ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆವು ನಮ್ಮೊಳಗೆ
-ಜಿ. ಎಸ್. ಶಿವರುದ್ರಪ್ಪ
ಬದುಕು ಅದೊಂದು ನೆನಪುಗಳ ಮೆರವಣಿಗೆ. ಆ ಮೆರವಣಿಗೆಯಲ್ಲಿ ಸಿಹಿ ನೆನಪುಗಳಿವೆ, ಮನಸ್ಸನ್ನು ನೋಯಿಸುವ ಕಹಿ ಇದೆ, ಬಹುಕಾಲ ಮನಸ್ಸಿನಲ್ಲುಳಿದು ಕಾಡುವ ಕೃತಜ್ಞತೆ ಅಲ್ಲಿದೆ. ಬದುಕಿನಲ್ಲಿ ಯಾವುದೋ ಒಂದು ಘಳಿಗೆಯಲ್ಲಿ ಎದುರಾದ ವ್ಯಕ್ತಿ ನಮ್ಮ ಬದುಕಿನ ಮೇಲೆ ಗಾಢ ಪ್ರಭಾವ ಬೀರಿ ತನ್ನ ನೆನಪನ್ನು ಅನೇಕ ದಿನಗಳ ಕಾಲ ನಮ್ಮ ಮನಸಿನಲ್ಲಿ ನೆಲೆಯೂರಿಸಬಹುದು. ಇನ್ನು ಕೆಲವರು ದುತ್ತೆಂದು ಎದುರಾಗಿ 'ಕರುಣಾಳು ಬಾ ಬೆಳಕೆ ಮುಸುಕಿದ ಮಬ್ಬಿನಲಿ ಕೈಹಿಡಿದು ನಡೆಸೆನ್ನನು' ಎಂದು ಕವಿ ಹಾಡಿರುವಂತೆ ನಮ್ಮ ಕಣ್ತೆರಿಸಬಹುದು. ಹೀಗೆ ಲೆಕ್ಕ ಹಾಕಿದಾಗ ಎದೆಗಿಳಿದ ನೆನಪುಗಳು ಅಸಂಖ್ಯ. ಅಂಥ ನೆನಪುಗಳನ್ನು ಆಗಾಗ ಮೆಲುಕು ಹಾಕುತ್ತ ಒಂದಿಷ್ಟು ಕೃತಜ್ಞತೆ ಸಲ್ಲಿಸೋಣ.
ಧೋ ಎಂದು ಸುರಿಯುತ್ತಿರುವ ಮಳೆ. ಅದೆ ಆಗ ಲೈಬ್ರರಿಯಿಂದ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿರುವ ವೇಳೆ ಆಸರೆಗಾಗಿ ರಸ್ತೆಯ ಎರಡೂ ಬದಿಗೆ ನೋಡಿದ್ದುಂಟು. ಆ ಬೈಪಾಸ್ ರಸ್ತೆಯ ಅಕ್ಕಪಕ್ಕದಲ್ಲಿ ಮನೆಗಳಾಗಲಿ ಅಥವಾ ಅಂಗಡಿಗಳಾಗಲಿ ಒಂದೂ ಇರಲಿಲ್ಲ. ಕೂಗಳತೆಯ ದೂರದಲ್ಲಿ ವೆಲ್ಡಿಂಗ್ ಅಂಗಡಿಯೊಂದು ಅಸ್ಪಷ್ಟವಾಗಿ ಕಾಣಿಸುತ್ತಿತ್ತು. ಮಳೆಯಿಂದ ನೆನೆಯುವುದನ್ನು ತಪ್ಪಿಸಿಕೊಳ್ಳಲು ಆಗ ಅಲ್ಲಿದ್ದ ಏಕೈಕ ಆಸರೆಯೆಂದರೆ ಆ ವೆಲ್ಡಿಂಗ್ ಅಂಗಡಿಯೊಂದೆ. ಓಡುತ್ತ ಹೋಗಿ ಅಂಗಡಿಯ ಗೋಡೆಯನ್ನೇ ಆಸರೆಯಾಗಿಸಿಕೊಂಡು ಮಳೆಯಿಂದ ತಪ್ಪಿಸಿಕೊಳ್ಳಲು ನಾನು ಮಾಡುತ್ತಿದ್ದ ಹರಸಾಹಸವನ್ನು ನೋಡಿ ಒಳಗಿದ್ದ ಸಾಬಿ 'ಆವ್ ಸಾಬ್ ಅಂದರ್ ಆವ್ ' ಎಂದು ಕರೆದರೂ ಕೇಳಿಸಿಕೊಳ್ಳದವನಂತೆ ನಿಂತಿದ್ದೆ. ಕೊನೆಗೆ ಸಾಬಿಯೇ ಹೊರಬಂದು 'ಒಳಗೆ ಬನ್ನಿ ಸಾಬ್ ಹಾಗೆ ನಿಂತರೆ ಮಳೆಗೆ ಪೂರ್ತಿ ತೊಯ್ದು ಹೋಗ್ತಿರಿ' ಎಂದು ಬಲವಂತಪಡಿಸಿದಾಗ ವಿಧಿಯಿಲ್ಲದೆ ಅಂಗಡಿಯೊಳಗೆ ಹೆಜ್ಜೆ ಇಡಬೇಕಾಯಿತು.
ಹತ್ತು ಚದರಡಿಯ ಸಣ್ಣ ಕೋಣೆ ಕಬ್ಬಿಣದ ಸಾಮಾನುಗಳಿಂದ ತುಂಬಿ ಹೋಗಿತ್ತು. ಆಗಲೇ ನಾಲ್ಕೈದುಜನ ಒತ್ತರಿಸಿಕೊಂಡು ಕುಳಿತಿದ್ದರು. ನನ್ನನ್ನು ನೋಡುತ್ತಲೇ ಕೆಲಸಗಾರನಿರಬೇಕು ಆತ ತಾನು ಕುಳಿತಿದ್ದ ಪ್ಲಾಸ್ಟಿಕ್ ಸ್ಟೂಲಿನಿಂದ ಎದ್ದು ನನಗೆ ಕುಳಿತುಕೊಳ್ಳಲು ಜಾಗ ನೀಡಿದ. ಸಾಬಿ ಎದುರಿನ ಹಬೆಯಾಡುವ ಚಹಾ ನೋಡಿದ ಆ ಕ್ಷಣ ಆ ಮಳೆಯ ವಾತಾವರಣದಲ್ಲಿ ನನಗೂ ಚಹಾ ಕುಡಿದರೆ ಚೆನ್ನ ಎಂದೆನಿಸಿತು. ನನ್ನ ಮನಸ್ಸನ್ನು ಅರಿತವನಂತೆ ಸಾಬಿ 'ಸಾಬ್ ಕೊ ಎಕ್ ಕಪ್ ಚಾ ದೇನಾ' ಎಂದು ತನ್ನ ಕೆಲಸದವನಿಗೆ ಹೇಳಿದ. ತಣ್ಣನೆಯ ಗಾಳಿ ಜೊತೆಗೆ ಬಿಸಿಯಾದ ಚಹಾ ಸೇವನೆಯಿಂದ ಮನಸ್ಸು ಆಹ್ಲಾದಗೊಂಡಿತು. ಮಳೆ ನಿಲ್ಲುವ ಲಕ್ಷಣ ಕಾಣಿಸಲಿಲ್ಲ. 'ನಿಮ್ಮ ಕೈಯಲ್ಲಿರೋ ಪುಸ್ತಕದ ಮೇಲೆ ಕುವೆಂಪು ಅವರ ಮಗ ತೇಜಸ್ವಿ ಅವರ ಫೋಟೋ ಅಲ್ವಾ ಸಾಬ್ ' ನನ್ನ ಕೈಯಲ್ಲಿದ್ದ ನನ್ನ ತೇಜಸ್ವಿ ಪುಸ್ತಕವನ್ನು ನೋಡಿ ಸಾಬಿಯೇ ಮಾತಿಗೆಳೆದ. ಆತ ತೇಜಸ್ವಿ ಅವರ ಒಂದೆರಡು ಪುಸ್ತಕಗಳನ್ನು ಓದಿದ್ದನ್ನು ಹೇಳಿದಾಗ ಅಚ್ಚರಿಯಾಯಿತು. 'ನೋಡಿ ಸಾಬ್ ನಾವು ಮುಸಲ್ಮಾನರಾಗಿದ್ದ ಮಾತ್ರಕ್ಕೆ ಕನ್ನಡ ಸಾಹಿತ್ಯ ಓದಬಾರದು ಅಂತ ಏನಾದ್ರೂ ನಿಯಮ ಇದೆಯಾ?. ಧರ್ಮ ಅದು ನಮ್ಮ ನಮ್ಮ ಮನೆಗೆ ಮಾತ್ರ ಸೀಮಿತ. ದೇಶ ಅಂತ ಬಂದ್ರೆ ನಾವು ಹಿಂದೂಸ್ತಾನಿಗಳು. ಇನ್ನು ಭಾಷೆ ಅಂದ್ರೆ ನಾವು ಪಕ್ಕಾ ಕನ್ನಡಿಗರು. ಈ ದೇಶ, ಈ ಭಾಷೆ ಇಲ್ಲಿನ ಜನ ಇದೆಲ್ಲ ನಮ್ದು. ಇದನ್ನು ಬಿಟ್ಟು ನಮ್ದು ಅನ್ನೋದು ಇನ್ನೆಲ್ಲೋ ಇದೆ ಅಂತ ಯೋಚಿಸೋದು ಅದು ಮೂರ್ಖತನ'. ಉದ್ದನೆಯ ಗಡ್ಡ ಬಿಟ್ಟು ತಲೆಗೆ ಟೊಪ್ಪಿಗೆ ಧರಿಸಿದ್ದ ಸಾಬಿಯನ್ನು ಕೆಲವು ಕ್ಷಣಗಳ ಹಿಂದೆ ನಾನು ಅವನನ್ನು ಭಯೋತ್ಪಾದಕನಂತೆ ಚಿತ್ರಿಸುತ್ತಿದ್ದದ್ದು ಈ ಕ್ಷಣಕ್ಕೆ ನನ್ನಲ್ಲಿ ನಾಚಿಕೆಯನ್ನುಂಟುಮಾಡಿತು. 'ಸಾಬ್ ಬಾಬ್ರಿ ಮಸೀದಿ ಕೆಡವಿದ ಮೇಲಂತೂ ನಮ್ಮನ್ನು ತಾಲಿಬಾನಿಗಳಂತೆ ಕಾಣ್ತಿದ್ದಾರೆ. ಈ ಮುಸಲ್ಮಾನರದು ಯಾವುದೇ ತಪ್ಪಿಲ್ಲ ಅಂತ ನಾನು ಹೇಳ್ತಿಲ್ಲ. ಈ ದೇಶದಲ್ಲಿ ಹುಟ್ಟಿ ಇಲ್ಲಿನ ಅನ್ನ ತಿಂದು ಬೇರೆ ದೇಶದ ಬಗ್ಗೆ ಅಭಿಮಾನ ಮೂಡಿಸಿಕೊಂಡ ಅನೇಕ ಮುಸ್ಲಿಮರು ಇಲ್ಲಿದ್ದಾರೆ. ಹೀಗೆ ಕೆಲವರು ಮಾಡೋ ತಪ್ಪಿಗೆ ಇಡೀ ಇಸ್ಲಾಂ ಸಮುದಾಯದ ಬಗ್ಗೆ ತಪ್ಪು ಅರ್ಥ ಬರ್ತಾಯಿದೆ. ಇದು ಸರಿಯಲ್ಲ' ಸಾಬಿ ಹೇಳಿ ಮುಗಿಸಿ ಒಂದು ಕ್ಷಣ ಮೌನವಾದ. ಹೊರಗಡೆ ಮಳೆಯೂ ಆರ್ಭಟಿಸುವುದನ್ನು ನಿಲ್ಲಿಸಿತ್ತು. 'ಸಾಬ್ ಮನೇಲಿ ಬೀವಿ ಬಚ್ಚೋ ಕಾಯ್ತಿರಬಹುದು' ನನ್ನನ್ನು ಎಚ್ಚರಿಸಿದಾತ ತನ್ನ ಕೆಲಸಕ್ಕೆ ಅಣಿಯಾದ. ನಮಸ್ಕಾರ ಹೇಳಿ ಮನೆಯಕಡೆ ಹೆಜ್ಜೆ ಹಾಕಿದೆ.
ಆ ದಿನದಿಂದ ನಮ್ಮಿಬ್ಬರ ನಡುವೆ ಒಂದು ಆತ್ಮೀಯ ಮುಗುಳ್ನಗೆಯ ಜೊತೆಗೆ 'ಕೈಸೆ ಹೈ ಸಾಬ್ ' ಎನ್ನುವ ಪ್ರೀತಿಯ ಉಭಯಕುಶಲೋಪರಿ ದೈನಂದಿನ ದಿನಚರಿಯಾಗಿದೆ.
ಎರಡು ದಿನಗಳಿಂದ ಊಟ ಮಾಡಿರಲಿಲ್ಲ. ಹಸಿವಿನಿಂದ ಹೊಟ್ಟೆ ಚುರುಗುಡುತ್ತಿತ್ತು. ಇವತ್ತಾದರೂ ಊರಿನಿಂದ ಊಟ (ಬುತ್ತಿ) ಬರಬಹುದೆಂದು ಬಸ್ಸಿಗಾಗಿ ಕಾದು ನಿಂತವನಿಗೆ ಪ್ರತಿ ಘಳಿಗೆಯೂ ಗಂಟೆಯಂತೆ ಭಾಸವಾಗತೊಡಗಿತು. ನನ್ನೂರಿನ ಹೆಸರುಹೊತ್ತ ಬಸ್ ದೂರದಲ್ಲಿ ಬರುತ್ತಿರುವುದು ಕಾಣಿಸಿದಾಗ ಕಂಗಳಲ್ಲಿ ಆಸೆಯ ನಿರೀಕ್ಷೆ. ಬಸ್ ಬಂದು ಎದುರಿಗೆ ನಿಂತಾಯಿತು. ಒಬ್ಬೊಬ್ಬರಾಗಿ ಬಸ್ಸಿನಿಂದ ಇಳಿಯುತ್ತಿದ್ದರೆ ಪ್ರತಿಯೊಬ್ಬರ ಕೈಗಳನ್ನು ಕಣ್ಣುಗಳು ಆಸೆಯಿಂದ ನೋಡುತ್ತಿದ್ದವು. ನಿರೀಕ್ಷೆ ಹುಸಿಯಾಗತೊಡಗಿತು. ಯಾರೊಬ್ಬರೂ ಹತ್ತಿರಬಂದು ಊಟದ ಚೀಲವನ್ನು ಕೈಗೆ ಕೊಡುತ್ತಿಲ್ಲ. ಇಡೀ ಬಸ್ ಖಾಲಿಯಾಯಿತು. ಕೊನೆಗೆ ಇಳಿದವನೊಬ್ಬ ಹತ್ತಿರಬಂದು ಹೇಳಿದ 'ತಮ್ಮಾ ನಿನ್ನ ಬುತ್ತಿ ಇನ್ಮುಂದ ಬರಾಂಗಿಲ್ಲ. ಯಾಕಂದ್ರ ಆ ತುರುಕರೆಲ್ಲ (ಮುಸ್ಲಿಮರನ್ನು ಹಳ್ಳಿಯಲ್ಲಿ ಹೀಗೆ ಕರೆಯುತ್ತಾರೆ) ಸೇರಿ ಇವತ್ತಿನಿಂದ ನಿನಗ ಬುತ್ತಿ ಕಟ್ಟಬಾರದು ಅಂತ ಆ ಹೆಣ್ಮಗಳಿಗಿ ತಾಕೀತು ಮಾಡ್ಯಾರ. ಸುಮ್ನೆ ಯಾಕ ಕಾಯ್ತಿ ರೂಮಿಗಿ ಹೋಗು'. ಆತ ಹೇಳಿದ ಸುದ್ದಿ ನಿಜಕ್ಕೂ ನನಗೆ ಆ ಹೊತ್ತು ಆಘಾತಕಾರಿಯಾಗಿತ್ತು.
ಅಮ್ಮ ತೀರಿಕೊಂಡ ನಂತರ ಆ ಮನೆ ಅಕ್ಷರಶ: ಹೆಣ್ಣು ದಿಕ್ಕಿಲ್ಲದ ಮನೆಯಾಗಿತ್ತು. ಮನೆತುಂಬ ಉಣ್ಣುವ ಬಾಯಿಗಳೇ. ಬೆಯಿಸಿ ಹಾಕುವ ಹೆಣ್ಣೊಬ್ಬಳ ಅಗತ್ಯ ಆ ಕುಟುಂಬಕ್ಕೆ ಖಂಡಿತವಾಗಿ ಬೇಕಿತ್ತು. ಆದರೆ ನಾಲ್ಕು ಜನರಿಗೆ ಬೆಯಿಸಿ ಹಾಕುವುದು ಯಾವ ನೆರೆಹೊರೆಯವರಿಗೂ ಇಲ್ಲವೇ ನೆಂಟರಿಷ್ಟರಿಗೂ ಅದು ನಿಜಕ್ಕೂ ಹೊರೆಯಾಗುವ ಕೆಲಸ. ಜೊತೆಗೆ ಅದು ಒಂದೆರಡು ದಿನಗಳ ಸಮಸ್ಯೆಯಾಗಿರಲಿಲ್ಲ. ಇಂಥದ್ದೊಂದು ಸಮಸ್ಯೆ ನಮ್ಮನ್ನು ದಹಿಸುತ್ತಿರುವ ಸಮಯದಲ್ಲೇ ಆ ಮುಸ್ಲಿಂ ಹೆಣ್ಣುಮಗಳು ನಮ್ಮ ಹೊಟ್ಟೆಯನ್ನು ತುಂಬಿಸಲು ಮುಂದೆ ಬಂದಿದ್ದು. ಸಮಸ್ಯೆಗೆ ಪರಿಹಾರ ಅತ್ಯಂತ ಸುಲಭವಾಗಿ ಸಿಕ್ಕಿತ್ತು. ನಾನು ಅಣ್ಣನೊಡನೆ ಪಟ್ಟಣದಲ್ಲಿನ ಪುಟ್ಟ ಬಾಡಿಗೆ ಕೋಣೆಯನ್ನು ಸೇರಿಕೊಂಡು ಕಾಲೇಜಿಗೆ ನಿರಾತಂಕವಾಗಿ ಹೋಗಲಾರಂಭಿಸಿದೆ. ಆದರೆ ಈ ನೆಮ್ಮದಿಯ ಮೇಲೆ ಯಾರ ಕಣ್ಣು ಬಿತ್ತೋ ಊರಿನಲ್ಲಿನ ಕೆಲವರು ಆ ಹೆಣ್ಣುಮಗಳಿಗೆ ನಮಗಾಗಿ ಅಡುಗೆ ಮಾಡದಂತೆ ತೊಂದರೆ ಕೊಡಲಾರಂಭಿಸಿದರು. ಇದ್ದದ್ದೊಂದು ಆಸರೆಯೂ ಕೈಬಿಟ್ಟು ಹೋದ ನಿರಾಸೆ ನನ್ನಲ್ಲಿ ಮಡುಗಟ್ಟಿತು. ಓದಬೇಕೆನ್ನುವುದು ಅದು ಕೇವಲ ನನ್ನ ಆಸೆಯಾಗಿರದೆ ಅದು ನನ್ನ ಅಮ್ಮನ ಆಸೆ ಕೂಡ ಆಗಿತ್ತು. ಪುಟ್ಟ ಬಾಡಿಗೆ ಕೋಣೆ, ಕಡಿಮೆ ಶುಲ್ಕದ ಕಾಲೇಜು ಓದಿಗೆ ಸಾಕಿತ್ತು. ಆದರೆ ಮುಖ್ಯ ಸಮಸ್ಯೆ ಎದುರಾದದ್ದು ಅದು ಎರಡ್ಹೊತ್ತಿನ ಊಟದ್ದು. ಬಸ್ಸಿನಿಂದ ಕೊನೆಯದಾಗಿ ಇಳಿದಾತ ಹೇಳಿದಂತೆ ಈಗ ಆ ಎರಡು ಹೊತ್ತಿನ ಊಟಕ್ಕೂ ಕುತ್ತು ಬರಲಿದೆ ಎನ್ನುವ ಸುದ್ದಿಯನ್ನು ಜೀರ್ಣಿಸಿಕೊಳ್ಳಲು ನನಗೆ ಕೆಲವು ನಿಮಿಷಗಳೇ ಬೇಕಾದವು. ಓದು ಅರ್ಧಕ್ಕೇ ನಿಲ್ಲಲಿದೆ ಎನ್ನುವ ಆತಂಕವೊಂದು ಬಹುವಾಗಿ ಕಾಡಲಾರಂಭಿಸಿತು. ಹೋಟೆಲ್ಲುಗಳಲ್ಲಿ, ಗ್ಯಾರೇಜುಗಳಲ್ಲಿ ಕೆಲಸ ಮಾಡುವ ಹುಡುಗರಲ್ಲಿ ನಾಳೆ ನಾನೂ ಒಬ್ಬನಾಗಬಹುದು ಎನ್ನುವ ವಿಷಯ ಮನಸ್ಸಿನಲ್ಲಿ ಸುಳಿದು ದು:ಖ ಒತ್ತರಿಸಿಬಂತು. ನಿರಾಸೆ, ಆತಂಕ, ದುಗುಡದಿಂದ ಹೆಜ್ಜೆ ಹಾಕುತ್ತಿದ್ದವನನ್ನು ಯಾರೋ ಕೈಹಿಡಿದು ಜಗ್ಗಿದಂತಾಯಿತು. ಹಿಂತಿರುಗಿ ನೋಡಿದವನಿಗೆ ನೋಡುತ್ತಿರುವುದನ್ನು ನಂಬಲು ಕೆಲವು ಕ್ಷಣಗಳೇ ಬೇಕಾದವು. ಕೈಯಲ್ಲಿ ಊಟದ ಚೀಲ ಹಿಡಿದು ನಿಂತವಳು ಆ ಕ್ಷಣಕ್ಕೆ ದೇವತೆಯಾಗಿ ಕಂಡಳು. ಆ ಮುಸ್ಲಿಂ ಹೆಣ್ಣು ಮಗಳು ಕೈಗೆ ಊಟದ ಚೀಲವನ್ನು ಕೊಡುತ್ತ ಹೇಳಿದಳು 'ನೀ ಭಾಳ ಓದ್ಬೇಕು. ಅದು ನಿನ್ನ ಅವ್ವನ ಆಸೆ ಆಗಿತ್ತು. ಊರಿನ ಮಂದಿ ನನಗ ಎಷ್ಟೇ ತೊಂದರೆ ಕೊಟ್ರೂ ನಾ ದಿನಾಲು ನಿನಗೆ ಊಟ ಕಟ್ತಿನಿ. ನಿನ್ನ ಅಣ್ಣನ ಲಗ್ನಾ ಆಗಿ ನಿಮ್ಮ ಮನಿಗಿ ನಿನ್ನ ಅತ್ತಿಗೆ ಬರೋವರ್ಗೂ ನಿನ್ನ ಜವಾಬ್ದಾರಿ ನಂದು'. ಹೀಗೆ ಹೇಳಿ ಆ ದಿನ ಕೈಯಲ್ಲಿ ಬುತ್ತಿ ಇಟ್ಟು ಹೋದವಳು ಬರೋಬ್ಬರಿ ಒಂದು ವರ್ಷ ಅಡುಗೆ ಮಾಡಿ ಉಣಬಡಿಸಿದಳು. ಅವಳ ಅಂದಿನ ಆ ನಿರ್ಧಾರ ನಾನು ನಿರಾತಂಕವಾಗಿ ಓದಲು ಕಾರಣವಾಗಿದ್ದು ಅದು ಇವತ್ತಿಗೂ ಕೂಡ ಸತ್ಯ. ತನ್ನ ಮಕ್ಕಳೊಂದಿಗೆ ನನ್ನನ್ನು ಮಗನಂತೆ ನೋಡಿಕೊಂಡಿದ್ದು ಅದು ಅವಳ ದೊಡ್ಡ ಗುಣ.
ನಂತರದ ದಿನಗಳಲ್ಲಿ ಅನಾವಶ್ಯಕ ಸಮಸ್ಯೆಗಳನ್ನು ಸೃಷ್ಟಿಸಿದ ಜನ ಆ ಹೆಣ್ಣುಮಗಳು ನಮ್ಮ ಕುಟುಂಬದಿಂದ ದೂರಾಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಈ ನಡುವೆ ಕಾಲಚಕ್ರ ಉರುಳಿ ನಾನೊಂದು ಅಸ್ತಿತ್ವ ಕಂಡುಕೊಂಡಿದ್ದೇನೆ. ನನ್ನ ಈ ಅಸ್ತಿತ್ವ ಮತ್ತು ನಾನಿವತ್ತು ಕಟ್ಟಿಕೊಂಡ ಈ ಬದುಕಿನ ಮೇಲೆ ಆಕೆಯ ಋಣ ಬೆಟ್ಟದಷ್ಟಿದೆ. ನೋವಿನ ಸಂಗತಿ ಎಂದರೆ ಎರಡು ದಶಕಗಳ ಮೇಲಾಯಿತು ನಾನವಳೊಡನೆ ಮಾತನಾಡಿ. ಮನಸ್ಸು ಮತ್ತು ವಯಸ್ಸು ಪರಿಪಕ್ವಗೊಳ್ಳುತ್ತಿರುವ ಈ ಸಂದರ್ಭ ಅವಳೊಡನೆ ಮಾತನಾಡಬೇಕೆಂದು ಅನಿಸಿದ್ದು ಅದು ಎಷ್ಟು ಸಲವೋ ಗೊತ್ತಿಲ್ಲ. ಆದರೆ ಹಾಗೆ ಮಾತನಾಡಬೇಕೆಂದು ತವಕಿಸಿದ ಸಮಯದಲ್ಲೆಲ್ಲ ಅಪರಾಧ ಪ್ರಜ್ಞೆಯೊಂದು ನನ್ನನ್ನು ಕಾಡಿದ್ದುಂಟು. ಇವತ್ತಿಗೂ ನಾನು ಆಕೆಗೆ ಕೃತಜ್ಞನಾಗಿರದೆ ಕೃತಘ್ನನಾಗಿದ್ದೆನೆನ್ನುವ ನೋವು ಅನೇಕ ಸಲ ಕಾಡಿದೆ. ಈ ಅಪರಾಧ ಪ್ರಜ್ಞೆ, ಕೃತಘ್ನನಾಗಿದ್ದೆನೆಂಬ ತೊಳಲಾಟ, ಕಾಡುವ ಅನ್ನದ ಋಣ, ಮಾತನಾಡಿಸಬೇಕೆನ್ನುವ ಬಯಕೆ ಈ ಎಲ್ಲವುಗಳ ನಡುವೆ ಇವತ್ತಿಗೂ ನಾನು ಅವಳನ್ನು ನೆನಪಿಸಿಕೊಂಡೆ ಕೈಗೆ ತುತ್ತು ತೆಗೆದುಕೊಳ್ಳುತ್ತೇನೆ.
ಕಂಪಾರ್ಟಮೆಂಟಿನ ಒಳಗೆ ಬಂದವನನ್ನೊಮ್ಮೆ ಅಲ್ಲಿದ್ದ ಎಲ್ಲರೂ ಅನುಮಾನದಿಂದ ದಿಟ್ಟಿಸಿ ನೋಡಿದರು. ಆತನ ವಯಸ್ಸು ಸರಿ ಸುಮಾರು ಮೂವತ್ತರಿಂದ ಮೂವತ್ತೈದರ ಆಸುಪಾಸಿನಲ್ಲಿರಬಹುದು. ಸ್ನಾನ ಮಾಡಿ ಎಷ್ಟು ದಿನಗಳಾಗಿದ್ದವೋ. ಪೋಲಿಯೋದಿಂದ ಕಾಲುಗಳಲ್ಲಿ ಶಕ್ತಿಯಿಲ್ಲದೆ ತೆವಳುತ್ತಲೇ ಆತ ನಾನಿದ್ದ ಭೋಗಿಗೆ ಹತ್ತಿದ. ಬಿಕ್ಷುಕನಿರಬಹುದು ಎನ್ನುವುದು ಕೆಲವರ ಅನುಮಾನವಾದರೆ ಇನ್ನು ಕೆಲವರದು ಸಣ್ಣ ಪುಟ್ಟ ಕಳ್ಳತನ ಮಾಡುವ ಕಸುಬು ಅವನದಾಗಿರಬಹುದೆನ್ನುವ ಆತಂಕ. ಈಗೀಗ ರೈಲು ಮತ್ತು ಬಸ್ಸುಗಳಲ್ಲಿ ಇಂಥವರ ಕಾಟ ಅತಿಯಾಗುತ್ತಿದೆ ಎಂದು ಆಗಲೇ ಒಬ್ಬರು ಮಾತಿಗೆ ಶುರು ಮಾಡಿದರು. ಅಲ್ಲಿದ್ದ ಹೆಣ್ಣುಮಕ್ಕಳು ತಮ್ಮ ತಮ್ಮ ಮಕ್ಕಳನ್ನು ಕರೆದು ಪಕ್ಕಕ್ಕೆ ಕೂರಿಸಿಕೊಂಡರೆ ಕೆಲವರು ತಮ್ಮ ಲಗೇಜುಗಳಿಗಾಗಿ ತಡಕಾಡತೊಡಗಿದರು. ಅಜ್ಜಿಯೊಬ್ಬಳು ತಾನು ತಿನ್ನುತ್ತಿದ್ದ ರೊಟ್ಟಿಯಲ್ಲಿ ಅರ್ಧದಷ್ಟನ್ನು ಅವನಿಗೆ ಕೊಡಲು ಹೋದಾಗ ಆತ ನಯವಾಗಿ ನಿರಾಕರಿಸಿದ. ಆತನ ನಿರಾಕರಣೆ ಅಲ್ಲಿದ್ದ ಕೆಲವರನ್ನು ಕೆರಳಿಸಿತು. ಕೊಬ್ಬು, ಸೊಕ್ಕು ಎಂದೆಲ್ಲ ಅವನನ್ನು ಬಯ್ದಾಡಿದರು. ಹೀಗೆ ಇತರರು ಬಯ್ಯುವುದನ್ನು ಅವನು ಸಹಜವಾಗಿಯೇ ಸ್ವೀಕರಿಸಿದ. ಹಣ ಕೊಡಲು ಹೋದಾಗಲೂ ಆತ ಕೈ ಮುಂದೆ ಚಾಚಲಿಲ್ಲ. ಅವನ ಸ್ವಾಭಿಮಾನ ಅಲ್ಲಿದ್ದವರನ್ನು ಮತ್ತಷ್ಟು ಕೆರಳಿಸಿತು. ಪ್ರತಿಯೊಬ್ಬರೂ ತಮಗೆ ತಿಳಿದಂತೆ ಅವನನ್ನು ವ್ಯಾಖ್ಯಾನಿಸತೊಡಗಿದರು. ಏನನ್ನೂ ತೆಗೆದುಕೊಳ್ಳುತ್ತಿಲ್ಲ ಎಂದಾದರೆ ಅವನು ಕಳ್ಳನಾಗಿರಲೇ ಬೇಕು ಎಂದು ಎಲ್ಲರೂ ನಿರ್ಧಾರಕ್ಕೆ ಬಂದಿದ್ದರು. ಇನ್ನೇನು ಸ್ವಲ್ಪ ವೇಳೆಯ ನಂತರ ಎಲ್ಲರೂ ನಿದ್ದೆಗೆ ಜಾರುವ ಹೊತ್ತು. ಎಲ್ಲರೂ ಮಲಗಿದ ಮೇಲೆ ಕಳ್ಳತನ ಮಾಡುವ ಹೊಂಚು ಹಾಕಿರಬಹುದು. ಟಿಕೇಟ್ ಪಡೆದಿದ್ದಾನೋ ಇಲ್ಲವೋ?. ಹಾಗೊಂದು ವೇಳೆ ಟಿಕೇಟ್ ಖರೀದಿಸಿ ಟ್ರೇನ್ ಹತ್ತಿದ್ದರೆ ಅವನೇಕೆ ಹೀಗೆ ಕೆಳಗೆ ಕೂಡುತ್ತಿದ್ದ?. ಅವನು ಕೆಳಗೆ ಕುಳಿತ ಜಾಗ ಪ್ರಯಾಣಿಕರು ತಿಂದು ಎಸೆದ ವಸ್ತುಗಳಿಂದ ಗಲೀಜಾಗಿತ್ತು. ಇಡೀ ರೈಲು ಭೋಗಿಯೇ ತಿಪ್ಪೆಯಂತಾಗಿತ್ತು. ಹೀಗೆ ಗಲೀಜಿನಲ್ಲಿ ಬಂದು ಕುಳಿತುಕೊಳ್ಳುವ ದರ್ದು ಅವನಿಗೇನಿರಬಹುದು?. ಹೀಗೆ ಕುಳಿತಿದ್ದಾನೆಂದರೆ ಅವನು ಟಿಕೇಟು ಪಡೆದಿರಲಿಕ್ಕಿಲ್ಲ. ಮುಂದಿನ ನಿಲ್ದಾಣದಲ್ಲಿ ಇಳಿಯಬಹುದು. ಯಾವುದಕ್ಕೂ ಎಚ್ಚರವಾಗಿರಬೇಕು. ಹೀಗೆ ಅನೇಕ ವಿಚಾರಗಳು ಮನಸ್ಸಿನಲ್ಲಿ ಸುಳಿದಾಡಿದವು. ಮಕ್ಕಳ ಕಳ್ಳರ ಹಾವಳಿ ಇತ್ತೀಚಿಗೆ ಹೆಚ್ಚುತ್ತಿದೆ ಎಂದು ಮಹಿಳೆಯೊಬ್ಬಳು ಆತಂಕ ವ್ಯಕ್ತಪಡಿಸಿದಾಗ ತನ್ನ ಮೂರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ ತಾಯಿಗೆ ರಾತ್ರಿ ಹೇಗೆ ಕಳೆಯುವುದೆನ್ನುವ ಚಿಂತೆ ಶುರುವಾಯಿತು. ಒಟ್ಟಿನಲ್ಲಿ ಆತನ ಪ್ರವೇಶ ಆ ಇಡೀ ಕಂಪಾರ್ಟಮೆಂಟಿನಲ್ಲಿ ಒಂದು ಭೀಕರತೆಯನ್ನು ಸೃಷ್ಟಿಸಿ ನೀರವ ಮೌನಕ್ಕೆ ಎಡೆಮಾಡಿಕೊಟ್ಟಿತ್ತು.
ಮುಂದೆ ಏನಾಗಲಿದೆ ಎನ್ನುವ ಆತಂಕದಿಂದ ಎಲ್ಲರೂ ಸಮಯವನ್ನು ತಳ್ಳುತ್ತಿರುವಾಗ ಆತ ಒಂದು ಕ್ಷಣ ಇಡೀ ಭೋಗಿಯನ್ನೊಮ್ಮೆ ಅವಲೋಕಿಸಿ ತಾನು ತೊಟ್ಟಿದ್ದ ಅಂಗಿಯನ್ನು ಕಳಿಚಿದ. ಎಲ್ಲರೂ ಅವನನ್ನು ಅಚ್ಚರಿಯಿಂದ ನೋಡುತ್ತಿರುವಂತೆಯೇ ತಾನು ತೊಟ್ಟಿದ ಅಂಗಿಯನ್ನೇ ಪೊರಕೆಯಂತೆ ಉಪಯೋಗಿಸಿ ಭೋಗಿಯಲ್ಲಿ ಕಸಗುಡಿಸತೊಡಗಿದ. ಅರ್ಧ ಗಂಟೆಯಲ್ಲಿ ಇಡೀ ಭೋಗಿಯನ್ನು ಸ್ವಚ್ಛಗೊಳಿಸಿದ. ಕೆಲವು ಕ್ಷಣಗಳ ಹಿಂದೆ ತಿಪ್ಪೆಗುಂಡಿಯಂತಿದ್ದ ಆ ಸ್ಥಳ ಈಗ ಕನ್ನಡಿಯಂತೆ ಹೊಳೆಯತೊಡಗಿತು. ತನ್ನ ಕೆಲಸ ಮುಗಿಸಿದವನೇ ಈಗ ಎಲ್ಲ ಪ್ರಯಾಣಿಕರತ್ತ ತಾನು ಮಾಡಿದ ಕೆಲಸಕ್ಕಾಗಿ ಕೈ ಚಾಚತೊಡಗಿದ. ಕೆಲವರು ಒಂದಿಷ್ಟು ಹಣ ನೀಡಿದರೆ ಇನ್ನು ಕೆಲವರು ತಾವು ತಿಂದು ಉಳಿದಿದ್ದನ್ನು ಆತನ ಕೈಗೆ ಹಾಕಿದರು. ಕೆಲವರು ಏನನ್ನೂ ಪ್ರತಿಕ್ರಿಯಿಸದೆ ಮುಂದೆ ಸಾಗಹಾಕಿದರು. ಆತ ಮಾತ್ರ ಯಾರನ್ನೂ ಒತ್ತಾಯಿಸದೆ ಅತ್ಯಂತ ನಿರ್ಲಿಪ್ತನಂತೆ ಕೊಟ್ಟಿದ್ದನ್ನು ಪಡೆದು ಮುಂದಿನ ನಿಲ್ದಾಣದಲ್ಲಿ ರೈಲಿನಿಂದ ಇಳಿದು ಹೋದ. ಒಂದು ಕ್ಷಣ ಖಿನ್ನತೆ ಮನಸ್ಸನ್ನು ಆವರಿಸಿತು. ಏನೆಲ್ಲಾ ಯೋಚನೆಗಳು ಛೇ ನಾಚಿಕೆಯಾಯಿತು. ಕೆಲವೊಮ್ಮೆ ನಾವು ಎಷ್ಟೊಂದು ಸಣ್ಣವರಾಗುತ್ತೇವೆ. ಆತನ ಸ್ವಾಭಿಮಾನ ಅಲ್ಲಿದ್ದ ಎಲ್ಲರನ್ನೂ ಕೆಲವು ಕ್ಷಣಗಳಾದರೂ ಕಾಡಿಸಿ ಕಟ್ಟಿಹಾಕಿತ್ತು. ವೇಷ ಭೂಷಣದಿಂದ ಮನುಷ್ಯರ ವ್ಯಕ್ತಿತ್ವವನ್ನು ಅಳೆಯುವ ನಮ್ಮ ಮನೋಭಾವ ಆ ಕ್ಷಣ ನಮ್ಮನ್ನೇ ಅಣಿಕಿಸಿದಂತಾಯಿತು.
'ಆವ್ ಬೇಟಾ ಶಹರ್ ತಕ್ ಛೋಡ್ತಾ ಹೂಂ' ಬಸ್ಸಿಗಾಗಿ ಕಾಯುತ್ತ ನಿಂತಿದ್ದವನ ಎದುರಿಗೆ ಬಂದು ನಿಂತ ಲಾರಿಯೊಳಗಿನಿಂದ ಡ್ರೈವರ್ ಮಾತು ಕೇಳಿಸಿತು. ಬೃಹತ್ ಗಾತ್ರದ ವಾಹನ ಗಕ್ಕೆಂದು ಪಕ್ಕಕ್ಕೆ ನಿಂತ ಆ ಕ್ಷಣ ಮೈ ಭಯದಿಂದ ಕಂಪಿಸಿತು. ತಲೆ ಎತ್ತಿ ನೋಡಿದರೆ ಅಪರಿಚಿತ ಡ್ರೈವರ್ ಒಳಗೆ ಬಂದು ಕೂಡುವಂತೆ ಸಂಜ್ಞೆ ಮಾಡುತ್ತಿದ್ದ. ಬಸ್ಸಿಗಾಗಿ ಕಾದು ಕುಳಿತಿದ್ದ ನನಗೆ ಪರೀಕ್ಷೆ ತಪ್ಪಬಹುದೆನ್ನುವ ಭಯ ಕಾಡುತ್ತಿತ್ತು. ಬರಬೇಕಾದ ಬಸ್ ಇನ್ನು ಬಂದಿರಲಿಲ್ಲ. ಪರೀಕ್ಷೆಗೆ ತಡವಾಗಬಾರದೆಂದು ಊರಿನಿಂದ ಎರಡು ಕಿಲೋ ಮೀಟರ್ ನಡೆದುಕೊಂಡು ಹತ್ತಿರದ ಬಸ್ ಸ್ಟಾಪ್ ಗೆ ಬಂದರೂ ಸಮಸ್ಯೆ ತಪ್ಪಿರಲಿಲ್ಲ. ನಾನಿದ್ದ ಆ ಸ್ಥಳವೋ ಅತ್ಯಂತ ನಿರ್ಜನವಾದ ಬಸ್ ನಿಲ್ದಾಣ. ದಿನಕ್ಕೆ ಒಂದೇ ಬಸ್ ಮೂರ್ನಾಲ್ಕು ಸಲ ಮಾತ್ರ ಓಡಾಡುತ್ತಿದ್ದ ರಸ್ತೆ ಅದು. ಬಸ್ ಏನಾದರೂ ಕೆಟ್ಟು ನಿಂತರೆ ದಿನವಿಡಿ ಆ ರಸ್ತೆ ಬಸ್ಸಿನ ಮುಖವನ್ನೇ ಕಾಣುತ್ತಿರಲಿಲ್ಲ. ತೀರ ಕುಗ್ರಾಮವಾಗಿದ್ದರಿಂದ ಬಸ್ಸಿನ ಸೌಕರ್ಯ ಅಷ್ಟಾಗಿ ಇರಲಿಲ್ಲ. ಊರಿನಲ್ಲಿ ಪ್ರಾಥಮಿಕ ಶಾಲೆ ಮಾತ್ರ ಇದ್ದುದ್ದರಿಂದ ಪ್ರೌಢಶಾಲೆಗಾಗಿ ಸಮೀಪದ ನಗರಕ್ಕೆ ಹೋಗುವುದು ಅನಿವಾರ್ಯವಾಗಿತ್ತು. ಆ ದಿನಗಳಲ್ಲಿ ಶಾಲೆಗೆ ಕಲಿಯಲು ಬರುವ ಮಕ್ಕಳ ಸಂಖ್ಯೆಯೇ ಕಡಿಮೆ ಇರುತ್ತಿದ್ದುದ್ದರಿಂದ ನನ್ನೂರಿನಿಂದ ನನ್ನಜೊತೆಗೆ ಬರುವ ಮಕ್ಕಳ ಸಂಖ್ಯೆ ಅಷ್ಟೇನೂ ಹೆಚ್ಚಿರಲಿಲ್ಲ. ಕೆಲವು ಹುಡುಗರಂತೂ ಬಾಡಿಗೆ ಕೋಣೆಯಲ್ಲೋ ಇಲ್ಲವೇ ಸಂಬಂಧಿಕರ ಮನೆಗಳಲ್ಲೋ ಇದ್ದು ಕಲಿಯುತ್ತಿದ್ದದ್ದೆ ಹೆಚ್ಚು. 'ಬೇಟಾ ಆತೀ ಕ್ಯೊಂ ನಹಿ' ಸರದಾರ್ಜಿ ನಾನು ಸುಮ್ಮನೆ ನಿಂತಿದ್ದನ್ನು ಕಂಡು ಮತ್ತೊಮ್ಮೆ ಕೇಳಿದ. ಬಸ್ ಬರುವುದು ಖಾತ್ರಿಯಿಲ್ಲ ಜೊತೆಗೆ ಪರೀಕ್ಷೆ ಬೇರೆ ಲಾರಿ ಹತ್ತದೆ ವಿಧಿಯಿರಲಿಲ್ಲ. ಅನುಮಾನಿಸುತ್ತಲೇ ಒಳಗೆ ಹೋಗಿ ಕುಳಿತವನಿಗೆ ಸರಾಯಿಯ ಕೆಟ್ಟ ವಾಸನೆ ಮೂಗಿಗೆ ಬಡಿದು ಹೊಟ್ಟೆ ತೊಳಸಿದಂತಾಯಿತು. ಪರಿಸ್ಥಿತಿ ಅರಿತ ಡ್ರೈವರ್ ಕ್ಲಿನರ್ ನತ್ತ ಕೈ ತೋರಿಸಿ 'ಬದ್ಮಾಶ್ ಕೊ ನ ಪೀನೆ ಕೊ ಬಹುತ್ ಬಾರ್ ಬೋಲದಿಯಾ ಹೂಂ. ಸುನತಾ ನಹೀಂ' ಎಂದು ತನ್ನ ಅಸಹಾಯಕತೆ ತೋಡಿಕೊಂಡ. ತಾನು ಕುಡಿದಿಲ್ಲ ಎನ್ನುವುದನ್ನು ತೋರಿಸಿಕೊಳ್ಳುತ್ತಿರಬಹುದು ಎಂದು ಮನಸ್ಸು ಅರೆಕ್ಷಣ ಅನುಮಾನಿಸಿತು. ನನ್ನೂರಿನಲ್ಲಿ ಜನ ಮಾತನಾಡಿಕೊಳ್ಳುವಂತೆ ಈ ಲಾರಿ ಡ್ರೈವರ್ ಗಳಿಗೆ ಕುಡಿಯದೆ ಲಾರಿ ಓಡಿಸುವುದು ಅಸಾಧ್ಯದ ಮಾತು. ಜೊತೆಗೆ ಅವರಿಗೆ ನೂರಾರು ಚಟಗಳಂತೆ. ಕೆಲವು ದಿನಗಳ ಹಿಂದೆ ನನ್ನೂರಿನ ಪಕ್ಕದ ಹಳ್ಳಿಯಿಂದ ಮದುವೆ ದಿಬ್ಬಣಕ್ಕೆ ಹೋಗುತ್ತಿದ್ದ ಲಾರಿಯೊಂದು ಡ್ರೈವರ್ ನ ಅಚಾತುರ್ಯದಿಂದ ಹಳ್ಳಕ್ಕೆ ಬಿದ್ದು ನಾಲ್ಕು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನು ಕೆಲವರಿಗೆ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವರು. ಒಟ್ಟಿನಲ್ಲಿ ಲಾರಿಯಲ್ಲಿ ಪ್ರಯಾಣಿಸುವುದು ಅಪಾಯಕ್ಕೆ ಅವಕಾಶ ಮಾಡಿಕೊಟ್ಟಂತೆ. ಹೀಗೆ ಅನೇಕ ಯೋಚನೆಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದರೆ ಆತ ಹಿಂದಿ ಸಿನಿಮಾದ ಹಾಡನ್ನು ಗುನುಗುತ್ತ ತಗ್ಗು ದಿನ್ನೆಗಳಲ್ಲಿ ಸರಾಗವಾಗಿ ಲಾರಿ ಓಡಿಸುತ್ತಿದ್ದ. ಲಾರಿ ಮುಗುಚಿ ಬೀಳಲಿದೆ ಎನ್ನುವಂತೆ ಒಂದು ಕಡೆಯಿಂದ ಇನ್ನೊಂದು ಕಡೆ ಓಲಾಡುತ್ತಿತ್ತು. ಹಣೆಯ ಮೇಲಿನ ಬೆವರೊರಿಸಿಕೊಳ್ಳುತ್ತಿದ್ದ ನನ್ನನ್ನೊಮ್ಮೆ ದಿಟ್ಟಿಸಿ ನೋಡಿದ ಡ್ರೈವರ್ 'ಕ್ಯಾ ಢರ್ ಆಗಯಾ' ಎಂದವನೇ ಲಾರಿಯ ವೇಗವನ್ನು ಹೆಚ್ಚಿಸಿದ. ಗಾಡಿ ನಿಲ್ಲಿಸಲು ಹೇಳಬೇಕೆಂದರೆ ಧ್ವನಿಯೇ ಹೊರಬರುತ್ತಿಲ್ಲ. ಕಣ್ಮುಚ್ಚಿ ಮನದಲ್ಲಿ ದೇವರನ್ನು ನೆನೆದೆ. ಕೊನೆಗೂ ನಾನು ಇಳಿಯಬೇಕಿದ್ದ ಬಸ್ ಸ್ಟ್ಯಾಂಡ್ ಸಮೀಪಿಸಿತು. ಇಳಿಯಲು ಹೋದವನನ್ನು ತಡೆದು ಆತ ಕೇಳಿದ 'ಸ್ಕೂಲ್ ಕಂಹಾ ಹೈ ದೇರ್ ಹೊರಹಿನಾ ಇಸ್ಲಿಯೆ'. ಸ್ಕೂಲಿನ ದಾರಿ ತೋರಿಸಿದೆ. ಪ್ರತಿನಿತ್ಯ ಬಸ್ ಸ್ಟ್ಯಾಂಡ್ ನಿಂದ ಮೂರು ಕಿಲೋ ಮೀಟರ್ ನಡೆದು ಹೋಗುತ್ತಿದ್ದವನು ಆ ದಿನ ಶಾಲೆಯ ಬಾಗಿಲೆದುರೇ ಇಳಿದೆ. ಹಣ ಕೊಡಲು ಹೋದವನನ್ನು ತಡೆದು ಹೇಳಿದ 'ನಹೀಂ ಬೇಟಾ ಮೈ ತೋ ಪಡಾಯಿ ನಹೀಂ ಕಿಯಾ. ಆಪ್ ಜೈಸಿ ಪಡಾಯಿ ವಾಲೋ ಕೊ ಮದತ್ ಕರ್ನೆಸೆ ಮೇರಾ ಬಚ್ಚೋ ಕೊ ಅಚ್ಛಾ ಹೋಗಾ' ಎಂದವನೇ ತನ್ನಲ್ಲಿದ್ದ ಸಿಹಿ ತಿಂಡಿಯ ಪೊಟ್ಟಣವನ್ನು ನನ್ನ ಕೈಗಿತ್ತು ಮರೆಯಾದ. ಮನಸ್ಸು ಕೃತಜ್ಞತೆಯಿಂದ ಭಾರವಾಯಿತು. ಆತನ ಬಗ್ಗೆ ಕಲ್ಪಿಸಿಕೊಂಡಿದ್ದೆಲ್ಲ ಸುಳ್ಳು ಎಂದರಿವಾಗಲು ತಡವಾಗಲಿಲ್ಲ. ಯಾರೋ ಮಾಡುವ ತಪ್ಪಿಗೆ ಎಲ್ಲರನ್ನೂ ಅದೇ ದೃಷ್ಟಿಯಿಂದ ನೋಡುವ ರೀತಿಗೆ ಅರೆಕ್ಷಣ ಮನಸ್ಸು ಬೇಸರಿಸಿತು. ಕಲ್ಪನೆಗೂ ಮತ್ತು ವಾಸ್ತವಿಕತೆಗೂ ಇರುವ ಅಂತರದ ಅರಿವಾಯಿತು ಆ ದಿನ.

---೦೦೦---

No comments:
Post a Comment