಿಸಿದ್ದು ನಿಜಕ್ಕೂ ಅಭಿನಂದನಾರ್ಹ. ತೇಜಸ್ವಿ ಅವರ ವಿದ್ಯಾಭ್ಯಾಸ, ವಿದ್ಯಾರ್ಥಿ ಜೀವನ, ತಂದೆ ಕುವೆಂಪು ಅವರೊಂದಿಗಿನ ಒಡನಾಟ, ತೋಟ ಮಾಡಿದ್ದು, ಆ ಕಾಲದ ವಿವಿಧ ಚಳುವಳಿಗಳೊಂದಿಗೆ ಗುರುತಿಸಿಕೊಂಡಿದ್ದು, ಬರವಣಿಗೆ, ಬದುಕಿನ ಕೊನೆಯ ದಿನಗಳು ಹೀಗೆ ತೇಜಸ್ವಿ ಬದುಕಿಗೆ ಸಂಬಂಧಿಸಿದ ಅನೇಕ ಸಂಗತಿಗಳು 'ನನ್ನ ತೇಜಸ್ವಿ' ಪುಸ್ತಕದಲ್ಲಿ ಓದಲು ಸಿಗುತ್ತವೆ. ಆ ಪುಸ್ತಕವನ್ನು ಓದಿದ ನಂತರವೂ ತೇಜಸ್ವಿ ಅವರನ್ನು ಅಭಿಮಾನಿಸುವ ಓದುಗರಿಗೆ ಲೇಖಕಿ ಹೇಳಬೇಕಾದದ್ದನ್ನು ಪೂರ್ಣವಾಗಿ ಹೇಳಿಲ್ಲವೇನೋ ಎನ್ನುವ ಕೊರಗು  ಕಾಡಲಾರಂಭಿಸುವುದು ಸಹಜ.

          ಕೊನೆಗೂ ತೇಜಸ್ವಿ ಅವರ ಅಭಿಮಾನಿ ಓದುಗರು ತಮ್ಮ ಎಲ್ಲ ಕುತೂಹಲಗಳಿಗೆ ಮತ್ತು 'ನನ್ನ ತೇಜಸ್ವಿ' ಪುಸ್ತಕದಲ್ಲಿ ಕಾಣಿಸಿದ ಕೊರತೆಗೆ ಉತ್ತರ ಕಂಡುಕೊಂಡಿದ್ದು ಧನಂಜಯ ಜೀವಾಳ ಬರೆದ 'ಕಾಡಿನ  ಸಂತ ತೇಜಸ್ವಿ' ಪುಸ್ತಕದ ಓದಿನಿಂದ. ಮೂಡಿಗೆರೆಯವರಾದ ಧನಂಜಯ ತೇಜಸ್ವಿ ಅವರೊಂದಿಗಿನ ಒಡನಾಟದ ಅನುಭವವನ್ನು ಅತ್ಯಂತ ವಿಶಿಷ್ಟವಾಗಿ ಕಟ್ಟಿಕೊಟ್ಟಿರುವರು. ತೇಜಸ್ವಿ ಅವರಿಗಿದ್ದ ಪ್ರಶಸ್ತಿಯ ಅಲರ್ಜಿ, ಅವರ ನೇರ ನಡೆ ನುಡಿ, ಅವರೊಳಗಿನ ಭಾವುಕತೆ, ಯುವ ಸಮೂಹದೊಂದಿಗಿನ ಒಡನಾಟ ಹೀಗೆ ನಮಗೆ ಗೊತ್ತಿಲ್ಲದ ತೇಜಸ್ವಿ ಅವರ ಅನೇಕ ಮುಖಗಳ ಪರಿಚಯ ಓದುಗನಿಗಾಗುತ್ತದೆ. ಒಂದರ್ಥದಲ್ಲಿ 'ನನ್ನ ತೇಜಸ್ವಿ' ಪುಸ್ತಕದಲ್ಲಿ  ನಾವು ಕಾಣಲೆತ್ನಿಸುವ ಮತ್ತು ಹುಡುಕುವ ತೇಜಸ್ವಿ ಧನಂಜಯರ ಪುಸ್ತಕದಲ್ಲಿ ನಮಗೆ ಗೋಚರಿಸುತ್ತಾರೆ. ಪುಸ್ತಕ ಕೈಯಲ್ಲಿ ಹಿಡಿದ ಆ ಕ್ಷಣ ತೇಜಸ್ವಿಯೇ ನಮ್ಮೆದುರು ನಿಂತು ಮಾತನಾಡಿದಂತ ಅನುಭವ ಓದುಗನಿಗಾಗುತ್ತದೆ. ಇದಕ್ಕೆ ಕಾರಣ ಪುಸ್ತಕದ ಬಹಳಷ್ಟು ಪುಟಗಳಲ್ಲಿ ತೇಜಸ್ವಿ ಅವರ ಮಾತುಗಳೇ ಇವೆ. ಓದಿದ ನಂತರ ತೇಜಸ್ವಿ ನಮಗೆ ಇನ್ನೊಂದು ರೀತಿಯಲ್ಲಿ ಅರ್ಥವಾಗಿ ಕಾಡಲಾರಂಭಿಸುತ್ತಾರೆ.

           ತೇಜಸ್ವಿ ಹೇಗಿದ್ದರು ಎನ್ನುವ ಕುತೂಹಲಕ್ಕಾಗಿ ಪುಸ್ತಕವನ್ನೊಮ್ಮೆ ಓದಿನೋಡಿ. ಮುನ್ನುಡಿಯಲ್ಲಿ ರಹಮತ್ ತರೀಕೆರೆ ಅವರು ಹೇಳಿದಂತೆ ಪುಸ್ತಕವನ್ನು ಯಾವ ಅಧ್ಯಾಯದಿಂದಲಾದರೂ ಓದಬಹುದು. ಒಟ್ಟಿನಲ್ಲಿ ಓದಿದ ನಂತರ  ಮನಸ್ಸನ್ನು ಒಂದಿಷ್ಟು ಆಹ್ಲಾದಿಸುವಂತೆ ಮಾಡುವ ಪುಸ್ತಕವಿದು. ಒಂದಿಷ್ಟು ಕುತೂಹಲಕ್ಕಾಗಿ ಪುಸ್ತಕದಲ್ಲಿನ ಕೆಲವೊಂದು ಪ್ರಸಂಗಗಳು ನನ್ನ ಬ್ಲಾಗಿನ ಓದುಗರಿಗಾಗಿ................

           'ಆ ಸ್ಪೇರ್ ಪಾರ್ಟ್ಸ್ ಅಂಗಡಿಯವನಿಗೆ ಸ್ಕೂಟರ್ ನಿಲ್ಲಿಸಿ ಕರೆದು ಬೈದಿರಂತೆ ಹೌದಾ?' ಎಂದೆ. ತೇಜಸ್ವಿ ಸುಮ್ಮನಾದರು. ಮುಖ ಗಂಭೀರವಾಯಿತು. 'ಅವನಿಗೇನಾದ್ರೂ ಬುದ್ಧಿ ಉಂಟೇನಯ್ಯಾ? ಈಚೆಯಿಂದ ಮೂಡಿಗೆರೆಗೆ ಹೋಗಬೇಕಾದರೂ ನಮಸ್ಕಾರ, ಆಚೆ ಕಡೆಯಿಂದ ಬರುವಾಗಲೂ ನಮಸ್ಕಾರ! ಅವನಿಗೇನು ಬೇರೆ ಕೆಲಸ ಇಲ್ವ? ಆಕಸ್ಮಿಕವಾಗಿ ಅರ್ಜೆಂಟ್ ಕೆಲಸ ಇದ್ದು ಇನ್ನೊಮ್ಮೆ ಮೂಡಿಗೆರೆಗೆ ಹೋಗೋಣ ಎಂದರೆ ನನಗೇ ಕಾಯುತ್ತಿದ್ದನೇನೋ ಎಂಬಂತೆ ಮತ್ತೆ ಬಗ್ಗಿ ನಮಸ್ಕಾರ. ಅವನು ನಮಸ್ಕಾರ ಮಾಡೋಕ್ಕೆ ನಿಂತಿರೋ ಜಾಗ ಮೋಸ್ಟ ಡೇಂಜರಸ್ ಕಣಯ್ಯ. ಎರಡೂ ಕಡೆ ನೇರ ರಸ್ತೆ. ಅದೇ ಜಾಗದಲ್ಲಿ ತಿರುವು. ಅಂಥದ್ದರಲ್ಲಿ ಈ ಮನುಷ್ಯ ಕಾಯ್ಕೊಂಡು ಕೂತ್ಕೊಂಡು ನಮಸ್ಕಾರ ಮಾಡಿದ್ರೆ ನಾನು ಈತನ ಕಡೆ ತಿರುಗಿ ಎಲ್ಲಾದರೂ ಯಾರಿಂದಲಾದ್ರೂ ಗುದ್ದಿಸಿಕೊಂಡ್ರೆ ಏನಯ್ಯಾ ಗತಿ? ಇಷ್ಟೇ ಇನ್ನೇನಿಲ್ಲ'.

---೦೦೦---

          'ನಿಮ್ಮಂತ ಹುಡುಗರು ತ್ಯಾಪೇದಾರಿಯನ್ನೆಲ್ಲಾ ಬಿಟ್ಟು ಗುದ್ದಾಡಬೇಕಯ್ಯಾ. ಹಲ್ಕಾಗಳ ಹಲಾಲುಕೋರತನಗಳಿಗಿಂತ ಸಾಮಾನ್ಯರ ಕೈಲಾಗದತನ ಹೆಚ್ಚು ಅಪಾಯಕಾರಿ ಕಣಯ್ಯ. ಯೋಗ್ಯರು, ಅರ್ಹರು, ಹುಮ್ಮಸ್ಸಿರುವವರು ನಮಗ್ಯಾಕೆ ಈ ಉಸಾಬರಿ ಎಂದು ಹೊಟ್ಟೆಪಾಡನ್ನೇ ನೋಡಿಕೊಳ್ಳುತ್ತಾ ಕೂತ್ರೆ ಅಯೋಗ್ಯರು, ಸಮಯ ಸಾಧಕರು, ಗೂಂಡಾಗಳು, ಅಧಿಕಾರಕ್ಕೆ ಬಾಯಿ ಬಿಡುವ ನಾಯಿಗಳಂತವರು ವಕ್ಕರಿಸಿಕೊಂಡು ಬಿಡ್ತಾರೆ. ಮೂಡಿಗೆರೆ ಪರಿಸ್ಥಿತಿ ಏನಾಗ್ತಿದೆ ನೋಡಿದಿಯ. ರಸ್ತೆ ಬದಿಯಲ್ಲೇ ಗ್ಯಾರೇಜಿನ ಗಲೀಜು, ಊರಿನ ಕಸ, ಹೇಲುಹೆಮ್ಮಣ್ಣನ್ನೆಲ್ಲಾ ಸ್ವಾಗತ ಮಾಡಲು ಹಾಕಿರ್ತಾರೆ. ಹೊಟ್ಟೆಗೆ ಅನ್ನ ತಿನ್ನೋರು ಮಾಡೋ ಕೆಲ್ಸಾನ ಅದು?'.

---೦೦೦---

         'ನೋಡೊದನ್ನೆಲ್ಲಾ ಈಗಲೇ ನೋಡಿಕೊಂಡು ಬಿಡಯ್ಯ, ಎಲ್ಲವನ್ನೂ ತಿಂದು ಹಾಕ್ತಿದ್ದಾರೆ. ನಾವು ಈಗ ಬಂದ ದಾರಿ ನೋಡಿದೆಯಾ? ಇಂಥ ದುರ್ಗಮ ಪ್ರದೇಶಕ್ಕೆ ಟಾರು ರಸ್ತೆ ಬೇಕಾ? ನಿಜವಾಗಿಯೂ ಸಾಹಸ ಮಾಡಬೇಕು ಎಂದು ಬರುವವನಿಗೆ ಗಮ್ಯ ಸ್ಥಾನದವರೆಗೂ ರಸ್ತೆ ಯಾಕಯ್ಯ ಮಾಡಿಕೊಡಬೇಕು? ಇಲ್ಲಿ ಸುರಿಯುವ ಅಡಿಗಟ್ಟಲೆ ಮಳೆಗೆ ಇವರು ಕಡಿದಿರುವ ರಸ್ತೆ ಚರಂಡಿಗಳೆಲ್ಲಾ ಈ ಮಳೆಗಾಲ ಮುಗಿಯುವ ಹೊತ್ತಿಗೆ ದೊಡ್ಡ ಕೊರಕಲುಗಳಾಗಿರುತ್ತವೆ. ನೆಲ ಇರೋದೆ ಅಗೆಯೋಕೆ ಎಂದುಕೊಂಡಿದ್ದಾರಲ್ಲ! ಯಾರೋ ಕಂಟ್ರಾಕ್ಟರ್ ಗೆ ಕೆಲಸ ಕೊಡೋದಕ್ಕಾಗಿ ಇಂತಹ ಸೂಕ್ಷ್ಮ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಮಾಡ್ತಿದ್ದಾರೆ. ದೇವಾಲಯಕ್ಕೆ ಹೋಗುವವರಿಗೆ ದೇವರ ಬಗ್ಗೆ ಶ್ರದ್ಧೆ ಇದ್ದಲ್ಲಿ ನಾಲ್ಕು ಹೆಜ್ಜೆ ನಡೆದು ಹೋಗಲಿ. ದೇವಾಲಯದ ಹೆಬ್ಬಾಗಿಲವರೆಗೂ ಕಾರನಲ್ಲೇ ಬರಬೇಕೆಂದು ಎಲ್ಲೋ ಅಲ್ಪಸ್ವಲ್ಪ ಉಳಿದಿರೋ ಈ ಕಾಡನ್ನೆಲ್ಲಾ ನುಂಗಿ ಹಾಕ್ತಿದ್ದಾರಲ್ಲಾ'.

---೦೦೦---

           ಒಮ್ಮೆ ನಮ್ಮ ಸಚೇತನ ಯುವಕ ಸಂಘದ ಸದಸ್ಯರೆಲ್ಲ ಜೆ. ಪಿ. ರಸ್ತೆಯಲ್ಲಿ ಚರಂಡಿ ಶುದ್ಧ ಮಾಡುವ ಶ್ರಮದಾನ ನಡೆಸುತ್ತಿದ್ದೆವು. ಅದೆಲ್ಲಿಗೆ ಹೋಗುತ್ತಿದ್ದರೋ ತೇಜಸ್ವಿ ತಮ್ಮ ಸ್ಕೂಟರ್ ನ್ನು ಸರಕ್ಕನೆ ನಿಲ್ಲಿಸಿ 'ಇದೆಂತದ್ದೋ ಮಾರಾಯ ಗೊಚ್ಚೆ ಬಳಿಯುವ ಕೆಲಸ ಮಾಡ್ತಿದ್ದಿರಲ್ಲ. ಬಡ್ಡಿ ಮಕ್ಳು ನೀವು ಚರಂಡಿ ತೊಳೀತೀರಿ ಅಂತ ಗೊತ್ತಾದ್ರೆ ಊರಲ್ಲಿರೋ ಚರಂಡಿನೆಲ್ಲಾ  ನಿಮ್ಮ  ಕೈಲೇ ತೊಳಸ್ತಾರೆ. ಮಾನಮರ್ಯಾದೆ ಇಲ್ಲದ ಹೆತ್ಲಾಂಡಿಗಳು ಅವರು. ನಿಮ್ಮ ಪ್ರತಿಭಟನೆ ಸಾಂಕೇತಿಕ ಆಗಿರಬೇಕು ಅಷ್ಟೇ. ಅವರಿಗೆ ಸಂಬಳ ಕೊಡೋದು ದನ ಕಾಯಕ್ಕಲ್ಲ'.

---೦೦೦---

          ಇದ್ದಕ್ಕಿದ್ದಂತೆ ಜನ್ನಾಪುರ ಸೇತುವೆ ಬಳಿ ಸ್ಕೂಟರ್ ನಿಲ್ಲಿಸಿದರು 'ಅಲ್ಲಾ ಕಣಯ್ಯಾ ಸಾಲ ಮನ್ನಾ ಮಾಡಿ, ಬಡ್ಡಿ ರಿಯಾಯ್ತಿ ಕೊಡಿ, ಪ್ರಾಣ ಹೋಗ್ತಿದೆ, ಸತ್ತೇ ಹೋಗ್ತಿವಿ ಅಂತೆಲ್ಲಾ ಬಂಬ್ಡಾ ಬಾರಿಸ್ತಿದ್ದಾರಲ್ಲಾ ಈ ಪ್ಲಾಂಟರ್ ಗಳು ಇಷ್ಟು ದುಬಾರಿ ಕಾರುಗಳನ್ನು ಹೇಗಯ್ಯಾ ಕೊಂಡುಕೊಳ್ತಾರೆ? ಸಾವಿರಾರು ಕಟ್ಟಿ ದಿನಗಟ್ಟಲೆ ಕುಳಿತುಕೊಂಡು ಜುಗಾರಿ ಆಡ್ತಾರಲ್ಲಾ ಆಗ ಅವರಿಗೆ ಸಾಲ ಇರಲ್ವಾ? ಸಾಲ ಮನ್ನಾ ಮಾಡಿ ಅಂತ ಕೇಳ್ತಾರಲ್ಲಾ ಅವರು ಥೂ. ಇವರುಗಳ ಮದುವೆ ನೋಡಿದಿಯೇನಯ್ಯಾ? ಹೋದೋರಿಗೇ ಮುಜುಗರವಾಗ್ಬೇಕು. ಯಾರನ್ನ ಮೆಚ್ಚಿಸೋಕೆ ಆ ರೀತಿ ದುಂದು ಮಾಡ್ತಾರೋ ಏನೋ. ಅದ್ಕೇನೆ ನಾನು ಯಾರ ಮದ್ವೆಗಳಿಗೂ ತಲೆ ಹಾಕೋಲ್ಲ. ಈ ಸರಳ ವಿವಾಹ, ಅಂತರ್ಜಾತಿಯ ವಿವಾಹ ಇವೆಲ್ಲ ಯಾಕೆ ಎಲ್ಲ ವರ್ಗದ ಜನರಿಗೆ ತಲುಪ್ತಾ ಇಲ್ಲ ಅನ್ನೋದೇ ನನಗೆ ಅರ್ಥ ಆಗ್ತಿಲ್ಲ'.

---೦೦೦---  

       ರಾಘವೇಂದ್ರರನ್ನು ಜೊತೆಯಲ್ಲಿ ಕರೆದೊಯ್ಯಲು ಅವರ ಮನೆಯ ಬಳಿ ತೇಜಸ್ವಿ ಹಾಗೂ ನಾನು ನಿಂತಿದ್ದೇವು. ಯಾವುದೋ ಒಂದು ಐಶಾರಾಮಿ ಕಾರೊಂದು ನಮ್ಮ ಬಳಿ ಬಂದು ಸರಕ್ಕೆಂದು ನಿಂತಿತು. ಕಾರಿನ ಕಪ್ಪು ಗಾಜು ನಿಧಾನವಾಗಿ ಕೆಳಗಿಳಿಯಿತು. 'ನಮಸ್ಕಾರ ಸಾರ್' ಎಂದಿತು ಒಳಗಿನ ಕಪ್ಪು ಕನ್ನಡಕದ ವ್ಯಕ್ತಿ. ತೇಜಸ್ವಿ ತಿರುಗಿ 'ನಮಸ್ಕಾರ' ಎಂದರು.

'ಇಲ್ಲೇ ಸಕಲೇಶಪುರದಲ್ಲಿ ಮದುವೆಯಿದೆ.  ಅದಕ್ಕೆ ಫ್ಯಾಮಿಲಿಯೆಲ್ಲ ಹೋಗ್ತಿದ್ದೀವಿ' ಎಂದರು.

ತೇಜಸ್ವಿ ಸುಮ್ಮನೆ ನಗೆಮುಖ ತೋರಿದರು.

ಕಾರು ಮುಂದೆ ಹೋಯಿತು.

'ನಾನೇನಾದ್ರೂ ಅವರನ್ನು ಎಲ್ಲಿಗಿ ಹೋಗ್ತಿದ್ದಿರಿ ಎಂದು ಕೇಳಿದೆನಾ?' ಎಂದು ನಸುನಕ್ಕರು ತೇಜಸ್ವಿ. ಅನಪೇಕ್ಷಿತ ಔಪಚಾರಿಕತೆಗೆ ತೇಜಸ್ವಿ ಪ್ರತಿಕ್ರಿಯಿಸುವ ರೀತಿಯಿದು.

---೦೦೦---

        ಪಂಪ ಪ್ರಶಸ್ತಿಯನ್ನು ಸ್ವೀಕರಿಸಲು ಹೋಗದೆ ಕಡೆಗೆ ಸರ್ಕಾರವೇ ಮನೆಗೆ ಬಂದು ಒಪ್ಪಿಸಿಹೋಗಬೇಕಾಗಿ ಬಂದದ್ದು ಎಲ್ಲರಿಗೂ ತಿಳಿದ ವಿಷಯವೇ. ಆ ಸಂದರ್ಭದಲ್ಲಿ ಯಾಕೆ ನೀವೇ ಹೋಗಲಿಲ್ಲ ಎಂದಾಗ 'ಪ್ರಶಸ್ತಿ ಪಡೆಯೋದು ಮುಖ್ಯವಲ್ಲ. ಓದುಗರನ್ನು ಗೆಲ್ಲೋದು ಮುಖ್ಯ. ಪ್ರಶಸ್ತಿಗೆ ಹಾತೊರೆಯಬಾರದು. ಹಾಗೆಲ್ಲಾದರೂ ಆದರೆ ಬಂಡಾಯ, ನವ್ಯ, ನವೋದಯ ಸಾಹಿತ್ಯದಂತೆ ಪ್ರಶಸ್ತಿ ಸಾಹಿತ್ಯವೆಂಬ ಪ್ರಕಾರವೊಂದು ಹುಟ್ಟಿಕೊಳ್ಳುತ್ತದೆ. ಆ ವೇದಿಕೆ, ಪರಾಕು, ಕಿರೀಟ, ಗಲಾಟೆ, ಸನ್ಮಾನ, ಶಾಲು ಹೊದೆಸುವುದು, ಹಾರ ಹಾಕುವುದು ನಾಚಿಕೆಯಾಗುತ್ತೆ ಮಾರಾಯ. ಥೂ ಅದನ್ನೆಲ್ಲ ಸಹಿಸಿಕೊಳ್ಳೋಕ್ಕಾಗಲ್ಲ. ಅದಕ್ಕಿಂತ ಮುಖ್ಯವಾದ ಕೆಲಸ ಸಾಕಷ್ಟು ಬಾಕಿ ಉಳಿದಿದೆ ಇಲ್ಲಿ ಗೊತ್ತಾ? ಕೆಲವರಿಗೆ ಈ ಪ್ರಶಸ್ತಿ ಪೂಜೆನೆ ಇಷ್ಟ ಆಗುತ್ತೆ. ಗೊತ್ತೇ ಇಲ್ಲದ ಸಂಸ್ಥೆಗಳು ಕೊಡೋ ಹೆಸರೇ ಕೇಳದ ಪ್ರಶಸ್ತಿಗಳಿಗೆ ಅರ್ಜಿ ಹಾಕಿ ಶಿಫಾರಸ್ಸು ಮಾಡಿಸಿ ಕುರ್ಚಿ ಮೇಲೆ ಕೂರಿಸಿಸಿಕೊಂಡು ಹಾರ ತುರಾಯಿ ಹಾಕಿಸಿಕೊಳ್ತಾರೆ. ಮಾರಾಯ ನನಗಂತಹ ಹುಚ್ಚೂ ಇಲ್ಲ ಪುರಸೊತ್ತು ಮೊದಲೇ ಇಲ್ಲ'.

---೦೦೦---

        ತೀರಾ ಅಪರೂಪವಾಗಿ ಸಾರ್ವಜನಿಕ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ತೇಜಸ್ವಿಯವರನ್ನು 'ಈಗ ಏನು ಬರೆಯುತ್ತಿದ್ದೀರಾ?' ಎಂದು ಯಾರಾದರೂ ಪ್ರಶ್ನಿಸಿದರೆ ತಿರುಗಿ 'ಯಾಕೆ ಬರೆಯಬೇಕು? ಒಂದಾದ ನಂತರ ಒಂದನ್ನು ಬರೆದುಕೊಡ್ತೀನಿ ಎಂದು ನಾನೆಲ್ಲಾದರೂ ಛಾಪಾ ಕಾಗದದ ಮೇಲೆ ಬರೆದುಕೊಟ್ಟಿದ್ದೀನಾ?' ಎಂದು ತಮಾಷೆಯಾಗಿ ಉತ್ತರ ಕೊಡುತ್ತಿದ್ದರು. ಬರಹ ಸ್ವಾಭಾವಿಕವಾಗಿ ಹೊರಬರಬೇಕು. ಹಠಕ್ಕಾಗಿ ಬರೆಯುವುದು ಮೂರ್ಖತನ ಎಂದಿದ್ದ ತೇಜಸ್ವಿ ಕಾಡು ಸುತ್ತುವುದು, ಪಕ್ಷಿ ವೀಕ್ಷಣೆ, ಛಾಯಾಗ್ರಹಣ, ಮೀನು ಶಿಕಾರಿ, ಮುಲಾಜಿಲ್ಲದ ಬದುಕು, ಖಂಡತುಂಡ ವೈಚಾರಿಕತೆಯನ್ನು ಮುಂಚಿನಿಂದಲೂ ಮೈಗೂಡಿಸಿಕೊಂಡಿದ್ದರು. ಯಾವುದೇ ಕಟ್ಟುಪಾಡುಗಳ ಹೊರತಾಗಿ ಬದುಕುತ್ತಿರುವುದರಿಂದ ನನ್ನ ಅಗತ್ಯ, ನನ್ನ ಕಲ್ಪನೆ, ನನ್ನ ಸಾಧ್ಯತೆಗಳಿಗೆ ಅನುಗುಣವಾಗಿ ನಾನು ತಿಳಿದಂತೆ, ಬಯಸಿದಂತೆ ಬದುಕಲು, ಬರೆಯಲು ಮತ್ತು ಅಭಿವ್ಯಕ್ತಿಗೊಳಿಸಲು ಸಾಧ್ಯವಾಗಿದೆ ಎನ್ನುತ್ತಿದ್ದರು. 

---೦೦೦---

        ವಾಡಿಕೆಯಂತೆ ಪ್ರತಿ ಗುರುವಾರ ಸುಮಾರು ಹನ್ನೊಂದು ಗಂಟೆಗೆ ತೇಜಸ್ವಿ ಬ್ಯಾಂಕಿಗೆ ಬರುತ್ತಿದ್ದರು. ಒಂದು ದಿನ ಬಂದವರೇ 'ನಿಮ್ಮಲ್ಲಿ ನನಗೆ ಕ್ರಾಪ್ ಲೋನ್ ಕೊಡುತ್ತೀರೇನಯ್ಯಾ?' ಎಂದರು. ಕೃಷಿ ವಿಭಾಗವನ್ನು ಕುಮಾರಸ್ವಾಮಿ ಎಂಬ ಅಧಿಕಾರಿ ನೋಡಿಕೊಳ್ಳುತ್ತಿದ್ದರು. 'ಅದಕ್ಕೇನಂತೆ ನಾವು ಕೊಡೋದು ಹೆಚ್ಚೋ ನೀವು ಬರೋದು ಹೆಚ್ಚೋ' ಎಂದು ತೇಜಸ್ವಿ ಅವರ ಅಭಿಮಾನಿಯಾಗಿದ್ದ ಕುಮಾರಸ್ವಾಮಿಯವರು ತ್ವರಿತವಾಗಿ ಕೆಲಸವನ್ನು ಮಾಡಿಕೊಟ್ಟರು. ತಮಗೆ ಮಂಜೂರಾದ ಹಣವನ್ನು ತೇಜಸ್ವಿಯವರು ಉಪಯೋಗಿಸಿಕೊಳ್ಳಲೇ ಇಲ್ಲ. ನನ್ನ ಹಣ ಖಾಲಿಯಾದಾಗ ಕೇಳ್ತೀನಿ ಕಣಯ್ಯ ಈಗ ಅಗತ್ಯವಿಲ್ಲವೆಂದು ಬಳಸಲೇ ಇಲ್ಲ.

---೦೦೦---

       ಕುವೆಂಪು ಅವರ ಶವಸಂಸ್ಕಾರದ ಸಂದರ್ಭ. ಸಾವಿರಾರು ಜನ ಸಾಗರೋಪಾದಿಯಲ್ಲಿ ಸೇರಿದ್ದರು. ಅಷ್ಟು ಜನರ ನಡುವಿನಲ್ಲೇ ತೇಜಸ್ವಿ 'ರೀ ಬನ್ರೀ ಇಲ್ಲಿ' ಎಂದು ಕೂಗಿದರು. ಹಾಗೆ ಅವರು ಕೂಗಿ ಕರೆದದ್ದು ಅಂದಿನ ಚಿಕ್ಕಮಗಳೂರಿನ ಅಂದಿನ ಜಿಲ್ಲಾಧಿಕಾರಿಗಳನ್ನು. ಆ ಸಂದರ್ಭ ಆ ಜನಜಂಗುಳಿಯ ನಡುವೆ ಸರಿಯಾಗಿ ಕೇಳಿಸಿತೋ ಬಿಟ್ಟಿತೋ ಗೊತ್ತಿಲ್ಲ ಸುತ್ತ ಒಮ್ಮೆ ತಿರುಗಿ ನೋಡಿ ಅವರು ತಮ್ಮ ಕೆಲಸದಲ್ಲಿ ಮಗ್ನರಾದರು. ತೇಜಸ್ವಿ ದೊಡ್ಡ ದನಿಯಲ್ಲಿ ಇನ್ನೊಮ್ಮೆ 'ನಿಮ್ಮನ್ನೇ ಕಣ್ರೀ ಕರೆದದ್ದು. ಬನ್ರೀ ಇಲ್ಲಿ ಸುಡಕ್ಕೆ ಹಾಕಿರೋ ಗಂಧದ ಚಕ್ಕೆಯಲ್ಲಾ ಕೊಂಡು ತಂದಿದ್ದೋ ಅಥವಾ ಗಂಧದ ಕಳ್ಳರಿಂದ ಸೀಝ್ ಮಾಡಿದ್ದೋ?' ಎಂದು ಪ್ರಶ್ನಿಸಿದರು. 

ಕೊನೆಯ ಮಾತು 


              ತೇಜಸ್ವಿ ಅವರ ಬರಹ ಮತ್ತು ಬದುಕು ಎರಡೂ ಅನುಕರಣೀಯ. ಪ್ರಶಸ್ತಿಯಾಗಲಿ ಇಲ್ಲವೇ ಆಯಕಟ್ಟಿನ ಸ್ಥಾನವಾಗಲಿ ಯಾವುದನ್ನೂ ಅಪೇಕ್ಷಿಸದೆ ಜೊತೆಗೆ ಯಾವ ಮುಲಾಜು ಮತ್ತು ಹಂಗಿಗೆ ಒಳಗಾಗದೆ ಅವರು ಬದುಕಿದ್ದರಿಂದಲೇ ಯುವ ಪೀಳಿಗೆಯ ಓದುಗರಿಗೆ ತೇಜಸ್ವಿ ಎಂದಿಗೂ ಆದರ್ಶಪ್ರಾಯರಾಗಿರುವರು. ತೇಜಸ್ವಿ ಪ್ರಕೃತಿಯನ್ನು ಕೇವಲ ಸೌಂದರ್ಯದ ದೃಷ್ಟಿಯಿಂದ  ನೋಡದೆ ಅದರೊಳಗಿನ ವಿಸ್ಮಯಕ್ಕೆ ಮುಖಾಮುಖಿಯಾಗಿದ್ದೇ ಹೆಚ್ಚು. ಅವರ ಈ ಮನೋಭಾವದಿಂದಾಗಿಯೇ ಚಿದಂಬರ ರಹಸ್ಯ, ಕರ್ವಾಲೋವಿನಂತಹ ಮಹತ್ವದ ಕೃತಿಗಳ ರಚನೆ ಸಾಧ್ಯವಾಯಿತು. ಬರೆಯುವುದರ ಜೊತೆಗೆ ಅವರು ಈ ನಾಗರಿಕರೆಂದು ಗುರುತಿಸಿಕೊಳ್ಳಲಿಚ್ಛಿಸುವ ಜನರು ಪ್ರಕೃತಿಯ ಮೇಲೆ ಮಾಡುತ್ತಿರುವ ಅನಾಗರಿಕ ದಾಳಿಯನ್ನು ಖಂಡಿಸುತ್ತಲೇ ಹೋದರು. ಈ ಕಾರಣದಿಂದಲೇ ತೇಜಸ್ವಿ ಅವರ ಬದುಕು ಮತ್ತು ಬರಹ ನಮಗೆ ಇನ್ನಷ್ಟು ಹತ್ತಿರವಾಯಿತು. ಆದರೆ ತೇಜಸ್ವಿ ಅವರನ್ನು ನಾವುಗಳೆಲ್ಲ ಅಭಿಮಾನಿಸುತ್ತಿರುವ ಈ ಘಳಿಗೆ ಕನ್ನಡ ಸಾಹಿತ್ಯದಲ್ಲಿ ಅವರ ಪರಂಪರೆಯನ್ನು ಮುಂದುವರೆಸುವ ವಾರಸುದಾರರಿಲ್ಲದಿರುವುದು ಅದು ಸಾಂಸ್ಕೃತಿಕ ಲೋಕವೊಂದರ ಅತಿ ದೊಡ್ಡ ತಳಮಳ.

-ರಾಜಕುಮಾರ.ವ್ಹಿ. ಕುಲಕರ್ಣಿ(ಕುಮಸಿ), ಬಾಗಲಕೋಟೆ 

       

No comments:

Post a Comment