ಇದು ನನ್ನ ಪರಿಚಿತರ ಮನೆಯಲ್ಲಿ ನಡೆದ ಘಟನೆ. ಕೆಲವು ದಿನಗಳ ಹಿಂದೆ ಆ ಮನೆಯಲ್ಲಿ ತಾಯಿ ಒಂದು ದಿನ ಇದ್ದಕ್ಕಿದ್ದಂತೆ ತನ್ನ ಮಗಳೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಳು. ತಾಯಿಯ ಈ ವರ್ತನೆಗೆ ಮಗಳು ಒಂದಿಷ್ಟು ಒರಟಾಗಿ ವರ್ತಿಸಿದ್ದೆ ಕಾರಣವಾಗಿತ್ತು. ತಾಯಿ ಹೀಗೆ ಮುನಿಸಿಕೊಳ್ಳುವುದರ ಬದಲು ಮಗಳಿಗೆ ತಿಳಿ ಹೇಳಿ ಅವಳ ಒರಟುತನವನ್ನು ತಿದ್ದಿ ವಾತಾವರಣವನ್ನು ತಿಳಿಗೊಳಿಸುವ ಅವಕಾಶವಿತ್ತು. ಅಷ್ಟಕ್ಕೂ ಅದು ಐದನೇ ತರಗತಿಯಲ್ಲಿ ಓದುತ್ತಿರುವ ಹನ್ನೊಂದು ವರ್ಷ ವಯಸ್ಸಿನ ಮಗು. ಹಾಗೆ ಒರಟುತನದಿಂದ ವರ್ತಿಸಿದ್ದು ಅಕ್ಷಮ್ಯ ಅಪರಾಧವೇನೂ ಆಗಿರಲಿಲ್ಲ. ಆದರೆ ತಾಯಿಯ ಮೌನ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಅವಳ ದಿನನಿತ್ಯದ ವರ್ತನೆಯಲ್ಲಿ ಒಂದಿಷ್ಟು ಬದಲಾವಣೆ ಕಾಣಿಸಿಕೊಂಡಿತು. ಟಿವಿ ನೋಡುತ್ತ, ಓದುತ್ತ, ಆಟವಾಡುತ್ತ ಖುಷಿಯಿಂದ ಇರುತ್ತಿದ್ದ ಮಗುವಿನಲ್ಲಿ ಖಿನ್ನತೆ ಆವರಿಸಿತು. ಮಗುವಿನಲ್ಲಿ ಆಗುತ್ತಿರುವ ಬದಲಾವಣೆ ಪಾಲಕರಿಗೆ ಆತಂಕವನ್ನುಂಟು ಮಾಡಿತು. ಪರಿಸ್ಥಿತಿಯನ್ನು ತಿಳಿಗೊಳಿಸಲು ಅವರಿಗೆ ಕೆಲವು ದಿನಗಳೇ ಬೇಕಾದವು.
ಈಗ ನಾನು ಮೂವತ್ತು ವರ್ಷಗಳ ಹಿಂದೆ ಹೋಗುತ್ತೇನೆ. ಆಗೆಲ್ಲ ಮನೆಯಲ್ಲಿ ನಾವು ಮಕ್ಕಳು ಗಲಾಟೆ ಮಾಡುವುದು ಹಿರಿಯರಿಂದ ಬೈಯಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿತ್ತು. ಒಮ್ಮೊಮ್ಮೆ ಮನೆಯ ಹಿರಿಯರು ನಮ್ಮಗಳ ಗಲಾಟೆಯಿಂದ ರೋಸಿಹೋಗಿ ಕೈಗೆ ಸಿಕ್ಕ ಕಟ್ಟಿಗೆಯಿಂದಲೋ ಇಲ್ಲವೇ ಹಗ್ಗದಿಂದಲೋ ಥಳಿಸುತ್ತಿದ್ದರು. ಕೆಲವೊಮ್ಮೆ ತಲೆಗೆ ಪೆಟ್ಟಾಗಿ ರಕ್ತ ಸಹ ಸುರಿಯುತ್ತಿತ್ತು. ಹೀಗಿದ್ದರೂ ಆ ಕೋಪ ಸಿಟ್ಟೆಲ್ಲ ಆ ಕ್ಷಣಕ್ಕೆ ಸೀಮಿತವಾಗಿರುತ್ತಿತ್ತು. ಮಕ್ಕಳಾದ ನಾವುಗಳು ಏನೂ ಆಗಿಲ್ಲವೇನೋ ಎನ್ನುವಂತೆ ವರ್ತಿಸುತ್ತಿದ್ದೆವು. ಹೀಗೆ ನಾವು ಗಲಾಟೆ ಮಾಡುವುದು ಹಿರಿಯರು ಬೈಯ್ಯುವುದು ಹಿಡಿದು ಥಳಿಸುವುದು ಪುನರಾವರ್ತನೆಯಾಗುತ್ತಲೇ ಇರುತ್ತಿತ್ತು. ಆದರೆ ಇದನ್ನು ಪಾಲಕರಾಗಲಿ ಮತ್ತು ಮಕ್ಕಳಾಗಲಿ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಿರಲಿಲ್ಲ. ಮನೋವಿಜ್ಞಾನಿಗಳ ಹತ್ತಿರ ಮಕ್ಕಳನ್ನು ಕೌನ್ಸಲಿಂಗ್ ಗಾಗಿ ಕರೆದೊಯ್ಯುವ ವಿಧಾನವೇ ಆಗ ಬಳಕೆಯಲ್ಲಿರಲಿಲ್ಲ.
ಈ ಮೂರು ದಶಕಗಳ ಹಿಂದಿನ ಮಕ್ಕಳ ಮನಸ್ಥಿತಿಗೂ ಮತ್ತು ಇಂದಿನ ಮಕ್ಕಳ ಮನಸ್ಥಿತಿಗೂ ಹೋಲಿಸಿ ನೋಡಿದಾಗ ಸಾಕಷ್ಟು ಬದಲಾವಣೆ ಕಾಣಿಸುತ್ತದೆ. ಈಗಿನ ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮವಾಗುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ಬೆಂಗಳೂರು ನಗರಕ್ಕೆ ಪ್ರತಿದಿನ ಎಂಟರಿಂದ ಹದಿನಾರು ಮಕ್ಕಳು ಮನೆಬಿಟ್ಟು ಬರುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಹೀಗೆ ಮನೆಬಿಟ್ಟು ಬರುವ ಬಹುತೇಕ ಮಕ್ಕಳಲ್ಲಿ ಹೆಚ್ಚಿನ ಮಕ್ಕಳು ಮನೆಯಲ್ಲಿ ಪಾಲಕರೊಂದಿಗೆ ಮಾಡಿಕೊಳ್ಳುವ ಮನಸ್ಥಾಪವೇ ಮುಖ್ಯ ಕಾರಣ. ಕಳೆದ ವರ್ಷ ಬೆಂಗಳೂರಿನಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಕ್ಕಳ ಬದಲಾಗುತ್ತಿರುವ ಮನಸ್ಥಿತಿಗೊಂದು ಜ್ವಲಂತ ನಿದರ್ಶನ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಆತ್ಮಹತ್ಯೆಯಂಥ ಪ್ರಯತ್ನಕ್ಕೆ ಕೈಹಾಕುತ್ತಿರುವುದು ಪಾಲಕರಾದವರು ಯೋಚಿಸಬೇಕಾದ ಸಂಗತಿ.
ಹೀಗೆ ಮಕ್ಕಳ ಮನಸ್ಥಿತಿ ಬದಲಾಗುತ್ತಿರುವುದಕ್ಕೆ ಅನೇಕ ಕಾರಣಗಳಿವೆ. ಜೊತೆಗೆ ಈ ವಿಷಯವಾಗಿ ಪಾಲಕರದೂ ಬಹಳಷ್ಟು ತಪ್ಪುಗಳಿವೆ. ಬದಲಾಗುತ್ತಿರುವ ಪರಿಸರ ಮತ್ತು ಪಾಲಕರ ದುಡುಕಿನ ನಿರ್ಧಾರಗಳಿಂದಾಗಿ ಮಕ್ಕಳಲ್ಲಿ ಸಾಕಷ್ಟು ಮಾನಸಿಕ ಮಾರ್ಪಾಡುಗಳಾಗುತ್ತಿವೆ.
ನಾವು ನಮ್ಮ ಮಕ್ಕಳ ಸಹಜ ಶಿಕ್ಷಣಕ್ಕೆ ಒತ್ತು ನೀಡುವುದಕ್ಕಿಂತ ಅವರನ್ನು ಸ್ಪರ್ಧೆಗೆ ಸಿದ್ಧಗೊಳಿಸಲು ನೆರವಾಗುವ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಈ ದಿನಗಳಲ್ಲಿ ಮಕ್ಕಳು ತಮ್ಮ ಎರಡನೇ ವರ್ಷಕ್ಕೇ ಶಾಲೆಗೆ ಹೋಗುವ ಅನಿವಾರ್ಯತೆ ಎದುರಾಗಿದೆ. ತಮ್ಮ ಮಕ್ಕಳನ್ನು ವೈದ್ಯ, ಇಂಜಿನಿಯರ್, ಐಪಿಎಸ್, ಐಎಎಸ್ ಮಾಡಬೇಕೆನ್ನುವ ಧಾವಂತಕ್ಕೆ ಕಟ್ಟು ಬಿದ್ದ ಪಾಲಕರು ಮಗುವಿನ ಶಿಶುವಿಹಾರದ ಅನೌಪಚಾರಿಕ ಶಿಕ್ಷಣದಿಂದಲೇ ತಮ್ಮ ಪ್ರಯತ್ನವನ್ನು ಮುಂದುವರೆಸುತ್ತಿರುವರು. ತಮ್ಮ ಮಗು ಹೀಗೆ ಬೆಳೆಯಬೇಕು ಇಂಥದ್ದೇ ಹುದ್ದೆ ಪಡೆಯಬೇಕೆಂದು ಇಚ್ಛಿಸುವ ಪಾಲಕರ ಮನೋಭಾವದ ಪರಿಣಾಮ ಮಗು ಸ್ಪರ್ಧಾತ್ಮಕ ಜಗತ್ತಿಗೆ ಇಷ್ಟವಿರಲಿ ಇಲ್ಲದಿರಲಿ ತನ್ನನ್ನು ಒಡ್ಡಿಕೊಳ್ಳಲೇ ಬೇಕಾಗುವುದು. ಅದಕ್ಕೆ ಪೂರಕವಾಗಿ ಶಾಲೆ, ಮನೆಪಾಠದ ಬಿಡುವಿರದ ಚಟುವಟಿಕೆಗಳ ನಡುವೆ ಮಕ್ಕಳು ತಮ್ಮ ಸಹಜ ಬಾಲ್ಯ ಜೀವನದಿಂದಲೇ ವಂಚಿತರಾಗುತ್ತಿರುವರು. ಜೊತೆಗೆ ಅವರಿಗೆ ದೊರೆಯುವ ಅಲ್ಪ ವಿರಾಮದ ವೇಳೆ ಕೂಡ ನೃತ್ಯ, ಸಂಗೀತ, ಕಂಪ್ಯೂಟರ್ ದಂಥ ತರಬೇತಿಗಳಿಗೆ ವಿನಿಯೋಗವಾಗುತ್ತಿದೆ. ಒಟ್ಟಿನಲ್ಲಿ ತಮ್ಮ ಮಕ್ಕಳಲ್ಲಿ ಪರಿಪೂರ್ಣ ವ್ಯಕ್ತಿತ್ವವನ್ನು ಅರಳಿಸಬೇಕೆನ್ನುವ ಪಾಲಕರ ಹುನ್ನಾರಕ್ಕೆ ಮಕ್ಕಳ ಬಾಲ್ಯ ಬಲಿಯಾಗುತ್ತಿದೆ. ಈಗೀಗ ಬೆಸಿಗೆಯಂಥ ರಜಾದಿನಗಳಲ್ಲಿ ಕೂಡ ಮಕ್ಕಳು ಶಿಬಿರಗಳಿಗೆ ತೆರಳಿ ಪಾಠ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಪಾಲಕರ ಈ ಮನೋಭಾವವನ್ನು ಸರಿಯಾಗಿಯೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಶಾಲೆಗಳು ಬೆಸಿಗೆ ಶಿಬಿರಗಳ ಮೂಲಕ ಮಕ್ಕಳಿಗೆ ತರಬೇತಿ ನೀಡಲು ಮುಂದಾಗುತ್ತಿವೆ. ಹೀಗೆ ಮಗುವೊಂದು ವರ್ಷ ಪೂರ್ತಿ ಶೈಕ್ಷಣಿಕ ವಾತಾವರಣದಲ್ಲೇ ತನ್ನ ಸಮಯ ಕಳೆಯುವ ಸನ್ನಿವೇಶ ಸೃಷ್ಟಿಯಾಗಿದೆ. ಇದಕ್ಕೆಲ್ಲ ಬಹುಪಾಲು ಪಾಲಕರು ಕೊಡುವ ಉತ್ತರ ಇದು ಸ್ಪರ್ಧಾತ್ಮಕ ಯುಗ ಇಲ್ಲಿ ನಿಧಾನಿಸಿದಷ್ಟು ಮಕ್ಕಳು ಹಿಂದುಳಿಯುವ ಅಪಾಯವೇ ಹೆಚ್ಚು ಎಂದು. ಇಂಥದ್ದೊಂದು ಒತ್ತಡ ಮಕ್ಕಳ ಮಾನಸಿಕ ಸ್ಥೈರ್ಯ ಕುಸಿಯುವುದಕ್ಕೆ ಕಾರಣವಾಗುತ್ತಿದೆ.
ವಿಭಕ್ತ ಕುಟುಂಬ ಇದು ಅತಿ ಮುಖ್ಯವಾದ ಸಾಮಾಜಿಕ ಪಲ್ಲಟಗಳಲ್ಲೊಂದು. ಉದ್ಯೋಗ, ಆರ್ಥಿಕ ಹಿನ್ನೆಡೆಯ ಪರಿಣಾಮ ಜನಸಮೂಹ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುತ್ತಿರುವುದರಿಂದ ಅವಿಭಕ್ತ ಕುಟುಂಬಗಳು ಒಡೆದು ಸಣ್ಣ ಸಣ್ಣ ಕುಟುಂಬಗಳಾಗಿ ರೂಪಾಂತರಗೊಳ್ಳುತ್ತಿವೆ. ಕುಟುಂಬವೊಂದು ಒಡೆದು ಸಣ್ಣದಾದಂತೆಲ್ಲ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗೆ ಎದುರಾಗುವ ಸಮಸ್ಯೆಗಳಲ್ಲಿ ಮಕ್ಕಳ ಪಾಲನೆಯೂ ಒಂದು. ವಿಭಕ್ತ ಕುಟುಂಬಗಳಲ್ಲಿ ಸಾಮಾನ್ಯವಾಗಿ ಗಂಡ ಹೆಂಡತಿ ಇಬ್ಬರೂ ಉದ್ಯೋಗಿಗಳಾಗಿರುವುದರಿಂದ ಇಲ್ಲಿ ಮಕ್ಕಳ ಹೊಣೆ ಮನೆಯಲ್ಲಿ ಕೆಲಸ ಮಾಡುವ ಆಯಾಗಳಿಗೋ ಇಲ್ಲವೇ ಈ ಕೆಲಸಕ್ಕೆಂದೇ ಅಸ್ತಿತ್ವಕ್ಕೆ ಬಂದಿರುವ ಮಕ್ಕಳ ಪಾಲನಾ ಕೇಂದ್ರಗಳಿಗೋ ವರ್ಗಾವಣೆಗೊಳ್ಳುತ್ತದೆ. ಹೀಗೆ ತಮ್ಮ ಬಾಲ್ಯ ಜೀವನದ ಅತಿ ಮಹತ್ವದ ದಿನಗಳನ್ನು ಬೇರೆಯವರ ಆಶ್ರಯದಲ್ಲಿ ಕಳೆಯುವ ಮಕ್ಕಳಲ್ಲಿ ಅನಾಥ ಪ್ರಜ್ಞೆಯೊಂದು ಅವರಿಗೆ ಅರಿವಿಲ್ಲದೆ ಪ್ರಬಲವಾಗುತ್ತ ಹೋಗುತ್ತದೆ.
ಇನ್ನು ಕೆಲವು ವಿಭಕ್ತ ಕುಟುಂಬಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ವಸತಿ ಶಾಲೆಗಳಿಗೆ ಸೇರಿಸುವ ಪರಿಪಾಠ ಉಂಟು. ಆಗೆಲ್ಲ ವರ್ಷದ ಅತೀ ಹೆಚ್ಚಿನ ದಿನಗಳಲ್ಲಿ ಮಕ್ಕಳು ಪಾಲಕರಿಂದ ದೂರವಿರಬೇಕಾಗುವುದು. ಹೀಗೆ ಕುಟುಂಬದ ವಾತಾವರಣದಿಂದಲೇ ದೂರವಿರುವ ಮಕ್ಕಳಲ್ಲಿ ಸಾಕಷ್ಟು ಮಾನಸಿಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇಂಥ ಮಕ್ಕಳು ಕೌಟಂಬಿಕ ವಾತಾವರಣದಲ್ಲಿ ಬೆಳೆಯುತ್ತಿರುವ ಮಕ್ಕಳೊಂದಿಗೆ ಹೋಲಿಸಿದಾಗ ಒಂದಿಷ್ಟು ಒರಟಾಗಿ ವರ್ತಿಸುವ ಸಾಧ್ಯತೆಯೇ ಹೆಚ್ಚು.
ಈ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣ ಹೊರೆಯಾಗುತ್ತಿದೆ. ಮಕ್ಕಳು ಅತ್ಯಂತ ಜಟಿಲ ವಿಷಯಗಳನ್ನು ಶಾಲೆಯಲ್ಲಿ ಕಲಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಈಗೀಗ ಕೇಂದ್ರ ಪಠ್ಯಕ್ರಮದ ಶಿಕ್ಷಣ ಅನಿವಾರ್ಯವಾಗುತ್ತಿರುವುದರಿಂದ ಮಕ್ಕಳು ಆ ಶಿಕ್ಷಣಕ್ಕೆ ಹೊಂದಿಕೊಳ್ಳುವುದೇ ಕಷ್ಟವಾಗುತ್ತಿದೆ. ಕೇಂದ್ರ ಪಠ್ಯಕ್ರಮದಲ್ಲಿ ಮಗು ತನ್ನ ಪರಿಸರಕ್ಕೆ ಸಂಬಂಧವೇ ಇಲ್ಲದ ಅಪರಿಚಿತ ಸಂಗತಿಗಳನ್ನು ಅಭ್ಯಾಸ ಮಾಡಬೇಕಾಗಿದೆ. ಇದರೊಂದಿಗೆ ತನ್ನ ಪರಿಸರದ ಭಾಷೆಯಿಂದ ದೂರವಾಗಿ ಇಂಗ್ಲಿಷ್ ಮಾಧ್ಯಮದ ಮೂಲಕ ಕಲಿಯುವ ಸಂದರ್ಭ ಮಕ್ಕಳು ತೀರ ಒತ್ತಡಕ್ಕೆ ಒಳಗಾಗುತ್ತಿರುವರು. ಭಾಷೆ ಮತ್ತು ವಿಷಯಗಳೆರಡೂ ಅಪರಿಚಿತವಾದಾಗ ಅಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಸಹಜವಾಗಿಯೇ ಕುಂಠಿತಗೊಳ್ಳುತ್ತದೆ. ಈ ಒಂದು ಸಮಸ್ಯೆಯ ನಿವಾರಣೆಗಾಗಿ ಕೇಂದ್ರೀಯ ಪಠ್ಯಕ್ರಮದ ಶಾಲೆಗಳು ಮಕ್ಕಳನ್ನು ಹತ್ತರಿಂದ ಹನ್ನೆರಡು ಗಂಟೆಗಳವರೆಗೆ ಶಾಲೆಯ ಪರಿಸರದಲ್ಲೇ ಉಳಿಸಿಕೊಳ್ಳುತ್ತಿವೆ. ಇನ್ನು ವಸತಿ ಶಾಲೆಗಳಲ್ಲಿ ಮಕ್ಕಳು ತಮ್ಮ ಶಿಕ್ಷಣದ ವಿಷಯವನ್ನು ಹೊರತು ಪಡಿಸಿ ಬೇರೆ ಯಾವ ವಿಷಯಗಳನ್ನು ಚರ್ಚಿಸುವಂತಿಲ್ಲ.ಈ ಪ್ರಕಾರದ ಬಿಡುವಿಲ್ಲದ ಅಭ್ಯಾಸದಿಂದ ಮಕ್ಕಳು ಅನುಭವಿಸುತ್ತಿರುವ ಒತ್ತಡ ಮತ್ತು ಉದ್ವಿಗ್ನತೆ ಅವರ ಮಾನಸಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಆಯಾ ರಾಜ್ಯಗಳಲ್ಲಿ ಮಾತೃ ಭಾಷೆಯ ಮೂಲಕ ರಾಜ್ಯ ಪಠ್ಯಕ್ರಮದ ಕಲಿಯುವಿಕೆಗೆ ಅವಕಾಶವಿದ್ದರೂ ಹೆಚ್ಚಿನ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಇಂಗ್ಲಿಷ್ ಮಾಧ್ಯಮ ಮತ್ತು ಕೇಂದ್ರ ಪಠ್ಯಕ್ರಮವನ್ನೆ ಆಯ್ಕೆ ಮಾಡಿಕೊಳ್ಳುತ್ತಿರುವರು. ಇಂಗ್ಲಿಷ್ ಜಾಗತಿಕ ಭಾಷೆಯಾಗಿರುವುದರಿಂದ ಅದು ಬದುಕಿನ ಭಾಷೆ ಎನ್ನುವ ಭಾವನೆ ನಮ್ಮಲ್ಲಿ ಬಲವಾಗುತ್ತಿದೆ. ಆದ್ದರಿಂದ ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯಕ್ಕಿಂತ ಇಲ್ಲಿ ಮಕ್ಕಳ ಭವಿಷ್ಯ ಮಹತ್ವ ಪಡೆದುಕೊಳ್ಳುತ್ತಿದೆ. ಇಷ್ಟವಿರಲಿ ಇಲ್ಲದಿರಲಿ ಮಕ್ಕಳು ಇಂಗ್ಲಿಷ್ ಮಾಧ್ಯಮದ ಕೇಂದ್ರೀಯ ಪಠ್ಯಕ್ರಮದ ಶಿಕ್ಷಣಕ್ಕೆ ಅನಿವಾರ್ಯವಾಗಿ ಒಗ್ಗಿಕೊಳ್ಳಬೇಕಿದೆ. ಅದೆಷ್ಟೋ ಸಂದರ್ಭಗಳಲ್ಲಿ ಈ ಹೊರೆಯಾಗುತ್ತಿರುವ ಶಿಕ್ಷಣದಿಂದಾಗಿ ಮಕ್ಕಳು ಮನೆಬಿಟ್ಟು ಹೋಗುತ್ತಿರುವರು. ಕೆಲವು ಮಕ್ಕಳು ಆತ್ಮಹತ್ಯೆಯಂಥ ಪ್ರಯತ್ನಕ್ಕೂ ಕೈಹಾಕಿದ್ದುಂಟು.
ಮಕ್ಕಳ ಮನೋವಿಕಾಸದ ಮೇಲೆ ದೃಶ್ಯ ಮಾಧ್ಯಮಗಳಾದ ಸಿನಿಮಾ ಮತ್ತು ಟಿವಿ ಚಾನೆಲ್ ಗಳು ಕೆಟ್ಟ ಪರಿಣಾಮವನ್ನುಂಟು ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ತಯ್ಯಾರಾಗುತ್ತಿರುವ ಬಹುತೇಕ ಸಿನಿಮಾಗಳಲ್ಲಿ ಮಕ್ಕಳ ಸದಭಿರುಚಿಗೆ ಅನುಗುಣವಾದ ಮತ್ತು ಅವರ ಮೇಲೆ ಒಳ್ಳೆಯ ಪರಿಣಾಮವನ್ನುಂಟು ಮಾಡುವ ಕಥೆಯ ಕೊರತೆ ಎದ್ದು ಕಾಣುತ್ತಿದೆ. ಈ ಸಮಸ್ಯೆಯಿಂದ ಯಾವ ಭಾಷೆಯ ಸಿನಿಮಾಗಳೂ ಹೊರತಾಗಿಲ್ಲ. ಇಂದಿನ ದಿನಗಳಲ್ಲಿ ಬಹಳಷ್ಟು ಸಿನಿಮಾಗಳಲ್ಲಿನ ಕಥೆ ಭೂಗತ ಲೋಕಕ್ಕೆ ಸೀಮಿತವಾಗುತ್ತಿರುವುದರಿಂದ ಅಂಥ ಕಥಾವಸ್ತುವಿನ ಸಿನಿಮಾಗಳೇ ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತಿರುವುದು ದುರಂತದ ಸಂಗತಿ. ಸಿನಿಮಾ ಕಲಾವಿದರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಗುವೊಂದು ಇಂದಿನ ಸಿನಿಮಾಗಳನ್ನು ವೀಕ್ಷಿಸಿದ ನಂತರ ಕೈಯಲ್ಲಿ ಮಚ್ಚು ಹಿಡಿಯಬೇಕೆನಿಸುತ್ತದೆ ಎಂದ ಮಾತು ಇವತ್ತು ದೃಶ್ಯ ಮಾಧ್ಯಮ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎನ್ನುವುದಕ್ಕೊಂದು ಉತ್ತಮ ಉದಾಹರಣೆ.
ಜೊತೆಗೆ ನಮ್ಮ ಸಿನಿಮಾ ನಿರ್ದೇಶಕರುಗಳಿಗೆ ತಮ್ಮ ಚಿತ್ರಗಳಲ್ಲಿ ಮಕ್ಕಳನ್ನು ಕೊಲೆಗಾರರನ್ನಾಗಿಯೋ ಇಲ್ಲವೇ ಕಳ್ಳರನ್ನಾಗಿಯೋ ಚಿತ್ರಿಸುವುದರಲ್ಲೇ ಹೆಚ್ಚಿನ ಆಸಕ್ತಿ. ಕೆಲವು ಸಿನಿಮಾಗಳಲ್ಲಿ ಶಾಲೆಗೆ ಹೋಗುವ ವಯಸ್ಸಿನ ಮಕ್ಕಳು ಪ್ರೀತಿ ಪ್ರಣಯದಂಥ ಸನ್ನಿವೇಶಗಳಲ್ಲಿ ಅಭಿನಯಿಸಿರುವ ಉದಾಹರಣೆಯೂ ಉಂಟು. ಕನ್ನಡ ಸಿನಿಮಾ ಲೋಕದಲ್ಲಿನ ಇನ್ನೊಂದು ಗಂಭೀರ ಸಮಸ್ಯೆ ಎಂದರೆ ಈಗೀಗ ಮಕ್ಕಳ ಚಿತ್ರಗಳ ನಿರ್ಮಾಣದಲ್ಲಿ ಸಾಕಷ್ಟು ಇಳಿಮುಖವಾಗಿದೆ. ವರ್ಷಕ್ಕೆ ಒಂದು ಅಥವಾ ಎರಡು ಮಕ್ಕಳ ಸಿನಿಮಾ ತಯ್ಯಾರಾಗುವುದೇ ಅತ್ಯಂತ ದೊಡ್ಡ ಸಂಗತಿಯಾಗಿದೆ. ಸಧ್ಯದ ಮಟ್ಟಿಗೆ ಮಕ್ಕಳ ಚಿತ್ರಗಳ ಕೊರತೆ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಬಹು ದೊಡ್ಡ ಸಮಸ್ಯೆಯನ್ನು ಹುಟ್ಟುಹಾಕಿದೆ.
ಇನ್ನು ಈ ದಿನಗಳಲ್ಲಿ ದಿನದ ೨೪ ಗಂಟೆಗಳು ನಾವು ಕುಳಿತಲ್ಲೇ ಮನೋರಂಜನೆಯನ್ನು ಕೊಡುತ್ತಿರುವ ಟಿವಿ ಚಾನೆಲ್ ಗಳಿಂದಾಗಿ ಮಕ್ಕಳ ಅಭಿರುಚಿಯಲ್ಲಿ ಸಾಕಷ್ಟು ಮಾರ್ಪಾಡುಗಳಾಗಿವೆ. ಅಲ್ಲಿಯೂ ಮಕ್ಕಳ ಸಂಬಂದಿ ಕಾರ್ಯಕ್ರಮಗಳ ಕೊರತೆಯಿಂದಾಗಿ ಮಕ್ಕಳು ಅನಿವಾರ್ಯವಾಗಿ ಹಿರಿಯರಿಗಾಗಿ ಪ್ರಸಾರವಾಗುವ ಕಾರ್ಯಕ್ರಮಗಳನ್ನೇ ವೀಕ್ಷಿಸ ಬೇಕಾಗಿದೆ. ಕೊಲೆ, ಕಳ್ಳತನ, ಅನೈತಿಕ ಸಂಬಂಧಗಳ ಕಥೆಗಳನ್ನು ಮೊಗೆ ಮೊಗೆದು ಕೊಡುತ್ತಿರುವ ಈ ಟಿವಿ ಚಾನೆಲ್ ಗಳಿಂದಾಗಿ ಮಕ್ಕಳ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ.
೧. ಮಕ್ಕಳ ಮೇಲಿನ ಮಾನಸಿಕ ಒತ್ತಡ ಕಡಿಮೆಯಾಗಲಿ. ಇದು ಪಾಲಕರ ಪ್ರಥಮ ಆದ್ಯತೆಗಳಲ್ಲೊಂದು. ಮಕ್ಕಳನ್ನು ವೈದ್ಯ, ಇಂಜಿನಿಯರ್ ರನ್ನಾಗಿ ಮಾಡಬೇಕೆನ್ನುವುದಕ್ಕಿಂತ ಅವರನ್ನು ಮನುಷ್ಯರನ್ನಾಗಿ ರೂಪಿಸುವುದು ನಮ್ಮ ಮೊದಲ ಆದ್ಯತೆಯಾಗಲಿ.
೨. ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಶೈಕ್ಷಣಿಕ ಚಟುವಟಿಕೆಗಳಲ್ಲೇ ಕಳೆಯುವಂಥ ವಾತಾವರಣ ದೂರವಾಗಲಿ. ಆಟ ಮತ್ತಿತರ ದೈಹಿಕ ಚಟುವಟಿಕೆಗಳಿಗೂ ಅವಕಾಶವಿರಲಿ.
೩. ವಿಭಕ್ತ ಕುಟುಂಬಗಳು ಈ ದಿನಗಳಲ್ಲಿ ಅನಿವಾರ್ಯವಾದರೂ ಮಕ್ಕಳನ್ನು ಮನೆಯ ಪರಿಸರದಿಂದ ದೂರವಿಡುವುದು ಅವರ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಅದೊಂದು ತಪ್ಪು ನಿರ್ಧಾರ. ಮಕ್ಕಳು ಒಂದು ನಿರ್ಧಿಷ್ಟ ವಯಸ್ಸಿನವರೆಗೆ ಬೆಳೆಯುವವರೆಗಾದರೂ ಮನೆಯ ಗೃಹಿಣಿ ತಾಯಿಯಾಗಿ ಮಕ್ಕಳಿಗೆ ಮಮತೆ ನೀಡಲಿ. ಅತೀ ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ವಸತಿ ಶಾಲೆಗೆ ಸೇರಿಸುವುದು ಅದು ನಮ್ಮ ದುಡುಕಿನ ನಿರ್ಧಾರಗಳಲ್ಲೊಂದು.
೪. ಪಾಲಕರ ಕೆಲಸದ ಒತ್ತಡ ಮತ್ತು ಅದರಿಂದಾಗುವ ಮಾನಸಿಕ ಉದ್ವಿಗ್ನತೆ ಮಕ್ಕಳ ಮೇಲೆ ನೇರವಾಗಿ ಪರಿಣಾಮ ಬೀರದಿರಲಿ. ಮಕ್ಕಳ ಮೇಲೆ ಕೋಪಗೊಳ್ಳುವುದು ಮತ್ತು ದೈಹಿಕವಾಗಿ ದಂಡಿಸುವುದರಿಂದ ಅದು ಅವರನ್ನು ಘಾಸಿಗೊಳಿಸಿ ತಪ್ಪು ನಡೆಗೆ ಎಡೆ ಮಾಡಿಕೊಡುತ್ತದೆ.
೫. ಮಕ್ಕಳ ಶಿಕ್ಷಣದ ವಿಷಯವಾಗಿ ಪಾಲಕರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಳ್ಳುವುದು ಅನೇಕ ಸಂದರ್ಭಗಳಲ್ಲಿ ಅದು ನಿರಾಸೆಗೆ ದಾರಿಮಾಡಿ ಕೊಡಬಹುದು. ಹೀಗೆ ಎದುರಾಗುವ ನಿರಾಸೆಯಿಂದ ಮಕ್ಕಳನ್ನು ಹಿಯ್ಯಾಳಿಸುವುದು ಇಲ್ಲವೇ ಇತರರೆದುರು ಅವಮಾನಿಸುವುದು ಮಾಡಿದಲ್ಲಿ ನಮ್ಮ ಈ ವರ್ತನೆ ಅವರ ಶೈಕ್ಷಣಿಕ ಪ್ರಗತಿಯನ್ನೇ ಕುಂಠಿತಗೊಳಿಸಬಹುದು. ಆದ್ದರಿಂದ ಮಕ್ಕಳ ಆಸಕ್ತಿಗೂ ಆದ್ಯತೆ ಇರಲಿ.
೬. ಪಾಲಕರು ದೃಶ್ಯ ಮಾಧ್ಯಮದ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ ಒಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಮಕ್ಕಳ ಮಾನಸಿಕ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದು.
೭. ಉತ್ತಮ ಸಾಹಿತ್ಯದ ಓದು ಸಹ ಮನೋರಂಜನೆಯ ಒಂದು ಭಾಗ. ಆದ್ದರಿಂದ ಮಕ್ಕಳು ಓದಿನಂಥ ಸೃಜನಾತ್ಮಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂಥ ವಾತಾವರಣ ಮನೆಯಲ್ಲಿ ನಿರ್ಮಾಣವಾಗಲಿ.
೮. ಸಿನಿಮಾ ಮಾಧ್ಯಮದಲ್ಲಿ ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಾಯಕವಾಗುವ ಸದಭಿರುಚಿಯ ಮಕ್ಕಳ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣಗೊಳ್ಳಲಿ.
ಇದು ಕೆಲವು ವರ್ಷಗಳ ಹಿಂದಿನ ಮಾತು 'ಚೆಲುವಿನ ಚಿತ್ತಾರ' ಎನ್ನುವ ಸಿನಿಮಾವನ್ನು ವೀಕ್ಷಿಸಿದ ಶಾಲಾ ಬಾಲಕಿಯೋರ್ವಳು ಆ ಸಿನಿಮಾದ ನಾಯಕ ನಟನನ್ನು ನೋಡಲೇ ಬೇಕೆಂದು ಹಠ ಹಿಡಿದಳು. ಅನ್ನ, ನೀರು ಬಿಟ್ಟು ಆತನ ಬರುವಿಕೆಗಾಗಿ ಕಾದು ಕುಳಿತಳು. ಮೊದಮೊದಲು ಇದನ್ನು ಗಂಭೀರವಾಗಿ ಪರಿಗಣಿಸದ ಪಾಲಕರಿಗೆ ನಂತರ ಇದೊಂದು ಸಮಸ್ಯೆಯಾಗಿ ಕಾಡಲಾರಂಭಿಸಿತು. ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಾರದೆಂದು ಆ ನಟನನ್ನು ಆಸ್ಪತ್ರೆಗೆ ಕರೆಸಿ ಭೇಟಿಗೆ ಅವಕಾಶ ಮಾಡಿಕೊಡಲಾಯಿತು. ಆನಂತರವೇ ಆ ಮಗುವಿನ ಮುಖದಲ್ಲಿ ನಗುವರಳಿದ್ದು. ಇದು ಇವತ್ತಿನ ದೃಶ್ಯ ಮಾಧ್ಯಮ ಮಕ್ಕಳ ಮೇಲೆ ಬೀರುತ್ತಿರುವ ಪರಿಣಾಮಕ್ಕೊಂದು ಉದಾಹರಣೆ. ಒಟ್ಟಿನಲ್ಲಿ ಮನಸ್ಸನ್ನು ಪ್ರಚೋದಿಸುವ ಹಾಗೂ ಉದ್ವಿಗ್ನತೆಗೆ ಎಡೆಮಾಡುವ ವಾತಾವರಣದಲ್ಲಿ ನಮ್ಮ ಮಕ್ಕಳು ತಮ್ಮ ಬಾಲ್ಯವನ್ನು ಕಳೆಯುತ್ತಿರುವರು. ಇಂಥ ಅಸಹಜ ವಾತಾವರಣದ ಪರಿಣಾಮ ಅವರು ತಮ್ಮ ಸಹಜ ಬಾಲ್ಯ ಜೀವನದಿಂದ ವಂಚಿತರಾಗುತ್ತಿರುವರು. ಮಕ್ಕಳ ಬಾಲ್ಯದ ಬದುಕಿಗೆ ಪೂರಕವಾಗುವ ಪರಿಸರವನ್ನು ನಾವು ಕಟ್ಟಿಕೊಡದೆ ಹೋದಲ್ಲಿ ಅವರು ಕಳೆದು ಹೋಗುವುದಂತೂ ನಿಶ್ಚಿತ.
ಸ್ಪರ್ಧೆ ಎನ್ನುವ ಪ್ರತಿಕೂಲ ವಾತಾವರಣ
ನ್ಯೂಕ್ಲಿಯರ್ ಕುಟುಂಬಗಳು
ಇನ್ನು ಕೆಲವು ವಿಭಕ್ತ ಕುಟುಂಬಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ವಸತಿ ಶಾಲೆಗಳಿಗೆ ಸೇರಿಸುವ ಪರಿಪಾಠ ಉಂಟು. ಆಗೆಲ್ಲ ವರ್ಷದ ಅತೀ ಹೆಚ್ಚಿನ ದಿನಗಳಲ್ಲಿ ಮಕ್ಕಳು ಪಾಲಕರಿಂದ ದೂರವಿರಬೇಕಾಗುವುದು. ಹೀಗೆ ಕುಟುಂಬದ ವಾತಾವರಣದಿಂದಲೇ ದೂರವಿರುವ ಮಕ್ಕಳಲ್ಲಿ ಸಾಕಷ್ಟು ಮಾನಸಿಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇಂಥ ಮಕ್ಕಳು ಕೌಟಂಬಿಕ ವಾತಾವರಣದಲ್ಲಿ ಬೆಳೆಯುತ್ತಿರುವ ಮಕ್ಕಳೊಂದಿಗೆ ಹೋಲಿಸಿದಾಗ ಒಂದಿಷ್ಟು ಒರಟಾಗಿ ವರ್ತಿಸುವ ಸಾಧ್ಯತೆಯೇ ಹೆಚ್ಚು.
ಹೊರೆಯಾಗುತ್ತಿರುವ ಶಿಕ್ಷಣ
ಈ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣ ಹೊರೆಯಾಗುತ್ತಿದೆ. ಮಕ್ಕಳು ಅತ್ಯಂತ ಜಟಿಲ ವಿಷಯಗಳನ್ನು ಶಾಲೆಯಲ್ಲಿ ಕಲಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಈಗೀಗ ಕೇಂದ್ರ ಪಠ್ಯಕ್ರಮದ ಶಿಕ್ಷಣ ಅನಿವಾರ್ಯವಾಗುತ್ತಿರುವುದರಿಂದ ಮಕ್ಕಳು ಆ ಶಿಕ್ಷಣಕ್ಕೆ ಹೊಂದಿಕೊಳ್ಳುವುದೇ ಕಷ್ಟವಾಗುತ್ತಿದೆ. ಕೇಂದ್ರ ಪಠ್ಯಕ್ರಮದಲ್ಲಿ ಮಗು ತನ್ನ ಪರಿಸರಕ್ಕೆ ಸಂಬಂಧವೇ ಇಲ್ಲದ ಅಪರಿಚಿತ ಸಂಗತಿಗಳನ್ನು ಅಭ್ಯಾಸ ಮಾಡಬೇಕಾಗಿದೆ. ಇದರೊಂದಿಗೆ ತನ್ನ ಪರಿಸರದ ಭಾಷೆಯಿಂದ ದೂರವಾಗಿ ಇಂಗ್ಲಿಷ್ ಮಾಧ್ಯಮದ ಮೂಲಕ ಕಲಿಯುವ ಸಂದರ್ಭ ಮಕ್ಕಳು ತೀರ ಒತ್ತಡಕ್ಕೆ ಒಳಗಾಗುತ್ತಿರುವರು. ಭಾಷೆ ಮತ್ತು ವಿಷಯಗಳೆರಡೂ ಅಪರಿಚಿತವಾದಾಗ ಅಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಸಹಜವಾಗಿಯೇ ಕುಂಠಿತಗೊಳ್ಳುತ್ತದೆ. ಈ ಒಂದು ಸಮಸ್ಯೆಯ ನಿವಾರಣೆಗಾಗಿ ಕೇಂದ್ರೀಯ ಪಠ್ಯಕ್ರಮದ ಶಾಲೆಗಳು ಮಕ್ಕಳನ್ನು ಹತ್ತರಿಂದ ಹನ್ನೆರಡು ಗಂಟೆಗಳವರೆಗೆ ಶಾಲೆಯ ಪರಿಸರದಲ್ಲೇ ಉಳಿಸಿಕೊಳ್ಳುತ್ತಿವೆ. ಇನ್ನು ವಸತಿ ಶಾಲೆಗಳಲ್ಲಿ ಮಕ್ಕಳು ತಮ್ಮ ಶಿಕ್ಷಣದ ವಿಷಯವನ್ನು ಹೊರತು ಪಡಿಸಿ ಬೇರೆ ಯಾವ ವಿಷಯಗಳನ್ನು ಚರ್ಚಿಸುವಂತಿಲ್ಲ.ಈ ಪ್ರಕಾರದ ಬಿಡುವಿಲ್ಲದ ಅಭ್ಯಾಸದಿಂದ ಮಕ್ಕಳು ಅನುಭವಿಸುತ್ತಿರುವ ಒತ್ತಡ ಮತ್ತು ಉದ್ವಿಗ್ನತೆ ಅವರ ಮಾನಸಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಆಯಾ ರಾಜ್ಯಗಳಲ್ಲಿ ಮಾತೃ ಭಾಷೆಯ ಮೂಲಕ ರಾಜ್ಯ ಪಠ್ಯಕ್ರಮದ ಕಲಿಯುವಿಕೆಗೆ ಅವಕಾಶವಿದ್ದರೂ ಹೆಚ್ಚಿನ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಇಂಗ್ಲಿಷ್ ಮಾಧ್ಯಮ ಮತ್ತು ಕೇಂದ್ರ ಪಠ್ಯಕ್ರಮವನ್ನೆ ಆಯ್ಕೆ ಮಾಡಿಕೊಳ್ಳುತ್ತಿರುವರು. ಇಂಗ್ಲಿಷ್ ಜಾಗತಿಕ ಭಾಷೆಯಾಗಿರುವುದರಿಂದ ಅದು ಬದುಕಿನ ಭಾಷೆ ಎನ್ನುವ ಭಾವನೆ ನಮ್ಮಲ್ಲಿ ಬಲವಾಗುತ್ತಿದೆ. ಆದ್ದರಿಂದ ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯಕ್ಕಿಂತ ಇಲ್ಲಿ ಮಕ್ಕಳ ಭವಿಷ್ಯ ಮಹತ್ವ ಪಡೆದುಕೊಳ್ಳುತ್ತಿದೆ. ಇಷ್ಟವಿರಲಿ ಇಲ್ಲದಿರಲಿ ಮಕ್ಕಳು ಇಂಗ್ಲಿಷ್ ಮಾಧ್ಯಮದ ಕೇಂದ್ರೀಯ ಪಠ್ಯಕ್ರಮದ ಶಿಕ್ಷಣಕ್ಕೆ ಅನಿವಾರ್ಯವಾಗಿ ಒಗ್ಗಿಕೊಳ್ಳಬೇಕಿದೆ. ಅದೆಷ್ಟೋ ಸಂದರ್ಭಗಳಲ್ಲಿ ಈ ಹೊರೆಯಾಗುತ್ತಿರುವ ಶಿಕ್ಷಣದಿಂದಾಗಿ ಮಕ್ಕಳು ಮನೆಬಿಟ್ಟು ಹೋಗುತ್ತಿರುವರು. ಕೆಲವು ಮಕ್ಕಳು ಆತ್ಮಹತ್ಯೆಯಂಥ ಪ್ರಯತ್ನಕ್ಕೂ ಕೈಹಾಕಿದ್ದುಂಟು.
ದೃಶ್ಯ ಮಾಧ್ಯಮ
ಜೊತೆಗೆ ನಮ್ಮ ಸಿನಿಮಾ ನಿರ್ದೇಶಕರುಗಳಿಗೆ ತಮ್ಮ ಚಿತ್ರಗಳಲ್ಲಿ ಮಕ್ಕಳನ್ನು ಕೊಲೆಗಾರರನ್ನಾಗಿಯೋ ಇಲ್ಲವೇ ಕಳ್ಳರನ್ನಾಗಿಯೋ ಚಿತ್ರಿಸುವುದರಲ್ಲೇ ಹೆಚ್ಚಿನ ಆಸಕ್ತಿ. ಕೆಲವು ಸಿನಿಮಾಗಳಲ್ಲಿ ಶಾಲೆಗೆ ಹೋಗುವ ವಯಸ್ಸಿನ ಮಕ್ಕಳು ಪ್ರೀತಿ ಪ್ರಣಯದಂಥ ಸನ್ನಿವೇಶಗಳಲ್ಲಿ ಅಭಿನಯಿಸಿರುವ ಉದಾಹರಣೆಯೂ ಉಂಟು. ಕನ್ನಡ ಸಿನಿಮಾ ಲೋಕದಲ್ಲಿನ ಇನ್ನೊಂದು ಗಂಭೀರ ಸಮಸ್ಯೆ ಎಂದರೆ ಈಗೀಗ ಮಕ್ಕಳ ಚಿತ್ರಗಳ ನಿರ್ಮಾಣದಲ್ಲಿ ಸಾಕಷ್ಟು ಇಳಿಮುಖವಾಗಿದೆ. ವರ್ಷಕ್ಕೆ ಒಂದು ಅಥವಾ ಎರಡು ಮಕ್ಕಳ ಸಿನಿಮಾ ತಯ್ಯಾರಾಗುವುದೇ ಅತ್ಯಂತ ದೊಡ್ಡ ಸಂಗತಿಯಾಗಿದೆ. ಸಧ್ಯದ ಮಟ್ಟಿಗೆ ಮಕ್ಕಳ ಚಿತ್ರಗಳ ಕೊರತೆ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಬಹು ದೊಡ್ಡ ಸಮಸ್ಯೆಯನ್ನು ಹುಟ್ಟುಹಾಕಿದೆ.
ಇನ್ನು ಈ ದಿನಗಳಲ್ಲಿ ದಿನದ ೨೪ ಗಂಟೆಗಳು ನಾವು ಕುಳಿತಲ್ಲೇ ಮನೋರಂಜನೆಯನ್ನು ಕೊಡುತ್ತಿರುವ ಟಿವಿ ಚಾನೆಲ್ ಗಳಿಂದಾಗಿ ಮಕ್ಕಳ ಅಭಿರುಚಿಯಲ್ಲಿ ಸಾಕಷ್ಟು ಮಾರ್ಪಾಡುಗಳಾಗಿವೆ. ಅಲ್ಲಿಯೂ ಮಕ್ಕಳ ಸಂಬಂದಿ ಕಾರ್ಯಕ್ರಮಗಳ ಕೊರತೆಯಿಂದಾಗಿ ಮಕ್ಕಳು ಅನಿವಾರ್ಯವಾಗಿ ಹಿರಿಯರಿಗಾಗಿ ಪ್ರಸಾರವಾಗುವ ಕಾರ್ಯಕ್ರಮಗಳನ್ನೇ ವೀಕ್ಷಿಸ ಬೇಕಾಗಿದೆ. ಕೊಲೆ, ಕಳ್ಳತನ, ಅನೈತಿಕ ಸಂಬಂಧಗಳ ಕಥೆಗಳನ್ನು ಮೊಗೆ ಮೊಗೆದು ಕೊಡುತ್ತಿರುವ ಈ ಟಿವಿ ಚಾನೆಲ್ ಗಳಿಂದಾಗಿ ಮಕ್ಕಳ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ.
ಮಾಡಬೇಕಾದದ್ದೇನು
೧. ಮಕ್ಕಳ ಮೇಲಿನ ಮಾನಸಿಕ ಒತ್ತಡ ಕಡಿಮೆಯಾಗಲಿ. ಇದು ಪಾಲಕರ ಪ್ರಥಮ ಆದ್ಯತೆಗಳಲ್ಲೊಂದು. ಮಕ್ಕಳನ್ನು ವೈದ್ಯ, ಇಂಜಿನಿಯರ್ ರನ್ನಾಗಿ ಮಾಡಬೇಕೆನ್ನುವುದಕ್ಕಿಂತ ಅವರನ್ನು ಮನುಷ್ಯರನ್ನಾಗಿ ರೂಪಿಸುವುದು ನಮ್ಮ ಮೊದಲ ಆದ್ಯತೆಯಾಗಲಿ.
೨. ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಶೈಕ್ಷಣಿಕ ಚಟುವಟಿಕೆಗಳಲ್ಲೇ ಕಳೆಯುವಂಥ ವಾತಾವರಣ ದೂರವಾಗಲಿ. ಆಟ ಮತ್ತಿತರ ದೈಹಿಕ ಚಟುವಟಿಕೆಗಳಿಗೂ ಅವಕಾಶವಿರಲಿ.
೩. ವಿಭಕ್ತ ಕುಟುಂಬಗಳು ಈ ದಿನಗಳಲ್ಲಿ ಅನಿವಾರ್ಯವಾದರೂ ಮಕ್ಕಳನ್ನು ಮನೆಯ ಪರಿಸರದಿಂದ ದೂರವಿಡುವುದು ಅವರ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಅದೊಂದು ತಪ್ಪು ನಿರ್ಧಾರ. ಮಕ್ಕಳು ಒಂದು ನಿರ್ಧಿಷ್ಟ ವಯಸ್ಸಿನವರೆಗೆ ಬೆಳೆಯುವವರೆಗಾದರೂ ಮನೆಯ ಗೃಹಿಣಿ ತಾಯಿಯಾಗಿ ಮಕ್ಕಳಿಗೆ ಮಮತೆ ನೀಡಲಿ. ಅತೀ ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ವಸತಿ ಶಾಲೆಗೆ ಸೇರಿಸುವುದು ಅದು ನಮ್ಮ ದುಡುಕಿನ ನಿರ್ಧಾರಗಳಲ್ಲೊಂದು.
೪. ಪಾಲಕರ ಕೆಲಸದ ಒತ್ತಡ ಮತ್ತು ಅದರಿಂದಾಗುವ ಮಾನಸಿಕ ಉದ್ವಿಗ್ನತೆ ಮಕ್ಕಳ ಮೇಲೆ ನೇರವಾಗಿ ಪರಿಣಾಮ ಬೀರದಿರಲಿ. ಮಕ್ಕಳ ಮೇಲೆ ಕೋಪಗೊಳ್ಳುವುದು ಮತ್ತು ದೈಹಿಕವಾಗಿ ದಂಡಿಸುವುದರಿಂದ ಅದು ಅವರನ್ನು ಘಾಸಿಗೊಳಿಸಿ ತಪ್ಪು ನಡೆಗೆ ಎಡೆ ಮಾಡಿಕೊಡುತ್ತದೆ.
೫. ಮಕ್ಕಳ ಶಿಕ್ಷಣದ ವಿಷಯವಾಗಿ ಪಾಲಕರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಳ್ಳುವುದು ಅನೇಕ ಸಂದರ್ಭಗಳಲ್ಲಿ ಅದು ನಿರಾಸೆಗೆ ದಾರಿಮಾಡಿ ಕೊಡಬಹುದು. ಹೀಗೆ ಎದುರಾಗುವ ನಿರಾಸೆಯಿಂದ ಮಕ್ಕಳನ್ನು ಹಿಯ್ಯಾಳಿಸುವುದು ಇಲ್ಲವೇ ಇತರರೆದುರು ಅವಮಾನಿಸುವುದು ಮಾಡಿದಲ್ಲಿ ನಮ್ಮ ಈ ವರ್ತನೆ ಅವರ ಶೈಕ್ಷಣಿಕ ಪ್ರಗತಿಯನ್ನೇ ಕುಂಠಿತಗೊಳಿಸಬಹುದು. ಆದ್ದರಿಂದ ಮಕ್ಕಳ ಆಸಕ್ತಿಗೂ ಆದ್ಯತೆ ಇರಲಿ.
೬. ಪಾಲಕರು ದೃಶ್ಯ ಮಾಧ್ಯಮದ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ ಒಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಮಕ್ಕಳ ಮಾನಸಿಕ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದು.
೭. ಉತ್ತಮ ಸಾಹಿತ್ಯದ ಓದು ಸಹ ಮನೋರಂಜನೆಯ ಒಂದು ಭಾಗ. ಆದ್ದರಿಂದ ಮಕ್ಕಳು ಓದಿನಂಥ ಸೃಜನಾತ್ಮಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂಥ ವಾತಾವರಣ ಮನೆಯಲ್ಲಿ ನಿರ್ಮಾಣವಾಗಲಿ.
೮. ಸಿನಿಮಾ ಮಾಧ್ಯಮದಲ್ಲಿ ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಾಯಕವಾಗುವ ಸದಭಿರುಚಿಯ ಮಕ್ಕಳ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣಗೊಳ್ಳಲಿ.
ಕೊನೆಯ ಮಾತು
ಇದು ಕೆಲವು ವರ್ಷಗಳ ಹಿಂದಿನ ಮಾತು 'ಚೆಲುವಿನ ಚಿತ್ತಾರ' ಎನ್ನುವ ಸಿನಿಮಾವನ್ನು ವೀಕ್ಷಿಸಿದ ಶಾಲಾ ಬಾಲಕಿಯೋರ್ವಳು ಆ ಸಿನಿಮಾದ ನಾಯಕ ನಟನನ್ನು ನೋಡಲೇ ಬೇಕೆಂದು ಹಠ ಹಿಡಿದಳು. ಅನ್ನ, ನೀರು ಬಿಟ್ಟು ಆತನ ಬರುವಿಕೆಗಾಗಿ ಕಾದು ಕುಳಿತಳು. ಮೊದಮೊದಲು ಇದನ್ನು ಗಂಭೀರವಾಗಿ ಪರಿಗಣಿಸದ ಪಾಲಕರಿಗೆ ನಂತರ ಇದೊಂದು ಸಮಸ್ಯೆಯಾಗಿ ಕಾಡಲಾರಂಭಿಸಿತು. ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಾರದೆಂದು ಆ ನಟನನ್ನು ಆಸ್ಪತ್ರೆಗೆ ಕರೆಸಿ ಭೇಟಿಗೆ ಅವಕಾಶ ಮಾಡಿಕೊಡಲಾಯಿತು. ಆನಂತರವೇ ಆ ಮಗುವಿನ ಮುಖದಲ್ಲಿ ನಗುವರಳಿದ್ದು. ಇದು ಇವತ್ತಿನ ದೃಶ್ಯ ಮಾಧ್ಯಮ ಮಕ್ಕಳ ಮೇಲೆ ಬೀರುತ್ತಿರುವ ಪರಿಣಾಮಕ್ಕೊಂದು ಉದಾಹರಣೆ. ಒಟ್ಟಿನಲ್ಲಿ ಮನಸ್ಸನ್ನು ಪ್ರಚೋದಿಸುವ ಹಾಗೂ ಉದ್ವಿಗ್ನತೆಗೆ ಎಡೆಮಾಡುವ ವಾತಾವರಣದಲ್ಲಿ ನಮ್ಮ ಮಕ್ಕಳು ತಮ್ಮ ಬಾಲ್ಯವನ್ನು ಕಳೆಯುತ್ತಿರುವರು. ಇಂಥ ಅಸಹಜ ವಾತಾವರಣದ ಪರಿಣಾಮ ಅವರು ತಮ್ಮ ಸಹಜ ಬಾಲ್ಯ ಜೀವನದಿಂದ ವಂಚಿತರಾಗುತ್ತಿರುವರು. ಮಕ್ಕಳ ಬಾಲ್ಯದ ಬದುಕಿಗೆ ಪೂರಕವಾಗುವ ಪರಿಸರವನ್ನು ನಾವು ಕಟ್ಟಿಕೊಡದೆ ಹೋದಲ್ಲಿ ಅವರು ಕಳೆದು ಹೋಗುವುದಂತೂ ನಿಶ್ಚಿತ.
No comments:
Post a Comment