Thursday, August 1, 2013

ಇನ್ನೂ ಹುಟ್ಟದ ನಾಳೆ

       'ಬರಲಿರುವ ನಾಳೆ ತರಲಿರುವುದೇನು?' ಇಂಥದ್ದೊಂದು ಪ್ರಶ್ನೆ ನನ್ನನ್ನು ಅನೇಕ ಸಂದರ್ಭಗಳಲ್ಲಿ ಕಾಡಿ ವಿಚಲಿತಗೊಳಿಸಿದೆ. ನಿನ್ನೆಯ ನೆನಪುಗಳೊಂದಿಗೆ ಈ ದಿನದ ಬದುಕನ್ನು ಬದುಕುತ್ತಿರುವ ನಮಗೆ ನಾಳೆಗಳ ಅಗತ್ಯವೂ ಇದೆ. ಇವತ್ತಿನ ಬದುಕಿನೊಂದಿಗೆ ಮುಖಾಮುಖಿಯಾಗುವುದರ ಜೊತೆಗೆ ನಮ್ಮ ನಾಳೆ ಹೇಗಿರಬೇಕೆಂದು ಚಿಂತಿಸಬೇಕಿದೆ. ಈ ದಿನದ ವಾಸ್ತವಿಕತೆಯೇ ಇಷ್ಟೊಂದು ಕಠೋರವಾಗಿರುವಾಗ ಇನ್ನು ನಾಳೆ ಹೇಗಿರಬಹುದು ಎನ್ನುವ ಆತಂಕ ಎದುರಾಗಿ ಮನಸ್ಸು ತಲ್ಲಣಿಸಿದ ಸಂದರ್ಭಗಳೆಷ್ಟೋ. ಈ ಆತಂಕ ತಲ್ಲಣಗಳ ನಡುವೆಯೂ ನಾವು ಬರಲಿರುವ ನಾಳೆಗಳ ಕನಸು ಕಟ್ಟಬೇಕಿದೆ. 

ರಾಷ್ಟ್ರ ಭ್ರಷ್ಟಾಚಾರ  ಮುಕ್ತವಾಗಲಿ 


          ಭ್ರಷ್ಟಾಚಾರ ಎನ್ನುವ ಅನಿಷ್ಟ ವ್ಯವಸ್ಥೆ ರಾಷ್ಟ್ರವನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದೆ. ಭ್ರಷ್ಟಾಚಾರ ಎನ್ನುವುದು ಬಹುರೂಪಿಯಾಗಿರುವುದರಿಂದ ಅದು ದೇಶದ ಎಲ್ಲ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿದೆ. ಪ್ರಾಮಾಣಿಕತೆ, ರಾಷ್ಟ್ರ ಪ್ರೇಮ, ಸತ್ಯ, ನಿಷ್ಠೆ ಈ ಗುಣಗಳೆಲ್ಲ ಮೂಲೆಗುಂಪಾಗಿವೆ. ಒಬ್ಬ ಸಾಮಾನ್ಯ ಸರ್ಕಾರಿ ನೌಕರನಿಂದ ಹಿಡಿದು ದೇಶದ ಪ್ರಧಾನ ಮಂತ್ರಿಯವರೆಗೆ ಭ್ರಷ್ಟಾಚಾರದ ಕಳಂಕ ಅಂಟಿಕೊಂಡಿದೆ. ಅದಕ್ಕೆಂದೇ ಲೋಕಾಯುಕ್ತ ಇಲಾಖೆಗೆ ಇಲ್ಲಿ ಕೈತುಂಬ ಕೆಲಸ. ಭ್ರಷ್ಟರನ್ನು ಹಿಡಿಯುವುದಕ್ಕೆಂದೇ ಇಲಾಖೆಯೊಂದನ್ನು ಸ್ಥಾಪಿಸಿರುವುದರ ಅರ್ಥ ಇಲ್ಲಿ ಭ್ರಷ್ಟಾಚಾರವನ್ನು ಸಾರ್ವತ್ರಿಕರಣಗೊಳಿಸಲಾಗಿದೆ ಎಂದಾಗುತ್ತದೆ. ಲೋಕಾಯುಕ್ತರು ದಾಳಿ ಮಾಡಿದಾಗ ಸಾಮಾನ್ಯ ಸರ್ಕಾರಿ ಗುಮಾಸ್ತನೋರ್ವನ ಮನೆಯಲ್ಲಿ ಕೋಟಿಗಳ ಲೆಕ್ಕದಲ್ಲಿ ಹಣ ಮತ್ತು ಕೇಜಿಗಳ ತೂಕದಲ್ಲಿ ಚಿನ್ನ ಬೆಳ್ಳಿ ದೊರೆಯುತ್ತದೆ. ರಾಜಕೀಯ ನಾಯಕರುಗಳಿಗಂತೂ ಈ ಭ್ರಷ್ಟಾಚಾರ ಎನ್ನುವುದು ಕುಲದ ಕಸುಬಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರುಗಳು ಮಾಡಿರುವ ಇತಿಹಾಸ ಕಂಡು ಕೇಳರಿಯದ ಭ್ರಷ್ಟಾಚಾರಗಳಿಗೆ ಅವರನ್ನು ಆರಿಸಿ ಕಳುಹಿಸಿದ ಮತದಾರರೇ ಸಾಕ್ಷಿಯಾಗಬೇಕಾಗಿ ಬಂದದ್ದು ಅದು ರಾಷ್ಟ್ರದ ಬಹುಮುಖ್ಯ ದುರಂತಗಳಲ್ಲೊಂದು. ವಿಧಾನ ಸೌಧದಲ್ಲೇ ಭ್ರಷ್ಟಾಚಾರದ ನೀಲ ನಕ್ಷೆ ಜನ್ಮತೆಳೆಯುತ್ತದೆ, ಪಾರ್ಲಿಮೆಂಟಿನಲ್ಲಿ ಹಣದ ಚೀಲ ಹರಿದಾಡುತ್ತದೆ ಇಂಥ ಅಪಸವ್ಯಗಳು ಘಟಿಸುವುದು ಅದು ನಮ್ಮ ರಾಷ್ಟ್ರದಲ್ಲಿ ಮಾತ್ರ.

       ಭ್ರಷ್ಟಾಚಾರ ಎನ್ನುವುದು ಬಹುಮುಖಿಯಾಗಿ ವ್ಯಾಪಿಸುತ್ತ ಹೋದಂತೆಲ್ಲ ರಾಷ್ಟ್ರ ಭಕ್ತಿ, ರಾಷ್ಟ್ರ ಪ್ರೇಮ, ರಾಷ್ಟ್ರ ಧರ್ಮ ಇತ್ಯಾದಿ ಕುರಿತು ಪ್ರಜೆಗಳಲ್ಲಿ ಒಂದು ರೀತಿಯ ಸಿನಿಕತನ ಮನೆಮಾಡುತ್ತದೆ. ಅದಕ್ಕೆಂದೇ ಕಸಬ್ ನಂಥ ಅನ್ಯರಾಷ್ಟ್ರದ ಭಯೋತ್ಪಾದಕ ರಾಜಾರೋಷವಾಗಿ ದೇಶದೊಳಗೆ ಅಡಿಯಿಡುತ್ತಾನೆ. ಅಫ್ಜಲ್ ನಂಥ ಪರಮ ಪಾತಕಿ ಅತ್ಯಂತ ಪವಿತ್ರ ಸಂವಿದಾನಿಕ ಕೇಂದ್ರವಾದ ಪಾರ್ಲಿಮೆಂಟ್ ಮೇಲೆಯೇ ದಾಳಿಯ ಸಂಚು ರೂಪಿಸುತ್ತಾನೆ. ಭಯೋತ್ಪಾದಕರು ವಿಮಾನಗಳನ್ನು ಅಪಹರಿಸಿ ಜೈಲಿನಲ್ಲಿರುವ ತಮ್ಮ ಸಹಚರರ ಬಿಡುಗಡೆಯ ಬೇಡಿಕೆ ಮುಂದಿಡುತ್ತಾರೆ. ದೇಶದ  ಮಹಾನಗರಗಳಲ್ಲಿ ಬಾಂಬ್ ಸ್ಫೋಟಗಳಂತೂ ಮಕ್ಕಳ ಆಟದಂತಾಗುತ್ತವೆ. ದೇಶದ ಭ್ರಷ್ಟಾಚಾರ ವ್ಯವಸ್ಥೆಯನ್ನೇ ಏಣಿಯಾಗಿಟ್ಟುಕೊಂಡು ಇಲ್ಲಿ ಹೋರಾಟದ ಮನೋಭಾವ ಪ್ರದರ್ಶಿಸುವ ಸಮಯ ಸಾಧಕರು ಬೆಳೆಯಲು ಪ್ರಯತ್ನಿಸುತ್ತಾರೆ. ದುರಂತವೆಂದರೆ ನಂತರದ ದಿನಗಳಲ್ಲಿ ಇಂಥ ಹೋರಾಟಗಾರರೂ ಸಹ ಭ್ರಷ್ಟಾಚಾರ ಎನ್ನುವ ವ್ಯವಸ್ಥೆಯ ಭಾಗವಾಗುವುದು.

            ಭ್ರಷ್ಟಾಚಾರದ ಬೇರುಗಳಿರುವುದೇ ರಾಜಕಾರಣದಲ್ಲಿ. ಆದ್ದರಿಂದ ಇಲ್ಲಿ ಭ್ರಷ್ಟಾಚಾರವನ್ನು ಬೇರುಮಟ್ಟದಿಂದಲೇ ಕಿತ್ತೊಗೆಯುವ ಪ್ರಯತ್ನಕ್ಕೆ ಚಾಲನೆ ದೊರೆಯಬೇಕು. ಸರ್ಕಾರವೇ ಮುಂದಾಗಿ ಕಾನೂನನ್ನು ರೂಪಿಸಬೇಕು. ಮೊದಲು ಆಗಬೇಕಾದ ಕೆಲಸ ಭಾರತದ ರಾಜಕೀಯ ಪುನರುತ್ಥಾನ. ರಾಜಕೀಯ ಎನ್ನುವದು ಸಾಮಾಜಿಕ ಸೇವೆ ಎಂಬ ಮನೋಭಾವ ನಮ್ಮ ರಾಜಕೀಯ ನಾಯಕರುಗಳಲ್ಲಿ ಬಲವಾಗಬೇಕು. ಪ್ರತಿ ರಾಜಕಾರಣಿ ಒಂದಕ್ಕಿಂತ ಹೆಚ್ಚು ಅವಧಿಗೆ ಚುನಾವಣೆಗೆ ಸ್ಪರ್ಧಿಸದಂತೆ ಕಾನೂನು ಜಾರಿಗೆ ಬರಬೇಕು. ಈ ಮೂಲಕ ರಾಜಕೀಯ ಎನ್ನುವುದು ವಂಶಪಾರಂಪರ್ಯ ಎನ್ನುವ ಮನೋಭಾವ ತೊಲಗಬೇಕು. ಜೊತೆಗೆ ಇಲ್ಲಿನ ಕಾನೂನು ಈಗಿರುವುದಕ್ಕಿಂತಲೂ ಕಠಿಣವಾಗಬೇಕು. ಮಾಡಿದ ತಪ್ಪಿಗಿಂತ ಶಿಕ್ಷೆಯ ಪ್ರಮಾಣ ಅಧಿಕವಾಗಿರಬೇಕು. ನ್ಯಾಯಾಲಯ ಕೊಡುವ ಶಿಕ್ಷೆ ಅದು ತಪ್ಪು ಮಾಡಲು ಮುಂದಡಿಯಿಡುವವರಿಗೆ  ಪಾಠವಾಗಬೇಕು.  ಕಸಬ್ ಮತ್ತು ಅಫ್ಜಲ್ ಈ ಇಬ್ಬರನ್ನು ಗಲ್ಲಿಗೇರಿಸಿದ ಮಾತ್ರಕ್ಕೆ ದೇಶ ಸುಭಿಕ್ಷವಾಗಿದೆ ಎನ್ನುವ ಆತುರದ ನಿರ್ಣಯ ಸರಿಯಲ್ಲ. ಭ್ರಷ್ಟಾಚಾರ ಕೊನೆಗೊಂಡರೆ ಅದರೊಂದಿಗೆ ಭಯೋತ್ಪಾದನೆಯೂ ಕೊನೆಗೊಂಡಂತೆಯೇ. ಅಮೆರಿಕಾ ದೇಶದಲ್ಲಿ ಭಯೋತ್ಪಾದನೆ ಮತ್ತೆ ಮತ್ತೆ ಮರುಕಳಿಸದಿರುವುದಕ್ಕೆ ಅಲ್ಲಿನ ಪ್ರಜೆಗಳ ರಾಷ್ಟ್ರ ಪ್ರೇಮ ಮತ್ತು ಪ್ರಾಮಾಣಿಕತೆಯೇ ಕಾರಣ ಎನ್ನುವುದು ನಮಗೆ ಸ್ಪೂರ್ತಿಯಾಗಬೇಕು.


   ಸರ್ವರಿಗೂ ಸಮಾನ ಶಿಕ್ಷಣದ  ಅವಕಾಶ


          ಸಂವಿಧಾನಿಕವಾಗಿ ಶಿಕ್ಷಣ ಅದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕುಗಳಲ್ಲೊಂದು. ಅದಕ್ಕೆಂದೇ ಉಚಿತ ಮತ್ತು ಕಡ್ಡಾಯ ಶಿಕ್ಷಣ ಎನ್ನುವ ಕಾಯ್ದೆಯ ಅಡಿಯಲ್ಲಿ ೧ ರಿಂದ ೧೪ ವರ್ಷ ವಯಸ್ಸಿನ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಯೋಜನೆ ರೂಪಿಸಿ ಹಲವು ದಶಕಗಳೇ ಕಳೆದು ಹೋಗಿವೆ. ವಿಪರ್ಯಾಸ ನೋಡಿ ಹೀಗೆ ಕಾಯ್ದೆಯೊಂದನ್ನು ರೂಪಿಸುವ ಸರ್ಕಾರ ಮತ್ತೊಂದೆಡೆ ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆಗಳನ್ನು ತೆರೆಯಲು ಖಾಸಗಿಯವರಿಗೆ ಪರವಾನಿಗೆ ನೀಡುತ್ತದೆ. ಸರ್ಕಾರದಿಂದ ಪರವಾನಿಗೆ ಪಡೆಯುವ ಖಾಸಗಿಯವರು ರಾಷ್ಟ್ರದಲ್ಲಿ ಬೃಹತ್ ಶೈಕ್ಷಣಿಕ ಉದ್ದಿಮೆಯೊಂದು ತಲೆ ಎತ್ತಲು ಕಾರಣರಾಗುತ್ತಾರೆ. ಸರ್ಕಾರದಿಂದ ನೇರವಾಗಿ ಕಾರ್ಯ ನಿರ್ವಹಿಸುವ ಶಾಲೆಗಳು ಮತ್ತು ಖಾಸಗಿಯವರ ಒಡೆತನಕ್ಕೆ ಸೇರಿದ ಶಾಲೆಗಳು ಹೀಗೆ ಎರಡೆರಡು ಶಾಲೆಗಳಿಂದಾಗಿ ಪಾಲಕರಲ್ಲಿ ಆಯ್ಕೆಯ ಪ್ರಶ್ನೆ ಎದುರಾಗುತ್ತದೆ. ಇದೇ ಹೊತ್ತಿನಲ್ಲಿ ಜಾಗತೀಕರಣ ಭಾರತದ ವಿವಿಧ ಕ್ಷೇತ್ರಗಳಲ್ಲಿ ತನ್ನ ಪಾರುಪತ್ಯವನ್ನು ಆರಂಭಿಸಲು ತೊಡಗಿದಾಗ ಅದಕ್ಕೆ ತಮ್ಮ ಮಕ್ಕಳನ್ನು ಮುಖಾಮುಖಿಯಾಗಿ ನಿಲ್ಲಿಸಲು ಪಾಲಕರಿಗೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಅನಿವಾರ್ಯವಾಗುತ್ತದೆ. ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಎನ್ನುವುದು ಖಾಸಗಿ ಒಡೆತನದವರ ಪರಂಪರಾಗತ ಆಸ್ತಿಯಂತಾಗಿರುವಾಗ ಖಾಸಗಿ ಶಾಲೆಗಳ ಮೆಟ್ಟಿಲೇರುವುದೇ ಅವರಿಗಿರುವ ಏಕೈಕ ದಾರಿ. ತಮ್ಮ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ಕೊಡಿಸಲೇ ಬೇಕೆನ್ನುವುದಾದರೆ ಖಾಸಗಿಯವರು ವಸೂಲಿ ಮಾಡುವ ದುಬಾರಿ ಶುಲ್ಕವನ್ನು ಭರಿಸಲೇ ಬೇಕು. ಇದು ಎಲ್ಲ ಪಾಲಕರಿಂದಲೂ ಸಾಧ್ಯವೇ? ಎನ್ನುವ ಪ್ರಶ್ನೆ ಎದುರಾಗುತ್ತದೆ. ಎಲ್ಲರಿಂದಲೂ ಸಾಧ್ಯವಿಲ್ಲ ಎನ್ನುವುದಾದರೆ ಹಣವಿರುವವರು ಇಂಗ್ಲಿಷ್ ಶಾಲೆಗಳತ್ತ ನಡೆದರೆ ಹಣವಿಲ್ಲದವರು ಸರ್ಕಾರದ ಕನ್ನಡ ಶಾಲೆಗಳತ್ತ ಮುಖ ಮಾಡಬೇಕು. ಹಾಗಾದರೆ ಇದರರ್ಥ ಇಲ್ಲಿ ಪಾಲಕರ ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ಮಗುವಿನ ಶಿಕ್ಷಣ ಮಾಧ್ಯಮ ನಿರ್ಧಾರಿತವಾಗುತ್ತದೆ ಎಂದಾಯಿತು. ಈ ಸಂದರ್ಭ ಸರ್ಕಾರವೇ ರೂಪಿಸಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣ ತನ್ನ ಸಂವಿಧಾನಿಕ ಮಹತ್ವವನ್ನು ಕಳೆದುಕೊಂಡಿದೆ ಎನ್ನುವ ತಾತ್ವಿಕ ನಿಲುವಿಗೆ ನಾವುಗಳು  ಬರಬಹುದು.

             ಹೀಗೆ ಮಕ್ಕಳ ಶಿಕ್ಷಣದ ವಿಷಯವಾಗಿ ಸಮಸ್ಯೆ ಎದುರಾದಾಗ ಎಚ್ಚೆತ್ತುಕೊಳ್ಳುವ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ ಎನ್ನುವ ಹೊಸ ಕಾಯ್ದೆಯೊಂದನ್ನು ರೂಪಿಸುತ್ತದೆ. ಈ ಕಾಯ್ದೆಯ ಮೂಲಕ ಇದುವರೆಗೂ ಕೇವಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಾತ್ರ ಸೀಮಿತವಾಗಿದ್ದ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಸೌಲಭ್ಯ ಖಾಸಗಿ ಇಂಗ್ಲಿಷ್ ಶಾಲೆಗಳಿಗೂ ವಿಸ್ತರಿಸಿತು. ಹಾಗೆಂದ ಮಾತ್ರಕ್ಕೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದ ಎಲ್ಲ ಮಕ್ಕಳೂ ಇಂಗ್ಲಿಷ್ ಶಿಕ್ಷಣ ಪಡೆಯಲು ಸಾಧ್ಯ ಎನ್ನುವಂತಿಲ್ಲ. ಏಕೆಂದರೆ ಈ ಕಾಯ್ದೆಯಡಿ ಖಾಸಗಿ ಇಂಗ್ಲಿಷ್ ಶಾಲೆಗಳಲ್ಲಿ   ಬಡವರ ಮಕ್ಕಳಿಗಾಗಿ ಕಾಯ್ದಿರಿಸಿದ್ದು ಪ್ರತಿಶತ ೨೫ ಸೀಟುಗಳನ್ನು ಮಾತ್ರ. ಸರ್ಕಾರದ ಈ ತಾರತಮ್ಯ ನೀತಿಯಿಂದಾಗಿ ನಮ್ಮ ದೇಶದಲ್ಲಿ ಮಕ್ಕಳ ಶಿಕ್ಷಣ ಎನ್ನುವುದು ಅವರ ಪಾಲಕರ ಆರ್ಥಿಕ ಸಾಮರ್ಥ್ಯವನ್ನು ಅವಲಂಬಿಸಿದೆ. ಶ್ರೀಮಂತರ ಮಕ್ಕಳು ಇಂಗ್ಲಿಷ್ ಶಾಲೆಗಳತ್ತ ಮುಖ ಮಾಡಿದರೆ ಬಡವರ ಮಕ್ಕಳು ಸರ್ಕಾರದ ಕನ್ನಡ ಶಾಲೆಗಳನ್ನೇ ಅವಲಂಬಿಸಬೇಕಾಗಿದೆ. ಆದ್ದರಿಂದ ಇಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ ಎನ್ನುವುದು ಇನ್ನೂ ಪರಿಹರಿಸಲಾಗದ ಸಮಸ್ಯೆಯಾಗಿಯೇ ಉಳಿದಿದೆ.

           ಇಲ್ಲಿ ಸರ್ವರಿಗೂ ಸಮಾನ ಶಿಕ್ಷಣ ದೊರೆಯುವಂತಾಗಲು ಸರ್ಕಾರ ಮಾಡ  ಬೇಕಾಗಿರುವ ಮೊದಲ ಕೆಲಸ ಅದು ಶಿಕ್ಷಣ ಕ್ಷೇತ್ರವನ್ನು  ಖಾಸಗಿಯವರ ಹಿಡಿತದಿಂದ ಹೊರತರುವುದು. ಶಿಕ್ಷಣದ ಖಾಸಗಿಕರಣವೇ ಇವತ್ತು ಶಿಕ್ಷಣ ದುಬಾರಿಯಾಗಲು ಕಾರಣವಾಗಿರುವುದು. ಸಂಘ ಸಂಸ್ಥೆಗಳು ಮಾತ್ರವಲ್ಲದೆ ಶಾಲೆ ಕಾಲೇಜುಗಳ ಸ್ಥಾಪನೆ   ಎನ್ನುವುದು ಕೌಟಂಬಿಕ ಉದ್ದಿಮೆಯಾಗಿ  ಬದಲಾಗುತ್ತಿರುವುದು ಇವತ್ತು ಶಿಕ್ಷಣವನ್ನು ಖಾಸಗೀಕರಣ ಹೇಗೆ ನಿಯಂತ್ರಿಸುತ್ತಿದೆ ಎನ್ನುವುದಕ್ಕೊಂದು ಸ್ಪಷ್ಟ ನಿದರ್ಶನ. ಆದ್ದರಿಂದ ಶಿಕ್ಷಣ ಎನ್ನುವುದು ಸರಕಾರದ ಒಡೆತನಕ್ಕೆ ಸೇರಿದ ವ್ಯವಸ್ಥೆಯಾಗಬೇಕು. ಜೊತೆಗೆ ಮಗುವಿನ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಕಡ್ಡಾಯವಾಗಬೇಕು.  ಶಿಕ್ಷಣದಲ್ಲಿ ಪ್ರಾದೇಶಿಕತೆಗೆ ಆದ್ಯತೆ ದೊರೆಯಬೇಕು. ಕೇಂದ್ರೀಯ ಪಠ್ಯಕ್ರಮ ಆಧಾರಿತ ಶಿಕ್ಷಣ ಪದ್ಧತಿ ರದ್ದಾಗಬೇಕು. ಜಾತಿ ಮತ್ತು ಆರ್ಥಿಕ ಆಧಾರಿತ ಮೀಸಲಾತಿ ತೆಗೆದುಹಾಕಿ ಎಲ್ಲರಿಗೂ ಉಚಿತ ಶಿಕ್ಷಣ ದೊರೆಯುವಂತಾಗಬೇಕು. ಒಟ್ಟಿನಲ್ಲಿ ಸಾಮರ್ಥ್ಯದ ಆಧಾರದ ಮೇಲೆ ಶಿಕ್ಷಣ ಪಡೆಯುವ ವ್ಯವಸ್ಥೆ ಮರೆಯಾಗಬೇಕು.

ಅಸಮಾನತೆ ಅಳಿಯಲಿ


               ಈ ವಿಷಯವಾಗಿ ಬರೆಯುವಾಗ ಇಲ್ಲೊಂದು ಘಟನೆ ನೆನಪಾಗುತ್ತಿದೆ.  ನನ್ನೂರಿನ ಇಬ್ಬರು ಯುವಕರಾದ ರಾಮ ಮತ್ತು ಮೋಹನನಿಗೆ ಸರ್ಕಾರಿ ಇಲಾಖೆಯೊಂದರ ಹುದ್ದೆಗಾಗಿ ಸಂದರ್ಶನಕ್ಕೆ ಕರೆ ಬಂದಿತು. ಹೀಗೆ ಸಂದರ್ಶನಕ್ಕೆ ಹಾಜರಾದ ಇಬ್ಬರಲ್ಲಿ ಮೋಹನ ನೇಮಕಗೊಂಡರೆ ರಾಮ ಆಯ್ಕೆಯಾಗಲಿಲ್ಲ. ಅಚ್ಚರಿಯ ಸಂಗತಿ ಎಂದರೆ ರಾಮ ಪದವಿಯಲ್ಲಿ ಪ್ರತಿಶತ ೭೫  ರಷ್ಟು ಅಂಕಗಳನ್ನು ಮತ್ತು ಸಂದರ್ಶನದಲ್ಲಿ ಶೇಕಡಾ ೮೦ ಅಂಕಗಳನ್ನು ಪಡೆದು ಕೂಡಾ ಆಯ್ಕೆಯಾಗುವಲ್ಲಿ ವಿಫಲನಾದ.  ಇದಕ್ಕಿಂತ ಆಶ್ಚರ್ಯದ ವಿಷಯವೆಂದರೆ ಮೋಹನ ಪದವಿಯಲ್ಲಿ ಗಳಿಸಿದ್ದು ಕೇವಲ ಪ್ರತಿಶತ ೪೦ ಅಂಕಗಳನ್ನು ಹಾಗೂ ಸಂದರ್ಶನದಲ್ಲಿ ಅವನಿಗೆ ದೊರೆತದ್ದು ಪ್ರತಿಶತ ೪೫ ಅಂಕಗಳು. ಇಂಥದ್ದೊಂದು ವ್ಯತ್ಯಾಸದ ನಡುವೆಯೂ ಮೋಹನ ಆಯ್ಕೆಯಾಗಲು ಕಾರಣ  ಮೀಸಲಾತಿಯಡಿ ಆ ಹುದ್ದೆಗೆ ಅರ್ಜಿ ಸಲ್ಲಿಸಲು ಅವನು ಅರ್ಹನಾಗಿದ್ದ. ಅಂಥದ್ದೊಂದು ಸೌಲಭ್ಯ ಹೊಂದಲು ರಾಮ ಅನರ್ಹನಾಗಿದ್ದರಿಂದ ಸಹಜವಾಗಿಯೇ ಅವನು ಗರಿಷ್ಠ ಅಂಕಗಳನ್ನು ಹೊಂದಿಯೂ ಕೂಡ ಆಯ್ಕೆಯಾಗುವಲ್ಲಿ ವಿಫಲನಾದ. ಈ ವಿಫಲತೆಯಿಂದ ಮಾನಸಿಕವಾಗಿ ಘಾಸಿಗೊಂಡ ಆರ್ಥಿಕವಾಗಿ ಹಿಂದುಳಿದ  ರಾಮ ಆ ಒಂದು ಆಘಾತದಿಂದ ಹೊರಬರಲು ಅನೇಕ ದಿನಗಳು ಹಿಡಿದವು.

             ಇಲ್ಲಿ ನಾನು ಇದು ಮೋಹನನ ತಪ್ಪೆಂದಾಗಲಿ ಇಲ್ಲವೇ ರಾಮನ ತಪ್ಪೆಂದಾಗಲಿ ಸಮರ್ಥಿಸಿಕೊಳ್ಳುತ್ತಿಲ್ಲ. ಒಟ್ಟಿನಲ್ಲಿ ನಮ್ಮ ವ್ಯವಸ್ಥೆಯಲ್ಲಿ ತುಂಬಾ ಆಳವಾಗಿ ಬೇರೂರಿರುವ ಸಾಮಾಜಿಕ ಅಸಮಾನತೆಯ ಫಲಶ್ರುತಿ ಇದು. ಅನೇಕ ತಲೆಮಾರುಗಳ ಹಿಂದೆ ರಾಮನ ಪೂರ್ವಿಕರು ಮಾಡಿದ ತಪ್ಪುಗಳು ಇವತ್ತು ರಾಮನಂಥ ಅಮಾಯಕರನ್ನು ದಹಿಸುತ್ತಿವೆ. ಇದೇ ಹೊತ್ತಿನಲ್ಲಿ ಆ ಮಾತನ್ನು ಹೀಗೂ ಹೇಳಬಹುದು ಅನೇಕ ತಲೆಮಾರುಗಳ ಹಿಂದೆ ಮೋಹನನ ಪೂರ್ವಿಕರು  ಅನುಭವಿಸಿದ ಯಾತನೆಯ ಬದುಕು ಮೋಹನನಂಥವರಿಗೆ ವರ ಕೊಡುವ ಕಾಮಧೇನುವಾಗಿದೆ.

        ಇರಲಿ ಯಾರ ಪೂರ್ವಿಕರದಾದರೂ ತಪ್ಪಿರಲಿ ಆದರೆ ಇಲ್ಲಿ ಎದುರಾಗುವ  ಆತಂಕವೆಂದರೆ ಅರ್ಹನಾದ ರಾಮ ಹೀಗೆ ವಂಚಿತನಾದಾಗ ಆತ ನಂತರ ಏನಾಗಬಹುದು?. ಏಕೆಂದರೆ ಇಲ್ಲಿ ರಾಮ ಸಾಮಾಜಿಕ ಅಸಮಾನತೆಯನ್ನು  ಪರಿಚಯಿಸಿದವನಲ್ಲ ಹಾಗೂ ಹಿಂದುಳಿದವರನ್ನು ತುಳಿದವನೂ ಅಲ್ಲ. ತಾನು ಮಾಡದೇ ಇರುವ ತಪ್ಪಿಗೆ ಶಿಕ್ಷೆಗೆ ಒಳಗಾದಾಗ ಸಹಜವಾಗಿಯೇ ಆತ ಸಮಾಜದ ವಿರುದ್ಧ ಸಿಡಿದೇಳಬಹುದು. ವಿದ್ಯಾವಂತನಾಗಿಯೂ ತಪ್ಪು ದಾರಿ ತುಳಿದು ಅಪರಾಧಿಯಾಗಬಹುದು. ಒಂದೆಡೆ ಸಾಮಾಜಿಕ ಅಸಮಾನತೆಯನ್ನು ನಿರ್ಮೂಲನೆ ಮಾಡುವ ಉಮೇದಿಯಲ್ಲಿ ಸಮಾಜದ ಅಸ್ವಸ್ಥತೆಗೂ ಕಾರಣವಾಗಬಹುದು. ಆದ್ದರಿಂದ ನಾವು ಮಾಡಬೇಕಾಗಿರುವ ಮೊದಲ ಕಾರ್ಯ ಮಕ್ಕಳ ಶಿಕ್ಷಣ ಮತ್ತು ಉದ್ಯೋಗದ ವಿಷಯವಾಗಿ ಈಗ ಸಮಾಜದಲ್ಲಿ ಮನೆಮಾಡಿಕೊಂಡಿರುವ ಜಾತಿ ಆಧಾರಿತ ಮೀಸಲಾತಿಯನ್ನು  ತೆಗೆದು ಹಾಕಬೇಕು. ಬದಲಾಗಿ ಆರ್ಥಿಕವಾಗಿ ಹಿಂದುಳಿದ ಆಧಾರಿತ ಮೀಸಲಾತಿ ಜಾರಿಗೆ ಬರಬೇಕು.

             

ಜಾಗತೀಕರಣ ದೂರಾಗಲಿ


       ಇವತ್ತು ಜಾಗತೀಕರಣ ಎನ್ನುವುದು ನಮ್ಮ ಅಡುಗೆ ಮನೆಯನ್ನೂ ಪ್ರವೇಶಿಸಿದೆ. ಚೀನಾದ ತಟ್ಟೆ ಬಟ್ಟಲುಗಳಲ್ಲಿ ನಾವು ಊಟ ಮಾಡುತ್ತಿದ್ದೇವೆ. ಧರಿಸುವ ಭಟ್ಟೆಯಿಂದ ಕಾಲಲ್ಲಿನ ಚಪ್ಪಲಿಯವರೆಗೆ ಪ್ರತಿಯೊಂದು ವಿದೇಶಿ ಆಮದು. ಪಯಣಿಸುವ ವಾಹನ, ಸಂಪರ್ಕಕ್ಕಾಗಿ ಉಪಯೋಗಿಸುವ ಮೊಬೈಲ್, ಮನೋರಂಜನೆ ನೀಡುತ್ತಿರುವ ದೂರದರ್ಶನ ಒಟ್ಟಿನಲ್ಲಿ ಜಾಗತೀಕರಣದ ಭೂತವನ್ನು ನಾವು ನಮ್ಮೊಳಗೆ ಎಳೆದುಕೊಂಡಿದ್ದೇವೆ. ವಿದೇಶಿ ಉತ್ಪನ್ನಗಳೆಲ್ಲ ನಮ್ಮ ಮಾರುಕಟ್ಟೆಯನ್ನು ಪ್ರವೇಶಿಸಿವೆ. ಪರಿಣಾಮವಾಗಿ ನನ್ನೂರಿನ ಮಾರ ತಯ್ಯಾರಿಸುವ ಚಪ್ಪಲಿಗಳಿಗೆ ಈಗ ಬೇಡಿಕೆಯೇ ಇಲ್ಲ. ಒಂದು ಕಾಲದಲ್ಲಿ ಇಡೀ ಊರಿನ ಜನರಿಗೆ ಬಟ್ಟೆ ಹೊಲಿದು ಕೊಡುತ್ತಿದ್ದ ದರ್ಜಿ ಮಹಮದ್ ಅಲಿ  ಈಗ ಕೆಲಸವಿಲ್ಲದೆ ತನ್ನ ಅಂಗಡಿಗೆ ಬೀಗ ಹಾಕಿರುವನು. ಊರಿನ ಬಡಿಗ, ಕುಂಬಾರ, ಕಮ್ಮಾರ, ನೇಕಾರ ಇವರೆಲ್ಲ ನಿರುದ್ಯೋಗಿಗಳಾಗಿರುವರು. ಜೀವನೋಪಾಯಕ್ಕಾಗಿ ಸಣ್ಣ ಸಣ್ಣ ಗೃಹ ಕೈಗಾರಿಕೆಗಳನ್ನು ಅವಲಂಬಿಸಿದ್ದ ನೂರಾರು ಕುಟುಂಬಗಳು ಕೆಲಸವಿಲ್ಲದೆ ಬೀದಿ ಪಾಲಾಗಿವೆ.

           ಇನ್ನು ನನ್ನೂರಿನ ಸಮೀಪದಲ್ಲಿರುವ ನಗರಕ್ಕೆ ಬಂದರೆ ಅಲ್ಲಿನ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ. ಒಂದು ಸಮಯದಲ್ಲಿ ಬೀದಿ ಬದಿಯಲ್ಲಿ ತಳ್ಳುಗಾಡಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಸಾವಿರಾರು ಸಣ್ಣ ವ್ಯಾಪಾರಿಗಳನ್ನು ಮಾಲ್ ಎನ್ನುವ ಜಾಗತೀಕರಣದ ಸಂಸ್ಕೃತಿ ಇಡೀಯಾಗಿ ಆಪೋಶನ ತೆಗೆದುಕೊಂಡಿದೆ. ಹೀಗೆ ನಾನು ಜಾಗತೀಕರಣದ ವಿರುದ್ಧ ಬರೆಯುತ್ತಿರುವ ಸಂದರ್ಭ ಕೆಲವರು ಬಹುರಾಷ್ಟ್ರೀಯ ಕಂಪನಿಗಳ ಕುರಿತು ಮಾತನಾಡಬಹುದು. ಬಹುರಾಷ್ಟ್ರೀಯ ಕಂಪನಿಗಳಿಂದ ಉದ್ಯೋಗವೇನೋ ಲಭಿಸುತ್ತಿದೆ ಆದರೆ ಅದರ ಬೆನ್ನಲೇ ಅದು ಯಾರಿಗೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇವತ್ತು ಮಲ್ಟಿ ನ್ಯಾಷನಲ್ ಕಂಪನಿಗಳನ್ನು ಸೇರಿ ಲಕ್ಷಾಂತರ ರುಪಾಯಿಗಳಲ್ಲಿ ಸಂಬಳವನ್ನು ಪಡೆಯುತ್ತಿರುವವರು  ಸಾಫ್ಟವೇರ್ ಇಂಜಿನಿಯರ್ ಮತ್ತು ಇಂಗ್ಲಿಷ್ ಬರುವ ವಿದ್ಯಾವಂತರು ಮಾತ್ರ. ನನ್ನೂರಿನ ಮಾರ ಮತ್ತು ಮಹಮದ್ ಅಲಿ ಅಂಥವರಿಗೆ ಏನಾದರೂ ಈ ಆರಂಕಿ ಸಂಬಳ ಸಿಗುತ್ತಿದೆಯೇ? ಮ್ಯಾಕ್ ಡೊನಾಲ್ಡ್ ಎನ್ನುವ ವಿಶಿಷ್ಟ ಖಾದ್ಯವನ್ನು ತಯ್ಯಾರಿಸುವ ವಿದೇಶಿ ಕಂಪನಿಯೊಂದು ಭಾರತಕ್ಕೆ ಕಾಲಿಡಲು ಹುನ್ನಾರ ನಡೆಸುತ್ತಿದೆ. ಅದೇನಾದರೂ  ಬಂದಲ್ಲಿ ಬದುಕಿಗಾಗಿ ಸಣ್ಣ ಹೊಟೇಲ್ ಮತ್ತು ಬೇಕರಿಗಳನ್ನು  ಅವಲಂಬಿಸಿರುವ  ಲಕ್ಷಾಂತರ ಕುಟುಂಬಗಳಿಗೆ  ಕೆಲಸವಿಲ್ಲದೆ ಅವರ ಬದುಕು ಅತಂತ್ರವಾಗುತ್ತದೆ.

              ಜಾಗತೀಕರಣದ ಪರಿಣಾಮ ಪ್ರಾದೇಶಿಕ ಭಾಷೆ ಮತ್ತು ಉದ್ಯೋಗ ಮೂಲೆಗುಂಪಾಗುವ ಅಪಾಯ ಎದುರಾಗಿದೆ. ಇವತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣ ಪ್ರಾಮುಖ್ಯತೆ ಪಡೆಯುತ್ತಿರುವುದಕ್ಕೂ  ಮತ್ತು ಮಾತೃ ಭಾಷಾ ಶಿಕ್ಷಣದ ಬೇಡಿಕೆ ಕುಸಿಯುತ್ತಿರುವುದರ ಹಿಂದೆ ಈ ಜಾಗತೀಕರಣ ಅತ್ಯಂತ ಪರಿಣಾಮಕಾರಿಯಾಗಿ  ಕೆಲಸ ಮಾಡುತ್ತಿದೆ. ಜಾಗತೀಕರಣದಿಂದಾಗಿ ಭಾರತಕ್ಕೆ ಲಗ್ಗೆ ಇಡುತ್ತಿರುವ ವಿದೇಶಿ ಕಂಪನಿಗಳಲ್ಲಿ ಕೆಲಸಕ್ಕಾಗಿ ಇಂಗ್ಲಿಷ್ ಶಿಕ್ಷಣ ಅನಿವಾರ್ಯವಾಗುತ್ತಿದೆ. ಆದ್ದರಿಂದ ಬಹುಪಾಲು ಪಾಲಕರು ತಮ್ಮ ಮಕ್ಕಳಿಗೆ ಮಾತೃಭಾಷಾ ಶಿಕ್ಷಣದ ಬದಲು ಇಂಗ್ಲಿಷ್ ಶಿಕ್ಷಣ ಒದಗಿಸಲು ಹೆಣಗುತ್ತಿರುವರು. ಇನ್ನೊಂದೆಡೆ ಒಂದು ಪ್ರದೇಶದಲ್ಲಿನ ಜನರ ಉದ್ಯೋಗದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಇಂದಿನ ಯುವ ಪೀಳಿಗೆ ವಂಶಪಾರಂಪರ್ಯವಾಗಿ ಬಂದ ಉದ್ಯೋಗದಲ್ಲಿ ಮುಂದುವರೆಯಲು ಇಷ್ಟಪಡುತ್ತಿಲ್ಲ. ಒಂದುಕಾಲದಲ್ಲಿ ಬದುಕಿಗೆ ಆಧಾರವಾಗಿದ್ದ ಉದ್ಯೋಗಗಳು ಅವರಿಗೆ ಕೀಳಾಗಿ ಕಾಣಿಸುತ್ತಿವೆ. ಜೊತೆಗೆ ವಿದೇಶಿ ವಸ್ತುಗಳು ಸುಲಭವಾಗಿ ಕೈಗೆಟುಕುವ ದರದಲ್ಲಿ ದೊರೆಯುತ್ತಿರುವುದರಿಂದ ಗುಡಿ ಕೈಗಾರಿಕೆಗಳಿಗೆ ಅಂಥ ಉತ್ತೇಜನ ಸಿಗುತ್ತಿಲ್ಲ.

            ಜಾಗತೀಕರಣ ತಂದೊಡ್ಡುತ್ತಿರುವ ಇನ್ನೊಂದು ಅಪಾಯವೆಂದರೆ ಅದು ಅನ್ನ ನೀಡುತ್ತಿರುವ  ರೈತರ ಭೂಮಿಯನ್ನು ಕಬಳಿಸುತ್ತಿರುವುದು. ಸರ್ಕಾರವೇ ಮುಂದಾಗಿ ವಿದೇಶಿ ಕಂಪನಿಗಳಿಗೆ ಭೂಮಿ ನೀಡುವ ಆಮಿಷವೊಡ್ಡಿ ಆಹ್ವಾನಿಸುತ್ತಿರುವುದರಿಂದ ರೈತರು ತಮ್ಮ ಭೂಮಿಯನ್ನು ಕಳೆದುಕೊಳ್ಳುತ್ತಿರುವರು. ಕೆಲವು ಪ್ರದೇಶಗಳಲ್ಲಿ ರೈತರು ತಮ್ಮ ಭೂಮಿಯನ್ನು ವಿದೇಶಿ ಕಂಪನಿಗಳಿಗೆ ನೀಡಲು ಹಿಂದೇಟು ಹಾಕುತ್ತಿರುವರು. ಆದರೆ ಇದೇ ಮನೋಭಾವ ನಾವು ಎಲ್ಲ ರೈತರಿಂದ ನಿರೀಕ್ಷಿಸುವುದು ಶುದ್ಧ ಮೂರ್ಖತನವಾಗುತ್ತದೆ. ಸರ್ಕಾರ ಹೆಚ್ಚಿನ ಹಣದ ಆಮಿಷವೊಡ್ಡಿ ರೈತರಿಂದ ಭೂಮಿಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಿದೆ. ಕೃಷಿ ಭೂಮಿ ಕ್ಷೀಣಿಸಿದಂತೆಲ್ಲ   ಕೃಷಿ ಉತ್ಪಾದನೆಯೂ ಕ್ಷೀಣಿಸುತ್ತಿದೆ. ಈ ಸಮಸ್ಯೆಯ ಪರಿಣಾಮ ಪ್ರತಿ ಕುಟುಂಬ ಇವತ್ತು ತಿನ್ನುವ ಆಹಾರದ ಮೇಲೆ ಪ್ರತಿ ತಿಂಗಳು ಸಾವಿರಾರು ರೂಪಾಯಿಗಳನ್ನು ವಿನಿಯೋಗಿಸಬೇಕಾಗಿದೆ. ಇಂಥ ಸನ್ನಿವೇಶದಲ್ಲಿ ಶಿಕ್ಷಣ ಆರೋಗ್ಯದಂಥ ಮೂಲಭೂತ ಅವಶ್ಯಕತೆ ಜನರಿಗೆ ಅದರಲ್ಲೂ ಬಡವರೆಂದು ಗುರುತಿಸಿರುವ ದೇಶದ ಬಹುಪಾಲು ಜನಸಂಖ್ಯೆಗೆ ಮರೀಚಿಕೆಯಾಗಿದೆ.
                 

 ಸ್ತ್ರೀ ಶೋಷಣೆ ನಿಲ್ಲಲಿ


        'ಮಹಿಳೆ ಮಧ್ಯರಾತ್ರಿ ಯಾವುದೇ ಭಯವಿಲ್ಲದೆ ಓಡಾಡಿದ ದಿನದಂದೇ ನಮಗೆ ಸ್ವಾತಂತ್ರ್ಯ ದೊರೆತಂತೆ' ಎಂದು ಗಾಂಧೀಜಿ ಹೇಳಿರುವರಂತೆ. ಹೀಗೆ ಅವರೆಂದು ಹೇಳಿರುವರೆಂದು ಗೊತ್ತಿಲ್ಲ. ಆದರೆ ಈ ವಿಷಯ ಬಾಯಿಯಿಂದ ಬಾಯಿಗೆ ಹರಿದಾಡಿ ಈಗ ಅದು ಗಾಂಧೀಜಿಯವರ ಕೃತಿ ಸ್ವಾಮ್ಯವಾಗಿದೆ. ಇರಲಿ ಈ ಮಾತು ಈಗ ಏಕೆ ನೆನಪಾಯಿತೆಂದರೆ ದೆಹಲಿಯಲ್ಲಿ ನಿರ್ಭಯಾಳ ಬದುಕಿನಲ್ಲಾದ ಆ ಘಟನೆಯ ನಂತರ ನಮ್ಮ ದೇಶದಲ್ಲಿ ಹೆಣ್ಣು ಹೆತ್ತವರ ಆತಂಕ ಮತ್ತು ತಳಮಳ ಹೆಚ್ಚುತ್ತಿವೆ. ಹೀಗೆ ಶೋಷಣೆಗೆ ಒಳಗಾದವರಲ್ಲಿ ನಿರ್ಭಯಾಳೆ ಮೊದಲಿಗಳು ಎಂದಲ್ಲ. ಆಕೆಗಿಂತ ಮೊದಲು ಅನೇಕ ಮಹಿಳೆಯರು ಇಂಥದ್ದೊಂದು ಶೋಷಣೆಗೆ ಒಳಗಾಗಿರುವರು. ಆದರೆ ಈ ದಿನಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳ ಪರಿಣಾಮ ಇಂಥ ಅಹಿತಕರ ಘಟನೆಗಳು ಬಹುಬೇಗನೆ ಜನರನ್ನು ತಲುಪುತ್ತಿವೆ.
     
             ನಮಗೆಲ್ಲ ನೆನಪಿರುವಂತೆ ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಧಾನಿಯಾಗಿ ಅತಿ ಹೆಚ್ಚಿನ ಅವಧಿಗೆ ಆಳ್ವಿಕೆ ನಡೆಸಿದ್ದು ಒಬ್ಬ ಮಹಿಳೆ. ಹೀಗಿದ್ದೂ ಇಲ್ಲಿ ಮಹಿಳೆಯರ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಮದರ್ ಥೆರೇಸಾಳಂಥ ಮಾತೃ ಅಂತ:ಕರಣದ ಮಹಿಳೆ ಸ್ತ್ರೀಯಲ್ಲಿರುವ ಸೇವಾಮನೋಭಾವ ಮತ್ತು ಆಕೆಯ ಮಾತೃತ್ವವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದಳು. ಮದರ್ ಥೆರೇಸಾ ಈ ಕಾರ್ಯವನ್ನು ಭಾರತದಲ್ಲಿದ್ದುಕೊಂಡು ಮಾಡಿದ್ದನ್ನು ನಾವಿಲ್ಲಿ ಗಮನಿಸಬೇಕು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯ ಮಹಿಳೆಯರ ಕೊಡುಗೆ ಗಮನಾರ್ಹ.  ಒಟ್ಟಿನಲ್ಲಿ ಮಹಿಳೆಯರನ್ನು ದೇವತೆಯಂತೆ ಪೂಜಿಸಿದ ನೆಲವಿದು. ಇಷ್ಟೆಲ್ಲ ಚರಿತ್ರೆಯನ್ನು ತಳಹದಿಯಾಗಿ ಹೊಂದಿಯೂ ಕೂಡ ಇಲ್ಲಿ ಮಹಿಳೆಯರ ಮೇಲಿನ ಶೋಷಣೆ ಅವ್ಯಾಹತವಾಗಿ ಮುಂದುವರೆದಿದೆ.

      ಮಗಳಾಗಿ, ಪತ್ನಿಯಾಗಿ ಮತ್ತು ತಾಯಿಯಾಗಿ ಮಹಿಳೆ ನಿರ್ವಹಿಸುವ ಪಾತ್ರ ತುಂಬ ಮೌಲಿಕವಾದದ್ದು. ಈ ಪ್ರಜ್ಞಾವಂತ ಸಮಾಜ ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ನಮ್ಮ ನಾಳೆಯಲ್ಲಿ ಮಹಿಳಿಗೆ ಪೂಜ್ಯನೀಯ ಸ್ಥಾನ ದೊರೆಯಬೇಕು. ಪರಸ್ತ್ರೀಯರನ್ನು ತಾಯಿ, ಸಹೋದರಿ, ಮಗಳಾಗಿ ಕಾಣುವ ಮನೋಭಾವ ನಮ್ಮಲ್ಲಿ ಬೆಳೆಯಬೇಕು. ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಪಿಡುಗು, ಸ್ತ್ರೀ ಹತ್ಯೆ ಇತ್ಯಾದಿ ಶೋಷಣೆಗಳು ಕೊನೆಗೊಳ್ಳಬೇಕು. 

ಹಳ್ಳಿಗಳು ಉಳಿಯಲಿ 


         ನಗರೀಕರಣವನ್ನು  ಅದೊಂದು ಸಾಮಾಜಿಕ ಬೆಳವಣಿಗೆ ಎಂದೇ  ಪರಿಗಣಿಸಲಾಗುತ್ತಿದೆ. ಆದರೆ ನಗರೀಕರಣ ಎನ್ನುವುದು  ನೇರವಾಗಿ ಹಳ್ಳಿಗಳ ನಾಶಕ್ಕೆ ಕಾರಣವಾಗುತ್ತಿದೆ. ಹಳ್ಳಿಗಳೆಲ್ಲ ನಾಶವಾಗಿ ನಗರಗಳಾಗಿ ಪರಿವರ್ತನೆಯಾಗುತ್ತಿರುವ ಈ ಹೊತ್ತಿನಲ್ಲಿ ನಾವು ಕಳೆದುಕೊಳ್ಳುತ್ತಿರುವುದೇನು ಎನ್ನುವ ವಿವೇಚನೆಯೇ ನಮಗಿಲ್ಲವಾಗಿದೆ. ನಗರಗಳೆಲ್ಲ ಬೃಹದಾಕಾರವಾಗಿ ಬೆಳೆಯುತ್ತ ರೈತರ ಭೂಮಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿರುವಾಗ ಕೃಷಿ ಎನ್ನುವ ವೃತ್ತಿ ನಿರಂತರವಾಗಿ ಕ್ಷೀಣಿಸುತ್ತಿದೆ. ಪರಿಣಾಮವಾಗಿ ಆಹಾರ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಹಿಂದೆ ನಾವುಗಳು ಚಿಕ್ಕವರಾಗಿದ್ದಾಗ ಆಗೆಲ್ಲ ಈಗಿನಂತೆ ಪ್ರತಿಯೊಂದನ್ನು ಹಣ ಕೊಟ್ಟು  ಖರೀದಿಸುವ ಅಗತ್ಯವಿರಲಿಲ್ಲ. ರೈತರು ತಾವು ಬೆಳೆದ ಕಾಳು ಕಡಿಗಳನ್ನು ಕೊಟ್ಟು ಅದಕ್ಕೆ ಬದಲಾಗಿ ದಿನಸಿ ಅಂಗಡಿಗಳಿಂದ ಮನೆಗೆ ಬೇಕಾದ ಪದಾರ್ಥಗಳನ್ನು ತರುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಒಬ್ಬ ರೈತ ತಾನು ಬೆಳೆದ ಬೆಳೆಯನ್ನು ಬೇರೊಬ್ಬ ರೈತನಿಗೆ ಕೊಟ್ಟು ತನ್ನಲ್ಲಿಲ್ಲದ ಬೆಳೆಯನ್ನು ಅವನಿಂದ ಪಡೆಯುತ್ತಿದ್ದ. ಇದು ಒಂದು ರೀತಿಯಲ್ಲಿ ವಸ್ತುಗಳ ವಿನಿಮಯ. ಕಾಲ ಬದಲಾದಂತೆ ಕೃಷಿ ಭೂಮಿ ಕ್ಷೀಣಿಸುತ್ತ  ಹೋದಂತೆಲ್ಲ ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾರಂಭಿಸಿದರು. ಪರಿಣಾಮವಾಗಿ ರೈತನೊಬ್ಬ ತನ್ನಲ್ಲಿ ಇಲ್ಲದ ಬೆಳೆಯನ್ನು ಹಣಕೊಟ್ಟು ಮಾರುಕಟ್ಟೆಯಿಂದ ಖರೀದಿಸುವ ಪರಿಸ್ಥಿತಿ ಎದುರಾಯಿತು. ಒಂದೆಡೆ ಕಡಿಮೆಯಾಗುತ್ತಿರುವ ಕೃಷಿ ಭೂಮಿ ಇನ್ನೊಂದೆಡೆ ನೇರವಾಗಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಕೃಷಿ ಉತ್ಪನ್ನದಿಂದಾಗಿ ನಾವು ತಿನ್ನುವ ಆಹಾರದ ಬೆಲೆ ಗಗನಕ್ಕೇರುತ್ತಿದೆ.

       ಇಂಥದ್ದೊಂದು ಅಪಾಯ ಎದುರಾದ ಸಂದರ್ಭದಲ್ಲೇ ಕೃಷಿ ಎನ್ನುವ ಉದ್ಯೋಗ ಇಂದಿನ ಯುವಕರಿಂದ ಅಸಡ್ಡೆಗೆ ಒಳಗಾಗುತ್ತಿರುವುದು ಅದು ಗಾಯದ ಮೇಲೆ ಬರೆ ಎಳೆಸಿಕೊಂಡಂತೆ. ಹಳ್ಳಿಗಳಲ್ಲಿನ ಬಹಳಷ್ಟು ರೈತರು ಇರುವ ಅತ್ಯಲ್ಪ ಕೃಷಿ ಭೂಮಿಯನ್ನು ವಸತಿ ಪ್ರದೇಶಗಳಿಗಾಗಿ ಪರಭಾರೆ ಮಾಡಿ ಬರುವ ಹಣದೊಂದಿಗೆ ನಗರಗಳಿಗೆ ವಲಸೆ ಹೋಗುತ್ತಿರುವರು. ಅನೇಕ ರೈತ ಕುಟುಂಬಗಳು ಇವತ್ತು ಕೃಷಿಯನ್ನು ತೊರೆದು ಸಮೀಪದ ನಗರಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯಲು ಹಿಂಜರಿಯುತ್ತಿಲ್ಲ. ಹಲವಾರು ರೈತ ಕುಟುಂಬಗಳು ಮಕ್ಕಳ ಶಿಕ್ಷಣದ ನೆಪವೊಡ್ಡಿ ಇಡೀ ಕುಟುಂಬದೊಂದಿಗೆ ನಗರಗಳಿಗೆ ಗುಳೇ ಹೋಗುತ್ತಿರುವ ಪರಿಣಾಮ ಹಳ್ಳಿಗಳೆಲ್ಲ ಖಾಲಿಯಾಗಿ ಬಿಕೋ ಎನ್ನುತ್ತಿವೆ. ಒಂದುಕಾಲದಲ್ಲಿ ದೇಶದ  ಜೀವಾಳ ಎಂದು ಪರಿಗಣಿಸಲ್ಪಟ್ಟಿದ್ದ ಹಳ್ಳಿಗಳು ಇಂದು ಅವಸಾನದ ಅಂಚಿಗೆ ಬಂದು  ನಿಂತಿವೆ.

        ಈಗ ಸರ್ಕಾರ ಮಾಡಬೇಕಿರುವ ಕೆಲಸ ಕೃಷಿ ಹಾಗೂ ಗುಡಿಕೈಗಾರಿಕೆಗಳಿಗೆ ಪ್ರಾಧಾನ್ಯತೆ ನೀಡುವ ಮೂಲಕ ಹಳ್ಳಿಗಳನ್ನು ನಾಶವಾಗದಂತೆ ಎಚ್ಚರವಹಿಸಬೇಕು. ರೈತರ ಕೃಷಿ ಭೂಮಿಯನ್ನು ಕಬಳಿಸುತ್ತಿರುವ ನಗರೀಕರಣ ಸ್ಥಗಿತಗೊಳ್ಳಬೇಕು. ಹಳ್ಳಿಗಾಡಿನ ರೈತರ ಮಕ್ಕಳಿಗೆ ಅವರಿದ್ದ  ಜಾಗದಲ್ಲೇ ಗುಣಾತ್ಮಕ ಶಿಕ್ಷಣ ದೊರೆಯುವಂತಾಗಬೇಕು. ರೈತರ ಜಮೀನುಗಳಿಗೆ ಉಚಿತ ಮತ್ತು ನಿರಂತರ ವಿದ್ಯುತ್ ಪೂರೈಕೆಯಾಗುವುದಲ್ಲದೆ ಅವರು ಬೆಳೆಯುವ ಬೆಳೆಗಳಿಗೆ ಬೆಂಬಲಿತ ಬೆಲೆ ದೊರೆತು ಕೃಷಿ ಉದ್ಯೋಗಕ್ಕೆ ಮಾನ್ಯತೆ ಸಿಗಬೇಕು. ಹೀಗಾದಾಗ ಮಾತ್ರ ವಿದ್ಯಾವಂತರೂ ಕೃಷಿ ಉದ್ಯೋಗದೆಡೆ ಆಕರ್ಷಿತರಾಗಿ ಹಳ್ಳಿಗಳಲ್ಲಿಯೇ ಉಳಿದು ಜೊತೆಗೆ ಹಳ್ಳಿಗಳನ್ನೂ ಉಳಿಸುವ ದಿನಗಳನ್ನು ನಾವು ಕಾಣಬಹುದು.

ಕೊನೆಯ ಮಾತು 


              ಶಿವರಾಮ ಕಾರಂತರ ಮಾತುಗಳೊಂದಿಗೆ ಈ ಲೇಖನವನ್ನು ಪೂರ್ಣಗೊಳಿಸುವುದು ಹೆಚ್ಚು ಅರ್ಥಪೂರ್ಣ ಎನಿಸುತ್ತದೆ. ಅವರು ತಮ್ಮ 'ಹುಚ್ಚು ಮನಸ್ಸಿನ ಹತ್ತು ಮುಖಗಳು' ಕೃತಿಯ ಮುನ್ನುಡಿಯಲ್ಲಿ ಹೀಗೆ ಹೇಳುತ್ತಾರೆ 'ನಾವು ಭೂಮಿಗೆ ಬಂದ ದಿನ ನಮ್ಮ ಸುತ್ತಣ ಬದುಕು ಇದಕ್ಕಿಂತ ಒಂದಿಷ್ಟು ಹೆಚ್ಚು ಚಂದವಾಗುವಂತೆ ಮಾಡಿ ಇಲ್ಲಿಂದ ಹೊರಡಬೇಕು ಎಂಬ ಭಾವನೆ ನನ್ನದು. ಜಾತ್ರೆಗೆ ಬಂದವರು ಜಾತ್ರೆ ಮುಗಿಸಿ ಹೊರಡುವಾಗ ತಾವು ನಲಿದು ಉಂಡು ಹೋದ ನೆಲದ ಮೇಲೆ ಎಲ್ಲೆಲ್ಲೂ ತಮ್ಮ ಉಚ್ಚಿಷ್ಟವನ್ನು ಚೆಲ್ಲಿ ಹೋದರೆ ಹೇಗಾದಿತು? ಅಲ್ಲಿಗೆ ತಿರುಗಿ ಬಾರದಿದ್ದರೇನಾಯಿತು? ಅಲ್ಲಿಗೆ ಬರುವ ನಮ್ಮ ಮಕ್ಕಳು ಏನೆಂದುಕೊಂಡಾರು? ಅಷ್ಟನ್ನಾದರೂ ಯೋಚಿಸುವ ಬುದ್ದಿ ಈ ದೇಶವನ್ನು ನಡೆಸುವ ಹಿರಿಯರಿಗೆ ಇಲ್ಲದೆ ಹೋದರೆ ಹೇಗೆ?'.  ಒಟ್ಟಿನಲ್ಲಿ ಸಮಸ್ಯೆಗಳಿಂದ ಮುಕ್ತವಾದ  ನಾಳೆಯೊಂದನ್ನು ನಾವು ನಮ್ಮ ಮಕ್ಕಳಿಗಾಗಿ ಕಟ್ಟಿಕೊಡಬೇಕಿದೆ. ಅಂಥದ್ದೊಂದು ನಾಳೆಗಾಗಿ ನಾವು ಪ್ರಯತ್ನಿಸದೇ ಇದ್ದಲ್ಲಿ ಅವರಿಗಾಗಿ ಬಿಟ್ಟುಹೋಗುವುದು ಉಸಿರು ಕಟ್ಟುವ ವಾತಾವರಣವನ್ನು ಮಾತ್ರ. ಅಂಥ ವಾತಾವರಣದಲ್ಲಿ ನಮ್ಮ ಮಕ್ಕಳು ತಮ್ಮ ವರ್ತಮಾನವನ್ನು ಬದುಕಬೇಕೆ? ನಾವು ಯೋಚಿಸಬೇಕಿದೆ.

-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment